“ಅದ್ಭುತ”ರಾಮಾಯಣದಲ್ಲಿ ಸೀತೆಯ ಅಪೂರ್ವವೆನಿಸಬಲ್ಲ ಪೂರ್ವವೃತ್ತಾಂತವೂ ಇದೆ. ಇಲ್ಲಿಯ ಕೆಲವು ವಿವರಗಳನ್ನು “ಪದ್ಮಪುರಾಣ”ದಲ್ಲಿಯೂ ಕಾಣಬಹುದು, ಇನ್ನಿತರ ರಾಮಕಥೆಗಳಲ್ಲಿಯೂ ನೋಡಬಹುದು. ಹೀಗಾಗಿ ಇದನ್ನು ಸ್ವಲ್ಪ ಗಮನಿಸೋಣ. ಭಕ್ತ ಅಂಬರೀಷನ ಮಗಳು ಶ್ರೀಮತಿಯಾಗಿ ಲಕ್ಷ್ಮಿಯೇ ಜನಿಸಿರುತ್ತಾಳೆ. ಇವಳನ್ನು ವರಿಸಲು ಹಾತೊರೆದ ದೇವಮುನಿಗಳಾದ ನಾರದ-ಪರ್ವತರು ಸ್ವಯಂವರದಲ್ಲಿ ಪರಾಭೂತರಾಗುತ್ತಾರೆ. ಸ್ವಯಂವರಾರ್ಥಿಗಳಾಗಿ ಹೋಗಿದ್ದ ಅವರಿಗೆ ವಿಷ್ಣುಮಾಯೆಯಿಂದ ಮಂಗನ ಮುಸುಡಿ ದಕ್ಕಿರುತ್ತದೆ. ಏಕೆಂದರೆ ಅವರು ವಿಷ್ಣುವಿನಿಂದ ತಮಗೆ “ಹರಿರೂಪ” ಬೇಕೆಂದು ಬಯಸಿ ಈ ವಿಕಾರವನ್ನು ತಂದುಕೊಂಡಿರುತ್ತಾರೆ! “ಹರಿ”ಶಬ್ದಕ್ಕಿರುವ ಅರ್ಥಗಳ ಪೈಕಿ ಮಂಗ ಎಂಬುದೂ ಒಂದಷ್ಟೆ. ಅಂತೂ ನಿರಾಶೆಗೊಂಡ ದೇವಮುನಿಗಳು ತಮಗೆ ಪ್ರಣಯವೈಫಲ್ಯವಾದಂತೆ ವಿಷ್ಣುವಿಗೂ ಪತ್ನಿಯ ಸಾನ್ನಿಧ್ಯ ದಕ್ಕದೆ ಸಂಕಟವುಂಟಾಗಲಿ; ಅವನು ತಮಗೆ ಮಂಗನ ಮುಸುಡಿ ಮಾಡಿದುದರ ಫಲವಾಗಿ ಕಳೆದುಕೊಂಡ ಪತ್ನಿಯನ್ನು ಮತ್ತೆ ಪಡೆಯಲು ಮಂಗಗಳನ್ನೇ ಆಶ್ರಯಿಸುವಂತಾಗಲಿ ಎಂದು ಅವನನ್ನು ಶಪಿಸುತ್ತಾರೆ.
ಇಷ್ಟು ಸಾಲದೆಂಬಂತೆ ವೈಕುಂಠದಲ್ಲೊಮ್ಮೆ ಲಕ್ಷ್ಮಿ ಮತ್ತವಳ ಪರಿಚಾರಿಕೆಯರ ಮೂಲಕ ನಾರದರಿಗೆ ಉಪೇಕ್ಷೆ ಸಂದಿರುತ್ತದೆ. ಈ ಗಾಯಕ್ಕೆ ಉಪ್ಪು ಸವರುವಂತೆ ನಾರದರ ಪ್ರತಿಸ್ಪರ್ಧಿಯಾದ ತುಂಬುರುವಿಗೆ ಹೆಚ್ಚಿನ ಸಮ್ಮಾನ ಸಿಕ್ಕಿರುತ್ತದೆ. ಇದರಿಂದ ಕೆರಳಿದ ಆ ದೇವರ್ಷಿಗಳು ಲಕ್ಷ್ಮಿಯನ್ನು ರಾಕ್ಷಸವನಿತೆಯ ಮಗಳಾಗಿ ಹುಟ್ಟೆಂದು ಶಪಿಸಿರುತ್ತಾರೆ. ಆದುದರಿಂದ ವಿಷ್ಣುವು ರಾಮನಾಗಿ ದಶರಥನ ಮನೆಯಲ್ಲಿಯೂ ಲಕ್ಷ್ಮಿಯು ಸೀತೆಯಾಗಿ ರಾವಣನ ಮನೆಯಲ್ಲಿಯೂ ಹುಟ್ಟಬೇಕಾಗುತ್ತದೆ. ಇಂದಿಗೂ ಸೀತೆ ರಾವಣನ ಮಗಳೆಂದು ಜನಶ್ರುತಿ ವ್ಯಾಪಕವಾಗಿದೆ. ತನ್ನ ಮಗಳೇ ತನಗೆ ಮೃತ್ಯುವಾಗಬಲ್ಲಳೆಂದು ತಿಳಿದಿದ್ದ ರಾವಣ ಅವಳನ್ನು ಆರ್ಯಾವರ್ತದಲ್ಲಿ ಪೆಟ್ಟಿಗೆಯಲ್ಲಿರಿಸಿ ಹೂತು ಬಂದಾಗ ಜನಕನ ಉಳುಮೆಗೆ ಸಿಕ್ಕ ಅವಳು ಜಾನಕಿಯಾದಳು. ಅಂತೂ ರಾವಣನನ್ನು ಪುತ್ರೀಕಾಮಿಯಾಗಿ ಮಾಡಿದ ವಿಕಟಕಲ್ಪನೆ ಈ ಕೃತಿಕಾರನದು! ಬಹುಶಃ ರಾವಣನ ಕ್ರೌರ್ಯ ಮತ್ತು ಲಾಂಪಟ್ಯಗಳನ್ನು ಸಮರ್ಥವಾಗಿ ತೋರಿಸಲು ಈ ಕಥೆ ಹುಟ್ಟಿರಬಹುದು.
“ಅದ್ಭುತರಾಮಾಯಣ”ದಲ್ಲಿ ಅದ್ಭುತಗಳೊಟ್ಟಿಗೆ ತತ್ತ್ವವಿಚಾರವೂ ಸಾಕಷ್ಟಿದೆ. ಹನೂಮಂತನಿಗೆ ರಾಮನು ವೇದಾಂತತತ್ತ್ವವನ್ನು ಉಪದೇಶಿಸುತ್ತಾನೆ. ಮತ್ತೂ ಹಲವು ಪಾತ್ರಗಳ ಬಾಯಲ್ಲಿ ತಂತ್ರ, ಸಾಂಖ್ಯ, ಯೋಗ, ವೇದಾಂತಗಳ ಸೊಲ್ಲುಗಳು ಆಗೀಗ ಹೊಮ್ಮುತ್ತಿರುತ್ತವೆ. ಕೆಲವೆಡೆ ರೋಚಕವೆನಿಸುವ ಸಂದರ್ಭಗಳೂ ಇಲ್ಲದಿಲ್ಲ. ಉದಾಹರಣೆಗೆ: ಲಂಕೆಗೆ ದಂಡೆತ್ತುವಾಗ ಸಮುದ್ರ ದಾರಿಯನ್ನು ಕೊಡುವುದಿಲ್ಲ. ಆಗ ಮುನಿದ ಲಕ್ಷ್ಮಣನ ದೇಹತಾಪಕ್ಕೆ ಸಮುದ್ರವೇ ಬತ್ತಿಹೋಗುತ್ತದೆ! ಇದನ್ನು ಕಂಡು ಕನಿಕರಿಸಿದ ರಾಮನು ಮಿಡಿದ ಕಂಬನಿಯಿಂದ ಅದು ತುಂಬಿಯೂ ಹೋಗುತ್ತದೆ! ಈ ಕಥೆಯನ್ನು ಮುದ್ದಣನು ಕನ್ನಡದಲ್ಲಿ ಕಾವ್ಯರೂಪಕ್ಕೆ ತಂದಿದ್ದಾನೆ.
* * *
“ಅಧ್ಯಾತ್ಮರಾಮಾಯಣ”ವು ಬ್ರಹ್ಮಪುರಾಣದ ಭಾಗವೆಂದು ಪ್ರಸಿದ್ಧ. ಇದು “ಅದ್ಭುತರಾಮಾಯಣ”ಕ್ಕಿಂತಲೂ ಸುಮಾರು ಮೂರು ಪಟ್ಟು ದೊಡ್ದದು. (ಇದಕ್ಕಿಂತ ಮೂರು ಪಟ್ಟು ಹಿರಿದು “ಆನಂದರಾಮಾಯಣ.”) ಶಿವ-ಶಿವೆಯರ ಸಂವಾದದಂತೆ ತೆರೆದುಕೊಳ್ಳುವ ಈ ಕೃತಿ ಶ್ರೀರಾಮನ ಅವತಾರಮಾಹಾತ್ಮ್ಯವನ್ನು ಎತ್ತಿಹಿಡಿದಿದೆ. ಇಲ್ಲಿ “ಭಾಗವತ”ದ ಪ್ರಭಾವವನ್ನು ಗಣನೀಯವಾಗಿ ಕಾಣಬಹುದು. ಇದಕ್ಕೊಂದು ನಿದರ್ಶನವೆಂದರೆ, ಬಾಲಕೃಷ್ಣನಂತೆಯೇ ಬಾಲರಾಮನನ್ನು ಬಣ್ಣಿಸುವ ಭಾಗ. ವಾಲ್ಮೀಕಿಯ ಪೂರ್ವಜೀವನದ ಕಥೆ ಇಲ್ಲಿ ಪ್ರಸಿದ್ಧವಾಗಿದೆ. ಕನ್ನಡನಾಡಿನಲ್ಲಂತೂ ಜನಜನಿತವಾಗಿರುವ “ಮರಾ ಮರಾ” ಎಂಬ ರಾಮನಾಮೋಪದೇಶದ ಕಥೆ ಇಲ್ಲಿಂದ ಬಂದದ್ದೇ. ಮೂಲತಃ ಸ್ಥೂಲಾದ್ವೈತದ ಮನೋಧರ್ಮವೇ ಎಲ್ಲವನ್ನೂ “ಒಳಿತಾಗಿ” ಕಾಣಿಸುವಂಥದ್ದು. “ಪಾಪಿಗುದ್ಧಾರಮಿಹುದು ಸೃಷ್ಟಿಯ ಬೃಹದ್ವ್ಯೂಹರಚನೆಯೊಳ್” ಎಂಬ ಕುವೆಂಪು ಅವರ ಮಾತಿನಂತೆ ಸ್ಥೂಲಾದ್ವೈತವು “ಪತಿತೋದ್ಧರಣ”ಕ್ಕಾಗಿ ಸದಾ ಮುನ್ನುಗ್ಗುತ್ತದೆ. ಆದುದರಿಂದಲೇ ಮಂಥರೆ ಮತ್ತು ಕೈಕೇಯಿಯರ ತಂತ್ರಕ್ಕೆ ಸರಸ್ವತಿಯನ್ನು ಹೊಣೆಯಾಗಿಸುತ್ತದೆ. ದೇವಕಾರ್ಯಕ್ಕೆ ಅನುವಾಗಲೆಂದು ವಾಗ್ದೇವತೆ ಇವರ ಬಾಯಲ್ಲಿ ಅಪಲಾಪಗಳನ್ನು ಮಾಡಿಸುತ್ತಾಳೆ.
ರಾವಣವಧೆಗಿಂತ ಮಿಗಿಲಾದ ದೇವಕಾರ್ಯ ಮತ್ತಾವುದು? ಇದಕ್ಕಾಗಿ ರಾಮನ ವನವಾಸ ಮತ್ತು ಸೀತೆಯ ಅಪಹರಣ ಅನಿವಾರ್ಯ ತಾನೆ? ಕೈಕೇಯಿಯನ್ನು ಹೀಗೆ ಉದ್ಧರಿಸುವ ಹೊಣೆ ಸಂಸ್ಕೃತಕವಿಗಳಿಗೆ ಸಾಕಷ್ಟು ಮುನ್ನವೇ ಹೆಗಲೇರಿತ್ತೆಂಬುದಕ್ಕೆ “ಪ್ರತಿಮಾನಾಟಕ”ವೇ ಸಾಕ್ಷಿ. ಬಹುಶಃ ಸಭ್ಯಸಮಾಜವೊಂದು ರೂಪನಿಷ್ಠತೆಯಿಂದ ತುಂಬ ಸುಸಂಸ್ಕೃತವಾದಂತೆ ಇವೆಲ್ಲ ಬೆಳೆಯುವುದು ಸುವೇದ್ಯ. ಸಹಜವಾಗಿಯೇ ಈ ಕೃತಿ ಸೀತೆಯನ್ನು ರಾವಣ ಕೈಗೆ ಒಪ್ಪಿಸುವುದಿಲ್ಲ. ಅವನೇನಿದ್ದರೂ ಅಪಹರಿಸುವುದು ಮಾಯಾಸೀತೆಯನ್ನು. ಲಕ್ಷ್ಮಣನು ವನವಾಸವಿಡೀ ನಿದ್ರಾಹಾರಗಳನ್ನು ಬಿಟ್ಟು ವ್ರತಿಷ್ಠನಾಗಿರುತ್ತಾನೆ. ವಾಲ್ಮೀಕಿರಾಮಾಯಣದ ಉತ್ತರಕಾಂಡದಲ್ಲಿ ಬರುವ ಶೂದ್ರತಪಸ್ವಿ ಶಂಬೂಕ ಇಲ್ಲಿ ಶೂರ್ಪಣಖೆಯ ಮಗ. ದುರುದ್ದೇಶದಿಂದ ತಪಸ್ವಿಯಾಗಿದ್ದ ಅವನು ಲಕ್ಷ್ಮಣನ ಕೈಯಲ್ಲಿ ಅಳಿಯುತ್ತಾನೆ. “ಅಧ್ಯಾತ್ಮರಾಮಾಯಣ”ವು ಶಿವ-ಕೇಶವರಲ್ಲಿ ಭೇದವೆಣಿಸದ ಕಾರಣ ರಾಮನೇ ಸೇತುಬಂಧಕ್ಕೆ ಮುನ್ನ ರಾಮೇಶ್ವರದಲ್ಲಿ ಶಿವಲಿಂಗವನ್ನು ಸ್ಥಾಪಿಸಿ ಅರ್ಚಿಸುತ್ತಾನೆ. ರಾವಣನು ತನ್ನ ಗೆಲ್ಮೆಗಾಗಿ ಕೊನೆಯ ಪ್ರಯತ್ನವೆಂಬಂತೆ ಲಂಕಾಯಾಗವನ್ನು ಮಾಡುತ್ತಾನೆ. ಇದನ್ನು ಅಂಗದನೇ ಮೊದಲಾದ ವಾನರರು ಕೆಡಿಸುತ್ತಾರೆ. ಈ ಪ್ರಕರಣವಂತೂ ದೇಶಭಾಷೆಗಳಲ್ಲೆಲ್ಲ ಪ್ರಸಿದ್ಧವಾಗಿದೆ.
ಇದೇ ತೆರನಾದದ್ದು ರಾವಣನ ಹೊಕ್ಕುಳಲ್ಲಿ ಅಮೃತಕಳಶವಿತ್ತೆಂಬ ಸಂಗತಿ. ಅಂತೂ ಜಯನಾಗಿದ್ದ ರಾವಣನು ವೈಕುಂಠಪ್ರಾಪ್ತಿಗಾಗಿಯೇ ಸೀತಾಪಹರಣ ಮಾಡಿದನೆಂಬುದು “ಅಧ್ಯಾತ್ಮರಾಮಾಯಣ”ದ ಕಾಣ್ಕೆ. ಹೀಗೆ ಪತಿತೋದ್ಧರಣವು ಅದೊಂದು ಭಂಗಿಯಿಂದ ಇಲ್ಲಿ ತಲೆಯೆತ್ತಿದೆ. ಸೀತಾಪರಿತ್ಯಾಗವು ದೇವತೆಗಳ ಅಪೇಕ್ಷೆಯಂತೆ ಸಾಗುವ ಮತ್ತೊಂದು ಲೀಲೆ. ಇದರಲ್ಲಿ ಸೀತೆಯದೂ ಸಕ್ರಿಯಪಾತ್ರವಿದೆಯೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೆ. ಲಕ್ಷ್ಮಣನಿಗೆ ಕಿಷ್ಕಿಂಧೆಯ ಬಳಿಯಿದ್ದ ಪ್ರಸ್ರವಣಗುಹೆಯಲ್ಲಿ ಇರುವಾಗಲೇ ತತ್ತ್ವೋಪದೇಶ ಮಾಡಿದ ರಾಮ ಇನ್ನೊಮ್ಮೆ ಉತ್ತರಕಾಂಡದಲ್ಲಿ ಸಂಕ್ಷಿಪ್ತವಾಗಿ ಅದ್ವೈತವನ್ನು ಬೋಧಿಸುತ್ತಾನೆ. ಇದನ್ನೇ ಈ ಕೃತಿ “ರಾಮಗೀತೆ” ಎಂದಿದೆ. ಹೆಸರೇ “ಅಧ್ಯಾತ್ಮರಾಮಾಯಣ”ವಾದ ಬಳಿಕ ಆಧ್ಯಾತ್ಮಿಕವಿಚಾರಗಳು ಇಲ್ಲದಿದ್ದರೆ ಹೇಗೆ? ಆದುದರಿಂದಲೇ ಕೃತಿಯ ಆದ್ಯಂತ ಶರಭಂಗ, ಸುತೀಕ್ಷ್ಣ, ಅಗಸ್ತ್ಯರಂಥ ಮುನಿಗಳಿರಲಿ ತಾರೆಯಂಥವರೂ ವೇದಾಂತವಾಕ್ಯಗಳ ಮಂತ್ರಾಕ್ಷತೆಗಳನ್ನು ತಳಿಯುತ್ತಲೇ ಇರುತ್ತಾರೆ; ಎಲ್ಲ ರಾಮಭಕ್ತರ ಮೂಲಕವೂ ವಿವಿಧಸಂದರ್ಭಗಳಲ್ಲಿ ವೇದಾಂತಗರ್ಭಿತವಾದ ಸ್ತುತಿಗಳು ಹೊಮ್ಮುತ್ತಲೇ ಇರುತ್ತವೆ. ಇದಂತೂ “ಭಾಗವತ”ದ ಗಾಢವಾದ ಪ್ರಭಾವಕ್ಕೆ ಸಾಕ್ಷಿಯೆನ್ನಬಹುದು. ಹೀಗೆ “ಅಧ್ಯಾತ್ಮರಾಮಾಯಣ”ವು ಅದೊಂದು ಬಗೆಯಲ್ಲಿ ರಾಮಭಾಗವತವಾಗಿದೆ.
* * *
“ಭುಷುಂಡೀರಾಮಾಯಣ” ಎಂಬ ಒಂದು ಕೃತಿ ಉತ್ತರಭಾರತದಲ್ಲಿ ಹೆಚ್ಚು ಪ್ರಸಿದ್ಧ. ಇದು ಕಾಕಭುಷುಂಡೀ ಎಂಬ ಶಾಪಗ್ರಸ್ತಮಹರ್ಷಿಯ ಕಾಣ್ಕೆಯೆಂದು ಒಕ್ಕಣೆ. ಈತನ ನೆಲೆ-ಹಿನ್ನೆಲೆಗಳು ಬೇರೆ ಬೇರೆ ಗ್ರಂಥಗಳಲ್ಲಿ ಬಗೆಬಗೆಯಾಗಿವೆ. ಅವೆಲ್ಲ ನಮಗೆ ಸದ್ಯಕ್ಕೆ ಅಪ್ರಕೃತ. ಈ ಕೃತಿಯಂತೆಯೇ “ಚಿತ್ರಕೂಟಮಾಹಾತ್ಮ್ಯ” ಎಂಬ ಇನ್ನೊಂದು ಗ್ರಂಥವೂ ಇಲ್ಲಿಯ ಅಂಶಗಳನ್ನು ವಿಸ್ತರಿಸಿದೆಯೆಂದು ವಿದ್ವಾಂಸರ ಅಭಿಪ್ರಾಯ. ಇವೆಲ್ಲ ಮುಖ್ಯವಾಗಿ ರಾಮಕಥೆಯನ್ನು ಕೃಷ್ಣಕಥೆಯಿಂದ ಸಂಸ್ಕೃತಗೊಳಿಸುವ ತಂತ್ರಗಳು. ನಾವೆಲ್ಲ ಬಲ್ಲಂತೆ ಕೃಷ್ಣಕಥಾನಕದ ಬಾಲಲೀಲಾಭಾಗವು ತುಂಬ ಪ್ರಾಚೀನ. ಸಾಮಾನ್ಯಶಕೆಯ ಅವಧಿಗಿಂತಲೂ ಹಿಂದಿನ ಗ್ರಂಥಗಳಲ್ಲಿಯೇ ಶ್ರೀಕೃಷ್ಣನ ಗೋಕುಲಜೀವನ ಸೂಚಿತವಾಗಿದೆ. ಅಂತೆಯೇ “ಹರಿವಂಶ”, “ವಿಷ್ಣುಪುರಾಣ”, “ಭಾಗವತ”ವೇ ಮುಂತಾದವುಗಳಲ್ಲಿ ಪ್ರಸಿದ್ಧಿ ಗಳಿಸಿದೆ.
ಹೀಗಾಗಿ ಕೃಷ್ಣನ ಬಾಲ್ಯವು ಭಾರತೀಯರ ಅಂತರಂಗದಲ್ಲಿ ಸಾಹಿತ್ಯ-ಸಂಗೀತ-ನೃತ್ಯ-ಶಿಲ್ಪಗಳಂಥ ಮಾಧ್ಯಮಗಳ ಮೂಲಕ ಗಟ್ಟಿಯಾಗಿ ನೆಲೆಗೊಂಡಿದೆ. ಜೊತೆಗೆ ಇಲ್ಲಿಯ ಬಾಲ್ಯಲೀಲೆ ಹಾಗೂ ರಾಸಲೀಲೆಗಳು ಎಲ್ಲ ಕಾಲದ ಜನರಿಗೆ ಹೃದಯಂಗಮವಾಗುವಂತಿವೆ. ಇಂಥ ಎಲ್ಲ ಕಾರಣಗಳೂ ಸೇರಿ ಕೃಷ್ಣೋಪಾಸನೆಯ ಒಂದು ಪ್ರಮುಖ ಆಯಾಮವೆನಿಸಿದ ಮಧುರಭಕ್ತಿ ಚಿರಕಾಲದಿಂದ ವ್ಯಾಪಕವಾಗಿ ಬೆಳೆದಿದೆ. ಹೀಗೆ ಗೋಪಿಕಾಜಾರನೂ ನವನೀತಚೋರನೂ ಆದ ಕೃಷ್ಣನು ಗೀತಾಚಾರ್ಯನಾದ ಜಗದ್ಗುರುವಾಗಿ, ಬರಿಯ ವಸುದೇವನ ಮಗ ವಾಸುದೇವನೆಂದಲ್ಲದೆ “ವಸತಾಂ ದೇವೋ ವಾಸುದೇವಃ” ಎಂಬರ್ಥದಲ್ಲಿ ಪರಮಪುರುಷನಾಗಿ ಶೃಂಗಾರ-ಶಾಂತಗಳ ಶಾಶ್ವತನಿಧಿಯೆನಿಸಿದ ಬಗೆ ರಕ್ತಿ-ಭಕ್ತಿಗಳ ರಸಿಕರಿಗೆ ಮೀರಲಾಗದ ಆಕರ್ಷಣೆಯಾಗಿದೆ.
ಇಂಥ ಕೃಷ್ಣವಿಲಾಸವನ್ನು ರಾಮನಲ್ಲಿಯೂ ಕಂಡುಕೊಳ್ಳಬೇಕೆಂಬ ಹಂಬಲ ವೀರರಾಮಭಕ್ತರಿಗೆ ಉಂಟಾದ ಫಲವೇ “ಭುಷುಂಡೀರಾಮಾಯಣ.” ವಸ್ತುತಃ ಈ ಎಲ್ಲ ಗ್ರಂಥಗಳೂ ತಮ್ಮ ಆಳದಲ್ಲಿ ಕಾಣಿಸುವ ಅದ್ವೈತದೃಷ್ಟಿಯ ಪ್ರಕಾರ ಹರಿ-ಹರಾಭೇದವೇ ಸಿದ್ಧವಿರುವಾಗ ಅದೇ ವಿಷ್ಣುವಿನ ಅವತಾರಗಳೆನಿಸಿದ ರಾಮ-ಕೃಷ್ಣರಲ್ಲಿ ಅಭೇದವಾಗದೇ? ಏನು ಮಾಡುವುದು? ರಾಮ ಎಂಬ ನಾಮ-ರೂಪಗಳಿಗೇ ತೆತ್ತುಕೊಂಡವರಿಗೆ ಈಗಾಗಲೇ ಸಿದ್ಧವೂ ಪ್ರಸಿದ್ಧವೂ ಆಗಿರುವ ಕೃಷ್ಣಕಥೆಯನ್ನು ರಾಮಕಥೆಯಾಗಿ ಆಸ್ವಾದಿಸಲು ಸಾಧ್ಯವಿಲ್ಲವಲ್ಲ! ಆದುದರಿಂದ ಕೃಷ್ಣಕಥೆಯ ವಿವರಗಳನ್ನೆಲ್ಲ ರಾಮಕಥೆಗೆ ಕಳ್ಳಸಾಗಾಣಿಕೆ ಮಾಡಿಕೊಳ್ಳದೆ ಗತ್ಯಂತರವಿಲ್ಲ. ಆದರೆ ಹೀಗೆ “ಅವನ ಸೊಗಸನಿವನಿಗಿಟ್ಟು ನೋಡಬಯಸಿದೆ” ಎಂಬ ಆಶೆಯು ರಸದೃಷ್ಟಿಯಿಂದ ಉಚಿತವಾದೀತೇ ಇಲ್ಲವೇ ಎಂಬ ಪ್ರಜ್ಞೆ ಸ್ವಲ್ಪವೂ ಕೆಲಸ ಮಾಡದ ಕಾರಣ ಪರಿಣಾಮ ಹಾಸ್ಯಾಸ್ಪದವಾಗದೆ ಇದ್ದೀತೇ? ಭಕ್ತ್ಯಾವೇಶದ ಲಕ್ಷಣವೇ ಉಚಿತಾನುಚಿತವಿವೇಕರಾಹಿತ್ಯ. “ಕಾಮಾತುರಾಣಾಂ ನ ಭಯಂ ನ ಲಜ್ಜಾ” ಎಂಬ ಮಾತು ಯಾವುದೇ ಬಗೆಯ ಆತುರವುಳ್ಳವರಿಗೂ ಅನ್ವಯಿಸುವಂಥದ್ದೇ ತಾನೆ! ಸುದೈವದಿಂದ ಇಂಥ ಪ್ರಯತ್ನಗಳು ಹಸಿಹಸಿಯಾದ ದ್ವೈತದಲ್ಲಿ ನೆಲೆಗೊಳ್ಳದೆ ಸ್ಥೂಲಾದ್ವೈತದಲ್ಲಿಯಾದರೂ ನಿಂತಿರುವುದು ಸಮಾಧಾನಕರ.
“ಭುಷುಂಡೀರಾಮಾಯಣ”ವನ್ನು ರಾಮಭಾಗವತವೆಂದೇ ಹೇಳಬಹುದು. “ಬ್ರಹ್ಮ” ಮತ್ತು “ಬ್ರಹ್ಮವೈವರ್ತ”ಗಳಂಥ ಪುರಾಣಗಳಲ್ಲಿ ಬರುವ ಗೋಲೋಕ, ರಾಧಾಪಾರಮ್ಯ ಮೊದಲಾದ ಸಂಗತಿಗಳ ಪ್ರತಿಧ್ವನಿಯನ್ನು ಇಲ್ಲಿಯ ಚಿಲ್ಲೋಕ-ಸೀತಾಲೋಕಗಳಲ್ಲಿಯೂ ಸೀತೆಯೇ ರಾಧೆ, ರುಕ್ಮಿಣಿ, ಜಗದಾದಿಶಕ್ತಿ ಎಂಬಂಥ ಸಮೀಕರಣಗಳಲ್ಲಿಯೂ ಕಾಣಬಹುದು. ಇಲ್ಲಿಯ ರಾಮನು ರಸಿಕೇಂದ್ರ ಮತ್ತು ಶೃಂಗಾರಮೂರ್ತಿ ಎಂದೇ ಕಂಠೋಕ್ತವಾಗಿ ಹೇಳಲಾಗಿದೆ. ಹೇಗೆ ಕಂಸಭೀತಿಯಿಂದ ಕೃಷ್ಣನು ಗೋಕುಲಕ್ಕೆ ವಸುದೇವನಿಂದ ತರಲ್ಪಟ್ಟನೋ ಹಾಗೆಯೇ ರಾವಣನ ಭಯದಿಂದ ರಾಮ ಮತ್ತವನ ತಮ್ಮಂದಿರು ಸರಯೂನದಿಯ ಆಚೆಗಿರುವ ಗೋಕುಲಕ್ಕೆ ದಶರಥನಿಂದ ಕಳುಹಿಸಲ್ಪಟ್ಟಿದ್ದಾರೆ! ಅಲ್ಲಿ ನಂದಗೋಪ-ಯಶೋದೆಯರು ಇದ್ದಂತೆ ಇಲ್ಲಿ ಸುಖಿತ-ಮಂಗಲ್ಯೆಯರೆಂಬ ಗೋಪದಂಪತಿಗಳಿದ್ದಾರೆ. ಇಲ್ಲಿಯೂ ರಾಮನು ನವನೀತಚೌರ್ಯಾದಿಗಳನ್ನು ಮಾಡಲೇ ಬೇಕು. ನಮ್ಮ ಪುಣ್ಯಕ್ಕೆ ಅವನು ಈ ಕೃತಿಯಲ್ಲಿಯೂ ಏಕಪತ್ನೀವ್ರತನಾದ ಕಾರಣ ಗೋಪಿಕಾಜಾರತ್ವ ಮಾತ್ರ ಇಲ್ಲ. ಅಷ್ಟರ ಮಟ್ಟಿಗೆ ವಾಲ್ಮೀಕಿಯ ರಾಮನ ವ್ಯಕ್ತಿತ್ವ ಅಸ್ಖಲಿತವಾಗಿದೆ. ಆದರೆ ರಾಸಲೀಲೆಯ ಕುಣಿತವನ್ನು ಸಾಗಿಸಲಿಕ್ಕೇನಡ್ಡಿ? ಆದುದರಿಂದಲೇ “ಗೋಪೀಂ ಗೋಪೀಮ್ ಅಂತರಾ ರಾಮಚಂದ್ರೋ ರಾಮಂ ರಾಮಂ ಚಾಂತರಾ ಗೋಪನಾರ್ಯಃ” ಎಂಬ ಮಾತಿಲ್ಲಿ ಬಂದಿದೆ. ಇದು “ಶ್ರೀಕೃಷ್ಣಕರ್ಣಾಮೃತ”ದ ನೇರವಾದ ಪ್ರತಿಧ್ವನಿ (“ಅಂಗನಾಮಂಗನಾಮಂತರೇ ಮಾಧವೋ ಮಾಧವಂ ಮಾಧವಂ ಚಾಂತರೇಣಾಂಗನಾ”). ಹೀಗೆಯೇ “ಗೀತಗೋವಿಂದ”ದ ಪ್ರತಿಧ್ವನಿಗಳೂ ಯಥೇಚ್ಛವಾಗಿವೆ.
“ಭುಷುಂಡೀರಾಮಾಯಣ”ದ ರಾಮ ಬೆಣ್ಣೆಯನ್ನು ಕದ್ದು ದಾಮೋದರನಾಗುತ್ತಾನೆ; ಪೂತನೆ, ಧೇನುಕ ಮುಂತಾದ ರಾಕ್ಷಸರ ಸಂಹಾರವನ್ನೂ ಮಾಡುತ್ತಾನೆ. ಇವರೂ ಸೇರಿದಂತೆ “ಭಾಗವತ”ದ ರಾಕ್ಷಸರೆಲ್ಲ ಇಲ್ಲಿ ಬಲುಮಟ್ಟಿಗೆ ಅವೇ ಹೆಸರುಗಳಿಂದ, ಅವೇ ಸನ್ನಿವೇಶಗಳಲ್ಲಿ ಬರುತ್ತಾರೆ. ಆದರೆ ಅವರೆಲ್ಲ ರಾವಣಪ್ರೇರಿತರೆಂಬುದಷ್ಟೇ ವ್ಯತ್ಯಾಸ. “ಭಾಗವತ”ದಲ್ಲಿದ್ದಂತೆ ಇಲ್ಲಿಯೂ ಇಂದ್ರಾರಾಧನೆಗೆ ವಿರೊಧ ಬರುತ್ತದೆ. ಆದರೆ ಹೆಸರು ಮಾತ್ರ “ವೈಷ್ಣವಯಾಗ” ಎಂದು ಮಾರ್ಪಾಟಾಗಿದೆ. ಅಲ್ಲಿ ಕೃಷ್ಣನು ಗೋವರ್ಧನಗಿರಿಯನ್ನು ಕೊಡೆಯಂತೆ ಹಿಡಿದರೆ ಇಲ್ಲಿ ರಾಮನು ಕೊಡೆಯನ್ನೇ ಹಿಡಿಯುತ್ತಾನೆ! ಆ ಕೊಡೆ ಇಡಿಯ ಗೋಕುಲದ ಜನರನ್ನು ಕಾಯಬಲ್ಲಷ್ಟು ದೊಡ್ಡದೆಂಬುದನ್ನು ಮಾತ್ರ ಮರೆಯುವಂತಿಲ್ಲ. ಈ ಕೃತಿಯಲ್ಲಿಯೂ ಗೋಪಿಯರು ರಾಮನನ್ನು ಪತಿಯಾಗಿ ಪಡೆಯಲು ಕಾತ್ಯಾಯನೀವ್ರತ ಮಾಡುತ್ತಾರೆ. ಸುದೈವದಿಂದ ಗೋಪಿಕಾವಸ್ತ್ರಾಪಹರಣ ಆಗುವುದಿಲ್ಲ! ಆದರೆ ಎಲ್ಲ ಗೋಪಿಕೆಯರಿಗೂ ಕೃಷ್ಣಾವತಾರದಲ್ಲಿ ಪತ್ನಿಯರಾಗುವ ಅವಕಾಶ ದಕ್ಕುವುದೆಂಬ ಭರವಸೆ ಸಿಗುತ್ತದೆ. ಅಂತೂ ಈ ಮಟ್ಟಕ್ಕಾದರೂ ಕೃಷ್ಣಾವತಾರವನ್ನು ಒಪ್ಪಿಕೊಂಡು, ತಮ್ಮ ರಾಮನು ಹಲವರಿಗೆ ನೀಡಿದ ಭರವಸೆಗಳು ಸದ್ಯದಲ್ಲಲ್ಲದೆ ಮುಂದಿನ ಅವತಾರದಲ್ಲಿಯೇ ಪೂರೈಕೆಯಾಗುವುವೆಂಬ ಅಂಶವನ್ನು ಅತ್ಯುಗ್ರರಾಮಭಕ್ತರು ವಿಧಿಯಿಲ್ಲದೆ ಅಂಗೀಕರಿಸಿದರೆಂಬ ಅಂಶ ಮಾತ್ರ ನಮಗೆ ನೆಮ್ಮದಿ ನೀಡುತ್ತದೆ.
ಸೀತಾ-ರಾಮರಿಗೆ ಪರಿಣಯಕ್ಕೆ ಮುನ್ನವೇ ಪ್ರಣಯವಿತ್ತೆಂದೂ ಹಕ್ಕಿಯೊಂದರ ಸಂದೇಶವಿನಿಮಯ ಆಗುತ್ತಿತ್ತೆಂದೂ “ಭುಷುಂಡೀರಾಮಾಯಣ” ಚಿತ್ರಿಸಿದೆ. ಇದು ನಳ-ದಮಯಂತಿಯರ ಹಂಸದೌತ್ಯಕ್ಕೆ ರಾಮಭಕ್ತರು ಕಾಣಿಸಿರುವ ಹೊಸತಿರುವು. ಸೀತಾ-ರಾಮರು ಸ್ವಯಂವರಕ್ಕೆ ಮುನ್ನವೇ ಮಿಥಿಲೆಯ ಉದ್ಯಾನದಲ್ಲಿ ಮೊತ್ತಮೊದಲ ಬಾರಿ ಭೇಟಿಯಾಗುತ್ತಾರೆಂಬುದು ಇಲ್ಲಿಯ ಇನ್ನೊಂದು ರಸಸ್ಥಾನ. ಈ ಸನ್ನಿವೇಶವಂತೂ ಅಸಂಖ್ಯರಾಮಕಾವ್ಯಗಳಲ್ಲಿ ಕಾಣಿಸಿಕೊಳ್ಳುವ ಕಾರಣ ಹೆಚ್ಚಿನ ವಿವರಣೆ ಬೇಕಿಲ್ಲ.