ಭೂಮಿಕೆ
ಕಲೆಗಳ ಪೈಕಿ ಪ್ರಮುಖವೆನಿಸಿದ ಸಾಹಿತ್ಯವು ತನ್ನಂತೆಯೇ ಒಂದು ವಿಭೂತಿ. ಇದರ ಮೂಲಕ ಸಹಸ್ರಾರು ವರ್ಷಗಳಿಂದ ಮಾನವನು ಅಪಾರ ಆನಂದವನ್ನು ಪಡೆಯುತ್ತ ಬಂದಿದ್ದಾನೆ. ಹೀಗೆ ತನಗೆ ಆನಂದವೀಯುತ್ತಿರುವ ತತ್ತ್ವ ಯಾವ ತೆರನಾದದ್ದು? ಅದರ ರೂಪ-ಸ್ವರೂಪಗಳೇನು? ಅದು ಆನಂದವನ್ನು ಹೇಗೆ ಉಂಟುಮಾಡುತ್ತದೆ? ಎಂಬಿವೇ ಮುಂತಾದ ಪ್ರಶ್ನೆಗಳು ಸಹಜಕುತೂಹಲಿಯಾದ ಮಾನವನಿಗೆ ಬಂದದ್ದು ಅಚ್ಚರಿಯೇನಲ್ಲ. ಈ ಪ್ರಶ್ನೆಗಳನ್ನು ಆತ್ಯಂತಿಕವಾಗಿ ಶೋಧಿಸಿ ಎಲ್ಲ ಕಾಲಕ್ಕೂ ಸೂಕ್ತವೆನಿಸಬಲ್ಲ ಉತ್ತರಗಳನ್ನು ಕಂಡುಕೊಂಡ ಶ್ರೇಯಸ್ಸು ಭಾರತೀಯ ಆಲಂಕಾರಿಕರದು. ಒಂದು ವಸ್ತು ಸುಂದರವೋ ಅಲ್ಲವೋ ಎಂದು ಅರಿಯಲು ಹೆಚ್ಚಿನ ತಿಳಿವಳಿಕೆಯೇನೂ ಬೇಕಿಲ್ಲವಷ್ಟೆ; ಅದಕ್ಕೆ ಪ್ರಾಮಾಣಿಕವಾದ ಹೃದಯವಂತಿಕೆ ಇದ್ದರೆ ಸಾಕು. ಆದರೆ ಒಂದು ವಸ್ತು ಏಕೆ ಸುಂದರವಾಗಿದೆ ಎಂದು ತಿಳಿಯಲು ಮಿಗಿಲಾದ ಬುದ್ಧಿನೈಶಿತ್ಯವೂ ಅಂತಃಸಂವೇದನೆಯೂ ಇರಬೇಕು; ಉತ್ಕಟವಾಗಿ ಅನುಭವಿಸುವ, ಅನುಭವಿಸಿದುದನ್ನು ಎಳೆಎಳೆಯಾಗಿ ವಿಶ್ಲೇಷಿಸುವ ದಾರ್ಢ್ಯ ಇರಬೇಕು. ಈ ಎಲ್ಲ ಗುಣಗಳನ್ನೂ ಹೊಂದಿದ್ದ ಭಾರತೀಯ ಆಲಂಕಾರಿಕರು ಕಾವ್ಯಕಲೆಯ ವಿಧಾಯಕಸೂತ್ರಗಳನ್ನು ಅದರ ರಚನೆ, ಆಸ್ವಾದ ಮತ್ತು ವಿಶ್ಲೇಷಣೆಯ ಸ್ತರಗಳಲ್ಲಿ ವಿವರಿಸಿದ್ದಾರೆ. ಇಂಥವರ ಪೈಕಿ ಅಗ್ರಮಾನ್ಯನಾದವನು ಆನಂದವರ್ಧನ.
ನಮ್ಮ ದೇಶದ್ದಷ್ಟೇ ಅಲ್ಲ, ಇಡಿಯ ಜಗತ್ತಿನ ಶ್ರೇಷ್ಠಪ್ರತಿಭಾವಂತರ ಸಾಲಿನಲ್ಲಿ ನಿಲ್ಲುವವನು ಆನಂದವರ್ಧನ. ಸಾಹಿತ್ಯವೂ ಸೇರಿದಂತೆ ಸಕಲಕಲೆಗಳ ಪರಮಪ್ರಯೋಜನವು ರಸವೆಂದು ಭರತಮುನಿಯ ಕಾಲದಿಂದ ನಮ್ಮವರಿಗೆ ತಿಳಿದಿತ್ತು. ಇದು ರಸಿಕರ ಅನುಭವಕ್ಕೆ ಹೇಗೆ ಬರುತ್ತದೆ ಎಂಬುದು ಮಾತ್ರ ತಿಳಿದಿರಲಿಲ್ಲ. ಧ್ವನಿಯ ಮೂಲಕವೇ ರಸದ ಪ್ರತ್ಯಭಿಜ್ಞಾನ ಸಾಧ್ಯವೆಂದು ಮೊದಲ ಬಾರಿಗೆ ಸಾರಿದವನು ಆನಂದವರ್ಧನ. ಈ ಕಾಣ್ಕೆಯನ್ನವನು ಯುಕ್ತಿಯುಕ್ತವಾಗಿ, ಅನುಭವಪ್ರಮಾಣಕ್ಕೆ ಚ್ಯುತಿ ಬಾರದಂತೆ ಪ್ರತಿಪಾದಿಸಿರುವ ಕಾರಣ ಧ್ವನಿನಿರಾಕರಣೆಯು ರಸತಿರಸ್ಕಾರದ ಹುಚ್ಚುತನವೇ ಆಗುತ್ತದೆ.
ಎಲ್ಲ ಕಾಲದಲ್ಲಿಯೂ ಎಲ್ಲರ ಅನುಭವಕ್ಕೂ ಬರುವ ಸಂಗತಿಯೊಂದನ್ನು ಅದರ ತಾತ್ತ್ವಿಕಸ್ತರದಲ್ಲಿ ಕಂಡರಿಸಿ ಪ್ರಾಯೋಗಿಕವಾಗಿ ವಿಸ್ತರಿಸುವುದು ಆವಶ್ಯಕ. ಧ್ವನಿಯು ಅಂಥ ಒಂದು ತತ್ತ್ವ. ಇದು ಆತ್ಯಂತಿಕ ಆಸ್ವಾದಕ್ಕೆ ಸಂಬಂಧಿಸಿದ ಕಾರಣ ಸುಲಭವಾಗಿ ತನ್ನತನವನ್ನು ಬಿಟ್ಟುಕೊಡುವುದಿಲ್ಲ. ಅಲ್ಲದೆ, ಎಲ್ಲರ ಅನುಭವಕ್ಕೂ ಎಟುಕುವ ಸಂಗತಿಯಲ್ಲಿ ಶೋಧಿಸುವುದಕ್ಕಾದರೂ ಏನಿದ್ದೀತು ಎಂಬ ತಾತ್ಸಾರ ಸಹಜ. “ಅತಿಪರಿಚಯಾದವಜ್ಞಾ” ಅಲ್ಲವೇ? ಹೀಗಾಗಿ ಆನಂದವರ್ಧನನಿಗಿಂತ ಮುನ್ನ ಧ್ವನಿಯು ಕಾವ್ಯಲಾಕ್ಷಣಿಕರ ಅನಾದರಣೆಗೆ ತುತ್ತಾಗಿತ್ತು. (ಕೆಲವೊಮ್ಮೆ ಧ್ವನಿಯು ಅವರಿಗೆ ಅಜ್ಞಾತವಾಗಿಯೂ ಇತ್ತೆಂದು ಒಪ್ಪಬೇಕು. ಏಕೆಂದರೆ ಭಾಮಹನೇ ಮೊದಲಾದ ಪ್ರಾಚೀನರು ಇದರ ಪ್ರಸ್ತಾವವನ್ನೇ ಮಾಡಿಲ್ಲ.) ಇಂಥ ಸ್ಥಿತಿಯಿಂದ ಧ್ವನಿತತ್ತ್ವವನ್ನು ಮೇಲೆತ್ತಿ ಅದನ್ನು ಕಾವ್ಯಶಾಸ್ತ್ರದ ಅಧಿಕರಣಗಳ ತಿರುಳಾಗಿ ರೂಪಿಸಿ ನಿರೂಪಿಸಿದ ಧೀಮಂತ ಆನಂದವರ್ಧನ.
ಧ್ವನ್ಯಾಲೋಕದ ಪ್ರಾಶಸ್ತ್ಯ
ಈತ ರಚಿಸಿದ ಗ್ರಂಥದ ಹೆಸರು “ಧ್ವನ್ಯಾಲೋಕ.” ಇದಕ್ಕೆ “ಸಹೃದಯಾಲೋಕ” ಎಂಬ ಮತ್ತೊಂದು ಹೆಸರೂ ಇದೆ. “ಆಲೋಕ” ಎಂಬ ಶಬ್ದಕ್ಕೆ ಪ್ರಧಾನವಾಗಿ “ಬೆಳಕು” ಎಂದರ್ಥ. ಈ ಹಿನ್ನೆಲೆಯಲ್ಲಿ ಸಹೃದಯರ ಪಾಲಿಗೆ ಬೆಳಕಾಗಿ ಬಂದದ್ದೇ ಪ್ರಕೃತಗ್ರಂಥ ಎಂಬ ಸಮುಚಿತ ಅರ್ಥ ಸ್ಫುರಿಸುತ್ತದೆ. ಅಂತೆಯೇ ಸಹೃದಯಾಲೋಕದ ಅಧ್ಯಾಯಗಳಿಗೆ “ಉದ್ದ್ಯೋತ” (ಕೋರೈಸುವ ಕಾಂತಿ) ಎಂಬ ಸಂಜ್ಞೆಯಿರುವುದೂ ಇದಕ್ಕೆ ಅಭಿನವಗುಪ್ತ ಬರೆದ ವ್ಯಾಖ್ಯಾನ “ಲೋಚನ” (ಕಣ್ಣು) ಎಂದು ಹೆಸರಾಗಿರುವುದೂ ಅರ್ಥಪೂರ್ಣವೆನಿಸುತ್ತದೆ. “ಆಲೋಕ”ಶಬ್ದಕ್ಕೆ “ಜಯ” ಅಥವಾ “ಗೆಲವು” ಎಂಬ ಮತ್ತೊಂದು ಅರ್ಥವಿದೆ.[1] ಹೀಗಾಗಿ “ಧ್ವನ್ಯಾಲೋಕ” ಎಂದರೆ “ಧ್ವನಿಯ ಗೆಲವು” ಎಂದು ಅರ್ಥೈಸಲು ಅವಕಾಶವಿದೆ. ಆನಂದವರ್ಧನನ ಗ್ರಂಥವನ್ನು ಓದಿದವರಿಗೆ ಇದು ನಿಜವಾಗಿಯೂ ಧ್ವನಿಯ ಗೆಲವನ್ನು ಸಾಧಿಸಿದೆ, ಸ್ಥಾಪಿಸಿದೆ ಎಂದು ತಿಳಿಯದಿರದು.
ಧ್ವನ್ಯಾಲೋಕದ ಯೋಗದಾನದಿಂದ ಅಲಂಕಾರಶಾಸ್ತ್ರವು ದರ್ಶನದ ಮಟ್ಟಕ್ಕೆ ಏರಿತು. ಆ ಮುನ್ನ ಕಾವ್ಯದ ಬಾಹ್ಯ ಉಪಕರಣಗಳಾದ ಅಲಂಕಾರ, ಗುಣ, ವೃತ್ತಿ, ರೀತಿ ಮುಂತಾದುವನ್ನು ವಿವೇಚಿಸಿ ಅವುಗಳನ್ನು ಪದ್ಯಗಳಿಗೆ ಅನ್ವಯಿಸುವ ಲಕ್ಷ್ಯ-ಲಕ್ಷಣಸಮನ್ವಯದಲ್ಲಿ ಲಾಕ್ಷಣಿಕರು ಕಳೆದುಹೋಗಿದ್ದರು. ಆನಂದವರ್ಧನನಾದರೋ ಕಾವ್ಯಾಂತರಂಗದ ಆವಿಷ್ಕಾರವನ್ನೇ ತನ್ನ ಪ್ರಧಾನಲಕ್ಷ್ಯವಾಗಿ ಸ್ವೀಕರಿಸಿದ. ಇದನ್ನು ಅನುಪಮವಾಗಿ ಸಾಧಿಸಿದ್ದಲ್ಲದೆ ಆವರೆಗೆ ಅಚುಂಬಿತವಾಗಿ ಉಳಿದಿದ್ದ ಎಷ್ಟೋ ಮೌಲಿಕ ಅಂಶಗಳ ಮೇಲೆ ಬೆಳಕು ಚೆಲ್ಲಿ ಇಡಿಯ ಶಾಸ್ತ್ರಕ್ಕೇ ಹೊಸ ಹುರುಪನ್ನು ಕರುಣಿಸಿದ. ದರ್ಶನಶಾಸ್ತ್ರಗಳನ್ನು ಸಾಮಾನ್ಯವಾಗಿ ಸಮನ್ವಯ, ಅವಿರೋಧ, ಸಾಧನ ಮತ್ತು ಫಲ ಎಂಬ ನಾಲ್ಕು ಮಜಲುಗಳಲ್ಲಿ ಪರಿಗಣಿಸುವುದುಂಟು. ಧ್ವನ್ಯಾಲೋಕದಿಂದ ಅಲಂಕಾರಶಾಸ್ತ್ರಕ್ಕೆ ದರ್ಶನತ್ವ ಸಿದ್ಧಿಸಿತು ಎಂದ ಮೇಲೆ ಆನಂದವರ್ಧನನ ಅಭಿಪ್ರಾಯಗಳನ್ನು ಮೇಲ್ಕಾಣಿಸಿದ ನಾಲ್ಕು ಮುಖಗಳಿಗೆ ಅನ್ವಯಿಸಲು ಸಾಧ್ಯವಾಗಬೇಕು. ಅದು ಹೇಗೆಂದು ನೋಡೋಣ:
- ಸಮನ್ವಯ: ಧ್ವನಿತತ್ತ್ವದ ಬೆಳಕಿನಲ್ಲಿ ಕಾವ್ಯಶಾಸ್ತ್ರದ ಎಲ್ಲ ಪ್ರಧಾನ ಅಧಿಕರಣಗಳಿಗೂ ಸಮನ್ವಯ ಸಾಧಿಸಲು ಸಾಧ್ಯ. ಆನಂದವರ್ಧನನು ತನ್ನ ಪೂರ್ವವರ್ತಿಗಳಾದ ಭರತ, ಭಾಮಹ, ದಂಡಿ, ಉದ್ಭಟ, ವಾಮನ, ರುದ್ರಟ ಮೊದಲಾದವರ ಅಭಿಪ್ರಾಯಗಳನ್ನು ನಿಷ್ಪ್ರಯೋಜಕಗಳೆಂದು ಬದಿಗಿರಿಸದೆ ಅವುಗಳಲ್ಲಿಯ ಸಾರಯುತವಾದ ಎಲ್ಲ ಅಂಶಗಳನ್ನೂ ತನ್ನ ಸಿದ್ಧಾಂತದಲ್ಲಿ ಅಳವಡಿಸಿಕೊಂಡಿದ್ದಾನೆ.
- ಅವಿರೋಧ: ಧ್ವನಿಯು ತನ್ನ ಸ್ವರೂಪದಿಂದಲೇ ಅನುಭವನಿಷ್ಠವಾದುದರಿಂದ ಅದಕ್ಕೆ ವಿರೋಧವಿರಲು ಸಾಧ್ಯವೇ ಇಲ್ಲ. ಅಂತೆಯೇ ಆನಂದವರ್ಧನನು ತನ್ನ ಆಲೋಚನೆಗಳನ್ನು ಇನ್ನಿತರ ದಾರ್ಶನಿಕರ ನಿಕಷಕ್ಕೆ ಒಡ್ಡಿ ಅವುಗಳ ಪ್ರಾಮಾಣಿಕತೆಯನ್ನು ಕಾಪಾಡಿಕೊಂಡಿರುವುದಲ್ಲದೆ ವ್ಯಂಜನಾವ್ಯಾಪಾರವನ್ನು ಅಂಗೀಕರಿಸದ ತಾರ್ಕಿಕರು, ಮೀಮಾಂಸಕರು ಮುಂತಾದವರ ಎಲ್ಲ ಆಕ್ಷೇಪಗಳಿಗೂ ಸೂಕ್ತ ಉತ್ತರಗಳನ್ನು ನೀಡಿ ಧ್ವನಿಸಿದ್ಧಾಂತವನ್ನು ನಿರುಪಮವಾಗಿ ಪ್ರತಿಷ್ಠಾಪಿಸಿದ್ದಾನೆ.
- ಸಾಧನ: ಆನಂದವರ್ಧನನು ಸಮನ್ವಯ-ಅವಿರೋಧಗಳ ಮೂಲಕ ಕಂಡುಕೊಂಡ ತತ್ತ್ವದ ಪ್ರತಿಯೊಂದು ಆಯಾಮವನ್ನೂ ಕೂಲಂಕಷವಾಗಿ ನಿರೂಪಿಸುವ ಮೂಲಕ ಶಾಸ್ತ್ರಪೂರ್ಣತೆ ಸಾಧಿಸಿರುವುದಲ್ಲದೆ ಧ್ವನಿಯನ್ನು ಕವಿಗಳು ಹೇಗೆ ಉಪಯೋಗಿಸಬಹುದೆಂದು ಹಲವಾರು ಮೌಲಿಕಸೂಚನೆಗಳನ್ನೂ ನೀಡಿದ್ದಾನೆ.
- ಫಲ: ಕಲೆಯ ಪರಮಫಲವು ರಸ. ರಸವು ಸಹೃದಯಕೇಂದ್ರಿತ. ನಮ್ಮೀ ಗ್ರಂಥದ ಉಪಕ್ರಮವಾದದ್ದೇ ಸಹೃದಯರಿಗೆ ಬೆಳಕು ನೀಡುವುದಕ್ಕಾಗಿ. ಆದುದರಿಂದ ಧ್ವನಿಯನ್ನು ಬಳಸಿಕೊಂಡು ಸಹೃದಯರು ಹೇಗೆ ರಸಾಸ್ವಾದ ಮಾಡಬಹುದೆಂದು ಆನಂದವರ್ಧನ ವಿಶದವಾಗಿ ವಿವರಿಸಿದ್ದಾನೆ.
ಹೀಗೆ ರೂಪುಗೊಂಡ ಧ್ವನ್ಯಾಲೋಕವು ಕಾವ್ಯಶಾಸ್ತ್ರದ ವಲಯದಲ್ಲಿ ಅಪೂರ್ವವಾದ ಸಂಚಲನ ಉಂಟುಮಾಡಿದ್ದರಲ್ಲಿ ಆಶ್ಚರ್ಯವೇನಿಲ್ಲ. ಇದರ ಪ್ರಭಾವ ಎಷ್ಟು ಮಿಗಿಲಾದುದೆಂದರೆ ಆನಂದವರ್ಧನನು ಶಾಸ್ತ್ರೇತಿಹಾಸದಲ್ಲಿ ಒಬ್ಬ ಸೀಮಾಪುರುಷನೆನಿಸಿದ. ಅವನ ಮುಂಚಿನ ಆಲಂಕಾರಿಕರು ಪ್ರಾಚೀನರೆಂದೂ ಆತನ ಬಳಿಕ ಬಂದವರು ನವೀನರೆಂದೂ ವ್ಯವಹಾರ ಮೊದಲಾಯಿತು. ಧ್ವನ್ಯಾಲೋಕದ ಕೊಡುಗೆಗಳಲ್ಲಿ ಪ್ರಮುಖವಾದದ್ದು ಕವಿ ಮತ್ತು ಸಹೃದಯ ಎಂಬ ಕಾವ್ಯಸಾಗರದ ಎರಡು ದಡಗಳ ನಡುವೆ ಧ್ವನಿಯೆಂಬ ಸೇತುವೆಯ ಸರ್ಜನ. ಇದಕ್ಕಿಂತ ಮಿಗಿಲಾಗಿ ಸೌಂದರ್ಯದ ಮೌಲ್ಯಮಾಪನೆಗೆ ಆವಶ್ಯಕವಾದ ನಿಃಶ್ರೇಣಿಯ ನಿರ್ಮಾಣ. ಧ್ವನಿಯ ಅಂಗೀಕಾರದಿಂದಲೇ ಕಾವ್ಯಗಳನ್ನು ಉತ್ತಮ, ಮಧ್ಯಮ ಮತ್ತು ಅಧಮಗಳೆಂದು ವಿಂಗಡಿಸಲು ಸಾಧ್ಯ. ಇದು ಎಷ್ಟು ಹಿರಿದಾದ ಸಾಧನೆಯೆಂದು ಎರಡು ಸಂಗತಿಗಳಿಂದ ಅರಿಯಬಹುದು.
ಆನಂದವರ್ಧನನಿಗಿಂತ ಸುಮಾರು ಎರಡು-ಮೂರು ಶತಮಾನಗಳಿಗೆ ಮುನ್ನವಿದ್ದ ದಂಡಿ ಹಲವು ತೆರದ ರುಚಿಗಳನ್ನು ಕುರಿತು ಹೀಗೆಂದಿದ್ದಾನೆ:
ಇಕ್ಷುಕ್ಷೀರಗುಡಾದೀನಾಂ ಮಾಧುರ್ಯಸ್ಯಾಂತರಂ ಮಹತ್ |
ತಥಾಪಿ ನ ತದಾಖ್ಯಾತುಂ ಸರಸ್ವತ್ಯಾಪಿ ಶಕ್ಯತೇ || (ಕಾವ್ಯಾದರ್ಶ, ೧.೧೦೨)
(ಕಬ್ಬು, ಹಾಲು, ಬೆಲ್ಲ ಮೊದಲಾದವುಗಳ ಸಿಹಿತನದಲ್ಲಿ ಸಾಕಷ್ಟು ಅಂತರವಿದೆ. ಆದರೆ ಅದನ್ನು “ಇದು ಹೀಗೆಯೇ” ಎಂದು ವಿವರಿಸುವುದು ಸರಸ್ವತಿಗೂ ಸಾಧ್ಯವಾಗದ ಕೆಲಸ.)
ಆನಂದವರ್ಧನನ ಪರವರ್ತಿಯಾಗಿದ್ದು ಅವನ ಗ್ರಂಥದಿಂದ ಸಾಕಷ್ಟು ಸ್ಫೂರ್ತಿ ಪಡೆದ ಕುಂತಕನು ಈ ಬಗೆಯ ನಿಃಶ್ರೇಣೀನಿರ್ಮಾಣದ ಯತ್ನಕ್ಕೇ ಕೈಹಾಕಿಲ್ಲ. ಆತನ ಕೃತಿ “ವಕ್ರೋಕ್ತಿಜೀವಿತ”ದ ಬಗೆಗೆ ಮಹಾಮಹೋಪಾಧ್ಯಾಯ ಎನ್. ರಂಗನಾಥಶರ್ಮರು ಸೊಗಸಾದ ವಿಮರ್ಶೆ ಮಾಡಿದ್ದಾರೆ:
“ಅವನ [ಕುಂತಕನ] ಅಂಗಡಿಯಲ್ಲಿ ಸಕಲವಸ್ತುಗಳೂ ಉಂಟು. ಆದರೆ ಯಾವುದರ ಮೌಲ್ಯ ಎಷ್ಟು — ಎಂಬ ತಲೆಚೀಟಿಯನ್ನಂಟಿಸಿ ಓರಣವಾಗಿ ಪದಾರ್ಥಗಳನ್ನು ವಿಂಗಡಿಸಿ ಜೋಡಿಸಿಲ್ಲ.”[2]
ಕಾರಿಕಾ-ವೃತ್ತಿ-ಉದಾಹರಣೆಗಳ ಮೂಲಕ ಅಲಂಕಾರಶಾಸ್ತ್ರದ ಪ್ರಮೇಯಗಳನ್ನು ಸುಬೋಧವಾಗಿ ನಿರೂಪಿಸುವ ಪದ್ಧತಿಗೆ ಧ್ವನ್ಯಾಲೋಕ ನಾಂದಿ ಹಾಡಿತು. ಇದರ ಕಾರಿಕೆಗಳು ಶಾಸ್ತ್ರಸಾಹಿತ್ಯದಲ್ಲಿಯೇ ವಿಶೇಷಸ್ಥಾನ ಪಡೆದಿವೆ. (ಇಲ್ಲಿ ಸಂಗ್ರಹಶ್ಲೋಕಗಳನ್ನೂ ಪರಿಕರಶ್ಲೋಕಗಳನ್ನೂ ಬಲುಮಟ್ಟಿಗೆ ಪರಿಗಣಿಸಬಹುದು.) ಅವುಗಳ ಪ್ರಾಮುಖ್ಯವನ್ನು ಮನಗಾಣಲು ಭಗವದ್ಗೀತೆಯ ಶ್ಲೋಕಗಳನ್ನು ದೃಷ್ಟಾಂತವಾಗಿ ತೆಗೆದುಕೊಳ್ಳಬಹುದು. ಹೇಗೆ ಪ್ರಾಯಶಃ ಎಲ್ಲ ಜೀವನಸಂದರ್ಭಗಳ ತಾಕಲಾಟಗಳನ್ನೂ ಅರ್ಥಪೂರ್ಣವಾಗಿ ನಿರ್ವಹಿಸಿ ನೆಮ್ಮದಿ ಪಡೆಯಲು ಗೀತೆಯ ಸೂಕ್ತಿಗಳು ಸಾಹ್ಯವೀಯುವುವೋ ಹಾಗೆಯೇ ಪ್ರಾಯಶಃ ಸಾಹಿತ್ಯಸಂದರ್ಭಗಳ ಎಲ್ಲ ಗೋಜಲುಗಳನ್ನೂ ಬಿಡಿಸಿಕೊಂಡು ರಸಾಸ್ವಾದ ಮಾಡುವುದಕ್ಕೆ ಧ್ವನ್ಯಾಲೋಕದ ಕಾರಿಕೆಗಳು ನೆರವೀಯುತ್ತವೆ. ಈ ಶ್ಲೋಕಗಳನ್ನು ನೆನಪಿನಲ್ಲಿರಿಸಿಕೊಂಡು ಹೃದ್ಗತ ಮಾಡಿಕೊಳ್ಳುವುದು ತನ್ನಂತೆಯೇ ಒಂದು ಸಂಸ್ಕಾರ.
ಧ್ವನ್ಯಾಲೋಕವು ಸಹೃದಯರ ಅನುಭವಕ್ಕೆ ನೀಡಿದ ಮಿಗಿಲಾದ ಪ್ರಾಶಸ್ತ್ಯ (೧.೭) ಅದರ ಲೋಕಮಾನ್ಯತೆಯ ಮುಖ್ಯಕಾರಣಗಳಲ್ಲಿ ಒಂದು. ಈ ಮೂಲಕ ನಾಟ್ಯಶಾಸ್ತ್ರದ ಬಳಿಕ ಮುಸುಕುಗೊಂಡಿದ್ದ ಸಹೃದಯಸಂವೇದನೆಯನ್ನು ಉದ್ಧರಿಸಿ ಸಮುಚಿತಸ್ಥಾನದಲ್ಲಿ ಅದರ ಪ್ರತಿಷ್ಠಾಪನೆ ಮಾಡುವುದಾಯಿತು. ರಸಜ್ಞತೆಯೇ ಸಹೃದಯತೆಯೆಂಬ ನಿಲವಿಗೆ ಬಂದು ಮುಟ್ಟಿದ ನಮ್ಮೀ ಕೃತಿ ಎಲ್ಲ ಕಾಲಕ್ಕೂ ಸಲ್ಲುವ ಸತ್ಯವನ್ನು ಸಾರಿದೆ (೩.೧೬ ವೃತ್ತಿ). ಧ್ವನಿಸಿದ್ಧಾಂತವು ಸಾಹಿತ್ಯಕ್ಕೆ ಮಾತ್ರವಲ್ಲದೆ ಎಲ್ಲ ಕಲೆಗಳಿಗೂ ಸಮಪರಿಮಾಣದಲ್ಲಿ, ಸಮಪರಿಣಾಮದಲ್ಲಿ ಹೊಂದುವುದೆಂದು ಸಂಗೀತವನ್ನು ದೃಷ್ಟಾಂತವಾಗಿ ಸ್ವೀಕರಿಸಿ ಆನಂದವರ್ಧನನು ಸೂಚ್ಯವಾಗಿ ತಿಳಿಸಿದ್ದಾನೆ (ಮೂರನೆಯ ಉದ್ದ್ಯೋತದಲ್ಲಿ).
ಅಂತೆಯೇ ಧ್ವನಿತತ್ತ್ವದ ಸರ್ವಂಕಷತೆ ಯಾವ ಮಟ್ಟದ್ದೆಂದರೆ, ಶಬ್ದಾರ್ಥಗಳ ಸಕಲಚ್ಛಾಯೆಗಳೂ—ಅವುಗಳ ಎಲ್ಲ ಅವಯವಗಳೂ—ವ್ಯಂಜಕಗಳಾಗಬಹುದು. ಇದರ ಪ್ರಸ್ತಾವ ಧ್ವನ್ಯಾಲೋಕದಲ್ಲಿಯೇ ಇದೆ (೩.೧೬). ನಾಮಪದ, ಕ್ರಿಯಾಪದ, ಕಾರಕ, ಕೃತ್-ತದ್ಧಿತ ಮೊದಲಾದ ಪ್ರತ್ಯಯಗಳು, ನಿಪಾತಗಳು, ಅವ್ಯಯಗಳು, ಉಪಸರ್ಗಗಳು, ಪುನರುಕ್ತವಾದ ಪದಗಳು, ಸರ್ವನಾಮಗಳು—ಹೀಗೆ ವ್ಯಂಜಕಸಾಮಗ್ರಿಗೆ ಕೊನೆ-ಮೊದಲಿಲ್ಲ. ತಮ್ಮ ಸ್ವರೂಪದಿಂದಲೇ ಧ್ವನಿಗರ್ಭಿತವಾದ ಕೆಲವು ಅಲಂಕಾರಗಳಿವೆ. ಸಮಾಸೋಕ್ತಿ, ಪರ್ಯಾಯೋಕ್ತ, ಅಪ್ರಸ್ತುತಪ್ರಶಂಸೆ ಮುಂತಾದವು ಉದಾಹರಣೆಗಳು. ಬಹುವ್ರೀಹಿಯಂಥ ಸಮಾಸ ಕೂಡ (ಅದು ಅನ್ಯಪದಪ್ರಧಾನವಾದುದರಿಂದ) ಧ್ವನಿಸ್ಪರ್ಶ ಹೊಂದಿದೆ. ಹೀಗೆ ಭಾಷೆಯ ಸಕಲ ಅಂಶಗಳೂ ಒಗ್ಗೂಡಿ ದುಡಿದು ಭಾಷಾತೀತವಾದ ಅನುಭೂತಿಯನ್ನು ತಂದುಕೊಡುವುದು ವಿಸ್ಮಯವೇ ಸರಿ.
[1] “ಆಲೋಕೋ ಜಯಶಬ್ದಃ ಸ್ಯಾತ್” (ರಘುವಂಶ, ೨.೯ ರ ವಿವರಣೆಯಲ್ಲಿ ಮಲ್ಲಿನಾಥನ ಮಾತು.)
[2] ಎರಡನೆಯ ನಾಗವರ್ಮ, ಪು. ೧೧೪
To be continued.