ಈ ಎಲ್ಲ ಹಿನ್ನೆಲೆಯ ಕಾರಣ ಕೃಷ್ಣಮೂರ್ತಿಗಳು ಚಿಕ್ಕ ವಯಸ್ಸಿಗೇ ಕಾವ್ಯರಚನೆಗೆ ತೊಡಗಿದ್ದು ಸಹಜವಾದ ಬೆಳೆವಣಿಗೆ. “ದಾನಯಜ್ಞಮು” ಎಂಬ ಖಂಡಕಾವ್ಯವನ್ನೂ “ಶ್ರೀವಿಲಾಸಮು” ಎಂಬ ಶತಕವನ್ನೂ “ತ್ಯಾಗಶಿಲ್ಪಮು” ಎಂಬ ಮತ್ತೊಂದು ಖಂಡಕಾವ್ಯವನ್ನೂ ಅವರು ತೆಲುಗಿನಲ್ಲಿ ರಚಿಸಿದ್ದಾರೆ. ತಮ್ಮ ಸಂತೋಷಕ್ಕೆಂದೇ ಬರೆದುಕೊಂಡ ಕಾರಣ ಅನೇಕವರ್ಷಗಳ ಕಾಲ ಇವು ಪ್ರಕಟವಾಗಿರಲಿಲ್ಲ. ದಾನಯಜ್ಞವು ಮಹಾಭಾರತದ ಆಶ್ವಮೇಧಿಕಪರ್ವದಲ್ಲಿ ಬರುವ ನಕುಲೋಪಾಖ್ಯಾನವನ್ನು ಆಧರಿಸಿದೆ. ಶ್ರೀವಿಲಾಸವು ತನ್ನ ಹೆಸರಿನಿಂದಲೇ ತಿಳಿಯುವಂತೆ ಲಕ್ಷ್ಮಿಯ ಸ್ತುತಿ. ಇದು ಲಕ್ಷ್ಮಿಯನ್ನು ಕೇವಲ ಹಣಕಾಸುಗಳ ಮಟ್ಟಕ್ಕೆ ಸೀಮಿತಗೊಳಿಸದೆ ಸಾಧನ, ಸಂಪತ್ತಿ ಮತ್ತು ಸದ್ಗುಣಗಳ ಮಟ್ಟದಲ್ಲಿ ಸಾಕ್ಷಾತ್ಕರಿಸಿಕೊಳ್ಳುವ ಪ್ರಯತ್ನ. ಇಲ್ಲಿಯ ಒಂದೆರಡು ಪದ್ಯಗಳನ್ನು ಗಮನಿಸಬಹುದು:
ಸೀ || ದೀನಪೋಷಣಧರ್ಮ ದೀಕ್ಷಿತುಲಗುನಾಢ್ಯು-
ಲಗೃಹಂಬುಲನ್ ಧನಲಕ್ಷ್ಮಿವೀವ |
ದೇಶಧರ್ಮಾವನದೀಕ್ಷಿತುಲಗು ವೀರು-
ಲಮನಂಬುಲನ್ ಧೈರ್ಯಲಕ್ಷ್ಮಿವೀವ ||
ವಿಮಲಹರ್ಷಮು ಚೂಡ್ಕಿಕಮರಿಂಚೆಡಿ ಸುರೂಪು-
ಲ ಶರೀರಮುಲ ರೂಪಲಕ್ಷ್ಮಿವೀವ |
ಶಿಷ್ಟರಕ್ಷಣದುಷ್ಟಶಿಕ್ಷಣುಲಗು ಪ್ರಭು-
ಲ ಭುಜಂಬುಲನ್ ಶಕ್ತಿಲಕ್ಷ್ಮಿವೀವ ||
ವಿಶ್ವಕಲ್ಯಾಣವಾಂಛ ಸದ್ವಿನಯಮುನ ಜೆ-
ಲಂಗು ಪಂಡಿತುಲನ್ ಶ್ರುತಲಕ್ಷ್ಮಿವೀವ |
ಜ್ಞಾನವೈರಾಗ್ಯಸಂಪನ್ನಮೌನಿವರ್ಯು-
ಲಕುನು ಗುರಿಯೈ ಪರಗು ಮೋಕ್ಷಲಕ್ಷ್ಮಿವೀವ ||
ದೀನ-ದಲಿತರ ಪೋಷಣೆಗೆಂದು ಧನಲಕ್ಷ್ಮಿಯಾಗಿ, ದೇಶರಕ್ಷಣೆಗೆಂದು ಧೈರ್ಯಲಕ್ಷ್ಮಿಯಾಗಿ, ಸೌಂದರ್ಯಸಿದ್ಧಿಗೆಂದು ರೂಪಲಕ್ಷ್ಮಿಯಾಗಿ, ಪ್ರಜಾಪಾಲನೆಗೆಂದು ಪ್ರಭುಶಕ್ತಿ-ಉತ್ಸಾಹಶಕ್ತಿ-ಮಂತ್ರಶಕ್ತಿಗಳ ರೂಪದ ಶಕ್ತಿಲಕ್ಷ್ಮಿಯಾಗಿ, ವಿದ್ಯಾಸಮೃದ್ಧಿಗೆಂದು ಶ್ರುತಲಕ್ಷ್ಮಿಯಾಗಿ, ಜ್ಞಾನ-ವೈರಾಗ್ಯಸಂಪನ್ನತೆಗೆಂದು ಮೋಕ್ಷಲಕ್ಷ್ಮಿಯಾಗಿ ಶ್ರೀದೇವಿಯ ವಿಲಾಸವು ಮೈದಾಳಲೆಂಬ ಆಶಂಸೆಯಿಲ್ಲಿದೆ.
ಈ ಸೀಸಪದ್ಯದ ರಚನಾಶಿಲ್ಪದಲ್ಲಿ ಕೃಷ್ಣಮೂರ್ತಿಗಳು ತಮ್ಮ ಇಷ್ಟಕವಿಯಾದ ತಿಕ್ಕನನನ್ನು ಅನುಸರಿಸಿರುವುದು ಸ್ಪಷ್ಟವಾಗಿದೆ.
ಇನ್ನೊಂದು ಪದ್ಯದಲ್ಲವರು ಲೋಕಯಾತ್ರೆಗೆ ಧನ ಅನಿವಾರ್ಯ, ಆದರೆ ಅಕ್ರಮವಿಲ್ಲದೆ ಅದನ್ನು ಆರ್ಜಿಸಬೇಕು ಮತ್ತು ಯಾವ ಅಳತೆಯಿಂದ ಕಂಡರೂ ಹಣಕ್ಕಿಂತ ಗುಣವೇ ಮುಖ್ಯವೆಂದು ಲಕ್ಷ್ಮಿ ನಮಗೆ ಮನಗಾಣಿಸಲೆಂದು ಹಾರೈಸುತ್ತಾರೆ:
ಚಂ || ಧನಮುನು ಲೋಕಯಾತ್ರಕು ಬ್ರಧಾನಮು ಕಾನಿ ಧನಂಬೆ ಸರ್ವಮುಂ-
ಚನುಟಯು ತಪ್ಪು ದಾನಿಕಯಿ ಯಕ್ರಮಮಾರ್ಗಮು ಪಟ್ಟ ಕೂಡದಾ |
ಧನಮುನಕಂಟೆ ನೆಂತಯು ಬ್ರಧಾನಮುಲೌ ಸುಗುಣಂಬುಲೆಲ್ಲರುಂ-
ಬನುವಡಿ ಸೇಕರಿಂಪವಲೆ ಬದ್ಮಜ ನೀ ಕೃಪ ಲೋಕಮಂದುನನ್ ||
ಈ ಪದ್ಯದ ಋಜುತೆ, ಪ್ರಮಾಣಿಕತೆ ಮತ್ತು ನಿರಾಡಂಬರತೆಗಳು ಲಂಕಾ ಕೃಷ್ಣಮೂರ್ತಿಗಳ ಜೀವನಾದರ್ಶಗಳೇ ಆಗಿದ್ದವು.
ಇನ್ನೊಂದು ಪದ್ಯವನ್ನು ಅವರ ಓಜೋಮಯಶೈಲಿಯ ಮಾದರಿಯಾಗಿಯೂ ಮತ್ತೊಂದನ್ನು ಅವರ ಅಚ್ಚತೆಲುಗು ನುಡಿಗಾರಿಕೆಯ ಉದಾಹರಣೆಯಾಗಿಯೂ ನೋಡಬಹುದು. ಇವೆರಡೂ ಸರಳಸ್ತುತಿಗಳು.
ಶಾ || ಸುಭ್ರೂ ನೀದು ವಿಶಾಲನೇತ್ರಮುಲ ರೋಚುಲ್ ಪಕ್ಷ್ಮಲಾಕ್ಷೀ ಚಲ-
ದ್ವಿಭ್ರಾಜಿಷ್ಣುವಿಲೋಕನಂಬುಲು ಸುಧಾವೀಚೀಸ್ಮಿತೋದ್ಭಾಸಿನೀ |
ಶುಭ್ರೋದ್ಯದ್ರದನಪ್ರಭಾಪಟಲಮುನ್ ಜೋದ್ಯಂಬುಲೈ ಪೂರಿತಾ-
ಶಾಭ್ರಂಬುಲ್ಗ ವೆಲುಂಗುಗಾದೆ ಜನನೀ ಯಾದ್ಯಪ್ರಭಾರೂಪಿಣೀ ||
ಇಲ್ಲಿ ದೇವಿಯ ನೇತ್ರಕಾಂತಿ ಮತ್ತು ಸ್ಮಿತದ್ಯುತಿಗಳು ಕಟಾಕ್ಷವೀಕ್ಷಣ ಮತ್ತು ದಂತಪಂಕ್ತಿಗಳ ಬೆಳಗಿನಿಂದ ನಮ್ಮನ್ನು ಅನುಗ್ರಹಿಸಲೆಂಬ ಭಾವವುಂಟು. ಈ ಮೂಲಕ ದೇವಿಯ ಸ್ನೇಹ-ಕಾರುಣ್ಯಗಳು ಧ್ವನಿತವಾಗಿವೆ.
ಕಂ || ಪುನ್ನೆಮುಲ ಸರುಲಬೊಮ್ಮಾ
ವೆನ್ನುನಿ ಯಿಲ್ಲಾಲವಗುಚು ವೆಲಸೆಡಿ ಕೊಮ್ಮಾ |
ನಿನ್ನುನ್ ಮ್ರೊಕ್ಕೆದಮಮ್ಮಾ
ಪುನ್ನೆಮುಲನು ಸಿರಿಯು ಬುತ್ತಿ ಮುತ್ತಿಯುನಿಮ್ಮಾ ||
ಇಲ್ಲಿ ಲಕ್ಷ್ಮಿಯನ್ನು ಬೆಳದಿಂಗಳಿನ ಎರಕದಂತೆ ಭಾವಿಸಲಾಗಿದೆ. ಆಕೆ ಹರಿಯೆಂಬ ತರುವನ್ನು ಆಲಿಂಗಿಸಿಕೊಂಡ ಲತೆ. ಅವಳು ಸಿರಿಯನ್ನು ಪುಣ್ಯದ ರೀತಿಯಲ್ಲಿ ಕೊಡಲೆಂಬ ಆಶಂಸೆಯಿಲ್ಲಿದೆ.
ತ್ಯಾಗಶಿಲ್ಪವನ್ನು ಅವರ ಕೃತಿಗಳ ಪೈಕಿ ಮುಖ್ಯವೆಂದು ಗಣಿಸಬಹುದು. ಇದು ಲೇಪಾಕ್ಷಿಯ ದೇವಾಲಯದ ವಾಸ್ತು ಮತ್ತು ಶಿಲ್ಪಸೌಂದರ್ಯಗಳನ್ನು ಆಧರಿಸಿದ ಕಥನಕಾವ್ಯ. ವಿಜಯನಗರಯುಗದ ಕೊನೆಯ ದಶಕಗಳಲ್ಲಿ ನಡಿಯಿತು ಎನ್ನಲಾದ ವಿರುಪಣ್ಣ ಮತ್ತು ವೀರಣ್ಣರೆಂಬ ಪ್ರಭುಗಳಿಬ್ಬರ ತ್ಯಾಗವನ್ನು ಇಂದಿಗೂ ಲೇಪಾಕ್ಷಿಯ ದಂತಕಥೆಗಳು ಸಾರುತ್ತಿವೆ. ಆ ಪ್ರಭುಗಳಿಗೂ ವಿಜಯನಗರದ ಸಮ್ರಾಟರಿಗೂ ಒದಗಿದ ವೈಮನಸ್ಯ ಮತ್ತದರ ಪರಿಣಾಮವಾಗಿ ವಿರುಪಣ್ಣನು ತನ್ನ ಕಣ್ಣುಗಳನ್ನೇ ಕಿತ್ತುಕೊಳ್ಳಬೇಕಾದ ದುರಂತಗಳು ಈ ಕಥೆಯಲ್ಲಿವೆ. ಇದನ್ನು ತೂರ್ಪು, ಕೂರ್ಪು, ಮಾರ್ಪು, ನೇರ್ಪು, ಓರ್ಪು, ಚೇರ್ಪು, ಮತ್ತು ತೀರ್ಪು ಎಂಬ ಏಳು ಅಧ್ಯಾಯಗಳಲ್ಲಿ ಖಂಡಕಾವ್ಯವಾಗಿ ಕೃಷ್ಣಮೂರ್ತಿಗಳು ರೂಪಿಸಿದ್ದಾರೆ. ಇಲ್ಲಿಯ ಒಂದೆರಡು ಪದ್ಯಗಳು ಸ್ಮರಣೀಯ:
ಉ || ಭಾವಮು ಶಬ್ದಮೂಲಮಯಿ ಭಾಸಿಲುಚುಂಡುನು ಶಬ್ದಮೇ ಭುವಿನ್
ಭಾವಪರಂಪರಾಧ್ವನುಲ ಭಾಸಿಲಜೇಯುನವೆಲ್ಲ ಶಬ್ದಮೇ |
ಭಾವಮು ಶಬ್ದರೂಪಮಗು ಭಾವಮುನಂದಲಿ ಕಾಂತಿ ಶಬ್ದಮೇ
ಭಾವನಚೇಯ ಶಬ್ದವಿಭವಮ್ಮಯಿ ತೋಚು ಸಮಸ್ತಸೃಷ್ಟಿಯುನ್ ||
ಭಾವವೇ ಶಬ್ದಗಳ ಮೂಲದಲ್ಲಿದ್ದು ಅಲ್ಲಿಯ ಕಾಂತಿಯೇ ಶಬ್ದಕ್ಕೆ ಸೊಗಸನ್ನು ತಂದು ತನ್ಮೂಲಕ ಜಗತ್ತು ಭಾವದಲ್ಲಿ ನೆಲೆನಿಂತ ಶಬ್ದವಗಿ ತೋರುತ್ತಿದೆಯೆಂಬುದು ಇದರ ತಾತ್ಪರ್ಯ. ಕೃಷ್ಣಮೂರ್ತಿಗಳು ಭಾವುಕತೆಯನ್ನು ತಮ್ಮ ಅಭಿಮಾನವಿದ್ಯೆಯಾದ ಸಾಹಿತ್ಯದ ಜೀವಾತುವಾಗಿ ಕಾಣಿಸಿದ ಬಗೆಯಿಲ್ಲಿ ಪರಿಭಾವನೀಯ.
ಮುಂದಿನ ಇಡಿಯ ಪದ್ಯ ಒಂದೇ ಸಮಾಸವಾಗಿ ರೂಪಿತವಾಗಿದೆ:
ಶಾ || ಭಾವಸ್ವೈರವಿಹಾರಭಂಗಿಭವಶಿಲ್ಪಸ್ನಿಗ್ಧಸೌಂದರ್ಯಸು-
ಶ್ರೀವಿಸ್ತಾರಕಳಾವಿಲಾಸಮಧುರಾಚ್ಛಿನ್ನಾಚ್ಛಗಾಂಧರ್ವಲ-
ಬ್ಧಾವಿಚ್ಛಿನ್ನಲಯಪ್ರಲೀನಪವನವ್ಯಾಪಾರಸಂಪೂರ್ಣಸ-
ದ್ಭಾವಾತ್ಮಾದ್ವಯಚಿತ್ಪ್ರಮೋದಘನಶಬ್ದಬ್ರಹ್ಮಸಂವೇದಿಯೈ ||
ಇಂಥ ಬರೆವಣಿಗೆ ಲಂಕಾ ಕೃಷ್ಣಮೂರ್ತಿಗಳ ಮನೋಧರ್ಮದ್ದಲ್ಲ. ಆದರೆ ವಿಶೇಷಪ್ರಸಂಗದ ಔಚಿತ್ಯವನ್ನು ಅನುಲಕ್ಷಿಸಿ ಇದನ್ನು ರಚಿಸಿದ್ದಾರೆ. ಭಾವವು ಶಿಲ್ಪ, ಸಂಗೀತವೇ ಮುಂತಾದ ಕಲೆಗಳಲ್ಲಿ ವ್ಯಕ್ತೀಕೃತವಾಗಿ ಆ ಬಳಿಕ ಅದು ನಮ್ಮ ಉಸಿರಿನೊಳಗೇ ಲೀನವಾಗಿ ಬ್ರಹ್ಮಾನಂದವೆನಿಸುವ ಬಗೆಯಿಲ್ಲಿ ವಿವೃತವಾಗಿದೆ.
ಮುಂದಿನ ಪದ್ಯವು ಕಾಮ-ಪ್ರೇಮಗಳ ಆಂತರ್ಯವನ್ನು ತೆರೆದಿಟ್ಟಿದೆ:
ತೇ.ಗೀ.|| ಪ್ರೇಮ ಬಂಧಿಂಪ್ಪ ಸೃಷ್ಟಿಲೋ ಗಾಮಮೂರ್ತಿ
ಪ್ರೇಮ ಸಾಗಿಂಚಿ ಸ್ಥಿತಿ ನಿಲ್ಪ ವಿಮಲಮುಕ್ತಿ |
ಸ್ಮೃತಿಕಿ ದೇರಂಗ ಸ್ಮರಮೂರ್ತಿ, ಯಲ್ಲಬಂಧ-
ಮುಲನು ದ್ರುಂಪಗಾ ದಾ ಮಾರಮೂರ್ತಿಯತಡೆ ||
ಪ್ರೇಮವನ್ನು ಏಕದೇಶೀಯವಾಗಿ ಬೆಳೆಯಗೊಟ್ಟು ನಿರ್ಬಂಧಿಸಿದರೆ ಕಾಮವಾಗುತ್ತದೆ. ಅದನ್ನು ಸರ್ವದೇಶೀಯವಾಗಿ ಬೆಳೆಸಿ ಸ್ವಾತಂತ್ರ್ಯವಿತ್ತರೆ ಮುಕ್ತಿಯಾಗುತ್ತದೆ. ನೆನಪಿನ ಚೌಕಟ್ಟಿಗೆ ಬಂದರೆ ಸ್ಮರನು ಮಾರನಾಗುತ್ತಾನೆ; ಎಲ್ಲ ಬಂಧಗಳನ್ನು ಬಿಡಿಸಿದಾಗ ಅವನೇ ತಾರಕನಾಗುತ್ತಾನೆ.
ಇದು ಲಂಕಾ ಕೃಷ್ಣಮೂರ್ತಿಯವರು ಅವ್ಯಾಜಪ್ರೇಮಕ್ಕೂ ನಿಃಸ್ವಾರ್ಥಪ್ರೀತಿಗೂ ಇತ್ತ ಮಹೋನ್ನತಸ್ಥಾನಕ್ಕೆ ನಿದರ್ಶನ. ಸಾಹಿತ್ಯ ಮತ್ತು ಸಮಾಜಕ್ಕೆ ಸಂಬಂಧಿಸಿದ ಅವರ ಸೇವಾಪ್ರಕಲ್ಪಗಳೆಲ್ಲ ಈ ಸೂತ್ರಕ್ಕೆ ಭಾಷ್ಯಗಳು.
ತೆಲುಗಿನಲ್ಲಿ ಅವರೊಂದು ಪ್ರಹಸನವನ್ನು ಬರೆದಿದ್ದರಂತೆ. ಅದು ಕೋರ್ಟು ಮತ್ತು ಕಾನೂನುಗಳ ತಕರಾರುಗಳನ್ನು ಕುರಿತದ್ದೆಂದು ಅವರ ತಮ್ಮ ತಿಳಿಸಿದ್ದಾರೆ. ಇದು ಅಮುದ್ರಿತ. ನಾನು ಇದನ್ನು ಬಲ್ಲವನಲ್ಲ.
ಅವರು ತೆಲುಗು-ಕನ್ನಡಗಳೆರಡನ್ನೂ ಅನುದಿನದ ವ್ಯವಹಾರಕ್ಕೆ ಹಾಗೂ ಸಾಹಿತ್ಯವರಿವಸ್ಯೆಗೆ ಬಳಸುತ್ತಿದ್ದ ಕಾರಣ ತಮ್ಮನ್ನು ದ್ವೈಮಾತೃಕನೆಂದು ಹೇಳಿಕೊಳ್ಳುತ್ತಿದ್ದರು. ಈ ಬಗೆಗೆ ಅವರೊಂದು ಲೇಖನವನ್ನು ಕೂಡ ಬರೆದಿದ್ದರು. ಕನ್ನಡದಲ್ಲಿ ಹಲಕೆಲವು ಕವಿತೆಗಳನ್ನೂ ಎರಡು ರೂಪಕಗಳನ್ನೂ ಬರೆದಿದ್ದರಂತೆ. ಇದಾದರೂ ನನಗೆ ತಿಳಿದದ್ದು ಅವರ ಅವಸಾನದ ಬಳಿಕ. ಅವರು ತಮ್ಮನ್ನು ಕುರಿತು ಎಂದೂ ಏನೂ ಕೊಚ್ಚಿಕೊಳ್ಳದ ಕಾರಣ ಇವುಗಳ ಸಂಗತಿ ನನಗೆ ಸರ್ವಥಾ ಪರೋಕ್ಷವಾಗಿದ್ದವು. ಅವರ ರೇಡಿಯೋ ಭಾಷಣ, ಆಕಾಶವಾಣಿಯ ಚಿಂತನ ಮತ್ತು ಹಲಕೆಲವು ಲೇಖನಗಳು ಕೂಡ ಇದೇ ರೀತಿ ನನ್ನ ಕಣ್ನೋಟದಿಂದ ಆಚೆಗೇ ಉಳಿದವು.
ಅವರ ಏಕೈಕ ಕಾದಂಬರಿ “ಕೊಡೆಯ ಗೋಪಾಲ” ಮಾತ್ರ ನನಗೆ ಅವರ ಮೂಲಕವಾಗಿಯೇ ಸಿಕ್ಕಿತ್ತು. ಅವರ ಮನೆಗೆ ಹೋಗಿ ಪರಿಚಯಿಸಿಕೊಂಡ ದಿನವೇ ಇದೂ ಸೇರಿದಂತೆ ಕೃಷ್ಣಮೂರ್ತಿಗಳ ಪೂರ್ವೋಕ್ತ ತೆಲುಗುಕಾವ್ಯಗಳು ಅವರ ಸಹಿಯೊಡನೆ ನನ್ನ ಕೈಸೇರಿದ ಕಾರಣ ಇಷ್ಟನ್ನಾದರೂ ನಾನಿಲ್ಲಿ ನಿವೇದಿಸಿದ್ದೇನೆ. ಇಲ್ಲವಾದರೆ ಅವರ ಸಾಹಿತ್ಯಕೃಷಿ ನನ್ನ ಮಟ್ಟಿಗೆ ಅಜ್ಞಾತವೇ ಆಗಿ ಉಳಿಯುತ್ತಿತ್ತು.
ಕೊಡೆಯ ಗೋಪಾಲ ಒಂದು ಐತಿಹಾಸಿಕಕಾದಂಬರಿ. ಇಲ್ಲಿ ಲಿಖಿತೇತಿಹಾಸಕ್ಕಿಂತ ಜನಶ್ರುತಿಯ ಆಧಾರವೇ ಹೆಚ್ಚು. ಈ ಕೃತಿಯಲ್ಲಿರುವುದು ಒಂದು ಸುಂದರಸಂಸ್ಕೃತಿಯ ಹೃದಯಂಗಮಚಿತ್ರಣ. ಪೆನುಗೊಂಡೆಯ ದೊರೆಯೊಬ್ಬನಿಗೆ ಶ್ವೇತಚ್ಛತ್ರವನ್ನು ಹಿಡಿಯುತ್ತಿದ್ದ ಗೋಪಾಲನೆಂಬ ಸಾಮಾನ್ಯನು ಅದೊಮ್ಮೆ ಕುದುರೆಯ ಮೇಲೆ ಕುಳಿತು ಸಾಗುತ್ತಿದ್ದ ರಾಜನ ಹಿಂದೆ ತನ್ನ ಪ್ರಾಣವನ್ನೇ ಪಣವಿಟ್ಟು ಓಡುತ್ತ ಕೊಡೆ ಹಿಡಿದನಂತೆ. ಆತನ ಸ್ವಾಮಿಭಕ್ತಿಯನ್ನು ಕಂಡು ಮೆಚ್ಚಿದ ಪ್ರಭುವು ಅವನ ಇಷ್ಟಾರ್ಥವನ್ನು ಈಡೇರಿಸಲು ಬಯಸಿದನಂತೆ. ಆಗ ಗೋಪಾಲನು ತನಗೆ ಮೂರು ಗಳಿಗೆಗಳ ಕಾಲ ಪೆನುಗೊಂಡೆಯ ಸಿಂಹಾಸನವನ್ನೇರಿ ದೊರೆತನ ಮಾಡಲು ಅವಕಾಶವೀಯಬೇಕೆಂದು ಕೋರಿದಾಗ ರಾಜನು ಇದಕ್ಕೆ ಒಪ್ಪಿದನಂತೆ. ತನ್ನ ದೊರೆಯು ಕವಿ-ಪಂಡಿತರಿಗೂ ಕಲಾವಿದರಿಗೂ ಅಷ್ಟಾಗಿ ಪೋಷಣೆಯನ್ನೀಯದ ಕಾರಣ ತಾನಾದರೂ ಅವರಿಗೆ ಯಾವುದಾದರೊಂದು ರೀತಿಯಲ್ಲಿ ನೆರವಾಗಬೇಕೆಂದು ಮೊದಲೇ ನಿಶ್ಚಯಿಸಿಕೊಂಡಿದ್ದ ಗೋಪಾಲ ಇದೀಗ ತನಗೆ ದಕ್ಕಿದ ಅವಕಾಶವನ್ನು ಬಳಸಿಕೊಂಡು ಆ ಮೂರು ಗಳಿಗೆಗಳ ಅವಧಿಯೊಳಗೆ ಅದೆಷ್ಟೋ ಮಂದಿ ಕವಿ-ಕಲಾವಿದರಿಗೆ, ವೈದಿಕ-ವಿದ್ವಾಂಸರಿಗೆ ಸಮೃದ್ಧವಾಗಿ ದಾನ-ಧರ್ಮಗಳನ್ನು ಮಾಡಿ, ವೃತ್ತಿ-ಮಾನ್ಯಗಳನ್ನು ಕೊಡಿಸಿ, ಸಮ್ಮಾನ ಸಲ್ಲಿಸಿದನಂತೆ. ಇಂದಿಗೂ ಪೆನುಗೊಂಡೆಯ ಪ್ರಾಂತದಲ್ಲಿ ಇಂಥ ಮಾನ್ಯಗಳನ್ನು “ಗೊಡುಗು ಗೋಪಾಲುನಿ ಮಾನ್ಯಾಲು” ಎಂದು ಗುರುತಿಸುವುದು ವಾಡಿಕೆಯಾಗಿದೆ. ಈ ಇತಿವೃತ್ತವನ್ನು ಆಧರಿಸಿ, ತಮ್ಮ ಕಲ್ಪನೆಯನ್ನೂ ಯಥೇಚ್ಛವಾಗಿ ಬಳಸಿ ಲಂಕಾ ಕೃಷ್ಣಮೂರ್ತಿಗಳು ತಾವು ನಂಬಿದ ಮೌಲ್ಯಗಳನ್ನೆಲ್ಲ ಇಲ್ಲಿ ತಮಗೊಲಿದ ಬಗೆಯಿಂದ ಕಂಡರಿಸಿದ್ದಾರೆ. ಇದರ ಭಾಷೆ ಅವರಂತೆಯೇ ತುಂಬ ಸಹಜ, ಸರಳ.
* * *
ಲಂಕಾ ಕೃಷ್ಣಮೂರ್ತಿಗಳಿಗೆ ಕವಿಹೃದಯ ಹೇಗೆ ಶಕ್ಯವಾಗಿತ್ತೋ ಹಾಗೆಯೇ ಕವಿಹೃದಯವಿಜ್ಞಾನವೂ ಸಾಧ್ಯವಾಗಿತ್ತು, ದುರ್ದೈವವೆಂದರೆ, ಅವರು ಈ ನಿಟ್ಟಿನಲ್ಲಿ ಹೆಚ್ಚಾಗಿ ಬರೆಯಲಿಲ್ಲ. ಆಗೀಗ ತಮ್ಮ ಮಾತು-ಕತೆಗಳಲ್ಲಿ ಹೇಳಿಕೊಳ್ಳುತ್ತಿದ್ದ ಕೆಲವು ಅಂಶಗಳನ್ನು ಗಮನಿಸಿದ ನಾನು ಅವರ ಸಾರಸ್ವತಕೃಷಿ ವಿಸ್ತರಿಸಿಕೊಂಡಿದ್ದರೆ ಎಷ್ಟೋ ಒಳಿತಾಗುತ್ತಿತ್ತೆಂದು ಭಾವಿಸಿದ್ದೇನೆ.
ತಿಕ್ಕನ ಮಹಾಕವಿಯು ಅವರಿಗೆ ತುಂಬ ಅಭಿಮಾನಪಾತ್ರನೆಂದು ಮೊದಲೇ ಗಮನಿಸಿದೆವಷ್ಟೆ. ಆತನ ಆಂಧ್ರಮಹಾಭಾರತದ ಹದಿನೈದು ಪರ್ವಗಳು ಅನೇಕ ಆಶ್ವಾಸಗಳಾಗಿ ವಿಭಕ್ತವಾಗಿವೆ. ಒಂದೊಂದು ಆಶ್ವಾಸದ ಆದ್ಯಂತಗಳಲ್ಲಿ ಅವನು ತನ್ನ ಕೃತಿಪತಿಯೂ ಇಷ್ಟದೈವವೂ ಆದ ಹರಿಹರನಾಥನನ್ನು ಉದಾರಗಂಭೀರವಾದ ಪದ್ಯಗಳ ಮೂಲಕ ಸ್ತುತಿಸಿ ಸಂಬೋಧಿಸಿದ್ದಾನೆ. ಇವುಗಳ ತತ್ತ್ವಮಹತ್ತ್ವ ಮತ್ತು ಕಾವ್ಯಪೇಶಲತೆಗಳನ್ನು ಲಂಕಾ ಕೃಷ್ಣಮೂರ್ತಿಗಳು ಹತ್ತಾರು ಬಾರಿ ನನ್ನಲ್ಲಿ ಪ್ರಸ್ತಾವಿಸಿದ್ದರು. ಮಾತ್ರವಲ್ಲ, ಇಲ್ಲಿಯ ಪದ್ಯಶಿಲ್ಪ, ಅಲಂಕಾರನಿಕ್ಷೇಪ, ಪದಪದ್ಧತಿ ಮುಂತಾದ ರಚನಾಂಶಗಳನ್ನು ಕುರಿತೂ ಹೇಳಿ “ಒಳ್ಳೆಯ ಪದ್ಯವೆಂದರೆ ಹೀಗರಬೇಕು ಸಾರ್” ಎಂದು ಮುಗಿಸುತ್ತಿದ್ದರು.
ಅವರಿಗೆ ದುಡುಕುತನದ ಕವಿತಾರಚನೆ ಇಷ್ಟವಾಗುತ್ತಿರಲಿಲ್ಲ. ವಿಪರ್ಯಾಸವೇನೆಂದರೆ ಅವಧಾನಕಾವ್ಯದ ಬಹುಭಾಗ ಇಂಥ “ಸಾಹಸ”ವೇ ಆಗಿದೆ! ಅದರಲ್ಲಿಯೂ ನನ್ನ ಮನೋಧರ್ಮ ಬಲುಪಾಲು ಇಂಥದ್ದೇ. ವಿಶೇಷತಃ ಅವಧಾನವನ್ನು ಆರಂಭಿಸಿದ ದಿನಗಳಲ್ಲಿ ಆಶುಧಾರೆಯ ವೇಗ-ಓಘಗಳಿಗೆ, ದಂಡಾಕಾರದ ಸಮಾಸಗಳಿಗೆ ಮಾರುಹೋದ ನಾನು ಈ ನಿಟ್ಟಿನಲ್ಲಿ ಸದಾ ಮುನ್ನುಗ್ಗುತ್ತಿದ್ದೆ. ಘಂಟಾಶತಕ, ಘಟಿಕಾಶತಕದಂಥವು ನನ್ನ ಆದರ್ಶವಾಗಿದ್ದವು. ಅದನ್ನೆಲ್ಲ ಗಮನಿಸಿದ ಕೃಷ್ಣಮೂರ್ತಿಗಳು ತಮ್ಮ ತೆಲುಗು ಮಿತ್ರರ ಜೊತೆ “ಆಯನ ಕಷ್ಟಪಡಕ ಬಡಲಿಕಲೇಕ ಧಾರಾಳಂಗಾ ಅವಧಾನಂ ಚೇಸ್ತಾಡು. ಪದ್ಯಾನ್ನಿ ದೂಸಿಕೊನಿ ಪೋನಿಸ್ತಾಡು” (ಆತ ಕಷ್ಟವಿಲ್ಲದೆ, ಶ್ರಮವೆನಿಸದೆ ಧಾರಾಳವಾಗಿ ಅವಧಾನ ಮಾಡುತ್ತಾನೆ. ಪದ್ಯಗಳನ್ನು ನುಗ್ಗಿಸಿಕೊಂಡು ಹೋಗುತ್ತಾನೆ) ಎಂದು ಮೆಚ್ಚಿಕೊಳ್ಳುತ್ತಿದ್ದರಾದರೂ ಪ್ರತ್ಯಕ್ಷದಲ್ಲಿ ಮಾತ್ರ ತಮ್ಮ ಎಂದಿನ ದೃಢಶಾಂತವಾದ ಸ್ವರದಿಂದ ಹಿತ ಹೇಳುತ್ತಿದ್ದರು: “ಸಾರ್, ಪದ್ಯವನ್ನು ಹೇಳುವುದಕ್ಕೆ ಮುಂಚೆ ಮನಸ್ಸಿನಲ್ಲಿ ಪ್ರಶಾಂತವಾಗಿ ವಿಸ್ತಾರವಾದ ಕಲ್ಪನೆ ಮಾಡಿಕೊಳ್ಳಬೇಕು. ಆಮೇಲೆ ನೆಮ್ಮದಿಯಾಗಿ ಪದಗಳನ್ನು ಪೋಣಿಸಿಕೊಂಡು ಅರ್ಥವತ್ತಾಗಿ ಪದ್ಯವನ್ನು ರಚಿಸಿಕೊಳ್ಳಬೇಕು.” ಅವರು ಹೀಗೆ ನಿರೂಪಿಸುವಾಗ ಆರ್ದ್ರವಾಗಿ ನೋಡುತ್ತ, ಎಡದೋಳನ್ನು ಚಾಚಿ ವಿಸ್ತಾರಕ್ಕೆ ಆಕಾರವೀಯುವಂತೆ ಅಂಗೈಯನ್ನು ವೃತ್ತಾಕಾರವಾಗಿ ಆಡಿಸುತ್ತಿದ್ದರು. ಆಗ ತೋರುತ್ತಿದ್ದ ಅನುನಯ-ಕಾಳಜಿಗಳು ಅವಿಸ್ಮರಣೀಯ. ಆದರೆ ಈ ಸಿದ್ಧಿ ಎಂದೂ ನನ್ನದಾಗಲಿಲ್ಲ. ಆಗುವುದೂ ಇಲ್ಲವೇನೋ.
ಇಂಥ ಸಂದರ್ಭಗಳಲ್ಲೆಲ್ಲ ಅವರಿಗೆ ತಿಕ್ಕನನ ವಿರಾಟಪರ್ವದ ನೆನಪಾಗುತ್ತಿತ್ತು. ಕೀಚಕನು ದ್ರೌಪದಿಯನ್ನು ವಿರಾಟನ ಆಸ್ಥಾನದವರೆಗೂ ಬೆನ್ನಟ್ಟಿ ಬಂದಾಗ ಅದನ್ನು ಕಂಡ ಭೀಮನು ಮುನಿದ ಪರಿಯನ್ನು ವರ್ಣಿಸುವ ನೇಲಯು ನಿಂಗಿಯು ತಾಳಮುಲ್ಗಾ ಜೇಸಿ ಯೇಪುನ ರೇಗಿ ವಾಯಿಂಚಿಯಾಡ ... ಪದ್ಯವನ್ನು ಹೇಳಿ ಶಬ್ದಗತವಾದ ಓಜಸ್ಸು ಇಲ್ಲಿ ಕಾಣದಿದ್ದರೂ ಅರ್ಥಗತವಾದ ಓಜಸ್ಸಿದೆಯೆಂದು ನಿರೂಪಿಸುತ್ತಿದ್ದರು. ಇದು ಆನಂದವರ್ಧನನಿಗೂ ಸಮ್ಮತವಾದ ಮತವೇ. ಆದರೆ ನಾನು ಸುಮ್ಮನಿರದೆ “ಈ ಪ್ರಕರಣದ ಬಳಿಕ ನಿಮ್ಮ ಅಭಿಮಾನಪಾತ್ರನಾದ ಈ ಕವಿಯೇ ದ್ರೌಪದಿಯ ಬಾಯಲ್ಲಿ ದುರ್ವಾರೋದ್ಯಮಬಾಹುವಿಕ್ರಮರಸಾಸ್ತೋಕಪ್ರತಾಪಸ್ಫುರದ್ಗರ್ವಾಂಧಪ್ರತಿವೀರನಿರ್ಮಥನವಿದ್ಯಾಪಾರಗುಲ್ ಇತ್ಯಾದಿ ಓಜೋಮಯವಾದ ಶಬ್ದಶಯ್ಯೆಯ ಪದ್ಯವನ್ನು ಹೇಳಿಸಿದ್ದಾನಲ್ಲಾ, ಇದಕ್ಕೇನು ಹೇಳುತ್ತೀರಿ?” ಎಂದು ಪಾಟೀಸವಾಲು ಹಾಕುತ್ತಿದ್ದೆ. ನನ್ನ ವಿನೋದವನ್ನು ಗಮನಕ್ಕೆ ತಂದುಕೊಳ್ಳದೆ ಅವರು ತಮ್ಮ ಎಂದಿನ ಸೌಜನ್ಯ-ಗಾಂಭೀರ್ಯಗಳಿಂದ ತಮ್ಮ ತತ್ತ್ವವನ್ನೇ ವಿಸ್ತರಿಸುತ್ತಿದ್ದರು.