ಅಂದು ರಾತ್ರಿ ದ್ರೌಪದಿ ಏನು ಮಾಡಬೇಕೆಂಬುದನ್ನು ಸೂಚಿಸಿ, ರಾತ್ರಿ ಕೀಚಕನ ಬಳಿಗೆ ಸೈರಂಧ್ರಿಯ ವೇಷತೊಟ್ಟು ವೈಯಾರವಾಗಿ ಬರುವ ಭೀಮನ ರೂಪು ಹೀಗಿತ್ತಂತೆ
ಉರಿವ ಮಾರಿಯ ಬೇಟದಾತನು
ತುರುಗಿದನು ಮಲ್ಲಿಗೆಯ ಮೊಗ್ಗೆಯ
ನಿರಿಕಿ ತಾ ಪೂಸಿದನು ಸಾದು ಜವಾಜಿ ಕತ್ತುರಿಯ |
ಮೆರೆವ ಗಂಡುಡಿಗೆಯ ರಚಿಸಿದ
ಸೆರಗಿನೊಯ್ಯರದಲಿ ಸುರಗಿಯ
ತಿರುಹುತಿರುಳೊಬ್ಬನೆ ನಿಜಾಲಯ ದಿಂದ ಹೊರವಂಟ || (ವಿರಾಟ ಪರ್ವ 3.81)
ಕೀಚಕನೊಡನೆ ಯುದ್ಧ ಮಾಡಲು ಭೀಮನ ಬಳಿ ತನ್ನ ದೇಹ ತನ್ನ ಬಾಹುಗಳೂ ಮುಷ್ಠಿಗಳಲ್ಲದೆ ಬೇರಾವ ಆಯುಧಗಳೂ ಇಲ್ಲ. ಅವನ ದೇಹವೇ ಒಂದು ಅಸಾಧಾರಣಶಕ್ತಿಕೇಂದ್ರಿತ ಆಯುಧ. ದ್ರೌಪದಿಯ ಅಳಲನ್ನು ಕೇಳಿದ ಭೀಮ ಅರಮನೆಯ ಮುಂದಿದ್ದ ಮರವನ್ನು ನೋಡಿದಾಗ ಧರ್ಮರಾಯ ಬೇಡವೆಂದು ತಲೆಯಾಡಿಸಿರುತ್ತಾನೆ. ಭೂಮಿಯೊಳಗೆ ಬೇರುಬಿಟ್ಟ ಬೃಹತ್ ವೃಕ್ಷಗಳನ್ನು ಬುಡಸಹಿತ ಕಿತ್ತು ಅದನ್ನೇ ಆಯುಧವನ್ನಾಗಿ ಉಪಯೋಗಿಸುವ ಅದ್ಭುತ ಶಕ್ತಿ ಭೀಮನಿಗಲ್ಲದೆ ಮತ್ತಾರಿಗಿರಲು ಸಾಧ್ಯ? ಇದರಿಂದಾಗಿ ತಮ್ಮ ಕುರುಹು ಬಯಲಾಗುವುದೆಂಬ ಅಂಜಿಕೆ ಧರ್ಮಜನಿಗೆ. ಆದ್ದರಿಂದಲೇ, ಕತ್ತಲಿನಲ್ಲಿ ದ್ವಂದ್ವಯುದ್ಧ ನಿಶ್ಚಯಿಸುತ್ತಾನೆ ಭೀಮ. ಭೀಮ ಕೀಚಕರ ಕತ್ತಲಲ್ಲಿನ ಮುಷ್ಠಿಯುದ್ಧವನ್ನು ನಗುತಾಲಿಸುತಿದ್ದಳಂತೆ ಭೀಮನ ಯುವತಿ ದ್ರೌಪದಿ. ಕೀಚಕನ ಮರಣದಿಂದ ಕ್ರುದ್ಧರಾದ ಅವನ ನೂರು ಜನ ಸೋದರರು ದ್ರೌಪದಿಗಾಗಿ ತಮ್ಮಣ್ಣ ಸತ್ತನೆಂದು, ಅಣ್ಣನ ಹೆಣದೊಡನೆ ದ್ರೌಪದಿಯನ್ನೂ ಕಟ್ಟಿ ಸುಡಲು ಹೊತ್ತೊಯ್ಯುತ್ತಿದ್ದಾಗ ಮತ್ತೆ ಅವಳನ್ನು ರಕ್ಷಿಸುವವನು ಭೀಮನೇ. ಒಂದು ಹೆಮ್ಮರವನ್ನು ಕಿತ್ತು ಆ ನೂರು ಜನರನ್ನು ಅರೆದು ನಿಟ್ಟೊರೆಸಿ, ಮಿಣ್ಣನೆ ಬಂದು ಬಾಣಸದ ಮನೆ ಹೊಗುತ್ತಾನೆ ಭೀಮ. ಆ ಬಾಣಸದ ಮನೆಯಾದರೂ ಎಂತಹುದು. ಯಾವುದಾದರೂ ಶಾಕಾಹಾರಿ, ಮಾಂಸಾಹಾರಿ ಎರಡೂ ರೀತಿಯ ಆಹಾರ ಸರಬರಾಜು ಮಾಡುವ ಅತ್ಯಂತ ದೊಡ್ಢ ಹೋಟೆಲೊಂದರ ಅಡಿಗೆ ಮನೆಯಂತಿದೆ. ಮಾಂಸ, ತರಕಾರಿಗಳ ರಾಶಿಗಳು, ಬೇರೆ ಬೇರೆ ಆಹಾರ ಪದಾರ್ಥಗಳೂ ವಿವಿಧ ಭಕ್ಷ ಭೋಜ್ಯಗಳು, ಎಲ್ಲವೂ ರಾಶಿರಾಶಿ. ಈ ಸಾಮ್ರಾಜ್ಯದ ಅನಭಿಷಿಕ್ತ ಮಹಾರಾಜ ಭೀಮ-ವಲಲ.
ಭೀಮನ ಶೀಘ್ರ ಕೋಪಕ್ಕೆ, ತನ್ನಣ್ಣನ ಮೇಲಿನ ಪ್ರೀತಿ ಗೌರವಗಳಿಗೆ ಈ ಪ್ರಸಂಗದ ಉದಾಹರಣೆ ಕೊಡಬಹುದು. ವಿರಾಟನಗರದ ಗೋವುಗಳನ್ನು ದುರ್ಯೋಧನನ ಸೈನ್ಯ ಹಿಡಿದುಕೊಂಡಾಗ, ಭೀಮನೊಬ್ಬನೇ ಸುಶರ್ಮನ ಸೈನಿಕರೊಡನೆ ಹೋರಾಡಿ ವಿರಾಟರಾಜನನ್ನು ಧರ್ಮರಾಜನ ಆಜ್ಞೆಯಂತೆ ಶತ್ರುಗಳಿಂದ ಬಿಡಿಸಿ ಕೊಂಡು ಬಂದಿರುತ್ತಾನೆ. ವಿರಾಟರಾಯ ತನ್ನ ಕುಮಾರನ ಶೌರ್ಯವನ್ನು ಹೊಗಳುವಾಗ ಕಂಕಭಟ್ಟ (ಧರ್ಮಜ) ಯುದ್ಧವನ್ನು ನಿಜವಾಗಿ ಗೆದ್ದಿರುವವನು ಬೃಹನ್ನಳೆ. ನಿನ್ನ ಮಗನಿಗೆ ಅಳುಕುವರೆ ಭೀಷ್ಮಾದಿಗಳು ಎಂದಾಗ ವಿರಾಟರಾಜ ಕುಪಿತನಾಗಿ, ಆಟವಾಡುತ್ತಿದ್ದ ಚಿನ್ನದ ದಾಳಗಳಿಂದ ಧರ್ಮಜನ ಹಣೆಗೆ ಹೊಡೆಯುತ್ತಾನೆ. ಸೈರಂಧ್ರಿಯಾಗಿ ಅಲ್ಲಿಯೇ ಕೆಲಸಮಾಡುತ್ತದ್ದ ದ್ರೌಪದಿಯನ್ನು ಧರ್ಮರಾಯ ಓರೆನೋಟದಿಂದ ಕರೆಯುತ್ತಾನೆ. ತನ್ನ ಹಣೆಯಿಂದ ಸುರಿದ ರಕ್ತವನ್ನು ತನ್ನ ಬೊಗಸೆಯಲ್ಲಿ ಹಿಡಿಯುತ್ತಾನೆ ಧರ್ಮಜ. ದ್ರೌಪದಿ ಬಂದು ಸನ್ಯಾಸಿ ಬಹಳ ನೊಂದನೆಂದು ಆ ರಕ್ತವನ್ನೆಲ್ಲ ತನ್ನ ಸೀರೆಯ ಸೆರಗಿನಲ್ಲಿ ಹಿಡಿದಿಡುತ್ತಾಳೆ. ಧರ್ಮಜನ ಹಣೆಯಿಂದ ಸೋರುತ್ತಿದ್ದ ರಕ್ತವನ್ನು ಅಡಿಗಡಿಗೆ ಒರಸುತ್ತಾಳೆ. ಇದನ್ನು ಕಂಡ ರಾಜ ಹೀಗೇಕೆ ಮಾಡುತ್ತಿರುವೆಯೆಂದು ಕೇಳಿದಾಗ, ದ್ರೌಪದಿ ಹೇಳುತ್ತಾಳೆ, ಈ ಮುನಿಯ ನೆತ್ತರು ಧರೆಗೆ ಬಿದ್ದರೆ ಆ ಪ್ರದೇಶವನೊರೆಸಿ ಕಳೆವುದು. ನಿನ್ನ ರಾಜ್ಯ ಉರಿದು ಹೋಗುವುದೆಂದು ಈ ಪರಮಯತಿ ತನ್ನ ರಕ್ತವನ್ನು ಬೊಗಸೆಯಲ್ಲಿ ಹಿಡಿದನು ಎನ್ನುತ್ತಾಳೆ.
ಅಣ್ಣನ ಹಣೆಯ ಗಾಯದ ಕಾರಣ ತಿಳಿದ, ಇಳಿಯುತಿಹ ರಕ್ತ ಬಿಂದುಗಳ ಕಂಡ ಪಾರ್ಥ, ವಿರಾಟನ ರಕುತವನು ಶಾಕಿನಿಯರಿಗೆ ಹೊಯಿಸುತ್ತೇನೆನ್ನುತ್ತಾನೆ (ವಿರಾಟ ಪರ್ವ 9.35). ಭೀಮನಂತೂ ಉಗ್ರಭೈರವನಾಗುತ್ತಾನೆ. “ಅವದಿರ ಕುಲವ ಸವರುವೆನಿವನ ಸೀಳಿದು | ಬಲಿಯ ಕೊಡುವೆನು ಭೂತಗಣಕೆನುತ |” (ವಿರಾಟ ಪರ್ವ 9.36) ಭೀಮ ಹೇಳುತ್ತಾನೆ. ಕೊಂಬೆನಾತನ ಜೀವವನು ಎಂದು ಗುಡುಗುತ್ತಾನೆ. “ಸೈರಣಿಗೆ ಮನ ಮಾಡೆಂದು” (ವಿರಾಟ ಪರ್ವ 9.39) ಧರ್ಮಜ ಹೇಳಿದಾಗ ಕೋಪದಿಂದ ಹಳಿಯುತ್ತಾನೆ.
ಬರಿಯ ಧರ್ಮದ ಜಾಡ್ಯದಲಿ ಮೈ-
ಮರೆದು ವನದಲಿ ಬೇವು ಬಿಕ್ಕೆಯ
ನರಸಿ ತೊಳಲಿದು ಸಾಲದೇ ಹದಿ ಮೂರು ವತ್ಸರದಿ |
ಉರುಕು ಗೊಂಡೊಡೆ ರಾಜತೇಜವ
ಮೆರವ ದಿನವೆಂದಿಹುದು ನೀವಿ-
ನ್ನರಿಯಿದೆಮ್ಮನು ಹರಿಯಬಿಡಿ ಸಾಕೆಂದನಾ ಭೀಮ || (ವಿರಾಟ ಪರ್ವ 9.40)
ಉಗ್ರ ಕೋಪದಲ್ಲಿಯೂ ಅಣ್ಣನ ಮಾತಿಗೆ ಮಣಿಯುವ ಭೀಮ, ತನ್ನ ಸೋದರನನ್ನು ಅದೆಷ್ಟು ಪ್ರೀತಿಸುತ್ತಾನೆಂಬುದು ತಿಳಿದು ಬರುತ್ತದೆ.
ಭೀಮ ಮಹಾಪರಾಕ್ರಮಿ, ಶೀಘ್ರಕೋಪಿ, ರುದ್ರಭಯಂಕರನೆನಿಸಿದರೂ ಶಾಂತಿಪ್ರಿಯನೂ ಹೌದು. ಯುದ್ಧಾರಂಭಕ್ಕೆ ಮೊದಲು ಕೃಷ್ಣ ಯುಧಿಷ್ಠಿರ, ಭೀಮ, ಪಾರ್ಥ, ನಕುಲ ಸಹದೇವರನ್ನು ಸಂಧಿ ಮಾಡಿ ಕೊಳ್ಳುವ ಬಗೆಗೆ ಅವರ ಅಭಿಮತವನ್ನು ಕೇಳುತ್ತಾನೆ. ಧರ್ಮರಾಯನಂತೂ ಎಂದೂ ಸಂಧಿಗೆ ಒಡಂಬಡುವವನೇ. ಆದರೆ ಆಶ್ಚರ್ಯವೆಂಬಂತೆ ಭೀಮ ಕೂಡ, ಆ ದುರ್ಯೋಧನಾದಿಗಳು ನಮ್ಮೊಡನೆ ಹಗೆ ತನದಿಂದ ನಡೆದುಕೊಂಡುದು “ಪುರಾಕೃತ ಕರ್ಮದವಶೇಷ” (ಉದ್ಯೋಗ ಪರ್ವ 6.10) ಹಿಂದೆ ಅವರು ಮಾಡಿದ ಅವಮಾನಗಳಿಂದ ನನಗೆ “ಚಿತ್ತದ ದುಗುಡವಿಲ್ಲ ಸಂಧಿಯ ರಚಿಸಿ” (ಉದ್ಯೋಗ ಪರ್ವ 6.10) ಸಾಕೆನ್ನುತ್ತಾನೆ. ಅರಣ್ಯವಾಸ, ವಯಸ್ಸು ಅವನ ಮನಸ್ಸನ್ನು ಮಾಗಿಸುತ್ತಿದ್ದಿರಬಹುದು. ಭೀಮನ ಮಾತುಗಳು ಕೃಷ್ಣನಿಗೇ ಆಶ್ಚರ್ಯವುಂಟು ಮಾಡುತ್ತವೆ.
ಎಲೆ ಮಹಾದೇವಾಯ್ತು ಹಾಲಾ-
ಹಲ ಸುಧಾರಸ ಉಕ್ಕಿದುರಿಯ-
ಗ್ಗಳದ ಶೀತಲವಾಯ್ತು ಸಿಡಿಲಾಟೋಪ ನಯವಾಯ್ತು |
ಕೊಳುಗುಳಕೆ ಪವಮಾನನಂದನ-
ನಳುಕಿದನು ಮಝ ಮಾಯೆ ಕುಂತೀ-
ಲಲನೆ ಹೆತ್ತಳು ಸುತರನೆಂದನು ಶೌರಿ ನಸುನಗುತ || (ಉದ್ಯೋಗ ಪರ್ವ 6.11)
ಭೀಮನ ಈ “ಯುದ್ಧ ಬೇಡ, ಸಂಧಿಯಿರಲಿ” ಎನ್ನುವ ಶಾಂತಿ ಪ್ರಿಯತೆ ಕೈಲಾಗದವರ ಶಾಂತಿಪ್ರಿಯತೆಯಲ್ಲ. ಈ ಶಾಂತಿ ಪ್ರಿಯತೆಯನ್ನು ಹೊಡೆದೋಡಿಸಿ ಭೀಮನಲ್ಲಿ ವೀರರಸ ಉಕ್ಕಿಸಲು ದ್ರೌಪದಿಯೇ ತಕ್ಕವಳೆಂದು ಆ ಕೃಷ್ಣನಿಗೆ ಗೊತ್ತು. ಅದಕ್ಕೆಂದೇ ಯುದ್ಧದ ಬಗೆಗೆ, ಸಂಧಿಯ ಬಗೆಗೆ ಅಭಿಮತ ಕೇಳಲು ಅವಳನ್ನೂ ಕರೆಸುತ್ತಾನೆ. ದ್ರೌಪದಿ “. . . ಮಿಂಚಿನ | ಗವಿಸಹಿತ ಮರಿ ಮೇಘವಾವಿರ್ಭವಿಸಿತೆನೆ ದಂಡಿಗೆಯ ನಿಳಿದು” (ಉದ್ಯೋಗ ಪರ್ವ 6.18) ಓಲಗಕ್ಕೆ ಬರುತ್ತಾಳೆ. ಅವಳು ಮೊದಲು ಮಾತನಾಡಿಸುವುದು ಭೀಮನನ್ನು. ಸಂಪ್ರತಿಗೊಪ್ಪಿ, ಕಲಿತನವ ನೀರೊಳು ಕಲಕಿದೆ. ಶಶಿಕುಲವ ನರಕಿದೊಳಿಳಿಸಿದೆ ಎಂದು ಆರಂಭಿಸಿ, “ಕೇಡಿಗನು ಕೌರವ ನೃಪಾಲನ ಕೂಡಿ ಬದುಕುವ ಭೀಮಸೇನನೆ ರೂಢಿಸಿತಲಾ ನಿಮ್ಮ ಸಿರಿ ಸೋದರರ ಸೇರುವೆಗೆ” (ಉದ್ಯೋಗ ಪರ್ವ 6.20) ಎನ್ನುತ್ತಾಳೆ. “ಯತಿಗಳಾದಿರಿ ನೀವು ರೋಷಚ್ಯುತರಲೇ” (ಉದ್ಯೋಗ ಪರ್ವ 6.21) ಎಂದು ಭಂಗಿಸುತ್ತಾಳೆ. ಕೌರವರು ಮತ್ತು ನೀವು ಎಷ್ಟಾದರೂ ಸೋದರರು, ನಾವು ಪಾಂಚಾಲರು ಹೊರಗೇ ಅಲ್ಲವೇ ಎಂದು ಹಂಗಿಸುತ್ತಾಳೆ. ಭೀಮನನ್ನು ಕೆರಳಿಸುವ ಶಕ್ತಿ ಅವಳೊಬ್ಬಳಿಗೇ ಇರುವುದು. ಇದು ಅವಳಿಗೂ ಗೊತ್ತು, ಕೃಷ್ಣನಿಗೂ ಗೊತ್ತು. ಭೀಮನನ್ನು ಛೇಡಿಸುತ್ತಾ, ಪ್ರಶಂಸಿಸುತ್ತಾ ಯುದ್ಧಕ್ಕೆ ಅವನನ್ನು ಅಣಿಮಾಡುವ ರೀತಿಯನ್ನು ಓದಿಯೇ ಆನಂದಿಸಬೇಕು.
ಭೀಮ ಬಲವದರಾತಿಸೇನಾ-
ಭೀಮ ಕುರುಕುಲಕುಸುಮಮಾರ್ಗಣ-
ಭೀಮ ಮರೆದೈ ಮಾನಿನಿಯ ಮಾನಾಪಹಾನಿಗಳ |
ರಾಮನಬಲೆಗೆ ಕುದಿದ ಘನಸಂ-
ಗ್ರಾಮವನು ನೀ ಕೇಳಿದರಿಯಾ
ಪ್ರೇಮದಲಿ ನೋಡೆನ್ನನೆಂದಳು ದ್ರೌಪದೀದೇವಿ || (ಉದ್ಯೋಗ ಪರ್ವ 6.23)
ತನ್ನ ಐವರು ಪತಿಗಳನ್ನು ಸಂಭೋಧಿಸಿ, ತನಗೆ ತುಂಬಿದ ಸಭೆಯಲ್ಲಾದ ಅಪಮಾನವನ್ನು ನೆನಪು ಮಾಡಿ ಕೊಂಡು, ಸಭೆಯಲ್ಲಿ ಹೆಂಡತಿಯ ಸೀರೆ ಸುಲಿದರೂ ಸುಮ್ಮನಿದ್ದವರಲ್ಲವೆ ಎಂದುದಲ್ಲದೆ, ಕೃಷ್ಣ ತಾನು ಹೇಳಿದ ಮಾತನ್ನು ಮರೆತು ಸಂಧಿಗೆ ಮುಂದುವರೆದುದನ್ನೂ ಟೀಕಿಸುತ್ತಾಳೆ. ಸಹದೇವನೊಬ್ಬನು ಮಾತ್ರ ಸಂಧಿಬೇಡವೆಂದು ಹೇಳಿರುವುದರಿಂದಾಗಿ, ಸಹದೇವ, ತನ್ನ ಐದು ಮಕ್ಕಳು, ಸುಭದ್ರೆಯ ಮಗ ಮತ್ತು ತನ್ನ ತಂದೆಯ ಮೂರು ಅಕ್ಷೋಹಿಣಿ ಸೈನ್ಯ ಇಷ್ಟೇ ಸಾಕು ಇವರುಗಳು “ಕಾದು ದುಶ್ಯಾಸನನ ರಕುತವ ಕುಡಿದು ಕುರುಕುಲ ವನವ ಸುಡುವರು ನಿಮ್ಮ ಹಂಗೇಕೆ” (ಉದ್ಯೋಗ ಪರ್ವ 6.26) ಎನ್ನುತ್ತಾಳೆ. ದ್ರೌಪದಿಯ ಮಾತುಗಳಿಂದ ಭೀಮನ ರೋಷ ಮೆಲ್ಲನೆ ಹೆಡೆಯೆತ್ತತೊಡಗುತ್ತದೆ. “ತರುಣಿ ಸೈರಿಸು ಸೈರಿಸಿನ್ನೀ ಸುರಿವ ಕಂಬನಿಗಳಿಗೆ ಶತ ಸಾವಿರ ಮಡಿಯ ಕಂಬನಿಯ ಸುರಿಸುವೆ ಹಗೆಯ ಹೆಂಡಿರಲಿ” (ಉದ್ಯೋಗ ಪರ್ವ 6.27) ಎನ್ನುತ್ತಾ ಉರಿ ಹೊಗುವ ಮೀಸೆಗಳ ಬೆರಳಲಿ ತಿರುವುತ್ತಾ ಎಡಗೈಯಿಂದ ದ್ರೌಪದಿಯ ಕುರುಳ ನೀವಿ ಸಂತೈಸುತ್ತಾ ಕೃಷ್ಣನಿಗೆ ಹೇಳುತ್ತಾನೆ. “ನರಕ ಮರ್ದನ ಕೇಳು ಕೌರವ ನರಿಗಳಿದಿರೇ ಕೀಳುವೆನು ಕುಲಗಿರಿಗಳನು ತೊಡೆವೆನು ಕೃತಾಂತನ ಭಾಳದಕ್ಕರವ |” (ಉದ್ಯೋಗ ಪರ್ವ 6.28) ನಂತರ ಪ್ರತಿಜ್ಞೆ ಮಾಡುತ್ತಾನೆ. “ಕೆಡಹಿರಿಪುವಿನ ಕರುಳ ದಂಡೆಯ, ಮುಡಿಸುವೆನು ಮಾನಿನಿಗೆ, ರಕುತವ ಕುಡಿಯಲೆರೆವೆನು ಶಾಕಿನಿಯರಿಗೆ ತತ್ಸಹೋದರರ” (ಉದ್ಯೋಗ ಪರ್ವ 6.30), ಆದರೂ ಪೂರ್ತಿ ಸೈರಣೆ ಕಳೆದು ಕೊಳ್ಳದ ಭೀಮ ಕೃಷ್ಣನಿಗೆ ಹೇಳುತ್ತಾನೆ “ಸಂಧಿಯ ಮಾಡಿ ಐದೂರನ್ನು ಇವರಿಗೆ ಕೊಡಿಸು, ಕೌರವೇಂದ್ರನಿಂದ ಎರಡೂರನ್ನು ನಾನು ತೆಗೆದುಕೊಳ್ಳುತ್ತೇನೆ” (ಉದ್ಯೋಗ ಪರ್ವ 6.30). ಕುಲವನ್ನೆಲ್ಲಾ ವಿನಾಶ ಮಾಡುವ ಯುದ್ಧಕ್ಕೆ ಭೀಮ ಮನಸ್ಸು ಮಾಡಿರಲಿಲ್ಲವಾದರೂ ದ್ರೌಪದಿಯ ಅಭೀಷ್ಟವನ್ನು ಸಲ್ಲಿಸುವ ಪಣತೊಡುತ್ತಾನೆ. ಅದಕ್ಕೆ ಯುದ್ಧವಲ್ಲದೆ ಅನ್ಯಮಾರ್ಗವಿಲ್ಲ.
ದ್ರೌಪದಿಯ ವಿದ್ಯುದಂಕುಶದ ಮಹಾಶಕ್ತಿಯ ಆಘಾತಕ್ಕೆ, ಮಣಿವ, ಕುಣಿವ ಮತ್ತೇಭವಾಗುತ್ತಾನೆ ಈ ಮಹಾಕಾಯನಾದ ಭೀಮ. ಯುದಿಷ್ಠರನ ಸಾತ್ವಿಕ ಶಕ್ತಿ, ಅಗ್ನಿಕನ್ಯೆಯ ಬೆಂಕಿ ಉರಿಯಂಥ ಕ್ಷಾತ್ರ ಶಕ್ತಿಗಳಿಗೆ ಭೀಮನ ದೈತ್ಯಕಾಯ, ಸಂವೇದನಾಶೀಲ ಸೂಕ್ಷ್ಮ ಮನಸ್ಸುಗಳು ಆಡುಂಬೋಲವಾಗುತ್ತವೆ. ದ್ರೌಪದಿ ಈ ಮಹಾಸಲಗನನ್ನು ತನ್ನ ಚೇತೋಹಾರೀ, ಅಸಾಮಾನ್ಯ ರೂಪ, ಗುಣಗಳಿಂದ ಮತ್ತೇರಿಸಬಲ್ಲಳು ಹಾಗೂ ವಿದ್ಯುದಂಕುಶದಿಂದ ಮಣಿಸಲೂ ಬಲ್ಲಳು ಎಂಬುದನ್ನೂ ಕಂಡಾಗ ಬೆರಗು ಮೂಡುತ್ತದೆ.
ದುರ್ಯೋಧನನ ಅರಮನೆಯಿಂದ ಹಿಂದಿರುಗಿ ಬಂದ ಕೃಷ್ಣನಿಂದ, ಸಂಧಿ ಮುರಿದು ಬಿದ್ದುದನ್ನು, ಸಭೆಯಲ್ಲಿ ಕೃಷ್ಣನಿಗಾದ ಅಪಮಾನವನ್ನೂ ತಿಳಿದು ಭೀಮ ಕನಲಿದರೂ, ಕೃಷ್ಣನನ್ನು ಕೊಂಡಾಡುತ್ತಾನೆ. ನಿನ್ನ “ಮಾನಭಂಗವ ಧರಿಸಿಯೆಮ್ಮಭಿಮಾನವನು ನೀನುಳಿಹಿದೈ” (ಉದ್ಯೋಗ ಪರ್ವ 11.09) ಎನ್ನುತ್ತಾನೆ. ಒಮ್ಮೆ ಯುದ್ಧಾರಂಭವಾದ ಮೇಲೆ ಭೀಮಸೇನ ಪ್ರಳಯಾಂತಕನಾಗುತ್ತಾನೆ. ಕುಮಾರವ್ಯಾಸನ ಭೀಮ, ರಣರಂಗದಲ್ಲಿ ವಿಗಡ ವಿಕ್ರಮನಾಗುತ್ತಾನೆ. ಆ ರೌದ್ರ, ಆ ಶಕ್ತಿ, ಆ ಭೀಕರತ್ವ ಭೀಮನಿಗಲ್ಲದೆ ಮತ್ತಾರಿಗೂ ಸಾಧ್ಯವಿಲ್ಲ. “ನೆಲನ ಲೋಭಿಯ ಬುದ್ಧಿ ಮರಣಕೆ ಫಲಿಸಬೇಹುದು ಕರೆ ಸುಯೋಧನನ ನಿಲಲಿ ಬವರಕ್ಕೆನುತ ಗದೆಯನು ತೂಗುವ” (ಭೀಷ್ಮಪರ್ವ 5.06) ಭೀಮ ‘ಸೇನಾಂಬುಜಕೆ ಕುಂಜರ’ (ಭೀಷ್ಮಪರ್ವ 5.07) ನಾಗುತ್ತಾನೆ, “ವಿಲಯ ಕೃತಾಂತನೋ – ಕೊಲೆಗಡಿಗನೊ, ಭೀಮನೋ, ರಿಪುಬಲಜಲಧಿಬಡಬಾನಲನೋ” (ಭೀಷ್ಮ ಪರ್ವ 5.10) ಎನ್ನುತ್ತಾ ಕೌರವನ ಸೇನೆ ಕೌರವನ ಪಕ್ಕಕ್ಕೆ ಓಡುತ್ತದಂತೆ! ಕುರುಕ್ಷೇತ್ರದ ಮಹಾಯುದ್ಧ ನೋಡಲು ಆಗಸದಲ್ಲಿ ಸೇರಿದ್ದ ಅಮರಗಣ ಭೀಮನೆತ್ತ ಕುರುಪಾಲನೆತ್ತ ಎಂದು ನಗುತ್ತದೆ. ಕಡೆಗೆ ಭೀಷ್ಮ ಪಿತಾಮಹನೇ ಅವನನ್ನು ಎದುರಿಸಬೇಕಾಗುತ್ತದೆ. ಭೀಷ್ಮನ ಶಸ್ತ್ರ ಸನ್ಯಾಸದ ನಂತರ ದ್ರೋಣರ ಸೇನಾಧಿ ಪತ್ಯದಲ್ಲಿ ಯುಧಿಷ್ಠಿರನನ್ನು ಹಿಡಿಯಿರಿ ಎನುತ ಶತ್ರುನಾಯಕರು ಮುಂದೆ ಬಂದಾಗ ಭೀಮ ಅಣ್ಣನ ರಕ್ಷಣೆಗೆ “ಫಡಫಡಾರೋ ಧರ್ಮಪುತ್ರನ ಹಿಡಿವವರು ಬಾಯ್ಪಡಿಕರೈ ಕಾಳ್ಗೆಡೆದಡೇನಹುದೆನುತ” (ದ್ರೋಣ ಪರ್ವ 2.67) ಪರ್ವತದಂತೆ ಮುನ್ನುಗ್ಗುತ್ತಾನೆ. ಭಟರು ಅವನನ್ನು ಮುತ್ತಿಕೊಂಡು ಸರಳುಗಳನ್ನು ‘ಮೆತ್ತಿದಾಗ’ “ಕತ್ತಲೆಯ ಹೇರಾಸಿ ಸೂರ್ಯನನೊತ್ತಿ ತಹ ದಿನವಾಯ್ತಲಾ ಎನುತತ್ತಲಿತ್ತಲು ಮುರಿದು ತಳಪಟ ಮಾಡಿದನು ಭೀಮ” (ದ್ರೋಣ ಪರ್ವ 2.69) ಒಮ್ಮೆ, ಕೃಷ್ಣಾರ್ಜುನರು ಸಂಸಪ್ತಕರನ್ನು ಎದುರಿಸಲು ಹೋದಾಗ ಕುರುಬಲವನ್ನು ಏಕಾಂಗಿಯಾಗಿ ಎದುರಿಸುತ್ತಾನೆ ಭೀಮ.
ಈ ಎಲ್ಲ ಕಾಳಗಗಳೂ ಒಂದು ಪರಿಯಾದರೆ ಭೀಮ ದುಶ್ಯಾಸನನೊಡನೆ ಕಾಳಗವಾಡುವ ಪರಿ, ನಂತರ ಅವನು ನಡೆದುಕೊಳ್ಳುವ ರೀತಿಯೇ ಬೇರೆ. ಭೀಮನ ಎಲ್ಲ ಕಾಳಗಗಳ ವೈಖರಿಯನ್ನು ಕುಮಾರವ್ಯಾಸ ಬಲು ವಿಸ್ತಾರವಾಗಿ, ಆಸಕ್ತಿ ಕೆರಳುವಂತೆ ವರ್ಣಿಸುತ್ತಾನೆ. ಅರಿಭಯಂಕರ ಭೀಮ ಶತ್ರು ಸೈನ್ಯವನ್ನು ನುಗ್ಗು ಮಾಡುತ್ತಿರುವಾಗ ಹೀಗಿದ್ದನಂತೆ. “ಮೊಗದ ಹೊಗರಿನ, ಕೆಂಪನುಗುಳ್ವಾಲಿಗಳ ದಂತದಲೌಕಿದಧರದ ಬಿಗಿದ ಹುಬ್ಬಿನ ಭೀಮ ಹೊಕ್ಕನು ಗದೆಯ ತಿರುಗಿಸುತ” (ದ್ರೋಣ ಪರ್ವ 2.72). ಅವನ ಯುದ್ಧದ ರೀತಿ ಹೇಗೆ? ಗದೆಯಲಪ್ಪಳಿಸಿದನು, ಕೋದಂಡದಲಿ ಕಾದಿದ, ಮುದ್ಗರದೊಲರಿಸಿದನು, ಲೌಡಿಯಲರೆದನುರೆ ತರಿದನು, ಕೃಪಾಣದಲಿ, ಕೆಲವರನ್ನು ಒದೆದು, ಕೆಲವರನ್ನು ಮುಷ್ಠಿಯಲ್ಲಿ ಮೋದಿ, ಕೆಲವರನ್ನು ನಿಖಿಲ ಶಸ್ತ್ರಾದಿಗಳಿಂದ ಧ್ವಂಸ ಮಾಡುತ್ತಾನೆ. ಭಗದತ್ತನ ಸುಪ್ರತೀಕ ಗಜಕ್ಕೂ ಭೀಮನಿಗೂ ನಡುವೆ ನಡೆವ ಘನಘೋರ ಯುದ್ಧವಂತೂ ಮೈನವಿರೇಳಿಸುತ್ತದೆ. ರಣರಂಗದಲ್ಲಿ ಕರ್ಣನನ್ನು ತಾನು ಕೊಲ್ಲಬಹುದಾಗಿತ್ತಾದರೂ ಅವನು ‘ಪಾರ್ಥಂಗೆ ಕಳದ ಮೀಸಲು’ ಎಂದು ಬಿಡುತ್ತಾನೆ. ಹೀಗೆ ಪ್ರಳಯದ ಭವನ ರೌದ್ರದ ವೋಲು ಭುಲ್ಲಯಿಸಿರುವ ಕಲಿಭೀಮ ದುಶ್ಯಾಸನನ್ನು ವಧಿಸಿದ ನಂತರ ಅತ್ಯಂತ ಭೀಕರನಾಗುತ್ತಾನೆ. ಈ ಸಂದರ್ಭದಲ್ಲಿನ ಭೀಮನ ರೌದ್ರ, ಅಟ್ಟಹಾಸಗಳ ವರ್ಣನೆ, ಭೀಮ ದ್ರೌಪದಿಯರು ತಮ್ಮ ಪ್ರತಿಜ್ಞೆಗಳನ್ನು ಪೂರೈಸಿಕೊಳ್ಳುವ ದೃಶ್ಯಗಳು ಗ್ರೀಕ್ ರುದ್ರ ನಾಟಕಗಳಲ್ಲಿ ಕಂಡು ಬರುವ ರುದ್ರ ದೃಶ್ಯಗಳಿಗಿಂತಲೂ, ರುದ್ರವಾಗಿವೆ. ಈ ದೃಶ್ಯಗಳು, ಈ ನಡೆವಳಿಕೆಗಳು, ಮನುಷ್ಯನ ಮನಸ್ಸಿನಾಳದಲ್ಲಿ ಮನೆಮಾಡಿಕೊಂಡಿರುವ ಮೂಲಭೂತ ಪ್ರವೃತ್ತಿಗಳು, ಸಮಯ ಕಾದು, ಹೇಗೆ ಮೇಲಕ್ಕೆ ಉಕ್ಕಿ ಬರುತ್ತವೆಂಬುದಕ್ಕೊಂದು ಉದಾಹರಣೆಯಾಗುತ್ತವೆ. ಭೀಮನ ನಡೆವಳಿಕೆ ಹುದುಗಿರುವ ಹಗೆತನದ ಪರಿಮಾಣಕ್ಕೆ ರೂಪಕವಾಗುತ್ತದೆ.
This is the tenth part of the eighteen-part article on kumaravyasa-bharata by Prof. L.V. Shantakumari. Thanks to Smt. Kanchana and Shri. Ganesh Bhat Koppalatota for reviewing. Edited by G S Raghavendra.