ಯುದ್ಧಾರಂಭವಾದ ಮೇಲೆ, ತನ್ನ ಹನ್ನೊಂದು ಅಕ್ಷೋಹಿಣಿ ಸೈನ್ಯ, ಭೀಷ್ಮ, ದ್ರೋಣ, ಕರ್ಣ ಮಹಾವೀರರ ನೆರವಿನಿಂದ ಜಯದ ಭರವಸೆ ಹೊತ್ತಿದ್ದ ದುರ್ಯೋಧನ, ತನ್ನ ತಮ್ಮಂದಿರನ್ನೂ, ಮಕ್ಕಳನ್ನೂ, ಮಿತ್ರರನ್ನು ಕಳೆದುಕೊಂಡ ಮೇಲೆ ಛಲವನ್ನು ಬಿಡುವುದಾಗಲೀ, ಈ ಭೂಮಿಯ ಮೇಲೆ ಬದುಕುವುದಾಗಲೀ ಅರ್ಥಹೀನವೆನಿಸುತ್ತದೆ ಅವನಿಗೆ. ಹಾಗಾಗಿ ಕಡೆತನಕ ಹಗೆತನದ ಕವಚ ತೊಟ್ಟೇ ಬದುಕಿ ವೈಶಂಪಾಯನ ಕೊಳದ ಬಳಿ ಭೀಮನಿಂದ ಹತನಾಗುವ ದುರಂತನಾಯಕನಾಗುತ್ತಾನೆ.
ರಣಮುಖದೊಳೀ ಕ್ಷತ್ರಧರ್ಮದ
ಕುಣಿಕೆ ತಪ್ಪದೆ ವೇದಶಾಸ್ತ್ರದ
ಭಣಿತೆ ನೋಯದೆ ವೀರ ವೃತ್ತಿಯ ಪದದ ಪಾಡರಿದು |
ಸೆಣಸು ಸೋಂಕಿದ ಛಲದ ವಾಸಿಯೊ-
ಳಣುವ ಹಿಂಗದೆ ಜೀವದಾಸೆಗೆ
ಮಣಿಯದಳಿದುದನೆಲ್ಲ ಬಲ್ಲರು ಕೃಷ್ಣ ಕೇಳೆಂದ || (ಗದಾಪರ್ವ 08.41)
ಎಂದು ಕೃಷ್ಣನಿಗೆ ಹೇಳುವ ದುರ್ಯೋಧನನ ಮೇಲೆ, ಕುಮಾರವ್ಯಾಸ “ಹೂವಿನ ಮಳೆಗಳನಾತನ ನೆತ್ತಿಯಲಿ” (ಗದಾಪರ್ವ 08.42) ಸುರುಸುತ್ತಾನೆ. ಅದೂ, ಭೀಮನಿಂದ, ಗದಾಯುದ್ಧದ ನಿಯಮಕ್ಕೆ ವ್ಯತಿರಿಕ್ತವಾಗಿ, ಸೊಂಟದಿಂದ ಕೆಳಕ್ಕೆ ಹೊಡೆತ ತಿಂದು, ಮರಣಾಸನ್ನನಾಗಿರುವಾಗ ಹೇಳುವ ಮಾತುಗಳಿವು. “ಕುಬುದ್ಧಿ ವ್ಯಾಪಕನು, ನೀ ವೈರಿಯಲ್ಲದೆ ಭೀಮನಲ್ಲ” (ಗದಾಪರ್ವ 08.38) ವೆಂದು ಕೃಷ್ಣನಿಗೆ ಎದುರಿಗೇ ಹೇಳುವಂತ ಎದೆಗಾರಿಕೆ ದುರ್ಯೋಧನನದು. “ವೀರ ವಂಶದ ರಾಯರೆಮ್ಮೊಳು | ವೈರ ಬಂಧವ ಬಿತ್ತಿ ಕೊಂದವ ಕೃಷ್ಣ” (ಗದಾಪರ್ವ 08.40) ನೀನೆನ್ನುತ್ತಾನೆ, ಕೃಷ್ಣ ಧಾರುಣಿಯ ಭಾರವ ಬಿಡಿಸಲೋಸುಗ ರಣವ ಹೊತ್ತಸಿ ಕೌರವ ಪಾಂಡವರನ್ನು ಬೇಟೆಯಾಡಿದವನು (ಗದಾಪರ್ವ 08.39) ಎಂದೂ ಆಪಾದಿಸುತ್ತಾನೆ. ಕಡೆತನಕವೂ ಕಂಡು ಬರುವ ಅಸೀಮ ಛಲ ಹಾಗೂ ಕೃಷ್ಣ ಪ್ರಜ್ಞೆಯ ಅರಿವುಗಳ ಮಿಶ್ರಣದಿಂದಾಗಿ ದುರ್ಯೋಧನನ ಪಾತ್ರ ವಿಶಿಷ್ಟ ದುರಂತ ಪಾತ್ರವಾಗುತ್ತದೆ.
ಕುಮಾರವ್ಯಾಸನ ಭೀಮ
ಹುಡುಗುತನದ ಚೇಷ್ಟೆ, ಅರಗಿನರಮನೆ, ಹಿಡಂಬೆಯ ವಿವಾಹ, ಬಕವಧೆ, ದ್ರೌಪದೀ ಸ್ವಯಂವರ, ಸಭಾಪರ್ವದ ಘಟನೆಗಳು, ಸೌಗಂಧಿಕಾ ಪುಷ್ಪ ಪ್ರಕರಣ, ಯುದ್ಧದಲ್ಲಿನ ಅತಿಮಾನುಷ ಪರಾಕ್ರಮ, ಪ್ರತಿಜ್ಞಾಪೂರೈಕೆ, ಇಂತಹ ಘಟನೆಗಳ ಮೂಲಕ ಕುಮಾರವ್ಯಾಸನ ಭೀಮನ ಪಾತ್ರ ಅರಳುತ್ತದೆ. ಕ್ಲಿಷ್ಟ ಸಂದರ್ಭಗಳಲ್ಲಿ, ಸಂದಿಗ್ಧ ಸನ್ನಿವೇಶಗಳಲ್ಲಿ ಭೀಮ ಏಕಾಂಗಿಯಾಗಿ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇರುವವನು. ಎಲ್ಲ ಸಂಧರ್ಭಗಳಲ್ಲಿಯೂ ಸ್ವತಂತ್ರವಾಗಿ ಪ್ರತಿಕ್ರಿಯಿಸುವ, ಕಾರ್ಯನಿರ್ವಹಿಸುವ ಆತ್ಮವಿಶ್ವಾಸವುಳ್ಳವನು. ಅವನ ತೀರ್ಮಾನಗಳು, ಮಹಾಭಾರತದ ಸೂತ್ರಧಾರಿ ಎನಿಸಿರುವ ಕೃಷ್ಣನಿಂದಾಗಲೀ, ಧರ್ಮದ ಮೋಡಿಗೊಳಗಾದವನಂತಿರುವ ಅಣ್ಣ ಧರ್ಮರಾಯನಿಂದಾಗಲೀ ಪ್ರಭಾವಿತವಾಗಿರುವುದಿಲ್ಲ. ಅತ್ಯಂತ ಒರಟನಂತೆ ತೋರುವ, ಹತ್ತು ಸಾವಿರ ಆನೆಗಳ ಬಲದ ಆ ಭೀಮಕಾಯದಲ್ಲಿ ಅಡಗಿರುವ ಸೌಕುಮಾರ್ಯ, ಮೃದುತ್ವ, ಪ್ರೀತಿ, ವಾತ್ಸಲ್ಯಗಳು ಅಚ್ಚರಿ ಹುಟ್ಟಿಸುತ್ತವೆ. ಅರ್ಜುನ ತನ್ನ ಪೌರುಷದ ಬಗೆಗೆ ಸ್ವಲ್ಪವಾದರೂ ಬಡಾಯಿ ಕೊಚ್ಚಿಕೊಳ್ಳವುದನ್ನು ಕಾಣುತ್ತೇವೆ. ಆದರೆ ಭೀಮನಿಗೆ ತನ್ನ ಬಲದ ಬಗೆಗೆ ಅಹಂಕಾರವಿಲ್ಲ, ಆದರೆ ತನ್ನ ಬಲದ ಬಗೆಗೆ ನಂಬಿಕೆ ಹೆಮ್ಮೆಗಳಿವೆ. ಅಲ್ಲದೆ ಭೀಮ ಅರ್ಜುನನಂತೆ ಬಹುಪತ್ನೀ ವಲ್ಲಭನಲ್ಲ. ಹಿಡಂಬಿ, ದ್ರೌಪದಿಯನ್ನು ಬಿಟ್ಟರೆ, ಅವನಿಗೆ ಬೇರೆ ಹೆಣ್ಣುಗಳ ಸಹವಾಸವಿರುವುದನ್ನು ಕುಮಾರವ್ಯಾಸ ಚಿತ್ರಿಸಿಲ್ಲ. ಹುಟ್ಟಿನಿಂದಲೇ ಭೀಮ ಅಸೀಮ ಬಲಶಾಲಿ. ಗ್ರೀಕ್ ಪುರಾಣದಲ್ಲಿನ ಹರ್ಕ್ಯುಲಸ್ ನಂತೆ. ತಾಯಿಯ ತೊಡೆಯಿಂದ ‘ಶಿಶು ಭೀಮ' ಕೆಳಗುರುಳಿದಾಗ ಬಂಡೆಯೇ ಪುಡಿಯಾಯಿತೆಂದು ವರ್ಣಿಸುತ್ತಾನೆ ಕುಮಾರವ್ಯಾಸ. ಹೀಗೇ ಕಾಡಿನಲ್ಲಿ ತಪೋವನದಲ್ಲಿ ವಾಸಿಸುತ್ತಾ, ತನ್ನ ಸೋದರರೊಡನೆ ಕಾಡುಮೃಗಗಳು, ಬಂಡೆ ನದಿಗಳು ಮರಗಿಡಗಳ ನಡುವೆ ಬೆಳೆದು ಬಲವರ್ಧಿಸಿಕೊಂಡ ಭೀಮನ ಶೈಶವದ ಬಗೆಗೆ ಕುಮಾರವ್ಯಾಸನಲ್ಲಿ ಯಾವ ವಿವರಗಳೂ ಸಿಗುವುದಿಲ್ಲ. ಧರ್ಮರಾಜ, ಭೀಮ, ಅರ್ಜುನ, ನಕುಲ ಸಹದೇವರನ್ನು ನಾವು ಮತ್ತೆ ಕಾಣುವುದು ಹದಿನಾರು ವರ್ಷಗಳ ನಂತರ, ಪಾಂಡುವಿನ ಮರಣವಾದ ಸಮಯದಲ್ಲಿ ಮತ್ತು ನಂತರ ಕುಂತಿಯೊಡನೆ ಈ ಹದಿಹರೆಯದವರನ್ನು ಮುನಿಗಳು ಹಸ್ತಿನಾಪುರಕ್ಕೆ ಕರೆದು ತಂದಾಗ. ಈ ಹದಿನಾರು ವರ್ಷಗಳು ಮುನಿಗಳ, ಮುನಿ ಕುಮಾರರೊಡನೆ ಕಾಡಿನಲ್ಲಿ ವನಸಿರಿಯ ನಡುವೆ ಬೆಳೆದುದರಿಂದ ಭೀಮನಲ್ಲಿ ಅಮಿತ ಪರಾಕ್ರಮದ ಜೊತೆಯಲ್ಲಿಯೇ ರೌದ್ರ, ಕೋಮಲತೆ, ಮಾರ್ದವಗಳು ಮೂಡಿರಬಹುದೆನಿಸುತ್ತದೆ. ಕಾಡಿನಲ್ಲಿ ಭೀಮಾದಿಗಳು ಬಾಲ್ಯದ ಘಟನೆಗಳನ್ನೊಂದಿಷ್ಟು ವರ್ಣಿಸಿದ್ದಿದ್ದರೆ ಎನಿಸುತ್ತದೆ. ಭೀಮನನ್ನು ನೆನೆಸಿಕೊಂಡರೆ ಈ ರೀತಿಯ ಆಲೋಚನೆ ಮೂಡುತ್ತದೆ.
ಹತ್ತು ಸಾವಿರದಾನೆಗಳ ಬಲ
ಮತ್ತೆ ಮನಸದು ಮಲ್ಲಿಗೆಯ ಸುಮ
ಪೊತ್ತು ಶ್ರೀಕೃಷ್ಣಾಂತರಂಗದ ಭಕ್ತ ಖತಿಗೊಂಡು
ಚಿತ್ತದಲಿಯಗ್ರಜನೆ ಸತಿಯನು
ನೆತ್ತದಲಿ ಪಣವಿಟ್ಟು ಸೋತವ
ನತ್ತು ನತಮುಖನಾಗಲುಗ್ರನು ವಾಯುಸುತನಾದ (ಎಲ್.ವಿ.ಶಾಂ.)
ಹಸ್ತಿನಾಪುರಕ್ಕೆ ಬಂದ ಮೇಲೆ ನೂರುಜನ ಕೌರವರು, ಐದುಜನ ಪಾಂಡವರೂ ಎಂದೂ ಒಂದಾಗಲೇ ಇಲ್ಲ. ಭೀಮಸೇನನೇ ಒಂದು ನೂರುಜನ ಕೌರವರೇ ಒಂದು. ಭೀಮನಿಗೂ ದುರ್ಯೋಧನನಿಗೂ ಸ್ಪರ್ಧೆ, ವೈರ ದಿನದಿನಕ್ಕೆ ಹೆಚ್ಚುತ್ತದೆ. ಕೌರವರ ಕುತಂತ್ರಗಳು ಪ್ರಾಣ ಘಾತಕವಾಗುವಂತಹುದಾದರೂ, ಭೀಮ ಎಲ್ಲವನ್ನೂ ಸಹಿಸುತ್ತಾನೆ. ನೂರುಜನ ಕೌರವರನ್ನೂ ಸದೆಯುತ್ತಾನೆ ಈ ಭೀಮ. ಇಷ್ಟಾದರೂ ಭೀಮ ನಿಷ್ಕಪಟಿ, ಕೌರವರನ್ನು ಅನುಮಾನದ ದೃಷ್ಟಿಯಿಂದ ನೋಡುವುದಿಲ್ಲ. ಅವರು ಕೊಟ್ಟ ಹಾಲಾಹಲ ವಿಷಪೂರಿತ ಕಜ್ಜಾಯಗಳನ್ನು ನಿರ್ಮಲ ಮನಸ್ಸಿನಿಂದ ತಿನ್ನುತ್ತಾನೆ. ತಿಂದು ಅವರ ಕೃತ್ರಿಮದ ಕೃತ್ಯ ಅರಿತು ಅವರನ್ನು ಸದೆಯುತ್ತಾನೆ. ಕೌರವರು ತನಗೆ ಮಾಡಿದ ಕೇಡೆಲ್ಲವನ್ನೂ ಹೇಳಿ “ನೂರ್ವರ ಕಡಿದು ಶಾಕಿನಿಯರಿಗೆ ರಕುತವ ಕುಡಿಸಿದಲ್ಲದೆ ಮುನ್ನ ಸಾವೆನೆ ಕೇಳಿ ನೀವೆ”ನ್ನುತ್ತಾನೆ ಭೀಮ. ಹದಿಹರೆಯದವರ ಆಟಪಾಠಗಳಲ್ಲಿರಬೇಕಾದ ಸ್ನೇಹ, ವಿನೋದಗಳು ‘ವೈರಶಿಖಿ’ ಯಾಗಿ ಬೆಳೆಯುತ್ತವೆ. ಶಸ್ತ್ರ ವಿದ್ಯಾ ಪ್ರದರ್ಶನದಲ್ಲಿಯೂ ಭೀಮ ದುರ್ಯೋಧನರು ವೈರಿಗಳಂತೆಯೇ ಹೋರಾಡುತ್ತಾರೆ. ಈ ಪ್ರದರ್ಶನದ ನಂತರ ದುರ್ಯೋಧನನು ಶಕುನಿಯ ಸಲಹೆಯ ಮೇರೆಗೆ ಅರಗಿನರಮನೆಯ ಯೋಜನೆ ಸಿದ್ಧಪಡಿಸಿ ಪಾಂಡವರ ವಿನಾಶಮಾಡಲು ಯತ್ನಿಸುವಾಗ ಕಥನಕ್ರಿಯೆಯಲ್ಲಿ ಅರಗಿನರಮನೆಯಂತಹ ರೋಚಕ ಅಂಶ ಸೇರಿಕೊಳ್ಳುತ್ತದೆ ಹಾಗೂ ಭೀಮನ ನಿಜದ ವ್ಯಕ್ತಿತ್ವದ ಪರಿಚಯವಾಗುತ್ತದೆ.
ಕುಮಾರವ್ಯಾಸನ ಲೆಕ್ಕದ ಪ್ರಕಾರ ಧರ್ಮರಾಜಾದಿಗಳು ಹಸ್ತಿನಾಪುರವನ್ನು ಬಿಟ್ಟು ಅರಗಿನರಮನೆಗೆ ಹೊರಡುವಾಗ ಧರ್ಮರಾಜನಿಗೆ ಇಪ್ಪತ್ತೊಂಬತ್ತು, ಭೀಮನಿಗೆ ಇಪ್ಪತ್ತೆಂಟು. ಕೌರವರೊಡನೆಯೇ ಇದ್ದು ಹದಿಮೂರು ವರ್ಷ ಜೊತೆಯಲ್ಲಿ ವಿದ್ಯೆ ಕಲಿತರು ಪರಸ್ಪರ ಸ್ನೇಹ ಮೊಳೆಯದೇ ಪಾಂಡವರೆಲ್ಲರನ್ನೂ ಅರಗಿನರಮನೆಯಲ್ಲಿ ಸುಡುವ ದುರ್ಯೋಧನ ಯೋಜನೆಗೆ ಪ್ರತಿಯೋಜನೆಯಾಗಿ ಪಾಂಡವರು ಅರಗಿನರಮನೆಯಿಂದ, ಸುರಂಗಮಾರ್ಗವಾಗಿ ತಪ್ಪಿಸಿಕೊಳ್ಳುವ ಪ್ರತಿಯೋಜನೆ ಮಾಡುತ್ತಾರೆ. ಪುರೋಚನ ಮತ್ತು ಒಬ್ಬ ಬೇಡತಿ ಐವರು ಮಕ್ಕಳು ಇವರೆಲ್ಲ ನಿದ್ರಿಸುತ್ತಿರುವಾಗ ಭೀಮ ಅರಮನೆಗೆ ತಾನೇ ಬೆಂಕಿ ಹಚ್ಚಿಬಿಡುವ ನಿರ್ಧಾರ ತೆಗೆದುಕೊಳ್ಳುತ್ತಾನೆ. ಇದು ಅವನ ಸ್ವಂತ ನಿರ್ಧಾರದಿಂದ ಮಾಡುವ ಕಾರ್ಯ. ನಂತರ ಈ ಐದೂ ಜನರನ್ನು ಹೊತ್ತುಕೊಂಡು ಕಾಡಿನಲ್ಲಿ ನಡೆಯುವಾಗ, ತನ್ನ ನಿರ್ಧಾರದ ಪರಿಣಾಮವನ್ನೂ ಹೊಣೆಯನ್ನೂ ಹಿಂಜರಿಯದೆಯೇ ನಿರ್ವಹಿಸುತ್ತಾನೆ. ಈ ಪ್ರಸಂಗ ಕುಮಾರವ್ಯಾಸನಲ್ಲಿ ಹೃದಯಸ್ಪರ್ಶಿಯಾಗಿ ಚಿತ್ರಿಸಲ್ಪಟ್ಟಿದೆ.
ಉರಿವ ಅರಮನೆಯಿಂದ ಆಚೆಬಂದು, ಸುರಂಗವನ್ನು ದಾಟಿ, ಕತ್ತಲೆಯಲ್ಲಿ ಕಲ್ಲು ಮುಳ್ಳುಗಳ ನಡುವೆ ನಡೆದು ಗಂಗೆಯನ್ನು ದಾಟುತ್ತಾರೆ. ಧರ್ಮರಾಯನ ಮತ್ತು ಪಾರ್ಥನ ಕಾಲುಗಳು ಒಡೆದು ಬಸಿವರುಣಜಲದಲಿ ಬಟ್ಟೆ ಕೆಸರಾಯ್ತಂತೆ”, ನಕುಲ, ಸಹದೇವ-ಕುಂತಿಯರು, ಕುರುಭೂಪಾಲ ಬೇಗ ನಮ್ಮನ್ನು ಹಿಡಿದು ಕೊಲ್ಲಲಿ (ಆದಿಪರ್ವ 09.01) ಎಂದು ಕಾಡಿನಲ್ಲಿಯೇ ಕುಳಿತುಬಿಡುತ್ತಾರೆ.
ಉರಿವ ಮನೆಯಲಿ ಸಾಯಲೀಯದೆ
ಸೆರಗಹಿಡಿದೆಳತಂದು ಕೊಯ್ದನು
ಕೊರಳನಕಟಾ ಭೀಮನೇ ಹಗೆಯೆಂದಳಾ ಕುಂತಿ | (ಆದಿಪರ್ವ 09.02)
ನಾನಿರುವಾಗ ನೀವೇಕೆ ಹೀಗಾಡುವಿರಿ ಎನುತ ಕಲಿಭೀಮ
ಸಾಕು ಸಾಕಾನಿರಲು ಹೆಕ್ಕಳ-
ವೇಕೆ ಹೋ ಹೋಯೆನುತ ಹೊತ್ತನು
ನೂಕಿ ಹೆಗಲೆರಡರಲಿ ಕುಂತಿಯ ಧರ್ಮನಂದನನ |
ಆ ಕಿರೀಟಿಯನೆಡದಲಾ ಮಾ-
ದ್ರೀ ಕುಮಾರರ ಬಲದ ಬಿದಿಯೊಳ-
ಗೌಕಿ ನಡೆದನು ಭೀಮನೊಡೆ ಹಾಯ್ದೊದೆದು ಕಲು ಮರನ || (ಆದಿಪರ್ವ 09.03)
ಕುಮಾರವ್ಯಾಸ ಭೀಮನ ಸ್ವರೂಪವನ್ನು ಅವನ ಆಕೃತಿಯನ್ನು ಇಷ್ಟೆತ್ತರ, ಇಷ್ಟು ಗಾತ್ರ ಎಂದೆಲ್ಲ ವಿವರಿಸುವುದಿಲ್ಲ. ಅವುಗಳನ್ನು ನಮ್ಮ ಕಲ್ಪನೆಗೇ ಬಿಡುತ್ತಾನೆ. ಐದು ಜನ ಸುಪುಷ್ಠಕಾಯದ ವ್ಯಕ್ತಿಗಳನ್ನು ಹೊತ್ತುಕೊಂಡು ನಿರಾಯಾಸವಾಗಿ ಅಡವಿಯಲ್ಲಿ ಹಗಲು ರಾತ್ರಿ ನಡೆಯಬೇಕಾದರೆ ಭೀಮನ ದೇಹದಾರ್ಢ್ಯ ಧೀಶಕ್ತಿಗಳು ಹೇಗಿದ್ದಿರಬಹುದೆಂದು ಊಹಿಸುವುದೂ ಕಷ್ಟವಾಗುತ್ತದೆ. ಅವನ ಪಾದಗಳಿಗೆ ಕಲ್ಲು ಮುಳ್ಳುಗಳೊತ್ತಿ ರಕ್ತಸುರಿಯಲಿಲ್ಲವೇ? ಈ ಸನ್ನಿವೇಶದಲ್ಲಿ ಕಂಡುಬಂದಿರುವ ಭೀಮನ ದೈಹಿಕ ಪೌರುಷ, ಮಾನಸಿಕ ಕೋಮಲತೆಗಳ ಸಂಯೋಜನೆ ಆಶ್ಚರ್ಯವುಂಟು ಮಾಡುತ್ತದೆ. “ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ” ಎಂದು ಇಂತಹವರಿಗೇ ಹೇಳುತ್ತಾರೆನಿಸುತ್ತದೆ. ಕುಮಾರವ್ಯಾಸನ ಭೀಮ, ಕಾಡಿನಲ್ಲಿ ತನ್ನ ತಾಯಿ ಮತ್ತು ಸೋದರರನ್ನು ರಕ್ಷಿಸುವ, ಉಪಚರಿಸುವ, ಅವರ ಬಗೆಗೆ ತೋರುವ ಪ್ರೀತಿ, ವಾತ್ಸಲ್ಯಗಳು ನಮ್ಮನ್ನು ಮೂಕರನ್ನಾಗಿ ಮಾಡುತ್ತವೆ, ಹಾಗೂ ಕಣ್ತುಂಬಿಸುತ್ತವೆ. ತನ್ನವರನ್ನು ಹೀಗೆ ದಣಿದ ಸ್ಥಿತಿಯಲ್ಲಿ ನೋಡಿ ಭೀಮ ಅಳುತ್ತಾನೆ.
ತಳಿರ ತರಿದೊಟ್ಟಿದನು ತರುವಿನ
ನೆಳಲೊಳಗೆ ವಿಶ್ರಮಿಸಿದರು ತನು
ಬಳಲಿಕೆಯ ಭಾರಣೆಯ ಕಡು ಜೋಡಿಸಿದ ಝೋಂಪಿನಲಿ |
ಝಳಕೆ ಕಂದಿದ ಮೈಯ ಬಾಡಿದ
ಲಲಿತವದನದ ಮಾಸಿ ಕೆದರಿದ
ತಲೆಯೊಳಿರೆ ತನ್ನೈವರನು ಕಂಡಳಲಿದನು ಭೀಮ || (ಆದಿಪರ್ವ 09.05)
ಎಷ್ಟೋ ದೂರ ಈ ಐವರನ್ನೂ ಹೊತ್ತುಕೊಂಡು
ಬಂದನೀ ಪರಿ ಹಲವು ಯೋಜನ
ದಿಂದ ಹೇರಡವಿಯಲಿ ಬಳಲಿದೆ
ನೆಂದನೇ ನೀರಡಿಸಿದನೆ ಮೇಣ್ ನಿದ್ರೆಗೆಳಸಿದನೆ |
ತಂದು ಕಾನನ ಮಧ್ಯದಲಿ ತರು
ವೃಂದದಡಿಯೊಳಗಿಳುಹಿ ಬಳಿಕರ
ವಿಂದದೆಲೆಯಲಿ ನೀರ ತಂದೆರೆದನು ಮಹೀಶರಿಗೆ || (ಆದಿಪರ್ವ 09.04)
ವಾಯುಸುತನಿಗೆ ಬರಿ ವಾಯುವಿನ ಆಹಾರವೇ ಸಾಕೇ? ಭೀಮನ ಈ ಶಕ್ತಿಯ, ಧಾರಣಾಸಾಮರ್ಥ್ಯದ ರಹಸ್ಯವಾದರೂ ಯಾವುದು? ಇಂತಹ ಅಪ್ರತಿಮ ಬಲಶಾಲಿ, ಒರಟು ಭೀಮನ ಅಂತರಂಗದಲ್ಲಿ, ತನ್ನ ತಾಯಿ ಕುಂತಿಯನ್ನು ಈ ದಯನೀಯ ಪರಿಸ್ಥಿತಿಯಲ್ಲಿ ಕಂಡಾಗ ಅಳಲು ಉಕ್ಕಿ ಉಕ್ಕಿ ಹರಿಯುತ್ತದೆ.
ತಾಯೆ ನೀ ದಿಟ ನಾಗನಗರಿಯ
ರಾಯನರಸಿಯೆ ನಿನ್ನ ಮಕ್ಕಳು
ರಾಯರೆದೆದಲ್ಲಣರೆ ಭಾರಿಯ ಬಾಹು ವಿಕ್ರಮರೆ |
ಈಯವಸ್ಥೆಗೆ ಸೋಮವಂಶದ
ರಾಯತನವೆಂತಹುದು ಹೇಳಾ
ತಾಯೆ ಹೇಳೆನ್ನಾಣೆ ಹೇಳೆಂದಳಲಿದನು ಭೀಮ || (ಆದಿಪರ್ವ 09.06)
ಹೀಗೆ ಅಳಲುವ ಭೀಮ ತನ್ನ ತಾಯಿ ಮತ್ತು ಸೋದರರನ್ನು ಉಪಚರಿಸುವ ರೀತಿ ಹೀಗಿದೆ
ಜನನಿಯಂಘ್ರಿಯನೊತ್ತಿ ಯಮನಂ-
ದನನ ಚರಣವ ಮುರಿದು ಬಳಿಕ-
ರ್ಜುನನ ಯಮಳರ ಪದವನೆಚ್ಚರದಂತೆ ಹಿಡಿಕಿಸುತ |
ಅನಿಬರಿರವನು ನೋಡಿ ಪೂರ್ವವ
ನೆನೆದು ಬಿರಿದಳುತಂತು ಘನಕಾ-
ನನದ ಮಧ್ಯದಲೀತನಿದ್ದನು ಹಿರಿದು ಚಿಂತಿಸುತ || (ಆದಿಪರ್ವ 09.07)
ಬಳಲಿದ ಈ ಐದು ಮಂದಿಯನ್ನು ಉಪಚರಿಸುವಲ್ಲಿ ಆ ಎಲ್ಲರಿಗೂ ತಾಯಿಯಾಗುತ್ತಾನೆ ಭೀಮ. ಕುಂತಿ, ಧರ್ಮಜರು ಹಿರಿಯರು ಅವರ ಪಾದಗಳನ್ನು ಒತ್ತುವುದೇನೋ ಸರಿಯೇ, ಆದರೆ ತನಗಿಂತ ಕಿರಿಯರಾದ ಅರ್ಜುನ, ನಕುಲ ಸಹದೇವರ ಪಾದಗಳನ್ನು ಅವರಿಗೆ ಎಚ್ಚರವಾಗದಂತೆ ಹಗುರವಾಗಿ ಒತ್ತುವುದು ಮಾತೃವಾತ್ಸಲ್ಯ ತುಂಬಿರುವ ಹೃದಯಕ್ಕೆ ಮಾತ್ರ ಸಾಧ್ಯವಾಗುವಂತಹುದು. ತಾಯಿಯಾಗಿ, ದಾದಿಯಾಗಿ, ರಕ್ಷಕದೇವತೆಯಾಗಿ ತನ್ನವರ ಕಾವಲಿಗೆ ನಿಲ್ಲುವ ಭೀಮನ ಚಿತ್ರ ಅವಿಸ್ಮರಣೀಯ. ಅವನಿಗೆ ದಣಿವಾಗಿಲ್ಲವೇ? ನಿದ್ರೆ ಬಾರದೇ?
ಔಕುವುದು ಬಲು ನಿದ್ರೆ ನಿದ್ರೆಯ
ನೂಕುವನು ಕಣ್ಣೆವೆಗಳಲಿ ನಸು-
ತೂಕಡಿಕೆ ತೋರಿದೊಡೆ ಮೈಗೆದರುವನು ಕೈಯೊಡನೆ |
ಸೋಕುವುದು ಮೈಮರವೆ ಮರವೆಯ-
ನೋಕರಿಸುವುದು ಚಿತ್ತವೃತ್ತಿ ನಿ-
ರಾಕುಲಾಂತಃಕರಣನಾದನು ಬಳಿಕ ಕಲಿಭೀಮ || (ಆದಿಪರ್ವ 09.08)
“…ನಿದ್ರಾ-
ವ್ಯಾಳ ವಿಷವನು ಮೊಗೆದು ಸೂಸಿ ವಿ-
ಶಾಲ ಮತಿಯವಧಾನದಲಿ ಕಾದಿರ್ದನೈವರನು || (ಆದಿಪರ್ವ 09.09)
ಮಾನವರಿಗೆ ಅತ್ಯಂತ ಅವಶ್ಯಕವಾದ, ತಡೆಯಲಸಾಧ್ಯವಾದ ನಿದ್ರೆಯನ್ನು ಸಹ ತನ್ನವರನನ್ನು ರಕ್ಷಿಸ ಲೋಸಗು ನಿಯಂತ್ರಣದಲ್ಲಿಟ್ಟುಕೊಂಡು, ಸುಮಕೋಮಲ ಆರ್ದ್ರ ಸ್ವಭಾವವನ್ನಭಿವ್ಯಕ್ತಿಸಿದ ಭೀಮ, ಸೌಮ್ಯಮೂರ್ತಿ ಭೀಮ, ಮರುಕ್ಷಣದಲ್ಲಿಯೇ ಹಿಡಿಂಬಾಸುರನನ್ನು ವಧಿಸುವ ರೌದ್ರಮೂರ್ತಿಯಾಗುತ್ತಾನೆ. ಭೀಮನ ಈ ಎರಡೂ ವಿರುದ್ಧ ಗುಣಗಳನ್ನೂ ಒಂದೇ ಪ್ರಸಂಗದಲ್ಲಿ ಪರಿಚಯಿಸುವ ಕುಮಾರವ್ಯಾಸನ ತಂತ್ರ ವಿನ್ಯಾಸ ಪ್ರಭಾವಶಾಲಿಯಾಗಿದೆ. ಹಿಡಿಂಬೆ ತನ್ನ ಅತಿ ರೌದ್ರ ರೂಪಿನಲ್ಲಿ ಬಂದು ನೋಡಿದ ಭೀಮಸೇನನ ರೂಪವಾದರೂ ಎಂತಹುದು?
“…ಸುಳಿದಲೆಯ ಕೆಮ್ಮೀಸೆಗಳ ಕರ್ಕಶದ |
ಕೆಂದಳದ ಕೇಸರಿಯ ಕಂಗಳ
ಕುಂದರದನಚ್ಛವಿಯಲಿರೆ ಮನ-
ಸಂದಳಾ ಖಳನನುಜೆ, ಸೋತಳು ಭೀಮಸೇನಂಗೆ || (ಆದಿಪರ್ವ 09.12)
ಇಂತಹ ಭೀಮಸೇನನನ್ನು ಕಂಡು ಆಕರ್ಷಿತಳಾದ ಹಿಡಿಂಬಿ, ತನ್ನ ರಾಕ್ಷಸ ರೂಪವನ್ನು ತೊರೆದು ಇವನ ಮುಂದೆ ದಿವ್ಯರೂಪದಲ್ಲಿ ಸುಳಿಯುತ್ತಾಳೆ. ತನಗೆ ವಲ್ಲಭನಾಗೆಂದು ಕೇಳುತ್ತಾಳೆ. ತನ್ನ ತಂಗಿಯನ್ನು ಹುಡಿಕಿಕೊಂಡು ಬಂದ ಹಿಡಿಂಬಾಸುರನೊಡನೆ ಯುದ್ಧ ಮಾಡುವಾಗ ಕೂಡ ಭೀಮನಿಗೆ ತನ್ನ ಹಿತ, ರಕ್ಷಣೆಗಳಿಗಿಂತ ತನ್ನವರದೇ ಚಿಂತೆ. “ಒರಲಬೇಡವೋ ಕುನ್ನಿ, ಮೈಮರೆದೊರಗಿದವರೇಳ್ವರು ಕಣಾ” (ಆದಿಪರ್ವ 09.19) ಎನ್ನುತ್ತಾನೆ. ಹಿಡಿಂಬನನ್ನು ಕೊಲ್ಲುವಾಗ ಆಗುವ ಗದ್ದಲದಲ್ಲಿ ಎಚ್ಚರಗೊಂಡ ಪಾಂಡವರು ತಮ್ಮನ್ನು ಎಬ್ಬಿಸಬಾರದಿತ್ತೇ ಎನ್ನುತ್ತಾರೆ. ಹಿಡಿಂಬೆಯನ್ನು ಲಗ್ನವಾಗಲು ಭೀಮ ಒಪ್ಪುವುದಿಲ್ಲ. “ತಾನು ಖಳನಾರಿಯನು ಕೈಕೊಳ್ಳೆನೆನ್ನುತ್ತಾನೆ” (ಆದಿಪರ್ವ 09.23), ವೇದವ್ಯಾಸ ಮುನಿ ಬಂದು, ತಿಳಿಹೇಳಿ “ಕುಮಾರ ಸಂಭವವವಧಿಯೆಂದಾ ನಾರಿಯನು” (ಆದಿಪರ್ವ 09.23) ಭೀಮಸೇನನಿಗೆ “ಗಂಟಿಕ್ಕುತ್ತಾನೆ”, ಘಟೋತ್ಕಚನ ಜನನವಾಗುತ್ತದೆ.
This is the sixth part of the eighteen-part article on kumaravyasa-bharata by Prof. L.V. Shantakumari. Thanks to Smt. Kanchana and Shri. Ganesh Bhat Koppalatota for reviewing. Edited by G S Raghavendra.