ಇಷ್ಟು ಛಲ ಹಿಡಿದ ದುರ್ಯೋಧನ ಮತ್ತೆ ತನ್ನರಮನೆಗೆ ಮರಳಿದ್ದಾದರೂ ಹೇಗೆ? ಯಾರ ಒತ್ತಾಯದಿಂದ? ಜನ ಸಮುದಾಯವೆಲ್ಲ ಹಿಂತಿರುಗಿದ ನಂತರ ದುರ್ಯೋಧನ “ಸುಮನೋಭೂಯ ಸಾಪೇಕ್ಷೆಯ ಸಮಾಧಿ” ಯಲ್ಲಿರುವಾಗ, ದೈತ್ಯ ಸಮೂಹ ಬಂದು ಅವನನ್ನು ರಸಾತಳಕ್ಕೆ ಕರೆದುಕೊಂಡು ಹೋಗಿ “ಸಾಮದಲಿ” ತಿಳಿ ಹೇಳುತ್ತದೆ. ಅವನಲ್ಲಿ ಮಲಗುತ್ತಿದ್ದ ಹಗೆತನದ ಬೆಂಕಿಯನ್ನು ಮತ್ತೆ ಉರಿಸುತ್ತಾರೆ. ಪ್ರಾಯೋಪವೇಶದಲಿ ಸಾಯುವುದು ನಿಮ್ಮರಸು ಕುಲಕ್ಕೆ ಅನುಚಿತ, ಅಲ್ಲದೆ ಸುರರು ಪಾಂಡುಕುಮಾರರಾಗಿ ಅವತರಿಸಿದ್ದಾರೆ. ನೆಲ ಅವರಿಗಾದರೆ ಈ ನಮ್ಮ ದೈತ್ಯ ಜನ್ಮವ ಸುಡಬೇಕು. ನೀನು ಸಾಯಬೇಡ, ಯುದ್ಧದಲ್ಲಿ ನಾವು ನಿನಗೆ ಸಹಾಯ ಮಾಡುವೆವು. ಒಂದು ತಿಲಾಂಶ ಭೂಮಿಯನ್ನೂ ಪಾಂಡವರಿಗೆ ಕೊಡಬೇಡ. ನಮ್ಮ ಗಜ, ತುರಗ, ದೈತ್ಯ ಪಡೆಯೇ ನಿನ್ನದು - ನಿಮ್ಮ ಸಮರದಲಿ ನಾವು ಸಾಯುವೆವು ಎಂಬ ದೈತ್ಯ ಆಶ್ವಾಸನೆ ಕೊಡುತ್ತದೆ ದೈತ್ಯನಿಕರ. ದೈತ್ಯರ ಮುಂದೆಯೂ ತನ್ನ ಅಭಿಮಾನ ಭಂಗವನ್ನು ಹೇಳಿಕೊಳ್ಳುತ್ತಾನಾದರೂ ದೈತ್ಯರ ಒತ್ತಾಸೆಯಿಂದ ಅವನಲ್ಲಿ ಜೀವನೇಚ್ಛೆ, ಮತ್ಸರದ ಕಿಚ್ಚು ಮೊಳೆಯುತ್ತವೆ. ಯಾರಿಗೂ ಬಗ್ಗದಿದ್ದ ದುರ್ಯೋಧನನ ನಿಶ್ಚಯ ಈ ಖಳನಿಕರದ ಮಾತುಗಳಿಗೆ ಬಗ್ಗಿ ಪ್ರಾಯೋಪವೇಶದ ಇಚ್ಛೆಯನ್ನೇ ಮರೆತು ಅರಮನೆಗೆ ಮರಳುವುದನ್ನು ಕಂಡಾಗ ಆಶ್ಚರ್ಯವಾಗುತ್ತದೆ. ಮನುಷ್ಯನೊಳಗಿನ ಕೆಡುಕು – ಕೆಡುಕಿನ ಜ್ವಾಲೆ – ಇಳಿಮುಖವಾಗುತ್ತಿರುವಾಗ, ಅದನ್ನು ಪುನರುದ್ದೀಪಿಸಲು ಸಂಪೂರ್ಣ ಕೆಡುಕಿಗೆ ಮಾತ್ರವೇ ಸಾಧ್ಯವೆನಿಸುತ್ತದೆ. ಮಾಟಗಾತಿಯರು ಮ್ಯಾಕ್‍ಬೆತ್‍ನಲ್ಲಿ (ಷೇಕ್ಸ್ಪಿಯರ್ ನ “ಮ್ಯಾಕ್‍ಬೆತ್”ನಲ್ಲಿ) ಅಡಗಿದ್ದ ಕೆಡುಕಿಗೆ ತಮ್ಮ ಭವಿಷ್ಯವಾಣಿಯಿಂದ ಚಾಲನೆ ಕೊಟ್ಟಂತೆ, ದುರ್ಯೋಧನನ ಮನಸ್ಸಿನಲ್ಲಿ ಹೆಡೆಮುದುರಿ ಮಲಗುತ್ತಿದ್ದ ಹಗೆತನ ದ್ವೇಷಗಳನ್ನು ಖಳನಿಕರದ ಆಶ್ವಾಸನೆಗಳು ಮತ್ತೆ ಹೆಡೆಯತ್ತಿ ವಿಜೃಂಭಿಸುವಂತೆ ಮಾಡುತ್ತವೆ. ಈ ಎರಡೂ ಸ್ಥಿತಿಯ ನಡುವಿನ ಮಾನಸಿಕ ಸ್ಥಿತಿಯನ್ನೂ ದುರ್ಯೋಧನನ ಮನೋವ್ಯಾಪಾರವನ್ನು ಕುಮಾರವ್ಯಾಸ ಅದ್ಭುತವಾಗಿ ಅಭಿವ್ಯಕ್ತಿಸಿದ್ದಾನೆ. ದ್ವೇಷ, ಹಗೆತನ, ಪ್ರೇಮ, ಸ್ನೇಹ, ವಾತ್ಸಲ್ಯ ಮುಂತಾದ ಮಾನವನ ಮೂಲಭೂತ ಪ್ರವೃತ್ತಿಗಳ ಬಗೆಗೆ ಅವನಿಗಿರುವ ಒಳನೋಟಗಳು ಆಶ್ಚರ್ಯಗೊಳಿಸುತ್ತವೆ. ಒಂದೊಂದು ಪ್ರಸಂಗದಿಂದಲೂ ಪಾಂಡವ ಕೌರವರ ನಡುವೆ ಹಗೆತನ ಹೇಗೆ ಸಹಜವಾಗಿ ಬೆಳೆದು ಹೆಮ್ಮರವಾಗುತ್ತದೆಂಬುದು ತಿಳಿಯುತ್ತದೆ. ಈ ಪ್ರಸಂಗಗಳು ದುರ್ಯೋಧನನ ಹಗೆತನ ಮತ್ಸರಗಳಿಗೆ ಪುಷ್ಟಿಕೊಡುವುದಲ್ಲದೆ, ಅವನ ಅಂತರಂಗದಲ್ಲಡಗಿರುವ ಭಯದ ಬೇರಿಗೆ ನೀರೆರೆಯುತ್ತದೆ. ಅವನ ಧೈರ್ಯ, ಸ್ಥೈರ್ಯಗಳಲ್ಲಿ ಕತ್ತರಿಯಾಡಿಸುತ್ತವೆ. ತನ್ನ ವಿನಾಶದ ಭಯದ ಕಲ್ಪನೆ ಅವನನ್ನು ಮತ್ತಷ್ಟು ಛಲವಾದಿಯನ್ನಾಗಿ, ಕ್ರೂರ, ದುಷ್ಟನೆನಿಸುವಂತಹ ನಡೆವಳಿಕೆಯವನನ್ನಾಗಿ ಮಾಡುತ್ತವೆ. ದುರ್ಯೋಧನ ಮತ್ತೆ ಅರಮನೆಗೆ ಮರಳಿದ ಪರಿಣಾಮವನ್ನು ಕುಮಾರವ್ಯಾಸ ಹೀಗೆ ವಿವರಿಸುತ್ತಾನೆ. “ಮತ್ತೆ ನೆಗ್ಗಿತು ನಯವಧರ್ಮದ | ಕುತ್ತುದಲೆ ನೆಗಹಿದುದು ಸತ್ಯದ | ಬಿತ್ತು ಹುರಿದುದು ಪಟ್ಟಗಟ್ಟಿದುದಾ ಕೃತಘ್ನತೆಗೆ | ನೆತ್ತಿ ಕಣ್ಣಾಯ್ತಧಮತೆಗೆ |”(ಅರಣ್ಯ ಪರ್ವ, 21.69).
ಮರಳಿ ಅರಮನೆಗೆ ಬಂದ ನಂತರ ಜಯದ್ರಥ ಅರಣ್ಯಕ್ಕೆ ಹೋಗಿ ದ್ರೌಪದಿಯನ್ನೆಳೆದೊಯ್ದಾಗ, ಭೀಮಾರ್ಜುನರು ಅವನನ್ನು ಸೆದುದು ತಲೆಬೋಳಿಸಿ ಕಳುಹಿಸುತ್ತಾರೆ. ಇದು ಮತ್ತೆ ದುರ್ಯೋಧನನಿಗೆ ನುಂಗಲಾರದ ತುತ್ತಾಗುತ್ತದೆ. ಶೀಘ್ರ ಕೋಪಿ ದೂರ್ವಾಸಮುನಿಯನ್ನು ಕಳಿಸಿ ಪಾಂಡವರನ್ನು ಶಾಪಗ್ರಸ್ತರನ್ನಾಗಿ ಮಾಡಬೇಕೆನ್ನುವ ಯೋಜನೆಯೂ ಕೃಷ್ಣ ನಿಂದಾಗಿ ವಿಫಲವಾಗುತ್ತದೆ. ಕೀಚಕನ ವಧೆಯಿಂದ ಪಾಂಡವರ ಸುಳಿಹು ದೊರೆತು, ಅವರನ್ನು ಮತ್ತೆ ಹದಿಮೂರು ವರ್ಷ ವನವಾಸಕ್ಕೆ ಕಳಿಸಬಹುದಂಬ ಆಲೋಚನೆಯಿಂದ ದುರ್ಯೋಧನ ವಿರಾಟನ ಗೋವುಗಳನ್ನು ಹಿಡಿಯುತ್ತಾನೆ. ಆದರೆ ಇಲ್ಲಿಯೂ ಅರ್ಜುನನೊಬ್ಬನೆ, ಭೀಷ್ಮ ದ್ರೋಣಾದಿ ದುರ್ಯೋಧನನ ಸೈನ್ಯವನ್ನು ಸಮ್ಮೋಹನಾಸ್ತ್ರದಿಂದ ಮೂರ್ಛಿತಗೊಳಿಸಿ, ಗೋವುಗಳನ್ನು ಬಿಡಿಸಿಕೊಂಡು ಹೋಗುತ್ತಾನೆ. ದುರ್ಯೋಧನನಿಗೆ ಮತ್ತೆ ಮುಖಭಂಗ, ಜೊತೆಗೆ ಪಾಂಡವರು ವನವಾಸ, ಅಜ್ಞಾತವಾಸಗಳನ್ನು ಮುಗಿಸಿರುವರೆಂಬ ಲೆಕ್ಕಾಚಾರದಿಂದಾಗಿ ನಿರಾಶೆ. ಇದರಿಂದಾಗಿ ಯುದ್ಧದ ಸಿದ್ಧತೆಗಳು, ಸಂಧಿಯ ಮಾತುಕತೆ, ಪಕ್ಷಗಳ ಬಲ ಸಂವರ್ಧನೆ ಎಲ್ಲವೂ ನಡೆಯ ತೊಡಗುತ್ತವೆ. ಮೊದಲನೆಯ ಮೆಟ್ಟಿಲಾಗಿ ದುರ್ಯೋಧನ ಯಾದವರ ಸಹಾಯಹಸ್ತ ಬಯಸಿಬಂದಾಗ, ಯಾದವ ಸೈನ್ಯ ದುರ್ಯೋಧನನ ಪರವಾದರೆ, ಕೃಷ್ಣ ಪಾಂಡವರ ಪಕ್ಷದಲ್ಲಿ ನಿಲ್ಲುತ್ತಾನೆ. ಅರ್ಜುನನ ಸಾರಥಿಯಾಗಿರುವೆನೆನ್ನುತ್ತಾನೆ.
ಕೃಷ್ಣ ಸಂಧಿ ಸಾಧಿಸಲೆಂದು ಕೌರವನ ಆಸ್ಥಾನಕ್ಕೆ ಬಂದಾಗ ದುರ್ಯೋಧನನ ವ್ಯಕ್ತಿತ್ವದ ಮತ್ತೊಂದು ಆಯಾಮ ಗೋಚರವಾಗುತ್ತದೆ. ಅವನ ವ್ಯಕ್ತಿತ್ತದಾಳದಲ್ಲಿ ಅಡಗಿರುವ ಸಂಕೀರ್ಣತೆ. ಅವನು ಸಾಕ್ಷಾತ್ಕರಿಸಿಕೊಂಡಿರುವ ಕೃಷ್ಣಪ್ರಜ್ಞೆ ಆಶ್ಚರ್ಯಗೊಳಿಸುತ್ತದೆ. ಅವನ ಬಗೆಗೆ ಗೌರವ ಮೆಚ್ಚುಗೆಗಳು ಮೂಡುತ್ತವೆ. ಈ ದುರ್ಯೋಧನನಲ್ಲಿ ಕೋಪ ಬರಿಸಲು ಕೃಷ್ಣನೇನು ಕಡಿಮೆ ಆಟವಾಡುತ್ತಾನೆಯೆ? ಸಂಧಿ ಸಾಧಿಸಲೆಂದು ಕೌರವನ ಆಸ್ಥಾನಕ್ಕೆ ಬರುವ ಕೃಷ್ಣನಿಗೆ ಭೀಮ ದ್ರೌಪದಿಯರು ಯುದ್ಥವನ್ನೇ ಸಾಧಿಸಿ ಬರಬೇಕೆಂದು ವಿನಂತಿಸುತ್ತಾರೆ. “...ಸಂಧಿಯ ನೆವದಲವದಿರ ಭಾವವನು ಕಲಿಮಾಡಿ ಕೋಪದ |ತೀವಿ ಸಂಧಿಯ ಮುರಿದು ಬಹೆವಿದ ನಂಬು ನೀನೆಂದು” (ಉದ್ಯೋಗ ಪರ್ವ 07.13) ಭರವಸೆ ಕೊಟ್ಟು ಬಂದಿರುತ್ತಾನೆ ಕೃಷ್ಣ. ಹಸ್ತಿನಾಪುರಕ್ಕೆ ಬರುವಾಗ ಕೃಷ್ಣ ಸಾತ್ಯಕಿಗೆ, ಧನು ಶಸ್ತ್ರಾಸ್ತ್ರ ಕವಚ, ಸುದರ್ಶನ ಚಕ್ರ ಇವನ್ನೆಲ್ಲ ರಥದಲ್ಲಿಟ್ಟು, ರಥದೊಳಗೆ ಕೈದುವನು ತುಂಬಿಸೆಂದು ನೇಮಿಸಿರುತ್ತಾನೆ. ಕಾರಣ “ಕೌರವರು ಖುಲ್ಲರು.” ಹೀಗೆ ರಾಯಭಾರಿಯಾಗಿ ಬಂದ ಕೃಷ್ಣನನ್ನು, ಅರಮನೆಯಲ್ಲಿ ಅಖಿಲ ಸಾರ ವಸ್ತುವ ತರಿಸಿ ಅಡಿಗೆ ಮಾಡಿಸಿ ಆ ದುರ್ಯೋಧನ ಆರೋಗಣೆಗೆ ಕಾಯುತ್ತಿದ್ದರೆ, ಈ “ವರಭಾಗವತ ಮಸ್ತಕ ರತ್ನ”ನಾದ ಹರಿ ವಿದುರನ ಮನೆಗೆ ಆರೋಗಣೆಗೆ ಬರುತ್ತಾನೆ. ಅರಸ ದುರ್ಯೋಧನನಿಗೆ ಕೋಪ ಬಾರದಿದ್ದೀತೇ? ಇಂಥ ದೂತ ಸಂಧಿಗೆಂದು ಬಂದಾಗ ಸಂಧಿ ಕೂಡೀತೇ? ವಿದುರನ ಮನೆಯಲ್ಲಿ, ಆ ಕ್ಷೀರಸಾಗರಶಯನನಾದ ಹರಿಯ ಪಾದಕಮಲಗಳಿಗೆ ಅಭಿಷೇಕ ಮಾಡಿದ ಹಾಲಿನ ಬಿಂದುಗಳು ಹರಿದು ಕೌರವನರಮನೆಯನೊಳಕೊಂಬವೊಲ್ ಕಡಲಾಗಿ ಕೈಗೊಳಲು, ಏನಿದು “ಮುರಹರನೊಡನೆ ಹಾಲಿನ ಶರಧಿ ಮೇರೆಯನೊಡೆದುದು ಇಳೆಗೆ ಅಚ್ಚರಿ ಎಂದರಂತೆ ಭೀಷ್ಮಾದಿಗಳು. ಇಂಥ ಕೃಷ್ಣನ ಮಹಿಮೆ ದುರ್ಯೋಧನನಿಗೆ ತಿಳಿಯುವುದಿಲ್ಲವೇ? ಇಂಥ ಕೃಷ್ಣನ ಪ್ರೀತಿಯ ರಕ್ಷಾಕವಚದಲ್ಲಿರುವ ಪಾಂಡವರ ಬಗೆಗೆ ಅಸಹನೆ, ಅಸೂಯೆ, ಹಗೆತನ, ರಕ್ಷಾಕವಚ ನೀಡಿರುವ ಕೃಷ್ಣನ ಬಗೆಗೆ ಕೋಪ ಎಲ್ಲವೂ ಸಹಜವೇ. ಕೃಷ್ಣರಾಯಭಾರದ ಪ್ರಸಂಗ ಸಂಪೂರ್ಣವಾಗಿ ನಾಟಕದ ದೃಶ್ಯದಂತೆ ನಡೆಯುತ್ತದೆ. ಸಂಧಿಯ ರಾಯಭಾರ ಹೊತ್ತು ರಾಜಸಭೆಗೆ ಬಂದ ಕೃಷ್ಣನಿಗೆ ಎಲ್ಲರೂ ನಮಿಸಿದರೂ ಕೌರವರಾಯ ಮಾತ್ರ ಸಿಂಹಾಸನದಿಂದಿಳಿಯದೆ ಕುಳಿತಿರುತ್ತಾನೆ. ತನ್ನ ಔತಣವನ್ನು ಧಿಕ್ಕರಿಸಿ ವಿದುರನ ಮನೆಗೆ ಹೋದ ಕೃಷ್ಣನ ಮೇಲಿನ ಸಿಟ್ಟು ಕೌರವರಾಯನಿಗೆ, ಕೃಷ್ಣನಾದರೂ ಸುಮ್ಮನಿರುವಂಧಥವನೇ? ಇಬ್ಬರಿಗೂ ಶೀತಯುದ್ಧ. ಅಲ್ಲದೆ ಕೃಷ್ಣನ ಉದ್ದೇಶ, ಸಂಧಿ ಸಾಧಿಸಬಾರದೆಂದು ತಾನೆ!
ಸೆಣಸು ಸೇರದ ದೇವನಿದಿರಲಿ
ಮಣಿಯದಾತನ ಕಾಣುತವೆ ಧಾ-
ರುಣಿಯ ನೊತ್ತಿದ ನುಂಗುಟದ ತುದಿಯಿಂದ ನಸುನಗುತ |
ಮಣಿ ಖಚಿತ ಕಾಂಚನದ ಪೀಠದ
ಗೊಣಸು ಮುರಿದುದು ಮೇಲೆ ಸುರ ಸಂ
ದಣಿಗಳಾ ಎನೆ ಕವಿದು ಬಿದ್ದನು ಹರಿಯ ಚರಣದಲಿ || (ಉದ್ಯೋಗ ಪರ್ವ 08.59)
. ಕೃಷ್ಣನ ರಿಮೋಟ್ ಕಂಟ್ರೋಲ್ ಎಲ್ಲಿ ಯಾವಾಗ ಹೇಗೆ ಕೆಲಸ ಮಾಡುವುದೆಂದು ತಿಳಿಯುವರಾರು? ಛಲದಂಕಮಲ್ಲನಿಗೆ ಮತ್ತೆ ಸಭೆಯಲ್ಲಿ ಅಪಮಾನ, ಮೇಲೆ ಕೃಷ್ಣನ ಕುಹಕ
ಧರಣಿ ಪತಿ ಸಿಂಹಾಸನದ ಮೇ-
ಲಿರದೆ ಬಹರೆ ನಾವು ಬಂದೇ
ಹರಸುವೆವು ತಪ್ಪಾವುದೆನುತೆತ್ತಿದನು ಮಸ್ತಕವ | (ಉದ್ಯೋಗ ಪರ್ವ 08.60)
. ದುಗುಡವೇಕೆನುತ ಕೃಷ್ಣ ದುರ್ಯೋಧನನನ್ನು ತನ್ನ ಸಮ್ಮುಖಕೆ ಕರೆದಾಗ ದುರ್ಯೋಧನ ತನ್ನ ಮನಸ್ಸಿನ ಕಹಿಯನ್ನು ಉಗುಳುತ್ತಾನೆ. ತಾನು ಷಡ್ರಸದಡುಗೆಯ ಮಾಡಿಸಿದ್ದರೆ, ಕೃಷ್ಣ ವಿದುರನ ಮನೆಯಲಿ ಊಟ ಮಾಡುತ್ತಾನೆಂಬುದು ಅವನ ಕಹಿಗೆ ಕಾರಣ. “ಗೋವಳಿಗತನ ನಿಮ್ಮ ಮೈ ಸಿರಿ ತಪ್ಪದಾಯ್ತೆಂದ” (ಉದ್ಯೋಗ ಪರ್ವ 08.64) ಕೃಪ, ದ್ರೋಣ, ಭೀಷ್ಮ ಇವರಾರ ಮನೆಗೂ ಹೋಗದೇ ಅವಿವೇಕಿ ತೊತ್ತಿನ ಮಗನ ಮನೆಯಲಿ ಹಸಿವ ನೂಕಿದಿರಿ| “ನಂದಗೋಪನ ಮಗ ನಿಮಗೇಕೆ ರಾಯರ ನೀತಿ” (ಉದ್ಯೋಗ ಪರ್ವ 08.65) ಎಂದಾಗ, ಎಂದೂ ಕೋಪಗೊಳ್ಳದ ಜ್ಞಾನಿ, ನೀತಿ ಕೋವಿದ ವಿದುರನಿಗೂ ಕೋಪ ಉಕ್ಕಿ, ಭೀಮ ಕಡು ಮುಳಿಸಿನಲಿ ನಿನ್ನತೊಡೆಗಳನ್ನು ಮುರಿಯುವ ಸಮಯದಲ್ಲಿ ನಿನ್ನನ್ನು ಉಳಿಸಬೇಕೆಂದು ಧನಸ್ಸನ್ನು ಇಟ್ಟುಕೊಂಡಿದ್ದೆ... ಕೆಡೆನುಡಿಸಿ ಕೊಂಡು ಇನ್ನು ಕಾವೆನೆ ನುಡಿದು ಫಲವೇನೆನುತ ವಿದುರನು ತಾನು ಹಿಡಿದಿದ್ದ ಬಿಲ್ಲನ್ನು ಮುರಿಯುತ್ತಾನೆ. ವಿದುರನ ಈ ಕಾಯಕ ದುರ್ಯೋಧನನಿಗೂ ಆಶ್ಚರ್ಯವಾಗುತ್ತೆ. ಮುಂದೆ ತನಗೆ ಶ್ರೀರಕ್ಷೆಯಾಗಬಹುದಾಗಿದ್ದ ವಿದುರನ ಒತ್ತಾಸೆಯನ್ನು, ಸಾತ್ವಿಕ ರಕ್ಷೆಯನ್ನು ದುರ್ಯೋಧನ ಹೀಗೆ ಕಳೆದುಕೊಳ್ಳುತ್ತಾನೆ. ವಿದುರನ ಈ ಕಾರ್ಯದಿಂದ ಗಾಂಧಾರಿ, ಧೃತರಾಷ್ಟ್ರ, ಭೀಷ್ಮ ದ್ರೋಣರಲ್ಲಿ ದುಗುಡ ಹೆಚ್ಚುತ್ತದೆ. ಇಷ್ಟೆಲ್ಲಾ ಆದ ಮೇಲೆ ಸಂಧಿಯ ಪ್ರಸ್ತಾಪ ಬಂದಾಗ ದುರ್ಯೋಧನನ ಜಾಗದಲ್ಲಿ ನಾವೇ ಇದ್ದರೂ ಸಂಧಿಯ ಪ್ರಸ್ತಾಪಕ್ಕೆ ಒಪ್ಪುತ್ತಿರಲಿಲ್ಲವೆನಿಸುತ್ತದೆ. ಕೃಷ್ಣನಿಂದ ನೇರವಾಗಿ ಸಂಧಿಯ ಪ್ರಸ್ತಾಪ ಬಂದಾಗ ದುರ್ಯೋಧನ ತನ್ನ ತಮ್ಮ ಸಂಧಿಗೆ ಒಪ್ಪುವುದಿಲ್ಲವೆನ್ನುತ್ತಾನೆ. ಕಡೆಗೆ ಸಂಧಿ ಮುರಿದು ಬಿದ್ದು ಯುದ್ಧವೇ ನಿಶ್ಚಯವಾಗುತ್ತದೆ. ಹಿಂದೆ ನಡೆದ, ಈಗ ನಡೆಯುತ್ತಿರುವ ಎಲ್ಲ ಘಟನೆಗಳಿಂದಲೂ ದುಯೋಧನನಲ್ಲಿ ಛಲ ಹೆಚ್ಚುತ್ತಲೇ ಹೋಗುವುದು ಮಾನವ ಸ್ವಭಾವದಲ್ಲಿನ ಸಂಕೀರ್ಣತೆಯನ್ನು ಸೂಚಿಸುತ್ತದೆ. ಮನದಾಳದಲ್ಲಿ ಸಂಧಿಮಾಡಿಕೊಳ್ಳಬೇಕೆನಿಸಿದ್ದರೂ, ಕೃಷ್ಣನು ಹೇಳುವ “ಐದೂರುಗಳನ್ನು ಬಿಟ್ಟುಕೊಡೆನ್ನುವ ಮಾತಿಗೆ ಒಪ್ಪಬೇಕೆನಿಸಿದ್ದರೂ ಒಪ್ಪಲಾರದ ಛಲ ಅಭಿಮಾನಗಳು ಅವನನ್ನು ಕಾಡುತ್ತವೆ. ಬೇಡುವ ಈ ಹರಿ ‘ಧರೆಯನೀರಡಿ ಮಾಡಿಕೊಂಡ ಮಹಾತ್ಮ”, ಇವನನ್ನು ಇವನ ಮಾತನ್ನು ನಂಬಹುದೇ? ಮುಳ್ಳುಮೊನೆಯ ಭಾಗವನ್ನು ಕೊಡುವುದಿಲ್ಲವೆಂದು ಹೇಳುವ ದುರ್ಯೋಧನ ಅತ್ಯಂತ ಹಠಮಾರಿಯಾಗಿ ಕಾಣಿಸುತ್ತಾನೆ. ಕಡೆಗೆ ಸಭೆಯಲ್ಲಿ ಕೃಷ್ಣನನ್ನು ಕಟ್ಟಿ ಹಾಕಬೇಕೆಂದು ಆಲೋಚಿಸುತ್ತಾನೆ. ಪಾಂಡವರ ಮೇಲಿನ ಹಗೆತನ ದ್ವೇಷಗಳಿಂದಾಗಿ ಪಾಂಡವಪಕ್ಷಪಾತಿಯಾದ ಕೃಷ್ಣನನ್ನೂ ದ್ವೇಷಿಸುವ ಹಂತ ತಲುಪುತ್ತಾನೆ ದುರ್ಯೋಧನ ಎನ್ನುವುದರಲ್ಲಡಗಿರುವ ಮನೋವೈಜ್ಞಾನಿಕ ಸತ್ಯ ಈ ಘಟನೆಯಲ್ಲಡಗಿದೆ. ಅಲ್ಲದೆ ದುರ್ಯೋಧನನಿಗೆ ಚೆನ್ನಾಗಿ ಗೊತ್ತು ಪಾಂಡವರು, ಕೌರವರಾದ ತಾವು ಎಲ್ಲರೂ ಕೃಷ್ಣನ ಪಗಡೆಯಾಟದ ಕಾರ್ಯಗಳೆಂದು. ಆದರೂ ತನ್ನ ದಾಳಗಳ ತಾನುರುಳಿಸಿ, ತನ್ನ ಕಾಯಿಗಳನ್ನು ತಾನೇ ನಡೆಸುವ ಛಲ ದುರ್ಯೋಧನನದು.
ಕಥಾನಕದ ಈ ಘಟ್ಟದಿಂದ ದುರ್ಯೋಧನ ಪಾತ್ರ ನಾವು ಹಿಂದೆ ಊಹಿಸದಿದ್ದ ರೀತಿಯಲ್ಲಿ ಬೆಳೆದು ಉನ್ನತೀಕರಣಗೊಳ್ಳುತ್ತದೆ. ಅವನ ಛಲದ ಪರಾಕಾಷ್ಠೆ, ಅಜ್ಞಾನದ ಪರಮಾವಧಿ ಎನ್ನಿಸುತ್ತಿರುವಾಗಲೇ ಅವನ ಮನದಾಳದಲ್ಲಿನ ಆಧ್ಯಾತ್ಮದ ನೆಲೆ ಗೋಚರಿಸಿ ಆ ಪಾತ್ರದ ಬಗೆಗೆ ಅಚ್ಚರಿ, ಮೆಚ್ಚುಗೆ, ಗೌರವ ಮರುಕಗಳನ್ನು ಮೂಡಿಸುತ್ತಾನೆ ಕುಮಾರವ್ಯಾಸ. ಕೃಷ್ಣ ಶಕ್ತಿಯನ್ನು ನಿಗ್ರಹಿಸಿದರೆ ಪಾಂಡವರ ಶಕ್ತಿ ಮುರಿಯುವುದೆಂದು “ಎರಡು ಬಲವನು ಮಸೆದು ಕೊಲಿಸುವ ... ಅರಿ ನಮಗೆ ಮುರವೈರಿಯಲ್ಲದೆ ಪಾಂಡುನಂದನರೆ” (ಉದ್ಯೋಗ ಪರ್ವ 09.41) ಎಂದು ಕೃಷ್ಣನ ಕೈಗಳನ್ನು ಕಟ್ಟುವ ಯೋಚನೆ ಮಾಡುತ್ತಾನೆ.
ಗಾಳಿಯುಪಶಮಿಸಿದೆಡೆ ವಹ್ನಿ-
ಜ್ವಾಲೆ ತಾನೇ ನಿಲುವುದೀತನ
ತೋಳ ಬಿಗಿದೊಡೆ ಮನಗುಂದುವರು ಪಾಂಡವರು | (ಉದ್ಯೋಗ ಪರ್ವ 09.42)
ಇದರ ಪರಿಣಾಮ ಧೃತರಾಷ್ಟ್ರ ಗಾಂಧಾರಿಯಾದಿಯಾಗಿ ಎಲ್ಲರೂ ದುರ್ಯೋಧನನನ್ನು ಟೀಕಿಸುವವರೇ, ಈ ಟೀಕೆಗಳಿಂದ ಅವನ ಹಠ ಮತ್ತೂ ಹೆಚ್ಚುತ್ತದೆ. ಗಾಂಧಾರಿಯಂತೂ “ಧೃತರಾಷ್ಟ್ರನೃಪ ನೀ | ನಿಟ್ಟ ಕಿಚ್ಚದು ಪಾಪಿ ಮಗನನು ಹುಟ್ಟಿದಂದೇ ಬಿಸುಡದಾದೆವು ಬಾಳುಗೇಡಿಯನು” (ಉದ್ಯೋಗ ಪರ್ವ 09.49) ಎನ್ನುತ್ತಾಳೆ. ವಿದುರನಾದಿಯಾಗಿ ಎಲ್ಲರೂ ಕೃಷ್ಣಮಹಿಮೆಯನ್ನು ಹಾಡುತ್ತಾರೆ. ಆದರೂ ಕೌರವನ ಭಟರು ಕೃಷ್ಣನನ್ನು ಹಗ್ಗಗಳಿಂದ ಬಿಗಿಯಲಳವಡಿಸಿದಾಗ “ಘನ ತೇಜದ ಲಹರಿ ಲೀಲೆಯಲಿ ಹರಿ ತೋರಿದನು ನಿರುಪಮ ವಿಶ್ವರೂಪವನಾ ಮಹಾಸಭೆಗೆ” (ಉದ್ಯೋಗ ಪರ್ವ 09.57).
ಈ ಪ್ರಸಂಗದಲ್ಲಿ ದುರ್ಯೋಧನನಲ್ಲಿ ಕೃಷ್ಣನ ಬಗೆಗಿರುವ ಭಾವನೆಗಳ ಪರಿಚಯವಾಗುತ್ತದೆ. ಕೃಷ್ಣನ ಮೇಲಿನ ಹಗೆತನ ಚರಮಸೀಮೆಯನ್ನು ತಲುಪಿದಂತೆ ತೋರಿ ವೈರ-ಭಕ್ತಿ ಎನ್ನುವ ರೀತಿಯಲ್ಲಿ ಪರ್ಯವಸಾನವಾಗುತ್ತದೆ. ಕೃಷ್ಣನಾದರೂ ಅದೆಂಥ ಮಾಯಾವಿ! ಕುರುಡದೊರೆ ಧೃತರಾಷ್ಟ್ರನಾದಿಯಾಗಿ ಸಭೆಯಲ್ಲಿದ್ದವರೆಲ್ಲರೂ ಕಂಡ ತನ್ನ ವಿಶ್ವ ರೂಪವನು ದುರ್ಯೋಧನನಿಂದ ಮರೆಮಾಚುತ್ತಾನಲ್ಲಾ. ಆದರೂ ದುರ್ಯೋಧನನ ಅಂತ:ಪ್ರಜ್ಞೆಗೆ ಕೃಷ್ಣಪ್ರಜ್ಞೆಯ ಅರಿವಿದೆ. ಅವನು ಕೃಷ್ಣನ ಸಂಕೀರ್ಣಕಾರ್ಯತಂತ್ರವಿನ್ಯಾಸಗಳನ್ನೂ ಅವನ ಸರ್ವಾಂತರ್ಯಮಿತ್ವವನ್ನೂ ಅರಿತವನು. ಇಂತಹ ಕೃಷ್ಣಪ್ರಜ್ಞೆಯ ಸಂಪೂರ್ಣ ಅರಿವಿದ್ದೂ ತನ್ನ ನಿಲುವಿನಲ್ಲಿ ನಿಶ್ಚಲನಾಗಿರುವ ‘ಉದ್ಯೋಗ ಪರ್ವ’ದ ಈ ದುರ್ಯೋಧನ ನಮ್ಮ ಮನದಲ್ಲಿ ಗಟ್ಟಿಯಾಗಿ ನಿಂತುಬಿಡುತ್ತಾನೆ. ವಿಶ್ವರೂಪದ ಆ ಭವ್ಯತೆಗೆ, ಪಾವನತ್ವಕ್ಕೆ, ಎಲ್ಲರೂ ಬೆಚ್ಚಿ, ಬೆರಗಾಗಿ ಮೂಕರಾಗಿ ಮಣಿಯುತ್ತಿರುವಾಗ ದುರ್ಯೋಧನ
ತಾತ ಹೆದರದಿರೀ ಮುಕುಂದನ
ಕೈತವಕೆ ಬೆಚ್ಚದಿರು ಸಂಧಿಯ
ಮಾತು ತಾನಿದು ಹೃದಯವೇ ಬೆಸಗೊಳ್ಳಿ ಮುರಹರನ |
ಈತನಂತರ್ಯಾಮಿ ಜೀವ-
ವ್ರಾತದಲಿ ಜನಜನಿತವಿದು ಜಗ-
ವೀತನಾಜ್ಞೆಯೊಳೊಲುವುದೆಂದನು ಕೌರವರ ರಾಯ || (ಉದ್ಯೋಗ ಪರ್ವ 09.69)
ಮುಂದುವರೆದು ಮತ್ತೂ ಹೇಳುತ್ತಾನೆ ...
...
ಜಂಗಮ ಸ್ಥಾವರಕೆ ಚೈತ-
ನ್ಯಾಂಗರಕ್ಷಕ ಘನಕೆ ಘನ ಅಣು-
ವಿಂಗೆ ತಾನಣುವೆನಿಪ ಪರತರವಸ್ತು ನೋಡೀತ || (ಉದ್ಯೋಗ ಪರ್ವ 09.70)
ಎನ್ನ ಹೃದಯದೊಳಿದ್ದು ಮುರಿವನು-
ಗನ್ನದಲಿ ಸಂಧಿಯನು ರಿಪುಗಳೊ-
ಳಿನ್ನು ತನ್ನವರವರೊಳಿರ್ದಾ ನುಡಿವನೀ ಹದನ |
ಭಿನ್ನನಂತಿರೆ ತೋರಿ ಭಿನ್ನಾ-
ಭಿನ್ನನೆನಿಸಿಯೆ ಮೆರವ ತಿಳಿಯಲ-
ಭಿನ್ನನೈ ಮುರವೈರಿ ನಾವಿನ್ನಂಜಲೇಕೆಂದ || (ಉದ್ಯೋಗ ಪರ್ವ 09.71)
...
ಕೊಲುವನನ್ಯರನನ್ಯರಿಂದಲೆ
ಕೊಲಿಸುವನು ಕಮಲಾಕ್ಷನಲ್ಲದೆ
ಉಳಿದ ಜೀವವ್ರಾತಕೀ ಸ್ವಾತಂತ್ರ್ಯವಿಲ್ಲೆಂದ || (ಉದ್ಯೋಗ ಪರ್ವ 09.72)
ಇಳಿದನವನಿಗೆ ಧಾರುಣಿಯ ಹೊರೆ-
ಗಳೆಯಲೋಸುಗವಿಲ್ಲಿ ನಮ್ಮೊಳ-
ಗೊಳಗೆ ವೈರವ ಬಿತ್ತಿ ಬರಿಕೈವನು ಮಹಾಬಲವ |
ಛಲಕೆ ಮಣಿಯದೆ ರಾವಣಾದಿಗ-
ಳಳಿದರಿದಲಾ ಕೀರ್ತಿಕಾಯವಿ-
ದಳಿವುದಗ್ಗದ ಕೀರ್ತಿಯುಳಿವುದು ಅಂಜಲೇಕೆಂದ || (ಉದ್ಯೋಗ ಪರ್ವ 09.73)
ಮಣಿದು ಬದುಕುವನಲ್ಲ ಹಗೆಯಲಿ
ಸೆಣಸಿ ಬಿಡುವವನಲ್ಲ ದಿಟ ಧಾ-
ರುಣಿಯ ಸಿರಿಗಳುಪುವವನಲ್ಲಳುಕಿಲ್ಲ ಕಾಯದಲಿ |
ರಣ ಮಹೋತ್ಸವವೆಮ್ಮಮತ ಕೈ-
ದಣಿಯೆ ಹೊಯ್ದಾಡುವೆನು ಕೃಷ್ಣನ
ಕೆಣಕಿದಲ್ಲದೆ ವಹಿಲದಲಿ ಕೈವಲ್ಯವಿಲ್ಲೆಂದ || (ಉದ್ಯೋಗ ಪರ್ವ 09.75)
ಈ ಹಲವು ಪದ್ಯಗಳನ್ನು ಉದ್ಧರಿಸಿರುವ ಉದ್ದೇಶ, ಯಾವಾಗಲೂ ಕೃಷ್ಣನ ಜೊತೆಯಲ್ಲಿರುತ್ತದ್ದ ಕೃಷ್ಣಸಖ ಅರ್ಜುನನಿಗಿಂತಲೂ ಹೆಚ್ಚಾಗಿ ದುರ್ಯೋಧನ ಕೃಷ್ಣಪ್ರಜ್ಞೆಯನ್ನು ಸಾಕ್ಷಾತ್ಕರಿಸಿ ಕೊಂಡಿದ್ದನೆಂಬುದನ್ನು ವಿಶದಪಡಿಸಲು. ದುರ್ಯೋಧನ ಇಲ್ಲಿ ಆಡುವ ಮಾತುಗಳು ಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡುವ ಬಹಳ ಮೊದಲೇ ಆಡಿದ್ದಾನೆಂಬುದನ್ನು ಗಮನಿಸಬೇಕು. ಗೀತೆಯ ಉಪದೇಶದಸಾರ ದುರ್ಯೋಧನನ ಮಾತುಗಳಲ್ಲಿ ಅಡಗಿದೆ. ಹಠ, ಹಗೆತನ, ಛಲ, ವೈರಗಳ ಚಿಪ್ಪಿನಂತಿರುವ ದುರ್ಯೋಧನನ ಒಳತಿರುಳು ಜ್ಞಾನಪರತತ್ವದ ಅರಿವು, ಆತ್ಮಜ್ಞಾನ ಎನ್ನುವುದನ್ನು ಕಂಡಾಗ ಆಶ್ಚರ್ಯ ಆಗುತ್ತದೆ. ಆದರೂ ಆ ಪರಮಾತ್ಮನ ಉದ್ದೇಶ ಸಾಧನೆಗಾಗಿ ತಾನು ತನ್ನತನವನ್ನು ಬಿಡದೇ ನಡೆಯಬೇಕೆಂಬ ಅರಿವು ಛಲಗಳ ಎರಡರ ಸಂಯೋಗದಿಂದ ದುರ್ಯೋಧನನ ಪಾತ್ರ ಉದಾತ್ತವೂ, ಸಂಕೀರ್ಣವೂ ಆಗಿ ಮನಸ್ಸಿನ ಮೇಲೆ ವಿಚಿತ್ರಪರಿಣಾಮ ಬೀರುತ್ತದೆ. ಅಲ್ಲದೆ ಪಾತ್ರದ ದುರಂತತೆ ಅತ್ಯಂತ ತೀವ್ರವಾಗುತ್ತದೆ. ಬಹುಶ: ದುರ್ಯೋಧನ, ರಾವಣರಂತಹ ದುರಂತನಾಯಕರ ಸೃಷ್ಟಿ, ಪಾಶ್ಚಾತ್ಯ ದೃಷ್ಟಿ ಕೋನದ ಸಾಹಿತ್ಯದಲ್ಲಿ ಸಾಧ್ಯವಾಗಲಾರದು. ಮಿಲ್ಟನ್ ಕವಿಯ ‘ಪ್ಯಾರಡೈಸ್ ಲಾಸ್ಟ್’ನ ‘ಸಾಟನ್’ನನ್ನು ಬಿಟ್ಟು. ಈ ದುರಂತ ನಾಯಕರು ಕೇವಲ ಮೂಲಭೂತಮಾನವನ ಪ್ರವೃತ್ತಿಗಳಾದ ಒಳಿತು, ಕೆಡಕಿನ ಜಂಜಾಟದಲ್ಲಿ ಮಾತ್ರ ಸಿಲುಕಿಕೊಳ್ಳುವುದಿಲ್ಲ. ಬದಲಿಗೆ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣವಾದ ವಿಶ್ವವನ್ನಾಳುವ ಶಕ್ತಿಯೊಂದಿಗೇ ಹೋರುತ್ತಾರೆ. ಇದರಿಂದಾಗಿ ಈ ಪಾತ್ರಗಳು ಅನನ್ಯವೆನಿಸುತ್ತವೆ. ಕುಮಾರವ್ಯಾಸ ಪರಮ ಭಕ್ತನಾದ್ದರಿಂದ, ಹೀಗೆ ದುರಂತ ನಾಯಕ, ‘ಖುಲ್ಲ’ನಾದ ದುರ್ಯೋಧನನಿಗೂ ಕೃಷ್ಣಪ್ರಜ್ಞೆಯ ಸಾಕ್ಷಾತ್ಕಾರ ಮಾಡಿಸಿಬಿಟ್ಟಿದ್ದಾನೆ ಎನ್ನಬಹುದು. ಆದರೆ ಅವನಿದನ್ನು ಮಾಡಿಸಿರುವ ಸಂದರ್ಭ, ರೀತಿ ಇವುಗಳಿಂದಾಗಿ ದುರ್ಯೋಧನನ ಪಾತ್ರದ ಮೆರಗು ಹೆಚ್ಚುತ್ತದೆ. ಸಭೆಯಲ್ಲಿ ದುರ್ಯೋಧನನ ಮಾತುಗಳನ್ನು ಕೇಳಿದ ಕೃಷ್ಣನೇ ‘ಘನಸುಯೋಧನ’ ಎಂದು ಹೇಳುತ್ತಾನೆ. ಉಪದೇಶವಿಲ್ಲದೆಯೇ ಅರಿವನ್ನು ಸಾಕ್ಷಾತ್ಕರಿಸಿ ಕೊಂಡ ಕುಮಾರವ್ಯಾಸನ ಈ ದುರ್ಯೋಧನ ಮನಸ್ಸನ್ನು ತುಂಬುತ್ತಾನೆ.
This is the fifth part of the eighteen-part article on kumaravyasa-bharata by Prof. L.V. Shantakumari. Thanks to Smt. Kanchana and Shri. Ganesh Bhat Koppalatota for reviewing. Edited by G S Raghavendra.