‘ಕರ್ಣಾಟ-ಭಾರತ-ಕಥಾಮಂಜರಿ’, ಕುಮಾರವ್ಯಾಸನೆಂದು ಬಿರುದು ಪಡೆದ ಗದುಗಿನ ನಾರಾಯಣಪ್ಪನಿಂದ ವಿರಚಿಸಲ್ಪಟ್ಟು, ‘ಗದುಗಿನ ಭಾರತ’ ವೆಂದೇ ಖ್ಯಾತಿ ಪಡೆದು ಕರ್ನಾಟಕದ ಹಳ್ಳಿಹಳ್ಳಿಯಲ್ಲಿಯೂ ಜನರ ನಾಲಿಗೆಯ ಮೇಲೆ ನಲಿಯುತ್ತಿರುವ ಮಹಾಕಾವ್ಯ. ಕನ್ನಡ-ಸಾಹಿತ್ಯ-ಕ್ಷೇತ್ರದ ತೃತೀಯ ನವೋದಯದಲ್ಲಿ ವೈಷ್ಣವಭಕ್ತಿಯನ್ನು ತನ್ನ ಕಾವ್ಯಗಂಗೆಯ ಮೂಲಕ ಪುನರುತ್ಥಾನಗೊಳಿಸಿದವನು ಕುಮಾರವ್ಯಾಸನೆಂದು ಅನೇಕ ವಿದ್ವಾಂಸರ ಅಭಿಮತ. ಕುಮಾರವ್ಯಾಸನ ಕಾವ್ಯದ ಬಗೆಗೆ ಬರೆಯಬಲ್ಲ ಪಾಂಡಿತ್ಯವಾಗಲೀ, ಭಾಷಾ-ಪ್ರೌಢಿಮೆಯಾಗಲೀ ಇರದಿದ್ದರೂ, ನನ್ನ ಆಯುಷ್ಯದ ಈ ಅವಧಿಯಲ್ಲಿ ಕೃತಿಯನ್ನು ಮತ್ತೆ ಓದಿದಾಗ ನನ್ನ ಮನಸ್ಸಿನಲ್ಲಿ ರೂಪುಗೊಂಡ ಕೆಲವು ಅನಿಸಿಕೆಗಳನ್ನಿಲ್ಲಿ ಅಭಿವ್ಯಕ್ತಿಸುತ್ತಿದ್ದೇನೆ. ಈ ಅನಿಸಿಕೆಗಳು ಕೃತಿಯಲ್ಲಿ ಕಂಡು ಬರುವ ಸಂಗತಿಗಳನ್ನು ಮಾತ್ರ ಆಧರಿಸಿರುವುವು.
‘ಕರ್ಣಾಟ-ಭಾರತ-ಕಥಾಮಂಜರಿ’ಯು ವಿಷಯದ ಹರಹು, ಆಳ, ವ್ಯಾಪ್ತಿ ಪ್ರಗಾಢತೆಗಳಿಂದ ಮಹಾಕಾವ್ಯದ ರಚನಾಬಂಧದಲ್ಲಿದ್ದರೂ, ಕಥಾ-ಪ್ರಸಂಗಗಳಲ್ಲಿನ ವೈವಿಧ್ಯ, ನಿರೂಪಣಾ-ಶೈಲಿ, ಮಾನವನ ಹೃದಯಾಂತರಾಳದ ಒಳನೋಟಗಳು, ಮನುಷ್ಯರ ಸಹಜ ಸ್ವಭಾವದ ಚಿತ್ರಣಗಳು ಇವುಗಳಿಂದಾಗಿ ಇದೊಂದು ಗದ್ಯ ಮಹಾಕಾವ್ಯವೋ, ಷಟ್ಪದಿಯಲ್ಲಿ ಅಡಕಗೊಳಿಸಿರುವ ಆಧುನಿಕ ಕಾದಂಬರಿಯೋ ಎನ್ನುವಂತಿದ್ದು, ಶೈಲಿಯ ಸುಭಗತೆಯಿಂದಾಗಿ ಪ್ರತಿಯೊಂದು ಪ್ರಸಂಗವೂ, ಪ್ರತಿಯೊಂದು ಪಾತ್ರವೂ ಬಲು ಬೇಗ ನಮ್ಮನ್ನಾಕ್ರಮಿಸಿ ಕೊಂಡುಬಿಡುತ್ತದೆ. ಕಾದಂಬರಿಯ ಮೆರುಗು ಪಡೆದ ಮಹಾಕಾವ್ಯದ ಭಾಷಾಪ್ರಯೋಗ ದಿಗ್ಭ್ರಮೆಗೊಳಿಸುತ್ತದೆ. ಕೃಷ್ಣಭಕ್ತಿ, ಲೋಕಾಚಾರ ಅಥವಾ ಯುಗಧರ್ಮ, ಮನುಷ್ಯ ಸ್ವಭಾವದ ಅರಿವು ಇವುಗಳ ತ್ರಿವೇಣಿ ಸಂಗಮ ಕುಮಾರ ವ್ಯಾಸನ ಭಾರತ ಕಥಾ ಮಂಜರಿ.
ಮಹಾಭಾರತದ ಮುಖ್ಯ ಸಮಸ್ಯೆಯ ಆರಂಭ, ದೇವವ್ರತನೆಂಬ ತನ್ನ ಮಗನನ್ನು ಉಳಿಸಿ ಶಂತನು ಮಹಾರಾಜನ ಅರಮನೆಯಿಂದ ಗಂಗೆಯ ನಿರ್ಗಮನದ ನಂತರದ ಸಮಯದಿಂದ. ಶಂತನು ಮಹಾರಾಜ ಯೋಜನಗಂಧಿಯ ಪ್ರೇಮ-ಕಾಮಗಳ ಸುಳಿಯಲ್ಲಿ ಸಿಲುಕಿ, ಆಕೆಯ ತಂದೆಯು ಹಾಕಿದ ಕರಾರುಗಳಿಗೊಪ್ಪಿ ಆಕೆಯನ್ನು ಮದುವೆಯಾಗುವುದರಿಂದ, ಮತ್ತು ಭೀಷ್ಮನ ಪ್ರತಿಜ್ಞೆಯಿಂದ ಸಮಸ್ಯೆ ಗಾಢವಾಗುತ್ತದೆ. ಯೋಜನಗಂಧಿಯ (ಸತ್ಯವತಿಯ) ಮಕ್ಕಳಿಬ್ಬರೂ ಮೃತರಾದಾಗ ಸಮಸ್ಯೆ ಗರಿಷ್ಠ ಮಟ್ಟವನ್ನು ತಲುಪಿ, ಸತ್ಯವತಿ, ತನ್ನ ಮೊದಲ ಮಗ ವೇದವ್ಯಾಸನನ್ನು ನನೆದು ಸೊಸೆಯರಿಗೆ ನಿಯೋಗ ಮಾಡಿಸುವುದರಿಂದ, ಮುಂದಿನ ಗೊಂದಲಗಳಿಗೆಲ್ಲಾ ನಾಂದಿ ಹಾಡುತ್ತಾಳೆ. ಹೀಗೆ ನಿಯೋಗ ಪದ್ಧತಿಯ ಮೂಲಕ, ವೇದವ್ಯಾಸನಿಂದ ಹುಟ್ಟಿದ ಮಕ್ಕಳೇ ‘ಗತಾಂಬಕ’, ಹುಟ್ಟುಕುರುಡ ಧೃತರಾಷ್ಟ್ರ, ಪಾಂಡು ಹಾಗೂ ದಾಸೀಪುತ್ರ ವಿದುರ. ಈ ಮೂರೂ ಮಕ್ಕಳು “ಹರಿಣ ಪಕ್ಷದ ನಳಿನರಿಪುವಿನವೊಲ್” (ಆದಿಪರ್ವ 3.11) ಬೆಳೆಯುತ್ತಾರೆ.
ಧೃತರಾಷ್ಟ್ರ ಅಂಧನೆಂದು ಪಾಂಡುವೇ ಮಹೀಶ್ವರನಾಗುತ್ತಾನೆ. ಮಿತ್ರರಾಜರು ಓಲೈಸುವುದೂ ಅವನನ್ನೇ, ಜೊತೆಗೆ ರಾಜ್ಯಾಡಳಿತವೆಲ್ಲಾ ಪಾಂಡುವಿನದೇ, ಧೃತರಾಷ್ಟ್ರನಿಗೆ ಗಾಂಧಾರಿಯೊಡನೆ ವಿವಾಹವಾಗುತ್ತದೆ. ಅದೇಕೋ ಕುಮಾರವ್ಯಾಸ ಎಲ್ಲಿಯೂ ಗಾಂಧಾರಿ ತನ್ನ ಕಣ್ಣುಗಳಿಗೆ ಪಟ್ಟಿಯನ್ನು ಕಟ್ಟಿಕೊಂಡ ಘಟನೆಯನ್ನು ವರ್ಣಿಸಿಲ್ಲ. ಪಾಂಡುವಿಗೆ ಕುಂತಿ ಮಾದ್ರಿಯರೊಡನೆ ವಿವಾಹವಾಗುತ್ತದೆ. ಪಾಂಡು ಪೌರುಷಹೀನನೆಂದೇನೂ ನಿರೂಪಿಸಲಾಗಿಲ್ಲ. ಆದರೆ, ಮುನಿ-ಮೃಗ-ಮಿಥುನವನ್ನು ತಿಳಿಯದೇ ಅಂಬು ಹೂಡಿ ಕೊಂದಿದ್ದರಿಂದಾಗಿ ಶಾಪಗ್ರಸ್ತನಾಗುತ್ತಾನೆ. ಸಂಭೋಗನಿಷಿದ್ಧನಾಗುತ್ತಾನೆ. ಈ ಶಾಪದಿಂದ ವ್ಯಥಿತನಾದ ಪಾಂಡು ಕುಂತೀ ಮಾದ್ರೀ ಸಮೇತ ವನಕ್ಕೆ ತೆರಳುತ್ತಾನೆ.
‘ಆದಿಪರ್ವ’ದ ನಾಲ್ಕನೆಯ ಸಂಧಿಯ 8,9,10 ನೆಯ ಪದ್ಯಗಳಲ್ಲಿ ತಿಳಿದು ಬರುವ ಸಂಗತಿ ಹೀಗಿದೆ. ಧೃತರಾಷ್ಟ್ರ, ಪಾಂಡು ಇಬ್ಬರಿಗೂ ಮಕ್ಕಳಿಲ್ಲ. ಪಾಂಡುವೇನೋ ಮುನಿಯ ಶಾಪಗ್ರಸ್ತ, ಅವನಿಗೆ ಸಂಭೋಗವೇ ನಿಷಿದ್ಧ (ಮರಣ ತರುವಂತಹದು) ಆದರೆ ಧೃತರಾಷ್ಟ್ರನಿಗಾದರೂ ಮಕ್ಕಳೇ? ಇಲ್ಲ. ಮುನಿ ವೇದವ್ಯಾಸರು ಅರಮನೆಗೆ ಬಂದಾಗ ಹೇಳುತ್ತಾರೆ ಇದು
“ನೃಪ ಪರಂಪರೆಯಿಂದ ಬಂದೀ
ವಿಪುಳ ವಂಶಸ್ಥಿತಿ ವಿಸರ್ಗ”
(ಆದಿಪರ್ವ 4.8)
“ಭರತ ಕುಲದಲ್ಲಿ ಮಕ್ಕಳಿಲ್ಲದ
ಕೊರತೆ, ಕೋಮಲ ಸೌಖ್ಯಲತೆಗಿದು
ಕರಗಸವಲಾ...”
(ಆದಿಪರ್ವ 4.10)
ಇದನ್ನು ಪರಿಹರಿಸಲು, ವೇದವ್ಯಾಸ ಮುನಿಗಳು, ಧೃತರಾಷ್ಟ್ರನಿಗೆ ಕಟ್ಟೇಕಾಂತದಲ್ಲಿ “ಮಂತ್ರಪಿಂಡಕ”ವನ್ನು ಕೊಟ್ಟು, ಅದನ್ನು ತನ್ನ ಗರ್ಭದಲ್ಲಿ ಧರಿಸುವಂತೆ ಗಾಂಧಾರಿಗೆ ಕೊಡಲು ಹೇಳುತ್ತಾರೆ. “ಧರಿಸಿದಳು ಗಾಂಧಾರಿ ಗರ್ಭೋತ್ಕರವ” (ಆದಿಪರ್ವ 4.11) ಎನ್ನುತ್ತಾನೆ ಕುಮಾರವ್ಯಾಸ. ಅಂದರೆ ದುರ್ಯೋಧನಾದಿ ನೂರು ಮಕ್ಕಳು ಧೃತರಾಷ್ತ್ರ ಗಾಂಧಾರಿಯರ ನೇರ ದಾಂಪತ್ಯದ ಫಲವಾಗಿ ಜನಿಸಿದವರಲ್ಲವೇ? ಇವರೂ ಕೂಡ ಧೃತರಾಷ್ಟ್ರನ ನೇರ ಸಂತತಿಯಲ್ಲವೇ? ‘ಮಂತ್ರ ಪಿಂಡಕ’ದಿಂದ ಗರ್ಭ ತಳೆದ ಗಾಂಧಾರಿ ಎರಡು ವರ್ಷ ಕಳೆದರೂ ಹೆರಿಗೆಯಾಗಿ ಮಕ್ಕಳಾಗದಿದ್ದಾಗ, ಬೇಸರಗೊಂಡಿರುತ್ತಾಳೆ. ಅದೇ ಸಮಯದಲ್ಲಿ ಕಾಡಿನಲ್ಲಿದ್ದ ಕುಂತಿ ಮಂತ್ರದ ಪ್ರಭಾವದಿಂದ ಯಮನನ್ನು ಕರೆಸಿ ಧರ್ಮರಾಯನನ್ನು ಪಡೆದುದನ್ನು ಕೇಳಿ ಗಾಂಧಾರಿ, ಅಸಹನೆ, ಬೇಗುದಿ, ಅಸೂಯೆಗಳಿಂದ (ಎರಡು ವರ್ಷಗಳು ಗರ್ಭಹೊತ್ತರೂ ಹೆರಿಗೆಯಾಗದಾಗ ಹೆಣ್ಣಿಗದು ಸಹಜವೇ)
“…ಮುನಿಪತಿ ಠೌಳಿಕಾರನಲಾ, ಸುಡೀ ಗ-
ರ್ಭಾಳಿಗಳನೆಂ ದಬಲೆ ಹೊಸೆದಳು ಬಸಿರನೊಡೆಮುರಿದು”
(ಆದಿಪರ್ವ 4.41)
“ಉದುರಿದವು ಧರಣಿಯಲಿ ಬಲು ಮಾಂ-
ಸದ ಸುರಕ್ತದ ಫಟ್ಟಿಗಳು ಖಂ-
ಡದ ಸುಢಾಳದ ಜಿಗಿಯ ಪೇಸಿಕೆ ನಿಕರ ನೂರೊಂದು.”
(ಆದಿಪರ್ವ 4.42)
ಅವನ್ನು ಗಾಂಧಾರಿ “ವಾಮಾಂಘ್ರಿಯಲಿ ಕೆದಕಿ ನೂಕಿ” “ಹಾಯ್ಕಿವ ಹೊರಗೆ” (ಆದಿಪರ್ವ 4.42) ಎನ್ನುತ್ತಾಳೆ ಮತ್ತೆ ವೇದವ್ಯಾಸ ಮುನಿ ಪ್ರವೇಶಿಸಿ ನೂರೊಂದು ಪಿಂಡಗಳನ್ನೂ ತುಪ್ಪದ ಕೊಪ್ಪರಿಗೆಗಳಲ್ಲಿಟ್ಟು, ಮಂತ್ರ ಜಲ ಪ್ರೋಕ್ಷಿಸಿ ರಕ್ಷಿಸಿಡುವಂತೆ ಹೇಳುತ್ತಾನೆ. ಈ ಘೃತದ ಕೊಪ್ಪರಿಗೆಗಳು, ಮಂತ್ರಜಲ ಯಾವುದೇ ಸೋಂಕು ತಗುಲಿದಂತೆ ರಕ್ಷಿಸುವಂತಹ ಶಕ್ತಿಯಿರುವಂತಹುದಿರಬಹುದು.
ದುರ್ಯೋಧನಾದಿಗಳೂ ಕೂಡ ನೇರವಾಗಿ ಧೃತರಾಷ್ಟ್ರನಿಂದ ಹುಟ್ಟಿರದಿದ್ದರೆ, ದುರ್ಯೋಧನನಿಗೆ ಪಾಂಡವರನ್ನು ಪಾಂಡುವಿಗೆ ಹುಟ್ಟಿದವರಲ್ಲ ಎಂದು ಟೀಕಿಸಲು ಹೇಗೆ ಸಾಧ್ಯವಾಗುತ್ತದೆ? ಇದು ಒಂದಿಷ್ಟು ಗೊಂದಲಗೊಳಿಸುವ ಸಂಗತಿ. ಕುಮಾರವ್ಯಾಸ ಕೌರವಾದಿಗಳ ಜನನವನ್ನು ವರ್ಣಿಸಿರುವ ರೀತಿಯಿದು. ಜನನ ಪೂರ್ವದಲ್ಲಿಯೇ ವಿಕೃತಿಗೊಂಡು, ಭಗ್ನಗೊಂಡು, ಮತ್ತೆ ಮುನಿಯ ಆಶೀರ್ವಾದದಿಂದ ರೂಪುತಳೆದ ಮಂತ್ರಪೂತಶಕ್ತಜೀವಗಳು ಅವು
“……ನೂರು ದಿನ ಪರಿ
ಯಂತ ರಕ್ಷಿಸು ಬಳಿಕ ನಿನ್ನಯ
ಸಂತತಿಯ ಸಾಮರ್ಥ್ಯವನು ಗಾಂಧಾರಿ ನೋಡೆಂದು”
(ಆದಿಪರ್ವ 4.46)
ಹೇಳಿ ಮುನಿ ಹಿಂತಿರುಗುತ್ತಾನೆ. ಕುಮಾರವ್ಯಾಸ ಈ ಎಲ್ಲ ಮಕ್ಕಳ ಜನನವನ್ನು ವಿವರಿಸುವ ಮೊದಲು ಕರ್ಣ ಜನನವನ್ನು ವಿವರಿಸುತ್ತಾನೆ.
ದೂರ್ವಾಸ ಮಹರ್ಷಿಯ ಸೇವೆ ಮಾಡಿ ಅವರಿಂದ ಪಡೆದ ಮಂತ್ರವನ್ನು ಪರೀಕ್ಷೆ ಮಾಡುವ ಕುತೂಹಲದಿಂದ
"ಮಗುವುತನದಲಿ ಬೊಂಬೆಯಾಟಿಕೆ
ಮಗುವನೇ ತಹೆನೆಂದು ಬಂದಳು
ಗಗನನದಿಯಲಿ ಮಿಂದಳು...
...ಮುನಿಪನ ಮಂತ್ರವನು ನಾ
ಲಿಗೆಗೆ ತಂದಳು ರಾಗ ರಸದಲಿ
ಗಗನಮಣಿಯನು ನೋಡಿ ಕಣ್ಮುಚ್ಚಿದಳು ಯೋಗದಲಿ”
(ಆದಿಪರ್ವ 3.17)
ಧರೆಗಿಳಿದು ಬಂದ ಸೂರ್ಯ
“ಕನ್ನಿಕೆಯ ಮುಟ್ಟಿದನು, ಮುನ್ನಿನ
ಕನ್ನೆತನ ಕೆಡದಿರಲಿ...”
(ಆದಿಪರ್ವ 3.19)
ಎನುತ ತನ್ನ ರಥವಿದ್ದೆಡೆಗೆ ಹಿಂತಿರುಗುತ್ತಾನೆ. ತತ್‍ಕ್ಷಣವೆ ಕುಂತಿ
“...ಥಳಥಳಿಪ ತೊಳಗುವ ತನುಚ್ಛವಿಯ
ಕುರುಳುದಲೆ, ನಿಟ್ಟೆಸಳುಗಂಗಳ,
ಚರಣ ಕರಪಲ್ಲವದ ಕೆಂಪಿನ
ವರಕುಮಾರನ...”
(ಆದಿಪರ್ವ 3.20)
ಕಾಣುತ್ತಾಳೆ. ಆದರೆ, ಕುಂತಿ ಪಾಂಡುವಿನೊಡನೆ ಅರಣ್ಯದಲ್ಲಿ ಧರ್ಮ, ಇಂದ್ರಾದಿ ದೇವತೆಗಳಿಂದ ಮಕ್ಕಳು ಪಡೆವಾಗ ನವಮಾಸ ಗರ್ಭಧರಿಸಿದಳೆಂದು ನಿರೂಪಿಸಲಾಗಿದೆ.
ಕಾಡಿನಲ್ಲಿದ್ದ ಕುಂತಿ ಗಾಂಧಾರಿ ಗರ್ಭಿಣಿಯಾದದ್ದನ್ನು ತಿಳಿದು ಗಾಂಧಾರಿಯ “ಸುತರ ಸುತರಾಸುತರ ಸೂನುಗಳು ಅವತರಿಸಿ ರಾಜ್ಯ ಅವರತ್ತಲೆ ಸರಿವುದು” (ಆದಿಪರ್ವ 4.28) ಎಂಬ ಕಾರಣದಿಂದ, ತಾನು ಮಂತ್ರಪುರಶ್ಚರಣದಿಂದ ಮಕ್ಕಳು ಪಡೆಯುವಂತಹ ವರವನ್ನು ಪಡೆದಿರುವ ಸಂಗತಿಯನ್ನು ಪಾಂಡುವಿಗೆ ತಿಳಿಸುತ್ತಾಳೆ ಹಾಗೂ ಮಕ್ಕಳನ್ನು ಪಡೆಯಲು ಪಾಂಡುವಿನ ಅಪ್ಪಣೆ ಪಡೆಯುತ್ತಾಳೆ. ಕುಮಾರವ್ಯಾಸನಲ್ಲಿ ದೇವತೆಗಳು ಬಂದು ಕುಂತಿಯನ್ನು ಸುಮ್ಮನೆ ಮುಟ್ಟುತ್ತಾರಷ್ಟೆ. ನಿಯೋಗವೆಂಬ ಪದದ ಉಪಯೋಗವೇ ಇಲ್ಲ. ಮಂತ್ರಶಕ್ತಿಯಿಂದ ಕೇವಲ ಸ್ಪರ್ಶಮಾತ್ರದಿಂದ ಗರ್ಭ ತಳೆಯುವ ಪವಾಡವಿದೆ. ಕುಂತಿ, ಗಾಂಧಾರಿ ಇಬ್ಬರಲ್ಲಿಯೂ ಹೆಣ್ಣಿಗೆ ಸಹಜವಾದ ಛಲ, ಅಸೂಯೆಗಳನ್ನು ಕುಮಾರವ್ಯಾಸ ಅತ್ಯಂತ ಸಹಜವಾಗಿ ಚಿತ್ರಿಸಿ, ಕುಂತಿಯಿಂದಲೇ ಹೆಣ್ಣಿನ ಈ ಸ್ವಭಾವವನ್ನು ತಿಳಿಸುತ್ತಾನೆ. ಕುಂತಿ ಪಾಂಡುವಿನೊಡನೆ ಹೇಳುತ್ತಾಳೆ "ನಾರಿಯರು ಮತ್ತಲ್ಲಿ ರಾಜಕುಮಾರಿಯರು ಛಲವಾದಿಗಳು. ಗಾಂಧಾರಿಗಾದುದು ಪುತ್ರಸಂತತಿಯೆಂಬ ಭೇದದಲಿ ಬಿನ್ನವಿಸುವೆನು ಕಾರ್ಯಭಾರವನು.” (ಆದಿಪರ್ವ 4.30) ಕವಿ ನೇರವಾಗಿ ಹೆಣ್ಣನ್ನು ಅಸೂಯಾಪರಳೆಂದು ದೂಷಿಸದೆ ಹೆಣ್ಣಿನಿಂದಲೇ ಹೆಣ್ಣಿನ ಸ್ವಭಾವ ವಿಶ್ಲೇಷಣೆ ಮಾಡಿಸಿರುವ ಕೌಶಲ್ಯ ಮೆಚ್ಚತಕ್ಕದ್ದೇ. ಗಾಂಧಾರಿ ಪತಿವ್ರತೆಯೆನಿಸಿದಳೆಂದಿದೆ ಹೊರತು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದು ದಾಖಲಾಗಿಲ್ಲ. ಆ ಸಂಗತಿ ಜನಜನಿತವಾಗಿ ಎಲ್ಲರಿಗೂ ತಿಳಿದದ್ದೆಂದು ಕೈಬಿಟ್ಟಿರಬಹುದೇ? ಆದರೆ ಹಾಗೆಲ್ಲ ಬಿಡುವವನಲ್ಲ ಕುಮಾರವ್ಯಾಸ.
ಪಾಂಡವ ಕೌರವರ ಜನನ, ಬಾಲ್ಯ, ಹಗೆತನದ ಬೆಳವಣಿಗೆ
(ಕುಮಾರವ್ಯಾಸನಲ್ಲಿ ಕಂಡು ಬರುವಂತೆ)
ಮುನಿಗಳ ಮಂತ್ರದ ಅನುಗ್ರಹದಿಂದ ಸಂತಾನ ಪಡೆದರೆ “ದುಷ್ಕೀರ್ತಿವಧು ಎಂಜಲಿಸಳೇ ಕುಲವ?” (ಆದಿಪರ್ವ 4.32) ಎಂದು ಪತಿಯನ್ನು ಪ್ರಶ್ನಿಸುತ್ತಾಳೆ ಕುಂತಿ. ಪಾಂಡು, ಕುಂತಿಯ ಈ ಧರ್ಮ ಸೂಕ್ಷ್ಮದ ಪ್ರಶ್ನೆಗೆ ಹೀಗೆ ಉತ್ತರಿಸುತ್ತಾನೆ.
“...ತದ್ವೀಜ ಪಾರಂ-
ಪರೆ ಮುರಿಯೆ ತತ್ ಕ್ಷೇತ್ರದಲಿ ಮುನಿ-
ವರರ ಕಾರುಣ್ಯದಲಿ ಪುತ್ರೋದ್ಭವವದೇ ವಿಹಿತ
ಪರಮ ವೈದಿಕ ಸಿದ್ಧವಿದು…”
(ಆದಿಪರ್ವ 4.33)
ಎಂದು ಪತ್ನಿಗೆ “ಕೃತ ಶತ್ರು ವಿನಾಶರನು ಬೆಸಲಾಗು ಹೊಗೆನ್ನಾಣೆ” (ಆದಿಪರ್ವ 4.35) ಹೋಗೆನ್ನುತ್ತಾನೆ.
ತರುಣಿ ಪಾಂಡುವಿನಾಜ್ಞೆಯನು ನಿಜ-
ಶಿರದೊಳಾಂತು ಸಮಸ್ತ ಮುನಿ ಮು-
ಖ್ಯರಿಗೆ ವಂದಿಸಿ, ಹರಿಹರಬ್ರಹ್ಮಾದಿಗಳಿಗೆರಗಿ
ಸರಸಿಯಲಿ ಮಿಂದಳು ಮುನೀಂದ್ರನ
ಪರಮ ಮಂತ್ರಾಕ್ಷರವ ತಾನು-
ಚ್ಛರಿಸಿ, ನೆನೆದಳು ಯಮನನಾಕ್ಷಣವಾತನೈತಂದ”
(ಆದಿಪರ್ವ 4.36)
ತನ್ನನ್ನು ಕರೆದ ಕಾರಣವೇನೆನಲು “…ಲಜ್ಜಾವನತಮುಖಿಯಾಗಿ ಸುತನ ಕರುಣಿಪುದೆನಲು, ಭಯ ಪರಿವಿತತ ವಿಮಲ ಸ್ವೇದ ಜಲ ಕಂಪಿತೆಯ ಮುಟ್ಟಿ ತಥಾಸ್ತು ಎನುತ ಕೃತಾಂತ…” (ಆದಿಪರ್ವ 4.37) ಬೀಳ್ಕೊಳ್ಳುತ್ತಾನೆ. ಈ ಮೊದಲ ಹಂತದಲ್ಲಿ ಮಾತ್ರ ಕೇವಲ ಸ್ಪರ್ಶ ಮಾತ್ರದಿಂದ ಗರ್ಭಕಟ್ಟುವ ಪವಾಡವಿದ್ದರೂ, ನಂತರದ ಒಂಭತ್ತು ತಿಂಗಳುಗಳ ಗರ್ಭಧಾರಣೆ, ಪ್ರಸವ ಎಲ್ಲವೂ ಸಹಜವಾಗಿಯೇ ನಡೆದವೆಂದು ವಿವರಿಸಲ್ಪಟ್ಟಿದೆ. ಧರ್ಮಜ ಜನಿಸಿದಾಗ “ನಿರ್ಮಲಿನವಾಯ್ತಖಿಲದೆಸೆ, ದುಷ್ಕರ್ಮತತಿ ಬೆಚ್ಚಿದುದು, ಸಾಕ್ಷಾತ್ ಧರ್ಮವೇ ಧರಣಿಯಲ್ಲಿ ನೃಪರೂಪಾಗಿ| ಜನಿಸಿತಲ” (ಆದಿಪರ್ವ 4.39) ಎಂದು ಮುನಿನಿಕರ ಸಂತಸ ಪಡುತ್ತದೆ. ಕುಂತಿ ಮಕ್ಕಳನ್ನು ಪಡೆಯುವುದರಲ್ಲಿ ರಹಸ್ಯವಾಗಲೀ, ಕೃತ್ರಿಮವಾಗಲೀ ಇರದೆ ಎಲ್ಲರ-ಗಂಡನೊಬ್ಬನದೇ ಅಲ್ಲ – ಅನುಮತಿಯಿದೆ, ಧರ್ಮಕ್ಕೆ ಚ್ಯುತಿ ಬರುವ ಕಾರ್ಯವಾಗಿಲ್ಲ ಅದು.
ಧರ್ಮಜನ ನಂತರ ಕುಂತಿ ಇದೇ ರೀತಿ ಬೀಜಮಂತ್ರ ಜಪಿಸಿ ವಾಯುದೇವನನ್ನು ಬರಮಾಡಿಕೊಂಡು “ತನ್ನನ್ನು ಬರಿಸಿದ ಹದನೇನೆಂದು” (ಆದಿಪರ್ವ 4.47) ಆತ ಕೇಳಿದಾಗ “ಸುತನ ಕರುಣಿಸುವುದೈಸಲೆ” (ಆದಿಪರ್ವ 4.48) ಎನ್ನುತ್ತಾಳೆ. ವಾಯುವೂ ಕೂಡ ಸಂಸ್ಪರುಶದಿ “ಭವದಿಷ್ಟಮಸ್ತು” (ಆದಿಪರ್ವ 4.48) ಎನುತ ಅಂಬರಕ್ಕೆ ಮರಳುತ್ತಾನೆ. ಭೀಮನು ಅವನಿಸುತವಾರ ತ್ರಯೋದಶಿ ಮಘ ನಕ್ಷತ್ರ ಶುಭ ಗ್ರಹ ಶುಭಲಗ್ನದಲಿ ಉದಯದಲಿ ಜನಿಸಿದನೆಂದು ಹೇಳುತ್ತಾನಲ್ಲದೆ, “ಅಹಿತ ಪಾರ್ಥಿವ ನಿವಹ ನಡುಗಿತು” (ಆದಿಪರ್ವ 4.49) ಭೀಮಸೇನನ ಜನನದದ್ಭುತದಲಿ ಎಂದೂ ತಿಳಿಸುತ್ತಾನೆ. (ಅಹಿತ ಪದವನ್ನು ಶತ್ರು ಎಂಬುರ್ಥದಲ್ಲಿ ಉಪಯೋಗಿಸುತ್ತಾನೆ ಕವಿ).
ಭೀಮನ ಜನನವನ್ನು ವಿವರಿಸಿದ ಪದ್ಯದ ನಂತರದ ಪದ್ಯದಲ್ಲಿಯೇ ದುರ್ಯೋಧನನ ಜನನವನ್ನೂ, ಅವನ ಜನನದ ನಂತರ ಉಂಟಾದ ಪ್ರಾಕೃತಿಕ ಉತ್ಪಾತಗಳನ್ನು ವಿವರಿಸುತ್ತಾನೆ. ಈ ಇಬ್ಬರ ಜನನ ವೃತ್ತಾಂತ, ಅದರ ಪರಿಣಾಮಗಳನ್ನು ಒಂದಾದ ನಂತರ ಒಂದು ಪದ್ಯದಲ್ಲಿ ವಿವರಿಸಿ ಅವರಿಬ್ಬರದೂ ಸಮವಯಸ್ಸೆಂದು ತಿಳಿಸುತ್ತಾನೆ. ಈ ಸಮವಯಸ್ಸು ಭೀಮ ದುರ್ಯೋಧನರಲ್ಲಿ ಪರಸ್ಪರ ಸ್ಫರ್ಧೆಗೆ, ಹಗೆತನಕ್ಕೆ ಪುಷ್ಟಿ ಕೊಡುತ್ತದೆಯೆನಿಸುತ್ತದೆ. ಸಮಾನ ಮನೋಧರ್ಮವಿರುವಲ್ಲಿ ಸಮವಯಸ್ಸು ಸ್ನೇಹವರ್ಧನೆಗೆ ಸಾಧನ, ಕಾರಣವಾದರೆ, ವಿಭಿನ್ನ ಮನೋಧರ್ಮವಿರುವಲ್ಲಿ ಸಮವಯಸ್ಸು ಸಾಧಾರಣವಾಗಿ ಹಗೆತನಕ್ಕೆ ಪುಷ್ಟಿನೀಡುತ್ತದೆಂಬುದು ಭೀಮ-ದುರ್ಯೋಧನರ ನಡುವೆ ಬೆಳೆಯುವ ಹಗೆತನದಿಂದ ಧೃಢೀಕರಿಸಲ್ಪಡುತ್ತದೆ. ಭೀಮ-ದುರ್ಯೋಧನರ ನಡುವಿನ ಸಂಬಂಧದ ಚಿತ್ರಣದಲ್ಲಿ ಮಾನವ ಸಂಬಂಧಗಳ, ಅದರಲ್ಲಿಯೂ ಸೋದರರ, ದಾಯಾದಿ ಸಂಬಂಧಗಳಲ್ಲಿ ಹುದುಗಿರುವ ಅನೇಕ ಆಯಾಮಗಳು ತೆರೆದುಕೊಳ್ಳುತ್ತವೆ, ಹಾಗೂ ಇಂಥ ಸಂಬಂಧಗಳಲ್ಲಿನ ಅನೇಕ ಮನೋವೈಜ್ಞಾನಿಕ ಸತ್ಯಗಳ ಬಗೆಗಿನ, ಕುಮಾರವ್ಯಾಸನ ಒಳನೋಟಗಳ ಅರಿವಾಗುತ್ತದೆ.
ದುರ್ಯೋಧನನ ಜನನ ಕಾಲದಲ್ಲಿ ಉಂಟಾದ ಉತ್ಪಾತಗಳ ಫಲವನ್ನು ಕೇಳಲಾಗಿ “ಭರತ ವಂಶವನ್ನುಳಿದ ಭೂಮೀಶ್ವರರ ಕುಲವನೀತನೇ ಸಂಹರಿಸುವ” (ಆದಿಪರ್ವ 4.51) ನೆಂದು ತಿಳಿದುಬರುತ್ತದೆ. ಆಗ ವಿದುರ
“ಕುಲಕೆ ಕಂಟಕನಾದೊಡೊಬ್ಬನ
ಕಳೆವುದೂರಳಿವಿನಲಿ ಕಳೆವುದು
ಕುಲವನೊಂದನು ದೇಶದಳಿವಿನಲೂರ ಕೆಡಿಸುವುದು,
ಇಳೆಯನಖಿಳಿವ ಬಿಸುಡುವುದು ತ-
ನ್ನುಳಿವ ಮಾಡುವುದೆಂಬ…”
(ಆದಿಪರ್ವ 4.52)
ಎಂಬ ಹಿತವಚನ ಹೇಳಿ ಈ ಮಗುವನ್ನು ಬಿಸುಟು ಕಳೆ ಎನ್ನುತ್ತಾನೆ. ದುರ್ಯೋಧನ ಬೆಳೆದಂತೆ ಅರಮನೆಯ ದಾಸದಾಸಿಯರಿಂದ, ತನ್ನ ಹುಟ್ಟು, ಹುಟ್ಟಿನ ವಿವರ, ಉತ್ಪಾತದ ಫಲ, ವಿದುರನ ಸಲಹೆ, ತಂದೆ ತಾಯಿಯರು ಮಮತೆಯಿಂದ ತನ್ನ ತ್ಯಜಿಸದಿದ್ದುದು ಎಲ್ಲವೂ ಅವನಿಗೆ ತಿಳಿದಿರಬಹುದು. ಆದರೆ ಸಾಲು ಸಾಲು ನೂರು ಜನ ತಮ್ಮಂದಿರು, ಕಿರುಬೆರಳಿನಲ್ಲಿ ಕುಣಿಸಬಹುದಾದಂತಹ ತಂದೆ ತಾಯಿ, ಎಲ್ಲರೂ ತನ್ನವರಾಗಿರುವಾಗ ಯಾರ ಅಂಕೆ, ಯಾರ ಭಯ ತನಗೇಕೆ? ಪಿಂಡ ಒಡೆದು ಕೂಡಿದ ಖಂಡಿಕ ಜನನ, ಅರಮನೆಯ ಪರಿಸರ, ತಂದೆಯ ಅಂಧತ್ವ, ತಾಯಿಯ ಪ್ರೀತಿ, ತನ್ನ ಬಗೆಗೆ ನುಡಿದಿದ್ದ ಭವಿಷ್ಯ ಎಲ್ಲವೂ ಅವನ ಹದಿಹರೆಯದ ವಯಸ್ಸಿನಲ್ಲಿ, ಪಾಂಡವರು ಹಸ್ತಿನಾವತಿಗೇ ಬಂದು ಅರಮನೆಯಲ್ಲಿರತೊಡಗಿದಾಗ, ಹೊರಗೆ ಧುಮುಕತೊಡಗುತ್ತದೆ. ಅದರಲ್ಲಿಯೂ ನೇರ ಪ್ರತಿ ಸ್ಪರ್ಧಿ ಭೀಮನ ಮೇಲೆ.
ಆ ಭೀಮಸೇನನಾದರೂ ಅದೆಂತಹ ಶಿಶು! ಒಂದು ದಿನ ಕಾಡಿನ ತಪೋವನದಲ್ಲಿ ಹೆಬ್ಬುಲಿಯೊಂದು ಮೊರೆಯುತ್ತಾ ಬಂದಾಗ, ತಪೋಧನರು ಹೆದರುತ್ತಾರೆ. ಆಗ ಪಾಂಡು ಆ ಹೆಬ್ಬುಲಿಯನ್ನು ಕೊಲ್ಲುತ್ತಾನೆ. ಪರ್ವತ ಶಿಖರವೊಂದರಲ್ಲಿ ಶಿಶು ಭೀಮನನ್ನು ತೊಡೆಯ ಮೇಲೆ ಮಲಗಿಸಿಕೊಂಡಿದ್ದ ಕುಂತಿ ಆ ಹುಲಿಯ ಗರ್ಜನೆಗೆ ಬೆದರಿ ನಡಗುತ್ತಾಳೆ. ತೊಡೆಯ ಮೇಲಿದ್ದ ಮಗು ಕೆಳಗಿದ್ದ ಬಂಡೆಯ ಮೇಲಕ್ಕೆ ಉರುಳುತ್ತದೆ. ಪರಿಣಾಮ? “ತಚ್ಛೈಲ ಶಿಲೆ ನಿರ್ನಾಮವಾದುದು ಹಸುಳೆ ಹೊರಳಿ ಬಿದ್ದ ಭಾರದಲಿ.” (ಆದಿಪರ್ವ 4.57)
This is the first part of an eighteen-part essay on the Kumaravyāsa-Bhārata by Prof. L. V. Shantakumari. Thanks to Smt. Kanchana Karki and Avādhanī Ganesh Bhat Koppalatota for reviewing. Edited by G S Raghavendra.