ಅಭಿನವಗುಪ್ತನು ಮತ್ತೊಂದು ಕಡೆಯೂ (ಸಂ.೧, ಪು.೨೮೦) ರಸ ಮತ್ತು ಪುರುಷಾರ್ಥಗಳ ಸಂಬಂಧವನ್ನು ಚರ್ಚಿಸುತ್ತಾನೆ. ಅವನ ಪ್ರಕಾರ ರತಿಭಾವದಿಂದ ಉದ್ಭವಿಸುವ ಶೃಂಗಾರರಸವು ಕಾಮವೆಂಬ ಪುರುಷಾರ್ಥಕ್ಕೆ ಸಂವಾದಿ. ಅಂತೆಯೇ ಕ್ರೋಧಭಾವದಿಂದ ಹೊಮ್ಮುವ ರೌದ್ರರಸವು ಅರ್ಥಕ್ಕೆ ಸಂವಾದಿ. ಇದೇ ರೀತಿ ಧರ್ಮಕ್ಕೆ ಉತ್ಸಾಹಮೂಲದ ವೀರರಸವು ಸಂವಾದಿ. ಮೋಕ್ಷಕ್ಕಂತೂ ತತ್ತ್ವಜ್ಞಾನದಿಂದ ಹೊಮ್ಮುವ ನಿರ್ವೇದವೆಂಬ ಭಾವಮೂಲವಾದ ಶಾಂತರಸವೇ ಸಂವಾದಿ. “ದಶರೂಪಕಾಧ್ಯಾಯ”ದಲ್ಲಿಯೂ ಒಂದು ಕಡೆ ನಾಟಕ ಮತ್ತು ಪ್ರಕರಣಗಳ ಪುರುಷಾರ್ಥಪಾರಮ್ಯವನ್ನು ಚರ್ಚಿಸುತ್ತ ವಿವಿಧರಸಗಳಿಗೆ ಪುರುಷಾರ್ಥಗಳು ಹೇಗೆ ಹೊಂದಿಕೊಂಡು ಬರುತ್ತವೆಂಬುದನ್ನು ವಿಸ್ತರಿಸುತ್ತಾನೆ. ಇಲ್ಲಿಯೂ ರೌದ್ರರಸವನ್ನು ಅರ್ಥಕ್ಕೆ ಒಪ್ಪವಿಡುವುದು ಸುವೇದ್ಯ. ಹೀಗೆ ಅವನಲ್ಲಿ ರೌದ್ರರಸಕ್ಕೆ ಪುರುಷಾರ್ಥವನ್ನು ಕಲ್ಪಿಸುವ ಮತ್ತು ಕಲ್ಪಿಸದಿರುವ ಗೊಂದಲ ಅನುವರ್ತಿತವಾಗುತ್ತಿರುತ್ತದೆ. ಆದರೆ, ಮಿಕ್ಕಂತೆ ಪುರುಷಾರ್ಥಗಳನ್ನು ನೇರವಾಗಿ ಉದ್ದೇಶಿಸದ ರಸಗಳನ್ನು ಪ್ರಧಾನವಾಗಿ ಆಶ್ರಯಿಸಿದ ಉತ್ಸೃಷ್ಟಿಕಾಂಕ (ಕರುಣ), ಪ್ರಹಸನ (ಹಾಸ್ಯ, ಶೃಂಗಾರ), ಭಾಣ (ಶೃಂಗಾರ, ಹಾಸ್ಯ) ಮುಂತಾದ ರೂಪಕಗಳಲ್ಲಿ ಉತ್ತಮಾಧಿಕಾರಿಗಳೇ ಇದಕ್ಕೆ ತಕ್ಕ ರಸಿಕರೆಂಬ ಉದ್ದೇಶವಿಲ್ಲದ ಕಾರಣ ರೂಪಕನಿರ್ವಹಣೆಯು ಹೇಗೂ ಸಾಗಬಹುದು. ನಾಟಕ ಮತ್ತು ಪ್ರಕರಣಗಳಲ್ಲಿ ಮಾತ್ರ ಹೀಗಲ್ಲ. ಅಲ್ಲಿ ತ್ರಿವರ್ಗಗಳಿಗೆ ಸಂವಾದಿಗಳಾದ ರಸಗಳ ಸಮೃದ್ಧಿ ಇರಲೇಬೇಕು. ಸಮವಕಾರ (ವೀರ, ರೌದ್ರ, ಅದ್ಭುತ), ಡಿಮ (ರೌದ್ರ), ವ್ಯಾಯೋಗ (ವೀರ, ರೌದ್ರ), ಈಹಾಮೃಗ (ರೌದ್ರ, ಕರುಣ), ನಾಟಿಕಾ (ಶೃಂಗಾರ) ಮುಂತಾದ ಪ್ರಕಾರಗಳಲ್ಲಿ ಎಲ್ಲ ಪುರುಷಾರ್ಥಗಳನ್ನು ಪ್ರತಿನಿಧಿಸುವ ರಸಗಳು ಬರದಿದ್ದರೂ ಏಕದೇಶೀಯವಾಗಿಯಾದರೂ ಅವುಗಳ ಪುಷ್ಟಿಯಿರುವ ಕಾರಣ ಉತ್ತಮಾಧಿಕಾರಿಗಳಿಗೆ ಕೆಲಮಟ್ಟಿಗೆ ಸ್ವೀಕಾರ್ಯವೆನಿಸಬಹುದು. ಇನ್ನು ಕಟ್ಟಕಡೆಯದಾದ ಮೋಕ್ಷಕ್ಕೆ ಸಂವಾದಿಯಾಗಿ ಬರುವ ಶಾಂತ-ಬೀಭತ್ಸರಸಗಳು ಎಲ್ಲರಿಗೂ ಆಸ್ವಾದ್ಯವೆನಿಸವು. ಇದಕ್ಕೆ ಅತ್ಯುತ್ತಮಾಧಿಕಾರಿಗಳೇ ಆಗಬೇಕು (ಬಹುಶಃ ಈ ಕಾರಣದಿಂದಲೇ ತ್ರಿವರ್ಗಭಿನ್ನವಾದ ಮೋಕ್ಷಕ್ಕೆ “ಅಪವರ್ಗ”ವೆಂಬ ಅರ್ಥಪೂರ್ಣವಾದ ಅಭಿಧಾನವನ್ನು ಕಾಣಬಹುದು). ಹೀಗೆ ಸಾಗುತ್ತದೆ ಅಭಿನವಗುಪ್ತನ ವಾದಸರಣಿ: “ಏವಂ ಸಕಲಪುರುಷಾರ್ಥವಿಷಯಾ ವ್ಯುತ್ಪತ್ತಿರ್ನಾಟಕೇನ ಪ್ರಧಾನಸ್ಯ ರಾಜಪ್ರಾಯಸ್ಯ ಕ್ರಿಯತೇ | ಪ್ರಕರಣೇನ ಚ ಮಧ್ಯಮಪ್ರಾಯಸ್ಯ” (ಸಂ.೨, ಪು.೩೨೦). “ಇದಮಿಹ ಮೀಮಾಂಸ್ಯಮ್ | ಯ ಏತೇ ಉತ್ಸೃಷ್ಟಿಕಾದಯೋ ರೂಪಕಭೇದಾಸ್ತೇ ತಾವದೇಕರಸಾ ಏವ ಯದ್ಯಪಿ ನಾಟಕಾದಯೋऽಪ್ಯೇವಮೇವ | ತಥಾ ಹಿ ಸರ್ವರಸಯೋಗ್ಯತಾಯಾಮಪಿ ನಾಟಕೇ ಪ್ರಕರಣೇ ಚ ಧರ್ಮಾರ್ಥಾದಿವೀರ ಏವ ಪ್ರಧಾನಂ ಪರಮಾರ್ಥತಃ ಸರ್ವೇಷು ನಾಯಕಭೇದೇಷು ವೀರತ್ವಾನುಗಮದರ್ಶನಾತ್ | ಸಮವಕಾರೇ ತು ಯದ್ಯಪಿ ಹಿ ಶೃಂಗಾರಾದಿತ್ವಮುಕ್ತಂ ತಥಾಪಿ ವೀರ ಏವ ಪ್ರಧಾನಂ ರೌದ್ರೋ ವಾ | ಡಿಮವ್ಯಾಯೋಗಯೋರಪ್ಯೇವಮ್ | ಈಹಾಮೃಗೇऽಪಿ ರೌದ್ರಪ್ರಾಯಮೇವ, ನಾಟಿಕಾಯಾಂ ತು ಶೃಂಗಾರ ಏವ ಪ್ರಧಾನಮ್ | ಏವಂ ತಾವದ್ವೀರರೌದ್ರಶೃಂಗಾರಾ ಯಥಾಸ್ವಂ ಪುಮರ್ಥತ್ರಯಪ್ರಾಣಭೂತತ್ವೇನ ವರ್ತಮಾನಾ ಏತೇಷು ಪ್ರಯೋಗೇಷು ಶಾಂತಬೀಭತ್ಸರಸೌ ತು ಚರಮಪುಮರ್ಥಯೋಗಾತ್ತತ್ರ ಚ ಸರ್ವಸ್ಯ ನಾಧಿಕಾರೋऽಪಿ ಕಸ್ಯಚಿದಪಶ್ಚಿಮಜನ್ಮನೋऽಧಿಕಾರಾನ್ನಾಟಕೇ ಯದ್ಯಪಿ ತತ್ಫಲಪ್ರಧಾನತಯಾ ಪ್ರಾಧಾನ್ಯಮವಲಂಬೇಯಾತಾಂ ತಥಾಪಿ ನಾಸೌ ಪ್ರಚುರಪ್ರಯೋಗ ಇತಿ ತಯೋಃ ಪುರುಷಾರ್ಥಪ್ರವರಪ್ರಾಣಿತಯೋರಪಿ ವೀರಾದಿರಸಾಂತರಾಧ್ಯಾವಾಪೇನಾವಸ್ಥಾಪನಮ್ | ಏವಂ ತಾವತ್ಪುಮರ್ಥವಿಷಯೋ ರೂಪಕರಸವಿಷಯ ಏವ ಪರಮಾರ್ಥತಸ್ತಥಾಪಿ ತ್ವಿತಿವೃತ್ತವೈತತ್ಯಾದ್ರಸಾಂತರಪ್ರಯೋಗೋऽಪಿ ತದಂಗತಯಾ ತತ್ರ ಭವತಿ | ಏವಂ ತತ್ಪ್ರಧಾನಚೇಷ್ಟಾಯೋಗಾದ್ವೃತ್ತಿವೈಚಿತ್ರ್ಯಮತ್ರೋಚಿತಮೇವ | ಉತ್ಸೃಷ್ಟಿಕಾಂಕಪ್ರಹಸನಭಾಣಾಸ್ತು ಕರುಣಹಾಸ್ಯವಿಸ್ಮಯಪ್ರಧಾನತ್ವಾದ್ರಂಜಕರಸಪ್ರಧಾನಾಸ್ತತ ಏವಾತ್ರ ಸ್ತ್ರೀಬಾಲಮೂರ್ಖಾದಿರಧಿಕಾರೀ | ನ ಚ ವಿತತಮತ್ರೇತಿವೃತ್ತಮ್ | ಇತಿವೃತ್ತವೈಚಿತ್ರ್ಯಮಪಿ ತತ್ರ ನಾಸ್ತಿ” (ಸಂ.೨, ಪು.೩೩೨-೩೩೩). ಮೇಲಿನ ಅಭಿನವಭಾರತಿಯ ತಾತ್ಪರ್ಯವು ಬಲುಮಟ್ಟಿಗೆ ಒಪ್ಪುವಂತಿದ್ದರೂ ಗೆರೆಗೀಚಿದಂತೆ “ಇದು ಉತ್ತಮಾಧಿಕಾರಿಗಳಗೆ, ಇದು ಅಧಮಾಧಿಕಾರಿಗಳಿಗೆ” ಎಂದು ವಿಭಾಗಿಸಲಾಗದು. ವಸ್ತುತಃ ಪ್ರಾಚೀನಭಾರತೀಯಶಾಸ್ತ್ರಗಳು ವಿಧಾಯಕವೆಂಬಂತೆ (Prescriptive) ಎಷ್ಟೋ ಸಂಗತಿಗಳನ್ನು ಹೇಳಿದರೂ ಅವು ತಾತ್ಪರ್ಯದಲ್ಲಿ ಸೂಚನಾತ್ಮಕವಾಗಿರುತ್ತವೆ (Suggestive). ಈ ಮಾತನ್ನು ಒಪ್ಪಿಯೂ ವೀಥೀ-ಭಾಣ-ಪ್ರಹಸನಾದಿಗಳನ್ನು ಉತ್ತಮಾಧಿಕಾರಿಗಳು ಆಸ್ವಾದಿಸಬಲ್ಲರೆಂಬುದನ್ನು ನಾವು ಮರೆಯುವಂತಿಲ್ಲ. ಇದು ಪುರುಷಾರ್ಥಗಳ ಏಕದೇಶೀಯಪ್ರಾತಿನಿಧ್ಯವನ್ನು ವಹಿಸುವ ಡಿಮ-ವ್ಯಾಯೋಗ-ಸಮವಕಾರಾದಿಗಳಿಗೂ ಸಲ್ಲುವ ಸಂಗತಿ. ವಸ್ತುತಃ ರೂಪಕಪ್ರಪಂಚವೇ “ಗಂಭೀರ” ಮತ್ತು “ಲಘು” ಎಂಬ ಎರಡು ಮುಖ್ಯಧಾರೆಗಳಲ್ಲಿ ಹರಿದಿದೆ. ಇದು ಸಕಲಕಲಾಪ್ರಕಾರಗಳಿಗೂ ಅನ್ವಯಿಸುತ್ತದೆ. ಇವೆರಡನ್ನೂ ಸುಸಂಸ್ಕೃತವಾದ ಮನಸ್ಸು ಯುಕ್ತರೀತಿಯಲ್ಲಿ ಗ್ರಹಿಸಬಲ್ಲುದು. ಪ್ರಧಾನವ್ಯಪದೇಶವಷ್ಟೇ ಶಾಸ್ತ್ರಜ್ಞರ ಇಂಗಿತ. ಸಂವಾದಿಯಾಗಿ ಹೇಳುವುದಾದರೆ, ಅಭಿಜಾತ ಗ್ರೀಕರ ನಾಟಕಸ್ಪರ್ಧೆಗಳಲ್ಲಿ ಪ್ರತಿಯೊಬ್ಬ ಸ್ಪರ್ಧಾಳುವೂ ಮೂರು ಗಂಭೀರರೂಪಕಗಳನ್ನೂ ಒಂದು ಲಘುರೂಪಕವನ್ನೂ ರಚಿಸಿ ಕಟ್ಟಲೆಯೆಂಬಂತೆ ಪ್ರದರ್ಶನಕ್ಕೆ ನೀಡಬೇಕಿತ್ತೆಂದು ತಿಳಿಯುತ್ತದೆ. ಇದೇ ರೀತಿ “ಪೂರ್ವರಂಗಾಧ್ಯಾಯ”ದಲ್ಲಿಯೂ ಪಾರ್ವತೀ-ಪರಮೇಶ್ವರರಿಗೆ ಪ್ರತೀಕಗಳಾದ “ಚಾರಿ” ಮತ್ತು “ಮಹಾಚಾರಿ”ಗಳೆಂಬ ಎರಡು ಅಂಶಗಳನ್ನು ವಿವರಿಸುವಾಗ ಶೃಂಗಾರಪ್ರಧಾನವಾದ “ಚಾರಿ”ಯು ಕಾಮಕ್ಕೂ ರೌದ್ರಪ್ರಧಾನವಾದ “ಮಹಾಚಾರಿ”ಯು ಅರ್ಥಕ್ಕೂ ಸಂವಾದಿಗಳೆಂದಿರುವುದು ಗಮನಾರ್ಹ (ಸಂ.೧, ಪು.೨೨೦). ಆ ಬಳಿಕ ಇದೇ ಅಧ್ಯಾಯದಲ್ಲಿ ಶೃಂಗಾರ-ವೀರಗಳೇ ಪುರುಷಾರ್ಥಪ್ರತೀಕಗಳಾಗುವ ಕಾರಣ ಅವುಗಳ ಸಮೃದ್ಧಿಯನ್ನು ಎಲ್ಲೆಡೆ ಕಾಣಬಹುದೆಂದು ಒಕ್ಕಣಿಸುತ್ತಾನೆ: “ತತೋऽಪಿ ಶೃಂಗಾರ-ವೀರಯೋಃ ಸರ್ವತ್ರ ರಂಜಕಪರಮಪುಮರ್ಥತಾ-ಪ್ರಕರ್ಷಾದುಪಕ್ಷೇಪಃ” (ಸಂ.೧, ಪು.೨೨೧). ಇಲ್ಲಿ ಅರ್ಥವನ್ನು ರೌದ್ರಕ್ಕೆ ಒಪ್ಪವಿಟ್ಟಿರುವುದರ ಸೂಚನೆಯೂ ಇಲ್ಲ. ಹೀಗೆ ಅಭಿನವಗುಪ್ತನು ರಸ ಮತ್ತು ಪುರುಷಾರ್ಥಗಳನ್ನು ಸಮೀಕರಿಸುವ ಮಹತ್ತ್ವದ ಕೆಲಸವನ್ನು ಕೈಗೊಂಡಿದ್ದರೂ ಕೆಲಮಟ್ಟಿಗೆ ಗೊಂದಲವನ್ನುಳಿಸಿದ್ದಾನೆ. ಇದರ ಪರಿಷ್ಕಾರಕ್ಕೆ ಯತ್ನಿಸೋಣ. ವಸ್ತುತಃ ಕ್ರೋಧವೊಂದು ಧನಾತ್ಮಕ(Positive)ವಾದ ಭಾವವಲ್ಲದ ಕಾರಣ ಇದಕ್ಕೆ ಪುರುಷಾರ್ಥಪ್ರತಿಪಾದಕತೆ ಶಕ್ಯವಿಲ್ಲ. ನಾವು ಮೊದಲೇ ಕಂಡಂತೆ ಪ್ರಬಲನ ಅತೃಪ್ತಕಾಮವು ಕ್ರೋಧವಾಗುವ ಕಾರಣ ಇದೊಂದು ವಿಮೌಲ್ಯವಲ್ಲದೆ ಮೌಲ್ಯವಾಗದು. ಹೀಗಾಗಿ ಉತ್ಸಾಹಮೂಲದ ವೀರವೊಂದೇ ಧರ್ಮಾರ್ಥಗಳ ಪ್ರತೀಕವಾಗುತ್ತದೆ. ಅಲ್ಲದೆ ತ್ರಿವರ್ಗದಲ್ಲಿ ಪರ್ಯಂತಭೂಮಿಯಾದ ಧರ್ಮಾವಿರುದ್ಧಕಾಮಕ್ಕೆ ಧರ್ಮಾರ್ಥಗಳೆರಡೂ ಸಾಧನಭೂತಗಳಾದ ಕಾರಣ ಉತ್ಸಾಹವೊಂದೇ ಇವೆರಡನ್ನೂ ಪ್ರತಿನಿಧಿಸುವಲ್ಲಿ ಔಚಿತ್ಯವುಂಟು. ಜೊತೆಗೆ ಲಕ್ಷ್ಯಪ್ರಪಂಚವನ್ನು ಅನುಲಕ್ಷಿಸಿದಾಗಲೂ ಶೃಂಗಾರ-ವೀರಪ್ರಧಾನವಾದ ಕಾವ್ಯ-ರೂಪಕಗಳ ಪಾರಮ್ಯವನ್ನು ನಾವು ಎಲ್ಲೆಲ್ಲಿಯೂ ಕಾಣುವೆವಲ್ಲದೆ ಶೃಂಗಾರ-ರೌದ್ರಪ್ರಧಾನಕೃತಿಗಳನ್ನಲ್ಲ. ಅಷ್ಟೇಕೆ, ಶೃಂಗಾರ-ವೀರಗಳು ಪರಸ್ಪರಪೂರಕವಾಗಿ ಸಾಗುವಂತೆ ಶೃಂಗಾರ-ರೌದ್ರಗಳೆಂದೂ ಹೊಂದಿಕೊಂಡು ಬಾಳುವುದಿಲ್ಲವೆಂಬುದು ಸರ್ವಾನುಭವಸುವೇದ್ಯ. ಹೇಳಿ ಕೇಳಿ ಲಕ್ಷ್ಯಪ್ರಧಾನವಾದ—ಅತ ಏವ ಅನುಭಪರ್ಯವಸಾಯಿಯಾದ—ಈ ಶಾಸ್ತ್ರವು ಸಿದ್ಧಾಂತಾಭಾಸಗಳಿಗೆ ಬಲಿಯಾಗದೆ ಯಥಾರ್ಥಕ್ಕೆ ಬೆಲೆ ನೀಡಬೇಕೆಂಬುದು ಅವಿಸ್ಮಾರ್ಯ. ಈ ಎಲ್ಲ ಕಾರಣಗಳಿಂದ ಅಭಿನವಗುಪ್ತನ ರೌದ್ರರಸವನ್ನು ಅರ್ಥಕ್ಕೆ ಒಪ್ಪವಿಡುವ ಪ್ರಕಲ್ಪ ಅನರ್ಥವೆನ್ನದೆ ವಿಧಿಯಿಲ್ಲ.
ರಸಸೂತ್ರವನ್ನು ಕುರಿತು ಕೆಲವು ಹೊಳಹುಗಳು
ಅಭಿನವಗುಪ್ತನು ಮೂಲದ ಪ್ರತಿಯೊಂದು ಪದವನ್ನೂ ಗಮನಿಸಿ ಅರ್ಥೈಸುವುದರಲ್ಲಿ ಅದೆಷ್ಟು ಸೂಕ್ಷ್ಮಜ್ಞನೆಂಬುದಕ್ಕೆ ಅಭಿನವಭಾರತಿಯ ಆದ್ಯಂತ ಅನೇಕನಿದರ್ಶನಗಳಿವೆ. ಅಂಥ ಒಂದೆರಡು ದೃಷ್ಟಾಂತಗಳನ್ನು ನಾವೀಗ ನೋಡಬಹುದು: “ತತ್ರ ರಸಾನೇವ ತಾವದಭಿವ್ಯಾಖ್ಯಾಸ್ಯಾಮಃ | ನ ಹಿ ರಸಾದೃತೇ ಕಶ್ಚಿದರ್ಥಃ ಪ್ರವರ್ತತೇ | ತತ್ರ ವಿಭಾವಾನುಭಾವವ್ಯಭಿಚಾರಿಸಂಯೋಗಾದ್ರಸನಿಷ್ಪತ್ತಿಃ ||” (೬ನೆಯ ಅಧ್ಯಾಯ, ೩೧ನೆಯ ಶ್ಲೋಕದ ಬಳಿಕ) ಎಂಬ ಪ್ರಸಿದ್ಧವಾಕ್ಯವನ್ನು ವಿವರಿಸುವಾಗ ಇಲ್ಲಿ ಮೊದಲಿಗೆ “ರಸಾನ್” ಎಂದು ಬಂದಿರುವ ಬಹುವಚನವನ್ನೂ ಅನಂತರ “ರಸಾತ್” ಎಂಬ ಏಕವಚನವನ್ನೂ ನಿಶಿತವಾಗಿ ಪರಿಶೀಲಿಸುತ್ತಾನೆ. ಅವನ ಪ್ರಕಾರ ಲೋಕಸಾಮಾನ್ಯಾರ್ಥದಲ್ಲಿ ರಸಗಳು ಹಲವಾದರೂ ಪರಮಾರ್ಥತಃ ಎಲ್ಲ ರಸಗಳ ಪರಿಣಾಮರೂಪವಾದ ಆನಂದವು ಒಂದೇ ಎಂಬ ನಿಟ್ಟಿನಲ್ಲಿ ರಸಾದ್ವೈತವೇ ಸಿದ್ಧಾಂತ: “ಪೂರ್ವತ್ರ ಬಹುವಚನಮತ್ರ ಚೈಕವಚನಂ ಪ್ರಯುಂಜಾನಸ್ಯಾಯಮಾಶಯಃ—ಏಕ ಏವ ತಾವತ್ಪರಮಾರ್ಥತೋ ರಸಃ | ಸೂತ್ರಸ್ಥಾನೀಯತ್ವೇನ ರೂಪಕೇ ಪ್ರತಿಭಾತಿ | ತಸ್ಯೈವ ಪುನರ್ಭಾಗದೃಶಾ ವಿಭಾಗಃ |” (ಸಂ.೧, ಪು.೨೭೦) ಅಂತೆಯೇ ರಸಸೂತ್ರದಲ್ಲಿ ವಿಭಾವ-ಅನುಭಾವ-ವ್ಯಭಿಚಾರಿಭಾವಗಳ ಉಲ್ಲೇಖವಿದ್ದರೂ ಸ್ಥಾಯಿಭಾವದ ಸೊಲ್ಲೇ ಇಲ್ಲದಿರುವುದನ್ನು ತುಂಬ ಸ್ವಾರಸ್ಯಕರವಾಗಿ ವಿವರಿಸುತ್ತಾನೆ. ಆ ಪ್ರಕಾರ ಸೂತ್ರೋಕ್ತವಾದ ರಸವೇ ಸ್ಥಾಯಿಭಾವದ ಮೂಲಕ ಅಭಿವ್ಯಕ್ತವಾಗುವ ಕಾರಣ ಅದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ; ಮಾತ್ರವಲ್ಲ, ಹೇಳಲೂ ಬಾರದು. ಇಲ್ಲವಾದರೆ ರಸವೆಂಬುದು ಸಹೃದಯನಿಂದ ಹೊರಗಿರುವ ಹಾಗೂ ಸ್ವಸಂವಿದಾನಂದವೆಂದೂ ಆಗದ ಕೃತ್ರಿಮವ್ಯವಸ್ಥೆಯಾದೀತು. ಜೊತಗೆ ಲೋಕದ ಭಾವಗಳಲ್ಲಿ ನಿರಂತರವಾಗಿ ತಲೆದೋರುವ ಪರಸ್ಪರಾಸಾಮಂಜಸ್ಯರೂಪದ ಅನೌಚಿತ್ಯವನ್ನು ನಿವಾರಿಸಿದಲ್ಲಿ ರಸವು ತಾನೇ ತಾನಾಗಿ ಒಡಮೂಡುವುದೆಂಬ ಧ್ವನಿಯೂ ಇಲ್ಲುಂಟು[1]. ಹೀಗೆ ಮಹರ್ಷಿಯ ಧ್ವನಿಪೂರ್ಣವಾದ ಮಾತುಗಳನ್ನು ಅಂತರ್ದೃಷ್ಟಿಯಿಂದ ವಿವರಿಸುವ ಅಭಿನವಗುಪ್ತನ ಪ್ರಜ್ಞೆ ದೊಡ್ಡದು: “ಅತ ಏವ ಸ್ಥಾಯಿಪದಂ ಸೂತ್ರೇ ಭಿನ್ನವಿಭಕ್ತಿಕಮಪಿ ನೋಕ್ತಮ್ | ತೇನ ರತಿರನುಕ್ರಿಯಮಾಣಾ ಶೃಂಗಾರ ಇತಿ ತದಾತ್ಮಕತ್ವಂ ತತ್ಪ್ರಭವತ್ವಂ ಚ ಯುಕ್ತಮ್” (ಸಂ.೧, ಪು.೨೭೨). “ತೇನ ಸ್ಥಾಯಿಪ್ರತೀತಿರನುಮಿತಿರೂಪಾ ಪ್ರಾಪ್ಯಾ | ನ ರಸಃ | ಅತ ಏವ ಸೂತ್ರೇ ಸ್ಥಾಯಿಗ್ರಹಣಂ ನ ಕೃತಮ್ | ತತ್ ಪ್ರತ್ಯುತ ಶಲ್ಯಭೂತಂ ಸ್ಯಾತ್ | ಕೇವಲಮೌಚಿತ್ಯಾದೇವಮುಚ್ಯತೇ ಸ್ಥಾಯೀ ರಸೀಭೂತ ಇತಿ” (ಸಂ.೧, ಪು.೨೮೨). ಈ ಸಂದರ್ಭದಲ್ಲಿಯೇ ರಸಸೂತ್ರದ ಘಟಕಗಳನ್ನು ವಿವರಿಸುವಾಗ ಕವಿ-ಕಲಾವಿದರು—ಮುಖ್ಯವಾಗಿ ಅಭಿನಯಪಟುಗಳು—ವಿಭಾವಗಳನ್ನು ಲೋಕ-ಸಾಹಿತ್ಯಪರಿಶೀಲನದಿಂದಲೂ ಅನುಭಾವಗಳನ್ನು ಶಿಕ್ಷಣಾಭ್ಯಾಸಗಳಿಂದಲೂ ವ್ಯಭಿಚಾರಿಗಳನ್ನು ಅನುಕರಣದಿಂದಲೂ ಹಿಡಿಯಬಹುದು, ಆದರೆ ಸ್ಥಾಯಿಯನ್ನು ಮಾತ್ರ ತಮ್ಮಿಂದ ತಾವೇ ಪ್ರತ್ಯಭಿಜ್ಞಾನ ಮಾಡಿಕೊಳ್ಳಬೇಕೆಂದು ಬಗೆಯುತ್ತಾನೆ. ಇದು ಹಿರಿದಾದ ದರ್ಶನ. ಅಂದರೆ, ರಸಕ್ಕೆ ಮೂಲಸಾಮಗ್ರಿಯಾದ ಸ್ಥಾಯಿಯು ಉತ್ಪಾದ್ಯವಲ್ಲ, ಸಂಪಾದ್ಯವೂ ಅಲ್ಲ. ಅದು ಸ್ವಯಂಸಿದ್ಧ ಮತ್ತು ಪ್ರತ್ಯಭಿಜ್ಞೇಯ. ಹೀಗಾಗಿ ಕವಿ-ಕಲಾವಿತ್-ಸಹೃದಯರು ತಮ್ಮ ತಮ್ಮ ಸ್ಥಾಯಿಗಳನ್ನು ಗಾಢವಾಗಿ ಅನುಭವಿಸಿ ಪರಿಶೀಲಿಸಿಕೊಳ್ಳದೆ ರಸನಿಷ್ಪತ್ತಿ ಮತ್ತು ತದಾಸ್ವಾದನೆಗಳಿಗೆ ಅರ್ಹರಾಗುವುದಿಲ್ಲ: “ವಿಭಾವಾ ಹಿ ಕಾವ್ಯಬಲಾನುಸಂಧೇಯಾಃ | ಅನುಭಾವಾಃ ಶಿಕ್ಷಾತಃ | ವ್ಯಭಿಚಾರಿಣಃ ಕೃತ್ರಿಮನಿಜಾನುಭಾವಾರ್ಜನಬಲಾತ್ | ಸ್ಥಾಯೀ ತು ಕಾವ್ಯಬಲಾದಪಿ ನಾನುಸಂಧೇಯಃ” (ಸಂ.೧, ಪು.೨೭೨). ಇದೇ ರೀತಿ “ನಿಷ್ಪತ್ತಿ”ಯೆಂಬ ಪದವನ್ನು ವಿವರಿಸುವಲ್ಲಿಯೂ ಅದು ಉತ್ಪತ್ತಿ, ಅನುಮಿತಿ ಮತ್ತು ಭಾವನ-ಭೋಗನಗಳಂತಲ್ಲದೆ ಅಭಿವ್ಯಕ್ತಿಯೇ ಎಂದು ಧ್ವನಿಸಿದ್ಧಾಂತಾನುಸಾರಿಯಾಗಿ ವಿಸ್ತರಿಸಿರುವುದನ್ನು ಅಭಿನವಭಾರತಿಯಲ್ಲಿಯೂ ಧ್ವನ್ಯಾಲೋಕಲೋಚನದಲ್ಲಿಯೂ ವಿಶದವಾಗಿ ಕಾಣಬಹುದಾದ ಕಾರಣ ಇಲ್ಲಿ ಮತ್ತೆ ವಿಸ್ತರಿಸಬೇಕಿಲ್ಲ. ರಸವೇ ಕಾವ್ಯದ ಅರ್ಥ; ಅಂದರೆ, ಅದರ ಪರಮಪ್ರಯೋಜನ. ತಾತ್ಪರ್ಯತಃ ಪುರುಷಾರ್ಥಚತುಷ್ಟಯದ ಹೃದಯೋದ್ದೇಶವಾದ ಆನಂದವೇ ಹೌದು. ಇದನ್ನು ಅಭಿನವಗುಪ್ತನು “ನ ಹಿ ರಸಾದೃತೇ ಕಶ್ಚಿದರ್ಥಃ ಪ್ರವರ್ತತೇ” ಎಂಬ ಪೂರ್ವೋಕ್ತವಾಕ್ಯದಲ್ಲಿರುವ “ಅರ್ಥ”ಶಬ್ದಕ್ಕೆ ಒಪ್ಪವಿಡುತ್ತಾನೆ. ಇದು ಕಾವ್ಯಾತ್ಮವಾದಿಗಳೆಲ್ಲರ ಚರ್ಚೆಯ ಕೊನೆಯ ಮಾತು. ಇಂಥ ಕಾವ್ಯಾರ್ಥಾಸ್ವಾದಕ್ಕೆ ಅರ್ಹರಾದವರು ವಿಮಲಪ್ರತಿಭಾನಶಾಲಿಗಳಾದ ಸಹೃದಯರಲ್ಲದೆ ಅನ್ಯರಲ್ಲವೆಂದೂ ಅವನ ಸಿದ್ಧಾಂತ: “ತರ್ಹ್ಯುಚ್ಯತಾಂ ಪರಿಶುದ್ಧತತ್ತ್ವಮ್ | ಉಕ್ತಮೇವ ಮುನಿನಾ ನ ತ್ವಪೂರ್ವಂ ಕಿಂಚಿತ್ | ತಥಾಹ್ಯಾಹ—“ಕಾವ್ಯಾರ್ಥಾನ್ ಭಾವಯಂತಿ” ಇತಿ | ತತ್ಕಾವ್ಯಾರ್ಥೋ ರಸಃ ... ಅಧಿಕಾರೀ ಚಾತ್ರ ವಿಮಲಪ್ರತಿಭಾನಶಾಲಿಹೃದಯಃ” (ಸಂ.೧, ಪು.೨೭೭-೨೭೮).
ಟಿಪ್ಪಣಿಗಳು
[1] ತೆಲುಗಿನ ಪ್ರಸಿದ್ಧಕವಿ ವಿಶ್ವನಾಥ ಸತ್ಯನಾರಾಯಣ ಈ ವಿವರಣೆಯನ್ನು ತಮ್ಮ ಉಪನ್ಯಾಸಗಳಲ್ಲಿ ಸೂಚಿಸಿದ್ದಾರೆ. ಇದು ನೇರವಾಗಿ ಅಭಿನವಭಾರತಿಯನ್ನು ಕುರಿತ ವಿವರಣೆಯಲ್ಲವಾದರೂ ಪ್ರಸಂಗೌಚಿತ್ಯದಿಂದಾಗಿ ಉಲ್ಲೇಖನೀಯ.