ಭಾರತೀಯ ಕಾವ್ಯಮೀಮಾಂಸೆ ಮತ್ತು ಕಲಾಮೀಮಾಂಸೆಗಳ ಕ್ಷೇತ್ರದಲ್ಲಿ ಭಟ್ಟತೌತನ ಹೆಸರು ಅಜರಾಮರ.[1] ಕಾಶ್ಮೀರದಲ್ಲಿ ಬಾಳಿ ಬೆಳಗಿದ ಈ ವಿದ್ವದ್ವಿಭೂತಿ ಒಂಬತ್ತು-ಹತ್ತನೆಯ ಶತಮಾನಗಳ ಆಸುಪಾಸಿನಲ್ಲಿ ಇದ್ದವನೆಂದು ತಿಳಿದುಬರುತ್ತದೆ. ಈತನ ‘ಕಾವ್ಯಕೌತುಕ’ದ ಹೊರತಾಗಿ ಮತ್ತಾವ ಗ್ರಂಥದ ಕುರುಹೂ ನಮಗೆ ಉಳಿದಿಲ್ಲ. ಇದಾದರೂ ನಮಗಿಂದು ಸಿಕ್ಕಿಲ್ಲ. ಕೇವಲ ಅವರಿವರು ಉದ್ಧರಿಸುವ ಶ್ಲೋಕಭಾಗಗಳಿಂದ ನಮಗೆ ಈ ಕೃತಿಯ ಮಹತ್ತ್ವ ತಿಳಿಯುತ್ತಿದೆ.[2] ಹೀಗೆ ತಿಳಿದಾಗ ನಾವೆಂಥ ಅದ್ಭುತ ಶಾಸ್ತ್ರನಿಧಿಯನ್ನು ಕಳೆದುಕೊಂಡೆವೆಂಬ ದುಃಖ ಉಮ್ಮಳಿಸಿ ಬರದಿರದು. ಇಂತಿದ್ದರೂ ಈಗ ನಮಗೆ ಸಿಕ್ಕಿರುವ ಹಲಕೆಲವು ಉಲ್ಲೇಖಗಳು ಕಾಣಿಸುತ್ತಿರುವ ಬೆಳಕು ಅಷ್ಟಿಷ್ಟಲ್ಲ; ಈ ತಿಳಿವಿನಿಂದ ಒಡಮೂಡಿದ ಸಂತಸ ಕೂಡ ಅಲ್ಪಸ್ವಲ್ಪದ್ದಲ್ಲ.
ಭಾರತೀಯ ಕಾವ್ಯಮೀಮಾಂಸೆ ಮತ್ತು ಕಲಾಮೀಮಾಂಸೆಗಳ ಪರಮಾಚಾರ್ಯನೆಂದು ಪ್ರಸಿದ್ಧನಾದ ಅಭಿನವಗುಪ್ತನಿಗೆ ನಾಟ್ಯಶಾಸ್ತ್ರವನ್ನು ಬೋಧಿಸಿದ ಮಹನೀಯ ಭಟ್ಟತೌತನೆಂದ ಬಳಿಕ ಈತನ ಪ್ರಾಮುಖ್ಯವನ್ನು ಮತ್ತೆ ವಿಸ್ತರಿಸಬೇಕಿಲ್ಲ. ಅಭಿನವಗುಪ್ತ ತಾನು ನಾಟ್ಯಶಾಸ್ತ್ರದ ಮೇಲೆ ಬರೆದ ‘ಅಭಿನವಭಾರತೀ’ ಎಂಬ ವ್ಯಾಖ್ಯಾನದ ಆದ್ಯಂತವೂ ಭಟ್ಟತೌತನನ್ನು ಆದರದಿಂದ ಹೆಸರಿಸುತ್ತಾನೆ; ಆತನ ಅಭಿಪ್ರಾಯಗಳನ್ನು ಅಭಿಮಾನದಿಂದ ಪ್ರಸ್ತಾವಿಸುತ್ತಾನೆ. ಮಿಗಿಲಾದ ಅಂತರ್ದೃಷ್ಟಿಯನ್ನುಳ್ಳ ಈ ಅಭಿಪ್ರಾಯಗಳನ್ನು ಒಪ್ಪಿ ತನ್ನ ಚರ್ಚೆಯನ್ನು ಮುಂದುವರಿಸುತ್ತಾನೆ. ಇಡಿಯ ಈ ಗ್ರಂಥದಲ್ಲಿ ಎಪ್ಪತ್ತು ಬಾರಿ ಆತನ ಮತವನ್ನು ಪ್ರಸ್ತಾವಿಸುತ್ತಾನೆಂದರೆ ಅದರ ಪ್ರಾಶಸ್ತ್ಯ ಎಷ್ಟೆಂದು ಊಹಿಸಬಹುದು. ಎಲ್ಲೋ ಒಂದೆರಡು ಕಡೆ ಮಾತ್ರ ಭಟ್ಟತೌತನಿಗಿಂತ ಭಿನ್ನವಾದ ನಿಲವನ್ನು ತಳೆಯುತ್ತಾನೆ. ಇವಾದರೂ ತೀರ ಗೌಣವಾದ ಸಂದರ್ಭಗಳು; ನಮ್ಮ ಕಾವ್ಯ-ಕಲಾಮೀಮಾಂಸೆಗಳ ತಿರುಳನ್ನು ಕುರಿತವಲ್ಲ. ‘ಧ್ವನ್ಯಾಲೋಕ’ಕ್ಕೆ ಅಭಿನವಗುಪ್ತನು ಬರೆದ ‘ಲೋಚನ’ ಎಂಬ ವ್ಯಾಖ್ಯಾನದಲ್ಲಿ ಕೂಡ ಈ ಗುರುವಿನ ಉಲ್ಲೇಖ ಮೂರು ಬಾರಿ ಕಾಣಸಿಗುತ್ತದೆ.[3]
ಅಭಿನವಗುಪ್ತನು ಕಾವ್ಯಕೌತುಕಕ್ಕೆ ‘ವಿವರಣ’ ಎಂಬ ವ್ಯಾಖ್ಯಾನವನ್ನೂ ಬರೆದಿರುವಂತೆ ತಿಳಿದುಬರುತ್ತದೆ. ಅದು ಇದೀಗ ಅನುಪಲಬ್ಧ. ಈ ಗ್ರಂಥವನ್ನವನು ಲೋಚನಕ್ಕಿಂತ ಮುನ್ನ ಬರೆದಿದ್ದ; ಏಕೆಂದರೆ ಇಲ್ಲಿ ವಿವರಣದ ಉಲ್ಲೇಖವಿದೆ. ಲೋಚನದ ಬಳಿಕ ಅಭಿನವಭಾರತಿಯನ್ನು ರಚಿಸಿದುದಕ್ಕೆ ಸಾಕ್ಷಿಯಾಗಿ ಅಲ್ಲಿ ಲೋಚನದ ಪ್ರಸ್ತಾವಗಳಿವೆ. ಹೀಗೆ ಸಾಕಷ್ಟು ಕಾಲದ ಬಳಿಕ, ವಿದ್ವತ್ತೆಯ ಪರಿಪಾಕವನ್ನು ಮೈಗೂಡಿಸಿಕೊಂಡ ಬಳಿಕ ಅಭಿನವಗುಪ್ತ ಬರೆದ ಗ್ರಂಥದಲ್ಲಿ ತೌತನ ಮಾತುಗಳ ಪ್ರಾಚುರ್ಯ ಮತ್ತು ಅವುಗಳ ಬಗೆಗಿನ ಆದರವನ್ನು ಕಂಡಾಗ ಆತನ ಮಹತ್ತ್ವ ಧ್ವನಿತವಾಗುತ್ತದೆ.
ಭಟ್ಟತೌತನ ಹಿರಿಮೆ ಕೇವಲ ತನ್ನ ಶಿಷ್ಯನ ಉಲ್ಲೇಖಗಳ ಮೇಲೆ ನಿಂತಿಲ್ಲ. ಮಹಿಮಭಟ್ಟ, ಹೇಮಚಂದ್ರ, ಪ್ರತೀಹಾರೇಂದುರಾಜ, ರುಯ್ಯಕ, ಕವಿಕರ್ಣಪೂರ, ರಾಜಚೂಡಾಮಣಿದೀಕ್ಷಿತ ಮೊದಲಾದ ಗಣ್ಯ ಗ್ರಂಥಕಾರರಲ್ಲದೆ, ಮಮ್ಮಟನ ‘ಕಾವ್ಯಪ್ರಕಾಶ’ಕ್ಕೆ ವ್ಯಾಖ್ಯಾನಗಳನ್ನು ರಚಿಸಿದ ಮಾಣಿಕ್ಯಚಂದ್ರ, ಸೋಮೇಶ್ವರ, ನರಹರಿ, ಸರಸ್ವತೀತೀರ್ಥ, ಶ್ರೀಧರ, ಚಂಡೀದಾಸ, ಶ್ರೀವಿದ್ಯಾಚಕ್ರವರ್ತಿ, ಭಟ್ಟಗೋಪಾಲ ಮೊದಲಾದ ಹಲವರು ವಿದ್ವಾಂಸರು ಈತನ ಮಾತುಗಳನ್ನು ಆದರದಿಂದ ಉದಾಹರಿಸಿದ್ದಾರೆ. ಇವರ ಇಂಥ ಕೆಲವು ಉದ್ಧೃತಿಗಳಿಂದಲೇ ಭಟ್ಟತೌತನ ಆಲೋಚನೆಗಳು ನಮ್ಮ ಪಾಲಿಗೆ ಉಳಿದುಕೊಂಡಿವೆ.
ಭಟ್ಟತೌತನ ಅಭಿಪ್ರಾಯಗಳ ಉಲ್ಲೇಖ ಸಹಜವಾಗಿಯೇ ಅಭಿನವಭಾರತಿಯಲ್ಲಿ ಹೆಚ್ಚಾಗಿದೆ. ಇಲ್ಲಿ ಶ್ಲೋಕರೂಪದ ಉದ್ಧರಣಗಳ ಸಂಖ್ಯೆಗೆ ಹೋಲಿಸಿದರೆ ಗದ್ಯರೂಪದ ತಾತ್ಪರ್ಯಕಥನವೇ ಅಧಿಕ. ಇದಕ್ಕೆ ಕಾರಣವೂ ಸ್ಪಷ್ಟವಾಗಿದೆ. ಅಭಿನವಗುಪ್ತನು ಅಭಿನವಭಾರತೀಯ ಆರಂಭದಲ್ಲಿಯೇ ತನ್ನ ಈ ನಾಟ್ಯಶಾಸ್ತ್ರವಿವೃತಿಯ ಸ್ವರೂಪವನ್ನು ಹೀಗೆ ವಿಶದೀಕರಿಸಿದ್ದಾನೆ:
ಸದ್ವಿಪ್ರತೋತವದನೋದಿತನಾಟ್ಯವೇದ-
ತತ್ತ್ವಾರ್ಥಮರ್ಥಿಜನವಾಂಛಿತಸಿದ್ಧಿಹೇತೋಃ |
ಮಾಹೇಶ್ವರಾಭಿನವಗುಪ್ತಪದಪ್ರತಿಷ್ಠಃ
ಸಂಕ್ಷಿಪ್ತವೃತ್ತಿವಿಧಿನಾ ವಿಶದೀಕರೋತಿ ||[4] (ಅಭಿನವಭಾರತೀ, ೧.೪)
ಈ ಪ್ರಕಾರ ಅಭಿನವಭಾರತಿಯು ಅಭಿನವಗುಪ್ತನಿಗೆ ತೌತನು ಪಾಠ ಹೇಳಿದ ನಾಟ್ಯಶಾಸ್ತ್ರದ ತತ್ತ್ವಾರ್ಥದ ಸಾರಾಂಶವೇ ಆಗಿದೆ. ಅಂದರೆ, ಈ ಗ್ರಂಥದ ಹೂರಣದಲ್ಲಿ ತೌತನ ಚಿಂತನಗಳ ಪಾತ್ರ ಮಿಗಿಲಾಗಿದೆ. ಅಭಿನವಗುಪ್ತನು ಈ ಕೃತಿಯ ಆದ್ಯಂತವೂ ‘ಅಸ್ಮದುಪಾಧ್ಯಾಯ’ ಎಂದು ತೌತನನ್ನು ಸಬಹುಮಾನವಾಗಿ ಉಲ್ಲೇಖಿಸುವುದು ಕೂಡ ಇದಕ್ಕೆ ಪೂರಕ. ದೊಡ್ಡ ಗುರುವಿನಿಂದ ಘನವಾದ ಶಾಸ್ತ್ರವೊಂದನ್ನು ಸಂಪ್ರದಾಯಶುದ್ಧವಾಗಿ ಕಲಿತ ಯೋಗ್ಯ ಶಿಷ್ಯನ ಆದರ-ಅಭಿಮಾನಗಳು ಬೆರೆತ ಈ ಬಗೆಯ ಪ್ರಸ್ತಾವಗಳು ಯಾವ ವಿದ್ಯಾಪರಂಪರೆಗೂ ಭೂಷಣವಾಗಬಲ್ಲುವು.
ಇದರ ಬಳಿಕ ಅಭಿನವಗುಪ್ತನು ಎರಡು ಶ್ಲೋಕಗಳಲ್ಲಿ ತನ್ನ ವ್ಯಾಖ್ಯಾನದ ಸ್ವರೂಪವನ್ನು ವಿಶದೀಕರಿಸಿದ್ದಾನೆ:
ಉಪಾದೇಯಸ್ಯ ಸಂಪಾಠಸ್ತದನ್ಯಸ್ಯ ಪ್ರತೀಕನಮ್ |
ಸ್ಫುಟವ್ಯಾಖ್ಯಾ ವಿರೋಧಾನಾಂ ಪರಿಹಾರಃ ಸುಪೂರ್ಣತಾ ||
ಲಕ್ಷ್ಯಾನುಸರಣಂ ಶ್ಲಿಷ್ಟವಕ್ತವ್ಯಾಂಶವಿವೇಚನಮ್ |
ಸಂಗತಿಃ ಪೌನರುಕ್ತ್ಯಾನಾಂ ಸಮಾಧಾನಸಮಾಕುಲಮ್ |
ಸಂಗ್ರಹಶ್ಚೇತ್ಯಯಂ ವ್ಯಾಖ್ಯಾಪ್ರಕಾರೋಽತ್ರ ಸಮಾಶ್ರಿತಃ || (ಅಭಿನವಭಾರತೀ, ೧.೫, ೬)
ಇವುಗಳ ತಾತ್ಪರ್ಯವನ್ನು ಹೀಗೆ ಸಂಗ್ರಹಿಸಬಹುದು: ಯುಕ್ತವಾದ ಪಾಠವನ್ನು ನಿಶ್ಚಯಿಸುವುದು; ಮಿಕ್ಕ ಪಾಠಗಳ ಸೂಚನೆಯನ್ನು ಕೊಡುವುದು; ಸ್ಪಷ್ಟವಾಗಿ ವ್ಯಾಖ್ಯಾನಿಸುವುದು; ಆಗೀಗ ಬರಬಹುದಾದ ಅಂತರ್ವಿರೋಧಗಳನ್ನು ಪರಿಹರಿಸುವುದು; ಈ ಮೂಲಕ ಗ್ರಂಥಕ್ಕೆ ಸ್ವಯಂಪೂರ್ಣತೆಯನ್ನು ತಂದುಕೊಡುವುದು; ಲಕ್ಷ್ಯಕ್ಕೆ ಅನುಸಾರವಾಗಿ ಲಕ್ಷಣವನ್ನು ವಿವೇಚಿಸುವುದು; ಪರಸ್ಪರ ಹೆಣೆದುಕೊಂಡಿರುವ ವಿಚಾರಗಳನ್ನು ಬಿಡಿಸಿ ಹೇಳುವುದು; ವಿವೇಚನೀಯ ತತ್ತ್ವಗಳಿಗೆ ಪೂರ್ವಾಪರ ಸಮನ್ವಯವನ್ನು ಕಲ್ಪಿಸುವುದು; ಗ್ರಂಥದ ಆದ್ಯಂತ ಅಲ್ಲಿಲ್ಲಿ ಕಂಡುಬರುವ ಪುನರುಕ್ತಿಗಳ ಸಾಮಂಜಸ್ಯವನ್ನು ನಿರೂಪಿಸುವುದು; ಒಟ್ಟಂದದ ಅಡಕವನ್ನು ಕಾಪಾಡಿಕೊಳ್ಳುವುದು.
ಇದನ್ನು ಕಂಡಾಗ ಭಟ್ಟತೌತನ ಪಾಠಕ್ರಮ ಅದೆಷ್ಟು ವ್ಯವಸ್ಥಿತವೂ ಪರಿಷ್ಕೃತವೂ ಆಗಿತ್ತೆಂಬುದರ ಕಲ್ಪನೆ ನಮಗೆ ಬಾರದಿರದು.
* * *
ಪ್ರಕೃತ ಪ್ರಬಂಧವು ವಿವಿಧ ಗ್ರಂಥಗಳಲ್ಲಿ ಚೆದುರಿಹೋಗಿರುವ ಭಟ್ಟತೌತನ ಮಾತುಗಳನ್ನು ಒಂದೆಡೆ ಹವಣಿಸಿಕೊಟ್ಟು ಅವುಗಳ ಆಶಯವನ್ನು ಸಂಕ್ಷಿಪ್ತವಾಗಿ ವಿವರಿಸುವ ಯತ್ನವಾಗಿದೆ. ಇದು ಸಹಜವಾಗಿಯೇ ಕಾವ್ಯಕೌತುಕದ ಶ್ಲೋಕಗಳನ್ನು ಪ್ರಧಾನವಾಗಿ ಆಶ್ರಯಿಸಿದೆ. ಹೀಗಿದ್ದರೂ ಅಭಿನವಭಾರತಿಯಲ್ಲಿ ಮಾತ್ರ ಕಂಡುಬರುವ ಹತ್ತಾರು ಗದ್ಯಭಾಗಗಳನ್ನೂ ಒಳಗೊಂಡಿದೆ. ಈ ಭಾಗಗಳು ಭಟ್ಟತೌತನ ಮೌಲಿಕ ವಿಚಾರಗಳನ್ನು ಪ್ರಸ್ತಾವಿಸುವ ಕಾರಣ ಅವುಗಳ ಸೇರ್ಪಡೆ ಯುಕ್ತವೇ ಆಗಿದೆ. ಇಂಥ ವಿವರಣೆಯ ಎಡೆಯಲ್ಲಿ ತೌತನ ಪೂರ್ವಾಚಾರ್ಯರ ಹಲಕೆಲವು ಉಲ್ಲೇಖಗಳನ್ನೂ ಪೂರಕವಾಗಿ ನೋಡಬಹುದು. ಆದರೆ ಪರವರ್ತಿ ವಿದ್ವಾಂಸರ ಮಾತುಗಳನ್ನು ಹೆಚ್ಚಾಗಿ ಉದ್ಧರಿಸಿಲ್ಲ. ಇದಕ್ಕೆ ಕಾರಣವಿಷ್ಟೆ: ಭಟ್ಟತೌತನ ಪ್ರಭಾವ ಮುಂದಿನ ಎಷ್ಟೋ ಆಲಂಕಾರಿಕರ ಮೇಲೆ ಪ್ರಗಾಢವಾಗಿ ಆಗಿರುವುದಕ್ಕೆ ಅವರೆಲ್ಲರ ಗ್ರಂಥಗಳಲ್ಲಿ ‘ಕಾವ್ಯಕೌತುಕ’ದ ಹಲಕೆಲವು ಮಾತುಗಳು ವ್ಯಾಪಕವಾಗಿ ಉದ್ದೃತವಾಗಿರುವುದೇ ಸಾಕ್ಷಿ. ಇದಕ್ಕಿಂತ ಮಿಗಿಲಾಗಿ ಆತನ ಶಿಷ್ಯೋತ್ತಮ ಅಭಿನವಗುಪ್ತನು ಇಡಿಯ ಅಲಂಕಾರಶಾಸ್ತ್ರದ ತತ್ತ್ವಭಾಗಕ್ಕೆ ಪರಮಾಚಾರ್ಯನಾಗಿರುವುದು ಜಗದ್ವಿದಿತ. ಹೀಗಾಗಿ ತೌತನ ಪ್ರಭಾವ ಯಾರ ಮೇಲೆ ಆಯಿತು; ಯಾರು ಆತನ ಮತವನ್ನು ಆದರಿಸಿದ್ದಾರೆ ಎಂಬಿವೇ ಮುಂತಾದ ಪ್ರಸ್ತಾವಗಳು ವೃಥಾ ಗ್ರಂಥವಿಸ್ತರಕ್ಕೆ ಕಾರಣ. ಆದುದರಿಂದ ಇಲ್ಲಿ ಕೇವಲ ಭಟ್ಟತೌತನ ಯೋಗದಾನ, ಅದರ ಸಾರ್ವಕಾಲಿಕ ಮಹತ್ತ್ವ ಮತ್ತು ಅವನು ತನ್ನ ಪೂರ್ವಸೂರಿಗಳಿಗಿಂತ ಅದೆಷ್ಟು ಮುಂದುವರಿದಿದ್ದ ಎಂಬಿವೇ ವಿಷಯಗಳೇ ಪ್ರಾಮುಖ್ಯವನ್ನು ವಹಿಸಿವೆ.
ಮೊದಲಿಗೆ ಕಾವ್ಯಕೌತುಕ ಎಂಬ ಹೆಸರಿನ ಅರ್ಥವ್ಯಾಪ್ತಿಯನ್ನು ಗಮನಿಸಬಹುದು. ‘ಕಾವ್ಯ’ಶಬ್ದದ ಅರ್ಥ ಪ್ರಸಿದ್ಧವೇ ಇದೆ. ಇನ್ನು ‘ಕೌತುಕ’ಶಬ್ದಕ್ಕೆ ವಿವಿಧ ನಿಘಂಟುಗಳು ಕುತೂಹಲ, ಮಂಗಳ, ಅಭಿಲಾಷೆ, ಹರ್ಷ, ಪ್ರಣಯ, ಉತ್ಸವ ಮೊದಲಾದ ಅರ್ಥಗಳನ್ನು ನೀಡಿವೆ. ಇವೆಲ್ಲವೂ ಪ್ರಕೃತ ಗ್ರಂಥಕ್ಕೆ ಚೆನ್ನಾಗಿ ಅನ್ವಯಿಸುತ್ತವೆ. ಅಭಿನವಗುಪ್ತನು ಅಭಿನವಭಾರತಿಯಲ್ಲಿ ಒಂದೆಡೆ (೧೯.೭೩) ಕೌತುಕ ಎಂಬುದಕ್ಕೆ ‘ಜಿಜ್ಞಾಸಾತಿಶಯ’ ಎಂಬ ವಿವರಣೆಯನ್ನು ಕೊಟ್ಟಿರುವುದು ಗಮನಾರ್ಹ. ಇದು ಒಂದು ಬಗೆಯಲ್ಲಿ ಪೂರ್ವಮೀಮಾಂಸೆ ಮತ್ತು ಉತ್ತರಮೀಮಾಂಸೆಯ ಸೂತ್ರಗಳ ಮೊದಲಿಗೆ ಬರುವ ‘ಅಥಾತೋ ಧರ್ಮಜಿಜ್ಞಾಸಾ’ ಹಾಗೂ ‘ಅಥಾತೋ ಬ್ರಹ್ಮಜಿಜ್ಞಾಸಾ’ ಎಂಬ ಮಾತುಗಳನ್ನು ನೆನಪಿಗೆ ತರುತ್ತದೆ. ಇಂಥ ಅರ್ಥಕ್ರಮವು ಭಟ್ಟತೌತನು ತನ್ನ ಗ್ರಂಥವನ್ನು ಅದೆಷ್ಟು ಉನ್ನತವಾಗಿ ಚಿಂತಿಸಿ ಹವಣಿಸಿದ್ದನೆಂಬುದನ್ನು ಸೂಚಿಸುತ್ತದೆ. ಶಾರದಾತನಯನು ತನ್ನ ‘ಭಾವಪ್ರಕಾಶನ’ದಲ್ಲಿ ‘ಕೌತುಕ’ಶಬ್ದವನ್ನು “ಅಭೀಷ್ಟಾನನುಭೂತಾರ್ಥಾಭಿಲಾಷಃ” (ಪು. ೨೯) ಎಂದು ವಿವರಿಸಿರುವುದು ಸ್ಮರಣೀಯ. ಈ ಪ್ರಕಾರ ನಾವು ಬಯಸಿದ, ಆದರೆ ಇನ್ನೂ ಅನುಭವಿಸಿರದ ವಿಷಯಗಳಲ್ಲಿ ಆಸಕ್ತಿಯೇ ಕೌತುಕ. ಇದು ಈ ಶಬ್ದದ ಅರ್ಥವ್ಯಾಪ್ತಿಯ ಎಲ್ಲ ಮಗ್ಗುಲುಗಳನ್ನೂ ಸೊಗಸಾಗಿ ಹಿಡಿದಿಟ್ಟಿದೆ. ಹೀಗಾಗಿಯೇ ಕಾವ್ಯ ಮತ್ತು ಕಾವ್ಯಾನುಭವಗಳಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.
ಇಂದು ನಮಗೆ ಸಿಕ್ಕಿರುವ ಕಾವ್ಯಕೌತುಕದ ತುಂಡು-ತುಣುಕುಗಳಿಂದ ಅದರ ಅಧ್ಯಾಯಕ್ರಮವಾಗಲಿ, ಆನುಪೂರ್ವಿಯಾಗಲಿ ತಿಳಿದುಬರುವುದಿಲ್ಲ. ಹೀಗಾಗಿ ನಮ್ಮದಾದ ಆಲೋಚನೆಯ ಮೇರೆಗೆ ಇವುಗಳಲ್ಲಿ ವಿಚಾರನಿಃಶ್ರೇಣಿಯೊಂದನ್ನು ಕಲ್ಪಿಸಿ ಆ ಜಾಡಿನಲ್ಲಿಯೇ ಇವುಗಳನ್ನು ಜೋಡಿಸುವುದು ಅನಿವಾರ್ಯವಾಗಿದೆ. ಆದುದರಿಂದ ಇಲ್ಲಿಯ ವ್ಯವಸ್ಥೆ ಭಟ್ಟತೌತನದೆಂದು ಹೇಳುವಂತಿಲ್ಲ; ಇಲ್ಲಿರುವುದೇನಿದ್ದರೂ ಪ್ರಕೃತ ಲೇಖಕನ ತಿಳಿವಿನ ಮಿತಿಯಲ್ಲಿ ನಡೆದಿರುವ ಸ್ವೋಪಜ್ಞ ವಿವೃತಿ. ಇದನ್ನು ಜಿಜ್ಞಾಸುಗಳು ಸಹಾನುಭೂತಿಯಿಂದ ಗಮನಿಸಬೇಕೆಂದು ಕೋರಿಕೆ.
ಶಾಸ್ತ್ರ-ಕಾವ್ಯ
ದ್ವೇ ವರ್ತ್ಮನೀ ಗಿರೋದೇವ್ಯಾಃ ಶಾಸ್ತ್ರಂ ಚ ಕವಿಕರ್ಮ ಚ |
ಪ್ರಜ್ಞೋಪಜ್ಞಂ ತಯೋರಾದ್ಯಂ ಪ್ರತಿಭೋದ್ಭವಮಂತಿಮಮ್ || (ಸಂಪ್ರದಾಯಪ್ರಕಾಶಿನೀ, ಪು. ೧೪)
ಶಾಸ್ತ್ರ ಮತ್ತು ಕಾವ್ಯಗಳು ವಾಗ್ದೇವಿಯ ಎರಡು ಹಾದಿಗಳು. ಶಾಸ್ತ್ರವು ಪ್ರಜ್ಞೆಯ ಫಲವಾದರೆ, ಕಾವ್ಯವು ಪ್ರತಿಭೆಯ ಫಲ.
ಇದೊಂದು ಮಹತ್ತ್ವದ ಮಾತು. ಮಾನವನ ವಿಕಾಸದಶೆಯ ಆರಂಭದಿಂದ ಬುದ್ಧಿ ಮತ್ತು ಭಾವಗಳ ಬೆಳೆವಣಿಗೆ ಎರಡು ಕಾಲುವೆಗಳಲ್ಲಿ ಹರಿದಿದೆ. ಇದೇ ಶಾಸ್ತ್ರ ಮತ್ತು ಕಲೆಗಳ ರೂಪಗಳನ್ನು ತಾಳಿದೆ. ಇಲ್ಲಿ ಕಾವ್ಯ ಎಂಬುದನ್ನು ಕಲಾಸಾಮಾನ್ಯದ ಪ್ರತಿನಿಧಿಯಾಗಿ ಸ್ವೀಕರಿಸಬೇಕು. ದಿಟವೇ, ಪ್ರಜ್ಞೆ-ಪ್ರತಿಭೆಗಳು ಶಾಸ್ತ್ರ-ಕಲೆಗಳೆರಡಕ್ಕೂ ಅವಶ್ಯ. ಆದರೆ ಪ್ರಾಧಾನ್ಯವನ್ನು ಗಮನಿಸಿ ಮಾಡಿರುವ ಈ ವಿಭಾಗ ತಪ್ಪಾಗದು. ಪ್ರಜ್ಞೆ ಮತ್ತು ಪ್ರತಿಭೆಗಳ ಸ್ವರೂಪವನ್ನು ಭಟ್ಟತೌತನೇ ನಿರೂಪಿಸಿರುವ ಕಾರಣ ಈ ಶ್ಲೋಕದ ಭಾವ ಆ ಬೆಳಕಿನಲ್ಲಿ ಮತ್ತೂ ಸ್ಫುಟವಾಗುವುದನ್ನು ನಾವು ಮುಂದೆ ಕಾಣಬಹುದು. ಶಾಸ್ತ್ರ ಮತ್ತು ಕಾವ್ಯಗಳೆಂಬ ವಾಙ್ಮಯವಿಭಾಗಗಳನ್ನು ನಾವು ರಾಜಶೇಖರನಂಥ ಆಲಂಕಾರಿಕನಲ್ಲಿ (‘ಇಹ ವಾಙ್ಮಯಮುಭಯಥಾ, ಶಾಸ್ತ್ರಂ ಕಾವ್ಯಂ ಚ. ‘ಕಾವ್ಯಮೀಮಾಂಸಾ’, ಪು. ೨) ಮುನ್ನವೇ ಕಾಣುತ್ತೇವೆ; ಆದರೂ ಭಟ್ಟತೌತನ ಈ ವಿವೇಚನೆಯಲ್ಲಿ ಸ್ಪಷ್ಟತೆ ಮಿಗಿಲಾಗಿದೆ. ಆದುದರಿಂದಲೇ ಈ ವಿಚಾರವನ್ನು ಅವನ ಸಮಕಾಲಿಕರೂ ಪರವರ್ತಿಗಳೂ ಆದ ಕುಂತಕ (‘ವಕ್ರೋಕ್ತಿಜೀವಿತ’, ೧.೭ರ ವೃತ್ತಿ), ಅಭಿನವಗುಪ್ತ (‘ಲೋಚನ’, ಪು. ೧೪), ಕ್ಷೇಮೇಂದ್ರ (‘ಸುವೃತ್ತತಿಲಕ’, ೩.೨) ಮುಂತಾದವರು ತಾತ್ಪರ್ಯರೂಪದಿಂದ ಗ್ರಹಿಸಿದ್ದಾರೆ. ‘ಅಗ್ನಿಪುರಾಣ’ದಂಥ (೩.೩೭.೨) ಆರ್ಷೋಪವಸತಿಯನ್ನು ಉಳ್ಳ ಕೃತಿಯೂ ಇದನ್ನು ಎತ್ತಿಹಿಡಿದಿರುವುದು ಗಮನಾರ್ಹ.
* * *
ಗ್ರಂಥಋಣ
• ಈಶಾದಿದಶೋಪನಿಷದಃ ಶಾಂಕರಭಾಷ್ಯಸಮೇತಾಃ. ಮೋತಿಲಾಲ್ ಬನಾರಸೀದಾಸ್ ಪ್ರಕಾಶನ, ದೆಹಲಿ, ೧೯೬೪
• ಋಗ್ವೇದಸಂಹಿತಾ (ಸಂ. ಶ್ರೀಪಾದ ದಾಮೋದರ ಸಾತವಳೇಕರ್). ಆರ್ಯ ಸಾಹಿತ್ಯಮಂಡಲ, ಅಜಮೇರ್, ೧೯೫೨
• ಕಲ್ಪಲತಾವಿವೇಕ (ಸಂ. ಮುರಾರಿಲಾಲ್ ನಾಗರ್, ಹರಿಶಂಕರಶಾಸ್ತ್ರೀ). ಲೇಖಕ ಅಜ್ಞಾತ. ಭಾರತೀಯ ಸಂಸ್ಕೃತಿ ವಿದ್ಯಾಮಂದಿರ, ಅಹಮದಾಬಾದ್, ೧೯೬೮
• ಕಾನೂರು ಹೆಗ್ಗಡಿತಿ. ಕುವೆಂಪು. ಉದಯರವಿ ಪ್ರಕಾಶನ, ಮೈಸೂರು, ೨೦೦೦
• ಕಾವ್ಯಪ್ರಕಾಶ (ಶ್ರೀಧರನ ‘ವಿವೇಕ’ವ್ಯಾಖ್ಯಾನದ ಸಮೇತ; ಸಂ. ಎಸ್. ಪಿ. ಭಟ್ಟಾಚಾರ್ಯ; ಎರಡು ಸಂಪುಟಗಳು). ಮಮ್ಮಟ. ಕಲ್ಕತ್ತಾ ಸಂಸ್ಕೃತ ಮಹಾವಿದ್ಯಾಲಯ ಸಂಶೋಧನಮಾಲಿಕೆ, ಕಲ್ಕತ್ತಾ, ೧೯೫೯, ೧೯೬೧
• ಕಾವ್ಯಪ್ರಕಾಶ (ಚಂಡೀದಾಸನ ‘ದೀಪಿಕಾ’ವ್ಯಾಖ್ಯಾನದ ಸಮೇತ; ಸಂ. ಎಸ್. ಪಿ. ಭಟ್ಟಾಚಾರ್ಯ; ಸಂ. ೨). ಮಮ್ಮಟ. ವಾರಾಣಸೀ ಸಂಸ್ಕೃತವಿಶ್ವವಿದ್ಯಾಲಯ, ವಾರಾಣಸೀ, ೧೯೬೫
• ಕಾವ್ಯಪ್ರಕಾಶ (ಶ್ರೀವಿದ್ಯಾಚಕ್ರವರ್ತಿಯ ‘ಸಂಪ್ರದಾಯಪ್ರಕಾಶಿನೀ’, ಭಟ್ಟಗೋಪಾಲನ ‘ಸಾಹಿತ್ಯಚೂಡಾಮಣಿ’ಗಳ ಸಮೇತ; ಸಂ. ೧; ಸಂ. ರಾ. ಹರಿಹರಶಾಸ್ತ್ರೀ). ಮಮ್ಮಟ. ಅನಂತಶಯನಸಂಸ್ಕೃತಗ್ರಂಥಾವಲಿ, ತಿರುವನಂತಪುರ, ೧೯೨೬
• ಕಾವ್ಯಮೀಮಾಂಸಾ (ಸಂ. ಸಿ. ಡಿ. ದಲಾಲ್, ಆರ್. ಎ. ಶಾಸ್ತ್ರೀ; ಪರಿಷ್ಕಾರ: ಕೆ. ಎಸ್. ರಾಮಸ್ವಾಮಿ ಶಾಸ್ತ್ರೀ). ರಾಜಶೇಖರ. ಗಾಯಕವಾಡ ಪ್ರಾಚ್ಯವಿದ್ಯಾಸಂಸ್ಥೆ, ವಡೋದರಾ, ೧೯೩೪
• ಕಾವ್ಯಾಲಂಕಾರಸಾರಸಂಗ್ರಹ (ಪ್ರತೀಹಾರೇಂದುರಾಜನ ವ್ಯಾಖ್ಯೆಯ ಸಮೇತ; ಸಂ. ನಾರಾಯಣ ದಶರಥ ಬನಹಟ್ಟಿ). ಉದ್ಭಟ. ಭಂಡಾರಕರ್ ಪ್ರಾಚ್ಯವಿದ್ಯಾಸಂಸ್ಥೆ, ಪುಣೆ, ೧೯೮೨
• ಕಾವ್ಯಾಲಂಕಾರಸೂತ್ರವೃತ್ತಿ (ಗೋಪೇಂದ್ರನ ‘ಕಾಮಧೇನು’ವ್ಯಾಖ್ಯೆಯ ಸಮೇತ; ಸಂ. ಕೇದಾರನಾಥ ಮಿಶ್ರ). ವಾಮನ. ಚೌಖಂಬಾ ಅಮರಭಾರತೀ ಪ್ರಕಾಶನ, ವಾರಾಣಸಿ, ೧೯೭೯
• ಕ್ಷೇಮೇಂದ್ರಲಘುಕಾವ್ಯಸಂಗ್ರಹ (ಸಂ. ಶ್ರೀನಿವಾಸಶರ್ಮಾ ಮತ್ತು ಕೆ. ವಿ. ಸೂರ್ಯಪ್ರಕಾಶ). ಕ್ಷೇಮೇಂದ್ರ. ಸಂಸ್ಕೃತಪರಿಷತ್, ಉಸ್ಮಾನಿಯಾ ವಿಶ್ವವಿದ್ಯಾಲಯ, ಹೈದರಾಬಾದ್, ೨೦೦೯
• ಚಂದ್ರಾಲೋಕ (ಸಂ. ಮಹಾದೇವ ಗಂಗಾಧರ ಬಾಕ್ರೆ). ಜಯದೇವ. ಗುಜರಾತಿ ಮುದ್ರಣಾಲಯ, ಬಾಂಬೆ, ೧೯೩೯
• ಧ್ವನ್ಯಾಲೋಕ (ಸಂಪಾದನೆ ಮತ್ತು ಆಂಗ್ಲ ಅನುವಾದ: ಕೆ. ಕೃಷ್ಣಮೂರ್ತಿ). ಮೋತಿಲಾಲ್ ಬನಾರಸೀದಾಸ್ ಪ್ರಕಾಶನ, ದೆಹಲಿ, ೧೯೮೨
• ಧ್ವನ್ಯಾಲೋಕ (ಅಭಿನವಗುಪ್ತನ ‘ಲೋಚನ’ದ ಸಮೇತ; ಸಂ. ಪಂಡಿತ ದುರ್ಗಾಪ್ರಸಾದ, ಕಾಶೀನಾಥ ಪಾಂಡುರಂಗ ಪರಬ್. ಪರಿಷ್ಕಾರ: ವಾಸುದೇವ ಲಕ್ಷ್ಮಣಶಾಸ್ತ್ರೀ ಪಣಶೀಕರ್). ಮುನ್ಶೀರಾಮ್ ಮನೋಹರಲಾಲ್ ಪ್ರಕಾಶನ, ನವದೆಹಲಿ, ೧೯೯೮
• ನಾಟ್ಯಶಾಸ್ತ್ರ (ಅಭಿನವಗುಪ್ತನ ‘ಅಭಿನವಭಾರತಿ’ಯ ಸಮೇತ; ಸಂ. ಆರ್. ಎಸ್. ನಾಗರ್; ೪ ಸಂಪುಟಗಳು). ಭರತಮುನಿ. ಪರಿಮಳ ಪ್ರಕಾಶನ, ದೆಹಲಿ, ೧೯೮೮
• ನಾಟ್ಯಶಾಸ್ತ್ರ (ಅಭಿನವಗುಪ್ತನ ‘ಅಭಿನವಭಾರತಿ’ಯ ಸಮೇತ; ಸಂ. ಕೆ. ಕೃಷ್ಣಮೂರ್ತಿ; ಸಂ. ೧). ಭರತಮುನಿ. ಗಾಯಕವಾಡ ಪ್ರಾಚ್ಯವಿದ್ಯಾಸಂಸ್ಥೆ, ವಡೋದರಾ, ೧೯೯೨
• ಭಾರತೀಯ ಋಷಿ ಪರಂಪರೆ ಮತ್ತು ಸಂಸ್ಕೃತ ಸಾಹಿತ್ಯ. ಪಾದೆಕಲ್ಲು ನರಸಿಂಹ ಭಟ್ಟ. ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು, ೨೦೦೩
• ಭಾರತೀಯ ಕಾವ್ಯಮೀಮಾಂಸೆ. ತೀ. ನಂ. ಶ್ರೀಕಂಠಯ್ಯ. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ೧೯೭೩
• ಭಾರತೀಲೋಚನ. ಆರ್. ಗಣೇಶ್. ಪ್ರೇಕ್ಷಾ ಪ್ರತಿಷ್ಠಾನ, ಬೆಂಗಳೂರು, ೨೦೧೮
• ಭಾವಪ್ರಕಾಶನ, (ಸಂ. ಯದುಗಿರಿ ಯತಿರಾಜ ಸ್ವಾಮಿ ಮತ್ತು ಕೆ. ಎಸ್. ರಾಮಸ್ವಾಮಿಶಾಸ್ತ್ರೀ) ಶಾರದಾತನಯ. ಪ್ರಾಚ್ಯವಿದ್ಯಾಸಂಸ್ಥೆ, ಬರೋಡಾ, ೧೯೬೮
• ವಕ್ರೋಕ್ತಿಜೀವಿತ (ಸಂಪಾದನೆ ಮತ್ತು ಆಂಗ್ಲಾನುವಾದ: ಕೆ. ಕೃಷ್ಣಮೂರ್ತಿ). ಕುಂತಕ. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೭೭
• ವಾಗರ್ಥವಿಸ್ಮಯಾಸ್ವಾದಃ. ಆರ್. ಗಣೇಶ್. ಪ್ರೇಕ್ಷಾ ಪ್ರತಿಷ್ಠಾನ, ಬೆಂಗಳೂರು, ೨೦೧೮
• ವ್ಯಕ್ತಿವಿವೇಕ. ಮಹಿಮಭಟ್ಟ. ಚೌಖಂಬಾ ಸಂಸ್ಕೃತಸರಣಿ ಕಾರ್ಯಾಲಯ, ವಾರಾಣಸಿ, ೧೯೩೬
• ಸಾಹಿತ್ಯದರ್ಪಣ. ವಿಶ್ವನಾಥ. ಮೋತಿಲಾಲ್ ಬನಾರಸೀದಾಸ್ ಪ್ರಕಾಶನ, ದೆಹಲಿ, ೧೯೭೭
• ಸೌಂದರನಂದ (ಸಂ. ಸೂರ್ಯನಾರಾಯಣ ಚೌಧರಿ). ಅಶ್ವಘೋಷ. ಮೋತಿಲಾಲ್ ಬನಾರಸಿದಾಸ್ ಪ್ರಕಾಶನ, ದೆಹಲಿ, ೧೯೮೬
• ಹದನು-ಹವಣು. ಆರ್. ಗಣೇಶ್. ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು, ೨೦೧೮
- Abhinavagupta and his Works. Raghavan, V. Chaukhambha Orientalia, Varanasi, 1981
- Bhoja’s Śrṅgāraprakāśa. Raghavan, V. Punarvasu, Madras, 1978
- Essays in Sanskrit Criticism. Krishnamoorthy, K. Karnatak University, Dharwar, 1974
- Some Aspects of Literary Criticism in Sanskrit. Sankaran, A. Oriental Books Reprint Corporation, New Delhi, 1973
- Studies in Indian Poetics. Bhattacharyya, Sivaprasad. Firma KLM Publishers, Calcutta, 1981
[1] ಈತನ ಹೆಸರು ‘ತೌತ’ ಮತ್ತು ‘ತೋತ’ ಎಂದು ಇಬ್ಬಗೆಯಾಗಿ ಶಾಸ್ತ್ರಗ್ರಂಥಗಳಲ್ಲಿ ಉಲ್ಲೇಖಗೊಂಡಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ತೌತ ಎಂಬ ರೂಪವೇ ಪ್ರಚುರವಾಗಿರುವ ಕಾರಣ ಆ ಹೆಸರನ್ನೇ ಇಲ್ಲಿ ಬಳಸಲಾಗಿದೆ. ತೋತ ಎಂಬುದಕ್ಕೆ ಗಿಣಿ ಎಂಬ ಅರ್ಥ ಇರುವುದು ವಿವಿಧ ಅಪಭ್ರಂಶಭಾಷೆಗಳಿಂದಲೂ ಹಿಂದಿಯಂಥ ಆಧುನಿಕ ಭಾಷೆಗಳಿಂದಲೂ ತಿಳಿದುಬರುತ್ತದೆ. ಆದರೆ ತೌತ ಎಂಬ ಹೆಸರಿನ ಹುರುಳೇನೆಂದು ನಮಗೆ ತಿಳಿಯದು.
[2] ಕಾವ್ಯಕೌತುಕವನ್ನು ಕುರಿತು ಹೊರಬಂದಿರುವ ಸಂಶೋಧನಲೇಖನಗಳ ಪೈಕಿ ಗಮನಾರ್ಹವಾದುದು ಡಾ|| ಶಿವಪ್ರಸಾದ ಭಟ್ಟಾಚಾರ್ಯ ಅವರ ಪ್ರಬಂಧ ‘Three Lost Masterpieces of Alaṅkāraśāstra.’ (ನೋಡಿ: ‘Studies in Indian Poetics’, pp. 29–37)
ಕಾವ್ಯಕೌತುಕದ ಸ್ವರೂಪ ಎಂಥದ್ದೆಂಬುದರ ಬಗೆಗೆ ನಮಗೆ ನಿಶ್ಚಯವಿಲ್ಲ. ಎ. ಶಂಕರನ್ ಅವರು ಇದು ಕೇವಲ ನಾಟ್ಯಶಾಸ್ತ್ರಕ್ಕೆ ಸಂಬಂಧಿಸಿದೆ; ಮತ್ತಿಲ್ಲಿ ಧ್ವನಿ-ರಸಗಳ ವಿವೇಚನೆ ಪ್ರಧಾನವಾಗಿದೆ ಎಂದು ಊಹಿಸುತ್ತಾರೆ. ವಿ. ರಾಘವನ್ ಅವರು ಕಾವ್ಯ-ನಾಟಕಗಳೆರಡರ ಅಂಶಗಳೂ ಕಾವ್ಯಕೌತುಕದಲ್ಲಿ ಇವೆಯೆಂದು ಭಾವಿಸುತ್ತಾರೆ (ನೋಡಿ: ‘Some Aspects of Literary Criticism in Sanskrit’, p. 96; ‘Bhoja’s Śrṅgāraprakāśa’, p. 9). ಇವರ ನಿಲವೇ ಯುಕ್ತವೆಂದು ನಾವು ತಿಳಿಯಬಹುದು. ಇದಕ್ಕೆ ಮುಂದೆ ಬರುವ ಉಲ್ಲೇಖಗಳೇ ಸಾಕ್ಷಿ. ಇದು ಕಾವ್ಯಕೌತುಕದ ಸ್ವರೂಪವನ್ನು ಕುರಿತ ವಿಷಯವಾದರೆ, ಇದರ ರೂಪ ಎಂಥದ್ದೆಂದು ಸಂಗತಿಯೂ ಚರ್ಚಾಸ್ಪದವಾಗಿದೆ. ಕೆಲವರು ಇದು ದಂಡಿ-ಭಾಮಹಾದಿಗಳ ಕೃತಿಗಳಂತೆ ಕೇವಲ ಶ್ಲೋಕಮಯವೆಂದು ಭಾವಿಸಿದರೆ, ಮತ್ತೆ ಕೆಲವರು ಇಲ್ಲಿ ಭೋಜ-ಮಹಿಮಭಟ್ಟರ ಗ್ರಂಥಗಳಂತೆ ಪದ್ಯಗಳೊಡನೆ ಗದ್ಯಭಾಗವೂ ಇದೆಯೆಂದು ಬಗೆಯುತ್ತಾರೆ. ಇನ್ನು ಕೆಲವರು ಆನಂದವರ್ಧನ, ಕುಂತಕ ಮೊದಲಾದವರ ಕೃತಿಗಳಂತೆ ಇದು ಕಾರಿಕೆ-ವೃತ್ತಿಗಳಿಂದ ಕೂಡಿದೆಯೆಂದು ಊಹೆ ಮಾಡುತ್ತಾರೆ. ಇವಾವುವೂ ನಿಶ್ಚಿತವಲ್ಲ. ಆದರೆ ಅಭಿನವಗುಪ್ತನೊಬ್ಬನನ್ನುಳಿದು ಮತ್ತಾರೂ ತೌತನ ಅಭಿಪ್ರಾಯಗಳನ್ನು ಗದ್ಯರೂಪದಲ್ಲಿ ಉಲ್ಲೇಖ ಮಾಡದ ಕಾರಣದಿಂದ ಕಾವ್ಯಕೌತುಕವು ಕೇವಲ ಪದ್ಯಮಯವೆಂದು ನನಗೆ ತೋರುತ್ತದೆ. ಅಭಿನಗುಪ್ತನು ಉಲ್ಲೇಖಿಸುವ ಗದ್ಯಭಾಗಗಳು ಮೂಲಗ್ರಂಥದ ಶ್ಲೋಕಗಳಿಗೆ ತನ್ನದೇ ಆದ ಸಾರಕಥನ ಇರಬಹುದು. ಅಥವಾ ತನ್ನ ಗುರುವಿನ ಪ್ರವಚನದ ತಾತ್ಪರ್ಯವಿರಬಹುದು. ಎರಡನೆಯ ಸಾಧ್ಯತೆಯೇ ಹೆಚ್ಚು ಸರಿಯೆಂಬುದನ್ನು ನಾವು ಆಯಾ ಸಂದರ್ಭಗಳಿಂದಲೇ ಅರಿಯಬಹುದು.
[3] ಅಭಿನವಭಾರತಿಗೆ ಹೋಲಿಸಿದರೆ ಲೋಚನದಲ್ಲಿ ತೌತನ ಉಲ್ಲೇಖ ತೀರ ಕಡಮೆ ಇರುವುದಕ್ಕೆ ಕಾರಣವನ್ನು ನಾವು ಈ ರೀತಿ ಊಹಿಸಬಹುದು: ಅಭಿನವಗುಪ್ತನಿಗೆ ನಾಟ್ಯಶಾಸ್ತ್ರವನ್ನು ಪಾಠ ಹೇಳಿದವನು ಭಟ್ಟತೌತನಾದರೆ, ಧ್ವನ್ಯಾಲೋಕವನ್ನು ಕಲಿಸಿದವನು ಭಟ್ಟೇಂದುರಾಜ. ಯಾವ ಗುರು ಯಾವ ಗ್ರಂಥವನ್ನು ಪಾಠ ಹೇಳಿದನೋ ಅವನ ಪ್ರಸ್ತಾವ ತತ್ಸಂಬಂಧಿ ಕೃತಿಗಳಲ್ಲಿ ಹೆಚ್ಚಾಗಿ ಬರುವುದು ಸಹಜ. ಇಂತಿದ್ದರೂ ಲೋಚನದಲ್ಲಿ ಬಂದಿರುವ ಭಟ್ಟೇಂದುರಾಜನ ಪ್ರಸ್ತಾವಗಳ ಪ್ರಮಾಣವನ್ನು ಅಭಿನವಭಾರತಿಯಲ್ಲಿ ಬಂದಿರುವ ತೌತನ ಉಲ್ಲೇಖಗಳೊಡನೆ ಹೋಲಿಸಿದಾಗ ಭಟ್ಟತೌತನ ಉದ್ದೃತಿಗಳು ಅಧಿಕಾಧಿಕ ಎಂದು ತಿಳಿಯುತ್ತದೆ. ಇದಕ್ಕೊಂದು ಕಾರಣ ಅಭಿನವಭಾರತಿಯ ಗ್ರಂಥವಿಸ್ತರ. ಆದರೆ ಇದಕ್ಕೂ ಮಿಗಿಲಾದ ಕಾರಣವೆಂದರೆ ತೌತನ ಒಳನೋಟಗಳು ಮತ್ತು ನಾಟ್ಯಶಾಸ್ತ್ರದಂಥ ಬಹುಮುಖಿಯಾದ ಮಹಾಗ್ರಂಥವನ್ನು ಅರ್ಥಮಾಡಿಕೊಳ್ಳುವಲ್ಲಿ ಅವು ನೀಡಬಲ್ಲ ಎಣೆಯಿಲ್ಲದ ನೆರವು.
[4] ಇದನ್ನು ಪುಷ್ಟೀಕರಿಸುವಂತೆ ಅಭಿನವಭಾರತಿಯ ಕಡೆಯಲ್ಲಿಯೂ (೩೭.೩) ಒಂದು ಉಲ್ಲೇಖವಿದೆ: “ಸದ್ವಿಪ್ರತೋತವದನಾದಧಿಗಮ್ಯ ನಾಟ್ಯವೇದಂ ವ್ಯಧತ್ತ ವಿವೃತಿಂ ಲಘುಮರ್ಥಪೂರ್ಣಾಮ್”.
To be continued.