ಶ್ಲೋಕದ ಬಳಿಕ ಉಪಜಾತಿ, ವಂಶಸ್ಥ, ರಥೋದ್ಧತಾ, ವಸಂತತಿಲಕಾ ಮೊದಲಾದ ಹಲವು ಛಂದಸ್ಸುಗಳು ಸಂಸ್ಕೃತಸಾಹಿತ್ಯದಲ್ಲಿ ಪ್ರಸಿದ್ಧಿ-ಪ್ರಾಚುರ್ಯಗಳನ್ನು ಗಳಿಸಿವೆ. ಇವುಗಳ ಸಂಖ್ಯೆ ಇಪ್ಪತ್ತು-ಮೂವತ್ತಕ್ಕಿಂತ ಹೆಚ್ಚಿನದಲ್ಲ. ಇವುಗಳ ಪೈಕಿ ಲಯರಹಿತ ವೃತ್ತಗಳೇ ಅಧಿಕ. ಇಂಥ ವೃತ್ತಗಳ ಗತಿಗಳಲ್ಲಿ ಸಾಕಷ್ಟು ಸಾಮ್ಯವುಂಟು. ಆದುದರಿಂದ ಪ್ರಸ್ಫುಟವಾದ ಗತಿವೈವಿಧ್ಯವುಳ್ಳ ಲಯರಹಿತ ವೃತ್ತಗಳ ಸಂಖ್ಯೆ ಮತ್ತೂ ಕಡಮೆ. ಆದರೆ ಈ ಸಂಖ್ಯೆ ಲಯಾನ್ವಿತವಾದ ವಿಶಿಷ್ಟ ವೃತ್ತ-ಜಾತಿಗಳ ವೈವಿಧ್ಯಕ್ಕೆ ಹೋಲಿಸಿದರೆ ಹೆಚ್ಚು. ಇದು ನಿಜಕ್ಕೂ ವಿಸ್ಮಯಾವಹ.
ಸೇಡಿಯಾಪು ಅವರು ನಿರೂಪಿಸಿರುವಂತೆ ಛಂದಃಪ್ರಪಂಚದಲ್ಲಿ ಲಯರಹಿತವಾದ ಬಂಧಗಳಿಗಿಂತ ಲಯಾನ್ವಿತ ಬಂಧಗಳ ಸಂಖ್ಯೆಯೇ ಮಿಗಿಲು. ಲಯಾನ್ವಿತ ಬಂಧಗಳು ತ್ರಿಕಲ, ಚತುಷ್ಕಲ, ಪಂಚಕಲ ಮತ್ತು ಸಪ್ತಕಲಗಳೆಂಬ ಮೂಲಭೂತವಾದ ನಾಲ್ಕು ತಾಳಗತಿಗಳ ಹಾಗೂ ತಜ್ಜನ್ಯವಾದ ಷಟ್ಕಲ ಮತ್ತು ಅಷ್ಟಕಲಗಳೆಂಬ ಸಂತುಲಿತಗತಿಗಳ ಒಳಗೆ ಅಡಗುವ ಕಾರಣ ವೈವಿಧ್ಯದ ಸಂಖ್ಯೆ ಆರೇ. ಈ ಲಯಗಳು ಉನ್ಮೀಲಿಸುವ ಗುರು-ಲಘುವಿನ್ಯಾಸದ ಪರಿ ಮಾತ್ರ ಅಪಾರ. ಮಾತ್ರಾಜಾತಿಯ ಛಂದೋಗತಿಯ ದೃಷ್ಟಿಯಿಂದ ಈ ವಿನ್ಯಾಸಕ್ಕೆ ಹೆಚ್ಚಿನ ಬೆಲೆಯಿಲ್ಲ. ಲಯಪ್ರತೀತಿಯ ಮೂಲಮಾನವಾದ ಮಾತ್ರೆಗಳ ಹಾಗೂ ತದ್ಘಟಿತವಾದ ಗಣಗಳ ಲೆಕ್ಕವನ್ನು ಕುರಿತೇ ಅದರ ಅವಧಾರಣೆ ಹೆಚ್ಚು. ಮಾತ್ರಾಜಾತಿಗಳ ಪದ್ಯಶಿಲ್ಪದ ಸೌಂದರ್ಯವನ್ನು ವಿವೇಚಿಸಲು ತೊಡಗಿದಾಗ ಮಾತ್ರ ಗಣಗಳೊಳಗಿನ ಗುರು-ಲಘುವಿನ್ಯಾಸಗಳ ವೈಶಿಷ್ಟ್ಯ ಗಣನೆಗೆ ಬರುತ್ತದೆ. (ಇದು ವ್ಯಂಜಕತೆಯ ದೃಷ್ಟಿಯಿಂದ.) ಒಟ್ಟಿನಲ್ಲಿ ಮಾತ್ರಾಜಾತಿಗಳ ಹಾಗೂ ಅವುಗಳ ತಾಳಾತ್ಮಕ ಗತಿಯನ್ನು ಅನುಸರಿಸುವ ಲಯಾನ್ವಿತ ವೃತ್ತಗಳ ಮೂಲಸಂಖ್ಯೆ ಕಡಮೆ. ಗುರು-ಲಘುವಿನ್ಯಾಸದ ನೈಯತ್ಯವಿರುವ ಯಾವುದೇ ಲಯಾನ್ವಿತ ವೃತ್ತಕ್ಕಿಂತ ಅದರದೇ ಲಯಲಾಸ್ಯವನ್ನುಳ್ಳ ಮಾತ್ರಾಜಾತಿಯ ಗತಿಸೌಂದರ್ಯ ಮತ್ತು ನಿರ್ವಾಹಸೌಲಭ್ಯಗಳು ಹೆಚ್ಚಿನವೆಂದು ನನ್ನ ಅನಿಸಿಕೆ. ಏಕೆಂದರೆ ಲಯಾನ್ವಿತ ವೃತ್ತಗಳ ಗುರು-ಲಘುನೈಯತ್ಯ ಪ್ರತಿಯೂಂದು ತಾಲಾವರ್ತದ ಅಕ್ಷರವಿನ್ಯಾಸವನ್ನು ಏಕರೂಪತೆಗಾಗಿ ನಿರ್ಬಂಧಿಸುವ ಮೂಲಕ ಅದನ್ನು ಏಕತಾನತೆಯತ್ತ ಬೇಗ ದೂಡುವುದಲ್ಲದೆ ಭಾಷೆಯ ಸಹಜವಾದ ಪದಗತಿಯ ಸ್ವಾತಂತ್ರ್ಯಕ್ಕೂ ಅಡ್ಡಿಯಾಗುತ್ತದೆ.
ಸಂಸ್ಕೃತವನ್ನುಳಿದು ಜಗತ್ತಿನ ಮಿಕ್ಕ ಯಾವುದೇ ಭಾಷೆಯಲ್ಲಿ ಲಯರಹಿತವಾದ ಬಂಧಗಳ ಉದ್ಗಮ ಮತ್ತು ವಿನಿಯೋಗಗಳನ್ನು ನಾವು ಈ ಪ್ರಮಾಣದಲ್ಲಿ ಕಾಣುವುದಿಲ್ಲ. ಒಂದು ಪಕ್ಷ ಇಂಥ ಬಂಧಗಳ ವಿನಿಯೋಗ ಕಂಡಲ್ಲಿ ಅದು ಸಂಸ್ಕೃತಭಾಷೆಯಿಂದ ಮಾಡಿಕೊಂಡ ಸ್ವೀಕೃತಿಯೇ ಆಗಿರುತ್ತದೆ. ಇದಕ್ಕೆ ತುಳು, ಕನ್ನಡ, ತೆಲುಗು, ಮಲಯಾಳ ಮುಂತಾದ ದಾಕ್ಷಿಣಾತ್ಯ ಭಾಷೆಗಳಲ್ಲದೆ ಒರಿಯಾ, ಹಿಂದಿ, ಮರಾಠಿ, ಗುಜರಾತಿ, ಬಂಗಾಳಿಗಳಂಥ ಔತ್ತರಾಹ ಭಾಷೆಗಳೂ ಸಾಕ್ಷಿ.
ಲಯಾನ್ವಿತವಾದ ವೃತ್ತಗಳ ಹಾಗೂ ಜಾತಿಗಳ (ಮಾತ್ರಾ ಮತ್ತು ಕರ್ಷಣ) ಗತಿಮೀಮಾಂಸೆ ಬಲುಮಟ್ಟಿಗೆ ಒಂದೇ ಆಗಿದೆ. ಇದು ಸಾಮಾನ್ಯರಿಗೂ ಸುಲಭವಾಗಿ ಸ್ಫುರಿಸುವಂಥದ್ದು. ಆದರೆ ಲಯರಹಿತ ವೃತ್ತಗಳ ಗತಿಮೀಮಾಂಸೆ ಈ ಜಾಡಿನದಲ್ಲ. ಇವುಗಳ ಗತಿಸೌಂದರ್ಯವನ್ನು ವಿವೇಚಿಸಲು ಹೆಚ್ಚಿನ ಸಂವೇದನಶೀಲತೆ ಅವಶ್ಯ. ಈ ಕಾರಣದಿಂದ ಇವುಗಳ ವಿವರಣೆಯೂ ಜಟಿಲವೆನಿಸುತ್ತದೆ. ಲಯಾನ್ವಿತ ಬಂಧಗಳ ವಿವೇಚನೆಯಲ್ಲಿ ನಿರ್ಣಾಯಕ ಪಾತ್ರವಹಿಸುವ ತಾಳಲಯ ಪಂಡಿತ-ಪಾಮರ ಎಂಬ ಭೇದವಿಲ್ಲದೆ ಆಬಾಲಗೋಪಾಲವಾಗಿ ಎಲ್ಲರ ಕೈಗೆಟಕುತ್ತದೆ; ಕಿವಿಗೆ ದಕ್ಕುತ್ತದೆ. ಇಂಥ ಮಾಪನಸೌಲಭ್ಯ ಲಯರಹಿತ ವೃತ್ತಗಳಿಗಿಲ್ಲ. ಅವು ಏನಿದ್ದರೂ ನಿರಾಲಂಬವೂ ಕಾಲದ ಅಳತೆಯನ್ನು ಮೀರಿದ್ದೂ ಆದ ನಾದಗತಿಯ ಸಂವೇದನೆಯನ್ನು ನಚ್ಚಿ ನಡೆಯುತ್ತವೆ. ಹೀಗಾಗಿ ಇವುಗಳ ಸೌಂದರ್ಯ ಹೆಚ್ಚು ಅಮೂರ್ತ. ಇದನ್ನು ನಿರೂಪಿಸಲು ಬೇಕಾದ ಅಕ್ಷರಗತಿ, ಯತಿ ಮುಂತಾದ ಹಲಕೆಲವು ಸಾಧನಗಳನ್ನು ಸೇಡಿಯಾಪು ಕೃಷ್ಣ ಭಟ್ಟರು ಪರಿಷ್ಕಾರವಾಗಿ ರೂಪಿಸಿಕೊಟ್ಟಿರುವುದು ಬೆಲೆಯುಳ್ಳ ಸಂಗತಿ. ನಾವು ಇವುಗಳನ್ನು ನಚ್ಚಿ ಮತ್ತಷ್ಟು ಆಳ-ಅಗಲಗಳನ್ನು ಕ್ರಮಿಸಬಹುದು. ಪ್ರಸ್ತುತ ಉಪಕ್ರಮ ಈ ನಿಟ್ಟಿನದೇ ಆಗಿದೆ.
ಇಂದ್ರವಜ್ರಾ, ಉಪೇಂದ್ರವಜ್ರಾ, ಉಪಜಾತಿ
ಇಂದ್ರವಜ್ರಾ ಮತ್ತು ಉಪೇಂದ್ರವಜ್ರಾ ವೃತ್ತಗಳಿಗಿಂತ ಉಪಜಾತಿ ಪ್ರಾಚೀನವೆಂದೂ ಇದು ವೈದಿಕ ತ್ರಿಷ್ಟುಪ್‌ವರ್ಗದ ಛಂದಸ್ಸಿನಿಂದ ಹುಟ್ಟಿದೆಯೆಂದೂ ಛಂದಃಶಾಸ್ತ್ರಜ್ಞರು ನಿರೂಪಿಸಿದ್ದಾರೆ. ‘ಉಪಜಾತಿ’ಶಬ್ದದ ಸ್ವಾರಸ್ಯವನ್ನು ಸೇಡಿಯಾಪು ಅವರು ಸೊಗಸಾಗಿ ಆವಿಷ್ಕರಿಸಿದ್ದಾರೆ (ಸೇಡಿಯಾಪು ಛಂದಃಸಂಪುಟ, ಪು. ೭೪-೭೮). ಆದುದರಿಂದ ಈ ಎಲ್ಲ ವಿವರಗಳನ್ನು ಇಲ್ಲಿ ಮತ್ತೆ ಚರ್ಚಿಸುವುದು ಅನವಶ್ಯ. ಇದು ಛಂದಸ್ಸಿನ ಐತಿಹಾಸಿಕವಾದ ವಿಶ್ಲೇಷಣೆಯಲ್ಲದ ಕಾರಣ ಉಪಜಾತಿಯನ್ನು ಇಂದ್ರವಜ್ರಾ ಮತ್ತು ಉಪೇಂದ್ರವಜ್ರಾ ವೃತ್ತಗಳ ಮಿಶ್ರಣವೆಂದು ಭಾವಿಸಿ ಇವುಗಳ ಗತಿಯ ಮೀಮಾಂಸೆಗೆ ತೊಡಗಬಹುದು. ಐತಿಹಾಸಿಕವಾಗಿ ಹಲಕೆಲವು ಜನ್ಯರಾಗಗಳು ಅವುಗಳ ಜನಕರಾಗ ಎನಿಸಿಕೊಂಡ ಮೇಳಗಳಿಗಿಂತ ಪ್ರಾಚೀನವೇ ಆದರೂ ಸಂಗೀತದ ಸೌಂದರ್ಯವನ್ನು ಕುರಿತು ವೈಜ್ಞಾನಿಕವಾಗಿ ಚರ್ಚಿಸುವಾಗ ಜನಕ ಮತ್ತು ಜನ್ಯರಾಗಗಳ ವಿಭಾಗವೇ ಯುಕ್ತವೆಂದು ತೋರುವುದಷ್ಟೆ. ಇದೇ ನ್ಯಾಯವನ್ನು ಪ್ರಕೃತಕ್ಕೂ ಅನ್ವಯಿಸಬಹುದು.
{ಇಂದ್ರವಜ್ರಾ} ಸಾಲಿಗೆ ಹನ್ನೊಂದು ಅಕ್ಷರಗಳುಳ್ಳ ಸಮವೃತ್ತವಾದ ಇಂದ್ರವಜ್ರಾ ತ-ತ-ಜ-ಗ-ಗ ಎಂಬ ಗಣವಿನ್ಯಾಸವನ್ನು ಹೊಂದಿದೆ. ಇದರ ಪ್ರಸ್ತಾರ ಹೀಗಿದೆ:
– – u – – u u – u – –
ಆದ್ಯಂತವಾಗಿ ಗುರುಪ್ರಧಾನವಾದ ಮಧ್ಯಮಾಕ್ಷರಗತಿಯನ್ನು ಹೊಂದಿದ ಈ ವೃತ್ತ ದುರ್ಬಲ ಯತಿಯನ್ನು ತಳೆದಿರುವುದು ಸಹಜವೇ ಆಗಿದೆ. ಈ ಕಾರಣದಿಂದಲೇ ಹೆಚ್ಚಿನ ಲಕ್ಷಣಗ್ರಂಥಗಳಲ್ಲಿ ಇದರ ಯತಿಸ್ಥಾನವನ್ನು ಸೂಚಿಸಿಲ್ಲ. ಕವಿಗಳು ಕೂಡ ಯತಿಯನ್ನು ಪಾಲಿಸಿಲ್ಲ. (ಛಂದೋಮೀಮಾಂಸೆಗೆ ಶುಷ್ಕಶಾಸ್ತ್ರಜ್ಞರಿಗಿಂತ ಮಿಗಿಲಾಗಿ ಸರಸಕವಿಗಳೇ ಒದಗಿಬರುತ್ತಾರೆ.) ವಸ್ತುಸ್ಥಿತಿ ಹೀಗಿದ್ದರೂ ಸಾಹಿತ್ಯನಿರಪೇಕ್ಷವಾಗಿ ಛಂದೋಗತಿಯನ್ನು ಶುಷ್ಕಾಕ್ಷರಗಳ ಮೂಲಕ ಗುನುಗಿಕೊಂಡರೆ ಮೊದಲ ಐದು ಅಕ್ಷರಗಳ ಬಳಿಕ ಯತಿಕಲ್ಪವಾದ ವಿರಾಮವೊಂದು ಇರುವಂತೆ ಭಾಸವಾಗುತ್ತದೆ:
– – u – – | u u – u – –
ಇಂಥ ಲಕ್ಷಣಸಂಪನ್ನವಾದ ವೃತ್ತವನ್ನು ಪರಿಶೀಲಿಸಬಹುದು:
ಲೋಕಾಭಿರಾಮಂ | ರಣರಂಗಧೀರಂ
ರಾಜೀವನೇತ್ರಂ | ರಘುವಂಶನಾಥಮ್ |
ಕಾರುಣ್ಯರೂಪಂ | ಕರುಣಾಕರಂ ತಂ
ಶ್ರೀರಾಮಚಂದ್ರಂ | ಶರಣಂ ಪ್ರಪದ್ಯೇ || (ಶ್ರೀರಾಮರಕ್ಷಾಸ್ತೋತ್ರ, ೩೨)
ಇಲ್ಲಿ ಪ್ರತಿಪಾದದಲ್ಲಿಯೂ ಐದನೆಯ ಅಕ್ಷರದ ಬಳಿಕ ಯತಿಯಿರುವುದಲ್ಲದೆ ‘ವಡಿ’ ಎಂದು ಗುರುತಿಸಲ್ಪಡುವ ಲಕ್ಷಣವೂ ಬಲುಮಟ್ಟಿಗೆ ಕಂಡುಬರುತ್ತಿದೆ. ರೇಫ ಮತ್ತು ಲಕಾರಗಳಿಗಿರುವ ಉತ್ಪತ್ತಿಸ್ಥಾನದ ಸಾಮ್ಯವಿಲ್ಲಿ ವಡಿಗೆ ಅನುಕೂಲಿಸಿದೆ. ಇಂಥ ವಡಿಯ ಮೂಲಕ ನಾವು ಪ್ರಸ್ತುತ ಪದ್ಯದ ಕವಿಗಿದ್ದ ಯತಿಸ್ಥಾನದ ಸಂವೇದನೆಯನ್ನು ಗುರುತಿಸಬಹುದು. ಇದು ಕೂಡ ಇಂದ್ರವಜ್ರಾ ಛಂದಸ್ಸಿನ ಯತಿನಿಶ್ಚಯಕ್ಕೊಂದು ಉಪಪತ್ತಿ. ಹೀಗೆ ಆದ್ಯಂತ ಯತಿಯನ್ನು ಪಾಲಿಸುವ ಉದಾಹರಣೆಗಳು ವಿರಳ. ಯತಿದುರ್ಬಲತೆ ಮತ್ತು ಅದಕ್ಕೆ ಮೂಲವಾಗಿರುವ ಪಾದಾದ್ಯಂತ ವಿಸ್ತರಿಸಿಕೊಂಡ ಗುರುಪ್ರಧಾನವಾದ ಮಧ್ಯಮಾಕ್ಷರಗತಿಯ ಏಕರೂಪತೆಗಳೇ ಇದಕ್ಕೆ ಕಾರಣ. ಈ ವೃತ್ತಕ್ಕೆ ಇಂಥ ಸ್ವರೂಪವಿರುವ ಕಾರಣದಿಂದಲೇ ಇದು ನಿರ್ವಾಹಕ್ಕೆ ಸುಲಭವಾಗಿ, ಕಥನಕ್ಕೆ ಚೆನ್ನಾಗಿ ಒದಗಿಬಂದಿದೆ.
ಪಂಚಮಸ್ಥಾನದ ಯತಿಯನ್ನು ಪಾಲಿಸದ ಒಂದೆರಡು ಉದಾಹರಣೆಗಳನ್ನು ಕಾಣಬಹುದು:
ಗೋಷ್ಠೇ ಗಿರಿಂ ಸ- | ವ್ಯಕರೇಣ ಧೃತ್ವಾ
ರುಷ್ಟೇಂದ್ರವಜ್ರಾ- | ಹತಿಮುಕ್ತವೃಷ್ಟೌ ||
ಯೋ ಗೋಕುಲಂ ಗೋ- | ಪಕುಲಂ ಚ ಸುಸ್ಥಂ
ಚಕ್ರೇ ಸ ನೋ ರ- | ಕ್ಷತು ಚಕ್ರಪಾಣಿಃ ||
(The Practical Sanskrit-English Dictionary, p. 1037)
ಆಶಾಸು ರಾಶೀ- | ಭವದಂಗವಲ್ಲೀ-
ಭಾಸೈವ ದಾಸೀ- | ಕೃತದುಗ್ಧಸಿಂಧುಮ್ |
ಮಂದಸ್ಮಿತೈರ್ನಿಂ- | ದಿತಶಾರದೇಂದುಂ
ವಂದೇಽರವಿಂದಾ- | ಸನಸುಂದರಿ ತ್ವಾಮ್ ||
(ರಘುವಂಶದ ಸಂಜೀವಿನೀವ್ಯಾಖ್ಯಾನ, ಎರಡನೆಯ ಸರ್ಗದ ಆದಿ)
ಮೊದಲ ಪದ್ಯದ ಮೂರು ಪಾದಗಳಲ್ಲಿ ಯತಿ ಪಾಲಿತವಾಗಿಲ್ಲ. ಎರಡನೆಯ ಪದ್ಯದ ಒಂದು ಪಾದದಲ್ಲಿ ಮಾತ್ರ ಯತಿ ಪಾಲಿತವಾಗಿಲ್ಲ. ಉಭಯತ್ರ ಯತಿಯು ಪಾಲಿತವಾಗಿರುವ ಎಡೆಗಳಲ್ಲಿ ಸಂಧಿಯಾಗಿರುವುದನ್ನು ಗಮನಿಸಬಹುದು. ಹೀಗಾಗಿ ಇಲ್ಲಿರುವುದು ಪದಾಂತದ ಯತಿಯಲ್ಲ; ಶ್ರುತಿಸಹ್ಯ ಸಂಧಿಯ ಯತಿ. ಸ್ವಾರಸ್ಯವೆಂಬಂತೆ ಮೊದಲ ಉದಾಹರಣೆಯ ಮೂರು ಪಾದಗಳಲ್ಲಿ ನಾಲ್ಕನೆಯ ಅಕ್ಷರದ ಬಳಿಕ ಪದ ಮುಗಿದು ಯತಿ ಪಾಲಿತವಾದಂತೆ ಭಾಸವಾಗುತ್ತಿದೆ. ಎರಡನೆಯ ಉದಾಹರಣೆಯ ನಾಲ್ಕೂ ಪಾದಗಳಲ್ಲಿ ಏಳನೆಯ ಅಕ್ಷರದ ಬಳಿಕ ಪದಸಮಾಪ್ತಿಯೊಡನೆ ಯತಿಯು ಪಾಲಿತವಾದಂತೆ ಪ್ರತೀತವಾಗುತ್ತಿದೆ. ಕೆಲವೊಂದು ಪದ್ಯಗಳಲ್ಲಿ ಇಂಥ ವಿರಾಮವು ಆರನೆಯ ಅಕ್ಷರದ ಬಳಿಕವೂ ತೋರಿಕೊಳ್ಳುವುದುಂಟು. ಒಟ್ಟಿನಲ್ಲಿ ಈ ಬಗೆಯ ವಿರಾಮಗಳು ಪಾದದ ನಡುವಣ ಎರಡು ಲಘುಗಳ ಆಸು-ಪಾಸಿನಲ್ಲಿಯೇ ಬರುತ್ತವೆ. ಇದನ್ನು ವ್ಯಾಪಕ ಪರಿಶೀಲನೆಯಿಂದ ಕಂಡುಕೊಳ್ಳಬಹುದು.[1] ವಿರಾಮಸ್ಥಾನದ ಇಂಥ ಸಂದಿಗ್ಧತೆಗೆ ಕಾರಣ ಪ್ರಸ್ತುತ ವೃತ್ತದ ಅಕ್ಷರಗತಿಯ ಏಕರೂಪತೆಯೇ. ಅದು ಪಾದದ ನಡುವಣ ಎರಡು ಲಘುಗಳ ಆಸು-ಪಾಸಿನಲ್ಲಿಯೇ ತೋರಿಕೊಳ್ಳುವುದಕ್ಕೆ ಮುಖ್ಯ ಕಾರಣ - ಗುರುಪ್ರಾಧಾನ್ಯದ ಸಾಮ್ಯವಿದ್ದರೂ ಗುರುಗಳ ವಿನ್ಯಾಸದಲ್ಲಿ ಕಿಂಚಿತ್ ವ್ಯತ್ಯಾಸವುಳ್ಳ ಎರಡು ಘಟಕಗಳ ಸಮ್ಮೇಳನ ಅದೇ ಎಡೆಯಲ್ಲಿ ಆಗಿರುವುದು:
– – u – – [u u] – u – –
ಈ ಸಂದಿಗ್ಧತೆಯನ್ನು ಬಗೆಹರಿಸಿಕೊಳ್ಳಲೆಂದೇ ಸಾಹಿತ್ಯನಿರಪೇಕ್ಷವಾಗಿ ಬರಿಯ ಶುಷ್ಕಾಕ್ಷರಗಳನ್ನು ಪಠಿಸಿ ಯತಿಸ್ಥಾನವನ್ನು ನಾವು ಈ ಮುನ್ನ ಕಂಡುಕೊಂಡಿದ್ದೆವು. ಇಂಥ ನಿಶ್ಚಯಕ್ಕೆ ಲಯದ ಬೆಂಬಲವೂ ಇದೆ. ಇಂದ್ರವಜ್ರಾ ಲಯರಹಿತ ವೃತ್ತಗಳಲ್ಲಿ ಒಂದಾಗಿದ್ದರೂ ಸೂಕ್ಷ್ಮವಾಗಿ ಪರಿಶೀಲಿಸಿದರೆ ಅದರಲ್ಲೊಂದು ಲಯಾನ್ವಿತತೆ ಇಣಿಕುತ್ತದೆ. ಇದು ಸಂಕೀರ್ಣಗತಿಯೇ ಆಗಿದೆ.
ಅದರ ಪ್ರಸ್ತಾರವನ್ನು ಹೀಗೆ ಕಾಣಬಹುದು:
– – | u – – | u u – | u – –
ಇಲ್ಲಿ ೪+೫+೪+೫ ಎಂಬ ಮಾತ್ರಾವಿನ್ಯಾಸದ ನಾಲ್ಕು ಘಟಕಗಳಿವೆ. ಇಷ್ಟು ಶುದ್ಧವಾದ ಸಂಕೀರ್ಣಗತಿ ಇದ್ದರೂ ಐದು ಮಾತ್ರೆಗಳ ಎರಡು ಘಟಕಗಳಲ್ಲಿಯೂ ಲಘ್ವಾದಿಯಾದ ಯ-ಗಣಗಳು ಬಂದಿರುವ ಕಾರಣ ಗೇಯತೆ-ಗತಿಸುಭಗತೆಗಳಿಗೆ ಈ ವಿನ್ಯಾಸ ಹಿತವೆನಿಸುವುದಿಲ್ಲ. ಯ-ಗಣದ ಪ್ಲುತಿಯು ಅದನ್ನು ಪ್ರತ್ಯೇಕವಾಗಿ ಇರುವ ಹಾಗೆ ಎತ್ತಿತೋರಿಸುತ್ತದೆ. ಜೊತೆಗೆ ಈ ಗಣಗಳ ಆರಂಭಿಕ ಲಘು ತತ್ಪೂರ್ವದ ಗುರುಯುಗ್ಮಕ್ಕೆ ಅಂಟಿಕೊಳ್ಳುವಂತೆಯೂ ಭಾಸವಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಪ್ರಸ್ತುತ ಗುರು-ಲಘುವಿನ್ಯಾಸದ ಮಾತ್ರಾಗಣವಿಭಾಗವು ಬೇರೆಯೇ ರೂಪವನ್ನು ತಾಳುವುದುಂಟು. ಅಂಥ ಅತ್ಯಂತ ಸಂಭಾವ್ಯವಾದ ರೂಪ ಹೀಗಿದೆ:
– – u | – – u u – u | – –
ಇಲ್ಲಿ ೫+೪+೫+೪ ಎಂಬ ಮಾತ್ರಾವಿನ್ಯಾಸದ ನಾಲ್ಕು ಘಟಕಗಳಿವೆ. ಸಂಕೀರ್ಣಗತಿ ೪+೫ ಎಂಬ ವಿನ್ಯಾಸದ ಒಂಬತ್ತು ಮಾತ್ರೆಗಳ ಲಯ. ಅದು ಇಲ್ಲಿ ೫+೪ ಎಂಬ ಪ್ರತೀಪರೂಪವನ್ನು ಹೊಂದಿದೆ. ಇದನ್ನು ‘ವಿಲೋಮಸಂಕೀರ್ಣಗತಿ’ ಎಂದು ಶಾಸ್ತ್ರೀಯವಾಗಿ ಹೆಸರಿಸುತ್ತಾರೆ. ವಸ್ತುತಃ ಸಂಕೀರ್ಣಗತಿ ಮೂಲಲಯಗಳಲ್ಲಿ ಒಂದಲ್ಲ. ಏಕೆಂದರೆ ಇಲ್ಲಿ ಬರುವ ಐದು ಮತ್ತು ನಾಲ್ಕು ಮಾತ್ರೆಗಳ ನಡುವಣ ಅನುಪಾತ ಚತುಷ್ಕಲವಾಗದೆ ಪಂಚಕಲವಾಗಿದೆ; ಅಂದರೆ, ವಿಭಾಜ್ಯವಾಗದೆ ಅವಿಭಾಜ್ಯ ಎನಿಸಿದೆ. ಹೀಗಾಗಿ ಇದೊಂದು ಗಣಿತೀಯ ಸಾಧ್ಯತೆಯ ಗತಿಯಲ್ಲದೆ ಸೌಂದರ್ಯದ ಸಾಧ್ಯತೆಯದಲ್ಲ. ಪ್ರಸ್ತುತ ವೃತ್ತದಲ್ಲಿ ಸಂಕೀರ್ಣಗತಿ ವಿಲೋಮವಾಗುವ ಮೂಲಕ ತನ್ನ ಲಯಾನ್ವಿತತೆಯ ಸಾಧ್ಯತೆಯನ್ನು ಮತ್ತಷ್ಟು ಮರೆಮಾಚಿಕೊಂಡಿದೆ. ಇದನ್ನು ಗಮನಿಸಿದಾಗ - ಅತ್ಯಂತ ಮೂಲಭೂತವಾದ ಲಯರಹಿತ ವೃತ್ತಗಳು ತಮ್ಮೊಳಗೆ ಹುದುಗಿರಬಹುದಾದ ಲಯಾನ್ವಿತತೆಯನ್ನು ವ್ಯವಸ್ಥಿತವಾಗಿ ಕರಗಿಸಿಕೊಳ್ಳುವ ಮೂಲಕ ಕಾಲದ ಕಟ್ಟನ್ನು ಕಳೆದುಕೊಂಡು ಅಮೂರ್ತ ಸೌಂದರ್ಯವನ್ನು ಅಧಿಕವಾಗಿ ವ್ಯಂಜಿಸುತ್ತವೆಂಬುದು ಸ್ಪಷ್ಟವಾಗುತ್ತದೆ. ಇಂಥ ಸಂದರ್ಭಗಳಲ್ಲಿ ವಿಲೋಮಗತಿಯ ವಿನ್ಯಾಸ, ಪ್ರತೀಪಗಣಗಳ ಬಳಕೆ, ವಿಷಮಸಂಖ್ಯೆಯ ಗಣಗಳ ವಿನಿವೇಶನ, ಲಯಸಮತ್ವಕ್ಕೆ ಬಾರದ ಎಡೆಗಳಲ್ಲಿ ಯತಿಸ್ಥಾನ ಮುಂತಾದ ಹಲವಾರು ಪ್ರಕ್ರಿಯೆಗಳು ಕಾರ್ಯಶೀಲವಾಗಿವೆಯೆಂದು ಗೊತ್ತಾಗುತ್ತದೆ. ಈ ಕೆಲವು ಅಂಶಗಳನ್ನು ಸೇಡಿಯಾಪು ಅವರು ‘ಛಂದೋಗತಿ’ಯ ಹಲವು ಎಡೆಗಳಲ್ಲಿ ಪ್ರಸ್ತಾವಿಸಿದ್ದಾರೆ.
ಛಂದಸ್ಸಿನ ಮಟ್ಟಿಗೆ ಶ್ರುತಿಕಟುವೂ ಅಸಹಜವೂ ಆದ ಸಂಕೀರ್ಣಗತಿಯು ತನ್ನ ವಿಲೋಮತೆಯಿಂದ ಸ್ವಲ್ಪ ಶ್ರುತಿಸಹ್ಯವಾಗುತ್ತದೆ. ಇದಕ್ಕೆ ಕಾರಣ ನಾಲ್ಕು ಮಾತ್ರೆಗಳ ಗಣವು ಕೆಲಮಟ್ಟಿಗೆ ಕರ್ಷಣಕ್ಕೆ ತುತ್ತಾಗಿ ಪಂಚಮಾತ್ರಾಗಣದಂತೆ ಭಾಸವಾಗುವುದೇ ಆಗಿದೆ. ನಾಲ್ಕು ಮಾತ್ರೆಗಳ ಗಣದ ಬಳಿಕ ಪದಯತಿ ಬಂದರAತೂ ಈ ಪ್ರಕ್ರಿಯೆ ಮತ್ತಷ್ಟು ಪ್ರಸ್ಫುಟವಾಗುತ್ತದೆ. ಉದಾಹರಣೆಗೆ ‘ಅಸ್ತ್ಯುತ್ತರಸ್ಯಾಂ ದಿಶಿ ದೇವತಾತ್ಮಾ’ ಎಂಬ ಸಾಲಿನಲ್ಲಿ ‘ಸ್ಯಾಂ’ ಎಂಬ ಗುರು ವಿಲೋಮಸಂಕೀರ್ಣಗತಿಯ ನಾಲ್ಕು ಮಾತ್ರೆಗಳ ಗಣದ ಕಡೆಯ ಅಕ್ಷರವಾಗಿರುವುದಲ್ಲದೆ ಆ ಪದದ ಮುಗಿತಾಯವೂ ಆಗಿರುವ ಕಾರಣ ಪ್ಲುತಕಲ್ಪವಾದ ಕರ್ಷಣಕ್ಕೆ ತುತ್ತಾಗಿ, ಅರ್ಥಕ್ಲೇಶವನ್ನುಂಟುಮಾಡದೆ, ಎದ್ದುಕಾಣುವ ವಿರಾಮಕ್ಕೆ ಅವಕಾಶ ನೀಡುತ್ತದೆ. ಇದೇ ರೀತಿ ಆ ಸಾಲಿನ ಕೊನೆಯ ಅಕ್ಷರ ‘ತ್ಮಾ’ ಕೂಡ ವರ್ತಿಸುತ್ತದೆ. ಈ ಮೂಲಕ ಪಂಚಕಲದ ಛಾಯೆಯುಳ್ಳ ಗತಿ ಇಡಿಯ ಪಾದಕ್ಕೆ ಒದಗಿದಂತಾಗುತ್ತದೆ. ಬಹುಶಃ ಈ ಕಾರಣದಿಂದಲೇ ಇರಬಹುದು, ಇಂದ್ರವಜ್ರಾ ಅಥವಾ ಉಪಜಾತಿವೃತ್ತದಲ್ಲಿ ನಿಬದ್ಧವಾದ ಪದ್ಯಗಳನ್ನು ಗಾಯಕರು ತಾಳಾನ್ವಿತವಾಗಿ ಹಾಡುವಾಗ ವಿಲೋಮಸಂಕೀರ್ಣಜಾತಿಯನ್ನು ಆಶ್ರಯಿಸುವುದಕ್ಕೆ ಬದಲಾಗಿ ಖಂಡಛಾಪು ತಾಳವನ್ನೇ ಆಧರಿಸುತ್ತಾರೆ. ಇದು ನನ್ನ ಅನುಭವದಲ್ಲಿಯೂ ಇರುವ ಸತ್ಯ. ವಿಲೋಮಸಂಕೀರ್ಣಗತಿಯ ಗಾನಕ್ರಮ ಕಷ್ಟವಾದ ಕಾರಣ ಹೀಗೆ ಮಾಡಲಾಗುತ್ತದೆ ಎಂದು ಪ್ರತಿವಾದಿಸಬಹುದಾದರೂ ಪದ್ಯಗತಿಯು ಖಂಡಗತಿಗೇ ಹೆಚ್ಚು ಅನುಕೂಲವಾಗಿರುವ ವಾಸ್ತವವನ್ನು ಅಲ್ಲಗೆಳೆಯುವಂತಿಲ್ಲ.
[1] ಇಂದ್ರವಜ್ರಾವೃತ್ತದ ಕೆಲವೊಂದು ಪ್ರಯೋಗಗಳನ್ನು ಗಮನಿಸಿದಾಗ -
– – | u – | – u u | – u | – –
ಎಂಬಂಥ ಗಣವಿಭಾಗಕ್ಕೆ ಅವಕಾಶವಿರುವಂತೆ ತೋರುತ್ತದೆ. ಉದಾಹರಣೆಗೆ –
ಹ್ಲಾದಂ ಪ್ರಭೋ ಮಾಧವ ದೇಹಿ ಮೇ ತ್ವಂ
ಖೇದಂ ಸದಾ ನಾಶಯ ಮತ್ಕಮಾರಾತ್ ||
ಇದು ವಸ್ತುತಃ ೪+೩+೪+೩+೪ ಎಂಬ ಮಾತ್ರಾವಿನ್ಯಾಸವೇ ಆಗಿದೆ. ಇಲ್ಲಿ ‘ವಿಲೋಮ ಛಾಪು’ ಎಂದು ಸಂಗೀತಶಾಸ್ತ್ರಜ್ಞರು ಹೇಳುವ ಪ್ರತೀಪರೂಪದ ಮಿಶ್ರಗತಿಯೇ ಉನ್ಮೀಲಿಸಿದೆ. ಮೊದಲ ಏಳು ಮಾತ್ರೆಗಳ ಘಟಕದಲ್ಲಿ ಮಾತ್ರ ಮೂರು ಮಾತ್ರೆಗಳು ‘ಲ-ಗಂ’ ವಿನ್ಯಾಸವನ್ನು ಹೊಂದುವ ಮೂಲಕ ಗತಿಸುಭಗತೆಗೆ ಅಡ್ಡಿಯಾಗಿವೆ. ಈ ಕಾರಣದಿಂದ ಪ್ರಸ್ತುತ ವೃತ್ತ ಲಯರಾಹಿತ್ಯವನ್ನು ಸಾಧಿಸಲು ಅನುಕೂಲವಾಗಿದೆ. ಇದಕ್ಕೆ ಪೂರಕವೆಂಬಂತೆ ಪಾದದ ಕಡೆಯ ಘಟಕ ಕೂಡ ನಾಲ್ಕು ಮಾತ್ರೆಗಳಿಗೇ ಮುಗಿದು ಲಯಸಾಕಾಂಕ್ಷವೆನಿಸಿದೆ. ಈ ಬಗೆಯ ಗುರು-ಲಘುವಿಭಾಗ ಕ್ರಮೇಣ ಎಂಥ ಮಾರ್ಪಾಡಿಗೆ ಕಾರಣವಾಯಿತೆಂಬುದನ್ನು ಮುಂದೆ ನೋಡೋಣ.
To be continued.