ಆದಿಪ್ರಾಸದ ನಿರ್ಬಂಧ ಇಲ್ಲವಾದ ಬಳಿಕ ಮತ್ತೆ ಕನ್ನಡಕ್ಕೆ ಶ್ಲೋಕ ಬರಬಹುದಿತ್ತು ಎಂಬ ಪ್ರಶ್ನೆ ಏಳಬಹುದು. ಇದಕ್ಕೂ ಕಾರಣವಿದೆ. ಆದಿಪ್ರಾಸ ಅಳಿಯುವ ಹೊತ್ತಿಗೆ ಹಳಗನ್ನಡವಿರಲಿ, ನಡುಗನ್ನಡವೂ ಅಳಿದು ಹೊಸಗನ್ನಡದ ಯುಗ ಮೊದಲಾಗಿತ್ತು. ನಾವು ಈ ಮೊದಲೇ ಕಂಡಂತೆ ಶ್ಲೋಕಕ್ಕೆ ಒಗ್ಗುವ ಭಾಷೆ ಹಳಗನ್ನಡವೇ. ಅಷ್ಟೇಕೆ, ಕಂದ-ವೃತ್ತಗಳಿಗೆಲ್ಲ ಇದೇ ಅನಿವಾರ್ಯ. ನಡುಗನ್ನಡ-ಹೊಸಗನ್ನಡಗಳಲ್ಲಿ ಈ ಎಲ್ಲ ಬಂಧಗಳು ನೀರಿಲ್ಲದ ಸರೋವರದ ಮೀನುಗಳಂತೆಯೇ ಸರಿ. ಹೀಗಾಗಿ ಶ್ಲೋಕದ ಪ್ರವೇಶಕ್ಕೆ ನವೋದಯವೂ ಒದಗಿಬರಲಿಲ್ಲ. ಮತ್ತೂ ಮುಂದಿನ ಕಾಲದಲ್ಲಿ ಛಂದಸ್ಸೇ ಬಹಿಷ್ಕೃತವಾದುದು ತಿಳಿದೇ ಇದೆ. ಪರಿಸ್ಥಿತಿ ಹೀಗಿರುವಾಗ ಶ್ಲೋಕಕ್ಕೆ ಆಸ್ಪದವೆಲ್ಲಿ? ವಸ್ತುತಃ ಇದು ಸಂಸ್ಕೃತಮೂಲದ ಬಂಧವೇ ಆಗಿದ್ದರೂ ಇಂದು ಪ್ರಚಾರದಲ್ಲಿರುವ ಸಂಭಾಷಣಸಂಸ್ಕೃತದಲ್ಲಿ ಕೂಡ ರಚಿತವಾಗುವುದು ಕಷ್ಟ ಎಂದ ಬಳಿಕ ಹೊಸಗನ್ನಡದ ಬಗೆಗೆ ಹೇಳುವುದೇನಿದೆ? ಇಂದಿನ ಆಡುಗನ್ನಡದಲ್ಲಿ ತ್ರಿಪದಿ-ಚೌಪದಿಗಳನ್ನೂ ಬರೆಯಲಾಗುವುದಿಲ್ಲ; ಸಾಂಗತ್ಯ-ಷಟ್ಪದಿಗಳನ್ನೂ ರಚಿಸಲು ಆಗುವುದಿಲ್ಲ. ಹಾಗೊಂದು ವೇಳೆ ಸಫಲವಾದಲ್ಲಿ ಅವು ಅಪವಾದಗಳೇ ಆದಾವು.
ಶ್ಲೋಕವು ಹಳಗನ್ನಡಕ್ಕೆ ಚೆನ್ನಾಗಿ ಒಗ್ಗುತ್ತದೆ. ಇದರ ಘೋಷ ಕನ್ನಡಕ್ಕೆ ಸ್ವಲ್ಪ ವಿಜಾತೀಯವೆಂದು ಸೇಡಿಯಾಪು ಅವರ ಅನಿಸಿಕೆ ಇರಬಹುದು. ಕೇಳದ ಕಿವಿಗಳಿಗೆ ಇಂಥ ಕಳವಳ ಸಹಜ. ಯಾವ ಬಂಧವೂ ಕೂಡ ಕಿವಿಗೊಗ್ಗಿದ ಬಳಿಕ ಚೆನ್ನೆನಿಸೀತು. ಖ್ಯಾತಕರ್ಣಾಟಗಳ ಘೋಷವಾದರೂ ‘ವಿಜಾತೀಯ’ ತಾನೆ! ಅಚ್ಚಗನ್ನಡದ ನೆಲದ ಬಂಧಗಳೆನಿಸದ ಮಾತ್ರಾಜಾತಿಗಳಿಗೂ ಇದೇ ತರ್ಕ ಅನ್ವಯಿಸುವುದಲ್ಲವೇ? ಹೆಚ್ಚಿನ ಮಾತೇಕೆ, ಉಪಲಬ್ಧವಿರುವ ಶ್ಲೋಕದ ಹಲಕೆಲವು ಮಾದರಿಗಳನ್ನು ನೋಡಿಯೇ ನಿಶ್ಚಯಿಸಬಹುದು:
ಕಿಡಿಪಂ ಬಾರಗೇ ಮೆಯ್ಯಂ ಕಿಡಿಪಂ ಕಿಡಿಪಂತೆ ಮುಂ |
ಕಿಡಿಪಂ ಪೋಕುಮೇ ತಾಮುಂ ಕಿಡಿಸಲ್ ಸುಡಿಸೋಲಮೇ ||
ನರನಾಯಕನಂ ನಿಂದಾನಿರದೀಗಳೆ ಕಾಂತನಂ |
ನೆರೆದೇನದಱಿಂದಲ್ಲಾ ನೆರೆದಿರ್ದಾಗೆನಾಗೆನೇ ||
ಪೆಱನಾವಂ ಧರಾಚಕ್ರಕ್ಕೆಱೆಯಂ ಕೆಳೆಯಪ್ಪವಂ |
ನೆಱೆಯಾರೆಣೆಯೆಂಬನ್ನಱೆ ಕುಱಿತಬ್ಧಿಗೆ ಬನ್ನಮಂ ||
ಜಲದಾಗಮದಿಂ ಚಿತ್ತಸ್ಖಲಿತಂ ಕೇಕಿನರ್ತನಂ |
ಜಲದಾಗಮದಿಂ ಚಿತ್ತಸ್ಖಲಿತಂ ಕೇಳನಲ್ಲನಂ || (ಕವಿರಾಜಮಾರ್ಗ, ೨.೧೨೩, ೧೨೫, ೧೨೭, ೧೨೮)
ಸುಂದರಾಕಾರಸಂಪನ್ನನೆಂದುಮೀ ನೃಪನಂದನಂ |
ನಂದನಂ ಬುಧಕೀರಾಳಿವೃಂದಕ್ಕೆ ಸಕಲರ್ತುಕಂ ||
ತನ್ನ ಸಂತತಿ ಮುನ್ನೀತಂ ತನ್ನೀತಂ ಮುನಿಸನ್ನುತಂ |
ತನ್ನನುರ್ಕಿನೊಳಿನ್ನಾತಂ ತನ್ನೊಳಿಂದಿನಿಸನ್ನುತಂ ||
ಇಂದು ನೋಡಿದು ಬೇಱಂದಮೆಂದಿನಂದಮದಲ್ತಣಂ |
ಮಂದಮಂದಂ ಕರಸ್ಪರ್ಶಂ ತಂದಪ್ಪುದುಪತಾಪಮಂ ||
ಆತನಲ್ಲದನಂ ಮೆಚ್ಚೆಂ ಮಾತೇಂ ತಾಂ ಮಾರನಾದೊಡಂ |
ಕೇತನಂ ರತಿರಾಗಕ್ಕೆ ಕೇತನಂ ತಾರ ನಲ್ಲನಂ || (ಕಾವ್ಯಾವಲೋಕನ, ೨.೫೭೧, ೫೭೪, ೫೮೨, ೫೯೧)
ಆಕಾರದಿಂದೆ ತಿಳಿದೆಂ ನಿನ್ನ ಧರ್ಮದ ಹೇತುವಂ |
ನಗೆಯುಂ ದಯೆಯುಂ ನಿನ್ನೊಳ್ ಅದರಿಂದೆನಗಾದುದು ||
ಬಚ್ಚರ್ ಲಾಭೇಚ್ಛೆಯಿಂದೆಂತು ಪಣ್ಯಮಂ ಕೊಂಬರಂತೆ ನೀಂ |
ಧರ್ಮಚರ್ಯೆಯನುಂ ಪಣ್ಯಂಗೆಯ್ದೆಯ್ ಶಾಂತಿಗದಲ್ಲಮೆ ||
ಕಾಣ್ಬಂ ಜೇನನೆ ಬೀಳ್ಗುಂಡಿ ಬರಿಯಂ ಕಾಣನೆಂತವಂ |
ಅಂತಪ್ಸರೆಯರಂ ಕಾಂಬೈ ಕಾಣೈ ಕಡೆಗೆ ಬೀಳ್ವುದಂ ||
ಬಗೆ ಕಾಮಾಗ್ನಿಯಿಂ ಪೊತ್ತೆ ಮೆಯ್ಯಿಂದಂ ನೋಂತ ನಿನ್ನದೇಂ |
ಬ್ರಹ್ಮಚರ್ಯಮೆ ನೀಂ ಬ್ರಹ್ಮಚಾರಿಯಲ್ಲಂ ಮನಸ್ಸಿನೊಳ್ || (ಸೌಂದರನಂದ, ೧೧.೨೩, ೨೬, ೨೯, ೩೦)
ನನ್ನಿಯಂ ನುಡಿದುಂ ನಿಲ್ಲರ್ ದುರ್ಬಲರ್ ದುಷ್ಟಲೋಕದೊಳ್ |
ಬಾಳ್ಗುಮೇ ಮುಕುರಂ ಬಲ್ಪಿಂ ಚೆಲ್ವುಗೇಡಿಗರೂರಿನೊಳ್ ||
ಅದರಿಂ ಬಲಮಂ ಪೊಂದಯ್ ಬೀತುವೋಗದೆ ಬಾಳ್ತೆಯೊಳ್ |
ಜಯದಿಂ ನಯಮುಂ ನಿಲ್ಗುಂ ಸಿರಿಯಿಂ ಹರಿ ಸೇರ್ದಪಂ ||
ಯಾದವೀಯಮಹಾರಾಜ್ಯಮದವೀಯಂ ತವೇಪ್ಸೆಗಂ |
ಏರಬಲ್ಲಂಗೆ ಮರನಂ ದೂರಮಪ್ಪುದೆ ತತ್ಫಲಂ ||
ಇಂತಿರಲ್ ಶಂಕೆಯಿನ್ನೇಕಯ್ ಕಯ್ ಸಾರ್ಚಯ್ ಕಂದ ಕೂರ್ಮೆಯಿಂ |
ಬೆಳ್ಳಿ ಮೂಡಲ್ಕೆ ಬಾನೆಲ್ಲಂ ಬಿಚ್ಚಳಿಪ್ಪಂತೆ ಕಾಯ್ದಪೆಂ || (ನನ್ನದೇ)
ಮೊದಲಿನ ಎರಡು ಪದ್ಯಗುಚ್ಛಗಳು ಆದಿಪ್ರಾಸವನ್ನೂ ಒಳಗೊಂಡಿವೆ. ಇವು ಚಿತ್ರಕಾವ್ಯದ ನಿದರ್ಶನಗಳಾದ ಕಾರಣ ಆ ಪ್ರಕಾರಕ್ಕಿರುವ ಬಿಕ್ಕಟ್ಟು ಇಲ್ಲಿಯೂ ಕಂಡಿದೆ. ಆದರೂ ಗತಿಸುಭಗತೆ ಮತ್ತು ತಿರುಳ್ಗನ್ನಡತನಗಳು ಎದ್ದುತೋರುವಂತಿವೆ. ಅಷ್ಟೇಕೆ, ಚಿತ್ರಕಾವ್ಯದಂಥ ದುಷ್ಕರಕವಿತೆಗೂ ಶ್ಲೋಕ ಒದಗಿಬರಬಲ್ಲುದೆಂದರೆ ಕನ್ನಡಕ್ಕೆ ಇದಕ್ಕಿಂತ ಒದಗಿಬರಬಲ್ಲ ಛಂದಸ್ಸು ಮತ್ತಾವುದೆಂದು ನಾವು ಪ್ರತಿಪ್ರಶ್ನೆಯನ್ನೂ ಮಾಡಬಹುದು. ಮುಂದಿನ ಪದ್ಯಗುಚ್ಛ ಕಡವ ಶಂಭುಶರ್ಮರ ವಿಶಿಷ್ಟರಚನೆ. ಇದು ಅಶ್ವಘೋಷನ ಸಂಸ್ಕೃತಮೂಲದ ಅನುವಾದ. ಶರ್ಮರು ಕಾವ್ಯವನ್ನು ಮೂಲದ ಛಂದಸ್ಸಿನಲ್ಲಿಯೇ ಅನುವಾದಿಸುವ ಸಾಹಸ ಮಾಡಿ ಗೆದ್ದಿದ್ದಾರೆ. ಇಲ್ಲಿ ಆದಿಪ್ರಾಸವಿಲ್ಲ. ಆದರೆ ಬಂಧ-ಭಾಷೆಗಳ ಸೊಗಸಿಗೇನೂ ಕೊರತೆಯಿಲ್ಲ. ಕಡೆಯ ಗುಚ್ಛ ನನ್ನದೇ ರಚನೆ. ಇಲ್ಲಿಯೂ ಆದಿಪ್ರಾಸ ಪಾಲಿತವಾಗಿಲ್ಲ. ಈ ಪದ್ಯಗಳು ಸ್ವೋಪಜ್ಞವಾದ ಕಾರಣ ಅರ್ಥಾಲಂಕಾರ-ಶಬ್ದಾಲಂಕಾರಗಳಿಗೆ ಮುಕ್ತವಾದ ಅವಕಾಶ ದಕ್ಕಿದೆ.
ಇಷ್ಟು ಪದ್ಯಗಳನ್ನು ಕಂಡ ಬಳಿಕವೂ ಹಳಗನ್ನಡಕ್ಕೆ ಶ್ಲೋಕ ಒಗ್ಗದೆನ್ನಲಾದೀತೇ? ಆದಿಪ್ರಾಸವನ್ನು ಮೀರಿದ ಬಳಿಕವಂತೂ ಇದಕ್ಕೆ ದಕ್ಕುವ ಚೆಲುವನ್ನು ಅಲ್ಲಗೆಳೆಯಲು ಸಾಧ್ಯವೇ?
ಒಟ್ಟಿನಲ್ಲಿ ಶ್ಲೋಕವು ಭಾರತೀಯ ಕವಿಗಳಿಗೆ ವೈದಿಕ ಪರಂಪರೆಯು ಬಹೂಕರಿಸಿದ ಭವ್ಯವಾದ ಛಂದೋಬಂಧ. ಇದಕ್ಕಿರುವ ಲಕ್ಷಣ ತಕ್ಕಮಟ್ಟಿಗೆ ಪರ್ಯಾಪ್ತವಾಗಿಯೇ ಇದೆ. ಆದರೂ ಈ ಬಂಧದ ಒಳ-ಹೊರಗನ್ನರಿಯಲು ರಸಸಿದ್ಧರಾದ ಮಹಾಕವಿಗಳ ಪ್ರಯೋಗಗಳನ್ನೇ ಆಲಿಸಬೇಕು; ಗಮನಿಸಿ ಅಭ್ಯಸಿಸಬೇಕು. ಹೇಗೆ ಸನಾತನಧರ್ಮವು ಮಿಕ್ಕ ಮತಗಳಂತೆ ಕೇವಲ ರೂಪೈಕನಿಷ್ಠವಲ್ಲವೋ ಹಾಗೆಯೇ ಶ್ಲೋಕಚ್ಛಂದಸ್ಸು ಕೂಡ ಏಕದೇಶೀಯವಾದ ಲಕ್ಷಣದೊಳಗೆ ಸಿಲುಕುವಂಥದ್ದಲ್ಲ. ಇದನ್ನು ಛಂದೋಗತಿಪ್ರಜ್ಞೆ ಎಂಬ ವಿಶದಾನುಭವದಿಂದ ಅರಿತು ಅನುಸಂಧಾನಿಸಬೇಕು; ರಚಿಸಿ ಆನಂದಿಸಬೇಕು.
Concluded.