ಅನುಷ್ಟುಪ್‌ಶ್ಲೋಕದ ರಚನಾಶಿಲ್ಪ - 6

This article is part 6 of 7 in the series ಅನುಷ್ಟುಪ್ ಶ್ಲೋಕ

ಕರ್ಷಣಜಾತಿಗಳು ಮಾತ್ರಾಜಾತಿಗಳಂತೆಯೇ ಏಕದೇಶಸ್ಥಿರವಾಗಿವೆ. ಈ ಸ್ಥಿರತೆ ಪದ್ಯಬಂಧಗಳ ಚಾಕ್ಷುಷರೂಪದಲ್ಲಿರದೆ ಶ್ರಾವಣರೂಪದಲ್ಲಿ ಕಾಣಸಿಗುತ್ತದೆ. ಅಂದರೆ, ಕರ್ಷಣಜಾತಿಗಳ ಭಾಷಾಪದಗತಿ ಗದ್ಯಕ್ಕಿಂತ ಬಲುಮಟ್ಟಿಗೆ ಬೇರೆ ಎನಿಸದ ಹಾಗೆ ಅನಿಬದ್ಧವಾಗಿ ತೋರುತ್ತದೆ. ಅವುಗಳ ಪದ್ಯಗತಿ ಛಂದಃಪದಗತಿಯ ಮೂಲಕ ಮಾತ್ರ ಉನ್ಮೀಲಿಸಬೇಕು. ಆದುದರಿಂದಲೇ ಇವುಗಳ ಭಾಷಾಪದಗತಿ ಹೇಗೇ ಇದ್ದರೂ ಏಕ / ಆದಿ, ರೂಪಕ, ಖಂಡ ಮತ್ತು ಮಿಶ್ರ ಎಂಬ ನಾಲ್ಕು ಬಗೆಯ ಮೂಲಭೂತ ಲಯಗಳಿಗೆ ಒಗ್ಗುವಂತೆ ಪದ್ಯಗತಿ ಕರ್ಷಣದ ಮೂಲಕ ರೂಪುಗೊಳ್ಳುತ್ತದೆ. ಇದನ್ನು ಸಾಂಗತ್ಯದಂಥ ಒಂದು ಬಂಧ ಶ್ರಾವಣರೂಪದಲ್ಲಿ ನಾಲ್ಕು ಬಗೆಯ ಗತಿಗಳಿಗೂ ಅಳವಟ್ಟಾಗ ಎಷ್ಟೆಲ್ಲ ಮಾತ್ರೆಗಳ ಆಕೃತಿವ್ಯತ್ಯಾಸವನ್ನು ಹೊಂದುವುದೆಂಬ ನಿದರ್ಶನದ ಮೂಲಕ ಮನಗಾಣಬಹುದು:

ಕಾಲವನ್ನೆಳ್ಳಷ್ಟೂ ಪೋಲು ಮಾಡದೆ ಕಾರ್ಯ-

ಶೀಲನಾಗಿದ್ದೊಂದು ಗಳಿಗೆ |

ಕಾಲನ್ನು ಚಾಚಿ ಮೈಮರೆವಾಗಲೇ ಬಂದಂ

ಮೇಲಧಿಕಾರಿಯು ಬಳಿಗೆ || (ಕನ್ನಡದಲ್ಲಿ ಅವಧಾನಕಲೆ, ಪು. ೩೫೭)

ಈ ಪದ್ಯವನ್ನು ಸಮುಚಿತವಾದ ಕರ್ಷಣಕ್ಕೆ ಅಳವಡಿಸಿ ನಾಲ್ಕೂ ಲಯಗಳಲ್ಲಿ ಹಾಡಿದಾಗ ಪದ್ಯದ ಶ್ರಾವಣರೂಪದಲ್ಲಿ ಮಾತ್ರೆಗಳ ಸಂಖ್ಯೆ ಹೀಗಿರುತ್ತದೆ: ಏಕ / ಆದಿ (೫೬), ರೂಪಕ (೮೪), ಖಂಡ (೭೦), ಮಿಶ್ರ (೯೮). ಅಂದರೆ, ಸಾಂಗತ್ಯದ ಅತ್ಯಂತ ಸಂಕ್ಷಿಪ್ತ ಶ್ರಾವಣರೂಪ ಐವತ್ತಾರು ಮಾತ್ರೆಗಳನ್ನು ಒಳಗೊಂಡಿದ್ದರೆ ಅದರ ವಿಸ್ತೃತ ಶ್ರಾವಣರೂಪ ತೊಂಬತ್ತೆಂಟು ಮಾತ್ರೆಗಳಷ್ಟು ನಿಡಿದಾಗಿದೆ. ಇಂಥ ನಮ್ಯತೆ ಇರುವ ಕಾರಣದಿಂದಲೇ ಕರ್ಷಣಜಾತಿಯ ಬಂಧಗಳಿಗೆ ಹೆಚ್ಚಿನ ಸೌಲಭ್ಯವಿದೆ.

ಇದಕ್ಕೆ ಸಂವಾದಿ ಎನಿಸುವಂತೆ ಶ್ಲೋಕದ ಕನಿಷ್ಠ ಮಾತ್ರಾಸಂಖ್ಯೆ ನಲವತ್ತೆರಡು ಅಥವಾ ನಲವತ್ತಾರು;[1] ಗರಿಷ್ಠ ಮಾತ್ರಾಸಂಖ್ಯೆ ಐವತ್ತೆಂಟು. ಅಂದರೆ, ಹನ್ನೆರಡರಿಂದ ಹದಿನಾರು ಮಾತ್ರೆಗಳಷ್ಟರ ಮಟ್ಟಿಗೆ ನಮ್ಯತೆಯ ಅವಕಾಶವುಂಟು. ಕರ್ಷಣಜಾತಿಗಳಿಗೆ ಹೋಲಿಸಿದರೆ ಈ ಅಳತೆ ಕಡಮೆ ಎನಿಸಿದರೂ - ಶ್ಲೋಕದ ವರ್ಣಗಳು ಯಥಾಕ್ಷರ ಗುರು-ಲಘುಗಳೇ ಆಗಿರುವ ಕಾರಣ ಈ ಬಂಧವು ಚಾಕ್ಷುಷ ರೂಪವೆನಿಸಿದ ಪಾಠ್ಯದಲ್ಲಿ ಕೂಡ ತನ್ನೆಲ್ಲ ಗತಿವೈವಿಧ್ಯವನ್ನು ಉಳಿಸಿಕೊಳ್ಳುವ ಮೂಲಕ ಅತಿಶಯವೆನಿಸುತ್ತದೆ. ಕರ್ಷಣಜಾತಿಗಳಲ್ಲಾದರೋ ಭಾಷಾಪದಗತಿಯ ಗುರು-ಲಘುಗಳಿಗೆ ನಿರಪೇಕ್ಷವಾಗಿ ತಾಳಲಯಗಳ ಮೂಲಕವೇ ಏಕರೂಪತೆ ಬರುವ ಕಾರಣ - ಹೆಸರಿಗೆ ಏಕ / ಆದಿ, ರೂಪಕ, ಖಂಡ ಮತ್ತು ಮಿಶ್ರ ಎಂಬ ನಾಲ್ಕು ಶ್ರಾವಣ ರೂಪಗಳ ವೈವಿಧ್ಯವಿದ್ದರೂ ಶ್ಲೋಕದ ಪಾಠ್ಯಗತಿಯ ವೈವಿಧ್ಯದ ಮುಂದೆ ಸ್ವಲ್ಪದ್ದೆನಿಸುತ್ತದೆ. ಮಾತ್ರವಲ್ಲ, ಇಂಥ ತಾಳಾತ್ಮಕ ಲಯವು ಪ್ರತಿಯೊಂದು ಪಾದದಲ್ಲಿಯೂ ಏಕರೂಪವನ್ನು ತಾಳುವುದರಿಂದ  ಗತಿವೈವಿಧ್ಯಕ್ಕೆ ಎರವಾಗಿದೆ. ಆದರೆ ಶ್ಲೋಕವು ತನ್ನ ಪ್ರತಿಪಾದದಲ್ಲಿಯೂ - ಲಕ್ಷಣದ ಮಿತಿಯೊಳಗೆ ಸಲ್ಲುವ - ಗುರು-ಲಘುವಿನ್ಯಾಸದ ಸಾಕಷ್ಟು ವೈವಿಧ್ಯವನ್ನು ಬಿಂಬಿಸಲು ಸಮರ್ಥವಾಗಿದೆ. ಹೀಗೆ ಗತಿಸಮತೆ ಮತ್ತು ಗತಿವೈವಿಧ್ಯಗಳ ಸಾಮರಸ್ಯವನ್ನು ಇದು ನಿರಂತರವಾಗಿ ಕಾಯ್ದುಕೊಂಡಿದೆ. ಹೀಗಾಗಿ ರಾಮಾಯಣ-ಮಹಾಭಾರತಗಳಂಥ ಬೃಹದ್ಗ್ರಂಥಗಳ ಆದ್ಯಂತ ಶ್ಲೋಕಭಾಗೀರಥಿಯು ಪ್ರವಹಿಸಿದ್ದರೂ ನೈರಸ್ಯ-ವೈರಸ್ಯಗಳ ಜಹ್ನು ಅದಕ್ಕೆ ಎದುರಾಗುವುದಿಲ್ಲ. ಇದನ್ನು ಮನಗಾಣಲು ಸಂಸ್ಕೃತಸಾಹಿತ್ಯದ ಯಾವ ಮಹಾಕವಿಯ ಶ್ಲೋಕವನ್ನೂ ಪರಿಶೀಲಿಸಬಹುದು. ಕಾಳಿದಾಸ, ಭಾರವಿ, ಜಿನಸೇನ, ಕ್ಷೇಮೇಂದ್ರ, ಸೋಮದೇವ, ಗಂಗಾದೇವಿ ಮುಂತಾದ ಎಷ್ಟೋ ಮಂದಿ ಕವಿಗಳಿದ್ದರೂ ಆದಿಕವಿ ಭಗವಾನ್ ವಾಲ್ಮೀಕಿಮಹರ್ಷಿಗಳ ಕೆಲವೊಂದು ಪದ್ಯಗಳಿಂದ ಈ ತಥ್ಯವನ್ನು ಮನಗಾಣಬಹುದು:

ತತ್ರ ತ್ರಿಪಥಗಾಂ ದಿವ್ಯಾಂ ಶಿವತೋಯಾಮಶೈವಲಾಮ್ |

ದದರ್ಶ ರಾಘವೋ ಗಂಗಾಂ ಪುಣ್ಯಾಮೃಷಿನಿಷೇವಿತಾಮ್ || (೨.೫೦.೧೨)

ದೇವಮಾನವಗಂಧರ್ವೈಃ ಕಿಂನರೈರುಪಶೋಭಿತಾಮ್ |

ನಾಗಗಂಧರ್ವಪತ್ನೀಭಿಃ ಸೇವಿತಾಂ ಸತತಂ ಶಿವಾಮ್ || (೨.೫೦.೧೪)

ಕ್ವಚಿತ್ ಸ್ತಿಮಿತಗಂಭೀರಾಂ ಕ್ವಚಿದ್ವೇಗಜಲಾಕುಲಾಮ್ |

ಕ್ವಚಿದ್ಗಂಭೀರನಿರ್ಘೋಷಾಂ ಕ್ವಚಿದ್ಭೈರವನಿಸ್ವನಾಮ್ || (೨.೫೦.೧೭)

ದೇವಸಂಘಾಪ್ಲುತಜಲಾಂ ನಿರ್ಮಲೋತ್ಪಲಶೋಭಿತಾಮ್ |

ಕ್ವಚಿದಾಭೋಗಪುಲಿನಾಂ ಕ್ವಚಿಚಿನ್ನಿರ್ಮಲವಾಲುಕಾಮ್ || (೨.೫೦.೧೮)

ಹಂಸಸಾರಸಸಂಘುಷ್ಟಾಂ ಚಕ್ರವಾಕೋಪಕೂಜಿತಾಮ್ |

ಸದಾ ಮತ್ತೈಶ್ಚ ವಿಹಗೈರಭಿಸನ್ನಾದಿತಾಂತರಾಮ್ || (೨.೫೦.೧೯)

ಕನ್ನಡದಲ್ಲಿ ಶ್ಲೋಕ

ಕನ್ನಡದಲ್ಲಿ ಶ್ಲೋಕದ ರಚನೆ ವಿರಳವಾಗಿರುವುದನ್ನು ಕುರಿತು ಕೆಲವರು ಆಧುನಿಕ ಸಂಶೋಧಕರು ವಿವೇಚಿಸಿದ್ದಾರೆ. ಈ ಸಾಲಿನಲ್ಲಿ ವೆಂಕಟಾಚಲ ಶಾಸ್ತ್ರೀ, ಸೇಡಿಯಾಪು ಮುಂತಾದವರಿದ್ದಾರೆ.[2] ಶಾಸ್ತ್ರಿಗಳು ಇದಕ್ಕೆ ಕಾರಣಗಳನ್ನು ತಿಳಿಸುವಾಗ ಶ್ಲೋಕದ ಗತಿ ಕನ್ನಡಕ್ಕೆ ವಿಜಾತೀಯವೆಂದು ಹೇಳಿಲ್ಲ. ಇದು ಒಪ್ಪತಕ್ಕ ನಿಲವು. ಅವರು ಹೇಳುವ ಮಿಕ್ಕ ಕಾರಣಗಳು ಯುಕ್ತಿಯುಕ್ತವಾಗಿ ತೋರವು. ಅವುಗಳ ತಾತ್ಪರ್ಯ ಹೀಗೆ: ಚಿಕ್ಕ ಛಂದಸ್ಸಾದ ಕಂದವೇ ಇರುವಾಗ ಶ್ಲೋಕ ಬೇಕಿಲ್ಲ; ಶ್ಲೋಕವನ್ನು ಸಂಸ್ಕೃತಕವಿಗಳು ಈ ಮುನ್ನ ಬಳಸಿ ಬೆಳಸಿದ ಕಾರಣ ಕನ್ನಡಕವಿಗಳು ಇದರ ಮೂಲಕ ಸ್ವೋಪಜ್ಞತೆ ಮೆರೆಯಲು ಸಾಧ್ಯವಿರಲಿಲ್ಲ; ಕನ್ನಡದ ಮಟ್ಟಿಗೆ ವೃತ್ತ-ಕಂದಗಳಿಗಿದ್ದ ಇತಿಹಾಸ ಮತ್ತು ಪರಂಪರೆ ಶ್ಲೋಕಕ್ಕೆ ಇರಲಿಲ್ಲ.

ಒಂದು ಚಿಕ್ಕ ಛಂದಸ್ಸು ಇದ್ದ ಮಾತ್ರಕ್ಕೆ ಮತ್ತೊಂದು ಅಂಥದ್ದೇ ಬಂಧ ಬೇಡ ಎಂದು ಯಾವ ವಿವೇಕಿಯೂ ಹೇಳಲಾರ. ಮತ್ತೇಭವಿಕ್ರೀಡಿತದಂಥ ಒಂದು ದೊಡ್ಡ ಛಂದಸ್ಸಿರುವಾಗ ಚಂಪಕಮಾಲೆಯಂಥ ಮತ್ತೊಂದು ದೊಡ್ಡ ಛಂದಸ್ಸೇಕೆ? ಅಥವಾ ಸ್ರಗ್ಧರೆ-ಮಹಾಸ್ರಗ್ಧರೆಗಳೇಕೆ? ಎಂಬ ಪ್ರಶ್ನೆ ನಮ್ಮ ಕವಿಗಳಿಗೆ ಬರಲಿಲ್ಲವಷ್ಟೆ. ಇದೇ ನ್ಯಾಯ ಶ್ಲೋಕಕ್ಕೂ ಅನ್ವಯಿಸುತ್ತದೆ. ಅಷ್ಟೇಕೆ, ಅನಂತರಕಾಲದಲ್ಲಿ ಸಾಂಗತ್ಯದಂಥ ಚಿಕ್ಕ ಛಂದಸ್ಸು ರೂಪುಗೊಳ್ಳಲಿಲ್ಲವೇ? ಇನ್ನು ಸ್ವೋಪಜ್ಞತೆಯ ವಿಷಯಕ್ಕೆ ಬಂದರೆ ಕಂದದ ಮೂಲವಾದ ಸ್ಕಂಧಕ ಅಥವಾ ಆರ್ಯಾಪ್ರಭೇದಗಳನ್ನು ಸಂಸ್ಕೃತ-ಪ್ರಾಕೃತಕವಿಗಳು ವಿಪುಲವಾಗಿ ಬಳಸಿಯೇ ಇದ್ದರು; ಚಂಪೂಪ್ರಕಾರವನ್ನು ಅವರು ಆವಿಷ್ಕರಿಸಿದ್ದರು; ಇವನ್ನು ಬಳಸಿಕೊಳ್ಳಲು ಕನ್ನಡಕವಿಗಳಿಗೆ ಸ್ವೋಪಜ್ಞತೆ ಅಡ್ಡಿಯಾಗಲಿಲ್ಲ. ಹೀಗಿರುವಾಗ ಶ್ಲೋಕಕ್ಕೆ ಬಂದ ಅಡ್ಡಿ ಏನು? ಇದಕ್ಕೊಂದು ಪರಂಪರೆ ನಮ್ಮಲ್ಲಿ ಬೆಳೆಯಲಿಲ್ಲವೆಂಬ ಕಾರಣವಂತೂ ಹಾಸ್ಯಾಸ್ಪದ. ಬಳಸದೆಯೇ ಇದ್ದರೆ ಬೆಳೆಯುವುದಾದರೂ ಹೇಗೆ!

೧೯೭೮ರಲ್ಲಿ ಬಂದ ‘ಕನ್ನಡ ಛಂದಃಸ್ವರೂಪ’ ಎಂಬ ಗ್ರಂಥದಲ್ಲಿ ಪೂರ್ವೋಕ್ತ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಶಾಸ್ತ್ರಿಗಳು ೧೯೭೫ರಲ್ಲಿ ಬಂದ ‘ಕವಿರಾಜಮಾರ್ಗದ ಛಂದೋವಿಚಾರಗಳು’ ಎಂಬ ಲೇಖನದಲ್ಲಿ ಶ್ಲೋಕವು ಕನ್ನಡಕ್ಕೆ ಅಸಹಜವಲ್ಲವೆಂಬ ಯುಕ್ತಿಯುಕ್ತವಾದ ನಿಲವನ್ನು ತಳೆದಿದ್ದಾರೆ. ಅಲ್ಲದೆ “ಒಂದು ವೇಳೆ ಅನುಷ್ಟುಪ್ಪನ್ನು ಪ್ರಯೋಗಿಸಿ ನೋಡಿ ಕನ್ನಡ ಭಾಷೆಗೆ ಹೊಂದುವುದಿಲ್ಲವೆಂದು ಬಿಟ್ಟಿರಬಹುದು” ಎಂಬ ಕನ್ನಡ ಕೈಪಿಡಿಯ ಅಭಿಪ್ರಾಯಕ್ಕೆ ಅಸಮ್ಮತಿ ಸೂಚಿಸಿದ್ದಾರೆ.[3]  

ಇನ್ನು ಸೇಡಿಯಾಪು ಕೃಷ್ಣ ಭಟ್ಟರ ಅಭಿಪ್ರಾಯಗಳನ್ನು ಗಮನಿಸೋಣ. ಅವರ ಪ್ರಕಾರ ಸಂಸ್ಕೃತಭಾಷೆಯ ಸಹಜ ಪದವಿನ್ಯಾಸ ಗುರುಪ್ರಧಾನವಾದ ಮಧ್ಯಗತಿ. ಇದಕ್ಕೆ ತಕ್ಕಂತೆ ರೂಪುಗೊಂಡದ್ದು ಶ್ಲೋಕ. ಕನ್ನಡದ್ದು ಈ ಜಾಡಲ್ಲ. ಹೀಗಾಗಿ ಶ್ಲೋಕವಿಲ್ಲಿ ನೆಲೆಗಾಣಲಿಲ್ಲ. ಈ ಕಾರಣ ಯುಕ್ತವೆನಿಸದು. ಹಳಗನ್ನಡದ ಸಹಜವಾದ ಪದವಿನ್ಯಾಸ ಗುರುಪ್ರಧಾನವಾದ ಮಧ್ಯಗತಿಯೇ. ಹೀಗಲ್ಲವಾದರೆ ಶ್ಲೋಕಕ್ಕಿಂತ ಎಷ್ಟೋ ಪಾಲು ಹೆಚ್ಚಿನ ಗುರುಪ್ರಾಚುರ್ಯವುಳ್ಳ ಶಾರ್ದೂಲವಿಕ್ರೀಡಿತ, ಮತ್ತೇಭವಿಕ್ರೀಡಿತ, ಸ್ರಗ್ಧರೆ, ಮಹಾಸ್ರಗ್ಧರೆ ಮುಂತಾದ ಹತ್ತಾರು ವೃತ್ತಗಳು ನಮ್ಮ ಕವಿಗಳಿಗೆ ಒದಗಿಬರುತ್ತಿರಲಿಲ್ಲ. ಮಾತ್ರವಲ್ಲ, ಈ ವೃತ್ತಗಳೆಲ್ಲ ಸರ್ವದೇಶಸ್ಥಿರಗಳು. ಶ್ಲೋಕಕ್ಕಿರುವ ಸೌಲಭ್ಯ ಇವುಗಳಲ್ಲಿ ಸ್ವಲ್ಪವೂ ಇಲ್ಲ.

ಶ್ಲೋಕವು ಕನ್ನಡದಲ್ಲಿ ವಿರಳವಾದುದಕ್ಕೆ ಬೇರೊಂದು ಕಾರಣ ಇರಬೇಕು. ಅದು ತುಂಬ ಸರಳ, ಸುಸ್ಪಷ್ಟ. ‘ಕನ್ನಡಕ್ಕೆ ಸತತಂ ಪ್ರಾಸಂ’ ಎಂಬುದು ಅನುಲ್ಲಂಘ್ಯವಾದ ನಿಯಮ. ಇದನ್ನು ಪಾಲಿಸದ ಪ್ರಾಚೀನ ಕವಿಯಿಲ್ಲ. ಶ್ಲೋಕದಂಥ ಚಿಕ್ಕ ಬಂಧದಲ್ಲಿ ಎಂಟೆಂಟು ಅಕ್ಷರಗಳ ಬಳಿಕ ಮತ್ತೆ ಮತ್ತೆ ತಲೆದೋರುವ ಪ್ರಾಸದ ತ್ರಾಸವನ್ನು ದಾಟಿಕೊಂಡು ಸಾರ್ಥಕವೂ ಸಾಲಂಕೃತವೂ ಆದ ಪದ್ಯವನ್ನು ರಚಿಸುವುದು ಎಂಥ ವ್ಯುತ್ಪನ್ನನಿಗೂ ಕಷ್ಟ. (ಕಂದವಾದರೋ ತನ್ನ ಮಾತ್ರಾಜಾತಿತ್ವದ ಕಾರಣ, ನಿಡಿದಾದ ಯುಕ್ಪಾದಗಳ ಕಾರಣ ಪ್ರಾಸನಿರ್ವಾಹದಲ್ಲಿ ಹೆಚ್ಚಿನ ಕ್ಲೇಶ ತಾರದು.) ಹೀಗಾಗಿ ನಮ್ಮ ಕವಿಗಳು ಒಲ್ಲದ ಮನಸ್ಸಿನಿಂದ ಶ್ಲೋಕವನ್ನು ಕೈಬಿಡಬೇಕಾಯಿತು. ಇಲ್ಲವಾದರೆ ಇಂಥ ಒಳ್ಳೆಯ ಬಂಧವನ್ನು ಬಿಡಲು ಯಾರು ತಾನೆ ಒಪ್ಪುತ್ತಾರೆ!



[1] ಪ್ರತಿಪಾದದ ಕೊನೆಗೆ ಬರುವ ಅಕ್ಷರವು ಸಹಜಗುರುವಾಗಿಲ್ಲದೆ ಲಘುವಾಗಿ ಉಳಿದಾಗ ಒಟ್ಟು ಮಾತ್ರೆಗಳ ಸಂಖ್ಯೆ ನಲವತ್ತೆರಡಾಗಿತ್ತದೆ. ಹಾಗಲ್ಲದ ಪಕ್ಷದಲ್ಲಿ ನಲವತ್ತಾರು.

[2] ನೋಡಿ: ಸೇಡಿಯಾಪು ಛಂದಃಸಂಪುಟ (ಪು. ೨೨೮-೨೯); ಕನ್ನಡ ಛಂದಃಸ್ವರೂಪ (ಪು. ೧೮೧)

[3] ನೋಡಿ: ಶಾಸ್ತ್ರೀಯ (ಸಂ. ೨), ಪು. ೧೮೩

To be continued.

 

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.

Prekshaa Publications

Karnataka’s celebrated polymath, D V Gundappa brings together in the eighth volume of reminiscences character sketches of his ancestors teachers, friends, etc. and portrayal of rural life. These remarkable individuals hailing from different parts of South India are from the early part of the twentieth century. Written in Kannada in the 1970s, these memoirs go beyond personal memories and offer...