“ಧೀರೋ ವಿಶಿಷ್ಟೋ ರಸಃ” ಎಂಬ ತಮ್ಮ ಶೋಧಪ್ರಬಂಧದಲ್ಲಿ ಶತಾವಧಾನಿ ಡಾ|| ಆರ್. ಗಣೇಶರು ’ಧೀರ’ಎಂಬ ನೂತನರಸದ ಬಗೆಗೆ ಚರ್ಚಿಸಿ ಸಾಂಪ್ರದಾಯಿಕವಾಗಿ ಸ್ವೀಕೃತವಾಗಿರುವ ರಸಗಳ ಪಟ್ಟಿಯಲ್ಲಿ ಧೀರರಸಕ್ಕೂ ಅನನ್ಯವಾದ ಸ್ಥಾನವಿದೆಯೆಂದು ಪ್ರತಿಪಾದಿಸಿದ್ದಾರೆ. ಶಾಸ್ತ್ರೀಯಶೈಲಿಯಲ್ಲಿ ರಚಿತವಾಗಿರುವ ಮೂಲಪ್ರಬಂಧವು ಕಾರಿಕೆ-ವೃತ್ತಿಗಳ ರೂಪದಲ್ಲಿ ಸಾಗಿದೆ. ಪ್ರಕೃತಲೇಖನವು ಸಂಸ್ಕೃತಭಾಷೆಯಲ್ಲಿರುವ ಗಣೇಶರ ಲೇಖನದ ಸಂಗ್ರಹಾನುವಾದ.
~
-೧-
ಅನಂತರಸವಿಸ್ತೀರ್ಣಾಮಖಂಡರಸಮಂಡನಾಮ್ |
ನಮಾಮಿ ಶಾರದಾಂ ಧೀರೋದಾರಸುಂದರಮಂದಿರಾಮ್ ||
ಒಂದು ವಿಷಯವನ್ನು ಮೊದಲಿಗೇ ಸ್ಪಷ್ಟಪಡಿಸುವುದು ಸೂಕ್ತ. ಧೀರ ಎಂಬ ಶಬ್ದದ ವಿವರಣೆ – ’ಧಿಯಃ ಇದಂ’, ’ಬುದ್ಧಿಗೆ ಸಂಬಂಧಿಸಿದ್ದು’ – ಎಂದು. ಇದಕ್ಕೂ ಕನ್ನಡಭಾಷೆಯಲ್ಲಿ ಪ್ರಸಿದ್ಧವಾದ ’ಧೈರ್ಯ’ಕ್ಕೂ ಯಾವುದೇ ತೆರನಾದ ಸಂಬಂಧವಿಲ್ಲ.
ನಿರ್ವಿಶಿಷ್ಟವಾದ ಪರಮಾಸ್ವಾದಸ್ತರದಲ್ಲಿ ಆನಂದವೇ ರಸವಾಗಿರುತ್ತದೆ. ಇದನ್ನೇ ನಮ್ಮ ಪೂರ್ವಜರು “ರಸನಂ ರಸಃ” ಎಂದಿದ್ದಾರೆ. ಈ ಅರ್ಥದಲ್ಲಿ ಶಾಂತವೇ ಪರಮರಸ. ಆದರೆ ನಮ್ಮೀ ನಿಗಮನವು ಸವಿಕಲ್ಪಸ್ತರಕ್ಕೆ ಸೇರಿದುದು. ಆದುದರಿಂದ “ಧೀರ”ವೆಂಬ ನೂತನರಸದ ಬಗೆಗಿನ ಚರ್ಚೆಯು ಅಸಂಗತವಾಗುವುದಿಲ್ಲ. ಕಾವ್ಯ-ನಾಟಕ-ಚಲನಚಿತ್ರ-ಕಥೆ-ಕಾದಂಬರಿ ಮುಂತಾದ ಕಲಾಪ್ರಕಾರಗಳನ್ನು ಆಸ್ವಾದಿಸುವಲ್ಲಿನ ನಮ್ಮ ಅನುದಿನದ ಅನುಭವದಲ್ಲಿ ಧೀರರಸವು ಸ್ಪಷ್ಟವಾಗಿ ವ್ಯಕ್ತವಾಗುವ ಸಂಗತಿಗಳು ಹಲವಿವೆ. “ಲಕ್ಷ್ಯಂ ದೃಷ್ಟ್ವಾ ಲಕ್ಷಣಂ ಕುರ್ಯಾತ್” ಎಂಬಂತೆ ಆ ಕಲಾಕೃತಿಗಳನ್ನು ಆಸ್ವಾದಿಸುವ ಸಂದರ್ಭದಲ್ಲಿನ ನಮ್ಮ ಸವಿಶಿಷ್ಟಾನುಭವಕ್ಕೆ ಮಾನ-ಮೇಯಾತ್ಮಕವಾದ ಶಾಸ್ತ್ರದ ಚೌಕಟ್ಟಿನಲ್ಲಿ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದೇ ಪ್ರಕೃತಪ್ರಬಂಧದ ಉದ್ದೇಶ. ಹಾಗಲ್ಲದೆ ಕೇವಲ ರಸಸಂಖ್ಯೆಯನ್ನು ಹೆಚ್ಚಿಸುವ ಹುಚ್ಚಿನ ಪ್ರಯತ್ನವಿದಲ್ಲ.
ಪ್ರಮಾಣನಿರೂಪಣೆ
ಪ್ರಮಾಣಗಳನ್ನು ಸ್ಪಷ್ಟವಾಗಿ ಪ್ರತಿಪಾದಿಸದ ಹೊರತು ಯಾವುದೇ ಶಾಸ್ತ್ರಚರ್ಚೆಗೆ ಅರ್ಥವಿಲ್ಲವಷ್ಟೆ. ಆದುದರಿಂದ ಮೊದಲಿಗೆ ನಾವು ಅಂಗೀಕರಿಸುವ ಪ್ರಮಾಣಗಳನ್ನು ವಿಶದೀಕರಿಸಲಾಗಿದೆ.
ವೇದಾಂತಶಾಸ್ತ್ರದಲ್ಲಿ ಹೇಗೆ ಸ್ವಾನುಭವಕ್ಕೆ ಪರಮಪ್ರಾಶಸ್ತ್ಯವಿರುವುದೋ ಅದೇ ರೀತಿಯಲ್ಲಿ ಸಾಹಿತ್ಯಶಾಸ್ತ್ರದಲ್ಲಿಯೂ ಕೂಡ ಪರಿಣತಪ್ರಜ್ಞಾನುಭವಕ್ಕೇ ಅಗ್ರತಾಂಬೂಲ ಸಲ್ಲುತ್ತದೆ. ಬ್ರಹ್ಮಸೂತ್ರಭಾಷ್ಯದಲ್ಲಿ ಆಚಾರ್ಯಶಂಕರರು ಹೇಳಿರುವಂತೆ, “ನ ಧರ್ಮಜಿಜ್ಞಾಸಾಯಾಮಿವ ಶ್ರುತ್ಯಾದಯ ಏವ ಪ್ರಮಾಣಂ ಬ್ರಹ್ಮಜಿಜ್ಞಾಸಾಯಾಮ್ ; ಕಿಂ ತು ಶ್ರುತ್ಯಾದಯೋऽನುಭವಾದಯಶ್ಚ ಯಥಾಸಂಭವಮಿಹ ಪ್ರಮಾಣಂ. ಅನುಭವಾವಸಾನಾತ್, ಭೂತವಸ್ತುವಿಷಯತ್ವಾಚ್ಚ ಬ್ರಹ್ಮಜ್ಞಾನಸ್ಯ.”
“ಧರ್ಮದ ಬಗೆಗೆ ವಿಚಾರ ಮಾಡುವಾಗ ಶ್ರುತ್ಯಾದಿಗಳು ಮಾತ್ರ ಪ್ರಮಾಣವಾಗುತ್ತವೆ. ಆದರೆ ಬ್ರಹ್ಮಜಿಜ್ಞಾಸೆಯಲ್ಲಿ ಹಾಗಾಗುವುದಿಲ್ಲ. ಬ್ರಹ್ಮಜ್ಞಾನದ ವಿಷಯ ಸದ್ವಸ್ತುವೇ ಆಗಿರುವುದರಿಂದ, ಮತ್ತದು ಅನುಭವದಲ್ಲಿಯೇ ಕೊನೆಗಾಣುವುದರಿಂದ ಇಲ್ಲಿ ಶ್ರುತ್ಯಾದಿಗಳೂ ಅನುಭವಾದಿಗಳೂ ಸಂಭವನೆಗನುಸಾರವಾಗಿ ಪ್ರಮಾಣಗಳಾಗಿರುತ್ತವೆ.”
ನಾಟ್ಯಶಾಸ್ತ್ರದ ವ್ಯಾಖ್ಯಾನ ಮಾಡುವಾಗ “ಅಧಿಕಾರೀ ಚಾತ್ರ ವಿಮಲಪ್ರತಿಭಾನಶಾಲೀ ಸಹೃದಯಃ”, “(ಕಲಾಸ್ವಾದನೆಗೆ) ಅಧಿಕಾರಿ ನಿರ್ಮಲಪ್ರತಿಭೆಯನ್ನುಳ್ಳ ಸಹೃದಯ” ಎಂದಿದ್ದಾರೆ ಅಭಿನವಗುಪ್ತರು. ಹೀಗೆ ಅನ್ವಯ-ವ್ಯತಿರೇಕ ಎರಡರಿಂದಲೂ ಅನುಭವಪ್ರಾಮಾಣ್ಯವು ಸಿದ್ಧವಾಗುತ್ತದೆ. ಸಾಹಿತ್ಯಶಾಸ್ತ್ರವು ತರ್ಕ-ವ್ಯಾಕರಣ-ಮೀಮಾಂಸೆಗಳಂತೆ ಕೇವಲ ಜ್ಞಾಪಕವಲ್ಲ ; ಅದು ಕಾರಕವೂ ಹೌದು. ಹಾಗಾಗಿ ಇಲ್ಲಿ ಅನುಭವಕ್ಕೆ ಸಂದಿರುವ ಪ್ರಾಶಸ್ತ್ಯ ಸ್ವಾಭಾವಿಕವೇ ಆಗಿದೆ.
ನಾಟ್ಯಶಾಸ್ತ್ರಕ್ಕೆ ಪ್ರಮಾಣಗಳು ಯಾವುವೆಂದು ಚರ್ಚಿಸುವಾಗ ಮುಬ್ಬಗೆಯಾದ ಪ್ರಮಾಣಗಳನ್ನು ಭರತಮುನಿಗಳು ಪ್ರಸ್ತಾವಿಸುತ್ತಾರೆ – ಲೋಕ, ವೇದ ಮತ್ತು ಅಧ್ಯಾತ್ಮ. ಇವುಗಳ ಅರ್ಥವು ಕ್ರಮವಾಗಿ – ಪ್ರತ್ಯಕ್ಷಾನುಮಾನಗಳು, ಪರಂಪರಾಪ್ರಾಪ್ತವಾದ ಜ್ಞಾನರಾಶಿ, ಮತ್ತು ಸ್ವಸಂವೇದನೆ ಎಂದಾಗುತ್ತದೆ. ಇಲ್ಲಿಯೂ ಸರ್ವೋಚ್ಚವೆಂದು ಅಂಗೀಕರಿಸಿರುವುದು ಸ್ವಾನುಭವವನ್ನೇ. ಆದುದರಿಂದ ಪ್ರಕೃತಲೇಖನದಲ್ಲಿ ತರ್ಕ-ಯುಕ್ತಿಗಳ ನೆಲೆಯಲ್ಲಿ ದೃಢಗೊಂಡ ಸ್ವಾನುಭವವನ್ನೇ ನೆಚ್ಚಿ ವಿಚಾರವನ್ನು ಮಂಡಿಸಲಾಗಿದೆ.
-೨-
ಮೊದಲಿಗೆ ರಸಗಳ ಸಂಖ್ಯೆಯನ್ನು ಕುರಿತು ನಮ್ಮ ಪರಂಪರೆಯಲ್ಲಿ ಸಾಗಿರುವ ಚರ್ಚೆಯನ್ನು ಗಮನಿಸೋಣ. “ಅಷ್ಟೌ ರಸಾಃ” ಎಂದು ನಾಟ್ಯಶಾಸ್ತ್ರದಲ್ಲಿ ಉಲ್ಲೇಖಗೊಂಡಿರುವುದರಿಂದ ಇರುವುದು ಎಂಟೇ ರಸಗಳೆಂದು ಭಾವಿಸಲಾಗುವುದಿಲ್ಲ. ಏಕೆಂದರೆ “ನವ ನಾಟ್ಯೇ ರಸಾಃ ಸ್ಮೃತಾಃ” ಎಂಬ ಪಾಠಾಂತರವೂ ಅದಕ್ಕಿದೆ. ರಸಗಳನ್ನು ಒಂಭತ್ತೆಂದು ತಿಳಿಯೋಣವೆಂದರೆ ಮುಂದೆ ಬಂದ ಆಲಂಕಾರಿಕರು ಮತಭೇದವನ್ನು ವ್ಯಕ್ತಪಡಿಸಿದ್ದಾರೆ. ರುದ್ರಟನು ರಸಗಳು ಹತ್ತು ಎನ್ನುತ್ತಾನೆ. ಭೋಜ, ಭಾನುದತ್ತ ಮೊದಲಾದವರು ರಸಸಂಖ್ಯೆಯನ್ನು ಹನ್ನೆರಡರಿಂದಾಚೆಗೂ ವಿಸ್ತರಿಸಿದ್ದಾರೆ. ಆದರೆ ಈ ವಿಷಯದಲ್ಲಿ ಪ್ರಾಚೀನರು ಯಾರೂ ಯುಕ್ತಿಯುಕ್ತವಾದ ನಿಲವಿಗೆ ಬಂದಂತೆ ಕಾಣುವುದಿಲ್ಲ. ಈ ಬಗೆಗೆ ಆಧುನಿಕರೇ ಹೆಚ್ಚು ಚಿಕಿತ್ಸಕವಾಗಿ, ಕ್ಷೋದಕ್ಷಮವಾಗಿ ಚರ್ಚಿಸಿದ್ದಾರೆ. ಮುಖ್ಯವಾಗಿ ಡಾ|| ನಗೇಂದ್ರ ಅವರ ಅಭಿಪ್ರಾಯವನ್ನು ಗಮನಿಸಬಹುದು. ಈ ವಿಷಯವನ್ನವರು ಮಾನವನ ಮೂಲಸಂವೇದನೆಗಳಿಗನುಸಾರವಾಗಿ ಮನಃಶಾಸ್ತ್ರೀಯ ಸಂಶೋಧನೆಗಳ ಹಿನ್ನೆಲೆಯಲ್ಲಿ ನಿರೂಪಿಸಿದ್ದಾರೆ. ರಸಸಂಖ್ಯೆಯ ಚರ್ಚೆಯು ವೈಜ್ಞಾನಿಕವಾಗಿ ಸಾಗಬೇಕಾದರೆ ಮುಖ್ಯವಾಗಿ ಆರು ಅಂಶಗಳನ್ನು ಗಮನಿಸತಕ್ಕದ್ದೆಂದು ಅವರ ಅಭಿಮತ. ಅವು ಯಾವುವೆಂದರೆ – (೧) ಭಾವಸ್ಥೈರ್ಯ, (೨) ಸಾರ್ವಜನೀನಸ್ವೀಕೃತಿ, (೩) ಆಸ್ವಾದನೆಯ ಸಾಮರ್ಥ್ಯ, (೪) ಮಾನವನ ಯಾವುದಾದರೂ ಮೂಲಭೂತಪ್ರವೃತ್ತಿಯ ಜೊತೆಗೆ ದೃಢವಾದ ಸಂಬಂಧ, (೫) ಪರಮಪುರುಷಾರ್ಥದೊಡನೆ ಇದಕ್ಕಿರುವ ಸಂಬಂಧ, ಮತ್ತು (೬) ಪರಿಷ್ಕೃತವಾದ ಉದಾತ್ತಾನುಭೂತಿ.
ಈ ಆರು ಅಂಶಗಳ ಹಿನ್ನೆಲೆಯಲ್ಲಿ ಗಮನಿಸಿದರೆ ಪ್ರಾಯಃ ಹತ್ತು ಅಥವಾ ಹನ್ನೆರಡು ಮೂಲಭಾವಗಳು ಉಳಿಯುತ್ತವೆ. ಮತ್ತು ಇವುಗಳಿಂದ ಜನಿಸುವ ಅಷ್ಟೇ ಪ್ರಮಾಣದ ರಸಗಳು ಗಣನೆಗೆ ಬರುತ್ತವೆ. ಹಾಗಾಗಿ ಆರ್ಷರಸಗಳಾದ ಶೃಂಗಾರ-ವೀರ-ಕರುಣ-ಅದ್ಭುತ-ಭಯಾನಕ-ರೌದ್ರ-ಹಾಸ್ಯ-ಭೀಭತ್ಸ, ಅಭಿನವಗುಪ್ತರು ಪ್ರತಿಪಾದಿಸುವ ಶಾಂತರಸ, ಮತ್ತು ರುದ್ರಟ, ಭೋಜ ಮೊದಲಾದವರು ಎತ್ತಿಹಿಡಿದಿರುವ ವಾತ್ಸಲ್ಯ ಅಥವಾ ಪ್ರೇಯೋರಸ – ಇವಿಷ್ಟು ಪ್ರಶ್ನಾತೀತವಾಗಿ ನಿಲ್ಲುತ್ತವೆ.
ಭಕ್ತಿಯು ಭಾವವೋ ರಸವೋ ಎಂಬುದರ ಬಗೆಗೆ ವಿದ್ವಾಂಸರಲ್ಲಿ ಐಕಮತ್ಯವಿಲ್ಲ. ಪ್ರಾಚೀನ ಪಂಡಿತರ ಪೈಕಿ ಹೇಮಾದ್ರಿ-ಮಧುಸೂದನಸರಸ್ವತಿ-ರೂಪಗೋಸ್ವಾಮಿ ಮುಂತಾದವರು, ಮತ್ತು ಆಧುನಿಕರಾದ ಡಾ|| ನಗೇಂದ್ರ ಅವರು ಭಕ್ತಿಯನ್ನು ರಸವೇ ಎನ್ನುತ್ತಾರೆ. ಆದರೆ ಅದೇ ಕ್ರಮದಲ್ಲಿ ಜಗನ್ನಾಥಪಂಡಿತ, ಡಾ|| ವಿ. ರಾಘವನ್ ಮೊದಲಾದವರು ಹಾಗಲ್ಲವೆನ್ನುತ್ತಾರೆ. ನಮ್ಮ ಅಭಿಪ್ರಾಯದಲ್ಲಿ ಭಕ್ತಿಯು ರಸವಲ್ಲ. ಈ ಬಗೆಗೆ ಈಚೆಗೆ ಡಾ|| ಮಹೇಶ್ ಅಡಕೋಳಿ ಅವರು ಮಾಡಿದ ಚಿಂತನೆಯಾಗಲಿ, ನಮ್ಮದೇ ಅನ್ಯತ್ರ ನಡೆಸಿದ ಸಮಾಲೋಚನೆಯಾಗಲಿ ಆಸಕ್ತರಿಗೆ ಉಪಾದೇಯಯಾಗಬಲ್ಲುವು. ಸದ್ಯಕ್ಕೆ ಆ ವಿವರಗಳು ಅನಪೇಕ್ಷಿತ. ಚರ್ವಣಾವಕಾಶದಲ್ಲಿ ಭಕ್ತಿಯ ಶಕ್ತಿ ಎಷ್ಟೇ ಮೇಲ್ಮಟ್ಟದ್ದಾಗಿರಬಹುದು. ಆದರೆ ಸಹೃದಯನ ಸಾಮ್ರಾಜ್ಯವಾದ ರಸದಲ್ಲಿ ಭಕ್ತಿಪರವಶರಿಗೆ ಪ್ರಾಶಸ್ತ್ಯವಿಲ್ಲ. ಭಕ್ತನ ಹೃದಯಸಂಸ್ಕಾರವು ಕಾವ್ಯದ ಹರಹಿನ ಹೊರಗಿನಿಂದಲೂ ಆಗಿರಬಹುದು. ಮತ್ತದು ಕೇವಲ ’ಸದ್ಯಃಪರನಿರ್ವೃತಿ’ಯನ್ನು ಪ್ರಯೋಜನವಾಗಿ ಸ್ವೀಕರಿಸುವುದಿಲ್ಲ. ಹಾಗಾಗಿ ಭಕ್ತನ ಅನುಭವವು ಪ್ರತ್ಯೇಕವಾಗಿ ಉಳಿಯುವುದೇ ಹೊರತು ಸಾಧಾರಣೀಕೃತವಾಗುವುದಿಲ್ಲ. ಆದುದರಿಂದಲೇ ಭಕ್ತಿಯು ರಸವಲ್ಲ. ಭಕ್ತಿಯದ್ದೇ ಈ ಗತಿಯಾದರೆ ಇನ್ನು ದೇಶಭಕ್ತಿರಸ, ಪ್ರಕೃತಿರಸ ಮುಂತಾದವುಗಳ ಕಥೆಯನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲವಷ್ಟೆ! ಒಟ್ಟಿನಲ್ಲಿ ತಾತ್ಪರ್ಯವಿಷ್ಟು : ದಶರಸಾತ್ಮಕವಾದ ಸಾಹಿತ್ಯಶಾಸ್ತ್ರದಲ್ಲಿ ಹೊಸದಾದ ಧೀರರಸವನ್ನು ಪ್ರತಿಷ್ಠಾಪಿಸಬೇಕಾದರೆ ಪೂರ್ವೋಕ್ತವಾದ ಆರು ಅಂಶಗಳನ್ನು ಕೂಲಂಕಷವಾಗಿ ಪರಿಗಣಿಸಬೇಕು.
ಸ್ವಮತಸ್ಥಾಪನೆ
“ನೀವು ಹೇಳಹೊರಟಿರುವ ಧೀರರಸವು ಭರತಪ್ರೋಕ್ತವಲ್ಲವಲ್ಲ!” ಎಂದು ಸಂಪ್ರದಾಯಶರಣರು ಅಪಸ್ವರವನ್ನೆಬ್ಬಿಸಬಹುದು. ಭರತ ಹೇಳದಿದ್ದರೇನಂತೆ? ಶಾಂತ ಮತ್ತು ವಾತ್ಸಲ್ಯಗಳ ಪ್ರಸ್ತಾವವೂ ನಾಟ್ಯಶಾಸ್ತ್ರದಲ್ಲಿಲ್ಲ. ಹಾಗೆಂದಮಾತ್ರಕ್ಕೆ ಅವು ರಸಗಳೇ ಅಲ್ಲವೆಂದು ಹೇಳುವುದು ಯುಕ್ತವಾದೀತೇ? ಆರ್ಷ-ಅನಾರ್ಷಗಳಿಗಿಂತಲೂ ಸತ್ಯ ಮುಖ್ಯ. ಸರ್ವಜನರ ಹೃದಯಾಂತರ್ಗತವಾದ ಸತ್ಯವೇ ಪರಮಪ್ರಮಾಣ. ನಾಗೇಶಭಟ್ಟ ಹೇಳಿರುವಂತೆ ಸಂಪ್ರದಾಯಜಾಡ್ಯವು ನೂತನಸಿದ್ಧಾಂತಗಳ ವಸ್ತುನಿಷ್ಠಪರಾಮರ್ಶನೆಗೆ ಪ್ರತಿಬಂಧಕವಾಗುತ್ತದೆ. ಹಾಗಾಗಿ ಈ ಮುನ್ನವೇ ಹೇಳಿರುವ ಅನುಭವಪ್ರಮಾಣದ ಬೆಳಕಿನಲ್ಲಿ ನಮ್ಮೀ ನಿಗಮನವನ್ನು ಮುನ್ನಡೆಸಲಾಗುವುದು.
ಸ್ಥಾಯಿಭಾವದ ವಿವರಣೆ
“ಹೊಸದಾಗಿ ಈ ಧೀರರಸವನ್ನು ಪ್ರಸ್ತಾವಿಸುವ ಆವಶ್ಯಕತೆಯಾದರೂ ಏನಿತ್ತು?” “ಇದರಿಂದ ಮಾಡುವುದಾದರೂ ಏನು?” “ಈ ರಸವು ಆವಿಷ್ಕಾರಗೊಳ್ಳುವ ಮೊದಲು ಸಾಹಿತ್ಯಜಗತ್ತೇನೂ ಅಳುತ್ತಿರಲಿಲ್ಲವಲ್ಲ ; ಏತಕ್ಕಾಗಿ ನಿಮ್ಮ ತೀಟೆಯನ್ನು ಜಗತ್ತಿನ ಮೇಲೆ ಹೇರುತ್ತಿದ್ದೀರಿ!” – ಇವೇ ಮುಂತಾದ ಅಭಿಪ್ರಾಯಗಳನ್ನು ಪೂರ್ವಪಕ್ಷವಾಗಿ ಸ್ವೀಕರಿಸಿ, ಅವುಗಳು ಹೇಗೆ ಬುಡವಿಲ್ಲದವೆಂದು ಸಿದ್ಧಾಂತದ ಸ್ಥಾಪನೆಯ ಮೂಲಕ ತೋರಿಸಲಾಗುವುದು.
ಮಾನವನ ಮೂಲಪ್ರವೃತ್ತಿಗಳಲ್ಲಿ ಒಂದಾದ ’ಕುತೂಹಲ’ವೇ ಧೀರರಸದ ಸ್ಥಾಯಿಭಾವ. ನಮಗೆಲ್ಲರಿಗೂ ತಿಳಿದಿರುವಂತೆ ಆದಿಮಾನವರಿಗೆ ಉದರಪೋಷಣೆಯ ಮುಖ್ಯವಿಧಾನವೊಂದೆನಿಸಿದ್ದ ಬೇಟೆಯಲ್ಲಿಯೇ ಅದೆಷ್ಟೋ ಬಗೆಯ ತಂತ್ರ-ಪ್ರತಿತಂತ್ರಗಳ ಕೌತುಕಕಾರಿಸಂಗತಿಗಳಿವೆ. ಇಲ್ಲಿಯೇ ಮಾನವನ ಅನ್ವೇಷಣೆ ಮತ್ತು ಕುತೂಹಲಗಳ ವ್ಯಾಪಕಾನ್ವಯವಿದೆ. ಹೆಚ್ಚೇನು, ಮನುಷ್ಯನ ಜೀವನದುದ್ದಕ್ಕೂ ಅವನ ವಿಷಯಾಸಕ್ತಿಯನ್ನು ಕೆರಳಿಸುವುದು ಕುತೂಹಲವೇ. ಯಾವುದೇ ತೆರನಾದ ಅನ್ವೇಷಣೆಯಾಗಲಿ, ಅದನ್ನು ಹುಟ್ಟಿಸಿ ಮುನ್ನಡೆಸುವುದು ಕುತೂಹಲಸ್ವಭಾವವೇ. ಇದು ಎಲ್ಲ ಸಾಹಸಯಾತ್ರಿಕರ, ವೀರಯೋಧರ, ವಿಜ್ಞಾನಿಗಳ, ಸಂಶೋಧಕರ ಅನುಭವವೂ ಆಗಿದೆ. ಅಷ್ಟೇ ಏಕೆ, ಪ್ರಾಣಿಗಳೂ ಕೂಡ ಕುತೂಹಲವನ್ನೇ ಆಧರಿಸಿ ಜೀವನವನ್ನು ನಡೆಸುತ್ತವೆ. ಬಾಲ-ವೃದ್ಧ, ಸ್ತ್ರೀ-ಪುರುಷ – ಈ ತೆರನಾದ ಯಾವುದೇ ಭೇದಕ್ಕೆ ಅವಕಾಶವಿಲ್ಲದೆ ನಾಮ-ರೂಪಾತ್ಮಕವಾದ ಜಗತ್ತಿನ್ನಲ್ಲಿ ಅಸಂಸ್ಕೃತರಿಗೆ ಭೌತಿಕಾಸಕ್ತಿಯನ್ನೂ ಸಂಸ್ಕೃತರಿಗೆ ಬೌದ್ಧಿಕಾಸಕ್ತಿಯನ್ನೂ ದಯಪಾಲಿಸುವ ಕೆಲಸ ಕುತೂಹಲಭಾವದ ಪ್ರಭಾವದಿಂದ ಅವಿಚ್ಛಿನ್ನವಾಗಿ ಸಾಗಿದೆ. ಕುತೂಹಲವಿಲ್ಲವೆಂದರೆ ಒಂದು ಶಿಲೆಯಂತೆ ಜಡವಾಗಿರಬೇಕು, ಇಲ್ಲವಾದರೆ ಬ್ರಹ್ಮಜ್ಞಾನಿಯಾಗಿರಬೇಕು ; ಮಧ್ಯಮಾರ್ಗಕ್ಕೆ ಅವಕಾಶವೇ ಇಲ್ಲ. ಅಚೇತನದ ವಿಷಯದಲ್ಲಾಗಲೀ ಬ್ರಹ್ಮಜ್ಞಾನಿಗಳ ವಿಷಯದಲ್ಲಾಗಲೀ ನಮಗೆ ಯಾವುದೇ ತಕರಾರಿಲ್ಲ. ಏಕೆಂದರೆ ರಸಾನಂದದ ಜಿಜ್ಞಾಸೆಯು ಇಂದ್ರಿಯಗ್ರಾಹ್ಯವಾದ ವಿಷಯಪ್ರಪಂಚದಲ್ಲಿ ನಡೆಯುತ್ತದೆ ; ನಿರ್ವಿಷಯವಾದ ಅತೀಂದ್ರಿಯಜಗತ್ತಿನಲ್ಲಿ ಅಲ್ಲ. ಇನ್ನೊಂದು ವಿಚಾರ – ಕುತೂಹಲವು ಮಾನವಸಾಮಾನ್ಯದಲ್ಲಿ ರತಿಯ ಹಾಗೆ ಕೇವಲ ಯೌವನದಲ್ಲಿ ವಿಕಸಿಸಿ ಅನಂತರ ಕ್ರಮೇಣ ನಶಿಸುವುದಿಲ್ಲ. ಇದರಿಂದ ಧೀರರಸದ ವ್ಯಾಪ್ತಿಯು ಶೃಂಗಾರರಸಕ್ಕಿಂತಲೂ ಮಿಗಿಲಾದದ್ದೆಂದು ಸಿದ್ಧವಾಗುತ್ತದೆ. ಹಾಸ್ಯರಸದ ಹಾಗೆ ಧೀರವೂ ಕೂಡ ಸಕಲಸ್ತರದವರನ್ನೂ ರಂಜಿಸುತ್ತದೆ. ಇನ್ನು ಧೀರರಸವು ಭಯಾನಕ-ರೌದ್ರ-ಬೀಭತ್ಸಗಳಂತೆ ಮಿತಪರಿಮಾಣದ್ದಲ್ಲ. ಹಾಗಾಗಿ ’ಕುತೂಹಲ’ವೆಂಬ ಸ್ಥಾಯಿಭಾವವನ್ನು ಅಂಗೀಕರಿಸದೆ ಗತ್ಯಂತರವಿಲ್ಲ.
ಕುತೂಹಲವೆಂಬ ಸ್ಥಾಯಿಭಾವಕ್ಕೆ ಶಂಕೆ, ಸ್ಮೃತಿ, ಧೃತಿ, ಮತಿ, ಔತ್ಸುಕ್ಯ, ಆವೇಗ (ಗಡಿಬಿಡಿ, ಸಂಭ್ರಮ), ಅವಹಿತ್ಥಾ (ಮನೋವಿಕಾರವನ್ನು ಅಡಗಿಸಿಕೊಳ್ಳುವುದು) ಮುಂತಾದವು ಸಂಚಾರಿಭಾವಗಳು. ಈ ಸಂಚಾರಿಗಳ ವಿವರಣೆಯು ನಾಟ್ಯಶಾಸ್ತ್ರದಲ್ಲಿಯೇ ವಿಶದವಾಗಿ ಬಂದಿರುವುದರಿಂದ ಅವನ್ನಿಲ್ಲಿ ವಿವರಿಸಿಲ್ಲ. ರತಿ-ಹಾಸ-ಕ್ರೋಧ-ಉತ್ಸಾಹ-ಭಯ-ಶೋಕಗಳಂತೆ ಕುತೂಹಲವೂ ಸಕಲಜೀವಿಗಳ ಅನುಭವಸಿದ್ಧವೇ ಆಗಿರುವುದರಿಂದ ಇದರ ವಿಷಯದಲ್ಲಿ ಹೆಚ್ಚಿನ ವಿವರಣೆ ಅನಪೇಕ್ಷ್ಯ.
-೩-
ಧೀರರಸನಿರೂಪಣೆ
ಬುದ್ಧಿವಿಲಸಿತವಾದ ರಸವು ಹೇಗೆ ತಾನೆ ಹೃದ್ಯವಾಗುತ್ತದೆ? ಹೃದಯಾಧೀನವಾಗದ ಹೊರತು ರಸಕ್ಕೆ ರಸತ್ವವೇ ಸಿದ್ಧಿಸುವುದಿಲ್ಲ. ಹೀಗಿರುವಾಗ ಬುದ್ಧಿಪ್ರಾಬಲ್ಯವನ್ನೇ ನೆಚ್ಚಿರುವ ಧೀರಕ್ಕೆ ರಸತ್ವ ಬರುವುದೆಂತು? – ಈ ಪ್ರಶ್ನೆಗಳನ್ನು ಪರಿಶೀಲಿಸೋಣ.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಎಲ್ಲ ರಸಗಳೂ ಸಮನಾಗಿ ಹೃದಯಸಂವಾದಿಗಳಾಗುವುದಿಲ್ಲ. ಮಧುರ, ದೀಪ್ತ, ವಿಕಾಸಶೀಲ – ಹೀಗೆ ರಸಪರಿಣಾಮವು ವಿಭಕ್ತವಾಗಿದೆ. ಮಧುರಪ್ರಕಾರದಲ್ಲಿ ಶೃಂಗಾರ ಮತ್ತು ಕರುಣಗಳು ವಿಖ್ಯಾತವಾಗಿವೆ. ಅದರಲ್ಲಿಯೂ ವಿಪ್ರಲಂಭಶೃಂಗಾರ ಅತ್ಯಂತಮಧುರ. ದೀಪ್ತವರ್ಗದಲ್ಲಿ ವೀರ, ರೌದ್ರ, ಬೀಭತ್ಸ, ಭಯಾನಕಗಳು ಸೇರಿಕೊಳ್ಳುತ್ತವೆ. ವೀರವು ಕೆಲವೊಮ್ಮೆ ವಿಕಾಸವರ್ಗದಲ್ಲಿಯೂ ಕಾಣಿಸಿಕೊಳ್ಳುತ್ತದೆ. ಹಾಸ್ಯ ಮತ್ತು ಅದ್ಭುತಗಳು ಸರ್ವದಾ ವಿಕಾಸಶೀಲವಾದುವೇ.
ಅನುಭವನಿಷ್ಠವಾಗಿ ಕಂಡಾಗ, ಸಂಭೋಗಶೃಂಗಾರ (ಮುಖ್ಯವಾಗಿ ರಸಿಕ-ವೈನೋದಿಕ ಆಯಾಮಗಳು), ಹಾಸ್ಯ ಮತ್ತು ಧೀರರಸಗಳು ಬುದ್ಧಿವಿಲಾಸವನ್ನೇ ಪ್ರಧಾನವಾಗಿ ನೆಚ್ಚಿರುತ್ತವೆ. ವಿಶೇಷತಃ ಪರಸ್ಥವೆಂಬ ಹಾಸ್ಯಪ್ರಕಾರದಲ್ಲಂತೂ ಇದು ಎದ್ದುತೋರುತ್ತದೆ. ಪ್ರಸಂಗಕ್ಕನುಗುಣವಾಗಿ ಶಾಂತರಸವೂ ಬರಬಹುದು. ಹೆಚ್ಚಾಗಿ ವಿಕಾಸಪ್ರಾಯವಾದ ರಸಗಳೇ ಬುದ್ಧಿಪ್ರಧಾನವಾದವೆಂದು ನಮ್ಮ ಅಭಿಪ್ರಾಯ. ಬುದ್ಧಿಪ್ರಧಾನವೆಂದರೆ ಅದು ಬರಿದೇ ಶುಷ್ಕವೆಂದೂ ತರ್ಕಕರ್ಕಶವೆಂದೂ ತಾತ್ಪರ್ಯವಲ್ಲ. ಭರತನ ವ್ಯಭಿಚಾರಿಭಾವಗಳ ಪಟ್ಟಿಯನ್ನು ನೋಡಿದವರಿಗೆ ಮನೋಬುದ್ಧಿಗಳ ಹಾಗೂ ಮತಿ-ಹೃದಯಗಳ ಅವಿನಾಭಾವವೇನೆಂದು ತಿಳಿಯದಿರದು. ಅದ್ಭುತರಸವು ಬುದ್ಧ್ಯತೀತವಾದರೂ ಅದು ವಿಕಾಸಿಯೇ ಹೌದು. ಏಕೆಂದರೆ ಇದರಲ್ಲಿ ಹೃದ್ಭಾವ-ಚಿದ್ಭಾವಗಳ ಪರಸ್ಪರ ಬೆರಕೆಯಿಂದ ಮಧುರಾಘಾತದ ಅನುಭವವಾಗುತ್ತದೆ. ವಾತ್ಸಲ್ಯವು ಮಧುರಪ್ರಧಾನವಾದರೆ ಶಾಂತರಸವು ವಿಕಾಸಪ್ರಧಾನ. ಹೀಗಾಗಿ ಶಾಂತಕ್ಕೆ ಕೆಲಮಟ್ಟಿಗೆ ಬೌದ್ಧಿಕದೀಪ್ತಿಯೊದಗುವ ಶಕ್ತಿಯಿದೆಯಲ್ಲದೆ ವಾತ್ಸಲ್ಯಕ್ಕಲ್ಲ.
ಹಾಸ್ಯ, ಸಂಭೋಗಶೃಂಗಾರ, ವೀರ ಮುಂತಾದ ರಸಗಳೂ ಹೇಗೆ ಬುದ್ಧಿಪ್ರಧಾನವಾಗಬಲ್ಲವೆಂದು ನಿರೂಪಿಸಲು ಕೆಲವು ಉದಾಹರಣೆಗಳನ್ನು ಗಮನಿಸಬಹುದು.
ಅ. ಹಾಸ್ಯ
ನಾಸ್ಮಾಕಂ ಜನನೀ ತಥೋಜ್ಜ್ವಲಕುಲಾ ಸಚ್ಛ್ರೋತ್ರಿಯಾಣಾಂ ಕುಲೇ
ವ್ಯೂಢಾ ಕಾಚನ ಕನ್ಯಕಾ ಕಿಲ ಮಯಾ ತೇನಾಸ್ಮಿ ತಾತಾಧಿಕಃ |
ತಸ್ಯಾ ಮಾತುಲಬಾಂಧವಸ್ಯ ತನಯಾ ಮಿಥ್ಯಾಭಿಶಪ್ತಾ ತತ-
ಸ್ತತ್ಸಂಪರ್ಕವಶಾನ್ಮದೀಯಗೃಹಿಣೀ ಪ್ರೇಯಸ್ಯಪಿ ಪ್ರೋಜ್ಝಿತಾ || (ಪ್ರಬೋಧಚಂದ್ರೋದಯ, ೨.೯)
ನನ್ನ ತಾಯಿ ಜನಿಸಿದ ಕುಲ ಉಚ್ಚಕೋಟಿಯದ್ದೇನೂ ಅಲ್ಲ. ನಾನಾದರೋ ಸದ್ಬ್ರಾಹ್ಮಣರ ಮನೆಯ ಹೆಣ್ಣನ್ನು ಮದುವೆಯಾಗಿದ್ದೇನೆ. ಹಾಗಾಗಿ ಈ ಅಂಶದಲ್ಲಿ ನನ್ನ ತಂದೆಗಿಂತಲೂ ನಾನೇ ಮೇಲು! ಆದರೆ ನನ್ನ ಸೋದರಳಿಯನ ಮೈದುನನ ಮಗಳ ವಿಷಯದಲ್ಲಿ ಕೆಟ್ಟ ಅಭಿಪ್ರಾಯವೊಂದು ಹರಡಿತು. ಅವಳ ಜೊತೆ ನನ್ನ ಹೆಂಡತಿಗೆ ಸಂಪರ್ಕವಿದ್ದುದರಿಂದ ಪ್ರೀತಿಪಾತ್ರಳಾದರೂ ನಾನವಳನ್ನು ಬಿಟ್ಟೆ.
ಆ. ಸಂಭೋಗಶೃಂಗಾರ
ಕೋಪಸ್ತ್ವಯಾ ಹೃದಿ ಕೃತೋ ಯದಿ ಪಂಕಜಾಕ್ಷಿ
ಸೊऽಸ್ತು ಪ್ರಿಯಸ್ತವ ಕಿಮತ್ರ ವಿಧೇಯಮನ್ಯತ್ |
ಆಶ್ಲೇಷಮರ್ಪಯ ಮದರ್ಪಿತಪೂರ್ವಮುಚ್ಚೈ-
ರ್ಮಹ್ಯಂ ಸಮರ್ಪಯ ಮದರ್ಪಿತಚುಂಬನಂ ಚ || (ಅಮರುಶತಕ)
ಹೇ ಪಂಕಜಾಕ್ಷಿ! ನಿನಗೆ ನನ್ನ ಮೇಲೆ ಕೋಪವಿದ್ದ ಪಕ್ಷದಲ್ಲಿ ಅದೇ ನಿನಗೆ ಪ್ರಿಯವಾಗಿರಲಿ. ಮತ್ತೇನೂ ಮಾಡಲಾಗುವುದಿಲ್ಲ. ಇಷ್ಟು ಮಾತ್ರ ಮಾಡಿಬಿಡು : ಹಿಂದೆ ನಾನು ಕೊಟ್ಟ ಗಾಢವಾದ ಅಪ್ಪುಗೆಯನ್ನೂ ನಾನಿತ್ತ ಚುಂಬನವನ್ನೂ ಹಿಂತಿರುಗಿಸು,
ಇ. ವಿಪ್ರಲಂಭಶೃಂಗಾರದಂಥ ಕರುಣಸ್ಪರ್ಶಪಾರಮ್ಯವಿರುವ ಮಾಧುರ್ಯಮಹಿತವಾದ ರಸಪ್ರಭೇದದಲ್ಲಿಯೂ ಧೀರರಸಸ್ಪರ್ಶವು ದರ್ಶನೀಯ
ನಾಂತಃ ಪ್ರವೇಶಮರುಣದ್ವಿಮುಖೀ ನ ಚಾಸೀ-
ದಾಚಷ್ಟ ರೋಷಪರುಷಾಣಿ ನ ಚಾಕ್ಷರಾಣಿ |
ಸಾ ಕೇವಲಂ ಸರಲಪಕ್ಷ್ಮಭಿರಕ್ಷಿಪಾತೈಃ
ಕಾಂತಂ ವಿಲೋಕಿತವತೀ ಜನನಿರ್ವಿಶೇಷಮ್ || (ಅಮರುಶತಕ)
ಒಳಗೆ ಬರುವುದನ್ನು ತಡೆಯಲಿಲ್ಲ, ಮುಖವನ್ನು ಸಿಂಡರಿಸಿಕೊಳ್ಳಲಿಲ್ಲ, ರೋಷಕಷಾಯಿತವಾದ ನುಡಿಗಳನ್ನೂ ಆಡಲಿಲ್ಲ. ಅವಳು ಕೇವಲ ಮುಗ್ಧವಾದ ಕಣ್ಣುಗಳಿಂದ ಎಲ್ಲರನ್ನೂ ನೋಡುವ ಹಾಗೆ ತನ್ನ ನಲ್ಲನನ್ನು ನೋಡಿದಳು.
ಈ. ವೀರರಸ
ರೇ ರೇ ಕ್ಷತ್ರಕುಲಾಧಮ ಪ್ರಕಟಿತಂ ಬ್ರಾಹ್ಮಣ್ಯಮಸ್ತ್ರೇಣ ತೇ
ನನ್ವೇಕಾಂ ರಜನೀಚರೀಂ ತ್ವಮವಧೀರ್ಮಾತಾ ನ ಮೇ ತಾಟಕಾ |
ನಿಷ್ಕ್ಷತ್ರಂ ಕೃತವಾನಹಂ ವಸುಮತೀಂ ಕೋऽಹಂ ತದಾ ಸತ್ಯವಾಕ್?
ದೃಷ್ಟೋ ನೈವ ಪರಾಜಯೋ ಮಮ ಪುರಾ ಹ್ಯದ್ಯಾಸ್ತಿ ತದ್ವೈಭವಮ್ || (ಹನೂಮನ್ನಾಟಕ)
ಇದು ಪರಶುರಾಮನು ಶ್ರೀರಾಮನಿಗೆ ಎದುರಾದಾಗ ಅವರೀರ್ವರ ಸಂವಾದ.
ಪ: ಎಲವೋ ಕ್ಷತ್ರಕುಲಾಧಮ!
ರಾ: ನೀವು ಬ್ರಾಹ್ಮಣರೇ ಇರಬೇಕು ; ನಿಮ್ಮ ಅಸ್ತ್ರದಿಂದಲೇ ಅದು ತಿಳಿಯುತ್ತಿದೆ
ಪ: ನೀನು ಒಬ್ಬ ರಾಕ್ಷಸಿಯನ್ನೂ ಕೊಂದಿಲ್ಲವಲ್ಲೋ!
ರಾ: ತಾಟಕಿಯು ನನ್ನ ತಾಯಿಯಲ್ಲವಷ್ಟೆ
ಪ: ನಾನು ಇಡೀ ಭೂಮಿಯಲ್ಲಿ ಕ್ಷತ್ರಿಯರೇ ಇಲ್ಲದಂತೆ ಮಾಡಿರುವೆನು!
ರಾ: ಓ ಸತ್ಯವಚನರೇ, ಹಾಗಾದರೆ ನಾನು ಯಾರು?
ಪ: ಹಿಂದೆಂದೂ ನಾನು ಸೋತಿದ್ದಿಲ್ಲ!
ರ: ಇಂದು ಆ ವೈಭವವೂ ನಡೆಯುವುದು.
ಉ. ಶಾಂತರಸ
ಮರಣಸ್ಯ ಮುನೇ ರಾಜ್ಞೋ ಜರಾ ಧವಲಚಾಮರಾ |
ಆಗಚ್ಛತೋऽಗ್ರೇ ನಿರ್ಯಾತಿ ಸ್ವಾಧಿವ್ಯಾಧಿಪತಾಕಿನೀ || (ಯೋಗವಾಸಿಷ್ಠ)
ಮರಣವೆಂಬ ರಾಜನಿಗೆ ಮುಪ್ಪೇ ಶ್ವೇತಚ್ಛತ್ರ. ಆಧಿ-ವ್ಯಾಧಿಗಳೆಂಬ ಸೈನ್ಯವು ಮೊದಲು ತೋರಿಕೊಂಡು ಅರಸನು ಆಗಮನವನ್ನು ಸೂಚಿಸುತ್ತದೆ.
ಈ ಉದಾಹರಣೆಗಳಿಂದ ಉಕ್ತರಸಗಳಲ್ಲಿ ಬುದ್ಧಿಸ್ಪರ್ಶವಿರುವುದು ಸ್ಪಷ್ಟವಾಗಿದೆ. ಹಲವರು ಹೇಳಬಹುದು, “ಬುದ್ಧಿಪ್ರಾಧಾನ್ಯಕ್ಕೆ ಮೂಲಕಾರಣ ಅಲಂಕಾರಗಳ ಪ್ರಸಕ್ತಿಯೇ ಹೊರತು ರಸಸ್ವರೂಪವಲ್ಲ” ಎಂದು. ಅದು ಹೇಗೇ ಇರಲಿ. ಅದರಿಂದಾಗುವ ತೊಂದರೆಯಾದರೂ ಏನು? ಎಲ್ಲ ಅಲಂಕಾರಗಳೂ ರಸಗಮಕಗಳೆಂದು ಭಾಮಹ-ರುದ್ರಟ-ರುಯ್ಯಕ ಮೊದಲಾದ
ಪ್ರಾಚೀನರೂ ಡಾ|| ಕೆ. ಕೃಷ್ಣಮೂರ್ತಿ ಮತ್ತು ರೇವಾಪ್ರಸಾದ್ ದ್ವಿವೇದಿಯವರಂಥ ಆಧುನಿಕರೂ ಸಂಶಯಕ್ಕಾಸ್ಪದವಿರದಂತೆ ನಿರೂಪಿಸಿದ್ದಾರೆ. ಆದುದರಿಂದ ಮೇಲೆ ಹೇಳಿದ ಪೂರ್ವಪಕ್ಷದ ವಾದ ನಿಲ್ಲುವುದಿಲ್ಲ. ಎಲ್ಲ ಅಲಂಕಾರಗಳ ಜೀವಾಳವೂ ಚಮತ್ಕಾರವೇ. ಇಂಥ ಚಮತ್ಕಾರವಾದರೋ ಕುತೂಹಲದಲ್ಲಿ ಜನಿಸಿ ಅಲ್ಲಿಂದಲೇ ಬೆಳದು ಮತ್ತದನ್ನೇ ಪೋಷಿಸಿ ಪರ್ಯಾಪ್ತಿಗೊಳಿಸುವಲ್ಲಿ ತನ್ನ ಸಾರ್ಥಕ್ಯವನ್ನು ಕಾಣುತ್ತದೆಂಬುದು ನಮ್ಮೆಲ್ಲರ ಆನುಭವಿಕಸತ್ಯ. ಇಂಥ ಕುತೂಹಲವೇ ಪ್ರಕೃತ ನಮ್ಮ ಅಭಿಮತರಸವೆನಿಸಿದ ಧೀರದ ಸ್ಥಾಯಿಯಾದ ಕಾರಣ ವಸ್ತುಸ್ಥಿತಿಗೆ ಮತ್ತಷ್ಟು ಪುಷ್ಟಿ ಬಂದಿರುವುದು ಸ್ಪಷ್ಟ. ಹೆಚ್ಚೇನು, ವಿಶ್ವನಾಥನು ತನ್ನ ಸಾಹಿತ್ಯದರ್ಪಣದಲ್ಲಿ ತಿಳಿಸಿರುವಂತೆ ರಸದಲ್ಲಿಯೂ ಸಾರಭೂತವಾದುದೆಂದರೆ ಚಮತ್ಕಾರವೇ ಸರಿ. ಇಂಥ ಚಮತ್ಕಾರಾಂಶವು ಧೀರರಸದಲ್ಲಿ ಮೇಲ್ನೋಟಕ್ಕೆ ಕೂಡ ಎದ್ದುಕಾಣುವಂಥದ್ದು ಸುವೇದ್ಯ. ಹೀಗಾಗಿ ಚಮತ್ಕಾರಪರ್ಯವಸಾಯಿಯಾದ ಅಲಂಕಾರಗಳು ಪ್ರಧಾನಪಾತ್ರ ವಹಿಸುವ ಮುಕ್ತಕಗಳಲ್ಲಿ ಕೂಡ ಧೀರರಸದ ಸ್ಫುಟಪ್ರತೀತಿಯನ್ನು ನಿರೂಪಿಸಬಹುದಾಗಿದೆ. ಅಲ್ಲದೆ ಈ ಬಗೆಯಲ್ಲಿ ಬಿಡಿಬಿಡಿಯಾದ ಪದ್ಯಗಳ ಮೂಲಕ ಯಾವುದೇ ರಸವನ್ನು ನಿರೂಪಿಸುವಾಗಲೂ ಇಂಥ ಸಮಸ್ಯೆಗಳು ತಪ್ಪಿದ್ದಲ್ಲ. ಎಲ್ಲ ಬಗೆಯ ದೃಷ್ಟಾಂತಗಳ ಬಾಳೇ ಇಷ್ಟು. ಆದರೆ ಈ ಮೂಲಕ ದಾರ್ಷ್ಟಾಂತಿಕಕ್ಕೆ ಎಂಥ ಚ್ಯುತಿಯೂ ಬರುವುದಿಲ್ಲವೆಂಬುದು ಮನನೀಯ. ರಸಾಸ್ವಾದನಪ್ರಕ್ರಿಯೆಯಲ್ಲಿ ಚಮತ್ಕಾರಗ್ರಹಣ, ವರ್ಣ್ಯವಸ್ತುವಿನಲ್ಲಿ ಸಹಾನುಭೂತಿ ಮತ್ತು ಕಲಾನುಭೂತಿಯ ಆನಂದವೆಂಬ ಮೂರು ಹಂತಗಳಿರುತ್ತವೆ. ಇಲ್ಲಿ ಚಮತ್ಕಾರವು ವಕ್ರೋಕ್ತಿಪಾರಮ್ಯದ್ದಾಗಿ, ವರ್ಣ್ಯವಸ್ತುಸಹಾನುಭೂತಿಯು ಧ್ವನ್ಯೌಚಿತ್ಯಮಾನಿತವಾಗಿ, ಸಹಾನುಭೂತಿಯು ರಸಭಾವಮಗ್ನವಾಗಿ ಪರಿಣಮಿಸುವುದು ಸಹೃದಯರಾದ ಶಾಸ್ತ್ರವೇತ್ತರಿಗೆ ಸುವೇದ್ಯ.
ಇಲ್ಲಿಯ ತನಕ ಧೀರರಸದ ಸ್ಥಾಯಿಯಾದ ಕುತೂಹಲದ ಪ್ರತಿಪಾದನೆ ಮತ್ತು ವಿವಿಧಸಂಚಾರಿಭಾವಗಳ ನಿರ್ದೇಶವನ್ನು ಮಾಡಿದ್ದಾಗಿದೆ. ಇದರಿಂದ ಪೂರ್ವೋಕ್ತಷಡಂಶಗಳಲ್ಲಿ ಭಾವಸ್ಥೈರ್ಯ ಮತ್ತು ಸಾರ್ವಜನೀನಸ್ವೀಕೃತಿಗಳು ಅಬಾಧಿತವಾಗಿ ಸಿದ್ಧವಾಗಿವೆ. ಉಳಿದ ಅಂಶಗಳನ್ನೀಗ ಗಮನಿಸೋಣ.
-೪-
ಧೀರರಸದಲ್ಲಿ ಎದ್ದುತೋರುವ ಅಂಶವೆಂದರೆ ಅದು ಪ್ರತಿಕ್ಷಣಕುತೂಹಲ. ಮುಂದೇನಾಗಬಹುದೆಂದು ತಿಳಿಯಲು ತರ್ಕ-ವಿತರ್ಕಗಳ ಉಯ್ಯಾಲೆಯಲ್ಲಿ ಮನಸ್ಸು ಸದಾ ಹೊಯ್ದಾಡುತ್ತಿರುತ್ತದೆ. ಹಲವು ವಿಷಯಗಳ ಸಂಭವನೀಯತೆಯನ್ನು ಪರಿಶೀಲಿಸುವಲ್ಲಿನ ಬೌದ್ಧಿಕವ್ಯಾಯಾಮವು ಸರ್ವಥಾ ಸಂತೋಷಕಾರಿ.
ಪಾಶ್ಚಾತ್ಯಸಾಹಿತ್ಯಪ್ರಕಾರದಲ್ಲಿ ಪತ್ತೆದಾರಿ ಕಥೆ-ಕಾದಂಬರಿಗಳು ಹೊಸದಾದ ಕವಲೊಂದನ್ನು ಸೃಷ್ಟಿಸಿವೆ. ಈ ಪ್ರಕಾರವು ಕಳೆದ ಶತಾಬ್ದಿಯಲ್ಲಿಯೇ ನಮ್ಮಲ್ಲಿ ಕೂಡ ಬಂದಿದೆ. ಈ ಬಗೆಯ ಕೃತಿಗಳು ಬಾಲ-ವೃದ್ಧ ಎಂಬ ಭೇದವಿಲ್ಲದೆ ಸಕಲರಸಿಕರ ಚಿತ್ತಾಕರ್ಷಣೆ ಮಾಡುತ್ತವೆ. ಇಲ್ಲಿರುವುದು ಧೀರರಸದ್ದೇ ಸಾಮ್ರಾಜ್ಯವೆಂದು ಬಲ್ಲವರೆಲ್ಲರೂ ಬಲ್ಲರು. ಈ ಸಾಹಿತ್ಯಪ್ರಕಾರದಲ್ಲಿ ಕುತೂಹಲವೇ ಮುಖ್ಯ. ರೋಚಕವಾದ ಕಥಾಸಂವಿಧಾನವನ್ನು ಅರ್ಥೈಸಿಕೊಳ್ಳುವಾಗಿನ ಕುತೂಹಲ, ಮತ್ತದರ ಆಸ್ವಾದಸಂದರ್ಭದಲ್ಲಿನ ಧೀರರಸಾನುಭವ ದಿಟವಾಗಿ ಅನನ್ಯ. ಇದರ ಪರಾಮರ್ಶನದಿಂದ ಧೀರರಸದ ರಂಜಕಶಕ್ತಿ ಸ್ವತಃಸಿದ್ಧವಾಗುತ್ತದೆ. ಮತ್ತು, ಈ ರಂಜನೆಯು ಕ್ಷುದ್ರವೂ ಅಲ್ಲ ಗ್ರಾಮ್ಯವೂ ಅಲ್ಲ. ಈ ಬಗೆಯ ಕ್ಷುದ್ರತೆ ಅಥವಾ ಗ್ರಾಮ್ಯತೆಗಳ ತೊಡಕು ಮಿಕ್ಕ ಯಾವುದೇ ರಸಕ್ಕೆ ಕೂಡ ಉಂಟಾಗಬಹುದಾದ ಸಮಸ್ಯೆ. ಇದು ಮುಖ್ಯವಾಗಿ ಆಯಾ ರಸನಿರ್ಮಿತಿಗೆ ತೊಡಗುವ ಕವಿಯ ದೋಷವೇ ಹೊರತು ರಸದ್ದಲ್ಲ.
“ಭಾರತೀಯರಸಸಿದ್ಧಾಂತ ಯಾತಯಾಮವೂ ಗತರಸವೂ ಆಗಿದೆ. ಅದರ ಪರಿಮಿತಿಯು ಕೇವಲ ಹಿಂದಿನ ಕಾಲದ ಕಾವ್ಯ-ನಾಟಕಗಳ ಕಥಾತಂತುವನ್ನು ವಿವರಿಸುವ ಮಟ್ಟದ್ದು. ಅದರಿಂದ ನಮ್ಮ ಕಾಲಕ್ಕಾಗಬಹುದಾದ ಪ್ರಯೋಜನವೇನೂ ಇಲ್ಲ.” ಈ ಬಗೆಯ ಅಪಪ್ರಥೆಯು ಇದೀಗ ಎಲ್ಲೆಲ್ಲಿಯೂ ಹರಡಿದೆ. ಇದು ಸರ್ವಥಾ ನಿರ್ಮೂಲನೀಯ. ವಾಸ್ತವವಾಗಿ ರಸಸಿದ್ಧಾಂತವು ಸರ್ವಸಾಹಿತ್ಯವಿಮರ್ಶನಪಟು; ಸಕಲಕಲಾವಿವೇಚನಸಮರ್ಥ ಕೂಡ. ದೇಶ-ಭಾಷೆಗಳ ಎಲ್ಲೆಯನ್ನು ಮೀರಿದ ಸೌಂದರ್ಯಾನುಭೂತಿಯನ್ನು ವಿವೇಚಿಸಲು ಇದು ದಕ್ಷವಾದುದು. ರಸಪ್ರಕ್ರಿಯೆಯ ಮೂಲಕ ಜಗತ್ಸಾಹಿತ್ಯದ ಸ್ವಾರಸ್ಯವಿವೇಚನೆಯನ್ನು ನಿರಾಯಾಸವಾಗಿ ಮಾಡಬಹುದು. ಹೀಗೆ ಸಾರ್ವಕಾಲೀನಮೌಲ್ಯಗಳನ್ನು ಒಳಗಂಡಿರುವ ರಸಸಿದ್ಧಾಂತದ ಔನ್ನತ್ಯವನ್ನು ಮನಗಾಣಲು ಧೀರರಸವೂ ನೆರವಾಗುತ್ತದೆ. ನಾಟಕ, ಚಲನಚಿತ್ರ ಮೊದಲಾದ ಕಲಾಮಾಧ್ಯಮಗಳಲ್ಲಿ ಕುತೂಹಲವನ್ನು ಕೆರಳಿಸುವ ನಿರ್ಭರವಾದ ಅಸಂಖ್ಯರಚನೆಗಳುಂಟು. ಆಸ್ವಾದವಿರುವ ಕಾರಣ ಇವುಗಳಲ್ಲಿ ಯಾವುದಾರೊಂದು ರಸದ ಸಂಭಾವ್ಯತೆಯನ್ನು ನಿರಾಕರಿಸಲು ಸಾಧ್ಯವೇ ಇಲ್ಲ. ಹೀಗಾಗಿ ಸಯುಕ್ತಿಕವಾಗಿ ಕಂಡಾಗ ಧೀರವೋ ತತ್ಸಜಾತೀಯವಾದ ಮತ್ತಾವುದೋ ಒಂದು ರಸವಲ್ಲಿ ಇರಲೇಬೇಕು. ಧೀರರಸವನ್ನು ಅಂಗೀಕರಿಸದ ಹೊರತು ಈ ಬಗೆಯ ಸಾಹಿತ್ಯ-ಕಲಾದಿಗಳಿಗೆ ರಸಸ್ಥಿತಿಯ ಆಸ್ವಾದವನ್ನು ಕಲ್ಪಿಸಲಾಗುವುದಿಲ್ಲ. ಈ ದೃಷ್ಟಿಯಿಂದ ನೋಡಿದಾಗ Arthur Conan Doyle, O. Henry, Edgar Allan Poe, Agatha Christie, Ayn Rand, Frederick Forsyth, Sidney Sheldon – ಮೊದಲಾದ ಲೇಖಕರ ಅಪಾರಜನಪ್ರಿಯತೆಗೆ ಕಾರಣ ತಿಳಿಯದಿರದು.
ಧೀರರಸನಿರೂಪಣೆಯಲ್ಲಿ ಪರಿಷ್ಕೃತವೂ ಉದಾತ್ತವೂ ಆದ ಅನುಭೂತಿಯ ಸಾಧ್ಯತೆಯುಂಟೇ ಎಂದು ಪ್ರಶ್ನೆಯುದಿಸಬಹುದು. ಅದನ್ನೀಗ ಗಮನಿಸೋಣ. ವಸ್ತು, ಭೂಮಿಕೆ, ಇತಿವೃತ್ತ, ವಿನ್ಯಾಸ, ಕವಿಯ ಸಂಸ್ಕಾರ ಮತ್ತು ಸಾಮರ್ಥ್ಯ ಇತ್ಯಾದಿಗಳ ಕೊರತೆಯಿದ್ದಾಗ ಈ ತೆರನಾದ ಪ್ರಶ್ನೆಗಳಿಗೆ ಆಸ್ಪದವಿರುತ್ತದೆ. ಇದು ಯಾವುದೇ ರಸಕ್ಕೂ ಎದುರಾಗಬಹುದಾದ ಸಮಸ್ಯೆಯೂ ಹೌದು. ಶಕ್ತನಾದ ಕವಿಯ ಕೈಯಲ್ಲಿ, ಸತ್ಕೃತಿಯ ಗರ್ಭದಲ್ಲಿ, ಧೀರರಸವು ಉದಾತ್ತಾನುಭೂತಿಯನ್ನುಂಟುಮಾಡುತ್ತದೆ. ಇದರಲ್ಲಿ ಯಾವುದೇ ಸಂಶಯಕ್ಕೆ ಆಸ್ಪದವಿಲ್ಲ.
ಇನ್ನು ಮುಂದೆ ಧೀರರಸಕ್ಕೂ ಮಾನವನ ಮೂಲಭೂತವಾದ ಯಾವುದಾದರೊಂದು ಭಾವನೆಗೂ ಇರುವ ಸಂಬಂಧವನ್ನು ಗಮನಿಸಬಹುದು. ಇದರ ಜೊತೆಗೇ ಪುರುಷಾರ್ಥಪ್ರತಿಪಾದನೆಯಲ್ಲಿ ಧೀರರಸದ ಸ್ಥಾನವನ್ನೂ ಪರಿಶೀಲಿಸಬಹುದು. ವಿಕಾಸವಾದಿಗಳ ಮತದಂತೆ ಈ ಮುನ್ನವೇ ಸೂಚಿಸಿರುವ ಹಾಗೆ ಕುತೂಹಲದಿಂದ ಪ್ರಚೋದಿತವಾದ ಅನ್ವೇಷಣಪ್ರವೃತ್ತಿಯೇ ಮಾನವನ ಜೀವಿತಸರ್ವಸ್ವ. ಇದನ್ನು ವೇದಾಂತಿಗಳೂ ಅಂಗೀಕರಿಸಿದ್ದಾರೆ. ಪ್ರಾಣಿಮಾತ್ರದಲ್ಲಿ ಕಾಣಸಿಗುವ ಆಹಾರ, ನಿದ್ರೆ, ಭಯ, ಮೈಥುನ ಮುಂತಾದ ಸ್ಪಂದನಗಳಲ್ಲಿ ಅನ್ವೇಷಣಪ್ರವೃತ್ತಿಯು ಜಾಗೃತವಾಗಿರುವುದನ್ನು ಕಾಣಬಹುದು. ಇದರಿಂದ ಧೀರರಸಕ್ಕೆ ಮಾನವನ ಮೂಲಭೂತವಾದ ಪ್ರವೃತ್ತಿಗಳೊಂದಿಗೆ ಘನಿಷ್ಠವಾದ ಸಂಬಂಧವೇರ್ಪಡುತ್ತದೆ. ಈ ಪ್ರವೃತ್ತಿಯ ಸ್ಥಾಯಿರೂಪಗಳಾದ ಸತ್ತ್ವೋನ್ನತಿ, ವಿಕಾಸ ಮತ್ತು ಚಿದಾವರಣಭಂಗದಿಂದ ಜನಿಸುವ ಭೂಮಾನುಭವಾದಿಗಳು ಮಿಕ್ಕೆಲ್ಲ ರಸಗಳಂತೆಯೇ ಇದ್ದು ವಿಷಯಾನಂದದಿಂದ ನಮ್ಮನ್ನು ನಿರ್ವಿಷಯಾನಂದದತ್ತ ಕೊಂಡೊಯ್ಯಲು ನೆರವಾಗುತ್ತವೆ.
ತ್ರಿವರ್ಗದಲ್ಲಿ – ಧರ್ಮ, ಅರ್ಥ, ಕಾಮಗಳಲ್ಲಿ – ಸಾಧನಭೂತವಾದದ್ದು ಅರ್ಥ. ಅದು ಎಲ್ಲ ಪ್ರವೃತ್ತಿಗಳ ನಿರ್ವಾಹಕವೂ ಹೌದು. ನಮ್ಮ ಪರಂಪರೆಯಲ್ಲಿನ ಅನೇಕ ಮಹಾಮತಿಗಳು ಅರ್ಥದ ಪ್ರಾಶಸ್ತ್ಯವನ್ನು ಎತ್ತಿಹಿಡಿದಿದ್ದಾರೆ. ಕೌಟಿಲ್ಯನು “ಧರ್ಮಸ್ಯ ಮೂಲಮರ್ಥಃ” ಎಂದು ಘೋಷಿಸಿದರೆ ಭಾಮಹ ಹೇಳುವುದು “ಚತುರ್ವರ್ಗಾಭಿಧಾನೇऽಪಿ ಭೂಯಸಾರ್ಥೋಪದೇಶಕೃತ್” ಎಂದು. ಮಮ್ಮಟನಾದರೋ “ಕಾವ್ಯಮರ್ಥಕೃತೇ” ಎಂದು ಹೇಳಿ ಅರ್ಥವೂ ಕಾವ್ಯದ ಪ್ರಯೋಜನಗಳಲ್ಲಿ ಒಂದೆಂದು ಸಾರಿದ್ದಾನೆ. ಹೀಗೆ ಅರ್ಥಪ್ರಯೋಜನವನ್ನು ಹೊಂದಿರುವ ಕಾವ್ಯಪ್ರಪಂಚದಲ್ಲಿ ಧೀರರಸ ವಿಶಿಷ್ಟವಾದುದು. ಧೀರವು ಸಕಲಪ್ರಾಣಿಗಳ ಮೂಲಪ್ರವೃತ್ತಿಯಿಂದ ಜನಿಸಿದುದು. ಈ ರಸಕ್ಕೆ ಸಮಸ್ತಜೀವಿಗಳಿಗೂ ಸುಖವನ್ನುಂಟುಮಾಡುವ ಸಾಮರ್ಥ್ಯವಿದೆ. ಈ ದಿಶೆಯಲ್ಲಿ ನಾವು ಹಲವಾರು ಕಾವ್ಯ-ನಾಟಕಗಳನ್ನು ಪ್ರಮಾಣವಾಗಿ ಸ್ವೀಕರಿಸಬಹುದು. ಉದಾಹರಣೆಗೆ ಮುದ್ರಾರಾಕ್ಷಸ, ಪ್ರತಿಜ್ಞಾಯೌಗಂಧರಾಯಣ, ಪ್ರತಿಜ್ಞಾಕೌಟಿಲ್ಯ, ದೇವೀಚಂದ್ರಗುಪ್ತ, ದಶಕುಮಾರಚರಿತ, ಪಂಚತಂತ್ರ, ಹಿತೋಪದೇಶ ಇತ್ಯಾದಿ. ದೇಶಭಾಷೆಗಳಲ್ಲಿಯೂ ವೈದೇಶಿಕಭಾಷೆಗಳಲ್ಲಿಯೂ ವಿಪುಲವಾಗಿ ಉದಾಹರಣೆಗಳು ದೊರೆಯುತ್ತವೆ. ಈ ರಸದ ವೈಶಿಷ್ಟ್ಯಕ್ಕೆ ಶ್ರೀಕೃಷ್ಣ, ಕೌಟಿಲ್ಯ, ವಿದ್ಯಾರಣ್ಯ, ಯೌಗಂಧರಾಯಣ, ಶೆರ್ಲಾಕ್ ಹೋಮ್ಸ್, ಪೆರ್ರಿ ಮೇಸನ್ ಮುಂತಾದ ಪ್ರಸಿದ್ಧ ವ್ಯಕ್ತಿ-ಪಾತ್ರಗಳೇ ಸೂರ್ಯಸಾಕ್ಷಿಗಳಾಗಿವೆ. ಈ ವ್ಯಕ್ತಿಗಳು ರಾಗ-ದ್ವೇಷಗಳ ಪರಿಧಿಯನ್ನು ಕೂಡಿದ ಮಟ್ಟಿಗೂ ಕಳಚಿಕೊಂಡು ಮಹಾರ್ಥವೊಂದರ ಸಿದ್ಧಿಗಾಗಿ ಶಕ್ತಿಮೀರಿ ಶ್ರಮಿಸುವುದನ್ನು ನೋಡಬಹುದು. ಅವರ ಮತಿಯೆಂದೂ ಸ್ವಾರ್ಥಮೂಲವಾದ ರಾಗ-ದ್ವೇಷಗಳಿಂದ ಕಲುಷಿತವಾಗಿರದು.
ಮುಖ್ಯವಾಗಿ ಸತ್ತ್ವಪ್ರಧಾನವಾದ ಧೀರವು ಪ್ರಬಂಧಗತವಾದ ರಸ, ಅದು ಕೇವಲ ಮುಕ್ತಕಗಳಲ್ಲಿ ಪ್ರಚುರವಾದುದಲ್ಲ. ಈ ರಸಕ್ಕೆ ಸ್ವಾಭಾವಿಕವಾದ ಕ್ರಿಯಾಶೀಲತೆಯಿಂದಾಗಿ ರಾಜಸಸ್ಪರ್ಶವಿರುವುದಾದರೂ ಅದೆಂದೂ ತಮಸ್ಸಿನಿಂದ ಆವೃತವಾಗುವುದಿಲ್ಲ. ಧೀರರಸವು ಶೃಂಗಾರ-ಹಾಸ್ಯಗಳಂತೆ ಮುಕ್ತಕಗಳಲ್ಲಿ ವಿಜೃಂಭಿಸುವುದಿಲ್ಲ; ಬಲುಮಟ್ಟಿಗೆ ಸಾಂದ್ರವಾಗಿಯೇ ತೋರಿಕೊಳ್ಳುವ ಕರುಣ-ಶಾಂತಗಳಂತಲ್ಲದೆ ವ್ಯಾಪಕವಾಗಿ ಹರಡಿಕೊಳ್ಳುವಂಥದ್ದೂ ಮಿಗಿಲಾಗಿ ಕ್ರಿಯಾಶೀಲವೂ ಆಗಿರುವಂಥದ್ದು. ಮತ್ತಿದು ವೀರ-ರೌದ್ರ-ಭಯಾನಕಗಳ ರೀತಿಯಲ್ಲಿ ವಿಸ್ತೃತನೇಪಥ್ಯದ ನೆಲೆಯಲ್ಲಿ ಬೆಳೆದು ನಿಲ್ಲುತ್ತದೆ.
ದೃಶ್ಯಕಾವ್ಯಪ್ರಸ್ತುತಿಯಲ್ಲಿ ಗಣನೀಯವಾದ ಕೆಲವು ಅಂಶಗಳನ್ನೀಗ ವಿಶ್ಲೇಷಿಸಬಹುದು. ರೂಪಕಗಳಲ್ಲಿ ಅಂಗರಸವಾಗಿ ವೀರ, ಅದ್ಭುತ, ವಾತ್ಸಲ್ಯಗಳು ಬಂದರೆ ಚೆನ್ನ. ಧೀರರಸಕ್ಕೂ ಭಾವೋದ್ವೇಗಕ್ಕೂ ಅಷ್ಟಾಗಿ ಸರಿ ಹೊಂದುವುದಿಲ್ಲವಾದುದರಿಂದ ಪ್ರಧಾನನಾಯಕನ ವೃತ್ತಾಂತದಲ್ಲಿ ದ್ರುತಿಯುತವಾದ ರಸಗಳನ್ನು ಸೇರಿಸುವುದು ಯೋಗ್ಯವಲ್ಲ. ಇತರಪಾತ್ರಗಳಲ್ಲಿ ಕರುಣ, ಭಯಾನಕ, ಶೃಂಗಾರ, ಕ್ರೋಧ, ವೀರ, ಹಾಸ್ಯ ಮೊದಲಾದವುಗಳ ಸಮ್ಮಿಲನವಿರಬಹುದು.
ಛಂದಸ್ಸು-ಅಲಂಕಾರಗಳ ದೃಷ್ಟಿಯಿಂದ ನೋಡುವುದಾದರೆ, ಧೀರರಸವು ಮುಖ್ಯವಾಗಿ ಪಾಠ್ಯವೃತ್ತಗಳಿಗೆ ಹೊಂದುತ್ತದೆ. ಇದಕ್ಕೆ ಉದಾಹರಣೆಯಾಗಿ ಸ್ರಗ್ಧರಾ, ಸುವದನಾ, ಶಾರ್ದೂಲವಿಕ್ರೀಡಿತ, ಪೃಥ್ವೀ, ಶಾಲಿನೀ, ಆರ್ಯಾ, ಶ್ಲೋಕ ಮೊದಲಾದವುಗಳನ್ನು ಗಮನಿಸಬಹುದು. ಅಂತೆಯೇ ಅರ್ಥಾಲಂಕಾರಪ್ರಕಾರಗಳಾದ ದೃಷ್ಟಾಂತ, ರೂಪಕ, ಉಪಮಾ, ಶ್ಲೇಷ, ಏಕಾವಲೀ, ಸಮಾಸೋಕ್ತಿ ಮುಂತಾದವು ಗಣ್ಯ.
ದೃಶ್ಯಕಾವ್ಯಗಳಲ್ಲಿ ಚತುರ್ವಿಧಾಭಿನಯವು ವಿನಿಯುಕ್ತವಾಗುವುದಷ್ಟೆ. ಆ ರೀತಿಯ ಪ್ರಯೋಗಗಳಲ್ಲಿ ನಾಟ್ಯಧರ್ಮಿಯನ್ನು ಅಲ್ಪವಾಗಿ ಬಳಸದ ಹೊರತು ಧೀರರಸಕ್ಕೆ ಪೋಷಣೆ ಸಲ್ಲುವುದಿಲ್ಲ. ಲೋಕಧರ್ಮಿಯನ್ನೇ ಮುಖ್ಯವಾಗಿ ಆಧರಿಸಬೇಕು. ಅಂತೆಯೇ ಭಾರತೀವೃತ್ತಿಯೇ ಇಲ್ಲಿ ಪ್ರಧಾನವಾದುದು. ಸಂಗೀತವಾದರೂ ಅಷ್ಟೆ. ಅದು ಕಥಾಸಂವಿಧಾನಕ್ಕೆ ಅನುಗುಣವಾಗಿ ಬರಬೇಕು, ಇಲ್ಲವಾದರೆ ರಸಹಾನಿಯಾಗುವ ಸಂಭವವೇ ಹೆಚ್ಚು.
ಇಂತಾದರೂ ಕವಿಪ್ರತಿಭೆಯು ಈ ಎಲ್ಲ ಸಂಭಾವ್ಯನಿಗಮನಗಳನ್ನೂ ಮೀರಿ ಸ್ವಾರಸ್ಯಾಂತರವನ್ನು ಕಾಣಿಸಬಲ್ಲುದು. ಈ ಲಕ್ಷಣಪರಿಷ್ಕಾರಗಳೇನಿದ್ದರೂ ಒಂದು ಮಟ್ಟಿಗೆ ಉಪಲಕ್ಷಣ ಮಾತ್ರ.
-೫-
ಧೀರರಸಕ್ಕೂ ವೀರರಸಕ್ಕೂ ಏನು ಭೇದ? ಮುದ್ರಾರಾಕ್ಷಸವೇ ಮೊದಲಾದ ನಾಟಕಗಳಲ್ಲಿ ನಿರೂಪಿತವಾಗಿರುವುದು ಧೀರರಸವೇ ಎಂಬುದರ ಖಾಚಿತ್ಯವೇನು? ದಾನ-ದಯಾ-ಧರ್ಮ-ಯುದ್ಧ ಮುಂತಾದ ವಿಭಾಗಗಳನ್ನೇರ್ಪಡಿಸಿ ವೀರದಲ್ಲಿಯೇ ಧೀರರಸವನ್ನು ಗರ್ಭೀಕರಿಸಲು ಸಾಧ್ಯವಿಲ್ಲವೇಕೆ? ಅದನ್ನು ಬೇಕಿದ್ದರೆ “ನೀತಿವೀರ” ಎಂದು ಕರೆಯಬಹುದು. ಏಕೆ ಆಗಬಾರದು? ಇವುಗಳಿಗೆ ಉತ್ತರ ಹೀಗೆ.
ವೀರ-ಧೀರಗಳ ವ್ಯಾಪ್ತಿ, ವೈಶಿಷ್ಟ್ಯಗಳು ಆ ಶಬ್ದಗಳ ನಿಷ್ಪತ್ತಿಯ ಮೂಲಕವೇ ವ್ಯಕ್ತವಾಗುತ್ತವೆ. ವೀರರಸವು ಭಾವೋನ್ಮತ್ತವಾದದ್ದು ; ಧೀರವು ಹಾಗಲ್ಲ. ವೀರದಲ್ಲಿ ಕೂಟತಂತ್ರ, ನೀತಿವ್ಯಾಪಾರಗಳನ್ನು ಕಾಣಲು ಸಾಧ್ಯವಿಲ್ಲ. ಧೀರವಾದರೋ ಚಿಂತನಾನ್ವೇಷಣಮೂಲವಾದದ್ದು. ದೀಪ್ತಿಪ್ರಧಾನವಾದ ವೀರರಸದಲ್ಲಿ ಭಾವಸಾತತ್ಯ ಸುಲಭಸಾಧ್ಯವಲ್ಲ. ಅದರ ಅನುಭವವು ಒಮ್ಮೆ ಚಿಮ್ಮಿ ಮುಂದಿನ ಕ್ಷಣದಲ್ಲಿಯೇ ಮಾಯವಾಗುತ್ತದೆ. ಧೀರದಲ್ಲಾದರೆ ಒಂದೇ ಭಾವವನ್ನು ಹಲವು ಕಾಲ ಉಳಿಸಿಕೊಂಡು ಕ್ರಮೇಣ ಬೆಳಸುತ್ತಾ ಹೋಗಬಹುದು. ವೀರರಸದ ಮುಖ್ಯಪ್ರಭೇದವಾದ ಯುದ್ಧವೀರವನ್ನು ಹೀಗೆ ಬೆಳಸಲು ಸಾಧ್ಯವಿಲ್ಲ. ಮತ್ತು, ದಾನವೀರ-ದಯಾವೀರ ಮುಂತಾದ ಪ್ರಭೇದಗಳು ಕರುಣರಸದ ಹಾಗೆ ತೋರುವ ಸಂಭವವೂ ಉಂಟು. ವೀರರಸದಲ್ಲಿ ದಾನವೀರ, ದಯಾವೀರ, ಯುದ್ಧವೀರ ಮುಂತಾದ ಪ್ರಭೇದಗಳನ್ನು ಸ್ವಚ್ಛಂದವಾಗಿ ಕಲ್ಪಿಸುವುದೂ ಸಾಧುವಲ್ಲ. ಇದಕ್ಕೆ ಆಸ್ಪದವಿತ್ತರೆ ಪಾಂಡಿತ್ಯವೀರವೇ ಮೊದಲಾದ ವಿಭಾಗಗಳನ್ನೂ ಅಂಗೀಕರಿಸಬೇಕಾಗುತ್ತದೆ. ಈ ಆವಲಿಯು ಕೊನೆಮೊದಲಿಲ್ಲದೆ ಬೆಳೆದು ಶಾಸ್ತ್ರಸ್ಪಷ್ಟತೆಗೆ ಕುಂದು ತರುತ್ತದೆ.
ಧೀರರಸವು ಕಾವ್ಯ-ನಾಟಕಗಳಲ್ಲಿ ಹೇಗೆ ಪ್ರಸ್ತಾವಿತವಾಗಿದೆಯೆಂದು ಈಗಾಗಲೇ ನೋಡಿದ್ದೇವೆ. ಪ್ರಕೃತ, ಮುಕ್ತಕಗಳಲ್ಲಿ ಹೇಗೆ ಧೀರರಸ ತೋರುತ್ತದೆಯೆಂದು ಗಮನಿಸಿ ಈ ಪ್ರಬಂಧವನ್ನು ಮುಗಿಸಬಹುದು.
ಶಯ್ಯಾ ನಾವನತಾ ತಥಾಸ್ತೃತಸಮಾ ನ ವ್ಯಾಕುಲಪ್ರಚ್ಛದಾ
ನ ಕ್ಲಿಷ್ಟಂ ಹಿ ಶಿರೋಪಧಾನಮಮಲಂ ಶೀರ್ಷಾಭಿಘಾತೌಷಧೈಃ |
ರೋಗೇ ದೃಷ್ಟಿವಿಲೋಭನಂ ಜನಯಿತುಂ ಶೋಭಾ ನ ಕಾಚಿತ್ಕೃತಾ
ಪ್ರಾಣೀ ಪ್ರಾಪ್ಯ ರುಜಾ ಪುನರ್ನ ಶಯನಂ ಶೀಘ್ರಂ ಸ್ವಯಂ ಮುಂಚತಿ || (ಸ್ವಪ್ನವಾಸವದತ್ತ, ಅಂಕ ೫)
ಹಾಸಿಗೆಯು ಯಾವುದೇ ಏರು-ತಗ್ಗುಗಳಿಲ್ಲದೆ ಸಮತಟ್ಟಾಗಿದೆ. ಹೊದಿಕೆಯ ಮಡತೆಯೂ ಬಿಚ್ಚಿದಂತಿಲ್ಲ. ತಲೆನೋವನ್ನು ನಿವಾರಿಸಲು ಹಚ್ಚಿದ ಔಷಧಗಳು ದಿಂಬಿಗೆ ಮೆತ್ತುಕೊಂಡು ಅವು ವರ್ಣರಂಜಿತವಾಗಿರಬೇಕಿತ್ತು. ಇಲ್ಲಿ ಹಾಗಾಗಿಲ್ಲ. ಈ ಕೊಠಡಿಯಲ್ಲೆಲ್ಲಿಯೂ ರೋಗಿಗೆ ನೇತ್ರಾಕರ್ಷಣೆಯನ್ನುಂಟುಮಾಡಲು ಅಲಂಕಾರವನ್ನು ಮಾಡಿಲ್ಲ. ತುಸು ಚೇತರಿಸಿಕೊಂಡಿರುವುದು ಸಂಭವನೀಯವಾದರೂ ತತ್ಕ್ಷಣವೇ ಹಾಸಿಗೆಯಿಂದ ಎದ್ದು ಹೋಗಿರಲು ಸಾಧ್ಯವಿಲ್ಲ.
ಯದಿ ವಾಚಂ ಪ್ರದಾಸ್ಯಾಮಿ ದ್ವಿಜಾತಿರಿವ ಸಂಸ್ಕೃತಾಮ್ |
ರಾವಣಂ ಮನ್ಯಮಾನಾ ಮಾಂ ಸೀತಾ ಭೀತಾ ಭವಿಷ್ಯತಿ || (ವಾಲ್ಮೀಕಿರಾಮಾಯಣ, ಸುಂದರಕಾಂಡ)
ಇದು ಸೀತೆಯನ್ನು ನೋಡಿದ ಸಂದರ್ಭದಲ್ಲಿ ಹನೂಮಂತನ ಸ್ವಗತ.
ನಾನು ಬ್ರಾಹ್ಮಣರಂತೆ ಸಂಸ್ಕೃತಭಾಷೆಯಲ್ಲಿ ಮಾತನಾಡಿದರೆ, ನನ್ನು ರಾವಣನೆಂದು ಭಾವಿಸಿ ಸೀತೆ ಹೆದರಿಬಿಡುತ್ತಾಳೆ.
ಇಲ್ಲಿಯ ವರೆಗಿನ ಚರ್ಚೆಯಿಂದ ಧೀರರಸದ ಅಸ್ತಿತ್ವ, ವ್ಯಾಪ್ತಿ, ಸಾಮರ್ಥ್ಯಗಳು ಷಡಂಶಗಳ ನಿರೂಪಣಾಪುರಃಸರವಾಗಿ ವಿವರಿಸಲ್ಪಟ್ಟಿವೆ.
~
Adapted into Kannada by Shashi Kiran B. N.
Comments