ಭಾರತೀಯಕಾವ್ಯಮೀಮಾಂಸೆಯಲ್ಲಿ ಪಾದೆಕಲ್ಲು ನರಸಿಂಹಭಟ್ಟರು ಕಾಣಿಸಿದ ಒಳನೋಟಗಳು--ಶಾಸ್ತ್ರ-ಕಾವ್ಯ
ಭಟ್ಟರು ಶಾಸ್ತ್ರ-ಕಾವ್ಯಗಳ ಅಭೇದವನ್ನು ಪ್ರತಿಪಾದಿಸುತ್ತ ಉಭಯತ್ರ ಶಬ್ದಾರ್ಥಗಳ ಸಾಮರಸ್ಯ ಮತ್ತು ಅನುಭವದ ಅನನ್ಯತೆಗಳಿರಬೇಕೆಂದು ಹೇಳುತ್ತಾರೆ (ಪು. ೧೮೧). ಇದು ಉಪಾದೇಯವೇ ಆದರೂ ಕಾವ್ಯವು ವಿಭಿನ್ನಭಾಷೆಗಳಿಗೆ ಅನುವಾದಗೊಂಡಾಗ, ಸಂಗೀತವು ವಿಭಿನ್ನವಾದ್ಯಮಾಧ್ಯಮಗಳಿಗೆ ಅನೂದಿತವಾದಾಗ ಮೂಲದ ಸ್ವಾರಸ್ಯಗಳಲ್ಲಿ ಹೆಚ್ಚು-ಕಡಮೆಗಳಾಗುತ್ತವೆ. ಇದು ಸಮರ್ಥಾನುವಾದಗಳಲ್ಲಿಯೂ ಕಂಡುಬರುವಂಥದ್ದು. ಈ ಅರ್ಥದಲ್ಲಿ ಎಲ್ಲ ಬಗೆಯ ಕಾವ್ಯ-ಕಲಾನುವಾದಗಳೂ ಪುನಃಸೃಷ್ಟಿಗಳೇ. ಜೊತೆಗೆ, ಇವುಗಳ ಸಾಮ್ರಾಜ್ಯ ವ್ಯಂಜನಾವೃತ್ತಿಯಲ್ಲಿ. ಈ ಮಾತನ್ನು ಶಾಸ್ತ್ರಕ್ಕೆ ಅನ್ವಯಿಸಲಾಗುವುದಿಲ್ಲ. ಏಕೆಂದರೆ ಅದು ಅಭಿಧೈಕಪ್ರಧಾನವಾದ, ತಾತ್ಪರ್ಯೈಕಲಕ್ಷ್ಯದ ಅಭಿವ್ಯಕ್ತಿ. ಅದು ಅನುಮಾನವನ್ನು ಹಿಡಿದು ಸಾಗುತ್ತದಲ್ಲದೆ ಧ್ವನಿಯನ್ನಲ್ಲ.