ಅಮರಪ್ರೇಮದ ಅಮರುಕಶತಕ--ಉಪಸಂಹಾರ
ಅಮರುಕನ ಹೆಣ್ಣುಗಳ ಹಠ ಕಾವ್ಯಪರಿಧಿಯನ್ನೂ ಮೀರಿದ ಅತಿಕವಿತಾಭೂಮಿಕೆ. ಮನಸ್ಸನ್ನು ಕಲ್ಲಾಗಿಸಿಕೊಂಡು ನಲ್ಲರನ್ನು ಮುನಿದ ಹೆಣ್ಣುಗಳು ಹೊರದೂಡುವರೆಂದು ಬಲ್ಲವರ ಅಭಿಪ್ರಾಯ. ಆದರೆ ಅಮರುಕನ ಹೆಣ್ಣುಗಳು ಮೊದಲು ತಮ್ಮೊಡಲಿನಿಂದ ಪ್ರಾಣವನ್ನು ದೂಡಲು ನಿಶ್ಚಯ ಮಾಡಿಕೊಂಡ ಬಳಿಕವೇ ಪ್ರಾಣೇಶ್ವರರನ್ನು ಮನಸ್ಸಿನಿಂದ, ಮಂದಿರದಿಂದ ಹೊರಡಿಸಬಲ್ಲರು. ಇಂಥ ನಾಯಿಕೆಯ ಬಳಿ ಮುಂಜಾನೆ ಪ್ರಿಯತಮನು ಬಂದು ಬಾಗಿಲು ತಟ್ಟಿದ್ದಾನೆ. ಇರುಳೆಲ್ಲ ಅವನಿಗಾಗಿ ಕಾದು ಕಳವಳಿಸಿದ್ದ ಆಕೆ ಅಗುಳಿ ತೆಗೆದು ನೋಡಿದಾಗ ಅವಳಿಗೆ ಕಂಡದ್ದೇನು? ಅಲತಿಗೆಯ ಬಣ್ಣವನ್ನು ಹಣೆಯಲ್ಲಿ, ತೋಳಬಂದಿಯ ಒತ್ತುಗುರುತನ್ನು ಕೊರಳಿನಲ್ಲಿ, ಕಾಡಿಗೆಯ ಕಾಲುವೆಯನ್ನು ತುಟಿಯಂಚಿನಲ್ಲಿ, ತಂಬುಲದ ಕೆಂಪನ್ನು ಕಣ್ಣಂಚಿನಲ್ಲಿ ಮೆತ್ತಿಸಿಕೊಂಡು ಬಂದ ವಿಕಟಶೃಂಗಾರದ ಮನದಾಣ್ಮ!