ಕರ್ಣಾಟ ಭಾರತ ಕಥಾಮಂಜರಿ - ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 1)
‘ಕರ್ಣಾಟ-ಭಾರತ-ಕಥಾಮಂಜರಿ’, ಕುಮಾರವ್ಯಾಸನೆಂದು ಬಿರುದು ಪಡೆದ ಗದುಗಿನ ನಾರಾಯಣಪ್ಪನಿಂದ ವಿರಚಿಸಲ್ಪಟ್ಟು, ‘ಗದುಗಿನ ಭಾರತ’ ವೆಂದೇ ಖ್ಯಾತಿ ಪಡೆದು ಕರ್ನಾಟಕದ ಹಳ್ಳಿಹಳ್ಳಿಯಲ್ಲಿಯೂ ಜನರ ನಾಲಿಗೆಯ ಮೇಲೆ ನಲಿಯುತ್ತಿರುವ ಮಹಾಕಾವ್ಯ. ಕನ್ನಡ-ಸಾಹಿತ್ಯ-ಕ್ಷೇತ್ರದ ತೃತೀಯ ನವೋದಯದಲ್ಲಿ ವೈಷ್ಣವಭಕ್ತಿಯನ್ನು ತನ್ನ ಕಾವ್ಯಗಂಗೆಯ ಮೂಲಕ ಪುನರುತ್ಥಾನಗೊಳಿಸಿದವನು ಕುಮಾರವ್ಯಾಸನೆಂದು ಅನೇಕ ವಿದ್ವಾಂಸರ ಅಭಿಮತ. ಕುಮಾರವ್ಯಾಸನ ಕಾವ್ಯದ ಬಗೆಗೆ ಬರೆಯಬಲ್ಲ ಪಾಂಡಿತ್ಯವಾಗಲೀ, ಭಾಷಾ-ಪ್ರೌಢಿಮೆಯಾಗಲೀ ಇರದಿದ್ದರೂ, ನನ್ನ ಆಯುಷ್ಯದ ಈ ಅವಧಿಯಲ್ಲಿ ಕೃತಿಯನ್ನು ಮತ್ತೆ ಓದಿದಾಗ ನನ್ನ ಮನಸ್ಸಿನಲ್ಲಿ ರೂಪುಗೊಂಡ ಕೆಲವು ಅನಿಸಿಕೆಗಳನ್ನಿಲ್ಲಿ ಅಭಿವ್ಯಕ್ತಿಸುತ್ತಿದ್ದೇನೆ. ಈ ಅನಿಸಿಕೆಗಳು ಕೃತಿಯಲ್ಲಿ ಕಂಡು ಬರುವ ಸಂಗತಿಗಳನ್ನು ಮಾತ್ರ ಆಧರಿಸಿರುವುವು.