ಋಷಿಕುಮಾರ ಋಷ್ಯಶೃಂಗ ಹೆಣ್ಣನ್ನೇ ಕಾಣದೆ ಬೆಳೆದವನು. ಅವನು ಮೊದಲ ಬಾರಿಗೆ ಬೈತಲೆ ತೆಗೆದುಕೊಂಡು ಹೆರಳು ಹಾಕಿಕೊಂಡ ಹೆಂಗಸರನ್ನು ಕಂಡಾಗ ಅವರ ಹಣೆಯೇ ಎರಡು ಪಾಲಾದಂತೆ ಭ್ರಮಿಸುತ್ತಾನೆ. ಅದನ್ನು ತುಂಬ ಚಮತ್ಕಾರಕವಾಗಿ ಮಹಾಭಾರತ ಹೇಳುವ ಪರಿ ಹೀಗಿದೆ:
ದ್ವೈಧೀಕೃತಾ ಭಾಂತಿ ಸಮಾ ಲಲಾಟೇ (೩.೧೧೨.೯)
ತೀರ್ಥಯಾತ್ರೆಗೆಂದು ಪ್ರಭಾಸಕ್ಕೆ ಬಂದ ಪಾಂಡವರನ್ನು ಬಲರಾಮ ಮಾತನಾಡಿಸುತ್ತ “ದುರ್ಯೋಧನನಿಗೆ ಭೂಮಿಯು ಎಡೆಯನ್ನು ಕೊಡುವುದಿಲ್ಲ” ಎಂದು ಹೇಳಿ ಸಮಾಧಾನ ಪಡಿಸುತ್ತಾನೆ. ಲೋಕರೂಢಿಯಲ್ಲಿ ಯಾರನ್ನಾದರೂ ಆಕ್ಷೇಪಿಸುವಾಗ ನಾವು “ಅವರಿಗೆ ಇಲ್ಲಿ ಬದುಕೋಕೆ ಜಾಗ ಇರೋಲ್ಲ” ಎಂದು ಹೇಳುವ ಮಾತಿಗೆ ಇದು ಸಂವಾದಿ. “ವಿವರ” ಎಂಬುದಕ್ಕೆ ಬಿರುಕು, ಸೀಳು, ಹಳ್ಳ ಎಂಬ ಅರ್ಥಗಳೂ ಇರುವ ಕಾರಣ ದುರ್ಯೋಧನನು ಪಾಂಡವರಿಂದ ತನ್ನನ್ನು ಕಾಪಾಡಿಕೊಳ್ಳಲು ಸಜೀವವಾಗಿ ಭೂಮಿಯೊಳಗೆ ಅಡಗಲೂ ಎಡೆಯಾಗದು; ಸತ್ತ ಬಳಿಕ ಅವನ ಹೆಣವನ್ನು ಹೂಳಲೂ ಭೂಮಿ ಅವಕಾಶ ನೀಡುವುದಿಲ್ಲ ಎಂಬ ಧ್ವನಿಗಳೂ ಉದ್ಭವಿಸಿ ವ್ಯಾಸವಾಣಿಯ ಗಾಂಭೀರ್ಯ ಅರಿವಾಗದಿರದು.
ನ ಚಾಸ್ಯ ಭೂಮಿರ್ವಿವರಂ ದದಾತಿ (೩.೧೧೯.೬)
ಈಚೆಗೆ ಪಾಶ್ಚಾತ್ತ್ಯಪ್ರಭಾವದಿಂದ ನಮ್ಮಲ್ಲಿ ಬಂದಿರುವ ಜಯೋತ್ಸಾಹಸೂಚಕವಾದ ಆಂಗಿಕಪ್ರಕಾರದಲ್ಲೊಂದು “High five.” ಇದೊಂದು ಬಗೆಯ ಚಪ್ಪಾಳೆಯೇ ಹೌದು. ಇಂಥದ್ದು ಮಹಾಭಾರತದ ಕಾಲದಲ್ಲಿಯೂ ವಾಡಿಕೆಯಲ್ಲಿತ್ತೆಂಬುದಕ್ಕೆ ಸಾಕ್ಷಿಯಾಗಿ ಇಲ್ಲೊಂದು ಉದಾಹರಣೆ:
ಅನ್ಯೋನ್ಯಸ್ಯ ತಲಾನ್ ದದುಃ (೩.೨೨೭.೨೪)
ಸ್ನೇಹವು ಏಳು ಹೆಜ್ಜೆಗಳಲ್ಲಿ, ಏಳು ಮಾತುಗಳಲ್ಲಿ ಸಿದ್ಧವಾಗುವುದೆಂಬುದು ಸಂಸ್ಕೃತಭಾಷೆಯಲ್ಲಿ ಪ್ರಸಿದ್ಧವಾದ ಸೂಕ್ತಿ. ಇದನ್ನು ಭಗವಾನ್ ಪಾಣಿನಿ ಕೂಡ ಸೂತ್ರೀಕರಿಸಿರುವುದು ಸ್ಮರಣೀಯ (“ಸಾಪ್ತಪದೀನಂ ಸಖ್ಯಮ್” ಅಷ್ಟಾಧ್ಯಾಯೀ, ೫.೨.೨೨). ಕಾಳಿದಾಸಾದಿಗಳೂ ಇದನ್ನು ಬಳಸಿಕೊಂಡಿದ್ದಾರೆ—“ಸಂಗತಂ ಮನೀಷಿಭಿಃ ಸಾಪ್ತಪದೀನಮುಚ್ಯತೇ (ಕುಮಾರಸಂಭವ, ೫.೩೯)”. ಇವಕ್ಕೆಲ್ಲ ಮುನ್ನ ವ್ಯಾಸರು ಇದನ್ನು ಉಲ್ಲೇಖಿಸಿರುವುದು ಮುದಾವಹ:
ಸತಾಂ ಸಪ್ತಪದಂ ಮಿತ್ರಮ್ (೩.೨೪೬.೩೫)
ದ್ರೌಪದಿಯನ್ನು ಅಪಹರಿಸಲು ಯತ್ನಿಸಿದ್ದ ಜಯದ್ರಥನನ್ನು ಭೀಮ-ಅರ್ಜುನರು ಬಲಿ ಹಾಕುವಾಗ ಅವನ ಕುತ್ತಿಗೆ ಹಿಡಿದು ಎಳೆತಂದರೆಂಬ ಉಲ್ಲೇಖವಿದೆ. “ಗಲೇ ಗೃಹೀತ್ವಾ” ಎಂಬುದು ಸಂಸ್ಕೃತದಲ್ಲಿ ಒಂದು ಜನಪ್ರಿಯವಾದ ನುಡಿಗಟ್ಟೇ ಆಗಿ ಬೆಳೆದುಬಂದಿದೆ. ಇದಕ್ಕೆ “ಕುತ್ತಿಗೆ ಹಿಡಿದು ನೂಕುವುದು” ಎಂಬ ಅರ್ಥವೂ ಉಂಟು. ಆದರೆ ಈ ಭಾವವನ್ನು ಮತ್ತಷ್ಟು ಕಾವ್ಯಾತ್ಮಕವಾಗಿ ವ್ಯಂಜಿಸಲು “ಅರ್ಧಂ ಚಂದ್ರಂ ದತ್ವಾ” ಎಂಬ ಇನ್ನೊಂದು ನುಡಿಗಟ್ಟು ಹುಟ್ಟಿದೆ; ಇದೇ ಹೆಚ್ಚಾಗಿ ಬಳಕೆಯಲ್ಲಿಯೂ ಇದೆ.
ಗಲೇ ಗೃಹೀತ್ವಾ (೩.೨೫೬.೩)
ಆಪ್ತೇಷ್ಟರನ್ನು ಬೀಳ್ಗೊಡುವಾಗ “ನಿಮ್ಮ ಹಾದಿ ಒಳಿತಾಗಲಿ” ಎಂಬಂಥ ಮಾತುಗಳನ್ನು ಆಡುವುದುಂಟು. ಇದು ಸಂಸ್ಕೃತದಲ್ಲಿ ನಾಣ್ನುಡಿಯಂತೆಯೇ ಆಗಿದೆ. ಕಾಳಿದಾಸ, ಶ್ರೀಹರ್ಷ ಮೊದಲಾದವರು ಕೂಡ ಇದನ್ನು ಪ್ರಕಾರಾಂತರವಾಗಿ ಬಳಸಿದ್ದಾರೆ—“ಶಿವಶ್ಚ ಪಂಥಾಃ” (ಅಭಿಜ್ಞಾನಶಾಕುಂತಲ, ೪.೧೧), “ತವ ವರ್ತ್ಮನಿ ವರ್ತತಾಂ ಶಿವಮ್” (ನೈಷಧೀಯಚರಿತ, ೨.೬೨). ಇದರ ಮೂಲ ಮಹಾಭಾರತವೆನ್ನಬಹುದು:
ಶಿವಾಸ್ತೇ ಸಂತು ಪಂಥಾನಃ (೩.೨೯೨.೧೧)
ಸಾಮಾನ್ಯವಾಗಿ ನಮ್ಮೆದುರು ಯಾರಿಬ್ಬರ ತಗಾದೆಯಾದಾಗ ಅವರಿಬ್ಬರಿಗೂ ಆ ಮುನ್ನ ಎಂಥ ವ್ಯವಹಾರವಿದ್ದಿತೆಂಬುದು ನಮಗೆ ಗೊತ್ತಿರದ ಕಾರಣ ಜಾರಿಕೊಳ್ಳುವ ಮನಸ್ಸಿದ್ದಲ್ಲಿ ನಾವು “ನಿಮ್ಮೊಳಗೇನಾಯಿತೋ ನಮಗೇನು ಗೊತ್ತು?” ಎಂದು ಕೈತೊಳೆದುಕೊಳ್ಳುತ್ತೇವೆ. ಇಂಥದ್ದೇ ಜಾರಿಕೆಯ ಮಾತನ್ನು ದ್ರೌಪದೀ-ಕೀಚಕರ ಸಂದರ್ಭದಲ್ಲಿ ವಿರಾಟನು ಹೇಳುತ್ತಾನೆ:
ಪರೋಕ್ಷಂ ನಾಭಿಜಾನಾಮಿ (೪.೧೫.೨೭)
ಯಾರಾದರೂ ಹದಗೆಟ್ಟಾಗ “ಅಂಥವರು ಇಂಥವರಾದರು” ಎಂದು ವೈಸದೃಶ್ಯ ತೋರಿಸುವ ಮಾತನ್ನು ಬಳಸುವುದುಂಟು. ಈ ಬಗೆಯ ನಿದರ್ಶನವೊಂದು ಗಮನಾರ್ಹ. ಶಲ್ಯನು ಯುಧಿಷ್ಠಿರನಿಗೆ ನಹುಷನ ಕಥೆ ಹೇಳುವಾಗ “ಅಂಥ ಧರ್ಮಾತ್ಮನು ಶಚಿಯ ಮೇಲೆ ಕಣ್ಣುಹಾಕಿ ಕಾಮಾತ್ಮನಾದ” ಎಂದು ವಿಷಾದಿಸುತ್ತಾನೆ:
ಧರ್ಮಾತ್ಮಾ ಸತತಂ ಭೂತ್ವಾ ಕಾಮಾತ್ಮಾ ಸಮಪದ್ಯತ (೫.೧೧.೮)
ಲೋಕದಲ್ಲಿ “ದುಡ್ಡೇ ದುಡ್ಡೇ ದುಡಿಯುತ್ತದೆ,” “ಹೆಸರೇ ಹೆಸರನ್ನು ತಂದುಕೊಡುತ್ತದೆ” ಇತ್ಯಾದಿ ವಾಗ್ರೂಢಿಗಳುಂಟು. ಇದೇ ರೀತಿ ಮಹಾಭಾರತವು “ಕಾಲವೇ ಕಾಲವನ್ನು ಕೊಂಡೊಯ್ಯುವುದು” ಎಂಬ ಅಪೂರ್ವವಾದ ಧ್ವನಿಪೂರ್ಣವಾಕ್ಯವನ್ನಾಡಿದೆ. ಇಲ್ಲಿ “ಕಾಲ” ಎಂಬುದಕ್ಕೆ “ಸಮಯ” ಎಂಬ ಅರ್ಥವಷ್ಟೇ ಅಲ್ಲದೆ “ಸಾವು” ಎಂಬ ಅರ್ಥವೂ ಇರುವುದು ಗಮನಾರ್ಹ:
ಕಾಲಃ ಕಾಲಂ ನಯಿಷ್ಯತಿ (೫.೧೨.೨೬)
ನನಿಯಮದಂತೆ ವನವಾಸ-ಅಜ್ಞಾತವಾಸಗಳನ್ನು ಮುಗಿಸಿದ ಬಳಿಕವೂ ಕೌರವರು ರಾಜ್ಯವನ್ನು ಕೊಡದೆ ಸಂಜಯನ ರಾಯಭಾರವನ್ನು ಮುಂದೂಡಿದಾಗ ಧರ್ಮರಾಜನು ಕೃಷ್ಣನಿಗೆ ಹೀಗೆ ಹೇಳುತ್ತಾನೆ: “ಕೌರವರು ನಮ್ಮ ಸೊತ್ತನ್ನು ಹಿಂದಿರುಗಿಸದೆ ಶಾಂತಿಸ್ಥಾಪನೆಗಾಗಿ ತಡಕಾಡುತ್ತಿದ್ದಾರೆ” ಎಂದು. ಇಲ್ಲಿಯ “ಶಾಂತಿಂ ಮಾರ್ಗತಿ” ಎಂಬ ಪದಪುಂಜ ಧ್ವನಿಪೂರ್ಣವಾದ ವಾಗ್ರೂಢಿ:
ಅಪ್ರದಾನೇನ ರಾಜ್ಯಸ್ಯ ಶಾಂತಿಮಸ್ಮಾಸು ಮಾರ್ಗತಿ (೫.೭೦.೮)
ನಾವು ಸಾಮಾನ್ಯವಾಗಿ ಯಾರನ್ನಾದರೂ ಮತ್ತೊಬ್ಬರು ಮಾದರಿಯಾಗಿ ಸ್ವೀಕರಿಸಿ ಅನುಕರಿಸಬೇಕೆಂದು ತಿಳಿಸಲು “ಅವರ ದಾರಿಯಲ್ಲಿ ನಡೆಯಿರಿ” ಎನ್ನುವುದುಂಟು. ಅರ್ಜುನನು ದ್ರೌಪದಿಯ ದಾರಿಯಲ್ಲಿ ನಡೆಯಲಿ ಎಂದು ಕುಂತಿ ಕೃಷ್ಣನಿಗೆ ತಿಳಿಸುವ ಮಾತು ಇಂಥದ್ದೇ ರೀತಿಯದು:
ದ್ರೌಪದ್ಯಾಃ ಪದವೀಂ ಚರ (೫.೮೮.೭೯)
ಶ್ರೀಕೃಷ್ಣನು ದೌತ್ಯಕ್ಕಾಗಿ ಋಷಿ-ಮುನಿಗಳೊಡನೆ ಬಂದಾಗ ಕುರುಸಭೆಯಲ್ಲಿ ಅವರನ್ನೆಲ್ಲ ಸ್ವಾಗತಿಸಿ ಗೌರವದಿಂದ ಕೂಡಿಸಲು ಸಂಭ್ರಮದ ವಾತಾವರಣ ಮೂಡುತ್ತದೆ. ಆಗ ದುಶ್ಶಾಸನನು ಪರಿಚಾರಕರಿಗೆ ಆಸನಗಳನ್ನು ತರುವಂತೆ “ಆಸನಗಳು!” ಎಂದು ಆಜ್ಞಾಪಿಸುತ್ತಾನೆ. ಇದು ನಾವು ದಿನಬಳಕೆಯಲ್ಲಿ ಕ್ರಿಯೆಯನ್ನು ತಿಳಿಸದೆ ಕೇವಲ ನಾಮಪದಗಳನ್ನೇ ಪುನರುಚ್ಚರಿಸಿ ಸಂವಹಿಸುವುದರ ಸಂವಾದಿ:
ಆಸನಾನೀತ್ಯಚೋದಯತ್ (೫.೯೨.೪೪)
ಅರ್ಜುನನ ಪರಾಕ್ರಮವೆಂಥದ್ದೆಂದರೆ ಯುದ್ಧದಲ್ಲಿ ಅವನನ್ನೆದುರಿಸಿದವರು ಮನೆಗೆ ಮರಳಿದ್ದೇ ಇಲ್ಲ! ಲೋಕರೂಢಿಯಲ್ಲಿ ಇದಕ್ಕೆ ಸಂವಾದಿಯಾದ ಮಾತುಗಳು ಹಲವಿವೆ. ಉದಾಹರಣೆಗೆ: “ಅವನ ಬಾಯಿಗೆ ಬಿದ್ದವರು ಇವತ್ತು ಮನೇಗೆ ಹೋಗೋಲ್ಲ” ಇತ್ಯಾದಿ. ಸದ್ಯದ ನುಡಿಗಟ್ಟಿನ ಸ್ವಾರಸ್ಯ “ಸ್ವಸ್ತಿಮಾನ್” ಎಂಬ ಪದದಲ್ಲಿಯೂ ಇದೆ. ಇದು ನೆಮ್ಮದಿವಂತ, ತನ್ನಷ್ಟಕ್ಕೆ ತಾನಿರುವವನು ಎಂಬ ಸಾಮಾನ್ಯಾರ್ಥವನ್ನು ಹೊಂದಿದ್ದರೂ ಇಲ್ಲಿ ಬದುಕಲು ಬಯಕೆಯುಳ್ಳವನೆಂಬ ಅರ್ಥವೇ ವಿವಕ್ಷಿತ. ಅಂದರೆ, ಜೀವದ ಮೇಲೆ ಆಸೆಯುಳ್ಳವನು ಅರ್ಜುನನ್ನು ಯುದ್ಧದಲ್ಲಿ ಎದುರಿಸಲಾರನೆಂದು ತಾತ್ಪರ್ಯ.
ಯೋऽರ್ಜುನಂ ಸಮರೇ ದೃಷ್ಟ್ವಾ ಸ್ವಸ್ತಿಮಾನಾವ್ರಜೇದ್ಗೃಹಾನ್ (೫.೧೨೨.೫೦)
ಲೋಕರೂಢಿಯಲ್ಲಿ ನಮ್ಮ ತಾಳ್ಮೆಯನ್ನು ಪರೀಕ್ಷಿಸುವಂತೆ ವಿಷಯವನ್ನು ವಿಸ್ತರಿಸುವ ಯಾರನ್ನೇ ಆಗಲಿ, ಕಾತರದಿಂದ ಕೇಳುವುದುಂಟು: “ಅದೇನೋ ಒಂದು ಗಟ್ಟಿಯಾದದ್ದನ್ನ ಮೊದಲು ಹೇಳಿ,” “ಮೊದ್ಲು ಪಾಯಿಂಟಿಗ್ ಬನ್ನಿ” ಎಂದು. ಇದೇ ರೀತಿಯಾದದ್ದು ಭಗವದ್ಗೀತೆಯ ಮೊದಲಿಗೆ ಬರುವ ಅರ್ಜುನನ ಅಸಯಾಹಯವಾದರೂ ತಾಳ್ಮೆಗೆಟ್ಟ ಮಾತು:
ತದೇಕಂ ವದ ನಿಶ್ಚಿತ್ಯ (೬.೨೫.೨)
ನಾವು ವ್ಯವಹಾರಜಗತ್ತಿನಲ್ಲಿ ಅದೆಷ್ಟೋ ಬಾರಿ ನಡೆಯದ ಘಟನೆಗಳನ್ನು, ನಡೆಯಲಿರುವ ಘಟನೆಗಳನ್ನು ನಡೆದೇಹೋದುವೆಂಬಂತೆ—ಅಂದರೆ ಭೂತಾರ್ಥದಲ್ಲಿ—ಹೇಳುವುದುಂಟು. ಇದಕ್ಕೆ ಕಾರಣ ಅವಧಾರಣೆಯ ತೀವ್ರತೆಯೇ. “ನಿಮಗಾಗಿ ಪ್ರಾಣ ಬಿಟ್ಟಿದ್ದೀನಿ ಅಂತಲೇ ಅಂದುಕೊಳ್ಳಿ,” “ನಿಮಗೋಸ್ಕರ ಸತ್ತೇಹೋಗಿದ್ದೀನಿ” ಎಂಬಂಥ ಮಾತುಗಳೇ ವ್ಯಾಸರಲ್ಲಿ ತಮ್ಮ ಮೂಲವನ್ನು ಕಂಡಿವೆ:
ತ್ಯಕ್ತಪ್ರಾಣಂ ಹಿ ಮಾಂ ವಿದ್ಧಿ (೬.೪೧.೮೭)
ನೂರು ಮಕ್ಕಳನ್ನೂ ಕಳೆದುಕೊಂಡ ಗಾಂಧಾರಿ ದಯನೀಯವಾಗಿ ದುಃಖಿಸುತ್ತ ಭೀಮನಿಗೆ ಹೇಳುತ್ತಾಳೆ: “ಅಯ್ಯೋ, ಈ ಮುದಿಕುರುಡರಿಬ್ಬರ ಪಾಲಿಗೆ ಒಂದು ಊರೆಗೋಲನ್ನೂ ನೀನು ಉಳಿಸಲಿಲ್ಲವಲ್ಲಾ!” ಎಂದು. ಈ ವಾಕ್ಯದ ಧ್ವನಿ ಅಸಾಮಾನ್ಯ. ಇಂಥ ಮಾತುಗಳು ಈಗಲೂ ನಮ್ಮಲ್ಲಿ ಬಳಕೆಯಲ್ಲಿವೆ:
ಕಥಮಂಧದ್ವಯಸ್ಯಾಸ್ಯ ಯಷ್ಟಿರೇಕಾ ನ ವರ್ಜಿತಾ (೧೧.೧೪.೨೧)
ಮಹಾಭಾರತದ ಕಟ್ಟಕಡೆಯಲ್ಲಿ ಇಷ್ಟೆಲ್ಲ ಭವ್ಯವಾದ ಮಹಾಕೃತಿಯನ್ನು ಬರೆದ ವ್ಯಾಸರು ಅದೆಷ್ಟು ತಿಳಿಹೇಳಿದರೂ ಜನರು ಧರ್ಮಕ್ಕೆ ಬೆಲೆ ಕೊಡುತ್ತಿಲ್ಲವಲ್ಲಾ ಎಂದು ಸಂಕಟಪಟ್ಟು ಹೇಳುವ ಮಾತಿದು: “ಕೈಯೆತ್ತಿ ಕೂಗುತ್ತಿದ್ದೇನೆ; ಆದರೆ ಯಾರೂ ನನ್ನ ಮಾತನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ!” ಇಲ್ಲಿಯ “ಊರ್ಧ್ವಬಾಹುಃ” ಎಂಬ ಪದಪುಂಜದಲ್ಲಿ ವ್ಯಾಸರ ನಿಶ್ಚಯವೂ ಲೋಕಾನುಗ್ರಹದ ಕಾತರವೂ ಪ್ರಸ್ಫುಟವಾಗಿವೆ.
ಊರ್ಧ್ವಬಾಹುರ್ವಿರೌಮ್ಯೇಷ ನ ಚ ಕಶ್ಚಿಚ್ಛೃಣೋತಿ ಮೇ (೧೮.೫.೪೯)
೨. ಅಪ್ಪಟ ನುಡಿಗಟ್ಟು
ಮಾತಿನ ಯಾವ ಪರಿಗಳು ವಾಚ್ಯಾರ್ಥದಲ್ಲಿ ತಮ್ಮ ಒಳಗನ್ನು ತೆರೆದುಕೊಳ್ಳದೆ ಲಕ್ಷ್ಯಾರ್ಥ-ವ್ಯಂಗ್ಯಾರ್ಥಗಳ ಮೂಲಕವೇ ಅಭಿಪ್ರೇತವಾಗುತ್ತವೆಯೋ ಅಂಥ ಜನಜನಿತವಾದ ಸೊಲ್ಲುಗಳನ್ನು “ನುಡಿಗಟ್ಟು” ಎಂದು ಕರೆಯಬಹುದು. ಇವುಗಳಲ್ಲಿ ಹೆಚ್ಚಿನ ಸಂದರ್ಭಗಳು ಪ್ರಚಲಿತವಾದ ಸಾಮಾನ್ಯವ್ಯಾಕರಣಸೂತ್ರಗಳಿಗೆ ವಿಧೇಯವಾಗಿರುವಂತೆ ತೋರುವುದಿಲ್ಲ. ಈ ಕಾರಣದಿಂದಲೇ ವೈಯಾಕರಣರು ನುಡಿಗಟ್ಟುಗಳಂಥ ವಾಗ್ವಿಚ್ಛಿತ್ತಿಗಳಿಗೆ ಪ್ರತ್ಯೇಕವಾದ ನಿಯಮಗಳನ್ನು ರೂಪಿಸಿದ್ದಾರೆ. ನುಡಿಗಟ್ಟುಗಳು ಕೆಲವೊಮ್ಮೆ ಗಾದೆಯ ಮಾತಿನ ರೀತಿಯಲ್ಲಿ, ಮತ್ತೆ ಕೆಲವೊಮ್ಮೆ ಪಡೆನುಡಿಗಳ ಬಗೆಯಲ್ಲಿ, ಇನ್ನು ಕೆಲವೊಮ್ಮೆ ಲೌಕಿಕನ್ಯಾಯಗಳ ಛಾಯೆಯಲ್ಲಿ ಕೂಡ ಇರಬಹುದು. ಮುಖ್ಯವಾಗಿ ಇವು ಆಯಾ ಸಂಸ್ಕೃತಿಗೇ ವಿಶಿಷ್ಟವಾದುವು. ಆದರೆ ಭಾರತೀಯಸಂಸ್ಕೃತಿಯ ಅಂತರಂಗದಲ್ಲಿರುವ ಏಕತೆಯನ್ನು ಗಮನಿಸಿದಾಗ ಅವೆಷ್ಟೋ ದೇಶಭಾಷೆಗಳ ನುಡಿಗಟ್ಟುಗಳು ಸಂಸ್ಕೃತದೊಡನೆ ಸಂವದಿಸುವುದನ್ನು ಗಮನಿಸಬಹುದು. ಅಂಥ ಕೆಲವನ್ನೀಗ ಪರಿಶೀಲಿಸೋಣ.
ಅಯೋದಧೌಮ್ಯರು ತಮ್ಮ ಶಿಷ್ಯರಲ್ಲೊಬ್ಬನಾದ ಉಪಮನ್ಯುವನ್ನು ಬಗೆಬಗೆಯ ಪರೀಕ್ಷೆಗಳಿಗೆ ಒಳಪಡಿಸುತ್ತಾರೆ. ಇವೆಲ್ಲ ಹೆಚ್ಚಾಗಿ ಊಟ-ತಿಂಡಿಗೆ ಸಂಬಂಧಿಸಿವೆ. ಒಂದೊಂದು ಬಾರಿಯೂ ಅವರು ನಿರ್ದಿಷ್ಟವಾದ ಪದಾರ್ಥವನ್ನು ಬಳಸಬಾರದೆಂದು ನಿಯಮಿಸಿದ ಬಳಿಕ “ನೀನು ಮತ್ತಾವುದರಿಂದ ಹೊಟ್ಟೆ ಹೊರಿಯುತ್ತಿದ್ದೀಯೆ?” ಎಂದು ಪ್ರಶ್ನಿಸುತ್ತಾರೆ. ಇದೊಂದು ನುಡಿಗಟ್ಟೇ ಆಗಿದೆ. “ವೃತ್ತಿ” ಎಂಬ ಪದಕ್ಕಿರುವ ಬಹ್ವರ್ಥಗಳ ಮೂಲಕ ಇಲ್ಲಿ “ಹೊಟ್ಟೆಯ ಪಾಡು” ಎಂಬ ಧ್ವನಿ ಸಿದ್ಧಿಸಿದೆ.
ಕೇನ ವೃತ್ತಿಂ ಕಲ್ಪಯಸಿ (೧.೩.೪೭)
ಜರತ್ಕಾರುಮಹರ್ಷಿ ತುಂಬ ಕಠಿನವಾದ ವ್ರತಗಳನ್ನು ಆಚರಿಸುತ್ತಿದ್ದ. ಆತನ ವ್ರತಗಳಲ್ಲೊಂದು ಸಂಜೆಯ ಹೊತ್ತಿಗೆ ಎಲ್ಲಿ ಸೇರಿದರೆ ಅಲ್ಲಿಯೇ ನೆಲೆ, ಮತ್ತದು ಊರೋ ಮನೆಯೋ ಮಠವೋ ಆಗಿರಬೇಕೆಂಬ ನಿಯಮವಿಲ್ಲ. ಆದರೆ ಮರುಹಗಲೇ ಅಲ್ಲಿ ನಿಲ್ಲದೆ ತೆರಳಬೇಕು. ಇದನ್ನು “ಗ್ರಾಮೈಕರಾತ್ರವ್ರತ”ವೆಂದು ಶಾಸ್ತ್ರಗಳಲ್ಲಿ ಹೆಸರಿಸಿರುವುದುಂಟು. ಆದರೆ “ಯತ್ರಸಾಯಂಗೃಹ” ಎಂಬ ಮಹಾಭಾರತದ ನುಡಿಗಟ್ಟಿನ ಸೊಗಸು ಇಲ್ಲಿಲ್ಲ.
ಚಚಾರ ಪೃಥಿವೀಂ ಕೃತ್ಸ್ನಾಂ ಯತ್ರಸಾಯಂಗೃಹೋ ಮುನಿಃ (೧.೪೧.೧)
ಜರತ್ಕಾರುವಿಗೆ ಮದುವೆ ಇಷ್ಟವಿಲ್ಲ. ಆದರೆ ಸಂತತಿಯಾಗದೆ ಪಿತೃಋಣ ತೀರದು. ಹೀಗಾಗಿ ವಾಸುಕಿಯ ತಂಗಿಯ ಕೈಹಿಡಿದಿದ್ದ. ಅವಳ ಹೆಸರೂ ಜರತ್ಕಾರು ಎಂದೇ. ಒಲ್ಲದ ಗಂಡನಾದ ಕಾರಣ ಅವಳಿಗೆ ಬಗೆಬಗೆಯಲ್ಲಿ ತೊಂದರೆ ಕೊಟ್ಟಿದ್ದ. ಇಷ್ಟಾಗಿಯೂ ಅವಳು ಅವನನ್ನು ಅಸಾಧಾರಣವಾದ ರೀತಿಯಿಂದ ಓಲೈಸಿಕೊಂಡು ಬಂದಿದ್ದಳು. ಇಂಥ ಓಲೈಸುವಿಕೆಯನ್ನು “ಶ್ವೇತಕಾಕೀಯೋಪಾಯ” ಎಂದು ಮಹಾಭಾರತ ಹೆಸರಿಸಿದೆ. ಈ ನುಡಿಗಟ್ಟಿಗೆ ಹಲವು ಧ್ವನಿಗಳಿವೆ: “ಕಾಗೆ ಕಪ್ಪಲ್ಲ, ಬಿಳಿದು” ಎಂದು ಗಂಡ ಹೇಳಿದರೆ ಅದನ್ನು ಅವನ ತೃಪ್ತಿಗಾಗಿ ಹೌದೆಂದು ಒಪ್ಪಿಕೊಳ್ಳುವುದು, ಅಥವಾ ಬಿಳಿಯ ಕಾಗೆಯನ್ನಾದರೂ ತಂದುಕೊಟ್ಟು ಅವನನ್ನು ಸಂತೋಷಗೊಳಿಸುವುದು ಇತ್ಯಾದಿ.
ಉಪಾಯೈಃ ಶ್ವೇತಕಾಕೀಯೈಃ ಪ್ರಿಯಕಾಮಾ ಯಶಸ್ವಿನೀ (೧.೪೩.೧೦)