ಅನಂತರ ಚತುರ್ಮುಖಬ್ರಹ್ಮನೇ ಮಹರ್ಷಿಗಳ ಬಳಿ ಬರುತ್ತಾನೆ. ಆ ಹೊತ್ತಿನಲ್ಲಿ ಕೂಡ ವಾಲ್ಮೀಕಿಮುನಿಗಳಿಗೆ ಆ ಶ್ಲೋಕದ್ದೇ ಗುಂಗು: ತದ್ಗತೇನೈವ ಮನಸಾ ವಾಲ್ಮೀಕಿರ್ಧ್ಯಾನಮಾಸ್ಥಿತಃ, ೧.೨.೨೮. ಕ್ರೌಂಚವಧೆಯ ಧರ್ಮಾಧರ್ಮಗಳ ವಿಚೇಚನೆಯೂ ಕ್ರೌಂಚಿಗೊದಗಿದ ವೈಧವ್ಯಕ್ಕೆ ಮರುಕವೂ ಮತ್ತೆ ಮತ್ತೆ ಸುಳಿಸುತ್ತುತ್ತಿತ್ತು. ಇದು ಕವಿಯೊಬ್ಬ ತನ್ನ ಕಾವ್ಯಕ್ಕೆ ಪ್ರೇರಕವಾದ ಘಟನೆಯನ್ನು ಮತ್ತೆ ಮತ್ತೆ ಪರ್ಯಾಲೋಚಿಸುವ ಪರಿಯೇ ಹೌದು. ಜಗತ್ತಿನ ಭಾವಗಳು ಈ ಮಟ್ಟದ ಕ್ಷೋಭೆಯನ್ನುಂಟುಮಾಡದೆ ಕಾವ್ಯರಚನೆಗೆ ತಕ್ಕ ಪ್ರೇರಣೆ ಒದಗಿಬರದು. ಹೀಗೆ ಪ್ರೇರಿತನಾದ ಕವಿ ತನ್ನ ತಾರ್ಕಿಕವಾದ ಅರಿವನ್ನೂ ಮೀರಿ ಭಾವಪೂರ್ಣವಾದ ಪ್ರತಿಕ್ರಿಯೆಯನ್ನು ನೀಡುವುದೇ ನಿಜವಾದ ಕಾವ್ಯ. ಹೀಗಾಗಿಯೇ ಬ್ರಹ್ಮನು ನಗುತ್ತ ಮಹರ್ಷಿಗಳ ಹೊಯ್ದಾಟಕ್ಕೆ ನಿಲುಗಡೆಯನ್ನು ತಂದ:
ಶ್ಲೋಕ ಏವ ತ್ವಯಾ ಬದ್ಧೋ ನಾತ್ರ ಕಾರ್ಯಾ ವಿಚಾರಣಾ |
ಮಚ್ಛಂದಾದೇವ ತೇ ಬ್ರಹ್ಮನ್ ಪ್ರವೃತ್ತೇಯಂ ಸರಸ್ವತೀ || (೧.೨.೩೧)
ಅಲ್ಲವೇ ಮತ್ತೆ, ಸೃಷ್ಟಿಯಲ್ಲಿ ತೋರಿಕೊಳ್ಳುವ ವೈಪರೀತ್ಯಗಳನ್ನು ಕುರಿತು ಭಾವಪೂರ್ಣವಾಗಿ ಮಾಡಿದ ಪ್ರತಿಕ್ರಿಯೆ ಕಾವ್ಯವೇ ಅಲ್ಲವೇ ಎಂದು ತೀರ್ಮಾನವಾಗಬೇಕಿರುವುದು ಈ ಎಲ್ಲ ಆಪಾತವಿರುದ್ಧವಾದ ಸೃಷ್ಟಿಯನ್ನು ಮಾಡಿ ಅದರಾಚೆಗೆ ನಿಂತ ಸೃಷ್ಟಿಕರ್ತನಿಂದಲೇ! ಇದು ಕವಿಸೃಷ್ಟಿಗೂ ಅನ್ವಯಿಸುವ ತತ್ತ್ವ. ತನ್ನ ಸೃಷ್ಟಿಯೊಳಗಣ ಪಾತ್ರ-ಸಂದರ್ಭಗಳ ಘರ್ಷಣೆಯನ್ನು ಅದೆಷ್ಟು ಉತ್ಕಟವಾಗಿ ಚಿತ್ರಿಸಿದರೂ ಅಷ್ಟೇ ಅಂತರವನ್ನು ಉಳಿಸಿಕೊಂಡಾಗಲೇ ಅದಕ್ಕೆ ಕಾವ್ಯತ್ವ ಸಿದ್ಧಿಸುವುದು.
ನಾರದರ ಮೂಲಕ ರಾಮಾಯಣದ ಆಶಯವೂ ವಾಲ್ಮೀಕಿಗಳೇ ಉದ್ಗರಿಸಿದ ಶ್ಲೋಕದ ಮೂಲಕ ಅದರ ಆಕೃತಿಯೂ ಸ್ಫುರಿಸಿದ ಬಳಿಕ ಇವೆರಡನ್ನೂ ಬೆಸೆಯುವ ಕಾವ್ಯ ನಿರ್ಮಿತವಾಗಲು ಕಷ್ಟವೇನಿಲ್ಲವೆಂದು ನಮಗೆನಿಸಬಹುದು. ಆದರೆ ಇತಿವೃತ್ತಮಾತ್ರವಾಗಿ ಬುದ್ಧಿಗೆಟುಕಿದ ಕಥೆಯು ಅನುಭವರೂಪದ ಕಾವ್ಯವಾಗಿ ಭಾವಕ್ಕೆಟುಕಬೇಕೆಂದರೆ ಅಲ್ಲಿ “ವರ್ಣನೆ” ಇರಬೇಕು. ಹೀಗಾಗಿಯೇ ವರ್ಣನಾನಿಪುಣಃ ಕವಿಃ ಎಂದು ಭಟ್ಟತೌತ ಕವಿಲಕ್ಷಣವನ್ನು ಹೇಳಿರುವುದು. ಅಷ್ಟೇಕೆ, “ಕವಿ”ಶಬ್ದದ ನಿರುಕ್ತಿಯೇ ವರ್ಣನಾರ್ಥಕವಾದುದು (ಕವೃ-ವರ್ಣೇ). ಬಹಳಷ್ಟು ಜನ ಭಾವಿಸಿದಂತೆ ವರ್ಣನೆಯೆಂದರೆ ಬರಿಯ ಬಹಿರ್ಜಗತ್ತಿನ ಬಣ್ಣನೆಯಲ್ಲ. ಅದು ವಿಭಾವ ಮತ್ತು ಅನುಭಾವಗಳೆರಡರ ಸಮುಚಿತಚಿತ್ರಣ. ಅಂದರೆ, ಎಲ್ಲ ಬಗೆಯ ಚಿತ್ತವೃತ್ತಿಗಳನ್ನೂ ಅವುಗಳು ಹೊರಗೆ ತೊರಿಕೊಳ್ಳುವ ವಾಗ್ವೃತ್ತಿ-ದೇಹವೃತ್ತಿಗಳನ್ನೂ ಇವಕ್ಕೆಲ್ಲ ಪ್ರೇರಕವಾಗುವ ಸಕಲವಿಧದ ಜಡ-ಚೇತನಗಳ ವರ್ತನೆಗಳನ್ನೂ ಬಗೆಗಣ್ಣು ತುಂಬಿಕೊಳ್ಳುವಂತೆ ವಿವರಿಸುವುದು. ಇಂಥ ವರ್ಣನೆ ಧ್ವನಿಪ್ರಧಾನವಾಗಿ ಇರಬೇಕೆಂಬುದು ಸ್ವಯಂವೇದ್ಯ. ಎಂದೂ ವಾಚ್ಯವಾಗದ ರಸವನ್ನು ವ್ಯಂಗ್ಯಮಾರ್ಗದಿಂದಲ್ಲದೆ ಸೂಚಿಸುವುದಾದರೂ ಹೇಗೆ? ಈ ಎಲ್ಲ ಕೌಶಲಕ್ಕೂ ಮೂಲಭೂತವಾಗಿ ಬೇಕಾದದ್ದು ಇತಿವೃತ್ತವನ್ನು ಮುನ್ನಡಸುವ ಪಾತ್ರಗಳ ಒಳ-ಹೊರಗನ್ನು ಅರಿಯುವ ಸಾಮರ್ಥ್ಯ. ಇದನ್ನೇ ಬ್ರಹ್ಮನು ವಾಲ್ಮೀಕಿಯಲ್ಲಿ ಗುರುತಿಸಿದ್ದು:
ವೃತ್ತಂ ಕಥಯ ವೀರಸ್ಯ ಯಥಾ ತೇ ನಾರದಾಚ್ಛ್ರುತಮ್ |
ರಹಸ್ಯಂ ಚ ಪ್ರಕಾಶಂ ಚ ಯದ್ವೃತ್ತಂ ತಸ್ಯ ಧೀಮತಃ ||
ರಾಮಸ್ಯ ಸಹ ಸೌಮಿತ್ರೇ ರಾಕ್ಷಸಾನಾಂ ಚ ಸರ್ವಶಃ |
ವೈದೇಹ್ಯಾಶ್ಚೈವ ಯದ್ವೃತ್ತಂ ಪ್ರಕಾಶಂ ಯದಿ ವಾ ರಹಃ ||
ಯಚ್ಚಾಪ್ಯವಿದಿತಂ ಸರ್ವಂ ವಿದಿತಂ ತೇ ಭವಿಷ್ಯತಿ |
ನ ತೇ ವಾಗನೃತಾ ಕಾವ್ಯೇ ಕಾಚಿದತ್ರ ಭವಿಷ್ಯತಿ || (೧.೨.೩೩-೩೫)
ಮೇಲ್ನೋಟಕ್ಕಿದು ಮಹರ್ಷಿಗಳಿಗೆ ಬ್ರಹ್ಮನಿತ್ತ ವರದಂತೆ ತೋರಿದರೂ ಅದು ಕೇವಲ ಆಧಿದೈವಿಕವಾದ ಸತ್ಯ. ಆಧ್ಯಾತ್ಮಿಕವಾಗಿಯಾದರೋ ಇದು ವಾಲ್ಮೀಕಿಮುನಿಗಳೇ ಸಾಕ್ಷಾತ್ಕರಿಸಿಕೊಂಡ ದರ್ಶನ. ಸೃಷ್ಟಿಕರ್ತನೇ ಒಪ್ಪುವಂತೆ ನಮಗೆ ಭವ-ಭಾವಲೋಕಗಳ ಸಮಸ್ತಸೃಷ್ಟಿಯ ನಾಡಿಯ ಮಿಡಿತ ದಕ್ಕಿದಾಗಲೇ ಕವಿಗಳಾಗುವ ಅರ್ಹತೆ ದಕ್ಕುವುದು. ಇಂತಿದ್ದರೆ ಮಾತ್ರ ಕವಿಯ ಮಾತು ಅನೃತವಾಗುವುದಿಲ್ಲ. ವಸ್ತುತಃ ಕಾವ್ಯದಲ್ಲಿ ವ್ಯುತ್ಪತ್ತಿರೂಪದ ಕೊರತೆಯಿದ್ದರೂ ಅಡ್ಡಿಯಿಲ್ಲ; ಪ್ರತಿಭೆಯ ರೂಪದ ಕೊರತೆ ಎದುರಾದಲ್ಲಿ ಕಾವ್ಯತ್ವವೇ ಶಂಕಾಸ್ಪದವಾಗುತ್ತದೆ. ಹೀಗಾಗಿ ಕಾವ್ಯದಲ್ಲಿ ತಥ್ಯಕ್ಕಿಂತ ಸತ್ಯಕ್ಕೆ ಹೆಚ್ಚಿನ ಬೆಲೆ. ಅಸ್ತಿತ್ವರೂಪದ ಸತ್ಯಕ್ಕಿಂತ ಅದರ ಅಂತರಂಗವೆನಿಸಿದ ಋತವೇ ಕಾವ್ಯರಚನೆಗೆ ಮುಖ್ಯ. ಈ ಋತವು ಕಾವ್ಯದಲ್ಲಿ ಸೌಂದರ್ಯರೂಪದಿಂದ ಸಿದ್ಧಿಸುತ್ತದೆ. ಇಂಥ ಸೌಂದರ್ಯವು ರಸವೆಂಬುದರಲ್ಲಿ ಸಂದೇಹವಿಲ್ಲ. ಕಾವ್ಯಜಗತ್ತಿನಲ್ಲಿ ಇತಿವೃತ್ತವನ್ನು ನಡಸುವ ಪಾತ್ರಗಳ ಭಾವಸಂವೇದನೆಯನ್ನೇ ಋತವೆಂದು ತಿಳಿಯಬಹುದು. ಇಂಥ ಋತವನ್ನು ಅರಿಯದ ಕವಿ ರಚಿಸುವುದು ಅನೃತ ಅಥವಾ ಹುಸಿಗಬ್ಬವೆನಿಸುತ್ತದೆ.
ಋತನಿಷ್ಠವಾದ ಕವಿಕೃತಿಯನ್ನು ರಸನಿಷ್ಠವಾದ ಕಾವ್ಯವೆನ್ನುತ್ತಾರೆ. ಇಂಥ ಕಾವ್ಯವು ನದ-ನದಿಗಳಿರುವವರೆಗೆ, ಗಿರಿ-ವಿಪಿನಗಳಿರುವವರೆಗೆ ನಿಲ್ಲುತ್ತದೆ, ಸಲ್ಲುತ್ತದೆ. ಇದೇ ಬ್ರಹ್ಮನ ಮಾತಿನ ತಾತ್ಪರ್ಯ:
ಯಾವತ್ ಸ್ಥ್ಯಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇ |
ತಾವದ್ರಾಮಾಯಣಕಥಾ ಲೋಕೇಷು ಪ್ರಚರಿಷ್ಯತಿ || (೧.೨.೩೭)
ಇಲ್ಲಿ ನದಿ ಮತ್ತು ಗಿರಿಗಳ ಮಾತು ಬಂದಿದೆ. ಇವೆರಡೂ ಜಂಗಮ ಮತ್ತು ಸ್ಥಾವರಸೃಷ್ಟಿಗಳನ್ನು ಪ್ರತಿನಿಧಿಸುತ್ತವೆ. ಇದು ಬ್ರಹ್ಮನ ಮಾತಾಗಿ ಆಧಿದೈವಿಕಸತ್ಯವಾಗಿದ್ದರೂ ಸಹೃದಯರ ಅನುಭವದ ಸ್ತರದಲ್ಲಿದು ಆಧ್ಯಾತ್ಮಿಕಸತ್ಯ.
ಅನಂತರ ವಾಲ್ಮೀಕಿಮುನಿಗಳು ವಿಧಿವತ್ತಾಗಿ ಆಚಮಿಸಿ, ಪೂರ್ವಾಭಿಮುಖವಾಗಿ ದರ್ಭಾಸನದ್ಲಲಿ ಕುಳಿತು ಧರ್ಮೈಕದೃಷ್ಟಿಯಿಂದ ಮತ್ತೊಮ್ಮೆ ರಾಮಕಥೆಯನ್ನೆಲ್ಲ ಸಿಂಹಾವಲೋಕನಕ್ರಮದಿಂದ ಪರಿಶೀಲಿಸುತ್ತಾರೆ. ಆಗ ಅವರಿಗೆ ಆ ಇತಿವೃತ್ತದ ಎಲ್ಲ ಪಾತ್ರಗಳ ಅಳು-ನಗುಗಳು, ನುಡಿ-ನಡತೆಗಳು ಯಥಾವತ್ತಾಗಿ ಕಂಡವಂತೆ. ಇದಕ್ಕೆ ಕಾರಣ ಮುನಿಗಳ ಧರ್ಮವೀರ್ಯವೆಂದು ಒಕ್ಕಣೆಯುಂಟು (೧.೩.೨-೪). ರಾಮನ ಅಯನವನ್ನು ಮುನಿಗಳು ಅಂಗೈಯ ನೆಲ್ಲಿಯಂತೆ ಯೋಗದೃಷ್ಟಿಯಿಂದ ಕಂಡರೆಂದೂ ವರ್ಣನೆಯಿದೆ (೧.೩.೬). ಈ ಎಲ್ಲ ವಿವರಗಳೂ ಕವಿಯ ಕಾವ್ಯರಚನಾಸಮಾಧಿಯನ್ನೇ ಕಟಾಕ್ಷಿಸಿವೆ. ಮೇಲ್ನೋಟಕ್ಕಿದು ಮತೀಯವಾಗಿಯೋ ಪವಾಡವಾಗಿಯೋ ತೋರಬಹುದು; ಆದರೆ ತತ್ತ್ವತಃ ಇಂಥ ನಿಷ್ಠೆಯಿಲ್ಲದೆ ಮಹಾಕೃತಿ ಹುಟ್ಟದು. ಕಾವ್ಯಸೃಷ್ಟಿಯೊಂದು ಪರಮಗಂಭೀರ ವ್ಯವಸಾಯ. ಅದನ್ನು ಲಘುವಾಗಿ ಕಂಡಷ್ಟೂ ಸೃಷ್ಟಿ ಲಘುವಾಗುತ್ತದೆ.
ಆದಿಕವಿಗಳು ತಮ್ಮ ಕಾವ್ಯಕ್ಕೆ ಸಂದ ಪ್ರಥಮಪ್ರಶಸ್ತಿಯನ್ನು ತುಂಬ ಪ್ರೀತಿಯಿಂದ ಹೇಳಿಕೊಂಡಿದ್ದಾರೆ. ಲವ-ಕುಶರ ಮೂಲಕ ಆದಿಕಾವ್ಯವು ಋಷಿಪರಿಷತ್ತಿನೆದುರು ವಿನಿಕೆಯಾಗುತ್ತದೆ. ಸತಾಲ-ವಿತಾಲಕ್ರಮದಲ್ಲಿ, ಪಾಠ್ಯ-ಗೇಯವಿಧಿಯಿಂದ ಪ್ರಸ್ತುತವಾದ ಈ ಕಾವ್ಯವನ್ನು ಆಲಿಸಿದ ಮುನಿಗಳು ಸ್ವಪ್ರೇರಣೆಯಿಂದ, ಸಾನಂದವಾಗಿ ತಮ್ಮಲ್ಲಿರುವ ವಸ್ತುಗಳನ್ನೇ ಬಹೂಕರಿಸುತ್ತಾರೆ. ಅವರುಟ್ಟ ಕೌಪೀನ-ಕೃಷ್ಣಾಜಿನಗಳಿಂದ ಮೊದಲ್ಗೊಂಡು ಚಾಪೆ-ಕಲಶ-ಕಮಂಡಲುಗಳವರೆಗೆ ಎಲ್ಲ ಬಗೆಯ ಆರ್ಷಸಂಪದಗಳೂ ಇಲ್ಲಿ ವಿನಿಯುಕ್ತವಾಗುತ್ತವೆ. ಕೆಲವರಿಗಂತೂ ಮೌಂಜಿ-ಕೌಪೀನಗಳೂ ಇರುವುದಿಲ್ಲ. ಅಂಥವರು ಬಾಯಿತುಂಬ ಹರಸಿದರೆಂದು ಹಿಗ್ಗಿನಿಂದ ಆದಿಕವಿಗಳು ಹೇಳಿಕೊಳ್ಳುತ್ತಾರೆ! ಈ ಹೃದಯಂಗಮವರ್ಣನೆಯು ಸತ್ಕಾವ್ಯದ ನಿರೂಪಣಕ್ರಮ ಮತ್ತು ಆಸ್ವಾದನಕ್ರಮಗಳ ಅಭಿವ್ಯಕ್ತಿಯೇ ಆಗಿದೆ. ಕಾವ್ಯಕ್ಕೆ ಸಂಗೀತವೆಷ್ಟು ಮುಖ್ಯವೆಂಬ ಧ್ವನಿಯೂ ಇಲ್ಲಿದೆ. ಜೊತೆಗೆ ಕಾವ್ಯವು ಗೀತವಾಗಲು ಅದರೊಳಗೆ ಸೊಗಸಾದ ಛಂದೋಗತಿ ಅಪೇಕ್ಷಣೀಯವೆಂಬ ಆಶಯ ಕೂಡ ಉಂಟು.
ಋಷಿಪರಿಷತ್ತಿನ ಮೆಚ್ಚುಗೆಯ ಮೂಲಕ ಸಹೃದಯಪ್ರೀತಿಯಿಲ್ಲದೆ ಕಾವ್ಯಕ್ಕೆ ಬಾಳುವೆ ಕಷ್ಟವೆಂದು ಸ್ಪಷ್ಟವಾಗುತ್ತದೆ. ಜೊತೆಗೆ ಸಜ್ಜನನಾದ ಕವಿಯು ತನ್ನ ಕಾವ್ಯದ ಪ್ರಥಮಶ್ರೋತೃಗಳನ್ನು ಉಪೇಕ್ಷಿಸಬಾರದೆಂಬ ಕಿವಿಮಾತೂ ಇಲ್ಲಿದೆ. ಮಾತ್ರವಲ್ಲ, ನಿರ್ಮಲಾಂತಃಕರಣದ ಋಷಿಗಳಿಗೆ ಮೆಚ್ಚುಗೆಯಾಗಬಲ್ಲ ಕಾವ್ಯ ಯಾವುದೇ ಸಾತ್ತ್ವಿಕಜಗತ್ತಿನಲ್ಲಿ ಸ್ವಾಗತಾರ್ಹವಾಗುವುದೆಂದು ತಿಳಿಯುತ್ತದೆ. ಸಮಾಜವು ಕವಿಯನ್ನು ಹೇಗೆ ಪೋಷಿಸಬೇಕೆಂಬ ಸೂಚನೆ ಕೂಡ ಇಲ್ಲಿರುವುದು ಗಮನಾರ್ಹ. ಹೀಗೆ ಇಡಿಯ ಈ ಸರ್ಗದಲ್ಲಿ ಸಹೃದಯತತ್ತ್ವದ ಪ್ರತಿಪಾದನೆಯುಂಟು.
ಈ ಸರ್ಗದ ಕಡೆಗೆ ಹಾಗೂ ಉತ್ತರಕಾಂಡದ ಕೊನೆಕೊನೆಯ ಎರಡು ಸರ್ಗಗಳಲ್ಲಿ (೭.೯೩,೯೪) ಲವ-ಕುಶರು ಶ್ರೀರಾಮನ ಆಹ್ವಾನದ ಮೇರೆಗೆ ಆತನ ಸಮ್ಮುಖದಲ್ಲಿ ರಾಮಾಯಣವನ್ನು ಹಾಡಿದ ಪ್ರಕರಣವುಂಟು. ಇದು ಕವಿಯು ತನ್ನ ಕೃತಿಯನ್ನು ಸಹೃದಯಪರಿಷತ್ತಿಗೆ ನಿವೇದಿಸುವ ಪರಿಯೇ ಆಗಿದೆ. ಈ ಕಾವ್ಯವನ್ನು ಕೇಳಿದ ಶ್ರೀರಾಮನು ಈ ಬಗೆಯ ಕೇಳ್ಮೆ ತನಗೇ ಮಂಗಳಕರವೆಂದು ಭಾವಿಸಿಕೊಂಡನಂತೆ (ಮಮಾಪಿ ತದ್ಭೂತಿಕರಂ ಪ್ರಚಕ್ಷತೇ, ೧.೪.೩೫). ಇದು ತನ್ನ ಚರಿತೆಯನ್ನೇ ತಾನು ಹೆಮ್ಮೆಪಟ್ಟು ಮೆಚ್ಚಿಕೊಂಡ ಬಗೆಯಲ್ಲ. ಹಾಗಾದಲ್ಲಿ ಇದು “ನಿಜಸುಖಾದಿವಿವಶೀಭಾವ” ಎಂಬ ರಸವಿಘ್ನಕ್ಕೆ ನಿದರ್ಶನವಾಗುತ್ತಿತ್ತು. ತನ್ನ ಕಥೆಯನ್ನೂ ಬೇರೊಬ್ಬನ ಕಥೆ ಎಂಬಂತೆ ಹೃದ್ಯತಾಟಸ್ಥ್ಯದಿಂದ ಆಸ್ವಾದಿಸುವ ಹದವೇ ಇಲ್ಲಿದೆ. ಶ್ರೀರಾಮನು ಇಂಥ ಕಾವ್ಯವಾಚನವನ್ನು ವಿದ್ವದ್ರಸಿಕರ ಸಮೂಹದಲ್ಲಿ ಒಬ್ಬನಾಗಿ ಕುಳಿತು ಆಸ್ವಾದಿಸಿದನಂತೆ (ಸ ಚಾಪಿ ರಾಮಃ ಪರಿಷದ್ಗತಃ, ೧.೪.೩೬). ಇದು ಸಹೃದಯಗೋಷ್ಠಿಗಿರುವ ಮಹತ್ತ್ವವನ್ನೇ ಸಾರಿದೆ. ಊಹಾಪೋಹವಿಶಾರದರಾದ ವಿದ್ವದ್ರಸಿಕರ ನಡುವೆ ಕಲಾಕೃತಿಯೊಂದನ್ನು ಆಸ್ವಾದಿಸುವಾಗ ಪ್ರತಿಯೊಬ್ಬರಿಗೂ ಅನ್ಯೋನ್ಯಸಹಕಾರದಿಂದ ಹೊಸಹೊಸ ಧ್ವನಿಗಳು ಸ್ಫುರಿಸಿ ಹೆಚ್ಚಿನ ರಸಪುಷ್ಟಿಗೆ ಅವಕಾಶವಾಗುವುದುಂಟು. ಹೀಗೆ ವಾಲ್ಮೀಕಿಮುನಿಗಳು ಸಹೃದಯದೃಷ್ಟಿಯಿಂದಲೂ ಕಾವ್ಯಮೀಮಾಂಸೆಯನ್ನು ನಡಸಿದ್ದಾರೆ.
ಉತ್ತರಕಾಂಡದಲ್ಲಿ ಲವ-ಕುಶರ ರಾಮಾಯಣಗಾನ ವಿಸ್ತೃತವಾಗಿ ಬಂದಿದೆ. ಇದು ಪ್ರಧಾನವಾಗಿ ಕವಿಯು ತನ್ನ ಕೃತಿಯನ್ನು ಸಹೃದಯಗೋಷ್ಠಿಗೆ ಹೇಗೆ ನಿವೇದಿಸಬೇಕೆಂಬ ಸ್ವಾರಸ್ಯಗಳನ್ನು ಒಳಗೊಂಡಿದೆ. ಇದು ಲವ-ಕುಶರ ಮೂಲಕ ಸಾಗಿದ್ದರೂ ತತ್ತ್ವತಃ ಕವಿಯ ವಿನಿಕೆಗಿಂತ ಬೇರೆಯಲ್ಲ. ಕಾವ್ಯಗಾನದ ಹೊತ್ತಿನಲ್ಲಿ ಹಸಿವು-ಬಾಯಾರಿಕೆಗಳು ಬಾಧಿಸದಂತೆ, ಕಂಠಮಾಧುರ್ಯವು ಕೆಡದಂತೆ ಹಣ್ಣು-ಹಂಪಲುಗಳನ್ನೂ ಓಷಧಿ-ಮೂಲಿಕೆಗಳನ್ನೂ ಸೇವಿಸಬೇಕೆಂಬ ಕಿವಿಮಾತೂ ಇಲ್ಲಿದೆ (೭.೯೩.೮,೯). ಕಾವ್ಯವನ್ನು ಅರ್ಥಲಾಭೈಕದೃಷ್ಟಿಯಿಂದ ನಿವೇದಿಸಬಾರದೆಂಬ ಎಚ್ಚರವನ್ನೂ ಇಲ್ಲಿ ಕಾಣಬಹುದು (೭.೯೩.೧೨). ಅಂತೆಯೇ ರಸಿಕರಾದ ಶ್ರೋತೃಗಳು ಸಿಕ್ಕಿದ್ದಾರೆಂಬ ಅತ್ಯುತ್ಸಾಹದಿಂದ ಒಮ್ಮೆಲೇ ಸುದೀರ್ಘವಾಗಿ ಕಾವ್ಯವನ್ನು ಕೇಳಿಸಬಾರದೆಂಬ ಎಚ್ಚರಿಕೆಯನ್ನು ಕೊಟ್ಟಿರುವುದು ಗಮನಾರ್ಹ (೭.೯೩.೧೧). ಕಾವ್ಯವನ್ನು ಹದವಾದ ಕಂತುಗಳಲ್ಲಿ ಹೃದ್ಯವಾಗುವಂತೆ ನಿವೇದಿಸಬೇಕೆಂಬ ಕಾಳಜಿ ಇಲ್ಲಿದೆ. ಜೊತೆಗೆ ಶ್ರೋತೃಗೌರವ ಮುಖ್ಯವೆಂಬ ಅವಧಾರಣೆಯುಂಟು (೭.೯೩. ೧೪,೧೫). ಏಕೆಂದರೆ ಧನ-ಮಾನಗಳ ಲೋಭವುಳ್ಳ ಕವಿಯು ಸಾಮಾನ್ಯಪ್ರಜೆಗಳನ್ನು ಉಪೇಕ್ಷಿಸುವ ಸಂಭಾವ್ಯತೆ ಇರುವಂತೆಯೇ ನಿಃಸ್ಪೃಹನೆನಿಸಿಕೊಂಡವನು ದೊರೆಗಳನ್ನೂ ಧನವಂತರನ್ನೂ ತಿರಸ್ಕರಿಸುವ ಸಾಧ್ಯತೆ ಕೂಡ ಉಂಟು. ಆದರೆ ವಿವೇಕಿಯಾದ ಕವಿ ಇಂಥ ವಿಕಾರಗಳಿಗೆ ಎಡೆ ನೀಡುವುದಿಲ್ಲ. ಅವನದೇನಿದ್ದರೂ ರಸೈಕಪಕ್ಷಪಾತ; ಸಹೃದಯತೆಯನ್ನಷ್ಟೇ ನಿರೀಕ್ಷಿಸುವ ಸ್ವಭಾವ. ಈ ಮನೋಧರ್ಮವಿಲ್ಲದಿದ್ದಲ್ಲಿ ಕಾವ್ಯರಚನೆಯೇ ಸರಿಯಾಗಿ ಸಾಗುವುದಿಲ್ಲ.