ಶ್ರೀಹರ್ಷ ಹನ್ನೆರಡನೆಯ ಶತಮಾನದಲ್ಲಿದ್ದ ವಿದ್ವತ್ಕವಿ. ಅಂದಿನ ಕಾನ್ಯಕುಬ್ಜವನ್ನು ರಾಜಧಾನಿಯಾಗಿ ಮಾಡಿಕೊಂಡು ಆಳುತ್ತಿದ್ದ ಗಾಹಡವಾಲ ರಾಜಪುತ್ರರ ವಂಶದ ಜಯಚಂದ್ರ ಅಥವಾ ಜಯಂತಚಂದ್ರನ (೧೧೬೯-೧೧೯೫) ಆಸ್ಥಾನಕವಿ ಈತ. ಇವನ ಮೂಲಸ್ಥಳ ಯಾವುದೆಂಬ ವಿಷಯದಲ್ಲಿ ಏಕಾಭಿಪ್ರಾಯವಿಲ್ಲ. ಉತ್ತರಭಾರತಕ್ಕೆ ಸೇರಿದವನೆಂಬುದಂತೂ ನಿರ್ವಿವಾದ. ಆದರೆ ಬಂಗಾಳದವನೋ ಕಾಶ್ಮೀರದವನೋ ಅಥವಾ ಕಾನ್ಯಕುಬ್ಜದವನೋ ಎಂದು ನಿಶ್ಚಯವಾಗಿ ತಿಳಿಯುತ್ತಿಲ್ಲ. ಈ ಎಲ್ಲ ಪ್ರದೇಶಗಳಿಗೆ ಸೇರಿದ್ದಿರಬಹುದೆಂಬುದಕ್ಕೆ ಅಷ್ಟಿಷ್ಟು ಆಧಾರಗಳನ್ನು ಇವನ ಕಾವ್ಯದಲ್ಲಿ ಕಾಣಬಹುದು. ಒಟ್ಟಿನಲ್ಲಿ ಶ್ರೀಹರ್ಷ ನಮ್ಮ ಹೆಮ್ಮೆಯ ಕವಿ. ಈತನ ತಂದೆ ಹೀರಪಂಡಿತ ಅಥವಾ ಶ್ರೀಹೀರ. ತಾಯಿ ಮಾಮಲ್ಲದೇವಿ. ಬಾಲ್ಯದಲ್ಲಿಯೇ ತನ್ನ ತಂದೆಯನ್ನು ಕಳೆದುಕೊಂಡಿದ್ದ ಶ್ರೀಹರ್ಷ ತಾಯಿಯ ಮಡಿಲಲ್ಲಿ ಬೆಳೆದನೆಂದೂ ಕೆಲವೇ ಕಾಲದೊಳಗೆ ಅವಳನ್ನೂ ಕಳೆದುಕೊಂಡನೆಂದೂ ಐತಿಹ್ಯಗಳುಂಟು. ಇವನ ಗುರು ಯಾರೆಂದು ನಮಗೆ ತಿಳಿಯದು. ವಿಂಧ್ಯಾಚಲವೆಂಬ ಶಕ್ತಿಪೀಠದ ದೇವಿ ವಿಂಧ್ಯವಾಸಿನಿಯ ಅನುಗ್ರಹದಿಂದ ಸಕಲ ಶಾಸ್ತ್ರಗಳಲ್ಲಿ ಕೋವಿದನಾದ ಶ್ರೀಹರ್ಷ ವಿದ್ವತ್ಕವಿಯೂ ಆದನೆಂಬ ಕಥೆಗಳುಂಟು.
ತಂದೆ ಹೀರಪಂಡಿತನು ಜಯಚಂದ್ರನ ಆಸ್ಥಾನಕ್ಕೆ ಸೇರಿದ್ದ ಉದಯನಾಚಾರ್ಯನೆಂಬ ನೈಯಾಯಿಕನ ಎದುರು ವಾದದಲ್ಲಿ ಸೋತು ಮನೋವೇದನೆಯಿಂದ ಕಣ್ಮುಚ್ಚಿದನಂತೆ. ಆತನ ಕೊನೆಗಾಲದ ಅಪೇಕ್ಷೆಯಂತೆ ಮಗ ಶ್ರೀಹರ್ಷ ಉದಯನಾಚಾರ್ಯನನ್ನು ತರ್ಕದಲ್ಲಿ ಗೆಲ್ಲಲು ಚಿಂತಾಮಣಿಮಂತ್ರದ ಮೂಲಕ ದೇವಿಯನ್ನು ಉಪಾಸನೆ ಮಾಡಿ ತಂದೆಯ ಆಸೆಯನ್ನು ತೀರಿಸಿದನೆಂದೂ ಐತಿಹ್ಯವಿದೆ. ಚಿಂತಾಮಣಿಮಂತ್ರದ ವಿವರಗಳನ್ನು ನೈಷಧೀಯಚರಿತದಲ್ಲಿಯೇ ನೋಡುತ್ತೇವೆ (೧೪.೮೮). ಇದಕ್ಕೆ ವ್ಯಾಖ್ಯಾನವನ್ನು ಬರೆದ ನಾರಾಯಣಪಂಡಿತನು ಈ ಮಂತ್ರದ ಒಳಹೊರಗನ್ನೆಲ್ಲ ಸುದೀರ್ಘವಾಗಿ ಬಣ್ಣಿಸಿದ್ದಾನೆ. ಅಷ್ಟೇಕೆ, ಈ ಕಾವ್ಯವೇ ‘ಚಿಂತಾಮಣಿಮಂತ್ರಚಿಂತನಫಲ’ (೧.೧೪೫) ಎಂದು ಕವಿ ಸಾರಿಕೊಂಡಿದ್ದಾನೆ. ಇದನ್ನು ಕುರಿತೂ ಕಥೆಯೊಂದಿದೆ. ಆ ಪ್ರಕಾರ ಗಂಡನನ್ನು ಕಳೆದುಕೊಂಡ ಮಾಮಲ್ಲದೇವಿ ತನ್ನ ಮಗನಿಗೆ ತಾನೇ ಚಿಂತಾಮಣಿಮಂತ್ರದ ಉಪದೇಶ ಮಾಡುತ್ತಾಳೆ. ಅದು ಬೇಗ ಸಿದ್ಧಿಯಾಗಲು ವಾಮತಂತ್ರದಿಂದ ಮಾತ್ರ ಸಾಧ್ಯ. ಇದಕ್ಕಾಗಿ ಶವದ ಮೇಲೆ ಕುಳಿತು ಮಂತ್ರವನ್ನು ಜಪಿಸಬೇಕು. ಹೀಗಾಗಿ ಅವಳು ಎಳೆಯ ಹುಡುಗ ಶ್ರೀಹರ್ಷನಿಗೆ, ‘ನೀನು ನನ್ನ ಮಡಿಲಿನಲ್ಲಿ ಕುಳಿತು ಜಪ ಮಾಡಬೇಕು; ದೇವಿಯ ಸಾಕ್ಷಾತ್ಕಾರ ಆಗುವವರೆಗೆ ಏಳಬಾರದು; ನನ್ನನ್ನು ಮಾತನಾಡಿಸಲೂಬಾರದು’ ಎಂದು ಕಟ್ಟಲೆ ಮಾಡಿ ತಾನು ಆತ್ಮಾರ್ಪಣೆ ಮಾಡಿಕೊಂಡಳಂತೆ. ತಾಯಿಯ ಸಾವನ್ನು ತಿಳಿಯದ ಹುಡುಗ ಶ್ರೀಹರ್ಷ ಅವಳ ಪಾರ್ಥಿವ ದೇಹದ ಮಡಿಲಿನಲ್ಲಿ ಕುಳಿತು ದೇವಿಯ ದರ್ಶನವಾಗುವವರೆಗೆ ಮಂತ್ರವನ್ನು ಜಪಿಸಿ ಸಿದ್ಧಿಯನ್ನು ಗಳಿಸಿದನಂತೆ. ಇಂಥ ಕಥೆಗಳ ತಾತ್ಪರ್ಯ ಇಷ್ಟೇ - ಶ್ರೀಹರ್ಷನಂಥ ವಿದ್ವತ್ಕವಿ ಸುಲಭದಲ್ಲಿ ಹುಟ್ಟುವುದಿಲ್ಲ; ಆ ಮಟ್ಟದ ಪಾಂಡಿತ್ಯ ಮತ್ತು ಕಲ್ಪನೆಗಳು ದೈವಾನುಗ್ರಹವಿಲ್ಲದೆ ಎಂಥವರಿಗೂ ಎಟುಕಲಾರವು.
ಹೀಗೆ ಕಾವ್ಯ-ಶಾಸ್ತ್ರಗಳ ನಿರ್ಮಾಣಕ್ಕೆ ಅತ್ಯವಶ್ಯವಾದ ಪ್ರತಿಭೆ-ಪಾಂಡಿತ್ಯಗಳನ್ನು ಗಳಿಸಿದ ಶ್ರೀಹರ್ಷ ಜಯಚಂದ್ರನ ಆಸ್ಥಾನಕ್ಕೆ ಹೋಗಿ ಉದಯನಾಚಾರ್ಯನೊಡನೆ ವಾದ ಮಾಡಿ ಗೆದ್ದನೆಂದು ತಿಳಿಸುವಂಥ ಕಥೆಯಿದೆ. ಅದಕ್ಕಂಟಿಬಂದಂತೆ ಹಲವು ಸೊಗಸಾದ ಚಾಟುಶ್ಲೋಕಗಳೂ ಇವೆ. (ಇಲ್ಲಿ ಪ್ರಸ್ತಾವಗೊಂಡಿರುವ ಉದಯನಾಚಾರ್ಯ ಪ್ರಾಚೀನ ನೈಯಾಯಿಕರಲ್ಲಿ ಅಗ್ರೇಸರನಾದ ಇದೇ ಹೆಸರಿನ ಮತ್ತೊಬ್ಬ ವಿದ್ವಾಂಸನಲ್ಲ.) ಈ ವಾದದಿಂದಲೂ ಆ ಹೊತ್ತಿನಲ್ಲಿ ಹೊಮ್ಮಿದ ಚಾಟುಪದ್ಯಗಳಿಂದ ಆಕರ್ಷಿತನಾದ ಜಯಚಂದ್ರ ಶ್ರೀಹರ್ಷನನ್ನು ತನ್ನ ಆಸ್ಥಾನದ ವಿದ್ವತ್ಕವಿಯಾಗಿ ನೇಮಿಸಿಕೊಂಡು ‘ನರಭಾರತಿ’ ಎಂಬ ಬಿರುದನ್ನು ಸಲ್ಲಿಸಿ ಸತ್ಕರಿಸಿದ. ಈ ಅವಧಿಯಲ್ಲಿ ರಾಜನು ಇವನಿಗೆ ವಿಶೇಷವಾದ ಆಸನದ ಮರ್ಯಾದೆ ನೀಡಿದ್ದಲ್ಲದೆ ಎರಡು ತಾಂಬೂಲಗಳನ್ನು ನೀಡಿ ಗೌರವಿಸುತ್ತಿದ್ದನಂತೆ. ಇದನ್ನು ಕವಿಯೇ ನೈಷಧೀಯದಲ್ಲಿ ಪ್ರಸ್ತಾವಿದಿದ್ದಾನೆ (೨೨.೧೫೩). ರಾಜಾಶ್ರಯದಲ್ಲಿ ಹಲವು ಕಾಲ ಮನ್ನಣೆ ಗಳಿಸಿದ ಶ್ರೀಹರ್ಷ ಜಯಚಂದ್ರನ ರಾಣಿಯೊಬ್ಬಳ ಅಸೂಯೆಗೆ ತುತ್ತಾಗಿ ಬೇಸರಗೊಂಡು ಅರಮನೆಯನ್ನು ತ್ಯಜಿಸಿದನೆಂದೂ ಐತಿಹ್ಯವಿದೆ. ಹೀಗೆ ವಿರಕ್ತನಾದ ಅವನು ಮುಂದೆ ಯತಿಯಾದನೆಂದೂ ಕಥೆಗಳಿವೆ.
ಜಯಚಂದ್ರನ ರಾಣಿಗೆ ‘ಕಲಾಭಾರತಿ’ ಎಂಬ ಬಿರುದಿತ್ತು. ತಾನು ಎಲ್ಲ ಕಲೆಗಳಲ್ಲಿ ನುರಿತವಳೆಂಬ ಗರ್ವ ಅವಳಿಗಿತ್ತು. ಈಗ ತನ್ನ ಕಣ್ಣಿಗೆ ಕಿಸುರಾಗುವಂತೆ ‘ನರಭಾರತಿ’ ಎನಿಸಿದ ಶ್ರೀಹರ್ಷನಿರುವುದನ್ನು ಅವಳು ತಾಳುವುದಾದರೂ ಹೇಗೆ? ಆದುದರಿಂದ ಅವಳು ಈ ಕವಿಗೊಂದು ಸ್ಪರ್ಧಾಹ್ವಾನವನ್ನು ನೀಡಿದಳು - ‘ನೀನು ನರಭಾರತಿ ಎನಿಸಿ ಎಲ್ಲ ಕಲೆಗಳಲ್ಲಿಯೂ ಕುಶಲಿಯಾಗಿದ್ದ ಪಕ್ಷದಲ್ಲಿ ನನಗೊಂದು ಜೊತೆ ಪಾದರಕ್ಷೆಗಳನ್ನು ಹೊಲಿದುಕೊಡು. ಇಲ್ಲವಾದರೆ ನಿನ್ನ ಈ ಬಿರುದನ್ನು ತ್ಯಜಿಸು’. ಇದನ್ನು ಧೈರ್ಯವಾಗಿ ಸ್ವೀಕರಿಸಿದ ಶ್ರೀಹರ್ಷ ತನ್ನ ವರ್ಣಧರ್ಮಕ್ಕೆ ಚ್ಯುತಿಯಾಗದಂತೆ ಜೊಂಡು ಮತ್ತು ರೇಷ್ಮೆಗಳಿಂದ ರಾಣಿ ಕೋರಿದ ಹಾಗೆ ಪಾದರಕ್ಷೆಗಳನ್ನು ಹೊಲಿದು ಗೆದ್ದದ್ದಲ್ಲದೆ ಇಂಥ ಸಣ್ಣಮನಸ್ಸಿನವರ ನಡುವೆ ಇರಬಾರದೆಂದು ಹೊರನಡೆದ ಸಂಗತಿ ಪೂರ್ವೋಕ್ತ ಕಥೆಯ ಸಾರಾಂಶ.
ಶ್ರೀಹರ್ಷ ಮತ್ತೂ ಹಲವು ಬಗೆಯಿಂದ ಆಕ್ಷೇಪಗಳಿಗೆ ತುತ್ತಾಗಬೇಕಾಯಿತು. ಅಂಥದ್ದರಲ್ಲೊಂದು ‘ಕಾವ್ಯಪ್ರಕಾಶ’ ಎಂಬ ಪ್ರಸಿದ್ಧ ಅಲಂಕಾರಶಾಸ್ತ್ರಗ್ರಂಥದ ಕರ್ತೃ ಮಮ್ಮಟನ ಕಟುವಿಮರ್ಶೆ. ಕೆಲವು ಕಥೆಗಳ ಪ್ರಕಾರ ಇವನು ಶ್ರೀಹರ್ಷನ ಸೋದರಮಾವ. ಇವುಗಳನ್ನೆಲ್ಲ ಒಳಗೊಂಡ ಹಲಕೆಲವು ಚಾಟುಶ್ಲೋಕಗಳು ವಿದ್ವದ್ವಲಯದಲ್ಲಿ ಮಾನಿತವಾಗಿವೆ. ತನ್ನ ಮಹಾಕಾವ್ಯ ನೈಷಧೀಯಚರಿತಕ್ಕೆ ಸರಸ್ವತಿಯ ಮಾನ್ಯತೆಯನ್ನು ಗಳಿಸಿಕೊಳ್ಳಲು ಶ್ರೀಹರ್ಷನು ಶಾರದಾಪೀಠವೆನಿಸಿದ ಕಾಶ್ಮೀರಕ್ಕೆ ಹೋಗಿದ್ದನೆಂಬ ಐತಿಹ್ಯವಿದೆ. ಅಲ್ಲಿ ರಾಜದರ್ಶನಕ್ಕಾಗಿ ಕಾದು ನಿರಾಶನಾದವನಿಗೆ ಅಂಥ ಅವಕಾಶ ದೊರೆಯುವಂಥ ಒಂದು ಸಂದರ್ಭ ಆಕಸ್ಮಿಕವಾಗಿ ದಕ್ಕಿತು. ಕಾಶ್ಮೀರದ ರಾಜಧಾನಿ ಪ್ರವರಪುರದ ಬಳಿ ಹರಿಯುವ ವಿತಸ್ತಾನದಿಯ ತೀರದಲ್ಲಿ ಚಿಂತಾಕ್ರಾಂತನಾಗಿ ಕುಳಿತಿದ್ದ ಕವಿಗೆ ನೀರಿಗೆಂದು ಬಂದಿದ್ದ ಇಬ್ಬರು ಹೆಂಗಸರ ಕಲಹ ಕಾಣಿಸಿತಂತೆ. ತೀರ ಪ್ರಕೋಪಕ್ಕೆ ಹೋದ ಆ ಜಗಳವನ್ನು ರಾಜಭಟರು ದೊರೆಯವರೆಗೂ ಕೊಂಡೊಯ್ದರು. ಆಗ ಅಲ್ಲಿದ್ದ ಒಬ್ಬನೇ ಸಾಕ್ಷಿ ಶ್ರೀಹರ್ಷನಿಗೆ ರಾಜಾಸ್ಥಾನಕ್ಕೆ ಹೋಗುವ ಅವಕಾಶ ಬಂದಿತು. ವಿಚಾರಣೆ ನಡೆದಾಗ ಅವನು ಆ ಇಬ್ಬರು ಹೆಂಗಸರ ಇಡಿಯ ಜಗಳದ ಮಾತುಗಳನ್ನು ತನ್ನ ಅಸಾಧಾರಣ ಧಾರಣಶಕ್ತಿಯಿಂದಲೇ ನಿರೂಪಿಸಿದನಂತೆ. ಶ್ರೀಹರ್ಷ ಅಂದಿನ ಕಾಶ್ಮೀರದ ಆಡುನುಡಿಯನ್ನು ಬಲ್ಲವನಲ್ಲ. ಇಂತಿದ್ದರೂ ಬರಿಯ ನೆನಪಿನಿಂದ ಎಲ್ಲವನ್ನೂ ಮಣಿ ಪೋಣಿಸಿದಂತೆ ಹೇಳಿದ ಆತನ ಜ್ಞಾಪಕಶಕ್ತಿಗೆ ಬೆರಗಾದ ದೊರೆ ಅವನಿಗೆ ಶಾರದಾಪೀಠಕ್ಕೆ ಹೋಗಲು ಅವಕಾಶ ನೀಡಿದ. ಅಲ್ಲಿಯಾದರೂ ಗೆಲವು ಸುಲಭವಾಗಲಿಲ್ಲ. ಅನೇಕ ಪಂಡಿತರ ನಿಶಿತ ಪರಿಕ್ಷೆಗೆ ಒಳಪಟ್ಟು ತೇರ್ಗಡೆಯಾಗಬೇಕಾಯಿತು. ಕಡೆಗೆ ಸರಸ್ವತಿಯೇ ಅವನನ್ನು ಆಕ್ಷೇಪಿಸಿದಳಂತೆ. ಏಕೆಂದರೆ ಶ್ರೀಹರ್ಷ ತನ್ನ ಕಾವ್ಯದಲ್ಲಿ ಒಂದೆಡೆ ಸರಸ್ವತಿಯನ್ನು ವಿಷ್ಣುಪತ್ನಿಯೆಂದು ಬಣ್ಣಿಸಿದ್ದ. ಆದರೆ ವಾಗ್ದೇವತೆಯ ಮುನಿಸಿಗೆ ಇವನು ಅಂಜಲಿಲ್ಲ. ವೇದವ್ಯಾಸರು ಬರೆದ ಹಲವು ಪುರಾಣಗಳಲ್ಲಿಯೇ ಇಂಥ ಒಕ್ಕಣೆ ಇರುವುದನ್ನು ಎತ್ತಿ ತೋರಿಸಿ ತನ್ನ ಮಾತುಗಳನ್ನು ಸಮರ್ಥಿಸಿಕೊಂಡನಂತೆ. ಅಂತೂ ಶಾರದೆಯ ಅನುಗ್ರಹ ಶ್ರೀಹರ್ಷನಿಗೆ ದಕ್ಕಿತು. ಇಂಥ ಐತಿಹ್ಯಗಳ ಹುರುಳಾದರೂ ನೈಷಧೀಯಚರಿತದ ವಿಲಕ್ಷಣ ಶೈಲಿ ಮತ್ತು ಪಾಂಡಿತ್ಯಗಳ ಕೊಂಡಾಟವೇ ಆಗಿದೆ.
ಶ್ರೀಹರ್ಷ ಬರಿಯ ಕವಿಯಲ್ಲ; ವಿದ್ವತ್ಕವಿ. ಕೇವಲ ವಿದ್ವತ್ಕವಿಯಷ್ಟೇ ಅಲ್ಲ; ಕಾವ್ಯ-ಶಾಸ್ತ್ರಗಳ ಹತ್ತಾರು ಗ್ರಂಥಗಳನ್ನು ಬರೆದ ಪ್ರಗಲ್ಭ ಲೇಖಕ. ಕವಿಯಾಗಿ ಎಷ್ಟು ಖ್ಯಾತಿ ಗಳಿಸಿರುವನೋ ತರ್ಕಪ್ರಧಾನವಾದ ವೇದಾಂತಿಯಾಗಿ ಕೂಡ ಅಷ್ಟೇ ಪ್ರಸಿದ್ಧಿ ಪಡೆದಿದ್ದಾನೆ. ಇವನ ಕಾವ್ಯಕೌಶಲಕ್ಕೆ ನೈಷಧೀಯಚರಿತ ಸಾಕ್ಷಿಯಾಗಿರುವಂತೆ ಅದ್ವೈತದರ್ಶನದ ತರ್ಕಕರ್ಕಶ ವಿದ್ವತ್ತೆಗೆ ‘ಖಂಡನಖಂಡಖಾದ್ಯ’ ನಿದರ್ಶನವಾಗಿದೆ. ಇವಲ್ಲದೆ ಈತ ‘ಸ್ಥೈರ್ಯವಿಚಾರಣಪ್ರಕರಣ’, ‘ಶಿವಶಕ್ತಿಸಿದ್ಧಿ’ ಮೊದಲಾದ ಶಾಸ್ತ್ರಗ್ರಂಥಗಳನ್ನೂ ‘ಛಿಂದಪ್ರಶಸ್ತಿ’, ‘ಶ್ರೀವಿಜಯಪ್ರಶಸ್ತಿ’, ‘ಗೌಡೋರ್ವೀಶಕುಲಪ್ರಶಸ್ತಿ’, ‘ಅರ್ಣವವರ್ಣನ’ ಮತ್ತು ‘ನವಸಾಹಸಾಂಕಚರಿತ’ ಮುಂತಾದ ಕಾವ್ಯಗಳನ್ನೂ ಬರೆದಂತೆ ನೈಷಧೀಯಚರಿತದ ಸರ್ಗಾಂತ್ಯಪದ್ಯಗಳಿಂದ ತಿಳಿಯುತ್ತದೆ.
ಒಟ್ಟಿನಲ್ಲಿ ಶ್ರೀಹರ್ಷ ಸಂಸ್ಕೃತಭಾಷೆ ಹೆಮ್ಮೆ ಪಡಬಹುದಾದ ಕವಿಪಂಡಿತ.
* * *
ನೈಷಧೀಯಚರಿತ ಸಂಸ್ಕೃತಸಾಹಿತ್ಯಜಗತ್ತಿನ ಐದು ಪ್ರಮುಖ ಮಹಾಕಾವ್ಯಗಳ ಪೈಕಿ ಒಂದು. ಕಾಲಕ್ರಮದಿಂದ ಕಡೆಯದು ಕೂಡ. ಇಪ್ಪತ್ತೆರಡು ಸರ್ಗಗಳ ಈ ಕೃತಿಯಲ್ಲಿ ೨೭೮೩ ಪದ್ಯಗಳಿವೆ. ಪ್ರತಿಯೊಂದು ಸರ್ಗವೂ ಸಾಕಷ್ಟು ನಿಡಿದಾಗಿದ್ದು ನೂರಕ್ಕೂ ಮಿಕ್ಕು ಪದ್ಯಗಳನ್ನು ಹೊಂದಿರುವುದುಂಟು. ಎಲ್ಲೋ ಒಂದೆರಡು ಸರ್ಗಗಳು ಮಾತ್ರ ನೂರರ ಅಂಕಿಯನ್ನು ಮುಟ್ಟಿಲ್ಲ. ಶ್ರೀಹರ್ಷ ತನ್ನ ಪೂರ್ವಸೂರಿಗಳ ಪದ್ಧತಿಯಲ್ಲಿ ನಡೆದಿದ್ದರೂ ಸಾಕಷ್ಟು ಅಂಶಗಳಿಂದ ಅವರಿಗಿಂತ ಬೇರೆಯದಾದ ಹಾದಿಯನ್ನು ತುಳಿದಿದ್ದಾನೆ. ಅಷ್ಟೇಕೆ, ಕೆಲಮಟ್ಟಿಗೆ ತನ್ನದಾದ ಹೊಸ ಹಾದಿಯನ್ನು ರೂಪಿಸಿಕೊಂಡಿರುವನೆಂದೂ ಹೇಳಬಹುದು. ಭಾರವಿಯ ‘ಕಿರಾತಾರ್ಜುನೀಯ’ವನ್ನು ಹಿಂಬಾಲಿಸಿ ಬಂದ ಮಾಘನ ‘ಶಿಶುಪಾಲವಧ’, ಶಿವಸ್ವಾಮಿಯ ‘ಕಪ್ಫಿಣಾಭ್ಯುದಯ’, ರತ್ನಾಕರನ ‘ಹರವಿಜಯ’, ಮಂಖನ ‘ಶ್ರೀಕಂಠಚರಿತ’ ಮುಂತಾದ ವಿದ್ವತ್ಕಾವ್ಯಗಳ ಏಕತಾನತೆಗಿಂತ ವಿಭಿನ್ನವೆನಿಸುವಂತೆ ನೈಷಧೀಯವನ್ನು ಶ್ರೀಹರ್ಷ ರೂಪಿಸಿರುವುದು ಗಮನಾರ್ಹ. ಈ ಕಾರಣದಿಂದಲೇ ಇಲ್ಲಿ ಪೂರ್ವೋಕ್ತ ಕಾವ್ಯಗಳ ಹೆಗ್ಗುರುತುಗಳಾದ ಅಷ್ಟಾದಶ ವರ್ಣನೆಗಳ ಯಾಂತ್ರಿಕ ವಿಸ್ತರ, ಮಂತ್ರ-ಪ್ರಯಾಣ-ಯುದ್ಧಗಳಂಥ ಅರ್ಥಶಾಸ್ತ್ರೀಯ ಅಂಶಗಳ ಬಣ್ಣನೆ, ಖಡ್ಗ-ಚಕ್ರ-ಮುರಜ-ಗೋಮೂತ್ರಿಕೆ-ಸರ್ವತೋಭದ್ರಗಳಂಥ ಗತಿಚಿತ್ರ-ಬಂಧಚಿತ್ರಗಳ ರಚನೆ, ಎಷ್ಟೋ ಅಪ್ರಸಿದ್ಧ ವೃತ್ತಗಳ ಬಳಕೆ ಮುಂತಾದುವು ಕಾಣಸಿಗುವುದಿಲ್ಲ. (ಶ್ರೀಕಂಠಚರಿತದಲ್ಲಿ ಚಿತ್ರಕಾವ್ಯ ಕಾಣಸಿಗುವುದಿಲ್ಲ.)
ಹಾಗೆಂದ ಮಾತ್ರಕ್ಕೆ ಇಲ್ಲಿ ವರ್ಣನೆಗಳು ಇಲ್ಲವೆಂದಲ್ಲ. ಕಥಾನಾಯಿಕೆ ದಮಯಂತಿಯ ರೂಪ-ಲಾವಣ್ಯಗಳ ಬಣ್ಣನೆಯ ನೂರಾರು ಪದ್ಯಗಳಿವೆ; ನಳನ ವನವಿಹಾರದ ವರ್ಣನೆ ಹಿತಮಿತವಾಗಿ ಬಂದಿದೆ; ಕುಂಡಿನಪುರದ ವರ್ಣನೆಯೂ ಆಕರ್ಷಕವಾಗಿದೆ; ಸೂರ್ಯೋದಯ ಮತ್ತು ಚಂದ್ರೋದಯಗಳ ಬಣ್ಣನೆ ಒಂದೊಂದು ಸರ್ಗದ ಆದ್ಯಂತ ಮೆರೆದಿದೆ; ನಳನ ದಿನಚರಿಯ ವಿವರಗಳು ನೂರಾರು ಪದ್ಯಗಳಲ್ಲಿ ವ್ಯಾಪಿಸಿವೆ. ಅಷ್ಟೇಕೆ, ದಮಯಂತಿಯ ಸ್ವಯಂವರ ಮತ್ತು ಮದುವೆಗಳ ವರ್ಣನೆ ಐದು ಸರ್ಗಗಳಷ್ಟು ವಿಸ್ತೃತವಾಗಿದೆ. ಆದರೆ ಇದೊಂದೂ ಇತಿವೃತ್ತಕ್ಕೆ ಹೊರಚ್ಚಾಗಿ ನಿಲ್ಲುವುದಿಲ್ಲ. ಕೇವಲ ಉದ್ದ ಹೆಚ್ಚಾಯಿತು, ಚಮತ್ಕಾರ ಅಳತೆ ಮೀರಿತು ಎಂದು ಆಕ್ಷೇಪಿಸಬಹುದು, ಅಷ್ಟೇ!
ನೈಷಧೀಯಚರಿತದ ಸ್ವಾರಸ್ಯಗಳಲ್ಲೊಂದು ಅದರಲ್ಲಿ ಬರುವ ಹತ್ತಾರು ಸಂಭಾಷಣೆಗಳ ಸೊಗಸು. ನಳ-ಹಂಸ, ಹಂಸ-ದಮಯಂತಿ, ನಾರದ-ಇಂದ್ರ, ಇಂದ್ರ-ನಳ, ದಮಯಂತಿ-ದೇವದೂತಿ, ನಳ-ದಮಯಂತಿ, ಕಲಿ-ದೇವತೆಗಳು, ದಮಯಂತಿ-ಸಖಿಯರು, ಇತ್ಯಾದಿ. ಇವುಗಳೊಂದೊಂದೂ ಸುದೀರ್ಘವಾಗಿವೆ, ಚಮತ್ಕಾರಭರಿತವಾಗಿವೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಪಾತ್ರಸ್ವಭಾವಕ್ಕೆ ಅನುಗುಣವಾದ ಮಾತುಗಳಿಗಿಂತ ಮಿಗಿಲಾಗಿ ಕವಿಯ ಬುದ್ಧಿಚಾತುರ್ಯವೇ ಎದ್ದುತೋರುವ ಕಾರಣ ಇವುಗಳಲ್ಲಿ ವ್ಯಕ್ತಿವೈವಿಧ್ಯದ ಸ್ವಾರಸ್ಯ ತಗ್ಗಿದೆ.
ಮಿಕ್ಕ ಮಹಾಕಾವ್ಯಗಳಲ್ಲಿ ಕಾಣಸಿಗದ ವಿವಿಧ ದರ್ಶನಗಳ ವೈನೋದಿಕ ಪರಾಮರ್ಶೆ ನೈಷಧೀಯದ ಹೆಗ್ಗುರುತುಗಳಲ್ಲೊಂದು. ಚಾರ್ವಾಕನ ಮೂಲಕ ಕವಿಯು ಮಾಡಿಸುವ ಈ ವಿಮರ್ಶಾಭಾಸ (ಸರ್ಗ ೧೭) ಆತನ ಪಾಂಡಿತ್ಯಕ್ಕೆ ಮಾತ್ರವಲ್ಲದೆ ವಿಲಕ್ಷಣ ಹಾಸ್ಯಪ್ರವೃತ್ತಿಗೂ ಒಳ್ಳೆಯ ನಿದರ್ಶನ. ಬಹುಶಃ ಜಯಂತಭಟ್ಟನ ‘ಆಗಮಡಂಬರ’ ಮತ್ತು ಕೃಷ್ಣಮಿಶ್ರನ ‘ಪ್ರಬೋಧಚಂದ್ರೋದಯ’ ರೂಪಕಗಳು ಈ ನಿಟ್ಟಿನಲ್ಲಿ ಶ್ರೀಹರ್ಷನಿಗೆ ಸ್ಫೂರ್ತಿಯಾಗಿರಬಹುದು. ಆದರೆ ವಿದ್ವತ್ತೆ ಮತ್ತು ವಿಡಂಬನೆಗಳಲ್ಲಿ ಇವರನ್ನೂ ಮೀರಿಸಿದ್ದಾನೆ. ಈ ಒಂದು ಸರ್ಗದಲ್ಲಿ ಮಾತ್ರವಲ್ಲದೆ ಮತ್ತೂ ಹಲವು ಸಂದರ್ಭಗಳಲ್ಲಿ ಕವಿ ತನ್ನ ವೇದ-ವೇದಾಂಗಗಳ, ಇತಿಹಾಸ-ಪುರಾಣಗಳ, ಆಸ್ತಿಕ-ನಾಸ್ತಿಕ ದರ್ಶನಗಳ ತಿಳಿವಳಿಕೆಯನ್ನು ವಿನೂತನವಾಗಿ ಮೆರೆಯಿಸಿದ್ದಾನೆ. ಇವನ್ನೆಲ್ಲ ಆಸಕ್ತರು ನೇರವಾಗಿ ಪರಿಶೀಲಿಸಿ ಅರಿಯಬೇಕಲ್ಲದೆ ಉದಾಹರಣೆಗಳನ್ನು ಕೊಟ್ಟು ವಿಸ್ತರಿಸಲು ಸಾಧ್ಯವಿಲ್ಲ. ಕೇವಲ ದಿಙ್ಮಾತ್ರವಾಗಿ ಒಂದೆರಡು ತುಣುಕನ್ನು ಪ್ರಸ್ತಾವಿಸಬಹುದು. ಶ್ರೀಹರ್ಷನು ದಮಯಂತಿಯ ನಡುವನ್ನು ಬಣ್ಣಿಸುವಾಗ ‘ದ್ವ್ಯಣುಕೋದರಿ’, ‘ತ್ರ್ಯಣುಕೋದರಿ’, ‘ಸದಸತ್ಸಂಶಯಗೋಚರೋದರಿ’ ಎಂದೆಲ್ಲ ಒಕ್ಕಣಿಸುತ್ತಾನೆ. ಈ ಮಾತುಗಳು ನ್ಯಾಯ-ವೈಶೇಷಿಕ ಶಾಸ್ತ್ರಗಳ ಹಿನ್ನೆಲೆ ಇಲ್ಲದೆ ಸ್ಪಷ್ಟವಾಗುವುದಿಲ್ಲ. ದಮಯಂತಿಯು ನಳವೇಷಧಾರಿಗಳಾಗಿದ್ದ ದೇವತೆಗಳನ್ನೆಲ್ಲ ತೊರೆದು ನಿಜವಾದ ನಳನನ್ನೇ ವರಿಸುವ ಪರಿಯನ್ನು ಕವಿಯು ಜಿಜ್ಞಾಸುವೊಬ್ಬನು ಜೈನ, ಬೌದ್ಧ, ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ ಮತ್ತು ಮೀಮಾಂಸೆಗಳಂಥ ವೇದಾಂತೇತರ ದರ್ಶನಗಳ ಕುಂದು-ಕೊರತೆಗಳನ್ನು ಅರಿತು ಕೇವಲಾದ್ವೈತತತ್ತ್ವವನ್ನು ಸಾಕ್ಷಾತ್ಕರಿಸಿಕೊಂಡು ಕೃತಾರ್ಥನಾಗುವ ಸಂದರ್ಭದೊಡನೆ ಹೋಲಿಸುತ್ತಾನೆ (೧೩.೩೬). ಇದನ್ನು ನಿರೂಪಿಸುವಾಗ ಅವನು ತೋರುವ ಶಬ್ದಾರ್ಥಗಳ ವೈಚಿತ್ರ್ಯ ಅಷ್ಟಿಷ್ಟಲ್ಲ. ಈ ಎಲ್ಲ ಸೂಕ್ಷ್ಮತೆಗಳನ್ನು ಅರಿಯಲು ಓದುಗರಿಗೆ ಸಮಸ್ತ ದರ್ಶನಗಳ ಪ್ರಮುಖ ಪ್ರಮೇಯಗಳೆಲ್ಲ ತಿಳಿದಿರಬೇಕಾಗುತ್ತದೆ. ಇಂಥ ಚಮತ್ಕಾರಗಳು ಸಾವಿರಾರು.
ಶ್ರೀಹರ್ಷನು ದರ್ಶನಶಾಸ್ತ್ರಗಳಲ್ಲಿ ಮಾತ್ರವಲ್ಲದೆ ಕಾವ್ಯ, ನಾಟ್ಯ, ಗೀತ ಮೊದಲಾದ ಕಲಾಪ್ರಕಾರಗಳಲ್ಲಿಯೂ ಪ್ರಜ್ಞಾಶಾಲಿ. ಅವನು ಈ ವಿದ್ಯೆಗಳ ತಿಳಿವನ್ನೂ ಸಂದರ್ಭೋಚಿತವಾಗಿ ಬಳಸಿಕೊಂಡಿದ್ದಾನೆ. ದಮಯಂತಿಯನ್ನು ಕಾವ್ಯರೀತಿಗಳಲ್ಲಿ ಒಂದಾದ ವೈದರ್ಭಿಗೆ ಹೋಲಿಸುವುದಾಗಲಿ, ನಾಟ್ಯಶಾಸ್ತ್ರದ ಪರಿಭಾಷೆಗಳಿಂದ ನಳನ ಮೂಲಕ ಅನುನಯಿಸುವುದಾಗಲಿ, ಅವಳ ಇನಿದನಿಯನ್ನು ಕೋಗಿಲೆಯ ಇಂಚರಕ್ಕಿಂತ ಮಿಗಿಲೆಂದು ಸಂಗೀತಶಾಸ್ತ್ರದ ಮೂಲಕ ಕೊಂಡಾಡುವುದಾಗಲಿ ಇವಕ್ಕೆ ನಿದರ್ಶನ. ಹೀಗೆಲ್ಲ ಕಲ್ಪಿಸುವಾಗ ಶಾಸ್ತ್ರದ ವಿವರಗಳನ್ನು ಶುಷ್ಕವಾಗಿ ಎಳತರದೆ ಸಭಂಗ-ಅಭಂಗ ಶ್ಲೇಷಗಳ ಮೂಲಕ, ಇಂಪಾದ ಪ್ರಾಸಾನುಪ್ರಾಸಗಳ ಮೂಲಕ ಎಟುಕಿಸಿಕೊಡುವುದು ಅವನ ವೈಶಿಷ್ಟ್ಯ. ಇನ್ನು ಭಾಷೆಯ ವಿಷಯಕ್ಕೆ ಬಂದರಂತೂ ಅವನೊಬ್ಬ ಶಬ್ದಬ್ರಹ್ಮ. ವ್ಯರ್ಥಪದದ ಸೋಂಕೂ ಇಲ್ಲದೆ ಅಪೂರ್ವ ಶಬ್ದಗಳ ಮೆರೆವಣಿಗೆಯನ್ನು ಮಾಡುತ್ತಲೇ ವಿನೂತನ ಚಮತ್ಕಾರವನ್ನು ಮೆರೆಯಬಲ್ಲ ಮಾತುಗಳ ತವನಿಧಿ ಅವನು. ಈ ಸಂದರ್ಭದಲ್ಲಿ ಅವನು ತೋರುವ ವ್ಯಾಕರಣಕೌಶಲವೂ ಅತ್ಯದ್ಭುತ. ಕರ್ಮಣಿ ಲುಙಂತ, ಯಙಂತ, ಯಙ್-ಲುಗಂತ, ಣಮುಲಂತವೇ ಮೊದಲಾದ ವಿದ್ವತ್ಪ್ರಿಯ ಆಖ್ಯಾತರೂಪಗಳನ್ನು ಆಕರ್ಷಕವಾಗಿ ಬಳಸುವುದರಲ್ಲಿ ಅವನಿಗೆ ಅವನೇ ಸಾಟಿ. ಇಂಥ ಕಠಿನ ಶಬ್ದಗಳನ್ನು ಒಂದಿಷ್ಟೂ ಶ್ರುತಿಕಟುವಾಗದಂತೆ ಬಳಸುವ ಬಲ್ಮೆ ಕೂಡ ಅವನೊಬ್ಬನದೇ. ಇವನ ಬಳಿಕ ಬಂದ ವೇದಾಂತದೇಶಿಕ, ನೀಲಕಂಠದೀಕ್ಷಿತ, ವೇಂಕಟಾಧ್ವರಿ, ಜಗನ್ನಾಥ ಮುಂತಾದ ಎಷ್ಟೋ ವಿದ್ವತ್ಕವಿಗಳಿಗೆ ಈ ನಿಟ್ಟಿನಲ್ಲಿ ಶ್ರೀಹರ್ಷನೇ ಮಾರ್ಗದರ್ಶಿ. ವ್ಯಾಕರಣಶಾಸ್ತ್ರವನ್ನು ಆಧರಿಸಿ ಅಶ್ವಘೋಷ, ಕಾಳಿದಾಸ, ಭಾರವಿ, ಮಾಘ ಮುಂತಾದ ಹಲವರು ಇವನಿಗಿಂತ ಮುನ್ನವೇ ಸಾಲಂಕೃತ ಪದ್ಯಗಳನ್ನು ರಚಿಸಿದ್ದರು. ಆದರೆ ಇವರನ್ನೂ ಮೀರಿಸುವಂತೆ ವಿಚಿತ್ರ ಕಲ್ಪನೆಗಳ ಚಮತ್ಕಾರಗಳನ್ನು ಮಾಡಿದ ಶ್ರೇಯಸ್ಸು ಇವನದು. ಇದಕ್ಕೆ ಇಡಿಯ ಕಾವ್ಯದಲ್ಲಿ ಅನೇಕ ನಿದರ್ಶನಗಳಿವೆ.
* * *
ಇನ್ನು ಈ ಕಾವ್ಯದ ಇತಿವೃತ್ತಕ್ಕೆ ಬರುವುದಾದರೆ, ಇದು ತನ್ನ ಹೆಸರಿನಿಂದಲೇ ತಿಳಿಸುವಂತೆ ನಿಷಧದೇಶದ ಒಡೆಯನಾದ ನಳನನ್ನು ಕುರಿತದ್ದು. ಅವನ ಮತ್ತು ವಿದರ್ಭರಾಜಪುತ್ರಿ ದಮಯಂತಿಯ ಪ್ರಣಯ ಮತ್ತು ಪರಿಣಯಗಳೇ ಈ ಕೃತಿಯ ಹೂರಣ. ಷೋಡಶ ಚಕ್ರವರ್ತಿಗಳಲ್ಲಿ ಒಬ್ಬನಾದ ನಳನ ಉಪಾಖ್ಯಾನ ಮಹಾಭಾರತದ ವನಪರ್ವದಲ್ಲಿ ಕಂಡುಬರುತ್ತದೆ. ಈ ಕಥೆ ಅನೇಕ ಕವಿಗಳಿಗೆ ಪ್ರೀತಿಪಾತ್ರವಾದುದು. ಇದನ್ನು ಆಧರಿಸಿ ಅಸಂಖ್ಯ ದೃಶ್ಯಕಾವ್ಯ-ಶ್ರವ್ಯಕಾವ್ಯಗಳು ಸಂಸ್ಕೃತದಲ್ಲಿ ಹುಟ್ಟಿವೆ. ಇದರಿಂದ ಪ್ರೇರಿತರಾದ ದೇಶಭಾಷಾಕವಿಗಳೂ ಸಾಕಷ್ಟು ಮಂದಿ ಇದ್ದಾರೆ. ರಾಮಾಯಣ, ಮಹಾಭಾರತ, ಬೃಹತ್ಕಥೆ, ಭಾಗವತ ಮತ್ತು ಶಿವಪುರಾಣಗಳ ಕಥೆಗಳ ಬಳಿಕ ನಳ-ದಮಯಂತಿಯರ ಜೀವನವೇ ನಮ್ಮ ಜನತೆಗೆ ಪ್ರಿಯವಾದುದು. ವ್ಯಾಸರ ಕಥಾನಕದಲ್ಲಿ ನಳ-ದಮಯಂತಿಯರ ಪರಿಣಯದ ಬಳಿಕ ಅವರ ಬದುಕಿನಲ್ಲಿ ಬಂದ ಮತ್ತೆಷ್ಟೋ ದುರ್ಭರ ಪ್ರಸಂಗಗಳ ಹಾಗೂ ಪರೀಕ್ಷೆಗಳ ವಿವರಗಳಿವೆ. ಇವೆಲ್ಲ ಯಾವುದೇ ದೇಶ-ಕಾಲಗಳ ಸಹೃದಯರಿಗೂ ತಾರಕವಾಗಬಲ್ಲ ಮೌಲ್ಯಗಳನ್ನು ಹೊಂದಿವೆ. ದುರ್ದೈವದಿಂದ ನಮ್ಮ ಹೆಚ್ಚಿನ ಕವಿಗಳು ಈ ‘ಉತ್ತರನೈಷಧೀಯ’ಕ್ಕೆ ಹೆಚ್ಚಿನ ಗಮನ ಕೊಟ್ಟಿಲ್ಲ. ಇದಕ್ಕೆ ಶ್ರೀಹರ್ಷನೂ ಹೊರತಲ್ಲ. ಬಹುಶಃ ಅವನ ಕಾವ್ಯವೇ ಇಂಥ ಪ್ರವೃತ್ತಿಗೆ ಪ್ರೇರಣೆ ನೀಡಿತೇನೋ. ಇಂತಿದ್ದರೂ ನೈಷಧೀಯಚರಿತದಲ್ಲಿ ನಳ-ದಮಯಂತಿಯರ ಪ್ರೇಮಪರೀಕ್ಷೆ ಆಗುವ ಅನನ್ಯ ರಸಗ್ರಂಥಿಯೊಂದು ವ್ಯಾಸರ ಪ್ರಸಾದದಿಂದ ಉಳಿದುಕೊಂಡು ಬಂದಿರುವುದು ಓದುಗರ ಪುಣ್ಯ. ಇಂದ್ರಾದಿ ದೇವತೆಗಳ ಪ್ರಣಯದೂತನಾಗಿ ನಳನು ತನ್ನ ಪ್ರೇಯಸಿಯ ಬಳಿಗೆ ತೆರಳುವ ಹಾಗೂ ದಮಯಂತಿ ಇಂಥ ದೇವತೆಗಳ ಕೈಹಿಡಿಯುವ ಪ್ರಲೋಭನೆಯನ್ನು ಮೀರುವ ಸತ್ತ್ವಪರೀಕ್ಷೆಯ ಈ ಒಂದು ಅಂಶವನ್ನು ಬಿಟ್ಟರೆ ಪ್ರಕೃತ ಕಾವ್ಯದಲ್ಲಿ ಸಹೃದಯರಿಗೆ ಭಾವೋನ್ನತಿಯನ್ನು ಉಂಟುಮಾಡಬಲ್ಲ ಮತ್ತೊಂದು ಘಟನೆ ಇಲ್ಲ. ದಿಟವೇ, ಹಂಸದ ಪ್ರಸಂಗ, ಸ್ವಯಂವರದ ಹುರಿಯಾಳುಗಳನ್ನು ಬಣ್ಣಿಸಲು ಸರಸ್ವತಿಯೇ ಬರುವ ಸಂದರ್ಭ, ಕಲಿ-ದ್ವಾಪರರ ಸಂಚಿನ ಹೊಂಚು ಮೊದಲಾದ ಮತ್ತೂ ಕೆಲವು ರಸಸ್ಯಂದಿ ಪ್ರಕರಣಗಳು ಇಲ್ಲಿವೆ. ಆದರೆ ಇವುಗಳ ಪರಿಣಾಮ ಸೀಮಿತ.
ನೈಷಧೀಯಚರಿತ ಇಪ್ಪತ್ತೆರಡು ಸರ್ಗಗಳ ಹರಹು ಹೀಗಿದೆ: ನಳನ ವ್ಯಕ್ತಿತ್ವ ಮತ್ತು ಆಳ್ವಿಕೆಯ ವರ್ಣನೆ, ಆತನ ವನವಿಹಾರ, ಆಗ ಕಂಡ ಹಂಸವನ್ನು ಹಿಡಿದ ಬಗೆ ಮತ್ತು ಸೆರೆಯಾದ ಹಕ್ಕಿಯ ಅಳಲು (ಸರ್ಗ ೧); ಕನಿಕರಿಸಿದ ದೊರೆ ಹಂಸಕ್ಕೆ ಸ್ವಾತಂತ್ರ್ಯವಿತ್ತಾಗ ಅದು ಕೃತಜ್ಞತೆಯಿಂದ ಅವನಿಗೆ ದಮಯಂತಿಯ ಚೆಲುವನ್ನು ಬಣ್ಣಿಸುವುದು, ಇವರಿಬ್ಬರ ಪ್ರಣಯಕ್ಕೆ ದೌತ್ಯ ವಹಿಸಲು ಮುಂದಾಗುವುದು, ಕುಂಡಿನಪುರದ ಬಣ್ಣನೆ (ಸರ್ಗ ೨); ಅಲ್ಲಿ ಉದ್ಯಾನವಿಹಾರ ಮಾಡುತ್ತಿದ್ದ ದಮಯಂತಿಯ ಬಣ್ಣನೆ, ಆಕೆಯನ್ನು ಆಕರ್ಷಿಸಿದ ಹಂಸದ ವಿಲಾಸ, ಅದನ್ನು ಹಿಡಿಯಲು ಅವಳ ಯತ್ನ, ತಾನಾಗಿ ಸೆರೆ ಸಿಲ್ಕಿದ ಆ ಹಕ್ಕಿಯಿಂದ ನಳನ ವರ್ಣನೆ, ದಮಯಂತಿಗೆ ಅವನಲ್ಲಿ ಪ್ರಣಯಾಂಕುರ (ಸರ್ಗ ೩); ನಳನಿಗೆ ಮರುಳಾದ ದಮಯಂತಿಯ ವಿರಹ, ಪ್ರಣಯಸಂತಪ್ತೆಯಾದ ಅವಳು ಮದನ, ಮಲಯಾನಿಲ, ಚಂದ್ರಾದಿಗಳನ್ನು ನಿಂದಿಸುವುದು, ಮಗಳ ಸ್ಥಿತಿಯನ್ನು ಗಮನಿಸಿದ ತಂದೆ ಭೀಮ ಮಹಾರಾಜನಿಂದ ಸ್ವಯಂವರದ ಏರ್ಪಾಡು (ಸರ್ಗ ೪); ದೇವಲೋಕ್ಕ ತೆರಳಿದ ನಾರದನಿಂದ ದಮಯಂತಿಯ ಬಣ್ಣನೆ, ಅವಳ ಸ್ವಯಂವರದ ವಾರ್ತೆಯನ್ನು ತಿಳಿದ ಇಂದ್ರ, ಅಗ್ನಿ, ಯಮ, ವರುಣರು ಕನ್ಯಾರ್ಥಿಗಳಾಗಿ ಭೂಮಿಗೆ ಬರುವುದು, ಅವರ ಹಾದಿಯಲ್ಲಿ ಎದುರಾದ ನಳನನ್ನು ಕಂಡು ಅವನನ್ನೇ ತಮ್ಮ ಪ್ರಣಯಕ್ಕೆ ದೂತನಾಗಲು ಬೇಡುವುದು, ನಳನ ಧರ್ಮಸಂಕಟ, ಇಲ್ಲವೆನ್ನಲಾಗದೆ ದೇವಕಾರ್ಯಕ್ಕೆ ಅವನು ಮುಂದಾಗುವುದು (ಸರ್ಗ ೫); ನಳನು ದಮಯಂತಿಯ ಅತಃಪುರಕ್ಕೆ ಅದೃಶ್ಯರೂಪದಲ್ಲಿ ಹೋಗುವುದು, ಅಲ್ಲಿಯ ವಿಶೇಷಗಳ ವರ್ಣನೆ, ವಿರಹಿಣಿ ದಮಯಂತಿಯ ಪರಿಸ್ಥಿತಿ, ಅವಳಲ್ಲಿಗೆ ಇಂದ್ರಾದಿಗಳು ಕಳುಹಿದ ದೇವದೂತಿಯ ಸಂದೇಶ ಮತ್ತದಕ್ಕೆ ಅವಳ ನಿರಾಕರಣೆಯ ಪ್ರತ್ಯುತ್ತರ, ಇದನ್ನೆಲ್ಲ ಕಂಡ ನಳ ಉತ್ಸುಕತೆಯಿಂದ ಅವಳಲ್ಲಿ ದೇವತೆಗಳ ಅನುರಾಗವನ್ನು ನಿವೇದಿಸುವುದು, ಈ ಮಾತಿಗೂ ದಮಯಂತಿಯ ಧೀರ ನಿರಾಕರಣೆ (ಸರ್ಗ ೬); ದಮಯಂತಿಯ ಪ್ರತ್ಯುತ್ತರದಿಂದ ನಳನಿಗಾದ ನೆಮ್ಮದಿ, ಇಂತಿದ್ದರೂ ತನ್ನ ಇಂಗಿತವನ್ನು ಹೇಳಿಕೊಳ್ಳಲು ಹಿಂಜರಿಯುವ ಅವನ ಹೊಯ್ದಾಟ (ಸರ್ಗ ೭); ಕಡೆಗೂ ನಳ ತನ್ನ ಪರಿಚಯವನ್ನು ಮಾಡಿಕೊಳ್ಳುವುದು, ದಮಯಂತಿಯು ತನ್ನನ್ನು ತೊರೆದು ದೇವತೆಗಳನ್ನು ವರಿಸಬೇಕೆಂದು ಅನುನಯಿಸುವುದು (ಸರ್ಗ ೮) ನಳನ ಮಾತನ್ನು ದಮಯಂತಿ ಒಪ್ಪದಿರುವುದು, ಆಗ ಇವರಿಬ್ಬರನ್ನು ಒಂದುಗೂಡಿಸಿದ ಹಂಸದ ಆಗಮನ, ಅದರ ನುಡಿಗಳಿಂದ ಪ್ರಣಯಿಗಳ ಸಂತೋಷ (ಸರ್ಗ ೯); ಸ್ವಯಂವರಕ್ಕೆ ಸನ್ನಾಹ, ಎಲ್ಲ ದೇಶಗಳಿಂದ, ಲೋಕಗಳಿಂದ ಕನ್ಯಾರ್ಥಿಗಳ ಆಗಮನ, ಇವರನ್ನೆಲ್ಲ ದಮಯಂತಿಗೆ ಪರಿಚಯಿಸಲು ಸ್ವಯಂ ಸರಸ್ವತಿಯೇ ಮುಂದಾಗುವುದು (ಸರ್ಗ ೧೦); ಸಪ್ತ ದ್ವೀಪಗಳ ಪೈಕಿ ಆರು ದ್ವೀಪಗಳ ರಾಜರ ವರ್ಣನೆ (ಸರ್ಗ ೧೧); ಜಂಬೂದ್ವೀಪದ ರಾಜರ ವರ್ಣನೆ (ಸರ್ಗ ೧೨), ‘ಪಂಚನಳೀಯ’ (ಸರ್ಗ ೧೩), ನಳನ ವೇಷದಲ್ಲಿ ಬಂದಿದ್ದ ಇಂದ್ರನೇ ಮೊದಲಾದ ದೇವತೆಗಳನ್ನು ತೊರೆದು ದಮಯಂತಿಯು ನಿಜವಾದ ನಳನನ್ನು ವರಿಸುವುದು, ಅವರಿಬ್ಬರ ಪರಿಶುದ್ಧ ಪ್ರೇಮವನ್ನು ಮೆಚ್ಚಿದ ದೇವತೆಗಳಿಂದ ಅನುಗ್ರಹ (ಸರ್ಗ ೧೪); ನಳ-ದಮಯಂತಿಯರ ವಿವಾಹ (ಸರ್ಗ ೧೫); ಮದುವೆಯ ದಿಬ್ಬಣ, ಊಟ, ಉಪಚಾರಗಳು, ವಧೂವರರು ನಿಷಧದೇಶಕ್ಕೆ ತೆರಳುವುದು (ಸರ್ಗ ೧೬); ಕಲಿಪುರುಷನ ಪ್ರವೇಶ, ಇಂದ್ರಾದಿಗಳ ಎಚ್ಚರಿಕೆಯನ್ನು ಕಡೆಗಣಿಸಿದ ಅವನು ನಳ-ದಮಯಂತಿಯರಿಗೆ ಕೇಡು ಮಾಡಲು ನಿಷಧದೇಶಕ್ಕೆ ಬಂದು ತಾರೆಮರವೊಂದರಲ್ಲಿ ಅವಿತು ಹೊಂಚುವುದು (ಸರ್ಗ ೧೭); ನಳ-ದಮಯಂತಿಯರ ಉತ್ತಾನ ಪ್ರಣಯದ ವರ್ಣನೆ (ಸರ್ಗ ೧೮); ವಂದಿ-ಮಾಗಧರಿಂದ ಸುಪ್ರಭಾತ (ಸರ್ಗ ೧೯); ಹೀಗೆ ಪ್ರಬೋಧಿಸಲ್ಪಟ್ಟ ನಳನು ದೇವಲೋಕದಿಂದ ತಾನೇ ತಂದ ದಿವ್ಯಕಮಲವೊಂದನ್ನು ದಮಯಂತಿಗೆ ಉಡುಗೊರೆಯಾಗಿ ನೀಡುವುದು, ಅವಳ ಸಖಿಯರ ಚದುರುನುಡಿಗಳು ಹಾಗೂ ನಳನ ಸರಸೋಕ್ತಿಗಳು (ಸರ್ಗ ೨೦); ನಳನ ಸ್ನಾನ-ಸಂಧ್ಯೆಗಳ ವರ್ಣನೆ, ಅವನು ಮಾಡುವ ದೇವತಾರ್ಚನೆ, ವಿವಿಧ ದೇವತೆಗಳ ಸ್ತುತಿ, ಬಳಿಕ ಅವನು ದಮಯಂತಿಯಲ್ಲಿಗೆ ಬಂದು ಬಗೆಬಗೆಯ ವಿನೋದಗಳಲ್ಲಿ ತೊಡಗುವುದು ಮತ್ತು ಸೂರ್ಯಾಸ್ತವರ್ಣನೆ (ಸರ್ಗ ೨೧); ನಳನ ಸಾಯಂಸಂಧ್ಯೆ, ಸತಿ-ಪತಿಗಳಿಂದ ಬಗೆಬಗೆಯಾಗಿ ಸಂಜೆಯ ಬಣ್ಣನೆ, ನಕ್ಷತ್ರೋನ್ಮೀಲನ, ಚಂದ್ರೋದಯ ಹಾಗೂ ಗ್ರಂಥಪ್ರಶಸ್ತಿ (ಸರ್ಗ ೨೨).