ಶ್ಯಾಮಿಲಕ
ಗುಪ್ತಯುಗದ ಮತ್ತೊಬ್ಬ ವಿಶಿಷ್ಟಕವಿ ಶ್ಯಾಮಿಲಕ. ಈತನದಾಗಿ ನಮಗೆ ಉಳಿದಿರುವುದು “ಪಾದತಾಡಿತಕ” ಎಂಬ ಭಾಣವೊಂದೇ. ಇದೊಂದು ರೂಪಕವೇ ಅವನ ಪ್ರತಿಭೆ-ವ್ಯುತ್ಪತ್ತಿಗಳನ್ನೂ ಲೋಕಪರಿಜ್ಞಾನವನ್ನೂ ಸಮರ್ಥವಾಗಿ ತಿಳಿಸುತ್ತದೆ. ಇದರ ಪ್ರಸ್ತಾವನೆಯಲ್ಲಿ ಅವನಾಡುವ ಎರಡು ಮಾತುಗಳು ಕಾವ್ಯಮೀಮಾಂಸೆಯ ದೃಷ್ಟಿಯಿಂದ ಮಹತ್ತ್ವದ್ದಾಗಿವೆ.
ಮೊದಲಿಗೆ ಆಲಂಕಾರಿಕರು ಹೇಳುವ “ಪದಪಾಕ”ವನ್ನು ಅವನು ವ್ಯಾಪಕಾರ್ಥದಲ್ಲಿ ಸಮಗ್ರಕಾವ್ಯಕ್ಕೆ ಅನ್ವಯಿಸಿ ಕಂಡಿರುವ ಪರಿ ಸ್ಮರಣೀಯ:
ಇದಮಿಹ ಪದಂ ಮಾ ಭೂದೇವಂ ಭವತ್ವಿದಮನ್ಯಥಾ
ಕೃತಮಿದಮಯಂ ಗ್ರಂಥೇನಾರ್ಥೋ ಮಹಾನುಪಪಾದಿತಃ |
ಇತಿ ಮನಸಿ ಯಃ ಕಾವ್ಯಾರಂಭೇ ಕವೇರ್ಭವತಿ ಶ್ರಮಃ
ಸನಯನಜಲೋ ರೋಮೋದ್ಭೇದಃ ಸತಾಂ ತಮಪೋಹತಿ || (೩)
ಈ ಪದವು ಹೀಗಿಲ್ಲದಿರಲಿ; ಇದು ಬೇರೊಂದು ಬಗೆಯಾಗಿರಲಿ; ಇಂಥ ಸಂಯೋಜನೆಯಿಂದ ವಿಶೇಷವಾದ ಸ್ವಾರಸ್ಯವುಂಟಾಗಿದೆ. ಹೀಗೆ ಕಾವ್ಯರಚನಾವಸರದಲ್ಲಿ ಕವಿಗೆ ಯಾವ ಪರಿಶ್ರಮ ಉಂಟಾಗುವುದೋ ಅದು ಸಹೃದಯರ ರೋಮಾಂಚ ಮತ್ತು ಆನಂದಬಾಷ್ಪಗಳಿಂದ ನೀಗುತ್ತದೆ.
ಪ್ರಸ್ತುತಪದ್ಯದಲ್ಲಿ ಶ್ಯಾಮಿಲಕನು ಪದದಿಂದ ಮೊದಲ್ಗೊಂಡು ಪ್ರಬಂಧರಚನೆಯವರೆಗೆ ಎಲ್ಲ ಹಂತಗಳನ್ನೂ ಸೂಚಿಸಿದ್ದಾನೆ. ಈ ಪದ್ಯದ ಉತ್ತರಾರ್ಧವನ್ನು ವಿಜ್ಜಿಕೆಯಂಥ ಪರವರ್ತಿ ಕವಯಿತ್ರಿಯೂ ಬಳಸಿಕೊಂಡಿರುವುದು ಸ್ಮರಣೀಯ.[1] ಅಲ್ಲದೆ ಪ್ರತಿಯೊಂದು ಹಂತದಲ್ಲಿಯೂ ಶಬ್ದಾರ್ಥಗಳ ವಿನಿಯೋಗ ಹೇಗಿರಬೇಕೆಂಬ ವಿಮರ್ಶನಪೂರ್ವಕವಾದ ಹೊಯ್ದಾಟವನ್ನು ಚೆನ್ನಾಗಿ ಬಿಂಬಿಸಿದ್ದಾನೆ. ಇದನ್ನು ಭಾಮಹ, ರಾಜಶೇಖರ ಮುಂತಾದ ಆಲಂಕಾರಿಕರು ಚರ್ಚಿಸಿರುವುದು ಉಲ್ಲೇಖನೀಯ:
ಹೇಗೆ ಹೂವಳಿಗನು ಸೊಗಸಾದ ಹೂಗಳನ್ನು ಹುಡುಕಿ ಹುಡುಕಿ ಮಾಲೆಯನ್ನು ಕಟ್ಟುವನೋ ಹಾಗೆಯೇ ಸುಕವಿಯು ತನ್ನ ಕಾವ್ಯಗುಂಫನವನ್ನು ಯುಕ್ತವಾದ ಪದಗಳಿಂದಲೇ ಸಾವಧಾನವಾಗಿ ಸಾಗಿಸಬೇಕೆಂಬುದು ಭಾಮಹನ ಕಿವಿಮಾತು.[2]
ರಾಜಶೇಖರನು ಪದಪಾಕ-ವಾಕ್ಯಪಾಕಗಳನ್ನೆಲ್ಲ ವಿಶದವಾಗಿ ಚರ್ಚಿಸಿದ್ದಾನೆ. ತನ್ನ ಪೂರ್ವಾಚಾರ್ಯರ ಮತ್ತು ಸಮಕಾಲೀನರ ಅಭಿಪ್ರಾಯಗಳನ್ನು ಉಲ್ಲೇಖಿಸಿ ಒಳ್ಳೆಯ ನಿರ್ಣಯಕ್ಕೆ ಬಂದಿದ್ದಾನೆ. ಅಲ್ಲಿಯ ಕೆಲವೊಂದು ಮಾತುಗಳು ಸ್ಮರಣೀಯವಾಗಿವೆ:[3]
ಎಲ್ಲಿಯವರೆಗೆ ಮನಸ್ಸಿಗೆ ಹೊಯ್ದಾಟವಿರುವುದೋ ಅಲ್ಲಿಯವರೆಗೆ ಪದಗಳನ್ನು ಬಳಸುವಲ್ಲಿ, ಬಿಡುವಲ್ಲಿ ಗೊಂದಲವಿರುತ್ತದೆ. ಯಾವಾಗ ಪದನಿಶ್ಚಯವಾಗುವುದೋ ಆಗ ಸಾಹಿತ್ಯ ಸಿದ್ಧವಾಗುತ್ತದೆ.
ಯಾವಾಗ ಪದಗಳು ತಮ್ಮ ಪ್ರಯೋಗದಲ್ಲಿ ಪರ್ಯಾಯಗಳನ್ನು ಸಹಿಸದಂತೆ ಆಗುವುವೋ ಅಂಥ ಹದವನ್ನು ವಿದ್ವಾಂಸರು ಪದಪಾಕವೆಂದು ಹೇಳುತ್ತಾರೆ.
ಗುಣ, ರೀತಿ, ಅಲಂಕಾರಾದಿಗಳ ಮೂಲಕ ವಾಗರ್ಥಗಳನ್ನು ಹೊಂದಿಸುವ ಯಾವ ಕ್ರಮದಿಂದ ಸಹೃದಯರಿಗೆ ಸಂತೋಷವಾಗುವುದೋ ಅದೇ ವಾಕ್ಯಪಾಕವೆಂದು ನಮ್ಮ ಅಭಿಪ್ರಾಯ.
ಹೀಗೆ ಶ್ಯಾಮಿಲಕನ ಮಾತು ಪರವರ್ತಿವಿದ್ವಾಂಸರಿಗೆ ದಾರಿದೀವಿಗೆಯಾಗಿದೆಯೆಂದರೆ ಅತಿಶಯವಲ್ಲ. ಕವಿಯು ಮತ್ತೊಂದು ಪದ್ಯದಲ್ಲಿ ಜೀವನದಲ್ಲಿಯೂ ಸಾಹಿತ್ಯದಲ್ಲಿಯೂ ಹಾಸ್ಯಕ್ಕಿರುವ ಮಹತ್ತ್ವವನ್ನು ಧೀರೋದಾರವಾಗಿ ಸಾರಿದ್ದಾನೆ:
ನ ಪ್ರಾಪ್ನುವಂತಿ ಯತಯೋ ರುದಿತೇನ ಮೋಕ್ಷಂ
ಸ್ವರ್ಗಾಯತಿಂ ನ ಪರಿಹಾಸಕಥಾ ರುಣದ್ಧಿ |
ತಸ್ಮಾತ್ಪ್ರತೀತಮನಸಾ ಹಸಿತವ್ಯಮೇವ
ವೃತ್ತಿಂ ಬುಧೇನ ಖಲು ಕೌರುಕುಚೀಂ ವಿಹಾಯ || (೫)
ಸಂನ್ಯಾಸಿಗಳು ಗೋಳಾಡಿ ಮೋಕ್ಷವನ್ನು ಪಡೆಯುವುದಿಲ್ಲ; ನಗೆಮಾತುಗಳು ಸ್ವರ್ಗಸಂಪಾದನೆಯನ್ನು ತಡೆಯುವುದೂ ಇಲ್ಲ. ಆದುದರಿಂದ ವಿವೇಕಿಗಳು ಬಿಂಕ-ಬಿಗುಮಾನ ಬಿಟ್ಟು ತಿಳಿಯಾದ ಮನಸ್ಸಿನಿಂದ ನಕ್ಕು ಹಗುರಾಗಲೇಬೇಕು.
ಇದಂತೂ ಸಾವಿರ ಕಾಲ ಬಾಳುವ ಮಹಾವಾಕ್ಯ. ಇಲ್ಲಿ ಶ್ಯಾಮಿಲಕನು ಹಾಸ್ಯರಸದ ನೆವದಿಂದ ಇಡಿಯ ಕಾವ್ಯಕಲೆಯನ್ನೇ ಸಮರ್ಥಿಸಿದ್ದಾನೆ. ಏಕೆಂದರೆ, ಆ ವೇಳೆಗಾಗಲೇ ಪ್ರಬಲರಾಗಿದ್ದ ಮಡಿವಂತ ಮೀಮಾಂಸಕರು ಕಾವ್ಯಾಲಾಪಾಂಶ್ಚ ವರ್ಜಯೇತ್ ಎಂದು ಫತ್ವಾಗಳನ್ನು ಹೊರಡಿಸಿದ್ದರಷ್ಟೆ! ಇವರ ಆಗ್ರಹಗಳನ್ನು ಸಮರ್ಥವಾಗಿ ಪೂರ್ವಪಕ್ಷೀಕರಿಸಲು ಅಷ್ಟೇ ತೀಕ್ಷ್ಣವಾದ ಪ್ರತಿಕ್ರಿಯೆ ಬೇಕಿತ್ತು. ಮುಂದಿನ ಎಷ್ಟೋ ಮಂದಿ ಆಲಂಕಾರಿಕರೂ ಕಾವ್ಯವ್ಯಾಖ್ಯಾತೃಗಳೂ ತಮ್ಮ ಉಪಕ್ರಮಗಳಲ್ಲಿ ಪೂರ್ವೋಕ್ತವಾಕ್ಯವನ್ನು ಉಲ್ಲೇಖಿಸಿ ಅದಕ್ಕೆ ಭಯ-ಭಕ್ತಿಗಳಿಂದ ಪ್ರತ್ಯುತ್ತರಗಳನ್ನು ಮುಂದಿಡುವ ಸಾಹಸ ಮಾಡುತ್ತಿದ್ದರೆ ಅವರೆಲ್ಲರಿಗಿಂತ ಮೊದಲೇ ಶ್ಯಾಮಿಲಕನು ಚುರುಕಾದ ಪ್ರತ್ಯಾಕ್ಷೇಪವನ್ನು ಮಾಡಿ ಮುಗಿಸಿದ್ದಾನೆ! ಇದು ಸನಾತನಧರ್ಮದ ಅರ್ಥವಂತಿಕೆಯನ್ನೂ ತೋರುತ್ತದೆ; ಅಷ್ಟೇ ಅಲ್ಲದೆ ಗುಪ್ತರ ಸುವರ್ಣಯುಗದಲ್ಲಿ ಸಮಾಜಕ್ಕಿದ್ದ ಸರ್ವತೋಮುಖಸ್ವಾಸ್ಥ್ಯವನ್ನು ಧ್ವನಿಸುತ್ತದೆ.
ರಸಾದ್ವಾದಕ್ಕೆ ಮುಖ್ಯವಾಗಿ ಬೇಕಾಗಿರುವುದು ಬಿಂಕ-ಬಿಗುಮಾನಗಳಿಲ್ಲದ ನಿರಾಗ್ರಹಮನಸ್ಸು. ಕಲಾಸ್ವಾದವನ್ನು ಯಾವುದೇ ಅಪರಾಧಪ್ರಜ್ಞೆಯಿಂದ ಮಾಡಬೇಕಿಲ್ಲ. ವಸ್ತುತಃ ಬ್ರಹ್ಮಾಸ್ವಾದಸಹೋದರವೆನಿಸಿದ ರಸೋಪಾಸನೆಗೆ ಅನಿವಾರ್ಯವಾದದ್ದು ಮೇಲರಿಮೆ-ಕೀಳರಿಮೆಗಳಿಲ್ಲದ ಮನಃಸ್ಥಿತಿ. ವಿಶೇಷತಃ ಸಮಕಾಲೀನಸಮಾಜವನ್ನು ಚಿಕಿತ್ಸಕವಾಗಿ ನೋಡಿ ಅಲ್ಲಿಯ ಓರೆ-ಕೋರೆಗಳನ್ನು ಹಾಸ್ಯದ ಮೂಲಕ ಸತ್ಕವಿಯು ಬಿಂಬಿಸಿದಾಗಲಂತೂ ಅದನ್ನೆಲ್ಲ ಗ್ರಹಿಸಲು ಮಿಗಿಲಾದ ಸಮಾಹಿತಪ್ರಜ್ಞೆ ಬೇಕು. ಹೇಳಿ ಕೇಳಿ ಹಾಸವೆಂಬ ಭಾವದಿಂದ ಹುಟ್ಟುವ ಹಾಸ್ಯಕ್ಕೆ ಲೋಕಸ್ಪರ್ಶ ಅನಿವಾರ್ಯ. ಈ ಕಾರಣದಿಂದಲೇ ಇದರ ಸರ್ಜನ-ಆಸ್ವಾದನಗಳಲ್ಲಿ ಹೆಚ್ಚಿನ ಪ್ರಬುದ್ಧತೆ ಆವಶ್ಯಕ. ಪ್ರಾಯಶಃ ಇದನ್ನು ಗಾಢವಾಗಿ ಅನುಸಂಧಾನಿಸದ ಕಾರಣದಿಂದಲೇ ನಮ್ಮ ಸಾಹಿತ್ಯದಲ್ಲಿ ಹಾಸ್ಯಕ್ಕೆ ಇಳಿಗಾಲ ಬಂದಿರುವುದುಂಟು. ಈ ಎಲ್ಲ ಹಿನ್ನೆಲೆಯಲ್ಲಿ ಶ್ಯಾಮಿಲಕನ ಹಿತಕಥನ ಆಲಂಕಾರಿಕರಿಗೆ ಅನುಸಂಧೇಯ.
ಭಾರವಿ
ಕಾಳಿದಾಸನ ಬಳಿಕ ಸಂಸ್ಕೃತದ ಕಥನಕಾವ್ಯನೌಕೆಯ ಚುಕ್ಕಾಣಿಯನ್ನು ಹಿಡಿದು ನಡಸಿದವನು ಭಾರವಿಯೊಬ್ಬನೇ. ಅವನ ಪರವರ್ತಿಗಳೆಲ್ಲ ನಿರಪವಾದವೆಂಬಂತೆ ಈತನ ಅಡಿಜಾಡಿನಲ್ಲಿಯೇ ನಡೆದರು. ಅರ್ಥಗೌರವಕ್ಕೆ ಹೆಸರಾದ ಭಾರವಿ ತನ್ನ ಕೃತಿಯ ಕೆಲವೆಡೆಗಳಲ್ಲಿ ಕಾವ್ಯಮೀಮಾಂಸೆಯ ಹೊಳಹುಗಳನ್ನು ನೀಡಿದ್ದಾನೆ. ಇವೆಲ್ಲ ಪ್ರಾಯಿಕವಾಗಿ ಅರ್ಥಗೌರವ ಮತ್ತು ಅರ್ಥವೈಮಲ್ಯಗಳಿಗೇ ಸಂಬಂಧಿಸಿರುವುದು ಆಕಸ್ಮಿಕವೇನಲ್ಲ. ಇವನ್ನೀಗ ಅವಲೋಕಿಸೋಣ.
ಯುಧಿಷ್ಠಿರನು ಭೀಮನ ಆವೇಶವನ್ನು ಉಪಶಮಿಸುತ್ತ ಅವನ ಮಾತಿನ ಕ್ರಮವನ್ನು ಮೆಚ್ಚಿಕೊಳ್ಳುತ್ತಾನೆ[4]:
ಅಪವರ್ಜಿತವಿಪ್ಲವೇ ಶುಚೌ
ಹೃದಯಗ್ರಾಹಿಣಿ ಮಂಗಲಾಸ್ಪದೇ |
ವಿಮಲಾ ತವ ವಿಸ್ತರೇ ಗಿರಾಂ
ಮತಿರಾದರ್ಶ ಇವಾಭಿದೃಶ್ಯತೇ ||
ಸ್ಫುಟತಾ ನ ಪದೈರಪಾಕೃತಾ
ನ ಚ ನ ಸ್ವೀಕೃತಮರ್ಥಗೌರವಮ್ |
ರಚಿತಾ ಪೃಥಗರ್ಥತಾ ಗಿರಾಂ
ನ ಚ ಸಾಮರ್ಥ್ಯಮಪೋಹಿತಂ ಕ್ವಚಿತ್ ||
ಉಪಪತ್ತಿರುದಾಹೃತಾ ಬಲಾ-
ದನುಮಾನೇನ ನ ಚಾಗಮಃ ಕ್ಷತಃ |
ಇದಮೀದೃಗನೀದೃಗಾಶಯಃ
ಪ್ರಸಭಂ ವಕ್ತುಮುಪಕ್ರಮೇತ ಕಃ || (ಕಿರಾತಾರ್ಜುನೀಯ, ೨.೨೬–೨೮)
ತರ್ಕಬದ್ಧ, ಶುದ್ಧ, ಸುಂದರ ಮತ್ತು ಮಂಗಳಕರವಾದ ಈ ನಿನ್ನ ಮಾತುಗಳ ವಿಸ್ತರದಲ್ಲಿ ನಿನ್ನದೇ ವಿಮಲಬುದ್ಧಿಯು ಕೊಳಕಿಲ್ಲದೆ ಹೊಳೆಹೊಳೆಯುವ ಚೆಲುವಾದ ಮಾಂಗಲಿಕದರ್ಪಣದಲ್ಲಿ ಪ್ರತಿಫಲಿಸುವಂತೆ ವಿಶದವಾಗಿ ತೋರುತ್ತಿದೆ.
ಪದಗಳಲ್ಲಿ ಸ್ಪಷ್ಟತೆಯು ದೂರವಾಗಿಲ್ಲ; ಅರ್ಥದ ಘನತೆಯು ಉಪೇಕ್ಷಿತವಾಗಿಲ್ಲ. ಪ್ರತಿಯೊಂದು ಮಾತೂ ಬಿಡಿಬಿಡಿಯಾಗಿ, ಅರ್ಥವನ್ನು ಮೈದುಂಬಿಕೊಂಡು ಪ್ರಸ್ಫುಟವೆನಿಸಿದೆ. ಇಷ್ಟೇ ಅಲ್ಲದೆ ಎಲ್ಲಿಯೂ ಮಾತಿನ ಕಸುವು ಕಡಮೆಯಾಗಿಲ್ಲ.
ಗಟ್ಟಿಯಾದ ಆಧಾರಗಳು ಕೂಡಿಕೊಂಡಿರುವುದಲ್ಲದೆ ತರ್ಕಬಲವೇ ಹೆಚ್ಚಾಗಿ ಶಾಸ್ತ್ರಕ್ಕೆ ಚ್ಯುತಿ ಬಂದಿಲ್ಲ. ನೀನಲ್ಲದೆ ಯಾರು ತಾನೆ ಇಂಥ ಯುಕ್ತಿಯುಕ್ತವಾದ ಮಾತುಗಳನ್ನು ಹೀಗೆ ಪ್ರಸ್ತುತಪಡಿಸಬಲ್ಲರು?
[1] ಕವೇರಭಿಪ್ರಾಯಮಶಬ್ದಗೋಚರಂ
ಸ್ಫುರಂತಮಾರ್ದ್ರೇಷು ಪದೇಷು ಕೇವಲಮ್ |
ವದದ್ಭಿರಂಗೈಃ ಕೃತರೋಮವಿಕ್ರಿಯೈ-
ರ್ಜನಸ್ಯ ತೂಷ್ಣೀಂಭವತೋऽಯಮಂಜಲಿಃ || (ಸುಭಾಷಿತಾವಲಿ, ಶ್ಲೋಕಸಂಖ್ಯೆ ೧೫೮, ಪು. ೨೫)
[2] ಏತದ್ಗ್ರಾಹ್ಯಂ ಸುರಭಿ ಕುಸುಮಂ ಗ್ರಾಮ್ಯಮೇತನ್ನಿಧೇಯಂ
ಧತ್ತೇ ಶೋಭಾಂ ವಿರಚಿತಮಿದಂ ಸ್ಥಾನಮಸ್ತ್ಯೈತದಸ್ಯ |
ಮಾಲಾಕಾರೋ ರಚಯತಿ ಯಥಾ ಸಾಧು ವಿಜ್ಞಾಯ ಮಾಲಾಂ
ಯೋಜ್ಯಂ ಕಾವ್ಯೇಷ್ವವಹಿತಧಿಯಾ ತದ್ವದೇವಾಭಿಧಾನಮ್ || (ಕಾವ್ಯಾಲಂಕಾರ, ೧.೫೯)
[3] ಆವಾಪೋದ್ಧರಣೇ ತಾವದ್ಯಾವದ್ದೋಲಾಯತೇ ಮನಃ | ಪದಾನಾಂ ಸ್ಥಾಪಿತೇ ಸ್ಥೈರ್ಯೇ ಹಂತ ಸಿದ್ಧಾ ಸರಸ್ವತೀ ||
ಯತ್ಪದಾನಿ ತ್ಯಜಂತ್ಯೇವ ಪರಿವೃತ್ತಿಸಹಿಷ್ಣುತಾಮ್ | ತಂ ಶಬ್ದನ್ಯಾಸನಿಷ್ಣಾತಾಃ ಶಬ್ದಪಾಕಂ ಪ್ರಚಕ್ಷತೇ ||
ಗುಣಾಲಂಕಾರರೀತ್ಯುಕ್ತಿಶಬ್ದಾರ್ಥಗ್ರಥನಕ್ರಮಃ | ಸ್ವದತೇ ಸುಧಿಯಾಂ ಯೇನ ವಾಕ್ಯಪಾಕಃ ಸ ಮಾಂ ಪ್ರತಿ ||
(ಕಾವ್ಯಮೀಮಾಂಸಾ, ಪು. ೨೦)
[4] ಹೀಗೆ ಪಾತ್ರವೊಂದು ಮತ್ತೊಂದು ಪಾತ್ರದ ಮಾತುಗಾರಿಕೆಯನ್ನು ಮೆಚ್ಚಿಕೊಳ್ಳುವ ಮೂಲಕ ವಚನ-ರಚನೆಗಳ ಸೊಗಸನ್ನು ವಿಸ್ತರಿಸುವುದು ಆದಿಕಾವ್ಯದಲ್ಲಿಯೇ ಕಂಡುಬರುತ್ತದೆ. ಉದಾಹರಣೆಗೆ: ರಾಮ-ಲಕ್ಷ್ಮಣರನ್ನು ಮೊದಲ ಬಾರಿಗೆ ಕಂಡು ನುಡಿಸಿದ ಹನೂಮಂತನ ಮಾತುಗಾರಿಕೆಯನ್ನು ಶ್ರೀರಾಮನು ಹಲವು ಬಗೆಯಿಂದ ಮೆಚ್ಚಿಕೊಳ್ಳುತ್ತಾನೆ (೪.೩.೨೭–೩೩). ಇಲ್ಲಿಯ ಕೆಲವು ಮಾತುಗಳು ವಾಕ್ಸೌಂದರ್ಯಕ್ಕೂ ಮತ್ತೆ ಕೆಲವು ಉಚ್ಚಾರಣಸೌಷ್ಠವಕ್ಕೂ ಸಂಬಂಧಿಸಿವೆ. ನುಡಿಬೆಡಗಿಗೆ ಸಂಬಂಧಿಸಿದ ಕೆಲವೊಂದು ಮಾತುಗಳೂ ಕಾವ್ಯಮೀಮಾಂಸೆಗೂ ಅನ್ವಿತವಾಗುತ್ತವೆ. ಆ ಪ್ರಕಾರ ವೇದ-ವ್ಯಾಕರಣಗಳಲ್ಲಿ ಹನೂಮಂತನಿಗಿದ್ದ ಜ್ಞಾನವೂ ಆತನ ವರ್ಣಸಂಯೋಜನಕ್ರಮವೂ ಗಮನಾರ್ಹ. ಇವು ಪ್ರಧಾನವಾಗಿ ಶಾಸ್ತ್ರವ್ಯುತ್ಪತ್ತಿ ಮತ್ತು ಭಾಷಾಸೌಷ್ಠವಗಳಿಗೆ ಸಂಬಂಧಿಸಿವೆ. ವೇದವೇ ಹೆಚ್ಚಿನ ವಿದ್ಯೆಗಳ ಮೂಲವಾಗಿದ್ದ ಆ ಕಾಲದಲ್ಲಿ ಇದರ ಅರಿವಿಗೆ ಅವಧಾರಣೆ ಸಂದಿರುವುದು ಸಹಜವೇ ಆಗಿದೆ. ಇಂದಿಗೂ ಎಂದಿಗೂ ಭಾಷೆಯ ಶುದ್ಧಿ-ಅಶುದ್ಧಿಗಳನ್ನು ಅರಿಯಲು ವ್ಯಾಕರಣವೇ ಶರಣ್ಯ. ಇಂಥ ವ್ಯುತ್ಪತ್ತಿ ಮತ್ತು ಸೌಶಬ್ದ್ಯಗಳಿಂದ ಶ್ರವಣಾಭಿರಾಮವಾದ ಪದಪದ್ಧತಿಯನ್ನು ರೂಪಿಸಿಕೊಳ್ಳುವುದು ಕವಿಗಳಿಗೆ ಸುಲಭಸಾಧ್ಯವಾದ ಪ್ರಕ್ರಿಯೆ. ಹೀಗೆ ಕವಿಶಿಕ್ಷೆಯ ಒಂದಂಶ ಇಲ್ಲಿದೆಯೆನ್ನಬಹುದು.
To be continued.