ಉಪಕ್ರಮ
ಭಾರತೀಯಕಾವ್ಯಮೀಮಾಂಸೆಯ ಪರಂಪರೆಯಲ್ಲಿ ಮೌಲಿಕತತ್ತ್ವಗಳ ಆವಿಷ್ಕಾರ ಮತ್ತು ನಿರೂಪಣೆಗಳು ಭರತ, ಆನಂದವರ್ಧನ, ಅಭಿನವಗುಪ್ತ, ಕುಂತಕ ಮುಂತಾದ ಪಥಪ್ರದರ್ಶಕರಿಂದ ಆದ ಬಳಿಕ ಇವುಗಳ ಆಧಾರದ ಮೇಲೆ ಸಾಕಷ್ಟು ಸಂಗ್ರಹ, ಪರಿಷ್ಕಾರ, ಸ್ಪಷ್ಟೀಕರಣಾದಿಗಳು ಮಮ್ಮಟ, ರುಯ್ಯಕ, ವಿಶ್ವನಾಥ, ಜಗನ್ನಾಥರಂಥವರ ಮೂಲಕ ಆಯಿತು. ಪ್ರಾಚೀನರಾದ ದಂಡಿ, ಭಾಮಹ, ರುದ್ರಟರಂತೆ ಇವರ ಪರವರ್ತಿಗಳಾದ ಭೋಜ, ಮಹಿಮಭಟ್ಟ, ಶಾರದಾತನಯ ಮುಂತಾದವರೂ ಹಲಕೆಲವು ಮೌಲಿಕಸಂಗತಿಗಳನ್ನು ಕಾಲಕಾಲಕ್ಕೆ ನೀಡುತ್ತಲೇ ಬಂದರು. ಇವೆಲ್ಲ ಸಂಸ್ಕೃತಭಾಷೆಯಲ್ಲಿ ಪಾಶ್ಚಾತ್ಯಪ್ರಪಂಚದ ಸಂಪರ್ಕಕ್ಕೆ ಮುನ್ನ ಆದ ಬೆಳೆವಣಿಗೆಗಳು.
ಅನಂತರದ ಕಾಲದಲ್ಲಿ ಪೂರ್ವೋಕ್ತಮೂಲಗ್ರಂಥಗಳ ಸಂಪಾದನೆ, ಮುದ್ರಣ, ವಿಮರ್ಶನ, ಆಧುನಿಕಪದ್ಧತಿಯಲ್ಲಿ ಪ್ರತಿಯೊಂದು ಪರಿಕಲ್ಪನೆಯ ಐತಿಹಾಸಿಕವಿಕಾಸದ ನಿರೂಪಣ, ತೌಲನಿಕಾಧ್ಯಯನ ಮುಂತಾದ ಹತ್ತಾರು ಸ್ತುತ್ಯಕಾರ್ಯಗಳು ಇಂಗ್ಲಿಷ್ ಭಾಷೆಯ ಮೂಲಕವೂ ದೇಶಭಾಷೆಗಳ ಮಾಧ್ಯಮದಲ್ಲಿಯೂ (ವಿರಳವಾಗಿ ಸಂಸ್ಕೃತದಲ್ಲಿಯೂ) ಸಾಗಿದುವು.
ಹೀಗೆ ಬೆಳೆದ ಕಾವ್ಯಮೀಮಾಂಸಾಕ್ಷೇತ್ರದಲ್ಲಿ ಸಹಜವಾಗಿಯೇ ಅದೆಷ್ಟೋ ವಾಂಛಿತ-ಅವಾಂಛಿತವಿಶ್ಲೇಷಣೆಗಳೂ ವ್ಯಾಖ್ಯಾನಗಳೂ ಹುಟ್ಟಿಕೊಂಡುವು. ಇಂಥ ವಾಂಛಿತವಿಸ್ತರಣದಲ್ಲಿ ಪ್ರಾತಃಸ್ಮರಣೀಯರಾದ ಎಂ. ಹಿರಿಯಣ್ಣ, ಕುಪ್ಪುಸ್ವಾಮಿ ಶಾಸ್ತ್ರಿ, ಪಿ. ವಿ. ಕಾಣೆ, ಎಸ್. ಕೆ. ಡೇ, ವಿ. ರಾಘವನ್, ಕೆ. ಕೃಷ್ಣಮೂರ್ತಿ ಮುಂತಾದವರು ಪ್ರಮುಖರು. ಇವರೆಲ್ಲ ಬಲುಮಟ್ಟಿಗೆ—ಒಬ್ಬ ಕೃಷ್ಣಮೂರ್ತಿಗಳನ್ನುಳಿದು—ಆಂಗ್ಲಭಾಷೆಯಲ್ಲಿಯೇ ತಮ್ಮ ವ್ಯಾಸಂಗ-ಸಂಶೋಧನಫಲಗಳನ್ನು ದಾಖಲಿಸಿದವರು. ಮಾತ್ರವಲ್ಲ, ಪಾಶ್ಚಾತ್ಯಸಾಹಿತ್ಯಮೀಮಾಂಸೆಯ ಮೂಲ-ಚೂಲಗಳನ್ನೂ ಬಲ್ಲವರು. ಇವರ ಬರೆಹಗಳಲ್ಲಿಯೂ ಕೆಲವೊಮ್ಮೆ ಮೂಲತತ್ತ್ವಗಳ ಪ್ರತಿಪಾದನಾವಸರದಲ್ಲಿ ಅಲ್ಪ-ಸ್ವಲ್ಪ ಏರುಪೇರುಗಳನ್ನೋ ಕುಂದು-ಕೊರತೆಗಳನ್ನೋ ಕಾಣಬಹುದು. ಆದರೆ ಇವು ಗೌಣ. ಸಂವೇದನಶೀಲನಾದ ಜಿಜ್ಞಾಸುವೊಬ್ಬನು ಇವರಿಂದ ಗಳಿಸಿದ ವ್ಯುತ್ಪತ್ತಿಯ ಮೂಲಕ ಈ ಕೆಲವು ಅರೆ-ಕೊರೆಗಳನ್ನು ತಾನೇ ತುಂಬಿಸಿಕೊಳ್ಳಬಲ್ಲ. ಹೀಗೆ ಭಾರತೀಯಕಾವ್ಯಮೀಮಾಂಸೆಯ ಕ್ಷೇತ್ರದಲ್ಲಿ ಅದೊಂದು ಬಗೆಯ ಅಧ್ಯಯನಪೂರ್ಣತೆ ಸಿದ್ಧವಾಗಿದೆಯೆಂದರೆ ತಪ್ಪಲ್ಲ.
ದೇಶಭಾಷೆಗಳಲ್ಲಿ ಕೂಡ ಮೇಲೆ ಕಾಣಿಸಿದ ಮಹನೀಯರ ಕೃತಿಕಾಂತಿಯಲ್ಲಿ ಅವೆಷ್ಟೋ ಬರೆಹಗಳು ಹುಟ್ಟಿವೆ. ಹಿಂದಿಯಲ್ಲಿ ರಾಮಚಂದ್ರ ಶುಕ್ಲ, ನಗೇಂದ್ರ, ರಾಮಚಂದ್ರದ್ವಿವೇದಿ, ರೇವಾಪ್ರಸಾದದ್ವಿವೇದಿ ಮೊದಲಾದವರು; ತೆಲುಗಿನಲ್ಲಿ ಜಮ್ಮುಲಮಡಕ ಮಾಧವಶರ್ಮಾ, ಪಿ. ಅಪ್ಪಾರಾವು, ಪುಲ್ಲೆಲ ಶ್ರೀರಾಮಚಂದ್ರುಡು ಮುಂತಾದವರೆಷ್ಟೋ ಮಂದಿ ಸ್ಮರಣೀಯರು. ಈ ತೆರನಾದ ಕೆಲಸವು ಮರಾಠಿ-ಬಂಗಾಳಿ-ಮಲಯಾಳಭಾಷೆಗಳಲ್ಲಿ ಕೂಡ ತೃಪ್ತಿಕರವಾಗಿ ಸಾಗಿದೆ.
ಕನ್ನಡದ ಮಟ್ಟಿಗೆ ಹೇಳುವುದಾದರೆ ಕವಿರಾಜಮಾರ್ಗ, ಕಾವ್ಯಾವಲೋಕನ, ರಸರತ್ನಾಕರ, ಶೃಂಗಾರರತ್ನಾಕರ, ಉದಯಾಲಂಕಾರ, ಮಾಧವಾಲಂಕಾರ, ಶಾರದಾವಿಲಾಸ, ಕನ್ನಡಕುವಲಯಾನಂದ ಮುಂತಾದ ಪ್ರಾಚೀನಕೃತಿಗಳ ಬಳಿಕ ಈ ಮುನ್ನ ಹೇಳಿದ ನವಯುಗವನ್ನು ಎ. ಆರ್. ಕೃಷ್ಣಶಾಸ್ತ್ರಿ ಮತ್ತು ಕಾನಕಾನಹಳ್ಳಿ ವರದಾಚಾರ್ಯರು ರಚಿಸಿದ ಕನ್ನಡಕೈಪಿಡಿಯ ಭಾಗಗಳಲ್ಲಿ, ತೀ. ನಂ. ಶ್ರೀಕಂಠಯ್ಯನವರ ಭಾರತೀಯಕಾವ್ಯಮೀಮಾಂಸೆಯಲ್ಲಿ, ಕೆ. ಕೃಷ್ಣಮೂರ್ತಿಯವರ ಅನೇಕಸ್ವತಂತ್ರ ಹಾಗೂ ಅನುವಾದಗ್ರಂಥಗಳಲ್ಲಿ ಪ್ರಧಾನವಾಗಿ ನೋಡಬಹುದು. ಸಿದ್ಧಪ್ಪಾರಾಧ್ಯ, ವಿಷ್ಣುಮೂರ್ತಿಭಟ್ಟ, ಬುಚ್ಚನ್ ನಾರಾಯಣಶಾಸ್ತ್ರಿ, ಕೆ. ವಿ. ಸುಬ್ಬಣ್ಣ, ಆದ್ಯ ರಂಗಾಚಾರ್ಯ, ಕೆ. ನರಸಿಂಹಶಾಸ್ತ್ರಿ, ಎಚ್. ವಿ. ನಾಗರಾಜರಾವ್, ಎಂ. ಎ. ಹೆಗಡೆ, ಲಕ್ಷ್ಮೀನಾರಾಯಣಪ್ಪ ಮುಂತಾದವರ ಅನುವಾದಕೃತಿಗಳಲ್ಲಿಯೂ ಡಿ.ವಿ.ಜಿ., ಕುವೆಂಪು, ಪು.ತಿ.ನ., ಜಿ. ಎಸ್. ಶಿವರುದ್ರಪ್ಪ, ಎಚ್. ತಿಪ್ಪೇರುದ್ರಸ್ವಾಮಿ ಮುಂತಾದವರ ಬೆಲೆಯುಳ್ಳ ಸ್ವತಂತ್ರಗ್ರಂಥಗಳಲ್ಲಿಯೂ ಈ ಪರಂಪರೆಯ ಮುಂದುವರಿಕೆಯನ್ನು ಕಾಣಬಹುದು[1].
ಪ್ರವೇಶಿಕೆ
ಇವರೆಲ್ಲರಿಗಿಂತ ವಿಭಿನ್ನವಾಗಿ—ಹಾಗೆಂದು ಪ್ರತಿಕೂಲವಲ್ಲದ ರೀತಿಯಲ್ಲಿ—ಭಾರತೀಯಕಾವ್ಯಮೀಮಾಂಸೆಯ ಅಧ್ಯಯನವನ್ನು ಸಾಗಿಸಿ ತಮ್ಮ ಒಳನೋಟಗಳನ್ನಿತ್ತವರು ಸ್ವರ್ಗೀಯ ಪಾದೆಕಲ್ಲು ನರಸಿಂಹಭಟ್ಟರು. ಇವರು ವಿ. ರಾಘವನ್ನವರಂಥ ವಿದ್ವಾಂಸರ ಬಳಿ ವ್ಯಾಸಂಗ ಮಾಡಿದ್ದಲ್ಲದೆ, ಆ ಬಳಿಕ ಸ್ವತಂತ್ರವಾಗಿ ಮೂಲಗ್ರಂಥಗಳನ್ನು ಓದಿಕೊಂಡ ಸ್ವೋಪಜ್ಞಚಿಂತಕರು. ಸ್ವಭಾವತಃ ಅಂತರ್ಮುಖರೂ ಮನನಶೀಲರೂ ಆದ ಭಟ್ಟರು ಹೆಚ್ಚು ಬರೆದವರಲ್ಲ. ಪ್ರಾಯಿಕವಾಗಿ ಸಾಂದರ್ಭಿಕಲೇಖನಗಳ ರೂಪದಲ್ಲಿರುವ ಅವರ ಹೆಚ್ಚಿನ ಬರೆವಣಿಗೆಯು ಈ ಕಾರಣದಿಂದಲೇ ಸಾಕಷ್ಟು ಪುನರುಕ್ತಿಗಳನ್ನೂ ಹೊಂದಿದೆ. ಅಭಿನವಗುಪ್ತನ ಲೋಚನ ಮತ್ತು ಅಭಿನವಭಾರತಿಗಳ ಕೆಲವೊಂದು ಭಾಗಗಳ ಅನುವಾದವನ್ನುಳಿದರೆ ಇವರ ಮಿಕ್ಕ ಕಾವ್ಯಮೀಮಾಂಸಾಲೇಖನಗಳೆಲ್ಲ ಸ್ವೋಪಜ್ಞಚಿಂತನೆಯ ಪ್ರಸ್ತುತಿ ಹಾಗೂ ಸಮಗ್ರಭಾರತೀಯಕಾವ್ಯಮೀಮಾಂಸೆಯ ತತ್ತ್ವಗಳ ವಿಮರ್ಶನಪೂರ್ವಕಪರಿಚಯ ಮತ್ತು ಪುನಃಕಥನ. ಮುಖ್ಯವಾಗಿ ಭಾರತೀಯಸಂವೇದನೆಯ ಮೂಲಕ ಸಮಸ್ತಶಾಸ್ತ್ರಗಳನ್ನೂ ಕಲೆ-ವಿದ್ಯೆಗಳನ್ನೂ ಕಾಣಬೇಕು, ಕಾಣಿಸಬೇಕೆಂಬುದು ಭಟ್ಟರ ತುಡಿತ.
ಭಟ್ಟರ ವಿಚಾರಸರ್ವಸ್ವದ ತಳಹದಿಯಾಗಿ ಸಮುನ್ಮೀಲಿಸಿದ ತತ್ತ್ವವನ್ನು ಅವರೇ ತಮ್ಮ “ಭಾರತೀಯ ಋಷಿಪರಂಪರೆ ಮತ್ತು ಸಂಸ್ಕೃತಸಾಹಿತ್ಯ”ವೆಂಬ ಕಿರುಹೊತ್ತಗೆಯಲ್ಲಿ ಅಡಕವಾಗಿ ದಾಖಲಿಸಿದ್ದಾರೆ[2]. ಇಲ್ಲಿಯೇ ಅವರ ಕೆಲವೊಂದು ಕಾವ್ಯ-ಕಾವ್ಯಮೀಮಾಂಸಾತತ್ತ್ವಗಳೂ ದಿಗ್ದರ್ಶಕವಾಗಿ ನಿರೂಪಿಸಲ್ಪಟ್ಟಿವೆ. ಇವುಗಳ ಹಿನ್ನೆಲೆಯಲ್ಲಿ ಸದ್ಯದ ವಿಚಾರವನ್ನು ಮುನ್ನಡಸಬಹುದು. ಆದುದರಿಂದ ಮೊದಲಿಗೆ ಅವರ ಈ ಕೃತಿಯ ತಾತ್ಪರ್ಯವನ್ನು ಗಮನಿಸೋಣ:
ಅವರ ಪ್ರಕಾರ ಭಾರತೀಯಸಂವೇದನೆಯೆಂಬುದು ಆರ್ಷ. ಅರ್ಥಾತ್, ಋಷಿಪರಂಪರೆಯ ಮೂಲಕ ಅವಿನಾಶಿಯಾಗಿ ಬಂದದ್ದು. ಅಲ್ಲದೆ ಋಷಿತ್ವವಾಗಲಿ, ಅದಕ್ಕೆ ಮೂಲಭೂತದ್ರವ್ಯವಾದ ದರ್ಶನವಾಗಲಿ ದೇಶ-ಕಾಲಾತೀತ. ಆದರ್ಶ ಅಥವಾ ಸಚ್ಚಿದಾನಂದಘನವೇ ಪರಮಾರ್ಥ; ಮತ್ತಿದುವೇ ಜಗತ್ತು ಮತ್ತು ಜೀವಗಳ ಸಮಸ್ತಕರ್ಮಗಳನ್ನೂ ಜ್ಞಾತಾಜ್ಞಾತವಾಗಿ ಪ್ರೇರಿಸುತ್ತಿರುತ್ತದೆ. ವಾಸ್ತವ ಅಥವಾ ವ್ಯವಹಾರವೆಂಬುದು ಇಂಥ ಆದರ್ಶದ ಒಂದು ವಿವರ್ತ; ಇಲ್ಲವೇ ವ್ಯಭಿಚಾರಿಭಾವ. ವಸ್ತುತಃ ಅವರು ಸಂಕೇತಿಸುವ ಆದರ್ಶತತ್ತ್ವವು ಮೋಕ್ಷವೆಂಬ ಪುರುಷಾರ್ಥ. ಇದು ಸ್ವರೂಪತಃ ಬ್ರಹ್ಮವಸ್ತು. ಮಿಕ್ಕೆಲ್ಲ ಪುರುಷಾರ್ಥಗಳೂ ಇದಕ್ಕೆ ಸಾಧನ ಮಾತ್ರ. ಧರ್ಮ-ಅರ್ಥ-ಕಾಮಗಳೆಂಬ ತ್ರಿವರ್ಗಕ್ಕೆ ಮೋಕ್ಷವೆಂಬ ಪರಮಾದರ್ಶದ ಗುರಿ ತಪ್ಪಿದಾಗ ಅವು ಮೌಲ್ಯಗಳೆನಿಸದೆ ಜೀವಘಾತುಕವೇ ಆಗುತ್ತವೆ. ವಸ್ತುತಃ ಧರ್ಮ-ಮೋಕ್ಷಗಳು ಅರ್ಥ-ಕಾಮಗಳೆಂಬ ಜೀವದ ನೈಸರ್ಗಿಕಪ್ರವೃತ್ತಿಯನ್ನು ಅವಿರೋಧವಾಗಿಯೇ ಉದಾತ್ತೀಕರಿಸುವಲ್ಲಿ ಶ್ರಮಿಸುತ್ತವೆ. ಇವುಗಳ ಸಾಫಲ್ಯವೇ ಜೀವೋನ್ನತಿ. ನೀತಿ-ಅನೀತಿಗಳಂಥ ಮತ್ತೂ ಸಾಪೇಕ್ಷಮೌಲ್ಯಗಳು ಧರ್ಮದೊಳಗೇ ಅಡಕವಾಗುವ ಅಂಶಗಳು. ಋತವೂ ಕೂಡ ಪ್ರಾಕೃತಿಕವಾದ ಋತುಪರಿವರ್ತನೆಯಂಥ ಅಂಶಗಳನ್ನು ಪರಮಾರ್ಥವಾದ ಧರ್ಮತತ್ತ್ವಕ್ಕೆ ಬೆಸೆಯುವ ಮೂಲಕ ಮಿಗಿಲಾಗಿ ಸಂಗತವಾಗುತ್ತದೆ. ಧರ್ಮಕ್ಕಿರುವ ನಮ್ಯಗುಣವೇ ಅದನ್ನು ಒಂದು ನಿಟ್ಟಿನಿಂದ ರೂಕ್ಷವೆಂಬಂತೆ ಕಾಣಿಸಿದರೂ ಮತ್ತೊಂದು ನಿಟ್ಟಿನಿಂದ ಮೃದುಮಧುರವಾಗಿ ಸಾಕ್ಷಾತ್ಕರಿಸುತ್ತದೆ.
ಪುರುಷಾರ್ಥಗಳ ತತ್ತ್ವಮೀಮಾಂಸೆಯು ಮಿಗಿಲಾದ ಗಾತ್ರದಿಂದ ನಮ್ಮ ಪರಂಪರೆಯ ಕೃತಿಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಅದರ ಗುಣ ಚೆನ್ನಾಗಿಯೇ ಪ್ರಸ್ಫುಟವಾಗಿದೆ. ಇದನ್ನು ಸ್ಮೃತಿಗಳ ಸಾಮಾನ್ಯಧರ್ಮಪ್ರಕರಣದಲ್ಲಿ, ಧರ್ಮವು ವೇದಾಂತಕ್ಕೆ ಅಧೀನವೆಂಬ ಮನುಸ್ಮೃತಿಯ ಚರಮಘಟ್ಟದಲ್ಲಿ ಹಾಗೂ ಅರ್ಥಶಾಸ್ತ್ರ-ಕಾಮಶಾಸ್ತ್ರಗಳ ವಿದ್ಯಾಸಮುದ್ದೇಶಭಾಗದಲ್ಲಿ ಮನಗಾಣಬಹುದು. ಇದೇ ರೀತಿ ಕಾಮವು ಧರ್ಮನಿರ್ದೇಶಿತವಾದ ವರ್ಣಾಶ್ರಮಗಳ ಬಿಗಿತವನ್ನು ಸಡಲಿಸಿ, ಸಮಾಜಜೀವನವನ್ನು ಲಘುವಾಗಿಸಿ, ನೆಮ್ಮದಿಗೊಳಿಸುವ ಪಾತ್ರವನ್ನು ತಾಳುತ್ತದೆ. ಕಾಮಶಬ್ದದ ಧಾತ್ವರ್ಥವೂ ಈ ನಿಟ್ಟಿನಲ್ಲಿ ಗಮನಾರ್ಹ. “ಕಮು ಕಾಂತೌ” ಎಂಬ ಈ ಧಾತುವು ಕಾಂತಿ, ಕಾಂಕ್ಷೆ, ಸೌಂದರ್ಯಾದಿಗಳನ್ನು ಕೂಡ ಧ್ವನಿಸುವ ಕಾರಣ ಕಾಮವು ತನ್ನ ಸತ್ತ್ವೋನ್ನತಸ್ಥಿತಿಯಲ್ಲಿ ರಸಾನಂದವೇ ಆಗುತ್ತದೆ. ಹೀಗೆ ಕಲೆ, ಸಾಹಿತ್ಯ ಮತ್ತು ಸೌಂದರ್ಯಮೀಮಾಂಸೆಗಳು ಪುರುಷಾರ್ಥಗಳ ಚೌಕಟ್ಟಿನಲ್ಲಿ ನೆಲೆಸುತ್ತವೆ. ಪುರುಷಾರ್ಥಕ್ಕೊದಗಿಬರದ ಕಾಮವು ಪಾಶವ ಮತ್ತು ಲೋಕಮಾರಕ. ಭಗವದ್ಗೀತೆಯ “ಧರ್ಮಾವಿರುದ್ಧೋ ಭೂತೇಷು ಕಾಮೋऽಸ್ಮಿ” ಎಂಬ ಮಾತೂ ಸ್ಮರಣೀಯ.
ಇದೇ ರೀತಿ ಇತಿಹಾಸ ಮತ್ತು ಪರಂಪರೆಗಳನ್ನು ಕುರಿತು ವಿಶ್ಲೇಷಿಸುವಾಗಲೂ ಅವರು ಇತಿಹಾಸವನ್ನು ಬಾಹ್ಯರೂಪದ ಪ್ರಮಾಣಗಳ ಮೇಲೆ ನಿಲ್ಲುವ ಸರ್ವತ್ರೀಕರಣದ ಯತ್ನವೆಂದೂ ಪರಂಪರೆಯು ಅಂತಸ್ಸಂವೇದನೆಯ ಸ್ವತಃಪ್ರಮಾಣದ ಮೇಲೆ ನಿಲ್ಲುವ, ಕೆಲಮಟ್ಟಿನ ಖಾಸಗಿತನದ ಹವಣೆಂದೂ ಗುರುತಿಸುತ್ತಾರೆ. ಜೊತೆಗೆ, ಭಾರತೀಯಸಂವೇದನೆಯು ಭವರೂಪಸತ್ಯಕ್ಕಿಂತ ಭಾವರೂಪಸತ್ಯಕ್ಕೆ ಹೆಚ್ಚಿನ ಬೆಲೆ ನೀಡಿದ ಕಾರಣ ಇತಿಹಾಸವು ಪರಂಪರೆಗಿಂತ ಸ್ಥೂಲ-ರೂಕ್ಷದೃಷ್ಟಿಯದೆಂದು ಭಾವಿಸುತ್ತಾರೆ. ಅಲ್ಲದೆ ಭಾರತೀಯೇತರಸಾಹಿತ್ಯವು ದೇಶ-ಕಾಲಬದ್ಧತೆಗೂ ತನ್ಮೂಲಕ ಉನ್ಮೀಲಿಸಬಹುದಾದ ಸಮಕಾಲೀನತೆಗೂ ಹೆಚ್ಚಿನ ಅವಧಾರಣೆಯನ್ನು ಹಾಕಿದರೆ, ಭಾರತೀಯಸಂವೇದನೆಯು ಸಾರ್ವಕಾಲಿಕತೆಗೆ ಮಿಗಿಲಾದ ಆದರವನ್ನು ಸಲ್ಲಿಸುವುದೆಂದು ತೀರ್ಮಾನಿಸುತ್ತಾರೆ. ಈ ಕಾರಣದಿಂದಲೇ ಭಾರತೀಯಸಾಹಿತ್ಯದಲ್ಲಿ ವ್ಯಕ್ತ್ಯತೀತತೆಗೆ ಹೆಚ್ಚಿನ ಬೆಲೆ. ಒಂದು ಮಾತಿನಲ್ಲಿ ಹೇಳುವುದಾದರೆ, ಭಾರತೀಯವೆಂಬುದು ಒಂದು ಅಂತರ್ಮುಖೀಯಸಂಸ್ಕೃತಿ. ಈ ಸಂಸ್ಕೃತಿಯಲ್ಲಿ ಸೋಲು-ಗೆಲವುಗಳಂಥವು ವ್ಯಕ್ತಿಯ ಅಂತರಂಗದಲ್ಲಿ ನಿರ್ಣೀತವಾಗುವುವಲ್ಲದೆ ಸಾರ್ವಜನಿಕರಿಂದಲ್ಲ. ಈ ಕಾರಣದಿಂದಲೇ ಇದನ್ನು ಬರಿಯ ಭಾರತದೇಶವೆಂಬ ಭೌಗೋಲಿಕಮಿತಿಗೋ, ವೇದ-ಸಂಸ್ಕೃತಗಳೆಂಬ ಗ್ರಂಥ-ವಾಗ್ರೂಪಗಳಷ್ಟರ ಮಟ್ಟಿನ ಚೌಕಟ್ಟಿಗೋ ಸಂಕೋಚಿಸುವುದು ಸಾದ್ಯವಿಲ್ಲ, ಸಾಧುವೂ ಅಲ್ಲ. ಆದರೆ ಭಾರತ, ಸಂಸ್ಕೃತ, ವೇದ ಮುಂತಾದುವು ವಿಭೂತಿರೂಪದ ಉಪಲಕ್ಷಣಗಳಾದ ಕಾರಣ ಅವುಗಳನ್ನಿಲ್ಲಿ ಬಳಸಿಕೊಳ್ಳುವುದಾಗಿದೆ.
ಭಾಷೆಯ ಬಗೆಗೂ ಭಟ್ಟರ ಚಿಂತನೆ ವ್ಯಾಪಕವಾಗಿ ಹಬ್ಬಿದೆ. ಅವರ ಪ್ರಕಾರ ಭಾರತೀಯೇತರಚಿಂತನವು ಭಾಷೆಯೆಂಬುದು ಕೇವಲ ವಿಚಾರಗಳ ವಾಹಕ. ಇದು ಆಧುನಿಕವೈಚಾರಿಕತೆಯ ಪ್ರಾತಿನಿಧಿಕಧೋರಣೆಯೂ ಹೌದು. ಆದರೆ ಭಾರತೀಯ ಅಥವಾ ಸಂಸ್ಕೃತಪರಂಪರೆಯ ದೃಷ್ಟಿಯಲ್ಲಿ ಭಾಷೆಯು ವಿಷಯವಾಹಕ ಮತ್ತು ವಾಹಿಯ ವಿಷಯಗಳೆರಡರ ಲಕ್ಷಣಗಳನ್ನೂ ಒಳಗೊಳ್ಳುವಂಥದ್ದು. ಈ ಕಾರಣದಿಂದಲೇ ಭಾಷೆಯು ಶಬ್ದಬ್ರಹ್ಮವಾದದವರೆಗೂ ದಾರ್ಶನಿಕದೃಷ್ಟಿಯಿಂದ ವಿಸ್ತರಿಸಿಕೊಂಡಿದೆ. ಜೊತೆಗೆ ಸಂಸ್ಕೃತಭಾಷೆಯ ಈ ಸ್ವರೂಪವೇ ಅದನ್ನು ವ್ಯಕ್ತ್ಯತೀತವನ್ನಾಗಿಸಿದೆ. ಹೀಗಾಗಿಯೇ ಆಧುನಿಕವಿಕಾಸವಾದದ ತರ್ಕವನ್ನು ಭಾರತೀಯ-ಸಂಸ್ಕೃತ-ಋಷಿಪರಂಪರೆಗೆ ಯಥಾವತ್ತಾಗಿ ಅನ್ವಯಿಸಲಾಗದು. ಅವರ ಪ್ರಕಾರ ತತ್ತ್ವತಃ ಭಾಷೆಯೇ ಕಾವ್ಯ. ಮಾತ್ರವಲ್ಲ, ಭಾಷೆಯು ಅಪೌರುಷೇಯವೂ ಹೌದು. ಭಾಷಾಮೀಮಾಂಸೆಯಾದ ವ್ಯಾಕರಣವೇ ಕಾವ್ಯಮೀಮಾಂಸೆ. ಭಟ್ಟರು ವ್ಯಾಕರಣವು ಭಾಷೆಯ ವಿಶ್ಲೇಷಕತತ್ತ್ವವಾದರೆ ಛಂದಸ್ಸು ಅದರ ಸಂಯೋಜಕತತ್ತ್ವವೆನ್ನುತ್ತಾರೆ.
ಭಟ್ಟರು ಭಾರತೀಯಪರಂಪರೆಯಲ್ಲಿ ಯಾವುದೇ ಶಾಸ್ತ್ರ-ಕಲಾವಿಚಾರಗಳ ನಡುವೆ ತಲೆದೋರಬಹುದಾದ ವಿರೋಧಗಳನ್ನೂ ಖಂಡನ-ಮಂಡನಗಳನ್ನೂ ಸಾಪೇಕ್ಷವಾಗಿ ಕಾಣುತ್ತಾರೆ. ಖಂಡನೆಗಳು ನಿರಾಕರಣೆಗಳಲ್ಲ; ಬದಲಾಗಿ ಗುರುತಿಸುವಿಕೆಯ ಮತ್ತೊಂದು ವಿಧಾನವೆಂಬುದು ಅವರದೇ ಮಾತು. ಹೀಗಾಗಿ ಇಂಥವನ್ನೆಲ್ಲ “ನ ಹಿ ನಿಂದಾನ್ಯಾಯ”ದ ಮೂಲಕ ಗಮನಿಸಬೇಕೆಂಬುದು ಅವರ ತಾತ್ಪರ್ಯ. ಕೇವಲಾದ್ವೈತದೃಷ್ಟಿಗೆ ಇದು ತುಂಬ ಸಹಜವೂ ಹೌದು. ಅವರು ಪ್ರಾಯಶಃ ವೇದಾಂತದರ್ಶನವು ಹೇಳುವ ಅಧಿಕಾರಿಭೇದವನ್ನು ಗಮನದಲ್ಲಿರಿಸಿಕೊಂಡು ಪರಸ್ಪರವಿರೋಧಗಳನ್ನು ಸಮನ್ವಯಿಸಿಕೊಳ್ಳಬೇಕೆಂದು ಭಾವಿಸುತ್ತಾರೆ. ಈ ಕಾರಣದಿಂದಲೇ ಭಾರತೀಯಸಂವೇದನೆಯಲ್ಲಿ ಕೇಂದ್ರೀಯ ಮತ್ತು ಪಾರ್ಶ್ವೀಯಗಳೆಂಬ ಅಂಶಗಳುಂಟೆಂದೂ ಪಾರ್ಶ್ವೀಯವಿರೋಧಗಳನ್ನೆಲ್ಲ ಕೇಂದ್ರೀಯವಾದ ಅವಿರೋಧದಲ್ಲಿ ಪರಿಹರಿಸಿಕೊಳ್ಳಬೇಕೆಂದೂ ಅವರ ನಿಲವು. ಆದುದರಿಂದ ಎಲ್ಲ ವಿದ್ಯೆಗಳಿಗೂ ಪರಸ್ಪರಪೂರಕತೆ ಮತ್ತು ಸಾಪೇಕ್ಷತೆಗಳುಂಟೆಂಬುದು ನಿಶ್ಚಯ.
ಇದೇ ರೀತಿ ಯಾವುದೇ ಸೃಷ್ಟಿ-ಲಯಗಳಾಗಲಿ ಕೇವಲ ಪರಮಾರ್ಥದ ವ್ಯಕ್ತ ಮತ್ತು ಅವ್ಯಕ್ತಭಾವಗಳಲ್ಲದೆ ಅನ್ಯಥಾ ಅಲ್ಲವೆಂದು ಭಟ್ಟರು ಪ್ರತಿಪಾದಿಸುತ್ತಾರೆ. ಈ ಎಲ್ಲ ಕಾರಣಗಳಿಂದಲೇ ವಿವಿಧವಿದ್ಯೆಗಳ ಹೃದಯವನ್ನು ಅಂತಸ್ಸಂವೇದನೆಯಿಂದ—ಅರ್ಥಾತ್ ಗ್ರಂಥಾತೀತವಾದ ಅಧ್ಯಯನಕ್ರಮದಿಂದ—ಸಾಕ್ಷಾತ್ಕರಿಸಿಕೊಳ್ಳಬೇಕೆಂಬುದು ಅವರ ಇಂಗಿತ. ಬಹಿಃಪ್ರಮಾಣಕ್ಕೆ ಸಿಗುವಿಕೆ ಅಥವಾ ಸಿಗದಿರುವಿಕೆಯೆಂಬುದು ಕೇವಲ ಸಾಮಾಜಿಕ ಅಥವಾ ವ್ಯಾವಹಾರಿಕಾಂಶವೇ ಹೊರತು ತಾತ್ತ್ವಿಕಾಂಶವಲ್ಲವೆಂದು ಅವರ ನಿಶ್ಚಯ. ಅಲ್ಲದೆ ಅಂತಃಪ್ರಮಾಣವೇ ನಮ್ಮ ಪರಂಪರೆಯ ಸರ್ವೋಚ್ಚನಿರ್ಣಯತತ್ತ್ವವೆಂದು ಅವರ ನಿಲವು. ಮಿಕ್ಕೆಲ್ಲ ಪ್ರಮಾಣಗಳು ಇದಕ್ಕೆ ಪೂರಕವಾಗಿ ನಿಲ್ಲುತ್ತವೆ. ವೇದಗಳ ಪ್ರಾಮಾಣ್ಯವಾದರೂ ಅವುಗಳ ಅಪೌರುಷೇಯತ್ವದಲ್ಲೆನ್ನುವಾಗ ಇದು ಅಲ್ಲಿಯ ಶಬ್ದನಿತ್ಯತ್ವಕ್ಕಿಂತ ಅರ್ಥನಿತ್ಯತ್ವದಲ್ಲಿಯೇ ವಿವಕ್ಷಿತವೆಂದು ನಾವು ತಿಳಿಯಬೇಕು. ಈ ಕಾರಣದಿಂದ ಅರ್ಥನಿತ್ಯತ್ವವೆಂಬುದು ಸಮಗ್ರಸಂವೇದನೆಯಲ್ಲದೆ ಬೇರೆಯಲ್ಲ. ವೇದಗಳ ಆಧಿಭೌತಿಕ ಮತ್ತು ಆಧಿದೈವಿಕಸ್ತರದ ಅರ್ಥಗಳಿಗಿಂತ ಆಧ್ಯಾತ್ಮಿಕವೇ ಸರ್ವೋಚ್ಚ. ಈ ಬೆಳಕಿನಲ್ಲಿಯೇ ಎಲ್ಲ ವೇದವಾಙ್ಮಯದ ವಿವರಣೆ ಸಾಗಬೇಕು. ಇಂಥ ಆಧ್ಯಾತ್ಮಿಕತತ್ತ್ವವಾದರೂ ಕೇವಲಾದ್ವೈತದರ್ಶನದ ಸಚ್ಚಿದಾನಂದಘನವಲ್ಲದೆ ಬೇರೆ ಅಲ್ಲ.
ಭಟ್ಟರು ಕಾವ್ಯತತ್ತ್ವಗಳನ್ನು ಕುರಿತೂ ಕೆಲವೊಂದು ಗಂಭೀರವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ. ಆ ಪ್ರಕಾರ ಕಾವ್ಯದ ಅನುಭವತತ್ತ್ವವು ರಸ, ಅಭಿವ್ಯಕ್ತಿತತ್ತ್ವವು ಭಾಷೆ. ರಸದ ಲೌಕಿಕಸ್ತರವು ಶೃಂಗಾರ, ಕರುಣ, ಯುದ್ಧವೀರ, ಹಾಸ್ಯ, ರೌದ್ರಾದಿಗಳಲ್ಲಿ ತೋರುವಂತೆ ಅದರ ಅಲೌಕಿಕಸ್ತರವು ಶಾಂತ, ಧರ್ಮವೀರ, ದಾನವೀರ, ದಯಾವೀರಾದಿಗಳಲ್ಲಿ ಕಾಣುವುದೆಂದು ಅವರ ಅಭಿಪ್ರಾಯ. ಅಭಿವ್ಯಕ್ತಿಸ್ತರದಲ್ಲಿ ಕೂಡ ವಿಭಿನ್ನಸ್ತರಗಳಿರುತ್ತವೆ. ಇಲ್ಲಿ ಧ್ವನಿತತ್ತ್ವವು ಅಪೌರುಷೇಯತ್ವಕ್ಕೆ ಸಂವಾದಿಯಾದರೆ, ಗುಣ-ಅಲಂಕಾರತತ್ತ್ವಗಳು ಪೌರುಷೇಯತ್ವಕ್ಕೆ ಸಂವಾದಿ. ಗುಣವೆಂಬುದು ಭಾಷೆಯ ಅತಿಸಮರ್ಥವಾದ ಪ್ರಯೋಗವಾದರೆ ಅಲಂಕಾರವು ಭಾಷೆಯ ಆಕರ್ಷಕಪ್ರಯೋಗ. ಗುಣವಿಶ್ಲೇಷಣೆಯು ಆಯಾ ಭಾಷೆಯ ಸ್ವರೂಪವನ್ನೇ ಅವಲಂಬಿಸಿರುವುದರಿಂದ ಅದಕ್ಕೊಂದು ವಿಶ್ಲೇಷಣಪ್ರಕಾರವೆಂಬುವುದಿಲ್ಲ. ಎಲ್ಲ ಗುಣಗಳಿಗೂ ಸಂದರ್ಭೌಚಿತ್ಯವೆಂಬ ಅಮೂರ್ತಾಂಶವೇ ಮೂಲ. ಎಲ್ಲ ಅಲಂಕಾರಗಳಲ್ಲಿಯೂ ಪ್ರಸ್ತುತ ಮತ್ತು ಅಪ್ರಸ್ತುತಗಳೆಂಬ ಘಟಕಗಳಿದ್ದೇ ಇರುತ್ತವೆ. ಲೌಕಿಕ ಮತ್ತು ಅಲೌಕಿಕಾಂಶಗಳೇ ಇಂಥ ಪ್ರಸ್ತುತ-ಅಪ್ರಸ್ತುತಗಳ ಪರ್ಯಂತಭೂಮಿ. ವಕ್ರತೆಯೆಂಬುದು ಕೂಡ ಲೌಕಿಕಾನುಭವದಿಂದ ದೂರಹೋಗುವಿಕೆಯೇ ಆಗಿದೆ. ಈ ಎಲ್ಲ ತತ್ತ್ವಗಳನ್ನೂ ಬಳಸಿಕೊಂಡು ನಿರ್ಮಿಸುವ ದೃಶ್ಯ-ಶ್ರವ್ಯಕಾವ್ಯಗಳ ವಸ್ತುಗಳಲ್ಲಿ ಪ್ರಖ್ಯಾತ, ಉತ್ಪಾದ್ಯ ಮತ್ತು ಮಿಶ್ರಗಳೆಂಬ ಮೂರು ಬಗೆಗಳಿದ್ದರೂ ಹೆಚ್ಚಿನ ಆದರವು ಅಲೌಕಿಕತೆಯತ್ತ ತಿರುಗಿದ ಪ್ರಖ್ಯಾತ ಮತ್ತು ಮಿಶ್ರವರ್ಗಗಳತ್ತಲೇ. ಇದು ಉತ್ತಮ, ಮಧ್ಯಮ ಮತ್ತು ನೀಚ ಎಂಬ ಮೂರು ಪ್ರಕೃತಿಗಳ ಪಾತ್ರಗಳಿಗೂ ಅನ್ವಯಿಸುತ್ತದೆ. ಇಲ್ಲಿ ಉತ್ತಮ-ನೀಚ ಎಂಬ ಲೋಕಸಾಮಾನ್ಯವಾದ ಮೇಲರಿಮೆ-ಕೀಳರಿಮೆಗಳಿಲ್ಲದಿದ್ದರೂ ಅಲೌಕಿಕ-ಲೌಕಿಕಗಳೆಂಬ ವ್ಯತ್ಯಾಸವಿರುತ್ತದೆ[3]. ಭಾರತೀಯಸಂವೇದನೆಯು ನಿರಪವಾದವಾಗಿ ಲೋಕದಿಂದ ಅಲೋಕದತ್ತ ಸಾಗುವುದೇ ಆಗಿದೆ. ಹಾಗೆಂದಮಾತ್ರಕ್ಕದು ಲೋಕವಿರೋಧಿಯಲ್ಲ; ಲೋಕವಿರುವುದೇ ಅಲೋಕದತ್ತ ಸಾಗಲು. ಹೀಗಾಗಿ ಲೌಕಿಕವು ಅಲೌಕಿಕಕ್ಕೊಂದು ಸಮರ್ಥಸಾಧನ. ಇಂತಲ್ಲದ ಲೌಕಿಕವು ಅನರ್ಥಕಾರಣ.
ಮೇಲಣ ಸಾರಾಂಶದ ಬೆಳಕಿನಲ್ಲಿ ನರಸಿಂಹಭಟ್ಟರ ಕಾವ್ಯತತ್ತ್ವಗಳನ್ನು ವಿವೇಚಿಸೋಣ. ಈ ನಿಟ್ಟಿನಲ್ಲಿ ಅವರ ಎಲ್ಲ ಬರೆಹಗಳು “ಕಾವ್ಯಮೀಮಾಂಸೆ: ಹೊಸ ಹೊಳಹುಗಳು”[4] ಎಂಬ ಕೃತಿಯಲ್ಲಿ ಸಂಗ್ರಹಗೊಂಡ ಕಾರಣ ಇದನ್ನೇ ಅನುಲಕ್ಷಿಸಿ ಸದ್ಯದ ಚಿಂತನೆ ಸಾಗಿದೆ.
[1] ಇದಲ್ಲದೆ ಈಚಿನ ವರ್ಷಗಳಲ್ಲಿ ಭಾರತೀಯಕಾವ್ಯಮೀಮಾಂಸೆಯನ್ನೇ ಪ್ರಶ್ನಿಸುವ, ಧಿಕ್ಕರಿಸುವ ಪ್ರಕಲ್ಪಗಳೂ ಸಾಗಿವೆ. ಇವೆಲ್ಲ ಆಂಗ್ಲಭಾಷೆಯಲ್ಲಿ ಬೆಳೆದುಬಂದ ವಿಲಕ್ಷಣವಿಮರ್ಶನಪದ್ಧತಿಯ ಪ್ರೇರಣೆಯಿಂದ ಬೆಳೆದ ಕೂಳೆಬೆಳೆ. ಇವುಗಳ ಅಭಿನಿವೇಶ, ಅಪ್ರಬುದ್ಧತೆ ಮತ್ತು ಅಸಮರ್ಪಕತೆಗಳನ್ನು ಪ್ರತ್ಯೇಕವಾಗಿಯೇ ಚರ್ಚಿಸಬೇಕಾದ ಕಾರಣ ಸದ್ಯಕ್ಕೆ ಅವುಗಳನ್ನು ದೂರವಿಡಬಹುದು.
[2] ನರಸಿಂಹಭಟ್ಟ, ಪಾದೆಕಲ್ಲು. “ಭಾರತೀಯ ಋಷಿಪರಂಪರೆ ಮತ್ತು ಸಂಸ್ಕೃತಸಾಹಿತ್ಯ”. ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ, ೨೦೦೩
[3] ಭಟ್ಟರು ಭಾರತೀಯಪರಂಪರೆಯ ವಿಭಾಗೀಕರಣಕ್ರಮವನ್ನು ವಿವರಿಸುತ್ತ, ಎಲ್ಲ ವರ್ಗೀಕರಣಗಳೂ ಅನ್ಯೋನ್ಯಾಶ್ರಿತವೆಂದು ನಿರೂಪಿಸುತ್ತಾರೆ. ಇದಕ್ಕೊಂದು ಸುಂದರದೃಷ್ಟಾಂತವಾಗಿ ದಶರೂಪಕವಿಭಾಗವನ್ನು ಪ್ರಸ್ತಾವಿಸುತ್ತಾರೆ. ಆ ಪ್ರಕಾರ ನಮ್ಮ ಲಕ್ಷಣಕಾರರು ಪರಿಪೂರ್ಣರೂಪಕವಾದ “ನಾಟಕ”ವನ್ನು ಮೊದಲಿಗೆ ವಿವರಿಸಿ ಅನಂತರ ಉಳಿದ ಪ್ರಭೇದಗಳನ್ನು ನಾಟಕದ ಆಂಶಿಕರೂಪಗಳೆಂದೋ ಗೌಣವಿಸ್ತರಣಗಳೆಂದೋ ಕಾಣಿಸುವುದುಂಟು (ಭಾರತೀಯಸಂವೇದನೆ: ಸಂವಾದ, ಪು. ೭೧). ಇದು ತುಂಬ ಮೌಲಿಕಸಂಗತಿ. ಈ ಅಂಶವನ್ನು ವಿ. ರಾಘವನ್ನರೂ ಪ್ರಸ್ತಾವಿಸಿದ್ದಾರೆ.
[4] ನರಸಿಂಹಭಟ್ಟ, ಪಾದೆಕಲ್ಲು. “ಕಾವ್ಯಮೀಮಾಂಸೆ: ಹೊಸ ಹೊಳಹುಗಳು”. ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ, ೨೦೧೫
To be continued.