ಪಾರ್ವತಿ. ಇವಳೂ ಜವರಾಯಿಯಂತೆ ಜೀವನದ ಬಗೆಗೆ ಆಸ್ಥೆಯುಳ್ಳವಳು. ಯಾವ ಕೆಲಸ ಮಾಡಿದರೂ ಅದರಲ್ಲಿ ಒಪ್ಪ-ಓರಣ ಇರುವಂತೆ ನೋಡಿಕೊಳ್ಳುವ ಮನೋಭಾವದವಳು. ಈಕೆಯನ್ನು ಹುಟ್ಟು-ಸಾವುಗಳಿಗೆ ಹತ್ತಿರವಿರುವ ನರ್ಸ್ ಉದ್ಯೋಗದವಳೆಂದು ಚಿತ್ರಿಸುವ ಮೂಲಕ ಭೈರಪ್ಪನವರು ಔಚಿತ್ಯ ಕಾಪಾಡಿಕೊಂಡಿದ್ದಾರೆ. ಇದರಿಂದ ಕೃತಿಯ ಕಥನತಂತ್ರಕ್ಕಾದ ಪ್ರಯೋಜನ ಬಲು ಮಿಗಿಲು. ನಾಯಿನಾಗರಾಜಯ್ಯನ ಸಾವಿನಿಂದ ತತ್ತರಿಸುತ್ತಿದ್ದ ಜವರಾಯಿಯ ಭಾವತುಮುಲವನ್ನು ಸಹಾನುಭೂತಿಯಿಂದ ಅರ್ಥಮಾಡಿಕೊಳ್ಳಲು ಪಾರ್ವತಿಗೆ ನೆರವಾದದ್ದು ಅವಳ ವೃತ್ತಿ. ರೋಗಬಾಧಿತರನ್ನು ಪ್ರತಿದಿನವೂ ನೋಡುತ್ತಿದ್ದ ಅವಳಿಗೆ ಸಾವಿನ ಅನಿವಾರ್ಯತೆಯ ತಿಳಿವಳಿಕೆ ಚೆನ್ನಾಗಿತ್ತು. “ಸುತ್ತ ಆಕ್ರಮಿಸಿರುವ ಸಾವಿನ ಪ್ರಜ್ಞೆಯ ನಡುವೆ ಅದೇ ಪ್ರಜ್ಞೆಯಿರುವ ಒಬ್ಬ ವ್ಯಕ್ತಿ ನಮ್ಮನ್ನು ಪ್ರೀತಿಸಿದರೆ ಸಿಕ್ಕುವ ಅರ್ಥ, ಆಧಾರ, ಜೀವನದ ಬೇರೆ ಯಾವ ವಿಧದಲ್ಲಿ ಸಿಕ್ಕಲು ಸಾಧ್ಯ?” (ಪು. ೧೩೨) ಎಂದು ಯೋಚಿಸುವಾಗ ಜವರಾಯಿ ಮತ್ತು ಪಾರ್ವತಿಯರ ಸಂಬಂಧ ಇನ್ನಷ್ಟು ಘನಿಷ್ಠವಾಗುತ್ತದೆ. ಈ ಮೂಲಕ ಮರಣದ ಅರಿವೂ ವ್ಯಕ್ತಿಗಳನ್ನು ಬೆಸೆಯಬಲ್ಲುದೆಂಬ ವಿಲಕ್ಷಣಸತ್ಯವನ್ನು ಲೇಖಕರು ತೋರ್ಪಡಿಸಿದ್ದಾರೆ.
ಎಷ್ಟೋ ವರ್ಷಗಳ ಮೇಲೆ ಕಾಣಲು ಬಂದ ಕಾಳಪ್ಪನ ಜೊತೆ ಜವರಾಯಿಯು ತನ್ನನ್ನೂ ಮರೆತು ಕಾಲಕಳೆಯುತ್ತಿದ್ದಾಗ, ಪಾರ್ವತಿಗೆ ಒಂಟಿತನದ ಬೇಸರವನ್ನು ನಿವಾರಿಸಿಕೊಳ್ಳಲು ನರ್ಸ್ ವೃತ್ತಿಯ ಹಿನ್ನೆಲೆಯೇ ಮಾರ್ಗದರ್ಶಿಯಾಗುತ್ತದೆ. ಈ ಸಂದರ್ಭದಲ್ಲಿ ಅವಳಿಗೆ ಗರ್ಭಕೋಶವನ್ನು ತೆಗಿಸಿಕೊಂಡ ವನಜಮ್ಮನ ನೆನಪಾಗಿ ಅವಳಂತೆ ತಾನು ಒಂಟಿಯಾಗಬಾರದೆಂದರೆ ಮತ್ತೆ ತಾಯಿಯಾಗಬೇಕೆಂಬ ಭಾವ ದೃಢವಾಗುತ್ತದೆ. ಇದಕ್ಕೆ ಪುಷ್ಟಿಕೊಡುವಂತೆ ಹಿಂದೆ ಮೂರು ಬಾರಿ ಗರ್ಭಸ್ರಾವ ಮಾಡಿಸಿಕೊಂಡ ಅವಳ ಅಹಿತಾನುಭವಗಳನ್ನು ಲೇಖಕರು ಸಮರ್ಥವಾಗಿ ಚಿತ್ರಿಸಿದ್ದಾರೆ. ಇದು ಸತ್ತುಹೋದ ಮಕ್ಕಳಿಂದ ಉಂಟಾದ ಶೂನ್ಯತೆಯನ್ನು ತುಂಬಲು ಮತ್ತೆ ಹೆಂಡತಿಯನ್ನು ಗರ್ಭವತಿಯನ್ನಾಗಿಸಿದ ಜವರಾಯಿಯ ಮನೋಭಾವವನ್ನೇ ಹೋಲುತ್ತದೆ. ಇಬ್ಬರನ್ನೂ ಪ್ರಚೋದಿಸಿರುವುದು ಜೀವನಾಶವನ್ನು ಜೀವಸೃಷ್ಟಿಯಿಂದ ಸರಿಪಡಿಸುವ ತುಡಿತವೆಂಬುದು ಸ್ಪಷ್ಟ.
ಯಾವ ಹೆಣ್ಣಾದರೂ ಸರಿ, ತನ್ನ ಮಕ್ಕಳನ್ನು ಪ್ರೀತಿಸುವವರನ್ನು ಇಷ್ಟಪಡದಿರಲಾರಳೆಂದು ಹೇಳುವ ಮೂಲಕ (ಪು. ೧೪೪) ಪಾರ್ವತಿ ಮತ್ತು ಜವರಾಯಪ್ಪರ ನಡುವಣ ಒಂದು ಬಿರುಕಿನ ಮೇಲೆ ಭೈರಪ್ಪನವರು ಬೆಳಕು ಚೆಲ್ಲಿದ್ದಾರೆ. ಏಕೆಂದರೆ ಜವರಾಯಪ್ಪನೆಂದೂ ಪಾರ್ವತಿಯ ಮಗಳಾದ ಕಮಲೆಯನ್ನು ಸಂಪೂರ್ಣವಾಗಿ ಒಲಿಸಿಕೊಳ್ಳಲು ಮನಸಾರ ಪ್ರಯತ್ನಿಸುವುದಿಲ್ಲ್ಲ.
ಮಗು ಪೂರ್ತಿಯಾಗಿ ತಾಯಿಯದಾಗಬೇಕು; ತಂದೆ ಎನ್ನುವುದು ಬರಿಯ ರೂಢಿಯ ಅಂಕಿತ; ಅಪ್ಪ ಎನ್ನುವ ಕಲ್ಪನೆಯೇ ಇರಬಾರದೆಂದು—ತನ್ನ ಜೀವನಸಂದರ್ಭಗಳ ಸೀಮಿತ ಚೌಕಟ್ಟಿನ ಒಳಗಾದರೂ—ಯುಕ್ತಿಯುಕ್ತವಾಗಿ ಪ್ರತಿಪಾದಿಸುವ ಪಾರ್ವತಿಯದು ಸ್ವತಂತ್ರಪ್ರವೃತ್ತಿ, ದೃಢಸ್ವಭಾವ. ಇದರಿಂದಲೇ ಭೈರಪ್ಪನವರು ಸೃಷ್ಟಿಸಿರುವ ಸಶಕ್ತವಾದ ಸ್ತ್ರೀಪಾತ್ರಗಳ ಪಟ್ಟಿಯಲ್ಲಿ ಪಾರ್ವತಿಯ ಸ್ಥಾನ ನಿರ್ವಿವಾದವೆನಿಸಿದೆ. ಅವಳ ಮೂಲಕ ಲೇಖಕರು ಹಲವಾರು ಮೌಲಿಕ ಸಂಗತಿಗಳನ್ನು ಒಕ್ಕಣಿಸಿದ್ದಾರೆ. ಅವಳ ಚಿಂತನಗಳು ಇಡಿಯ ಕಾದಂಬರಿಯ ತಾತ್ತ್ವಿಕ ಗೌರವವನ್ನು ಹೆಚ್ಚಿಸಿವೆಯೆಂದರೆ ಅತಿಶಯವಲ್ಲ. ಉದಾಹರಣೆಗೆ ಹೆಂಗಸಿನ ದೃಷ್ಟಿಯಿಂದ ಹುಟ್ಟು-ಸಾವುಗಳನ್ನು ನಿರೂಪಿಸುವುದನ್ನು ಗಮನಿಸೋಣ: “ಗಂಡಸಿಗೆ ಹುಟ್ಟಿನ ಅನುಭವ ಎಂದೂ ಆಗುವುದಿಲ್ಲ. ಯಾಕೆಂದರೆ ಹುಟ್ಟಿಸುವ ಅನುಭವವೂ ಅವನಿಗಿರುವುದಿಲ್ಲ ... ಹೆಂಗಸು ತನ್ನ ಹುಟ್ಟಿನ ಅನುಭವಗಳನ್ನು ಬೇರೊಂದು ರೂಪದಲ್ಲಿ ಪುನಃ ಅನುಭವಿಸಬಲ್ಲಳು. ಹುಟ್ಟಿನ ಅನುಭವ, ವಾಸ್ತವತೆಗಳು ಹೆಣ್ಣಿಗೆ ಗೊತ್ತಿರುವಷ್ಟು ಗಂಡಿಗೆ ಗೊತ್ತಿಲ್ಲ ... ಸಾವಿನ ಬಗ್ಗೆ ಗಂಡಸಿನಷ್ಟು ಹೆಂಗಸು ಎಂದೂ ಚಿಂತಿಸುವುದಿಲ್ಲ. ಹುಟ್ಟಿನ ಸಂಪರ್ಕವಿಲ್ಲದ ಗಂಡಸಿಗೆ ಸಾವೇ ಹೆಚ್ಚಿನ ವಾಸ್ತವತೆಯಾಗುತ್ತದೆ. ನಮ್ಮ ವೇದಾಂತಗಳೆಲ್ಲ ಗಂಡಸಿನ ಈ ಬೇರು ಕಳೆದುಕೊಂಡ ಅನುಭವದಿಂದ ಬೆಳೆದು ನಿಂತವು” (ಪು. ೧೫೬, ೧೫೭).
ಇದು ಈ ಹಿಂದೆಯೇ ಪ್ರಸ್ತಾವಗೊಂಡ “...ಸಾವೆಂದರೆ ಏನೂ ಇಲ್ಲದ ಶೂನ್ಯವಲ್ಲ. ಅದೇ ನಿಜವಾಗಿ ಅನುಭವಕ್ಕೆ ಸಿಗಬಹುದಾದ ಸಂಗತಿ. ಹುಟ್ಟೆಂಬುದು ಅನುಭವಕ್ಕೆ ಸಿಗದ ಖಾಲಿ ಕಲ್ಪನೆ” (ಪು. ೧೦೫) ಎಂಬ ಕಾಳಪ್ಪನ ವಿವರಣೆಗೆ ವಿಸಂವಾದಿಯಾಗಿ ತೋರಿ ವಾಚಕರನ್ನು ಹೊಸಹೊಸ ದಿಕ್ಕುಗಳಲ್ಲಿ ಚಿಂತಿಸಲು ಚೋದಿಸುತ್ತದೆ. ಇಂಥ ಮಾತುಗಳು ಪಾರ್ವತಿಯ ಅಂತರಂಗದ ಅಗಾಧತೀವ್ರತೆಯನ್ನು ಅನ್ಯಾದೃಶವಾಗಿ ತೋರ್ಪಡಿಸುತ್ತವೆ. ಆದರೆ ಭೈರಪ್ಪನವರೇ “ಜಲಪಾತ” ಕಾದಂಬರಿಯಲ್ಲಿ ಹೆರಿಗೆಯ ನೋವನ್ನು ಅನನ್ಯಸಾಧಾರಣ ರೀತಿಯಲ್ಲಿ ವರ್ಣಿಸಿರುವುದನ್ನು ನೆನಪಿಗೆ ತಂದುಕೊಂಡರೆ, ಎಲ್ಲ ಸಂದರ್ಭಗಳಲ್ಲಿಯೂ ಸಾಕ್ಷಾತ್ ಅನುಭವವೇ ಅರಿವಿನ ಮಾನದಂಡವಾಗಲಾರದೆಂದು ತೋರದಿರದು.
ಇಷ್ಟೇ ಪರಿಣಾಮಕಾರಿಯಾದುದು ಗಂಡು-ಹೆಣ್ಣುಗಳ ನಡುವಣ ವ್ಯತ್ಯಾಸವನ್ನು ಪಾರ್ವತಿಯು ವಿವರಿಸುವ ಪರಿ: “ಒಬ್ಬ ಹೆಂಗಸಿನ ಮೇಲೆ ನಿಕಟಭಾವ ಬಂದರೆ ಗಂಡಸಿಗೆ ಅವಳನ್ನು ಕೂಡುವ ಬಯಕೆಯಾಗುತ್ತೆ; ಹೆಂಗಸಿಗೆ ಒಬ್ಬ ಗಂಡಸಿನ ಮೇಲೆ ನಿಕಟಭಾವ ಬೆಳೆದಾಗ ಅವನಿಂದ ತಾನೊಂದು ಮಗು ಪಡೆಯಬೇಕೆಂಬ ಬಯಕೆ ಬೆಳೆಯುತ್ತೆ” (ಪು. ೧೫೭). ಕಾಳಪ್ಪ ಮಾತನಾಡಿಸಿದ ಬಳಿಕ ಪಾರ್ವತಿಯ ಗತಿಯೇನಾಯಿತೆಂದು ಹೇಳದಿರುವುದು ಕಥೆಯ ರೂಪದೃಷ್ಟಿಯಿಂದ ಅಸಮರ್ಪಕವೆನಿಸಲು ಅವಕಾಶವಿದ್ದರೂ ರಸದೃಷ್ಟಿಯಲ್ಲಿ ಸಮುಚಿತವೇ ಆಗಿದೆ.
ಸೃಷ್ಟಿಗೆ ಸಂಬಂಧಿಸಿದಂತೆ ಪಾರ್ವತಿ ಮತ್ತು ಮಾಲತಿಯರನ್ನು ಒಟ್ಟಾಗಿ ಗಮನಿಸಿದರೆ ಭೈರಪ್ಪನವರ ಪಾತ್ರಚಿತ್ರಣವು ಅದೆಷ್ಟು ಸಂಕೀರ್ಣವಾದುದೆಂದು ತಿಳಿಯುತ್ತದೆ. ತನಗೊಂದು ಮಗುವಾಗದಿದ್ದರೆ ಜೀವನದ ಅರ್ಥವೇ ನಶಿಸುವುದೆಂದು ಪಾರ್ವತಿಯು ಭಾವಿಸಿದರೆ, ಮಾಲತಿಗೆ ಸಂತಾನವು ಬೇಡದ ಬಾಧ್ಯತೆ. ಇಬ್ಬರೂ ಆರ್ಥಿಕವಾಗಿ ಸ್ವಾವಲಂಬಿಗಳು. ಆದರೆ, ಮಗುವನ್ನು ತಾನೊಬ್ಬಳೇ ಸಾಕಿ ಸಲಹುವೆನೆಂಬ ಪಾರ್ವತಿಯ ಆತ್ಮವಿಶ್ವಾಸ ಮಾಲತಿಗಿಲ್ಲ. ತನ್ನ ಮತ್ತು ಕುಮಾರರ ಆರ್ಥಿಕಪರಿಸ್ಥಿತಿ ಅಸ್ಥಿರವಾಗಿರುವುದೇ ಇದಕ್ಕೆ ಕಾರಣವೆಂದು ಅವಳ ಗ್ರಹಿಕೆ. ಜವರಾಯಿಯೇ ಇಲ್ಲವಾದ ಮೇಲೆ ಪಾರ್ವತಿಯ ಸಂತಾನಾಪೇಕ್ಷೆಯು ಮರಳುಗಾಡಿನಲ್ಲಾದ ಬಾಯಾರಿಕೆಯಂತಾಯಿತು. ತನಗೆ ಇಷ್ಟವಿಲ್ಲದಿದ್ದರೂ ಗಂಡನ ಒತ್ತಾಯದಿಂದ ಮಾಲತಿಗೆ ಮಗುವಾಗುವ ಸೂಚನೆ ಕೃತಿಯ ಕೊನೆಯಲ್ಲಿದೆ. ಒಟ್ಟಿನಲ್ಲಿ ಇಬ್ಬರಿಗೂ ಸೃಷ್ಟಿಯ ವಿಷಯದಲ್ಲಿ ಸಂತೋಷ-ಸಮಾಧಾನಗಳಿಲ್ಲ.
ಸುಬ್ಬಲಕ್ಷ್ಮಿ. ಇವಳ ಮತ್ತು ಜವರಾಯಪ್ಪನ ಸ್ವಭಾವಗಳು ಪರಸ್ಪರ ವಿರುದ್ಧ. ಈಕೆ ಸಮಾರಂಭಪ್ರಿಯೆಯಾದರೆ ಈ ವಿಷಯದಲ್ಲಿ ಅವನಿಗೆ ಹೆಚ್ಚಿನ ಸಂಭ್ರಮವಿಲ್ಲ. ಸಹಜವಾದ ಕಾಮೋಪಶಾಂತಿಯ ವಿಧಾನವನ್ನು ಹುಡುಕುತ್ತಿದ್ದಾಗ ಸುಬ್ಬಲಕ್ಷ್ಮಿಯನ್ನು ವರಿಸಿದ ಜವರಾಯಿಗೆ “ಕಾಮಕ್ಕಾಗಿ ಆದ ಮದುವೆ, ಕಾಮ ಬತ್ತಿದಮೇಲೆ ಕಳಚಿ ಬೀಳಲೇಬೇಕು” (ಪು. ೮೪) ಎನಿಸಿ ಹೆಂಡತಿಯಲ್ಲಿ ಅನುರಾಗ ಅಡಗುತ್ತದೆ. ಇಂತಾದರೂ ತೋಟದ ಮನೆಯಲ್ಲಿ ಒಂಟಿಯಾಗಿ ಬಾಳುವ ಇವಳ ಬಗೆಗೆ ವಾಚಕರಲ್ಲಿ ಸಹಾನುಭೂತಿ ಕುಂದುವುದಿಲ್ಲ. ಇದು ಲೇಖಕರ ಸಂಯಮಕ್ಕೆ ಹಿಡಿದ ಕನ್ನಡಿ.
ಜವರಾಯಿಯ ಸಾವು ಈಕೆಯ ಮೇಲೆ ಬೀರಿದ ಪರಿಣಾಮವನ್ನು ಮನಗಾಣಿಸಲು ಲೇಖಕರು ಶ್ರಾದ್ಧಕರ್ಮಗಳ ತಂತ್ರವನ್ನು ಬಳಸಿಕೊಂಡಿದ್ದಾರೆ. ಇದರ ಮೂಲಕ ಪರಂಪರಾಪ್ರಾಪ್ತವಾದ ನಂಬಿಕೆಗಳು ವಿವಿಧ ಸಂದರ್ಭಗಳಲ್ಲಿ ಮನುಷ್ಯನ ವರ್ತನೆಯನ್ನು ಹೇಗೆ ರೂಪಿಸುತ್ತವೆಂದು ತೋರ್ಪಡಿಸಿದ್ದಾರೆ. ಜವರಾಯಪ್ಪನ ಮರಣಾನಂತರ ಅವನ ಕಿರಿಯ ಮಗನಾದ ಶ್ರೀಧರ ಗರುಡಪುರಾಣವನ್ನು ಓದುವಾಗ ಅಲ್ಲಿಯ ಭಯಜನಕ ವರ್ಣನೆಗಳು ಸುಬ್ಬಲಕ್ಷ್ಮಿಯಲ್ಲಿ ಪಾಪಪ್ರಜ್ಞೆಯನ್ನು ಮೂಡಿಸುತ್ತವೆ. ಇದರಿಂದಾಗಿ ಹಿಂದೆ ಲಾಯರ್ ನಂಜುಡಯ್ಯನಿಂದ ತಾನು ಆಕರ್ಷಿತಳಾದ ನೆನಪು ಮರುಕಳಿಸಿ ಇನ್ನಷ್ಟು ಕಸಿವಿಸಿಯಾಗುತ್ತದೆ. ತಾನು ತಲೆಯನ್ನು ಬೋಡಿಸಿಕೊಳ್ಳದಿದ್ದಾಗ ಹಿರಿಯ ಮಗ ಕುಮಾರ್ ಕೇಶತ್ಯಾಗ ಮಾಡುವುದನ್ನು ಇವಳು ಸಹಿಸಲಾಗುವುದಿಲ್ಲ. ತನ್ನ ಪಾಪಪ್ರಜ್ಞೆಯ ಭಾರವನ್ನು ಇನ್ನೊಬ್ಬರ ಭುಜದ ಮೇಲೆ ಹೇರಿ, ಆ ಮೂಲಕ ಹಗುರವಾಗಲಿಚ್ಛಿಸಿ, ಇದಕ್ಕೆಲ್ಲ ಪಾರ್ವತಿಯೇ ಕಾರಣವೆಂದು ಬಗೆದು ಅವಳನ್ನು ಪರಿಪರಿಯಾಗಿ ತೆಗಳುತ್ತಾಳೆ. ಅನಂತರ ಪ್ರೇತಕ್ಕೆ ನಮ್ಮ ಮಾತು-ಆಲೋಚನೆಗಳೆಲ್ಲವೂ ತಿಳಿಯುವುದೆಂಬ ಪುಟ್ಟಯ್ಯ ಜೋಯಿಸರ ಮಾತು ನೆನಪಾಗಿ ಹೆದರಿಕೆಯಾಗುತ್ತದೆ. ಇಟ್ಟ ಪಿಂಡವನ್ನು ಕಾಗೆಗಳು ತಿನ್ನದಿರುವುದು ಅವಳ ಭೀತಿಭಾವವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಕೊನೆಗೆ ಇದಕ್ಕೆಲ್ಲ ಕಾರಣ ಹುಡುಗುಬುದ್ಧಿಯ ಶ್ರೀಧರನ ವರ್ತನೆಯೆಂದು ತೀರ್ಮಾನಿಸಿ “ನಾಕು ದಿನ ಕರ್ಮ ಕಳೆಯೂವರೆಗೆ ಬರಿ ಹೊಟ್ಟೇಲಿದ್ದರೆ ಏನೂ ಗಂಟು ಹೋಗುಲ್ಲ. ಬೆಳಗ್ಗೆ ಎದ್ದು ಕಾಫಿಗೀಫಿ ಕುಡೀಕೂಡದು ಅಂತ ಕಟ್ಟುಮಾಡ್ತೀನಿ ತಾಳಿ” (ಪು. ೧೮೧) ಎಂದು ಜೋಯಿಸರಿಗೆ ಭರವಸೆ ಕೊಡುತ್ತಾಳೆ. ಒಟ್ಟಿನಲ್ಲಿ ಸುಬ್ಬಲಕ್ಷ್ಮಿಯು ಭಯವನ್ನು ಜ್ಞಾನದ ಮೂಲಕ ಮೀರಲಾಗದ, ತಮ್ಮ ಬಾಧ್ಯತೆಯನ್ನು ಇನ್ನೊಬ್ಬರ ಮೇಲೇರಿಸಿ ಸಮಾಧಾನ ತಂದುಕೊಳ್ಳುವ ಸಾಮಾನ್ಯಜನರೆಲ್ಲರ ಪ್ರತೀಕ.
ಭಾಷೆ, ನಿರೂಪಣವಿಧಾನ
ಕಣ್ಣುಕೋರೈಸುವಂತೆ ಎದ್ದುತೋರದೆ, ವಿಚಾರದ ಸಂವಹನದಲ್ಲಿ ಯಾವುದೇ ತೆರದ ಸಂಶಯಗಳಿಗೆ ಆಸ್ಪದವೀಯದಂತೆ ಪರಿಣಾಮಕರವಾಗಿ ದುಡಿಯುವುದು ಭೈರಪ್ಪನವರ ಭಾಷೆಯ ಪರಿ. ಹಾಗೆಂದಮಾತ್ರಕ್ಕೆ ಇದರಲ್ಲಿ ಜಾಳುತನವಿದೆಯೆಂದಲ್ಲ. ಎಲ್ಲ ಬಗೆಯ ಪಾತ್ರಗಳಿಗೂ ಅಕೃತಕವಾಗಿ ಹೊಂದಿಕೊಳ್ಳಬಲ್ಲ ನಮ್ಯತೆ ಹಾಗೂ ಎಲ್ಲ ಬಗೆಯ ಸಂದರ್ಭಗಳಿಗೂ ಜೀವತುಂಬಬಲ್ಲ ರಮ್ಯತೆ ಇದಕ್ಕುಂಟು. ಪ್ರಕೃತಕೃತಿಯಲ್ಲಿ ಎಲ್ಲ ಪಾತ್ರಗಳೂ ಭೌಗೋಲಿಕವಾಗಿ ಒಂದೇ ಹಿನ್ನೆಲೆಯವಾದುದರಿಂದ ಸಾಮಾನ್ಯವಾಗಿ ಒಂದೇ ರೀತಿ ಮಾತನಾಡುತ್ತವೆ. ಇಂತಿದ್ದರೂ ನಗರಜೀವನದ ಬಳಕೆಯಿರುವ ಮಾಲತಿಯ ಮಾತುಗಳಿಗೂ ಹಳ್ಳಿಯ ಹೊರತಾಗಿ ಬೇರೇನನ್ನೂ ಕಾಣದ ಸುಬ್ಬಲಕ್ಷ್ಮಿಯ ಮಾತುಗಳಿಗೂ ಸ್ಪಷ್ಟವಾದ ಅಂತರ ಕಾಣದಿರದು. ಅವಾಚ್ಯಶಬ್ದಗಳು ಅಲ್ಲಲ್ಲಿ ಮಿಂಚಿ ಮರೆಯಾಗುತ್ತವೆಯಾದರೂ ಸಂನಿವೇಶದ ಸಾಂದ್ರತೆಯನ್ನು ಹೆಚ್ಚಿಸಲು ಸೋಲುವುದಿಲ್ಲ.
ಕಾಳಪ್ಪನ ಮನಸ್ಸಿನಲ್ಲಿ ಮರಣದ ಭಾವ ತುಂಬಿಕೊಂಡಿದ್ದಾಗ ಸ್ಕಾಟ್‌ಲ್ಯಾಂಡಿನ ಗರ್ವಿನ್ ಪ್ರದೇಶದಲ್ಲಿ ಸಮುದ್ರತಟದ ಬಂಡೆಯೊಂದು ಅವನಿಗೆ ಸಾವಿನ ಮೂರ್ತರೂಪವೆಂಬಂತೆ ತೋರುತ್ತದೆ. ಈ ಸಂದರ್ಭದಲ್ಲಿ ಬರುವ ಆ ಬಂಡೆಯ ಮತ್ತು ಸಮುದ್ರಜಲದ ವರ್ಣನೆಯು ಅಮೂರ್ತತೆಯನ್ನು ಮಾತಿನಲ್ಲಿ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ: “ಕಪ್ಪು ಹಿನ್ನೆಲೆ, ಕಪ್ಪು ಮೋಡಗಳನ್ನು ತನ್ನ ಮೈಯಿಂದ ಹೊಮ್ಮಿಸುತ್ತಾ ಹಸಿರು ಅಲೆಗಳ ಕೆಳಗೆ ತಿಳಿಯದ ಆಳದಲ್ಲಿ ಸ್ಥಾಪಿಸಿಕೊಂಡ ಆ ಯಮಗಂಭೀರ ಬಂಡೆಯು ಬದಲಾಯಿಸಲು ಸಾಧ್ಯವಾಗದ ಸ್ವರೂಪ ಕೊಟ್ಟಿತ್ತು ನನ್ನ ಭಾವಕ್ಕೆ. ಸಾವೇ ಜೀವನದ ಅಚಲವಾದ, ಧ್ರುವವಾದ ಸತ್ಯ. ಅದನ್ನು ಮೀರಿಸಿದ ವಾಸ್ತವತೆ ಬೇರೊಂದಿಲ್ಲವೆಂಬ ಘನಭಾವ” (ಪು. ೩೧). “...ಬೇರೆಲ್ಲ ಬಣ್ಣಗಳನ್ನೂ ಶೋಧಿಸಿ ತೆಗೆದು ಕಪ್ಪೊಂದನ್ನೇ ಭಟ್ಟಿಗಟ್ಟಿಸಿದ ಬಣ್ಣ. ನನ್ನೊಳಗಿದ್ದ ಭಾವದ ಯಥಾರ್ಥ ಅಭಿವ್ಯಕ್ತಿಯ ಚಿತ್ರ ಅದೇ. ನಿರ್ಜೀವ, ನಿರ್ದಾಕ್ಷಿಣ್ಯ, ನಿರ್ದಯ ಕ್ರೂರಾತೀತ ವಿಜೃಂಭಣೆ. ಚೂಪು ಅಲಗಿನ ಕತ್ತಿಯನ್ನು ಮೇಲೆತ್ತಿರುವ ಕೊಲೆಗಡುಕನ ಮುಖದಲ್ಲಿ ಕ್ರೌರ್ಯವಿರಬಹುದು; ಆದರೂ ಅದು ಮಾನವೀಯ. ಮನುಷ್ಯನಿಲ್ಲದೆ, ಜೀವವಿಲ್ಲದೆ ಕ್ರೌರ್ಯವುಂಟೆ? ಆದರೆ ಅದು ಕ್ರೌರ್ಯಾತೀತ, ಜೀವವನ್ನೂ ನುಂಗಿಹಾಕುವ ಉಜ್ಜುಗಿಸುವಿಕೆಯಿದ್ದರೂ ನಿನ್ನನ್ನು ಕೊಂದು ನನಗೇನಾಗಬೇಕೆಂಬ ಉಪೇಕ್ಷೆ” (ಪು. ೩೨). ಕಾಳಪ್ಪನಿಗೆ ಹೀಗೆ ಸಾವಿನ ಸಂಕೇತವಾಗಿ ಕಂಡ ಬಂಡೆ ಅವನನ್ನು ಅಲ್ಲಿಗೆ ಕರೆದೋಯ್ದ ಮೆಕ್‌ಡೊನಾಲ್ಡ್ಗೆ ಜನನೇಂದ್ರಿಯದಂತೆ ಭಾಸವಾಗುತ್ತದೆ. ಈ ಬಗೆಯಲ್ಲಿ ವಸ್ತು ಒಂದೆಯಾದರೂ ಅದು ವ್ಯಕ್ತಿಗಳ ಮನಃಸ್ಥಿತಿಯನ್ನು ಅನುಸರಿಸಿ ಹೇಗೆ ವಿಭಿನ್ನವಾಗಿ ತೋರಬಲ್ಲುದೆಂಬುದನ್ನು ಭೈರಪ್ಪನವರು ಚೆನ್ನಾಗಿ ನಿರೂಪಿಸಿದ್ದಾರೆ.
ವ್ಯುತ್ಪನ್ನರೂ ಪ್ರತಿಭಾಶಾಲಿಗಳೂ ಆದ ಲೇಖಕರಿಗೆ ಹೊಸಹೊಸ ಬಗೆಯ ವರ್ಣನೆಗಳನ್ನು ಕಲ್ಪಿಸಿಕೊಳ್ಳುವುದು ಕಷ್ಟವೇನಲ್ಲ. ಇದಕ್ಕೆ ಉದಾಹರಣೆಯಾಗಿ ವೈಜ್ಞಾನಿಕ ಭೂಮಿಕೆಯಲ್ಲಿ ರೂಪುಗೊಂಡ ಈ ವಾಕ್ಯಗಳನ್ನು ಗಮನಿಸಬಹುದು: “...ಒಳಗೆಲ್ಲ ಭಣಗುಟ್ಟುವ ಶೂನ್ಯದ ಅನುಭವ. ಕಿಟಕಿಬಾಗಿಲುಗಳನ್ನೆಲ್ಲ ಬಿಗಿಯಾಗಿ ಮುಚ್ಚಿದ ಕೋಣೆಯೊಳಗೆ ಕೂತು ಗೋಡೆಗೆ ಅಳವಡಿಸಿದ ಒಂದು ಪಂಪಿನಿಂದ ಒಳಗಿನ ಗಾಳಿಯನ್ನೆಲ್ಲ ಹೊರಹಾಕಿ ಒಳಗೆ ಶೂನ್ಯವನ್ನುಂಟುಮಾಡಿದಂತಹ ಅನುಭವ” (ಪು. ೩೬). “ಮಟ್ಟ ತಪ್ಪಿದ ಇ.ಸಿ.ಜಿ. ಗೆರೆಯಂತೆ ನನ್ನ ಧ್ವನಿಯಲ್ಲಿ ಏರಿಳಿತವಾಗಿದ್ದು ನನಗೆ ಕೇಳಿಸಿತು” (ಪು. ೪೧).
ಜವರಾಯಪ್ಪನ ಗಮಕವಾಚನದ ಹಿನ್ನೆಲೆಯನ್ನು ಬಳಸಿಕೊಂಡು ಅವನು ಮತ್ತು ಪಾರ್ವತಿ ಮೊದಲ ಬಾರಿಗೆ ಬೆರೆತಾಗಿನ ಸಂನಿವೇಶವನ್ನು ಕಾವ್ಯಾತ್ಮಕವಾಗಿ ವರ್ಣಿಸಲಾಗಿದೆ: “ಪಸರಿಸಿತು ಮಧುಮಾಸ ತಾವರೆಯೆಸಳ ದೋಣಿಯ ಮೇಲೆ ಹಾಯ್ದವು ಕುಸುಮರಸದುಬ್ಬರದ ತೊರೆಯನು ಕೂಡೆ ತುಂಬಿಗಳು || ಇದನ್ನ ಸಾರಂಗದಲ್ಲಿ ಹಾಡಿದರೆ ಚಂದ ಅಲ್ಲವೆ? ಅಂತ ಸೂಚಿಸಿದ ಇವಳ ರಾಗಕಲ್ಪನೆ ಶಹಬ್ಬಾಸ್! ... ಒಸರ್ವ ಮಕರಂದದ ತುಷಾರದ ಕೆಸರೊಳದ್ದವು ಕೊಂಚೆಗಳು ಹಗಲೆಸೆವ ದಂಪತಿವಕ್ಕಿ ಸಾರಸ ರಾಜಹಂಸಗಳು. ಮಧುಮಾಸದ ಭಾವದಲ್ಲಿ ಇಬ್ಬರೂ ಮಿಂದು ಅನಂತರ ಆದದ್ದು ರತಿ ... ಉಹೂಂ. ರತಿ ಸರಿಯಲ್ಲ, ಇದುವರೆಗೆ ನಾನು ಕಂಡಿದ್ದುದೆಲ್ಲ ಮೈಥುನ. ತೀಟೆತೀರಿಸಿಕೊಳ್ಳುವ, ಹುಚ್ಚಿನ ಬಿಗು ಇಳಿಸಿಕೊಳ್ಳುವ ಕೊಬ್ಬಿನ ಮೈಥುನ. ನಿದ್ದೆ ಬರಲೆಂದು ಬೇಕೆಂದೇ ಬಳಲಿಕೆಯನ್ನು ಬರಸಿಕೊಳ್ಳುವ ಸಾಧನ. ಇಂಥ ಭಾವದಲ್ಲಿ ಭಾಗಿಯಾಗಿ ಕಾಯವು ಭಾವದ ಸಾಧನವಾಗಿ ಕಾಯದ ಕಾರ್ಯ ಮುಗಿದರೂ ಭಾವದ ಮಡು ಕಲಕದಂತೆ ಕಿವಿಗೊಟ್ಟು ಹೇಗೆ ಅಂಗಾತ ಶ್ರುತಿಯಲ್ಲಿ ಜೊತೆ ಮಲಗಿ, ಇದು ಮೈಥುನವಲ್ಲ, ರತಿಯಲ್ಲ. ಏನಿದರ ಅರ್ಥ? ಮತ್ತೆ ಒಳಗಿನಿಂದ ನಿಧಾನಗತಿಯಲ್ಲಿ ಉಕ್ಕಿ ಬರುತ್ತದೆ, ಪಸರಿಸಿತು ಮಧುಮಾಸ, ಆಹಾ ಸಾರಂಗ ಮಧ್ಯಮವನ್ನು ಮುಟ್ಟಿದಾಗ ಹಾಯ್ ಅನ್ನಿಸುವ ತೋಲನ” (ಪು. ೧೧೬).
ವರ್ಣನೆಗಾಗಿ ವರ್ಣನೆಯನ್ನು ಭೈರಪ್ಪನವರೆಂದೂ ಮಾಡುವವರಲ್ಲ. ಹೀಗಾಗಿ ಅವರ ಕಾದಂಬರಿಗಳಲ್ಲಿ ವರ್ಣನಾಂಶಗಳು ಕಡಮೆ. ಆದರೆ ಮೇಲಿನ ಉದಾಹರಣೆಗಳಂತೆ ಸಂದರ್ಭೋಚಿತವಾಗಿ ಒದಗಿ ವಿಭಾವತ್ವದ ಸ್ತರಕ್ಕೇರುವ ವರ್ಣನೆಗಳು ನಿರಪವಾದವಾಗಿ ರಸಕ್ಕೆ ಪೂರಕವಾಗಿವೆ.
ಸಮುಚಿತವಾದ ಆವರಣನಿರ್ಮಾಣದಲ್ಲಿ ಭೈರಪ್ಪನವರು ಸಿದ್ಧಹಸ್ತರು; ಹೀಗಾಗಿ ಸಣ್ಣಸಣ್ಣ ಸಂಗತಿಗಳನ್ನೂ ಆಯಾ ಸನ್ನಿವೇಶದ ಕಾಂತಿಯನ್ನು ಹೆಚ್ಚಿಸಲು ಅವರು ಬಳಸಿಕೊಳ್ಳುತ್ತಾರೆ. ಉದಾಹರಣೆಗೆ: ಮೊದಲ ಬಾರಿ ಕಾಳಪ್ಪನನ್ನು ಕಾಣಲು ಪಾರ್ವತಿ ಬಂದಾಗ ಬಿಸಿಲಿನ ಧಗೆಯಿತ್ತೆಂದು ಕಲ್ಪಿಸಿ, ಅದಕ್ಕೆ ಸರಿಯಾಗಿ ಹೊಂದುವಂತೆ ರೂಮಿನಲ್ಲಿ ಫ್ಯಾನ್ ಓಡುತ್ತಿರುವುದನ್ನು ಚಿತ್ರಿಸುತ್ತಾರೆ. ಇದೇ ಸಂದರ್ಭದಲ್ಲಿ ಶ್ರೀಧರ ಅಲ್ಲಿಗೆ ಬಂದಾಗ ಇಡಿಯ ವಾತಾವರಣ ಮುಜುಗರದ ಭಾವದಿಂದ ಭಾರವಾಗುತ್ತದೆ. ಆಗ “...ಚಲನೆ ಕಷ್ಟವೆನಿಸತೊಡಗಿತು. ನಿಧಾನವಾಗಿ ಗಾಳಿಯನ್ನು ನೂಕುತ್ತಿದ್ದ ಫ್ಯಾನಿನ ಅಲಗುಗಳೂ ಏಗುತ್ತಿರುವಂತೆ ಕಂಡವು” (ಪು. ೬೧).
ಇನ್ನೊಂದು ಸಂದರ್ಭದಲ್ಲಿ ಅವನ ಎರಡನೆಯ ಸಂಬಂಧದ ವಿಷಯವಾಗಿ ಜವರಾಯಿಯನ್ನು ಕಾಣಲು ಅವನ ಹಿರಿಯ ಮಗಳು ಲಲಿತೆ ಛಾಪಾಕಾಗದದ ಅಂಗಡಿಗೆ ಬಂದಾಗ, ಅದೇ ದಿನ ಬೆಳಗ್ಗೆ ಅಂಗಡಿಗೆಲ್ಲ ಟಿಕ್‌ಟೊಂಟಿ ಎಂಬ ತಗುಣೆಯನ್ನು ದೂರವಿಡುವ ದ್ರವವನ್ನು ಸಿಂಪಡಿಸಿರುತ್ತಾನೆ. ಹತ್ತಾರು ಹಳ್ಳಿಯ ಜನ ನಿತ್ಯವೂ ಬಂದುಹೋಗುವ ಜಾಗದಲ್ಲಿ ತಗುಣೆ ಸೇರುವುದು ಸಹಜವಷ್ಟೆ. ಮುಜುಗರದ ಮಾತನ್ನು ಹೇಗೆ ಆರಂಭಿಸಬೇಕೆಂದು ತಿಳಿಯದೆ ಮೌನವಾಗಿದ್ದ ಲಲಿತೆಗೆ ಹಾರಾಡುತ್ತಿದ್ದ ನೊಣಗಳ ಕಾಟದಿಂದಲೂ ಟಿಕ್‌ಟೊಂಟಿಯ ದುರ್ನಾತದಿಂದಲೂ ವಾಂತಿ ಬರುವಂತಾಗುತ್ತದೆ. ಆಗ “ಅವಳಿಗೆ ಇನ್ನು ತಡೆಯಲಾಗಲಿಲ್ಲವೆಂದು ಕಾಣುತ್ತೆ, ಒಟ್ಟಿಗೆ ಅಂದುಬಿಟ್ಟಳು ಒಳಗೆ ಕಟ್ಟಿಕೊಂಡಿದ್ದುದ್ದನ್ನು ವಾಂತಿ ಮಾಡಿಕೊಳ್ಳುವವಳಂತೆ. ‘ಇಲ್ಯಾಕಿರಬೇಕು ಈ ಇಷ್ಟಗಲ ರೂಮಿನಲ್ಲಿ, ಸುಮ್ಮನೆ ಮನೆಗೆ ಬಂದರೆ ಆಗದೆ?’” (ಪು. ೧೦೧). ನೊಣ, ತಗುಣೆಯನ್ನು ದೂರವಿಡುವ ದ್ರವವೇ ಮೊದಲಾದವು ಕೂಡ ಭೈರಪ್ಪನವರ ಶಕ್ತಿಯ ಕಾರಣ ಮಹತ್ತ್ವಪೂರ್ಣವಾದ ಉದ್ದೀಪನವಿಭಾವಗಳಾಗಬಲ್ಲುವು. ಪ್ರತಿಭೆಯ ಪ್ರಕಾಶದಲ್ಲಿ ಉಚ್ಚ-ನೀಚಭಾವಗಳು ಉಳಿಯುವುದಿಲ್ಲವೆಂಬುದಕ್ಕೆ ಇದಕ್ಕಿಂತ ಮಿಗಿಲಾದ ನಿದರ್ಶನ ಅನವಶ್ಯ.
ಉಪಸಂಹಾರ
“ಮೃತ್ಯುವಿನ ಅಂಚಿಗೆ ಪ್ರಜ್ಞೆಯು ತಲುಪಿದಾಗ ಮಾತ್ರ ಜೀವನದ ನಿಜವಾದ ಮಾಪನವು ಸಾಧ್ಯ” ಎಂಬುದನ್ನು ಹಾಸನದ ಹಳ್ಳಿಯಿಂದ ಮೊದಲ್ಗೊಂಡು ನಕ್ಷತ್ರಲೋಕದವರೆಗಿನ ದೇಶವಿಸ್ತಾರದಲ್ಲಿ, ಭೂತ-ಭವಿಷ್ಯತ್-ವರ್ತಮಾನಗಳೆಲ್ಲವನ್ನೂ ವ್ಯಾಪಿಸುವ ಕಾಲವಿಸ್ತಾರದಲ್ಲಿ ’ನೆಲೆ’ ಕಾದಂಬರಿಯು ನಿರೂಪಿಸುತ್ತದೆ. ಇದರ ಜೊತೆಗೆ ಸೃಷ್ಟಿ-ಕಾಮಗಳ ಅಂತರರ್ಥವನ್ನೂ ತೆರೆದಿಡುತ್ತದೆ. ಇಲ್ಲಿ ಪ್ರಧಾನವಾಗಿ ಆಶ್ರಯಿಸಿರುವ ಕಥನತಂತ್ರ ಜವರಾಯಿಯ ಡೈರಿಯದಾದ ಕಾರಣ ಹಾಗೂ ಕೆಲವೇ ಘಟನೆಗಳಿದ್ದು ಪಾತ್ರಗಳ ಆಲೋಚನೆಗಳಿಂದಲೇ ಕಥಾಶರೀರಕ್ಕೆ ರಕ್ತ-ಮಾಂಸಗಳು ತುಂಬಿಕೊಳ್ಳುವ ಕಾರಣ, ಲೇಖಕರದ್ದೇ ಮಾತುಗಳಿಗೆ ಅವಕಾಶ ಕಡಮೆ. ಇಲ್ಲಿರುವುದೆಲ್ಲ ಕವಿನಿಬದ್ಧಪ್ರೌಢೋಕ್ತಿಯ ವಿಜೃಂಭಣೆ. ಸಾವನ್ನು ಕುರಿತಾದ ಕೃತಿಯಲ್ಲಿ ಅಪೇಕ್ಷಿತವೇ ಎಂಬಂತೆ ಇದರ ಅಂಗಿರಸವು ನಿರ್ವೇದವನ್ನು ಸ್ಥಾಯಿಯಾಗಿ ಉಳ್ಳ ಶಾಂತ. ಧರ್ಮಸೂಕ್ಷ್ಮಗಳನ್ನೂ ಆರ್ಥಿಕವಾದ ಏರುಪೇರುಗಳನ್ನೂ ಕಾಮದ ದುರ್ನಿವಾರತೆಯನ್ನೂ ಸಮಗ್ರವಾಗಿಯಲ್ಲದಿದ್ದರೂ ಅತ್ಯಂತ ಸಮರ್ಥವಾಗಿ ವಿವರಿಸುವ ಈ ಕೃತಿ ತ್ರಿವರ್ಗ-ಅಪವರ್ಗಗಳ ನಡುವಣ ಸೇತುವೆಯಂತಿದೆ.
Concluded.