ಕಾಳಪ್ಪ. ಇವನ ಹೆಸರು ಯಮಧರ್ಮನ ಸಂಕೇತವೂ ಹೌದು, ಕಾಲದ ಸಂಕೇತವೂ ಹೌದು. ಸದಾ ದೇಶ-ವಿದೇಶಗಳಲ್ಲಿ ತಿರುಗಾಡುವ ವೃತ್ತಿಪರನನ್ನಾಗಿ ಕಾಳಪ್ಪನನ್ನು ಚಿತ್ರಿಸುವ ಮೂಲಕ ಭೈರಪ್ಪನವರು ಕಾಲದ ಚಲನಶೀಲತೆಯನ್ನು ಸೂಚಿಸಿದ್ದಾರೆ. ಸಾವನ್ನೂ ಸೇರಿದಂತೆ ಜವರಾಯಿಯ ಜೀವನದ ಹಲವು ಸಂಗತಿಗಳನ್ನು ಅವನ ಡೈರಿಯ ಮೂಲಕ ಕಾಳಪ್ಪ ತಿಳಿದುಕೊಳ್ಳುವುದು ಕಾಲದ ಸಾಕ್ಷಿಸ್ವಭಾವವನ್ನು ಧ್ವನಿಸುವಂತಿದೆ. ಈ ಹಿನ್ನೆಲೆಯಲ್ಲಿ ನಾವು ಪಾತ್ರವಿಶ್ಲೇಷಣೆಗೆ ತೊಡಗಬಹುದು. ಕಾಳಪ್ಪನನ್ನು ಅವನ ಅರವತ್ತೊಂದನೆಯ ವಯಸ್ಸಿನಲ್ಲಿ ಸಾವಿನ ಆಲೋಚನೆ ಆವರಿಸಿಕೊಳ್ಳುತ್ತದೆ. ಆತನ ಮಾತಿನಲ್ಲಿಯೇ ಹೇಳುವುದಾದರೆ, ಅದು “ಇದ್ದಕ್ಕಿಂದ್ದಂತೆಯೇ ತೋರಿಸಿಕೊಂಡ ಮುಪ್ಪಲ್ಲ, ಶಕ್ತಿಹೀನತೆಯಲ್ಲ, ಕಾಹಿಲೆಯಲ್ಲ, ಸಾವು. ಒಂದು ದಿನ ನಾನು ಸಾಯುತ್ತೇನೆಂಬ ತೀರ ಸಾಮಾನ್ಯ ಸಂಗತಿಯ ಅರಿವು” (ಪು. ೩೫). ಇದಾಗುವುದು ಸಂತತಪ್ರಯಾಣದಿಂದ ದೇಹ-ಮನಸ್ಸುಗಳು ಬಳಲಿ ವಿಶ್ರಾಂತಿಗೆಂದು ಆಸ್ಪತ್ರೆ ಸೇರಿದಾಗ. ಅಲ್ಲಿ ಅನಿವಾರ್ಯವಾಗಿ ಹೆಂಗಸು ನರ್ಸಿನೆದುರು ನಗ್ನವಾಗುವ ಪರಿಸ್ಥಿತಿಯುಂಟಾದಾಗ ಕಾಳಪ್ಪನನ್ನು ಹಠಾತ್ತನೆ ಒಂಟಿತನವು ಅಪ್ಪಳಿಸುತ್ತದೆ. ಮದುವೆಯಾಗದಿದ್ದರೂ ಅನೇಕ ದೇಶಗಳ ಅನೇಕ ಸ್ತ್ರೀಯರೊಡನೆ ಸಂಭೋಗಸುಖವನ್ನು ಅನುಭವಿಸಿದ್ದ ಕಾಳಪ್ಪನಿಗೆ ಅಪರಿಚಿತರೊಡನೆ ಕೂಡುವುದು ಅನಿವಾರ್ಯವಾಗಿ ತೋರಿತ್ತೇ ಹೊರತು ಅಸಹಾಯಕತೆಯ ಕುರುಹಾಗಿ ಕಂಡಿರಲಿಲ್ಲ. ಏಕೆಂದರೆ “ನಿಸ್ಸಹಾಯಕತೆಯಿಲ್ಲದ ಒಂಟಿತನವು ಸಹ್ಯವೇ. ಲೈಂಗಿಕ ಹುಮ್ಮಸ್ಸಿನಲ್ಲಿ ಆಗುವ ಬೆತ್ತಲೆಯಲ್ಲಿ ಒಂಟಿತನವೂ ಇಲ್ಲ, ನಿಸ್ಸಹಾಯಕತೆಯೂ ಇಲ್ಲ” (ಪು. ೩೪) ಎಂಬುದು ಅವನ ನಿಲವು. ಆದರೆ ಈಗೊದಗಿರುವುದು ನಿಸ್ಸಾಹಯಕ ಭಾವದೊಂದಿಗೆ ಬಿಡಿಸಲಾಗದಂತೆ ಬೆಸೆದುಕೊಂಡಿರುವ ಒಂಟಿತನ. ಇಂಥ ಒಂಟಿತನದಲ್ಲಿ ಸುಖವೆಲ್ಲಿ? ಸುಖವಿಲ್ಲದ ಬದುಕೆಂತು? ಈ ನಿಟ್ಟಿನಲ್ಲಿ “ಏಕಾಕೀ ನ ರಮತೇ” ಎಂದು ಶ್ರುತಿಯೂ ದನಿಗೂಡಿಸಿದೆಯಷ್ಟೆ. ಹೀಗಾಗಿ ಕಾಳಪ್ಪನಿಗೆ ಒಂಟಿತನದ ಮೂಲಕ ಸಾವಿನ ಪರಿಚಯವಾಗುತ್ತದೆ.
ಹೀಗೆ ಒಂಟಿತನದ ಬಲೆಯಲ್ಲಿ ಸಿಲುಕಿದ್ದ ಕಾಳಪ್ಪ ಅದೊಮ್ಮೆ ಅದರಿಂದ ಬಿಡಿಸಿಕೊಳ್ಳಲು ಯತ್ನಿಸುತ್ತಾನೆ. ಗಣಪತಿಯ ಹಬ್ಬದ ದಿನ ಒಬ್ಬನೇ ಇರುವುದು ಅಸಾಧ್ಯವೆನಿಸಿ, ಯಾರ ಮನೆಗಾದರೂ ಹೋಗಿ ಪೂಜೆ ಮಾಡಿ ಕಡುಬು ತಿನ್ನಬೇಕೆಂಬ ಆಸೆಯಾಗುತ್ತದೆ. ಅದರಂತೆ ಸ್ನೇಹಿತರೊಬ್ಬರ ಮನೆಗೆ ಹೂವು-ಹಣ್ಣುಗಳೊಂದಿಗೆ ತೆರಳುತ್ತಾನೆ. ಅವರು ಇಂಗ್ಲಿಷಿನಲ್ಲಿ ಶಿಷ್ಟಾಚಾರದ ಮಾತುಗಳನ್ನಾಡುವರೇ ಹೊರತು ಆತ್ಮೀಯವಾಗಿ ಬರಮಾಡಿಕೊಳ್ಳುವುದಿಲ್ಲ. ಗೌರಿಹಬ್ಬಕ್ಕೆ ಮನೆಗೆ ಕರೆಸಿದ ಮಗಳ ಜೊತೆ ಊಟ ಮಾಡುವ ಸಂತೋಷವನ್ನು ಈ ಅನಾಹೂತ ಅತಿಥಿ ನಾಶಮಾಡಿದನೆಂಬ ಭಾವ ಮನೆಯವರೆಲ್ಲರ ಮುಖದಲ್ಲಿಯೂ ತಾಂಡವಿಸುತ್ತದೆ. ಇದರಿಂದ ಬೇಸರಗೊಂಡ ಕಾಳಪ್ಪ ಅಲ್ಲಿ ಹೆಚ್ಚು ಹೊತ್ತು ನಿಲ್ಲದೆ ಹಿಂದಿರುಗುತ್ತಾನೆ. ಅವನಿಗೆ ಮತ್ತೆ ಒಂಟಿತನವೊದಗುತ್ತದೆ. ಸಾಮೂಹಿಕವಾಗಿ ಸಂತೋಷವನ್ನು ಅನುಭವಿಸಲೆಂದಲ್ಲವೇ ಪರ್ವ-ಉತ್ಸವಾದಿಗಳು ಏರ್ಪಟ್ಟಿರುವುದು? ಇದರಿಂದಲೂ ವಂಚಿತನಾದ ಕಾಳಪ್ಪ ಮತ್ತೊಂದು ವಿಧದಲ್ಲಿ ಸಾವಿನೊಂದಿಗೆ ಮುಖಾಮುಖಿಯಾಗುತ್ತಾನೆ.
ತನ್ನ ಸ್ನೇಹಿತನ ಡೈರಿಯನ್ನೋದುವಾಗ ಮರಣದ ಬಗೆಗೆ ಕಾಳಪ್ಪನಲ್ಲಿ ಹೊಸ ಆಲೋಚನೆಗಳು ಮೂಡುತ್ತವೆ: “ನಮ್ಮ ಸಾವು ನಮ್ಮ ಕೈಲಿದೆ, ಇಚ್ಛಾಶಕ್ತಿ ಇದ್ದರೆ. ನಿರೀಕ್ಷೆಯಲ್ಲಾದರೂ ಅದನ್ನು ಅನುಭವಿಸಬಹುದು, ಅರಿಯಬಹುದು. ಹುಟ್ಟನ್ನು ಎಂದೂ ಅನುಭವಿಸಲಾರೆವು, ತಿಳಿಯಲಾರೆವು ... ಸಾವೆಂದರೆ ಏನೂ ಇಲ್ಲದ ಶೂನ್ಯವಲ್ಲ. ಅದೇ ನಿಜವಾಗಿ ಅನುಭವಕ್ಕೆ ಸಿಗಬಹುದಾದ ಸಂಗತಿ. ಹುಟ್ಟೆಂಬುದು ಅನುಭವಕ್ಕೆ ಸಿಗದ ಖಾಲಿ ಕಲ್ಪನೆ ” (ಪು. ೧೦೫).
ಹೀಗೆ ಆಲಂಬನವಿಲ್ಲದ ತಮ್ಮನಿಗೆ ಮದುವೆಯಾದರೆ ಅವನಿಗೂ ಆಸರೆಯಿರುತ್ತದೆ, ತಮ್ಮ ವಂಶವೂ ಬೆಳೆಯುತ್ತದೆಂದು ಚಿಂತಿಸಿ ಕಾಳಪ್ಪನ ಅಕ್ಕ ತಿಮ್ಮು ಅವನಿಗೆ ತಮ್ಮ ನೆಂಟರ ಕಡೆಯ ವೆಂಕಟಲಕ್ಷ್ಮಿಯನ್ನು ತಂದುಕೊಳ್ಳುವ ಪ್ರಸ್ತಾವ ಮಾಡುತ್ತಾಳೆ. ಇದು ನಡೆಯುವುದು ಜವರಾಯಿಯ ಮರಣದಿಂದೊದಗಿದ ಸೂತಕದ ಸಂದರ್ಭದಲ್ಲಿ. ಸಾವಿನೆದುರು ವಂಶವರ್ಧನೆಯ ಮಾತು! ಆದರೆ ಇದಕ್ಕೆ ಕಾಳಪ್ಪ ಸಮ್ಮತಿಸುವುದಿಲ್ಲ. ಒಟ್ಟಿನಲ್ಲಿ ಪ್ರಜಾಸಂತಾನದ ಸಾಧ್ಯತೆ ದೂರವೇ ಉಳಿಯುತ್ತದೆ. ಆದರೆ ಅವನ ಮನಸ್ಸಿನಲ್ಲಿರುವ ಶಾಶ್ವತತೆಯ ಹಂಬಲವು ಅದನ್ನು ಸಾಧಿಸಲು ಇನ್ನೊಂದು ವಿಧಾನವನ್ನು ಕಂಡುಕೊಳ್ಳುತ್ತದೆ—ರಾಮುವಿನ ಮೂಲಕ.
ಕಾದಂಬರಿಯ ಉದ್ದಕ್ಕೂ ನೇಪಥ್ಯದಲ್ಲಿಯೇ ಉಳಿದು ಮುನ್ನೆಲೆಗೆ ಬಾರದ ಪಾತ್ರವೆಂದರೆ ರಾಮು. ಇವನು ಕಾಳಪ್ಪನ ಆಶೋತ್ತರಗಳ ಸಂಕೇತವೆಂದರೆ ತಪ್ಪಾಗಲಾರದು. ಇವರಿಬ್ಬರನ್ನೂ ಬೆಸೆದಿರುವುದು ನಕ್ಷತ್ರಪ್ರೀತಿ; ಅಪರಿಮಿತತೆಯ ಬಯಕೆ. ಅಮಂದಮೇಧೆಯ ಈ ಬಡವನ ವಿದ್ಯಾಭ್ಯಾಸಕ್ಕೆ ನೆರವಾಗಲು ಕಾಳಪ್ಪ ತೀರ್ಮಾನಿಸುತ್ತಾನೆ. ರಾಮು ಬರೆದ ಒಂದು ಕಾಗದದಲ್ಲಿ ಕಾಳಪ್ಪನನ್ನು ತೀರ್ಥರೂಪರೆಂದು ಸಂಬೋಧಿಸುವುದೂ ಈ ನಿರ್ಧಾರವನ್ನು ಬಲಪಡಿಸುತ್ತದೆ. ಆದುದರಿಂದ ಶ್ಮಶಾನವನ್ನು ಕಟ್ಟಬೇಕೆಂಬ ಆಲೋಚನೆಯನ್ನು ಕೈಬಿಟ್ಟು, ರಾಮುವಿನಂಥ ಇಪ್ಪತ್ತು-ಮೂವತ್ತು ಹುಡುಗರಿಗೆ ವಿದ್ಯಾರ್ಥಿವೇತನ ಒದಗಿಸಲು ಮನಸ್ಸುಮಾಡುತ್ತಾನೆ. ಪ್ರಜಾಸಂತತಿ ಇಲ್ಲವಾದರೂ ವಿದ್ಯಾಸಂತತಿ ಮುಂದುವರಿಯುತ್ತದೆ.
ಜವರಾಯಪ್ಪ. ಈತನೊಬ್ಬ ಸಂವೇದನಶೀಲನಾದ ಸ್ವಭಾವನಿಷ್ಠವ್ಯಕ್ತಿ. ಇವನಿಗೆ ಜೀವನಪ್ರೀತಿ, ಕಲಾಸಕ್ತಿಗಳುಂಟು. ದೇಶಕ್ಕಾಗಿ ಜೀವನವನ್ನು ಮುಡುಪಾಗಿಡಬೇಕೆಂದು ಪಣತೊಟ್ಟರೂ ನೈಸರ್ಗಿಕ ಚೋದನೆಗಳನ್ನು ಮೀರಲಾರದೆ ಮುಷ್ಟಿಮೈಥುನಕ್ಕೆ ತೊಡಗುತ್ತಾನೆ; ವೇಶ್ಯೆಯ ಸಂಪರ್ಕವನ್ನೂ ಮಾಡುತ್ತಾನೆ. ಆದರೆ ಒಂದೆರಡು ಬಾರಿಯಾದ ಮೇಲೆ ಇದು ವಿಕೃತವೆನಿಸಿ, ಪ್ರಕೃತಿಸಹಜವಾಗಿಯೇ ಬಯಕೆಯು ಉಪಶಮನವಾಗಬೇಕೆಂದು ನಿರ್ಧರಿಸಿ ಮದುವೆಯಾಗುತ್ತಾನೆ. ಕ್ರಮೇಣ ಹೆಂಡತಿಯಲ್ಲಿ ತನ್ನ ಸಂತಾನ ಬೆಳೆಯುತ್ತಿದೆಯೆಂದು ತಿಳಿದು ಹಿಗ್ಗುತ್ತಾನೆ. ಅವನ ಮಾತುಗಳನ್ನೇ ಗಮನಿಸಬಹುದು: “ನಿಮ್ಮಿಂದ ಇದು ಎಂದು ದಪ್ಪ ಹೊಟ್ಟೆಯನ್ನು ಕಿರುಗಣ್ಣಿನಿಂದ ಸೂಚಿಸಿದಾಗ ನನ್ನ ತುಂಟ ಅಹಂಕಾರ ಬೀಗುತ್ತಿತ್ತು. ‘ನಮ್ಮ ಜವರಾಯಿ ಪರವಾಗಿಲ್ಲ, ಮನೆಗೆ ಬಂದಮೇಲೆ ಸುಬ್ಬಲಕ್ಷ್ಮಿ ಮತ್ತೆ ಮುಟ್ಟಾಗಲಿಲ್ಲ’ ಎಂಬ ಮಾತು ಬಾಗಿಲ ಸಂದಿಯಿಂದ ಹಾದುಬಂದಾಗ ವೀರಸಾರ್ಥಕತೆಯಿಂದ ಹಿಗ್ಗುತ್ತಿದ್ದೆ” (ಪು. ೯೧). ತನ್ನ ಅರಿವಿಲ್ಲದೆಯೇ ಹೆಣ್ಣಿನ ಗರ್ಭದಲ್ಲಿ ತನ್ನ ಅಹಂಕಾರವನ್ನು ಬೆರೆಸಿದುದರಿಂದ ಒಂದೆರಡು ಮಕ್ಕಳು ಹುಟ್ಟಿದ ಕೂಡಲೇ ಸತ್ತಾಗ ಅವನಿಗೆ ತಡೆಯಲಾರದ ದುಃಖವಾಗುತ್ತದೆ. ಅನಂತರ ಹೋದದ್ದರ ದುಃಖವನ್ನು ಮರೆಯಲು ಪುನಃ ಹುಟ್ಟಿಸುವುದೇ ದಾರಿಯೆಂದು ತಿಳಿದು ಸಾವಿನ ಮೌನವನ್ನು ನೂತನಶಿಶುವಿನ ಕೇಕೆಯಿಂದ ತುಂಬಲು ಯತ್ನಿಸುತ್ತಾನೆ. ಇಷ್ಟು ಸಾಂದ್ರವಾದದ್ದು ಜವರಾಯಿಯ ಸೃಷ್ಟಿಪ್ರೀತಿ. ಆದರೆ ಕಾಲಾಂತರದಲ್ಲಿ ಪಾರ್ವತಿಯು ಇವನಿಂದ ತನಗೊಂದು ಮಗು ಬೇಕೆಂದು ಬಯಸಿ, ಪಿತೃತ್ವದ ಯಾವ ಬಾಧ್ಯತೆಯನ್ನೂ ತಾನು ಸ್ವೀಕರಿಸಬೇಕಿಲ್ಲವೆಂದು ಹೇಳಿದಾಗ ಅವಳ ಮೇಲೆ ಕೋಪಗೊಂಡು ವಿಮುಖತೆಯನ್ನು ಬೆಳೆಸಿಕೊಳ್ಳುತ್ತಾನೆ. ಪಾರ್ವತಿಯ ಬಗೆಗಿನ ಅವನ ವಿಮುಖತೆ ಸೃಷ್ಟಿಪ್ರಕ್ರಿಯೆಯ ಬಗೆಗಿನ ನಿಷ್ಪಂದತೆಯೇ ಹೌದು. ಯಾವುದಾದರೊಂದು ಬಗೆಯಲ್ಲಿ ಸರ್ಜನಶೀಲತೆಯನ್ನು ಜಾಗೃತವಾಗಿ ಉಳಿಸಿಕೊಳ್ಳದಿದ್ದರೆ ಜೀವನೋತ್ಸಾಹವೇ ಕುಂದುತ್ತದೆಯಷ್ಟೆ. ಇದನ್ನು ಜವರಾಯಿಯ ಕಡೆಗಾಲದ ಕೋಪದಲ್ಲಿ ಮನಗಾಣಬಹುದು. ಸಾಮಾನ್ಯವಾದ ಕೋಪ ಸಕ್ರಿಯವಾದರೆ ಇದು ನಿಷ್ಕ್ರಿಯ; ಹೆಪ್ಪುಗಟ್ಟಿದ ಶೀತಲಶೂನ್ಯತೆ. ಇದರ ಪರಿಣಾಮವೇ ಅವನ ಸಾವು.
ಇದಕ್ಕೆ ಮತ್ತೂ ಒಂದು ಆಯಾಮವುಂಟು: ಪಾರ್ವತಿಯು ತನ್ನಿಂದ ಮಗುವಾಗಬೇಕೆಂದು ಬೇಡಿದರೂ ಅದಕ್ಕೆ ಅಪ್ಪನ ಹೆಸರಿನ ಆವಶ್ಯಕತೆಯಿಲ್ಲವೆಂದು ಹೇಳಿದ್ದರಿಂದ ಜವರಾಯಿಯ ಅಹಂಕಾರಕ್ಕೆ ಬಲವಾದ ಪೆಟ್ಟು ಬೀಳುತ್ತದೆ. ಅಹಂಕಾರವು ಸರಿಪಡಿಸಲಾಗದಂತೆ ಗಾಸಿಗೊಳ್ಳುವುದು ಸಾವಿನ ಅನುಭವವಲ್ಲದೆ ಮತ್ತೇನು?
ಜವರಾಯಿ ಮತ್ತು ಪಾರ್ವತಿಯರ ಸಂಬಂಧವು ದೈಹಿಕಮಾತ್ರದ್ದಲ್ಲ; ಅದು ಭಾವನಾಬಾಂಧವ್ಯದ ಮಟ್ಟದ್ದು. ಅವನೇ ಹೇಳುವಂತೆ: “ಮೈಥುನದ ಇಂಧನ ಉರಿದು ಹರಿದಮೇಲೆ ಆ ಹೆಂಗಸನ್ನು ತಬ್ಬಿ ಹಿಡಿಯುವ ಉತ್ಕಟತೆ ಉಳಿಯುವುದಿಲ್ಲ. ಹರಿದ ಮೇಲೂ ಉತ್ಕಟತೆ ಉಳಿಯಿತೋ, ಅವಳ ಕಿವಿಯಲ್ಲಿ ಉಸುರುವುದು ಇನ್ನೂ ಇನ್ನೂ ಇನ್ನೂ ಇದೆ ಅನ್ನಿಸುತ್ತದೋ ಅವಳನ್ನು ಅವನು ಪ್ರೇಮಿಸುತ್ತಿದ್ದಾನೆ ಅಂತ ತಿಳಿಯಬೇಕು” (ಪು. ೧೧೮). ಇಷ್ಟು ಗಾಢವಾಗಿ ಪ್ರೀತಿಸಿದ ಪಾರ್ವತಿಯ ಬಯಕೆಯನ್ನು ನೆರವೇರಿಸಲಾಗದ ಶೂನ್ಯಸ್ಥಿತಿಯೇ ಜವರಾಯಪ್ಪನ ಸಾವೆಂದು ತರ್ಕಿಸಿದರೆ ತಪ್ಪಾಗಲಾರದು.
ಹೀಗೆ ಸಾವಿನ ಜೊತೆಗೆ ಅಂಟಿಬರುವ ಕಾಮ-ಸೃಷ್ಟಿಗಳ ಗುಟ್ಟನ್ನು ಜವರಾಯಿಯ ಪಾತ್ರದ ಮೂಲಕ ಭೇದಿಸುವುದು ಲೇಖಕರ ಉದ್ದೇಶ. ಕೃತಿಯ ಆರಂಭದಲ್ಲಿಯೇ ಸತ್ತಿರುವನೆಂದು ವಾಚಕರಿಗೆ ತಿಳಿದಿರುವ ವ್ಯಕ್ತಿಯ ಸೃಷ್ಟಿಯನ್ನು ಕುರಿತ ಆಲೋಚನೆಗಳನ್ನು ನಿರೂಪಿಸುವುದು ರೋಚಕವಾದ ಕಥನತಂತ್ರ. ಇದು ಜವರಾಯಪ್ಪನ ಡೈರಿಯ ಮೂಲಕ ಹಿನ್ನೋಟದ ವಿಧಾನದಲ್ಲಿ ಸಾಧಿತವಾಗಿದೆ. ಇದಕ್ಕೆ ಸಹಾಯಕವೆಂಬಂತೆ ಪಾರ್ವತಿಯ ಪುಸ್ತಕದ ಹಾಳೆಗಳೂ ದುಡಿದಿವೆ.
ಇವಿಷ್ಟೂ ಸೃಷ್ಟಿವಿವರಗಳು ಜೀವನವೆಂಬ ತಕ್ಕಡಿಯ ಒಂದು ತಟ್ಟೆಯಲ್ಲಿದ್ದರೆ, ಮತ್ತೊಂದರಲ್ಲಿ ತಾನು ಜೀವಂತವಾಗಿರುವಾಗಲೇ ಜವರಾಯಿಗೆ ಬಂದೊದಗಿದ ಸಾವಿನ ನಿಕಟಾನುಭವಗಳಿವೆ. ಇವುಗಳನ್ನು ತುಲನೆಮಾಡಲು ಜವರಾಯಿಯೇ ಬದುಕಿರದಿರುವುದು ಚೋದ್ಯದ ಸಂಗತಿ. ಎಲ್ಲ ತಂದೆಯರಂತೆಯೇ ತನಗೆ ಸೋಲೊದಗಿದಾಗ ಮುಂದೆ ಮಗನ ಮೂಲಕ ಗೆಲ್ಲುವ ಕನಸನ್ನು ಕಟ್ಟಿಕೊಂಡ ಜವರಾಯಿಯು ಕುಮಾರನಿಗೆ ಯಾವುದೇ ತೆರನಾದ ಕಷ್ಟ ಬಾರದಂತೆ ಎಚ್ಚರವಹಿಸುತ್ತಾನೆ. ಹೀಗೆ ಬರಿಯ ಪ್ರೀತಿಯನ್ನೇ ಉಂಡು ಬೆಳೆದ ಕುಮಾರ್ ಮದುವೆಯಾದ ಮೇಲೆ “ಹೆಂಡತಿಗೆ ಹೆದರುವ ಹೆತ್ತವರಿಗೆ ಮರುಗದ ಸ್ವಂತ ಸುಖವನ್ನೇ ಹುಡುಕುವ” ವ್ಯಕ್ತಿಯಾಗುತ್ತಾನೆ (ಪು. ೧೦೪). ಅವನು ತನಗೆ “ನನ್ನನ್ನ ಹುಟ್ಸಿ ಅಂತ ನಾನು ನಿಮ್ಮನ್ನ ಕೇಳಿರಲಿಲ್ಲ. ಹುಟ್ಟಿಸಿದ್ದು ನಿಮ್ಮ ಮೊದಲ ತಪ್ಪು” ಎಂದು ಹೇಳಿದಾಗ ಜವರಾಯಪ್ಪನಿಗೆ ತನ್ನ ಆಶೋತ್ತರಗಳ ಸೌಧ ಕುಸಿದಂತಾಗಿ ಶೂನ್ಯಭಾವ ಕವಿಯುತ್ತದೆ. ಇದೊಂದು ವಿಧವಾದ ಸಾವು; ಜೀವನ್ಮರಣ.
ಇದಕ್ಕಿಂತಲೂ ಗಾಢವಾಗಿ ಸಾವಿನ ಅನುಭವವನ್ನು ಜವರಾಯಿಗೆ ತಂದುಕೊಡುವುದು ನಾಯಿನಾಗರಾಜಯ್ಯನ ಮರಣ. ಹೀಗೆ ಬಂದು ಹಾಗೆ ಮಾಯವಾಗುವ ಈ ಪಾತ್ರವು ರೂಪುಗೊಂಡಿರುವುದು ಜವರಾಯಪ್ಪನ ವೃತ್ತಿಯ ಹಿನ್ನೆಲೆಯಲ್ಲಿ. ಈ ರೀತಿ ಉದ್ಯೋಗದ ಒಂದೇ ಒಂದು ಎಳೆಯನ್ನು ಬಳಸಿಕೊಂಡು ಸಶಕ್ತವಾದ ಪೂರ್ಣಪಾತ್ರವನ್ನು ಹೆಣೆದಿರುವುದು ಕೃತಿಕಾರರ ಹೆಗ್ಗಳಿಕೆ. ವರ್ಷಗುಳುದ್ದಕ್ಕೂ ಕೆಲಸದಲ್ಲಿ ಕಷ್ಟವೊದಗಿಸಿ, ಜವರಾಯಿ ಮತ್ತು ಪಾರ್ವತಿಯರ ಸಂಬಂಧದಲ್ಲಿಯೂ ತಲೆಹಾಕಿ ಸುಬ್ಬಲಕ್ಷ್ಮಿಯನ್ನು ಅವನ ವಿರುದ್ಧ ಎತ್ತಿಕಟ್ಟಿರುತ್ತಾನೆ ನಾಗರಾಜಯ್ಯ. ಇದರಿಂದ ಜತನವಾಗಿ ಕಾಪಾಡಿಕೊಂಡುಬಂದಿದ್ದ ಸಹನೆಯು ಆವಿಯಾಗಿ ಜವರಾಯಿಗೆ ಕುದಿಕುದಿಯುವ ಕೋಪ ಬರುತ್ತದೆ. ಅವನ ಮನೆಗೇ ಹೋಗಿ ಹೆಂಡತಿ-ಮಕ್ಕಳ ಮುಂದೆ ಚರ್ಮ ಸುಲಿಯಬೇಕೆಂದು ನಿರ್ಧರಿಸಿದ ದಿನವೇ ನಾಗರಾಜಯ್ಯನ ಸಾವಿನ ಸುದ್ದಿ ಬರುತ್ತದೆ. ಜವರಾಯಿ ಸ್ತಂಭೀಭೂತನಾಗುತ್ತಾನೆ. ಸಾವಿನ ಉಪಸ್ಥಿತಿಯಲ್ಲಿ—ತನಗೂ ಸಾವು ಕಟ್ಟಿಟ್ಟ ಬುತ್ತಿಯೆಂಬ ಅರಿವಿನ ಅವಸರದಲ್ಲಿ—ಅವನ ರೋಷ ಮಾಯವಾಗುತ್ತದೆ. ಮುಂದೆಂದೂ ಯಾರ ಮೇಲೆಯೂ ಕೋಪಿಸಿಕೊಳ್ಳಲಾಗದ ಪರಿಸ್ಥಿತಿಯೊದಗುತ್ತದೆ.
ಪ್ರಾಯಶಃ ಇದರಿಂದಾಗಿಯೇ ಅವನು ಪಾರ್ವತಿಯ ವಿಷಯದಲ್ಲಿ ಸಕ್ರಿಯವಾಗಿ ಕೋಪಗೊಳ್ಳಲು ಸಾಧ್ಯವಾಗಲಿಲ್ಲ. ಅಷ್ಟೇಕೆ, ಒಳಗೇ ಹಿಡಿದಿಟ್ಟ ಕೋಪ ಸಾವನ್ನೇ ತಂದಿತ್ತಿತೆಂದು ಈಗಾಗಲೇ ಗಮನಿಸಿದ್ದೇವೆ. ಒಟ್ಟಿನಲ್ಲಿ ಜವರಾಯಿಯದು ಸ್ವಯಂ ಬದುಕಿಲ್ಲದಿದ್ದರೂ ಇಡಿಯ ಕಾದಂಬರಿಗೆ ಜೀವತುಂಬಿರುವ ಪಾತ್ರ.
To be continued.