ಜಿನಸೇನ ಆರಂಭಶೂರರಾದ ಕವಿಗಳನ್ನು ಹೀಗೆ ಪರಿಹಾಸ್ಯ ಮಾಡುತ್ತಾನೆ:
ಯಥೇಷ್ಟಂ ಪ್ರಕೃತಾರಂಭಾಃ ಕೇಚಿನ್ನಿರ್ವಹಣಾಕುಲಾಃ |
ಕವಯೋ ಬತ ಸೀದಂತಿ ಕರಾಕ್ರಾಂತಕುಡುಂಬಿವತ್ || (೧.೧.೭೧)
ಕೆಲವು ಕವಿಗಳು ಕಾವ್ಯದ ಆರಂಭವನ್ನೇನೋ ಉತ್ಸಾಹದಿಂದ ಮಾಡಿಬಿಡುತ್ತಾರೆ, ಆದರೆ ಅದನ್ನು ಕ್ರಮವಾಗಿ ರಚಿಸಿ ಮುಗಿಸುವಲ್ಲಿ ಸೋಲುತ್ತಾರೆ. ಇವರ ಪಾಡು ತೆರಿಗೆಯ ಭಾರಕ್ಕೆ ತತ್ತರಿಸುವ ಸಂಸಾರಿಯಂತೆಯೇ ಸರಿ!
ಕ್ಷೇಮೇಂದ್ರನು ಈ ಅಂಶವನ್ನು ಗಮನಿಸಿ ಕವಿಗಳಿಗೆ ಎಚ್ಚರಿಕೆ ಹೇಳಿದ್ದಾನೆ.[1] ಆದರೆ ಅವನಿಗಿಂತ ಮುನ್ನವೇ ಜಿನಸೇನ ಇದರತ್ತ ಗಮನ ಹರಿಸಿರುವುದು ಸ್ತವನೀಯ. ಇದು ಕಾವ್ಯಸಮಾಧಿಯ ದಾರ್ಢ್ಯವನ್ನು ಕುರಿತಿದೆಯೆಂದರೆ ತಪ್ಪಾಗದು. ಚಂಚಲಚಿತ್ತರಾದ ಕವಿಗಳು ಅಭಿನವಮಧುಲೋಲುಪರಂತೆ ಕೃತಿಯಿಂದ ಕೃತಿಗೆ ಹಾರುತ್ತಿರುತ್ತಾರೆ. ಇಂಥ ಶೈಥಿಲ್ಯ ಕವಿಕರ್ಮಕ್ಕೆ ಸಲ್ಲದು.
ಕವಿಯು ಶ್ರೇಯಸ್ಸಿಗಾಗಿ ಕಾವ್ಯವನ್ನು ರಚಿಸಬೇಕೆಂದು ಜಿನಸೇನನಮತ:
ಪರೇ ತುಷ್ಯಂತು ವಾ ಮಾ ವಾ ಕವಿಃ ಸ್ವಾರ್ಥಂ ಪ್ರತೀಹತಾಮ್ |
ನ ಪರಾರಾಧನಾಚ್ಛ್ರೇಯಃ ಶ್ರೇಯಃ ಸನ್ಮಾರ್ಗದರ್ಶನಾತ್ || (೧.೧.೭೧)
ಬೇರೊಬ್ಬರು ಹಿಗ್ಗಲಿ ಬಿಡಲಿ, ಕವಿಯು ತನ್ನ ಉದ್ದೇಶವನ್ನು ಸಾಧಿಸಿಕೊಳ್ಳಬೇಕು. ಮತ್ತೊಬ್ಬರನ್ನು ಒಲಿಸಿಕೊಳ್ಳುವುದಕ್ಕಿಂತಲೂ ಒಳಿತಿನ ಹಾದಿಯನ್ನು ತೋರುವುದೇ ಮಿಗಿಲು.
ಇಲ್ಲಿ ಜಿನಸೇನನು ಕವಿಯ ಸ್ವಾಂತಃಸುಖವನ್ನು ಮಿಗಿಲಾಗಿ ಕಂಡಿದ್ದರೂ ತನ್ನ ಮತಾಗ್ರಹದ ಕಾರಣ ಇದು ಜನತೆಗೆ ಸನ್ಮಾರ್ಗವನ್ನು ತೋರುವುದರಲ್ಲಿ ಸಾರ್ಥಕ್ಯವನ್ನು ಕಾಣಬೇಕೆಂದು ಪ್ರತಿಪಾದಿಸಿರುವುದು ಕಾವ್ಯಮ್ ಆನಂದಾಯ ಎಂಬ ಮೂಲತತ್ತ್ವಕ್ಕೆ ಬೆನ್ನುಹಾಕಿರುವುದರ ಸಂಕೇತ. ಈ ಅಂಶವನ್ನುಳಿದರೆ ಕಾವ್ಯೋದ್ಯೋಗ ಪರಪ್ರೀತಿಗಾಗಿ ಸಲ್ಲದೆಂಬ ನಿಲವು ಮೆಚ್ಚುವಂತಿದೆ.
ಕವಿ-ಸಹೃದಯರಲ್ಲಿರುವ ಮತಭೇದವನ್ನು ಹೀಗೆ ಕಟಾಕ್ಷಿಸುತ್ತಾನೆ:
ಪುರಾಣಕವಯಃ ಕೇಚಿತ್ ಕೇಚಿನ್ನವಕವೀಶ್ವರಾಃ |
ತೇಷಾಂ ಮತಾನಿ ಭಿನ್ನಾನಿ ಕಸ್ತದಾರಾಧನೇ ಕ್ಷಮಃ ||
ಕೇಚಿತ್ ಸೌಶಬ್ದ್ಯಮಿಚ್ಛಂತಿ ಕೇಚಿದರ್ಥಸ್ಯ ಸಂಪದಮ್ |
ಕೇಚಿತ್ ಸಮಾಸಭೂಯಸ್ತ್ವಂ ಪರೇ ವ್ಯಸ್ತಾಂ ಪದಾವಲೀಮ್ ||
ಮೃದುಬಂಧಾರ್ಥಿನಃ ಕೇಚಿತ್ ಸ್ಫುಟಬಂಧೈಷಿಣಃ ಪರೇ |
ಮಧ್ಯಮಾಃ ಕೇಚಿದನ್ಯೇಷಾಂ ರುಚಿರನ್ಯೈವ ಲಕ್ಷ್ಯತೇ ||
ಇತಿ ಭಿನ್ನಾಭಿಸಂಧಿತ್ವಾದ್ದುರಾರಾಧ್ಯಾ ಮನೀಷಿಣಃ |
ಪೃಥಗ್ಜನೋऽಪಿ ಸೂಕ್ತಾನಾಮನಭಿಜ್ಞಃ ಸುದುರ್ಗ್ರಹಃ || (೧.೧.೭೬–೮೦)
ಕವಿಗಳ ಪೈಕಿ ಕೆಲವರು ಹಳಬರು, ಕೆಲವರು ಹೊಸಬರು. ಇವರ ಅಭಿಪ್ರಾಯಗಳೆಲ್ಲ ಬೇರೆ ಬೇರೆ. ಇಂತಿರುವಾಗ ಇವರನ್ನೆಲ್ಲ ಒಲಿಸಿಕೊಳ್ಳಲು ಯಾರಿಗೆ ತಾನೆ ಸಾಧ್ಯ? ಕೆಲವರು ವ್ಯಾಕರಣಶುದ್ಧಿಯನ್ನು ಹೆಚ್ಚೆನ್ನುತ್ತಾರೆ; ಕೆಲವರು ರಸಪುಷ್ಟಿಗೆ ಬೆಲೆ ನೀಡುತ್ತಾರೆ; ಕೆಲವರು ಸಮಾಸಗುಂಫನ ಲೇಸೆನ್ನುತ್ತಾರೆ; ಕೆಲವರು ಬಿಡಿಬಿಡಿಯಾದ ನುಡಿಗಳೇ ಚೆಲುವೆನ್ನುತ್ತಾರೆ. ಕೆಲವರು ಮಧುರವಾದ ಪದಸಂಧಾನವನ್ನು ಬಯಸಿದರೆ ಇನ್ನು ಕೆಲವರು ಓಜಸ್ವಿಯಾದ ಪದಗುಂಫನವನ್ನು ಆಶಿಸುತ್ತಾರೆ. ಮತ್ತೆ ಕೆಲವರು ಇವೆರಡರ ಹದವಿರುವ ಮಧ್ಯಮಗತಿಯೇ ಮಿಗಿಲೆನ್ನುತ್ತಾರೆ. ಹೀಗೆ ವಿದ್ವಾಂಸರಲ್ಲಿಯೇ ಅಭಿಪ್ರಾಯಭೇದಗಳಿರುವ ಕಾರಣ ಅವರನ್ನೆಲ್ಲ ಒಪ್ಪಿಸಲು ಸಾಧ್ಯವಿಲ್ಲ. ಇದೇ ರೀತಿ ಕಾವ್ಯಗಣಪರಿಜ್ಞಾನವಿಲ್ಲದ ಪಾಮರರನ್ನು ಕೂಡ ಒಲಿಸಿಕೊಳ್ಳುವುದು ಅಸಾಧ್ಯ.
ಜಿನಸೇನನು ತನ್ನ ಕಾಲದ ಪ್ರಾಮಾಣಿಕಕವಿಗಳಿಗಿದ್ದ ಗೊಂದಲಗಳನ್ನೆಲ್ಲ ಇಲ್ಲಿ ಹೇಳಿಕೊಂಡಿದ್ದಾನೆಂದರೆ ಅತಿಶಯವಲ್ಲ. ಈ ಚರ್ಚೆ ಪ್ರಧಾನವಾಗಿ ಗುಣ-ರೀತಿ-ವೃತ್ತಿ-ಮಾರ್ಗ-ಸಂಘಟನೆಗಳಿಗೆ ಸಂಬಂಧಿಸಿದೆ. ಇವುಗಳನ್ನು ಕುಂತಕನು ಚೆನ್ನಾಗಿ ವಿವೇಚಿಸಿ ಒಂದು ನಿಲುಗಡೆಗೆ ತಂದಿರುವುದು ವಿದ್ವದ್ವೇದ್ಯ.
ಕಡೆಯದಾಗಿ ಜಿನಸೇನನ ದೃಷ್ಟಿಯಲ್ಲಿ ಕಾವ್ಯ ಹೇಗಿರಬೇಕೆಂಬುದನ್ನು ಕಾಣೋಣ:
ಕವೇರ್ಭಾವೋऽಥವಾ ಕರ್ಮ ಕಾವ್ಯಂ ತಜ್ಞೈರ್ನಿರುಚ್ಯತೇ |
ತತ್ಪ್ರತೀತಾರ್ಥಮಗ್ರಾಮ್ಯಂ ಸಾಲಂಕಾರಮನಾಕುಲಮ್ ||
ಕೇಚಿದರ್ಥಸ್ಯ ಸೌಂದರ್ಯಮಪರೇ ಪದಸೌಷ್ಠವಮ್ |
ವಾಚಾಮಲಂಕ್ರಿಯಾಂ ಪ್ರಾಹುಸ್ತದ್ದ್ವಯಂ ನೋ ಮತಮ್ ಮತಮ್ ||
ಸಾಲಂಕಾರಮುಪಾರೂಢರಸಮುದ್ಭೂತಸೌಷ್ಠವಮ್ |
ಅನುಚ್ಛಿಷ್ಟಂ ಸತಾಂ ಕಾವ್ಯಂ ಸರಸ್ವತ್ಯಾ ಮುಖಾಯತೇ ||
ಅಸ್ಪೃಷ್ಟಬಂಧಲಾಲಿತ್ಯಮಪೇತಂ ರಸವತ್ತಯಾ |
ನ ತತ್ಕಾವ್ಯಮತಿಗ್ರಾಮ್ಯಂ ಕೇವಲಂ ಕಟು ಕರ್ಣಯೋಃ ||
ಮಹಾಪುರಾಣಸಂಬಂಧಿ ಮಹಾನಾಯಕಗೋಚರಮ್ |
ತ್ರಿವರ್ಗಫಲಸಂದರ್ಭಂ ಮಹಾಕಾವ್ಯಂ ತದಿಷ್ಯತೇ || (೧.೧.೯೪–೯೭,೯೯)
ಕವಿಯ ಭಾವ ಅಥವಾ ಅವನ ಕರ್ಮವೇ ಕಾವ್ಯವೆಂದು ಅಭಿಜ್ಞರ ಅಭಿಮತ. ಇಂಥ ಕಾವ್ಯದ ಸ್ವಾರಸ್ಯವು ಗ್ರಾಮ್ಯತಾದೋಷವಿಲ್ಲದೆ ಅಲಂಕಾರಭರಿತವಾಗಿ ಸುಬೋಧವೆನಿಸುತ್ತದೆ. ಕೆಲವರು ಅರ್ಥಸೌಂದರ್ಯವೇ ಅಲಂಕಾರವೆಂದು, ಮತ್ತೆ ಕೆಲವರು ಶಬ್ದಸೌಷ್ಠವವೇ ಅಲಂಕಾರವೆಂದು ಹೇಳುತ್ತಾರೆ. ನಮಗೆ ಇವೆರಡೂ ಸಮ್ಮತ. ಹೀಗೆ ಅಲಂಕಾರಭರಿತವೂ ರಸನಿರ್ಭರವೂ ಸುವ್ಯವಸ್ಥಿತವೂ ಸ್ವೋಪಜ್ಞವೂ ಆದ ಸತ್ಕಾವ್ಯ ಸರಸ್ವತಿಯ ವದನಾರವಿಂದವೆನಿಸುತ್ತದೆ. ಇಂತಲ್ಲದೆ ಸುಂದರಸಂಘಟನೆಯಿಲ್ಲದ, ರಸಪುಷ್ಟಿಗೆ ಸಲ್ಲದ ರಚನೆ ಕಾವ್ಯವೆನಿಸದು. ಅದು ಕೇವಲ ಕರ್ಣಕಠೋರವಾದ ಗ್ರಾಮ್ಯಪ್ರಲಾಪ. ಮಹಾಕೃತಿಯು ಪುರಾಣಪ್ರಸಿದ್ಧವಾದ ವಿಷಯಗಳನ್ನು ಒಳಗೊಂಡಿರಬೇಕು; ಅದಕ್ಕೆ ಶ್ರೇಷ್ಠನಾಯಕನಿರಬೇಕು; ಮತ್ತದು ತ್ರಿವರ್ಗದ ಫಲವನ್ನು ಸಾಧಿಸಿಕೊಡುವಂತಿರಬೇಕು.
ಜಿನಸೇನನು ಇಲ್ಲಿ ಧ್ವನಿಪ್ರಸ್ಥಾನಕ್ಕೆ ಮುನ್ನ ಕಾವ್ಯಲಕ್ಷಣವನ್ನು ಕುರಿತು ಸಾಗಿದ್ದ ಎಲ್ಲ ವಿವೇಚನೆಯ ಸಾರವನ್ನೇ ಸಂಗ್ರಹಿಸಿದ್ದಾನೆಂದರೆ ಅತಿಶಯವಲ್ಲ. ಕಾವ್ಯದ ಇಡಿಯಾದ ಸೌಂದರ್ಯವನ್ನು ನಿರ್ದೇಶಿಸಲು ರಸವನ್ನೂ ಬಿಡಿಯಾದ ಸೌಂದರ್ಯವನ್ನು ನಿರೂಪಿಸಲು ಅಲಂಕಾರವನ್ನೂ ಪ್ರಾತಿನಿಧಿಕವಾಗಿ ಆಯ್ದುಕೊಂಡ ಈತನ ಪ್ರಜ್ಞೆ ಮೆಚ್ಚುವಂತಿದೆ. ಮಹಾಕೃತಿಯ ಲಕ್ಷಣವನ್ನು ಸಾರವತ್ತಾಗಿ ರೂಪಿಸುವಲ್ಲಿ ಕೂಡ ಇವನ ವಿವೇಕ ಮೆರೆದಿದೆ. ವಿಶೇಷತಃ ಸತ್ಕಾವ್ಯವು ಸರಸ್ವತಿಯ ಮುಖವೆಂದು ವರ್ಣಿಸುವಾಗ ಹೃದ್ಯವಾದ ಶ್ಲೇಷದಿಂದ ಕಾವ್ಯ ಮತ್ತು ವಾಣೀವದನಗಳಿಗೆ ಸಾಮ್ಯವನ್ನು ಕಲ್ಪಿಸಿರುವುದು ಮುದಾವಹ.
ಪ್ರಸನ್ನಗಂಭೀರ ಶೈಲಿಯ ಬೃಹತ್ಕೃತಿಯನ್ನು ರಚಿಸಿದ ಜಿನಸೇನ ಅದಕ್ಕೆ ಅರ್ಹವೆನಿಸುವ ಕಾವ್ಯಮೌಲ್ಯಗಳನ್ನು ರೂಪಿಸಿಕೊಂಡದ್ದು ಮೆಚ್ಚುವಂತಿದೆ.
ಭಲ್ಲಟ
ಸಂಸ್ಕೃತದಲ್ಲಿ ಅನ್ಯೋಕ್ತಿಸಾಹಿತ್ಯವನ್ನು ಹಿರಿದಾಗಿ ಉದ್ಘಾಟಿಸಿದವನೇ ಭಲ್ಲಟನೆನ್ನಬಹುದು. ಮಾತ್ರವಲ್ಲ, ಅದರಲ್ಲಿ ಅತ್ಯುನ್ನತಸಾಧನೆ ಮಾಡಿದವನು ಕೂಡ ಇವನೇ. ಈತನ ಏಕೈಕಕೃತಿ “ಭಲ್ಲಟಶತಕ.” ಇದರ ಮೊದಲಿಗೆ ಬರುವ ಪದ್ಯ ಸತ್ಕಾವ್ಯದ ಧ್ವನನಶೀಲತೆಯನ್ನು ಮಾರ್ಮಿಕವಾಗಿ ನಿರೂಪಿಸುತ್ತದೆ:
ಬದ್ಧಾ ಯದರ್ಪಣರಸೇನ ವಿಮರ್ದಪೂರ್ವ-
ಮರ್ಥಾನ್ ಕಥಂ ಝಟಿತಿ ತಾನ್ ಪ್ರಕೃತಾನ್ನ ದದ್ಯುಃ |
ಚೌರಾ ಇವಾತಿಮೃದವೋ ಮಹತಾಂ ಕವೀನಾ-
ಮರ್ಥಾಂತರಾಣ್ಯಪಿ ಹಠಾದ್ವಿತರಂತಿ ಶಬ್ದಾಃ || (೩)
ನಾವು ವಿಮರ್ಶಿಸಿದಂತೆಲ್ಲ ಮಹಾಕವಿಗಳ ರಸಭರಿತವಾದ ಮೃದುವಚನಗಳು ತಮ್ಮ ಅಭಿಧಾಮೂಲದ ಅರ್ಥವನ್ನಲ್ಲದೆ ಧ್ವನ್ಯರ್ಥಗಳನ್ನು ಕೂಡ ವಿಪುಲವಾಗಿ ನೀಡುತ್ತವೆ. ಇದು ಕಳ್ಳರನ್ನು ಸೆರೆಹಿಡಿದು ಹಿಂಸಿಸಿದಾಗ ಅವರು ತಮ್ಮ ಇತ್ತೀಚಿನ ಕಳವಿನ ಮಾಲನ್ನಲ್ಲದೆ ಹಿಂದೆಂದೋ ಕದ್ದ ವಸ್ತುಗಳನ್ನೆಲ್ಲ ಬಿಟ್ಟುಕೊಡುವಂತೆಯೇ ಸರಿ.
ಭಲ್ಲಟನ ವಕ್ರೋಕ್ತಿಯ ಮೊನಚು ಅಸಾಧಾರಣ. ಕವಿಗಳ ನುಡಿಗಳನ್ನು ಕಳ್ಳರಿಗೆ ಒಪ್ಪವಿಟ್ಟಿರುವುದು ಹಲವು ಬಗೆಯಿಂದ ಸೊಗಸಾದುದು. ಇದನ್ನು ನೀಚೋಪಮೆಯಾಗಿ ಗ್ರಹಿಸಬಾರದು. ಕಳ್ಳರು ಕಳವಿಗಾಗಿ ಏನೆಲ್ಲ ಎಚ್ಚರ ವಹಿಸಿ ಅದನ್ನು ಗುಟ್ಟಾಗಿಸುವರೋ ಅದೇ ರೀತಿ ಕವಿಗಳು ಕೂಡ ತಮ್ಮ ಕಾವ್ಯರಚನೆಯಲ್ಲಿ ಮಿಗಿಲಾದ ಎಚ್ಚರ ವಹಿಸಿ ವಾಚ್ಯತೆಯ ಅಪಾಯಕ್ಕೆ ಸಿಲುಕದಂತೆ ಧ್ವನ್ಯರ್ಥಗಳನ್ನು ಮರೆಮಾಚಿರುತ್ತಾರೆ. ವ್ಯಂಜನಾವ್ಯಾಪಾರವೇ ಇಂಥ ಮರೆಮಾಚಿಕೆಯ ಮನೋಹರವಿಧಾನ. ಇಂಥ ಕಳ್ಳರನ್ನಾಗಲಿ, ಮಹಾಕವಿಗಳ ಮಾತುಗಳನ್ನಾಗಲಿ ನುರಿತ “ಅಧಿಕಾರಿ”ಗಳು (ಆರಕ್ಷಕರು ಹಾಗೂ ಸಹೃದಯರು) ಆಯ ನೋಡಿ ಹಿಂಡಿದಂತೆಲ್ಲ ತಮ್ಮ ತಮ್ಮ ಗುಟ್ಟುಗಳನ್ನು ಬಿಟ್ಟುಕೊಡುವುದು ಸರ್ವವೇದ್ಯ. ಹೀಗೆ ಧ್ವನಿಗರ್ಭಿತವಾದ ಸಾಹಿತ್ಯವನ್ನು ರಚಿಸುವುದೊಂದು “ಮನೋಹರ”ಲೀಲೆ. ಇದನ್ನು ಬಲುಮಟ್ಟಿಗೆ ಆನಂದವರ್ಧನನ ಕಾಲದಲ್ಲಿಯೇ ಸಾರಿದ ಭಲ್ಲಟನ ಅಂತರ್ದೃಷ್ಟಿ ಆರಾಧನೀಯ. ಈ ಅರ್ಥದಲ್ಲಿ “ಧ್ವನ್ಯಾಲೋಕ”ಕ್ಕಿಂತ ಮುನ್ನವೇ ಧ್ವನಿಸಿದ್ಧಾಂತವು ಕವಿ-ಸಹೃದಯರ ವಲಯದಲ್ಲಿ ನೆಲೆಸಿತ್ತೆಂಬುದು ಒಪ್ಪಬಲ್ಲ ಸಂಗತಿ.
ರಾಜಶೇಖರ
ಬಹುಭಾಷಾಕೋವಿದನಾಗಿ, ಬಹುಶಾಸ್ತ್ರನಿಷ್ಣಾತನಾಗಿ ಸಂಸ್ಕೃತಸಾಹಿತ್ಯದಲ್ಲಿ ತನ್ನದೇ ಆದ ವಿಶಿಷ್ಟಮುದ್ರೆಯನ್ನು ಒತ್ತಿದವನು ರಾಜಶೇಖರ. ಈತನ ಸಾಹಿತ್ಯದ ಎಷ್ಟೋ ಭಾಗ ನಮಗಿಂದು ಉಪಲಬ್ಧವಿಲ್ಲ. ಉಳಿದ ಐದು ಕೃತಿಗಳ ಪೈಕಿ ನಾಲ್ಕು ರೂಪಕಗಳು ಮತ್ತೊಂದು ಶಾಸ್ತ್ರಗ್ರಂಥ. ದೃಶ್ಯಕಾವ್ಯಗಳ ಪೈಕಿ “ಕರ್ಪೂರಮಂಜರಿ” ಪ್ರಾಕೃತದಲ್ಲಿ ರಚಿತವಾದ “ಸಟ್ಟಕ”ವಾಗಿದ್ದರೂ (ಅಥವಾ “ಸಾಟಕ”) ಅಲ್ಲಿಯ ಒಂದು ಸೂಕ್ತಿ ನಮ್ಮ ವಿವೇಚನೆಗೆ ಸ್ವೀಕಾರ್ಯ:
ಅತ್ತವಿಸೇಸಾ ತೇ ಚಿಅ ಸದ್ದಾ ತೇ ಚೇಅ ಪರಿಮಣಂತಾ ವಿ |
ಉತ್ತಿವಿಸೇಸೋ ಕವ್ವಂ ಭಾಸಾ ಜಾ ಹೋಇ ಸಾ ಹೋಉ || (೧.೭)
(ಅರ್ಥವಿಶೇಷಾಸ್ತ ಏವ ಶಬ್ದಾಸ್ತ ಏವ ಪರಿಣಮಂತೋऽಪಿ |
ಉಕ್ತಿವಿಶೇಷಃ ಕಾವ್ಯಂ ಭಾಷಾ ಯಾ ಭವತಿ ಸಾ ಭವತು ||)
ಅವೇ ಶಬ್ದಗಳು ಮಾರ್ಪಡುತ್ತಿದ್ದರೂ ಅರ್ಥಸ್ವಾರಸ್ಯಗಳು ಮಾತ್ರ ಹಾಗೆಯೇ ಉಳಿಯುತ್ತವೆ. ಆದುದರಿಂದಲೇ ಭಾಷೆ ಯಾವುದಾದರೆ ಏನು, ಉಕ್ತಿವಿಶೇಷವೇ ಕಾವ್ಯ!
ವಿವಿಧಭಾಷೆಗಳ ಕಾವ್ಯಗಳ ಅಂತಃಸ್ವಾರಸ್ಯವು ಒಂದೇ ಎಂಬ ಹಿರಿದಾದ ಕಾಣ್ಕೆ ಇಲ್ಲಿದೆ. ಸಾಮಾನ್ಯವಾಗಿ ಸಂಸ್ಕೃತವನ್ನು ಕುರಿತು ಆಧುನಿಕರು ಆಕ್ಷೇಪಿಸುವಾಗ ಅದು ಮಿಕ್ಕ ದೇಶಭಾಷೆಗಳ ಸಾಹಿತ್ಯವನ್ನು ಉಪೇಕ್ಷಿಸಿತೆಂಬ ಧೋರಣೆಯೇ ಪ್ರಧಾವಾಗಿರುತ್ತದೆ. ಇಂಥ ಅಭಿಪ್ರಾಯಕ್ಕೆ ಹಲಕೆಲವರು ಶುಷ್ಕಪಂಡಿತರು ಕಾರಣವಾಗಿರಬಹುದು. ಆದರೆ ಸಂಸ್ಕೃತದ ಮಹಾಕವಿಗಳ ಪರಂಪರೆಯಾಗಲಿ, ಕಾವ್ಯಮೀಮಾಂಸಕರ ಸಂಪ್ರದಾಯವಾಗಲಿ ಇಂಥ ದುರಭಿಪ್ರಾಯಕ್ಕೆ ಸ್ವಲ್ಪವೂ ಆಸ್ಪದ ಕೊಡುವಂತಿಲ್ಲ.[2] ಏಕೆಂದರೆ ಇವೆರೆಲ್ಲರ ಕಾವ್ಯ-ಶಾಸ್ತ್ರಗಳಲ್ಲಿ ನಿರಪವಾದವಾಗಿ ಭಾಷೆಗಿಂತ ಭಾವಕ್ಕೆ ಹೆಚ್ಚಿನ ಬೆಲೆ ಸಂದಿದೆ. ಅಷ್ಟೇ ಅಲ್ಲ, ಇವರೆಲ್ಲ ಪ್ರಾಯಿಕವಾಗಿ ಬಹುಭಾಷಾವಿದರೇ ಆಗಿದ್ದರು. ಇಂಥವರಲ್ಲಿ ರಾಜಶೇಖರ ಅಗ್ರಗಣ್ಯ. ಕವಿಯಾಗಿ, ಶಾಸ್ತ್ರಕಾರನಾಗಿ, ಬಹುಭಾಷಿಕನಾಗಿ ಆತ ಹೇಳಿದ ಮೇಲಿನ ಮಾತಿಗೆ ಹೆಚ್ಚಿನ ಮನ್ನಣೆಯಿದೆ. ವಿಶೇಷತಃ ಉಕ್ತಿವಿಶೇಷವೇ ಕಾವ್ಯವೆನ್ನುವಾಗ ಕುಂತಕನ ಅಭಿಪ್ರಾಯ ಇಲ್ಲಿಂದಲೇ ರೂಪುಗೊಂಡಿರಬಹುದೇ ಎಂಬ ಅನುಮಾನ ಮೂಡದಿರದು.[3] ಇದಕ್ಕಿಂತ ಸೊಗಸಾಗಿ ಸಾಹಿತ್ಯವನ್ನು ಲಕ್ಷಣೀಕರಿಸುವುದು ಕಷ್ಟ.
[1] ಪ್ರಾರಬ್ಧಕಾವ್ಯನಿರ್ವಾಹಃ || (ಕವಿಕಂಠಾಭರಣ, ೨.೨೨)
[2] ಸಂಸ್ಕೃತದ ಎಲ್ಲ ರೂಪಕಕಾರರೂ ಹಲವು ಬಗೆಯ ಪ್ರಾಕೃತಗಳನ್ನು ವಿಪುಲವಾಗಿ ದುಡಿಸಿಕೊಂಡವರೇ; ದಂಡಿ-ಭಾಮಹರಿಂದ ಮೊದಲ್ಗೊಂಡು ಎಲ್ಲ ಆಲಂಕಾರಿಕರೂ ಪ್ರಾಕೃತಗಳ ಪ್ರಸ್ತಾವವನ್ನು ಮಾಡಿದವರೇ. ವಾಮನ, ಆನಂದವರ್ಧನ, ಭೋಜ, ಹೇಮಚಂದ್ರ ಮುಂತಾದವರೆಲ್ಲ ಪ್ರಾಕೃತಪದ್ಯಗಳನ್ನು ರಸ-ಧ್ವನಿ-ಅಲಂಕಾರಗಳ ನಿರೂಪಣೆಯಲ್ಲಿ ನಿಃಸಂಕೋಚವಾಗಿ ಬಳಸಿಕೊಂಡವರೇ. ಎಲ್ಲಿಯೂ ಭಾಷಾವೈಷಮ್ಯಕ್ಕೆ ಎಡೆಮಾಡಿಲ್ಲ, ಗುಣವಿದ್ದಲ್ಲಿ ಮೆಚ್ಚಲು ಹಿಂಜರಿದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಪ್ರಾಕೃತಕವಿಗಳೇ ಹಲವೊಮ್ಮೆ ಸಂಸ್ಕೃತವನ್ನು ದೂಷಿಸಿದ ಉದಾಹರಣೆಗಳಿವೆ. ಹೀಗೆಯೇ ದೇಶಭಾಷೆಗಳು ಕೂಡ ಆಗೀಗ ಸಂಸ್ಕೃತವನ್ನು ಆಕ್ಷೇಪಿಸಿರುವುದುಂಟು. ಸಂಸ್ಕೃತಕವಿಗಳು ಮಾತ್ರ ಇಂಥ ನ್ಯಕ್ಕಾರವನ್ನು ಮಾಡಿಲ್ಲ.
[3] ವಕ್ರೋಕ್ತಿರೇವ ವೈದಗ್ಧ್ಯಭಂಗೀಭಣಿತಿರುಚ್ಯತೇ || (ವಕ್ರೋಕ್ತಿಜೀವಿತ, ೧.೧೦); ವಕ್ರೋಕ್ತಿಃ ಪ್ರಸಿದ್ಧಾಭಿಧಾನವ್ಯತಿರೇಕಿಣೀ ವಿಚಿತ್ರೈವಾಭಿಧಾ || (ಇದೇ ಕಾರಿಕೆಯ ವೃತ್ತಿ)
To be continued.