ಮಹಾಕವಿ ಭವಭೂತಿಯ ‘ಉತ್ತರರಾಮಚರಿತ’ ನಾಟಕವು ತನ್ನ ಘನತೆ-ಮಹೋನ್ನತಿಗಳಿಂದ ಅನನ್ಯವೆನಿಸಿದೆ. ಸೀತಾ-ರಾಮರ ಅಮೃತದಾಂಪತ್ಯವನ್ನು ಇದು ಕಂಡರಿಸಿರುವ ಪರಿ ಇಡಿಯ ರಾಮಾಯಣಸಾಹಿತ್ಯದಲ್ಲಿಯೇ ಮಿಗಿಲೆನಿಸಿದೆ. ಪ್ರೀತಿ ಮತ್ತು ಕರ್ತವ್ಯಗಳ ನಡುವೆ ಸಂಘರ್ಷ ತಲೆದೋರಿದಾಗ ಸಂವೇದನಶೀಲರಾದ ವ್ಯಕ್ತಿಗಳು ಹೇಗೆ ತಳಮಳಿಸುತ್ತಾರೆ ಮತ್ತು ಅವರ ಅಂತರಂಗದ ಮೌಲ್ಯಪ್ರಕ್ಷೋಭ ಏನೆಲ್ಲ ಅವಸ್ಥೆಗಳನ್ನು ಪಡೆಯುತ್ತದೆಂಬ ಜೀವನದರ್ಶನವನ್ನು ಈ ಕೃತಿಯು ಕಂಡರಿಸುವಂತೆ ಹೆಚ್ಚಿನ ಕಾವ್ಯಗಳು ರೂಪಿಸುವುದಿಲ್ಲ. ಈ ಕಾರಣದಿಂದಲೇ ತತ್ತ್ವಶಾಸ್ತ್ರ ಮತ್ತು ಸೌಂದರ್ಯಶಾಸ್ತ್ರಗಳ ಮೂರ್ಧನ್ಯವಿದ್ವಾಂಸರಾದ ಪ್ರೊ|| ಎಂ. ಹಿರಿಯಣ್ಣನವರು ‘ಉತ್ತರರಾಮಚರಿತ’ವನ್ನು ವಿಶೇಷವಾಗಿ ಮೆಚ್ಚಿಕೊಳ್ಳುತ್ತಾರೆ.[1]
ಈ ರೂಪಕದ ಮೊದಲ ಅಂಕದಲ್ಲಿ ಸೀತಾ-ರಾಮರ ಅನುರೂಪದಾಂಪತ್ಯದ ಮಧುರಸಂದರ್ಭಗಳನ್ನು ನೋಡುತ್ತೇವೆ. ಕಷ್ಟಗಳನ್ನೆಲ್ಲ ಮೆಟ್ಟಿನಿಂತ ಶ್ರೀರಾಮ ಅಯೋಧ್ಯೆಗೆ ಬಂದು ಪಟ್ಟಾಭಿಷಿಕ್ತನಾಗಿರುತ್ತಾನೆ. ಅವನ ಕುಟುಂಬದ ಹಿರಿಯರೆಲ್ಲ ಮಹರ್ಷಿ ಋಷ್ಯಶೃಂಗರ ಆಶ್ರಮಕ್ಕೆ ತೆರಳಿರುತ್ತಾರೆ. ಅರಮನೆಯಲ್ಲೀಗ ಸೀತಾ-ರಾಮರೇ ಹಿರಿಯರು. ಪಟ್ಟಾಭಿಷೇಕದ ಮಹೋತ್ಸವಕ್ಕೆ ಬಂದಿದ್ದ ಬಂಧು-ಮಿತ್ರರೆಲ್ಲ ತಮ್ಮ ತಮ್ಮ ನೆಲೆಗಳನ್ನು ಸೇರಿದ ಕಾರಣ ಬಿಡುವಾಗಿರುವ ಸೀತಾ-ರಾಮರು ಲಕ್ಷ್ಮಣನ ಸೂಚನೆಗಳ ಮೇರೆಗೆ ರಚಿತವಾದ ತಮ್ಮದೇ ಬದುಕಿನ ವಿವಿಧ ಘಟ್ಟಗಳ ವರ್ಣಚಿತ್ರಗಳನ್ನು ನೋಡುತ್ತ ಹಳೆಯ ನೆನಪುಗಳನ್ನು ಮರುಕಳಿಸಿಕೊಳ್ಳುತ್ತಿರುತ್ತಾರೆ. ಬದುಕಿನ ಸಿಹಿ-ಕಹಿಗಳೆಲ್ಲ ಭೂತಕಾಲಕ್ಕೆ ಸೇರಿದಾಗ ನೆಮ್ಮದಿಯ ವೇಳೆಯಲ್ಲಿ ಈ ಎಲ್ಲ ಭಾವಗಳ ಸಂಸ್ಮರಣ ತನ್ನದೇ ಆದ ರಸಪಾಕವನ್ನು ಮುಟ್ಟುವ ಕಾರಣ ಪ್ರತಿಯೊಂದು ನೆನಪೂ ಸವಿಯಾಗಿ ತೋರುತ್ತದೆ. ಇದಕ್ಕೆ ಸೀತಾ-ರಾಮರ ಬಾಳೂ ಹೊರತಲ್ಲ. ಹೀಗೆ ಚಿತ್ರಗಳನ್ನು ನೋಡಿ ಬಳಲಿದ ಪೂರ್ಣಗರ್ಭಿಣಿ ಸೀತೆ ರಾಮನ ತೋಳಿನ ಮೇಲೆ ಹಾಗೆಯೇ ಮೈಮರೆತು ನಿದ್ರಿಸುತ್ತಾಳೆ. ಆ ಹೊತ್ತಿಗೆ ಲಕ್ಷ್ಮಣನೂ ಅಲ್ಲಿಂದ ನಿರ್ಗಮಿಸುತ್ತಾನೆ. ಕೇವಲ ರಾಮನೊಬ್ಬ ಎಚ್ಚರವಿದ್ದು ತನ್ನ ಮಡಿಲಲ್ಲಿ ಮೈಚೆಲ್ಲಿದ ಮಡದಿಯತ್ತ ಪ್ರೀತಿ-ವಾತ್ಸಲ್ಯಗಳಿಂದ ನೋಡುತ್ತ ಅವಳ ಸ್ವಾಪಸಾಕ್ಷಿಯಾಗಿ ತನ್ನ ಭಾವನೆಗಳಿಗೆ ಭಾಷಾರೂಪದ ಅಭಿವ್ಯಕ್ತಿಯನ್ನು ಕೊಡುತ್ತಾನೆ. ಇಲ್ಲಿ ಕವಿಯು ಕಟ್ಟಿಕೊಡುವ ಎರಡು ಪದ್ಯಗಳ ಪೈಕಿ ದ್ವಿತೀಯವಾದರೂ ಅದ್ವಿತೀಯವಾದುದು ಹೀಗಿದೆ:
ಅದ್ವೈತಂ ಸುಖದುಃಖಯೋರನುಗತಂ ಸರ್ವಾಸ್ವವಸ್ಥಾಸು ಯ-
ದ್ವಿಶ್ರಾಮೋ ಹೃದಯಸ್ಯ ಯತ್ರ ಜರಸಾ ಯಸ್ಮಿನ್ನಹಾರ್ಯೋ ರಸಃ |
ಕಾಲೇನಾವರಣಾತ್ಯಯಾತ್ಪರಿಣತೇ ಯತ್ಪ್ರೇಮಸಾರೇ ಸ್ಥಿತಂ
ಭದ್ರಂ ತಸ್ಯ ಸುಮಾನುಷಸ್ಯ ಕಥಮಪ್ಯೇಕಂ ಹಿ ತತ್ಪ್ರಾಪ್ಯತೇ || (೧.೩೯)
[ಈ ಪದ್ಯಕ್ಕೆ ಹಲಕೆಲವು ಪಾಠಾಂತರಗಳುಂಟು. ಇಲ್ಲಿರುವುದು ನನಗೆ ತೋರಿದ ಅತ್ಯುತ್ತಮ ಪಾಠಗಳ ಸಂಕಲನ.]
ಇದರ ತಾತ್ಪರ್ಯ ಹೀಗಿದೆ:
ಸುಖ-ದುಃಖಗಳಲ್ಲಿ ಸಮಭಾವ, ಎಲ್ಲ ಪರಿಸ್ಥಿತಿಗಳಲ್ಲಿಯೂ ಸಾಹಚರ್ಯ, ಹೃದಯಕ್ಕೆ ವಿಶ್ರಾಂತಿ, ಮುಪ್ಪಿನಲ್ಲಿಯೂ ಬತ್ತಿಹೋಗದ ಸವಿ, ಕಾಲ ಕಳೆದಂತೆ ಬಿಂಕ-ಬಿಗುಪುಗಳನ್ನು ಕಳಚಿಕೊಂಡು ತುಂಬಿಕೊಳ್ಳುವ ಪ್ರೀತಿಪಾಕ - ಇಂಥ ಪುಣ್ಯವು ಯಾರೋ ಭಾಗ್ಯವಂತನಿಗೆ ಮಾತ್ರ ಹೇಗೋ ದಕ್ಕುತ್ತದೆ.
ಮೇಲ್ನೋಟಕ್ಕೆ ನಿರಲಂಕೃತವಾದ ಸಾಮಾನ್ಯಪದ್ಯದಂತೆ ತೋರುವ ಈ ರಚನೆ ಕೇವಲ ಮಹಾಕವಿಗೆ ಮಾತ್ರ ದಕ್ಕಬಲ್ಲ ಜೀವನದರ್ಶನದ ಸಾರೋದ್ಗಾರ. ಇಲ್ಲಿಯ ಒಂದೊಂದು ವಾಕ್ಯಘಟಕವೂ ಪರಿಪೂರ್ಣದಾಂಪತ್ಯದ ಲಕ್ಷಣಗಳನ್ನು ಸೊಗಸಾಗಿ ಹರಳುಗಟ್ಟಿಸುತ್ತಿದೆ. ಇಂಥ ಒಂದೊಂದು ಸೊಲ್ಲನ್ನು ಕಂಡ ಬಳಿಕವೂ ಪರಿಪೂರ್ಣದಾಂಪತ್ಯವೆಂಬ ಆದರ್ಶ ಅದೆಷ್ಟು ಅಸಾಧ್ಯಕಲ್ಪವೆಂಬ ಅರಿವೂ ನಮಗಾಗುತ್ತದೆ. ಆದರೆ ಈ ಆದರ್ಶ ಸರ್ವಥಾ ಅವಾಸ್ತವವಲ್ಲ. ಅವಾಸ್ತವವನ್ನು ಆದರ್ಶವೆಂದು ಯಾವ ವಿವೇಕಿಯೂ ಒಪ್ಪುವುದಿಲ್ಲವಷ್ಟೆ. ಕಷ್ಟಸಾಧ್ಯವಾದ ಶ್ರೇಷ್ಠಮೌಲ್ಯ ಮಾತ್ರ ಆದರ್ಶವೆನಿಸುತ್ತದೆ. ಇದನ್ನು ಭವಭೂತಿ ಸೀತಾ-ರಾಮರ ಬಾಳಿನ ಮೂಲಕ ಧ್ವನಿಸುತ್ತಿದ್ದಾನೆ. ಇಂಥ ದಾಂಪತ್ಯಕ್ಕೆ ಎಡರು-ತೊಡರುಗಳು ಎದುರಾದಾಗ ಅವನ್ನು ಆ ದಂಪತಿ ಹೇಗೆ ಸ್ವೀಕರಿಸಿ ದಾಟಿಕೊಳ್ಳುವರೆಂಬ ಪ್ರಕ್ರಿಯೆಯೇ ‘ಉತ್ತರರಾಮಚರಿತ’ದ ಹೂರಣ. ಈ ದೃಷ್ಟಿಯಿಂದ ನೋಡಿದಾಗ ಪ್ರಕೃತಪದ್ಯವೆಂಬ ಹೊನ್ನಿಗೆ ಎದುರಾದ ಪುಟಪಾಕವೇ ಸೀತಾಪರಿತ್ಯಾಗವೆಂದು ತಿಳಿಯುತ್ತದೆ.
ಇಂಥ ಹೊನ್ನು ಇತಿಹಾಸ-ಪುರಾಣಲೋಕದ ಗಣಿಗಳಲ್ಲಿ ಮಾತ್ರ ಸಿಗುವ ಸೊತ್ತೆಂದು ಹೆಚ್ಚಿನವರು ಭಾವಿಸಬಹುದು. ಆದರೆ ಇದು ಆಂಶಿಕ ಸತ್ಯ ಮಾತ್ರ. ಭವಭೂತಿಯ ಪ್ರಕೃತಪದ್ಯಕ್ಕೆ ವ್ಯಾಖ್ಯಾನದಂತಿರುವ ಮೂರು ಸಂದರ್ಭಗಳನ್ನು ನಮ್ಮ ಕನ್ನಡದ ನವೋದಯಲೇಖಕರ ಕೃತಿಗಳಿಂದ ಮೇಲೆತ್ತಿ ನೋಡಿ ಪರಿಶೀಲಿಸಿದಾಗ ಕಬ್ಬಿಣ-ಕಲ್ಲಿದ್ದಲುಗಳ ನಮ್ಮ ಈ ಕಲಿಗಾಲದಲ್ಲಿಯೂ ಎಂಥ ಹೊನ್ನು ಕಾಣಸಿಗುತ್ತದೆಂದು ಸ್ಪಷ್ಟವಾಗುತ್ತದೆ.
* * *
ಮಾಸ್ತಿ ವೆಂಕಟೇಶ ಅಯ್ಯಂಗಾರರು ತಮ್ಮ ಪರಿಪಕ್ವ ವಯಸ್ಸಿನಲ್ಲಿ ಬರೆದ ವಿಶಿಷ್ಟ ಕೃತಿಗಳಲ್ಲೊಂದು ‘ಮಾತುಗಾರ ರಾಮಣ್ಣ.’ ಇಲ್ಲಿಯ ರಾಮಣ್ಣ ಅವರೇ ಎಂಬುದು ತನ್ನಂತೆಯೇ ತಿಳಿಯುತ್ತದೆ. ಕೃತಿಯ ಶೀರ್ಷಿಕೆ ಹೇಳುವಂತೆ ರಾಮಣ್ಣ ಬರಿಯ ಮಾತುಗಾರನಲ್ಲ; ಧಾತುಕಾರ ಕೂಡ. ಸಂಗೀತಶಾಸ್ತ್ರದ ಪರಿಭಾಷೆಯಂತೆ ‘ಮಾತು’ ಗೇಯವೊಂದರ ಸಾಹಿತ್ಯವಾದರೆ, ‘ಧಾತು’ ಅದರ ಸಂಗೀತ. ಅಂದರೆ ಮಾತು ಮೂರ್ತವೆನಿಸಿದರೆ ಧಾತು ಅಮೂರ್ತ. ಹೀಗೆ ಮಾತು-ಧಾತುಗಳು ದೇಹ-ಆತ್ಮಗಳಿಗೆ ಸಂವಾದಿ. ಈ ಹೊತ್ತಿಗೆಯಲ್ಲೊಂದೆಡೆ ಮುಮ್ಮಡಿ ಕೃಷ್ಣರಾಜ ಒಡೆಯರ ಬದುಕಿನ ಸಂದರ್ಭವೆಂಬಂತೆ ಪ್ರಸಂಗವೊಂದು ಚಿತ್ರಿತವಾಗಿದೆ. ಇದು ಪ್ರಾಯಶಃ ಮಾಸ್ತಿಯವರು ತಮ್ಮ ತಾರುಣ್ಯದಲ್ಲಿ ಕೇಳಿದ ಚಿಟ್ಟೆಕತೆಯಾಗಿರಬಹುದು. ಇದರ ತಥ್ಯಾತಥ್ಯತೆಗಳ ಮಾತು ಏನೇ ಇದ್ದರೂ ಇದನ್ನೊಂದು ಅರ್ಥಗರ್ಭಿತವಾದ ಐತಿಹ್ಯವೆಂದು ಒಪ್ಪಲು ಯಾವ ಅಡ್ಡಿಯೂ ಇರದು. ಈ ಪ್ರಸಂಗ ಹೀಗಿದೆ (‘ಮಾತುಗಾರ ರಾಮಣ್ಣ’. ಬೆಂಗಳೂರು: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಕಾರ್ಯಾಲಯ ಟ್ರಸ್ಟ್, ೨೦೦೭. ಪು. ೩೨-೩೪):
ಮುಮ್ಮಡಿ ಕೃಷ್ಣರಾಜ ಒಡೆಯರ ಬಾಳಿನ ಉತ್ತರಾರ್ಧದಲ್ಲಿ ಪ್ರಕೃತ ಕಥಾನಕ ನಡೆಯಿತಂತೆ. ತೀರ್ಥಯಾತ್ರೆ ಮಾಡುತ್ತ ತಮಿಳುನಾಡಿನಿಂದ ಮೈಸೂರಿಗೆ ಬಂದ ವೃದ್ಧ ವಿಪ್ರದಂಪತಿ ತಮ್ಮ ತಾತ್ಕಾಲಿಕ ವಸತಿಗಾಗಿ ಒಡೆಯರ ನೆರವನ್ನು ಕೋರಿದರಂತೆ. ಆ ಹಿರಿಯರ ವ್ಯಕ್ತಿತ್ವ-ವರ್ತನೆಗಳಿಗೆ ಮಾರುಹೋದ ಪ್ರಭುಗಳು ಅರಮನೆಯ ಉದ್ಯಾನ ‘ಮಧುವನ’ದ ಒಳಗಿದ್ದ ಮನೆಯೊಂದನ್ನು ಬಿಡದಿಯಾಗಿ ಹವಣಿಸಿಕೊಟ್ಟದ್ದಲ್ಲದೆ ಪ್ರತಿದಿನ ಅವರನ್ನು ನೋಡಲು ಹೋಗುತ್ತಿದ್ದರಂತೆ. ಕೆಲವೇ ದಿನಗಳಲ್ಲಿ ಆತ್ಮೀಯತೆ ಹೆಚ್ಚಾಯಿತು; ಅಂತರಂಗ ತೆರೆದುಕೊಳ್ಳತೊಡಗಿತು. ಅದೊಂದು ಸಂಜೆ ಹೊತ್ತಿಗಿಂತ ಮುನ್ನ ಒಡೆಯರು ವೃದ್ಧದಂಪತಿಯ ಬಿಡದಿಯ ಕಡೆಗೆ ಹೊರಟಾಗ ದಾರಿಯಲ್ಲೇ ಇದ್ದ ಕೊಳದ ಕೆಲದ ಏಕಾಂತಪ್ರದೇಶದಲ್ಲಿ ವೃದ್ಧದಂಪತಿ ಪರಸ್ಪರ ಅಪ್ಪಿಕೊಂಡು ಚುಂಬನವಿನಿಮಯ ಮಾಡಿಕೊಳ್ಳುತ್ತಿದ್ದ ಅನಿರೀಕ್ಷಿತ ದೃಶ್ಯ ಅವರ ಕಣ್ಣಿಗೆ ಬಿತ್ತು. ಆ ಕೂಡಲೇ ಅವರ ಪ್ರೀತಿಗೆ ಅಡ್ಡಿಯಾಗಬಾರದೆಂದು ಪ್ರಭುಗಳು ಬಿಡದಿಯ ಮನೆಯತ್ತ ಸಾಗಿದರು. ಆದರೆ ವೃದ್ಧದಂಪತಿ ಇದನ್ನು ಗಮನಿಸಿಯಾಗಿತ್ತು. ಅವರೂ ಬೇಗ ಪ್ರಭುಗಳ ಬಳಿ ಬಂದರು. ಒಡೆಯರಿಗೆ ಸಹಜವಾಗಿಯೇ ಮುಜುಗರ. ಇದು ಅವರ ಬಾಯಿಂದ ಕ್ಷಮೆಯನ್ನು ಯಾಚಿಸುವಂತೆ ಮಾಡಿತು. ಆತ್ಮೀಯರಲ್ಲಿ ಕ್ಷಮೆಯ ಮಾತು ಬಂದೊದಡನೆಯೇ ಸ್ನೇಹದ ಸವಿ ಹದಗೆಡುತ್ತದೆ. ಇದನ್ನು ನೀಗಬೇಕೆಂದರೆ ಮನಬಿಚ್ಚಿ ಮಾತನಾಡದೆ ವಿಧಿಯಿಲ್ಲ. ವೃದ್ಧರು ಆಗ ನಡೆದ ಪ್ರಸಂಗವನ್ನು ಮಾತಿಗೆ ತರುವ ಮೂಲಕ ತಾವಾಗಿ ಈ ಕಾರ್ಯಕ್ಕೆ ಮುಂದಾದರು. ಆಗ ಮೈಚಳಿ ಬಿಟ್ಟ ಪ್ರಭುಗಳು ಅವರ ವಿವರಣೆಗೆ ಮೈಯೆಲ್ಲ ಕಿವಿಯಾದರು.
ವೃದ್ಧರು ಹೇಳಿದರು: “ಪ್ರಭುಗಳು ಕ್ಷಮೆ ಕೇಳಬೇಕಾದ ಆವಶ್ಯಕತೆಯಿಲ್ಲ. ಪ್ರೀತಿಯಲ್ಲಿ ಮುಳುಗಿದ ಹಿರಿಯರನ್ನು ಕಿರಿಯರು ಕಂಡಲ್ಲಿ ತಪ್ಪಾಗದು.” ಇದಕ್ಕೆ ಒಡೆಯರು ವಿವರಣೆ ಬಯಸಿದರು. ಆಗ ವೃದ್ಧರು ಸಾವಧಾನವಾಗಿ ಉತ್ತರಿಸಿದರು. ಇದನ್ನು ಮಾಸ್ತಿಯವರ ಮಾತುಗಳಲ್ಲಿಯೇ ಕೇಳಬಹುದು:
“ಗಂಡು ಹೆಣ್ಣು ಎಂದು ಜೀವಜಾತದಲ್ಲಿ ಎರಡು ಪ್ರಕಾರ ಇರುವುದು ದೈವದ ಇಚ್ಛೆ. ತಕ್ಕ ವಯಸ್ಸಿನ ಗಂಡು ಹೆಣ್ಣು ಒಂದನ್ನೊಂದು ಬಯಸುವುದೂ ಅದೇ ಇಚ್ಛೆಯೇ. ಬಯಸಿ ಕ್ರಮವಾಗಿ ಪತಿ ಪತ್ನಿಯಾಗಿ ಬಾಳುವುದೇ ಇದರ ಉದ್ದೇಶ ... ಪೂರ್ವದಲ್ಲಿ ತಪಸ್ವಿಗಳಾದ ನಮ್ಮ ಹಿರಿಯರು ಆಶೆಗೆ ಸೋತರೂ ಅದಕ್ಕೆ ಅಧೀನರಾಗಿ ಸ್ತ್ರೀಯನ್ನು ಕೇವಲ ಭೋಗವಸ್ತು ಎಂದು ಕಾಣುವುದು ತಪ್ಪು ಎಂದು ಎಚ್ಚರದಿಂದ ನಡೆದರು ... ಸಂಭೋಗದ ಸುಖ ಉನ್ನತ ಸುಖ; ಇದರಲ್ಲಿ ಸಂಶಯ ಇಲ್ಲ. ದಿಟದಲ್ಲಿ ಜೀವಜಾತಕ್ಕೆ ಈ ಸುಖಕ್ಕೆ ಸಮನಾದ ಸುಖ ಇನ್ನೊಂದಿಲ್ಲ ... ಈ ಸುಖ ಈ ಮಟ್ಟದಲ್ಲಿ ಉಳಿಯಬೇಕು ಎನ್ನುವುದಾದರೆ ಲಾಲಸೆ ಅಷ್ಟೇ ಸಂಯಮವೂ ಇರಬೇಕು. ಸಂಯಮ ಇಲ್ಲ, ಲಾಲಸೆ ಒಂದು ವ್ಯಾಧಿ ಆಗುತ್ತದೆ. ಪುರುಷನನ್ನು ಕೆಳಕ್ಕೆ ಸೆಳೆಯುತ್ತದೆ. ಕೆಲವು ಕಾಲದ ಬಳಿಕ ಪುರುಷನಿಗೆ ಸ್ತ್ರೀಯನ್ನು ಕುರಿತ ಅಪೇಕ್ಷೆ ನಷ್ಟವೇ ಆಗಬಹುದು. ಮನುಷ್ಯ ಈ ಅವಸ್ಥೆಯನ್ನು ಮುಟ್ಟಬಾರದು. ಪೂರ್ವಿಕರು ನಿಮಿಸಿದ ಕ್ರಮವನ್ನು ನಡೆಸಿ ಬಾಳುವ ಗಂಡಿಗೆ ಹೆಣ್ಣು ಯಾವ ಕಾಲಕ್ಕೂ ಅಪೇಕ್ಷಿತ ವಸ್ತುವಾಗಿ ಇರುತ್ತಾಳೆ. ಅವನಿಗೆ ಹಲವು ಸ್ತ್ರೀಯರನ್ನು ಕುರಿತು ಅಪೇಕ್ಷೆ ಹುಟ್ಟುವುದಿಲ್ಲ. ಒಂದು ಹೆಣ್ಣು ಜೀವಾವಧಿ ಪ್ರಿಯವಾದ ವಸ್ತು ಆಗುತ್ತಾಳೆ. ಇಂಥ ದಂಪತಿಗಳಿಗೆ ಮುಪ್ಪಿಲ್ಲ. ವಯಸ್ಸಾಗುತ್ತದೆ. ಆದರೂ ಅಪೇಕ್ಷೆ ಉಳಿದಿರುತ್ತದೆ. ಮದುವೆಯಲ್ಲಿ ವಧೂವರರಿಗೆ ವಸಿಷ್ಠ ಅರುಂಧತೀ ದರ್ಶನ ಮಾಡಿಸುವುದರ ಅರ್ಥ ಇದೇ. ನನ್ನ ಪತ್ನಿ ನನಗೆ ಮುದುಕಿಯಾಗಿ ಕಾಣುವುದಿಲ್ಲ. ಚಿಕ್ಕಂದಿನ ತರುಣಮೂರ್ತಿಯಾಗಿಯೇ ಇದ್ದಾಳೆ. ತಾವು ಇಂದು ನಮ್ಮನ್ನು ಕಂಡದ್ದು ಈ ರೀತಿಯ ಪರಸ್ಪರ ಅಪೇಕ್ಷೆಯ ಸ್ಥಿತಿಯಲ್ಲಿ. ಚಿತ್ತಕ್ಕೆ ಬಂದರೆ ನಾವು ಕುಳಿತಿದ್ದ ರೀತಿ ತಪ್ಪು ಎನ್ನಿಸುವುದಿಲ್ಲ.”
ಇದನ್ನು ಕೇಳಿದ ಒಡೆಯರಿಗೆ ಈ ಒಂದೊಂದು ಮಾತು ವಿವರದಲ್ಲಿ ತಮ್ಮ ಜೀವನವನ್ನು ಕುರಿತ ಟೀಕೆಯೆಂದೇ ಕಂಡಿತೆಂದು ಮಾಸ್ತಿ ಒಕ್ಕಣಿಸುತ್ತಾರೆ. ಒಡೆಯರಿಗೆ ಮೂವರು ಪತ್ನಿಯರಲ್ಲದೆ ಹಲವರು ಪ್ರೇಯಸಿಯರಿದ್ದರೆಂದೂ ಅವರು ಮೊದಲಿಗೆ ತಿಳಿಸಿದ್ದಾರೆ. ಬಹುಶಃ ಈ ಎಲ್ಲ ಕಾರಣಗಳಿಂದ ತಮ್ಮ ಕಾಮ-ಪ್ರೇಮಜೀವನದ ವಿಮರ್ಶೆ ಮಾಡುಕೊಳ್ಳುತ್ತ ಪ್ರಭುಗಳು ಇಂಥ ಆಕರ್ಷಣೆ ಬಾಳಿನ ಕೊನೆಯವರೆಗೂ ಉಳಿಯುವುದೇ ಎಂದು ಪ್ರತಿಪ್ರಶ್ನೆ ಮಾಡಿದರಂತೆ. ಇದಕ್ಕೆ ವೃದ್ಧರು ನೀಡಿದ ಉತ್ತರ ಮಾರ್ಮಿಕವಾಗಿದೆ:
“ನಾನು ನನ್ನ ಮನಸ್ಸಿನ ಸ್ಥಿತಿಯನ್ನು ಹೇಳುವುದಾದರೆ ಈ ದೇಹ ಅಗ್ನಿಯಿಂದ ದಗ್ಧವಾಗಿ ಭಸ್ಮ ಆದಾಗಲೇ ಈ ಆಕರ್ಷಣೆ ಅಳಿಯುವುದು. ಇದು ಗಂಡಿನ ಮಾತು. ಹೆಣ್ಣಿನ ಮನಸ್ಸು ಹೀಗೇಯೇ ಇರುತ್ತದೆಯೇ? ಇದನ್ನು ನಾವು ಹೇಳುವಂತಿಲ್ಲ. ನೀವು ನಮಗೆ ಚಿರಂಜೀವಿಗಳು. ನಾವು ತಿಳಿದಿರುವ ಸಂಗತಿಯನ್ನು ತಮಗೆ ತಿಳಿಸುವುದು ನಮ್ಮ ಕರ್ತವ್ಯ. ನಮ್ಮ ಪತ್ನಿ ತಾಯಿ ಎಂದು ಭಾವಿಸಿ, ವೃದ್ಧಪತ್ನಿಯನ್ನು ಕೇಳಿ ಈ ವಿಷಯವನ್ನು ತಿಳಿದುಕೊಳ್ಳಿ.”
ಈ ಪ್ರಸಂಗವನ್ನೆಲ್ಲ ಆಲಿಸುತ್ತಿದ್ದ ವೃದ್ಧೆ ತಾವಾಗಿ ಹೇಳಿದರಂತೆ: “ಗಂಡಿನ ಜೀವ ಪುಣ್ಯವಂತ ಜೀವ. ಹೆಣ್ಣಿನ ಜೀವ ಅಂಥ ಪುಣ್ಯ ಜೀವ ಅಲ್ಲ. ಗಂಡಿಗೆ ದೇಹ ಭಸ್ಮ ಆದಮೇಲೆ ಹೆಣ್ಣಿನ ಅಪೇಕ್ಷೆ ಇರುವುದಿಲ್ಲ. ಹೆಣ್ಣಿನ ದೇಹ ಭಸ್ಮ ಆದಮೇಲೂ ಆ ಜೀವಾನ ಹೊಂದಿದ್ದ ಗಂಡು ಹತ್ತಿರ ಬಂದರೆ, ಆ ಭಸ್ಮ ಅದುರುತ್ತದೆ. ಅವನ ಕಾಲಿನ ಬಳಿಗೆ ಹಾರುತ್ತದೆ.”
ಇದನ್ನೆಲ್ಲ ಕೇಳಿದ ಪ್ರಭುಗಳಿಗೆ ಭಯ-ವಿಸ್ಮಯಗಳು ಆಗಿರಬಹುದು. ಅವರು ವೃದ್ಧರಲ್ಲಿ ಹೀಗೆ ನಿವೇದಿಸಿದರಂತೆ: “ಪೂಜ್ಯರಿಂದ ನನಗೆ ಒಂದು ಅನುಗ್ರಹ ಆಗಬೇಕು. ನಾನು ಅಷ್ಟೇನೂ ಶುಚಿಯಾಗಿ ಬಾಳಿದ ಮನುಷ್ಯನಲ್ಲ. ಮಹಾಭಾರತದಲ್ಲಿ ಹೇಳಿರುವಂತೆ ಇಂದ್ರಿಯಸುಖವನ್ನು ಅನುಭವಿಸಿಯೂ ಅದರ ಹಿಡಿತದಲ್ಲಿಯೇ ಇನ್ನೂ ತೊಳಲುತ್ತಿದ್ದೇವೆ. ಈ ಸ್ಥಿತಿಯಿಂದ ಕೆಡದಂತೆ ಬಾಳುವುದು ಹೇಗೆ?...”
“ನೀವು ಹೀಗೆ ಸತ್ಯವನ್ನು ಕಂಡುಕೊಂಡಿರುವುದು ಒಂದು ಭಾಗ್ಯ. ದೇವರು ಇದನ್ನು ಅನುಗ್ರಹಿಸಿದ್ದಾರೆ. ಅವರ ಕಾಲ ಮೇಲೆ ಬಿದ್ದು ಕಾಪಾಡಿ ಎಂದು ಬೇಡಿಕೊಳ್ಳಿ. ಕಾಪಾಡುತ್ತಾರೆ” ಎಂದು ವೃದ್ಧರು ಸಮಾಧಾನದ ನುಡಿಯಾಡಿದರಂತೆ.
ಈ ಪ್ರಸಂಗದ ಫಲಶ್ರುತಿಯೆಂಬಂತೆ ಮುಮ್ಮಡಿ ಕೃಷ್ಣರಾಜ ಒಡೆಯರು ‘ವಿಜ್ಞಾಪನಶತಕ’ ಎಂಬ ಕಾವ್ಯವನ್ನು ಕೂಡ ರಚಿಸಿದರೆಂದು ಮಾಸ್ತಿಯವರು ಸದ್ಯದ ಪ್ರಕರಣವನ್ನು ಮುಗಿಸುತ್ತಾರೆ.
ಈ ವಿಶಿಷ್ಟ ಕಥಾನಕದಲ್ಲಿ ಭವಭೂತಿ ಹೇಳುವ ‘ಜರಸಾ ಯಸ್ಮಿನ್ನಹಾರ್ಯೋ ರಸಃ; ಕಾಲೇನಾವರಣಾತ್ಯಯಾತ್ ಪರಿಣತೇ ಯತ್ ಪ್ರೇಮಸಾರೇ ಸ್ಥಿತಂ’ ಎಂಬ ಮಾತು ಅನುಭೂತಿಯಾಗಿ ಹರಳುಗಟ್ಟಿದೆ. ಈ ಸ್ಥಿತಿಯ ಸಿದ್ಧಿಗಾಗಿ ಇದರ ಮೊದಲಿನ ಸೊಲ್ಲುಗಳಾದ ‘ಅದ್ವೈತಂ ಸುಖದುಃಖಯೋರನುಗತಂ ಸರ್ವಾಸ್ವವಸ್ಥಾಸು ಯದ್ವಿಶ್ರಾಮೋ ಹೃದಯಸ್ಯ’ ಎಂಬ ಹಂತಗಳನ್ನು ಹಾಯ್ದುಬಂದಿರಲೇ ಬೇಕು. ಇವೆಲ್ಲದರ ಪಾಕವಾಗಿ ಆ ವೃದ್ಧ-ವೃದ್ಧೆಯರಿಗೆ ‘ಭದ್ರಂ ತಸ್ಯ ಸುಮಾನುಷಸ್ಯ’ ಎಂಬ ರಸಫಲ ದಕ್ಕಿತು. ಮುಮ್ಮಡಿಯವರಿಗಾದರೋ ಈ ಮಟ್ಟದ ಸಾಫಲ್ಯ ಸಿಕ್ಕಿರಲಿಲ್ಲ. ಅವರಿಗೇನಿದ್ದರೂ ಮಹಾಭಾರತದ ಆದಿಪರ್ವದಲ್ಲಿ ಯಯಾತಿಯು ಕಂಡುಕೊAಡ ಸತ್ಯ ಮಾತ್ರ ದಕ್ಕಿತ್ತು: ‘ನ ಜಾತು ಕಾಮಃ ಕಾಮಾನಾಮುಪಭೋಗೇನ ಶಾಮ್ಯತಿ | ಹವಿಷಾ ಕೃಷ್ಣವರ್ತ್ಮೇವ ಭೂಯ ಏವಾಭಿವರ್ಧತೇ ||’ (೧.೬೯.೫೨; ದಾಕ್ಷಿಣಾತ್ಯಪಾಠ). ಸ್ವಾರಸ್ಯವೆಂದರೆ ಇಂಥ ಕಾಮಾಗ್ನಿದರ್ಶನವನ್ನು ಮಾಡಿ ಅದರ ಉಪಶಾಂತಿಗಾಗಿ ತಪಿಸಿ ಸ್ವರ್ಗ ಸೇರಿದ ಯಯಾತಿಗೆ ದೇವಲೋಕದ ಭೋಗ ದಕ್ಕಿದ್ದರೂ ದಿವ್ಯವಾದ ದಾಂಪತ್ಯಯೋಗ ಮಾತ್ರ ಸಿದ್ಧಿಸಿರಲಿಲ್ಲ. ಈ ಅರ್ಥದಲ್ಲಿ ಭವಭೂತಿ ಚಿತ್ರಿಸುವ ಪಕ್ವ ದಾಂಪತ್ಯದ ಮಹತ್ತ್ವ ಸ್ವರ್ಗಕ್ಕಿಂತ ಮಿಗಿಲೆಂದು ಧ್ವನಿತವಾಗುತ್ತದೆ.
ಪರಿಪಕ್ವ ದಾಂಪತ್ಯದಲ್ಲಿ ಮುಪ್ಪು ಮತ್ತು ಸುದೀರ್ಘ ಸಾಂಗತ್ಯದ ಫಲವಾದ ಸವಕಳಿಗಳು ಅನುರಾಗ-ಅನುಭೋಗಗಳಿಗೆ ಅಡ್ಡಿಯಾಗವೆಂಬ ವೃದ್ಧರ ಮಾತು ಸತ್ಯವಾಗಿ ಸಾಕ್ಷಾತ್ಕರಿಸಲು ದಾಂಪತ್ಯವು ಪಾರ್ವತೀ-ಪರಮೇಶ್ವರರ ಪರಸ್ಪರ ತಪಸ್ಸಿದ್ಧಿಯ ಮಟ್ಟಕ್ಕೇರಬೇಕು. ಈ ಸಂದರ್ಭದಲ್ಲಿ ಕವಿಕುಲಗುರು ಕಾಳಿದಾಸನ ‘ಕುಮಾರಸಂಭವ’ ಒದಗಿಸುವ ದರ್ಶನವನ್ನು ನೆನೆಯಬಹುದು. ಮೊತ್ತಮೊದಲಿಗೆ ತನ್ನ ಪರಿಚರ್ಯೆಗೆಂದು ಬಂದ ಪಾರ್ವತಿಯತ್ತ ತಿರುಗಿಯೂ ನೋಡದ ತಪೋಮೂರ್ತಿ ಶಿವನು ಅನಂತರ ಅಕಾಲವಸಂತದ ವಿಜೃಂಭಣೆಯ ವೇಳೆಯಲ್ಲಿ ಅವಳ ಚೆಂದುಟಿಗಳತ್ತ ತನ್ನ ಮೂರು ಕಣ್ಣುಗಳ ನೋಟವನ್ನೂ ಹಾಯಿಸುತ್ತಾನೆ; ಹೀಗೆ ತನ್ನ ಅಂತರಂಗದಲ್ಲಿ ಬಯಕೆಯು ಉಂಟುಮಾಡಿದ ಕ್ಷೋಭೆಯಿಂದ ಪಾರಾಗಲು ಅದೇ ಬಯಕೆಯ ಸಾಕಾರವಾದ ಕಾಮನನ್ನು ಸುಟ್ಟು ಕಣ್ಮರೆಯೂ ಆಗುತ್ತಾನೆ. ಬಳಿಕ ಭಗ್ನಪ್ರೇಮಳಾದ ಪಾರ್ವತಿಯ ಕಠೋರತಪಸ್ಸಿಗೆ ಒಲಿದು ಅವಳ ಮುಂದೆ ಮಂಡಿಯೂರಿ ತಾನವಳಿಗೆ ದಾಸನೆಂದು ಆತ್ಮನಿವೇದನೆ ಮಾಡಿಕೊಳ್ಳುತ್ತಾನೆ. ಆಗಲೂ ಸಂಯಮ ಬಿಡದ - ತನ್ನ ತಂದೆಯ ಮೂಲಕ ವಿವಾಹಧರ್ಮಾನುಸಾರ ತಾನು ಶಿವನಿಗೆ ಸೇರಬೇಕು - ಎಂಬ ಉಮೆಯ ಸಂಕಲ್ಪವನ್ನು ಮೆಚ್ಚಿ ಸಪ್ತರ್ಷಿಗಳ ಮೂಲಕ ವಿವಾಹಪ್ರಸ್ತಾವ ಮಾಡಿಸುತ್ತಾನೆ; ಬ್ರಾಹ್ಮವಿಧಿಯಿಂದ ಪಾಣಿಗ್ರಹಣ ಮಾಡುತ್ತಾನೆ. ಈ ಹೊತ್ತಿಗೆ ಸರಿಯಾಗಿ ಅಳಿದ ಕಾಮನು ಅನಂಗನಾಗಿ ಮತ್ತೆ ಮೇಲೇಳುತ್ತಾನೆ. ಅನಂತರ ಶಿವ-ಶಿವೆಯರ ಮಧುಚಂದ್ರ ಸಾಗುತ್ತದೆ. ನೂರಾರು ಋತುಗಳನ್ನು ಇರುಳೊಂದರ ಹಾಗೆ ಭಾವಿಸಿ ಭೋಗದಲ್ಲಿ ಮುಳುಗಿದಾಗಲೂ ಶಿವನಿಗೆ ತೃಪ್ತಿ ಆಗಲಿಲ್ಲವಂತೆ! ಅಂದರೆ, ಪಾರ್ವತಿ ಹಳತಾಗಿ ತೋರಲಿಲ್ಲ. ಅವಳ ಪಾಲಿಗೆ ಇವನೂ ಯಾತಯಾಮನಾಗಲಿಲ್ಲ.[2]
[1] Art Experience. Bengaluru: Prekshaa Pratishtana, 2018. pp. 77–78
[2] ಕುಮಾರಸಂಭವ ೮.೯೧. ಈ ಶ್ಲೋಕದ ಸ್ವಾರಸ್ಯವನ್ನು ನನಗೆ ತೋರಿಸಿಕೊಟ್ಟವರು ನನ್ನ ಗೆಳೆಯ ಶ್ರೀ ಎಚ್. ಎ. ವಾಸುಕಿ. ಅವರಿಗೆ ನಾನು ಕೃತಜ್ಞನಾಗಿದ್ದೇನೆ.
To be continued.