ಕಾದಂಬರಿಗಳ ಪೌರಾಣಿಕ ಪರ್ಯಾವರಣವನ್ನು ಪುಷ್ಟಿಗೊಳಿಸುವಂತೆ ಅನೇಕ ಪ್ರಸಂಗಗಳು ರೂಪಿತವಾಗಿವೆ. ರುದ್ರಸಾಕ್ಷಾತ್ಕಾರ, ಆಪೋದೇವಿಯರ ದರ್ಶನ, ತ್ರಿಶಂಕುವಿನ ದಿವ್ಯದೇಹನಿರ್ಮಾಣ (‘ಮಹಾಬ್ರಾಹ್ಮಣ’), ಬ್ರಹ್ಮಹತ್ಯೆಯ ಪಾಪವನ್ನು ವೃಕ್ಷ, ಸ್ತ್ರೀ, ನದಿ ಮತ್ತು ಭೂಮಿಗಳಲ್ಲಿ ಹಂಚುವುದು ಹಾಗೂ ವೃತ್ರಾಸುರನು ಪಂಚಭೂತಗಳನ್ನು ಹಿಡಿಯುವುದು (‘ಮಹಾಕ್ಷತ್ರಿಯ’), ಆದಿತ್ಯನು ಕುದುರೆಯ ರೂಪದಲ್ಲಿ ಯಾಜ್ಞವಲ್ಕ್ಯನಿಗೆ ಕಾಣಿಸಿಕೊಳ್ಳುವುದು, ಪಂಚಭೂತಗಳ ಸಾಕ್ಷಾತ್ಕಾರ, ಕುಲಪತಿ ವೈಶಂಪಾಯನರಿಗೆ ಶ್ರುತಿಭಗವತಿ ಪ್ರತ್ಯಕ್ಷಳಾಗುವುದು (‘ಮಹಾದರ್ಶನ’) ಮುಂತಾದ ಸನ್ನಿವೇಶಗಳು ಕಲ್ಪಿತವಾದರೂ ಹೀಗೆಯೇ ನಡೆದಿದ್ದಿರಬೇಕೆಂದು ಓದುಗರಿಗೆ ತೋರುವ ಮಟ್ಟಿಗೆ ಅಧಿಕೃತವಾಗಿ ರೂಪುಗೊಂಡಿವೆ. ಇವುಗಳ ಸಾಂಕೇತಿಕ ಸ್ವಾರಸ್ಯವೂ ಹಿರಿದು. ಒಂದೆರಡನ್ನು ಇಲ್ಲಿ ಉಲ್ಲೇಖಿಸಬಹುದು.
[ಇಲ್ಲಿಯ ಉದ್ಧೃತಿಗಳು ಬೆಂಗಳೂರಿನ ‘ಹೇಮಂತ ಸಾಹಿತ್ಯ’ ಪ್ರಕಟಿಸಿರುವ ಆವೃತ್ತಿಗಳವು: ‘ಮಹಾಬ್ರಾಹ್ಮಣ’ (೨೦೨೧), ‘ಮಹಾಕ್ಷತ್ರಿಯ’ (೨೦೨೧), ‘ಮಹಾದರ್ಶನ’ (೨೦೨೨).]
ಆಪೋಜ್ಯೋತಿಯ ವರ್ಣನೆ:
“ಮಂದಪ್ರಭೆಯ ಸುಂದರಲೋಕವೊಂದು. ಅಲ್ಲಿ ಎತ್ತ ತಿರುಗಿದರೂ ನೀರೇ! ಮೇಲೆ, ಕೆಳಗೆ, ನಡುವೆ, ಎಲ್ಲಾ ನೀರೇ! ಅಥವಾ ನೀರಿನಂತೆ ಕಾಣುವ ಇನ್ನೊಂದು ದ್ರವ. ಹಾಗೆಂದು ಅದರಲ್ಲಿ ಏನೂ ಹರಿಯುತ್ತಿಲ್ಲ. ಹಾಗೆಂದು ಕಲ್ಲು ಮಣ್ಣುಗಳಂತಹ ಘನತ್ವವೂ ಇಲ್ಲ. ಸ್ಫಟಿಕದ ಮುದ್ದೆ ಕರಗಿ ನೀರಾಗದೆ ಬೆಳಕಾದಂತೆ ಇದೆ. ಹಾಗೆಂದು ಭಾರಿಯ ಪ್ರಕಾಶವಿಲ್ಲ. ಅದೊಂದು ಅಲೌಕಿಕವಾದ ಪ್ರಕಾಶ. ಅಲ್ಲಿರುವುದನ್ನು ಕಣ್ಣು ಕಾಣುತ್ತದೆಯೆನ್ನುವುದಕ್ಕಿಂತ ಅದೇ ಕಣ್ಣಿಗೆ ಕಾಣುತ್ತಿದೆಯೆಂದರೆ ಸರಿ ಎನ್ನುವಂತಿದೆ.” (‘ಮಹಾಬ್ರಾಹ್ಮಣ,’ ಪು. ೬೫-೬೬)
ಕಾವಿಲ್ಲದ ಬೆಳಕೆನಿಸಿದ ಆಪೋಜ್ಯೋತಿಯನ್ನು ಇದಕ್ಕಿಂತಲೂ ಚೆನ್ನಾಗಿ ವರ್ಣಿಸಲು ಸಾಧ್ಯವಿಲ್ಲ. ‘ಆರ್ದ್ರಂ ಜ್ಯೋತಿರ್ಜ್ವಲತಿ’ ಎಂಬ ಮಂತ್ರದ ವ್ಯಾಖ್ಯಾನವಿದು.
ವೃತ್ರಾಸುರನು ಪಂಚಭೂತಗಳನ್ನು ಹಿಡಿಯುವುದು:
“ಶಚಿಯ ಮೈಯಲ್ಲಿ ಯಾವಾಗಲೂ ಘಮಘಮವೆಂದು ಸುವಾಸನೆಯು ಪುಷ್ಪಗುಚ್ಛದಲ್ಲಿರುವುದಕ್ಕಿಂತ ಹೆಚ್ಚಾಗಿ ಮಸಗುತ್ತಿರಬೇಕು. ಅದಕ್ಕೆ ಪ್ರತಿಯಾಗಿ ಏನೋ ದುರ್ವಾಸನೆಯು ಮೂಗಿಗೆ ತೋರುತ್ತಿದೆ ... ವೃತ್ರನ ಪ್ರೇತವು ಪೃಥ್ವೀಭೂತವನ್ನು ಹಿಡಿದಿದೆ. ಅದರಿಂದಲೇ ಈ ದುರ್ಗಂಧ! ... ಎಲ್ಲರಿಗೂ ಬಾಯಿ ಅಂಟು ಅಂಟಾಗಿದೆ. ಏನೋ ಕೆಟ್ಟ ರುಚಿ ... ವೃತ್ರನು ಜಲಭೂತವನ್ನು ಹಿಡಿದಿದ್ದಾನೆ ... ಮಹಾಸೌಂದರ್ಯವತಿಯಾದ [ಶಚಿಯ] ರೂಪವು ನೋಡುತ್ತಿದ್ದಂತೆಯೇ ಕರಾಳವಾಗುತ್ತಿದೆ. ಎತ್ತೆತ್ತಲೋ ದೇಹವು ವಿಕಾರವಾಗುತ್ತಿದೆ ... ವೃತ್ರನು ಅಗ್ನಿಭೂತವನ್ನು ಹಿಡಿದಿದ್ದಾನೆಂದು ತಿಳಿಯಿತು ... ಶಚೀದೇವಿಯ ಕೈಕಾಲುಗಳೂ ದೇಹವೂ ಸೊರಟಿಕೊಳ್ಳುತ್ತಿವೆ ... ಎಲ್ಲವೂ ಸೊಟ್ಟಸೊಟ್ಟವಾಗಿದೆ. [ವೃತ್ರನು ವಾಯುಮಂಡಲವನ್ನು ಹಿಡಿದಿದ್ದಾನೆ.] ... ಎಲ್ಲವೂ ಹೂ ಅರಳಿದಂತೆ ಅರಳುತ್ತಿದೆ. ಶಚಿಯು ಬೆಂಕಿಯ ಸಂಬಂಧವಿಲ್ಲದೆ ಅರಳಾಗುವ ಭತ್ತದಂತೆ ಅರಳುತ್ತಿದ್ದಾಳೆ. [ವೃತ್ರನು ಆಕಾಶಭೂತವನ್ನು ಹಿಡಿದಿದ್ದಾನೆ.] ... [ಇಂದ್ರನು] ಅಯ್ಯೋ ಎಂದು ಅಳಲು ಮೊದಲು ಮಾಡುತ್ತಾನೆ ... ಅಗ್ನಿವಾಯುಗಳೂ ಅಳುತ್ತಾರೆ ... ಆಚಾರ್ಯನಿಗೂ ಅಳು ಬರುತ್ತದೆ ... ವೃತ್ರನು ಇಂದ್ರನ ಅಹಂಕಾರವನ್ನು ಹಿಡಿದಿದ್ದಾನೆ.” (‘ಮಹಾಕ್ಷತ್ರಿಯ,’ ಪು. ೧೧೭-೨೧)
ಪಂಚಭೂತಗಳ ಅಭಿಭವವನ್ನು ಅವುಗಳ ಗುಣಗಳ ವಿಕೃತಿಯಿಂದ ಸೂಚಿಸುವುದು ಶಾಸ್ತ್ರ-ಕಾವ್ಯಗಳ ನಾಡಿಯ ಮಿಡಿತವನ್ನು ಬಲ್ಲವರಿಗೆ ಮಾತ್ರ ಸಾಧ್ಯ. “ಗಂಧವತೀ ಪೃಥಿವೀ” ಮುಂತಾದ ಶಾಸ್ತ್ರಪಂಕ್ತಿಗಳ ಕಾವ್ಯಮಯ ವಿವರಣೆಯೇ ಇಲ್ಲಿದೆ.
ಆದಿತ್ಯನು ಯಾಜ್ಞವಲ್ಕ್ಯನಿಗೆ ವಾಜಿರೂಪದಲ್ಲಿ ಕಾಣಿಸಿಕೊಳ್ಳುವುದು:
“...ಕುದುರೆಯು ಕಾಣಿಸಿತು. ಕುದುರೆಯು ಒಂದು ಇದ್ದುದು ಒಂದು ಹಿಂಡಾಗುತ್ತದೆ. ಹಾಗೆಹಾಗೆಯೇ ಮತ್ತೆ ಒಂದೇ ಆಗುತ್ತದೆ. ಆ ಕುದುರೆಯು ಮರಿಯಾಗುತ್ತದೆ ... ಈಗ ಕುದುರೆಯು ಮರಿಯಾಗಿಲ್ಲ. ಒಂದಾಳಿಗಿಂತಲೂ ಎತ್ತರವಾಗಿರುವ ಕುದುರೆ. ಅಷ್ಟೇ ಅಲ್ಲ, ಜ್ವಾಲಾಮಯವಾಗಿದೆ. ನಿಗಿನಿಗಿಯೆಂದು ಕೆಂಡಕ್ಕಿಂತಲೂ ಕೆಂಡವಾಗಿದೆ ... ಕುದುರೆಯು ... ಆತನ ಹೃದಯವನ್ನು ಹೊಕ್ಕಿತು. ಯಾಜ್ಞವಲ್ಕ್ಯನು ಪ್ರಜ್ವಲಿಸುತ್ತಿರುವ ಅಗ್ನಿಯ ಕುಂಡವಾದನು. ಆತನ ರೋಮಕೂಪಗಳಿಂದೆಲ್ಲಾ ಅಗ್ನಿಪುರುಷನಿಗಿಂತ ಹೆಚ್ಚಾಗಿ ಜ್ವಾಲೆಗಳೆದ್ದುವು.” (‘ಮಹಾದರ್ಶನ,’ ಪು. ೨೩೪)
ಯಾಜ್ಞವಲ್ಕ್ಯನು ವಾಜಸನೇಯೀ ಸಂಹಿತೆಯನ್ನು ಕಂಡುಕೊಳ್ಳುವ ಮೊದಲು ಅದರ ಆದಿಮೂಲವಾದ ಆದಿತ್ಯನು ವಾಜಿಯ ರೂಪದಲ್ಲಿ ಅನುಗ್ರಹಿಸಿದ ಸಂಗತಿ ಇಲ್ಲಿ ಚಿತ್ರಕವಾಗಿ ಮೈದಾಳಿದೆ.
* * *
ಭಾರತೀಯ ಸಂಸ್ಕೃತಿಯು ಎತ್ತಿಹಿಡಿಯುವ ಅನೇಕ ದಾರ್ಶನಿಕ ತತ್ತ್ವಗಳು ಮೂರೂ ಕಾದಂಬರಿಗಳಲ್ಲಿ ಅಪೂರ್ವವಾಗಿ ವಿವರಣೆ ಕಂಡಿವೆ. ತಾವು ಕಲಿತ ವಿದ್ಯೆಗಳನ್ನು ಸಂಪೂರ್ಣವಾಗಿ ಜೀರ್ಣಿಸಿಕೊಂಡ ಮಹಾನುಭಾವರು ಮಾತ್ರ ಅವುಗಳನ್ನು ಹೀಗೆ ಕಾಣಿಸಬಲ್ಲರು. ದೇವುಡು ಒಬ್ಬ ಶಾಸ್ತ್ರಕಾರನಂತೆ ಇವುಗಳ ಲಕ್ಷಣಗಳನ್ನು ಮಾತ್ರ ಹೇಳಿ ತೃಪ್ತಿಸದೆ ಮನಮುಟ್ಟುವ ದೃಷ್ಟಾಂತಗಳಿಂದ, ಆಕರ್ಷಕ ವಾಗ್ರೂಢಿಗಳಿಂದ ಅವನ್ನು ಅಲಂಕರಿಸಿ ಕವಿಸಹಜವಾಗಿ ಬಣ್ಣಿಸುತ್ತಾರೆ. ಇಲ್ಲೆಲ್ಲ ಶಾಸ್ತ್ರ-ಕಾವ್ಯಗಳು ಸಂಪೂರ್ಣವಾಗಿ ಸಂಪೃಕ್ತವಾಗುತ್ತವೆ. ನಿದರ್ಶನವಾಗಿ ಕೆಲವನ್ನು ಗಮನಿಸೋಣ.
ತಪಸ್ಸಿಗೆ ಬೇಕಾದ ಪೂರ್ವಸಿದ್ಧತೆಯನ್ನೂ ಅದರ ಲಕ್ಷಣವನ್ನೂ ತಿಳಿಸುವ ಪರಿ:
“...ಮನಸ್ಸೆಲ್ಲವೂ ... ಚಂಚಲವಾಗಿ ಹರಡುವ ಸ್ವಭಾವವುಳ್ಳದ್ದು. ನೀನು ಏನಾದರೂ ಹಿಡಿದುಕೊಳ್ಳಬೇಕು ಎಂದರೆ ಕೈಬೆರಳುಗಳನ್ನೆಲ್ಲ ಸೇರಿಸಿ ಹಿಡಿದುಕೊಳ್ಳುವಂತೆ, ಮನಸ್ಸನ್ನು ಹಿಡಿಯುವುದು ಎಂದರೆ ಮನಸ್ಸಿನ ಅಂಗಗಳಂತೆ ಇರುವ ಇಂದ್ರಿಯಗಳನ್ನು ಹಿಡಿಯುವುದು. ನೀನು ಏನನ್ನು ಕೋರುವೆಯೋ ಅದನ್ನು ಆ ಮನಸ್ಸಿನ ತಲೆಯ ಮೇಲೆ ಹಾಕಿ, ಈ ಇಂದ್ರಿಯಗಳಿಂದ ಆ ಮನಸ್ಸು ಹರಿದುಹೋಗದಂತೆ ಹಿಡಿದು ನಿಲ್ಲಿಸು. ಆಗ ಆ ಮನಸ್ಸು ಆ ಪ್ರಶ್ನೆಯನ್ನು ಹೊತ್ತು, ತನ್ನ ಅಕ್ಷದ ಮೇಲೆಯೇ ತಿರುಗುತ್ತಿರುವ ಬುಗುರಿಯಂತೆ ತಿರುಗುವುದು. ಹಾಗೆ ತಿರುತಿರುಗುತ್ತ, ಮೊದಲು ತಾನು ಹೊರಟಿದ್ದ ಕಡೆಗೇ ಬರುವುದು ... ಪ್ರಶ್ನೆಯನ್ನು ಹೊತ್ತ ಮನಸ್ಸು ಒಂದು ಸುತ್ತು ತಿರುಗಿದರೆ ಈ ಮುಖದಲ್ಲಿ ಪ್ರಶ್ನೆಯಾಗಿದ್ದುದು ಆ ಮುಖದಲ್ಲಿ ಉತ್ತರವಾಗಿ ಸಿಕ್ಕುವುದು. ಅದು ನಿನ್ನ ತಪಸ್ಸಿಗೆ ಮೊದಲನೆಯ ಮೆಟ್ಟಿಲು ... ತಪಸ್ಸೆಂದರೆ ಬಾಹ್ಯಾಭ್ಯಂತರ ಪ್ರಯತ್ನರಾಶಿ ... [ಅದು] ಬೀಜವು ವೃಕ್ಷವಾಗುವ ಕೆಲಸ ... ತನ್ನ ಸ್ಥಿತಿಯನ್ನು ಕಾಪಾಡಿಕೊಂಡು ಮುಂದಿನ ಗತಿಯನ್ನು ತನಗೆ ಬೇಕಾದ ಹಾಗೆ ರೂಪಿಸಿಕೊಳ್ಳಲು ಹೆಣಗಬೇಕು. ಅದು ತಪಸ್ಸು.” (‘ಮಹಾಬ್ರಾಹ್ಮಣ,’ ಪು. ೫೫-೫೬)
ಸತ್ಯ-ಧರ್ಮಗಳ ಸಂಬಂಧ ಹಾಗೂ ಧರ್ಮದ ಸ್ವರೂಪ:
“ಸತ್ಯಕ್ಕೆ ಎರಡು ರೂಪ. ಇಂದ್ರಿಯಗೋಚರವಾಗುವ ರೂಪವೊಂದು. ಅದು ಚರರೂಪ. ಇಂದ್ರಿಯಗೋಚರವಾಗದ ಸ್ಥಿರರೂಪ ಮತ್ತೊಂದು. ಚರರೂಪವು ಸ್ಥಿರರೂಪದ ಪ್ರತಿಬಿಂಬ. ಲೋಕವೆಲ್ಲವೂ ಅರಿತಿರುವುದು ಈ ಚರರೂಪವನ್ನು. ಅಲೆಗಳಂತೆ ಚಂಚಲವಾದುದು ಇದು. ಹೊತ್ತುಹೊತ್ತಿಗೆ ಹೊಸತಾಗುತ್ತಿರುವುದು ಇದರ ಸ್ವಭಾವ. ಇದು ದೇಶದೇಶಕ್ಕೂ ಬೇರೆಯಾಗುತ್ತಿರುವುದು ... ಆದರೆ, ಆ ಸ್ಥಿರರೂಪವಾದ ಸತ್ಯವಿದೆಯಲ್ಲ ಅದು ಬೇರೆ. ಅದು ಎಲ್ಲರಿಗೂ ಎಲ್ಲ ದೇಶಗಳಲ್ಲಿಯೂ ಎಲ್ಲ ಕಾಲಗಳಲ್ಲಿಯೂ ಒಂದೇ. ಈ ಲೋಕದಲ್ಲಿ ಅದು ಧರ್ಮವಾಗಿ ಗೋಚರವಾಗುವುದು. ಧರ್ಮವು ಸತ್ಯದ ಚರರೂಪದಲ್ಲಿ ಸ್ಥಿರರೂಪವನ್ನು ಆರಾಧಿಸುವಿಕೆ. ಅದಕ್ಕೆ ಚರರೂಪಕ್ಕಿರುವಷ್ಟೂ ಮುಖಗಳುಂಟು ... ಸಾಮಾನ್ಯರೂಪದಿಂದ ಸಾಧಾರಣವಾಗಿ ಎಲ್ಲರಿಗೂ ಅನ್ವಯಿಸಿದರೂ ವಿಶೇಷರೂಪದಿಂದ ಭಿನ್ನೈಸುವುದೇ ಅದರ ಸ್ವಭಾವ ಎಂದು ಅದಕ್ಕೆ ಗೌರವ.” (‘ಮಹಾಕ್ಷತ್ರಿಯ,’ ಪು. ೧೧೩)
ಶರೀರಧರ್ಮ, ಪ್ರಾಣಧರ್ಮ ಮತ್ತು ಮನೋಧರ್ಮಗಳಿಗೆ ಅತೀತವಾದ ಆತ್ಮದ ಸ್ವರೂಪ:
“ಶರೀರಧರ್ಮಗಳು ಜರಾಮರಣಗಳು. ಆತ್ಮನು ಅಜರನು; ಅಮರನು. ಜರಾಮರಣಗಳು ಏನಿದ್ದರೂ ಶರೀರವನ್ನು - ಎಂದರೆ ಮತ್ತೊಂದರ ಕಾರ್ಯವಾಗಿ, ಇನ್ನೊಂದರ ಕರಣವಾಗಿರುವ ಶರೀರವನ್ನು - ಹಿಡಿಯಬಲ್ಲವೆ ಹೊರತು ಅಶರೀರಿ ಆತ್ಮವನ್ನು ಸೋಂಕಲಾರವು. ಇನ್ನು ಈ ಶರೀರದೊಳಗಿದ್ದು ಶರೀರವನ್ನು ಸ್ವೇಚ್ಛೆಯಿಂದ ಆಡಿಸುತ್ತಿರುವ ಪ್ರಾಣದ ಧರ್ಮಗಳು ಕ್ಷುತ್ಪಿಪಾಸೆಗಳು. ಅವೂ ಆತ್ಮನನ್ನು ಮುಟ್ಟಲಾರವು. ಪ್ರಾಣವು ಆತ್ಮನ ನೆರಳು. ಪ್ರಾಣವು ಕಾರ್ಯವೂ ಹೌದು ಕರಣವೂ ಹೌದು. ಅವೆರಡೂ ಅಲ್ಲದ ಆತ್ಮನನ್ನು ಅವೆರಡೂ ಆದ ಪ್ರಾಣದ ಧರ್ಮಗಳೆಂತು ಮುಟ್ಟುವುವು? ಪ್ರಾಣದಂತೆಯೇ ಶರೀರದಲ್ಲಿದ್ದುಕೊಂಡು ಇಂದ್ರಿಯಗಳ ಚಲನವನ್ನು ಪ್ರೇರಿಸುವ ಮನಸ್ಸಿನ ಧರ್ಮಗಳು ಶೋಕಮೋಹಗಳು. ಶೋಕವೇ ಕಾಮವು ಮೋಹವೇ ಅಜ್ಞಾನವು. ಹುಲ್ಲು ಅಗ್ನಿಯನ್ನು ಮುಟ್ಟಿ ಎಂತು ಬದುಕಲಾರದೋ ಹಾಗೆ ಕಾಮವು ಅಕಾಮವಾದ ಆತ್ಮನನ್ನು ಮುಟ್ಟಿ ಬದುಕಲಾಗದು ... ಹಾಗೆಯೇ ಅಜ್ಞಾನವೂ ಜ್ಞಾನವೇ ತಾನಾದ ಆತ್ಮವನ್ನು ಎಂತು ಸೇರಬಲ್ಲುದು?” (‘ಮಹಾದರ್ಶನ,’ ಪು. ೩೪೦-೪೧)
ಎಲ್ಲಕ್ಕಿಂತ ಹೆಚ್ಚಾಗಿ, ಜಗತ್ತಿನ ಎಲ್ಲ ಚಟುವಟಿಕೆಗಳಿಗೂ ಅನಿವಾರ್ಯವಾದ ಅನ್ನ-ಅನ್ನಾದಗಳ ರೂಪದಲ್ಲಿರುವ ಸೋಮ-ಅಗ್ನಿಗಳ ಅನುಸಂಧಾನ ಮುಖ್ಯವೆಂದು ಹೇಳಿ, ಅಗ್ನಿಯೇ ಪುರುಷ ಮತ್ತು ಸೋಮವೇ ಪ್ರಕೃತಿ ಎಂದು ವಿವರಿಸಿ, ಇವೆರಡರ ಮೂಲವಾದ ಅಗ್ನೀಷೋಮಾತ್ಮಕ ವ್ಯೂಹದ ಯಜಮಾನ ಸವಿತೃದೇವನೆಂದು ಸ್ಪಷ್ಟಪಡಿಸಿ, ಆ ಸವಿತೃವೇ ಆದಿತ್ಯನ ರೂಪದಲ್ಲಿ ಸ್ಥಾವರ-ಜಂಗಮ ಎಂಬ ಭೇದವಿಲ್ಲದೆ ಎಲ್ಲವನ್ನೂ ಪಾಲಿಸುತ್ತಿರುವನೆಂದು ತೋರ್ಪಡಿಸಿ, ಎಲ್ಲರೊಳಗೂ ಇದ್ದುಕೊಂಡು ಮನೋಬುದ್ಧಿಗಳನ್ನು ಪ್ರಚೋದಿಸುತ್ತಿರುವ ಆದಿತ್ಯನ ತೇಜಸ್ಸನ್ನು ಆರಾಧಿಸುವುದೇ ಗಾಯತ್ರೀಮಂತ್ರದ ಆಶಯವೆಂದು ದೇವುಡು ನರಸಿಂಹಶಾಸ್ತಿçಗಳು ಕಾಣಿಸಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಗಾಯತ್ರಿಯು ಎಲ್ಲರಿಗೂ ಒಲಿಯಬಲ್ಲಳೆಂದು ವಿಶ್ವಾಸವಿರಿಸಿ “ಜಾತಮಾತ್ರಸ್ಯ ಗಾಯತ್ರೀ” ಎಂದು ಸಾರಿದ್ದಾರೆ. ಇದು ಅವರ ಮಹೋನ್ನತ ದರ್ಶನ.
* * *
ಈ ಕಾದಂಬರಿಗಳು ಗದ್ಯಮಾಧ್ಯಮದಲ್ಲಿ ರಚಿತವಾದ ಮಹಾಕಾವ್ಯಗಳೇ ಸರಿ. ಹೀಗಾಗಿ ಅವುಗಳಲ್ಲಿ ಸೊಗಸಾದ ವರ್ಣನೆಗಳು ಬರುವುದು ಅಚ್ಚರಿಯಲ್ಲ. ಇವು ಹೊರಚ್ಚಾಗಿ ನಿಲ್ಲದೆ ಕಥೆಯ ಹರವಿನಲ್ಲಿ ಸಹಜವಾಗಿ ಹೊಂದಿಕೊಂಡು ಸವಿಯೆನಿಸುತ್ತವೆ. ಓದುಗರ ಮನಸ್ಸಿಗೆ ಒಂದು ಕಾಂತಿಯನ್ನೂ ಪ್ರಫುಲ್ಲತೆಯನ್ನೂ ತುಂಬುತ್ತವೆ. ಇದಕ್ಕೆ ಕೆಲವು ನಿದರ್ಶನಗಳನ್ನು ಕಾಣೋಣ.
ದೇವಧೇನು ನಂದಿನಿಯ ವರ್ಣನೆ:
“ನಂದಿನಿಯು ಬರುತ್ತಿದ್ದಾಳೆ. ಸಮೃದ್ಧಿಯೂ ಶಾಂತಿಯೂ ಮೂರ್ತಿಗೊಂಡಂತೆ, ಸೌಭಾಗ್ಯಲಕ್ಷ್ಮಿಯ ಪ್ರತಿಬಿಂಬವೆಂಬಂತೆ ಬರುತ್ತಿದ್ದಾಳೆ. ಕರೆದಿದ್ದರೂ ಪೂರ್ಣವಾಗಿರುವ ಕೆಚ್ಚಲು ಹಾಗೆ ಹೀಗೆ ಹೊಯ್ದಾಡುತ್ತ ಯಾರಿಗೆ ಏನು ಬೇಕು? ಯಾರಿಗೆ ಯಾವ ವರ ಬೇಕು? ಎಂದು ಹುಡುಕುತ್ತಿರುವಂತಿದೆ. ಕೇಸರಿಯ ಬಣ್ಣದ ಕೆಂಪು ಹಸು. ಈ ಜಗತ್ತಿನ ಸೌಭಾಗ್ಯವನ್ನೆಲ್ಲ ರಾಶಿಗೂಡಿಸಿ ಅದರ ಮೇಲೆ ಒಂದು ತಿಲಕವನ್ನಿಟ್ಟಂತೆ ಆಕೆಯ ಮುಖದಲ್ಲಿ ಒಂದು ಬೆಳ್ಳನೆ ತಿಲಕ. ಸೌಭಾಗ್ಯದೇವಿಯ ಮಂದಿರದ ಗೋಪುರದ ಮೇಲೆ ಇಟ್ಟಿರುವ ಶಿಖರಗಳಂತಿರುವ ಆ ಕೊಂಬುಗಳು.” (‘ಮಹಾಬ್ರಾಹ್ಮಣ,’ ಪು. ೧೮)
ನಹುಷ ತನ್ನ ಪತ್ನಿ ವಿರಜಾದೇವಿಯನ್ನು ಬಿಸಿಲುಮಚ್ಚಿನಲ್ಲಿ ಕಾಣಲು ಬರುವ ಚಿತ್ರಣ:
“ಸಣ್ಣದಾಗಿ ಮೃದುವಾಗಿ ಶೃಂಗನಾದವಾಗಿ ಚಕ್ರವರ್ತಿಯ ಆಗಮನವನ್ನು ಸೂಚಿಸಿತ್ತು. ಮರ್ಯಾದೆಗೆಂದು ಹಿಡಿದಿರುವ ಕರ್ಪೂರದೀಪಿಕೆಯು ತನ್ನದೂ ಕಾಣಿಕೆಯಿರಲಿ ಎಂಬಂತೆ, ಆ ಬಿಸಿಲುಮಚ್ಚಿನಲ್ಲಿ ರಂಗವಲ್ಲಿಯಾಗಿ ಇಟ್ಟಿರುವ ಕೇಸರ, ಪಚ್ಚಕರ್ಪೂರ, ಕಸ್ತೂರಿಗಳ ಹುಡಿಗಳ ವಾಸನೆಯ ಜೊತೆಗೆ ತನ್ನ ಸುವಾಸನೆಯನ್ನೂ ಅಷ್ಟು ಒಪ್ಪಿಸುತ್ತಿದೆ. ಪರಾಕ್ರಮವನ್ನು ಪ್ರದರ್ಶಿಸಿ ಹಿಡಿದು ತಂದು ಸೆರೆಯಲ್ಲಿಟ್ಟಿರುವ ಶತ್ರುಗಳ ಹೃದಯದ ದ್ವೇಷದಾವಾನಲಗಳಿಂದ ಏಳುವ ಕೃಷ್ಣಧೂಮಗಳ ನಿಷ್ಫಲ ಮೇಘಗಳಂತೆ, ಚಕ್ರವರ್ತಿಯ ಪಕ್ಕದಲ್ಲಿ ಹಿಡಿದು ತರುತ್ತಿರುವ ಧೂಪದಾನಿಯಿಂದ ಹೊರಬೀಳುವ ದಪ್ಪ ಹೊಗೆಯು ಚಾಮರಗಳ ಗಾಳಿಯಿಂದ ಆಹತವಾಗಿ ಸುತ್ತಿನ ಗಾಳಿಯಲ್ಲಿ ಸೇರಿಹೋಗಿ ಅದೃಶ್ಯವಾಗುತ್ತಿದೆ.” (‘ಮಹಾಕ್ಷತ್ರಿಯ,’ ಪು. ೧೩೫)
‘ಶಾರದಾಮಂದಿರ’ ಎಂಬ ಯಾಗಮಂಟಪದಲ್ಲಿದ್ದ ಸರಸ್ವತಿಯ ಚಿತ್ರ:
“...ದೇವಿಯು ವೀಣಾವಾದನ ಮಾಡುತ್ತ ಕುಳಿತಿದ್ದಾಳೆ. ಮೇಲಿನ ಕೈಗಳಲ್ಲಿ ಒಂದರಲ್ಲಿ ಅಕ್ಷಮಾಲಿಕೆಯನ್ನೂ ಇನ್ನೊಂದರಲ್ಲಿ ಪುಸ್ತಕವನ್ನೂ ಧರಿಸಿದ್ದಾಳೆ. ತಲೆಯ ಮೇಲಿನ ರತ್ನಕಿರೀಟವು ಆಕೆಯ ತೇಜಸ್ಸೆಲ್ಲವೂ ಮೇಲಕ್ಕೆದ್ದು ಗೋಪುರಾಕೃತಿಯಾಗಿದೆಯೋ ಎಂಬಂತಿದೆ. ಕಿವಿಯಲ್ಲಿರುವ ರತ್ನದ ಓಲೆಗಳು ಪ್ರತಿಭಾಸ್ವರೂಪಳಾದ ಆಕೆಯ ಪ್ರತೀಕಗಳೆಂಬಂತೆ ಪ್ರಕಾಶಮಾನವಾಗಿ ಹೊಳೆಯುತ್ತಿವೆ. ಮೂಗಿನಲ್ಲಿ ಇಟ್ಟುಕೊಂಡಿರುವ ಮೂಗುಬಟ್ಟು ಸ್ವಾತೀನಕ್ಷತ್ರವನ್ನು ತಂದು ಸೆರೆಹಿಡಿದಿಟ್ಟಿರುವಂತಿದ್ದು, ಅದರ ಕಾಂತಿಯು ಆಕೆಯ ಸುಂದರ ಕಪೋಲದ ಮೇಲೆ ಬಿದ್ದು ಅದು ಕೊಂಚ ಕೆಂಪಾಗಿರುವಂತೆ ಕಾಣುತ್ತದೆ ... ತಾಯಿಯ ದರ್ಶನವಾಗುತ್ತಿದ್ದ ಹಾಗೆಯೇ ಆಕೆಯ ದಿವ್ಯವೀಣೆಯ ಮಂಜುಳಗಾನವನ್ನು ಕೇಳಿದಂತಾಗುತ್ತದೆ. ಆಕೆಯು ಮುಡಿದಿರುವ ಪುಷ್ಪಮಾಲೆಯ ದಿವ್ಯಸೌರಭವನ್ನು ಆಘ್ರಾಣಿಸಿದಂತಾಗುತ್ತದೆ. ಆಕೆಯ ಕಟಾಕ್ಷವು ಹರಡಿದ ಕಡೆಯಲ್ಲೆಲ್ಲಾ ಪವಿತ್ರತೆಯು ತಾನೇ ತಾನಾಗಿ ಜ್ಞಾನವು ತಾಂಡವವಾಡಿದಂತಾಗುತ್ತದೆ.” (‘ಮಹಾದರ್ಶನ,’ ಪು. ೩೦೬-೦೭)
ಇಲ್ಲೆಲ್ಲ ದೇವುಡು ಅವರೊಳಗಿನ ಅಪ್ಪಟ ಕವಿ ಎದ್ದುಕಾಣುತ್ತಾನೆ. ಅಷ್ಟು ದೊಡ್ಡ ವಿದ್ವಾಂಸರು ಇಷ್ಟು ಪೇಶಲವಾದ ಕವಿಹೃದಯವನ್ನು ಉಳ್ಳವರಾಗಿದ್ದುದು ನಮ್ಮ ಭಾಗ್ಯ.
* * *
‘ಮಹಾಬ್ರಾಹ್ಮಣ,’ ‘ಮಹಾಕ್ಷತ್ರಿಯ’ ಮತ್ತು ‘ಮಹಾದರ್ಶನ’ ಕನ್ನಡದ ಹೆಮ್ಮೆಯ ಕಾದಂಬರಿಗಳು. ದೇವ-ದೇವಿಯರೂ ಋಷಿ-ಮುನಿಗಳೂ ಹೇಗೆಲ್ಲ ಉಂಡು, ಉಟ್ಟು, ಆಡಿ, ಆಲೋಚಿಸಿ, ವರ್ತಿಸುತ್ತಿದ್ದರೆಂದು ನಾವು ‘ಇದಮಿತ್ಥಂ’ ಎಂದು ತಿಳಿಯಲು ಸಾಧ್ಯವಿಲ್ಲ. ದೇವುಡು ಅವರ ಈ ಕೃತಿಗಳು ಪಾಂಡಿತ್ಯವೊಡವರಿದ ಕಲ್ಪನೆಗಳನ್ನು ವಿಶದವಾಗಿ, ಸಮುಚಿತವಾಗಿ ಬೆಳೆಸುವ ಮೂಲಕ ಪ್ರಾಚೀನ ಭಾರತದಲ್ಲಿ ಜನರು ಹೀಗೆಯೇ ಇದ್ದಿರಬೇಕು ಎಂಬ ನಂಬಿಕೆಯನ್ನು ಹುಟ್ಟಿಸುತ್ತವೆ. ಇದರೊಟ್ಟಿಗೆ ಎಷ್ಟೋ ವಿದ್ಯಾಮರ್ಮಗಳನ್ನು ಸುಳಿದ ಬಾಳೆಯ ಹಣ್ಣಿನಂತೆ ಸುಗ್ರಹವಾಗಿಸುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ರಸಾನಂದವನ್ನು ಸಮೃದ್ಧವಾಗಿ ಕರುಣಿಸುತ್ತವೆ.
ಇದುವರೆಗೆ ‘ಮಹಾಬ್ರಾಹ್ಮಣ’ ಮೂವತ್ತಮೂರು ಬಾರಿ, ‘ಮಹಾಕ್ಷತ್ರಿಯ’ ಇಪ್ಪತ್ತೊಂದು ಬಾರಿ ಹಾಗೂ ‘ಮಹಾದರ್ಶನ’ ಆರು ಬಾರಿ ಮುದ್ರಿತವಾಗಿವೆ. ಇದು ಸತ್ಸಾಹಿತ್ಯದ ಬಗೆಗೆ ನಮ್ಮ ಜನರಿಗಿರುವ ಹಸಿವನ್ನು ತೋರಿಸುತ್ತದೆ. ಇಂಥ ವಿಶಿಷ್ಟ ಕೃತಿಗಳನ್ನು ಬೆಂಗಳೂರಿನ ‘ಹೇಮಂತ ಸಾಹಿತ್ಯ’ ಪುನರ್ಮುದ್ರಿಸಿ ಓದುಗರಿಗೆ ಮಹೋಪಕಾರ ಮಾಡಿದ್ದಾರೆ. ಹಿಂದೆ ದೇವುಡು ಅವರು ಅನುವಾದಿಸಿದ ‘ಯೋಗವಾಸಿಷ್ಠ’ದ ಸಂಪುಟಗಳನ್ನು ಸಮಗ್ರವಾಗಿ ಅಚ್ಚುಮಾಡಿದ ಶ್ರೇಯಸ್ಸಿನ ಸಂಸ್ಥೆಯೇ ಈಗ ಈ ಮೂರು ಕಾದಂಬರಿಗಳನ್ನು ಪ್ರಕಟಿಸುತ್ತಿರುವುದು ಅರ್ಥಪೂರ್ಣವಾಗಿದೆ. ಅವರ ಶ್ರಮಕ್ಕೆ ವಾಚಕರು ಹಿಂದಿನಂತೆಯೇ ಸ್ಪಂದಿಸಲೆಂದು ಹಾರೈಸೋಣ.
Concluded.