ಛಂದೋಗತಿ-ಅನುಪ್ರಾಸ
ನಾವು ಈಗಾಗಲೇ ಅನುಪ್ರಾಸದ ಹಲವಾರು ಉದಾಹರಣೆಗಳನ್ನು ಕಂಡಿರುವ ಕಾರಣ ಈಗ ಮತ್ತೂ ಕೆಲವೊಂದು ಮಾದರಿಗಳ ಮೂಲಕ ಇದರ ಸೊಗಸನ್ನು ಮನದಟ್ಟು ಮಾಡಿಕೊಳ್ಳುವುದಷ್ಟೇ ಉಳಿಯುತ್ತದೆ.
ಲಯರಹಿತವಾದ ವರ್ಣವೃತ್ತಗಳಲ್ಲಿ ಅನುಪ್ರಾಸವು ತಾಳಾನುಸಾರವಾಗಿ ಬರಲು ಸಾಧ್ಯವೇ ಇಲ್ಲ. ಆದರೂ ಪದ್ಯದ ಆದ್ಯಂತ ಕಾಣಸಿಗುವಾಗ, ಪದಗಳು ಮುಗಿದಂತೆಲ್ಲ ಬರುವಾಗ, ಯತಿಸ್ಥಾನದಲ್ಲಿ ತಲೆದೋರುವಾಗ ಹೆಚ್ಚಿನ ಆಕರ್ಷಣೆ ಉಂಟಾಗುತ್ತದೆ. ಉದಾಹರಣೆಗೆ ಕೆಲವೊಂದು ಪದ್ಯಗಳನ್ನು ಗಮನಿಸಬಹುದು. ವಿಶೇಷತಃ ಈ ಬಗೆಯ ಅನುಪ್ರಾಸಗಳು ಹಲವೊಮ್ಮೆ ಛೇಕಾನುಪ್ರಾಸ ಮತ್ತು ಯಮಕಗಳತ್ತ ಕೂಡ ವಾಲುವ ಪರಿ ಗಮನಾರ್ಹ. ಪ್ರಸ್ತುತ ಉದಾಹರಣೆಗಳಲ್ಲಿಯೂ ಅಂಥವಿರುವುದು ದೃಷ್ಟಚರ.
ಪದ್ಯದ ಆದ್ಯಂತ, ಹೆಚ್ಚಿನ ಪದಗಳ ಮುಗಿತಾಯದಲ್ಲಿ ಕಾಣಸಿಗುವ ಅನುಪ್ರಾಸ:
ಕರಮೆಸೆದತ್ತು ಕೌಮುದಿಯ ಬಿತ್ತು ಚಕೋರದ ತುತ್ತು ನೀರಜೋ-
ತ್ಕರದ ವಿಪತ್ತು ತಾರೆಗಳ ತೊತ್ತು ಸುಧಾಂಬುಧಿಯೊತ್ತು ಮತ್ತಮಂ-
ಬರದ ಪುಳಿಂದಿ ತಾಳ್ದೆಸೆವ ಮೂಗಿನ ಮುತ್ತು ಮಗುಳ್ದು ನೋಡಲ-
ಚ್ಚರಿಯೆನಿಸಿತ್ತು ಮೂಡದೆಸೆಯಿಂದೊಗೆತರ್ಪ ಹಿಮಾಂಶುಮಂಡಲಂ ||
(ಗಿರಿಜಾಕಲ್ಯಾಣಮಹಾಪ್ರಬಂಧ, ೪.೯೫)
ಆದಿಪ್ರಾಸಕ್ಕೆ ಸಂವಾದಿಯಾಗಿ ಯತಿಸ್ಥಾನದಲ್ಲಿ ಬರುವ ಅನುಪ್ರಾಸ:
ಆಕೆ ಮನೋಜರಾಜನ ಪತಾಕೆ ಮುಖದ್ಯುತಿಧಿಕ್ಕೃತೇಂದುನಾ-
ಳೀಕೆ ಕುಚದ್ವಯೀಹಸಿತಕೋಕೆ ನಿಜಾಧರಕಾಂತಿಧೂತಬಂ-
ಧೂಕೆ ಪರಾಜಿತಾಮರವಧೂಕೆ ತಟಿತ್ತುಲಿತಪ್ರತೀಕೆ ಸಾ-
ಲೋಕವಿಲೋಕೆಯಾದಿರಸಸೂತ್ರದ ಟೀಕೆ ವಿದರ್ಭಕನ್ಯಕೇ ||
(ದಮಯಂತೀಸ್ವಯಂವರ, ೧.೧೧೦)
ಯತಿಸ್ಥಾನದಲ್ಲಿ ಪ್ರಸ್ಫುಟವಾಗುವ ಅನುಪ್ರಾಸ:
ತುರಗಹೃದಯಾಭಿಜ್ಞಂ ಪ್ರಾಜ್ಞಂ ಮಹೀವರಶೇಖರಂ
ನಿರುಪಮಗುಣೋದಾರಂ ಧೀರಂ ದಯಾರಸಸಾಗರಂ |
ಸರಸಹೃದಯಾರಾಮಂ ರಾಮಾಜನೇಷ್ಟಕಳೇವರಂ
ವಿರಚಿತಸಮಸ್ತೇಷ್ಟಂ ಶಿಷ್ಟಂ ಸುಪಾಕಕಲಾವಿದಂ || (ದಮಯಂತೀಸ್ವಯಂವರ, ೧.೧೦)
ನಿಖಿಲಜಗದಸಂಗಂ ಜೀವಲೀಲಾಪ್ರಸಂಗಂ
ವಿಷಯನಿಗಳಭಂಗಂ ಜ್ಞಾತಭೂತಾಂತರಂಗಂ |
ಪ್ರಣಯರಸತರಂಗಂ ಪಾಪತೂಲಸ್ಫುಲಿಂಗಂ
ಮನುಜಹೃದಯಲಿಂಗಂ ಕೇಶವಂ ಮಂಗಳಾಂಗಂ ||
(ಜೀವನಧರ್ಮಯೋಗ, ೨ನೆಯ ಅಧ್ಯಾಯದ ಸಮಾಪ್ತಿಪದ್ಯ, ೫)
ಲಯಾನ್ವಿತವಾದ ಮಾತ್ರಾಜಾತಿಯ ಬಂಧಗಳಲ್ಲಿ ಆಯಾ ಗಣಾವರ್ತಗಳ ಗತಿಗೆ ಹೊಂದಿಕೊಳ್ಳುವಂತೆ ಅನುಪ್ರಾಸ ಬಂದರೆ ಹೆಚ್ಚಿನ ಸೊಗಸು ಉನ್ಮೀಲಿಸುತ್ತದೆ. ಜೊತೆಗೆ ಆಯಾ ಗಣಗಳ ಆದ್ಯಕ್ಷರಗಳೂ ಸಮಾನವರ್ಣಗಳಾಗಿ ಪರಿಣಮಿಸಿದಾಗ ‘ವಡಿ’ಯು ತೋರಿಕೊಂಡು ತಾಲಾಸ್ಫಾಲದ ಎತ್ತುಗಡೆಯ ಚೆಲುವನ್ನು ಚೆನ್ನಾಗಿ ಹೊಮ್ಮಿಸುತ್ತವೆ.
ಚಪಲೆ ಚಂಚಲೆ ಚಾಟುವತಿ ಚಂಡಿ ಚಲವಾದಿ
ಕುಪಿತೆ ಕುತ್ಸಿತೆ ಕುಹಕೆ ಕುಜೆ ಕುಟಿಲೆ ಕುಲಗೇಡಿ
ಕಪಟಿ ಕಂಟಕಿ ಕಟಕಿ ಕಡುದುಷ್ಟೆ ಕಲಹಾರ್ಥಿ ವಿರಸೆ ಪರವಶೆ ಪಾದರಿ |
ವಿಫಲೆ ವಿಹ್ವಲೆ ವಿಷಮೆ ವಿರಹಿ ವಿಪರೀತೆ ಮಿಗೆ
ತಪಿತೆ ತಸ್ಕರೆ ತವಕಿ ತವೆ ತಂದ್ರಿ ತಾಮಸಿಯೆ-
ನಿಪ ವನಿತೆಯರ ನಿಜಕೆ ನಿಲಿಸಿ ನಿಶ್ಚೈಸಿದೊಡೆ ಬಳಿಕ ಬಳಲಿಕೆ ಬಾರದೆ ||
(ಜೈಮಿನಿಭಾರತ, ೫.೬೧)
ಬೆಟ್ಟಗಳ ಬೆನ್ನಿನಲಿ ಬೆಟ್ಟಗಲ ದಾರಿಯಲಿ,
ಕಟ್ಟಿಕೊಂಡಲೆದವರು ನೀವಲ್ಲವೆ?
ತಿಟ್ಟಿನಲಿ ಮುಂದಾಗಿ, ಕಣಿವೆಯಲಿ ಹಿಂದಾಗಿ,
ನಗುನಗುತ ನಡೆದವರು ನೀವಲ್ಲವೆ? || (ನೀವಲ್ಲವೆ? (ಐರಾವತ), ೨)
ಮೇಲಣ ಉದಾಹರಣೆಯಲ್ಲಿ ವಡಿಯಾಗಿ ಬಂದಿರುವ ಅಕ್ಷರಗಳನ್ನು ಓದುಗರು ಗಮನಿಸಬಹುದು.
ಉಪಸಂಹಾರ
ಆದಿಪ್ರಾಸ, ಅಂತ್ಯಪ್ರಾಸ ಮತ್ತು ಅನುಪ್ರಾಸಗಳನ್ನು ಗಮನಿಸಿದಾಗ ನಿಬಿಡಬಂಧ ಮತ್ತು ಕೆಲಮಟ್ಟಿನ ಪ್ರಯತ್ನಾಪೇಕ್ಷೆ ಆದಿಪ್ರಾಸದಲ್ಲಿ ಕಾಣುವುದೆಂದೂ ಸುಕುಮಾರಬಂಧ ಮತ್ತು ಇನ್ನೂ ಹೆಚ್ಚಿನ ಪ್ರಯತ್ನಾಪೇಕ್ಷೆ ಅಂತ್ಯಪ್ರಾಸದಲ್ಲಿ ತೋರಿಕೊಳ್ಳುವುದೆಂದೂ ನಿಗಮನ ಮಾಡಬಹುದು. ಅನುಪ್ರಾಸವಾದರೋ ನಿಬಿಡ ಮತ್ತು ಸುಕುಮಾರ ಎಂಬ ಇಬ್ಬಗೆಯ ಬಂಧಗಳಿಗೂ ಒದಗಿಬರುವ, ಪ್ರಯತ್ನಾಧಿಕ್ಯವೂ ಹೆಚ್ಚಿಲ್ಲದ ಶಬ್ದಾಲಂಕಾರ ಎಂದು ಸ್ಪಷ್ಟವಾಗುತ್ತದೆ. ಮಾತ್ರವಲ್ಲ, ಆದಿ-ಅಂತ್ಯಪ್ರಾಸಗಳು ಪದ್ಯವೊಂದರ ಮೊದಲು ಮತ್ತು ಕೊನೆಗಳಲ್ಲಿ ಮಾತ್ರ ಬರುವ ಕಾರಣ ಬಂಧದ ಪಾದಗಳ ಉದ್ದ ಹೆಚ್ಚಿದಂತೆಲ್ಲ ಈ ಶಬ್ದಾಲಂಕಾರಗಳು ಎದ್ದುತೋರವೆಂಬುದು ಕೂಡ ವೇದ್ಯವಾಗುತ್ತದೆ. ಆದರೆ ಅನುಪ್ರಾಸದ ಸಂಗತಿ ಹೀಗಲ್ಲ. ಅದು ಪದ್ಯದ ಆದ್ಯಂತ ಎಲ್ಲಿಯೂ ನಿಯತ ಮತ್ತು ಅನಿಯತಸ್ಥಾನಗಳೆಂಬ ನಿಯಮವಿಲ್ಲದೆ, ಆದ್ಯಂತ ಒಂದೇ ವರ್ಣವಿರಬೇಕೆಂಬ ಇಕ್ಕಟ್ಟೂ ಇಲ್ಲದೆ ಸಾಗುವ ಸುಲಭಸುಂದರವಾದ ಶಬ್ದಾಲಂಕಾರ. ಆದುದರಿಂದಲೇ ರಸಪಕ್ಷಪಾತಿಗಳಾದ ಸುಕವಿಗಳಿಗೆ ಇದೇ ಹೆಚ್ಚಿನ ಸಾಧನ. ಇಲ್ಲಿ ತೀ.ನಂ.ಶ್ರೀ. ಅವರು ಪ್ರಾಸಗಳನ್ನು ಕುರಿತು ಧ್ವನಿಪೂರ್ಣವಾದ ಮಾತನ್ನು ಆಡಿರುವುದು ಸ್ಮರಣೀಯ: “ಆದಿಪ್ರಾಸ ಗರತಿ; ಅಂತ್ಯಪ್ರಾಸ ಗಣಿಕೆ; ಅನುಪ್ರಾಸ ಗೆಳತಿ.” ವಸ್ತುತಃ ಸದ್ಯದ ಈ ಬರೆಹ ತೀ.ನಂ.ಶ್ರೀ. ಅವರ ಸೂತ್ರಕ್ಕೆ ಮಾಡಿದ ವ್ಯಾಖ್ಯಾನವೇ ಆಗಿದೆ.
Concluded.