ಅಂತ್ಯಪ್ರಾಸ
ಅಂತ್ಯಪ್ರಾಸದ ಇತಿಹಾಸವು ಸಾಕಷ್ಟು ಪ್ರಾಚೀನ. ವಿಶೇಷತಃ ರಗಳೆಗಳಲ್ಲಿ ಎರಡು-ಎರಡು ಸಾಲುಗಳು ಯುಗ್ಮಕಗಳೆಂಬಂತೆ ಅಂತ್ಯಪ್ರಾಸದೊಡನೆ ಸೇರಿ ಬರುತ್ತವೆ. ಇಲ್ಲಿ ಆದಿಪ್ರಾಸವಿದ್ದರೂ ಇಲ್ಲದಿದ್ದರೂ ಅಂತ್ಯಪ್ರಾಸ ನಿಯತವಾಗಿ ಬರುವುದು ಗಮನಾರ್ಹ. ಸಂಸ್ಕೃತ ಮತ್ತು ಪ್ರಾಕೃತ-ಅಪಭ್ರಂಶಗಳ ಗೀತಸಾಹಿತ್ಯದಲ್ಲಿಯೂ ಅಂತ್ಯಪ್ರಾಸವನ್ನು ಗುರುತಿಸಬಹುದು.[1] ಇಲ್ಲಿ ಆದಿಪ್ರಾಸವಿರುವುದಿಲ್ಲ. ಇದರ ಮುಂದುವರಿಕೆಯನ್ನು ಹಿಂದೀ ಮೊದಲಾದ ಉತ್ತರಭಾರತದ ಭಾಷೆಗಳ ಸಾಹಿತ್ಯದಲ್ಲಿ ಕಾಣಬಹುದು.
ಕನ್ನಡದಲ್ಲಿ ಅಂತ್ಯಪ್ರಾಸವು ರಗಳೆಗಳ ಮೂಲಕ ತೋರಿಕೊಳ್ಳುವ ಕ್ರಮವನ್ನು ಈ ಕೆಲವು ಉದಾಹರಣೆಗಳು ನಿರೂಪಿಸುತ್ತವೆ:
ಶ್ರೀಗೆ ಕುಳಸದನಮೆನೆ ತೊಳಪ ಮಣಿಭವನದೊಳ್
ರಾಗರಸಮೊದವೆ ಸರಸಿರುಹಸಮವದನದೊಳ್
ಪೊಳೆವ ಪಚ್ಚದೊಳೆ ಸೊಗಯಿಸುವ ಮೃದುತಲ್ಪದೊಳ್
ಲಲಿತಗಂಗಾನದೀಲಹರಿಕಾತಲ್ಪದೊಳ್ || (ಆದಿಪುರಾಣ, ೭.೨೭ರ ಬಳಿಕ)
ಅದಱ ಬಳಸಿದುಪವನಂಗ-
ಳುದಿತಕೋಕಿಲಸ್ವನಂಗ-
ಳೆಸೆವಶೋಕಚೂತವನದ
ಮಿಸುಪ ವಕುಳತಿಲಕವನದ || (ಅಜಿತನಾಥಪುರಾಣತಿಲಕ, ೨.೮ರ ಬಳಿಕ)
ದೇವ ಜನ್ಮವಿದೂರ ಜಗದೇಕಚಕ್ಷುವೇ
ದೇವ ಕಮಲಜಶಿರೋಧರ ಮಹಾಭಿಕ್ಷುವೇ
ದೇವ ಗೋವಿಂದನಯನಾರ್ಚಿತಪದಾಬ್ಜನೇ
ದೇವ ನಿಜಶರಣಕರುಣಾಮೃತರಸಾಬ್ಜನೇ || (ನಂಬಿಯಣ್ಣನ ರಗಳೆ, ೧೫.೭-೧೦)
ಹಾಡುವ ಬಾಯೊಳು ಮಣ್ಣನು ಹೊಯ್ದೆ
ನೋಡುವ ಕಣ್ಣೊಳು ಸುಣ್ಣವ ಹೊಯ್ದೆ
ಪಾಪಿಯೆನ್ನ ನೀನೊಮ್ಮೆಯು ನೋಡಾ
ಕೋಪವನುಳಿದೊಯ್ಯನೆ ಮಾತಾಡಾ || (ಹರಿಶ್ಚಂದ್ರಕಾವ್ಯ, ೧೨.೩೦ರ ಬಳಿಕ)
ಅನಂತರದ ಸಾಹಿತ್ಯದಲ್ಲಿ ಯಕ್ಷಗಾನಗಳು ಅಂತ್ಯಪ್ರಾಸವನ್ನು ಅತಿಶಯವಾಗಿ ದುಡಿಸಿಕೊಂಡಿವೆ. ಅಲ್ಲಲ್ಲಿ ಸಮೀಪಪ್ರಾಸ, ಶಿಥಿಲಪ್ರಾಸಗಳಂಥ ಸ್ಖಾಲಿತ್ಯಗಳಿದ್ದರೂ ಒಟ್ಟಂದದ ವೈವಿಧ್ಯ-ವೈಪುಲ್ಯಗಳಿಗೆ ಕೊರತೆ ಕಾಣುವುದಿಲ್ಲ. ಇಲ್ಲಿಯ ಒಂದೆರಡು ಉದಾಹರಣೆಗಳನ್ನು ಗಮನಿಸಬಹುದು:
ನಗೆಗೇಡು ಮಾಡಿದಿರಲ್ಲ | ಸುಮ್ಮನೆ ಬಂದು
ಹಗುರವಾದೆನು ನಿಮಗೆಲ್ಲ ||
ಹಗರಣದೊಳು ಫಲವಿಲ್ಲ | ನೀವೆನ್ನನು
ಮಿಗೆ ವಂಚಿಪುದು ಸರಿಯಲ್ಲ | (ಯಕ್ಷಗಾನ ಛಂದಸ್ಸು, ಪು. ೧೫೨)
ಬಾರೆ ಸುಕುಮಾರಿ ಗುಣಶೀಲೆ ವೈಯಾರೆ
ನೀರಜಾಂಬಕಿ ಬಂದುದೇಕೆ ಶೃಂಗಾರೆ
ನಾರಿಯರ ಜೊತೆಯಗಲುವವಳಲ್ಲ ನೀರೆ
ಕೀರವಾಣಿಯ ಮೌನವೇನು ನೀನುಸುರೆ || (ಯಕ್ಷಗಾನ ಛಂದಸ್ಸು, ಪು. ೭೪-೫)
ಹೊಸಗನ್ನಡಸಾಹಿತ್ಯದ ನವೋದಯದಲ್ಲಿ ಆದಿಪ್ರಾಸ ಮರೆಯಾಗಿ ಅಂತ್ಯಪ್ರಾಸವೇ ವಿಜೃಂಭಿಸಿದ ಪರಿಯನ್ನು ಬಿ.ಎಂ.ಶ್ರೀ., ಗೋವಿಂದ ಪೈಗಳಿಂದ ಈಚೆಗೆ ವ್ಯಾಪಕವಾಗಿ ಕಾಣುತ್ತೇವೆ:
ಹಣ್ಣನೀವ ಕಾಯನೀವ ಪರಿಪರಿಯ ಮರಂಗಳೊ,
ಪತ್ರಮೀವ ಪುಷ್ಪಮೀವ ಲತೆಯ ತರತರಂಗಳೊ,
ಅಲೆಯ ಮಲೆಯ ಗಾಳಿಯೊ,
ಖಗಮೃಗೋರಗಾಳಿಯೊ,
ನದಿನಗರನಗಾಳಿಯೊ!
ಇಲ್ಲಿಲ್ಲದುದುಳಿದುದೆ?
ಜೇನು ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ? || (ಕನ್ನಡಿಗರ ತಾಯಿ (ಗಿಳಿವಿಂಡು), ೨)
ಬೇಸರಾಗಿದೆ ಬಯಲುಸೀಮೆಯ ಬೋಳುಬಯಲಿನ ಬಾಳಿದು
ಬಿಸಿಲು, ಬೇಸಗೆ, ಬೀಸುವುರಿಸೆಕೆ; ತಾಳಲಾರದ ಗೋಳಿದು!
ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ:
ಬಿಳಿಯ ತಿಂಗಳ ಸಿರಿಬನಂಗಳ ಮಲೆಯ ಮಂಗಳನಾಡಿಗೆ! || (ಹೋಗುವೆನು ನಾ (ಪಕ್ಷಿಕಾಶಿ), ೨)
ಪಾರಿವಾಳ ಹಲವಾರು ಮಲಗಿದೇಳನೆಯ ಮಾಡದೊಳಗೆ
ಮಿಂಚುಮಡದಿ ಬಳಲಿರುವಳೇನೊ! ಮಲಗಲ್ಲಿ ಬೆಳ್ಳಬೆಳಗೆ
ಮುಂದೆ ದೂಡುವದು ನಿನ್ನನುದಯದಲಿ ನಮ್ಮ ನಿಮ್ಮ ನಂಟೇ
ಗೆಳೆಯಗಾಗಿ ಕೈಕೊಂಡ ಕೆಲಸವನು ನಡುವೆ ಬಿಡುವರುಂಟೇ || (ಕನ್ನಡ ಮೇಘದೂತ, ೧.೩೮)
ಅನುಪ್ರಾಸ
ಸಂಸ್ಕೃತ ಆಲಂಕಾರಿಕರು ಅನುಪ್ರಾಸವನ್ನು ಹಲವು ಬಗೆಗಳಾಗಿ ವಿಂಗಡಿಸಿದ್ದಾರೆ. ಇದರಲ್ಲಿ ಛೇಕಾನುಪ್ರಾಸ, ವೃತ್ತ್ಯನುಪ್ರಾಸ, ಶ್ರುತ್ಯನುಪ್ರಾಸ, ಲಾಟಾನುಪ್ರಾಸ ಮುಂತಾದ ಪ್ರಭೇದಗಳು ಪ್ರಸಿದ್ಧ. ಈ ಎಲ್ಲ ವಿವರಗಳನ್ನು ನಾವಿಲ್ಲಿ ಗಮನಿಸಬೇಕಿಲ್ಲ. ಕೇವಲ ಅನಿಯತವಾದ ವರ್ಣಪರಿವೃತ್ತಿಯನ್ನು ಆಶ್ರಯಿಸಿದ ಅನುಪ್ರಾಸವನ್ನು ಮಾತ್ರ ಪರಿಶೀಲಿಸಬಹುದು. ವರ್ಣಪರಿವೃತ್ತಿಯು ಸ್ವರ ಮತ್ತು ವ್ಯಂಜನಗಳೆಂಬ ಎರಡು ಬಗೆಯಲ್ಲಿ ತೋರುವುದುಂಟು. ಸ್ವರ-ವ್ಯಂಜನಗಳೆರಡೂ ಸೇರಿದ ರೂಪದಿಂದ ಕೂಡ ಕಾಣಸಿಗುವುಂಟು. ಹೀಗಿದ್ದರೂ ವ್ಯಂಜನಮಾತ್ರದ ಪರಿವೃತ್ತಿಯೇ ಅನುಪ್ರಾಸದಲ್ಲಿ ಎದ್ದುತೋರುವ ಅಂಶ. ಇನ್ನು ಅನಿಯತತೆಯನ್ನು ಕುರಿತು ಹೇಳುವುದಾದರೆ, ಆವೃತ್ತವಾಗುವ ವರ್ಣಗಳು ಅವ್ಯವಹಿತವಾಗಿಯೂ ಇರಬಾರದು, ತುಂಬ ದೂರವೂ ಇರಬಾರದು. ಪ್ರಾಸವರ್ಣಗಳು ಅವ್ಯವಹಿತವಾಗಿ ಬಂದರೆ ಶಬ್ದಾಲಂಕಾರವು ಎದ್ದು ತೋರುವುದಾದರೂ ಉಚ್ಚಾರಣೆಯ ಕ್ಲೇಶ ಹೆಚ್ಚಾಗಿ ಪಠನಸೌಕರ್ಯ ಸೊರಗುತ್ತದೆ. ಇನ್ನು ಅನುಪ್ರಾಸವರ್ಣಗಳ ಅಂತರ ಮಿಗಿಲಾದರೆ ವರ್ಣಸಾಮ್ಯಸ್ಮರಣೆ ಮಸಕಾಗಿ ಪ್ರಾಸದ ಸ್ವಾರಸ್ಯವೇ ಕಾಣದಂತಾಗುತ್ತದೆ. ಹೀಗಾಗಿಯೇ ಹದವಾದ ಅನುಪ್ರಾಸದ ಪರಿ - ಕನಿಷ್ಠ ಒಂದು ಮಾತ್ರೆಯ ಕಾಲದ ಅಂತರವಿರುವ, ಗರಿಷ್ಠ ಮೂರು ಮಾತ್ರೆಗಳ ಅಂತರಕ್ಕಿಂತ ಹೆಚ್ಚಾಗದ ಸಮಾನವರ್ಣಗಳ ಪುನರಾವೃತ್ತಿ ಎನ್ನಬಹುದು.
ಈ ಬಗೆಯ ಅನುಪ್ರಾಸದಲ್ಲಿ ಸ್ವರಗಳೂ ಸಂಯುಕ್ತಾಕ್ಷರಗಳೂ ಛಂದೋಗತಿಗೆ ಅನುಸಾರಿಯಾಗಿ ಬಂದರೆ ಸ್ವಾರಸ್ಯ ಮತ್ತಷ್ಟು ಹೆಚ್ಚುತ್ತದೆ. ಮಾತ್ರಾಜಾತಿಗಳಲ್ಲಿ ಆಯಾ ಗಣಗಳ ಆರಂಭದಲ್ಲಿಯೋ ಅಂತ್ಯದಲ್ಲಿಯೋ ಅನುಪ್ರಾಸಗಳು ಬಂದರೆ ಅವುಗಳ ನಾದಕ್ಕೆ ಛಂದಸ್ಸಿನ ತಾಳಗತಿಯೂ ಕೂಡಿಕೊಳ್ಳುವ ಕಾರಣ ಶಬ್ದಾಲಂಕಾರ ಮತ್ತಷ್ಟು ಎದ್ದುಕಾಣುತ್ತದೆ. ಲಯರಹಿತವಾದ ವರ್ಣವೃತ್ತಗಳಲ್ಲಿ ಅನುಪ್ರಾಸ ಗಣಾನುಸಾರಿಯೇ ಆಗಿರಬೇಕಿಲ್ಲವೆಂಬುದು ಸುವೇದ್ಯ. ಆದರೆ ಯತಿಸ್ಥಾನಗಳಲ್ಲಿ ಅನುಪ್ರಾಸ ಬಂದಾಗ ಶ್ರವಣಾಭಿರಾಮತೆ ಹೆಚ್ಚಾಗುತ್ತದೆ. ವಸ್ತುತಃ ಮಾತ್ರಾಜಾತಿಗಳಲ್ಲಿ ಗಣಾಂತ್ಯಕ್ಕೆ ಸರಿಯಾಗಿ ಅನುಪ್ರಾಸ ಬರುವುದೆಂದರೆ ಯತಿಸ್ಥಾನಕ್ಕೆ ಅನುಗುಣವಾಗಿ ಅವು ತೋರಿಕೊಳ್ಳುವುದು ಎಂದೇ ತಾತ್ಪರ್ಯ. ಏಕೆಂದರೆ, ಮಾತ್ರಾಬಂಧಗಳಲ್ಲಿ ಪ್ರತಿಯೊಂದು ಗಣದ ಅಂತ್ಯವೂ ಯತಿಸ್ಥಾನವೇ. ಇಂತಿದ್ದರೂ ಯತಿಸ್ಥಾನಕ್ಕೆ ನಿರಪೇಕ್ಷವಾಗಿ, ಛಂದಃಪ್ರಕಾರಗಳಿಗೂ ನಿರಪೇಕ್ಷವಾಗಿ ಅನುಪ್ರಾಸವು ಪದ್ಯವೊಂದರಲ್ಲಿ ಹೇಗೆ ತಲೆದೋರಿದರೂ ಅದರದೇ ಆದ ಸೊಗಸು ಉಳಿದಿರುತ್ತದೆ. ಇದಕ್ಕೆ ಪ್ರಮುಖಕಾರಣ ಛಂದೋಗತಿಯಲ್ಲಿಯೇ ಇರುವ ಶ್ರವಣಾಭಿರಾಮತೆ.
ಇದೀಗ ಹಳಗನ್ನಡ-ನಡುಗನ್ನಡ-ಹೊಸಗನ್ನಡಗಳ ಕೆಲವೊಂದು ನಿದರ್ಶನಗಳನ್ನು ಗಮನಿಸಬಹುದು:
ಗಳಗಳನೆ ಗಳಪುವರಗಿಳಿ-
ಗಳ ಕಲಗಳಗಳ ಮದಾಳಿಗಳ ಕಳಕಳಕಂ-
ತಳವಿಗಳೆದಳಲನೊಳಕೊಂ-
ಡಳೆಯಳ್ಕಳವಳಿಸೆ ಬಳಿಯ ಕೆಳದಿಯರೇವರ್ || (ದಮಯಂತೀಸ್ವಯಂವರ, ೩.೮)
ಅದು ಮದದಂತಿದಂತಮುಸಲಪ್ರವಿಭಗ್ನಮಹಾಮಹೀರುಹಾ-
ಸ್ಪದಮದು ಸಿಂಹನಾದಜನಿತಪ್ರತಿಶಬ್ದಮಹಾಭಯನಕ-
ಪ್ರದಮದು ನಿರ್ಝರೋಚ್ಚಳಿತಶೀಕರಶೀತಳವಾತನರ್ತಿತೋ-
ನ್ನದಶಬರೀಜನಾಳಕಮದಾಯತವೇತ್ರಲತಾವಿತಾನಕಂ || (ವಿಕ್ರಮಾರ್ಜುನವಿಜಯ, ೩.೧೦)
ಎತ್ತಿಬಹ ಸತ್ತಿಗೆಯ ಮೊತ್ತಂಗಳೆತ್ತಲುಂ
ಕತ್ತಲಿಸೆ ಪೊತ್ತ ಮಸೆವೆತ್ತ ಬಲ್ಗತ್ತಿಗಳ
ಕಿತ್ತು ಭಟರೆತ್ತಿ ಜಡಿಯುತ್ತಿರಲ್ಕತ್ತ ಬೆಳಗಿತ್ತವವು ಮತ್ತೆ ಬಲಕೆ |
ಸುತ್ತಲುಂ ಕೆತ್ತವೋಲ್ ಮತ್ತಗಜಮೊತ್ತರಿಸಿ
ಮುತ್ತಿ ನಡೆಯುತ್ತೆಲರನೊತ್ತಿ ನಿಲಿಸುತ್ತಿರಲು
ದತ್ತಚಮರೋತ್ಥಿತಮರುತ್ತತಿಯೊಳುತ್ತಮಹಿಮೋತ್ತರಂ ಬಿತ್ತರಿಸಿತು || (ಜೈಮಿನಿಭಾರತ, ೪.೧೯)
ನೀರಿನ ಹನಿಯೇ ಕಾಮನಬಿಲ್ಲಿನ
ಕಂಬನಿಯಾಗಿತ್ತು
ಹೂವಿನ ಸುತ್ತಾ ಹರಡಿದ ಹುಲ್ಲಿನ
ಹಸುರಿನ ಹಾಸಿತ್ತು || (ಬೆಳಗಿನ ತೋಟದಲ್ಲಿ (ಇರುವಂತಿಗೆ), ೨)
ಕೊಳಲ ಸೂಸಿ ಹಸು ಮೇಸಿದೆ, ಕೊಡತಿಯ
ಬಡಿದು ಬಡಗಿಯಾ ಪಡಿದುಡಿದೆ;
ನಾಡನುಳಿದು ನಡುಗಡಲೊಳಗಡಗಿದೆ,
ಮುಡಿಯಿಡಲೆಡೆವಡೆಯದೆ ನಡೆದೆ || (ಯೇಸು-ಕೃಷ್ಣ (ಗಿಳಿವಿಂಡು), ೨)
ಒಟ್ಟಿನಲ್ಲಿ ಆದಿಪ್ರಾಸ, ಅಂತ್ಯಪ್ರಾಸ ಮತ್ತು ಅನುಪ್ರಾಸಗಳನ್ನು ಗಮನಿಸಿದಾಗ ಇವು ಮೂರರಲ್ಲಿ ಪ್ರತ್ಯೇಕವಾಗಿ ತೋರಿಕೊಳ್ಳುವ ಸೌಂದರ್ಯವು ಸಜಾತೀಯವಾಗಿದ್ದರೂ ಅಷ್ಟಿಷ್ಟು ಭಿನ್ನತೆಯನ್ನು ಹೊಂದಿದೆಯೆಂಬುದು ಸ್ಪಷ್ಟವಾಗದಿರದು. (ಮುಖ್ಯವಾಗಿ ಆದಿ ಮತ್ತು ಅಂತ್ಯಪ್ರಾಸಗಳಿಗೆ ಪೂರ್ಣವ್ಯಕ್ತಿತ್ವ ಬರುವುದು ಅವು ಕ್ರಮವಾಗಿ ಎರಡು ಮತ್ತು ಮೂರು ಮಾತ್ರೆಗಳ ಮಾನಕ್ಕೆ ಕಡಮೆಯಾಗದಂಥ ಘಟಕವೊಂದರ ರೂಪವನ್ನು ತಾಳಿದ ಅಕ್ಷರಪುಂಜದ ಅವಿಭಾಜ್ಯ ಅಂಗವಾಗಿ ಮೂಡಿದಾಗಲೇ. ಇಂಥ ನಿರ್ಬಂಧ ಅನುಪ್ರಾಸಕ್ಕಿಲ್ಲ.) ಇವುಗಳ ನಿರ್ವಾಹದಲ್ಲಿ ಕವಿಗೆ ಎದುರಾಗುವ ಕಷ್ಟದ ಪ್ರಮಾಣವೂ ವಿಭಿನ್ನವೆಂದು ಅರಿವಾಗದಿರದು. ಈ ಸಂಗತಿಗಳನ್ನು ಪ್ರಸ್ತುತ ಪರಾಮರ್ಶಿಸಬಹುದು.
To be continued.
[1] ಉದಾಹರಣೆಗೆ:
ಮೂಢ ಜಹೀಹಿ ಧನಾಗಮತೃಷ್ಣಾಂ
ಕುರು ಸದ್ಬುದ್ಧಿಂ ಮನಸಿ ವಿತೃಷ್ಣಾಮ್ |
ಯಲ್ಲಭಸೇ ನಿಜಕರ್ಮೋಪಾತ್ತಂ
ವಿತ್ತಂ ತೇನ ವಿನೋದಯ ಚಿತ್ತಮ್ || (ಭಜಗೋವಿಂದಂ, ೨)
ವಿಕಸಿತಸರಸಿಜಲಲಿತಮುಖೇನ
ಸ್ಫುಟತಿ ನ ಸಾ ಮನಸಿಜವಿಶಿಖೇನ |
ಅಮೃತಮಧುರಮೃದುತರವಚನೇನ
ಜ್ವಲತಿ ನ ಸಾ ಮಲಯಜಪವನೇನ || (ಗೀತಗೋವಿಂದ, ಅಷ್ಟಪದಿ ಹದಿನಾರು, ೨-೩)