ಆ ಕಾಲದ ಕವಿಗಳ ರೀತಿ-ನೀತಿಗಳು, ವಿವಿಧಕಲೆ-ಕ್ರೀಡೆಗಳ ವಿವರಗಳು, ವೈದಿಕ-ಲೌಕಿಕವೈಭವ-ವಿಶೇಷಗಳು ಮತ್ತಿತರ ಅನೇಕಸ್ವಾರಸ್ಯಗಳನ್ನು ನೋರಿಯವರು ತಮ್ಮ ಈ ಕಾದಂಬರಿಯಲ್ಲಿ ಹದವರಿತು ಬೆಸೆದಿದ್ದಾರೆ. ಶ್ರೀನಾಥನ ಹೆಂಡತಿಯ ತಮ್ಮನೊಬ್ಬನಿದ್ದ. ದುಗ್ಗನನೆಂಬುದು ಆತನ ಹೆಸರು. ಇವನೂ ತೆಲುಗುಕವಿ. “ನಾಚಿಕೇತೂಪಾಖ್ಯಾನ”ವೆಂಬ ಕಾವ್ಯವನ್ನು ಇವನು ಬರೆದಿದ್ದಾನೆ. ಪೋತನನು ಈ ದುಗ್ಗನನ ಸ್ನೇಹಿತ ಹಾಗೂ ಶ್ರೀನಾಥನ ಹೆಂಡತಿಗೆ ಪ್ರೀತಿಯ ಸೋದರಸದೃಶನೆಂದು ನೋರಿಯವರು ಕಲ್ಪಿಸಿದ್ದಾರೆ. ಇವರೆಲ್ಲ ಶ್ರೀನಾಥನಿಗಿಂತ ಇಪ್ಪತ್ತಿಪ್ಪತ್ತೈದು ವರ್ಷಗಳಿಗೆ ಚಿಕ್ಕವರು. ಕವಿಯಾಗಬೇಕೆಂಬ ಬಯಕೆಯನ್ನು ಹೊಂದಿದ ಯುವಕ ಪೋತನನೂ ವಿಜಯನಗರಕ್ಕೆ ಬಂದಿದ್ದನು. ಅದೇ ಸಮಯದಲ್ಲಿ ವಿಜಯನಗರದಲ್ಲಿ ಕುಮಾರವ್ಯಾಸನೂ (ನಾರಣಪ್ಪ) ವ್ಯಾಸಂಗನಿರತನಾಗಿದ್ದನು. ಈತನ ಭಾವನೇ ಮುಮ್ಮಕವಿಯೆಂದು ನೋರಿಯವರ ಕಲ್ಪನೆ. ತೆಲುಗಿನ ಈ ಇಬ್ಬರು ಯುವಕವಿಗಳು ಕನ್ನಡದ ಕುಮಾರವ್ಯಾಸನನ್ನು ಸಂಧಿಸಿ ಸ್ನೇಹವನ್ನು ಮಾಡಿಕೊಂಡಿದ್ದರು.
ಶತಾವಧಾನಸಂದರ್ಭದಲ್ಲಿ ಒಂದು ಪ್ರಸಂಗವುಂಟಾಯಿತು. ಅಲ್ಲಿ ಪೋತನನೂ ಒಬ್ಬ ಪೃಚ್ಛಕನಾಗಿದ್ದನು. ವಾಮನನು ತ್ರಿವಿಕ್ರಮನಾಗಿ ಬೆಳೆದದ್ದು ಹೇಗೆ, ಮತ್ತು ಆಗ ಸೂರ್ಯಬಿಂಬವು ಹೇಗೆ ಕಾಣಿಸಿತು ಎಂದು ಪ್ರಶ್ನಿಸಿದ್ದನು. ಈ ವಿಷಯವಾಗಿ ತಾನು ಆ ಮುನ್ನವೇ ರಚಿಸಿದ ಪದ್ಯವನ್ನು ಪೋತನನು ತನ್ನ ಸ್ನೇಹಿತ ದುಗ್ಗನನಲ್ಲಿ ಹಿಂದಿನ ದಿನ ಹೇಳಿಕೊಳ್ಳುವಾಗ ಅದನ್ನು ಕದ್ದು ಕೇಳಿದ ಏಕಸಂಧಿಗ್ರಾಹಿ ಶ್ರೀನಾಥನು ಅವನ ಪದ್ಯವನ್ನೇ ತನ್ನದೆಂದು ಅವಧಾನದಲ್ಲಿ ಒಪ್ಪಿಸಿಬಿಟ್ಟನು! ಆಶ್ಚರ್ಯಚಿಕಿತನಾದ ಪೋತನನಿಗೆ ಆಗ ಶ್ರೀನಾಥನು, “ಇದು ನಿನ್ನ ಪದ್ಯ. ನನ್ನದಲ್ಲ. ಚೆನ್ನಾಗಿದೆ ಎಂದು ವಾಚಿಸಿದೆ. ಅಲ್ಲದೆ, ವಾಮನನ ಬಗೆಗೆ ಪದ್ಯ ಹೇಳಬೇಕೆಂದು ಕೇಳಿದೆಯೇ ಹೊರತು ನನ್ನದೇ ಪದ್ಯವನ್ನು ನಿವೇದಿಸಬೇಕೆಂದೇನೂ ನೀನು ಕೇಳಲಿಲ್ಲವಲ್ಲ! ಅದಕ್ಕೇ ಒಮ್ಮೆ ನಿನ್ನಿಂದ ಕೇಳಿದ್ದನ್ನೇ ನೆನಪಿನಲ್ಲಿಟ್ಟುಕೊಂಡು[1] ಹೇಳಿದೆ” ಎಂದು ಚಮತ್ಕರಿಸಿದನು. ಇಷ್ಟು ಚಿಕ್ಕವಯಸ್ಸಿಗೇ ಎಷ್ಟು ಚೆನ್ನಾದ ಪದ್ಯವನ್ನು ರಚಿಸಿದ್ದಾನೆಂದು ದೇವರಾಯನು ಪೋತನನನ್ನು ಮೆಚ್ಚಿಕೊಂಡು ಅವನಿಗೆ ಸ್ಫಟಿಕಮಾಲೆಯನ್ನು ತೊಡಿಸಿ ಸನ್ಮಾನಿಸಿದನು.
ಒಮ್ಮೆ ಕುಮಾರವ್ಯಾಸ, ದುಗ್ಗನ ಮತ್ತು ಪೋತನರು ತಮ್ಮಲ್ಲಿ ಸಂಭಾಷಿಸುವಾಗ, “ಶ್ರೀನಾಥನು ಆರು ತಿಂಗಳ ಕಾಲ ಎಷ್ಟೆಲ್ಲ ಕಷ್ಟ ಪಟ್ಟು, ತಂತ್ರಗಾರಿಕೆ ಮಾಡಿ ಕನಕಾಭಿಷೇಕವನ್ನು ಮಾಡಿಸಿಕೊಂಡ. ಇಂಥ ಯಾವುದೇ ನಿರೀಕ್ಷೆಯಿಲ್ಲದೆ ಅಚಿಂತ್ಯವಾಗಿ ಪೋತನನು ಸನ್ಮಾನಿತನಾದುದು ಮಹತ್ತರಸಂಗತಿ. ಪೋತನನಿಗೆ ತೊಡಿಸಲ್ಪಟ್ಟ ಸ್ಫಟಿಕಮಾಲೆಯು ಶ್ರೀನಾಥನ ಕನಕಾಭಿಷೇಕಕ್ಕಿಂತ ಹಿರಿದಾದುದು. ಬಯಕೆಯಿಲ್ಲದೆ ಸಂದ ಸಾಧನೆಗೆ ಬಂದ ಸಮ್ಮಾನವು ಸರ್ವಥಾ ಮಹನೀಯ,” ಎಂದು ಕುಮಾರವ್ಯಾಸನು ತನ್ನ ಅಭಿಪ್ರಾಯವನ್ನು ಹೇಳಿದನು. ಬಿಡದಿಯ ಆಚೆ ನಡೆಯುತ್ತಿದ್ದ ಈ ಮಾತನ್ನೆಲ್ಲ ಕೇಳಿಸಿಕೊಂಡ ಶ್ರೀನಾಥನು ತನ್ನ ಹೆಂಡತಿಯನ್ನು ಕೇಳಿದನು: “ನಿನ್ನ ಸ್ವಂತ ತಮ್ಮನಾದ ದುಗ್ಗನನು ನನ್ನ ಪರವಾಗಿ ಮಾತನಾಡುತ್ತಿದ್ದಾನೆ; ಆದರೆ ನಿನ್ನ ತಮ್ಮನಂಥ ಪೋತನನು ನನ್ನನ್ನು ಗೇಲಿಮಾಡುತ್ತಿದ್ದಾನೆ. ನೀನೀಗ ಯಾವ ತಮ್ಮನ ಪಕ್ಷ?” ಎಂದು. ಅದಕ್ಕಾಕೆ ಸಂಕೋಚದಿಂದ, “ನೀವು ತಪ್ಪುತಿಳಿಯದಿದ್ದರೆ, ನಾನು ಎಂದೂ ಪೋತನನ ಪಕ್ಷವೇ. ನೀವು?” ಎಂದು ಕೇಳಿದಳು. ಅದಕ್ಕವನು, “ಈ ಹೊತ್ತಿನಮಟ್ಟಿಗೆ ನಾನೂ ಪೋತನಪಕ್ಷವೇ. ಆದರೆ ಮಿಕ್ಕೆಲ್ಲ ಕಾಲವೂ ದುಗ್ಗನನ ಪಕ್ಷ,” ಎನ್ನುತ್ತಾನೆ. ಯಾವುದೇ ಮಹತ್ತರಸಾಧನೆಯನ್ನು ಮಾಡಿದ ಬಳಿಕ ಇದೇನೂ ಅಂಥ ದೊಡ್ಡದಲ್ಲವೆಂಬ ವಿವೇಕಪ್ರಾಪ್ತಿಯಾಗುತ್ತದೆ, ಇದರಿಂದ ಜನಿಸಿದ ನೆಮ್ಮದಿಯು ನಿರಪೇಕ್ಷತೆಯನ್ನು ತರುತ್ತದೆ. ಆ ಹೊತ್ತು ಶ್ರೀನಾಥನಿಗೆ ಆದುದು ಇದೇ. ಡಿಂಡಿಮನ ಕಂಚಿನ ಢಕ್ಕೆಯನ್ನು ಒಡೆಸಿ, ಶತಾವಧಾನವನ್ನು ಮಾಡಿ, ಕನಕಾಭಿಷೇಕವನ್ನೇ ಮಾಡಿಸಿಕೊಂಡ ಬಳಿಕ ಅವನಲ್ಲಿ ಉಂಟಾಗಿದ್ದ ನಿಸ್ಸ್ಪೃಹಭಾವ ತಾತ್ಕಾಲಿಕವಾದುದು. ಆದರೆ ಅವನ ಸ್ಥಾಯಿಭಾವ ರಾಜಸವೇ.
ಊರಿಗೆ ಹೊರಡುವ ದಿನ ಶ್ರೀನಾಥನು ಏಕಶಿಲಾನಗರಕ್ಕೆ (ವರಂಗಲ್) ಹೊರಟುನಿಂತ ಪೋತನನನ್ನು ಹತ್ತಿರಕ್ಕೆ ಕರೆದು ಹೀಗೆಂದನು: “ಅಪ್ಪ, ನಿನ್ನ ಮೇಲಿನ ಪ್ರೇಮಾತಿಶಯದಿಂದ ನಮ್ಮಂಥವರು ನಿನ್ನೆದುರಿನಲ್ಲಿ ಮೆಚ್ಚುಗೆಯ, ಮನ್ನಣೆಯ ಎಷ್ಟೋ ಮಾತುಗಳನ್ನು ಹೇಳಿದೆವು. ಅದಕ್ಕೆಲ್ಲ ಗರ್ವಿಸಿ ತಲೆದಿರುಗಿ ಹಾಳಾಗಬೇಡ. ಮಗೂ, ಹೇಳಿದ ನಾಲ್ಕೈದು ಪದ್ಯಗಳನ್ನೇ ಮತ್ತೆಮತ್ತೆ ಚಪ್ಪರಿಸಿಕೊಂಡು ಆನಂದಿಸುತ್ತ ಉಳಿದರೆ ಕವಿತ್ವವು ಅಲ್ಲಿಗೇ ಪರಿಸಮಾಪ್ತಿಯಾಗುತ್ತದೆ. ಮಹಾಗ್ರಂಥರಚನೆಗೆ ತೊಡಗಿದವನಿಗೆ ತನ್ನ ಪೂರ್ವರಚಿತಕವಿತೆಗಳನ್ನೇ ಚಪ್ಪರಿಸಿಕೊಂಡು ಆನಂದಪಡುವಷ್ಟು ವಿರಾಮವಿರುವುದಿಲ್ಲ. “ಬಾಲಾದಪಿ ಸುಭಾಷಿತಂ” ಎಂಬಂತೆ ನಿನ್ನ ಮಾತಿನ ಅನುಸಾರ ನಾನೂ ಇನ್ನು ಮುಂದೆ ಭಗವದ್ವಿಷಯವಾಗಿಯೇ ಮಹಾಕಾವ್ಯಗಳನ್ನು ನಿರ್ಮಿಸುತ್ತೇನಲ್ಲದೆ ಅಗ್ಗದ ಕವಿತೆಗಳನ್ನು ರಚಿಸುವುದಿಲ್ಲವೆಂದು ನಿಶ್ಚಯಿಸಿಕೊಂಡಿದ್ದೇನೆ. ಶ್ರೀಗುರುಗಳು ಪ್ರಸಾದಿಸಿದ ಇಷ್ಟದೇವತೆಯನ್ನು ನೀನು ಹೃದಯದಲ್ಲಿ ನೆಲೆಯಾಗಿಸಿಕೊಂಡು ಪ್ರವರ್ಧಮಾನಕ್ಕೆ ಬಾ. ದೀರ್ಘಾಯುಷ್ಯಮಸ್ತು.” ಎಂದು ಆಶೀರ್ವದಿಸಿ ಕಳುಹಿಸಿಕೊಟ್ಟನು. ಈ ಸಂದರ್ಭದ ಸ್ವಾರಸ್ಯ-ಮಹತ್ತ್ವಗಳಿಗೆ ಪ್ರತ್ಯೇಕವ್ಯಾಖ್ಯಾನ ಅನವಶ್ಯ. ಈ ಕಾದಂಬರಿಯ ಆದ್ಯಂತ ಇಂಥ ಹತ್ತಾರು ಮಾರ್ಮಿಕಪ್ರಸಂಗಗಳಿವೆ.
ಶತಾವಧಾನ-ಆಸ್ಥಾನವಿಕ್ರಮಗಳೇನೇ ಇರಲಿ, ಶ್ರೀನಾಥನೊಬ್ಬ ಆಗರ್ಭಕವಿ. ಕಂಡ ಕಂಡ ವಸ್ತು-ವಿಷಯಗಳನ್ನು ಕುರಿತು ಪ್ರೌಢಶೈಲಿಯ ರಸವತ್ಪದ್ಯಗಳನ್ನು ಆತ್ಯಾಶುವಾಗಿ ಹೇಳುತ್ತಿದ್ದ. ತೆಲುಗಿನಲ್ಲಿ ಚಾಟುಪದ್ಯಗಳನ್ನು ಇವನಂತೆ, ಇವನಷ್ಟು ಹೇಳಿದವರಿಲ್ಲ. ಇವನ ಯಾವುದೇ ಪದ್ಯಗಳಲ್ಲಿಯೂ ಈತನ ವಿಲಕ್ಷಣ-ವಿಶಿಷ್ಟವ್ಯಕ್ತಿತ್ವವು ಎದ್ದುತೋರುತ್ತದೆ. ಈ ಗುಣವು ಅನೇಕಕವಿಗಳಿಗೆ ನಿಲುಕಲಾರದ ಎತ್ತರ. ಇಂಥ ಶ್ರೀನಾಥಮಹಾಕವಿಯ ಈ ಪರಿಯಾದ ರಾಸಿಕ್ಯವನ್ನು ನೋರಿಯವರು ಪ್ರಸ್ತುತಕಾದಂಬರಿಯ ಹಲವು ಸಂನಿವೇಶಗಳಲ್ಲಿ ಬಲುಸೊಗಸಾಗಿ ಬಿಂಬಿಸಿದ್ದಾರೆ. ವ್ಯಕ್ತಿಗಳು ಪಾತ್ರಗಳಾಗುವುದೇ ಸಾಹಿತ್ಯಕಲೆಯ ಪರಮಾರ್ಥವಷ್ಟೆ! ತತ್ರಾಪಿ ಕಥನಕ್ಕಿದು ಜೀವಿತಸರ್ವಸ್ವ. ದಿಟವೇ, ಶ್ರೀನಾಥನ ಚಾಟುಪದ್ಯಗಳಲ್ಲಿಯೇ ಆಯಾ ಸಂದರ್ಭಗಳ ಧ್ವನಿಯುಂಟು ಮತ್ತು ಜನತೆಯ ಬಾಯ್ದೆರೆಯಲ್ಲಿಯೂ ಇವುಗಳನ್ನು ಕುರಿತ ಕಥೆಗಳು ನೂರುತೆರನಾಗಿ ಹಬ್ಬಿವೆ. ಆದರೆ ಇವನ್ನೆಲ್ಲ ಒಳ್ಳೆಯ ರೀತಿಯಲ್ಲಿ ಪ್ರಸ್ತುತಕಾದಂಬರಿಗೆ ದುಡಿಸಿಕೊಳ್ಳುವುದಕ್ಕೆ ಹೆಚ್ಚಿನ ಪ್ರತಿಭೆ ಅವಶ್ಯ. ಇಲ್ಲವಾದರೆ ಇಂಥ ಚಾಟುಗಳನ್ನೇ ಆಧರಿಸಿ ಶ್ರೀನಾಥನ ಬಗೆಗೆ ರಚಿತವಾದ ಇನ್ನಿತರ ಎಷ್ಟೋ ತೆಲುಗು ಲೇಖಕರ ಕಾದಂಬರಿಗಳಿಗೂ ನೋರಿಯವರ ಕೃತಿಗಳ ಮಟ್ಟಿನ ಬೆಲೆ ಬಂದಿರುತ್ತಿತ್ತು. ಆದರೆ ಇಂತಾಗದಿದ್ದುದಕ್ಕೆ ಕಾರಣ ನರಸಿಂಹಶಾಸ್ತ್ರಿಗಳ ಪ್ರತಿಭಾವೈದುಷ್ಯಗಳ ರಸಪಾಕ. ಈ ಚರ್ಚೆ ಸದ್ಯಕ್ಕೆ ಒತ್ತಟ್ಟಿಗಿರಲಿ, ಶ್ರೀನಾಥನ ಕೆಲವೊಂದು ಚಾಟೂಕ್ತಿಗಳನ್ನು ನೋರಿಯವರು ಹೇಗೆ ಬಳಸಿಕೊಂಡಿರುವರೆಂಬುದನ್ನು ಸಂಕ್ಷಿಪ್ತವಾಗಿ ನೋಡೋಣ.
ಶ್ರೀನಾಥನ ವಿಜಯನಗರಯಾತ್ರಾಮಾರ್ಗದಲ್ಲೊಮ್ಮೆ ಹಳ್ಳಿಯೊಂದನ್ನು ಹಾಯ್ದು ಹೋಗುವಾಗ ನೀರಿಗೆ ತೀವ್ರವಾದ ಅಭಾವವೊದಗಿತು. ಅವನಿಗೂ ಅವನ ಪರಿವಾರಕ್ಕೂ ಚಿಕ್ಕ ಚೊಂಬುಗಳಲ್ಲಿ ಅಳೆದಳೆದು ನೀರನ್ನು ಹಳ್ಳಿಗರು ಕೊಡುತ್ತಿದ್ದರು. ಆಗ ಅಲ್ಲಿಯ ಜನಜೀವನದ ದುಸ್ಸ್ಥಿತಿಯನ್ನು ಕಂಡು ರೋಸಿದ ಕವಿಸಾರ್ವಭೌಮನು ಸ್ವಯಂ ಮಹಾಶಿವಭಕ್ತನಾದ್ದರೂ ತನ್ನ ಇಷ್ಟದೈವವಾದ ಹರನನ್ನೇ ಹೀಗೆ ತರಾಟೆಗೆ ತೆಗೆದುಕೊಂಡ:
“ಸಿರಿಗಲವಾಡಿಕಿ ಚೆಲ್ಲುನು
ತರುಣುಲ್ ಪದಿಯಾರುವೇಲ ತಗ ಪೆಂಡ್ಲಾಡನ್ |
ತಿರಿಪೆಮುನ ಕಿದ್ದರಾಂಡ್ರಾ
ಪರಮೇಶಾ ಗಂಗ ವಿಡುಮು ಪಾರ್ವತಿ ಚಾಲುನ್ ||”
(ಲಕ್ಷ್ಮಿಯಿದ್ದವನು ಹದಿನಾರುಸಾವಿರ ಹೆಣ್ಣುಗಳನ್ನು ಮದುವೆಯಾಗಬಹುದು, ಭಿಕ್ಷೆಯೆತ್ತುವ ನಿನಗೆ ಇಬ್ಬರು ಹೆಂಡಿರು ಏಕೋ? ನಿನಗೆ ಪಾರ್ವತಿಯು ಸಾಕು, ಗಂಗೆಯನ್ನು ಇತ್ತ ಹರಿಸು.) ಅನಂತರ ಅವನು ಹತ್ತಿರದಲ್ಲಿದ್ದ ಬತ್ತಿದ ಹೊಳೆಯಲ್ಲಿ ಹೊಂಡ ತೆಗೆಸಿದಾಗ ನೀರಿನ ಚಿಲುಮೆ ಉಕ್ಕಿಬಂದಿತು. ಅಂತೆಯೇ ವಿನುಕೊಂಡ ವಲ್ಲಭರಾಯನನ್ನು ಬೀಳ್ಗೊಡುವಾಗ ಅತ್ತ ಸುಳಿದ ಬೇಡತಿಯರ ಗುಂಪೊಂದನ್ನು ನೋಡಿ ಅವನಿಗೆ ಬಹುಮಾನರೂಪದಲ್ಲಿತ್ತ ಒಂದು ಪದ್ಯ, ನಮ್ಮ ಈ ವಿಜಯನಗರವನ್ನು ಸುತ್ತಿಸುಳಿಯುವಾಗ ನೀವೇನು ವಿಶೇಷಗಳನ್ನು ಕಂಡಿರೆಂಬ ಸಾಂಪರಾಯನಿಗೆ ಉತ್ತರವಾಗಿ ತಾನೊಮ್ಮೆ ಕಂಡ ಭತ್ತವನ್ನು ಕುಟ್ಟುತ್ತಿರುವವಳ ಬಗೆಗೆ ಹೇಳಿದ ಒಂದು ಪದ್ಯ, ಕೊಂಡವೀಡೀನಲ್ಲಿಯೇ ತಾನು ಗೆಳೆಯರ ನಡುವೆ ಹರಟುವಾಗ ಪ್ರಸ್ತಾವತ್ವೇನ ರಾಮಯಮಂತ್ರಿಯೆಂಬಾತನ ಊಟದ ಆಟಾಟೋಪದ ಬಗೆಗೆ ವೈನೋದಿಕವಾಗಿ ಹೇಳಿದ ಮತ್ತೊಂದು ಪದ್ಯ — ಹೀಗೆ ಕಂಡುದಕ್ಕೆಲ್ಲ ಒಂದೊಂದು ಪದ್ಯ! ತನ್ನ ಪೂರ್ವೋಕ್ತಯಾತ್ರೆಯಲ್ಲಿಯೇ ಪಲ್ನಾಡುಸೀಮೆಯಲ್ಲೊಮ್ಮೆ ಉಪ್ಪುನೀರನ್ನೇ ಕುಡಿದು ನೀರಡಿಕೆಯನ್ನು ತೀರಿಸಿಕೊಳ್ಳುವ ಸಂದರ್ಭ ಬಂದಾಗ, “ನೀನು ಪೂತನಿಯ ವಿಷಮಯಸ್ತನ್ಯವನ್ನು ಸೇವಿಸಿದ ಕತೆಯಂತಿರಲಿ. ಸಮರ್ಥನಾದರೆ ಈ ಬಾವಿಯ ಉಪ್ಪುನೀರನ್ನು ಸೇವಿಸಿ ಬದುಕಿಕೋ ನೋಡೋಣ,” ಎಂದು ಕೃಷ್ಣನನ್ನೇ ಕುರಿತು ಪದ್ಯದ ಮೂಲಕ ಸವಾಲು ಹಾಕಿದಂಥ ಪ್ರಗಲ್ಭತೆ; ಮತ್ತೆ ಅದೇ ಪ್ರಾಂತದ ಬಡತನದಲ್ಲಿಯೂ ಮಿಂಚುತ್ತಿದ್ದ ಒಳ್ಳೆಯತನವನ್ನು ಕಂಡು ಮೆಚ್ಚುಗೆಯಿಂದ ಹೇಳಿದ ಪದ್ಯ ಹಾಗೂ ಅದು ಅಲ್ಲಿಯ ಜನತೆಗೆ ಮಂತ್ರಪ್ರಾಯವಾದ ಪರಿ ತುಂಬ ಹೃದಯಂಗಮವೇ ಸರಿ. ಎಲ್ಲಕ್ಕಿಂತ ಮಿಗಿಲಾಗಿ ಪುಲಿಪಾಡೆ ಎಂಬ ಕುಗ್ರಾಮದಲ್ಲಿ ತೊಂದರೆಯನ್ನಿತ್ತ ಅಲ್ಲಿಯ ಪಟೇಲ, ನಾಡಗೌಡ ಮತ್ತು ಶಾನುಭೋಗರ ಬಗೆಗೆ ಶ್ರೀನಾಥನು ಹೇಳಿದ ಮಾರ್ಮಿಕಚಾಟು ಹಾಗೂ ಈ ವೃತ್ತಾಂತದ ಆಚೀಚಿನ ವಿವರಗಳೇ ಮುಂತಾದ ಅನೇಕಸಂದರ್ಭಗಳನ್ನು ನೋರಿಯವರು ಸತ್ಯಾಧಾರದ ಮೇಲೆ ಸೊಗಸಾಗಿ ಕಲ್ಪಿಸಿ ಗೆದ್ದಿದ್ದಾರೆ. ಒಟ್ಟಿನಲ್ಲಿ ಶ್ರೀನಾಥನ ಚಾಟುಪದ್ಯಗಳನ್ನು ಯುಕ್ತಸಂದರ್ಭಕಲ್ಪನೆಯೊಡನೆ, ಕಥಾಸೂತ್ರಕ್ಕೆ ಪೂರಕವಾಗುವಂತೆ ಹವಣಿಸಿಕೊಳ್ಳುವಲ್ಲಿ ಇವರು ತೋರಿದ ಬಲ್ಮೆ ಸುತರಾಂ ಸ್ತುತ್ಯ.
ಶ್ರೀನಾಥನು ಎಷ್ಟೆಲ್ಲ ವಿದ್ಯೆಗಳಲ್ಲಿ ಕೋವಿದನಾಗಿದ್ದನೋ ಆ ಎಲ್ಲ ವಿದ್ಯೆಗಳಿಗೂ ತಕ್ಕ ಪ್ರದರ್ಶನಸಂದರ್ಭಗಳನ್ನು ನೋರಿಯವರು ತಮ್ಮ ಕಾದಂಬರಿಯಲ್ಲಿ ಅವನಿಗೆ ರಸ್ಯವಾಗಿ ಒದಗಿಸಿಕೊಟ್ಟಿದ್ದಾರೆ. ಮುಖ್ಯವಾಗಿ ಶತಾವಧಾನದ ಸನ್ನಿವೇಶವನ್ನು ಇದಕ್ಕಾಗಿ ಬಳಸಿಕೊಂಡಿದ್ದಾರೆ. ಇದಲ್ಲದೆ ಮಲ್ಲವಿದ್ಯೆ, ರಾಜನೀತಿ, ಶ್ರೌತಪ್ರಕ್ರಿಯೆ ಮುಂತಾದ ಸಂಗತಿಗಳಿಗೂ ತಕ್ಕ ಸಂದರ್ಭಗಳನ್ನು ಒದಗಿಸಿದ್ದಾರೆ. ಇಲ್ಲೆಲ್ಲ ನೋರಿಯವರು ತಕ್ಕ ರೀತಿಯಲ್ಲಿ ಪರ್ವತಮಲ್ಲ ಮತ್ತು ವಿದ್ಯಾಮಲ್ಲರೆಂಬ ಜೆಟ್ಟಿಗಳ ವೃತ್ತಾಂತ ಹಾಗೂ ಅವರ ಮಲ್ಲಸ್ಪರ್ಧೆಗಳ ತಂತ್ರ-ಪ್ರತಿತಂತ್ರಗಳು, ಕೊಂಡವೀಡು-ರಾಜವೀಡು-ವಿಜಯನಗರಗಳ ನಡುವಣ ಸಂಬಂಧಸೂಕ್ಷ್ಮಗಳು, ಲಿಂಗನಸೋಮಯಾಜಿ ಮಾಡಿದ ಅತಿರಾತ್ರಯಾಗದ ವಿವರಗಳೇ ಮುಂತಾದ ಅಸಂಖ್ಯಸಂಗತಿಗಳನ್ನು ಅದ್ಭುತವಾಗಿ ಕಲ್ಪಿಸಿದ ಇಲ್ಲಿಯ ಕಾರಣ ಯಾವೊಂದು ಅಂಶವೂ ಬಲಾದಾಕೃಷ್ಟವೆನಿಸದು. ಅಂತೆಯೇ ಡಿಂಡಿಮನೊಡನೆ ಶ್ರೌತ, ನ್ಯಾಯ, ಮೀಮಾಂಸಾ, ವ್ಯಾಕರಣ ಮುಂತಾದ ಶಾಸ್ತ್ರಧುರೀಣರೂ ಪಾಕೃತಭಾಷಾವಿಶಾರದರೂ ಸಂಭಾಷಿಸುವ ರೀತಿಯಿಂದ ಇಡಿಯ ಆ ಸಂನಿವೇಶವೇ ನಮ್ಮ ಕಣ್ಣೆದುರು ನಡೆಯುತ್ತಿರುವಂತೆ ತೋರುವುದಲ್ಲದೆ ಅಲ್ಲಿಯ ಎಲ್ಲ ವಿದ್ಯಾವೈಚಿತ್ರ್ಯಗಳ ಹಾಗೂ ತಂತ್ರಗಾರಿಕೆಗಳ ಪಟ್ಟುಗಳು ಸಹೃದಯರಿಗೆ ಸರಸವಾಗಿ ತೆರೆದುಕೊಂಡಿವೆ.
ಮುಮ್ಮಕವಿಯ ಮನೆಯಲ್ಲಿ ಹಾಗೂ ಇತರೆಡೆಗಳಲ್ಲಿ ಬಹುಭಾಷಾಕವಿಗೋಷ್ಠಿಗಳು ನಡೆಯುತ್ತಿದ್ದವು. ಅಲ್ಲಿ ಯುವಕವಿಗಳೇ ಹೆಚ್ಚು. ಇವರಿಗೆ ತಮ್ಮ ಕವಿತೆಯನ್ನು ಓದಿಕೇಳಿಸುವಲ್ಲಿ ಇರುವ ಆಸಕ್ತಿ ಇತರರ ಕವಿತೆಗಳನ್ನು ಕೇಳುವುದರಲ್ಲಿ ಇರಲಿಲ್ಲ. ಶ್ರೀನಾಥನು ಡಿಂಡಿಮನಿಗೆ ತನ್ನ “ಮಾನಸೋಲ್ಲಾಸ”ವನ್ನು ಕಳುಹಿಸುವ ಮುನ್ನ ಒಮ್ಮೆ –ಯಾವ ಪಂಡಿತರನ್ನೂ ಅಹ್ವಾನಿಸದೆ – ಇಂಥ ಯುವಕವಿಗಳನ್ನೇ ಕರೆಸಿ ಚೆನ್ನಾದ ಆತಿಥ್ಯವನ್ನೂ ಮಾಡಿ ಆ ಕಾವ್ಯವನ್ನು ಪ್ರಸ್ತುತಪಡಿಸಿದ್ದನು. ಆಗ ಆ ಯುವಕವಿಗಳಲ್ಲಿ ಅಸಮಾಧಾನವು ಕಾಣಿಸಿಕೊಂಡಿತ್ತು: “ನಾವದೆಷ್ಟು ಚೆನ್ನಾದ ಪದ್ಯಗಳನ್ನು ಇಂಪಾಗಿ ವಾಚಿಸಿದೆವು. ಇವನು ಬರಿಯ ಪಂಡಿತಕವಿ. ಇವನ ಕಾವ್ಯವನ್ನು ಕೇಳುವ ಕರ್ಮ ಈಗ ನಮಗೆ ವಕ್ಕರಿಸಿತಲ್ಲಾ!” ಎಂದು ಬೇಸರಿಸಿಕೊಂಡರೂ ಅವನ ಪುಷ್ಕಲಾತಿಥ್ಯವನ್ನು ನೆನೆದು ಕೇಳ್ಮೆಯ ನಟನೆಯನ್ನಾದರೂ ಮಾಡೋಣವೆಂದುಕೊಂಡಿದ್ದರು. ವಸ್ತುತಃ ತನ್ನ ತಂತ್ರದ ಅಂಗವಾಗಿ ಶ್ರೀನಾಥನು ಬೇಕೆಂದೇ ತನ್ನ ಕಾವ್ಯವನ್ನು ತಪ್ಪುತಪ್ಪಾಗಿ ಕೇಳಿಸುವಂತೆ ವಾಚಿಸಿದ್ದನು. ಅದನ್ನು ಅವನು ಯಥಾರ್ಥವಾಗಿ ಮಾಡಿದ ತಪ್ಪೇ ಹೌದೆಂದು ಭ್ರಮಿಸಿದ ಯುವಕವಿಗಳು ಆ ಬಳಿಕ, “ಶ್ರೀನಾಥನು ಶ್ರೌತಯಾಗಗಳನ್ನು ಮಾಡಿಸುವ ಪುರೋಹಿತ. ಕೇವಲ ವೈದಿಕ, ಛಾಂದಸ. ಕಾವ್ಯವನ್ನು ಅರಿಯದವನು,” ಎಂದು ಪ್ರಚಾರಗೈದಿದ್ದರು. ಈ ಮಾತನ್ನು ಡಿಂಡಿಮನ ಕಿವಿಗೆ ತಲುಪಿಸುವುದೇ ಶ್ರೀನಾಥನ ಮೂಲೋದ್ದೇಶವಾಗಿತ್ತು! ಇದು ನಿರೀಕ್ಷಿತರೀತಿಯಲ್ಲಿ ಸಾಗಿ ಡಿಂಡಿಮನು ಭ್ರಾಂತನಾಗುವ ಮೂಲಕ ಅವನ ಸೋಲಿಗೆ ನಾಂದಿಯಾಯಿತು. ಇದನ್ನು ಕಲ್ಪಿಸುವಲ್ಲಿ ನೋರಿಯವರ ಲೋಕಜ್ಞತೆ, ಹಾಸ್ಯಪ್ರಜ್ಞೆ ಹಾಗೂ ಇತಿವೃತ್ತನಿರ್ವಾಹಶಕ್ತಿಗಳು ನಿರತಿಶಯವಾಗಿ ದುಡಿದಿವೆ.
ಶ್ರೀನಾಥನು ವಿಜಯನಗರಕ್ಕೆ ಬಂದ ಹೊಸತರಲ್ಲಿ ತಾನು ಸ್ಥಾನಿಕವಿದ್ವಾಂಸರ ಗಮನವನ್ನು ಸೆಳೆದು ಅಲ್ಲಿಯ ಮುಖ್ಯಸ್ಥರ ಪರಿಚಯವನ್ನು ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ಲಿಂಗನಸೋಮಯಾಜಿಯೆಂಬಾತನು ನಡೆಸಿದ ಶ್ರೌತಯಾಗವೊಂದಕ್ಕೆ ಅನಭ್ಯಾಗತನಾಗಿ ಹೋಗಿದ್ದನು. ಅದು ಕನ್ನಡದವರು ನಡೆಸಿದ ಯಾಗವಾದುದರಿಂದ, ಆರ್ತ್ವಿಜ್ಯಕ್ಕೆ ಮಹಾರಾಷ್ಟ್ರೀಯರನ್ನಾಗಲಿ ತಮಿಳರನ್ನಾಗಲಿ ಕರೆಯದೆ, ಬರಿಯ ಕನ್ನಡದವರನ್ನು ಮಾತ್ರ ವರಣ ಮಾಡಿದ್ದರು. ಇದರಿಂದ ಕುಪಿತರಾದ ತಮಿಳರು ಕನ್ನಡಿಗರ ಯಾಗದಲ್ಲಿ ಆಗುವ ದೋಷಗಳನ್ನು ಎತ್ತಿ ಆಡೋಣವೆಂದು ಕಾದುಕುಳಿತಿದ್ದರು. ಆ ಅತಿರಾತ್ರಯಾಗದ ಸಂಕಲ್ಪಕಾಲದಲ್ಲಿ ಷೋಡಶಿಯೆಂಬ ಯಜ್ಞಪಾತ್ರೆಯೊಂದೊಂದನ್ನು ತೆಗೆದುಕೊಳ್ಳಬೇಕಿರುತ್ತದೆ. ಆ ಪ್ರಕ್ರಿಯೆಯು ಸಾಗುತ್ತಿರುವಂತೆಯೇ ತಮಿಳರು “ನಾತಿರಾತ್ರೇ ಷೋಡಶಿನಂ ಗೃಹ್ಣಾತಿ (ಅತಿರಾತ್ರದಲ್ಲಿ ಷೋಡಶೀಪಾತ್ರವನ್ನು ಮುಟ್ಟಲೇಬಾರದು) ಎನ್ನುತ್ತದೆ ಮೀಮಾಂಸಾಶಾಸ್ತ್ರ” ಎಂದು ತಗಾದೆಯನ್ನು ತೆಗೆದರು. ಕರ್ಣಾಟಕರು “ಅತಿರಾತ್ರೇ ಷೋಡಶಿನಂ ಗೃಹ್ಣಾತಿ ಎಂಬ ವಾಕ್ಯವೂ ಇದೆಯಲ್ಲ! ಇದೇನು ನೀವು ಯಜ್ಞವನ್ನು ತಡೆಯಲು ಬರುವ ರಾಕ್ಷಸರಿಗೇ ಸಗೋತ್ರರಾದಿರಲ್ಲ!,” ಎಂದು ಪ್ರತಿವಾದಿಸಿದರು. ಅದಕ್ಕವರು, ವಿಧಿವಾಕ್ಯಕ್ಕಿಂತ ನಿಷೇಧವಾಕ್ಯವು ಬಲವತ್ತರವೆಂಬ ತರ್ಕವನ್ನು ಹೂಡಿದರು. ವಾದವು ಹೀಗೆ ಸಾಗುತ್ತಿರುವಾಗ ಯಾಜ್ಞಿಕರು ಈ ತಕರಾರಿಗೆ ಸಮಾಧಾನವೇನೆಂದು ಅಲ್ಲಿದ್ದ ವಿದ್ಯಾಧಿಕಾರಿ ಅರುಣಗಿರಿನಾಥನನ್ನು ಬೇಡಿದಾಗ ಶ್ರೌತವನ್ನು ಅರಿಯದ ಆತನು, “ನೀವೆಲ್ಲ ಪಂಚದ್ರಾವಿಡಬ್ರಾಹ್ಮಣರು. ನಿಮ್ಮ ದೇಶಾಚಾರಗಳು ನಮಗೇನು ಗೊತ್ತು. ನಾವು ಪಂಚಗೌಡರು,” ಎಂದು ಜಾರಿಕೊಂಡನು. ಆಗ ಶ್ರೀನಾಥನು, “ಇದಕ್ಕೆ ನಾನು ಪರಿಹಾರವನ್ನು ಹೇಳುತ್ತೇನೆ. “ವಿಧಿವಾಕ್ಯಕ್ಕಿಂತ ನಿಷೇಧವಾಕ್ಯವು ಬಲವತ್ತರ”ವೆಂಬುದು ವ್ಯಾಕರಣಶಾಸ್ತ್ರನಿಯಮ. ಶ್ರೌತಶಾಸ್ತ್ರದ ಪರಿ ಹೀಗಲ್ಲ. ಅಲ್ಲದೆ ನ್ಯಾಯಶಾಸ್ತ್ರ ಕೂಡ “ತುಲ್ಯಬಲವಿರೋಧೇ ವಿಕಲ್ಪಃ” ಎಂದು ಒಕ್ಕಣಿಸಿರುವ ಕಾರಣ ಎರಡೂ ಪಕ್ಷಗಳಿಗೆ ಅನುಕೂಲಿಸುವಂಥ ಶಾಸ್ತ್ರವಾಕ್ಯಗಳಿದ್ದರೆ ಯಾವುದೂ ಮಾನ್ಯ. ಅಲ್ಲದೆ, ಒಮ್ಮೆ ಸಂಕಲ್ಪಿಸಿದಮೇಲೆ ಅದನ್ನು ಪೂರ್ತಿಯಾಗಿಸಬೇಕೆಂಬ ನಿಯಮವಿದೆ. ಕರ್ಣಾಟಕಾಂಧ್ರಗಳ ದೇಶಾಚಾರದ ಪ್ರಕಾರ ಅತಿರಾತ್ರಯಾಗದಲ್ಲಿ ಷೋಡಶೀಪಾತ್ರವು ಗ್ರಾಹ್ಯ. ದ್ರಾವಿಡರಲ್ಲಿ ಅದು ಅಗ್ರಾಹ್ಯ. ಮಹಾರಾಷ್ಟ್ರದಲ್ಲಿ ಎರಡೂ ಸಾಧು. ಹೀಗಾಗಿ ಯಾವುದೇ ತೊಡಕಿಲ್ಲ” ಎಂದು ಪರಿಹಾರವನ್ನು ನಿರ್ಧರಿಸಿದನು. ಹೀಗೆ ಶ್ರೀನಾಥನಿಗೆ ವಿಜಯನಗರದ ವಿದ್ವದ್ವಲಯದಲ್ಲಿ ಮೊದಲಪ್ರವೇಶಕ್ಕೆ ಎಡೆಯಾಗುತ್ತದೆ; ಸ್ಥಾನಿಕರ ಆದರ-ಅಭಿಮಾನಗಳು ದಕ್ಕುತ್ತವೆ. ಇಂಥ ಮತ್ತೂ ಹತ್ತು-ಹಲವು ಸಂದರ್ಭಗಳನ್ನು ಕಲಾತ್ಮಕವಾಗಿ, ಕಥಾಸರಣಿಯು ರಂಗೇರುವಂತೆ ಸಾಧಿಸಿದ ನೋರಿಯವರ ಸಾಹಿತೀಸಾಮರ್ಥ್ಯ ಸರ್ವಥಾ ಸ್ತವನೀಯ. ಹೀಗಾಗಿ ರಸಿಕರ ಪಾಲಿಗೆ ಈ ಕೃತಿಯೊಂದು ಸಾಹಿತ್ಯಿಕಸಮಾರಾಧನ.
ಈ ಕೃತಿಯ ಆದ್ಯಂತ ಅಲ್ಲಲ್ಲಿ ವ್ಯಕ್ತಿಸ್ವಭಾವವರ್ಣನೆಯಿದೆ: ಶ್ರೀನಾಥನ ರಾಜಸ, ಡಿಂಡಿಮನ ಹೆಂಡತಿ-ಸೊಸೆಯರ ಮನೋಧರ್ಮವ್ಯತ್ಯಯ, ವ್ಯಾಸ-ವಾಲ್ಮೀಕಿಗಳ ರೀತಿಯಲ್ಲಿಯೇ ನೇರವಾಗಿ ಆನಂದಕೋಶಕ್ಕೆ ತಲಪುವಂಥ ರಸವತ್ಕಾವ್ಯವನ್ನೇ ರಚಿಸತಕ್ಕದ್ದಲ್ಲದೆ ಬರಿಯ ಪ್ರಾಣಮಯಕ್ಕೆ (ಶುಷ್ಕಪಾಂಡಿತ್ಯಪ್ರದರ್ಶನ) ಸೀಮಿತಗೊಳ್ಳುವ ಕಾವ್ಯವನ್ನು ರಚಿಸತಕ್ಕದ್ದಲ್ಲ ಎಂಬ ಪೋತನ ಹಾಗೂ ಕುಮಾರವ್ಯಾಸರ ಆಂತರ್ಯ, ಪುಲಿಪಾಡೆ ಗ್ರಾಮದ ದುಷ್ಟನಾಯಕರ ಧೂರ್ತತೆ ಮತ್ತು ದುರಾಚಾರ, ಶ್ರೀನಾಥನ ಕಾವ್ಯಾಭಿಮಾನಿ ವಿನುಕೊಂಡದುರ್ಗಾಧಿಪತಿ ವಲ್ಲಭರಾಯನು ಆತನಲ್ಲಿ ತಳೆದಿದ್ದ ಆರಾಧನೆ-ವಿಮರ್ಶನಗಳ ವಿಲಕ್ಷಣವೈನೋದಿಕರಸಪಾಕ, ಮುಮ್ಮಕವಿಯ ನಡೆ-ನುಡಿಗಳಲ್ಲಿದ್ದ ಹೃದ್ಯಕೌಟಿಲ್ಯ, ಅರುಣಗಿರಿನಾಥನಿಂದ ಈ ಮುನ್ನ ಪರಾಭೂತರಾಗಿದ್ದ ವಾಮನಭಟ್ಟಬಾಣ ಮತ್ತು ವಿಶ್ವೇಶ್ವರದೀಕ್ಷಿತರ ಜೊತೆಗೆ ಶ್ರೀನಾಥನಿಗಿದ್ದ ಸಂಬಂಧ ಹಾಗೂ ಅವರು ಈತನ ವಿಜಯಕ್ಕೆ ನೀಡಿದ ಸಹಕಾರ, ಪರ್ವತಮಲ್ಲ ಹಾಗೂ ಆತನ ಶಿಷ್ಯರ ಬಾಧ್ಯತೆ-ಸಾಧನೆಗಳ ಹಿಂಡಿದ್ದ ಭಾವತುಮುಲ - ಇತ್ಯಾದಿ ಹತ್ತಾರು ಉದಾಹರಣೆಗಳಿಲ್ಲಿ ಸ್ಮರಣೀಯ.
ಒಟ್ಟಿನಲ್ಲಿ ನೋರಿಯವರ ಆರು ಐತಿಹಾಸಿಕಕಾದಂಬರಿಗಳನ್ನು ಓದಲಾದರೂ ಒಬ್ಬನು ತೆಲುಗನ್ನು ಕಲಿತರೆ ಅದು ಆತನ ಪಾಲಿಗೆ ಪರಮಸಾರ್ಥಕಯತ್ನ. ಇವರು ಆಯಾ ಕಾಲಗಳ ಸಾಂಸ್ಕೃತಿಕಸ್ವಾರಸ್ಯಸರ್ವಸ್ವವನ್ನೆಲ್ಲ ಈ ಆರು ಕೃತಿಗಳಲ್ಲಿ ಸಾರವತ್ತಾಗಿ ಹಿಡಿದಿರಿಸಿದ್ದಾರೆ.
ಈಗ ನೋರಿಯವರ ರಚನಾಸ್ವಾರಸ್ಯದ ಲಘುಪರಿಚಯಕ್ಕಾಗಿ ಪ್ರಕೃತಕಾದಂಬರಿಯ ಒಂದು ಸಂದರ್ಭವನ್ನು ವಿಶದವಾಗಿ ಪರಿಶೀಲಿಸೋಣ:
ಈ ಕಾದಂಬರಿಯ ಪ್ರಕಾರ ಕುಮಾರವ್ಯಾಸ-ದುಗ್ಗನ-ಪೋತನರು ಆಗಾಗ ಸಂಧಿಸಿ ಸಾಹಿತ್ಯವನ್ನು ಕುರಿತೂ ತಮ್ಮ ಕವಿತಾರಚನೆಯ ಬಗೆಗೂ ಚರ್ಚಿಸುತ್ತಿದ್ದರು. ಒಮ್ಮೆ ಪೋತನನು ತನ್ನೊಂದು ಪದ್ಯವನ್ನು ಗೆಳೆಯರಿಬ್ಬರೊಡನೆ ಹಂಚಿಕೊಂಡನು. ಅದರ ತಾತ್ಪರ್ಯ ಹೀಗೆ: ಕೆಲವರಿಗೆ ತೆಲುಗು ಪ್ರಿಯ, ಕೆಲವರಿಗೆ ಸಂಸ್ಕೃತ ಪ್ರಿಯ. ತಾನಾದರೋ ತನ್ನ ಕಾವ್ಯದಲ್ಲಿ ಇವೆರರಡನ್ನೂ ಯುಕ್ತವಾಗಿ ಬೆಸೆದು ಆಯಾ ರಸಿಕರನ್ನು ರಂಜಿಸಲೆಳಸುತ್ತೇನೆ (ಈ ಪದ್ಯವು ಪೋತನಭಾಗವತದ ಪೀಠಿಕಾಪ್ರಕರಣದಲ್ಲಿ ಸೇರಿದೆ). ಇದನ್ನು ನಾರಣಪ್ಪನೇನೋ ಮೆಚ್ಚಿಕೊಂಡನಾದರೂ ದುಗ್ಗನನು, “ಸಹಜಪಾಂಡಿತ್ಯಾ! ನಿನ್ನ ಪದ್ಯವು ಅದೆಷ್ಟು ಪೇಲವವಾಗಿದೆಯೆಂಬುದನ್ನು ನೋಡು. ನಮ್ಮ ಭಾವನಾದರೋ, ಇದೇ ಭಾವವನ್ನು ಅದೆಷ್ಟು ಚೆನ್ನಾಗಿ ತನ್ನೊಂದು ಪದ್ಯದಲ್ಲಿ ಹರಳುಗಟ್ಟಿಸಿದ್ದಾನೆ: “ಪ್ರೌಢತ್ವಕ್ಕಾಗಿ ಸಂಸ್ಕೃತಭಾಷೆ ಸೊಗಸೆನ್ನುತ್ತಾರೆ; ನುಡಿಗಟ್ಟಿಗಾಗಿ (Idiom) ತೆಲುಗನ್ನು ಚೆಲುವೆನ್ನುತ್ತಾರೆ. ಯಾರೇನೆಂದರೆ ನನಗೇನು? ನಿಜಕ್ಕೂ ಪರಿಕಿಸಿದರೆ ನನ್ನ ನುಡಿ ಕರ್ಣಾಟಭಾಷೆ” (ಕನ್ನಡವೆಂದೂ ಆದೀತು; ಕೇಳುಗರ ಕಿವಿಗಳಲ್ಲಿ ಜಕ್ಕುಲಿಸುವ ಇಂಪಾದ ವಾಗ್ರೂಢಿಯೆಂದೂ ಅರ್ಥವಾದೀತು. ಇದೇ ಇಲ್ಲಿಯ ಚಮತ್ಕಾರ). ವಿದ್ವತ್ಕವಿಗಳ ಪದ್ಧತಿಯೆಂದರೆ ಇದು. ಇದಲ್ಲವೇ ಸತ್ಕಾವ್ಯಕ್ರಮ!” ಎಂದು ದಬಾಯಿಸಿದನು. ಆಗ ನಾರಣಪ್ಪನು ಈ ವಿಧಾನವೂ ಯುಕ್ತವೆಂದನು. ಕೊನೆಗೆ ಪೋತನನೂ ದುಗ್ಗನನ ನಿಲವನ್ನು ಒಪ್ಪಬೇಕಾಯಿತು. ಆದರೆ ಅವನ ಮನಸ್ಸು ಮೊದಲು ತುಸು ನೊಂದುಕೊಂಡು ಆ ಬಳಿಕ ವ್ಯಗ್ರವೂ ಆಯಿತು. ಇದನ್ನುಲೆಕ್ಕಿಸದೆ ಮುಂದುವರಿದ ದುಗ್ಗನನು ಡಿಂಡಿಮನ ಮೇಲೆ ತಮ್ಮ ಭಾವನು ಸಾಧಿಸಿದ ವಿದ್ವದ್ವಿಜಯವನ್ನು ಮತ್ತೆ ಮತ್ತೆ ಕೊಂಡಾಡಿದನು. ಆಗ ತುಸು ಕೆರಳಿದ ಪೋತನನು ವಾದಕ್ಕೆ ನಿಂತನು.
ಪೋತನ: “ದುಗ್ಗಾ! ಕವಿತ್ವವೆಂದರೆ ಯುದ್ಧವೆಂದುಕೊಂಡೆಯಾ? ಅಲ್ಲಿ ಸೋಲು-ಗೆಲುವುಗಳೆಂಬುವುಂಟೇ? ಡಿಂಡಿಮನು ಯಾವ ಮಹಾಕವಿ? ಆತನೊಬ್ಬ ಅಶ್ಲೀಲಪ್ರಹಸನಕರ್ತ[2]. ಇನ್ನು ನಿನ್ನ ಭಾವನಿಗೆ ವಿಜಯವನ್ನಿತ್ತ ಕೃತಿ ಕೇವಲ ಸ್ತುತಿಕಾವ್ಯ. ಇದು ಕ್ಷುದ್ರಕಾವ್ಯವೆಂದು ನಿನ್ನ ಭಾವನೇ ಒಪ್ಪಿದ್ದಾನಲ್ಲವೆ?”
ನಾರಣಪ್ಪ: “ಹೌದು. ಮಹಾಕಾವ್ಯಗಳನ್ನು ಬರೆದವರೇ ಮಹಾಕವಿಗಳು.”
ದುಗ್ಗನ (ನಿರಾಶೆಯಿಂದ): “ನಮ್ಮ ಭಾವನು ಶತಾವಧಾನವನ್ನು ಮಾಡಿ ಕನಕಾಭಿಷಿಕ್ತನಾಗಿದ್ದಾನೆ. ಯಾರಿಗುಂಟು ಇಂಥ ಗೌರವ?”
ಪೋತನ: “ಮತ್ತೆ ಮತ್ತೆ ಶತಾವಧಾನದ ಮಾತನ್ನೆತ್ತಬೇಡ. ಅದರಲ್ಲಿ ಭಾವನ ಶಾಸ್ತ್ರಪಾಂಡಿತ್ಯ-ಜ್ಞಾಪಕಶಕ್ತಿಗಳು ವಿಜೃಂಭಿಸಿವೆಯೇ ಹೊರತು ಅಪ್ಪಟ ಕವಿತ್ವವೇನೂ ಇಲ್ಲ. ನಾವೀಗ ಚರ್ಚಿಸುತ್ತಿರುವುದು ಶುದ್ಧಕಾವ್ಯದ ಸಂಗತಿ.”
ನಾರಣಪ್ಪ: “ಶತಾವಧಾನದಲ್ಲಿ ಯೋಗಶಾಸ್ತ್ರವನ್ನು ಪ್ರಸ್ತಾವಿಸುವಾಗ ಕವಿಸಾರ್ವಭೌಮರು “ಅಸ್ತೇಯಪ್ರತಿಷ್ಠಾಯಾಂ ಸರ್ವರತ್ನೋಪಸ್ಥಾನಂ ಸಿದ್ಧ್ಯತಿ” ಎಂದದ್ದು ನನಗೆ ತುಂಬ ಸಂತಸ ತಂದಿತು. “ಕಿಂ ನಾಮ ಮಹಾರತ್ನಮ್” ಎಂಬ ಪ್ರಶ್ನೆಗೆ, ಯಾರಿಂದಲೂ ಯಾವುದನ್ನೂ ನಿರೀಕ್ಷೆಮಾಡದಿರುವುದೇ ಮಹಾರತ್ನ ಎನ್ನುತ್ತದೆ ಯೋಗಶಾಸ್ತ್ರ. ಅದನ್ನು ಅಧ್ಯಯನಮಾಡಬೇಕೆಂದಿದ್ದೇನೆ. ಯಾವ ಕೋರಿಕೆಯೂ ಇರದವರಿಗೆ ಎಲ್ಲ ಕೋರಿಕೆಗಳೂ ಸಿದ್ಧಿಸುತ್ತವೆ. ಶ್ರೀನಾಥಭಟ್ಟರು ಎಷ್ಟೆಲ್ಲ ಕಷ್ಟಪಟ್ಟು ಅರುಣಗಿರಿನಾಥನನ್ನು ಸೋಲಿಸಿ ದುಷ್ಕರವಾದ ಶತಾವಧಾನವನ್ನು ಮಾಡಿ, ಪ್ರಭುಗಳನ್ನು ಕೋರಿ ಕನಕಾಭಿಷೇಕ ಮಾಡಿಸಿಕೊಂಡರು. ಆದರೆ ನಮ್ಮ ಪೋತನನಿಗೆ ಕೋರಿಕೆಯೇ ಇಲ್ಲ! ಈತನ ಪದ್ಯವನ್ನು ಭಗವಂತನು ಶ್ರೀನಾಥನ ಬಾಯಿಂದ ಹೇಳಿಸುವುದೇನು! ಈ ಅಮೂಲ್ಯವಾದ ಸ್ಫಟಿಕಮಾಲೆಯ ಸನ್ಮಾನವನ್ನು ಸಾಕ್ಷಾತ್ ದೇವರಾಯಪ್ರಭುಗಳು ಪೋತನನಿಗೆ ಮಾಡುವುದೇನು! ಇದು ನಿಜಕ್ಕೂ ಆಶ್ಚರ್ಯಕರ. ನನ್ನ ದೃಷ್ಟಿಯಲ್ಲಿ ಕನಕಾಭಿಷೇಕಕ್ಕಿಂತ ಇದೇ ಹೆಚ್ಚು ಗೌರವಪ್ರದವೆನಿಸುತ್ತದೆ.
ಪೋತನನು ಲಜ್ಜೆಯಿಂದ ತಲೆತಗ್ಗಿಸಿದನು. ಆಗ ಶ್ರೀನಾಥನ ಬಗೆಗಿನ ಅಭಿಮಾನದಿಂದ ದುಗ್ಗನನು “ಅಷ್ಟು ಜನ ವಿದ್ವಾಂಸರು ಸೇರಿ ನನ್ನ ಭಾವನಿಗೆ ಕವಿಸಾರ್ವಭೌಮನೆಂಬ ಬಿರುದನ್ನು ನೀಡಿ, ಮೂರುಲೋಕಗಳಿಗೂ, ದೇವತೆಗಳಿಗೂ ಅದು ತಿಳಿಯುವಂತೆ ಮಾಡಿದರಲ್ಲ!” ಎಂದು ಬೀಗಿದನು. ಅದಕ್ಕೆ ನಾರಣಪ್ಪನು ನಗುತ್ತಾ “ಅದು ದಿಟವಾಗಿಯೂ ದೊಡ್ಡ ಗೌರವವೇ. ಆದರೆ ಕವಿತ್ವಶಕ್ತಿಗೂ ಈ ಗೌರವಗಳಿಗೂ ಸಂಬಂಧವಿಲ್ಲ. ವ್ಯಾಸ-ವಾಲ್ಮೀಕಿಗಳಿಗೆ ಯಾವ ಬಿರುದಿದೆ? ಇನ್ನೂ ಒಂದು ಗಮನಿಸಿದಿರಾ? ಈ ಎಲ್ಲ ವಿದ್ವಾಂಸರೂ “ಕವಿಸಾರ್ವಭೌಮ”ನೆಂದು ಉದ್ಘೋಷಿಸಿದ ನಿಮ್ಮ ಭಾವನೇ ಪೋತನನಿಗೆ “ಸಹಜಪಾಂಡಿತ್ಯ” ಎಂಬ ಬಿರುದನ್ನು ನೀಡಿ ಗೌರವಿಸಲಿಲ್ಲವೇ! ಇದೇ ಮಹತ್ತಾದುದು.” ಎಂದನು. ಪೋತನನು ಮತ್ತೆ ಸಂಕೋಚಪಟ್ಟುಕೊಂಡನು. ಆಗ ದುಗ್ಗನನು ಗೇಲಿಮಾಡುತ್ತ, “ಆಹಾ! ನಮ್ಮ ಸಹಜಪಾಂಡಿತ್ಯನ ಪದ್ಯವೋ! ಅದರ ಹುರುಳೆಷ್ಟೆಂಬುದನ್ನು ನಾನೀಗ ಬಯಲು ಮಾಡಿದೆನಲ್ಲ! ದಿಟವಾದ ಪಂಡಿತಕವಿಗಳ ರೀತಿಯೇ ಬೇರೆ, ಈ ಸಹಜಪಾಂಡಿತ್ಯರ ರೀತಿಯೇ ಬೇರೆ.”
ಪೋತನ: “ದುಗ್ಗಾ! ಭಾವನು ಮಹಾವಿದ್ವಾಂಸ. ಆದರೆ ಅವನ ಕಾವ್ಯವನ್ನು ಅಷ್ಟೆಲ್ಲ ಕೊಂಡಾಡಬೇಡ.”
ದುಗ್ಗನ (ಕೋಪದಿಂದ ಕೆಂಪಾಗಿ): “ಪೋತಾ! ನಿನಗೂ ನಮ್ಮ ಭಾವನ ಕಾವ್ಯವೆಂದರೆ ಹೊಟ್ಟೆಕಿಚ್ಚು ಬಂತೇನೋ?”
ನಾರಣಪ್ಪನು ಇವರಿಬ್ಬರ ಮಾತನ್ನೂ ವಿನೋದದಿಂದ ಕೇಳುತ್ತಿದ್ದ. ಆಗ ಪೋತನನು ಹೇಳಿದ: “ಅಯ್ಯೋ ತಿಳಿಗೇಡಿ! ಹೊಟ್ಟೆಕಿಚ್ಚೆಂಬುದು ಸಮಾನಧರ್ಮಿಗಳಲ್ಲಿ ಉಂಟಾಗುತ್ತದೆ. ಹುಡುಗನಾದ ನನಗೆಂಥ ಹೊಟ್ಟೆಕಿಚ್ಚು? ನಿಮ್ಮ ಭಾವನ ಕವಿತ್ವದಲ್ಲಿ ಭಾಷಾಪಾಂಡಿತ್ಯ-ಶಾಸ್ತ್ರಪಾಂಡಿತ್ಯವುಳಿದು ಕವಿತ್ವವೆಲ್ಲಿದೆ?”
ದುಗ್ಗನ: “ಭೀಮನನಂತೆ ಪದ್ಯವನ್ನು ರಚಿಸುತ್ತಾನೆ, ನನ್ನಯ್ಯನಂತೆ ಪದಗಳನ್ನು ಗುಂಫಿಸುತ್ತಾನೆ, ತಿಕ್ಕನನಂತೆ ನುಡಿಗಟ್ಟನ್ನು ಹೊಂದಿಸುತ್ತಾನೆ, ಎರ್ರನನಂತೆ ವೃತ್ತವನ್ನು ನಿಬಂಧಿಸುತ್ತಾನೆ, ಇಂಥ ಕವಿಯು ಈ ವರೆಗೆ ತೆಲುಗಿನಲ್ಲಿ ಹುಟ್ಟಲಿಲ್ಲ.” (ಎಂದು ಹೇಳಿ ಶ್ರೀನಾಥನು ತನ್ನ ಶೈಲಿಯ ಬಗೆಗೆ ತಾನೇ ರಚಿಸಿದ ಪದ್ಯಗಳನ್ನು ಹಾಡತೊಡಗಿದ)
ಪೋತನ: “ಅದೇ ನಿಮ್ಮ ಭಾವನ ಲೋಪ. ಅವರಿವರಂತೆ ಪದ್ಯರಚನೆ ಮಾಡುತ್ತಾನೆ. ತನ್ನಂತೆ ಮಾತ್ರ ಮಾಡಲು ಬಲ್ಲವನಲ್ಲ. ಆತನ ವಿದ್ವತ್ತೆ ಅವನ ಕವಿತ್ವವನ್ನು ನುಂಗಿನೊಣೆದಿದೆ.”
ದುಗ್ಗನ: “ಕವಿತ್ವದಲ್ಲಿ ವಿದ್ವತ್ತೆಗಿಂತ ಇನ್ನೇನಿರುತ್ತದೆಯೋ?”
ಪೋತನ: “ನಾರಣಪ್ಪ, ನೀನಾದರೂ ಇವನಿಗೆ ಕವಿತ್ವವೆಂದರೇನೆಂದು ಹೇಳು. ಪಾಂಡಿತ್ಯವೇ ಇಲ್ಲದವರು ಚೆನ್ನಾದ ಕಾವ್ಯವನ್ನು ರಚಿಸುವುದಿಲ್ಲವೇ?”
ನಾರಣಪ್ಪ: “ಸತ್ಯ. ಪಾಂಡಿತ್ಯ-ಲೋಕಾನುಭವಗಳು ಕವಿತ್ವಕ್ಕೆ ಮೆರುಗನ್ನು ನೀಡುತ್ತವೆ. ಅದು ವ್ಯುತ್ಪತ್ತಿ. ಆದರೆ ಕವಿತ್ವಕ್ಕೆ ಮೂಲಕಾರಕವೆಂದರೆ ಪ್ರತಿಭೆ. ಪ್ರತಿಭೆಯು ಜನ್ಮಾಂತರಸಂಕ್ರಾಂತವಾದದ್ದು, ಕವಿಯ ಅಂತರಂಗದಲ್ಲಿ ಹುಟ್ಟುವಂಥದ್ದು, ಕಾವ್ಯದ ಆತ್ಮವೇ ಅದು. ವ್ಯುತ್ಪತ್ತಿಯು ಕೇವಲ ಶರೀರಸೌಷ್ಠವ. ನಮ್ಮ ಭಾವ ಮುಮ್ಮಕವಿ ಅದೆಷ್ಟು ಶಾಸ್ತ್ರಪಾಂಡಿತ್ಯವನ್ನು ಪಡೆದಿಲ್ಲ! ಆದರೆ ಅವನ ಒಂದು ಪದ್ಯವೂ ಚೆನ್ನಿಲ್ಲ.”
ಪೋತನ: “ದುಗ್ಗನಾ! ಕೇಳುತ್ತಿರುವೆಯಾ? ನಾರಣಪ್ಪನ ಮಾತು ಬಂಗಾರದ ಮಾತು. ಇವನು ಕುಮಾರವ್ಯಾಸನೇ ಆಗುತ್ತಾನೆ.”
ದುಗ್ಗನ: “ನನಗೆ ಪ್ರತಿಭಾ-ವ್ಯುತ್ಪತ್ತಿಗಳ ಸಂಗತಿಯೇ ತಿಳಿದಿಲ್ಲವೆಂದು ನಿನ್ನ ಇಂಗಿತವೇ? ಮಮ್ಮಟನು ಕಾವ್ಯಪ್ರಕಾಶಲ್ಲಿ ಹೇಳಿರುವಂತೆ...” (ಆ ವಿಚಾರವನ್ನು ಕುರಿತ ಸೂತ್ರಗಳನ್ನು ಹೇಳಲು ತೊಡಗುತ್ತಾನೆ)
ಪೋತನ: “ಅಬ್ಬಾ! ಈ ಪುಸ್ತಕಗಳ ಮಾತುಗಳನ್ನು ಒಪ್ಪಿಸುವವರ ಕರ್ಮವೇ ಇಷ್ಟು. ತೀರ್ಥವೆಂದರೆ ತೀರ್ಥ, ಪ್ರಸಾದವೆಂದರೆ ಪ್ರಸಾದ!! ಪಂಚಕೋಶಗಳ ಸಂಗತಿಯನ್ನೇನಾದರೂ ತಿಳಿದಿರುವೆಯಾ? ತೈತ್ತಿರೀಯದ ಆನಂದವಲ್ಲಿ-ಭೃಗುವಲ್ಲಿಗಳನ್ನು ತಿಳಿದುಕೊಂಡಿರುವೆಯಾ?”
ದುಗ್ಗನ: “ಅದು ತಿಳಿಯದಿರುವುದು ನನಗೋ? ನಿನಗೋ? ಅದಷ್ಟೂ ನನಗೆ ಬಾಯಿಪಾಠವಾಗಿದೆ. ಅದು ವೇದಾಂತವಿಷಯ. ಅದಕ್ಕೂ ಕವಿತ್ವಕ್ಕೂ ಏತರ ಸಂಬಂಧ?” (ಆನಂದವಲ್ಲಿಯನ್ನು ಹೇಳಲು ಆರಂಭಿಸುತ್ತಾನೆ.)
ಪೋತನ: “ಸಾಕು! ಸಾಕು! ಕೇಳುತ್ತಿರುವೆಯಾ ನಾರಣಪ್ಪಾ! ನಮ್ಮ ದುಗ್ಗನನ ಬುದ್ಧಿವಂತಿಕೆ-ಜಾಣತನಗಳು ಯಾವ ಮಾತ್ರದ್ದೆಂದು?”
ಜನ್ಮತಃ ಕವಿಯಾದ ನಾರಣಪ್ಪನಿಗೆ ಪೋತನನ ಇಂಗಿತವು ಸ್ಪಷ್ಟಾಸ್ಪಷ್ಟವಾಗಿ ತಿಳಿಯಿತು. ಪೋತನನ ವಿವರಣೆಯ ನಿರೀಕ್ಷೆಯಲ್ಲಿ ಉತ್ಕಂಠಿತನಾಗಿದ್ದ. ದುಗ್ಗನನಿಗೆ ಕೋಪಬಂದು ವಿಕಟವಾಗಿ ನಕ್ಕು “ಈ ಉಪನಿಷತ್ತನ್ನು ನಿನ್ನ ಯಾವ ವ್ಯಾಖ್ಯಾನದಿಂದ ಬೆಳಗಿಸುವೆಯೋ ನೋಡೋಣ.” ಎಂದನು. ಆಗ ಪೋತನನು ಸ್ವಪ್ನಾವಸ್ಥೆಯಲ್ಲಿದ್ದವನಂತೆ ಹೇಳಲಾರಂಭಿಸಿದ: ಸಾಹಿತ್ಯವೇತ್ತರು ರೀತಿ, ಗುಣ, ಅಲಂಕಾರ, ದೋಷಗಳೆಂದು ಏನೇನನ್ನೋ ಹೇಳುತ್ತಾರೆ. ನನಗೋ ಅಹರ್ನಿಶಿ ರಸ-ರಸ-ರಸವೆಂಬ ಒಂದೇ ಮಾತು ಅಂತರಂಗದಲ್ಲಿ ಮೊಳಗುತ್ತಿರುತ್ತದೆ. ಕಟುಕರು ಮೇಕೆಯನ್ನು ಕತ್ತರಿಸುವಂತೆ ಆಲಂಕಾರಿಕರು ಈ ರಸವನ್ನೂ ಸ್ಥಾಯಿ-ಸಂಚಾರಿ-ವ್ಯಭಿಚಾರಿಭಾವಗಳೆಂದು ತುಂಡಾಗಿಸಿ ವಿವಾದವನ್ನು ಮಾಡುತ್ತಾರೆ. ಪ್ರಸಿದ್ಧವಾದ ರಾಮಾಯಣ-ಮಹಾಭಾರತಗಳ ವಿಷಯದಲ್ಲಿ ಈ ಬಗೆಯ ತಗಾದೆಗಳಿವೆಯೇ?
ಅಗ ದುಗ್ಗನನು ಅವನ ಮಾತಿಗೆ ಅಡ್ಡಬಂದು “ಸಾಕು ಸಾಕು. ಏನಿದು ಉಪನ್ಯಾಸ! ಇದಕ್ಕೂ ಪಂಚಕೋಶಕ್ಕೂ ಏನು ಸಂಬಂಧ?” ಎಂದು ಪ್ರಶ್ನಿಸಿದನು.
ಪೋತನ: “ಇದೆಯಯ್ಯಾ! ಕೆಲವರ ಕಾವ್ಯವು ಬರಿಯ ಅನ್ನಮಯಕ್ಕೆ ಸೀಮಿತ, ಇದು ಶಬ್ದಶಕ್ತಿ ಮಾತ್ರ. ಕೆಲವರದು ಪ್ರಾಣಮಯಕ್ಕೆ ಸೀಮಿತ, ಇದು ಅರ್ಥಶಕ್ತಿ ಮಾತ್ರ. ಶಬ್ಧಾರ್ಥಗಳನ್ನು ಸಮನ್ವಯಗೊಳಿಸುವ ಸೂಕ್ಷ್ಮಶಕ್ತಿಯೇ “ಮನೋಮಯ”. ನಿನ್ನ ಭಾವನ ಕವಿತ್ವವು ಅನ್ನಮಯ-ಪ್ರಾಣಮಯಗಳನ್ನು ಮೀರಿಹೋಗದು. ಒಂದೊಮ್ಮೆ ಮನೋಮಯವನ್ನು ಮುಟ್ಟಿದರೂ ತತ್ಕ್ಷಣವೇ ನಾಚಿಕೆಯಿಂದಲೋ ಎಂಬಂತೆ ಜಾರಿ ಅನ್ನಮಯಕ್ಕೇ ಹಿಂದಿರುಗುತ್ತದೆ. ಎಲ್ಲೋ ಕೆಲವರಲ್ಲಿ ಮಾತ್ರ ಮನೋಮಯವನ್ನು ದಾಟಿ ವಿಜ್ಞಾನಮಯವನ್ನು ಆಗಾಗ ಮುಟ್ಟುವುದು. ತಿಕ್ಕನಸೋಮಯಾಜಿ-ನನ್ನಯ್ಯರಂಥವರ ರೀತಿ ಇದು. ಆದರೆ ಆನಂದಮಯಕೋಶದಲ್ಲಿ ವಿಹರಿಸುವವರು ಕೇವಲ ವ್ಯಾಸ-ವಾಲ್ಮೀಕಿಯರು.”
ಈ ಪ್ರಕರಣವನ್ನು ನೋಡಿದಾಗ ನಮಗೆ ಆಂಧ್ರದ ಮಹಾಕವಿಗಳ ಜೀವನವನ್ನಾಧರಿಸಿ ನಿರುಪಮವಾದ ಆರು ಐತಿಹಾಸಿಕಕಾದಂಬರಿಗಳನ್ನು ಸುಮಾರು ಮೂರು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ ನಿರ್ಮಿಸಿದ ನೋರಿ ನರಸಿಂಹಶಾಸ್ತ್ರಿಗಳ ಮನೋಧರ್ಮವೆಂಥದ್ದು, ಸಾಹಿತ್ಯೋದ್ದೇಶವಾದರೂ ಏನು ಮತ್ತು ತಮ್ಮದಾದ ಈ ಕಲಾಮಾಧ್ಯಮವನ್ನು ಕುರಿತ ಅವರ ಅವಗಾಹನೆಯಾದರೂ ಯಾವ ಪರಿಯಾದುದೆಂಬ ಕಲ್ಪನೆ ಸಹೃದಯರಾದ ನಮಗೆ ಬಾರದಿರದು. ಅಷ್ಟೇಕೆ, ಸ್ವಯಂ ಲೇಖಕರೇ ತಮ್ಮೊಂದು ಪ್ರಬಂಧದಲ್ಲಿ ಐತಿಹಾಸಿಕಕಾದಂಬರಿಗಳ ರಚನೆ ಮತ್ತು ಸೌಂದರ್ಯಮೀಮಾಂಸೆಗಳನ್ನು ಕುರಿತು ಬೆಲೆಯುಳ್ಳ ಮಾತುಗಳನ್ನಾಡಿದ್ದಾರೆ. ಅವುಗಳ ಪ್ರಕಾರ ಇಂಥ ಸಾಹಿತ್ಯವು ಉದಾತ್ತವಾದ ಇತಿವೃತ್ತವನ್ನು ಒಳಗೊಂಡಿರಬೇಕಲ್ಲದೆ ಸತ್ಯಕ್ಕೆ ನಿಷ್ಠವಾಗಿರಬೇಕು; ಮಾತ್ರವಲ್ಲ ಅಲ್ಲಿ ಚಿತ್ರಿತವಾಗಲಿರುವ ದೇಶ-ಕಾಲ-ವ್ಯಕ್ತಿ-ಸಂಸ್ಕೃತಿ-ಜನಜೀವನಗಳ ವಿಶದಯಥಾರ್ಥಪ್ರತಿಬಿಂಬವೆನಿಸಬೇಕು. ಹಾಗೆಂದಮಾತ್ರಕ್ಕೆ ಪತ್ರಿಕಾವರದಿಯಂತಾಗದೆ ರಸಮಯವೂ ರೋಚಕವೂ ಆದ ಸಂಭಾವ್ಯಘಟನೆಗಳ ಹಾಗೂ ಉದಾತ್ತ-ವೈವಿಧ್ಯಮಯಸಾಧ್ಯತೆಗಳುಳ್ಳ ಪಾತ್ರಗಳ ಮೂಲಕ ಪ್ರತಿಯೊಂದು ಸಂದರ್ಭವೂ ಹೃದ್ಯವೆನಿಸಬೇಕು. ಇದಕ್ಕಾಗಿ ಉಕ್ತಿವೈಚಿತ್ರ್ಯ ಮತ್ತು ವ್ಯುತ್ಪತ್ತಿವೈಭವಗಳು ಪರಮಾವಶ್ಯ. ಹೆಚ್ಚೇನು, ಯಾವುದನ್ನು ನಮ್ಮ ಹಿಂದಿನ ಆಲಂಕಾರಿಕರು ಮಹಾಕಾವ್ಯವೆಂದೂ ಮಹಾಕಥೆ-ಆಖ್ಯಾಯಿಕೆಯೆಂದೂ ಆದರಿಸಿ ಅಭಿವರ್ಣಿಸಿರುವರೋ ಅಂಥ ಸಾಹಿತ್ಯಪ್ರಕಾರಕ್ಕೆ ಸೇರುವ ಹಾಗೆ ಐತಿಹಾಸಿಕಕಾದಂಬರಿಯು ರೂಪುಗೊಳ್ಳಬೇಕು. ಇಂಥ ರಚನೆಗೆ ಮಾನವನ ಮೂಲಭೂತಭಾವ-ಸ್ವಭಾವಗಳ ಆಳ-ಅಗಲಗಳೆಲ್ಲವನ್ನೂ ಬಿಂಬಿಸಬಲ್ಲ ದರ್ಶನವೂ ನಿರ್ಭರಜೀವನಮೌಲ್ಯಗಳ ಧ್ವನಿಪೂರ್ಣಮೀಮಾಂಸೆಯೂ ಸೇರಿದರೆ ಆಗ ಅದು ನಮ್ಮಲ್ಲಿ ಇತಿಹಾಸಕಾವ್ಯಗಳೆಂದೂ ಪಾಶ್ಚಾತ್ಯರಲ್ಲಿ ಪ್ರಾಥಮಿಕ ಮಹಾಕಾವ್ಯಗಳೆಂದೂ ಹೆಸರಾದ ವ್ಯಾಸ, ವಾಲ್ಮೀಕಿ, ಹೋಮರ್ ಕವಿಗಳಂಥವರ ಭೂಮಕೃತಿಗಳ ಹತ್ತಿರಕ್ಕೇ ಬರುವ ವಾಗರ್ಥಕಲಾವಿಲಾಸವಾಗುತ್ತದೆ. ಈ ನಿಟ್ಟಿನಲ್ಲಿ ಶ್ರೀ ನೋರಿ ನರಸಿಂಹಶಾಸ್ತ್ರಿಗಳದು ಮೆಚ್ಚುವಂಥ ಹಿರಿಯ ಹೆಜ್ಜೆಯೆಂದು ಹೇಳಿ ಸದ್ಯದ ಪರಿಚಯಲೇಖನವನ್ನು ಮುಗಿಸಬಹುದು.
[1] “ರವಿಬಿಂಬಂಬುಪಮಿಂಪ ಬಾತ್ರಮಗು ಛಂತ್ರಂಬೈ ಶಿರೋರತ್ನಮೈ ಶ್ರವಣಾಲಂಕೃತಿಯೈ ಗಳಾಭರಣಮೈ ಸೌವರ್ಣಕೇಯೂರಮೈ ಛವಿಮತ್ಕಂಕಣಮೈ ಕಟಿಸ್ಥಲಿನುದಂಚದ್ಘಂಟಯೈ ನೂಪುರಪ್ರವರಂಬೈ ಪದಪೀಠಿಯೈ ವಟುಡು ದಾ ಬ್ರಹ್ಮಾಂಡಮುನ್ ನಿಂಡುಚೋನ್” – ವಾಮನನು ತ್ರಿವಿಕ್ರಮನಾಗಿ ಬೆಳೆದಾಗ, ಆತನ ಕೈಯಲ್ಲಿದ್ದ ಕೊಡೆಯ ಶಿಖರಮಣಿಸ್ತರದಲ್ಲಿದ್ದ ಸೂರ್ಯನು, ಅವನು (ವಾಮನನು) ಬೆಳೆದಂತೆಲ್ಲ ಅದರ ಕಿರೀಟಸ್ತರ, ಕರ್ಣಾಭರಣಸ್ತರ, ಕೊರಳ ಅಡ್ಡಿಕೆಯ ಮಟ್ಟ, ತೋಳ್ಬಂದಿಯ ಮಟ್ಟ, ಕಂಕಣಸ್ತರ, ಸೊಂಟಕ್ಕೆ ಕಟ್ಟಿದ ಗಂಟೆಯ ಮಟ್ಟ, ನೂಪುರಸ್ತರ, ಪಾದಪೀಠಸ್ತರಗಳಿಗೆ ಇಳಿಯುತ್ತ ಬಂದಂತೆ ಕಾಣಿಸಿತು ಎಂಬ ಮನೋಜ್ಞವಾದ ಕಲ್ಪನೆ.
[2] ಸೋಮವಲ್ಲೀಯೋಗಾನಂದ – ವಿರೂಪಾಕ್ಷಸ್ವಾಮಿಯ ವಸಂತೋತ್ಸವದ ಹಿನ್ನೆಲೆಯಲ್ಲಿ ರೂಪಿತವಾದ ತುಸು ಅಶ್ಲೀಲಪ್ರಹಸನ