ಶೂದ್ರಕನು ನಾಯಕ-ನಾಯಿಕೆಯರನ್ನು ನಿರ್ದೇಶಿಸಿದ ಬಳಿಕ ತನ್ನ ರೂಪಕದ ವಸ್ತುವನ್ನು ಅದರ ಎಲ್ಲ ಸಂಕೀರ್ಣತೆಯೊಡನೆ ಸೂಚಿಸಿರುವುದು ಅನ್ಯಾದೃಶ. ಮೃಚ್ಛಕಟಿಕವೊಂದು ಪ್ರಕರಣವಾದ ಕಾರಣ ಇಲ್ಲಿ ವೀರರಸಕ್ಕೆ ಹೆಚ್ಚಿನ ಅವಕಾಶವಿಲ್ಲ. ಅದೇನಿದ್ದರೂ ನಾಟಕದ ದೈವ-ಮಾನುಷಭೂಮಿಕೆಗಳಿಗೆ ಸಹಜವೆನಿಸಬಲ್ಲ ರಸ. ಸಾಮಾನ್ಯರ ಬದುಕಿನಲ್ಲಿ ವೀರಾದ್ಭುತಗಳಿಗಿಂತ ಶೃಂಗಾರ-ಕರುಣ-ಹಾಸ್ಯಗಳೇ ಸಹಜ, ಸಮೃದ್ಧ. ಅದನ್ನೇ “ಸುರತೋತ್ಸವಾಶ್ರಯ” ಎಂಬ ಪದದ ಮೂಲಕ ಶೂದ್ರಕ ಅಭಿವ್ಯಂಜಿಸಿದ್ದಾನೆ. ಸಂಭೋಗಶೃಂಗಾರಕ್ಕೆ ಹಾಸ್ಯವು ಅಂಗವಾದರೆ ವಿಪ್ರಲಂಭಶೃಂಗಾರಕ್ಕೆ ಕರುಣವು ಅಂಗ. ಹೀಗೆ ಈ ಮೂರು ರಸಗಳ ಮೇಲಾಟವಿಲ್ಲಿರುವುದು ಸ್ವಯಂವೇದ್ಯ. ಪ್ರಣಯಿಗಳ ಪ್ರೀತಿಗೆ ಅಡ್ಡಿಯಾಗುವ ಅಂಶಗಳ “ಖಲಸ್ವಭಾವ” ಮತ್ತು “ವ್ಯವಹಾರದುಷ್ಟತೆ”ಗಳಲ್ಲಿ ತೋರುತ್ತವೆ. ಇವೆಲ್ಲ ರೌದ್ರ-ಬೀಭತ್ಸಗಳಿಗೆ ಆಯಕಟ್ಟಾದ ಸ್ಥಾನಗಳು. ಇದು ನಾಯಕ-ನಾಯಿಕೆಯರ ಬದುಕಿನ ಮಟ್ಟಿಗೆ ಬಂದಿದ್ದಲ್ಲಿ ಪ್ರಕರಣದ ಪೂರ್ಣತೆಗೇನೂ ಕೊರತೆಯಾಗುತ್ತಿರಲಿಲ್ಲ. ಆದರೆ ವರ್ತಕ-ಗಣಿಕೆಯರ ಪ್ರಣಯದ ಮುನ್ನಲೆಯನ್ನು ರಾಜಕೀಯ ಮತ್ತು ಸಾಂಸ್ಕೃತಿಕಸ್ಥಿತ್ಯಂತರಗಳ ಹಿನ್ನೆಲೆಯು ಸಿಂಗರಿಸಿರುವ ಕಾರಣ ಮೃಚ್ಛಕಟಿಕಕ್ಕೆ ಜನಪದಸ್ತರದ ವ್ಯಾಪ್ತಿಯೊದಗಿದೆ. ಇದು ವ್ಯಷ್ಟಿಯನ್ನು ಸಮಷ್ಟಿಯ ಮಟ್ಟಕ್ಕೆ ಏರಿಸುವ ಭೂಮಪ್ರಯತ್ನ. ಈ ಕಾರಣದಿಂದಲೇ ಭವಿತವ್ಯತೆಯ ಮಹತ್ತ್ವ ಎಣೆಮೀರಿದ್ದಾಗುತ್ತದೆ. ವ್ಯಕ್ತಿಗಳ ಬದುಕಿನಲ್ಲಿ ಆಗೀಗ ಸುಳಿದುಹೋಗುವ ಆಕಸ್ಮಿಕಗಳು ರಾಷ್ಟ್ರಜೀವನದಲ್ಲಿ ಸುಳಿದರೆ ಏನೆಲ್ಲ ಏರು-ಪೇರುಗಳು ಆಗಬಲ್ಲುವೆಂಬ ಭವ್ಯಸಾಧ್ಯತೆ ಈ ಮೂಲಕ ನಮ್ಮ ಕಣ್ಣೆದುರು ವಿಸ್ತರಿಸಿಕೊಳ್ಳುತ್ತದೆ. ಕಟ್ಟಕಡೆಗೆ ಸಜ್ಜನರ ಪ್ರೀತಿ ಗೆಲ್ಲಬೇಕು, ಒಳ್ಳೆಯ ರಾಷ್ತ್ರದ ಕನಸು ನನಸಾಗಬೇಕೆಂದರೆ ಅದು ಸಾಮಾನ್ಯಸ್ತರದಲ್ಲಿಯೇ ರೂಢಮೂಲವಾಗಿರುವ ನೀತಿಮೌಲ್ಯದಿಂದ ಮಾತ್ರ ಸಾಧ್ಯ. ಇದನ್ನು “ನಯಪ್ರಚಾರ” ಎಂಬ ಮಾತು ಧ್ವನಿಸಿದೆ. ಹೀಗೆ ಕವಿಯು ತ್ರಿವರ್ಗಸಾರವನ್ನೇ ತನ್ನೊಂದು ಪದ್ಯದಲ್ಲಿ ಅಡಗಿಸಿ ಅದರ ಭಾಷ್ಯವೆಂಬಂತೆ ಇಡಿಯ ಪ್ರಕರಣವನ್ನು ಸೃಜಿಸಿದ್ದಾನೆ. ಆದುದರಿಂದಲೇ ಮೃಚ್ಛಕಟಿಕವೊಂದು ಮಹಾರೂಪಕವಾಗಿದೆ; ಮಹಾಕಾವ್ಯಕ್ಕೆ ಸಮವೆನಿಸಿದೆ.
ಇತಿವೃತ್ತವನ್ನು ವ್ಯಾಪಕವಾಗಿ ಪುರುಷಾರ್ಥಚತುಷ್ಟಯಕ್ಕೆ ಸಂವಾದಿಯಾಗುವಂತೆ ರೂಪಿಸಿಕೊಳ್ಳುವುದು ಕವಿಗಳೆಲ್ಲರ ಕರ್ತವ್ಯ. ಹೀಗೆ ಮಾಡುವಾಗ ಭ್ರಾಮಕವಾದ ಆದರ್ಶಕ್ಕೆ ಬಲಿಬಿದ್ದಲ್ಲಿ ಅದು ಖಲಸ್ವಭಾವ ಮತ್ತು ವ್ಯವಹಾರದುಷ್ಟತೆಗಳನ್ನು ಅರ್ಥಪೂರ್ಣವಾಗಿ ಕಾಣಿಸಲು ಅಶಕ್ತವಾಗುತ್ತದೆ. ಇಂತಾದಲ್ಲಿ ಸುರತೋತ್ಸವ, ನಯಪ್ರಚಾರ ಮತ್ತು ಭವಿತವ್ಯತೆಗಳು ಅಗ್ಗವಾಗುತ್ತವೆ; ಮಕ್ಕಳ ಆಟಿಕೆಯಂತೆ ಹಗುರವೆನಿಸುತ್ತವೆ. ವಾಸ್ತವದ ನೆಲದಲ್ಲಿ ಬೇರೂರಿ ಆದರ್ಶದ ಆಗಸದಲ್ಲಿ ಹೂ-ಹಣ್ಣುಗಳನ್ನು ತಳೆಯುವುದೇ ಕಾವ್ಯವೃಕ್ಷದ ಸಾರ್ಥಕ್ಯ. ಇದನ್ನು ಶೂದ್ರಕ ಸಾಧಿಸಿದ್ದಾನೆ. ಆದರೆ ಈ ನಿಟ್ಟಿನಲ್ಲಿ ಪರವರ್ತಿಗಳಾದ ಸಂಸ್ಕೃತಕವಿಗಳೂ ಸೇರಿದಂತೆ ಅನೇಕ ದೇಶಭಾಷಾಕವಿಗಳು ವಿಫಲರಾಗಿರುವುದು ನಿಜಕ್ಕೂ ಶೋಚನೀಯ.
ಕಾಳಿದಾಸ
ಕಾಳಿದಾಸನು ತನ್ನ ಮೂರೂ ನಾಟಕಗಳ ಪ್ರಸ್ತಾವನೆಗಳಲ್ಲಿ ಕವಿ-ಕಾವ್ಯತತ್ತ್ವಗಳನ್ನು ಕುರಿತಂತೆ ಕೆಲವೊಂದು ಒಳನೋಟಗಳನ್ನು ನೀಡಿದ್ದಾನೆ. ಇವನ್ನು ಕ್ರಮವಾಗಿ ಗಮನಿಸೋಣ. ಮೊದಲಿಗೆ “ಮಾಲವಿಕಾಗ್ನಿಮಿತ್ರ”ವನ್ನು ಪರಿಶೀಲಿಸಬಹುದು.
ಯಾವುದೇ ಪ್ರವರ್ಧಮಾನ ಕವಿಗೆ ತನ್ನದೇ ಆದ ರೀತಿಯ ಅಳುಕು-ಆತ್ಮಾಭಿಮಾನಗಳು ಇರುತ್ತವೆ. ಇವು ನಿರಪವಾದವೆಂಬಂತೆ ಸುಪ್ರಸಿದ್ಧಿ-ಅಪ್ರಸಿದ್ಧಿಗಳನ್ನೂ ಪ್ರಾಚೀನತೆ-ನವೀನತೆಗಳನ್ನೂ ಆಶ್ರಯಿಸಿದ ಒಳಸುಳಿಗಳ ಜೊತೆಗೂಡಿರುತ್ತವೆ. ಏಕೆಂದರೆ ಪ್ರತಿಯೊಬ್ಬ ಕವಿಗೂ ಅವನ ಪೂರ್ವಸೂರಿಗಳು ಹೇಗೆ ಮಾರ್ಗದರ್ಶಿಗಳೋ ಹಾಗೆಯೇ ಮಾರ್ಗಕಂಟಕರು ಕೂಡ. ಇದೇ ರೀತಿ ಅವನಿಗೆ ಪರಂಪರೆ ಹೇಗೆ ಸಾಹ್ಯಕಾರಿಯೋ ಹಾಗೆಯೇ ಪ್ರತಿಬಂಧಕ ಕೂಡ. ಭಾರತೀಯಸಾಹಿತ್ಯದ ಮಟ್ಟಿಗೆ ಈ ಎಲ್ಲ ಗೊಂದಲಗಳನ್ನೂ ಕಾಳಿದಾಸ ಹೀಗೆ ಬಗೆಹರಿಸಲು ಯತ್ನಿಸಿದ್ದಾನೆ:
ಪುರಾಣಮಿತ್ಯೇವ ನ ಸಾಧು ಸರ್ವಂ
ನ ಚಾಪಿ ಕಾವ್ಯಂ ನವಮಿತ್ಯವದ್ಯಮ್ |
ಸಂತಃ ಪರೀಕ್ಷ್ಯಾನ್ಯತರದ್ಭಜಂತೇ
ಮೂಢಃ ಪರಪ್ರತ್ಯಯನೇಯಬುದ್ಧಿಃ || (ಮಾಲವಿಕಾಗ್ನಿಮಿತ್ರ, ೧.೨)
ಹಳೆಯದೆಂಬ ಮಾತ್ರಕ್ಕೆ ಎಲ್ಲವೂ ಸೊಗಸಲ್ಲ; ಹೊಸತಾದ ಕವಿತೆಯೆಂಬ ಮಾತ್ರಕ್ಕೆ ಎಲ್ಲವೂ ಹೊಲಸಲ್ಲ. ಸಜ್ಜನರು ವಿವೇಚಿಸಿ ನಿಷ್ಕರ್ಷೆ ಮಾಡಿಕೊಳ್ಳುತ್ತಾರೆ; ಅವಿವೇಕಿಗಳು ಅವಿಚಾರಿತವಾಗಿ ಅನ್ಯರ ಅಭಿಪ್ರಾಯಗಳನ್ನು ಆಶ್ರಯಿಸುತ್ತಾರೆ.
ಇದು ಕಾಳಿದಾಸನೇ ತನಗೆ ನೀಡಿಕೊಳ್ಳುವ ಸಮಾಧಾನ. ಆಗಲೇ ಅವನೆದುರು ಸುಪ್ರಸಿದ್ಧರಾದ ಭಾಸ, ಸೌಮಿಲ್ಲ, ಕವಿಪುತ್ರರಂಥ ಪೂರ್ವಸೂರಿಗಳಿದ್ದರು. ಅವರ ಕಾವ್ಯಗಳ ಮುಂದೆ ವರ್ತಮಾನಕವಿಯಾದ ತನ್ನ ಕೆಲಸಕ್ಕೆ ಯಾವ ಮಾತ್ರದ ಮನ್ನಣೆ ಸಿಕ್ಕೀತೆಂಬ ಸಂದೇಹ ಅವನಿಗಿದ್ದಿತು. ಇದು ಆ ಕಾಲದ ಸಹೃದಯಸಮಾಜದ ಸಂದೇಹವೆಂದೂ ಹೇಳಬಹುದು. ಈ ಬಗೆಯ ಸಂದೇಹವು ಕವಿನಿಷ್ಠವಾಗಿದ್ದಾಗ ಹಿಂಜರಿಕೆಯಾಗಿಯೂ ಸಹೃದಯನಿಷ್ಠವಾಗಿದ್ದಾಗ ಉಪೇಕ್ಷೆಯಾಗಿಯೂ ಪರಿಣಮಿಸಬಹುದು. ಕಾಳಿದಾಸನು ಇವೆರಡನ್ನೂ ಗಮನದಲ್ಲಿರಿಸಿ ಸಾಕಷ್ಟು ದಿಟ್ಟತನದಿಂದಲೇ ಈ ಪದ್ಯವನ್ನು ಬರೆದಂತೆ ತೋರುತ್ತದೆ. ಇಲ್ಲಿ ಅವನ ಆತ್ಮವಿಶ್ವಾಸವಲ್ಲದೆ ರಚನಾತ್ಮಕವಾದ ಪ್ರತಿರೋಧವೂ ಧ್ವನಿಸಿದೆ.
ಈ ಪದ್ಯದ ಹಿಂದೆ-ಮುಂದೆ ಬರುವ ಸೂತ್ರಧಾರ ಮತ್ತು ಪಾರಿಪಾರ್ಶ್ವಿಕರ ಪುಟ್ಟಪುಟ್ಟ ಮಾತುಗಳು ಗಮನಾರ್ಹ. ಪೂರ್ವಸೂರಿಗಳೆದುರು ಕಾಳಿದಾಸನಂಥ ಹೊಸಬ ಹತಪ್ರಭನಾದಾನೆಂಬ ಸಂದೇಹಕ್ಕೆ ಸೂತ್ರಧಾರನು ಇಂಥ ಮಾತುಗಳು “ವಿವೇಕವಿಶ್ರಾಂತ”ವೆಂದು ಪ್ರತಿಕ್ರಿಯೆ ತೋರುತ್ತಾನೆ. ಅನಂತರ ಬರುವ ಪೂರ್ವೋಕ್ತಪದ್ಯಕ್ಕೆ ಪಾರಿಪಾರ್ಶ್ವಿಕನು “ಆರ್ಯಮಿಶ್ರರೇ ಪ್ರಮಾಣ” ಎಂದು ಉಪಸಂಹಾರವನ್ನೀಯುತ್ತಾನೆ. ಕವಿಯು ಸೂತ್ರಧಾರನ ಮೂಲಕ ತನ್ನ ಪರವಾದ ವಕಾಲತ್ತನ್ನು ಎಷ್ಟೇ ಮಾಡಿಸಿದರೂ ಪಾರಿಪಾರ್ಶ್ವಿಕನ ಮೂಲಕ ವಿದ್ವತ್ಸಹೃದಯರ ನಿರ್ಣಯವೇ ಕೊನೆಯದೆಂಬ ನಿರ್ಮಮವಾದ ನಿಲವಿಗೆ ಬರುತ್ತಾನೆ. ಇಂಥ ನಿಶ್ಚಯವನ್ನು ಕವಿಯು ತನ್ನ ಕಾವ್ಯಜೀವನದ ಮೊದಲಿನಲ್ಲಿಯೇ ಮುಟ್ಟುವುದು ತುಂಬ ಮಹತ್ತ್ವದ ಸಂಗತಿ. ಈ ಕಾರಣದಿಂದಲೇ ಕಾಳಿದಾಸನ ಮಾತುಗಳು ಪ್ರಾಮಾಣಿಕವಾದ ಆತ್ಮವಿಶ್ವಾಸ ಮತ್ತು ಸಾರ್ವತ್ರಿಕವಾದ ವಿವೇಕಗಳಿಗೆ ನಿದರ್ಶನಗಳಾಗುವುವಲ್ಲದೆ ಪರಂಪರೆ ಮತ್ತು ಪೂರ್ವಸೂರಿಗಳನ್ನು ಅಂಧವಾಗಿ ವಿರೋಧಿಸುವ ಅಧಟಾಗಿಯೋ ಆ ಎಲ್ಲ ಋಣವನ್ನು ವಿಸ್ಮರಿಸುವ ಕೃತಘ್ನತೆಯಾಗಿಯೋ ತೋರುವುದಿಲ್ಲ. ಕವಿಗೆ ಬೇಕಾದದ್ದು ಇಂಥ ಹದ. ಹೀಗಿಲ್ಲವಾದಲ್ಲಿ ಕಾಳಿದಾಸ ವ್ಯಾಸ-ವಾಲ್ಮೀಕಿಗಳ ಕಾವ್ಯಸ್ವರೂಪಕ್ಕೆ ಬದ್ಧವಾಗಿಯೂ ತನ್ನದೇ ಆದ ಕಾವ್ಯರೂಪವನ್ನು ಸಿದ್ಧಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
ದುರ್ದೈವವೆಂದರೆ, ನಮ್ಮ ಆಲಂಕಾರಿಕರು ಇಂಥ ಸೂಕ್ಷ್ಮಾಂಶಗಳತ್ತ ಹೆಚ್ಚಾಗಿ ಗಮನ ಹರಿಸಿಲ್ಲ. ಪ್ರಾಯಶಃ ಆನಂದವರ್ಧನನು ಧ್ವನ್ಯಾಲೋಕದ ನಾಲ್ಕನೆಯ ಉದ್ದ್ಯೋತದಲ್ಲಿ ಈ ಕೆಲವು ಸಂಗತಿಗಳನ್ನು ಪರ್ಯಾಯವಾಗಿ ಆದರೂ ಪರಾಮರ್ಶಿಸಿರುವುದನ್ನು ಬಿಟ್ಟರೆ[1] ಕ್ಷೇಮೇಂದ್ರ, ರಾಜಶೇಖರ ಮುಂತಾದವರು “ಹರಣ”ವೆಂಬ ವಿಭಾಗದಲ್ಲಿ ಬಿಡಿಗವಿತೆಗಳ ಮಟ್ಟಿಗೆ ಮೇಲುಮೇಲಿನ ಚರ್ಚೆಯನ್ನು ಮಾತ್ರ ನಡಸಿರುವುದು ದೃಷ್ಟಚರ. ಇಂಥ ಚರ್ಚೆಗಳು ಪಾಶ್ಚಾತ್ತ್ಯಸಾಹಿತ್ಯಮೀಮಾಂಸೆಯಲ್ಲಿ ಎರಡು-ಮೂರು ಶತಾಬ್ದಗಳಿಂದೀಚೆಗೆ ತುಂಬ ವ್ಯಾಪಕವಾಗಿ ಬೆಳೆದಿವೆ. ಆದರೆ ಅಲ್ಲಿಯ ಪ್ರಧಾನಧೋರಣೆ ಪರಂಪರೆಯನ್ನು ಪ್ರಶ್ನಿಸುವ ಮತ್ತು ನಿರಾಕರಿಸುವ ನಿಟ್ಟಿನಲ್ಲಿದೆ. ವರ್ತಮಾನಲೇಖಕನ ಬಾಧ್ಯತೆ-ಋಣಪ್ರಜ್ಞೆಗಳು ಈಚೆಗೆ ಮಸಕಾದಂತೆ ತೋರುತ್ತದೆ. ಇಂಥ ವಿಷಮಪರಿಸ್ಥಿತಿಯಲ್ಲಿ ಕಾಳಿದಾಸನ ತೀರ್ಮಾನ ಮಿಗಿಲಾಗಿ ಮನನೀಯವೆಂಬುದರಲ್ಲಿ ಸಂಶಯವಿಲ್ಲ.
ಕಾಳಿದಾಸನು ಗಣದಾಸನ ಮಾತುಗಳಲ್ಲಿ ನಾಟ್ಯ, ವಿದ್ಯೆ, ಪಾಠಕ್ರಮಗಳಂಥ ವಿಷಯಗಳನ್ನು ಕುರಿತು ಬೆಲೆಯುಳ್ಳ ಮಾತುಗಳನ್ನು ಆಡಿಸಿದ್ದಾನೆ. ಇವು ಕಾವ್ಯಮೀಮಾಂಸೆಗೂ ಸಲ್ಲುವ ಗಮಕಗಳನ್ನು ಹೊಂದಿವೆ. ಇಂಥ ಕೆಲವು ಚಿಂತನಶಕಲಗಳನ್ನು ಪರಿಶೀಲಿಸಬಹುದು. ಮೊದಲಿಗೆ ಸುಪ್ರಸಿದ್ಧವಾದ ನಾಟ್ಯಪ್ರಶಸ್ತಿಯ ಪದ್ಯವನ್ನು ಗಮನಿಸಿದರೆ, ಇದರ ಪೂರ್ವಾರ್ಧವು ಅರ್ಥವಾದವೆಂಬಂತೆ ಪೌರಾಣಿಕವಾಗಿ ತೋರಿದರೂ ಉತ್ತರಾರ್ಧದಲ್ಲಿ ದೃಶ್ಯಕಾವ್ಯಕ್ಕೆ ನೇರವಾಗಿಯೂ ಶ್ರವ್ಯಕಾವ್ಯಕ್ಕೆ ಪರ್ಯಾಯವಾಗಿಯೂ ಸಂಬಂಧಿಸಿದ ಹಲವು ಒಳನೋಟಗಳಿವೆ:
ತ್ರೈಗುಣ್ಯೋದ್ಭವಮತ್ರ ಲೋಕಚರಿತಂ ನಾನಾರಸಂ ದೃಶ್ಯತೇ
ನಾಟ್ಯಂ ಭಿನ್ನರುಚೇರ್ಜನಸ್ಯ ಬಹುಧಾಪ್ಯೇಕಂ ಸಮಾರಾಧನಮ್ || (ಮಾಲವಿಕಾಗ್ನಿಮಿತ್ರ, ೧.೪)
ದೃಶ್ಯಕಾವ್ಯದಲ್ಲಿ ಸತ್ತ್ವ-ರಜಸ್ಸು-ತಮಸ್ಸುಗಳೆಂಬ ಮೂರು ಗುಣಗಳಿಂದ ಹುಟ್ಟಿದ ಜಗದ್ವರ್ತನೆಯೆಲ್ಲ ನಾನಾರಸಾತ್ಮಕವಾಗಿ ತೋರುತ್ತದೆ. ಹೀಗೆ ರೂಪಕವು ವಿಭಿನ್ನರುಚಿಗಳ ಎಲ್ಲ ಜನರಿಗೂ ತೃಪ್ತಿಯನ್ನು ಕೊಡಬಲ್ಲ ಅನನ್ಯಸಂತರ್ಪಣೆ.
ದೃಶ್ಯಕಾವ್ಯಕ್ಕಿರುವ ನಾಟ್ಯಾಯಮಾನತ್ವ ಎಂಬ ಒಂದು ಮುಖ್ಯಾನುಕೂಲತೆಯನ್ನು ಬದಿಗಿರಿಸಿದಲ್ಲಿ ಈ ಎಲ್ಲ ಮಾತುಗಳೂ ಶ್ರವ್ಯಕಾವ್ಯಕ್ಕೆ ಕೂಡ ಅನ್ವಯಿಸುತ್ತವೆ. ಕಾವ್ಯದಲ್ಲಿರುವುದು ತ್ರಿಗುಣಗಳಿಂದ ಪ್ರೇರಿತವಾದ ಲೋಕಚರಿತೆಯ ನಿರೂಪಣೆ, ಮತ್ತಿದು ಕವಿಯ ಮೂಲಕ ಸಾಗುವ ನಿರೂಪಣೆಯಾದ ಕಾರಣದಿಂದಲೇ ರಸಾವಹ. ಏಕೆಂದರೆ, ಕವಿಯಲ್ಲದವನು ಲೋಕಚರಿತವನ್ನು ನಿರೂಪಿಸಿದರೆ ಅದು ಕಾವ್ಯವಾಗದೆ ಹೋಗಬಹುದು. ಅರ್ಥಾತ್, ಕಾರ್ಯ-ಕಾರಣಬದ್ಧವಾದ ಲೋಕಚರಿತವನ್ನು ವಿಭಾವ-ಅನುಭಾವಬದ್ಧವಾಗಿಸುವುದೇ ಕಾವ್ಯದ ಕೆಲಸ. ಮೂರು ಗುಣಗಳ ವಿಭಿನ್ನಮಿಶ್ರಣಗಳಿಂದ ಹುಟ್ಟುವ ಲೋಕವರ್ತನೆಯು ಸಹಜವಾಗಿಯೇ ಸುಖ-ದುಃಖಾತ್ಮಕ. ವಿಶೇಷತಃ ಮೋಹವನ್ನುಂಟುಮಾಡುವ ತಮಸ್ಸು ಮತ್ತು ದುಃಖವನ್ನುಂಟುಮಾಡುವ ರಜಸ್ಸುಗಳು ಇಲ್ಲದಂತಾಗಿ ಸುಖೈಕಸ್ವರ್ರೂಪದ ಸತ್ತ್ವವೇ ಮೆರೆಯುವುದು ಕಾವ್ಯವೊಂದರ ಸಾಫಲ್ಯಕ್ಕೆ ಒರೆಗಲ್ಲು. ಈ ಕಾರಣದಿಂದಲೇ ರಸವನ್ನು “ಸತ್ತ್ವೋದ್ರೇಕ”ದಿಂದ ಸಿದ್ಧವಾಗುವ ಸ್ಥಿತಿಯೆಂದು ವಿಶ್ವನಾಥನು ಒಕ್ಕಣಿಸಿದ್ದಾನೆ.[2]
ಕಾವ್ಯವು ಲೋಕಚರಿತವನ್ನು ಅವಲಂಬಿಸಬೇಕೆಂಬ ಮಾತು ಎಲ್ಲಕ್ಕಿಂತ ಮುಖ್ಯ. ಅತಿಲೋಕವೆನಿಸುವ ಎಂಥ ಪಾತ್ರ-ಇತಿವೃತ್ತಗಳನ್ನು ಹೊಂದಿದ್ದರೂ ಅದು ಮೂಲತಃ ಲೋಕಚರಿತವನ್ನೇ ಧ್ವನಿಸಬೇಕು. ಅರ್ಥಾತ್, ಮಾನುಷದ ಆರೋಪವಿಲ್ಲದ ಅತಿಮಾನುಷವು ಎಂದಿಗೂ ಆಸ್ವಾದ್ಯವೆನಿಸದು. ಇದು ತಿರ್ಯಕ್ ಪ್ರಪಂಚಕ್ಕೂ ಅನ್ವಯಿಸುತ್ತದೆ. ಇದಕ್ಕೆ ಕಾರಣ ಸ್ಪಷ್ಟವೇ ಆಗಿದೆ: ರಸದ ಉಪಾದಾನಸಾಮಗ್ರಿಯಾದ ಭಾವವು ಕೇವಲ ಮಾನುಷಮೂಲದ್ದು. ಈ ಮಹತ್ತ್ವದ ಅಂಶವನ್ನು ಮುಂದಿನ ಕವಿಗಳು ಮರೆತದ್ದೇ ಸಂಸ್ಕೃತಕಾವ್ಯಪರಂಪರೆಯ ಅವನತಿಗೆ ಕಾರಣ. ಮತೋನ್ಮತ್ತರಾದ ಎಲ್ಲ ಕವಿಗಳೂ ನಿರಪವಾದವೆಂಬಂತೆ ತಮ್ಮ ತಮ್ಮ ಕಾವ್ಯಗಳಲ್ಲಿ ಇಷ್ಟದೇವತೆಗಳನ್ನು ಪಾತ್ರಗಳನ್ನಾಗಿ ಕಲ್ಪಿಸಿ ಕಥೆಯನ್ನು ಬೆಳೆಸುವುದುಂಟು. ಆದರೆ ಅವರಲ್ಲಿ ಮನುಷ್ಯತ್ವದ ಆರೋಪವು ಪರಿಣಾಮಕಾರಿಯಾಗಿ ಸಂದಿರದ ಕಾರಣ ಸಹೃದಯರಿಗೆ ರಸಾಸ್ವಾದವಾಗದು.
ಕಾವ್ಯವು ವಿವಿಧರುಚಿಗಳ ರಸಿಕರಿಗೆಲ್ಲ ಆಪ್ಯಾಯನವೆನಿಸಬೇಕು. ಇಂತಲ್ಲದೆ ಅದಕ್ಕೆ ಹೆಚ್ಚಿನ ಅಂಗೀಕಾರ ಬಾರದು. ಇದು ಸಾಧಿತವಾಗಬೇಕೆಂದರೆ ಕವಿಯು ಬಹುಮುಖವಾದ ಲೋಕಚರಿತವನ್ನು ಚೆನ್ನಾಗಿ ಬಲ್ಲವನಾಗಿರಬೇಕು; ಅದರ ಆಳ-ಅಗಲಗಳನ್ನು ಎಲ್ಲ ಬಗೆಯ ಸೂಕ್ಷ್ಮತೆ-ಸಂಕೀರ್ಣತೆಗಳಿಂದ ಚಿತ್ರಿಸಬೇಕು. ಇದು ಶಕ್ಯವೆನಿಸುವುದು ಜಗತ್ತನ್ನೇ ಪ್ರವರ್ತಿಸುವ ತ್ರಿಗುಣಗಳ ಸ್ವಭಾವದರ್ಶನದಿಂದ. ಈ ರೀತಿ ಕಂಡಾಗ ಕವಿಯು ಕ್ರಾಂತದರ್ಶಿಯಾಗಿ ಇರಬೇಕು ಎಂಬುದರಲ್ಲಿ ಸಂದೇಹವುಳಿಯದು. ಅವನು ಕೇವಲ ತ್ರಿಗುಣಗಳ ಕಾರ್ಯವೆನಿಸಿದ ಜಗತ್ತನ್ನೂ ಅದರ ವರ್ತನೆಯನ್ನೂ ಬಣ್ಣಿಸಿದಲ್ಲಿ ಆತನ ಸೃಷ್ಟಿ ಅಪೂರ್ಣವಾಗುತ್ತದೆ. ಈ ಕಾರ್ಯದ ನೇಪಥ್ಯದಲ್ಲಿರುವ ಕಾರಣಸಾಮಗ್ರಿಯನ್ನು ಬಲ್ಲವನಾಗಿ ಅದರ ಸ್ವರೂಪವನ್ನೂ ಧ್ವನಿಸಬಲ್ಲವನಾದರೆ ಮಾತ್ರ ಅವನ ಕಾವ್ಯ ಪೂರ್ಣತೆಯನ್ನು ಗಳಿಸುತ್ತದೆ. ತ್ರಿಗುಣಾತೀತನಾಗುವುದು ಯೋಗಿಯ ಲಕ್ಷಣವಾದರೆ ತ್ರಿಗುಣಸಾಕ್ಷಿಯಾಗುವುದು ಕವಿಯ ಲಕ್ಷಣ.
[1] ವಾಲ್ಮೀಕಿವ್ಯತಿರಿಕ್ತಸ್ಯ ಯದ್ಯೇಕಸ್ಯಾಪಿ ಕಸ್ಯಚಿತ್ |
ಇಷ್ಯತೇ ಪ್ರತಿಭಾನಂತ್ಯಂ ತತ್ತದಾನಂತ್ಯಮಕ್ಷಯಮ್ || (ಧ್ವನ್ಯಾಲೋಕ, ೪.೭ ವೃತ್ತಿಯಲ್ಲಿಯ ಪರಿಕರಶ್ಲೋಕ)
ವಾಚಸ್ಪತಿಸಹಸ್ರಾಣಾಂ ಸಹಸ್ರೈರಪಿ ಯತ್ನತಃ |
ನಿಬದ್ಧಾಪಿ ಕ್ಷಯಂ ನೈತಿ ಪ್ರಕೃತಿರ್ಜಗತಾಮಿವ || (ಧ್ವನ್ಯಾಲೋಕ, ೪.೧೦)
[2] ಸತ್ತ್ವೋದ್ರೇಕಾದಖಂಡಸ್ವಪ್ರಕಾಶಾನಂದಚಿನ್ಮಯಃ |
ವೇದ್ಯಾಂತರಸ್ಪರ್ಶಸೂನ್ಯೋ ಬ್ರಹ್ಮಾಸ್ವಾದಸಹೋದರಃ || (ಸಾಹಿತ್ಯದರ್ಪಣ, ೩.೨)
To be continued.