ರಾಮನು ತ್ರಿಜಟನೆಂಬ ವಿಪ್ರನಿಗೆ ಗೋದಾನವನ್ನು ಮಾಡಲು ಬಯಸಿ, ಹತ್ತಿರದಲ್ಲಿಯೇ ಮೇಯುತ್ತಿರುವ ಹಸುಗಳ ಮಂದೆಯತ್ತ ಕೈಚಾಚಿ, “ಈ ಮಂದೆಯ ನಡುವೆ ನೀನು ನಿನ್ನ ಕೈಗೋಲನ್ನೆಸೆದರೆ ಅದು ಎಷ್ಟು ದೂರಕ್ಕೆ ಹೋಗಿ ಬೀಳುವುದೋ ಅಷ್ಟರ ಒಳಗೆ ಬರುವ ಹಸುಗಳೆಲ್ಲ ನಿನ್ನವೇ” ಎಂದು ವಿನೋದವಾಗಿ ನುಡಿದಾಗ ಆ ವಿಪ್ರನು ಸರ್ವಶಕ್ತಿಯನ್ನೂ ಬಳಸಿ ತನ್ನ ಕೈಗೋಲನ್ನು ವೇಗವಾಗಿ ಎಸೆಯುತ್ತಾನೆ: ದಂಡಂ ಚಿಕ್ಷೇಪ ಸರ್ವಪ್ರಾಣೇನ ವೇಗಿತಃ (೩೨.೩೮). ಇದು “ಪ್ರಾಣವೇ ಹೋಗುವಷ್ಟು ಬಲದಿಂದ ಎಸೆದ” ಎಂಬ ಲೋಕರೂಢಿಯ ಮಾತಿಗೆ ಸೊಗಸಾದ ಸಂವಾದಿ.
ಕಾಡಿಗೆ ತೆರಳುವ ರಾಮನನ್ನು ಹಿಂಬಾಲಿಸಿದ ಊರಿನ ಜನರು “ನಾವು ಬಿಟ್ಟುಹೋಗುತ್ತಿರುವ ಈ ಊರು ಕಾಡಾಗಲಿ” ಎಂದು ಶಪಿಸುತ್ತಾರೆ: ಅಸ್ಮಾಭಿಶ್ಚ ಪರಿತ್ಯಕ್ತಂ ಪುರಂ ಸಂಪದ್ಯತಾಂ ವನಮ್ (೩೩.೨೨). ಇದು ಜಾನಪದರ ಅಪ್ಪಟಬೈಗುಳನ್ನು ತದ್ವತ್ತಾಗಿ ಪ್ರತಿಫಲಿಸುವ ಮಾತಿನ ವರಸೆ. ಇದೇ ತೆರನಾದದ್ದು ಅವರಾಡುವ ಮತ್ತೊಂದು ಮಾತು: ವಯಂ ತತ್ರ ಗಮಿಷ್ಯಾಮೋ ಯತ್ರ ರಾಮೋ ಗಮಿಷ್ಯತಿ (೩೫.೧೦). “ರಾಮನೆಲ್ಲಿಗೆ ಹೋಗುವನೋ ನಾವೂ ಅಲ್ಲಿಗೆ ಹೋಗುವೆವು” ಎಂದು ಇದರ ಅರ್ಥ. ನೇರವಾದ ಈ ಮಾತಿನಲ್ಲಿರುವುದು ಭಾವತೀವ್ರತೆ ಮತ್ತು ಅದರಿಂದ ಪ್ರೇರಿತವಾದ “ಯತ್ರ”-“ತತ್ರ” ಮತ್ತು “ಗಮಿಷ್ಯತಿ”-“ಗಮಿಷ್ಯಾಮಃ” ಎಂಬ ಸಮಾನಶ್ರುತಿಯ ಶಬ್ದಗಳು. ಇದು ಸಾಕ್ಷಾತ್ತಾಗಿ ಯಾವುದೇ ನುಡಿಗಟ್ಟಿನ ಜಾಡಿನಲ್ಲಿ ಇಲ್ಲದಿದ್ದರೂ ಆಡುನುಡಿಯ ಮೊನಚನ್ನು ಮಾತ್ರ ಅಸಾಧಾರಣವಾಗಿ ಹೊಂದಿದೆ.
ಸುಮಂತ್ರನು ಕೈಕೇಯಿಯನ್ನು ಆಕ್ಷೇಪಿಸುತ್ತ ಅವಳ ತಾಯಿಗೂ ಕೆಟ್ಟ ಹಠವಿದ್ದುದಾಗಿ ನೆನಪಿಸುತ್ತಾನೆ. ಈ ಸಂದರ್ಭದಲ್ಲಿ ಅಸದ್ಗ್ರಾಹಃ (೩೫.೧೬) ಎಂಬ ಶಬ್ದದ ಬಳೆಕೆಯಾಗಿದೆ. ಇದು “ದುರಾಗ್ರಹ”, “ಪೂರ್ವಗ್ರಹ” ಮುಂತಾದ ಪದಗಳಿಗೆ ಸಂವಾದಿ.
ಸೀತೆಯು ನಾಥನಿದ್ದರೂ ಅನಾಥೆಯಂತೆ ನಾರುಮಡಿಯನ್ನುಟ್ಟ ಸನ್ನಿವೇಶವನ್ನು ವರ್ಣಿಸುವಾಗ ಆದಿಕವಿಗಳು ನಾಥವತ್ಯಾಮನಾಥವತ್ (೩೮.೧) ಎಂಬ ವಾಕ್ಯಖಂಡವನ್ನು ಪ್ರಯೋಗಿಸಿದ್ದಾರೆ. ಇದು ತುಂಬ ಹೃದಯಂಗಮವಾದ ಉಕ್ತಿ. ಇದು ಮುಂದೆ ಮಹಾಭಾರತದಲ್ಲಿಯೂ ದ್ರೌಪದಿಯನ್ನು ಅನುಲಕ್ಷಿಸಿ ಪ್ರಯುಕ್ತವಾಗಿರುವುದನ್ನು ನೆನೆಯಬಹುದು. ಉತ್ತರಕಾಲದಲ್ಲಿ ಇದೊಂದು ನಾಣ್ನುಡಿಯಂತೆಯೇ ಬೆಳೆದುಬಂದಿದೆ.
ಶ್ರೀರಾಮನು ವನಕ್ಕೆ ತೆರಳುವಾಗ ತಾಯಿ ಕೌಸಲ್ಯೆಗೆ ಸಮಾಧಾನ ಹೇಳುತ್ತಾನೆ. ಆಗ “ಈ ವನವಾಸವು ಹೆಚ್ಚಿನ ಅವಧಿಯದ್ದೇನೂ ಅಲ್ಲ; ನೀನು ಮಲಗಿ ಏಳುವಷ್ಟರಲ್ಲಿ ಹದಿನಾಲ್ಕು ವರ್ಷಗಳು ಉರುಳಿಹೋಗುತ್ತವೆ” ಎಂದು ನುಡಿಯುವ ಮೂಲಕ ಪರಿಸ್ಥಿತಿಯನ್ನು ಹಗುರಗೊಳಿಸುತ್ತಾನೆ: ಸುಪ್ತಾಯಾಸ್ತೇ ಗಮಿಷ್ಯಂತಿ ನವ ವರ್ಷಾಣಿ ಪಂಚ ಚ (೩೯.೩೫). ಇದು ಅಪ್ಪಟ ಲೋಕರೂಢಿಯ ಮಾತು. ಇಂದಿಗೂ “ಕಣ್ಣು ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ಮುಗಿದುಹೋಗಿರುತ್ತದೆ” ಇತ್ಯಾದಿ ವಾಗ್ವ್ಯವಹಾರಗಳಲ್ಲಿ ಈ ಮಾತಿನ ಸಂವಾದಿಯನ್ನು ಕಾಣಬಹುದು.
ಕಾಡಿಗೆ ಹೊರಟ ರಾಮನನ್ನು ಕಂಡು ಮರುಗಿದ ಊರಿನವರು “ದೇವಶಿಶುವಿನಂಥ ರಾಮ ಕಾಡಿಗೆ ಹೊರಟಾಗ ಕೌಸಲ್ಯೆಯ ಎದೆ ಒಡೆದುಹೋಗದಿದ್ದುದೇ ಅಚ್ಚರಿ” ಎಂದು ಉದ್ಗರಿಸುತ್ತಾರೆ: ಯದ್ದೇವಗರ್ಭಪ್ರತಿಮೇ ವನಂ ಯಾತಿ ನ ಭಿದ್ಯತೇ (೪೦.೨೩). ಇಲ್ಲಿ “ದೇವಗರ್ಭ” ಎಂಬ ವಿಶಿಷ್ಟವಾದ ಶಬ್ದ ಪ್ರಯುಕ್ತವಾಗಿದೆ. ಇದಕ್ಕೆ “ದೇವರಂಥ ಮಗು” ಎಂಬ ಅರ್ಥವುಂಟು. ಇಂಥ ಪದಗಳನ್ನು ಮುಂದಿನ ಕವಿಗಳು ಹೆಚ್ಚಾಗಿ ಬಳಸಿಲ್ಲದಿರುವುದು ಸಖೇದಾಶ್ಚರ್ಯ.
ರಾಮನ ವನಗಮನವನ್ನು ಕಂಡ ಪುರಜನರೂ ಅಂತಃಪುರದ ಸ್ತ್ರೀಯರೂ ಮಾಡಿದ ಆರ್ತನಾದವನ್ನು ಆದಿಕವಿಗಳು ಹಲಹಲಾಶಬ್ದಃ (೪೦.೩೭) ಎಂದು ನಿರ್ದೇಶಿಸಿದ್ದಾರೆ. ಇದೊಂದು ಸೊಗಸಾದ ಅನುಕರಣಶಬ್ದ.
ಕಾಡಿಗೆ ತೆರಳಿದ ಮಗನನ್ನು ಮತ್ತೆ ಕಾಣಲಾಗದೆ ಹಳಹಳಿಸಿದ ದಶರಥ “ಆತನು ಹೋದ ಹಾದಿಯಲ್ಲಿ ಹೆಜ್ಜೆಗಳು ಕಾಣುತ್ತಿವೆಯಲ್ಲದೆ ಅವನೇ ಕಾಣದಂತಾದನಲ್ಲ!” ಎಂದು ದುಃಖಿಸುತ್ತಾನೆ: ಪದಾನಿ ಪಥಿ ದೃಶ್ಯಂತೇ ಸ ಮಹಾತ್ಮಾ ನ ದೃಶ್ಯತೇ (೪೨.೧೪). ವಿಭಾವನಾಲಂಕಾರದ ಛಾಯೆಯುಳ್ಳ ಈ ಮಾತು ಮಾರ್ಮಿಕವಾಗಿದೆ.
ರಾಮ ತನ್ನನ್ನು ಹಿಂಬಾಲಿಸಿ ಬರುತ್ತಿದ್ದ ವೃದ್ಧವಿಪ್ರರನ್ನು ಕಂಡು ತುಂಬ ಮರಗುತ್ತಾನೆ. ಅದನ್ನು ಬಣ್ಣಿಸುತ್ತ ಮಹರ್ಷಿಗಳು “ರಾಮನು ಕರುಣೆಯ ಕಣ್ಣುಳ್ಳವನು” ಎಂದು ಹೇಳುತ್ತಾರೆ. ಈ ಸಂದರ್ಭದಲ್ಲಿ ಘೃಣಾಚಕ್ಷುಃ (೪೫.೧೯) ಎಂಬ ಶಬ್ದದ ಬಳಕೆಯಾಗಿದೆ. ರೂಪಕಸದೃಶವಾದ ಈ ಮಾತಿನ ಸ್ವಾರಸ್ಯ ಸ್ವಯಂವೇದ್ಯ.
ಹೀಗೆ ಹಿಂಬಾಲಿಸಿ ಬರುತ್ತಿದ್ದ ಬ್ರಾಹ್ಮಣರ ಹೆಗಲಿನ ಮೇಲೆ ಕಾವಡಿಗಳಲ್ಲಿ ಅವರ ತ್ರೇತಾಗ್ನಿಗಳೂ ಸಾಗಿಬರುತ್ತಿದ್ದುವು. ಅದನ್ನು ಅವರ ಬಾಯಿಂದಲೇ ಆದಿಕವಿಗಳು ಹೀಗೆ ಹೇಳಿಸುತ್ತಾರೆ: ದ್ವಿಜಸ್ಕಂಧಾಧಿರೂಢಾಸ್ತ್ವಾಮಗ್ನಯೋऽಪ್ಯನುಯಾಂತ್ಯಮೀ (೪೫.೨೧). ಈ ಮಾತಿನ ಲಾಕ್ಷಣಿಕಸ್ವಾರಸ್ಯ ಗಮನಾರ್ಹ.
ಇದೇ ಸಂದರ್ಭದಲ್ಲಿ ಅವರು “ತಮ್ಮೊಡನೆಯೇ ತಮ್ಮ ವೇದಗಳೂ ಅಗ್ನಿಗಳೂ ಎದೆಗಂಟಿ ಬರುತ್ತವೆ; ಇನ್ನು ಮಡದಿಯರು ತಮ್ಮ ಶೀಲವನ್ನೇ ರಕ್ಷೆಯಾಗಿರಿಸಿಕೊಂಡು ಮನೆಗಳಲ್ಲಿ ಉಳಿಯುತ್ತಾರೆ” ಎಂದು ಹೇಳುವ ಮೂಲಕ ತಾವು ರಾಮನನ್ನು ಅನುಸರಿಸುವಲ್ಲಿ ಯಾವುದೇ ಕಷ್ಟವಿಲ್ಲವೆಂದು ಸ್ಪಷ್ಟೀಕರಿಸುತ್ತಾರೆ. ಆಗ ದಾರಾಶ್ಚಾರಿತ್ರ್ಯರಕ್ಷಿತಾಃ (೪೫.೨೫) ಎಂಬ ಮಾತು ಬಳಕೆಯಾಗಿದೆ. ಇದೊಂದು ಲೋಕೋಕ್ತಿಯಂತೆಯೇ ಮುಂದೆ ಬೆಳೆದುಬಂದಿದೆ.
ರಾಮ ತನ್ನನ್ನು ಹಿಂಬಾಲಿಸುವ ಪೌರರನ್ನು ಹೀಗೆ ವರ್ಣಿಸುತ್ತಾನೆ: “ಇವರು ತಮ್ಮ ಪ್ರಾಣವನ್ನಾದರೂ ಬಿಟ್ಟಾರು, ಆದರೆ ಹಿಂಬಾಲಿಸಿ ಬರುವ ನಿಶ್ಚಯವನ್ನು ಬಿಡುವುದಿಲ್ಲ!” ಅಪಿ ಪ್ರಾಣಾನಸಿಷ್ಯಂತಿ ನ ತು ತ್ಯಕ್ಷಂತಿ ನಿಶ್ಚಯಮ್ (೪೬.೨೦). ಇದು ಇಂದೂ ಲೋಕದಲ್ಲಿ ವ್ಯಾಪಕವಾಗಿರುವ ವಾಗ್ರೂಢಿ. ಇದಕ್ಕೆ ಆದಿಕವಿಗಳು ಇತ್ತಿರುವ ಸಂಸ್ಕೃತರೂಪ ಮರೆಯಲಾಗದಷ್ಟು ಆಕರ್ಷಕವಾಗಿದೆ.
ರಾಮನ ನಿರ್ಗಮನದ ಬಳಿಕ ಊರಿನ ಮಹಿಳೆಯರು “ಮನೆಹಾಳಿಯಾದ ಆ ಕೈಕೇಯಿ ಯಾರನ್ನು ತಾನೆ ಸುಮ್ಮನೆ ಬಿಡುತ್ತಾಳೆ!” ಎಂದೂ “ಕೈಕೇಯಿ ಇರುವ ರಾಜ್ಯದಲ್ಲಿ ನಾವು ಸೇವಕರಂತೆ ಬದುಕಿರಲು ಸಿದ್ಧರಾಗಿಲ್ಲ“ ಎಂದೂ ಆಕ್ರೋಶಿಸುತ್ತಾರೆ: ಕಂ ಸಾ ಪರಿಹರೇದನ್ಯಂ ಕೈಕೇಯೀ ಕುಲಪಾಂಸನೀ (೪೮.೨೨), ಕೈಕೇಯ್ಯಾ ನ ವಯಂ ರಾಜ್ಯೇ ಭೃತಕಾ ನಿವಸೇಮಹಿ (೪೮.೨೩). ಈ ಮಾತುಗಳಲ್ಲಿ “ಪರಿಹರೇತ್” ಎಂಬ ಕ್ರಿಯಾಪದವನ್ನು, “ಕುಲಪಾಂಸನೀ” ಮತ್ತು “ಭೃತಕಾಃ” ಎಂಬ ನಾಮಪದಗಳನ್ನು ವಿಶಿಷ್ಟವಾದ ರೀತಿಯಲ್ಲಿ ಆದಿಕವಿಗಳು ಬಳಸಿರುವುದು ಗಮನಾರ್ಹ.[1]
ರಾಮನಿಲ್ಲದ ಅಯೋಧ್ಯೆಯಲ್ಲಿ ಯಾರೂ ಒಲೆಯನ್ನುರಿಸಲಿಲ್ಲ, ವೇದವನ್ನು ಪಠಿಸಲಿಲ್ಲ, ಪುರಾಣಕಥೆಗಳನ್ನು ಹೇಳಿಕೊಳ್ಳಲಿಲ್ಲ, ಅಂಗಡಿಗಳನ್ನು ತೆರೆಯಲಿಲ್ಲ ಎಂಬ ಸಂಗತಿಯನ್ನು ಆದಿಕವಿಗಳು ನಷ್ಟಜ್ವಲನಸಂಪಾತಾ, ಪ್ರಶಾಂತಾಧ್ಯಾಯಸಂಕಥಾ, ಪಿಹಿತಾಪಣೋದಯಾ (೪೮.೩೪,೩೭) ಎಂಬ ವಿಶೇಷಣಗಳನ್ನು ಅಯೋಧ್ಯೆಗೆ ಕೊಡುವ ಮೂಲಕ ಅನ್ಯಾದೃಶವಾಗಿ ವರ್ಣಿಸಿದ್ದಾರೆ. ವಿಶೇಷತಃ “ನಷ್ಟಜ್ವಲನಸಂಪಾತಾ” ಎಂಬ ಮಾತು ಸೊಗಸಾದ ನುಡಿಗಟ್ಟು. ಹರತಾಳಕ್ಕೆ ಸಂವಾದಿಯಾಗಿ ಬಳಕೆಯಾಗಿರುವ “ಪಿಹಿತಾಪಣೋದಯಾ” ಎಂಬ ಪದಪುಂಜ ಸ್ವೋಪಜ್ಞವಾಗಿದೆ.
ಗುಹನು ಆತಿಥ್ಯವನ್ನು ನೀಡಲು ಬಂದಾಗ ವನವಾಸವ್ರತದ ಕಾರಣ ಅದನ್ನೊಲ್ಲದ ರಾಮ ಆತನ ಪ್ರೀತಿಗೆ ಹೀಗೆ ಪ್ರತಿಕ್ರಿಯಿಸುತ್ತಾನೆ: ಸರ್ವಂ ತದನುಜಾನಾಮಿ ನ ಹಿ ವರ್ತೇ ಪ್ರತಿಗ್ರಹೇ (೫೦.೪೪). “ನೀನು ತಂದಿತ್ತ ವಸ್ತುಗಳನ್ನೆಲ್ಲ ನಾನು ಸ್ವೀಕರಿಸಿದಂತೆಯೇ ಭಾವಿಸು. ಆದರೆ ನಾನು ಮಾತ್ರ ಇವನ್ನು ಬಳಸಿಕೊಳ್ಳಬಾರದು” ಎಂಬ ತಾತ್ಪರ್ಯವುಳ್ಳ ಈ ವಾಕ್ಯವು ಆದಿಕವಿಗಳ ಆಡುಮಾತಿನ ರೀತಿಗೆ ಅಂದವಾದ ನಿದರ್ಶನ. ಇದೇ ಸಂದರ್ಭದಲ್ಲಿ ರಾಮನು ಕುದುರೆಗಳಿಗೆ ಮೇವು-ನೀರುಗಳನ್ನು ಮಾತ್ರ ಗುಹನಿಂದ ಬೇಡುತ್ತಾನೆ: ಅಶ್ವಾನಾಂ ಖಾದನೇನಾಹಮರ್ಥೀ ನಾನ್ಯೇನ ಕೇನಚಿತ್ (೫೦.೪೫). ಇಲ್ಲಿ “ಖಾದನೇನ ಅರ್ಥೀ” ಎಂದು ತೃತೀಯಾವಿಭಕ್ತಿಯನ್ನು ಕರಣಾರ್ಥದಲ್ಲಿ ಅಲ್ಲದೆ ಕಾರಣಾರ್ಥದಲ್ಲಿ ಬಳಸಿರುವುದೊಂದು ವೈಶಿಷ್ಟ್ಯ. ಇಲ್ಲಿಯೇ ಬರುವ ಮತ್ತೊಂದು ಶ್ಲೋಕದಲ್ಲಿ ಗುಹನು ಕುದುರೆಗಳಿಗೆ ಹುಲ್ಲು-ನೀರುಗಳನ್ನು ಒದಗಿಸಿದ ಸೂಚನೆಯಿದೆ. ಆಗ ಕುಡಿಯುವ ನೀರಿಗೆ ಪ್ರತಿಪಾನಂ (೫೦.೪೭) ಎಂಬ ಅಪೂರ್ವವಾದ ಪದವನ್ನು ಬಳಸಲಾಗಿದೆ. ಮುಂದೆ ರಾಮನು ನೀರನ್ನೇ ಕುಡಿದು ಹೊಟ್ಟೆ ತುಂಬಿಸಿಕೊಂಡನೆಂಬ ಒಕ್ಕಣೆಯಿದೆ: ಜಲಮೇವಾದದೇ ಭೋಜ್ಯಮ್ (೫೦.೪೯). ಸಾಮಾನ್ಯವಾಗಿ ಭುಜ್-ಧಾತುವಿನಿಂದ ಹೊಮ್ಮುವ ಶಬ್ದಗಳು ಊಟದ ಚೌಕಟ್ಟಿನಲ್ಲಿ ಬಳಕೆಯಾದಾಗ ಘನಾಹಾರವನ್ನೇ ನಿರ್ದೇಶಿಸುತ್ತವೆ. ಆದರೆ ಇಲ್ಲಿ ನೀರನ್ನೇ ಆಹಾರವಾಗಿ ಬಳಸಿಕೊಂಡನೆಂಬ ಅರ್ಥವನ್ನು ಹೊರಡಿಸಲು ಪೇಯವನ್ನೂ ಭೋಜ್ಯವನ್ನಾಗಿ ಮಾರ್ಪಡಿಸಲಾಗಿದೆ. ಇದು ರಾಮನ ಅಪರಿಗ್ರಹವ್ರತಕ್ಕೂ ಒಂದು ದಿಕ್ಸೂಚಿ. ಇಂಥವೆಲ್ಲ ಸಂಸ್ಕೃತದ ಸಹಜಸುಂದರವಾದ ವ್ಯಾವಹಾರಿಕತೆಗೆ ನಿದರ್ಶನಗಳು.
ರಾಮನಿಗಾಗಿ ಮರುಗುವ ಲಕ್ಷ್ಮಣನು ಅವನಿಗಾದ ಅನ್ಯಾಯವನ್ನು ಗುಹನಿಗೆ ತಿಳಿಸುತ್ತ “ಭೂಮಿಯು ಬೇಗದಲ್ಲಿಯೇ ವಿಧವೆಯಾಗುವಳು” ಎನ್ನುತ್ತಾನೆ: ವಿಧವಾ ಮೇದಿನೀ ನೂನಮ್ (೫೧.೧೨). ಇದು ಉಪಚಾರವಕ್ರತೆಗೆ ಸೊಗಸಾದ ದೃಷ್ಟಾಂತ. ಇಲ್ಲಿ ರಾಮನಂಥವನು ರಾಜನಾಗದ ರಾಜ್ಯಕ್ಕೆ ಶೋಭೆಯಿಲ್ಲವೆಂಬ ಧ್ವನಿಯೂ ಒಡೆಯನಾಗಿರುವ ದಶರಥನು ಸದ್ಯದಲ್ಲಿಯೇ ಸಾಯುವನೆಂಬ ಸೂಚನೆಯೂ ಅಡಗಿದೆ.
ಆದಿಕವಿಗಳು ಸಾಮಾನ್ಯದ ವಸ್ತು-ಸಂಗತಿಗಳನ್ನೂ ಅಸಾಮಾನ್ಯವಾಗಿ ಪರಿಣಮಿಸುವಂತೆ ಮಾಡಬಲ್ಲ ವಶ್ಯವಾಕ್ಕುಗಳು. ಹೀಗಾಗಿಯೇ ರಾಮನೇ ಮೊದಲಾದವರು ಗುಹನ ಆತಿಥ್ಯದಲ್ಲಿ ಕಳೆದ ರಾತ್ರಿಯನ್ನು ವರ್ಣಿಸುವಾಗ ಗತಾ ಭಗವತೀ ನಿಶಾ (೫೨.೨) ಎನ್ನುತ್ತಾರೆ. ಇಲ್ಲಿ ರಾತ್ರಿಗೆ “ಭಗವತೀ” ಎಂಬ ವಿಶೇಷಣವನ್ನಿತ್ತಿರುವುದು ಅದೆಷ್ಟು ಹೃದಯಂಗಮವೆಂಬುದನ್ನು ವಿವರಿಸಬೇಕಿಲ್ಲ.
ರಾಮನು ತಾನು ತನ್ನ ತಂದೆಗೆಷ್ಟು ವಿನೀತನೆಂದು ಬಣ್ಣಿಸಿಕೊಳ್ಳುವಾಗ ಛಂದಾನುವರ್ತೀ (೫೩.೧೦) ಎಂಬ ಶಬ್ದ ಬಳಕೆಯಾಗಿದೆ. ಇದೊಂದು ಅಂದವಾದ ವಾಗ್ರೂಢಿಯಾಗಿ ಮುಂದೆ ಪರಿಣಮಿಸಿತು. “ಛಂದಾನುವರ್ತೀ” ಎಂದರೆ ಇಚ್ಛೆಯೊಪ್ಪುವಂತೆ ನಡೆದುಕೊಳ್ಳುವವನು.
ಇದೇ ಸಂದರ್ಭದಲ್ಲಿ ರಾಮನು ತನ್ನ ತಾಯಿಗಾಗಿ ಮರುಗುತ್ತ, “ಯಾವ ಹೆಣ್ಣೂ ತನ್ನಂಥ ಮಗನನ್ನು ಹಡೆಯಬಾರದು” ಎಂದು ಹಳಿದುಕೊಳ್ಳುತ್ತಾನೆ: ಮಾ ಸ್ಮ ಸೀಮಂತಿನೀ ಕಾಚಿಜ್ಜನಯೇತ್ ಪುತ್ರಮೀದೃಶಮ್ (೫೩.೨೧). ಈ ಮಾತುಗಳು ನಮ್ಮಲ್ಲಿ ಇಂದಿಗೂ ಬಳಕೆಯಲ್ಲಿರುವ ಹಳಹಳಿಕೆಗಳನ್ನು ಹೋಲುತ್ತವೆ. ಹೀಗೆ ಲಕ್ಷ್ಮಣನೊಡನೆ ದುಃಖಿಸುವ ರಾಮ ಪ್ರತಿಕ್ರಿಯಾಶೂನ್ಯನಾದ ತನಗಿಂತಲೂ ತನ್ನ ತಾಯಿಯ ಸಾಕುಗಿಳಿಯೇ ಹೆಚ್ಚು ಕ್ರಿಯಾಶೀಲವೆಂದು ಬಿಸುಸುಯ್ಯುತ್ತಾನೆ. ಏಕೆಂದರೆ, ಅದಕ್ಕೆ “ಶತ್ರುಗಳನ್ನು ಕಚ್ಚು, ಪರಚು” ಎಂದು ಹೇಳಿಕೊಟ್ಟರೆ ಆ ಮಾತುಗಳನ್ನೇ ಚ-ತು ತಪ್ಪದೆ ಅದು ಪುನರುಚ್ಚರಿಸುತ್ತದೆ. ಆದರೆ ತಾನೀಗ ಇಂಥ ಮರುಕದ ಮಾತನ್ನಾಡಲೂ ಸಮರ್ಥನಾಗಿಲ್ಲ: ಮನ್ಯೇ ಪ್ರೀತಿವಿಶಿಷ್ಟಾ ಸಾ ಮತ್ತೋ ಲಕ್ಷ್ಮಣ ಸಾರಿಕಾ | ಯಸ್ಯಾಸ್ತಚ್ಛ್ರೂಯತೇ ವಾಕ್ಯಂ ಶುಕ ಪಾದಮರೇರ್ದಶ (೫೩.೨೨). ಈ ಶ್ಲೋಕದ ಉತ್ತರಾರ್ಧವು ಮೇಲ್ನೋಟಕ್ಕೆ ಅಸ್ಪಷ್ಟವಾಗಿದ್ದರೂ ಅದರ ತಾತ್ಪರ್ಯದಿಂದ ಅರ್ಥಪೂರ್ಣತೆಯೊದಗಿದೆ. ಇದು ನಿಜಕ್ಕೂ ಆಡುನುಡಿಯ ಅದ್ಭುತಕ್ರಮವೇ ಹೌದು.
ಇತ್ತ ಅಂತಃಪುರದಲ್ಲಿ ರಾಮನಿಗಾಗಿ ಮರುಗುತ್ತಿರುವ ದಶರಥನನ್ನು ಕೌಸಲ್ಯೆ ವ್ಯಂಗ್ಯವಾಗಿ ತಿವಿಯುವ ಪರಿ ಮಾರ್ಮಿಕವಾಗಿದೆ. ಆಕೆ ಹೇಳುತ್ತಾಳೆ, “ಇಲ್ಲಿ ಕೈಕೇಯಿ ಇಲ್ಲದ ಕಾರಣ ನಿಃಸಂಕೋಚವಾಗಿ ಮಾತನಾಡಬಹುದು”: ನೇಹ ತಿಷ್ಠತಿ ಕೈಕೇಯೀ ವಿಸ್ರಬ್ಧಂ ಪ್ರತಿಭಾಷ್ಯತಾಮ್ (೫೨.೨). ಇದು ಅಪ್ಪಟ ಲೋಕರೂಢಿಯ ವಾಗ್ವ್ಯವಹಾರ. ಇಂಥ ಮಾತುಗಳೇ ರಾಮಾಯಣದ ನೈಸರ್ಗಿಕಸ್ವಾರಸ್ಯವನ್ನು ಹೆಚ್ಚಿಸುವುದು.
[1] ಈ ಕಾಂಡದಲ್ಲಿ ಮತ್ತೂ ಹಲವೆಡೆ ಕೈಕೇಯಿಯನ್ನು ಪರಿಪರಿಯಾಗಿ ಹಳಿಯಲಾಗಿದೆ. ಅಂಥ ಒಂದು ಪದ ಪಂಡಿತಮಾನಿನೀ (೭೨.೪೭). ತಾನು ಪ್ರಾಜ್ಞೆಯೆಂದು ಭಾವಿಸಿಕೊಂಡವಳು ಪಂಡಿತಮಾನಿನೀ. ಆದರೆ ವಸ್ತುತಃ ಅವಳು ಪ್ರಾಜ್ಞಳಲ್ಲವೆಂಬುದು ಈ ಶಬ್ದದ ಅರ್ಥ. ಮತ್ತೊಂದು ಸಂದರ್ಭದಲ್ಲಿ ಭರತನು ತನ್ನ ತಾಯನ್ನು ಮಾತೃಗಂಧಿನೀ (೭೯.೧೨) ಎಂದು ನಿಂದಿಸುತ್ತಾನೆ. ಸಾಕ್ಷಾತ್ತಾಗಿ ತಾಯಿಯೆನಿಸದೆ ತಾಯಿಯನ್ನು ಅಲ್ಪಾಂಶದಿಂದ ಹೋಲುವಂಥವಳು—ಅರ್ಥಾತ್ ಕೆಟ್ಟ ತಾಯಿ—ಎಂಬುದು ಈ ಶಬ್ದದ ಅರ್ಥ. ಇದೊಂದು ಮೊನಚಾದ ನುಡಿಗಟ್ಟು. ಲಕ್ಷ್ಮಣನು ಅರಣ್ಯಕಾಂಡದಲ್ಲಿ ಈಕೆಯನ್ನು ಕ್ರೂರದರ್ಶಿನೀ (೧೬.೩೫) ಎಂದು ಹಳಿಯುತ್ತಾನೆ. ಕೈಕೇಯಿಯು ಕೆಟ್ಟ ನಡವಳಿಕೆಯವಳೆಂದು ಇದರ ತಾತ್ಪರ್ಯ. ಇದರ ಶಬ್ದಶಕ್ತಿಯು “ಕೆಟ್ಟದ್ದನ್ನೇ ಕಾಣುವವಳು” ಎಂಬ ಅರ್ಥವನ್ನೂ ಹೊರಡಿಸಬಲ್ಲುದು.
To be continued.