ತಮೃಷಿಂ ಮನುಷ್ಯಲೋಕಪ್ರವೇಶವಿಶ್ರಾಮಶಾಖಿನಂ ವಾಚಾಮ್ |
ಸುರಲೋಕಾದವತಾರಪ್ರಾಂತರಖೇದಚ್ಛಿದಂ ವಂದೇ ||
(ಅನರ್ಘರಾಘವ, ೧.೧೦)
(ಮಾತು ದೂರದ ದೇವಲೋಕದಿಂದ ಜೀವಲೋಕಕ್ಕೆ ನೀರು-ನೆರಳಿಲ್ಲದ ಕಷ್ಟದ ಹಾದಿಯಲ್ಲಿ ಹಾಯ್ದುಬರುವಾಗ ಅದಕ್ಕೆ ನೆಮ್ಮದಿಯ ವಿಶ್ರಾಂತಿವೃಕ್ಷವಾಗಿ ಪರಿಣಮಿಸಿದ ಆದಿಕವಿಗೆ ವಂದನೆಗಳು.)
ರಾಮಾಯಣದ ಸ್ವಾರಸ್ಯಗಳು ನೂರಾರು; ಅವುಗಳಲ್ಲೊಂದು ನುಡಿಬೆಡಗು. ಮಾತಿನ ಈ ಪರಿಯ ಸೊಗಸಾದರೋ ಸಮಷ್ಟಿರೂಪದಲ್ಲಿ ರಸವಾಗಿ, ವ್ಯಷ್ಟಿರೂಪದಲ್ಲಿ ವಕ್ರೋಕ್ತಿಯಾಗಿ ಪರಿಣಮಿಸುತ್ತದೆ. ಇಂಥ ವಕ್ರೋಕ್ತಿಯು ವಾಕ್ಯದ ಸ್ತರದಲ್ಲಿ ಅರ್ಥಾಲಂಕಾರದ ಸೊಬಗನ್ನು ಪಡೆದರೆ, ಪದಗಳ ಮತ್ತು ವಾಕ್ಯಖಂಡಗಳ ಸ್ತರದಲ್ಲಿ ಶಬ್ದಾಲಂಕಾರದ ಹಾಗೂ ನುಡಿಗಟ್ಟುಗಳ ಚೆಲುವನ್ನು ತಳೆಯುತ್ತದೆ. ಶಬ್ದಾಲಂಕಾರಗಳನ್ನು ಬದಿಗಿರಿಸಿದರೆ ಈ ಹಂತದಲ್ಲಿ ನಮಗುಳಿಯುವುದು ನುಡಿಗಾರಿಕೆಯ ಅಂದ. ಇದು ಸಾಭಿಪ್ರಾಯವಿಶೇಷಣವಾಗಿ (ಧ್ವನಿಪೂರ್ಣವಾದ ವಿಶೇಷಣ), ವಾಚೋಯುಕ್ತಿಯಾಗಿ (ನುಡಿಗಟ್ಟು ಅಥವಾ ಇಡಿಯಮ್), ಸಾಮತಿ-ಗಾದೆಮಾತುಗಳಾಗಿ, ನಾಟುನುಡಿಯಾಗಿ ಹತ್ತಾರು ಬಗೆಯಿಂದ ವಿಸ್ತರಿಸಿಕೊಳ್ಳುತ್ತದೆ.
ಇಂಥ ಪ್ರಕಾರದ್ದೆಂದು ನಿರ್ದಿಷ್ಟವಾಗಿ ಹೇಳಲಾಗದ ಹಲವು ಬಗೆಯ ವಾಗ್ವಿಲಾಸ ಇವುಗಳಲ್ಲೆಲ್ಲ ತೋರಿಕೊಳ್ಳುವ ಕಾರಣ ಇಲ್ಲಿ ಕಟ್ಟುನಿಟ್ಟಾದ ವಿಭಾಗಕ್ರಮ ಕಷ್ಟಸಾಧ್ಯ. ಸದ್ಯದ ಈ ನಮ್ಮ ಉಪಕ್ರಮವು ಇಂಥ ವಿಭಾಗಗಳ ಪರಿಷ್ಕಾರಕ್ಕಿಂತ ಆದಿಕವಿಗಳ ಉಕ್ತಿವಿಲಾಸದ ಪರಿಯನ್ನಷ್ಟೇ ಲಕ್ಷಿಸುವುದರಿಂದ ನಾವಿಲ್ಲಿ ನೇರವಾಗಿ ರಾಮಾಯಣದ ಪದ-ವಾಕ್ಯಗಳಿಗಷ್ಟೇ ಸೀಮಿತವಾದ ಅಲಂಕಾರೇತರವಾದ ಚೆಲುವನ್ನು ಗಮನಿಸಬಹುದು. ರುಚಿಕಟ್ಟಾದ ಅಡುಗೆಯನ್ನು ಸುಳಿಬಾಳೆಯೆಲೆಯ ಮೇಲೆ ಬಡಿಸುವುದಷ್ಟೇ ಇಲ್ಲಿಯ ಉದ್ದೇಶವಲ್ಲದೆ ಹತ್ತಾರು ಬಟ್ಟಲುಗಳಲ್ಲಿ ಪ್ರತ್ಯೇಕವಾಗಿ ತುಂಬಿಕೊಡುವುದಲ್ಲ. ಏನಿದ್ದರೂ ಆದ್ಯಂತವಾಗಿ ಕಾಂಡಾನುಸಾರವಾದ ಸಹೃದಯಪರಾಮರ್ಶೆಯನ್ನು ಇಲ್ಲಿ ಕಾಣಬಹುದು.
ಬಾಲಕಾಂಡ
ನಾರದರು ವಾಲ್ಮೀಕಿಮುನಿಗಳಿಗೆ ರಾಮನನ್ನು ಮತ್ತು ರಾಮಕಥೆಯನ್ನು ಪರಿಚಯಿಸುವಾಗ ಶ್ರೀರಾಮನನ್ನು ಕೆಲವು ವಿಶೇಷಣಗಳಿಂದ ವರ್ಣಿಸುತ್ತಾರೆ: ಏಕಪ್ರಿಯದರ್ಶನಃ (೧.೩), ಗೂಢಜತ್ರುಃ (೧.೧೦), ಆರ್ಯಭಾವಪುರಸ್ಕೃತಃ (೧.೩೫). ಇಂಥ ಎಷ್ಟೋ ಪದಪುಂಜಗಳನ್ನು ಮೊಟ್ಟಮೊದಲಿಗೆ ಆದಿಕವಿಗಳು ಕಂಡರಿಸಿರುವುದೇ ಇವುಗಳ ಸ್ವೋಪಜ್ಞತೆಗೆ ಸಾಕ್ಷಿ. ಜೊತೆಗೆ, ಮುಂದಿನ ಎಷ್ಟೋ ಕವಿಗಳು ಇವನ್ನು ಬಳಸಿಕೊಂಡಿರುವುದು ಇಂಥ ಪದಪುಂಜಗಳ ವಿಶಿಷ್ಟತೆಗೆ ನಿದರ್ಶನ. ನೋಡಿದೊಡನೆಯೇ ಸಂತೋಷವನ್ನು ಕೊಡುವ ಏಕೈಕವ್ಯಕ್ತಿಯೇ “ಏಕಪ್ರಿಯದರ್ಶನ”. ರಾಮನ ಸಮಗ್ರವ್ಯಕ್ತಿತ್ವವು ನಮ್ಮ ಮೊದಲ ನೋಟಕ್ಕೇ ಆಕರ್ಷಕವೆನಿಸುವುದನ್ನು ಸೂಚಿಸುವ ವಿಶೇಷಣವಿದು. “ಗೂಢಜತ್ರು” ಎಂಬುದು ಆತನ ದೇಹಭಾಗವೊಂದರ ವೈಶಿಷ್ಟ್ಯವನ್ನು ಪ್ರತ್ಯೇಕವಾಗಿ ಎತ್ತಿಹೇಳುವಂಥ ವಿಶೇಷಣ. ಯಾರ ಎದೆ-ಹೆಗಲುಗಳು ಮಾಂಸಲವಾದ ಕಾರಣ ಭುಜಗಳ ಮೂಳೆಗಳು (collar bone) ಎದ್ದುತೋರುವುದಿಲ್ಲವೋ ಅಂಥವನು “ಗೂಢಜತ್ರು”. ಇದು ಏಕಕಾಲದಲ್ಲಿ ರಾಮನ ವ್ಯಾಯಾಮಪರಿಷ್ಕೃತವಾದ ಕಾಯಪಟುತ್ವವನ್ನೂ ನಯವಾದ ಮೈಯ ಚೆಲುವನ್ನೂ ಸೂಚಿಸುವ ಸುಂದರವಿಶೇಷಣ. ಅನಂತರಕಾಲದಲ್ಲಿ ಇದು ಧೀರಗಂಭೀರವಾದ ಪುರುಷಸೌಂದರ್ಯಕ್ಕೆ ಒಂದು ಲಕ್ಷಣವೇ ಆಯಿತು. “ಆರ್ಯಭಾವಪರಿಷ್ಕೃತಃ” ಎಂಬುದು ರಾಮನ ಅಂತರಂಗದ ವ್ಯಕ್ತಿತ್ವ ಮತ್ತದರಿಂದ ಹೊರಹೊಮ್ಮುವ ಎಲ್ಲ ವರ್ತನೆಗಳಿಗೂ ಸಂಬಂಧಿಸಿದ ವಿಶೇಷಣ. “ಆರ್ಯಭಾವ” ಎಂದರೆ ಉದಾತ್ತವೂ ಸುಸಂಸ್ಕೃತವೂ ಆದ ಸಂವೇದನೆ. ಇಂಥ ಸಂವೇದನೆಯಿಂದ ಪರಿಪಾಕಗೊಂಡ ವ್ಯಕ್ತಿತ್ವ ರಾಮನದೆಂಬುದು ಕವಿಯ ಇಂಗಿತ. ಇಷ್ಟು ದೊಡ್ಡ ಭಾವವನ್ನು ಸ್ವೋಪಜ್ಞವಾದ ಸಮಾಸವೊಂದರಲ್ಲಿ ಅಡಿಗಿಸಿರುವುದು ಕವಿಯ ಕೌಶಲಕ್ಕೆ ಸಾಕ್ಷಿ. ಇದೇ ರೀತಿ ಮುಂದೆ ರಾಮನನ್ನು ಧರ್ಮವೀರ್ಯಃ (೩.೪) ಎನ್ನುವಾಗಲೂ ಅರ್ಥಪುಷ್ಟಿಯುಳ್ಳ ವಿಶೇಷಣವನ್ನು ಕಾಣಬಹುದು. ಧರ್ಮವನ್ನೇ ಪರಾಕ್ರಮವಾಗಿ ಉಳ್ಳವನು “ಧರ್ಮವೀರ್ಯ”.
ಆದಿಕವಿಗಳು ಎರಡನೆಯ ಸರ್ಗದಲ್ಲಿ ಸ್ನಾನಕ್ಕೆ ಹೊರಟಾಗ ಶಿಷ್ಯ ಭರದ್ವಾಜನಿಗೆ ಹೀಗೆ ಹೇಳುತ್ತಾರೆ: ನ್ಯಸ್ಯತಾಂ ಕಲಶಸ್ತಾತ ದೀಯತಾಂ ವಲ್ಕಲಂ ಮಮ (೨.೬). ಇಲ್ಲಿ ಬಳಕೆಯಾಗಿರುವ ಕರ್ಮಣಿರೂಪಗಳು (ನ್ಯಸ್ಯತಾಂ, ದೀಯತಾಂ) ತುಂಬ ಗಮನಾರ್ಹ. “ತಂಬಿಗೆಯನ್ನು ಇಡೋಣವಾಗಲಿ”, “ನಾರುಮಡಿಯನ್ನು ಕೊಡೋಣವಾಗಲಿ” ಎಂಬ ಅರ್ಥವುಳ್ಳ ಈ ವಾಕ್ಯವು ಮಹರ್ಷಿಗಳ ನಯ-ವಿನಯಗಳನ್ನಷ್ಟೇ ಅಲ್ಲ, ಸಂಸ್ಕೃತದ ವಾಗ್ರೂಢಿಯ ಸುಸಂಸ್ಕೃತಿಯನ್ನೂ ಧ್ವನಿಸುತ್ತಿದೆ.
ವಾಲ್ಮೀಕಿಮಹರ್ಷಿಗಳು ಇಡಿಯ ರಾಮಾಯಣಕಥೆಯನ್ನು ಅಂಗೈಯ ನೆಲ್ಲಿಯಂತೆ ಕಂಡರೆಂಬ ಮಾತು ಬರುತ್ತದೆ: ಪಾಣಾವಾಮಲಕಂ ಯಥಾ (೩.೬). ಇದು ಮೇಲ್ನೋಟಕ್ಕೆ ಉಪಮಾಲಂಕಾರವಾದರೂ ಮುಂದೆ ಲೋಕರೂಢಿಯ ನುಡಿಗಟ್ಟಾಗಿಯೇ ಪರಿಣಮಿಸಿರುವುದನ್ನು ನಾವು ಮನಗಾಣಬಹುದು.
ಅಯೋಧ್ಯೆಯು ಸುವ್ಯವಸ್ಥಿತವಾದ ಪೇಟೆಬೀದಿಗಳಿಂದ ಕೂಡಿತ್ತೆಂದು ಹೇಳುವಾಗ ಸುವಿಭಕ್ತಾಂತರಾಪಣಾ (೫.೧೦) ಎಂಬ ಮಾತು ಬಳಕೆಯಾಗಿದೆ. ಇದು ಅಡಕವನ್ನಷ್ಟೇ ಅಲ್ಲ, ಅಂದವನ್ನೂ ಒಳಗೊಂಡ ಪದಪುಂಜ. ಭಾಷೆಯೊಂದಕ್ಕೆ ಬಲವನ್ನೀಯುವ ಈ ಬಗೆಯ ಪ್ರಯೋಗಗಳು ಸದಾ ಸ್ವಾಗತಾರ್ಹ.
ದಶರಥನು ಯಜ್ಞಕ್ಕೆ ತೊಡಗುವಾಗ ತನ್ನ ಪರಿವಾರದವರಿಗೆ “ಅತಿಥಿ-ಅಭ್ಯಾಗತರಾದ ವಿದ್ವಾಂಸರೊಡನೆ ಎಚ್ಚರದ ವ್ಯವಹಾರ ಅವಶ್ಯ; ಏಕೆಂದರೆ ಅವರು ಬ್ರಹ್ಮರಾಕ್ಷಸರಂತೆ ಸದಾ ಹುಳುಕನ್ನೇ ಹುಡುಕುತ್ತಿರುತ್ತಾರೆ” ಎಂದು ಹೇಳುತ್ತಾನೆ: ಛಿದ್ರಂ ಹಿ ಮೃಗಯಂತೇऽತ್ರ ವಿದ್ವಾಂಸೋ ಬ್ರಹ್ಮರಾಕ್ಷಸಾಃ (೧೨.೧೮). ಇಲ್ಲಿ ವಿದ್ವಾಂಸರನ್ನು ಬ್ರಹ್ಮರಾಕ್ಷಸರೆಂದು ಹೆಸರಿಸಿರುವುದು ಅತಿಶಯೋಕ್ತಿಯೋ ಆದರೂ ಅದು ಲಕ್ಷಣಾಮೂಲದ ಧ್ವನಿಯಾಗಿ ಪರಿಣಮಿಸಿ ಕಾಲಾಂತರದಲ್ಲಿ ತನ್ನ ಮೊನಚನ್ನು ಕಳೆದುಕೊಂಡು ರೂಢಿಲಕ್ಷಣೆಯೇ ಆಗಿದೆ. ಆದರೆ ಇಂದಿಗೂ ಅದರ ಆಡುನುಡಿಯ ಬೆಡಗು ಮಾಸದಂತಿದೆ.
ರಾಮನನ್ನು ವರ್ಣಿಸುವಾಗ ಆತ ಕಾಕಪಕ್ಷಧರನೆಂದು ಹೇಳಲಾಗಿದೆ (೧೯.೯). “ಕಾಕಪಕ್ಷ” ಎಂಬುದಕ್ಕೆ ಹದಿಹರೆಯದ ಗಂಡುಮಕ್ಕಳ ಮೇಲ್ಗೆನ್ನೆಯ ಕೂದಲೆಂದು ಅರ್ಥ (side locks). ಈ ಮೂಲಕ ಗಂಡುಮಕ್ಕಳು ಕೈಶೋರವನ್ನು ಕಳೆದುಕೊಂಡು ತಾರುಣ್ಯದತ್ತ ತಿರುಗುತ್ತಿದ್ದಾರೆಂಬುದು ಧ್ವನಿತವಾಗುತ್ತದೆ. ಅನಂತರಕಾಲದಲ್ಲಿ ಯಾವುದೇ ಕವಿಯು ಕುಮಾರರನ್ನು ಬಣ್ಣಿಸುವಾಗ ಈ ಪದವನ್ನು ಬಳಸುವುದು ಅನಿವಾರ್ಯವೆಂಬಷ್ಟರ ಮಟ್ಟಿಗೆ ಇದು ಪ್ರಚುರವಾಯಿತು.
ವಸಿಷ್ಠರ ಎದುರಿಗೆ ತನ್ನೆಲ್ಲ ಕ್ಷಾತ್ತ್ರಪೌರುಷವೂ ವ್ಯರ್ಥವಾದಾಗ ವಿಶ್ವಾಮಿತ್ರ ಮಾಡುವ ಉದ್ಗಾರ ಪ್ರಸಿದ್ಧವಾಗಿದೆ: ಧಿಗ್ಬಲಂ ಕ್ಷತ್ತ್ರಿಯಬಲಂ ಬ್ರಹ್ಮತೇಜೋಬಲಂ ಬಲಮ್ (೫೬.೨೩). “ಕ್ಷತ್ತ್ರಿಯಬಲಕ್ಕೆ ಧಿಕ್ಕಾರವಿರಲಿ. ಬ್ರಹ್ಮತೇಜಸ್ಸಿನ ಬಲವೇ ನಿಜವಾದ ಬಲ!” ಎಂಬುದಿದರ ತಾತ್ಪರ್ಯ. ಈ ಮಾತು ಮುಂದೆ ನಾಣ್ನುಡಿಯೆಂಬಷ್ಟು ವ್ಯಾಪಕವಾದುದಲ್ಲದೆ ಬ್ರಾಹ್ಮ-ಕ್ಷಾತ್ತ್ರಗಳ ನಡುವೆ ಸಂಘರ್ಷ ಬಂದಾಗ ಯಾವುದು ಮಿಗಿಲೆಂದು ಹೇಳುವ ಪ್ರಮಾಣವಾಕ್ಯವೂ ಆಯಿತು.
ಇದೇ ವಿಶ್ವಾಮಿತ್ರಪ್ರಕರಣದಲ್ಲಿ ಆತನ ತಪೋಭಂಗಕ್ಕಾಗಿ ಬಂದ ರಂಭೆಯನ್ನು ಮುನಿಗಳು “ಕಲ್ಲಾಗಿಹೋಗು” ಎಂದು ಶಪಿಸುತ್ತಾರೆ: ಶೈಲೀ ಸ್ಥಾಸ್ಯಸಿ (೬೪.೧೨). ಇಲ್ಲಿ “ಶೈಲೀ”ಶಬ್ದವು “ಶಿಲಾಪ್ರತಿಮೆ” ಎಂಬ ಅರ್ಥದಲ್ಲಿ ಬಳಕೆಯಾಗಿದೆ. ಇದು ಬಹಳ ವಿಶಿಷ್ಟವಾದ ಅಪೂರ್ವಪ್ರಯೋಗ. ಇದನ್ನು ಮುಂದಿನ ಕವಿಗಳು ಹೆಚ್ಚಾಗಿ ಬಳಸಿದಂತೆ ತೋರದು. ಆದರೆ “ಶಿಲೆಗೆ ಸಂಬಂಧಿಸಿದ್ದು” ಎಂಬ ಮೂಲಾರ್ಥವನ್ನುಳ್ಳ ಈ ಸ್ತ್ರೀಲಿಂಗದ ಶಬ್ದವು ವಿಗ್ರಹಕ್ಕೆ ಸಂವಾದಿಯಾಗಿ ಬಳಕೆಯಾದ ಬಗೆ ಸೊಗಸಾಗಿದೆ.
ಅಯೋಧ್ಯಾಕಾಂಡ
ಈ ಕಾಂಡದ ಆರಂಭದಲ್ಲಿಯೇ ರಾಮನನ್ನು ಕುರಿತ ರಮಣೀಯವಿಶೇಷಣಗಳು ಸಾಲುಸಾಲಾಗಿ ಬರುತ್ತವೆ: ಮಧುರಾಭಾಷೀ (ಇಂಪಾಗಿ ಮಾತನಾಡುವವನು), ಪೂರ್ವಭಾಷೀ[1] (ತಾನಾಗಿ ಮಾತಿಗೆ ಮುಂದಾಗುವವನು), ಪ್ರಿಯಂವದಃ (ಇಷ್ಟವಾಗುವಂತೆ ಮಾತನಾಡುವವನು) [೧.೧೩]; ಪ್ರಗ್ರಹವಾನ್ (ಸಂಯಮಿ) [೧.೧೫], ಪುರುಷಸಾರಜ್ಞಃ (ವ್ಯಕ್ತಿಗಳ ಯೋಗ್ಯತೆಯನ್ನು ಬಲ್ಲವನು) [೧.೧೮], ಅಮೋಘಕ್ರೋಧಹರ್ಷಣಃ (ವ್ಯರ್ಥವಾಗದ ಕೋಪ-ಸಂತೋಷಗಳನ್ನು ಉಳ್ಳವನು; ಅಂದರೆ, ರಾಮನ ಸುಮ್ಮಾನವಾಗಲಿ, ದುಮ್ಮಾನವಾಗಲಿ ಪರಿಣಾಮಕಾರಿಯಾಗಿಯೇ ಇರುತ್ತಿತ್ತೆಂದು ತಾತ್ಪರ್ಯ), ತ್ಯಾಗಸಂಗ್ರಹಕಾಲವಿತ್ (ಕೊಡುವ ಮತ್ತು ಕೂಡಿಡುವ ಹೊತ್ತು-ಗೊತ್ತುಗಳನ್ನು ಬಲ್ಲವನು) [೧.೨೩]; ಸ್ವದೋಷಪರದೋಷವಿತ್ (ತನ್ನ ಮತ್ತು ಬೇರೆಯವರ ತಪ್ಪುಗಳನ್ನು ಬಲ್ಲವನು) [೧.೨೪]; ಸಂದೃಷ್ಟವ್ಯಯಕರ್ಮವಿತ್ (ಎಚ್ಚರವಿರಿಸಿ ವೆಚ್ಚ ಮಾಡುತ್ತಿದ್ದವನು) [೧.೨೬]; ಅಭಿಯಾತಾ (ದಂಡೆತ್ತಿ ಹೋಗುವಂಥವನು) [೧.೨೯]; ಕ್ಷಾಂತಃ (ಕ್ಷಮಾಗುಣ ಉಳ್ಳವನು), ಸಾಂತ್ವಯಿತಾ (ಸಾಂತ್ವನ ನೀಡುವವನು), ಶ್ಲಕ್ಷ್ಣಃ (ಮೃದುಸ್ವಭಾವದವನು) [೨.೩೧]. ಇವುಗಳೆಲ್ಲ ಪರವರ್ತಿಸಾಹಿತ್ಯದಲ್ಲಿ ಅಚ್ಚುಕಟ್ಟಾದ ವಿಶೇಷಣಗಳಾಗಿ, ವ್ಯಕ್ತಿಲಕ್ಷಣಗಳನ್ನು ವರ್ಣಿಸುವ ನುಡಿಗಟ್ಟುಗಳಾಗಿ ಬಳಕೆಗೆ ಬಂದಿರುವುದ್ನನು ಗಮನಿಸಬಹುದು. ಹೀಗೆ ಆದಿಕವಿಗಳ ವಿಶೇಷಣಗಳು ಇಡಿಯ ಭಾಷೆಗೇ ಭೂಷಣಗಳಾಗಿ ಬೆಳೆದಿವೆ.
ರಾಮನೊಡನೆ ದಶರಥ ಮಾತನಾಡುತ್ತ ಸಜ್ಜನರ ಸ್ವಭಾವವನ್ನು ವರ್ಣಿಸುವಾಗ ಅವರು ಧರ್ಮನಿತ್ಯರೆಂಬ (೪.೨೭) ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾನೆ. ಧರ್ಮವನ್ನೇ ಸದಾ ಅನುಷ್ಠಿಸುವವರು “ಧರ್ಮನಿತ್ಯ”ರು. ಇದೊಂದು ಸುಂದರವಾದ ಸಮಾಸ. ಇಲ್ಲಿಯ ಅರ್ಥಪುಷ್ಟಿಯೂ ಗಮನಾರ್ಹ.
ಮಂಥರೆಯನ್ನು ಪರಿಚಯಿಸುವಾಗ ಆದಿಕವಿಗಳು ಜ್ಞಾತಿದಾಸೀ ಯತೋಜಾತಾ ಎಂಬ ವಿಶೇಷಣಗಳನ್ನು ಬಳಸುತ್ತಾರೆ (೭.೧). ದಾಯಾದವರ್ಗಕ್ಕೆ ಸೇರಿ ದಾಸ್ಯವೃತ್ತಿಯನ್ನು ಕೈಗೊಂಡವಳು “ಜ್ಞಾತಿದಾಸಿ”. ಯಾವಳ ಹುಟ್ಟು ಎಲ್ಲಾಯಿತು, ಹೇಗಾಯಿತು ಎಂಬ ವಿವರಗಳು ಅಲಭ್ಯವೋ ಅಂಥವಳು “ಯತೋಜಾತಾ” (ಹೇಗೋ ಎಲ್ಲಿಯೋ ಹುಟ್ಟಿದವಳು). ಈ ಮಾತುಗಳಿಂದ ಮಂಥರೆ ಕೈಕೇಯಿಯ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಬಲ್ಲವಳಾಗಿದ್ದಳೆಂದು ಗೊತ್ತಾಗುತ್ತದೆ. ಏಕೆಂದರೆ, ಬಂಧುವರ್ಗದ ನಂಟಿನ ಹಿನ್ನೆಲೆಯುಳ್ಳ ದಾಸಿ ತನ್ನ ಒಡೆಯರಲ್ಲಿ ಸಹಜವಾಗಿಯೇ ಮಿಗಿಲಾದ ಸಲುಗೆಯನ್ನು ಹೊಂದಿರುವಳು.
ಮಂಥರೆಯ ಮಾತು ಕೇಳಿ ಮರುಳಾದ ಕೈಕೇಯಿ ಕಿಶೋರಿಯಂತೆ ಹಳಿತಪ್ಪಿದಳೆಂದು ಒಕ್ಕಣೆಯುಂಟು (೯.೩೭). “ಕಿಶೋರಿ” ಎಂಬ ಶಬ್ದಕ್ಕೆ ಹುಡುಗಿಯೆಂದೂ ಹೆಣ್ಣುಕುದುರೆಯೆಂದೂ ಅರ್ಥಗಳುಂಟು. ಇವು ಕ್ರಮವಾಗಿ ಅಪ್ರಬುದ್ಧತೆ ಮತ್ತು ಚಂಚಲತೆಗಳನ್ನು ಧ್ವನಿಸುತ್ತಿರುವುದು ಗಮನಾರ್ಹ.
ರಾಮನಿಗಾಗಿ ಅಡುಗೆಯವರು ನಾನುತಾನೆಂದು ಮುಂದೆಬಂದು ಅಟ್ಟುಣಿಸುತ್ತಿದ್ದರೆಂದು ರಾಮಾಯಣ ಹೇಳುತ್ತದೆ. ಆಗ ಅಹಂಪೂರ್ವಾಃ ಎಂಬ ಪದ ಬಳಕೆಯಾಗಿದೆ (೧೨.೯೮). ಇದು “ಅಹಮಹಮಿಕಾ”, “ಅಹಂಪೂರ್ವಿಕಾ” ಎಂಬ ಸೊಗಸಾದ ನುಡಿಗಟ್ಟಿನ ಮತ್ತೊಂದು ರೂಪ.
ರಾಮನು ಕಾಡಿಗೆ ಹೋಗಬೇಕೆಂಬ ಕೈಕೇಯಿಯ ಅಪೇಕ್ಷೆಗೆ ತಬ್ಬಿಬ್ಬಾಗಿ ದಿಗ್ಭ್ರಮೆಗೊಂಡ ದಶರಥನು ದುಃಖಿಸುತ್ತ ಅಸಹಾಯಕತೆಯಿಂದ ಗಗನಾಸಕ್ತಲೋಚನನಾದನೆಂದು ಮಹರ್ಷಿಗಳು ತಿಳಿಸುತ್ತಾರೆ (೧೩.೧೭). ಇದು ದಶರಥನ ಹತಾಶಭಾವವನ್ನೂ ಅವನಿಗಿನ್ನು ದೇವರೇ ದಿಕ್ಕೆಂಬ ಅತಂತ್ರಸ್ಥಿತಿಯನ್ನೂ ಧ್ವನಿಸುವ ನುಡಿಗಟ್ಟು.
ರಾಮನ ವ್ಯಕ್ತಿತ್ವವನ್ನು ಕುರಿತು ರಾಮಾಯಣದಲ್ಲಿ ಹಲವೆಡೆ ಬರುವ ವರ್ಣನೆಗಳ ಪೈಕಿ ಒಂದು ರಾಮೋ ದ್ವಿರ್ನಾಭಿಭಾಷತೇ (೧೮.೩೦), “ರಾಮನು ಎರಡು ನುಡಿಯುವುದಿಲ್ಲ”. ಅಂದರೆ, ಅವನು ಮಾತನ್ನು ಮಾರ್ಪಡಿಸುವುದಿಲ್ಲ, ಕೊಟ್ಟ ಮಾತಿಗೆ ತಪ್ಪುವುದಿಲ್ಲವೆಂದು ತಾತ್ಪರ್ಯ. ಇದೊಂದು ನುಡಿಗಟ್ಟಿನ ವ್ಯಾಪ್ತಿಯನ್ನೇ ಪಡೆದುಕೊಂಡಿದೆ.
ರಾಮನು ಕಾಡಿಗೆ ಹೊರಡುವಾಗ ಕೈಕೇಯಿಯನ್ನು ಕುರಿತು ಹೀಗೆನ್ನುತ್ತಾನೆ: ಏವಮಸ್ತು ಗಮಿಷ್ಯಾಮಿ ವನಮ್ (೧೯.೨). ಇಲ್ಲಿ “ಏವಮಸ್ತು” ಎಂಬ ಪದಪುಂಜವು ಲೋಕರೂಢಿಯ ಮಾತಾದ “ಹಾಗೆಯೇ ಆಗಲಿ” ಎಂಬುದಕ್ಕೆ ನೇರವಾದ ಸಂವಾದಿ. ಇದನ್ನು ವಾಕ್ಯದ ಮೊದಲಿಗೆ ತರುವಲ್ಲಿ ವಾಗ್ರೂಢಿಯ ಸೊಗಸಿದೆ.
ಲಕ್ಷ್ಮಣನು ರಾಮನ ವನವಾಸವನ್ನು ಪ್ರತಿಭಟಿಸುತ್ತ ಹತ್ತಾರು ಓಜಸ್ವಿಯಾದ ಮಾತುಗಳನ್ನಾಡುತ್ತಾನೆ. ಅಂಥ ಕೆಲವು ನುಡಿಗಳ ಸ್ವಾರಸ್ಯವನ್ನು ಪರಿಶೀಲಿಸಬಹುದು: ಯಥಾ ಧರ್ಮಮಶೌಂಡೀರಂ ಶೌಂಡೀರ ಕ್ಷತ್ತ್ರಿಯರ್ಷಭ ಕಿಂ ನಾಮ ಕೃಪಣಂ ದೈವಮಶಕ್ತಮಭಿಶಂಸಸಿ (೨೩.೭). “ಮಹಾವೀರನೂ ಕ್ಷತ್ತ್ರಿಯಾಗ್ರಣಿಯೂ ಆದ ನೀನು ಕೈಲಾಗದ, ದಿಕ್ಕಿಲ್ಲದ, ಹೇಡಿಯೂ ಆದ ದೈವವನ್ನು ಯಾವ ಮಹಾಸಂಗತಿಯೆಂದು ಕೊಂಡಾಡುತ್ತಿದ್ದೀಯೆ!” ಎಂಬ ತಾತ್ಪರ್ಯದ ಈ ಮಾತುಗಳ ಓಘ-ಓಜಸ್ಸುಗಳೂ ದೈವವು “ಅಶೌಂಡೀರ”ವೆಂಬ ನುಡಿಯೂ ಹೃದಯಾವರ್ಜಕ. ಆ ಬಳಿಕ ಅವನು ಸ ಹಿ ಧರ್ಮೋ ಮಮ ದ್ವೇಷ್ಯಃ ಪ್ರಸಂಗಾದ್ಯಸ್ಯ ಮುಹ್ಯಸಿ (೨೩.೧೨) ಎನ್ನುತ್ತಾನೆ. “ಯಾವ ಧರ್ಮದ ಕಾರಣ ನೀನು ಮರುಳಾಗಿರುವೆಯೋ ಅದನ್ನು ನಾನು ದ್ವೇಷಿಸುತ್ತೇನೆ” ಎಂಬ ತಾತ್ಪರ್ಯದ ಈ ವಾಕ್ಯ ತನ್ನ ರಚನಾವೈಚಿತ್ರ್ಯದ ಕಾರಣ ಸುಂದರವಾದ ವಾಗ್ರೂಢಿಗೆ ನಿದರ್ಶನವೆನಿಸಿದೆ. ಮತ್ತೆ ಮುಂದುವರಿದ ಲಕ್ಷ್ಮಣ ನ ಶೋಭಾರ್ಥಮಿಮೌ ಬಾಹೂ ನ ಧನುರ್ಭೂಷಣಾಯ ಮೇ ನಾಸಿರಾಬಂಧನಾರ್ಥಾಯ ನ ಶರಾಃ ಸ್ತಂಭಹೇತವಃ (೨೩.೩೧) ಎನ್ನುತ್ತಾನೆ. “ಈ ತೋಳುಗಳು ನನಗೆ ಬರಿಯ ಅಂದಕ್ಕಾಗಿ ಇಲ್ಲ, ಈ ಬಿಲ್ಲು ನನಗೆ ಕೇವಲ ಅಲಂಕಾರವಲ್ಲ, ಈ ಖಡ್ಗ ಸುಮ್ಮನೆ ಸೊಂಟಕ್ಕೆ ಬಿಗಿದು ನಿಲ್ಲುವುದಕ್ಕಲ್ಲ, ಈ ಬಾಣಗಳು ತೆಪ್ಪಗೆ ಕುಳಿತಿರಲಲ್ಲ” ಎಂಬ ತಾತ್ಪರ್ಯವುಳ್ಳ ಲಕ್ಷ್ಮಣನ ಮಾತುಗಳು ಅಪ್ಪಟ ಆಡುನುಡಿಯ ಕಸುವಿನಿಂದ ಕೂಡಿವೆ. ಇದು ಮಹರ್ಷಿಗಳ ಲೋಕಾನುಸಾರಿಯಾದ ವಾಕ್ಕಿನ ಸ್ವಾರಸ್ಯಕ್ಕೆ ಒಂದು ಸಮರ್ಥದೃಷ್ಟಾಂತ.
ಮುನಿದ ಲಕ್ಷ್ಮಣ ಮತ್ತೂ ಮುಂದುವರಿದು “ತಾನು ಗಂಡೆಂದು ಭಾವಿಸಿಕೊಂಡ ಯಾರು ತಾನೇ ಗಂಡರ ಗಂಡನಾದ ನನ್ನನ್ನು ಎದುರಿಸಲು ಸಾಧ್ಯ?” ಎನ್ನುವಾಗ ಪುರುಷಮಾನೀ (೨೩.೩೬) ಎಂಬ ಶಬ್ದದ ಬಳಕೆಯಾಗಿದೆ. “ಮಾನೀ”ಪದವು ಯಾವುದೇ ನಾಮವಾಚಕದ ಬಳಿಕ ಸಮಾಸದಲ್ಲಿ ಬಂದಾಗ ಅದು ನಿರ್ದೇಶಿಸುವ ವ್ಯಕ್ತಿಯಾಗಲಿ, ವಸ್ತುವಾಗಲಿ ಸಾಕ್ಷಾತ್ತಾಗಿ ಆ ವ್ಯಕ್ತಿ-ವಸ್ತುಗಳಲ್ಲ; ಕೇವಲ ಹಾಗೆಂದು ಭ್ರಮಿಸಿಕೊಂಡದ್ದೆಂಬ ತಾತ್ಪರ್ಯವನ್ನು ಹೊಂದಿರುತ್ತದೆ. “ವೀರಮಾನೀ” (ತಾನು ವೀರನೆಂದು ಭಾವಿಸಿಕೊಂಡವನು), “ಪಂಡಿತಮಾನೀ” (ತಾನು ಪಂಡಿತನೆಂದು ಭಾವಿಸಿಕೊಂಡವನು) ಇತ್ಯಾದಿ ಎಷ್ಟೋ ಉದಾಹರಣೆಗಳು ಸಂಸ್ಕೃತದಲ್ಲಿವೆ.
ಕೌಸಲ್ಯೆಯು ರಾಮನನ್ನು ಕಾಡಿಗೆ ಕಳುಹಿಸಿಕೊಡುವಾಗ ಆಗಮಾಸ್ತೇ ಶಿವಾಃ ಸಂತು (೨೫.೨೧) ಎನ್ನುತ್ತಾಳೆ. “ನೀನು ಹೋಗುವ ಹಾದಿ ಹಿತವಾಗಿರಲಿ” ಎಂಬ ತಾತ್ಪರ್ಯವುಳ್ಳ ಈ ಮಾತು ಮುಂದಿನ ಸಾಹಿತ್ಯದಲ್ಲಿ “ಶಿವಶ್ಚ ಪಂಥಾಃ”, “ಶಿವಾಸ್ತೇ ಸಂತು ಪಂಥಾನಃ” ಎಂಬಿವೇ ರೂಪಗಳಿಂದ ಬಳಕೆಯಾಗಿದೆ.
ರಾಮ ತನ್ನನ್ನು ಕಾಡಿಗೆ ಕರೆದೊಯ್ಯುವುದಿಲ್ಲವೆಂದು ತಿಳಿದ ಸೀತೆಯು ಮುನಿದು ಆಕ್ಷೇಪಿಸುವಾಗ ಅವನನ್ನು “ಗಂಡಿನ ರೂಪದಲ್ಲಿರುವ ಹೆಣ್ಣು” ಎಂದು ಹಳಿಯುತ್ತಾಳೆ: ಸ್ತ್ರಿಯಂ ಪುರುಷವಿಗ್ರಹಮ್ (೩೦.೩). ಇದು ಅವಳ ಪ್ರೀತಿಯು ತಳೆದ ಕಠಿನರೂಪವಲ್ಲದೆ ಪತಿನಿಂದೆಯಲ್ಲ. ಆದರೆ ಇಲ್ಲಿಯ ಕಟಕಿ ತನ್ನಂತೆಯೇ ಒಂದು ನುಡಿಗಟ್ಟಾಗಿದೆ.
[1] ಅಯೋಧ್ಯಾಕಾಂಡಲ್ಲಿ ಒಂದೆಡೆ ರಾಮನು ಪೂರ್ವಾಭಿಭಾಷೀ (೨.೪೮.೩೦) ಎಂಬ ವಿಶೇಷಣವಿದೆ. ಇದು “ಪೂರ್ವಭಾಷೀ” ಎಂಬ ತಾತ್ಪರ್ಯವನ್ನೇ ಹೊಂದಿದ್ದರೂ “ಅಭಿ” ಎಂಬ ಉಪಸರ್ಗದ ಕಾರಣ ಮುಖಕ್ಕೆ ಮುಖಕೊಟ್ಟು, ಉದಾರವಾಗಿ, ಚೆನ್ನಾಗಿ ಮಾತನಾಡುವವನೆಂಬ ಹೆಚ್ಚಿನ ಅರ್ಥಗಳನ್ನೂ ಸೂಚಿಸುತ್ತದೆ. ಆದಿಕವಿಗಳು ಇಂಥ ಸಾರ್ಥಕವಿಶೇಷಣಗಳನ್ನು ಅವೆಷ್ಟೋ ಕಡೆ ಬಳಸಿದ್ದಾರೆ. ಅಂಥವಲ್ಲಿ ವೃತ್ತದಂಷ್ಟ್ರಃ (೨.೫೯.೨೮) “ದುಂಡಾದ ಹಲ್ಲುಳ್ಳವನು”, ಸಮವಿಭಕ್ತಾಂಗಃ (೧.೧.೧೧) “ಪ್ರತಿಯೊಂದು ಅವಯವವೂ ಪ್ರಮಾಣಬದ್ಧವಾಗಿ ಇರುವವನು”, ನ್ಯಗ್ರೋಧಪರಿಮಂಡಲಃ (೩.೪೭.೩೪) “ಹೊಕ್ಕುಳಿಂದ ವೃತ್ತವೊಂದನ್ನೆಳೆದರೆ ಅದು ಚಾಚಿದ ಕೈ-ಕಾಲುಗಳ ತುದಿಯನ್ನು ಹಾಯ್ದುಹೋಗುವಂಥ ದೇಹಸೌಷ್ಠವ ಉಳ್ಳವನು” (ದೇಹಸಾಮುದ್ರಿಕಶಾಸ್ತ್ರದ ಈ ಸ್ವಾರಸ್ಯವನ್ನು ಲಿಯನಾರ್ಡೋ ಡ ವಿಂಚಿಯ “ವಿಟ್ರೂವಿಯನ್ ಮ್ಯಾನ್” ಎಂಬ ಚಿತ್ರಣದಲ್ಲಿಯೂ ಗಮನಿಸಬಹುದು). ಹೀಗೆಯೇ ರಾಮನನ್ನು ಅಕ್ಲಿಷ್ಟಕರ್ಮಾ (೩.೩೯.೨೪) ಎಂದು ವರ್ಣಿಸಲಾಗಿದೆ. ಕಷ್ಟವನ್ನು ತೋರಿಸಿಕೊಳ್ಳದೆ ಕೆಲಸ ಮಾಡುವವನೇ ಅಕ್ಲಿಷ್ಟಕರ್ಮ. ಅಂತೆಯೇ ಹನೂಮಂತ ಶ್ರೀರಾಮನನ್ನು ವರ್ಣಿಸುವಾಗ, ಅವನು ಸ್ಥಾನಕ್ರೋಧಃ (೫.೩೪.೩೧) ಎಂದು ಹೇಳುತ್ತಾನೆ. ಈ ಮಾತಿಗೆ “ಸರಿಯಾದ ಸಂದರ್ಭದಲ್ಲಿ ಮಾತ್ರ ಮುನಿಯುವಂಥವನು” ಎಂದೂ “ಸಕಾರಣವಾಗಿ ಮುನಿಯುವಂಥವನು” ಎಂದೂ ಅರ್ಥಗಳುಂಟು.
To be continued.