ಕುಸುಮ ಕೋಮಲೆಯೆನಿಸಿದ್ದ ದ್ರೌಪದಿ, ಸೋದರರ ಬಗೆಗೆ ಅಮಿತ ಪ್ರೇಮವುಳ್ಳ, ಭೀಮ ಹಿಂದೆ ತಮಗಾದ ಒಂದೊಂದು ಅನ್ಯಾಯವನ್ನೂ, ಅಪಮಾನವನ್ನೂ ನೆನೆಯುತ್ತ ಭೀಭತ್ಸ ಎನಿಸುವಂತಹ ಕೃತ್ಯಕ್ಕೆಳಸಿ, ಅದರಲ್ಲಿ ಸಂತೃಪ್ತಿ ಕಾಣುವುದನ್ನು ನೋಡಿವಾಗ, ಎಲ್ಲ ದ್ವೇಷ, ಸೇಡು, ಅಪಮಾನಗಳೂ, ಇಂತಹ ಕೃತ್ಯಗಳಲ್ಲಿ ಸಮಾಧಾನ ಪಟ್ಟುಕೊಳ್ಳುವಂತಹ ಮಾನವನ ಮೂಲ ಪ್ರವೃತ್ತಿಯಲ್ಲಿರುವ ಸಾರ್ವಕಾಲಿಕ ಸತ್ಯ ಗೋಚರವಾಗುತ್ತದೆ. ಪ್ರತಿಹಿಂಸೆಯಿಲ್ಲದೇ ಸೇಡಿಗೆ ಶಾಂತಿಯಿಲ್ಲವೆನಿಸುತ್ತದೆ. ಭೀಮ ದ್ರೌಪದಿಯರಾಗಬಹುದು, ಅಗಾಮೆಮ್ನನ್ ನ (Agamemnon) ಪತ್ನಿ ಕ್ಲೈತಮ್ನೆಸ್ತ್ರಾ (Clytemnestra) ಆಗಬಹುದು, ಬ್ಯಾಂಡಿಟ್ ಕ್ವೀನ್ ಫೂಲನ್ ದೇವಿಯಾಗಬಹುದು. ಈ ಮೂಲಭೂತ ಪ್ರವೃತ್ತಿಯನ್ನು ನಾಗರೀಕತೆಯಾಗಲೀ, ವಿದ್ಯೆಯಾಗಲೀ ಸಂಪೂರ್ಣ ಹತ್ತಿಕ್ಕಲಾರದೆಂದೆನಿಸುತ್ತದೆ. ಭೀಮನ ಈ ಚಿತ್ರವನ್ನು ಮರೆಯುವುದು ಹೇಗೆ? ಒಪ್ಪಿಕೊಳ್ಳುವುದು ಹೇಗೆ?
ಎರಗಿದನು ಕಟವಾಯ ಹಲುಗಳ
ಮುರಿಯಲುಗುರಲಿ ಹೊಯ್ದು ಹೃದಯವ
ನುರೆ ಬಗಿದು ಮೊಗೆಮೊಗೆದು ರಕ್ತವ ಕುಡಿತೆಕುಡಿತೆಯಲಿ |
ಸುರಿಸುರಿದು ಸುರಿದಡಿಗಡಿಗೆ ಚ-
ಪ್ಪಿರಿದು ಚಪ್ಪಿರಿದಿದರ ಮಧುರಕೆ
ನೆರೆವವೇ ಸುಧೆಯಿಕ್ಷುರಸಗಿಸವೆಂದನಾ ಭೀಮ || (ಕರ್ಣ ಪರ್ವ 19.53)
ತಾನು ಹಿಡಿದುಕೊಂಡಿರುವ ದುಶ್ಯಾಸನನನ್ನು ಯಾರಾದರೂ ವೀರರಿದ್ದರೆ ತನ್ನಿಂದ ಬಿಡಿಸಿಕೊಳ್ಳಿ ಎಂದು ಮೂದಲಿಸಿ ಪಂಥಾಹ್ವಾನ ನೀಡುವ ಭೀಮ ರುದ್ರಭೀಕರನೇ ಸರಿ. ಭೀಮ ಆ ಸಮಯದಲ್ಲಿ ಸಂಪೂರ್ಣ ಮೈಮರೆತವನಂತೆ ಕೃಷ್ಣನಿಗೂ ಪಂಥಾಹ್ವಾನ ನೀಡಿ ಮೂದಲಿಸುತ್ತಾನೆ. ಈ ಮೂದಲಿಕೆ ಕೇಳಲಾರದೆ ಮುಂದೆ ಬಂದ ಅರ್ಜುನನನ್ನು ಕೃಷ್ಣ ತಡೆಯುತ್ತಾನೆ. “ಘನ ಪರಾಕ್ರಮಿ ಭೀಮಸೇನಗೆ, ದುಶ್ಯಾಸನನ ಜೀವಾನಿಳನ ಪಾರಣೆಯಂತೆ ಸಮರಭೂಮಿಯಲಿ” (ಕರ್ಣ ಪರ್ವ 19.72) ಕೊಂದು ಹಿಂಗಿತೇ ಅವನ ಕೋಪ?
ಉಕ್ಕಿದುದು ಕಡುಗೋಪ ರಕುತದ
ಸೊಕ್ಕಿನಲಿ ಸೊಗಡೇರಿ ಕಂಗಳ
ಲುಕ್ಕಿದುದು ಕಡುಗೆಂಪು ತೊದಳಿನ ಗಜರು ಘಾಡಿಸಿತು |
ಮಿಕ್ಕ ರಕುತವ ಮೊಡೆದು ಬದಿಗೊಳ-
ಳೊಕ್ಕ ಕರುಳ್ಗಳನಾಯ್ದು ಮೂಲೆಗ-
ಳೊಕ್ಕಿನಲಿ ಕೈಯಿಕ್ಕಿ ರಿಂಗಣಗುಣಿದನಾ ಭೀಮ || (ಕರ್ಣ ಪರ್ವ 19.73)
ಭೀಮ ತತ್ತ್ವ, ಅಂಬುಜ ತತ್ತ್ವಗಳ ಜೊತೆಗೇ ರೌದ್ರ, ದೈತ್ಯ ತತ್ತ್ವಗಳೂ ಸೇರಿ ಭೀಮ ಅನನ್ಯ ತತ್ತ್ವನಾಗುತ್ತಾನೆ. ತನ್ನ ಪ್ರತಿಜ್ಞಾವಿಧಿಯನ್ನು ಪೂರೈಸಲು ದ್ರೌಪದಿಗೆ ಹೇಳಿಕಳುಹಿಸುತ್ತಾನೆ. ಪ್ರಳಯ ರುದ್ರೆ ದ್ರೌಪದಿ ಭೀಮನ ‘ವಿಜಯಲಕ್ಷ್ಮಿ’ಯಂತೆ ಬಂದವಳು, ಆ ಭೀಮನ ಭಯಂಕರ ರೌದ್ರ ರೂಪನ್ನು ಕಂಡು, ಬರಲಂಜಿದಾಗ ಭೀಮ ಅವಳನ್ನು ಕರೆದು “ನಿನ್ನಯ ಬಯಕೆಯಿದಾಯ್ತೆ ದಿಟ ನೋಡೆಂದು” (ಕರ್ಣ ಪರ್ವ 19.77) ತೋರಿಸುತ್ತಾನೆ. ಭೀಮನ ಹಿಡಿತದಲ್ಲಿರುವ ‘ವಸ್ತು’ ದುಶ್ಯಾಸನನೆಂದರಿತ ಮೇಲೆ ದ್ರೌಪದಿ ಹತ್ತಿರಬಂದು ಆ ಖಳನ ಮಸ್ತಕವನ್ನು ಕಾಲಿನಿಂದ ಒದೆಯುತ್ತಾಳೆ, ಭೀಮನನ್ನು ಕೊಂಡಾಡುತ್ತಾಳೆ.
ಮೃಡಪರಾಕ್ರಮಿ ನನ್ನ ಹೋಲುವ
ಮಡದಿಯರು ನಿನ್ನಂದದೊಡೆಯರ
ಪಡೆವುದೇ ಪರಮೈಕ ಸೌಖ್ಯವದೆಂದಳಿಂದುಮುಖಿ || (ಕರ್ಣ ಪರ್ವ 19.79)
ಮುಂದೆ ನಡೆಯುವುದು ಈ ಅಗ್ನಿಕನ್ಯೆ ಮತ್ತೆ ಆ ಉಗ್ರನರಸಿಂಹರ ಅಟ್ಟಹಾಸ ಪರ್ವ. "ದುಶ್ಯಾಸನನ ಉರವನಿಬ್ಬಗಿ ಮಾಡಿ ಕುಡಿತೆಯಲರುಣಜಲವನು ಮೊಗೆದು ಮಾನಿನಿಗಿತ್ತನಾಭೀಮ" (ಕರ್ಣ ಪರ್ವ 19.80)
ಶೋಣಿತಾಂಬುವಿನಿಂದ ತರುಣಿಯ
ವೇಣಿಯನು ನಾದಿದನು, ದಂತ-
ಶ್ರೇಣಿಯಲಿ ಬಾಚಿದನು ಬೈತಲೆ ತೆಗೆದು ಚೆಲುವಿನಲಿ | (ಕರ್ಣ ಪರ್ವ 19.81)
ಭೀಮ ತನ್ನಿನಿಯ ದ್ರೌಪದಿಯನ್ನು “ಖಳನ ದಂತಶ್ರೇಣಿ ತವೆ ಪಾವನವೆ” (ಕರ್ಣ ಪರ್ವ 19.81) ಎಂದು ಕೇಳುತ್ತಾನೆ. ಖಳನ ರಕ್ತವ ತೊಡೆದು ಮುಡಿಯ ಕಟ್ಟುವೆನೆನ್ನುವ ನುಡಿ ಸಂದುದೇ ಎಂದು ಪ್ರಶ್ನಿಸುತ್ತಾನೆ. ಅಷ್ಟಲ್ಲದೆ ದುಶ್ಯಾಸನನ ಜಠರದೊಳಗಣ ಕರುಳನ್ನು ತೆಗೆದು ‘ಅಂಬುಜವದನೆಯ’ ಮುಡಿಗೆ ಮುಡಿಸುತ್ತಾನೆ. ಅವಳ ಹಣೆಗೆ ದುಶ್ಯಾಸನನ ರಕ್ತದಿಂದ ತಿಲಕ ತಿದ್ದುತ್ತಾನೆ. ಎಡದ ತೊಡೆಯಲ್ಲಿ ದ್ರೌಪದಿಯನ್ನು ಕೂಡಿಸಿ ಕೊಂಡು, ಬಲವಂಕದಲಿ ನೆಗಹಿದ ನಿಡುಗರುಳ ಮಾಲೆಯ ‘ರೌದ್ರರಚನೆ’ ಇವುಗಳಿಂದಾಗಿ ಭೀಮ ಕುಂಭದಿಂದೊಡೆದು ಮೂಡಿದ ಮೃಗದ ಮೊಗದ ಮಹಾಸುರಾಂತಕನಂತೆ ಕಾಣುತ್ತಿದ್ದನಂತೆ. ವಿಶ್ವದ ಸಾಹಿತ್ಯ ಕೃತಿಗಳಲ್ಲಿ ಅನೇಕ ರೀತಿಯ ಶೃಂಗಾರದ ವರ್ಣನೆಗಳಿರಬಹುದು. ಆದರೆ, ಮಹಾಯುದ್ಧ ನಡೆಯುತ್ತಿರುವಾಗ ರಣರಂಗದ ಮಧ್ಯದಲ್ಲಿ, ದಂಪತಿಗಳ ಇಂತಹ ಭೀಕರ ಶೃಂಗಾರ, ರುದ್ರ ಶೃಂಗಾರದ ಚಿತ್ರಣ ಬೇರಾವ ಕೃತಿಯಲ್ಲಿಯೂ ಕಂಡು ಬರುವುದಿಲ್ಲ. ದುರ್ಯೋಧನನೊಬ್ಬನನ್ನು ಬಿಟ್ಟು ಉಳಿದೆಲ್ಲ ಕೌರವರನ್ನೂ ಕಡಿದು, ದುಶ್ಯಾಸನನ ರಕ್ತಕುಡಿದ ಭೀಮ, ಕಳಸಜಲದಲಿ ಮಿಂದು ಹೊಸಮಡಿಯುಟ್ಟು ಮೊದಲಿನ ಭೀಮಸೇನನಾಗುವ ಪರಿಯೂ ಆಶ್ಚರ್ಯವೇ.
ಕುಮಾರವ್ಯಾಸನ ಭೀಮ, ದುರ್ಯೋಧನನ ವಧೆಯ ಸಮಯದಲ್ಲಿ, ನಮ್ಮ ಮನಸ್ಸಿನಲ್ಲಿ ತುಸು ಬೇಸರ ಮೂಡಿಸುತ್ತಾನೆ. ಎಷ್ಟೊಂದು ಉದಾತ್ತಗುಣಗಳಿದ್ದವನು ಹೀಗೇಕೆ ನಡೆದುಕೊಂಡ? ಏರಿದ್ದ ರೋಷದ ಮತ್ತು ಇನ್ನೂ ಪೂರಾ ಇಳಿದಿರಲಿಲ್ಲವೇ? ದುರ್ಯೋಧನನನ್ನು ಜಲಸ್ತಂಭದಿಂದೆದ್ದು ಬರುವಂತೆ ಮೂದಲಿಸಿ ಅವನು ಆಚೆ ಬಂದ ಮೇಲೆ ಅವನ ಮುಕುಟವನ್ನೊದೆಯುತ್ತಾನೆ. ಮುಖವನ್ನೊದೆದು ಹಲ್ಲುಗಳನ್ನು ಕಳಚುತ್ತಾನೆ. ಭೀಮನ ಈ ಕೃತ್ಯಗಳಿಗೆ, ಕೃತಿಯಲ್ಲಿಯೇ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ. ತನ್ನ ಹಾಗೂ ದ್ರೌಪದಿಯ ಪ್ರತಿಜ್ಞೆ ಹಾಗೂ ಶಾಪಗಳಂತೆ, ಗದಾಯುದ್ಧದ ನಿಯಮವನ್ನು ಮುರಿದು, ದುರ್ಯೋಧನನನ್ನು ನಾಭಿಯಿಂದ ಕೆಳಗೆ ಹೊಡೆದು ಕೊಲ್ಲುತ್ತಾನೆ. ದುರ್ಯೋಧನನು ಹೀಗೆ ತೊಡೆಮುರಿದು ಸಾಯುವಂತೆ ಮೈತ್ರೇಯ ಮುನಿಯ ಶಾಪವೂ ಸಹ ಇರುತ್ತದೆ. ಪಾಂಡವರು ವನವಾಸಕ್ಕೆ ತೆರಳಿದ ನಂತರ ದುರ್ಯೋಧನನ ಅರಮನೆಗೆ ಈ ಮುನಿ ಬರುತ್ತಾರೆ. ದುರ್ಯೋಧನ ವಿನೀತನಾಗಿ ಮುನಿಯನ್ನು ಸತ್ಕರಿಸುತ್ತಾನೆ. ಸತ್ಕಾರವನ್ನು ಮೆಚ್ಚಿದ ಮುನಿ ಪಾಂಡವರನ್ನು ಜೂಜಿನಲ್ಲಿ ಸೋಲಿಸಿ ಕನಲಿಸಿದುದರಿಂದ ನಿನಗೆ ಬಹಳ ಕೇಡಾಗುವುದು. ಅವರನ್ನು ಮತ್ತೆ ಕರೆಸಿ, ಆದರಿಸಿ ಧರೆಯ ಕೊಡು ಎನ್ನುತ್ತಾರೆ. ದುರ್ಯೋಧನ “ಖೊಪ್ಪರಿಸಿ, ಖಾತಿಯಲಿ, ಹೊಯ್ದು ತೊಡೆಯನು ಹಗೆಗೆ ಕೊಡುವೆನೆ ಮೇದಿಯನು” ಎಂದಾಗ ಮೈತ್ರೇಯಿ ಮುನಿ “ತೊಡೆಗಳನು ಕಲಿಭೀಮ ಬವರದೊ | ಳುಡಿದು ಕೆಡಹಲಿ” ಎಂದು ಶಾಪ ಕೊಡುತ್ತಾನೆ. ದುರ್ಯೋಧನನ ಈ ಭುಜದರ್ಪಕ್ಕೆ, ತೊಡೆ ತಟ್ಟಿದ ಅಹಂಕಾರಕ್ಕೆ ತೊಡೆ ಮುರಿದೇ ಮರಣವೆಂದು ನಿಶ್ಚಯವಾಗಲು, ದ್ರೌಪದಿಯ ಶಾಪ, ಭೀಮನ ಪ್ರತಿಜ್ಞೆಯ ಜೊತೆಗೆ ಈ ಮುನಿಯ ಶಾಪವೂ ಸೇರುತ್ತದೆ. ಆದರೂ ದುರ್ಯೋಧನನ ವಧೆಯ ಸಂದರ್ಭದಲ್ಲಿ ನಮ್ಮ ಮೆಚ್ಚುಗೆ, ಅನುಕಂಪಗಳನ್ನೆಲ್ಲಾ ಕುಮಾರವ್ಯಾಸ ಭೀಮನಿಂದ ದುರ್ಯೋಧನನೆಡೆಗೆ ತಿರುಗಿಸುತ್ತಾನೆ. ಭೀಮನ ಬಗೆಗೆ ಧೃತರಾಷ್ಟ್ರನ ಹೃದಯಲ್ಲಿ ಎಂತಹ ದ್ವೇಷ, ಕೋಪಗಳ ಉರಿಯುತ್ತೆಂಬುದು, ಭೀಮನ ಲೋಹದ ಪ್ರತಿಮೆಯನ್ನು ಭೀಮನೆಂದು ಕೊಂಡು ಅಪ್ಪಿಕೊಂಡಾಗ ಆ ಪ್ರತಿಮೆ ಧೃತರಾಷ್ಟ್ರನ ಅಪ್ಪುಗೆಯಲ್ಲಿ ನುಗ್ಗಾಗುವುದರಿಂದ ತಿಳಿಯುತ್ತದೆ. ದುಶ್ಯಾಸನನ ಪ್ರಸಂಗದಲ್ಲಿ ಪ್ರತಿಜ್ಞೆ ತೀರಿಸಿಕೊಳ್ಳಲು ಅತ್ಯಂತ ರೌದ್ರಭಾವ ತಾಳುತ್ತಾನೆಂದು ಕೊಂಡರೂ, ದುರ್ಯೋಧನನ ವಧೆಯ ಸಂದರ್ಭದಲ್ಲಿ ಭೀಮನ ವ್ಯಕ್ತಿತ್ವಕ್ಕೊಂದಿಷ್ಟು ಕಳಂಕ ಬರುತ್ತದೆ. ಆದರೂ ಭೀಮ ಕುಮಾರವ್ಯಾಸ ಭಾರತದಲ್ಲಿ ವಿಶಿಷ್ಟ ವ್ಯಕ್ತಿತ್ವದಿಂದ ಮೆರೆದು ಮನಸ್ಸನ್ನಾವರಿಸಿ ಕೊಳ್ಳುತ್ತಾನೆ.
ಅರಣ್ಯ ಪರ್ವದಲ್ಲಿ ನಡೆಯುವ ಘಟನೆಗಳಲ್ಲಿ ಜಂಬೂಫಲ ವೃತ್ತಾಂತ, ಇಂದ್ರಕೀಲ ಪರ್ವತದಲ್ಲಿ ಅರ್ಜುನ ಪಾಶುಪತಾಸ್ತ್ರಕ್ಕಾಗಿ ತಪಸ್ಸು ಮಾಡುವುದು, ಶಿವನೊಡನೆ ಅರ್ಜುನನ ಯುದ್ಧ, ಅರ್ಜುನನ ಅಮರಾವತಿಯ ಪಯಣ, ಊರ್ವಶೀ ಶಾಪಪ್ರಸಂಗ, ಸೌಗಂಧಿಕಾ ಪುಷ್ಪ ಪ್ರಕರಣ, ಜಟಾಸುರವಧೆ, ಧರ್ಮವ್ಯಾಧ ಚರಿತೆ, ಯಕ್ಷ ಪ್ರಶ್ನೆ, ಚೈತ್ರರಥ ಗಂಧರ್ವನಿಂದ ದುರ್ಯೋಧನಾದಿಗಳ ಸೆರೆ, ಅರ್ಜುನನಿಂದ ಬಿಡುಗಡೆ ಮುಂತಾದ ವೈವಿಧ್ಯಪೂರ್ಣ ಘಟನೆಗಳು ಪ್ರಮುಖವಾದವು. ಅರಣ್ಯ ಪರ್ವದಲ್ಲಿ ಕಾಡಿನ ಋಷಿ ಮುನಿಗಳ ಜೀವನಕ್ಕೂ ಹಾಗೂ ನಾಗರಿಕ ನಗರ ಜೀವನಕ್ಕೂ ಇರುವ ವ್ಯತ್ಯಾಸಗಳನ್ನು ವಿಸ್ತಾರವಾಗಿ ವರ್ಣಿಸುತ್ತಾನೆ ಕುಮಾರವ್ಯಾಸ. ಅರ್ಜುನ ತಪಸ್ಸು ಮಾಡಿ ಪಾಶುಪತಾಸ್ತ್ರ ಪಡೆದ ನಂತರ ಇಂದ್ರಲೋಕಕ್ಕೆ ಹೋಗಿ ಅಲ್ಲಿ ಐದು ವರ್ಷಗಳಿರುತ್ತಾನೆ. ನಂತರ ಪಾತಾಳ ಲೋಕಕ್ಕೂ ಹೋಗುತ್ತಾನೆ. ಭೀಮ ಸೌಂಗಧಿಕಾ ಪುಷ್ಪ ತಂದುಕೊಟ್ಟನಂತರ ಅರ್ಜುನನ್ನು ಹುಡುಕಿಕೊಂಡು ಪಾತಾಳಕ್ಕೆ ಹೋಗುತ್ತಾನೆ. ಹೀಗಾಗಿ ಕಥಾನಕದ ಕ್ರಿಯೆಗಳು ಸ್ವರ್ಗ ಮತ್ತು ಪಾತಾಳಗಳಿಗೆ ಸಂಬಂಧವನ್ನು ಕಲ್ಪಿಸುತ್ತವೆ. ಅರಣ್ಯ ಪರ್ವವಾದ್ದರಿಂದ ಕುಮಾರವ್ಯಾಸನಿಗೆ ಕನ್ನಡ ನಾಡಿನ ವನಸಿರಿಯನ್ನು ವರ್ಣಿಸಲು ಹೇರಳ ಅವಕಾಶ ಸಿಗುತ್ತದೆ. ಇಲ್ಲಿ ಕಾಣಿಸಿರುವ ಹಣ್ಣಿನ ಮರವೂ, ಪಕ್ಷಿಕುಲ, ಮೃಗ ಸಂತತಿ ಎಲ್ಲವೂ ನಯನ ಮನೋಹರ ಎನ್ನುವಂತೆ ಮೂಡಿ ಬಂದಿವೆ.
ತುಂಬುರರಳಿ ಲವಂಗ ಪಾದರಿ
ನಿಂಬೆ ಚೂತ ಪಲಾಶ ಪನಸು ಸು-
ಜಂಬು ಗುಗ್ಗುಳಶೋಕ ವಟ ಪುನ್ನಾಗ ಚಂಪಕದ |
ಕುಂಭಿನಿಯೊಳುಳ್ಳಖಿಲ ವೃಕ್ಷ ಕ-
ದಂಬದಲಿ ವನಮೆರೆದುದದನೇ
ನೆಂಬೆನೀ ಪರಿವಾರ ತುಂಬಿತು ಲಲಿತನಂದನದ || (ಅರಣ್ಯ ಪರ್ವ 3.3)
ತಿಳಿಗೊಳನ ಮಧ್ಯದಲಿ ಮೆರೆದಿಹ
ನಳಿನ ನೃಪನಿದಿರಿನಲಿ ಮಧುಪಾ-
ವಳಿ ರವದ ಗಾಯಕರ ಪಿಕಪಾಠಕರ ನೃತ್ಯಗಳ |
ಲಲಿತ ನವಿಲಿನ ವಾದ್ಯಗಳ ಘುಳು-
ಘುಳಿಪ ಕೊಳರ್ವಕ್ಕಿಗಳ ಲಕ್ಷ್ಮೀ-
ಲಲನೆಯರಮನೆಯೆನಲು ಮೆರೆದುದು ಭೂಪ ಕೇಳೆಂದ || (ಅರಣ್ಯ ಪರ್ವ 3.4)
ಗಿಳಿಯ ಮೃದು ಮಾತುಗಳ ಮರಿಗೋ-
ಗಿಲೆಯ ಮಧುರ ಧ್ವನಿಯ ಹಂಸೆಯ
ಕಳರವದ ಮರಿನವಿಲ ಕೇಕಾರವದ ನಯಸರದ |
ಮೆಲುದನಿಯ ಪಾರಿವದ ತುಂಬಿಯ
ಲಲಿತ ಗೀತದ ವನವನದ ಸಿರಿ ಬಗೆ-
ಗೊಳಿಸಿತೈ ಪೂರ್ವಾಭಿಭಾಷಣದಲಿ ಧನಂಜಯನ || (ಅರಣ್ಯ ಪರ್ವ 4.36)
ಎಂದು ಇಂದ್ರಕೀಲ ಪರ್ವತದ ಸುಮನೋಹರ ಸೌಂದರ್ಯವನ್ನು ವರ್ಣಿಸುತ್ತಾನೆ ಕವಿ.
****
ಕುಮಾರವ್ಯಾಸನ ವರ್ಣನಾಶಕ್ತಿಗೆ, ಕಲ್ಪನೆಯ ಪರಿಧಿಗೆ ಮಿತಿಯೇ ಇಲ್ಲ. ಈಶ್ವರ ಶಬರನ ವೇಷದಲ್ಲಿ ಅರ್ಜುನನನ್ನು ಪರೀಕ್ಷಿಸಲು ಬಂದನು ಎಂದಷ್ಟೇ ಹೇಳಿ ತಣಿಯುವುದಿಲ್ಲ ಕವಿಯ ಕಲ್ಪನೆ. ಅರ್ಜುನ ಮತ್ತು ಈ ಕೃತ್ರಿಮ ಕಿರಾತನ ಕಾಳಗವನ್ನು ನೋಡಲು ಈಶ್ವರನ ಪರಿವಾರವೆಲ್ಲಾ ಬಂದಿಳಿಯುತ್ತದೆ. ಶಿವನ ಪರಿವಾರದ ವ್ಯಕ್ತಿಗಳನ್ನು ನಾಲ್ಕು ಪದ್ಯಗಳಲ್ಲಿ ಓದುಗರಿಗೆ ಪರಿಚಯಿಸುತ್ತಾನೆ. ದೇವಿಯರು, ಗುಹ, ಗಣಪತಿ, ನಂದೀಶ, ವೀರಭದ್ರ, ಸಪ್ತಮಾತೃಕೆಯರು, ದಿಶಾ ದೇವಿಯರು, ಶೃತಿ ವಿದ್ಯಾದಿ ಶಕ್ತಿಯರು, ಉರಗಿಯರು ವಿದ್ಯಾಧರಿಯರು, ಅಪ್ಸರೆಯರು, ಔಷಧ ಮಂತ್ರದೇವತೆಯರು ಎಲ್ಲರೂ ಪರಮೇಶ್ವರಿಯನ್ನು ಬಳಸಿನಿಲ್ಲುವ ಪುಳಿಂದ ಪುಳಿಂದಿಯರಾಗುತ್ತಾರೆ. ಧೃತಿ, ಮಹೋನ್ನತಿ, ತುಷ್ಟಿ, ಪುಷ್ಟಿ, ಸ್ಮೃತಿ, ಸರಸ್ವತಿ, ಸಂವಿಧಾಯಕ ಮತಿ, ಮನಸ್ವಿನಿ, ಸಿದ್ಧಿ, ಕೀರ್ತಿಖ್ಯಾತಿ, ಕಳಾ ಮಾನಿನಿ, ಕಳಾರತಿ ರತಿ, ಚಂಡಿ, ಜಯ ಮುಂತಾದವರೆಲ್ಲಾ ಶಬರಿಯರಾಗುತ್ತಾರೆ. ಕುಮಾರವ್ಯಾಸ ಈ ಸಂದರ್ಭದಲ್ಲಿ ಶಿವನ ಪರಿವಾರದ ದೇವ ದೇವತೆಯರ ಹೆಸರನ್ನೆಲ್ಲಾ ಉಲ್ಲೇಖಿಸಿರುವುದು ಕಂಡಾಗ, ಅವನ ಭೂಮ ಕಲ್ಪನೆ ಕಾರ್ಯ ನಿರ್ವಹಿಸುವ ರೀತಿಯು ಗೋಚರವಾಗುತ್ತದೆ. ಯಾವುದೊಂದು ಸಣ್ಣ ವಿವರವೂ ಅವನ ಕಣ್ಣು ತಪ್ಪಿಸುವುದಿಲ್ಲ. ದೇವ ಪರಿವಾರವೆಲ್ಲಾ ಭೂಮಿಗೆ ಬಂದು ಶಿವ ಮತ್ತವನ ಭಕ್ತನ ನಡುವಿನ ಕಾಳಗ ನೋಡುವುದು ಒಂದು ರಂಜನೀಯ ಸಂಗತಿಯಾದರೆ ಅವರೆಲ್ಲಾ ಬೇಡ ಬೇಡತಿಯರಂತೆ ವೇಷಧರಿಸಿದ್ದರು ಎಂಬುದು ಮತ್ತೊಂದು ಸಂಗತಿ ಮತ್ತು ಆ ಮೂಲಕ ದೇವ ಗಣಗಳ ಅವರ ಹೆಸರುಗಳ ಪರಿಚಯ ಓದುಗನಿಗಾಗುವುದು ಮತ್ತೊಂದು ಸಂಗತಿ. ಒಂದು ಎಳೆಯನ್ನು ಹಿಡಿದು, ಸಂಪೂರ್ಣ ಮಾಹಿತಿಯನ್ನು ತನ್ನ ಕಥಾನಕದ ಕಕ್ಷೆಗೆ ಎಳೆದುಕೊಂಡು ಬಿಡುವ ಇವನ ಪರಿ ಬೆರಗುಗೊಳಿಸುತ್ತದೆ. ಅಂತೆಯೇ ಘಟನೆಗಳನ್ನು ವಿಸ್ತರಿಸುವ, ಅವನ್ನು ಆಸಕ್ತಿ ಹುಟ್ಟುವಂತೆ ವಿಸ್ತರಿಸಿ, ವರ್ಣಿಸುವ ಕಲೆಯನ್ನೂ ಕುಮಾರ ವ್ಯಾಸನಿಂದ ಕಲಿಯಬೇಕು. ಕಿರಾತಾರ್ಜುನೀಯ ಪ್ರಸಂಗದಲ್ಲಿ ಮುಖ್ಯ ಕ್ರಿಯೆ ಅರ್ಜುನ ಮತ್ತು ಕಿರಾತವೇಷಧಾರಿ ಈಶ್ವರನ ನಡುವೆ ನಡೆವ ಕಾಳಗವಾದರೂ, ಅಲ್ಲಿ ಬಂದು ಸೇರಿರುವ ಹೇರಂಬ, ಗುಹ, ಪಾರ್ವತಿ ಮುಂತಾದ ಶಿವನ ಪರಿವಾರ – ಆ ಸಂದರ್ಭದಲ್ಲಿ ಉಪ ಪಾತ್ರಗಳೆಂದರೂ – ಮುಖ್ಯಕ್ರಿಯೆಗೆ ಪ್ರತಿಕ್ರಿಯಿಸುವ, ಪ್ರತಿಸ್ಪಂದಿಸುವ ರೀತಿಯಿಂದಾಗಿ ವಿಸ್ತೃತಗೊಂಡ ಕಥಾನಕ್ಕೆ, ಕಾದಂಬರಿಯ, ನಾಟಕದ ಮೆರುಗುಬರುತ್ತದೆ. ಇಷ್ಟಲ್ಲದೆ, ‘ಉಘೇ’ ಎನ್ನಲು ಸುರಸ್ತೋಮ ಬೇರೆ ನೆರೆದು ನಿಂತಿರುತ್ತದೆ. ಕುಮಾರವ್ಯಾಸ ಚಿತ್ರಿಸುವ ಬೃಹತ್ ಭಿತ್ತಿ ಯಾವಾಗಲೂ ವ್ಯಕ್ತಿಗಳಿಂದ, ಪ್ರಾಣಿಗಳಿಂದ, ಸಸ್ಯವರ್ಗದಿಂದ ತುಂಬಿ ತುಳುಕುತ್ತಿರುತ್ತದೆ.
ತನಗೆ ಲಭ್ಯವಿರುವ ಜ್ಞಾನವನ್ನು, ವಿವರಗಳನ್ನು ತನ್ನ ಕಾವ್ಯದಲ್ಲಳವಡಿಸಿವುದರಲ್ಲಿ – ತುರುಕುವುದಲ್ಲ- ಕುಮಾರವ್ಯಾಸ ಸಿದ್ಧ ಹಸ್ತ. ಅರಣ್ಯ ಪರ್ವದ ಏಳನೆಯ ಸಂಧಿಯಲ್ಲಿ ಹರನಿಂದ ಪಾಶುಪತಾಸ್ತ್ರ ಪಡೆದ ಅರ್ಜುನನನ್ನು ನೋಡಲು ಬಂದ ವರುಣ, ಕುಬೇರ ಮುಂತಾದವರು ದಿವ್ಯಾಸ್ತ್ರಗಳನ್ನು ಕೊಡುತ್ತಾರೆ. ಇಂದ್ರ ಬಂದು, “ಮಾತಲಿಯನ್ನು ಕಳಿಸುತ್ತೇನೆ, ತಪಸ್ಸಿನಿಂದ ಕೃಶವಾದ ಶರೀರದ ವ್ಯಥೆಯನ್ನು ಅಮರಾವತಿಯಲ್ಲಿ ಕಳೆಯ ಬೇಕೆಂದು ಹೇಳಿ ಹೋಗುತ್ತಾನೆ. ಮಾತಲಿ ರಥದೊಡನೆ ಬರುತ್ತಾನೆ. ಆ ರಥವಾದರೂ ಎಂತಹುದು? ಕುಮಾರವ್ಯಾಸನ ವಿವರಣೆಯ ಪ್ರಕಾರ, ಜಂಬೋಜೆಟ್ ವಿಮಾನಕ್ಕಿಂತಲೂ ದೊಡ್ಡದಿರಬಹುದೇನೋ.
This is the eleventh part of the eighteen-part article on kumaravyasa-bharata by Prof. L.V. Shantakumari. Thanks to Smt. Kanchana and Shri. Ganesh Bhat Koppalatota for reviewing. Edited by G S Raghavendra.