ಸಂಸ್ಕೃತಸಾಹಿತ್ಯದ ಚಿರಸುಂದರವಾದ ರಸಮಯಭಾಗಗಳಲ್ಲಿ ಸುಭಾಷಿತಗಳಿಗೆ ಮಿಗಿಲಾದ ಸ್ಥಾನವಿದೆ. ಇವನ್ನು ಭಾವಕವಿತೆಯ ಅತ್ಯುತ್ತಮಪ್ರತಿನಿಧಿಗಳೆಂದು ಕೂಡ ಕರೆಯಬಹುದು. ಜೀವನದ ಎಲ್ಲ ಮುಖಗಳನ್ನೂ ಪ್ರಕೃತಿಯ ಎಲ್ಲ ಪರಿಯ ಸೊಗಸುಗಳನ್ನೂ ಶಾಸ್ತ್ರ-ಕಲೆಗಳ ಅಸಂಖ್ಯಸ್ವಾರಸ್ಯಗಳನ್ನೂ ಸುಭಾಷಿತಗಳು ಸಮರ್ಥವಾಗಿ ಬಿಂಬಿಸಿಕೊಂಡು ಬಂದಿವೆ. ಭಾರತೀಯಸಾಹಿತ್ಯಪರಂಪರೆಯ ಕಥನೇತರಧಾರೆಯ ಸರ್ವೋಚ್ಚಸಾಧನೆಯೇ ಸುಭಾಷಿತವೆಂದರೆ ತಪ್ಪಲ್ಲ. ಇವುಗಳ ಹೂರಣವೆಷ್ಟು ಸವಿಯೋ ತೋರಣವೂ ಅಷ್ಟೇ ಸೊಗಸು. ಇಲ್ಲಿ ಬಗೆಬಗೆಯ ಛಂದಸ್ಸುಗಳ, ಪರಿಪರಿಯ ಅಲಂಕಾರಗಳ, ಕಿವಿಗಳನ್ನು ಜಕ್ಕುಲಿಸುವ ಪದಪುಂಜಗಳ ಲಾಸ್ಯ-ತಾಂಡವಗಳು ಗೌರೀಶಂಕರರ ಸಾನ್ನಿಧ್ಯವನ್ನೇ ಓದುಗರಿಗೆ ತಂದೀಯುತ್ತವೆ. ಹೀಗಾಗಿಯೇ ಸುಭಾಷಿತಗಳ ಆಕರ್ಷಣೆ ಅವಿಚ್ಛಿನ್ನ.
ಇಂಥ ಸಾಹಿತ್ಯವನ್ನು ತನ್ನದನ್ನಾಗಿಸಿಕೊಳ್ಳಬೇಕೆಂಬ ಆಸೆ ಪ್ರತಿಯೊಂದು ಭಾಷೆಗೂ ಇದೆ. ಆದುದರಿಂದಲೇ ಪ್ರಾಯಶಃ ಜಗತ್ತಿನ ಎಲ್ಲ ಪ್ರಬುದ್ಧಭಾಷೆಗಳಲ್ಲಿಯೂ ಸಂಸ್ಕೃತಸುಭಾಷಿತಗಳ ಅನುವಾದ ಸಾಗಿಬಂದಿದೆ. ಇಂತಿರಲು ನಮ್ಮ ದೇಶಭಾಷೆಗಳಲ್ಲಿಯೂ ಈ ಕೆಲಸ ಸಾಗಿದೆಯೆಂದರೆ ಅಚ್ಚರಿಯಲ್ಲ. ಆದರೆ ಬಹಳಷ್ಟು ಬಾರಿ ನೀತಿಲೋಲುಪವಾದ ಲೋಕಸಾಮಾನ್ಯವು ಸುಭಾಷಿತಗಳ ಉಪದೇಶಾಂಶಕ್ಕೆ ಮರುಳಾಗಿ ಅದನ್ನು ನೀರಸವಾದ ಗದ್ಯರೂಪದಲ್ಲಿ ಹಿಡಿದಿಟ್ಟುಕೊಂಡು ಹರ್ಷಿಸುತ್ತದೆ. ಇದು ಹೂವೊಂದನ್ನು ಅದರ ಬಣ್ಣ, ಆಕಾರ ಮತ್ತು ಸೌಕುಮಾರ್ಯಗಳಿಂದ ಪ್ರತ್ಯೇಕಿಸಿ ಕೇವಲ ಅದರ ಪರಿಮಳವನ್ನಷ್ಟೇ—ಮದ್ಯಸಾರದಲ್ಲಿ ಭಟ್ಟಿಯಿಳಿಸಿಕೊಂಡು—ಸೀಸೆಗಳಲ್ಲಿ ಸೆರೆಯಿಟ್ಟು ಮೂಸಿಮೂಸಿ ಮೈಮರೆಯುವ ದಯನೀಯಸ್ಥಿತಿಯನ್ನು ಹೋಲುತ್ತದೆ. ಇದಕ್ಕೆ ಹೃದ್ಯವಾದ ಅಪವಾದವೆನ್ನುವಂತೆ ಕೆಲವಾದರೂ ಪದ್ಯರೂಪದ, ಸುಭಾಷಿತಗಳ ಕಾವ್ಯಾಂಶವನ್ನು ಮುಖ್ಯವಾಗಿ ಗಮನದಲ್ಲಿರಿಸಿಕೊಂಡ, ಅನುವಾದಗಳಿರುವುದು ನಮ್ಮ ನುಡಿಗಳ ಸೌಭಾಗ್ಯ. ಭಾರತೀಯೇತರಭಾಷೆಗಳಲ್ಲಿ ಸಂಸ್ಕೃತದ ಶಬ್ದಸೌಂದರ್ಯ ಸ್ವಲ್ಪ ಮಟ್ಟಿಗೂ ಬರಲು ಸಾಧ್ಯವಿಲ್ಲ. ಆದರೆ ನಮ್ಮ ನುಡಿಗಳಲ್ಲಿ ಸಂಸ್ಕೃತದ ಪದಸಂಪತ್ತಿ ಅದೆಷ್ಟೋ ಪ್ರಮಾಣದಲ್ಲಿ ಉಳಿದುಬಂದಿದೆ, ಬೆಳೆದುಬಂದಿದೆ. ಇದನ್ನು ಸಮರ್ಥನಾದ ಅನುವಾದಕ ಚೆನ್ನಾಗಿ ದುಡಿಸಿಕೊಳ್ಳಬಲ್ಲ. ಜೊತೆಗೆ ಆತ ಇನ್ನೂ ಪ್ರಬುದ್ಧನಾಗಿದ್ದಲ್ಲಿ ಸಂಸ್ಕೃತದ ಛಂದೋಮೂಲವಾದ ನಾದಸೌಂದರ್ಯವನ್ನೂ ಭಾಷಾಂತರಗಳಲ್ಲಿ ಪ್ರತಿಬಿಂಬಿಸಬಲ್ಲ. ಇಂಥ ಸಾಧನೆಗಳು ಎಲ್ಲಿಯೂ ವಿರಳ.
ಕನ್ನಡದಲ್ಲಿ ಸುಭಾಷಿತಗಳ ಅನುವಾದ ಸಾವಿರ ವರ್ಷಗಳಿಂದ ಕಾಣಬರುತ್ತಿದ್ದರೂ ಅವೆಲ್ಲ ಒಂದು ವ್ಯವಸ್ಥಿತವಾದ ರೂಪವನ್ನು ಪಡೆದು ಮೈದಾಳಿದ್ದು ಈಚಿನ ದಶಕಗಳಲ್ಲಿ. ದಿಟವೇ, ಕವಿರಾಜಮಾರ್ಗ, ಕಾವ್ಯಾವಲೋಕನ, ಸೂಕ್ತಿಸುಧಾರ್ಣವ, ಕಾವ್ಯಸಾರ ಮುಂತಾದ ಗ್ರಂಥಗಳ ಎಷ್ಟೋ ಪದ್ಯಗಳು ಸಂಸ್ಕೃತಸುಭಾಷಿತಗಳ ನೇರವಾದ ಇಲ್ಲವೇ ಪರ್ಯಾಯವಾದ ಅನುವಾದಗಳು, ರೂಪಾಂತರಗಳು. ಆದರೆ ಮೈಸೂರು ಒಡೆಯರ ಕಾಲದಿಂದೀಚೆಗೆ ಬೆಳೆದುಬಂದ ಕನ್ನಡಸಾಹಿತ್ಯದಲ್ಲಿ ಇಂಥ ಕೃಷಿ ಹೆಚ್ಚಾಗಿದೆ. ಅದರಲ್ಲಿಯೂ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಿಂದೀಚೆಗೆ ಮೈಸೂರಿನ ಆಸ್ಥಾನದ ಆಶ್ರಯದಲ್ಲಿ ಇಂಥ ಕೆಲಸ ಹುಲುಸಾಯಿತು. ಆದರೆ ಇದೆಲ್ಲ ಹಳಗನ್ನಡ-ನಡುಗನ್ನಡಗಳ ಬಿಗಿಯಾದ ಭಾಷೆಯಲ್ಲಿ, ಕಂದ-ವೃತ್ತಗಳ ನಿಬಿಡವಾದ ಬಂಧಗಳಲ್ಲಿ ಮೈದಾಳಿದ ವಾಗ್ವಿಲಾಸ. ವೈಯಕ್ತಿಕ ಅಭಿಪ್ರಾಯವನ್ನು ನಿವೇದಿಸುವುದಾದರೆ, ನನಗೆ ಮೂಲಸುಭಾಷಿತಗಳ ಗತಿ-ಗಮಕಗಳಿಗೆ ಹತ್ತಿರವಿರುವ ಕಂದ-ವೃತ್ತಗಳೇ ಹಳಗನ್ನಡ-ಸಮಸಂಸ್ಕೃತಗಳೇ ಹೆಚ್ಚು ಸಮರ್ಥವಾದ, ಸುಂದರವೂ ಆದ ಸಾಧನೆಗಳೆಂದು ತೋರಿದೆ. ಆದರೆ ಸುಕುಮಾರಮತಿಗಳಾದ ಹೊಸಗನ್ನಡಿಗರಿಗೆ ಇವು ವ್ಯಾಖ್ಯಾಸಾಪೇಕ್ಷವಾದ ಸಾಹಿತ್ಯವೆನಿಸುವ ಕಾರಣ ಅನುವಾದದ ಮೂಲೋದ್ದೇಶಗಳಲ್ಲೊಂದಾದ ಸಂವಹನಸೌಲಭ್ಯವೇ ಕಷ್ಟವೆನಿಸುತ್ತದೆ. ಏನೇ ಆಗಲಿ, ಸೌಂದರ್ಯೈಕದೃಷ್ಟಿಯ ಸಹೃದಯರಿಗೆ ನಾನು ಹೇಳಿದ ಕ್ರಮವೇ ಉಪಾದೇಯ.
ಇಂತಿದ್ದರೂ ನಡುಗನ್ನಡ-ಹೊಸಗನ್ನಡಗಳ ಸೊಗಡು-ಮಿಡಿತಗಳನ್ನು ಮೈಗೂಡಿಸಿಕೊಂಡು ಪದ್ಯಮಯವಾಗಿ ಹರಳುಗಟ್ಟಿದ ಸುಭಾಷಿತಾನುವಾದಗಳ ಪೈಕಿ ಕೆಲವಾದರೂ ಮೆಚ್ಚುವಂತಿವೆ, ಅನುಕರಣೀಯವೆನಿಸಿವೆ. ಇವುಗಳ ಪೈಕಿ ತೀನಂಶ್ರೀ ಅವರ “ಬಿಡಿಮುತ್ತು” ಮತ್ತು ಪಾ. ವೆಂ. ಅವರ “ಸುಭಾಷಿತ ಚಮತ್ಕಾರ” ಅತ್ಯಂತಗಮನಾರ್ಹ. ಯಾವ ನಿಟ್ಟಿನಿಂದ ನೋಡಿದರೂ ಇವೆರಡನ್ನು ನವೋದಯಸಾಹಿತ್ಯದ ಸುಭಾಷಿತಾನುವಾದಗಳ ಪೈಕಿ ಅತ್ಯುತ್ತಮವೆಂದು ನಿಶ್ಚಯಿಸಬಹುದು. ಇವುಗಳ ನಡುವೆ ಇರುವ ವ್ಯತ್ಯಾಸಗಳು ಕೂಡ ಅಷ್ಟೇ ಗಮನಾರ್ಹ. ಸದ್ಯದ ಲೇಖನ ಈ ಕೆಲವೊಂದು ವೈಶಿಷ್ಟ್ಯಗಳತ್ತ ಸಹೃದಯರನ್ನು ಸೆಳೆಯುವ ಸಂಕ್ಷಿಪ್ತಯತ್ನ.
* * *
ತೀ. ನಂ. ಶ್ರೀಕಂಠಯ್ಯ ಮತ್ತು ಪಾ. ವೆಂ. ಆಚಾರ್ಯ ಇಬ್ಬರೂ ರಸಿಕರು, ಕವಿಗಳು ಮತ್ತು ವಿದ್ವಾಂಸರು. ಇಬ್ಬರಿಗೂ ಸುಭಾಷಿತಗಳ ಸೌಂದರ್ಯದ ಬಗೆಗೆ ಮಿಗಿಲಾದ ಪ್ರೀತಿ. ಆದರೆ ಮನೋಧರ್ಮಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಇದೇ ಇವರ ಆಯ್ಕೆ ಮತ್ತು ಅನುವಾದಕ್ರಮಗಳಲ್ಲಿಯೂ ನಿರ್ಣಾಯಕವಾಗಿದೆ. ಹೀಗಾಗಿಯೇ ಇವರ ಕೃತಿಗಳ ನಡುವೆ ಹೃದಯಂಗಮವಾದ ವ್ಯತ್ಯಾಸವುಂಟು; ಅದು ವೈಷಮ್ಯಮೂಲದ್ದಲ್ಲ, ರುಚಿಭೇದಮೂಲದ್ದು, ಸಂಸ್ಕಾರಮೂಲದ್ದು.ತೀನಂಶ್ರೀ ಅವರು ಮೂಲದ ಅರ್ಥ ತನ್ನೆಲ್ಲ ಸ್ವಾರಸ್ಯಗಳನ್ನೂ ತುಂಬಿಕೊಂಡು ಅನುವಾದದಲ್ಲಿ ಯಥಾವತ್ತಾಗಿ ಬರಬೇಕೆಂಬ ಆಶಯದಿಂದ ದುಡಿದವರು. ಆದರೆ ಪಾ. ವೆಂ. ಅವರು ತಾವೇ ಹೇಳಿಕೊಳ್ಳುವಂತೆ ಅಕ್ಷರಶಃ ಅನುವಾದಕ್ಕೆ ಹೊರಟವರಲ್ಲ. ಅವರದೇನಿದ್ದರೂ ಛಾಯಾನುವಾದ, ಸಂಗ್ರಹಾನುವಾದ; ಮತ್ತೂ ಹೇಳುವುದಾದರೆ ಅದು “ಸಾರಶೋಷಣೆ.” ಇಷ್ಟೇ ಅಲ್ಲದೆ ಇಬ್ಬರೂ ಸಮೂಲವಾಗಿ ಸುಭಾಷಿತಗಳನ್ನು ಅನುವಾದ ಮಾಡಿದ್ದರೂ ತೀನಂಶ್ರೀ ಅವರು ತಮ್ಮ ಆಯ್ಕೆಗಳಿಗೆಲ್ಲ ವಿಪುಲವಾದ ಆಕರ-ಟಿಪ್ಪಣಿಗಳನ್ನು ಒದಗಿಸಿ ಜಿಜ್ಞಾಸುಗಳಿಗೆ ಮಹೋಪಕಾರ ಮಾಡಿದ್ದಾರೆ. ಇದು ತೀನಂಶ್ರೀ ಅವರಂಥ ಗಂಭೀರಸಂಶೋಧಕರಿಗೆ ಸಹಜವಾದ ಪದ್ಧತಿ. ಪಾ. ವೆಂ. ಅವರಾದರೋ ತಮ್ಮ ಆಯ್ಕೆಗಳಿಗೆ ನಾಮಮಾತ್ರವಾಗಿ ಕೂಡ ಆಕರವನ್ನು ಹೇಳಿಲ್ಲ. ಆದರೆ ಅವರ ಆಯ್ಕೆಯೆಲ್ಲ ಬಲುಮಟ್ಟಿಗೆ “ಸುಭಾಷಿತರತ್ನಭಾಂಡಾಗಾರ” ಮತ್ತು “ಸಮಯೋಚಿತಪದ್ಯಮಾಲಿಕಾ” ಗ್ರಂಥಗಳ ಮಟ್ಟಿಗೆ ಸೀಮಿತವಾದ ಕಾರಣ ಅಭಿಜ್ಞರಿಗೆ ತೊಡಕಾಗದು. ಈ ಬಗೆಯ ಅನೌಪಚಾರಿಕತೆ ಪಾ. ವೆಂ. ಅವರಂಥ ಪತ್ರಕರ್ತರಿಗೆ ತೀರ ಸಹಜ.
ಇನ್ನು ಪದ್ಯಗಳ ಆಯ್ಕೆಯನ್ನು ಗಮನಿಸುವುದಾದರೆ, ತೀನಂಶ್ರೀ ಅವರು ತಮ್ಮ ಗುರುಗಳಾದ ಬಿ. ಎಂ. ಶ್ರೀಕಂಠಯ್ಯನವರಿಗೆ ರಚನಾತ್ಮಕವಾದ ಒಂದು ಉತ್ತರ ಕೊಡಲೆಂಬಂತೆ ಬಿಡಿಮುತ್ತನ್ನು ರೂಪಿಸಿರುವುದು ಸುವೇದ್ಯ. ನವೋದಯಕಾವ್ಯಕ್ಕೆ ಪಥಪ್ರದರ್ಶಕವಾದ “ಇಂಗ್ಲಿಷ್ ಗೀತಗಳು” ಕೃತಿಯ ಮೊದಲಿಗೇ ಶ್ರೀಯವರು “ಇಂಗ್ಲಿಷ್ ಕವಿಗಳು ಶೃಂಗಾರರಸವನ್ನು ಹೇಗೆ ಗಂಭೀರವಾಗಿಯೂ ಸೂಕ್ಷ್ಮವಾಗಿಯೂ ಸ್ವಾಭಾವಿಕವಾಗಿಯೂ ತೋರಿಸುವರೆಂಬುದನ್ನು ತಿಳಿಸುವುದಕ್ಕಾಗಿ ಆ ಬಗೆಯ ಗೀತಗಳು [ಇಲ್ಲಿ] ಕೊಂಚ ಹೆಚ್ಚಾಗಿ ಬಂದಿವೆ” ಎಂದಿದ್ದಾರೆ. ಇದು ತೀನಂಶ್ರೀ ಅವರಿಗೆ ಅಷ್ಟಾಗಿ ಒಪ್ಪಿಗೆಯಾಗಲಿಲ್ಲ. ಇಂಗ್ಲಿಷ್ ಗೀತಗಳು ಬಂದ ಹೊಸತರಲ್ಲಿಯೇ (ಅಕ್ಟೋಬರ್ ೧೯೨೭) ತಮ್ಮ ಗೆಳೆಯರ ನಡುವೆ ಈ ಬಗೆಗೆ ಆಕ್ಷೇಪವನ್ನೂ ಎತ್ತಿದ್ದರಂತೆ: ಈ ಮಾತನ್ನು ಬರೆಯುವಾಗ ಬಿ. ಎಂ. ಶ್ರೀಯವರು ಸಂಸ್ಕೃತಮುಕ್ತಕಗಳನ್ನು ಮರೆತುಬಿಟ್ಟರೇ? ಎಂದು. ಈ ಕಾರಣದಿಂದಲೇ ಬಿಡಿಮುತ್ತಿನ ಇನ್ನೂರ ಹದಿನೈದು ಸುಭಾಷಿತಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಪದ್ಯಗಳು ಶೃಂಗಾರರಸವನ್ನು ಅದಕ್ಕಿರುವ ಆಲಂಬನವಿಭಾವ, ಉದ್ದೀಪನವಿಭಾವ ಮತ್ತು ಅನುಭಾವಗಳ ಮೂಲಕ ಚಿತ್ರಿಸುವಂಥವೇ ಆಗಿವೆ. ಇವೆಲ್ಲ ಶ್ರೀ ಅವರ ಆರೋಪವನ್ನು ಸಮರ್ಥವಾಗಿ ಪ್ರತ್ಯಾಖ್ಯಾನಿಸುವಲ್ಲಿ ಯಶಸ್ವಿಯಾಗಿವೆ. ಒಂದು ಮಾತಿನಲ್ಲಿ ಹೇಳುವುದಾದರೆ, ಬಿಡಿಮುತ್ತಿನ ಈ ಭಾಗವಂತೂ ಪ್ರಾಚೀನಭಾರತದ ಕವಿಗಳ ಶೃಂಗಾರದರ್ಶನದ ಸಂಕ್ಷೇಪವಾದರೂ ಪ್ರಾತಿನಿಧಿಕವಾದ ನಿದರ್ಶನವೆನ್ನಬಹುದು. ಈ ಭಾಗವನ್ನುಳಿದಂತೆ ಮಿಕ್ಕ ಸುಭಾಷಿತಗಳು ದೇವತಾಸ್ತುತಿ, ಕವಿತಾಸ್ತುತಿ, ಅನ್ಯೋಕ್ತಿ, ವಿಡಂಬನ, ಸ್ವಭಾವೋಕ್ತಿ ಅಥವಾ ಜಾತಿಚಿತ್ರ ಮತ್ತು ಭಕ್ತಿ-ವೈರಾಗ್ಯಗಳನ್ನು ಒಳಗೊಂಡಿವೆ.
ಪಾ. ವೆಂ. ಆಚಾರ್ಯರು ಹೆಚ್ಚು-ಕಡಮೆ ತೀನಂಶ್ರೀ ಅವರ ಕೃತಿಯ ಸುಭಾಷಿತಗಳಷ್ಟೇ ಸಂಖ್ಯೆಯ (೨೬೬) ಪದ್ಯಗಳಲ್ಲಿ ತಮ್ಮ ಕೃತಿಯನ್ನು ಹವಣಿಸಿದ್ದಾರೆ. ಆದರೆ ಇಲ್ಲಿ ಶೃಂಗಾರಕ್ಕೆ ಕೇವಲ ನಲವತ್ತೆರಡು ಪದ್ಯಗಳು ಮಾತ್ರ ಮೀಸಲಾಗಿವೆ. ಇವುಗಳಲ್ಲಿಯೂ ಹಸಿ-ಬಿಸಿ ಶೃಂಗಾರದ ಚಾಟುಚಮತ್ಕಾರವೇ ಹೆಚ್ಚು. ಇಲ್ಲಿ ಗಂಭೀರವಾದ ವಿರಹ-ವಿಯೋಗಗಳ ಪ್ರಸ್ತಾವ ಇಲ್ಲವೆಂಬಷ್ಟು ಕಡಮೆ. “ಶೃಂಗಾರಾದ್ಧಿ ಭವೇದ್ಧಾಸ್ಯಮ್” ಎಂಬ ಭರತೋಕ್ತಿಗೆ ಸಲ್ಲುವಂತೆ ಇಲ್ಲಿಯ ಶೃಂಗಾರದ ನೆಯ್ಗೆಯಲ್ಲಿ ಹಾಸ್ಯದ ಜರತಾರಿ ಕಚಗುಳಿಯಿಕ್ಕುವಂತೆ ಹೊಕ್ಕಿದೆ. ಉಳಿದಂತೆ ಸ್ತುತಿ, ಧೀರತೆ, ಸಿರಿತನ-ಬಡತನ, ಕೆಣಕು-ತಿಣುಕು, ಸಜ್ಜನ-ದುರ್ಜನರು, ಆಳುಗರ ಅಬ್ಬರ, ಅನ್ಯೋಕ್ತಿ, ಲೋಕನೀತಿ ಮತ್ತು ವೈರಾಗ್ಯಗಳು ವಿಷಯಗಳಾಗಿ ಬಂದಿವೆ. ಇವುಗಳೆಲ್ಲದರಲ್ಲಿಯೂ ಚಾಟುಚಮತ್ಕೃತಿ ಸಮೃದ್ಧವಾಗಿದೆ. ಪಾಶ್ಚಾತ್ತ್ಯರಲ್ಲಿ ಯಾವುದನ್ನು “ಎಪಿಗ್ರಂ” ಎಂದೂ ಯಾವ ಗುಣವನ್ನು “ಎಪಿಗ್ರಮಾಟಿಕ್” ಎಂದೂ ಗುರುತಿಸಿಕೊಂಡಿರುವರೋ ಅವೆಲ್ಲ ಇಲ್ಲಿ ಸೊಗಸಾಗಿ ಮೈವೆತ್ತಿವೆ.ಮೇಲ್ನೋಟಕ್ಕೆ ಬಿಡಿಮುತ್ತು ಮತ್ತು ಸುಭಾಷಿತಚಮತ್ಕಾರಗಳು ಒಂದೇ ಬಗೆಯ ಕನ್ನಡವನ್ನೂ ಒಂದೇ ಬಗೆಯ ಛಂದಸ್ಸನ್ನೂ ಬಳಸಿಕೊಂಡಂತೆ ತೋರಿದರೂ ಇವುಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಇದಕ್ಕೆ ಕಾಲದ ವ್ಯತ್ಯಾಸವೂ ಒಂದು ಕಾರಣವಾಗಿರಬಹುದು. ಬಿಡಿಮುತ್ತು ತೀನಂಶ್ರೀ ಅವರ ಮರಣೋತ್ತರ ಪ್ರಕಾಶಿತವಾದರೂ (೧೯೬೯) ಅದರ ಹೆಚ್ಚಿನ ಪದ್ಯಗಳೆಲ್ಲ ಇಪ್ಪತ್ತನೆಯ ಶತಾಬ್ದದ ಪೂರ್ವಾರ್ಧದಲ್ಲಿಯೇ ರಚಿತವಾಗಿದ್ದಿರಬೇಕು. ಆದರೆ ಪಾ. ವೆಂ. ಅವರೇ ತಿಳಿಸುವಂತೆ ಸುಭಾಷಿತಚಮತ್ಕಾರ ೧೯೭೫ರಲ್ಲಿ ರಚಿತವಾದದ್ದು. ಅಂದರೆ, ಇವೆರಡು ಕೃತಿಗಳಿಗೂ ಸರಿಸುಮಾರು ಮೂರು-ನಾಲ್ಕು ದಶಕಗಳ ಅಂತರವಿದೆಯೆಂದು ಹೇಳಬಹುದು. ಹೊಸಗನ್ನಡದ ಕಾವ್ಯಭಾಷೆಯು ನವೋದಯಮಾರ್ಗದಿಂದ ಒಂದು ಹದಕ್ಕೆ ಬಂದಾಗ ಮೈವೆತ್ತಿದ್ದು ಬಿಡಿಮುತ್ತಾದರೆ, ಸುಭಾಷಿತಚಮತ್ಕಾರವು ನವ್ಯ-ಬಂಡಾಯಗಳ ಅವಧಿಯನ್ನೂ ದಾಟಿಬಂದ ಕನ್ನಡದ ಕಾವ್ಯಭಾಷೆಯ ಪ್ರತಿನಿಧಿಯೆನ್ನಬಹುದು. ಹೀಗಾಗಿಯೇ ತೀನಂಶ್ರೀ ಅವರಲ್ಲಿ ನಡುಗನ್ನಡದ ರೂಪಗಳು ಅಧಿಕ, ವ್ಯಾಕರಣದ ಒಪ್ಪ ಮಿಗಿಲು; ಎಲ್ಲಿಯೂ ವಾಕ್ಯಗಳನ್ನು ಸಾಕಾಂಕ್ಷವಾಗಿ ಬಿಡುವ ಸ್ವೈರತೆಯಿಲ್ಲ, ಪ್ರಾಸಕ್ಕಾಗಿ ಅನ್ವಯವನ್ನು ವ್ಯತ್ಯಾಸಗೊಳಿಸುವ ಹವಣಿಲ್ಲ. ಆದರೆ ಪಾ. ವೆಂ. ಅವರಲ್ಲಿ ನಡುಗನ್ನಡದ ರೂಪಗಳು ಕಡಮೆ, ವ್ಯಾಕರಣದ ಬಿಗಿತ ವಿರಳ; ವಾಕ್ಯವಿನ್ಯಾಸದಲ್ಲಿ ಸ್ವಾತಂತ್ರ್ಯ ಅಧಿಕ, ಪ್ರಾಸಕ್ಕಾಗಿ ಮಾಡಿಕೊಳ್ಳುವ ಒಡಂಬಡಿಕೆಗಳು ಮಿಗಿಲು. ಅಷ್ಟೇ ಅಲ್ಲದೆ ಹಿಂದಿ, ಉರ್ದು, ದೇಶ್ಯ, ಗ್ರಾಮ್ಯ ಮುಂತಾದ ಬಗೆಬಗೆಯ ಮೂಲದ ಪದಗಳನ್ನು ಎಗ್ಗಿಲ್ಲದೆ ಬಳಸಿಕೊಳ್ಳುವ ಮುಕ್ತಮನೋಧರ್ಮವೂ ಇಲ್ಲಿದೆ. ಆದರೆ ಈ ಮೂಲಕ ರಸಭಂಗವಾಗಿಲ್ಲ; ಪ್ರತ್ಯುತ ಸ್ವಾರಸ್ಯವೇ ಹೆಚ್ಚಿದೆ ಎಂಬುದು ಗಮನಾರ್ಹ.
ಛಂದಸ್ಸಿನ ವಿಷಯದಲ್ಲಿಯೂ ತೀನಂಶ್ರೀ ಅವರಿಗೆ ಹೋಲಿಸಿದರೆ ಪಾ. ವೆಂ. ಅವರು ಹೆಚ್ಚಿನ ಸ್ವಾತಂತ್ರ್ಯ ವಹಿಸುತ್ತಾರೆ. ಇದು ಹಲವು ಬಾರಿ ಸ್ವಚ್ಛಂದತೆಗೂ ಅವಕಾಶ ನೀಡಿದೆ. ಈ ಮೂಲಕ ಅವರು ರಚನೆಯಲ್ಲಿ ಅಡಕವನ್ನು ಸಾಧಿಸಿರುವರಾದರೂ ಪದ್ಯಗತಿಯಲ್ಲಿ ಎಡರು-ತೊಡರುಗಳನ್ನು ತಂದುಹಾಕಿದ್ದಾರೆ. ಇದು ಸ್ವೈರವೃತ್ತಿಗೆ ಸಾಹಿತ್ಯಸರಸ್ವತಿ ನೀಡುವ ದಂಡನೆಯೇ ಹೌದು. ತೀನಂಶ್ರೀ ಅವರು ಮಾತ್ರಾಸಮತ್ವಕ್ಕಾಗಿ, ಗಣಸಂತುಲನಕ್ಕಾಗಿ ಅಲ್ಲಲ್ಲಿ ದೀರ್ಘಗಳನ್ನು ಹ್ರಸ್ವಗಳನ್ನಾಗಿಯೂ ಸಂಧಿಯನ್ನು ವಿಸಂಧಿಯನ್ನಾಗಿಯೂ ಮಾಡಿಕೊಂಡಿದ್ದಾರೆ. ಇವೂ ಕೆಲಮಟ್ಟಿಗೆ ಶ್ರುತಿಹಿತಕ್ಕೆ ಎರವಾಗುತ್ತವೆ. ಆದರೆ ನವೋದಯಕಾವ್ಯದ ನಡೆಯೇ ಹೀಗಿರುವುದರಿಂದ ಇವೆಲ್ಲ ಆ ಸಂಪ್ರದಾಯದ ಕ್ರಮಗಳೇ ಆಗಿಬಿಟ್ಟಿವೆ. ನಿಬಿಡಬಂಧವನ್ನು ಆದರಿಸದೆ ಶಿಥಿಲಬಂಧಕ್ಕೆ ಒತ್ತಾಸೆಯಿತ್ತ ಕಾರಣ ಎರಡು ಕೃತಿಗಳಲ್ಲಿಯೂ ಮೂಲದ ಓಜಸ್ಸು ಗಣನೀಯವಾಗಿ ತಗ್ಗಿದೆ. ಇಲ್ಲಿಯೂ ತೀನಂಶ್ರೀ ಅವರು ಶಬ್ದಗುಣದ ಮೂಲಕ ಸಾಧಿಸುವುದನ್ನು ಪಾ. ವೆಂ. ಅವರು ಪ್ರಾಯಿಕವಾಗಿ ಅರ್ಥಗುಣದಿಂದ ಸಾಧಿಸುತ್ತಾರೆ. ಹೀಗೆ ಬಿಡಿಮುತ್ತು ನಯ-ನಾಗರಕತೆಗಳನ್ನು ಬಲ್ಲವಳಾದರೂ ಶಿಷ್ಟತೆ-ಸಂಯಮಗಳನ್ನು ಬಿಡದ ನವಕನ್ಯಕೆಯಂತೆ ಕಂಡರೆ ಸುಭಾಷಿತಚಮತ್ಕಾರ ಹಳ್ಳಿ-ದಿಲ್ಲಿಗಳನ್ನೆಲ್ಲ ಆಳಬಲ್ಲ ಪ್ರಗಲ್ಭೆಯಂತೆ ತೋರುತ್ತದೆ.
ಈ ನಿಟ್ಟಿನಿಂದ ಕಂಡಾಗ ಇವೆರಡು ಕೃತಿಗಳ ಹೆಸರುಗಳೇ ಅವುಗಳ ಹೂರಣವನ್ನು ಧ್ವನಿಸಿವೆ: ಬಿಡಿಮುತ್ತು ಅಚ್ಚಗನ್ನಡದ ಪದ. ಇದೇ ರೀತಿ ತೀನಂಶ್ರೀ ಅವರ ಅನುವಾದ ಅಚ್ಚಗನ್ನಡದ ಒಡಲನ್ನು ಆನಂದದಿಂದ ತಾಳಿದೆ. ಇಲ್ಲಿಯ ಭಾಷೆ-ಛಂದಸ್ಸುಗಳು ಮುತ್ತಿನಂತೆಯೇ ಕಣ್ಣುಕೋರೈಸದ ಮೃದುಕಾಂತಿಯ ಸ್ನಿಗ್ಧತೆಯನ್ನು ಹೊಂದಿವೆ. ಜೊತೆಗೆ ಮುತ್ತಿನ ಹಾಗೆಯೇ ಇಲ್ಲಿಯ ದುಂಡುತನ ಗಮನಾರ್ಹ. ಪಾ. ವೆಂ. ಅವರ ಕೃತಿಯಾದರೋ ತಿಳಿಗನ್ನಡದ ಒಡಲನ್ನು ತಳೆದಿದ್ದರೂ ಸಂಸ್ಕೃತ-“ಸಂಸ್ಕೃತ”ಗಳೆರಡನ್ನೂ ತುಂಬಿಕೊಂಡ ಚೂಪುಚೂಪಾದ ನುಡಿಗಟ್ಟಿನ ತವನಿಧಿ. ಇಲ್ಲಿಯ ಮೊನಚು ವಜ್ರದಂಥದ್ದು; ಇಲ್ಲಿಯ ಹೊಳಪೂ ಅದೇ ರೀತಿ ಕಣ್ಣನ್ನು ಕೆಣಕುವಂಥದ್ದು. ಹೀಗಾಗಿಯೇ ಇದು ಸುಭಾಷಿತಚಮತ್ಕಾರ, ಸಮಸಂಸ್ಕೃತದ ಶೀರ್ಷಿಕೆ; “ಚಮತ್ಕಾರ”ಶಬ್ದದ ಮೂಲದಲ್ಲಿರುವ ಹೊಳಪೆಂಬ ಅರ್ಥವನ್ನು ಧ್ವನಿಸುವ ಕೆಚ್ಚಿನ ಕಾಣಿಕೆ.
ತೀನಂಶ್ರೀ ಅವರು ಅದೊಂದು ಬಗೆಯಲ್ಲಿ ನೆಮ್ಮದಿಯ ಜೀವನವನ್ನು ನಡಸಿದವರು; ಪಾ. ವೆಂ. ಅವರಷ್ಟು ಕಡುಬಡತನದಲ್ಲಿ ಬೆಂದವರಲ್ಲ, ಅವರಂತೆ ವ್ಯವಸ್ಥಿತವಾದ ಶಿಕ್ಷಣಕ್ಕೆ ಎರವಾದವರಲ್ಲ. ಜೊತೆಗೆ ನಯ-ವಿನಯಗಳ, ಒಪ್ಪ-ಓರಣಗಳ, ಹದ-ಹವಣುಗಳ ಸಂಸ್ಕೃತಿಗೆ ಮನಸೋತವರು. ಪಾ. ವೆಂ. ಅವರಾದರೋ ಪತ್ರಿಕೋದ್ಯಮದ ಅನಿಶ್ಚಿತತೆಯನ್ನೂ ಸಾಂದರ್ಭಿಕತೆಯನ್ನೂ ಅನುದಿನ ಎದುರಿಸುತ್ತ ಬಂದವರು; ಪ್ರತಿಕೂಲವಾತಾವರಣವನ್ನು ಬಗೆಬಗೆಯಾಗಿ ನಿರ್ವಹಿಸಿಕೊಂಡು ನಡೆದವರು. ಈ ಹೋಲಿಕೆಯ ಆಶಯವು ಇವರಿಬ್ಬರ ನಡುವಣ ವ್ಯತ್ಯಾಸವನ್ನು ಸೂಚಿಸಲಲ್ಲದೆ ತರ-ತಮವನ್ನು ಮಾಡಲೆಂದು ಸರ್ವಥಾ ಅಲ್ಲ. ವಸ್ತುತಃ ಇವರಿಬ್ಬರ ಮನದಾಳದಲ್ಲಿದ್ದ ಅಪ್ಪಟ ಪಾಂಡಿತ್ಯ ಮತ್ತು ಹೃದ್ಯರಸಿಕತೆಗಳು ತುಂಬ ದೊಡ್ಡ ಸಾಮ್ಯ. ಇದೇ ಅವರನ್ನು ಸುಭಾಷಿತಗಳ ಅನುವಾದದಲ್ಲಿ ತೊಡಗಿಸಿದೆ.
To be continued.
* * *
Don't miss Prekshaa's annual book launch at 10am on Sunday, 8th December at Gokhale Institute of Public Affairs, Bangalore.Click here to know more.