ಬಹುಪತ್ನೀವ್ರತರ ಪಾಡೇ ಬೇರೆಯ ಜಾಡಿನದು. ಅವರ ಬಹುವಲ್ಲಭತೆಯ ಸುಖ-ಸಂತೋಷಗಳು ಅದು ಹೇಗೋ ಏನೋ, ನಮಗೆ ತಿಳಿಯದು. ಆದರೆ ತಂಟೆ-ತಕರಾರುಗಳು ಮಾತ್ರ ಜಗಜ್ಜಾಹೀರು. ಇದೂ ಒಂದು ಶಯ್ಯಾಗಾರ. ಅಮರುಕನನ್ನು ನಚ್ಚಿ ನಡೆಯುತ್ತಿರುವ ಈ ನಮ್ಮ ಸಂಚಾರದ ಕೇಂದ್ರಬಿಂದುವೇ ಹೆಚ್ಚಾಗಿ ಇದಲ್ಲವೆ? ಇಲ್ಲಿ ಈವರೆಗೆ ಹಾಯಾಗಿ ಲಲ್ಲೆಗೆರೆಯುತ್ತಿದ್ದ ಕಾದಲರ ನಡುವೆ ಇದೇಕಿಂಥ ವಿರಸ? ಹಾ, ತಿಳಿಯಿತು. ಪ್ರಣಯಜಲ್ಪನದ ಈ ಅಮರಶಿಲ್ಪಿ ಮಾತಿನ ಭರದಲ್ಲಿ ತನ್ನೊಡನಿರುವ ಈಕೆಯ ಹೆಸರಿಗೆ ಬದಲಾಗಿ ಮತ್ತೊಬ್ಬಳ ಹೆಸರನ್ನು ಉಸುರಿದ್ದಾನೆ. ಇಂಥ ಪ್ರಮಾದಗಳಿಗೆ ಸಂಸ್ಕೃತದಲ್ಲಿ “ಗೋತ್ರಸ್ಖಲಿತ”ವೆಂಬ ಗಂಭೀರವಾದ ಹೆಸರಿದೆ. ಆದೆಷ್ಟೇ ಭರ್ಜರಿಯಾದ ಹೆಸರನ್ನಿಟ್ಟರೂ ಆಗುವ ಎಡವಟ್ಟು ಬದಲಾದೀತೇ? ಸವತಿಯ ಹೆಸರು ಗಂಡನ ಬಾಯಿಂದ ಬಂದಾಗ ಹೆಣ್ಣಿಗಾಗುವ ಕ್ರೋಧಾಪಮಾನಗಳ ಅಳತೆಯನ್ನು ಯಾವ ಭರತಮುನಿ ತಾನೇ ಹೇಳಿಯಾನು? ಸಿಟ್ಟಿನಿಂದ ದಿಟ್ಟಿಯನ್ನು ಬೇರತ್ತ ಹಾಯಿಸಿ ಬುಸುಗುಟ್ಟುತ್ತಿರುವ ಅವಳನ್ನು ಮತ್ತೆ ಹದಕ್ಕೆ ತರಲು ಏನೆಲ್ಲ ಲಲ್ಲೆಗೆರೆದರೂ ಅದು ಫಲಿಸಿದಂತಾಗಿ ಪಾಪದ ಪ್ರಿಯತಮನು ತೆಪ್ಪಗಾಗುತ್ತಿದ್ದಾಗ, ಅವನ ಈ ಅಪರಾಧವು ಹುಸಿನಿದ್ದೆಯಲ್ಲಿ ಕಳೆದುಹೋಗಬಾರದೆಂದು ಈ ನಾಯಿಕೆ ಮತ್ತೆ ಕೊರಳು ಕೊಂಕಿಸಿ ಅವನತ್ತ ಕೆಕ್ಕರಿಸಿ ನೋಡಿದ್ದಾಳೆ.
ಅಮರುಕನು ಚಿತ್ರಿಸಿರುವ ಸಖಿಯರು ಕಡುಜಾಣೆಯರು. ಅವರಿಗೆ ನಾಯಕ-ನಾಯಿಕೆಯರ ಹೃದಯೇಂಗಿತಗಳು ತಮ್ಮ ಭಾವನೆಗಳಿಗಿಂತಲೂ ಚೆನ್ನಾಗಿ ಗೊತ್ತು. ಅವರಿಬ್ಬರ ನಡುವೆ ಕೌರವ-ಪಾಂಡವಸಂಧಿವಿಧಾನಧೌರೇಯನಾದ ಶ್ರೀಕೃಷ್ಣನಿಗಿಂತ ಸೊಗಸಾಗಿ ಸಂಧಾನವನ್ನು ಮಾಡಬಲ್ಲರು. ನಳ-ದಮಯಂತಿಯರ ನಡುವೆ ಹಂಸವೋ ಯಕ್ಷ-ಯಕ್ಷಿಯರ ನಡುವೆ ಮೇಘವೋ ಸಂದೇಶವನ್ನು ಕೊಂಡೊಯ್ದುದಕ್ಕಿಂತ ಚೆನ್ನಾಗಿ ಸುದ್ದಿಗಳನ್ನು ಮುಟ್ಟಿಸಬಲ್ಲರು. ತಾವು ಎಲ್ಲಿ ತೋರಿಕೊಳ್ಳಬೇಕು, ಮತ್ತೆಲ್ಲಿ ಜಾರಿಕೊಳ್ಳಬೇಕು, ಇನ್ನೆಲ್ಲಿ ಸಾರಿಕೊಳ್ಳಬೇಕು ಎಂಬುದನ್ನೆಲ್ಲ ಆತ್ಮಸಾತ್ತಾಗಿಸಿಕೊಂಡವರು. ಹೀಗಾಗಿಯೇ ನಲ್ಲರು ಬಂದು ನಲ್ಲೆಯರತ್ತ ಒಂದು ಅಳವಿನ ಸಲುಗೆಯನ್ನು ಮೀರುತ್ತಿದ್ದಂತೆಯೇ ಸಾಕೂತವಾಗಿ ನೋಡುತ್ತ, ತುಂಟನಗೆಯನ್ನು ಬೀರುತ್ತ ಪ್ರಣಯಿಗಳಿಗೆ ಏಕಾಂತವನ್ನು ಕಲ್ಪಿಸಿಕೊಟ್ಟು ಸೂರ್ಯೋದಯದಲ್ಲಿ ಕರಗಿಹೋಗುವ ಇಬ್ಬನಿಗಳಂತೆ ಮರೆಯಾಗಬಲ್ಲರು. ಅದೇ ನಾಯಿಕೆಯ ವಿರಹದಲ್ಲಿ, ನಾಯಕನ ವಿವಶತೆಯಲ್ಲಿ ಅವರನ್ನು ಮೈಯೆಲ್ಲ ಕಣ್ಣಾಗಿ ಕಾಪಿಟ್ಟು, ಬಗೆಯೆಲ್ಲ ಬುದ್ಧಿಯಾಗಿ ತಿಳಿಯಹೇಳಿ, ಪುನರ್ಮಿಲನಸವನಕ್ಕೆ ಪ್ರೇಮಾಗ್ನಿಯ ಆಧಾನವನ್ನೂ ಮಾಡಿಕೊಡಬಲ್ಲರು. ಹೆಚ್ಚೇನು, ಮುಗ್ಧೆಯರನ್ನು ವಿದಗ್ಧೆಯರನ್ನಾಗಿಸಬಲ್ಲರು, ಅತಿಮಾನವತಿಯರನ್ನು ನತಮಾನೆಯರನ್ನಾಗಿಯೂ ಮಾಡಬಲ್ಲರು. ದಕ್ಷಿಣನಾಯಕನಿಗೆ ಸತ್ಕಾರ ಸಲ್ಲಿಸುವಂತೆಯೇ ಧೃಷ್ಟ-ಶಠರಿಗೆ ಪಾಠವನ್ನೂ ಕಲಿಸಬಲ್ಲರು. ಇವರ ನೆರವಿಲ್ಲದೆ ನಾವು ಅಮರುಕನ ಜಗತ್ತಿನಲ್ಲಿ ಓಡಾಡುವಾಗ ಅನ್ನ-ಪಾನಗಳಿಲ್ಲದೆ ಕಷ್ಟಪಡುವ ಹಾದಿಗರಂತಾದೇವು.
ಇದೊ, ಇವರು ಕರೆದೊಯ್ದ ಹಾದಿಯಲ್ಲಿ ಸಾಗಿದಾಗ ನಮಗೆ ತೋರಿದ್ದಾಳೆ ಈ ನವವಧು. ಪಾಪ, ಈಕೆಗೆ ಪ್ರಣಯಕಲಹವೇ ಹೊಸತು. ಆದುದರಿಂದಲೇ ಇವಳಲ್ಲಿ ಪತಿಗೆ ಮಿಗಿಲಾಗಿ ಪ್ರೀತಿ. ಅಲ್ಲವೇ ಮತ್ತೆ, ಮಿಕ್ಕೆಲ್ಲ ಉದ್ಯಮಗಳಲ್ಲಿ ಅನುಭವಕ್ಕೆ ಹೆಚ್ಚಿನ ಬೆಲೆಯಾದರೆ, ಮದನೋದ್ಯೋಗದಲ್ಲಿ ಅನನುಭವಕ್ಕೇ ಅಗ್ರತಾಂಬೂಲ. ಗಂಡನು ಉಕ್ಕೇರಿ ಬರುವ ರಸಿಕತೆಯಿಂದ ಗಬಕ್ಕನೆ ಸೆರಗು ಹಿಡಿದರೆ ಇವಳು ಸರ್ವಸಮರ್ಪಣಭಾವದೈನ್ಯದಲ್ಲಿ ಮೊಗ ಬಗ್ಗಿಸುತ್ತಾಳೆ; ಅವನು ಬಲವಂತದಿಂದೆಂಬಂತೆ ಅಪ್ಪಲು ತುಡುಕಿದಾಗ ಮೈಯೆಲ್ಲ ಹಿಡಿಯಷ್ಟಾಗಿಸಿಕೊಳ್ಳುತ್ತಾಳೆ; ನಲ್ಲನ ಚೆಲ್ಲುನುಡಿಗಳಿಗೆ ಮಾರುತ್ತರ ನೀಡಲಾಗದೆ ನಗುವ ಸಖಿಯರ ಕಡೆಗೆ ಪೆಚ್ಚಾಗಿ ನೋಡುತ್ತಾಳೆ. ಹೀಗೆ ಮದುವೆಯ ಬಳಿಕ ಪತಿಯು ಮಾಡುವ ಮೊದಲ ಪರಿಹಾಸದಲ್ಲಿ ಮುಗುದೆಗೆ ಅವೇನೋ ಮುಜುಗರದ ಗೋಜಲುಗಳು.
ಭಗವಂತನನ್ನು ಪಂಚೋಪಚಾರ-ಷೋಡಶೋಪಚಾರಾದಿಗಳಿಂದ ಸಂಭಾವಿಸುವುದು ಪ್ರಸಿದ್ಧಸಂಪ್ರದಾಯ. ಇದು ನಲ್ಲ-ನಲ್ಲೆಯರ ನಡುವೆಯೂ ಆಗುವುದನ್ನು ಅಮರುಕ ಅನ್ಯಾದೃಶವಾಗಿ ಚಿತ್ರಿಸುತ್ತಾನೆ. ಶಂಕರಭಗವತ್ಪಾದರಂಥವರು ಪರಾಪೂಜೆ, ಶಿವಮಾನಸಪೂಜೆ, ತ್ರಿಪುರಸುಂದರೀಮಾನಸಪೂಜೆ ಮುಂತಾದ ಸ್ತೋತ್ರಗಳ ಮೂಲಕ ದೇವರಿಗೆ ಭಕ್ತನ ಮಾನಸಪೂಜೆಯನ್ನೇ ಮಿಗಿಲಾಗಿ ರೂಪಿಸಿಕೊಟ್ಟರೆ, ಅಮರುಕನು ಮಾನಸಪ್ರೇರಿತವಾದ ಆಂಗಿಕದಲ್ಲಿಯೇ ಎಲ್ಲ ಬಗೆಯ ಪ್ರಣಯಪೂಜೆಯನ್ನು ಅಣಿಮಾಡಿದ್ದಾನೆ.
ಇಲ್ಲೊಬ್ಬಳು ಕಾದಲೆ ತನ್ನ ಕಾದಲನಿಗೆ ಬಟ್ಟಲುಗಂಗಳ ನೋಟದಿಂದಲೇ ವಂದನಮಾಲಿಕೆಯನ್ನು ಆಪಾದಮಸ್ತಕವೂ ಸೂಡಿದಳಲ್ಲದೆ ಕನ್ನೈದಿಲೆಗಳ ಹಾರವನ್ನು ಉಪಹಾರವಾಗಿ ನೀಡಲಿಲ್ಲ. ಪುಷ್ಪಾಂಜಲಿಯಾಗಿ ಮುಗುಳ್ನಗೆಯನ್ನೇ ಮೊಗೆಮೊಗೆದು ಸಲ್ಲಿಸಿದಳಲ್ಲದೆ ಮೊಲ್ಲೆ-ಜಾಜಿಗಳ ಬೊಗಸೆಯನ್ನಲ್ಲ. ಕಟ್ಟೊಲವಿನ ಎದೆಕಟ್ಟಿನ ಬೆವತ ಬಿಗುಪಿನ ಮೂಲಕವೇ ಅರ್ಘ್ಯ-ಪಾದ್ಯಗಳನ್ನು ಕೊಟ್ಟಳಲ್ಲದೆ ಹೇಮಕುಂಭಗಳನ್ನು ತಂದಿಡಲಿಲ್ಲ. ಒಟ್ಟಿನಲ್ಲಿ ದಯಿತನ ಆಗಮನಮಂಗಲವನ್ನು ಒಡಲಿನಿಂದ ಅರ್ಚಿಸಿದಳಲ್ಲದೆ ಹೊರಗಿನಿಂದಲ್ಲ. ಇಂಥ ಆರಾಧನೆಗೆ ಪಾತ್ರನಾದ ಆ ಪುಣ್ಯಾತ್ಮನೇ ಧನ್ಯ.
ಅದೋ ಅಲ್ಲಿದ್ದಾಳೆ ಮುಗ್ಧನಾಯಿಕೆ. ಅವಳಿಗೆ ತನ್ನ ಇನಿಯನ ಮೇಲೆ ಮುನಿಸೇನೋ ಆಯಿತು. ಮನಸ್ಸಾದ ಮೇಲೆ ಮುನಿಸೂ ಆಗುವುದು ಸಹಜವಲ್ಲವೇ? ಆಗ ತನ್ನ ಮುನಿಸನ್ನು ಸಖಿಯರ ಪಾಠಾನುಸಾರ ಯಥಾಶಕ್ತಿ ಕೆಲವೊಂದಿಷ್ಟು ಆಂಗಿಕ-ವಾಚಿಕಗಳ ಮೂಲಕ ಲಗುಬಗೆಯಿಂದ ಪ್ರಿಯನಲ್ಲಿ ಸಲ್ಲಿಸಿ ಅನಂತರ ಮನಸೋ ಇಚ್ಛೆಯಾಗಿ ಮನಸಿಜನ ಇಚ್ಛೆಯಂತೆ ನಡೆದುಕೊಂಡಳು. ಅಬ್ಬಾ, ಇಂಥ ಮುಗ್ಧತೆಯ, ಇಂಥ ಶೃಂಗಾರದ ಸೊಗಸು ಮತ್ತೆಲ್ಲಿ?
ಪ್ರಣಯದಲ್ಲಿ ಬರಿಯ ಅಂಗ-ಉಪಾಂಗಗಳಷ್ಟೇ ಅಲ್ಲ, ಪ್ರತ್ಯಂಗಗಳೂ ಪ್ರಗಲ್ಭವಾಗಿ ಸ್ಪಂದಿಸುತ್ತವೆ. ಇಲ್ಲೊಬ್ಬ ಪ್ರೌಢೆಯಾದ ಮದವತಿ ಮಾನಿನಿಯ ಕಟಾಕ್ಷವೀಕ್ಷಣದ ಪ್ರಕಾರಗಳನ್ನು ಕವಿಯು ಕೂಲಂಕಷವಾಗಿ ಬಣ್ಣಿಸಿದ್ದಾನೆ. ಇದು ಭರತಮುನಿಯ ನೇತ್ರಭೇದಗಳ ಸೂತ್ರಗಳಿಗೇ ಬರೆದ ಪ್ರಸನ್ನಗಂಭೀರಭಾಷ್ಯ. ದೂರದಿಂದ ಪ್ರಿಯತಮನು ಬಂದಾಗ ಹೊರಳಿದ ಆ ನೋಟವು ಮಾತಿಗೆ ತೊಡಗಿದಾಗ ಅರಳಿತು. ಈ ಮುನ್ನ ವಂಚಿಸಿದ ಅವನು ಮೈಮರವೆಯಲ್ಲಿ ಅವಳ ಸೆರೆಗು ಹಿಡಿದಾಗ ಕೆಂಪಾಯಿತು, ಹುಬ್ಬು ಗಂಟಾಯಿತು. ಒಡನೊಡನೆಯೇ ತನ್ನ ತಪ್ಪನ್ನು ತಿದ್ದಿಕೊಳ್ಳುವಂತೆ ಆಕೆಯ ಪಾದಗಳಿಗವನು ಎರಗಿದಾಗ ಕಂಬನಿಯ ಪೂರವೂ ಅವನ ಮೇಲೆ ಸುರಿಯಿತು. ಒಟ್ಟಿನಲ್ಲಿ ಬೇಟದಲ್ಲಿ ಅವಳ ನೋಟವು ಜಗದೋಟವೇ ಆಯಿತು.
ಇಂಥ ಭಾವದ್ಯೋತಕವಾದ ಕಣ್ಣುಗಳೇ ಕಾಣದ ಕೋಣದಲ್ಲಿ ಕಂಬನಿಯನ್ನಷ್ಟೇ ಸುರಿಸಿ, ನಿಗೂಢವಾಗಿ ನಿಟ್ಟುಸಿರಿನಲ್ಲಿ ಮುಗಿಯುವ ಸಂದರ್ಭಗಳೂ ಇಲ್ಲದಿಲ್ಲ. ಇಂಥ ಒಂದು ಸಂನಿವೇಶವನ್ನು ಅಪ್ರಾಮಾಣಿಕನಾದ ಪ್ರಣಯಿಯು ಮುಗ್ಧೆಯಾದ ಪ್ರಣಯಿನಿಗೆ ಒದಗಿಸಿದ್ದಾನೆ. ಹಾಗೆಂದು ಅವನಿಗೆ ಪ್ರೀತಿಯಿಲ್ಲವೆಂದಿಲ್ಲ. ಆದರೆ ಅದು ಹಲವೆಡೆ ಹಂಚಿಹೋಗಿದೆಯಷ್ಟೆ. ಇದರಿಂದ ಸೊರಗಿದ ಸತಿಯನ್ನು ಅವಳ ಕೃಶತೆಗೆ ಕಾರಣವೇನೆಂದು, ಬಳಲಿಕೆಗೆ ಹೇತುವೇನೆಂದು, ಮೈಬಿಳಿಚಿಕೊಳ್ಳುವಿಕೆಗೆ ಮೂಲವೇನೆಂದು ಕಕ್ಕುಲತೆಯಿಂದಲೇ ಕಾಂತನು ಕೇಳಿದಾಗ ಆಕೆ ತಾನೇ ಏನೆಂದು ಹೇಳಿಯಾಳು? ಬಿಸಿಗಂಬನಿ ಮತ್ತು ಬಿಸಿಯುಸಿರಲ್ಲದೆ ಇನ್ನೇನು ತಾನೇ ಉಳಿದೀತು?
ಪದ್ಯಕುಕ್ಷಿಯಲ್ಲಿ ಸಂವಾದವೆಂಬ ಭೂರಿಭೋಜನವನ್ನು ನಿಕ್ಷೇಪಿಸುವುದು ಎಂಥ ಕವಿಬಕಾಸುರನಿಗೂ ಕಷ್ಟ. ಕೇವಲ ಅಮರುಕ ಮತ್ತು ಲೀಲಾಶುಕರು ಇದರಲ್ಲಿ ಸಿದ್ಧಹಸ್ತರಾದ ಪ್ರಸಿದ್ಧರು. ಇಂಥ ಒಂದು ಸಂಭಾಷಣೆಯನ್ನು ನಾವೀಗ ಹೊಂಚಿ ಕೇಳೋಣ: “ಎಲೆ ಬಾಲೆ” “ನಾಥ?” “ಮುನಿಸನ್ನು ಬಿಡು ಮಾನಿನಿ” “ಮುನಿದೇನು ತಾನೇ ಮಾಡಿದೆನು?” “ನಮ್ಮೊಳಗೆ ವಿರಸ” “ಇದಕ್ಕೆ ನೀನು ಹೊಣೆಯಲ್ಲ; ನಾನೇ ಹೊಣೆ” “ಮತ್ತೇಕೆ ಬಿಕ್ಕಿಬಿಕ್ಕಿ ಅಳುವೆ?” “ಯಾರೆದುರು ಅಳುತ್ತಿದ್ದೇನೆ?” “ಮಾತಾರೆದುರು, ನನ್ನೆದುರಲ್ಲವೇ?” “ನೀನಾರು?” “ನಾನು ನಿನ್ನ ನಲ್ಲ” “ಅದು ನೀನಲ್ಲವೆಂದೇ ನನ್ನೀ ಅಳು”. ಇದಕ್ಕೆ ವ್ಯಾಖ್ಯಾನ ಮಾಡುವುದು ಕವಿಗೆ ಅವಮಾನ, ರಸಕ್ಕೆ ಅನ್ಯಾಯ, ರಸಿಕರಿಗೆ ಅಪಚಾರ.
ಇವಳೊಬ್ಬಳು ಪ್ರೋಷಿತಪತಿಕೆ. ಮತ್ತೂ ಸರಿಯಾಗಿ ಹೇಳಬೇಕೆಂದರೆ, ಪ್ರವತ್ಸ್ಯತ್ಪತಿಕೆ. ಹಾಂ, ದಪ್ಪದಪ್ಪ ಸಂಸ್ಕೃತಪದಗಳಿಗೆ ಬೆಚ್ಚಿಬೀಳಬೇಡಿ! ಯಾರ ನಲ್ಲನು ಪ್ರವಾಸಕ್ಕೆ ಹೊರಡಲಿದ್ದಾನೋ ಅಂಥ ನಲ್ಲೆಯ ಹೆಸರು ಪ್ರವತ್ಸ್ಯತ್ಪತಿಕೆ ಎಂದು. ಶಾಸ್ತ್ರಕಾರರಿಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ನಾಮಧೇಯ-ರೂಪಧೇಯಗಳಿಂದ ಲಕ್ಷಣೀಕರಿಸದಿದ್ದರೆ ಉಂಡದ್ದು ಅರಗುವುದಿಲ್ಲ. ಅಲ್ಲದೆ, ಇಂಥ ಕಷ್ಟವನ್ನವರು ಪಡದಿದ್ದರೆ ನಮ್ಮಂಥ ಕವಿ-ಸಹೃದಯರಿಗೆ ಅನುಕೂಲವೂ ಆಗುತ್ತಿರಲಿಲ್ಲ. ಇರಲಿ. ಈಗ ಇವಳ ಗತಿಯನ್ನು ನೋಡೋಣ. ರಮಣನು ಪಯಣಕ್ಕೆ ತೆರಳಲಿದ್ದಾಗ ಅವನ ಉತ್ತರೀಯವನ್ನು ಹಿಡಿದೆಳೆಯಲಿಲ್ಲ, ಬಾಗಿಲ ಬಳಿ ನಿಂತು ಗೋಗರೆಯಲಿಲ್ಲ, ಕಾಲಿಗೆ ಬಿದ್ದು ಹೋಗಬೇಡವೆಂದು ಹಳಹಳಿಸಲೂ ಇಲ್ಲ. ಆ ಹಠಮಾರಿ ನಲ್ಲನು ತೆರಳುವ ಹೊತ್ತಿನಲ್ಲಿ ಕೇವಲ ಆಕೆಯ ಕಂಬನಿಯ ಕಡಲೇ ಅವನನ್ನು ಕಟ್ಟಿಹಾಕಿತು. ದಿಟವೇ, ಮತ್ತಾವ ಭೌತಿಕಪ್ರತಿರೋಧಗಳಿಗಿಂತ ಇಂಥ ಭಾವುಕಪ್ರತಿರೋಧಗಳ ಬಲ ಹೆಚ್ಚು, ಬೆಲೆಯೂ ಹೆಚ್ಚು.
ಅಮರುಕನು ಸಾಮಾನ್ಯವಾಗಿ ಉದ್ದೀಪನವಿಭಾವಗಳನ್ನು ವರ್ಣಿಸುವುದಿಲ್ಲ. ಉದ್ದೀಪನವಿಭಾವೆಂದರೆ ಪಾತ್ರಗಳಿಗೆ ಅನುಕೂಲಕರವಾಗಿ ಒದಗಿಬರಬಲ್ಲ ಎಲ್ಲ ಬಗೆಯ ಪರಿಕರಸಾಮಗ್ರಿ. ಇಲ್ಲಿ ಮಾನವರು, ತಿರ್ಯಗ್ ಜಂತುಗಳು ಹಾಗೂ ಸ್ಥಾವ-ಜಂಗಮಾತ್ಮಕವಾದ ಸಕಲಪ್ರಕೃತಿಯೂ ಸೇರುತ್ತದೆ. ಅಷ್ಟೇಕೆ, ದೇಶ-ಕಾಲಾತ್ಮಕವಾದ ಜಜತ್ತೆಲ್ಲ ಅಡಕವಾಗುತ್ತದೆ. ಇದರಲ್ಲಿ ಸಂಸ್ಕೃತಿಯದೂ ಒಂದು ಭಾಗ; ನಾಗರಕತೆಯದೂ ಒಂದು ಭಾಗ. ಅಮರುಕನಿಗೆ ಆಲಂಬನವಿಭಾವಗಳಾದ ನಾಯಕ-ನಾಯಿಕೆಯರೇ ಸಾಕು. ಆದರೆ ಅಂಥ ಸಂಯಮಿಯನ್ನೂ ಕೆಣಕಿದೆ ಶೃಂಗಾರಶಯ್ಯೆ. ಅಲ್ಲವೇ ಮತ್ತೆ, ಭೋಗಿಗೂ ರೋಗಿಗೂ ಒದಗಿಬರುವುದು ಹಾಸಿಗೆಯೊಂದೇ ತಾನೆ? ಅಮರುಕ ಕಂಡ ಹಾಸಿಗೆ ರಸಿಕರು ನೋಡುವಂತಿದೆ. ಇದು ರತಾಂತಶಯ್ಯೆಯೆಂಬುದು ನೋಡಿದೊಡನೆಯೇ ತಿಳಿಯದಿರದು: ಅಲ್ಲಿ ತಾಂಬೂಲದ ಕಲೆಗಳುಂಟು, ಅಗುರು-ಚಂದನಗಳ ಗುರುತುಗಳುಂಟು, ಅಲತಿಗೆ-ಕರ್ಪೂರಗಳ ಜಾಡೂ ಉಂಟು. ಎಲ್ಲಕ್ಕಿಂತ ಮಿಗಿಲಾಗಿ, ಬಾಡಿಹೋದ ಬಿಡಿಹೂಗಳುಂಟು. ಎಣೆಮೀರಿ ಸುಕ್ಕುಸುಕ್ಕಾದ ಹೊದಿಕೆಯೂ ಉಂಟು. ಇದನ್ನು ಕಂಡು ಮಡಿವಂತರು ಮೂಗುಮುರಿದಾರು. ಆದರೆ ಅವರಿಗೂ ಒತ್ತಡವಿಳಿಸುವುದು ಇದೇ ಹಾಸಿಗೆಯಲ್ಲವೇ?
ಅಮರುಕನು ಅದೆಂಥ ಮುಜುಗರದ ಸಂದರ್ಭಗಳನ್ನೂ ಕಾವ್ಯವಸ್ತುಗಳಾನ್ನಾಗಿಸಿಕೊಳ್ಳಬಲ್ಲ; ಮಾತ್ರವಲ್ಲ, ಹಾಗೆ ಮಾಡಿಕೊಂಡು ಗೆಲ್ಲಲೂ ಬಲ್ಲ. ಇದೊಂದು ಅಂಥ ಅನೂಹ್ಯಸಂದರ್ಭ. ನಲ್ಲೆಯು ಇದ್ದಕ್ಕಿದ್ದಂತೆ ಶೃಂಗಾರಶಯ್ಯೆಯಿಂದ ಮೇಲೆದ್ದು ತುಸು ದೂರ ನಿಂತು, ಚುಂಬನಕ್ಕೆ ಮುಂದಾದ ರಮಣನನ್ನು ಹುಬ್ಬುಹಾರಿಕೆಯಿಂದ, ತುಟಿಗಳ ಮಿಡುಕಿನಿಂದ, ಒಡಲಿನ ಪುಲಕದಿಂದ, ತೂಗಾಡುವ ಕುಂಡಲಗಳ ಸುಳಿಬೆಳಕಿನಿಂದ, ಗಪ್ಪನೆ ಮೈಮುಚ್ಚಿಕೊಂಡ ಸೀರೆಯ ಸೆರಗಿನಿಂದ, ಎಲ್ಲಕ್ಕೂ ಮಿಗಿಲಾಗಿ ನಾಚಿಕೆ ಮಿಂಚುವ ಕಂಡೂಕಾಣದ ನಗೆಯಿಂದ ತಡೆಯುತ್ತಿದ್ದಾಳೆ. ಪಾಪ, ಪ್ರಕೃತಿ ಸ್ತ್ರೀಗಿತ್ತ ಸೃಷ್ಟಿಶೀಲತೆಯ ವರವೀಗ ಆಕೆಯ ಶೃಂಗಾರಸಂಗೀತದಲ್ಲಿ ವಿವಾದಿಸ್ವರವಾಗಿದೆ. ಆಧುನಿಕಸಾಹಿತಿಗಳು ಇಂಥ ಸಂದರ್ಭಗಳನ್ನು ಚಿತ್ರಿಸುವಲ್ಲಿ ಅಹಮಹಮಿಕೆ ತೋರಿದ್ದುಂಟು. ಆದರೆ ಅಮರುಕನ ಪಾಕವೆಲ್ಲಿ? ಔಚಿತ್ಯವಿವೇಕವೆಲ್ಲಿ?
ನಾಯಿಕೆಯರ ಪೈಕಿ ಅಭಿಸಾರಿಕೆಯಂಥ ದಟ್ಟವಾದ ಪ್ರೀತಿಯ, ದೀಟ್ಟವಾದ ವರ್ತನೆಯ ಹೆಣ್ಣು ಮತ್ತೊಬ್ಬಳಿಲ್ಲ. ಸ್ವಭಾವಸಹಜವಾದ ಸಂಕೋಚಕ್ಕೆ ವಿದಾಯ ಹೇಳಿ ನಿಶ್ಶಂಕೆಯಿಂದ ಪ್ರಿಯನಿರುವತ್ತ ಸಾಗುವ ಪ್ರಣಯೋನ್ಮತ್ತೆಯೇ ಅಭಿಸಾರಿಕೆ. ಕಪ್ಪಂಗಪ್ಪು ಕತ್ತಲೆಯಲ್ಲಿ, ಮುಸಲಧಾರೆಯ ಮಳೆಯಲ್ಲಿ, ಬೆಳ್ಳಿಯಂಥ ಬೆಳ್ದಿಂಗಳಲ್ಲಿ, ಮತ್ತೂ ಕಾತರ ಮಿಗಿಲಾದರೆ ಹಟ್ಟಹಗಲಿನಲ್ಲಿ ಕೂಡ ಇನಿಯನತ್ತ ಧಾವಿಸಬಲ್ಲ ತೀವ್ರತೆ ಈಕೆಯದು. ಹಾಗೆ ನಕ್ತಾಭಿಸಾರಿಕೆಯಾಗಿ ಸಾಗುತ್ತಿದ್ದ ಸುಂದರಿಯೊಡನೆ ಕವಿಯು ಸಂವದಿಸುತ್ತಾನೆ: “ಈ ಕತ್ತಲಲ್ಲೆಲ್ಲಿ ಹೊರಟೆ, ಓ ಚದುರೆ?” “ಎಲ್ಲಿರುವನೋ ನನ್ನ ಮನದನ್ನ, ಅಲ್ಲಿಗೆ” “ಒಬ್ಬಂಟಿ ನೀನು; ಭಯವಿಲ್ಲವೇನು?” “ಬೆಂಗಾವಲಾಗಿ ಬರುತಿರುವನಲ್ಲ ಬಿಲ್ಲು-ಬಾಣಗಳನ್ನು ಹಿರಿದ ಕಂದರ್ಪ?” ಹೀಗೆ ಅನಂಗನನ್ನೇ ಅಂಗರಕ್ಷಕನನ್ನಾಗಿ ಮಾಡಿಕೊಂಡ ಅಂಗನಾಮಣಿಯರ ಅಗ್ಗಳಿಕೆಯನ್ನು ಏನೆಂದು ಬಣ್ಣಿಸುವುದು?