(“ಮಹಾಭಾರತ”ದ ಹಿನ್ನೆಲೆಯಲ್ಲಿ “ಕರ್ಣಾಟಭಾರತಕಥಾಮಂಜರಿ”, “ಕೃಷ್ಣಾವತಾರ” ಮತ್ತು “ಪರ್ವ”ಗಳ ತೌಲನಿಕಚಿಂತನೆ)
ಕರ್ಣಾಟಭಾರತಕಥಾಮಂಜರಿ
ಕುಮಾರವ್ಯಾಸನ ಪ್ರತಿಭಾಫಲವಾದ ಈ ಕಾವ್ಯ ಕನ್ನಡದ ಅತ್ಯಂತ ಬೃಹತ್ತೂ ಮಹತ್ತೂ ಆದ ಕೃತಿಯೆಂದರೆ ಅತಿಶಯವಲ್ಲ. ಈ ಮುನ್ನವೇ ನಾವು ಕಂಡಂತೆ ಇದು ಮೂಲಭೂತವಾಗಿ ಕಥನಕಾವ್ಯ, ಅಂದರೆ ಇತಿವೃತ್ತಪ್ರಧಾನವಾಗಿ ಸಂದರ್ಭಗಳನ್ನೂ ಘಟನೆಗಳನ್ನೂ ಹೆಣೆದುಕೊಂಡು ಹೋಗುವುದರೊಟ್ಟಿಗೆ ವಕ್ರೋಕ್ತಿವೈಚಿತ್ರ್ಯಪ್ರಧಾನವಾದ ಕಾವ್ಯವನ್ನು ನಿರ್ಮಿಸುವುದು ಇಲ್ಲಿಯ ವಿಶೇಷ. ಈ ಕಾರಣದಿಂದಲೇ ಹೆಚ್ಚಿನ ಪದ್ಯಗಳು ಸ್ವಯಂಪೂರ್ಣವಾಗಿಯೇ ಸೊಗಯಿಸುತ್ತವೆ; ಕಥನಪ್ರವಾಹಕ್ಕೂ ಸಾಕಷ್ಟು ಯೋಗದಾನವನ್ನೀಯುತ್ತವೆ. ಸಾಮಾನ್ಯವಾಗಿ ಯಾವುದೇ ಕಥನದಲ್ಲಿ ತಲೆದೋರಬಹುದಾದ ಶುಷ್ಕನಿರೂಪಣೆಯ ನೈರಸ್ಯವನ್ನು ಸಾಲಂಕೃತಪದ್ಯಶೈಲಿ ನಿವಾರಿಸುತ್ತದೆ ಹಾಗೂ ನಿರಂತರವಾಗಿ ಎಡತಾಕುವ ಮೂಲಕ ಮನೋಬುದ್ಧಿಗಳಿಗೆ ಕೆಲಮಟ್ಟಿಗೆ ಭಾರವಾಗಬಲ್ಲ ಚಮತ್ಕಾರಮಯಪದ್ಯಗಳ ಒತ್ತಡವನ್ನು ಸರಳಕಥನಾತ್ಮಕರೀತಿಯು ತಗ್ಗಿಸುತ್ತದೆ. ಹೀಗೆ ಕರ್ಣಾಟಭಾರತಕಥಾಮಂಜರಿಯಂಥ ಕಾವ್ಯವು ಏಕಕಾಲದಲ್ಲಿ ಪ್ರಬಂಧಸ್ತರದಲ್ಲಿಯೂ ವಾಕ್ಯಸ್ತರದಲ್ಲಿಯೂ ಇನಿ-ಬನಿಗಳ ಹದ-ಹಾಳತಗಳನ್ನು ಮೈಗೂಡಿಸಿಕೊಂಡಿದೆ.
ಪ್ರಬಂಧಸ್ತರ ಅಥವಾ ಇತಿವೃತ್ತವೆಂದೊಡನೆಯೇ ಅದು ಪಾತ್ರಚಿತ್ರಣವನ್ನು ಒಳಗೊಂಡಿರುತ್ತದೆಂಬುದು ಸ್ವಯಂವೇದ್ಯ. ಕುಮಾರವ್ಯಾಸನ ಪ್ರಕೃತಕಾವ್ಯವು ಬಲುಮಟ್ಟಿಗೆ ತನ್ನ ಇತಿವೃತ್ತ ಮತ್ತು ಪಾತ್ರಚಿತ್ರಣಗಳಿಗಾಗಿ ವ್ಯಾಸಭಾರತವನ್ನೇ ಆಧರಿಸಿದೆ (ಆದರೆ ಕೆಲವೊಂದು ಪಾತ್ರಗಳು ವ್ಯಾಸಭಾರತದ ಘನತೆಯ ಅಳತೆಯಲ್ಲಿ ಕಂಡಾಗ ತಮ್ಮ ತೂಕ ತಪ್ಪುತ್ತವೆ. ಹೆಚ್ಚೇನು, ಆತನ ಕೃಷ್ಣನು ಭಾಗವತಕ್ಕೆ ಹೆಚ್ಚು ಸಲ್ಲುವನಲ್ಲದೆ ಭಾರತಕ್ಕಲ್ಲ!) ದಿಟವೇ, ಅಲ್ಲಷ್ಟು ಇಲ್ಲಷ್ಟು ಹರಿವಂಶ, ಭಾಗವತ, ಪಂಪಭಾರತಗಳಂಥ ಪೂರ್ವಸೂರಿನಿರ್ಮಿತಕೃತಿಗಳ ಆನೃಣ್ಯವಿಲ್ಲದಿಲ್ಲ. ಆದರೆ ಇದು ಪ್ರಾಯಶಃ ಗೌಣ. ಇಂತಿದ್ದೂ ಇದಕ್ಕೆ ಹೋಲಿಸಿದರೆ, ಪೂರ್ವಸೂರಿಗಳನ್ನು ಕುರಿತು ಕುಮಾರವ್ಯಾಸನ ಆಧಮರ್ಣ್ಯವು ಹೆಚ್ಚಾಗಿ ಆತನ ಉಕ್ತಿವೈಚಿತ್ರ್ಯದಲ್ಲಿದೆ. ಅವನಲ್ಲಿ ಹಲವು ಕಡೆ ಕಾಳಿದಾಸ, ಬಾಣಭಟ್ಟ, ಭರ್ತೃಹರಿ, ಭಾರವಿ, ಮಾಘ ಮುಂತಾದ ಸಂಸ್ಕೃತಕವಿಗಳ ಹಾಗೂ ಪಂಪ-ರನ್ನರಂಥ ಕನ್ನಡಕವಿಗಳ ಕೆಲವೊಂದು ಪದ್ಯಗಳ ಪ್ರಭಾವವನ್ನು ಗಮನಿಸಬಹುದು. ಆದರೆ ಇವೆಲ್ಲವೂ ಆತನ ಸ್ವೋಪಜ್ಞಸೌಂದರ್ಯನಿರ್ಮಾಣದ ಗುಣ-ಗಾತ್ರಗಳ ಮುಂದೆ ತೀರ ಅಲ್ಪಪ್ರಮಾಣದ್ದು. ವಿಶೇಷತಃ ಲಕ್ಷಣಾಮೂಲಧ್ವನಿಯ ಪರಮಾಚಾರ್ಯನೇ ಅವನು. ರೂಪಕ, ಉತ್ಪ್ರೇಕ್ಷೆ, ಅತಿಶಯೋಕ್ತಿ, ಪರ್ಯಾಯೋಕ್ತ, ವಿಭಾವನಾ, ವಿಷಮ, ವಿರೋಧ, ವ್ಯಾಜ ಮುಂತಾದ ಅವೆಷ್ಟೋ ಧ್ವನಿಸ್ಪರ್ಶದೀಪ್ತವಾದ ಸಾರ್ಥಕಾಲಂಕಾರಗಳ ನಿರ್ವಾಹದಲ್ಲಿ ಅವನಿಗೆ ಅವನೇ ಸಾಟಿ. ಮುಖ್ಯವಾಗಿ ಆಡುನುಡಿಯ ರೂಪಗಳನ್ನು ಊಹಾತೀತವಾದ ಸೊಗಸಿನಿಂದ ಬಳಸಿಕೊಳ್ಳುವಲ್ಲಿ ಕುಮಾರವ್ಯಾಸನು ತನ್ನ ಪೂರ್ವಸೂರಿಗಳಾದ ಬಸವ-ಅಲ್ಲಮ-ನಯಸೇನ-ಶಿವಕೋಟ್ಯಾಚಾರ್ಯರಂಥವರನ್ನು ಹಿಂದಿಕ್ಕಿ ಲೋಕಾತಿಕ್ರಾಂತನೇ ಆಗಿದ್ದಾನೆ. ಯಾವುದನ್ನು ಅಪ್ಪಟ ಕನ್ನಡದ ನುಡಿಗಟ್ಟೆಂದು ನಾವು ಮೆಚ್ಚಬಲ್ಲೆವೋ ಆ ನಿಸರ್ಗಮನೋಹರವಾಣಿಯನ್ನು ಅಯತ್ನಸಿದ್ಧವಾದ ಅಲಂಕಾರಗಳ ಮೂಲಕ ರಚನೆಯಲ್ಲಿಯೇ ಹಾಸುಹೊಕ್ಕಾದ ಕಾಕು-ಭಣಿತಿಗಳ ಮೂಲಕ ಮನಮುಟ್ಟಿಸುವಲ್ಲಿ ಆತನ ಶ್ರಾವಣಪ್ರತಿಭೆ (Auditory Imagination) ಬಲುಮಿಗಿಲು. ಸಂಸ್ಕೃತಸಮಾಸಗಳನ್ನು ಉದ್ದಂಡವಾಗಿ ರೂಪಿಸುವಂತೆಯೇ ಅಚ್ಚಗನ್ನಡದ ನುಡಿಗಟ್ಟುಗಳನ್ನು ಬಗೆಬಿಚ್ಚಳಿಸುವಂತೆ ಹೆಣೆಯಬಲ್ಲ ಈ ಕವಿ ಕುಂತಕನು ಕಟಾಕ್ಷಿಸುವ “ವಿಚಿತ್ರಮಾರ್ಗ”ದ ವಿಕ್ರಮಾರ್ಕ. ಶ್ರವ್ಯಕಾವ್ಯವಾದ ತನ್ನ ಈ ಕೃತಿಯಲ್ಲಿ ದೃಶ್ಯಕಾವ್ಯದ ಅವೆಷ್ಟೋ ಮೌಲ್ಯಗಳನ್ನು ಕುಮಾರವ್ಯಾಸನು ಗರ್ಭೀಕರಿಸಿದ್ದಾನೆ. ಇದು ಕೇವಲ ಪಾತ್ರಗಳ ನಾಟಕೀಯವಾದ ಸಂವಾದಗಳಲ್ಲಿರಲಿ, ರಂಗಸೂಚಿಕೆಯೆನ್ನುವ ಮಟ್ಟದ ದೇಹಭಾಷಾನಿರೂಪಣೆಯಲ್ಲಿಯೂ ಸಂನಿವೇಶಗಳ ಚಲನಶೀಲತೆಯಲ್ಲಿಯೂ ಮಿಂಚಿ ಮೇವರಿದಿದೆ. ಆನಂದವರ್ಧನನು ಗುರುತಿಸುವ “ಕವಿಪ್ರೌಢೋಕ್ತಿ” ಮತ್ತು “ಕವಿನಿಬದ್ಧಪ್ರೌಢೋಕ್ತಿ”ಗಳೆಂಬ ವಾಗ್ವಿಲಾಸಪ್ರಕಾರಗಳೆರಡರಲ್ಲಿಯೂ ಪ್ರವೀಣನಾದ ಈ ಕವಿಯು ಸ್ವೋಪಜ್ಞತೆಯ ಸಾರ್ವಭೌಮ; ಮತ್ತು ಈ ಗುಣವು ಅವನಲ್ಲಿ ಪ್ರಧಾನವಾಗಿ ಕಾಣುವುದು “ವಾಕ್ಯವಕ್ರತೆ” ಹಾಗೂ “ಪ್ರಕರಣವಕ್ರತೆ”ಗಳಲ್ಲಲ್ಲದೆ “ಪ್ರಬಂಧವಕ್ರತೆ”ಯಲ್ಲಲ್ಲವೆಂಬುದು ಸ್ಮರಣೀಯ. ಒಟ್ಟಿನಲ್ಲಿ, ಕುಮಾರವ್ಯಾಸನು ಇತಿವೃತ್ತ ಮತ್ತು ಪಾತ್ರನಿರ್ಮಾಣಗಳಲ್ಲಿ ತೋರುವ ಸ್ವೋಪಜ್ಞತೆಗಿಂತ ಉಕ್ತಿವೈಚಿತ್ರ್ಯದಲ್ಲಿ, ಕಥನಕ್ರಮದಲ್ಲಿ ಸಾಧಿಸಿರುವ ಸ್ವಂತಿಕೆ ಮಹತೋಮಹೀಯ. ಒಂದು ಮಾತಿನಲ್ಲಿ ಹೇಳುವುದಾದರೆ, ಅವನ ಪ್ರಬಂಧಗತವಾದ “ರಸಧ್ವನಿ”ಸ್ವಾರಸ್ಯವೆಲ್ಲವೂ ಬಲುಮಟ್ಟಿಗೆ ವ್ಯಾಸರದೇ; ಪದ್ಯಗತವಾದ ವಕ್ರೋಕ್ತಿವಿಲಾಸವೆಲ್ಲ ಸರಿಮಿಗಿಲಾಗಿ ಅವನದೇ. ಅರ್ಥಾತ್, “ಗುಣೀಭೂತವ್ಯಂಗ್ಯ”ಸೀಮೆಯ ಸಮ್ರಾಟನಾಗಿ ಅವನು ಸಲ್ಲುತ್ತಾನೆ.
ಕೃಷ್ಣಾವತಾರ
ಕೆ. ಎಂ. ಮುನ್ಷಿ ಅವರ “ಕೃಷ್ಣಾವತಾರ”ದ ಸ್ಥೂಲಪರಿಚಯ ನಮಗೀಗಾಗಲೇ ಇದೆ. ಇಲ್ಲಿಯ ಏಳು ಭಾಗಗಳ ಪೈಕಿ ಕೃಷ್ಣನನ್ನೂ ಒಳಗೊಂಡಂತೆ ಮಹಾಭಾರತದ ಮುಖ್ಯಕಥಾನಕ ಮತ್ತು ಪ್ರಮುಖಪಾತ್ರಗಳ ಪ್ರಸ್ತಾವ ಬರುವುದು ಮೂರು-ನಾಲ್ಕು ಭಾಗಗಳಲ್ಲಿ ಮಾತ್ರ. “The Magic Flute”, “The Wrath of an Emperor”, “The Book of Satyabhama”, “The Book of Vedavyaasa The Master” ಮುಂತಾದ ಭಾಗಗಳು ಮೂಲಮಹಾಭಾರತಕಥೆಗೆ ತೀರ ಪಾರ್ಶ್ವೀಯವಾಗಿ ಸಂಬಂಧಿಸಿವೆ. ಇಲ್ಲಿಯ ಇತಿವೃತ್ತ ಹೆಚ್ಚಾಗಿ ಹರಿವಂಶ, ಭಾಗವತ, ವಿಷ್ಣುಪುರಾಣಾದಿಗಳದು. ಲೇಖಕರ ಕಲ್ಪನೆಯೂ ಸಾಕಷ್ಟಿದೆಯೆನ್ನಿ. ಇನ್ನುಳಿದಂತೆ “The Five Brothers”, “The Book of Bhima” ಮತ್ತು “The Book of Yudhishthira” ಎಂಬೀ ಮೂರು ಮಾತ್ರ ಮಹಾಭಾರತದ ಪ್ರಧಾನಕಥೆಯನ್ನು ಆಶ್ರಯಿಸಿವೆ. ಇಲ್ಲಿಯಾದರೂ “The Five Brothers” ಸರ್ವೋಚ್ಚವಲ್ಲದೆ ಉಳಿದೆರಡಲ್ಲ. ಗುಣ-ಗಾತ್ರಗಳಲ್ಲಿ ಈ ಎರಡೂ ಸಾಕಷ್ಟು ಸೊರಗಿವೆ. ಮುಖ್ಯವಾಗಿ ಮುನ್ಷಿಯವರ ಪ್ರತಿಭೆಯನ್ನು ಕಾಣಲು “The Five Brothers” ಒಂದೇ ಪರಮಾಲಂಬನ (“The Wrath of an Emperor” ಕೂಡ ಅವರ ರಚನಾಪಾಟವಕ್ಕೆ ಒಳ್ಳೆಯ ಮಾದರಿಯಾದರೂ ಅದು ಸದ್ಯದ ಜಿಜ್ಞಾಸೆಗೆ ಬಹಿರ್ಭೂತ ಮತ್ತು ಗುಣದೃಷ್ಟ್ಯಾ “The Five Brothers” ಭಾಗಕ್ಕಿಂತ ಸ್ವಲ್ಪ ನ್ಯೂನ).
ವ್ಯಾಸರದು ಅಭಿಜಾತಕ್ರಮವಾದರೆ (Classical) ಮುನ್ಷಿಯವರದು ರಮ್ಯರೀತಿ (Romantic). ಅವರ ಕಥನಕ್ರಮ, ಇತಿವೃತ್ತನಿರ್ವಾಹ, ಸಂವಿಧಾನಕೌಶಲ, ಸಂದರ್ಭಕ್ಲೃಪ್ತಿ, ಸಂಭಾಷಣಕೌಶಲ ಮುಂತಾದ ಅವೆಷ್ಟೋ ರಾಚನಿಕಶಕ್ತಿಗಳು ದಿಟವಾಗಿ ಸುಂದರ ಮತ್ತು ಸಮರ್ಥ. ಆದರೆ ಮಹಾಭಾರತದಂಥ ಜೀವನನಿಷ್ಠವಾದ ಭವ್ಯಕಥಾನಕಕ್ಕೆ ಹೆಚ್ಚೆನಿಸುವ ನಾಟಕೀಯತೆ, ಅತಿರೋಚಕವೆನಿಸುವ ಕುತೂಹಲಜಾಗರಣಪ್ರವೃತ್ತಿ ಮತ್ತು ಬಲುಮಟ್ಟಿಗೆ ಕಪ್ಪು-ಬಿಳುಪುಗಳಲ್ಲಿಯೇ ದುಷ್ಟ-ಶಿಷ್ಟಪಾತ್ರಗಳನ್ನು ರೂಪಿಸುವ ಅಭಿನಿವೇಶಗಳು ಪೂರ್ವೋಕ್ತಸೌಂದರ್ಯ-ಸಾಮರ್ಥ್ಯಗಳನ್ನು ಸಾಕಷ್ಟು ಕುಗ್ಗಿಸಿವೆ. ಮುಖ್ಯವಾಗಿ ಅವರ ಸ್ತ್ರೀಪಾತ್ರಗಳೆಲ್ಲ ಹದ್ದುಮೀರಿದ ರಮ್ಯಸೀಮೆಯಲ್ಲಿ ಕಳೆದುಹೋಗಿವೆ. ಇಂತಾದರೂ ಶ್ರೀಕೃಷ್ಣನ ಪಾತ್ರವನ್ನು ಚಿತ್ರಿಸುವಲ್ಲಿ ಅವರು ತೂಕತಪ್ಪಿದಂತೆ ತೋರದು. ಇದಕ್ಕೆ ಕಾರಣ ಮುನ್ಷಿಯವರ ಸಾರಸ್ವತಪ್ರಜ್ಞೆಯಲ್ಲದೆ ಆ ಪಾತ್ರಕ್ಕೆ ಎಂಥ ರಮ್ಯತೆ, ರೋಚಕತೆ, ಭಾವುಕತೆ, ಆದರ್ಶಮಯತೆಗಳನ್ನು ಆರೋಪಿಸಿದರೂ ಜೀರ್ಣಿಸಿಕೊಳ್ಳಬಲ್ಲ ಅಗಸ್ತ್ಯಶಕ್ತಿಯಿರುವುದೇ ಆಗಿದೆ. ಒಂದು ಮಾತಿನಲ್ಲಿ ಹೇಳುವುದಾದರೆ, ಯಾವ ಲೇಖಕನಾಗಲಿ ಶ್ರೀಕೃಷ್ಣನ ಪಾತ್ರಚಿತ್ರಣದಲ್ಲಿ ಅತ್ಯುಕ್ತಿ-ಅತಿಶಯೋಕ್ತಿಗಳ ದೋಷಕ್ಕೆ ಪಕ್ಕಾಗಲಾರ. ಆಕಾಶಕ್ಕೆ ಅತಿರೇಕದ ಆರೋಪವೇ?
ವ್ಯಾಸರ ಮಹಾಕೃತಿಯ ಬಳಿಕ ಬಂಕಿಮಚಂದ್ರರ “ಶ್ರೀಕೃಷ್ಣಚರಿತ್ರ”ದಂಥ ಸಂಶೋಧನಾತ್ಮಕರಚನೆಯನ್ನುಳಿದು ಮುನ್ಷಿಯವರ ಕಾಲದವರೆಗೆ ಭಾರತೀಯಸಾಹಿತ್ಯದಲ್ಲಿ ಶ್ರೀಕೃಷ್ಣನ ಅನಂತಮುಖಗಳಲ್ಲಿ ಬಾಲ್ಯ-ಕೈಶೋರಲೀಲೆ, ಲೀಲಾಮಾನುಷವರ್ತನೆ ಮತ್ತು ಗೀತಾಚಾರ್ಯತ್ವಗಳೆಂಬ ಮೂರು ಮಗ್ಗುಲುಗಳನ್ನೇ ಮತ್ತೆ ಮತ್ತೆ ಮರುಕಳಿಸಿಕೊಳ್ಳುವ ಏಕತಾನತೆ ಹಾಗೂ ಅಕೃತ್ಸ್ನದರ್ಶನಗಳು ಎಲ್ಲ ಭಾಷೆಗಳ, ಎಲ್ಲ ಬಗೆಯ ಮಾಧ್ಯಮಗಳ, ಎಲ್ಲ ಕವಿ-ಕಲಾವಿದರಲ್ಲಿಯೂ ಕಾಣುತ್ತಿದ್ದ ಮಿತಿಯಾಗಿತ್ತು; ಇದೊಂದು ದೋಷವೆನ್ನುವಷ್ಟರ ಮಟ್ಟಿಗೂ ಬೆಳೆದಿತ್ತು. ಮುನ್ಷಿಯವರು ಪ್ರಾಯಶಃ ಮೊದಲ ಬಾರಿಗೆ ಕಾದಂಬರಿಯಂಥ ಗದ್ಯಕಾವ್ಯದಲ್ಲಿ ಶ್ರೀಕೃಷ್ಣನ ರಾಜ್ಯತಂತ್ರಧುರಂಧರತೆಯನ್ನು, ಅತಿಮಾನುಷವೆನ್ನಬಹುದಾದ ಮಟ್ಟಕ್ಕೆ ಸಲ್ಲುವ ಪುರುಷಕಾರಪಾರಮ್ಯವನ್ನು ಹಾಗೂ ನವನೀತಚೌರ್ಯ-ಗೋಪಿಕಾಲೌಲ್ಯ-ಕಪಟನಾಟಕಸೂತ್ರಧಾರಿತ್ವ-ಶುಷ್ಕವೇದಾಂತಶಾಲೀನತೆಗಳನ್ನು ಮೀರಿದ ಸ್ವಯಂರೂಪಿತವೇ ಆದ ಮಾನವೋತ್ತಮಸ್ವಭಾವವನ್ನು ಯಶಸ್ವಿಯಾಗಿ ಚಿತ್ರಿಸಿದ್ದಾರೆ. ಇದು ಬಹುಶಃ ಅವರ ವ್ಯಾಪಕಲೋಕಸಂಪರ್ಕ, ರಾಜಕೀಯಜೀವನ ಮತ್ತು ಸಮಜೋನ್ಮುಖಿಯಾದ ಸಂಸ್ಕೃತಿಸೇವೆಗಳ ಫಲವೆನ್ನಬೇಕು. ಅಂತೆಯೇ, ಭಾಗವತದಲ್ಲೆಲ್ಲೋ ಮಿಂಚಿ ಮರೆಯಾಗುವ ಉದ್ಧವನ ಪಾತ್ರವನ್ನು ಅವಿಸ್ಮರಣೀಯವಾಗಿ ರೂಪಿಸುವ ಮೂಲಕ ಶ್ರೀಕೃಷ್ಣನ ವ್ಯಕ್ತಿತ್ವವನ್ನು ಮತ್ತೊಂದು ಕಣ್ಣಿನಿಂದ ಕಾಣಿಸುವ ಕೌಶಲವನ್ನೂ ಮೆರೆದಿದ್ದಾರೆ.
ಒಟ್ಟಿನಲ್ಲಿ ಮುನ್ಷಿಯವರು ಇತಿವೃತ್ತ ಮತ್ತು ಪಾತ್ರನಿರ್ಮಾಣಗಳಲ್ಲಿ ಮೂಲಮಹಾಭಾರತಕ್ಕಿಂತ ವಿಭಿನ್ನವೂ ನವೀನವೂ ಆದ ಹತ್ತಾರು ಕ್ರಮಗಳನ್ನು ಕೈಗೊಂಡಿದ್ದಾರಾದರೂ ವ್ಯಾಸದರ್ಶನಕ್ಕೆ ವಿರುದ್ಧವಾಗಿಲ್ಲ. ಆದರೆ ವ್ಯಾಸತಾಟಸ್ಥ್ಯ ಮತ್ತು ಮಾನುಷಭವ್ಯತೆಗಳ ಅಂಶಗಳನ್ನು ಪೂರ್ಣತಃ ಉಳಿಸಿಕೊಳ್ಳಲಾಗದೆ, ಈ ಮೊದಲೇ ನಾವು ಕಂಡಂತೆ ಆಭಿಜಾತ್ಯದಿಂದ ರಮ್ಯತೆಯತ್ತ ವಾಲಿದ್ದಾರೆ. ಹೀಗಾಗಿ ಇಲ್ಲಿ “ರಸಧ್ವನಿ”ಗಿಂತ “ರಸಾಭಾಸಧ್ವನಿ” ಮಿಗಿಲಾಗಿದೆ; ಸ್ವರೂಪಕ್ಕಿಂತ ರೂಪವೇ ಮುಂದಾಗಿದೆ. ಇದು ಪ್ರಕರಣಗಳ ವಕ್ರತೆಯ ಹೊಯ್ಲಿನಲ್ಲಿ ಪ್ರಬಂಧದ ವಕ್ರತೆಯನ್ನು ಉಪೇಕ್ಷಿಸಿದ ನಡೆಯೆನ್ನಬೇಕು. ಉಳಿದಂತೆ ಮುನ್ಷಿಯವರ ಭಾಷೆ-ಭಣಿತಿಗಳು ರಸನಿರ್ಭರವಾದ ಆಭಿಜಾತ್ಯಕ್ಕೆ ಯಾವುದೇ ರೀತಿ ಎರವಾಗಿಲ್ಲ. ಇಂಗ್ಲಿಷಿನ ಮಟ್ಟಿಗಂತೂ ಇದನ್ನು ಮಿಗಿಲಾದ ಸಾಧನೆಯೆನ್ನಬೇಕು.
ಪರ್ವ
ಭೈರಪ್ಪನವರ “ಪರ್ವ”ವು ಇತ್ತ “ಕರ್ಣಾಟಭಾರತಕಥಾಮಂಜರಿ”ಯಂತೆ ಉಕ್ತಿವಿಶೇಷದ ತವನಿಧಿಯಾದ ಕಾವ್ಯವೂ ಅಲ್ಲ, ಅತ್ತ “ಕೃಷ್ಣಾವತಾರ”ದಂತೆ ರಮ್ಯತೆಗೆ ಒತ್ತುಕೊಟ್ಟ ರೋಚಕೋದಾರಕಥನವೂ ಅಲ್ಲ. ಇದು ವ್ಯಾಸರ ದರ್ಶನಕ್ಕೆ ತುಂಬ ನಿಕಟವಾದ—ಆದರೆ ಅಲ್ಲಿಯ ಧ್ವನಿಪೂರ್ಣಸಂಕೇತಗಳಾಗಬಲ್ಲ ಆಧಿದೈವಿಕಾಂಶಗಳ ಸ್ಪರ್ಶವಿಲ್ಲದ—ಅಧಿಭೂತಕ್ಕೆ ಆದ್ಯಂತವಾಗಿ ಅಂಟಿದ್ದೂ ಆಧ್ಯಾತ್ಮಿಕದೃಷ್ಟಿಯನ್ನು ಬಲಿಗೊಡದ ಗದ್ಯಕಾವ್ಯ. ಇಲ್ಲಿ ಅಧ್ಯಾತ್ಮವೆಂದರೆ ಅಪ್ಪಟ ಮಾನುಷಭಾವಗಳ ಜೀವಾಳವೆಂದೇ ವಿವಕ್ಷೆ. ಇದು ಶಾಸ್ತ್ರಸಮ್ಮತವೂ ಹೌದು. ಮೂಲದ ಇತಿವೃತ್ತವನ್ನೂ ಅಲ್ಲಿಯ ಅಸಂಖ್ಯವಿವರಗಳನ್ನೂ ಜತನದಿಂದ ಗಮನಿಸಿಕೊಂಡು ರಸೋಚಿತವಾಗಿ ಬಳಸಿಕೊಂಡಿರುವ ಭೈರಪ್ಪನವರು ಹೆಚ್ಚಿನ ಕಥೆಯನ್ನು ಯಥಾವತ್ತಾಗಿ ಉಳಿಸಿಕೊಂಡಿದ್ದರೂ ಕಥನಕ್ರಮವನ್ನು ಮಾತ್ರ ತುಂಬ ಸಂಕೀರ್ಣವಾಗಿ, ಪಾತ್ರಗಳ ಪ್ರಜ್ಞಾಪ್ರವಾಹರೂಪದಿಂದ (Stream of Consciousness Technique) ಚಿತ್ರಿಸಿದ್ದಾರೆ. ಇದು ಬಲುಮಟ್ಟಿಗೆ “ಕವಿಪ್ರೌಢೋಕ್ತಿ”ಯಿಂದ “ಕವಿನಿಬದ್ಧಪ್ರೌಢೋಕ್ತಿ”ಯ ಕಡೆಗೆ ಸಾಗಿಸಿದ ಪಯಣವೆಂದೇ ಹೇಳಬೇಕು. ಜೊತೆಗೆ, ಅಲೌಕಿಕದ ಮಂಜಿನಲ್ಲಿಯೋ, ಅಧಿದೈವದ ಮುಸುಕಿನಲ್ಲಿಯೋ ಮರೆಯಾಗುತ್ತಿದ್ದ ವ್ಯಾಸಭಾರತದ ಪಾತ್ರ-ಸಂದರ್ಭಗಳ ವಿಕಾರ-ವಾಸ್ತವಗಳು ಭೈರಪ್ಪನವರಲ್ಲಿ ವಿಶುದ್ಧಮಾನುಷದ ಹಸಿ-ಬಿಸಿಯಾದ ರಾಗ-ದ್ವೇಷಗಳ ಮೂಲಕವೇ ಮರುವುಟ್ಟುವಡೆದು ನಮಗೆ ನಿಕಟತಮವಾಗುವ ರಸವಿಸ್ಮಯವುಂಟು. ದಿಟವೇ, ಈ ಪ್ರಕ್ರಿಯೆಯಿಂದ ಧ್ವನನಶೀಲತೆ ಕೆಲಮಟ್ಟಿಗೆ ಸೊರಗುತ್ತದೆ; ಆದರೆ ಒಟ್ಟಂದದ ಭಾವಸಮೃದ್ಧಿ ಮಾತ್ರ ಮಿಗಿಲಾಗುತ್ತದೆ. “ರಸ-ಭಾವನಿರಂತರಂ” ಎಂದು ಭರತಾದಿಗಳು ಹೇಳಿದ ಮಾತಿಗೆ ಮತ್ತೊಂದು ವಿವರಣೆಯಂತೆ ಈ ಪದ್ಧತಿ ತೋರಿದೆ. ಇದೇ ರೀತಿ ವ್ಯಾಸಭಾರತದಲ್ಲಿ ಅದರ ಭೂಮಕಾವ್ಯಸಹಜವಾದ ಲೋಕೋತ್ತರತೆಗೆ ಅನುವೆನಿಸುವಂತೆ ಬರುವ ಅದೆಷ್ಟೋ ಕೇಂದ್ರೀಯಸಂಗತಿಗಳು “ಪರ್ವ”ದಲ್ಲಿ ಪಾರ್ಶ್ವೀಯವಾಗುವಂತೆಯೇ ಪಾರ್ಶ್ವೀಯಸಂಗತಿಗಳು ಕೇಂದ್ರೀಯವಾಗುವ ಸ್ವಾರಸ್ಯವೂ ಉಂಟು. ಉದಾಹರಣೆಗೆ: ಮೂಲದಲ್ಲಿ ಹದಿನೆಂಟು ದಿನಗಳ ಕುರುಕ್ಷೇತ್ರಸಂಗ್ರಾಮದ ಮುನ್ನೆಲೆಯ ವರ್ಣನೆ ಎಣೆಮೀರಿ ಬಂದಿದ್ದರೆ “ಪರ್ವ”ದಲ್ಲಿ ಇಂಥ ಮಹಾಯುದ್ಧಕ್ಕೆ ಬೇಕಾದ ಸಿದ್ಧತೆಯೆಂಥದ್ದು, ಸೇನೆಯ ಸನ್ನಾಹವೆಂಥದ್ದು, ಮತ್ತದರ ಪ್ರಯಾಣ-ಸ್ಕಾಂಧಾವಾರಸಂನಿವೇಶ-ಸೈನಿಕಮನೋಧರ್ಮ ಮುಂತಾದವುಗಳ ವಿವರಗಳೂ ಅಷ್ಟೊಂದು ಜನಸಮುದಾಯದ ಆದಾನ-ವಿಸರ್ಜನಸಮಸ್ಯೆಗಳೂ ಸೇರಿಕೊಂಡು ಬರುವ ಹಿನ್ನೆಲೆಯ ಬಣ್ಣನೆ ಅಸಾಮಾನ್ಯವಾಗಿ ಹೊಮ್ಮಿದೆ. ಅಂತೆಯೇ ಮೂಲದಲ್ಲಿ ಮುಖ್ಯವಿದ್ದು ಮತ್ತೆ ಮತ್ತೆ ಮರುಕಳಿಸದ ಹಾಗೂ ಮುಜುಗರಗೊಳಿಸದ ನಿಯೋಗಸಂತಾನಸಮಸ್ಯೆಯಾಗಲಿ, ಸೂತ(ದಾಸ-ದಾಸೀ)ಸಂತತಿಯ ಕ್ಲೇಶವಾಗಲಿ, ಯುದ್ಧಪೂರ್ವ ಮತ್ತು ಯುದ್ಧಾನಂತರದ ಜನಸಾಮಾನ್ಯರ ತೊಡಕು-ತೋಟಿಗಳಾಗಲಿ “ಪರ್ವ”ದಲ್ಲಿ ವಿಶ್ವರೂಪವನ್ನು ಪಡೆಯುತ್ತವೆ. ಮಾತ್ರವಲ್ಲ, ಅದೆಷ್ಟೋ ಬಾರಿ ಪ್ರತಿಯೊಂದು ಹಂತದ ವ್ಯಷ್ಟಿಸಮಸ್ಯೆಯಲ್ಲಿಯೂ ತಮ್ಮ ಕಬಂಧಬಾಹುಗಳನ್ನು ಪ್ರಸರಿಸುತ್ತವೆ. ಇಂಥ ವಿಕ್ರಮಗಳ ನಡುವೆಯೇ ದುರ್ಯೋಧನನು ಸಾಯದೆ ಉಳಿದುಕೊಳ್ಳುವಂಥ, ಕರ್ಣನ ಪಾಂಡವಮಾತ್ಸರ್ಯವು ಪ್ರಸ್ಫುಟವಾಗದಂಥ, ಧರ್ಮರಾಜನ ಭ್ರಾತೃಪ್ರೇಮವು ಅಪ್ಪಿತಪ್ಪಿಯೂ ತಲೆಯೆತ್ತದಂಥ, ವಿದುರನ ಅಂತಶ್ಶಾಂತಿಯೂ ಕೆಲಮಟ್ಟಿಗ ಬಗ್ಗಡವಾಗುವಂಥ ವಿಚಿತ್ರಸಂನಿವೇಶಗಳನ್ನು ಭೈರಪ್ಪನವರು ಕಲ್ಪಿಸಿರುವುದು ವೇದವ್ಯಾಸದರ್ಶನಕ್ಕೆ ಬಹಿರ್ಭೂತವೆಂದೇ ಹೇಳಬೇಕು.
ಭೈರಪ್ಪನವರು ಹೆಜ್ಜೆಹೆಜ್ಜೆಗೂ ವಿಗ್ರಹಭಂಜನೆಯನ್ನು ಮಾಡುವಂತೆ ಪ್ರತಿಯೊಂದು ಪಾತ್ರದ ಆದರ್ಶಘನವನ್ನು ಪುಡಿಗುಟ್ಟುತ್ತಾರೆಂಬ ಆಕ್ಷೇಪವುಂಟು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಅವರಿಗೆ ಮೂಲದ್ದೇ ಎಳೆ ಆಧಾರವಾಗಿ ಒದಗಿಬಂದಿದೆಯೆಂಬುದೂ ಆವರ ಮಾನವಸ್ವಭಾವಸಂವೇದನೆಯ ಮಟ್ಟ ಸಹೃದಯರಿಗೆ ಭಯಾಸ್ಪದವೆನಿಸುವಷ್ಟು ವ್ಯಾಪಕವೆಂಬುದೂ ಅವಿಸ್ಮರಣೀಯ. ಇದಕ್ಕೊಂದು ಉದಾಹರಣೆಯಾಗಿ ಮಹಾಭಾರತನಿರ್ಮಾತೃವೇ ಆದ ವ್ಯಾಸರ ಪುತ್ರಶೋಕಸಂದರ್ಭ ಉಲ್ಲೇಖನೀಯ. ಆದರೆ ನಾಸ್ತಿಕರೆದುರು ಅವರು ವಾದದಲ್ಲಿ ವಿವಶರಾಗುತ್ತಾರೆಂಬ ಚಿತ್ರಣಕ್ಕೆ ಮಾತ್ರ ಮೂಲದಲ್ಲಾಗಲಿ, ಮತ್ತಾವ ಆರ್ಷಾಕರಗಳಲ್ಲಾಗಲಿ ಆಧಾರವಿಲ್ಲ. ಭೈರಪ್ಪನವರು ಬಹುಶಃ ಇದನ್ನು ವ್ಯಾಸರಲ್ಲಿಯೂ ಬಂದ ದ್ವಾಪರಯುಗದ ದ್ವಂದ್ವಸಂದಿಗ್ಧತೆಗೆ ಸಂಕೇತವಾಗಿ ತಂದಿರಬಹುದು. ಹೇಳಿ ಕೇಳಿ “ದ್ವಾಪರ”ವೆಂದರೆ ಸಂದೇಹವೆಂದೂ ಅರ್ಥವುಂಟಷ್ಟೆ! ಅಲ್ಲದೆ, ಅದು ಕಲಿಪ್ರವೇಶದ ನಿಕಟಕಾಲವೂ ಹೌದು. ಒಟ್ಟಿನಲ್ಲಿ, ಮೂಲತಃ ಮಹಾಭಾರತವು ಯುಗಸಂಧಿಯ ಚಿತ್ರಣವೆಂದು ತಾತ್ತ್ವಿಕವಾದ ಒಕ್ಕಣೆಯಿದ್ದರೂ ಅದನ್ನು ಪ್ರಬುದ್ಧವಾದ ವಿಭಾವಾನುಭಾವಸಾಮಗ್ರಿಯಿಂದ ಪ್ರತಿಯೊಂದು ಹಂತದಲ್ಲಿಯೂ ರಸದ ಮಟ್ಟಕ್ಕೇರಿಸುವ ಸಾಮರ್ಥ್ಯ “ಪರ್ವ”ದ್ದೇ ಆಗಿದೆ. ಈ ಪರಿಣಾಮರಮಣೀಯತೆಯು ತತ್ತ್ವಕ್ಕೂ ಕಲೆಗೂ ಇರುವ ಚರ್ವಣಾವ್ಯತ್ಯಾಸವೇ ಆಗಿದೆ. ಹೀಗೆ ಭೈರಪ್ಪನವರ ಮಹಾಕಾದಂಬರಿಯು “ರಸಧ್ವನಿ”ಯ ದೃಷ್ಟಿಯಿಂದ ವ್ಯಾಸದರ್ಶನಕ್ಕೆ ತುಂಬ ನಿಕಟವೆನಿಸಿ ನಿರ್ವೇದಸ್ಥಾಯಿಯಾದ ಶಾಂತರಸಕ್ಕೆ ತನ್ನನ್ನು ತೆತ್ತುಕೊಂಡಿದೆ. ಇದೇ ಅದರ ಮಹತ್ತ್ವ.
ಉಪಸಂಹಾರ
“ಶ್ರೀಮನ್ಮಹಾಭಾರತ”ದ ಜೊತೆಗೆ “ಕರ್ಣಾಟಭಾರತಕಥಾಮಂಜರಿ”, “ಕೃಷ್ಣಾವತಾರ” ಮತ್ತು “ಪರ್ವ”ಗಳನ್ನು ತೌಲನಿಕಾಧ್ಯಯನರೂಪದಿಂದ ಸಂಕ್ಷಿಪ್ತವಾಗಿ ಪರಿಶೀಲಿಸಿದಾಗ, ಇತಿವೃತ್ತ ಮತ್ತು ಪಾತ್ರಗಳ ದೃಷ್ಟಿಯನ್ನು ಪ್ರಧಾನವಾಗಿರಿಸಿಕೊಂಡು ನಡಸಿದ ಮೌಲ್ಯಮೀಮಾಂಸೆಯ ಕಲಾತ್ಮಕರೂಪವೇ ವ್ಯಾಸದರ್ಶನಕ್ಕೆ ಹೆಚ್ಚು ನಿಕಟವೆಂದು ಪ್ರಸ್ಫುಟವಾಗುತ್ತದೆ. ಅದನ್ನು ವ್ಯಷ್ಟಿರೂಪದಿಂದ ಕೂಡಿದ ಮಟ್ಟಿಗೂ ಸಾಧಿಸುವಲ್ಲಿ ಸಹಕಾರ ಕೊಡುವುದು ವಕ್ರೋಕ್ತಿಚಮತ್ಕೃತಿ ಮತ್ತು ಸಂವಿಧಾನಕೌಶಲವೊಡವರಿದ ಪ್ರಕರಣನಿರ್ಮಾಣಶಾಲೀನತೆ.
ಈ ನಾಲ್ಕು ಕೃತಿಗಳೂ ನಮಗೆ ಸಮೃದ್ಧವಾದ ರಸಾನಂದವನ್ನು ಕೊಡುತ್ತವೆ. ಆದರೆ ವ್ಯಾಸರ ಮತ್ತು ಭೈರಪ್ಪನವರ ಕೃತಿಗಳಲ್ಲಿ ಈ ಅನುಭವವು ತುಂಬ ಸಾಂದ್ರ ಮತ್ತು ಸಂಕೀರ್ಣ. ಅದೆಷ್ಟೋ ಬಾರಿ ಸಹೃದಯನು ಇಂಥ ಅನುಭೂತಿಯಿಂದ ತತ್ತರಿಸುವುದೂ ಉಂಟು. ಕುಮಾರವ್ಯಾಸ ಮತ್ತು ಮುನ್ಷಿಯವರಲ್ಲಿ ಸಾಂದ್ರತೆಗೆ ಕೊರತೆಯಿಲ್ಲದಿದ್ದರೂ ಸ್ವರೂಪದಲ್ಲಿ ಸಂಕೀರ್ಣತೆಯು ಕೆಲಮಟ್ಟಿಗೆ ಸೊರಗಿ ರೂಪದಲ್ಲಿ ಮಾತ್ರ ಸಮೃದ್ಧವಾಗುತ್ತದೆ; ಅಂತೆಯೇ ಈ ರೂಪಸಂಕೀರ್ಣತೆಯ ವೈಭವಕ್ಕೆ ಕಾವ್ಯರಸಿಕರು ಮಾರುಹೋಗುವುದೂ ಉಂಟು. ತಾತ್ಪರ್ಯತಃ ಹೇಳುವುದಾದರೆ, ನಾಲ್ಕೂ ಕೃತಿಗಳ ಆಸ್ವಾದ ಕಾಲದಲ್ಲಿ ಪರವಶತೆ ಕಟ್ಟಿಟ್ಟ ಬುತ್ತಿ. ಆದರೆ ಪ್ರತ್ಯಭಿಜ್ಞೆ ಮಾತ್ರ ಮಹಾಭಾರತ-ಪರ್ವಗಳಲ್ಲಿಯೇ ಸಾಧ್ಯ. ಈ ನಿಗಮನವು ಯಾಜ್ಞವಲ್ಕ್ಯ, ಶ್ರೀಕೃಷ್ಣ, ಶಂಕರರೇ ಮುಂತಾದ ಬ್ರಹ್ಮಮೀಮಾಂಸಕರ ದರ್ಶನಕ್ಕೂ ಭರತ, ಆನಂದವರ್ಧನ, ಅಭಿನವಗುಪ್ತ, ಕುಂತಕ ಮೊದಲಾದ ಕಾವ್ಯಮೀಮಾಂಸಕರ ಪ್ರಾತಿಭಕ್ಕೂ ಅನುಗುಣವೇ ಆಗಿದೆ.
ಕನ್ನಡಿಯಲ್ಲಿ ಕರಿಯನ್ನು ಕಾಣಿಸಲೆಳಸುವ ಈ ಲೇಖನವು ಯವುದೇ ಸಂಶೋಧನಮಹಾಪ್ರಬಂಧವೃಕ್ಷಕ್ಕೂ ಬೀಜಪ್ರಾಯವೆನಿಸಬಲ್ಲ ಉಪಕ್ರಮ.