ಭರತನು ಹೇಳುವ ಮೂವತ್ತಾರು ಲಕ್ಷಣಗಳನ್ನು ವಿವರಿಸುವಾಗ ಅಭಿನವಗುಪ್ತನು ಇವಕ್ಕೂ ಅರ್ಥಾಲಂಕಾರಗಳಿಗೂ ಇರುವ ಸಂಬAಧವನ್ನು ವಿಸ್ತರಿಸುತ್ತ ತೌತನ ಮತವನ್ನು ಹೀಗೆ ಸಂಗ್ರಹಿಸಿದ್ದಾನೆ:
ಉಪಾಧ್ಯಾಯಮತಂ ತು - ಲಕ್ಷಣಬಲಾದಲಂಕಾರಾಣಾಂ ವೈಚಿತ್ರ್ಯಮಾಗಚ್ಛತಿ | ತಥಾ ಹಿ ಗುಣಾನುವಾದನಾಮ್ನಾ ಲಕ್ಷಣೇನ ಯೋಗಾತ್ಪ್ರಶಂಸೋಪಮಾ, ಅತಿಶಯನಾಮ್ನಾತಿಶಯೋಕ್ತಿಃ, ಮನೋರಥಾಖ್ಯೇನಾಪ್ರಸ್ತುತಪ್ರಶಂಸಾ, ಮಿಥ್ಯಾಧ್ಯವಸಾಯೇನಾಪಹ್ನುತಿಃ, ಸಿದ್ಧಯಾ ತುಲ್ಯಯೋಗಿತೇತಿ | ಏವಮನ್ಯದುತ್ಪ್ರೇಕ್ಷ್ಯಮ್ | (ಅಭಿನವಭಾರತೀ, ಸಂ. ೨, ಪು. ೨೩೩)
ಈಗಾಗಲೇ ನಮಗೆ ಭರತನು ಹೇಳುವ ಲಕ್ಷಣಗಳ ಸಂಕ್ಷಿಪ್ತ ಪರಿಚಯ ಉಂಟಷ್ಟೆ. ಆ ಹಿನ್ನೆಲೆಯಲ್ಲಿ ಕಂಡಾಗ ಪ್ರಾಚೀನವಾದರೂ ಪರಿಷ್ಕೃತವಲ್ಲದ ಇವುಗಳನ್ನು ಹಾಗೆಯೇ ಉಳಿಸಿಕೊಳ್ಳುವುದಕ್ಕಿಂತ ಕಾಲಾಂತರದಲ್ಲಿ ಹೆಚ್ಚಿನ ಅಚ್ಚುಕಟ್ಟಿನಿಂದ ನಿರೂಪಿತವಾಗಿರುವ ಅರ್ಥಾಲಂಕಾರಗಳನ್ನು ಅವಲಂಬಿಸುವುದು ಉಚಿತವೆಂಬ ತೌತನ ಇಂಗಿತ ಪ್ರಶಂಸನೀಯ. ಆದರೆ ಪರಂಪರೆಯಿಂದ ಪೂರ್ಣವಾಗಿ ಕತ್ತರಿಸಿಕೊಳ್ಳುವ ಸಾಹಸ ಬೇಡವೆಂಬ ಎಚ್ಚರವೂ ಅವನಿಗಿದೆ. ಆದುದರಿಂದಲೇ ಲಕ್ಷಣಗಳನ್ನು ಅಲಂಕಾರಾಂತರಗಳಾಗಿ ಕಾಣಬಹುದೆಂಬ ನಯವನ್ನು ಅವಲಂಬಿಸುತ್ತಾನೆ. ಈ ಮೂಲಕ ಲಕ್ಷಣ-ಅಲಂಕಾರಗಳ ಸಂಬಂಧವನ್ನೂ ಅವುಗಳ ಸಾರ್ಥಕ್ಯವನ್ನೂ ಅವನು ನಿರೂಪಿಸುವ ಪರಿ ಮನನೀಯ.
* * *
ಭರತನು ಹತ್ತು ಬಗೆಯ ರೂಪಕಗಳನ್ನು ವಿವರಿಸುವಾಗ ಇವುಗಳ ವಸ್ತು ಯಾವ ಬಗೆಯದಾಗಿರಬೇಕೆಂಬ ಚರ್ಚೆ ಮಾಡುತ್ತಾನೆ. ಇದನ್ನು ವಿವರಿಸುವಾಗ ಅಭಿನವಗುಪ್ತ ಶ್ರೀಶಂಕುಕನ ಅಭಿಪ್ರಾಯವನ್ನು ಪ್ರಸ್ತಾವಿಸಿ ಆ ಬಳಿಕ ತನ್ನ ಗುರುವಿನ ಅಭಿಮತವನ್ನು ಒಕ್ಕಣಿಸುತ್ತಾನೆ:
ಏತತ್ತು ಪ್ರಖ್ಯಾತಂ ವಸ್ತು ವಿಷಯೋಽಸ್ಯೇತಿ ಇಯತಾ ಗತಾರ್ಥಮಿತ್ಯುಪಾಧ್ಯಾಯಾ ಇತ್ಥಮಾಹುಃ | ಇಹ ತ್ರಿವಿಧಯಾ ಪ್ರಸಿದ್ಧ್ಯಾ ಪ್ರಸಿದ್ಧತ್ವಂ ಭವತಿ | ಅಮುಕ ಏವಂಕಾರೀ ಅಮುತ್ರ ದೇಶ ಇತಿ | ತತ್ರ ಪ್ರಕರ್ಷೇಣ ಖ್ಯಾತಂ ವಸ್ತು ತಥಾ ವಿಷಯೀ ಮಾಲವಪಾಂಚಾಲಾದಿದೇಶೋ ಯಸ್ಮಿನ್ ಚಕ್ರವರ್ತಿನೋಽಪಿ ಹಿ ವತ್ಸರಾಜಸ್ಯ ಕೌಶಾಂಬೀವ್ಯತಿರಿಕ್ತೇ ವಿಷಯೇ ಕಾರ್ಯಾಂತರೋಪಕ್ಷೇಪೇಣ ವಿನಾ ಯನ್ನಿರಂತರಂ ನಿರ್ವರ್ಣನಂ ತದ್ ವೈರಸ್ಯಾಯ ಭವತಿ | ತತ್ರ ಪ್ರಸಿದ್ಧಿಖಂಡನೇನ ಪ್ರತೀತಿವಿಘಾತಾತ್ ಕಾ ಕಥಾ ರಸಚರ್ವಣಾಯಾಃ | ಏವಂ ತಾವತ್ ದ್ವೇ ಪ್ರಸಿದ್ಧೀ ಉಕ್ತೇ | ಪ್ರಾಖ್ಯಾತೋದಾತ್ತೇತ್ಯನೇನ ತೃತೀಯಾ ಪ್ರಸಿದ್ಧಿರುಕ್ತಾ | ಉದಾತ್ತ ಇತಿ ವೀರರಸಯೋಗ್ಯ ಉಕ್ತಃ | ತೇನ ಧೀರಲಲಿತಧೀರಪ್ರಶಾಂತಧೀರೋದ್ಧತಧೀರೋದಾತ್ತಾಶ್ಚತ್ವಾರೋಽಪಿ ಗೃಹ್ಯಂತೇ | (ಅಭಿನವಭಾರತೀ, ಸಂ. ೨, ಪು. ೩೦೧)
ಭರತನು ನಾಟಕದ ವಸ್ತುವು ಉದಾತ್ತವೂ ಪ್ರಖ್ಯಾತವೂ ಆಗಿರಬೇಕೆಂದು ಹೇಳುತ್ತಾನೆ. ಇದನ್ನು ಒಪ್ಪುವ ಶ್ರೀಶಂಕುಕನು ರಾಮಾಯಣ-ಮಹಾಭಾರತಗಳಂಥ ಪ್ರಸಿದ್ಧ ಕೃತಿಗಳಲ್ಲಿಯೂ ಇರಬಹುದಾದ ಅಪ್ರಸಿದ್ಧ ವಸ್ತುಗಳು ಯೋಗ್ಯವಾಗವೆಂಬ ನಿಲವನ್ನು ತಾಳುತ್ತಾನೆ. ಭಟ್ಟತೌತನಾದರೋ ಇಷ್ಟಕ್ಕೆ ಸೀಮಿತನಾಗದೆ ರೂಪಕದ ವಸ್ತು, ಅಲ್ಲಿಯ ಪ್ರಮುಖ ಮತ್ತು ಗೌಣ ಪಾತ್ರಗಳು ವ್ಯವಹರಿಸುವ ಪ್ರದೇಶಗಳು ಕೂಡ ಪ್ರಸಿದ್ಧವಾಗಿರಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾನೆ. ಇಷ್ಟು ಮಾತ್ರವಲ್ಲದೆ ಪ್ರಮುಖ ಪಾತ್ರಗಳಲ್ಲಿ ಉದಾತ್ತತೆಯೂ ಇರಬೇಕು ಮತ್ತಿದು ವೀರರಸವನ್ನು ಪ್ರಧಾನವಾಗಿ ನಚ್ಚಿಕೊಳ್ಳದೆ ಸಿದ್ಧಿಸದೆಂಬ ನಿಲವನ್ನೂ ತಳೆಯುತ್ತಾನೆ. ಈ ಮೂಲಕ ಧೀರೋದಾತ್ತ, ಧೀರೋದ್ಧತ, ಧೀರಲಲಿತ ಮತ್ತು ಧೀರಪ್ರಶಾಂತ ಎಂಬ ನಾಲ್ಕು ಬಗೆಯ ಉದಾತ್ತ ನಾಯಕರಿಗೂ ಅವಕಾಶವಾಗುತ್ತದೆ ಎಂದು ಸ್ಪಷ್ಟೀಕರಿಸುತ್ತಾನೆ.
ಭಟ್ಟತೌತನ ಈ ವಿಶದೀಕರಣ ಹೆಚ್ಚಿನ ಒಳನೋಟಗಳಿಂದ ಕೂಡಿದೆ. ಭಾಣ, ವೀಥೀ, ಪ್ರಹಸನ ಮೊದಲಾದ ಕ್ಷಣಿಕೋದ್ದೇಶದ ರೂಪಕಗಳಿಗೆ ಹಾಗೂ ಡಿಮ, ವ್ಯಾಯೋಗ, ಸಮವಕಾರಗಳಂಥ ದೇವತಾಕೇಂದ್ರಿತವೂ ಭಯ-ವಿಸ್ಮಯಪೂರ್ಣವೂ ಆದ ರೂಪಕಗಳಿಗೆ ಹೊರತಾಗಿ ನಾಟಕವು ವಾಸ್ತವ ಮತ್ತು ಆದರ್ಶಗಳ ಸಾಮರಸ್ಯವನ್ನು ಹೊಂದಿದೆ; ಸುಸಂಸ್ಕೃತ ಮಾನವಜೀವನಕ್ಕೆ ನಿಕಟವಾಗಿದೆ. ಭಾಣಾದಿಗಳು ಅಧಿಭೂತವನ್ನು ಹೆಚ್ಚಾಗಿ ಪ್ರಕಟಿಸಿದರೆ ಡಿಮಾದಿಗಳು ಅಧಿದೈವವನ್ನು ಅವಲಂಬಿಸಿವೆ. ನಾಟಕ ಮತ್ತು ಪ್ರಕರಣಗಳು ಮಾತ್ರ ಅಧ್ಯಾತ್ಮಕ್ಕೆ ಹೆಚ್ಚು ಹತ್ತಿರವಾಗಿವೆ. ಇದು ಪ್ರಾಯಶಃ ತೌತನ ಆಶಯದ ಹಿಂದಿರುವ ತತ್ತ್ವ. ಹೀಗಾಗಿಯೇ ಅವನು ವಸ್ತುವಿನ ಪ್ರಸಿದ್ಧಿಯೊಂದಕ್ಕೇ ಸೀಮಿತನಾಗದೆ ಪಾತ್ರ, ಕೃತ್ಯ, ಪ್ರದೇಶ ಮುಂತಾದ ಎಲ್ಲ ಅಂಶಗಳಿಗೂ ಗಮನ ಕೊಟ್ಟಿದ್ದಾನೆ. ಅಲ್ಲದೆ ಧರ್ಮ ಮತ್ತು ಅರ್ಥಗಳೆಂಬ ಎರಡು ಪುರುಷಾರ್ಥಗಳನ್ನು ಸಂಕೇತಿಸುವ ವೀರರಸಕ್ಕೆ ಅಗ್ರತಾಂಬೂಲ ನೀಡಿದ್ದಾನೆ. ಧರ್ಮಾರ್ಥಗಳಿಗೆ ಅವಿರೋಧವಾಗಿ ಬರುವ ಕಾಮ ಸಹಜವಾಗಿಯೇ ಶೃಂಗಾರರಸದ ರೂಪದಿಂದ ವೀರಕ್ಕೆ ಒದಗಿಬರುತ್ತದೆ. ತೌತನು ಧೀರತ್ವವನ್ನುಳ್ಳ ಉದಾತ್ತ, ಉದ್ಧತ, ಲಲಿತ ಮತ್ತು ಪ್ರಶಾಂತ ಎಂಬ ನಾಲ್ಕೂ ಬಗೆಯ ನಾಯಕರು ನಾಟಕದಂಥ ದೃಶ್ಯಕಾವ್ಯಕ್ಕೆ ಸಲ್ಲುವ ಪಾತ್ರಗಳೆಂದು ಹೇಳುವ ಮೂಲಕ ನಾಟಿಕೆಯ ನಾಯಕನೆನಿಸುವ ಧೀರಲಲಿತನನ್ನೂ ಪ್ರಕರಣದ ನಾಯಕನೆನಿಸುವ ಧೀರಪ್ರಶಾಂತನನ್ನೂ ಎತ್ತಿಹಿಡಿದ ಪರಿ ಮೆಚ್ಚುವಂಥದ್ದು. ಏಕೆಂದರೆ ಧೀರಲಲಿತ-ಧೀರಪ್ರಶಾಂತ ನಾಯಕರಲ್ಲಿಯೂ ಧೀರತ್ವವಿದೆ; ನಾಟಿಕೆ-ಪ್ರಕರಣಗಳಲ್ಲಿಯೂ ಅಧ್ಯಾತ್ಮನಿಷ್ಠೆಯಿದೆ. ಇದನ್ನು ಪರಿಭಾವಿಸಿದಾಗ ಭಟ್ಟತೌತನಿಗೆ ದೃಶ್ಯಕಾವ್ಯದ ಬಗೆಗೆ ಅದೆಷ್ಟು ವಿಶಾಲವಾದ ದೃಷ್ಟಿಕೋನ ಇದ್ದಿತೆಂದು ತಿಳಿಯುತ್ತದೆ.
ದಶರೂಪಕಗಳ ಹಾಗೂ ಉಪರೂಪಕಗಳ ಸಾಲಿನಲ್ಲಿ ವಸ್ತು, ಇತಿವೃತ್ತ, ಪಾತ್ರ, ಘಟನೆಗಳು, ರಸ ಮುಂತಾದ ಎಲ್ಲ ಅಂಶಗಳಿಗೂ ಹೆಚ್ಚಿನ ನ್ಯಾಯ ಸಲ್ಲಿಸುವ ವ್ಯಾಪ್ತಿ-ಮಹತ್ತ್ವಗಳನ್ನು ಹೊಂದಿರುವ ಪ್ರಕಾರಗಳು ನಾಟಕ, ನಾಟಿಕೆ ಮತ್ತು ಪ್ರಕರಣಗಳೇ. ಇದನ್ನು ಹೆಚ್ಚಿನ ಲಾಕ್ಷಣಿಕರು ಮನಗಂಡAತೆ ತೋರದು. ಇದೇ ರೀತಿ ಧೀರೋದಾತ್ತ ಮುಂತಾದ ನಾಲ್ವರು ನಾಯಕರ ನೇಪಥ್ಯದಲ್ಲಿ ಧ್ವನಿತವಾಗುವ ಪುರುಷಾರ್ಥಗಳಿಗೂ ಇವು ಉದ್ಬೋಧಿಸುವ ವೀರ, ಶೃಂಗಾರ ಮತ್ತು ಶಾಂತಗಳಂಥ ಅಂಗಿರಸಗಳಿಗೂ ಇರುವ ಸಂಬಂಧ ಸೂಕ್ಷ್ಮಜ್ಞರಿಗೆ ಮಾತ್ರ ತಿಳಿಯುವಂಥದ್ದು. ಹೀಗೆ ಎಷ್ಟೇ ಪ್ರಾಸಂಗಿಕ ಎಂಬಂಥ ಸಂದರ್ಭಗಳಲ್ಲಿಯೂ ಶಾಸ್ತ್ರಸದ್ಭಾವವನ್ನು ಎತ್ತಿಹಿಡಿಯುವ ತೌತನ ಪ್ರಜ್ಞೆ ಅಸಾಮಾನ್ಯ.
* * *
ಭರತನು ದಶರೂಪಕಗಳನ್ನು ವಿವರಿಸುತ್ತ ಶೃಂಗಾರವು ಧರ್ಮ-ಅರ್ಥ-ಕಾಮಗಳೆಂಬ ತ್ರಿವರ್ಗಕ್ಕೆ ಅನುಸಾರವಾಗಿ ಹೇಗೆ ಬೆಳೆಯುವುದೆಂಬುದನ್ನು ನಿರೂಪಿಸಿದ್ದಾನೆ. ಇಲ್ಲಿಯೇ ವಿವಿಧ ರೂಪಕಪ್ರಕಾರಗಳಲ್ಲಿ ಛಂದಸ್ಸು, ವೃತ್ತಿ, ಅಭಿವ್ಯಕ್ತಿ ಮುಂತಾದುವು ಹೇಗಿರಬೇಕೆಂಬ ಸೂಚನೆಯನ್ನೂ ನೀಡಿದ್ದಾನೆ. ಈ ಸಂದರ್ಭದಲ್ಲಿ ಕೆಲವೊಂದು ರೂಪಕಗಳಲ್ಲಿ ಕಾಮದ ಪ್ರಸಕ್ತಿಯಿದ್ದರೂ ಅದಕ್ಕೆ ಒದಗಿಬರುವ ಕೋಮಲವಾದ ಕೈಶಿಕೀವೃತ್ತಿ ಇರಲೇಬೇಂದು ತರ್ಕಿಸುವುದು ಅಸಾಧುವೆಂದು ಅಭಿನವಗುಪ್ತನು ವಿವರಿಸುತ್ತನ ತನ್ನ ಉಪಾಧ್ಯಾಯನ ಅಭಿಪ್ರಾಯವನ್ನು ಹೇಳುತ್ತಾನೆ:
ಉಪಾಧ್ಯಾಯಾಸ್ತ್ವಾಹುಃ - ನ ಕಾಮಸದ್ಭಾವಮಾತ್ರಾದೇವ ಕೈಶಿಕೀಸಂಭವೋ, ರೌದ್ರಪ್ರಕೃತೀನಾಂ ತದಭಾವಾತ್ | ವಿಲಾಸಪ್ರಧಾನಂ ಯದ್ರೂಪಂ ಸಾ ಕೈಶಿಕೀ | ನ ಚ ಚರಿತಂ ತದ್ರೂಪಾನುಪ್ರವೇಶೇಽಪಿ ತದ್ವ್ಯವಹಾರಃ, ಪ್ರಾಧ್ಯಾನಕೃತೋ ಹ್ಯಸಾವಿತ್ಯುಕ್ತಮ್ | ತೇನ ತತ್ರ ವಿಷಯೇ ಭಾರತ್ಯಾದಿವೃತ್ತ್ಯಂತರಾಭಿಧಾನಮೇವ ಯುಕ್ತಮಿತಿ | (ಅಭಿನವಭಾರತೀ, ಸಂ. ೨, ಪು. ೩೨೫)
ಕಥೆಯಲ್ಲಿ ಕಾಮದ ಪ್ರಸಕ್ತಿ ಇದ್ದ ಮಾತ್ರಕ್ಕೆ ರೂಪಕದಲ್ಲಿ ಅದು ಕೈಶಿಕೀವೃತ್ತಿಯನ್ನು ಅವಲಂಬಿಸುವುದೆಂದು ಅನುಮಾನಿಸಲಾಗದು. ಏಕೆಂದರೆ ರೌದ್ರಸ್ವಭಾವದ ಪಾತ್ರಗಳಲ್ಲಿ ವಾಸನಾರೂಪದ ಕಾಮವಿದ್ದರೂ ಅದು ಸುಕೋಮಲವಾದ ಕೌಶಿಕೀವೃತ್ತಿಯ ಮೂಲಕ ಅಭಿವ್ಯಕ್ತವಾಗದು. ಹೀಗಾಗಿ ಆಯಾ ಪಾತ್ರಗಳಿಗೆ ಅನುಸಾರವಾಗಿ ಮೂಲಭೂತ ಚೋದನೆಗಳು ಬೇರೆ ಬೇರೆ ವೃತ್ತಿಗಳ ಮೂಲಕ ಅಭಿವ್ಯಕ್ತವಾಗುತ್ತವೆ.
ಭಟ್ಟತೌತನ ಈ ಕಾಣ್ಕೆ ದೃಶ್ಯ-ಶ್ರವ್ಯಕಾವ್ಯಗಳೂ ಸೇರಿದಂತೆ ಎಲ್ಲ ಕಲೆಗಳಿಗೂ ಅನ್ವಯಿಸುತ್ತದೆ. ಮೇಲ್ನೋಟಕ್ಕೆ ತೀರ ಸಾಂದರ್ಭಿಕವಾಗಿ ತೋರುವ ಈ ಮಾತು ಕಥೆ, ಇತಿವೃತ್ತ, ಪಾತ್ರಸ್ವಭಾವ ಮತ್ತು ಕಲಾಭಿವ್ಯಕ್ತಿಗಳನ್ನೆಲ್ಲ ಒಳಗೊಂಡು ಉದ್ದಿಷ್ಟ ರಸದ ಅನುಭೂತಿಯತ್ತ ನಮ್ಮ ಆಲೋಚನೆಗಳನ್ನು ನಿರ್ದೇಶಿಸಿದೆ. ಎಲ್ಲ ಮಾನವರಿಗೂ ಇರುವ ಮೂಲಭೂತ ಚೋದನೆಗಳು ಕೆಲವೇ. ಹೀಗಾಗಿಯೇ ಇವುಗಳ ಆಳದಲ್ಲಿ ಇರುವ ರಾಗ-ದ್ವೇಷಗಳು ಸಾರ್ವತ್ರಿಕ. ರಾಗ-ದ್ವೇಷಗಳ ಪ್ರೇರಣೆಯಿಂದ ಪ್ರವರ್ತಿಸುವ ವಿವಿಧ ಅನುಭಾವಗಳು ಮಾತ್ರ ಆಯಾ ವ್ಯಕ್ತಿಗಳ ಸಂಸ್ಕಾರಕ್ಕೆ ಅನುಗುಣವಾಗಿ ಬೇರೆ ಬೇರೆ ಬಣ್ಣಗಳನ್ನು ತಾಳುತ್ತವೆ. ಕೆಲವೊಮ್ಮೆ ಈ ಅನುಭಾವಗಳ ಹಿಂದಿರುವ ಸ್ಥಾಯಿ ಮತ್ತು ವ್ಯಭಿಚಾರಿಭಾವಗಳ ತೀವ್ರತ್ವ-ಮೃದುತ್ವಗಳೂ ಗಣನೀಯವಾಗಿ ಭಿನ್ನೈಸುತ್ತವೆ. ಇವೆಲ್ಲ ಒಟ್ಟಾಗಿ ವ್ಯಕ್ತಿಗಳ ಹಾಗೂ ಅವರನ್ನು ಆಶ್ರಯಿಸಿ ರೂಪುಗೊಂಡ ಪಾತ್ರಗಳ ನಡೆವಳಿಕೆಗಳನ್ನು ನಿರ್ದೇಶಿಸುತ್ತವೆ. ಇಂಥ ವ್ಯತ್ಯಾಸವೇ ಜಗಜ್ಜೀವವೈವಿಧ್ಯಕ್ಕೂ ಕಲಾವೈವಿಧ್ಯಕ್ಕೂ ಮೂಲ. ಒಂದೇ ಉದ್ದೀಪನವಿಭಾವವು ಬೇರೆ ಬೇರೆ ಅನುಭಾವಗಳನ್ನು ಪ್ರಚೋದಿಸುವುದು ಎಲ್ಲ ಸಂವೇದನಶೀಲರಿಗೂ ತಿಳಿದ ಸಂಗತಿ. ಇದನ್ನು ಭಟ್ಟತೌತನು ನೆನಪಿಸುವ ಮೂಲಕ ಇತಿವೃತ್ತ, ಘಟನೆಗಳು, ಪಾತ್ರಗಳು ಮತ್ತು ಅವುಗಳ ಚರ್ಯೆಗಳಲ್ಲಿ ಅಪಾರ ವೈವಿಧ್ಯವನ್ನು ತರಲು ಸಾಧ್ಯ; ಮತ್ತಿದು ಔಚಿತ್ಯಪೂರ್ಣವೂ ಆಗಿರುವುದೆಂಬ ಸತ್ಯವನ್ನು ಧ್ವನಿಸಿದ್ದಾನೆ. ಪಾತ್ರವೊಂದರಲ್ಲಿ ಕಾಮಪ್ರಚೋದನೆ ಇದೆ, ಕಥೆಯೊಂದರಲ್ಲಿ ಕಾಮವೃತ್ತಾಂತವಿದೆ ಎಂಬಷ್ಟರಿಂದಲೇ ಕಾಮಕ್ಕೆ ಒದಗಿಬರುವ ಕೈಶಿಕೀವೃತ್ತಿಯನ್ನು ಬಳಸಿ ಅದರ ಅಭಿವ್ಯಕ್ತಿಯ ಪ್ರಧಾನ ಲಕ್ಷಣವಾದ ಗೀತ-ನೃತ್ಯಗಳನ್ನೂ ಒನಪು-ವಯ್ಯಾರಗಳನ್ನೂ ದೃಶ್ಯ-ಶ್ರವ್ಯಕಾವ್ಯಗಳಲ್ಲಿ ತಂದು ತುರುಕುವುದು ಅನುಚಿತವೆಂಬ ಎಚ್ಚರ ಕೂಡ ಈ ಮೂಲಕ ಮೂಡುತ್ತದೆ. ಇದು ಅಂಧಾನುಕರಣಶೀಲರಾದ ಎಲ್ಲ ಕಲೋಪಜೀವಿಗಳೂ ಮನನಿಸಬೇಕಾದ ಸತ್ಯ.
* * *
ನಾಟ್ಯಶಾಸ್ತ್ರವು ಸಂಧಿ, ಅವಸ್ಥೆ ಮತ್ತು ಅರ್ಥಪ್ರಕೃತಿಗಳನ್ನು ವಿವರಿಸಿದ ಬಳಿಕ ಅರವತ್ತನಾಲ್ಕು ಸಂಧ್ಯಂಗಗಳ ವಿವರಣಗೆ ತೊಡಗುತ್ತದೆ. ಇದೇ ಸಂದರ್ಭದಲ್ಲಿ ಇತಿವೃತ್ತವು ಆಧಿಕಾರಿಕ ಮತ್ತು ಪ್ರಾಸಂಗಿಕ ಎಂದು ಇಬ್ಬಗೆಯಾಗುವುದನ್ನೂ ಗಮನಿಸುತ್ತದೆ. ಇದನ್ನೆಲ್ಲ ವಿವರಿಸುವ ಅಭಿನವಗುಪ್ತನು ಪ್ರಾಸಂಗಿಕ ಇತಿವೃತ್ತವು ಬಹುಪ್ರಕಾರವಾಗುವುದೆಂಬ ಪೂರ್ವಾಚಾರ್ಯರ ಮತವನ್ನು ತನ್ನ ಗುರುವಿನ ಮಾತಿನಿಂದ ನಿರಾಕರಿಸುತ್ತಾನೆ:
ತೇನ ಶಕ್ತ್ಯಂತರಯೋಗಾಯೋಗಾಭ್ಯಾಂ ಚ ಯತ್ ಪ್ರಾಸಂಗಿಕಸ್ಯಾನೇಕವಿಧತ್ವಂ ಟೀಕಾಕೃದ್ಭಿರಭ್ಯಧಾಯಿ, ನ ತದುಪಾಧ್ಯಾಯಾಃ ಸಮ್ಮನ್ಯಂತೇ | (ಅಭಿನವಭಾರತೀ, ಸಂ. ೩, ಪು. ೩)
ಮೇಲ್ನೋಟಕ್ಕೆ ಚುಟುಕಾದ ಒಂದು ಮಾತೆಂದು ತೋರುವ ತೌತನ ಅಭಿಪ್ರಾಯ ಕೃತಿಯಲ್ಲಿ ಅನಾವಶ್ಯಕವಾದ ವಿಭಾಗ-ಪ್ರವಿಭಾಗಗಳು ಬೇಡವೆಂಬ ಸಾರ್ವಕಾಲಿಕ ಎಚ್ಚರಿಕೆಯನ್ನು ನೀಡಿದೆ. ನಮ್ಮ ಶಾಸ್ತçಕಾರರು ಅದೆಷ್ಟೋ ಬಾರಿ ಇಂಥ ವಿಭಾಗೀಕರಣದಲ್ಲಿ ಅಳತೆ ಮೀರಿದ ಆಸ್ಥೆಯನ್ನು ತೋರಿಸುವುದು ಒಳಿತಲ್ಲವೆಂಬ ಧ್ವನಿ ಇಲ್ಲುಂಟು.
* * *
ಭರತನು ನಾಟಕ ಮತ್ತು ಪ್ರಕರಣಗಳಲ್ಲಿ ಮಾತ್ರ ಐದೂ ಸಂಧಿಗಳು ಇರುತ್ತವೆಂದು ಹೇಳಿದ್ದಾನೆ. ಡಿಮ ಮತ್ತು ಸಮವಕಾರಗಳಲ್ಲಿ ನಾಲ್ಕು ಸಂಧಿಗಳಿರುತ್ತವೆ. ವ್ಯಾಯೋಗ ಮತ್ತು ಈಹಾಮೃಗಗಳಲ್ಲಿ ಮೂರು ಸಂಧಿಗಳಿರುತ್ತವೆ. ಪ್ರಹಸನ, ವೀಥೀ, ಅಂಕ ಮತ್ತು ಭಾಣಗಳಲ್ಲಿ ಎರಡು ಸಂಧಿಗಳರುತ್ತವೆ. ಸಂಧಿಸಂಖ್ಯೆಯ ಈ ಬಗೆಯ ವ್ಯತ್ಯಾಸಕ್ಕೆ ಕಾರಣ ಆಯಾ ರೂಪಕಗಳ ಇತಿವೃತ್ತನಿರೂಪಣೆಯ ವ್ಯತ್ಯಾಸವೇ. ಇದನ್ನು ವಿವರಿಸುತ್ತ ಅಭಿನವಗುಪ್ತನು ನಾಟಕ ಮತ್ತು ಪ್ರಕರಣಗಳಲ್ಲಿ ಐದೂ ಸಂಧಿಗಳು ಏಕಿರಬೇಕೆಂಬುದಕ್ಕೆ ತನ್ನ ಗುರುವಿನ ಅಭಿಪ್ರಾಯವನ್ನು ಪ್ರಮಾಣವಾಗಿ ನೀಡುತ್ತಾನೆ:
ನನು ಕಿಂ ಸರ್ವತ್ರ ಪಂಚೈವ ಸಂಧಯ ಇತ್ಯಾಹ ‘ಪೂರ್ಣಸಂಧಿ ಚೇತಿ’ | ವಿಕಲ್ಪಃ ಸರ್ವತ್ರೇತಿ ಕಶ್ಚಿದಾಶಂಕತೇ | ತಂ ಪ್ರತ್ಯಾಹ ‘ನಿಯಮಾದಿತಿ’ | ಉತ್ಸರ್ಗೇಣೇತಿ ಕೇಚಿತ್ | ಉಪಾಧ್ಯಾಯಾಸ್ತ್ವಾಹುಃ - ಸರ್ವಥೇತಿವೃತ್ತಂ ಪಂಚಸಂಧ್ಯೇವ | ನ ಹಿ ಕಶ್ಚಿದಪಿ ವ್ಯಾಪಾರೋ ಪ್ರಾರಂಭಾದ್ಯವಸ್ಥಾಪಂಚಕಂ ವಿನಾ ಸಿದ್ಧ್ಯೇತ್ | ನ ಶಕ್ಯಮೌನೀಕೃತ್ಯಂ ವಾ | (ಅಭಿನವಭಾರತೀ, ಸಂ. ೩, ಪು. ೧೦)
ಸಂಧಿಗಳ ವಿಷಯದಲ್ಲಿ ಭರತನ ಮತವನ್ನು ಕೆಲವರು ಶಂಕಿಸುತ್ತಿದ್ದಾಗ ತೌತನು ಮಾತ್ರ ಪರಿಪೂರ್ಣವೆನಿಸಿದ ರೂಪಕಪ್ರಕಾರಗಳಿಗೆ ಐದೂ ಸಂಧಿಗಳು ಅವಶ್ಯವೆನ್ನುವುದನ್ನು ಐದು ಅವಸ್ಥೆಗಳ ಜೊತೆಯಲ್ಲಿ ಸಮೀಕರಿಸುವ ಮೂಲಕ ಸಮರ್ಥಿಸಿರುವುದು ಆತನ ಪ್ರಜ್ಞಾಪಾಟವಕ್ಕೆ ಸಾಕ್ಷಿ. ಸಂಧಿಗಳು ಘಟನೆಯ ಬೆಳೆವಣಿಗೆಯನ್ನು ಗಮನಿಸಿಕೊಂಡರೆ, ಅವಸ್ಥೆಗಳು ಕಥೆಯ ಬೆಳೆವಣಿಗೆಯನ್ನು ಕಾಪಿಟ್ಟುಕೊಳ್ಳುತ್ತವೆ. ಇವಕ್ಕೆ ಪೂರಕವಾಗಿ ಪ್ರಮುಖ ಪಾತ್ರಗಳ ಬೆಳೆವಣಿಗೆಯನ್ನು ನಿರ್ವಹಿಸುವ ಅರ್ಥಪ್ರಕೃತಿಗಳು ಇರುವುದೂ ಗಮನಾರ್ಹ. ಒಟ್ಟಿನಲ್ಲಿ ಈ ಮೂರರಲ್ಲಿ ಯಾವುದನ್ನೂ ಉಪೇಕ್ಷಿಸದೆ ಎಲ್ಲವನ್ನೂ ಹೊಂದಿಸಿಕೊಂಡು ಇತಿವೃತ್ತವನ್ನು ರೂಪಿಸಿ ದೃಶ್ಯ-ಶ್ರವ್ಯಕಾವ್ಯಗಳನ್ನು ರಚಿಸಬೇಕು. ಈ ಅರಿವಿಲ್ಲದೆ ಭರತನು ವಿವಿಧ ರೂಪಕಗಳಲ್ಲಿ ಸಂಧಿಗಳ ಸಂಖ್ಯಾವ್ಯತ್ಯಾಸವನ್ನು ಮಾತ್ರ ಮಾಡಿದ್ದಾನೆ; ಇವಕ್ಕೂ ಅವಸ್ಥೆಗಳಿಗೂ ಸಂಬಂಧವಿಲ್ಲ ಎಂದು ಭ್ರಮಿಸಬಾರದು. ವಸ್ತುತಃ ಘಟನೆಗಳನ್ನು ಬೆಳೆಸಲು ಕಥೆಯ ಜಾಡು ತುಂಬ ಮುಖ್ಯ. ಅದು ಇರುವುದು ಅವಸ್ಥೆಗಳ ಅಧೀನದಲ್ಲಿ. ನಾಟಕ-ಪ್ರಕರಣಗಳಂಥ ಪೂರ್ಣಪ್ರಮಾಣದ ಹಾಗೂ ಪುರುಷಾರ್ಥಪ್ರವರ್ತಕ ರೂಪಕಗಳಲ್ಲಿ ಕಥೆಗೆ ಎಲ್ಲಿಲ್ಲದ ಪ್ರಾಶಸ್ತ್ಯವುಂಟು. ಹೀಗಾಗಿ ಇವುಗಳಲ್ಲಿ ಸಂಧಿಗಳ ಲೋಪ ಸಾಧ್ಯವೇ ಇಲ್ಲ. ಹಾಗೇನಾದರೂ ಮಾಡಿದಲ್ಲಿ ಕಥೆಯ ಬೆಳೆವಣಿಗೆ ಕುಂಠಿತವಾಗುತ್ತದೆ; ಐದು ಸಂಧಿಗಳಿಗೂ ಐದು ಅವಸ್ಥೆಗಳಿಗೂ ತನ್ಮೂಲಕ ಒದಗಿಬರುವ ಐದು ಅರ್ಥಪ್ರಕೃತಿಗಳಿಗೂ ತಾಳ-ಮೇಳ ತಪ್ಪುತ್ತದೆ. ಇದು ಆತ್ಯಂತಿಕವಾಗಿ ರಸಹಾನಿಯನ್ನು ಉಂಟುಮಾಡುತ್ತದೆ. ಹೀಗೆ ಕಲೆಯಲ್ಲಿ ಯಾವುದೇ ಬಗೆಯ ಏಕದೇಶೀಯ ನಿರ್ಣಯ ತಪ್ಪೆಂದು ನಿರೂಪಿಸುವ ಭಟ್ಟತೌತನ ಒಳನೋಟ ಸದಾ ಆದರಣೀಯ.
* * *
ರೂಪಕಗಳಲ್ಲಿ ಮುಂದೆ ನಡೆಯುವ ಘಟನೆಗಳ ಸೂಚನೆ ಕಲಾತ್ಮಕವಾದ ರೀತಿಯಿಂದ ಪಾತ್ರಗಳ ಸಂಭಾಷಣೆಯ ಮೂಲಕ ಬರುವುದೊಂದು ಸ್ವಾರಸ್ಯ. ಇದನ್ನು ‘ಪತಾಕಾಸ್ಥಾನ’ ಎನ್ನುತ್ತಾರೆ. ಇದನ್ನು ಕುರಿತು ತೌತನ ಅಭಿಪ್ರಾಯ ಹೀಗಿದೆ:
ಪತಾಕಾಯಾಃ ಸ್ಥಾನಮಿತಿವೃತ್ತತಾ | (ಅಭಿನವಭಾರತೀ, ಸಂ. ೩, ಪು. ೧೯)
ಈ ಪ್ರಕಾರ ಪತಾಕಾಸ್ಥಾನಗಳು ಇತಿವೃತ್ತಕ್ಕೆ ಹೊಂದಿಕೆಯಾಗುವಂತೆ ಇರಬೇಕೇ ಹೊರತು ಬರಿಯ ಕವಿಚಮತ್ಕೃತಿಯ ಪ್ರದರ್ಶನವಾಗಿ ಬರಬಾರದು. ಆನಂದವರ್ಧನನು ಸಂಧ್ಯಂಗಗಳಾಗಲಿ, ವರ್ಣನೆಗಳಾಗಲಿ ರಸೋಚಿತವಾಗಿ, ಕಥನಕ್ಕೆ ಅನುಗುಣವಾಗಿ ಬರಬೇಕೆಂದು ಒಕ್ಕಣಿಸಿರುವುದಿಲ್ಲಿ ಸ್ಮರಣೀಯ. ಇದೇ ಅಭಿಪ್ರಾಯ ಕುಂತಕನದೂ ಆಗಿದೆ.[1] ಹೀಗೆ ಈ ಎಲ್ಲ ಮಹಾಮತಿಗಳ ಸಾಲಿನಲ್ಲಿ ಸೇರುವಂಥ ಪ್ರಜ್ಞೆ ಭಟ್ಟತೌತನದು.
* * *
ಭರತನು ನಾಟ್ಯಶಾಸ್ತ್ರದಲ್ಲಿ ಸಂಧ್ಯಂಗಗಳನ್ನು ವಿವರಿಸುವಾಗ ‘ವರ್ಣಸಂಹಾರ’ವೆಂಬ ಅಂಗವನ್ನು ಹೀಗೆ ನಿರೂಪಿಸುತ್ತಾನೆ: ‘ಚಾತುರ್ವಣ್ಯೋಪಗಮನಂ ವರ್ಣಸಂಹಾರ ಇಷ್ಯತೇ’ (೨೧.೮೨). ಇದು ಸ್ಪಷ್ಟವಾಗಿಲ್ಲ. ಇಲ್ಲಿಯ ‘ಚಾತುರ್ವರ್ಣ್ಯ’ ಬ್ರಾಹ್ಮಣ, ಕ್ಷತ್ತ್ರಿಯ ಮೊದಲಾದ ನಾಲ್ಕು ವರ್ಣಗಳೆಂದು ಭ್ರಮಿಸುವ ಸಾಧ್ಯತೆ ಇದೆ. ಪ್ರಾಯಶಃ ಇದನ್ನು ಮನಗಂಡು ಭಟ್ಟತೌತನು ಪ್ರಕರಣೋಚಿತವಾಗಿ ಚಾತುರ್ವರ್ಣ್ಯವನ್ನು ಹೀಗೆ ವಿವರಿಸಿದ್ದಾನೆ:
ಇಹ ವೀರಪ್ರಧಾನೇ ತಾವನ್ನಾಯಕಪ್ರತಿನಾಯಕೌ ತತ್ಸಚಿವೌ ಚ ಪ್ರಧಾನತ್ವೇನ ವರ್ಣ್ಯಂತ ಇತಿ ವರ್ಣಾಃ | ಕಾಮಪ್ರಧಾನೇಽಪಿ ನಾಯಕೋ ನಾಯಿಕಾ ತತ್ಸಚಿವೌ ಚೇತಿ | (ಅಭಿನವಭಾರತೀ, ಸಂ. ೩, ಪು. ೪೭)
ಈ ಪ್ರಕಾರ ಚಾತುರ್ವರ್ಣ್ಯವು ರೂಪಕದ ಮುಖ್ಯಪಾತ್ರಗಳನ್ನು ಕುರಿತಿದೆ. ಸಾಮಾನ್ಯವಾಗಿ ನಾಟಕ, ಪ್ರಕರಣ ಮತ್ತು ನಾಟಿಕೆಗಳಂಥ ಇತಿವೃತ್ತಪ್ರಧಾನವಾದ ದೃಶ್ಯಕಾವ್ಯಗಳಲ್ಲಿ ವೀರ ಮತ್ತು ಶೃಂಗಾರ ರಸಗಳೇ ಮುನ್ನೆಲೆಗೆ ಬರುತ್ತವೆ. ಈ ರಸಗಳನ್ನು ವ್ಯವಸ್ಥಿತವಾಗಿ ಪೊಷಿಸಲು ನಾಯಕ-ಪ್ರತಿನಾಯಕರ, ನಾಯಕ-ನಾಯಿಕೆಯರ ಮುಖಾಮುಖಿ ಅನಿವಾರ್ಯ. ಇದಕ್ಕೆ ಒದಗಿಬರಬಲ್ಲವರು ಆಯಾ ಪಾತ್ರಗಳ ಸಹಕಾರಿಗಳಾದ ಗೌಣ ಪ್ರಕೃತಿಗಳು. ವೀರದಲ್ಲಿ ನಾಯಕ-ಪ್ರತಿನಾಯಕರಿಗೆ ಮಂತ್ರಿ-ಸೇನಾನಿಗಳು ಒದಗಿಬಂದರೆ, ಶೃಂಗಾರದಲ್ಲಿ ನಾಯಕ-ನಾಯಿಕೆಯರಿಗೆ ವಿದೂಷಕ-ಚೇಟಿಯರು ಅನುಕೂಲಿಸುತ್ತಾರೆ. ಭಟ್ಟತೌತನ ಈ ವಿವರಣೆ ಇಲ್ಲದಿದ್ದರೆ ಗೊಂದಲ ತಪ್ಪಿದ್ದಲ್ಲ. ಚಾತುರ್ವರ್ಣ್ಯದಂಥ ವಿಶಿಷ್ಟ ಶಬ್ದಗಳು ಅನರ್ಥ-ಅಪಾರ್ಥಗಳಿಗೆ ಒಳಗಾದರೆ ಅಪಾಯ ಎಂಥದ್ದೆಂಬುದನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ. ಹೀಗಾಗಿಯೇ ನಮ್ಮ ಪರಂಪರೆಯ ಎಷ್ಟೋ ಸೂಕ್ಷ್ಮ ಅಂಶಗಳನ್ನು ಸರಿಯಾಗಿ ತಿಳಿಯಲು ಅಲ್ಲಿಯ ಮಹಾಮತಿಗಳೇ ನೆರವಾಗಬೇಕು.
ನಾಟ್ಯಶಾಸ್ತ್ರದ ಇಡಿಯ ಇಪ್ಪತ್ತೊಂದನೆಯ ಅಧ್ಯಾಯದ ವ್ಯಾಖ್ಯಾನದಲ್ಲಿ ತನ್ನ ಗುರುವಿನ ಪಾಠ ತನಗೆ ತುಂಬ ನೆರವಾಗಿದೆ ಎಂದು ಅಭಿನವಗುಪ್ತನು ಕಡೆಯಲ್ಲಿ ಶ್ಲೋಕೀಕರಿಸಿರುವುದು ಗಮನಾರ್ಹ:
ದ್ವಿಜವರತೋತನಿರೂಪಿತ-
ಸಂಧ್ಯಧ್ಯಾಯಾರ್ಥತತ್ತ್ವಘಟನೇಯಮ್ |
ಅಭಿನವಗುಪ್ತೇನ ಕೃತಾ
ಶಿವಚರಣಾಂಭೋಜಮಧುಪೇನ || (ಅಭಿನವಭಾರತೀ, ೧೯.೧೫೪)
ರೂಪಕರಚನೆಯಲ್ಲಿ ಸಂಧಿ-ಸಂಧ್ಯಂಗಗಳ ಹೆಣಿಗೆಗೆ ಎಲ್ಲಿಲ್ಲದ ಮಹತ್ತ್ವವುಂಟು. ಇದನ್ನು ಈ ಮುನ್ನವೇ ಅರಿತಿದ್ದೇವೆ. ಇಂಥ ಪ್ರಮುಖ ರಚನಾತತ್ತ್ವವನ್ನು ಅಭಿನವಗುಪ್ತನಿಗೆ ಅಚ್ಚುಕಟ್ಟಾಗಿ ಮನದಟ್ಟು ಮಾಡಿಸಿದವನು ಭಟ್ಟತೌತನೆಂದ ಬಳಿಕ ಆತನ ಕಾವ್ಯತಂತ್ರಪರಿಜ್ಞಾನ ಅದೆಷ್ಟು ನಿಶಿತವೆಂದೂ ಸಮಗ್ರವೆಂದೂ ತಿಳಿಯದಿರದು. ಇಂದೂ ಎಂದೂ ಯಾವುದೇ ಬಗೆಯ ದೃಶ್ಯ-ಶ್ರವ್ಯಕಾವ್ಯಗಳ ಕಥನಕ್ರಮ ಹೇಗಿರಬೇಕೆಂಬ ವಿವೇಕವನ್ನು ಅನುಸರಿಸಿಯೇ ಆಯಾ ಸಾಹಿತ್ಯರೂಪಗಳ ಸಾಫಲ್ಯ-ವೈಫಲ್ಯಗಳು ತೀರ್ಮಾನವಾಗುತ್ತವೆ. ಈ ನಿಟ್ಟಿನಲ್ಲಿ ತೌತನ ಯೋಗದಾನ ಹಿರಿದು.
* * *
ಅಭಿನವಭಾರತಿಯಲ್ಲಿ ರಸ ಮತ್ತು ಪುರುಷಾರ್ಥಗಳಿಗಿರುವ ಸಂಬಂಧ ಹಲವು ಕಡೆ ಚರ್ಚಿತವಾಗಿದೆ. ನಾಟ್ಯಶಾಸ್ತ್ರದಲ್ಲಿ ಈ ಚರ್ಚೆಗೆ ನೇರವಾದ ಸೂಚನೆಗಳಿಲ್ಲದಿದ್ದರೂ ಅಭಿನವಗುಪ್ತನು ಭರತನ ಹೃದಯವನ್ನೂ ಸನಾತನಧರ್ಮ ಮತ್ತು ಕಲಾಸಾಮಾನ್ಯದ ಸ್ವರೂಪವನ್ನೂ ಅರಿತು ಇಂಥ ವಿಶ್ಲೇಷಣೆಗೆ ತೊಡಗಿ, ಅತ್ಯುತ್ತಮ ನಿರ್ಣಯಕ್ಕೆ ಬರುವ ಮೂಲಕ ನಮ್ಮೆಲ್ಲರ ಕೃತಜ್ಞತೆಗೆ ಪಾತ್ರನಾಗಿದ್ದಾನೆ. ಇವನ ಈ ಸಾಧನೆಯಲ್ಲಿ ಭಟ್ಟತೌತನ ಪಾತ್ರ ಬಲುಮಿಗಿಲು. ಅದಕ್ಕೊಂದು ನಿದರ್ಶನ ಹೀಗಿದೆ:
ಇದಂ ತ್ವತ್ರ ತತ್ತ್ವಮುಪಾಧ್ಯಾಯೈರ್ನಿರೂಪ್ಯತೇ | ಇದಂ ದ್ವಿವಿಧಂ ಹಿ ನಾಟ್ಯಮ್, ಉದ್ಧತಂ ಸುಕುಮಾರಂ ಚ | ವೀರಶೃಂಗಾರಯೋರೇವ ನಾಯಕಗತಯೋರಶೇಷಪುರುಷಾರ್ಥಸಿದ್ಧಿಷು ವ್ಯಾಪಾರಾತ್ | (ಅಭಿನವಭಾರತೀ, ಸಂ. ೪, ಪು. ೨೬೮)
ಈ ಮುನ್ನವೇ ನಾವು ಕಂಡಂತೆ ಧರ್ಮಾರ್ಥಗಳಿಗೆ ವೀರವೂ ಕಾಮಕ್ಕೆ ಶೃಂಗಾರವೂ ಒದಗಿಬರುವ ರಸಗಳು. ಇವೆರಡೂ ಅಭ್ಯುದಯ ಎಂಬ ಮೌಲ್ಯವನ್ನು ಪ್ರತಿನಿಧಿಸುವ ತ್ರಿವರ್ಗದ ಸ್ವಾರಸ್ಯವನ್ನು ಹೃದಯಂಗಮವಾಗಿ ಹಿಡಿದಿಡುತ್ತವೆ. ವೀರವು ಉದ್ಧತ ಪ್ರಯೋಗಗಳಲ್ಲಿಯೂ ಶೃಂಗಾರವು ಸುಕುಮಾರ ಪ್ರಯೋಗಗಳಲ್ಲಿಯೂ ಪ್ರಾಮುಖ್ಯವನ್ನು ವಹಿಸುತ್ತವೆ. ಭರತನೇ ತಿಳಿಸಿದಂತೆ ರಂಗಪ್ರಯೋಗವು ಉದ್ಧತ ಮತ್ತು ಸುಕುಮಾರ ಎಂದು ಇಬ್ಬಗೆಯಾಗಿದೆ. ಈ ನಿಲವನ್ನೇ ರಸಗಳ ಮೂಲಕ ಪುರುಷಾರ್ಥಗಳವರೆಗೆ ವಿಸ್ತರಿಸಿದರೆ ಮೇಲೆ ಕಾಣಿಸಿದಂಥ ಭಟ್ಟತೌತನ ಅಭಿಮತ ಮೈದಾಳುತ್ತದೆ. ಹೀಗೆ ರಂಗಪ್ರಯೋಗದ ರೀತಿಯಿಂದ ಜೀವನಮೌಲ್ಯಗಳವರೆಗೆ ಏಕಸೂತ್ರವನ್ನು ಮನಗಾಣಿಸಿದ ಶ್ರೇಯಸ್ಸು ಭಟ್ಟತೌತನೌದು.
* * *
ನಾಟ್ಯಶಾಸ್ತ್ರದ ಧ್ರುವಾಧ್ಯಾಯದಲ್ಲಿ ವಿವಿಧ ಗೀತಗಳ ಗತಿ-ಲಯಗಳು ಹೇಗಿರಬೇಕೆಂಬ ಪ್ರಶ್ನೆಗೆ ಉತ್ತರವೆಂಬಂತೆ ಅಭಿನವಗುಪ್ತನು ತನ್ನ ಗುರುವಿನ ಮಾತನ್ನು ಉದಾಹರಿಸಿದ್ದಾನೆ:
ಉಪಾಧ್ಯಾಯಾಶ್ಚ ಮನ್ಯಂತೇ | ಔಚಿತ್ಯಂ ತಂತ್ರಾಪೇಕ್ಷಯಾ ಪೂರ್ವಮುಕ್ತಮ್ | ಮಧ್ಯಮೇ ಲಯೇ ಸಮಪಾಣಿಃ ಸಮಾ ಚ ಯತಿರಿತ್ಯಾದಿ | ವಸ್ತುತಃ ಸರ್ವತ್ರ ಸರ್ವಸ್ಯ ವಿಧೇಃ ಸಂಭವ ಇತಿ | (ಅಭಿನವಭಾರತೀ, ಸಂ. ೪, ಪು. ೩೧೮)
ಈ ಪ್ರಕಾರ ರಂಗಪ್ರಯೋಗದ ತಂತ್ರಕ್ಕೆ ಅನುಗುಣವಾಗಿ ಧ್ರುವಗೀತಗಳ ಲಯ-ಗತಿಗಳು ಹೇಗಿರಬೇಕೆಂಬ ಸೂಚನೆ ಇದ್ದೇ ಇದೆ. ಅವು ವಿವಿಧ ಗೀತಗಳಿಗೆ ತದನುಗುಣವಾದ ಲಯ-ಗತಿಗಳಿರಬೇಕು. ಉದಾ: ಸಮಪಾಣಿಯು ಮಧ್ಯಮಲಯದಲ್ಲಿ ಇರುತ್ತದೆ. ಅದರ ಯತಿಸ್ಥಾನವೂ ಸಮಗತಿಗೆ ಅನುಗುಣವಾಗಿರುತ್ತದೆ. ಇಂತಿದ್ದರೂ ಎಲ್ಲ ಬಗೆಯ ಗೀತಗಳಿಗೂ ಎಲ್ಲ ಬಗೆಯ ಲಯ-ಗತಿಗಳು ಸಲ್ಲಬಹುದಾದ ಸಂಭವವುಂಟು.
ಮೇಲ್ನೋಟಕ್ಕೆ ಅಂತರ್ವಿರೋಧ ಇರುವಂತೆ ತೋರುವ ಈ ಮಾತುಗಳಲ್ಲಿ ಕಲಾತತ್ತ್ವದ ಸೂಕ್ಷ್ಮವೊಂದು ಅಡಗಿದೆ. ಶಾಸ್ತ್ರಾನುಭವಗಳಿಂದ ಕವಿ-ವಿದ್ವಾಂಸರು ನಿರ್ದಿಷ್ಟ ರಸ-ಭಾವಗಳಿಗೆ ನಿರ್ದಿಷ್ಟ ರೂಪದ ಬಂಧಗಳೂ ರಾಗ-ತಾಳಗಳೂ ಇರಬೇಕೆಂಬ ನಿಲವಿಗೆ ಬಂದಿದ್ದರೂ ಕೆಲವೊಮ್ಮೆ ಮಹಾಪ್ರತಿಭೆಯು ಈ ವಿವೇಕವನ್ನು ಮೀರಿಯೂ ಸೊಗಸನ್ನು ಸಾಧಿಸುವ ಬಗೆ ತೋರಿರುತ್ತದೆ. ಉದಾ: ವಸಂತತಿಲಕಾ, ಶಾರ್ದೂಲವಿಕ್ರೀಡಿತ ಮುಂತಾದ ಛಂದಸ್ಸುಗಳು ಓಜಸ್ವಿಯಾದ ಸಂದರ್ಭಗಳಿಗೆ ತಕ್ಕುವೆಂಬ ಅಭಿಪ್ರಾಯವಿದ್ದರೂ ಇವಕ್ಕೆ ಹೊರತಾದ ಸನ್ನಿವೇಶಗಳಲ್ಲಿಯೂ ಅವು ಬಳಕೆಗೆ ಬಂದು ಗೆಲ್ಲಬಹುದು; ಆದಿ, ರೂಪಕ, ಝಂಪೆ ಮುಂತಾದ ಮೂಲಭೂತ ತಾಳಗಳ ರೀತಿಯೂ ಹೀಗೆ ಆಗುವುದುಂಟು. ಒಳ್ಳೆಯ ಕವಿ-ವಿಮರ್ಶಕರು ಇಂಥ ಸಾಧ್ಯತೆಗಳನ್ನು ಅರಿತಿರಬೇಕು. ಇದು ಭಟ್ಟತೌತನ ಇಂಗಿತ.
* * *
ನಾಟ್ಯಶಾಸ್ತ್ರವು ಧ್ರುವಗೀತಗಳು ಯಾವ ಯಾವ ಸಂದರ್ಭಗಳಲ್ಲಿ ಬರಬೇಕು ಇಲ್ಲವೇ ಬರಬಾರದು ಎಂಬ ಎಚ್ಚರವನ್ನು ನೀಡಿದೆ. ಯಾವ ಸನ್ನಿವೇಶದಲ್ಲಿ ಧ್ರುವಗೀತಗಳಿಗೆ ಆಸ್ಪದವಿಲ್ಲವೆಂಬ ಅಂಶವನ್ನು ಕುರಿತು ತೌತನ ಅಭಿಪ್ರಾಯ ಹೀಗಿದೆ:
ಉಪಾಧ್ಯಾಯಾಸ್ತ್ವಾಹುಃ | ‘ಗಾಯತೋ ರುದತ’ ಇತ್ಯನೇನ ಹರ್ಷವೀರಕ್ರೋಧಶೋಕವಿಪತ್ಸ್ವೇವ ಕ್ರಮೇಣ ಲಕ್ಷ್ಯತೇ | ತೇನ ಚ ಸಂಭ್ರಮೋ ವಿಶೇಷ್ಯತೇ | ತೇನ ಕ್ರೋಧಶೋಕಹರ್ಷಾವಿಷ್ಟಸ್ಯ ಸಂಭ್ರಮೇಽಧ್ರುವಃ ಪ್ರವೇಶ ಇತಿ | (ಅಭಿನವಭಾರತೀ, ಸಂ. ೪, ಪು. ೩೫೭-೫೮)
ಭರತನು ಅಳು, ಸಂಭ್ರಮ, ವಿಸ್ಮಯ, ಆಪತ್ತು ಮುಂತಾದ ಸನ್ನಿವೇಶಗಳಲ್ಲಿ ಪಾತ್ರಗಳು ಪ್ರಾವೇಶಿಕೀ ಧ್ರುವಾ ಎಂಬ ಹಾಡು ಇಲ್ಲದೆಯೇ ರಂಗವನ್ನು ಪ್ರವೇಶಿಸಬೇಕೆಂದು ಹೇಳುತ್ತಾನೆ. ಭಟ್ಟತೌತನು ಈ ಸಂದರ್ಭಗಳಲ್ಲಿ ತೋರಿಕೊಳ್ಳಬಹುದಾದ ಭಾವಗಳನ್ನು ಗ್ರಹಿಸಿ ಪ್ರಕೃತ ನಿಯಮವನ್ನು ಕಲಾಸಾಮಾನ್ಯದ ವಸ್ತುತಂತ್ರದ ನೆಲೆಯಲ್ಲಿ ಗಮನಿಸಿಕೊಂಡು ವಿವರಿಸಿರುವುದು ಮಹತ್ತ್ವದ್ದೆನಿಸಿದೆ. ಹೀಗೆ ಶಾಸ್ತ್ರದ ವಿಧಿ-ನಿಷೇಧಗಳ ಪರಮಾರ್ಥವನ್ನು ಅನುಭಾವಗಳಿಗಿಂತ ಮಿಗಿಲಾಗಿ ಭಾವಗಳ ಬೇರಿನಲ್ಲಿ ಮನಗಾಣಬೇಕೆಂಬ ಕಾಣ್ಕೆ ಭಟ್ಟತೌತನದು.
ಉಪಸಂಹಾರ
ಈವರೆಗಿನ ವಿವೇಚನೆಯಿಂದ ಭಾರತೀಯ ಕಲಾಮೀಮಾಂಸೆಗೆ ಭಟ್ಟತೌತನ ಕೊಡುಗೆ ಎಂಥದ್ದೆಂಬುದರ ತಿಳಿವು ಸ್ವಲ್ಪ ಮಟ್ಟಿಗಾದರೂ ನಮಗೊದಗಿದೆ. ಇಲ್ಲಿರುವ ನಲವತ್ತೈವತ್ತು ಉದ್ಧರಣಗಳಿಂದಲೇ ಅವನ ಯೋಗದಾನ ಅದೆಷ್ಟು ಮೌಲಿಕ ಎಂದು ಅರಿವಾಗುವಾಗ, ಧನ್ಯತೆಯ ಹಿಗ್ಗಿನೊಡನೆ ಆತನ ಕೃತಿಯೊಂದೂ ನಮಗಿಂದು ಉಳಿದಿಲ್ಲವಲ್ಲ ಎಂಬ ನಷ್ಟದ ನೋವೂ ನುಗ್ಗಿಬರುತ್ತದೆ. ಇಂಥ ಮಹಾಮತಿಗಳಿಂದಲೇ ಜಗತ್ತಿನ ಭಾವ-ಬುದ್ಧಿಗಳ ವಲಯ ಶ್ರೀಮಂತವಾಗಿದೆ. ಇವರ ದುಡಿಮೆಯ ಜಾಡು ನಮಗೆ ಸರ್ವಥಾ ಸ್ಫೂರ್ತಿಪ್ರದ, ಸರ್ವದಾ ಪೂಜನೀಯ.
ಸಾವಿರ ವರ್ಷಗಳಿಗೂ ಮುನ್ನ ಜಗತ್ತಿನ ಕಲಾಮೀಮಾಂಸೆ ಇನ್ನೂ ವಿಕಸಿತವಾಗುತ್ತಿದ್ದ ಹಂತದಲ್ಲಿ ಅಂತರ್ದೃಷ್ಟಿ ಮತ್ತು ಪರಿಷ್ಕಾರಗಳೆರಡರ ನಿಟ್ಟಿನಿಂದಲೂ ಮೇಲೆನಿಸುವಂಥ ಹೊಳಹುಗಳನ್ನು ನಮಗೆ ಕರುಣಿಸಿದ ತೌತನ ಪ್ರತಿಭೆ-ಪಾಂಡಿತ್ಯಗಳ ಪರಿಪಾಕ ದೊಡ್ಡದು. ತಾನು ಕೇವಲ ದಾರ್ಶನಿಕನಾದ ಪಂಡಿತನಾಗಿ ಉಳಿಯದೆ ಅಪ್ರತಿಮ ಪ್ರತಿಭಾಶಾಲಿಯಾದ ಶಿಷ್ಯೋತ್ತಮನನ್ನೂ ರೂಪಿಸಿದ ದೇಶಿಕೇಂದ್ರನಾಗಿ ಕೂಡ ದುಡಿಯುವ ಮೂಲಕ ಮುಂದಿನ ಪರಂಪರೆಗೆ ಮಾರ್ಗದರ್ಶಿ ಎನಿಸಿದ್ದಾನೆ. ಈತನ ಪುಣ್ಯಸ್ಮರಣೆಗೆ ಈ ಲೇಖನವೊಂದು ಚಿಕ್ಕ ನುಡಿಗಾಣಿಕೆ.
ಮೂರು ದಶಕಗಳಿಗೂ ಮುನ್ನ ಕೀರ್ತಿಶೇಷ ವಿದ್ವಾಂಸ ಕೆ. ಕೃಷ್ಣಮೂರ್ತಿ ಅವರು ಭಟ್ಟತೌತನ ವಿಷಯದಲ್ಲಿ ನನಗಿದ್ದ ಆಸ್ಥೆ-ಕುತೂಹಲಗಳನ್ನು ಗಮನಿಸಿ ಯಾವ ಆಕರಗಳನ್ನು ಪರಿಶೀಲಿಸಿದರೆ ಹೆಚ್ಚಿನ ಪ್ರಗತಿ ಸಾಧ್ಯವೆಂಬ ನಿರ್ದೇಶನ ನೀಡಿದ್ದರು. ಅವರ ವ್ಯಕ್ತಿತ್ವ-ಕೃತಿತ್ವಗಳ ಪ್ರೇರಣೆಯ ಫಲವಾಗಿ ಈ ಲೇಖನ ಮೈದಳೆದಿದೆ ಎಂದರೆ ಅತಿಶಯೋಕ್ತಿಯಲ್ಲ. ಆ ಮಹನೀಯರ ಜನ್ಮಶತಾಬ್ದಮಹೋತ್ಸವದ ಸಂದರ್ಭದಲ್ಲಿ ಈ ಬರೆಹ ರೂಪುಗೊಂಡಿರುವುದು ಬರಿಯ ಕಾಕತಾಳೀಯವಲ್ಲ ಎಂದು ಭಾವಿಸಿದ್ದೇನೆ.
* * *
[1] ಸಂಧಿಸಂಧ್ಯಂಗಘಟನಂ ರಸಾದಿವ್ಯಕ್ತ್ಯಪೇಕ್ಷಯಾ | ನ ತು ಕೇವಲಯಾ ಶಾಸ್ತ್ರಸ್ಥಿತಿಸಂಪಾದನೇಚ್ಛಯಾ || (ಧ್ವನ್ಯಾಲೋಕ, ೩.೧೨)
ಕಥಾವೈಚಿತ್ರ್ಯಪಾತ್ರಂ ತದ್ವಕ್ರಿಮಾಣಂ ಪ್ರಪದ್ಯತೇ | ಯದಂಗಂ ಸರ್ಗಬಂಧಾದೇಃ ಸೌಂದರ್ಯಾಯ ನಿಬಧ್ಯತೇ || (ವಕ್ರೋಕ್ತಿಜೀವಿತ, ೪.೯)
ಗ್ರಂಥಋಣ
• ಈಶಾದಿದಶೋಪನಿಷದಃ ಶಾಂಕರಭಾಷ್ಯಸಮೇತಾಃ. ಮೋತಿಲಾಲ್ ಬನಾರಸೀದಾಸ್ ಪ್ರಕಾಶನ, ದೆಹಲಿ, ೧೯೬೪
• ಋಗ್ವೇದಸಂಹಿತಾ (ಸಂ. ಶ್ರೀಪಾದ ದಾಮೋದರ ಸಾತವಳೇಕರ್). ಆರ್ಯ ಸಾಹಿತ್ಯಮಂಡಲ, ಅಜಮೇರ್, ೧೯೫೨
• ಕಲ್ಪಲತಾವಿವೇಕ (ಸಂ. ಮುರಾರಿಲಾಲ್ ನಾಗರ್, ಹರಿಶಂಕರಶಾಸ್ತ್ರೀ). ಲೇಖಕ ಅಜ್ಞಾತ. ಭಾರತೀಯ ಸಂಸ್ಕೃತಿ ವಿದ್ಯಾಮಂದಿರ, ಅಹಮದಾಬಾದ್, ೧೯೬೮
• ಕಾನೂರು ಹೆಗ್ಗಡಿತಿ. ಕುವೆಂಪು. ಉದಯರವಿ ಪ್ರಕಾಶನ, ಮೈಸೂರು, ೨೦೦೦
• ಕಾವ್ಯಪ್ರಕಾಶ (ಶ್ರೀಧರನ ‘ವಿವೇಕ’ವ್ಯಾಖ್ಯಾನದ ಸಮೇತ; ಸಂ. ಎಸ್. ಪಿ. ಭಟ್ಟಾಚಾರ್ಯ; ಎರಡು ಸಂಪುಟಗಳು). ಮಮ್ಮಟ. ಕಲ್ಕತ್ತಾ ಸಂಸ್ಕೃತ ಮಹಾವಿದ್ಯಾಲಯ ಸಂಶೋಧನಮಾಲಿಕೆ, ಕಲ್ಕತ್ತಾ, ೧೯೫೯, ೧೯೬೧
• ಕಾವ್ಯಪ್ರಕಾಶ (ಚಂಡೀದಾಸನ ‘ದೀಪಿಕಾ’ವ್ಯಾಖ್ಯಾನದ ಸಮೇತ; ಸಂ. ಎಸ್. ಪಿ. ಭಟ್ಟಾಚಾರ್ಯ; ಸಂ. ೨). ಮಮ್ಮಟ. ವಾರಾಣಸೀ ಸಂಸ್ಕೃತವಿಶ್ವವಿದ್ಯಾಲಯ, ವಾರಾಣಸೀ, ೧೯೬೫
• ಕಾವ್ಯಪ್ರಕಾಶ (ಶ್ರೀವಿದ್ಯಾಚಕ್ರವರ್ತಿಯ ‘ಸಂಪ್ರದಾಯಪ್ರಕಾಶಿನೀ’, ಭಟ್ಟಗೋಪಾಲನ ‘ಸಾಹಿತ್ಯಚೂಡಾಮಣಿ’ಗಳ ಸಮೇತ; ಸಂ. ೧; ಸಂ. ರಾ. ಹರಿಹರಶಾಸ್ತ್ರೀ). ಮಮ್ಮಟ. ಅನಂತಶಯನಸಂಸ್ಕೃತಗ್ರಂಥಾವಲಿ, ತಿರುವನಂತಪುರ, ೧೯೨೬
• ಕಾವ್ಯಮೀಮಾಂಸಾ (ಸಂ. ಸಿ. ಡಿ. ದಲಾಲ್, ಆರ್. ಎ. ಶಾಸ್ತ್ರೀ; ಪರಿಷ್ಕಾರ: ಕೆ. ಎಸ್. ರಾಮಸ್ವಾಮಿ ಶಾಸ್ತ್ರೀ). ರಾಜಶೇಖರ. ಗಾಯಕವಾಡ ಪ್ರಾಚ್ಯವಿದ್ಯಾಸಂಸ್ಥೆ, ವಡೋದರಾ, ೧೯೩೪
• ಕಾವ್ಯಾಲಂಕಾರಸಾರಸಂಗ್ರಹ (ಪ್ರತೀಹಾರೇಂದುರಾಜನ ವ್ಯಾಖ್ಯೆಯ ಸಮೇತ; ಸಂ. ನಾರಾಯಣ ದಶರಥ ಬನಹಟ್ಟಿ). ಉದ್ಭಟ. ಭಂಡಾರಕರ್ ಪ್ರಾಚ್ಯವಿದ್ಯಾಸಂಸ್ಥೆ, ಪುಣೆ, ೧೯೮೨
• ಕಾವ್ಯಾಲಂಕಾರಸೂತ್ರವೃತ್ತಿ (ಗೋಪೇಂದ್ರನ ‘ಕಾಮಧೇನು’ವ್ಯಾಖ್ಯೆಯ ಸಮೇತ; ಸಂ. ಕೇದಾರನಾಥ ಮಿಶ್ರ). ವಾಮನ. ಚೌಖಂಬಾ ಅಮರಭಾರತೀ ಪ್ರಕಾಶನ, ವಾರಾಣಸಿ, ೧೯೭೯
• ಕ್ಷೇಮೇಂದ್ರಲಘುಕಾವ್ಯಸಂಗ್ರಹ (ಸಂ. ಶ್ರೀನಿವಾಸಶರ್ಮಾ ಮತ್ತು ಕೆ. ವಿ. ಸೂರ್ಯಪ್ರಕಾಶ). ಕ್ಷೇಮೇಂದ್ರ. ಸಂಸ್ಕೃತಪರಿಷತ್, ಉಸ್ಮಾನಿಯಾ ವಿಶ್ವವಿದ್ಯಾಲಯ, ಹೈದರಾಬಾದ್, ೨೦೦೯
• ಚಂದ್ರಾಲೋಕ (ಸಂ. ಮಹಾದೇವ ಗಂಗಾಧರ ಬಾಕ್ರೆ). ಜಯದೇವ. ಗುಜರಾತಿ ಮುದ್ರಣಾಲಯ, ಬಾಂಬೆ, ೧೯೩೯
• ಧ್ವನ್ಯಾಲೋಕ (ಸಂಪಾದನೆ ಮತ್ತು ಆಂಗ್ಲ ಅನುವಾದ: ಕೆ. ಕೃಷ್ಣಮೂರ್ತಿ). ಮೋತಿಲಾಲ್ ಬನಾರಸೀದಾಸ್ ಪ್ರಕಾಶನ, ದೆಹಲಿ, ೧೯೮೨
• ಧ್ವನ್ಯಾಲೋಕ (ಅಭಿನವಗುಪ್ತನ ‘ಲೋಚನ’ದ ಸಮೇತ; ಸಂ. ಪಂಡಿತ ದುರ್ಗಾಪ್ರಸಾದ, ಕಾಶೀನಾಥ ಪಾಂಡುರಂಗ ಪರಬ್. ಪರಿಷ್ಕಾರ: ವಾಸುದೇವ ಲಕ್ಷ್ಮಣಶಾಸ್ತ್ರೀ ಪಣಶೀಕರ್). ಮುನ್ಶೀರಾಮ್ ಮನೋಹರಲಾಲ್ ಪ್ರಕಾಶನ, ನವದೆಹಲಿ, ೧೯೯೮
• ನಾಟ್ಯಶಾಸ್ತ್ರ (ಅಭಿನವಗುಪ್ತನ ‘ಅಭಿನವಭಾರತಿ’ಯ ಸಮೇತ; ಸಂ. ಆರ್. ಎಸ್. ನಾಗರ್; ೪ ಸಂಪುಟಗಳು). ಭರತಮುನಿ. ಪರಿಮಳ ಪ್ರಕಾಶನ, ದೆಹಲಿ, ೧೯೮೮
• ನಾಟ್ಯಶಾಸ್ತ್ರ (ಅಭಿನವಗುಪ್ತನ ‘ಅಭಿನವಭಾರತಿ’ಯ ಸಮೇತ; ಸಂ. ಕೆ. ಕೃಷ್ಣಮೂರ್ತಿ; ಸಂ. ೧). ಭರತಮುನಿ. ಗಾಯಕವಾಡ ಪ್ರಾಚ್ಯವಿದ್ಯಾಸಂಸ್ಥೆ, ವಡೋದರಾ, ೧೯೯೨
• ಭಾರತೀಯ ಋಷಿ ಪರಂಪರೆ ಮತ್ತು ಸಂಸ್ಕೃತ ಸಾಹಿತ್ಯ. ಪಾದೆಕಲ್ಲು ನರಸಿಂಹ ಭಟ್ಟ. ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು, ೨೦೦೩
• ಭಾರತೀಯ ಕಾವ್ಯಮೀಮಾಂಸೆ. ತೀ. ನಂ. ಶ್ರೀಕಂಠಯ್ಯ. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ೧೯೭೩
• ಭಾರತೀಲೋಚನ. ಆರ್. ಗಣೇಶ್. ಪ್ರೇಕ್ಷಾ ಪ್ರತಿಷ್ಠಾನ, ಬೆಂಗಳೂರು, ೨೦೧೮
• ಭಾವಪ್ರಕಾಶನ, (ಸಂ. ಯದುಗಿರಿ ಯತಿರಾಜ ಸ್ವಾಮಿ ಮತ್ತು ಕೆ. ಎಸ್. ರಾಮಸ್ವಾಮಿಶಾಸ್ತ್ರೀ) ಶಾರದಾತನಯ. ಪ್ರಾಚ್ಯವಿದ್ಯಾಸಂಸ್ಥೆ, ಬರೋಡಾ, ೧೯೬೮
• ವಕ್ರೋಕ್ತಿಜೀವಿತ (ಸಂಪಾದನೆ ಮತ್ತು ಆಂಗ್ಲಾನುವಾದ: ಕೆ. ಕೃಷ್ಣಮೂರ್ತಿ). ಕುಂತಕ. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೭೭
• ವಾಗರ್ಥವಿಸ್ಮಯಾಸ್ವಾದಃ. ಆರ್. ಗಣೇಶ್. ಪ್ರೇಕ್ಷಾ ಪ್ರತಿಷ್ಠಾನ, ಬೆಂಗಳೂರು, ೨೦೧೮
• ವ್ಯಕ್ತಿವಿವೇಕ. ಮಹಿಮಭಟ್ಟ. ಚೌಖಂಬಾ ಸಂಸ್ಕೃತಸರಣಿ ಕಾರ್ಯಾಲಯ, ವಾರಾಣಸಿ, ೧೯೩೬
• ಸಾಹಿತ್ಯದರ್ಪಣ. ವಿಶ್ವನಾಥ. ಮೋತಿಲಾಲ್ ಬನಾರಸೀದಾಸ್ ಪ್ರಕಾಶನ, ದೆಹಲಿ, ೧೯೭೭
• ಸೌಂದರನಂದ (ಸಂ. ಸೂರ್ಯನಾರಾಯಣ ಚೌಧರಿ). ಅಶ್ವಘೋಷ. ಮೋತಿಲಾಲ್ ಬನಾರಸಿದಾಸ್ ಪ್ರಕಾಶನ, ದೆಹಲಿ, ೧೯೮೬
• ಹದನು-ಹವಣು. ಆರ್. ಗಣೇಶ್. ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು, ೨೦೧೮
- Abhinavagupta and his Works. Raghavan, V. Chaukhambha Orientalia, Varanasi, 1981
- Bhoja’s Śrṅgāraprakāśa. Raghavan, V. Punarvasu, Madras, 1978
- Essays in Sanskrit Criticism. Krishnamoorthy, K. Karnatak University, Dharwar, 1974
- Some Aspects of Literary Criticism in Sanskrit. Sankaran, A. Oriental Books Reprint Corporation, New Delhi, 1973
- Studies in Indian Poetics. Bhattacharyya, Sivaprasad. Firma KLM Publishers, Calcutta, 1981
Concluded.