{ಸ್ವಾಗತಾ} ರಥೋದ್ಧತಾವೃತ್ತಕ್ಕಿರುವ ಚತುರಸ್ರಶೋಭಿಯಾದ ಗತಿಸೌಂದರ್ಯ ಎಂಥದ್ದೆಂದು ಮನಗಾಣಲು ವ್ಯತಿರೇಕರೂಪದ ಉದಾಹರಣೆಯೆಂಬಂತೆ ಸ್ವಾಗತಾ ಎಂಬ ವೃತ್ತವನ್ನು ನಾವು ಕಾಣಬಹುದು. ಅದರ ಪ್ರಸ್ತಾರ ಮತ್ತು ಕೆಲವೊಂದು ಉದಾಹರಣೆಗಳು ಹೀಗಿವೆ:
– u – u u u – u u – –
(೫+೩+೪+೪) – u – | u u u | – u u | – –
(೩+೫+೪+೪) – u | – u u u | – u u | – –
ಕೆಮ್ಮನುಮ್ಮಳಿಸಿ ಕೋಪಿಸದಿರ್ಮಾಣ್
ನಿಮ್ಮನುಜ್ಞೆ ದೊರೆಕೊಂಡೊಡೆ ಸಾಲ್ಗುಂ |
ನಿಮ್ಮ ನಚ್ಚಿನ ತಪೋಧನನಂ ತಂ-
ದೆಮ್ಮ ಕಾಲ್ಗೆರಗುವಂತಿರೆ ಮಾಳ್ಪೆಂ || (ರಾಮಚಂದ್ರಚರಿತಪುರಾಣ, ೮.೫೯)
ಊಚಿವಾನುಚಿತಮಕ್ಷರಮೇನಂ
ಪಾಶಪಾಣಿರಪಿ ಪಾಣಿಮುದಸ್ಯ |
ಕೀರ್ತಿರೇವ ಭವತಾಂ ಪ್ರಿಯದಾರಾ
ದಾನನೀರಝರಮೌಕ್ತಿಕಹಾರಾ || (ನೈಷಧೀಯಚರಿತ, ೫.೧೨೮)
ಈ ವೃತ್ತದ ವೈಚಿತ್ರ್ಯ ಮೊದಲ ಕೇಳ್ಮೆಗೇ ಸ್ಪಷ್ಟವಾಗುತ್ತದೆ. ಪ್ರತಿಪಾದದ ಮೊದಲ ಭಾಗ ಸಂತುಲಿತಮಧ್ಯಾವರ್ತಗತಿಯಲ್ಲಿಯೂ ಕಡೆಯ ಭಾಗ ಚತುಷ್ಕಲ ಲಯದ ಶುದ್ಧಮಧ್ಯಾವರ್ತಗತಿಯಲ್ಲಿಯೂ ಇದೆ. ಮೇಲ್ನೋಟಕ್ಕೆ ಎರಡು ಬಗೆಯ ಗತಿಗಳ ವೈವಿಧ್ಯ ಇಲ್ಲಿದೆಯೆಂದು ತೋರಿದರೂ ಯಾವೊಂದು ಗತಿಯೂ ಪೂರ್ಣಪ್ರಮಾಣದ ವ್ಯಾಪ್ತಿಯನ್ನು ಹೊಂದಿಲ್ಲ. ಯಾವುದೇ ಲಯಾನ್ವಿತ ಗತಿಯು ಸಹೃದಯರ ಮನಸ್ಸಿನಲ್ಲಿ ಚೆನ್ನಾಗಿ ನೆಲೆನಿಲ್ಲಬೇಕೆಂದರೆ ಅದರ ಮೂಲಘಟಕಗಳ ಪುನರಾವರ್ತನ ನಾಲ್ಕು ಬಾರಿಯಾದರೂ ಆಗಬೇಕು. ಒಂದನೆಯ ಆವರ್ತಕ್ಕೆ ಅದೊಂದು ವಿಶಿಷ್ಟ ಲಯವಿರುವ ಘಟಕವೆಂಬುದೇ ಸ್ಪಷ್ಟವಾಗುವುದಿಲ್ಲ. ಎರಡು ಆವರ್ತಗಳು ಮುಗಿದ ಬಳಿಕ ಲಯದ ಪ್ರತೀತಿಯಾಗುವುದಾದರೂ ಅದರ ಸೌಖ್ಯವನ್ನು ಅನುಭವಿಸಲು ಮತ್ತಷ್ಟು ವಿಸ್ತರಣ ಬೇಕಿರುತ್ತದೆ. ಏಕೆಂದರೆ ಈವರೆಗೆ ಆದದ್ದು ಬುದ್ಧಿಪ್ರಧಾನವಾದ ಕಾರ್ಯ; ಆಸ್ವಾದವು ಭಾವಪ್ರಧಾನವಾದುದು. ಹೀಗಾಗಿ ಶ್ರೋತೃವಿನ ಮನಸ್ಸು ಮೂರನೆಯ ಆವರ್ತವನ್ನು ಬಯಸುತ್ತದೆ. ಆದರೆ ಮೂರನೆಯ ಆವರ್ತವು ಸೇರಿದ ಬಳಿಕ ಗತಿಯಲ್ಲಿ ಚತುರಸ್ರತೆ ಸಿದ್ಧಿಸುವುದಿಲ್ಲ. ಹೀಗಾಗಿ ಒಟ್ಟಂದದ ಪಾದಗತಿ ಸಾಪೇಕ್ಷವಾಗುತ್ತದೆ.
ಇದನ್ನು ತಣಿಸಲು ಕನಿಷ್ಠಪಕ್ಷ ಊನಗಣವೊಂದು ಬೇಕಾಗುತ್ತದೆ. ಊನಗಣದ ಸೇರ್ಪಡೆಯಿಂದ ಪಾದಾಂತ ಯತಿ ಪ್ರಬಲವಾಗುತ್ತದೆ; ಸಾಲುಗಳ ತೊರೆಯೋಟಕ್ಕೆ ಎರವಾಗುತ್ತದೆ. ಹೀಗಾಗಿ ಪೂರ್ಣಪ್ರಮಾಣದ ಮತ್ತೊಂದು ಗಣ ನಾಲ್ಕನೆಯದಾಗಿ ಬರುವುದು ಅನಿವಾರ್ಯ. ಈ ಮೂಲಕ ಪದ್ಯಪಾದಕ್ಕೆ ಚತುರಸ್ರಶೋಭೆ ಒದಗುತ್ತದೆ. ಓಜಪಾದಗಳಲ್ಲಿ ಗಣಗಳ ಚತುರಸ್ರತೆ ಸರ್ವಥಾ ಅಪೇಕ್ಷಣೀಯ. ಯುಕ್ಪಾದಗಳಲ್ಲಿ ಮಾತ್ರ ಊನಗಣ ಸಾಕಾಗುತ್ತದೆ. ಇದು ಮೂರನೆಯ ಗಣದ ಸ್ಥಾನದಲ್ಲಿಯೂ ಬರಬಹುದು, ನಾಲ್ಕನೆಯದರ ಸ್ಥಾನದಲ್ಲಿಯೂ ಬರಬಹುದು. ಒಟ್ಟಂದದಲ್ಲಿ ಆ ಸಾಲಿನ ಕಡೆಯ ಅಕ್ಷರದ ಕರ್ಷಣದ ಮೂಲಕ ಆವರ್ತಗಳ ಚತುರಸ್ರತೆ ಸಿದ್ಧಿಸುತ್ತದೆ. ಇದು ವೃತ್ತ-ಜಾತಿನಿರಪೇಕ್ಷವಾಗಿ ಎಲ್ಲ ಬಗೆಯ ಲಯಾನ್ವಿತ ಬಂಧಗಳಲ್ಲಿ ಅನಿವಾರ್ಯವಾದ, ಅಪೇಕ್ಷಣೀಯವೂ ಆದ ವ್ಯವಸ್ಥೆ.
ಮೇಲೆ ಕಾಣಿಸಿದ ವಿವೇಕವನ್ನು ಅನ್ವಯಿಸಿದಾಗ ಸ್ವಾಗತಾ ಅಹೃದ್ಯವೆನಿಸುವ ಎಡೆ ಎಲ್ಲಿದೆಯೆಂದು ಸ್ಪಷ್ಟವಾಗುತ್ತದೆ. ಶುದ್ಧಮಧ್ಯಾವರ್ತಗತಿಯ ನಡುವೆ ಅಲ್ಲಲ್ಲಿ ಕೇವಲ ಏಕತಾನತೆಯನ್ನು ಮುರಿಯಲು ಸಂತುಲಿತಮಧ್ಯಾವರ್ತಗತಿಯ ಘಟಕಗಳು ಬಂದರೆ ಸೊಗಸು. ಆದರೆ ಸಂತುಲಿತಮಧ್ಯಾವರ್ತಗತಿಯಲ್ಲಿಯೇ ಶುದ್ಧಮಧ್ಯಾವರ್ತಗತಿಯ ಘಟಕಗಳು ಎಡತಾಕುತ್ತಿದ್ದರೆ ಅಷ್ಟಾಗಿ ಹಿತವೆನಿಸದು.[1]
ಕನ್ನಡದ ಮಂದಾನಿಲರಗಳೆಯಲ್ಲಿ ಅಲ್ಲಲ್ಲಿ ಬರುವ ಸಂತುಲಿತಮಧ್ಯಾವರ್ತಗತಿಯ ಘಟಕಗಳು ಸೊಗಸನ್ನು ತುಂಬುವ ಪರಿಯಿಲ್ಲಿ ಸ್ಮರಣೀಯ:
ಕಾಲ | ಕರುಣವಿ- | ಲ್ಲದೆ ನೀ- | ನೊಯ್ದೆಽ
ಬಾಲನ- | ನಗಲಿಸಿ | ಕೊರಳಂ | ಕೊಯ್ದೆಽ |
ಆರಿ- | ಗೆನ್ನನ- | ಪ್ಪಯಿಸಿದೆ | ಕಂದಽ
ಆರ- | ಯ್ಯದೆ ಹೋ- | ಹರೆ ಗುಣ- | ವೃಂದಽ || (ರಾಘವಾಂಕನ ಸಮಗ್ರಕಾವ್ಯ (ಹರಿಶ್ಚಂದ್ರಕಾವ್ಯ), ಪು. ೧೪೩)
ಈ ರಗಳೆಯ ಭಾಗದಲ್ಲಿ ಎರಡು ಮತ್ತು ನಾಲ್ಕನೆಯ ಸಾಲುಗಳು ಶುದ್ಧವಾದ ಮಧ್ಯಾವರ್ತಗತಿಯಲ್ಲಿವೆ. ಒಂದು ಮತ್ತು ಮೂರನೆಯ ಸಾಲುಗಳ ಮೊದಲಿನ ಭಾಗಗಳು ಸಂತುಲಿತಮಧ್ಯಾವರ್ತಗತಿಗೆ ಸೇರಿವೆ. (ವಸ್ತುತಃ ಈ ಎರಡು ಸಾಲುಗಳು ಸ್ವಾಗತಾವೃತ್ತದ ಗತಿಯನ್ನು ಪ್ರತಿನಿಧಿಸಿವೆ.)
ಹೀಗೆ ಸಂತುಲಿತಮಧ್ಯಾವರ್ತಗತಿಯ ಜೊತೆಗೆ ಶುದ್ಧಮಧ್ಯಾವರ್ತಗತಿಗಳು ಅಂಟಿ ಬರುವುದು ಈ ವೃತ್ತದ ಒಂದು ತೊಡಕಾದರೆ ಪಾದಾಂತದ ಪೂರ್ಣಗಣಗಳು ಎರಡು ಗುರುಗಳಿಂದ ಘಟಿತವಾಗುವ ಮೂಲಕ ಉಂಟಾದ ತೀವ್ರವಾದ ತುಯ್ತ ಮತ್ತೊಂದು ತೊಡಕು. ಒಟ್ಟಿನಲ್ಲಿ ರಥೋದ್ಧತಾವೃತ್ತಕ್ಕೆ ಹೋಲಿಸಿದರೆ ಸ್ವಾಗತಾವೃತ್ತದಲ್ಲಿ ಶ್ರುತಿಸುಭಗತೆ ಕಡಮೆ. ಮಹಾಕವಿ ಕಾಳಿದಾಸನಂಥ ಛಂದೋಗತಿಮರ್ಮಜ್ಞನು ತನ್ನ ಕಾವ್ಯಗಳಲ್ಲಿ ಇದಂಪ್ರಥಮವಾಗಿ ರಥೋದ್ಧತಾವೃತ್ತವನ್ನು ಮೂರು ಸರ್ಗಗಳಷ್ಟು ಬಳಸಿ ನೂರಾರು ಪದ್ಯಗಳನ್ನು ರಚಿಸಿದರೂ ಇದಕ್ಕೆ ಹತ್ತಿರವಿರುವ ಸ್ವಾಗತಾವೃತ್ತವನ್ನು ವಿರಳಾತಿವಿರಳವಾಗಿ ಬಳಸಿದ್ದಾನೆ. ಈ ಒಂದು ನಿದರ್ಶನವೇ ಪ್ರಕೃತ ವೃತ್ತಗಳೆರಡರ ತರ-ತಮಗಳನ್ನು ಸಾಬೀತು ಮಾಡೀತು. ಕಾಳಿದಾಸನ ಬಳಿಕ ಬಂದ ಎಷ್ಟೋ ಕವಿಗಳು ಸ್ವಾಗತಾವೃತ್ತವನ್ನು ಸರ್ಗಚ್ಛಂದಸ್ಸಾಗಿ ಬಳಸಿರುವರಾದರೂ ಈ ಮೂಲಕ ಅವರ ರಸಸಿದ್ಧಿ ಹೆಚ್ಚಿದಂತೆ ತೋರದು.
{ಪ್ರಿಯಂವದಾ} ರಥೋದ್ಧತಾವೃತ್ತದ ಗುರು-ಲಘುವಿನ್ಯಾಸ ಅದೆಷ್ಟು ಹದವಾಗಿದೆ ಎಂಬುದನ್ನು ಮನಗಾಣಲು ಅದನ್ನು ಅಷ್ಟಾಗಿ ಪ್ರಸಿದ್ಧವಲ್ಲದ ಪ್ರಿಯಂವದಾ ಎಂಬ ವೃತ್ತದೊಡನೆ ಹೋಲಿಸಿ ನೋಡಬಹುದು. ರಥೋದ್ಧತಾವೃತ್ತದ ಮೊದಲ ಗುರುವನ್ನು ಎರಡು ಲಘುಗಳಾಗಿ ಸೀಳಿದರೆ ಪ್ರಿಯಂವದಾ ಸಿದ್ಧಿಸುತ್ತದೆ:
ರಥೋದ್ಧತಾ
[–] u – u u u – u – u –
ಪ್ರಿಯಂವದಾ
[u u] u – u u u – u – u –
ಈ ವೃತ್ತದ ಗುರು-ಲಘುಗಳ ಅನುಪಾತದಲ್ಲಿ ಹದ ತಪ್ಪಿರುವ ಕಾರಣ ಗತಿಶೈಥಿಲ್ಯ ಭಾಸವಾಗದಿರದು. ನಡುಗನ್ನಡದಂಥ ಲಘುಪ್ರಚುರ ಭಾಷೆಗೆ ಈ ಬಂಧ ಹೆಚ್ಚಿನ ಸೌಲಭ್ಯವನ್ನು ಕಲ್ಪಿಸಬಹುದು. ಆದರೆ ಗುರುಪ್ರಚುರವಾದ ಭಾಷೆಗಳಿಗೆ ಹಿತವೆನಿಸದು. ಇದರ ಉದಾಹರಣೆಗಳನ್ನೀಗ ಕಾಣಬಹುದು:
ಅಶುಚಿಲೋಭಿ ಶುಚಿಲೋಭಮಿಲ್ಲದಂ
ವಿಶದಶೌಚಗುಣಮೊಂದೆ ಕಾರಣಂ |
ಕುಶಲವೃತ್ತಿಗೆನೆ ಭೂಭುಜಂ ಗುಣಾ-
ತಿಶಯಸೂರಿ ಶುಚಿಯಾಗದಿರ್ಪನೇ || (ರಾಮಚಂದ್ರಚರಿತಪುರಾಣ, ೧೨.೫೩)
ಮನಕೆ ಮೆಚ್ಚು ಮನೆಗಚ್ಚುಮೆಚ್ಚೆನಲ್
ವನಿತೆಯಂ ವರಿಸೆ ಮಂಡಪಸ್ಥಿತಂ |
ಹನುಮನಾಣ್ಮನೆನೆ ಬೀಗಿ ಬಾಗುತುಂ
ಜನನಿಗಂ ನಗುತೆ ತಾಳಿ ಕಟ್ಟಿದಂ || (ಶತಾವಧಾನಶಾಶ್ವತೀ, ಪು. ೨೧)
{ಮರಾಲಿಕಾ} ಪ್ರಿಯಂವದಾವೃತ್ತದ ಲಘ್ವಾಧಿಕ್ಯವು ಗತಿಸುಭಗತೆಗೆ ಸ್ವಲ್ಪ ಅಡ್ಡಿಯಾದರೆ ಇದೇ ಸಂತುಲಿತಮಧ್ಯಾವರ್ತಗತಿಯ ‘ಮರಾಲಿಕಾ’ / ‘ಮೌಕ್ತಿಕ’ ಎಂಬ ಮತ್ತೊಂದು ವೃತ್ತದ ಗುರ್ವಾಧಿಕ್ಯ ಗತಿಸೌಂದರ್ಯಕ್ಕೆ ತೊಡಕಾಗಿದೆ.
ಮರಾಲಿಕಾವೃತ್ತದ ಪ್ರಸ್ತಾರ ಮತ್ತು ಉದಾಹರಣೆ ಹೀಗಿವೆ:
ರಥೋದ್ಧತಾ
– u – [u u] u – u – u –
ಮರಾಲಿಕಾ
– u – [–] u – u – u –
ನಿರ್ಜನಾಟವೀ- | ಮಧ್ಯದುಃಸ್ಥಿತೌ
ಭಿನ್ನಭಿತ್ತಿಕೇ | ಕಂಟಕಾಂಚಿತೇ |
ಶೂನ್ಯದೇವತಾ- | ಮಂದಿರೇಽಭವ-
ಚ್ಚಂದ್ರಶೇಖರೋಽ- | ಪ್ಯರ್ಕಶೇಖರಃ || (ಕವಿತೆಗೊಂದು ಕಥೆ, ಪು. ೮೨)
ಇಲ್ಲಿಯ ಗುರು-ಲಘುಗಳ ಎಣೆಮೀರಿದ ನೈಯತ್ಯ ಲಯಾನ್ವಿತತೆಯನ್ನು ಉಲ್ಬಣಿಸಿ ತೋರುವ ಕಾರಣ ಏಕತಾನತೆ ಬೇಗ ತಲೆದೋರುತ್ತದೆ. ಇದಕ್ಕೆ ಪ್ರತಿ ಪಾದದ ಐದು ಅಕ್ಷರಗಳ ಬಳಿಕ ಎದ್ದುಕಾಣುವ ಯತಿಯೂ ಮತ್ತೊಂದು ಕಾರಣ.
{ರಾಜಹಂಸಿ} ರಥೋದ್ಧತಾವೃತ್ತಕಿಂತ ಕಿಂಚಿತ್ ಭಿನ್ನವಾದ ‘ರಾಜಹಂಸೀ’ ಎಂಬ ವೃತ್ತವನ್ನು ಗಮನಿಸಬಹುದು. ರಥೋದ್ಧತಾವೃತ್ತದಲ್ಲಿರುವ ಮೊದಲ ಎರಡು ಗಣಗಳು ಇಲ್ಲಿ ಹಿಂದುಮುಂದಾಗಿವೆ. ಇದರ ಪ್ರಸ್ತಾರ ಹೀಗಿದೆ:
ರಥೋದ್ಧತಾ
[– u –]೧ [u u u]೨ – u – u –
ರಾಜಹಂಸೀ
[u u u]೨ [– u –]೧ – u – u –
ಭಾಗವತಪುರಾಣದ ಸುಪ್ರಸಿದ್ಧವಾದ ಗೋಪೀಗೀತ ಇದೇ ಬಂಧದಲ್ಲಿದೆ:
ತವ ಕಥಾಮೃತಂ | ತಪ್ತಜೀವನಂ
ಕವಿಭಿರೀಡಿತಂ | ಕಲ್ಮಷಾಪಹಮ್ |
ಶ್ರವಣಮಂಗಲಂ | ಶ್ರೀಮದಾತತಂ
ಭುವಿ ಗೃಣಂತಿ ತೇ | ಭೂರಿದಾ ಜನಾಃ || (ಭಾಗವತ, ೧೦.೩೧.೯)
ಈ ಮುನ್ನ ಹೇಳಿದ ಗಣಪಲ್ಲಟದ ಮೂಲಕ ಎಂಟು ಮಾತ್ರೆಗಳ ಘಟಕದ ಕೊನೆಯ ಅಕ್ಷರ ರಥೋದ್ಧತಾವೃತ್ತದಲ್ಲಿದ್ದಂತೆ ಲಘುವಾಗದೆ ಗುರುವಾಗಿದೆ. ಹೀಗಾಗಿ ಅದು ಯತಿಸ್ಥಾನವನ್ನು ಸೂಚಿಸುವಂತಾಗಿದೆ; ಪ್ರಬಲವೂ ಆಗಿದೆ. ಇದರ ಪರಿಣಾಮ ಎಂಬಂತೆ ಇಡಿಯ ವೃತ್ತದಲ್ಲಿ ಲಯಾನ್ವಿತತೆ ಉಲ್ಬಣಿಸಿದಂತೆ ತೋರುತ್ತದೆ. ಪದ್ಯವನ್ನು ಧಾಟಿಯಲ್ಲಿ ಹೇಳಿಕೊಳ್ಳುವಾಗ ಪ್ರತಿಪಾದದ ಪೂರ್ವಾರ್ಧ-ಉತ್ತರಾರ್ಧಗಳು ಮೂರು-ಮೂರು ಮಾತ್ರೆಗಳ ಎರಡು ಗಣ ಮತ್ತೊಂದು ಗುರು ಎಂಬ ರೀತಿಯಲ್ಲಿ ವಿಭಕ್ತವಾದಂತೆ ತೋರಿ, ಆಯಾ ಅರ್ಧಗಳ ಕಡೆಯ ಗುರು ಊನಗಣದ ಸ್ಥಾನವನ್ನು ಪಡೆದು, ತನ್ಮೂಲಕ ಕರ್ಷಣಕ್ಕೊಳಗಾಗಿ ಪ್ಲುತತ್ವವನ್ನು ಗಳಿಸುತ್ತದೆ. ಇದು ಈ ಬಂಧದ ಯತಿಯನ್ನು ಮತ್ತಷ್ಟು ಪ್ರಬಲಗೊಳಿಸುತ್ತದೆ. ಸದ್ಯದ ಉದಾಹರಣೆಯಲ್ಲಿ ಬಂದಿರುವ ‘ವಡಿ’ (ಲಯಾವರ್ತಗಳ ಆದಿಮಾಕ್ಷರಗಳಲ್ಲಿ ಸಾಮ್ಯ) ಯತಿಸ್ಥಾನವನ್ನು ಮತ್ತಷ್ಟು ಸ್ಫುಟಗೊಳಿಸುವಲ್ಲಿ ದುಡಿದಿದೆ. ಹೀಗೆ ಇಡಿಯ ವೃತ್ತವೇ ಏಕರೂಪದ ಲಯವನ್ನುಳ್ಳ ಎಂಟು ಘಟಕಗಳ ಮೊತ್ತವಾಗಿ ಪರಿಣಮಿಸಿ ಏಕತಾನತೆಯನ್ನು ಪರಾಕಾಷ್ಠೆಗೆ ಒಯ್ಯುತ್ತದೆ. ರಸಧ್ವನಿಪ್ರಧಾನವಾದ ಘಟನೆಗಳನ್ನುಳ್ಳ ಗಂಭೀರವಾದ ಕಥನಕ್ಕೆ ಇಂಥ ವೃತ್ತ ಹೊಂದುವುದಿರಲಿ, ನಿರ್ವಾಹಕ್ಕೂ ಕಷ್ಟ. ಆದುದರಿಂದಲೇ ಇಂಥ ಬಂಧಗಳನ್ನು ಭಜನೆ, ಸ್ತೋತ್ರಗಳೇ ಮೊದಲಾದ ಭಾವುಕ ರಚನೆಗಳಿಗೆ ವಿನಿಯೋಗಿಸುವುದು ಯುಕ್ತ. ವಿಶೇಷತಃ ತಾಳವನ್ನು ತಟ್ಟಿಕೊಂಡು ನಾಮಸಂಕೀರ್ತನೆಯ ರೂಪದಲ್ಲಿ ಹಾಡುವ ಸಂದರ್ಭಗಳಿಗೆ ‘ರಾಜಹಂಸೀ’ ಹೇಳಿಮಾಡಿಸಿದ ಬಂಧ. ಭಾಗವತದ ಗೋಪೀಗೀತಕ್ಕೆ ಇದು ಬಳಕೆಯಾಗಿರುವುದು ಯುಕ್ತತರ; ಅಲ್ಲಿಯ ಗೀತವೆಂಬ ಶಬ್ದಕ್ಕೆ ಈ ಬಂಧ ಔಚಿತ್ಯವನ್ನು ಒದಗಿಸಿದೆ. ಅಯ್ಯಪ್ಪಸ್ವಾಮಿಯ ಪ್ರಸಿದ್ಧಸ್ತೋತ್ರ ‘ಹರಿವರಾಸನಂ’ ಇದೇ ವೃತ್ತದಲ್ಲಿ ನಿಬದ್ಧವಾಗಿ ಭಕ್ತ-ಭಾವುಕರ ಮನಸ್ಸುಗಳನ್ನು ಸೆಳೆದಿರುವುದು ಕೂಡ ಈ ನಿಗಮನಕ್ಕೆ ಪೂರಕವಾಗಿದೆ.
[1] ಇದನ್ನು ಮನಗಾಣಲು ಲಘುಬಾಹುಳ್ಯವಿರುವ ‘ಚಂದ್ರವರ್ತ್ಮಾ’ ಎಂಬ ವೃತ್ತವನ್ನು ಗಮನಿಸಬಹುದು. ಇದು ಸ್ವಾಗತಾವೃತ್ತದ ಲಯವಿನ್ಯಾಸವನ್ನೇ ಹೊಂದಿದೆ. ಆದರೆ ಕಡೆಯ ಎರಡು ಗುರುಗಳಿಗೆ ಬದಲಾಗಿ ಒಂದು ಸ-ಗಣ ಬಂದಿದೆ:
– u – u u u – u u u u –
ಪಾದಾಂತದ ತುಯ್ತ ಈ ಮಟ್ಟಕ್ಕೆ ಮೃದೂಕೃತವಾದ ಬಳಿಕವೂ ಒಟ್ಟಂದದ ಪದ್ಯಗತಿ ರಥೋದ್ಧತಾವೃತ್ತದ ಹೃದ್ಯತೆಯನ್ನು ಸಮೀಪಿಸಲೂ ಆಗಿಲ್ಲ. ಛಂದೋಮೀಮಾಂಸಕರು ಇಂಥ ಅಂಶಗಳನ್ನು ಗಮನಿಸಿಕೊಳ್ಳುವುದು ಒಳಿತು.
To be continued.