ನವೋದಯದಿಂದ ಈಚೆಗೆ ಕಾಣಲು ಅಸಂಭವವೇ ಎನಿಸುವಷ್ಟರ ಮಟ್ಟಿಗೆ ವಿರಳವಾದ ಕರ್ಷಣಜಾತಿಯ ಸೀಸಪದ್ಯಕ್ಕೆ ಮಾದರಿಗಳಾಗಿ ನನ್ನ ಅವಧಾನದ ಎರಡು ಉದಾಹರಣೆಗಳನ್ನು ಗಮನಿಸಬಹುದು:
ಕಾಳರಾತ್ರಿಗಳಲ್ಲಿ ಕದವ ತಟ್ಟುವ ಭಾವ-
ಜಾಲಂಗಳಲ್ಲಿರ್ಪ ಜೀವನವನು
ಚಂಡಮಾರುತದಲ್ಲಿ ತಾಂಡವಾಂಬುಧಿಯಲ್ಲಿ
ತತ್ತರಂಗೊಂಡಿರ್ಪ ತೆಪ್ಪಗಳನು
ಮುಸ್ಸಂಜೆಮುಗುಳಾಗಿ ಮೂಗುವಟ್ಟುತ್ತಿರ್ಪ
ಮುಂಜಾನೆ ಕಂಡಿರ್ದ ಕನಸುಗಳನು
ನಕ್ಷತ್ರಲೋಕದೊಳ್ ನುಗ್ಗಿ ಹಿಂಬಾಗಿಲಿಂ
ಮೇಲಾಟಕೆಳಸಿರ್ಪ ಮಿಂಚುಗಳನು
ಕುರಿತು ಬರೆವನೇ ಕವಿ; ಬರೆವ ರೀತಿಯಲ್ಲಿ
ಬಾಳಬಲ್ಲನೋ ಇಲ್ಲವೋ ತಿಳಿಯಲಾರೆಂ |
ಗಿಡ-ಮರಂಗಳಂ ಸುಗ್ಗಿಯೊಳ್ ಸಿಂಗರಿಸುವ
ಚೈತ್ರಮಾಸಮಂ ಸಾರ್ವರಾರ್? ಸಿಂಗರಿಪರಾರ್?
ಇದು ಕವಿಯನ್ನು ಕುರಿತ ಕವಿತೆ. ಇಲ್ಲಿ ಎಲ್ಲಿಯೂ ಆದಿಪ್ರಾಸ-ಅಂತ್ಯಪ್ರಾಸಗಳ ಸ್ಪರ್ಶವಿಲ್ಲ. ಆದರೆ ವಡಿ ಮತ್ತು ಅನುಪ್ರಾಸಗಳು ಸಮೃದ್ಧವಾಗಿವೆ. ಪೂರ್ವಾರ್ಧದಲ್ಲಿ ಕವಿಯ ಕರ್ಮವನ್ನು ಧ್ವನಿಪೂರ್ಣವಾಗಿ ಸೂಚಿಸುವ ಹವಣಿದ್ದರೆ ಉತ್ತರಾರ್ಧದಲ್ಲಿ ಅವನ ಲಕ್ಷಣ ಮತ್ತು ಮಿತಿಗಳ ಪ್ರಸ್ತಾವವುಂಟು. ಹೀಗೆ ತಿರುವಿನ ಸ್ವಾರಸ್ಯವಿಲ್ಲಿ ಪಾಲಿತವಾಗಿದೆ.
ಕಾಣಭೂತಿಯ ಕಥಾವೀಣೆಯಿಂ ಸತ್ಕಾವ್ಯ-
ವಾಣಿಯಂ ಪ್ರಾಣಿಸಿದ ವೈಣಿಕೇಂದ್ರ!
ರಕ್ತದಿಂದನುರಕ್ತಕಲ್ಪನಾಸಕ್ತಿಯಂ
ಶುಕ್ತಿಮೌಕ್ತಿಕದಂತೆ ಕೋದ ಕವಿಯೇ!
ಪೈಶಾಚಿಯುಕ್ತಿಯೊಳ್ ಪೀಯೂಷಪಾಯಿಯುಂ
ಲಾಲಾಸ್ಯನಪ್ಪವೋಲುಲಿದ ಬಲುಹೇ!
ಸಹೃದಯಾಭಾವಾಗ್ನಿರಸಿಕಾರ್ಚಿಯೊಳ್ ಸ್ವೀಯ-
ಕೃತಿಯನಾಹುತಿ ಮಾಳ್ಪ ಖಾಂಡವಮಖಿ!
ಅಂದು ನೀಂ ಪೊತ್ತಿಸಿದ ಕಿರ್ಚು ಸಾರ್ಚುತಿರ್ಪ
ಸ್ವೇದಖೇದಾಢ್ಯಧೂಮದ ಸ್ತೋಮಮಿಂದುಂ |
ಕವಿಯುತೆನ್ನ ಕಣ್ಣಂ ಕರಂಗಿಸುತಲಿರ್ಕುಂ
ಸಕಲಸುಗುಣಾಢ್ಯ! ಸಾಹಿತೀಹಿತಗುಣಾಢ್ಯ!
ಇದು ‘ಬೃಹತ್ಕಥೆ’ಯ ಲೇಖಕ ಗುಣಾಢ್ಯನನ್ನು ಕುರಿತ ಕವಿತೆ. ಇಲ್ಲಿಯೂ ಆದಿ-ಅಂತ್ಯಪ್ರಾಸಗಳ ಅನ್ವಯವಿಲ್ಲ. ಅನುಪ್ರಾಸ ಮತ್ತು ವಡಿಪ್ರಾಸಗಳ ಸಮೃದ್ಧಿಯುಂಟು. ಪೂರ್ವಾರ್ಧದ ಪ್ರತಿಯೊಂದು ಪಾದಾಂತ್ಯದಲ್ಲಿಯೂ ಕವಿಯ ಸಂಬೋಧನೆಯಿದೆ. ಆದರೆ ಎತ್ತುಗೀತಿಯಲ್ಲಿ ಕಡೆಯ ಸಾಲಿನಲ್ಲಿ ಪ್ರಾಸಬದ್ಧವಾಗಿ ಎರಡು ಬಾರಿ ಸಂಬುದ್ಧಿ ಉಂಟು. ಪದ್ಯದ ಪೂರ್ವಾರ್ಧದಲ್ಲಿ ರೂಪಕಾಲಂಕಾರ ಪ್ರಾಧಾನ್ಯವನ್ನು ವಹಿಸಿದ್ದರೆ ಉತ್ತರಾರ್ಧದಲ್ಲಿ ಇದೇ ರೂಪಕವು ಪರಿಣಾಮಾಲಂಕಾರದತ್ತ ತಿರುಗುವ ಮೂಲಕ ವಕ್ರತೆ ಒದಗಿದೆ.
ಕನ್ನಡದಲ್ಲಿ ಸಾನೆಟ್ಟಿನ ಮಾದರಿಗಳು
ಕನ್ನಡದಲ್ಲಿ ಬೆಳೆದುಬಂದ ಸೀಸಪದ್ಯಗಳ ರಚನಾಶಿಲ್ಪದ ಪರಿಚಯದ ಬಳಿಕ ಈಗ ಸಾನೆಟ್ಟಿನ ಶಿಲ್ಪವನ್ನು ಕುರಿತು ಸ್ವಲ್ಪ ಚರ್ಚಿಸಬಹುದು. ಇದನ್ನು ಕುರಿತು ಈಗಾಗಲೇ ಸಾಕಷ್ಟು ಸಾಹಿತ್ಯ ಬಂದಿರುವ ಕಾರಣ ವಿಸ್ತರಕ್ಕಿಲ್ಲಿ ಎಡೆಯಿಲ್ಲ.
ಕನ್ನಡದ ಸಾನೆಟ್ ಮೂಲತಃ ತನ್ನ ಮಾತ್ರೆ-ಗಣಗಳ ವಿನ್ಯಾಸದ ಪ್ರಕಾರ ಸರಳರಗಳೆಯೇ ಆಗಿದೆ. ಕೇವಲ ಸಾಲುಗಳ ವಿಭಾಗ ಮತ್ತು ಪ್ರಾಸಗಳ ವೈಚಿತ್ರ್ಯದ ಕಾರಣ ವಿಶಿಷ್ಟವಾದ ರೂಪವನ್ನು ಗಳಿಸಿದೆ. ಇಲ್ಲಿ ಇಂಗ್ಲಿಷ್ ಅಥವಾ ಮತ್ತಾವುದೇ ಪಾಶ್ಚಾತ್ತ್ಯ ಭಾಷೆಗಳ ಸ್ವರಭಾರದ ಕ್ರಮದಂತೆ ರೂಪುಗೊಂಡ ಗಣಗಳಿಲ್ಲ. ಅಷ್ಟೇಕೆ, ಈ ಬಂಧದಲ್ಲಿ ಹೆಚ್ಚಾಗಿ ತೋರಿಕೊಳ್ಳುವ ಅಯಾಂಬಿಕ್ ವಿನ್ಯಾಸಕ್ಕೆ ತುಂಬ ಹತ್ತಿರವೆನಿಸುವ ನಮ್ಮ ನುಡಿಯ ‘ಲಗಂ’ ರೂಪದ ವರ್ಣವಿನ್ಯಾಸವಿರಲಿ, ಕೇವಲ ಮೂರು ಮಾತ್ರೆಗಳ ಗಣಗಳೂ ಕಾಣುವುದಿಲ್ಲ. ಹೀಗಾಗಿ ಇಂಗ್ಲೀಷರ ಸಾನೆಟ್ಟಿನ ಮೂಲಗತಿ ಕನ್ನಡದ ಸಾನೆಟ್ಟುಗಳಲ್ಲಿ ಸ್ವಲ್ಪವೂ ಕೇಳಿಬರುವುದಿಲ್ಲ. ಇನ್ನುಳಿದಂತೆ ಸಾನೆಟ್ಟಿನ ಯಾವ ಯಾವ ಅಂಶಗಳು ನಮ್ಮಲ್ಲಿ ಇಳಿದುಬಂದಿವೆಯೆಂಬುದನ್ನು ಸ್ವಲ್ಪ ಪರಾಮರ್ಶಿಸಬಹುದು. ಈ ಮುನ್ನವೇ ನಾವು ಕಂಡಂತೆ ಸಾನೆಟ್ಟಿನ ಹದಿನಾಲ್ಕು ಸಾಲುಗಳು ಎಂಟು ಮತ್ತು ಆರು ಸಾಲುಗಳ ಮೂಲಭೂತ ಘಟಕಗಳಾಗಿಯೋ ಹನ್ನೆರಡು ಮತ್ತು ಎರಡು ಸಾಲುಗಳ ಮೂಲಭೂತ ಘಟಕಗಳಾಗಿಯೋ ವಿಂಗಡವಾಗುತ್ತವೆ. ಮೊದಲ ಪ್ರಭೇದ ಪೆಟ್ರಾರ್ಕನ್ ಪದ್ಧತಿಗೂ ಎರಡನೆಯದು ಸ್ಪೆನ್ಸೋರಿಯನ್ ಅಥವಾ ಶೇಕ್ಸ್ಪಿಯರಿಯನ್ ವರ್ಗಕ್ಕೂ ನಿಕಟವಾಗಿದೆ.
ಪ್ರಾಸಗಳ ವಿನ್ಯಾಸದಲ್ಲಿ ಹೆಚ್ಚಿನ ವೈವಿಧ್ಯವಿರುವುದು ಸುವೇದ್ಯ. ಇಲ್ಲಿ ಮುಖ್ಯವಾಗಿ ಆವೃತ ಮತ್ತು ಅನಾವೃತ ವಿಧಗಳ ಪ್ರಾಸಗಳು ಬಳಕೆಯಾಗಿವೆ. ಸಜಾತೀಯತೆಯ ಪ್ರಮಾಣಕ್ಕೆ ತಕ್ಕಂತೆ ಇವುಗಳಲ್ಲಿ ಇನ್ನಷ್ಟು ವೈವಿಧ್ಯಗಳಿವೆ. ಆದರೆ ಇವು ಮೂಡಿಸುವ ಪರಿಣಾಮ ಹೆಚ್ಚಿನದೇನಲ್ಲ. ಆವೃತಪ್ರಾಸಗಳು ಬಂದಾಗ (ಸ-ರಿ-ರಿ-ಸ) ನಡುವಿನ ಎರಡು ಪಾದಗಳ ಪ್ರಾಸಗಳು ಎದ್ದುತೋರುವಂತೆ ಆಚೀಚಿನ ಪಾದಗಳ ಪ್ರಾಸಗಳು ಸ್ಫುರಿಸುವುದಿಲ್ಲ. ಇದಕ್ಕೆ ಕಾರಣ ಅವುಗಳ ನಡುವಣ ಅಂತರವೇ. ಪ್ರಾಸವು ಸ್ಫುರಿಸಲು ನೈಕಟ್ಯವೆಷ್ಟು ಅನಿವಾರ್ಯವೆಂಬುದನ್ನು ಈ ಮೊದಲೇ ಕಂಡಿದ್ದೇವಷ್ಟೆ. ಹೀಗಲ್ಲದೆ ಅನಾವೃತಪ್ರಭೇದದಲ್ಲಿ (ಸ-ಸ-ರಿ-ರಿ; ಸ-ರಿ-ಸ-ರಿ ಇತ್ಯಾದಿ) ಪ್ರಾಸವು ತಕ್ಕಮಟ್ಟಿಗೆ ಸ್ಫುರಿಸುವುದಾದರೂ ಪದ್ಯಬಂಧ ದ್ವಿಪದಿಗಳ ಮಾಲೆಯಂತಾಗಿ ಘಟಕಗಳ ಅಖಂಡತೆ ಅನುಭವಕ್ಕೆ ಬರುವುದಿಲ್ಲ. ಹೀಗಾಗಿ ನವೋದಯದ ಪರವರ್ತಿಗಳಾದ ಹಲವರು ಲೇಖಕರು ಪ್ರಾಸವನ್ನೇ ಬಿಟ್ಟು ಸಾನೆಟ್ಟುಗಳನ್ನು ಸೃಜಿಸಿದ್ದಾರೆ. ಆದರೆ ಈ ಬಗೆಯ ರಚನೆಗಳು ಸರಳರಗಳೆಯ ಖಂಡವಾಗಿ ತೋರುವುವಲ್ಲದೆ ನಿರ್ಮಿತಿಯ ದೃಷ್ಟಿಯಿಂದ ಸ್ವಶಿಲ್ಪವನ್ನು ಉಳಿಸಿಕೊಳ್ಳುವುದಿಲ್ಲ. ಇದಿಷ್ಟೂ ಆಕ್ಟೇವ್ ಎಂಬ ಎಂಟು ಸಾಲುಗಳ ಘಟಕದ ಪ್ರಾಸವಿಚಾರವನ್ನು ಕುರಿತಿದ್ದರೆ ಸೆಸ್ಟೇಟ್ ಎಂಬ ಆರು ಸಾಲುಗಳ ಉಳಿದ ಘಟಕವನ್ನು ಕಂಡಾಗ ಸ್ಪೆನ್ಸೋರಿಯನ್ ಅಥವಾ ಶೇಕ್ಸ್ಪಿಯರಿಯನ್ ಮಾದರಿಗಳಲ್ಲಿ ಈ ಆರು ಸಾಲುಗಳು ಮತ್ತೆ ನಾಲ್ಕು ಹಾಗೂ ಎರಡು ಸಾಲುಗಳಾಗಿಯೋ ಎರಡೆರಡು ಸಾಲುಗಳ ಮೂರು ಗುಂಪುಗಳಾಗಿಯೋ ವಿಭಕ್ತವಾಗುವ ಕಾರಣ ಈ ಮುನ್ನ ನಾವು ಕಂಡ ಆವೃತ-ಅನಾವೃತಪ್ರಾಸಗಳ ಪ್ರಕಾರಗಳೇ ಇಲ್ಲಿಯೂ ತೋರಿಕೊಳ್ಳುವುದು ಸ್ಪಷ್ಟ. ಇಂತಲ್ಲದೆ ಪೆಟ್ರಾರ್ಕನ್ ಮಾದರಿಯನ್ನು ಗಮನಿಸಿದರೆ ಅಲ್ಲಿಯ ಆರು ಸಾಲುಗಳು ಸ-ರಿ-ಗ-ಸ-ರಿ-ಗ ಎಂಬುದಾಗಿಯೋ ಸ-ರಿ-ಗ-ಗ-ರಿ-ಸ ಎಂಬುದಾಗಿಯೋ ತಮ್ಮ ವಿನ್ಯಾಸವನ್ನು ಹೊಂದುವುದು ಸುವೇದ್ಯ. ಇಲ್ಲಿ ಕೂಡ ಪ್ರಾಸಸ್ಥಾನಗಳ ನಡುವಣ ಅಂತರ ಹೆಚ್ಚಾಗುವ ಕಾರಣ ಕೇಳ್ಮೆಯಲ್ಲಿ ಅವುಗಳ ಪ್ರತೀತಿಯಾಗುವುದು ಕಷ್ಟ.
ಪ್ರಾಸಪ್ರತೀತಿಯ ವಿಷಯದಲ್ಲಿ ಈವರೆಗೆ ಕಾಣಿಸಿದ ತೊಡಕುಗಳಿಗಿಂತ ಕಷ್ಟದ ಸಂಗತಿ ಮತ್ತೊಂದಿದೆ. ಅದು ಯಾವುದೇ ಅಂತ್ಯಪ್ರಾಸದ ಪ್ರತೀತಿಯನ್ನು ಕುರಿತದ್ದು. ಈ ಅಂಶವನ್ನು ಕುರಿತೂ ನಾವು ಮುನ್ನವೇ ಚರ್ಚಿಸಿದ ಕಾರಣ ಮತ್ತೊಮ್ಮೆ ವಿಸ್ತರ ಬೇಕಿಲ್ಲ. ಆದರೆ ಸಂಕ್ಷೇಪದಲ್ಲಿ ತಿಳಿಸುವುದಾದರೆ ಮಾತ್ರಾಗಣಘಟಿತವಾದ ಸಾಲುಗಳ ಕೊನೆಯಲ್ಲಿ ಊನಗಣಗಳಿಲ್ಲದಿದ್ದರೆ ಸಹಜಕರ್ಷಣದ ಕಾರಣ ಒದಗುವ ವಿರಾಮವು ಸಿದ್ಧಿಸದಂತಾಗಿ ತನ್ಮೂಲಕ ಪ್ರಾಸದ ಸೊಗಸೇ ಪ್ರಸ್ಫುಟವಾಗಿ ಉನ್ಮೀಲಿಸುವುದಿಲ್ಲ. ನಮ್ಮ ಹೆಚ್ಚಿನ ಸಾನೆಟ್ಟುಗಳೆಲ್ಲ ಸಾಲೊಂದಕ್ಕೆ ಐದೈದು ಮಾತ್ರೆಗಳ ನಾಲ್ಕು ಗಣಗಳಂತೆ ಒಟ್ಟು ಇಪ್ಪತ್ತು ಮಾತ್ರೆಗಳ ವ್ಯಾಪ್ತಿಯಲ್ಲಿ ಸಾಗುವ ಕಾರಣ ಪಾದಾಂತದ ಊನಗಣಕ್ಕೆ ಇಲ್ಲಿ ಅವಕಾಶವೇ ಇಲ್ಲ. ಕೇವಲ ಗೋವಿಂದ ಪೈಗಳ ಸಾನೆಟ್ಟುಗಳು ಮಾತ್ರ ಇದಕ್ಕೆ ಮುಖ್ಯ ಅಪವಾದ. ಅವರ ಸಾನೆಟ್ಟುಗಳ ಪ್ರತಿಯೊಂದು ಸಾಲುಗಳೂ ಹತ್ತೊಂಬತ್ತು ಮಾತ್ರೆಗಳ ಉದ್ದವುಳ್ಳ ಕಾರಣ ಪಾದಾಂತ್ಯದಲ್ಲಿ ಒಂದು ಮಾತ್ರಾಪ್ರಮಾಣದ ಕರ್ಷಣಕ್ಕೆ ಅವಕಾಶ ಉಂಟು. ಆದರೆ ಪಾದಾಂತ್ಯದಲ್ಲಿ ಊನಗಣವಿರುವಾಗ ಖಂಡಪ್ರಾಸವನ್ನು ಮಾಡಿದರೆ ಅದು ಶ್ರುತಿಕಟುವೆನಿಸುವ ಹಾಗೆ ಪದಚ್ಛೇದವನ್ನು ಮಾಡುವುದಲ್ಲದೆ ಅಖಂಡವಾದ ಪದದ ಪ್ರತೀತಿಗೇ ಅಡ್ಡಿಯಾಗುವ ಮೂಲಕ ಅದರ ಆರ್ಥಪರಿಜ್ಞಾನಕ್ಕೇ ತೊಡಕನ್ನು ತರುತ್ತದೆ. ಒಟ್ಟಿನಲ್ಲಿ ಪಾದಾಂತ್ಯದಲ್ಲಿ ಊನಗಣವಿಲ್ಲದೆ ಪ್ರಾಸಗಳು ಪ್ರತೀತವಾಗವು; ಊನಗಣವಿದ್ದಲ್ಲಿ ಖಂಡಪ್ರಾಸವನ್ನು ಮಾಡಿದರೆ ಪಾದಾಂತ್ಯದಲ್ಲಿ ಬರುವ ಪದಗಳ ಅರ್ಥಗಳೇ ಪ್ರತೀತವಾಗವು. ಹೀಗೆ ಕನ್ನಡದ ಸಾನೆಟ್ಟಿನ ಪ್ರಮುಖಲಕ್ಷಣಗಳ ಪೈಕಿ ಒಂದೆನಿಸಿದ ಪ್ರಾಸವಿನ್ಯಾಸ ಅದೊಂದು ಬಗೆಯಿಂದ ಇದ್ದೂ ಇಲ್ಲದ ಅಂದವೆನಿಸಿದೆ; ಒಡವೆಯಿದ್ದೂ ಬಡವೆ ಎಂಬ ಹೆಣ್ಣಿನಂತೆ ಹತಭಾಗ್ಯೆಯೆನಿಸಿದೆ.
ಆಂಗ್ಲಭಾಷೆಯಲ್ಲಿ ಈ ತೊಡಕಿಲ್ಲ. ಏಕೆಂದರೆ ಅಲ್ಲಿಯ ಸಾಂಪ್ರದಾಯಿಕ ರೀತಿಯ ಸಾನೆಟ್ಟುಗಳೆಲ್ಲ ಪ್ರಾಯಿಕವಾಗಿ ಐದು ಅಯಾಂಬಿಕ್ ಗಣಗಳನ್ನೋ ಕನಿಷ್ಠಪಕ್ಷ ಹತ್ತು ಉಚ್ಚಾರಾಂಶಗಳನ್ನೋ ಪ್ರತಿಯೊಂದು ಸಾಲಿನಲ್ಲಿಯೂ ಹೊಂದಿರುವ ಕಾರಣ ತಮ್ಮ ವಿಷಮಸಂಖ್ಯೆಯ ಗಣಗಳ ಮೂಲಕ ಪಾದಾಂತದ ವಿರಾಮವನ್ನು ನಿರಪವಾದವಾಗಿ ಮೈದುಂಬಿಸಿಕೊಂಡಿವೆ. ಹೀಗಾಗಿ ಅಲ್ಲಿ ಪಾದಾಂತ್ಯಪ್ರಾಸಗಳು ಪ್ರಸ್ಫುಟವಾಗಿವೆ. ಅಲ್ಲದೆ ಖಂಡಪ್ರಾಸದಂಥ ಸಾಧ್ಯತೆಯೇ ಆ ಭಾಷೆಗಳಲ್ಲಿ ಇಲ್ಲದ ಕಾರಣ ಅದರ ಮೂಲಕ ಒದಗಬಹುದಾದ ತೊಡಕೂ ಇಲ್ಲವಾಗಿದೆ. ಇದನ್ನೆಲ್ಲ ಗಂಭೀರವಾಗಿ ಪರಿಭಾವಿಸಿದಾಗ ನಮ್ಮ ನುಡಿಜಾಡಿಗೆ ಅತ್ಯಂತ ವಿಭಿನ್ನವಾದ ಭಾಷಾಸಂಸ್ಕೃತಿಯ ಅಂಶಗಳನ್ನು ಆಮದು ಮಾಡಿಕೊಳ್ಳುವಾಗ ಅದೆಷ್ಟು ಎಚ್ಚರದಿಂದ ಇರಬೇಕು; ಅದೆಷ್ಟೆಲ್ಲ ಬಗೆಯಿಂದ ಪರೀಕ್ಷೆ ಮತ್ತು ಪ್ರಯೋಗಗಳನ್ನು ಮಾಡಬೇಕೆಂಬ ಅರಿವು ಮೂಡದಿರದು.
ಸೀಸಪದ್ಯದಲ್ಲಿ ಇಂಥ ಕ್ಲೇಶವಿಲ್ಲ. ಅದರ ಮೂವತ್ತೇಳು ಮಾತ್ರೆಗಳಷ್ಟು ನಿಡಿದಾದ ನಾಲ್ಕು ಪಾದಗಳ ಕೊನೆಯಲ್ಲಿ ಊನಗಣವಿದ್ದೇ ಇರುತ್ತದೆ. ಕರ್ಷಣಜಾತಿಯ ಸೀಸಗಳಲ್ಲಿ ಆರು ವಿಷ್ಣುಗಣಗಳ ಬಳಿಕ ಬರುವ ಎರಡು ಬ್ರಹ್ಮಗಣಗಳ ವಿನ್ಯಾಸದಲ್ಲಿ ಕೂಡ ಇದೇ ಊನಗಣತತ್ತ್ವ ದೃಢವಾಗಿದೆ. ಊನಗಣದ ಬಳಿಕ ಖಂಡಪ್ರಾಸವು ಬರಬಾರದೆಂಬ ಅಲಿಖಿತನಿಯಮವನ್ನು ಛಂದೋಗತಿಯ ಸೂಕ್ಶ್ಮತೆಯನ್ನು ಬಲ್ಲ ಎಲ್ಲ ಸತ್ಕವಿಗಳೂ ಪಾಲಿಸಿದ್ದಾರೆ. ಈ ಬಗೆಯ ವ್ಯವಸ್ಥೆಯನ್ನು ಎತ್ತುಗೀತಿಯಲ್ಲಿ ಕೂಡ ಕಾಣಬಹುದು. ಆದಿಪ್ರಾಸವಾಗಲಿ, ವಡಿ ಅಥವಾ ವಡಿಪ್ರಾಸಗಳಾಗಲಿ ಸೀಸಪದ್ಯದಲ್ಲಿ ಬರಲು ಗತಿಸಂಬಂದ್ಧವಾದ ಯಾವುದೇ ಬಗೆಯ ತೊಡಕುಗಳಿಲ್ಲ. ಇಂಥ ಎಲ್ಲ ಬಗೆಯ ಪ್ರಾಸಾನುಪ್ರಾಸಗಳಿಗೆ ಸೀಸಪದ್ಯವು ವಿಪುಲಾವಕಾಶ ನೀಡುವುದೆಂಬುದಕ್ಕೆ ಈವರೆಗೆ ನೀಡಿದ ಉದಾಹರಣೆಗಳೇ ಸಾಕ್ಷಿ.
To be continued.