ಕನ್ನಡದಲ್ಲಿ ಸೀಸಪದ್ಯದ ಬೆಳೆವಣಿಗೆ
ಕನ್ನಡದಲ್ಲಿ ಸಾನೆಟ್ಟಿಗೆ ಸಂವಾದಿಯಾಗಿ ಸೀಸಪದ್ಯವನ್ನು ಬಳಸಿದ ನವೋದಯದ ಕೆಲವೊಂದು ಮಾದರಿಗಳನ್ನು ಪರಿಶೀಲಿಸಬಹುದು. ಈ ಪದ್ಯಗಳು ನಿರಪವಾದವಾಗಿ ಮಾತ್ರಾಜಾತಿಯ ವರ್ಗದವು. ಇಲ್ಲಿಯ ಎತ್ತುಗೀತಿಗಳು ಆಟವೆಲದಿ ಮತ್ತು ತೇಟಗೀತಿ ಎಂಬ ಬಂಧಗಳಿಗೆ ಸಂವಾದಿಯಾಗದೆ ಪಂಚಮಾತ್ರಾಚೌಪದಿಗಳೇ ಆಗಿರುವುದು ಗಮನಾರ್ಹ.
ತಾಮಸಾವೃತರಾಗಿ ನಿಜಜನರ್ ನಿದ್ರಿಸಿರ-
ಲವರನೆಳ್ಚರಿಸಿದಾ ಧೀರನಾರು?
ದೇಶೀಯರಾತ್ಮಗೌರವವ ಮರೆತಿರಲಂದು
ದೇಶಮಹಿಮೆಯ ಸಾರಿ ಪೇಳ್ದನಾರು?
ರಾಷ್ಟ್ರಜನನಿಯುಡುಂಗಿರಲ್ ಪಾರತಂತ್ರ್ಯದಲಿ
ಸ್ವಾತಂತ್ರ್ಯವೇಕೆ ತನಗೆಂದನಾರು?
ದಾಸ್ಯದೊಳ್ ವೈಭವದಿ ನಲಿದು ಮೆರೆವುದಕಿಂತ
ಸೆರೆಮನೆಯೆ ತನಗೆ ಲೇಸೆಂದನಾರು?
ತಿಲಕನಲ್ಲವೆ ಜಾನಪದಕಾರ್ಯಚತುರತಿಲಕಂ
ವಿಬುಧಸಂಕುಲತಿಲಕನಾರ್ಯಭೂಭೃತ್ಯತಿಲಕಂ|
ಆತನೆಂದುಂ ಭರತಬಾಲಕರ ಮನದಿ ನಿಂದು
ನೀಡುಗವರಿಗೆ ದೇಶಕೈಂಕರ್ಯಧೈರ್ಯಭರಮಂ || (ವಸಂತಕುಸುಮಾಂಜಲಿ, ಪು. ೩೭)
ನವೋದಯದ ಕವಿಗಳ ಪೈಕಿ ಅತ್ಯುತ್ತಮ ಮಾತ್ರಾಸೀಸಪದ್ಯಗಳನ್ನು ಕೊಟ್ಟವರು ಡಿ.ವಿ.ಜಿ. ಇವರ ಕವಿತೆಗಳ ಸೀಸಪದ್ಯದ ಭಾಗಗಳು ಮಿಕ್ಕವರ ಸೀಸಗಳ ಹಾಗೆಯೇ ಇರುತ್ತವೆ. ಎತ್ತುಗೀತಿಯಲ್ಲಿ ಐದು ಮಾತ್ರೆಗಳ ನಾಲ್ಕು ಗಣಗಳ ಬಳಿಕ ಗುರುವೊಂದು ಬರುವಂತೆ ಪಾದವಿನ್ಯಾಸವಿರುತ್ತದೆ. ಸದ್ಯದ ಪದ್ಯದಲ್ಲಿ ಬಾಲಗಂಗಾಧರ ತಿಲಕರ ಮಹತ್ತ್ವ ಮೂಡಿದೆ. ಸೀಸದ ಭಾಗದಲ್ಲಿ ತಿಲಕರ ಹೆಸರನ್ನು ಉಲ್ಲೇಖಿಸದೆಯೇ ಅವರ ಸಾಧನೆಗಳನ್ನು ಸೂಚಿಸುತ್ತ ಪ್ರತಿಯೊಂದು ಸಾಲೂ ಪ್ರಶ್ನೆಯಿಂದ ಮುಗಿಯುತ್ತದೆ. ಎತ್ತುಗೀತಿಯಲ್ಲಿ ಈ ಪ್ರಶ್ನೆಗಳಿಗೆ ಉತ್ತರವೆಂಬಂತೆ ತಿಲಕರ ವ್ಯಕ್ತಿತ್ವ ವಿರಾಜಿಸಿದೆ. ಎಲ್ಲೆಡೆ ತೋರಿಕೊಳ್ಳುವ ಪ್ರಾಸಾನುಪ್ರಾಸಗಳ ಶಬ್ದಾಲಂಕೃತಿ, ಸಮಾಸನಿಬಿಡವಾದ ಓಜೋಗುಣ ಮತ್ತು ಉದಾತ್ತವಾದ ಭಾವಗಳು ಸಾನೆಟ್ಟಿನ ಸ್ವರೂಪವನ್ನು ನೆನಪಿಸುವಂತಿವೆ. ಜೊತೆಗೆ ತೆಲುಗಿನಲ್ಲಿ ಚಿರಕಾಲದಿಂದ ಪಳಗಿ ಹದಗೊಂಡ ಸೀಸದ ಕಸುವೂ ಕಾಣುತ್ತದೆ.
ಶೃಂಗಾರವಲ್ಲರಿಯೆ ಲತೆಯೊಡನೆ ಬಳುಕಿ ನೀಂ
ನೃತ್ಯಲಾಸ್ಯದಿನಾರನೊಲಿಸುತಿರುವೆ?
ಮಾಧುರ್ಯಮಂಜೂಷೆ ಮಧುರತರಮೌನದಿಂ-
ದಾರ ಚರಿತೆಗಳ ಶುಕಿಗುಸಿರುತಿರುವೆ?
ಮುಗ್ಧಮೋಹನವದನೆ ಮುಕುರದೊಳ್ ನೋಡಿ ನೀ-
ನಾರ ನೆನೆದಿಂತು ನಸುನಗುತಲಿರುವೆ?
ಪ್ರಣಯಪ್ರರೋಹೆ ನೀಂ ಪ್ರಿಯತರಾಕೃತಿಯಿಂದೆ
ರುಷೆಯನಿಂತಾರೊಳಭಿನಯಿಸುತಿರುವೆ?
ಶಿಲ್ಪಿವರಕುವರಿಯರೆ ಸೌಂದರ್ಯಮುದ್ರಿಕೆಯರೆ,
ದೇವದೇವನ ಸೇವೆಗೈತರ್ಪ ಸಾಧುಕುಲಮಂ |
ಭಾವವಿನ್ಯಾಸವೈಕೃತಿಗಳಿಂ ಬೆರಗುವಡಿಸಿ
ಚಂಚಲತೆಗೆಡೆಯೆನಿಸಿ ನೀವಿಂತು ನಿಲುವುದೇಕೆ? (ನಿವೇದನ, ಪು. ೩೭)
ಡಿ.ವಿ.ಜಿ. ಅವರ ಪ್ರಸಿದ್ಧಕವಿತೆಗಳಲ್ಲಿ ಒಂದಾದ ‘ಬೇಲೂರಿನ ಶಿಲಾಬಾಲಿಕೆಯರು’ ಈ ಪದ್ಯದಿಂದ ಮೊದಲಾಗುತ್ತದೆ. ಇಲ್ಲಿಯೂ ಸೀಸದ ಭಾಗದಲ್ಲಿ ಮೂಡುವ ಪ್ರಶ್ನೆಗಳ ಉತ್ತರವೆಂಬಂತೆ ಎತ್ತುಗೀತಿಯ ರಚನೆಯುಂಟು. ಅಲ್ಲದೆ ಪೂರ್ವಾರ್ಧದಲ್ಲಿ ವಿವಿಧ ಶಿಲಾಬಾಲಿಕೆಯರ ಅಂಗಭಂಗಿಗಳ, ಭಾವ-ಬಿಬ್ಬೋಕಗಳ ಸುಂದರ ಸೂಚನೆಯಿದ್ದರೆ ಉತ್ತರಾರ್ಧದಲ್ಲಿ ಗಂಭೀರವಾದ ಅಮೂರ್ತವಿಸ್ಮಯದ ಧ್ವನಿಯಿದೆ. ಇದು ನಿಜಕ್ಕೂ ಸೊಗಸಾದ ರಚನಾಕ್ರಮ. ‘ಮುಗ್ಧಮೋಹನವದನೆ ಮುಕುರದೊಳ್ ನೋಡಿ ನೀನಾರ ನೆನೆದಿಂತು ನಸುನಗುತಲಿರುವೆ’ ಎಂಬಂಥ ಎಡೆಗಳಲ್ಲಿ ‘ವಡಿ’ಯ ಪ್ರಯೋಗವನ್ನೂ ಕಾಣಬಹುದು. ಒಟ್ಟಿನಲ್ಲಿ ಅಭಿಜಾತ ಪದ್ಯರಚನಾಕ್ರಮವೇ ಇಲ್ಲಿ ಮೈದಾಳಿದೆ.
ಜೀವಿಯಂ ಪ್ರಾಕ್ತನಾದ್ಯತನಕರಯುಗಲಸಂ-
ಪುಟದಿ ಸಿಲುಕಿಸಿ ಮೃದಿಸುತಿಹುದು ದೈವಂ
ಪೂರ್ವಜನ್ಮದ ವಾಸನಾಭಿರುಚಿ-ಋಣಮತ್ತ
ಸದ್ಯದ ನಿಸರ್ಗಸುಂದರಗಳಿತ್ತ |
ಹಸಿವತ್ತಲುಣಿಸಿತ್ತಲೊಂದನೊಂದೆಳೆಯುತ್ತ
ಕೆಣಕಿಸುತ ಕೆರಳಿಸುತ ದಿಕ್ಕುಗೆಡಿಸಿ
ಪರಿಶೋಧವಾಗಿಪುದು ಪರಿಪಾಕವಾಗಿಪುದು
ಗುರುವದುವೆ ಬಿಡಿಸಲಿಕ್ಕಟ್ಟಿನಿಂದೆ ||
ಸೌಂದರ್ಯದನುಭೂತಿ ಜೀವಿಗೊಂದುಚಿತಶಿಕ್ಷೆ
ಗೃಹ್ಯತಾಪತಿತಿಕ್ಷೆಯಾತ್ಮಸಂಯಮಪರೀಕ್ಷೆ |
ಪ್ರಣಯರಾಗೋದ್ವೀಕ್ಷೆ ವಿಶ್ವಸಾಂತತ್ಯರಕ್ಷೆ
ವಿಧಿದತ್ತಮಧುಭಿಕ್ಷೆ ವಿಶ್ವಪತಿಹಸಿತವೀಕ್ಷೆ || (ಶೃಂಗಾರಮಂಗಳಂ, ಪು. ೪೧)
‘ವಸಂತಕುಸುಮಾಂಜಲಿ’ಯಲ್ಲಿ ಡಿ.ವಿ.ಜಿ. ಅವರ ಸೀಸಪದ್ಯಗಳ ಮೊದಮೊದಲ ಹಂತವನ್ನು ಕಂಡರೆ ಅದರ ಕಡೆಯ ಮಜಲನ್ನು ‘ಶೃಂಗಾರಮಂಗಳ’ದಲ್ಲಿ ನಾವು ನೋಡುತ್ತೇವೆ. ಸುಮಾರು ಐವತ್ತು ವರ್ಷಗಳ ಈ ಅವಧಿಯನ್ನು ಅನುಲಕ್ಷಿಸಿದಾಗ ಡಿ.ವಿ.ಜಿ. ಅವರ ಕೈ ಇಂಥ ಪದ್ಯಗಳ ರಚನೆಯ ಮಟ್ಟಿಗಂತೂ ಸ್ವಯಂಪೂರ್ಣವಾಗಿ, ಆಗರ್ಭಪಕ್ವವಾಗಿ ಉದ್ಭವಿಸಿದಂತೆ ತೋರುತ್ತದೆ. ಸದ್ಯದ ಪದ್ಯದಲ್ಲಿ ಪೂರ್ವಾರ್ಧವೆಲ್ಲ ಬದುಕಿನ ವಿಕಟತೆಯನ್ನು ವರ್ಣಿಸಿದರೆ ಉತ್ತರಾರ್ಧ ಸೌಂದರ್ಯದ ಮಹತ್ತ್ವವನ್ನು ಸಾಕ್ಷಾತ್ಕರಿಸುತ್ತದೆ. ಕಷ್ಟ-ನಷ್ಟಗಳ ನಮ್ಮೀ ಬಾಳಿಗೆ ಸೌಖ್ಯ-ಸಾಂತ್ವನಗಳನ್ನು ಕಲ್ಪಿಸುವುದು ಸೌಂದರ್ಯದ ಹೆಗ್ಗಳಿಕೆ. ಈ ಸತ್ಯವನ್ನು ಡಿ.ವಿ.ಜಿ. ಅವರು ಎತ್ತುಗೀತಿಯ ಎಂಟು ಸಮಸ್ತಪದಗಳಲ್ಲಿ ಕಂಡರಿಸಿರುವುದು ಸಾಹಿತ್ಯಸೌಂದರ್ಯದ ಸಿದ್ಧಿಯೆನ್ನಬಹುದು. ಇಲ್ಲಿ ಕಂಡುಬರುವ ಪ್ರಾಸಗಳ ಸ್ವಾರಸ್ಯವೂ ಗಮನಾರ್ಹ. ಎಂಟೂ ಸಮಸ್ತಪದಗಳು ಸ್ವತಂತ್ರರೂಪಕಗಳಾಗಿವೆ. ಹೀಗೆ ಶಬ್ದಾರ್ಥಗಳ ಅಲಂಕಾರಪರಿಪುಷ್ಟಿ ಇಲ್ಲಿ ಮೈದಾಳಿದೆ.
ಕಣ್ಣ ಕಾಣ್ಕೆಯ ಮೀರಿ ಕಣ್ಣಕಟ್ಟಿದ ರೂಹೆ!
ಬಣ್ಣನೆಯ ಬಣ್ಣಕೂ ಸಿಗದೆ ನೀನು;
ಹುಟ್ಟುಕಟ್ಟನು ಹರಿದು ಹಾರುತಿರುವೀ ಊಹೆ,
ಬರೆಯೆ ನಿನ್ನನ್ನೆ ಹವಣಿಸುವದೇನು?
ಲಹರಿಗೂ ತರಲ, ನೀ ನೆರಳಿಗೂ ವಿರಲ, ಸುಳಿ-
ಯೆಲರಿಗೂ ಚಂಚಲನು ಇರುವೆಯಂತೆ
ಬರುವಾಗ ಬರಲಿ ಫಲವೆಂದು ತಾಳ್ಮೆಯ ತಾಳಿ
ಕಾಡಹೂವಿನ ತೆರದಿ ಕಾದು ನಿಂತೆ
ನವಿರನವಿಲಿಲ್ಲಿ ನಿಮಿನಿಮಿರಿ ಕುಣಿಯುತಿದೆ
ಕಂಬನಿಯ ಜಡಿಮಳೆಯ ಜಿನುಗಿ ತಣಿಯುತಿದೆ |
ಹೊಚ್ಚಹೊಸ ಆಸೆಗಳು ಚಿಗಿತು ನಗೆ ನನೆತು
ಫಲವೇನೆ ಇರಲಿ ಅಣಿಯಾಗಿರುವದಿನಿತು || (ಉಯ್ಯಾಲೆ, ಪು. ೩೯)
ಅದೃಷ್ಟವನ್ನು ಕುರಿತ ಬೇಂದ್ರೆ ಅವರ ಈ ಕವಿತೆ ಪೂರ್ವಾರ್ಧದಲ್ಲಿ ಕಾಣದ ಆ ಕೈವಾಡವನ್ನು ಬಣ್ಣಿಸಿದರೆ ಉತ್ತರಾರ್ಧದಲ್ಲಿ ಅದಕ್ಕೆ ಜೀವ ನೀಡುವ ಪ್ರತಿಸ್ಪಂದವನ್ನು ಚಿತ್ರಿಸಿದೆ. ಇಲ್ಲಿಯ ಎತ್ತುಗೀತಿ ಪಂಚಮಾತ್ರಾಗತಿಯಲ್ಲಿದ್ದರೂ ನಾಲ್ಕನೆಯ ಗಣ ನಾಲ್ಕು ಮಾತ್ರೆಗಳನ್ನು ಹೊಂದಿದ ಊನಗಣವೆನಿಸಿದೆ. ಈ ಮೂಲಕ ಪ್ರತಿಯೊಂದು ಸಾಲೂ ಸವಿರಾಮವಾಗಿ ಮುಗಿಯುವಂತಾಗಿದೆ. ಇದು ಅಧಿಕಗಣವುಳ್ಳ ಡಿ.ವಿ.ಜಿ. ಅವರ ಎತ್ತುಗೀತಿಯ ಹಾಗೆಯೇ ಪೂರ್ವಾರ್ಧದ ಸೀಸಪದ್ಯಕ್ಕಿಂತ ವಿಭಿನ್ನವೆನಿಸಿ ಓದುಗರ ಮನದಲ್ಲಿ ಆಲೋಚನಾತ್ಮಕವಾದ ಭಾವವನ್ನು ಬಿತ್ತರಿಸುತ್ತದೆ.
ಒಲವೆಂಬ ಹೊತ್ತಿಗೆಯನೋದಬಯಸುತ ನೀನು
ಬೆಲೆಯೆಷ್ಟು ಎಂದು ಕೇಳುತಿಹೆ! ಹುಚ್ಚ!
ಹಗಲಿರುಳು ದುಡಿದರೂ ಹಲಜನುಮ ಕಳೆದರೂ
ನೀ ತೆತ್ತಲಾರೆ ಬರಿ ಅಂಚೆವೆಚ್ಚ |
ಬೆವರ ಹನಿಯಲಿ ಹಲವು, ಕಣ್ಣೀರಿನಲಿ ಹಲವು
ನೆತ್ತರದಿ ಬರೆದುದಕೆ ಲೆಕ್ಕವಿಲ್ಲ
ಚಿತ್ರಚಿತ್ರಾಕ್ಷರದ ಲಕ್ಷಪತ್ರಗಳುಂಟು:
ನಕ್ಷತ್ರ ಓದುತಿವೆ ಮರೆತು ಸೊಲ್ಲ ||
ಏನಿಹುದೊ ಎಂತಿಹುದೊ ಸಂಸಾರಸಾರ
ಕಂಡವರು ಯಾರದರ ಅಂತಪಾರ?
ಹೃದಯಸಂಪುಟದಲ್ಲಿ ಒಲವ ಲೆಕ್ಕಣಿಕೆ
ಮಾಡಿ ಬರೆಯೆಲೊ ಹುಡುಗ ನಿನ್ನ ಒಕ್ಕಣಿಕೆ || (ಉಯ್ಯಾಲೆ, ಪು. ೪೧)
‘ಒಲವೆಂಬ ಹೊತ್ತಿಗೆ’ ಎಂಬ ಈ ಕವಿತೆ ಬೇಂದ್ರೆಯವರದೇ ಮತ್ತೊಂದು ರಚನೆ. ಪೂರ್ವಾರ್ಧದಲ್ಲಿ ಒಲವಿನ ಪರಿಯ ಬಣ್ಣನೆಯಿದ್ದರೆ ಉತ್ತರಾರ್ಧದಲ್ಲಿ ಅದಕ್ಕೆ ತಕ್ಕ ಪ್ರತಿಸ್ಪಂದದ ಚಿತ್ರಣವಿದೆ. ಈ ಮೂಲಕ ಎತ್ತುಗೀತಿಯಲ್ಲಿ ಸೀಸಪದ್ಯದ ತಿರುವು ತುಂಬ ಚೆನ್ನಾಗಿ ಕಂಡಿದೆ.
ಬೇಂದ್ರೆ ಅವರ ಈ ಎರಡೂ ಸೀಸಪದ್ಯಗಳಲ್ಲಿ ಪ್ರಾಸಾನುಪ್ರಾಸಗಳ ಗೆಜ್ಜೆಸರ ಉಲಿದಿದೆ. ಮಾತ್ರವಲ್ಲ, ಸಾನೆಟ್ಟಿನಲ್ಲಿ ಕಂಡುಬರುವ ಪಾದಾಂತಪ್ರಾಸಗಳ ವಿನ್ಯಾಸವೂ ಅಚ್ಚುಕಟ್ಟಾಗಿ ತೋರಿದೆ.
ಯೋಗೀಶ ನಿನ್ನಾ ಪ್ರಶಾಂತವದನದೊಳೆಸೆವ
ನಸುನಗೆಯ ಭಾವಸೂಚನೆಯದೇನೈ?
ಸಿದ್ಧಪುರುಷರ ಮೊಗದ ನಿತ್ಯಮಂದಸ್ಮಿತಮೊ?
ಬ್ರಹ್ಮದಾನಂದದಾ ಪ್ರತಿಬಿಂಬಮೊ?
ಮೇಣಿಳೆಯ ನಿನ್ನಣುಗರವಿವೇಕಮಂ ನೋಡಿ
ನಗುವ ಕರುಣಾರಸದ ಪರಿಹಾಸ್ಯಮೊ?
ನಿರ್ವಾಣಪದಕೇರ್ದ ನಿನ್ನನುಂ ನಗಿಪೆಮ್ಮ
ತಿಳಿಗೇಡಿತನದ ಮಾಮಹಿಮೆಯೆನಿತು?
ನಿನ್ನಡಿಯ ಪೀಠದಿಂದುರುಳುತಿರೆ ಕಾಲಚಕ್ರಂ
ಸೌಮ್ಯಭಾವವ ತೋರಿ ನಿಂತಿರುವೆಯಚಲಮಾಗಿ;
ಧಾರಿಣಿಯ ಗಲಿಬಿಲಿಯ ಸಹಿಸಲಾನಂದದಿಂದ
ನಿನ್ನಚಲತೆಯೊಳಿನಿತೆ ನೀಡೆಮಗೆ ಗೋಮಟೇಶ! (ಕುವೆಂಪು ಸಮಗ್ರಕಾವ್ಯ, ಸಂ.೧, ಪು. ೩೭)
ಗೋಮಟೇಶ್ವರನನ್ನು ಕುರಿತು ಕುವೆಂಪು ಅವರು ಬರೆದ ಮೂರು ಪ್ರಸಿದ್ಧ ಕವಿತೆಗಳ ಪೈಕಿ ಇದು ಮೊದಲಿನದು. ಪ್ರಗಾಥರೂಪದ ಈ ನೀಳ್ಗವಿತೆಯ ಮೊದಲ ಪದ್ಯ ಇಲ್ಲಿದೆ. ಪೂರ್ವಾರ್ಧದಲ್ಲಿ ಕುವೆಂಪು ಗೊಮ್ಮಟಮೂರ್ತಿಯ ಮೌನಸ್ಮಿತವನ್ನು ಅಚ್ಚರಿಯಿಂದ ಕಾಣಿಸುತ್ತಾರೆ. ಈ ವಿಸ್ಮಯಕ್ಕೆ ಪ್ರತಿಸ್ಪಂದರೂಪದ ಪ್ರಾರ್ಥನೆಯನ್ನು ಉತ್ತರಾರ್ಧದಲ್ಲಿ ಕಲ್ಪಿಸುತ್ತಾರೆ. ಪದ್ಯದ ಆದ್ಯಂತ ತುಂಬಿತುಳುಕುವ ಉದಾತ್ತಭಾವ ಸೀಸದ ಘನತೆಗೆ ತಕ್ಕುದೆನಿಸಿದೆ. ಇಲ್ಲಿಯ ಎತ್ತುಗೀತಿ ಡಿ.ವಿ.ಜಿ. ಅವರ ಮಾರ್ಗದ್ದು.
ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ,
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು!
ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುಮಗಳನರ್ಪಿಸಿಲ್ಲಿ.
ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ;
ಕರ್ಪೂರದಾರತಿಯ ಜ್ಯೋತಿಯಿಲ್ಲ.
ಭಗವಂತನಾನಂದ ರೂಪುಗೊಂಡಿಹುದಿಲ್ಲಿ;
ರಸಿಕತೆಯ ಕಡಲುಕ್ಕಿ ಹರಿವುದಿಲ್ಲಿ!
ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ!
ಬಾದರಾಯಣನಂತೆ ಭಾರತವ ಹಾಡುತಿಹುದಿಲ್ಲಿ!
ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ!
ಮೂರ್ಛೆಯಲಿ ಮೈಮರೆತು ತೇಲುವುದು ಭೂಭಾರವಿಲ್ಲಿ! (ಕುವೆಂಪು ಸಮಗ್ರಕಾವ್ಯ, ಸಂ. ೧, ಪು. ೫೩)
ಸೋಮನಾಥದೇವಾಲಯವನ್ನು ಕುರಿತ ಕುವೆಂಪು ಅವರ ಈ ಕವಿತೆ ಸುಪ್ರಸಿದ್ಧ. ಇದರ ಪೂರ್ವಾರ್ಧವೆಲ್ಲ ವಿನೋಕ್ತಿಯ ವಿಶಿಷ್ಟವಿನ್ಯಾಸ. ಉತ್ತರಾರ್ಧ ಪೂರ್ತಿಯಾಗಿ ಇದೆಯೆಂಬ ಇಂಗಿತವನ್ನು ಅವಧಾರಣೆಯೊಡನೆ ಮನಮುಟ್ಟಿಸುವ ಹವಣು. ಹೀಗೆ ಕವಿ ಎತ್ತುಗೀತಿಯ ತಿರುವನ್ನು ಅನ್ಯಾದೃಶವಾಗಿ ತಂದಿದ್ದಾರೆ. ‘ಇಲ್ಲ’, ‘ಇಲ್ಲಿ’ ಎಂಬ ಪದಗಳಿಂದಲೇ ಉಭಯತ್ರ ಸಾಧಿಸಿದ ಪ್ರಾಸಪದ್ಧತಿಯೂ ಧ್ವನಿಪೂರ್ಣ. ಇದರ ಎತ್ತುಗೀತಿಯ ಎಲ್ಲ ಪಾದಗಳಲ್ಲಿಯೂ ಇಪ್ಪತ್ತನಾಲ್ಕು ಮಾತ್ರೆಗಳಿವೆ.
To be continued.