ಊನಗಣ-ಅಂತ್ಯಪ್ರಾಸ
ಅಂತ್ಯಪ್ರಾಸ ಕೂಡ ತಾಳಬದ್ಧವಾದ ರಚನೆಗಳಲ್ಲಿ ಹೆಚ್ಚಾಗಿ ಶೋಭಿಸುತ್ತದೆ. ಇದಕ್ಕೆ ಕಾರಣ ತಾಳಾವರ್ತಗಳ ಕಡೆಗೆ ಬರುವ ಪ್ರಾಸವು ಗತಿಯ ನಿಲುಗಡೆಯನ್ನು ತುಂಬ ಚೆನ್ನಾಗಿ ಬಿಂಬಿಸುವುದೇ ಆಗಿದೆ. ಯಾವುದೇ ತಾಳಬದ್ಧ ಗೇಯದ ಸಾಲೊಂದು ತನ್ನ ಮುಗಿತಾಯದ ಮೂಲಕ ಎದ್ದುಕಾಣುವಂತೆ ಆಗಬೇಕಾದರೆ ಅಲ್ಲಿ ಊನಗಣ ಅಪೇಕ್ಷಿತ. ಹೀಗಲ್ಲವಾದರೆ ಅಖಂಡವಾದ ಆವರ್ತಗಳು ಎದ್ದುತೋರಿ ನಿಲುಗಡೆಯೇ ಇಲ್ಲದೆ ತೊರೆಯೋಟದಿಂದ ಸಾಗುತ್ತಲೇ ಇರುತ್ತವೆ. ಆದುದರಿಂದ ಪಾದಾಂತ್ಯದಲ್ಲಿ ಊನಗಣಗಳು ಇದ್ದಾಗಲೇ ಅಂತ್ಯಪ್ರಾಸವು ಅತಿಶಯವಾಗಿ ತೋರುತ್ತದೆ. ಒಂದು ಪಕ್ಷ ಊನಗಣ ಇಲ್ಲದಿದ್ದಲ್ಲಿ ಆಯಾ ಪಾದಗಳು ಒಂದು ಸಂಪೂರ್ಣ ಗಣವನ್ನೇ ಕಡಮೆ ಮಾಡಿಕೊಂಡು ಕರ್ಷಣದ ಮೂಲಕ ತಮ್ಮ ಆವರ್ತಗಳನ್ನು ತುಂಬಿಸಿಕೊಳ್ಳಬೇಕು. ಇವೆರಡೂ ಸಾಧ್ಯತೆಗಳಿಗೆ ಹೊರತಾಗಿ ಸಮಸಂಖ್ಯೆಯ ಸಂಪೂರ್ಣ ಗಣಗಳು ಆಯಾ ಪಾದಗಳಲ್ಲಿದ್ದರೆ ಅಂತ್ಯಪ್ರಾಸವು ಸ್ಫುಟವಾಗಿ ತೋರುವುದಿಲ್ಲ.
ಊನಗಣವಿದ್ದಾಗ ಅಂತ್ಯಪ್ರಾಸ ಸ್ಫುಟವಾಗುವ ಪರಿ:
ಇನ್ನೇಸು ದಿನವಿತ್ತಲಿರಲಿ ನಾಂ - ದೇವ?
ಇನ್ನಾವುದನು ಕಾಣಲಿರುವುದೀ ಜೀವ?
ತನುವಿತ್ತ, ಮನವತ್ತ; ಬೇವ ಬಿಸಿಯಿತ್ತ,
ತಣಿಪು ಸೂಸುವ ಕೂರ್ಮೆಯಮೃತರಸವತ್ತ || (ತಾಜ್‌ಮಹಲ್ (ಕೇತಕೀವನ))
ಕರ್ಷಣದಿಂದ ಅಂತ್ಯಪ್ರಾಸ ಸ್ಫುಟವಾಗುವ ಬಗೆ:
ಬಾನೊಳು ತಿಂಗಳು ಬೆಳಗುತಿರೆ
ಮೀನುಗಳಿಣುಕುತ ತೊಳಗುತಿರೆ
ಶಾಂತಿಯ ಸೊಗದಲಿ ತುಂಬೆ ತಿರೆ
ಬಾಳಿದು ಹುಸಿಯೆಂದೆಂಬುವರೆ? || (ಹುಣ್ಣಿಮೆ (ಕೊಳಲು), ೮)
ಒಂದು ಗಣದ ಕೊರತೆಯನ್ನು ಕರ್ಷಣದಿಂದ ತುಂಬಿಕೊಂಡಾಗ ಅಂತ್ಯಪ್ರಾಸ ಸ್ಫುಟವಾಗುವ ಕ್ರಮ:
ಅಂಬರದಂಚಲಿ ಅದೊ ಮಿಂಚುಳ್ಳಿ
ಮೂಡಿದ ಹಾಗಿರೆ ಬೆಳ್ಳಿ
ಎರಗುತ್ತಿದೆ ಕಾಣ್ ಕೊಕ್ಕನು ಚಾಚಿ
ಹೊಂಚಿದ ಹಾಗಿರೆ ರೋಚಿ || (ನನ್ನದೇ)
[ಸಮಸಂಖ್ಯೆಯ ಸಂಪೂರ್ಣಗಣಗಳು ಇದ್ದಾಗ ಅಂತ್ಯಪ್ರಾಸ ಸ್ಫುಟವಾಗದ ರೀತಿ:
ಚಿಪ್ಪಿನೊಳ್ ಮುತ್ತು ಕಾಸಾರದೊಳ್ ಪಂಕಜಂ
ಅಪ್ಪಿನಿಂ ತಣ್ಪು ಮಲಯಾದ್ರಿಯಿಂ ಮಲಯಜಂ
ಕೇತಕೀಕುಸುಮದಿಂ ರುಚಿರತರಪರಿಮಳಂ
ಶೀತಕರದಿಂ ಸಾಂದ್ರತರಕೌಮುದೋಜ್ಜ್ವಳಂ || (ಬಸವೇಶ್ವರದೇವರ ರಗಳೆ, ೧.೧೨೫-೧೨೮)]
ಈ ಮೂರೂ ಬಗೆಯ ಸಾಧ್ಯತೆಗಳಲ್ಲಿ ಅಂತ್ಯಪ್ರಾಸದ ಸ್ಫುಟತೆಗಾಗಿ ಕೆಲವೊಂದು ಲಕ್ಷಣಗಳು ಅನಿವಾರ್ಯ. ಅವನ್ನೀಗ ಪರಿಶೀಲಿಸಬಹುದು.
ನಾವು ಈ ಮೊದಲೇ ನೋಡಿದಂತೆ ಪ್ರಾಸವೆಂಬುದು ಒಂದು ಅಕ್ಷರಕ್ಕೆ ಮಾತ್ರ ಸೀಮಿತವಾದ ಅಂಶವಲ್ಲ; ಅದು ಕಡಮೆಯೆಂದರೆ ಎರಡು ಮಾತ್ರೆಗಳ ವ್ಯಾಪ್ತಿಯನ್ನು ಹೊಂದಿರುವ ನಾದಘಟಕ. ಹೀಗಾಗಿ ಅಂತ್ಯಪ್ರಾಸದಲ್ಲಿಯೂ ಆದಿಪ್ರಾಸದಲ್ಲಿರುವಂತೆ ಪ್ರಾಸಾಕ್ಷರದ ಹಿಂದಿನ ಅಕ್ಷರದ ಗುರುತ್ವವೋ ಲಘುತ್ವವೋ ನಿಯತವಾಗಿರಬೇಕು. ಆದರೆ ಎರಡೇ ಮಾತ್ರೆಗಳ ಪರಿಮಾಣದೊಳಗೆ ಅಂತ್ಯಪ್ರಾವನ್ನು ಸಾಧಿಸಲು ಹೋದರೆ ಅದು ದಕ್ಕುವುದಿಲ್ಲ. ಏಕೆಂದರೆ ಪಾದದ ಮುಗಿತಾಯ ಒಂದೇ ಅಕ್ಷರವನ್ನೊಳಗೊಂಡ ಊನಗಣದಿಂದ ಆಗಿದ್ದಲ್ಲಿ ಹಿಂದಿನ ಪೂರ್ಣಗಣದ ಒಂದು ಅಂಶವಾದರೂ ಅದಕ್ಕೆ ಬೆಂಬಲವಾಗಿ ನಿಲ್ಲಬೇಕಿರುತ್ತದೆ. ಅಥವಾ ಮುಗಿತಾಯ ಪೂರ್ಣಗಣದಿಂದ ಆಗಿದ್ದಲ್ಲಿ ಸಹಜವಾಗಿಯೇ ನ್ಯೂನಾತಿನ್ಯೂನ ಮೂರು ಮಾತ್ರೆಗಳ ಪರಿಮಾಣ ಅಲ್ಲಿರಬೇಕು. ಹೀಗೆ ಅಂತ್ಯಪ್ರಾಸದ ಸ್ಫುಟೀಕರಣಕ್ಕೆ ಮೂರು ಮಾತ್ರೆಗಳ ಪರಿಮಾಣ ಅತ್ಯವಶ್ಯ. ಇಲ್ಲಿಯ ಪ್ರಾಸಾಕ್ಷರವು ಕೇವಲ ವ್ಯಂಜನಸಾಮ್ಯದಿಂದ ಕೂಡಿದ್ದರೆ ಸಾಕಾಗುವುದಿಲ್ಲ; ಅಲ್ಲಿ ಸ್ವರಸಾಮ್ಯವೂ ಇರಬೇಕು. ಮುಗಿತಾಯವು ಸ್ಫುಟವಾಗಿ ಮನಸ್ಸಿನಲ್ಲಿರುವುದು ಇಂಥ ಪರಿಪೂರ್ಣತೆಯಿಂದ ಮಾತ್ರ. ಇದರೊಟ್ಟಿಗೆ ಪ್ರಾಸಾಕ್ಷರದ ಹಿಂದಿನ ಎರಡು ಮಾತ್ರೆಗಳ ಪರಿಮಾಣದ ಅಕ್ಷರದ(ಗಳ)ಲ್ಲಿ ಹ್ರಸ್ವತ್ವ ಅಥವಾ ದೀರ್ಘತ್ವದ ಸಮತೆ ಅನಿವಾರ್ಯ. ಮಾತ್ರವಲ್ಲ, ಪ್ರಾಸಾಕ್ಷರದ ಹಿಂದಿನ ವರ್ಣವು ಲಘುವಾಗಿದ್ದಲ್ಲಿ ಅದರ ವ್ಯಂಜನವು ಪ್ರತಿಯೊಂದು ಪಾದದಲ್ಲಿಯೂ ತೋರಿಕೊಳ್ಳಬೇಕು. ಹೀಗಲ್ಲವಾದರೆ ಅಂತ್ಯಪ್ರಾಸದ ಸೊಗಸು ಸಾಕ್ಷಾತ್ಕರಿಸದು. ಈ ಅಂಶಗಳನ್ನು ಕೆಳಗಿನ ಉದಾಹರಣೆಯ ಮೂಲಕ ಮನಗಾಣಬಹುದು:
ಮಾಟ ತಾವರೆಯು ಕೈಗೆ, ಕುರುಳಿನಲಿ ಬಾಲಕುಂದಮಾಲೆ,
ಲೋಧ್ರಪುಷ್ಪಗಳ ಸೂಸುಹುಡಿಯು ಚೆಲುವಾದ ಮೊಗದ ಮೇಲೆ |
ಚೆಂದ ಕುರವಕವು ಹೆಳಲಿನಲ್ಲಿ, ಸಿರಿಸಲವು ಕಿವಿಯ ಬಳಿಗೆ
ಬೈತಲಲ್ಲಿ ಕಡವಾಲಹೂವು ಅಲ್ಲಿರುವ ಹೆಣ್ಣುಗಳಿಗೆ || (ಕನ್ನಡ ಮೇಘದೂತ, ೨.೨)
ಈವರೆಗೆ ನಾವು ಚರ್ಚಿಸಿದ ಅಂತ್ಯಪ್ರಾಸಲಕ್ಷಣಗಳ ಪೈಕಿ ಕೆಲವೊಂದನ್ನು ಲೋಪ ಮಾಡಿಕೊಂಡ ಉದಾಹರಣೆಗಳನ್ನು ಗಮನಿಸುವ ಮೂಲಕ ಸದ್ಯದ ನಿಗಮನದ ಸಾರ್ಥಕ್ಯವನ್ನು ವ್ಯತಿರೇಕದ ಮಾರ್ಗದಿಂದಲೂ ಮನಗಾಣಬಹುದು.
ಇತ್ತ ಕರೆಮೊರೆ ಹಿಂದಕಾಯಿತು
ಅತ್ತ ತೆರೆಮೊರೆ ಸುತ್ತಿಕೊಂಡಿತು || (ಕಾರಿಹೆಗ್ಗಡೆಯ ಮಗಳು (ಇಂಗ್ಲಿಷ್ ಗೀತಗಳು), ೧೦)
ಈ ಸಾಲುಗಳಲ್ಲಿ ಪ್ರಾಸಾಕ್ಷರವು ಸ್ವರ-ವ್ಯಂಜನಗಳ ಸಾಮ್ಯವನ್ನು ಹೊಂದಿದ್ದರೂ ಅದರ ಹಿಂದಿನ ವರ್ಣದಲ್ಲಿ ವ್ಯಂಜನಸಾಮ್ಯ ಕಾಣದಿರುವ ಕಾರಣ ಅಂತ್ಯಪ್ರಾಸದ ಸ್ವಾರಸ್ಯ ಕೆಲಮಟ್ಟಿಗೆ ಕುಂದಿರುವುದು ಸುವೇದ್ಯ.
ಹಡಗುಮರ ಕೆಡದಿರುವುದು
ತೇಲಬಲ್ಲುದು ಮತ್ತದು || (ರಾಯಲ್ ಜಾರ್ಜು ಮುಳುಗಿಹೋದದ್ದು (ಇಂಗ್ಲಿಷ್ ಗೀತಗಳು), ೮)
ಮೂರು-ನಾಲ್ಕು ಮಾತ್ರೆಗಳ ‘ಮಿಶ್ರಲಯ’ವನ್ನು ಹೊಂದಿದ ಈ ಸಾಲುಗಳಲ್ಲಿ ಪ್ರಾಸಾಕ್ಷರವು ‘ಮುಡಿ’ಯ ರೂಪದಿಂದ ಬಂದಿದೆ. ಆದರೆ ಇದರ ಹಿಂದಿನ ಮೂರು ಮಾತ್ರೆಗಳ ಗಣವನ್ನು ಮೊದಲ ಸಾಲು ಸರ್ವಲಘುವಾಗಿಯೂ ಎರಡನೆಯ ಸಾಲು ಒಂದು ಗುರು ಮತ್ತು ಒಂದು ಲಘುವಿನ ಜೋಡಿಯಾಗಿಯೂ ರೂಪಿಸಿಕೊಂಡಿವೆ. ಹೀಗಾಗಿ ಪ್ರಾಸಾಕ್ಷರದ ಹಿಂದೆ ಬೇಕಿರುವ ಗುರು-ಲಘುವಿನ್ಯಾಸದ ಸಮತ್ವ ಸ್ವಲ್ಪ ಏರುಪೇರಾಗಿ ಆ ಮೂಲಕ ಅಂತ್ಯಪ್ರಾಸದ ಪರಿಣಾಮ ಸೊರಗಿದೆ.
ಗದ್ಗದಿಸಿತೊಡನೆ ವಾಣಿಯ ವೀಣೆ, ಮುಂತೇ-
ಲಿತು ಬಾಷ್ಪಗಾನ! ವಲಮದರ ಮಧುರಿಮೆಯಿಂ
ನಿಮ್ಮುಸಿರ ಸೌಸವಂ! ರಜನಿಯಿಮೆಯಿಮೆಯಿಂ
ಮಧುದಿನಾಂತದ ಶಾಂತಿ ಕನವರಿಯುವಂತೆ || (ಕವಿತಾವತಾರ (ಗಿಳಿವಿಂಡು), ೨)
ಊನಗಣದ ಕೊನೆಯಲ್ಲಿ ಪ್ರಾಸವು ಬಂದಾಗ ಪದವು ಅಲ್ಲಿಗೇ ಮುಗಿಯದಿದ್ದಲ್ಲಿ ಅದು ತುಂಬ ಶ್ರುತಿಕಟುವಾಗುತ್ತದೆ. ಇಂಥ ಸಮಸ್ಯೆ ಖಂಡಪ್ರಾಸವುಳ್ಳ ಆದಿಪ್ರಾಸವನ್ನು ಅಷ್ಟಾಗಿ ಕಾಡುವುದಿಲ್ಲ. ಏಕೆಂದರೆ, ಪಾದಾದಿಯ ಎತ್ತುಗಡೆಯ ಬಿಗಿ ಖಂಡಪ್ರಾಸಕ್ಕೆ ಬರುವ ಕಾರಣ ಪದ್ಯಪಠನ ಪಾದಾಂತದಲ್ಲಿ ವಿರಮಿಸದೆ ದಂಡಾಕಾರವಾಗಿ ಮುಂದೆ ಸಾಗಿ ಶ್ರುತಿಹಿತಕ್ಕೆ ಇಂಬಾಗುತ್ತದೆ. ಈ ಮೊದಲೇ ನಾವು ಚರ್ಚಿಸಿದಂತೆ ಅಂತ್ಯಪ್ರಾಸವು ಪ್ರಸ್ಫುಟವಾಗುವುದು ಪಾದಾಂತದಲ್ಲಿ ಊನಗಣಗಳಿದ್ದಾಗ. ಅಥವಾ ‘ಮುಡಿ’ ಇಲ್ಲವೇ ಒಂದೇ ಗುರು ಬಂದಾಗ. ಇಂಥ ನಿಲುಗಡೆಯ ಜೊತೆಗೆ ಪದವೂ ಮುಗಿದಾಗ ಮಾತ್ರ ಅರ್ಥಪ್ರತೀತಿಗೆ ಕ್ಲೇಶವಾಗದಂತೆ ಪ್ರಾಸ ಉನ್ಮೀಲಿಸುತ್ತದೆ. ಹೀಗೆ ಪದ್ಯದ ಶಬ್ದಗುಣ ಮತ್ತು ಅರ್ಥಗುಣಗಳೆರಡೂ ಅವಿಕಾರಿಯಾಗಿ ಅಂದಗೊಳ್ಳುತ್ತವೆ.
ಇಂಥ ಗುಣಕ್ಕೆ ಎರವಾದ ಸಂದರ್ಭವನ್ನು ಮೇಲಿನ ಉದಾಹರಣೆಯಲ್ಲಿ ನಾವು ನೋಡಬಹುದು. ಮೊದಲ ಪಾದದ ಕೊನೆಯ ಊನಗಣದಲ್ಲಿ “ಮುಂತೇಲಿತು” ಎಂಬ ಪದವು ಪೂರ್ಣವಾಗದ ಕಾರಣ ಅದು ಶ್ರುತಿಕಟುವಾಗುವಂತೆ, ತನ್ಮೂಲಕ ಅರ್ಥಕ್ಲೇಶಕ್ಕೂ ಎಡೆಯಾಗುವಂತೆ ವಿಚ್ಛಿನ್ನವಾಗಿದೆ. ಪದವೊಂದರ ಪ್ರತಿಯೊಂದು ಅಕ್ಷರವೂ ಅವ್ಯವಹಿತವಾಗಿ ಉಚ್ಚಾರಿತವಾಗಬೇಕು. ಇದನ್ನು ‘ಆಸತ್ತಿ’ ಎಂದು ನಮ್ಮ ಶಾಸ್ತ್ರಜ್ಞರು ಗುರುತಿಸುತ್ತಾರೆ. ಇಂಥ ಆಸತ್ತಿಗೆ ಸದ್ಯದ ಛಂದೋಗತಿಯು ಅಡ್ಡಿಯನ್ನು ಉಂಟುಮಾಡುವಂತೆ ಪಾದಾಂತದಲ್ಲಿ ಊನಗಣ ತಲೆದೋರಿದೆ. ಈ ರೀತಿಯಲ್ಲಿ ಛಂದಃಪದಗತಿಯು ಭಾಷಾಪದಗತಿಗೆ ಅನುಕೂಲಿಸದೆ ಯತಿಭಂಗ ಉಂಟಾಗಿದೆ. ಈ ಮೂಲಕ ‘ಅಪ್ರತೀತ’ ಎಂಬ ಅರ್ಥಗತವಾದ ದೋಷಕ್ಕೆ ಎಡೆಯಾಗಿದೆ.
To be continued.