ರಂಗನಾಥ್ ಅವರ ಮೊದಲ ಮಗಳ ಹೆಸರು ಅಂಜನಾ. ಎರಡನೆಯ ಮಗಳು ಹುಟ್ಟಿದಾಗ ಯಾವ ಹೆಸರು ಇಡಬೇಕೆಂದು ಕೇಳಿದಾಗ ಎಸ್. ಕೆ. ಎಮ್. ಹೀಗೆ ಹೇಳಿದ್ದರಂತೆ: “ನಿರಂಜನಾ ಅಂತ ಇಡಿ. ಮತ್ತೂ ಒಬ್ಬಳು ಹುಟ್ಟಿದರೆ ಇದ್ದೇ ಇದೆ ಅಮೃತಾಂಜನಾ!” ಇಲ್ಲಿಯ ಧ್ವನಿ ಆ ಕಾಲದ ಕನ್ಯಾಪಿತೃಗಳಿಗೆ ಚೆನ್ನಾಗಿ ತಿಳಿಯುತ್ತದೆ. ಚೋದ್ಯವೆಂದರೆ ರಂಗನಾಥ್ ಅವರಿಗೆ ನಿಜಕ್ಕೂ ಮೂವರು ಹೆಣ್ಣುಮಕ್ಕಳಾದರು! ಪುಣ್ಯಕ್ಕೆ ಹೆಸರುಗಳು ಮಾತ್ರ ಬೇರೆಯಾದವು. ಕೃಷ್ಣಮೂರ್ತಿಗಳ ಈ ವಿನೋದ ಎಚ್. ಕೆ. ಆರ್. ಅವರಿಗೆ ಅದೆಷ್ಟು ಇಷ್ಟವಾಯಿತೆಂದರೆ ಒಮ್ಮೆ ಡಿ.ವಿ.ಜಿ. “ನಿಮಗೆಷ್ಟು ಮಕ್ಕಳು?” ಎಂದು ಕೇಳಿದಾಗ “ಅಂಜನಾ, ನಿರಂಜನಾ, ಅಮೃತಾಂಜನಾ” ಎಂದೇ ಉತ್ತರಿಸಿದ್ದರು!
ಇಬ್ಬರೂ ಎಲ್. ಐ. ಸಿ. ಸಂಸ್ಥೆ ನೀಡಿದ್ದ ಕೈಚೀಲಗಳನ್ನು ಹಿಡಿದು ಭವನಕ್ಕೆ ಬರುತ್ತಿದ್ದರು. ಅದನ್ನು ಕಂಡ ನಾನು ಒಮ್ಮೆ ಕುತೂಹಲದಿಂದ ಕೇಳಿದ್ದೆ: “ಇದೇನು ಸರ್, ನಿಮ್ಮಿಬ್ಬರ ಸ್ನೇಹ ಕೈಚೀಲಕ್ಕೂ ವಿಸ್ತರಿಸುವಷ್ಟು ಏಕದೇಹನ್ಯಾಯವೇ!” ಆಗ ಒಡನೆಯೇ ಗಂಭೀರ ಮುಖಮುದ್ರೆಯಿಂದ ಅತ್ತಿತ್ತ ನೋಡಿ ತಮ್ಮ ಮಾತುಗಳನ್ನು ಯಾರೂ ಕದ್ದು ಕೇಳುತ್ತಿಲ್ಲವೆಂದು ಸ್ಪಷ್ಟಪಡಿಸಿಕೊಂಡ ಬಳಿಕ ಪಿಸುಮಾತಿನಲ್ಲಿ ಎಸ್. ಕೆ. ಎಮ್. ನುಡಿದರು: “ನೀವೆಲ್ಲಾ ಹುಡುಗರಪ್ಪಾ. ನಿಮಗೆ ನಮ್ಮಂಥ ವಯಸ್ಸಾದವರ ಕಷ್ಟ ಹೇಗೆ ತಾನೇ ಗೊತ್ತಾಗುತ್ತೆ? ಹೆಸರಿಗೆ ನಾವು ದೊಡ್ಡ ದೊಡ್ಡ ಕೆಲಸಗಳಲ್ಲಿ ಇದ್ದವರು. ಆದರೆ ರಿಟೈರ್ ಆದ ಮೇಲೆ ಬದುಕೋದು ಹೇಗೆ? ಅವರಿಗಂತೂ ಮೂರು ಜನ ಹೆಣ್ಣುಮಕ್ಕಳು. ನನಗೋ ಮಗಳ ಸಂಸಾರ ನನ್ನ ಮನೆಯಲ್ಲೇ. ಇನ್ನು ಪೆನ್ಷನ್ ದುಡ್ಡಲ್ಲಿ ಬದುಕೋದು ಹೇಗೆ? ಅದಕ್ಕೇ ಇಬ್ಬರೂ ಇನ್ಷೂರೆನ್ಸ್ ಏಜೆಂಟ್ಸ್ ಆಗಿದ್ದೀವಿ. ಇದು ಯಾರಿಗೂ ಗೊತ್ತಿಲ್ಲ. ಮರ್ಯಾದೆ ಪ್ರಶ್ನೆ ಬೇರೆ. ಏನೋ ನೀವು ಆತ್ಮೀಯರು ಅಂತ ನಿಮ್ಮ ಕಿವೀಗೆ ಹಾಕಿದ್ದೀನಿ. ಎಲ್ಲೂ ಬಾಯಿ ಬಿಡಬೇಡಿ.”
ಹೀಗೆನ್ನುತ್ತ ತಮ್ಮ ಮಾತಿನ ಅನುಮೋದನೆಗಾಗಿ ಬಳಿಯಿದ್ದ ರಂಗನಾಥ್ ಅವರತ್ತ ನೋಡಿದರು. ಅವರೂ ಸಹ ತಮ್ಮ ಎಂದಿನ ಹೂನಗೆಯನ್ನು ಬದಿಗೆ ದೂಡಿ ಲೊಚಗುಟ್ಟುತ್ತ “ಅಲ್ವೇ ಎಸ್. ಕೆ. ಎಮ್! ನಮ್ಮ ಕಷ್ಟ ಈ ಹುಡುಗರಿಗೆ ಹೇಗ್ ಅರ್ಥವಾಗುತ್ತೆ? ಇದನ್ನೆಲ್ಲ ಈ ಮಾತ್ರಕ್ಕೂ ನೀವು ಬಯಲು ಮಾಡಬಾರದಾಗಿತ್ತು. ಏನೋ ನಮ್ಮ ಮಾನಕ್ಕೆ ನಾವು ಹೀಗೆ ಬದುಕುತ್ತಾ ಇದ್ದೀವಿ” ಎಂದು ಚಿಂತೆಯನ್ನು ವ್ಯಕ್ತಪಡಿಸಿದರು.
ನನಗೆ ನಂಬಲಾಗಲಿಲ್ಲ. ಆದರೆ ನಂಬದಿರಲು ಸಾಧ್ಯವಿಲ್ಲವೆಂಬಂತೆ ಇಬ್ಬರ ಭಾವ-ಭಂಗಿಗಳೂ ಮುಗಿಬೀಳುತ್ತಿದ್ದವು. ಸುಮಾರು ಹೊತ್ತು ಹೀಗೆ ಸತಾಯಿಸಿದ ಬಳಿಕ ಪೆಕರುಪೆಕರಾದ ನನ್ನಿಂದ ಇನ್ನು ಹೆಚ್ಚಿನ ವಿನೋದ ಹೊರಡಿಸಲು ಸಾಧ್ಯವಿಲ್ಲ ಎಂದು ನಿಶ್ಚಯಿಸಿಕೊಂಡು ಇಬ್ಬರೂ ಗೊಳ್ಳನೆ ನಕ್ಕರು.
ಒಮ್ಮೆ ಟಿ. ಎನ್. ಪದ್ಮನಾಭನ್ ಅವರ ಭಾಷಣ ಭವನದಲ್ಲಿ ಏರ್ಪಾಟಾಗಿತ್ತು. ಅದು ಬಹುಶಃ ‘ಉತ್ತರರಾಮಚರಿತ’ವನ್ನು ಕುರಿತದ್ದೆಂದು ನನ್ನ ನೆನಪು. ಉಪನ್ಯಾಸವು ತುಂಬ ಸೊಗಸಾಗಿ ಸಾಗಿತು. ಅದನ್ನು ಕೇಳಲು ಪದ್ಮನಾಭನ್ ಅವರ ಸಹೋದ್ಯೋಗಿ ಒಬ್ಬರು ಬಂದಿದ್ದರು. ಅವರು ಕೃಷ್ಣಮೂರ್ತಿಗಳಿಗೂ ಪರಿಚಿತರು. ಆದರೆ ಪದ್ಮನಾಭನ್ ಇಷ್ಟು ಚೆನ್ನಾಗಿ ಮಾತನಾಡಬಲ್ಲರೆಂದು ಅವರಿಗೆ ತಿಳಿದಿರಲಿಲ್ಲ. ಹೀಗಾಗಿ ತಮ್ಮ ಆಶ್ಚರ್ಯ-ಆನಂದಗಳನ್ನು ಕೃಷ್ಣಮೂರ್ತಿಗಳಲ್ಲಿ ಮತ್ತೆ ಮತ್ತೆ ಹೇಳಿಕೊಂಡರು. ಅವರ ಉದ್ಗಾರಗಳೆಲ್ಲ ಮುಗಿದ ಬಳಿಕ ಎಸ್. ಕೆ. ಎಮ್. ಆಕ್ಷೇಪಿಸುವ ದನಿಯಲ್ಲಿ ಹೀಗೆ ಹೇಳಿದರು: “ಸತ್ಯೇಶಾಚಾರ್, ನಿಮ್ ತಲೆ! ನಿಮಗೆ ಇಷ್ಟೇನೇ ಗೊತ್ತಿರೋದು? ಸಾರ್ಥಕವಾಯಿತು! ಇಷ್ಟು ವರ್ಷ ಒಂದೇ ಕಡೆ ಕೆಲಸ ಮಾಡಿ ಪದ್ಮನಾಭನ್ ಅವರ ಟ್ಯಾಲೆಂಟ್ ಏನೂ ಅಂತ ನಿಮಗಿನ್ನೂ ತಿಳೀಲಿಲ್ವೇ? ಅಯ್ಯೋ, ಈ ಭಾಷಣ-ಗೀಷಣ ಏನು ಮಹಾ! ಅವರ ಡಾನ್ಸನ್ನ ನೀವು ನೋಡಬೇಕಿತ್ತು. ಮಹಾರಾಜ ಕಾಲೇಜಲ್ಲಿ ಅವರು ಸ್ಟೂಡೆಂಟ್ ಆಗಿದ್ದಾಗ ಹೇಗೆ ನೃತ್ಯ ಮಾಡ್ತಿದ್ರೂ ಅಂತೀರ!”
ಸತ್ಯೇಶಾಚಾರ್ಯರು ನಡುವೆ ಬಾಯಿ ಹಾಕಿದರು: “ಇಲ್ಲ, ಅವರು ಸೆಂಟ್ರಲ್ ಕಾಲೇಜಲ್ಲಿ ಓದಿದ್ದು...”
ಅವರ ಆಕ್ಷೇಪಕ್ಕೆ ಸ್ವಲ್ಪವೂ ಅಳುಕದೆ ಕೃಷ್ಣಮೂರ್ತಿ ಮತ್ತೂ ಹಿರಿಗೊರಲಿನಿಂದ ಮುಂದುವರಿದರು: “ಅಯ್ಯೋ ನಂಗೆ ಗೊತ್ತಿಲ್ವೇ? ಅವರು ಇಂಟರ್ ಕಾಲೇಜ್ ಕಾಂಪಿಟಿಷನ್ ಆದಾಗ ಮಹಾರಾಜ ಕಾಲೇಜ್‌ಗೆ ಬರ್ತಾ ಇದ್ದರು. ನೀವು ಅದನ್ನೆಲ್ಲ ಕಂಡಿಲ್ಲ ಕೇಳಿಲ್ಲ; ಮಧ್ಯೇ ಬಾಯಿ ಹಾಕಬೇಡಿ ... ಆಗ ಇಡೀ ಮಹಾರಾಜ ಕಾಲೇಜೇ ಕಾದು ನೋಡ್ತಿತ್ತು, ಇವರ ಡಾನ್ಸನ್ನ! ಮೂಗೂರು ಜೇಜಮ್ಮನವರ ಹತ್ತಿರ ನೃತ್ತ, ಜಟ್ಟಿ ತಾಯಮ್ಮನವರ ಹತ್ತಿರ ಅಭಿನಯ ಕಲಿತಿದ್ದವರು ... ಈಗ ವಯಸ್ಸಾಗಿದೆ. ಬಿ.ಪಿ., ಷುಗರ‍್ರು ಹೆಚ್ಚಾಗಿದೆ. ಅದಕ್ಕೇ ವರ್ಣ-ಗಿರ್ಣ ಮಾಡೋಕಾಗೊಲ್ಲ. ಸುಮ್ಮನೆ ಲೈಟಾಗಿ ಪದ-ಜಾವಳಿ-ಅಷ್ಟಪದಿಗಳನ್ನ ಮನೇಲೇ ಮಾಡ್ತಿರ್ತಾರೆ.”
ಇದನ್ನೆಲ್ಲ ಎಸ್. ಕೆ. ಎಮ್. ಅದೆಷ್ಟು ಸಹಜವಾಗಿ ಹೇಳಿದರೆಂದರೆ ಸರಳರಾದ ಸತ್ಯೇಶಾಚಾರ್ಯರು ಬೆಕ್ಕಸಬೆರಗಾಗಿ ಕಣ್ಣು-ಬಾಯಿ ಬಿಟ್ಟುಕೊಂಡು ಕೇಳುತ್ತ ನಿಂತರು. ಇದನ್ನೆಲ್ಲ ಗಮನಿಸುತ್ತಿದ್ದ ನನಗೂ ಪದ್ಮನಾಭನ್ನರಿಗೂ ನಗೆ ತಡೆಯಲಾಗಲಿಲ್ಲ.
ಇನ್ನೊಮ್ಮೆ ಭವನದಲ್ಲಿ ಯಾವುದೋ ಸಂಗೀತಕಾರ್ಯಾಗಾರ ನಡೆದಿತ್ತು. ಅದಕ್ಕೆ ಸಾಕಷ್ಟು ಮಂದಿ ಶಿಬಿರಾರ್ಥಿಗಳು ಬಂದಿದ್ದರು. ಬಹುಶಃ ಆರ್. ಕೆ. ಶ್ರೀಕಂಠನ್ ಅವರು ಇದನ್ನು ನಡಸಿಕೊಡಲಿದ್ದರು. ಆಗ ಮಹಡಿಯಲ್ಲಿದ್ದ ಪ್ರಸ್ಥಾನತ್ರಯಭಾಷ್ಯಗಳ ತರಗತಿಗಾಗಿ ವಿದ್ವಾಂಸರಾದ ಎನ್. ಎಸ್. ಅನಂತರಂಗಾಚಾರ್ಯರು ಗಂಭೀರವಾಗಿ ಮೆಟ್ಟಿಲು ಹತ್ತುತ್ತಿದ್ದರು. ಅವರದು ಸ್ಥೂಲೋನ್ನತವಾದ ನಿಲವು. ಅಂತರಂಗವೆಷ್ಟು ಮೃದುವೋ ಮುಖಮುದ್ರೆ ಅಷ್ಟೇ ಗಡಸು. ಕಚ್ಚೆಪಂಚೆ, ಕುರ್ತ, ಉತ್ತರೀಯಗಳಲ್ಲಿದ್ದ ಅವರ ತಲೆಯ ಮೇಲೆ ಉಣ್ಣೆಯ ಟೋಪಿಯೂ ರಾಜಿಸಿತ್ತು. ಹಣೆಯ ಮೇಲೆ ಎದ್ದು ಕಾಣುವಂತೆ ಕೆಂಪುನಾಮ. ನೋಡಿದೊಡನೆಯೇ ಇವರು ಯಾರೋ ದೊಡ್ಡವರೆಂಬ ಭಾವ ಬರುವಂತಿತ್ತು. ಇವರನ್ನು ಕಂಡ ಹಲಕೆಲವು ಶಿಬಿರಾರ್ಥಿನಿಯರು ಹತ್ತಿರದಲ್ಲಿದ್ದ ಕೃಷ್ಣಮೂರ್ತಿಯವರನ್ನು ಕೇಳಿದರು: “ಸರ್, ಅವರು ಯಾರು ಸರ್? ನೋಡೋದಿಕ್ಕೆ ದೊಡ್ಡ ಸಂಗೀತವಿದ್ವಾಂಸರ ಥರ ಕಾಣಿಸ್ತಾರೆ!”
ಸಂಗೀತದ ಹುಚ್ಚು ಹತ್ತಿದ ಈ ಹೆಣ್ಣುಮಕ್ಕಳ ಮುಗ್ಧತೆಯನ್ನು ಎಸ್. ಕೆ. ಎಮ್. ಹಾಸ್ಯಕ್ಕೆ ಬಳಸಿಕೊಳ್ಳಲು ಹಿಂಜರಿಯುತ್ತಾರೆಯೇ? ಪ್ರತ್ಯುತ್ಪನ್ನಮತಿಯಿಂದ ಕೂಡಲೇ ಹೇಳಿದರು: “ಆಹಾ, ಎಷ್ಟು ಚೆನ್ನಾಗಿ ಗಮನಿಸಿದಿರಮ್ಮಾ! ಇವರು ಅಂಥಿಂಥ ವಿದ್ವಾಂಸರಲ್ಲ. ತುಂಬಾ ದೊಡ್ಡವರು ... ನಮ್ಮ ತಾತನವರ ಸಹಪಾಠಿಗಳಾದ ಟೈಗರ್ ವರದಾಚಾರ್ಯರ ಸಾಕ್ಷಾತ್ ಶಿಷ್ಯರು. ಎಲೆಮರಿ ಕಾಯಿ. ಅವರಿಗೆ ಗುರುಭಕ್ತಿ ಎಷ್ಟು ಅಂತ ಅಂದರೆ ಗುರುಗಳ ಹಾಗೆಯೇ ಹಾಡಿ ಹಾಡಿ ಧ್ವನಿ ಅಲ್ಲದೆ ಮುಖವೂ ಅವರ ಹಾಗೇ ಆಗಿಬಿಟ್ಟಿದೆ. ತಾನಿನ್ನೂ ವಿದ್ಯಾರ್ಥಿ ಅಂತಲೇ ಭಾವಿಸಿಕೊಂಡು ಯಾರಿಗೂ ಏನೂ ಹೇಳಿಕೊಡೊಲ್ಲ. ಸಿಕ್ಕಾಪಟ್ಟೆ ಒಳ್ಳೊಳ್ಳೇ ಅಪರೂಪದ ಕೃತಿಗಳ ಭಂಡಾರವೇ ಅವರ ಹತ್ತಿರ ಇದೆ. ತೀರ ಹೋಗಿ ಗೋಗರೆದು ‘ಗುರುಗಳೇ, ವಿದ್ಯಾಭಿಕ್ಷೆ!’ ಅಂತ ಕಾಲಿಗೆ ಬಿದ್ದು ಕೇಳಿದರೆ ಮಾತ್ರ ಕನಿಕರಿಸಿಯಾರು. ಆದರೆ ಇದಕ್ಕೆಲ್ಲ ಕೇಳಿಕೊಂಡು ಬಂದಿರಬೇಕು.”
ಕೃಷ್ಣಮೂರ್ತಿ ಅವರ ಮಾತಿನ ಮೋಡಿ ಹೇಗಿತ್ತೆಂದರೆ ಆ ಮುಗ್ಧೆಯರು ಎನ್. ಎಸ್. ಅನಂತರಂಗಾಚಾರ್ಯರ ಮನೆಯ ವಿಳಾಸವನ್ನು ಸಂಗ್ರಹಿಸಿ ನೇರವಾಗಿ ಅವರ ಮನೆಗೇ ನುಗ್ಗಿ ಅಕ್ಷರಶಃ ಕಾಲು ಹಿಡಿದು ‘ಗುರುಗಳೇ, ಸಂಗೀತಭಿಕ್ಷೆ!’ ಎಂದು ಅಂಗಲಾಚಿದರು. ಪಾಪ, ಈ ಪ್ರಸಂಗದ ಹಿಂದು-ಮುಂದುಗಳೊಂದನ್ನೂ ತಿಳಿಯದ ಅನಂತರಂಗಾಚಾರ್ಯರು ಕಕ್ಕಾಬಿಕ್ಕಿಯಾದರು. ವಸ್ತುತಃ ಅವರು ವೇದಾಂತದ ಎಲ್ಲ ಶಾಖೆಗಳಲ್ಲಿ ವಿದಗ್ಧರು, ಸರಳಸಜ್ಜನರು. ಸಂಗೀತದ ಸೋಂಕೂ ಅವರಿಗಿರಲಿಲ್ಲ. ಅಷ್ಟೇಕೆ, ಅವರ ಕಂಠವೇ ಗೊಗ್ಗರು. ಹೀಗಾಗಿಯೇ ಆ ಹೆಣ್ಣುಮಕ್ಕಳಿಗೆ ಸೌಮ್ಯವಾಗಿ ತಿಳಿಯಹೇಳಿದರು. ಆದರೆ ಇದನ್ನೆಲ್ಲ ನಂಬುವ ಸ್ಥಿತಿಯಲ್ಲಿ ಅವರಿರಲಿಲ್ಲ. “ನಮಗೆ ಗೊತ್ತು! ನೀವು ಹೀಗೆ ಹೇಳುತ್ತೀರಿ ಅಂತ ಕೃಷ್ಣಮೂರ್ತಿ ಸರ್ ಮೊದಲೇ ತಿಳಿಸಿದ್ದರು. ನಾವಂತೂ ನಿಮ್ಮ ಪಾದ ಬಿಡೋಕೆ ತಯಾರಿಲ್ಲ.” ಪರಿಸ್ಥಿತಿ ಹೀಗೆ ಬಿಗಡಾಯಿಸಿದಾಗ ಆಚಾರ್ಯರ ಮನೆಯಾಕೆಯೇ ಸ್ಪಷ್ಟೀಕರಣಕ್ಕೆ ಮುಂದಾದರು: “ಅಮ್ಮಾ ತಾಯಿ, ಈ ಮುದುಕರನ್ನ ನೀವು ಹೀಗೆಲ್ಲ ಹಿಂಸೆ ಮಾಡಬೇಡಿ. ಅವರಿಗೆ ಖಂಡಿತವಾಗಿಯೂ ಸಂಗೀತ ಬರೊಲ್ಲ.” ಅಷ್ಟು ಹೊತ್ತಿಗೆ ಆಚಾರ್ಯರಿಗೆ ಕೃಷ್ಣಮೂರ್ತಿ ಅವರ ವಿನೋದ ಸ್ಫುರಿಸಿತ್ತು. ಎಲ್ಲ ನಗೆಯಲ್ಲಿ ಮುಗಿದಿತ್ತು.
ಎಸ್. ಕೆ. ಎಮ್. ನನ್ನ ಬಗೆಗೂ ಇಂಥ ವಿನೋದವೊಂದನ್ನು ಮಾಡಿದ್ದರು. ಅವಧಾನ ನೋಡಲು ಬರುತ್ತಿದ್ದ ಹಲವರಲ್ಲಿ ಮಲ್ಲೇಶ್ವರದ ಯಾವುದೋ ಒಂದು ಮೂಲೆಯಲ್ಲಿ ನಾನು ಹೋಟಲನ್ನು ಇಟ್ಟಿರುವಂತೆಯೂ ಅಲ್ಲಿ ಅತ್ಯುತ್ತಮವಾದ ಉದ್ದಿನ ವಡೆ ಸಿಗುವುದಾಗಿಯೂ ಗಾಳಿಸುದ್ದಿ ಹಬ್ಬಿಸಿದ್ದರು. ಆದರೆ ಅದೇಕೋ ಈ ವಿನೋದ ಅಷ್ಟಾಗಿ ಫಲಿಸಲಿಲ್ಲ.
ಎಪ್ಪತ್ತರ ಬಳಿಕವೂ ಕೃಷ್ಣಮೂರ್ತಿ ಅವರಲ್ಲಿ ಇಂಥ ವಿನೋದಪ್ರಜ್ಞೆ ತುಂಬಿ ತುಳುಕುತ್ತಿತ್ತು. ಇದು ಬಾಲ್ಯದಿಂದಲೂ ಅವರು ಬೆಳೆಸಿಕೊಂಡು ಬಂದ ಕೌಶಲ. ತೀರ ಚಿಕ್ಕವರಾಗಿದ್ದಾಗಲೇ ಅವರು ಪರಿಚಿತ-ಅಪರಿಚಿತ ಎಂಬ ಭೇದವಿಲ್ಲದೆ ನೆರೆಹೊರೆಯ ಮಂದಿಯ ಮೇಲೆ ಪ್ರಾಕ್ಟಿಕಲ್ ಜೋಕ್‌ಗಳನ್ನು ಮಾಡುತ್ತಿದ್ದರು. ತಮ್ಮ ಅಜ್ಜನವರಿಗಿದ್ದ ಸಂಗೀತದ ಸಂಪರ್ಕವನ್ನು ಬಳಸಿಕೊಂಡು ಅದೊಮ್ಮೆ ಯಾವುದೋ ವಾಲಗದವರಿಗೆ ಹತ್ತಿರದ ಮನೆಯನ್ನು ತೋರಿಸಿ, “ಅವರ ಮನೆಯಲ್ಲಿ ಇವತ್ತು ರಾತ್ರಿ ಪ್ರಸ್ತ. ನೀವು ಸಂಜೆ ಹೋಗಿ ‘ಇದಿ ನ್ಯಾಯಮಾ ಶ್ರೀರಾಮಚಂದ್ರಾ’ ಕೃತಿಯನ್ನ ನುಡಿಸಿ ಬರಬೇಕು. ಒಳ್ಳೇ ಸಂಭಾವನೆ ಕೊಡುತ್ತಾರೆ” ಎಂದಿದ್ದರಂತೆ. ಆ ಬಳಿಕ ಆದ ವಿನೋದವನ್ನು ಓದುಗರೇ ಊಹಿಸಿಕೊಳ್ಳಬಹುದು. ಈ ಘಟನೆಯನ್ನು ಅವರೇ ನನ್ನಲ್ಲಿ ಹೇಳಿಕೊಂಡು ನಕ್ಕಿದ್ದರು.
ಮತ್ತೊಮ್ಮೆ ಪ್ರಸಿದ್ಧ ಸಂಗೀತವಿದ್ವಾಂಸರೊಬ್ಬರು ಕಾರ್ಯಕ್ರಮಕ್ಕಾಗಿ ಭವನಕ್ಕೆ ಬಂದಿದ್ದರು. ರಂಗನಾಥ್ ಮತ್ತು ಕೃಷ್ಣಮೂರ್ತಿಗಳೊಡನೆ ದಶಕಗಳ ಸ್ನೇಹ ಅವರಿಗಿದ್ದ ಕಾರಣ ನೇರವಾಗಿ ಮಹಡಿಯ ಕಛೇರಿಗೇ ಬಂದರು. ಕಾಫಿ, ತಿಂಡಿಗಳ ಸತ್ಕಾರಕ್ಕೆ ಮುಂದಾಗುವಾಗ ರಂಗನಾಥ್ ಕೇಳಿದರು: “ಏನು, ನೀವು ಒಬ್ಬರೇ ಬಂದಿರಾ? ಮನೆಯವರಿಲ್ಲದೆ ಹೀಗೆ ಒಂಟಿಯಾಗಿ ಬರುವುದು ಅಪರೂಪ ಅಲ್ಲವೇ?” ಅದು ನಿಜವೇ. ಆ ವಿದ್ವಾಂಸರು ಸಾಮಾನ್ಯವಾಗಿ ಪತ್ನಿಯೊಡನೆಯೇ ಬರುತ್ತಿದ್ದರು. ಅಂದು ಅವರನ್ನು ಕೆಳಗಿದ್ದ ರಾಜಂ ಸಭಾಂಗಣದಲ್ಲಿಯೇ ಕೂಡಿಸಿ ಬಂದಿದ್ದರು. ಅದನ್ನು ತಿಳಿದ ರಂಗನಾಥ್ ಆಫೀಸಿನ ಹುಡುಗನನ್ನು ಕರೆದು ಆಕೆಯನ್ನು ಬರಮಾಡಿಕೊಳ್ಳಲು ಆಣತಿ ನೀಡಿದರು. ಆಗ ಎಸ್. ಕೆ. ಎಮ್. ಅವರ ಮುಖದಿಂದ ಹಾಸ್ಯದ ಹೂವು ಸಿಡಿಯಿತು: “ಏನಪ್ಪಾ, ಇವರ ಮನೆಯವರು ಯಾರು ಅಂತ ಗೊತ್ತು ತಾನೇ? ಗೊತ್ತಿಲ್ಲದೆ ಮತ್ತೆ ಇನ್ಯಾರನ್ನೋ ಕರೆದುಕೊಂಡು ಬಂದರೆ ತುಂಬ ಫಜೀತಿ ... ಆಫ್ ಕೋರ್ಸ್, ಇವರು ಪಾಪ ಏನೂ ಅಂದುಕೊಳ್ಳೊಲ್ಲ, ಬಿಡು!”
ಅಲ್ಲಿದ್ದವರೆಲ್ಲ ಹುಚ್ಚುನಗೆಯ ಹೊಳೆಯಲ್ಲಿ ಕೊಚ್ಚಿಹೋದರು.
To be continued.