ವಿದ್ವದ್ರಸಿಕರ ಸಾಹಚರ್ಯ
೧೯೮೭ ಮತ್ತು ೧೯೮೮ರ ನಡುವೆ ಡಿ.ವಿ.ಜಿ. ಅವರ ಜನ್ಮಶತಾಬ್ದಿಯ ಅಂಗವಾಗಿ ರಂಗನಾಥ್ ವಾರಕ್ಕೊಂದರಂತೆ ಐವತ್ತೆರಡು ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಇದರ ಆಯೋಜನೆಯಲ್ಲಿ ನನ್ನನ್ನೂ ತೊಡಗಿಸಿದರು. ಆಗಲೇ ಹಿರಿಯರಾದ ಎನ್. ರಂಗನಾಥಶರ್ಮಾ, ಎಂ. ವಿ. ಸೀತಾರಾಮಯ್ಯ, ಟಿ. ಎನ್. ಪದ್ಮನಾಭನ್, ಡಿ. ಆರ್. ವೆಂಕಟರಮಣನ್, ನೀಲತ್ತಹಳ್ಳಿ ಕಸ್ತೂರಿ ಮುಂತಾದವರ ಬಳಕೆ ನನಗೆ ಒದಗಿತು. ಇದೇ ಸಂದರ್ಭದಲ್ಲಿ ಕುಲಪತಿ ಕೆ. ಎಂ. ಮುನ್ಷಿ ಅವರ ಜನ್ಮಶತಾಬ್ದಿಯೂ ಬಂದದ್ದು ಒಂದು ಸುಂದರ ಯೋಗಾಯೋಗ. ಈ ಕಾರಣದಿಂದಲೇ ನಾನು ಮುನ್ಷಿ ಅವರ ಎಲ್ಲ ಕೃತಿಗಳನ್ನೂ ಓದುವಂತಾಯಿತು; ಅವರ ನಿಕಟವರ್ತಿಗಳನ್ನೆಲ್ಲ ಕಂಡು ಅರಿಯುವಂತೆ ಕೂಡ ಆಯಿತು. ಇದೆಲ್ಲ ರಂಗನಾಥ್ ಅವರ ಒತ್ತಾಸೆಯಿಂದಲೇ ಆದದ್ದು. ಜೊತೆಗೆ ಭವನಕ್ಕೆ ಬರುತ್ತಿದ್ದ ಅನೇಕ ಪಂಡಿತರ, ಕಲಾವಿದರ, ಸಾರ್ವಜನಿಕರ ಪರಿಚಯವೂ ನನಗೊದಗಿತು.
ಪ್ರಾಯಶಃ ೧೯೮೫ರಿಂದ ಮುಂದಕ್ಕೆ ಭವನದ ಕಾರ್ಯಕ್ರಮಗಳಿಗೆ ನಾನು ಹೋದಾಗಲೆಲ್ಲ ರಂಗನಾಥ್ ಅವರ ಕೊಠಡಿಗೆ ನುಸುಳುತ್ತಿದ್ದೆ. ಅಪ್ಪಿತಪ್ಪಿ ಕೆಳಗೆ ಸಭಾಭವನದಲ್ಲಿ ಕುಳಿತಿದ್ದರೆ ಮೇಲಿರುವ ಕೊಠಡಿಗೆ ಬರಲು ಬುಲಾವ್ ಬರುತ್ತಿತ್ತು! ನಾನಂತೂ ಕಾರ್ಯಕ್ರಮಕ್ಕೆ ಸಾಕಷ್ಟು ಮುನ್ನವೇ ಬರುತ್ತಿದ್ದೆ. ಹೀಗಾಗಿ ಮೂವತ್ತು-ನಲವತ್ತು ನಿಮಿಷಗಳಿಗೂ ಹೆಚ್ಚಾಗಿ ಸಮಯವಿರುತ್ತಿತ್ತು. ಆ ಹೊತ್ತಿನಲ್ಲಿ ರಂಗನಾಥ್ ಮತ್ತು ಅವರೊಡನೆ ಸದಾ ಇರುತ್ತಿದ್ದ ಭವನದ ಕಾರ್ಯಪ್ರಕಲ್ಪನಿರ್ದೇಶಕರಾದ ಎಸ್. ಕೃಷ್ಣಮೂರ್ತಿ ಅವರ ಜೊತೆ ಧಾರಾಳವಾದ ಹರಟೆಗೆ ತೊಡಗುತ್ತಿದ್ದೆ. ಈ ಗೋಷ್ಠಿಗೆ ಟಿ. ಎನ್. ಪದ್ಮನಾಭನ್ ಅವರೂ ಆಗೀಗ ಸೇರಿಕೊಳ್ಳುತ್ತಿದ್ದರು.
ಆ ಮಾತುಕತೆಯನ್ನು ಹರಟೆಯೆನ್ನಲೇ, ಹಾಸ್ಯವೆನ್ನಲೇ, ಅನುಭವಶ್ರವಣವೆನ್ನಲೇ ಅಥವಾ ಅನೌಪಚಾರಿಕವಾದ ವಿದ್ಯಾಭ್ಯಾಸವೆನ್ನಲೇ? ಇವೆಲ್ಲವೂ ಹೌದು. ಇವಕ್ಕಿಂತ ಮಿಗಿಲಾಗಿ ಅಂಥ ಹಿರಿಯರು ಸಲುಗೆಯಿಂದ ನನ್ನನ್ನು ನಡಸಿಕೊಳ್ಳುತ್ತಿದ್ದ ಸ್ನೇಹ ಮಾತಿಗೆ ಮೀರಿದ್ದು. ಆಯಾ ದಿನದ ಕಾರ್ಯಕ್ರಮದ ಕವಿ-ಕಲಾವಿದರನ್ನು ನನಗೆ ಪರಿಚಯಿಸಿಕೊಡುತ್ತಿದ್ದುದಲ್ಲದೆ ನನ್ನ ಬಗೆಗೂ ಧಾರಾಳವಾದ ಒಳ್ಳೆಯ ಮಾತುಗಳನ್ನು ಅವರಿಗೆ ತಿಳಿಸುವಲ್ಲಿ ರಂಗನಾಥ್ ಸದಾ ಮುಂದು. ಹೀಗೆ ಒಬ್ಬರಿಗೆ ಮತ್ತೊಬ್ಬರನ್ನು ನಲ್ನುಡಿಗಳಿಂದ ಹತ್ತಿರವಾಗಿಸುವುದು ಅವರ ಸ್ವಭಾವವೇ ಆಗಿತ್ತು.
ಎಸ್. ಕೃಷ್ಣಮೂರ್ತಿ
ಡಿ.ವಿ.ಜಿ. ತಮ್ಮ “ಜ್ಞಾಪಕಚಿತ್ರಶಾಲೆ”ಯ ಮೊದಲ ಸಂಪುಟದಲ್ಲಿ ಡಾಕ್ಟರ್ ಗುಂಡಣ್ಣ ಎಂಬ ಮಹನೀಯರನ್ನು ಅನನ್ಯವಾಗಿ ಚಿತ್ರಿಸುವಾಗ ಅವರೊಡನೆ ‘ಗಳಸ್ಯ ಕಂಠಸ್ಯ’ ಎಂಬಂತಿದ್ದ ಜೀವದ ಗೆಳೆಯ ಶ್ರೀನಿವಾಸ ಅಯ್ಯಂಗಾರರ ಪರಿಚಯವನ್ನೂ ನಮಗೆ ಮಾಡಿಕೊಡುತ್ತಾರೆ. ಇವರಿಗೆ ನಾರದರೆಂಬ ನಿಕ್-ನೇಮ್ ಇದ್ದಿತೆಂದೂ ಹೇಳುತ್ತಾರೆ. ಗುಂಡಣ್ಣ-ನಾರದರ ಜೋಡಿಯಂತೆಯೇ ಎಚ್. ಕೆ. ಆರ್.-ಎಸ್. ಕೆ. ಎಮ್. ಅವರ ಜೋಡಿ. ಒಂದು ನನಗೆ ಪರೋಕ್ಷ, ಮತ್ತೊಂದು ಪ್ರತ್ಯಕ್ಷ. ಇಲ್ಲಿ ಸಾಮ್ಯವಿರುವುದು ಸ್ನೇಹದಲ್ಲಿ, ವಿಕಟ ವಿನೋದದಲ್ಲಿ.
ಎಸ್. ಕೃಷ್ಣಮೂರ್ತಿ ವಿಖ್ಯಾತ ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರ ಮೊಮ್ಮಕ್ಕಳು; ನನಗೆ ಗುರುಕಲ್ಪರಾದ ಪ್ರಸಿದ್ಧ ಸಂಸ್ಕೃತವಿದ್ವಾಂಸ ಕೆ. ಕೃಷ್ಣಮೂರ್ತಿಗಳ ಸಹಾಧ್ಯಾಯಿ; ಸಂಗೀತ-ಸಾಹಿತ್ಯಗಳನ್ನು ಚೆನ್ನಾಗಿ ಬಲ್ಲವರು; ಆಕಾಶವಾಣಿಯ ನಿವೃತ್ತ ನಿಲಯನಿರ್ದೇಶಕರು. ಇವರು ರಂಗನಾಥ್ ಅವರಿಗಿಂತ ಎರಡು ವರ್ಷ ಹಿರಿಯರು; ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅವರಿಗೆ ಸತೀರ್ಥ್ಯರು. ರಂಗನಾಥ್ ಅವರೇ ಹೇಳಿಕೊಂಡಂತೆ ಅವರು ತಮ್ಮ ಬಾಳಿನಲ್ಲಿ ಒಮ್ಮೆಯೂ ಜಗಳ ಮಾಡಿಕೊಳ್ಳದಿದ್ದ ಗೆಳೆಯರೆಂದರೆ ಎಸ್. ಕೃಷ್ಣಮೂರ್ತಿ ಒಬ್ಬರೇ. ಇವರನ್ನು ಭವನದ ಕಾರ್ಯಪ್ರಕಲ್ಪಗಳ ಉಸ್ತುವಾರಿಗೆಂದು ರಂಗನಾಥ್ ಅವರೇ ಕರೆಸಿಕೊಂಡಿದ್ದರು. ಜಯನಗರದಲ್ಲಿ ಇಬ್ಬರ ಮನೆಗಳೂ ಹತ್ತಿರ; ಮನಸ್ಸಂತೂ ಮತ್ತೂ ಹತ್ತಿರ. ವಿದ್ಯಾಭವನಕ್ಕೆ ಒಟ್ಟಿಗೆ ಬಂದು ಹೋಗುತ್ತಿದ್ದರು.
ಎಸ್. ಕೃಷ್ಣಮೂರ್ತಿಗಳು ತಮ್ಮ ತಾತಂದಿರನ್ನು ಕುರಿತು ‘ವಾಗ್ಗೇಯಕಾರ ವಾಸುದೇವಾಚಾರ್ಯ’ ಎಂಬ ಸೊಗಸಾದ ಜೀವನಚರಿತ್ರೆ ಬರೆದದ್ದಲ್ಲದೆ ‘ಸಂಗೀತಕಲಾನಿಧಿ’ (ಮದರಾಸ್ ಮ್ಯೂಸಿಕ್ ಅಕಾಡೆಮಿಯ ‘ಸಂಗೀತಕಲಾನಿಧಿ’ ಪ್ರಶಸ್ತಿ ಗಳಿಸಿದ ವಾಸುದೇವಾಚಾರ್ಯ, ರಾಳ್ಲಪಲ್ಲಿ ಅನಂತಕೃಷ್ಣಶರ್ಮಾ, ಟಿ. ಚೌಡಯ್ಯ, ದೊರೆಸ್ವಾಮಿ ಅಯ್ಯಂಗಾರ್ ಮತ್ತು ಆರ್. ಕೆ. ಶ್ರೀಕಂಠನ್ ಅವರನ್ನು ಪರಿಚಯಿಸುವ ಕೃತಿ), ‘ಹೃನ್ಮನದೀಪ್ತಿ’, ‘ಸಂಗೀತ ಸಮಯ’, ‘ಸಂಗೀತ ಸರಿತಾ’ ಮೊದಲಾದ ಗ್ರಂಥಗಳನ್ನು ರಚಿಸಿದ್ದರು. ವಾಸುದೇವಾಚಾರ್ಯರ ‘ನಾ ಕಂಡ ಕಲಾವಿದರು’ ಎಂಬ ಪುಸ್ತಕವನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದರು. ಕೃಷ್ಣಮೂರ್ತಿಗಳ ಭಾಷೆ, ಕಥನಶೈಲಿ ಮತ್ತು ವಿಷಯಸಮೃದ್ಧಿ ಮೆಚ್ಚುವಂಥದ್ದು. ಸಂಸ್ಕೃತಿ, ಸರಸತೆ ಮತ್ತು ವಿನೋದಗಳು ಅಲ್ಲಿ ಶ್ರುತಿ-ಲಯ-ಭಾವಗಳ ಹಾಗೆ ಓತ-ಪ್ರೋತವಾಗಿವೆ.
ರಂಗನಾಥ್ ಅವರ ಕೈಬರೆಹ ಬ್ರಹ್ಮಲಿಪಿಯಾದರೆ ಎಸ್.ಕೆ.ಎಮ್. ಅವರದು ಮುಕ್ತಾಫಲಗಳನ್ನು ಹೋಲುತ್ತದೆ. ಸಂಗೀತದ ಕಾರ್ಯಾಗಾರಗಳನ್ನು ನಡಸುವಾಗ ಶಿಬಿರಾರ್ಥಿಗಳಿಗೆ ಕೊಡಬೇಕಿರುವ ವಿವಿಧ ಕೃತಿಗಳ ಮಾತು-ಧಾತುಗಳನ್ನು ಕೃಷ್ಣಮೂರ್ತಿ ಸ್ಫುಟಸುಂದರವಾಗಿ ಬರೆದು ಜೆರಾಕ್ಸ್ ಮಾಡಿಸಿ ಒದಗಿಸುತ್ತಿದ್ದ ಪರಿ ಅವಿಸ್ಮರಣೀಯ. ಅವರ ಸಂಗೀತಸಂಯೋಜನೆಯ ಶಿಸ್ತು ಕೂಡ ಮೆಚ್ಚುವಂಥದ್ದು. ಮೈಸೂರು ಅರಮನೆಯ ವಾದ್ಯವೃಂದಕ್ಕೆ ಅವರು ಬಾಲ್ಯದಿಂದ ಸದಸ್ಯರು. ಆಗೆಲ್ಲ ತುಂಬ ಜನಪ್ರಿಯವಾಗಿದ್ದ ಜಲತರಂಗ್ ವಾದ್ಯವನ್ನು ನುಡಿಸುವುದರಲ್ಲಿ ಬಲ್ಲಿದರು.
ಭವನ ಇವರ ನೇತೃತ್ವದಲ್ಲಿ ಐವತ್ತಕ್ಕೂ ಹೆಚ್ಚು ದನಿಸುರುಳಿಗಳನ್ನು ಹೊರತಂದಿತು. ಆ ಕಾಲಕ್ಕೆ ಇದೊಂದು ಸ್ವಾಗತಾರ್ಹವಾದ ಸಾಂಸ್ಕೃತಿಕ ಕ್ರಾಂತಿ. ಈ ದನಿಸುರುಳಿಗಳೆಲ್ಲ ವೇದ, ಉಪನಿಷತ್ತು, ಷೋಡಶ ಸಂಸ್ಕಾರಗಳು, ಬಾಲಸ್ತೋತ್ರಮಾಲಿಕೆ, ಬಗೆಬಗೆಯ ದೇವತಾಸ್ತುತಿಗಳು, ಮಹಾಕವಿಗಳ ಸೊಗಸಾದ ಸೂಕ್ತಿಗಳ ಸಂಚಯ, ನೀತಿಪದ್ಯಗಳು, ವಾಗ್ಗೇಯಕಾರರ ರಚನೆಗಳಂಥ ಮೌಲಿಕವಾದ ಹೂರಣವನ್ನು ಹೊಂದಿದ್ದವು. ಮೂಲವನ್ನು ತಪ್ಪಿಲ್ಲದೆ, ಇಂಪಾಗಿ ಹಾಡಿಸುವುದಲ್ಲದೆ ಅದರ ತಿಳಿಯಾದ ಕನ್ನಡ ಮತ್ತು ಇಂಗ್ಲಿಷ್ ತಾತ್ಪರ್ಯವನ್ನೂ ನೀಡುತ್ತಿದ್ದರು. ಇಲ್ಲಿಯ ಗಾನಕ್ಕೆ ಪ್ರಸಿದ್ಧ ಸಂಗೀತಕೋವಿದರಾದ ಎಂ. ಎಸ್. ಶೀಲಾ, ನಾಗವಲ್ಲಿ ನಾಗರಾಜ್, ರತ್ನಮಾಲಾ ಪ್ರಕಾಶ್, ಮಾಲತಿ ಶರ್ಮಾ, ಎಸ್. ಶಂಕರ್, ಪಿ. ಶಶಿಧರ್ ಮುಂತಾದವರು ತಮ್ಮ ದನಿಗಳನ್ನು ನೀಡಿದ್ದರು. ವಿವರಣೆಯನ್ನೆಲ್ಲ ಹೆಚ್ಚಾಗಿ ರಂಗನಾಥ್ ಅವರೇ ತಮ್ಮ ಅನನ್ಯಧ್ವನಿಯಲ್ಲಿ ಹೊಮ್ಮಿಸುತ್ತಿದ್ದರು. ಕೆಲವೊಮ್ಮೆ ವನಮಾಲಾ ವಿಶ್ವನಾಥ್ ಅವರು ದನಿಗೂಡಿಸಿದ್ದುಂಟು. ಇವನ್ನೆಲ್ಲ ನನ್ನ ನೆನಪಿನಿಂದ ಬರೆಯುತ್ತಿರುವ ಕಾರಣ ಒಂದೆರಡು ಹೆಸರುಗಳು ಹೆಚ್ಚು-ಕಡಮೆಯಾಗಿರಬಹುದು. ಇನ್ನುಳಿದಂತೆ ಇಲ್ಲಿಯ ಸಾಹಿತ್ಯವನ್ನು ಸಂಗ್ರಹಿಸಿ ವಿವರಣೆ-ತಾತ್ಪರ್ಯಗಳನ್ನು ಅಣಿಗೊಳಿಸುವ ಕಾರ್ಯ ಎಂ. ಶಂಕರ್, ಟಿ. ಎನ್. ಪದ್ಮನಾಭನ್, ಬಿ. ಎಸ್. ರಾಮಕೃಷ್ಣರಾವ್ ಮುಂತಾದ ವಿದ್ವಾಂಸರ ಪಾಲಿಗೆ ಬರುತ್ತಿತ್ತು. ಇವೆಲ್ಲ ಒಂದು ಕುಟುಂಬದ ಕೆಲಸದಂತೆ ಹೆಚ್ಚಿನ ಅಬ್ಬರವಿಲ್ಲದೆ ನಯವಾಗಿ ನಡೆದುಹೋಗುತ್ತಿತ್ತು; ವೇಗವಾಗಿಯೂ ಸಾಗುತ್ತಿತ್ತು. ಎಸ್.ಕೆ.ಎಮ್. ಅವರು ಇವೆಲ್ಲಕ್ಕೂ ಸೂತ್ರಧಾರರಲ್ಲದೆ ಕೆಲವೊಮ್ಮೆ ವಿಷಯಸಂಗ್ರಾಹಕರೂ ಆಗಿರುತ್ತಿದ್ದರು. ಸಂಗೀತಸಂಯೋಜನೆಯಂತೂ ಸಂಪೂರ್ಣವಾಗಿ ಅವರದೇ. ಆಗೀಗ ಅನುವಾದ-ಕಂಠದಾನಗಳನ್ನೂ ಮಾಡುತ್ತಿದ್ದರು. ಮುಖ್ಯವಾಗಿ ಈ ದನಿಸುರುಳಿಗಳಲ್ಲಿ ಇದ್ದ ಮಾಹಿತಿ ಎಂದಿಗೂ ನಚ್ಚುವಂಥದ್ದು; ಅಲ್ಲಿಯ ಸಂಗೀತ ಇಂದಿಗೂ ಸಂತೋಷ ತರಿಸುವಂಥದ್ದು.
ಪ್ರತಿದಿನ ಸಂಜೆ ನಾಲ್ಕರ ಹೊತ್ತಿಗೆ ಎಚ್.ಕೆ.ಆರ್. ಮತ್ತು ಎಸ್.ಕೆ.ಎಮ್. ಭವನಕ್ಕೆ ಬಸ್ಸಿನಲ್ಲಿ ಬರುತ್ತಿದ್ದರು. ಯಾವಾಗಲೋ ಕೆಲವೊಮ್ಮೆ ರಂಗನಾಥ್ ತಮ್ಮ ಕಾರನ್ನು ಬಳಸುತ್ತಿದ್ದರು. ಅವರ ಕಣ್ಣಿನ ಸಮಸ್ಯೆ ಇರುಳಿನಲ್ಲಿ ಡ್ರೈವ್ ಮಾಡುವುದಕ್ಕೆ ತೊಂದರೆ ಕೊಡುತ್ತಿತ್ತು. ಎಷ್ಟೋ ಬಾರಿ ಇವರಿಬ್ಬರಿಗೆ ಪದ್ಮನಾಭನ್ ಜೊತೆಯಾಗುತ್ತಿದರು. ಇವರೆಲ್ಲ ಪರಸ್ಪರ ಗೇಲಿ-ವಿನೋದಗಳಿಗೆ ತೊಡಗುವುದಲ್ಲದೆ ಭವನದ ಸಿಬ್ಬಂದಿ, ಅತಿಥಿ, ಅಭ್ಯಾಗಗತರನ್ನೂ ಈ ನಲವಿನ ಸುಳಿಯೊಳಗೆ ಸೆಳೆದುಕೊಳ್ಳುತ್ತಿದ್ದರು. ಎಸ್.ಕೆ.ಎಮ್. ಅವರ ವಿನೋದಕ್ಕೆ ಸಿಲುಕದ ವಸ್ತುವೇ ಇಲ್ಲವೆಂದರೆ ಅತಿಶಯವಲ್ಲ.
ಭವನದ ಭಾಷಣ-ಸಂಗೀತಕಾರ್ಯಕ್ರಮಗಳನ್ನೆಲ್ಲ ಧ್ವನಿಮುದ್ರಿಸುವ ವ್ಯವಸ್ಥೆಯಿತ್ತು. ಹೆಚ್ಚಿನ ಕಾರ್ಯಕ್ರಮಗಳನ್ನು ಛಾಯಾಚಿತ್ರಗಳ ಮೂಲಕ ದಾಖಲಿಸುವ ಅನುಕೂಲವೂ ಇದ್ದಿತು. ಇವೆಲ್ಲ ಇಂದಿಗೂ ಎಲ್ಲ ಕಡೆ ಇಲ್ಲದ ಸವಲತ್ತುಗಳು. ದುರ್ದೈವವೆಂದರೆ ಅರಿವು-ನಲವುಗಳ ಇಷ್ಟು ದೊಡ್ಡ ಸಂಪನ್ಮೂಲ ಇಂದು ಉಳಿಯದೆ ಹೋಗಿದೆ! ಎನ್. ಟಿ. ಶ್ರೀನಿವಾಸ ಅಯ್ಯಂಗಾರ್, ಕೆ. ಕೃಷ್ಣಮೂರ್ತಿ, ಎನ್. ರಂಗನಾಥಶರ್ಮಾ, ಎನ್. ಎಸ್. ಅನಂತರಂಗಾಚಾರ್ಯ, ಎಲ್. ಎಸ್. ಶೇಷಗಿರಿ ರಾವ್ ಮುಂತಾದ ಎಷ್ಟೋ ವಿದ್ವಾಂಸರ ಅಮೋಘವಾದ ವಿಚಾರಧಾರೆ ಅವರ ದನಿಯ ರೂಪದಲ್ಲಿ ನಮಗಿಂದು ದಕ್ಕದೆ ಹೋಗಿರುವುದು ದೊಡ್ಡ ನಷ್ಟ. ಈ ನಷ್ಟಕ್ಕೆ ಕಾರಣ ರಂಗನಾಥ್ ಅವರ ಬಳಿಕ ಭವನದ ಕಾರ್ಯಸೂತ್ರಗಳನ್ನು ಕೈಗೆತ್ತಿಕೊಂಡವರಲ್ಲಿ ದೂರದೃಷ್ಟಿ ಇಲ್ಲದಿದ್ದುದೇ.
ಈ ವಿಷಾದನೀಯ ಸಂಗತಿ ಹಾಗಿರಲಿ. ವಿನೋದಕ್ಕೆ ಮತ್ತೆ ಬರೋಣ. ಹೀಗೆ ದಾಖಲೆ ಮಾಡಿದ ಛಾಯಾಚಿತ್ರಗಳ ಪೈಕಿ ವಿಶಿಷ್ಟವಾದ ಅನೇಕ ಚಿತ್ರಗಳನ್ನು ಭವನದ ಕಛೇರಿಯಲ್ಲೊಂದೆಡೆ ಪ್ರದರ್ಶಿಸಲಾಗಿತ್ತು. ಇದು ಕೃಷ್ಣಮೂರ್ತಿ ಅವರ ಆಸನಕ್ಕೆ ನೇರ ಎದುರಿಗಿತ್ತು. ಅವರು ಅಲ್ಲಿಯ ಪ್ರತಿಯೊಂದು ಚಿತ್ರವನ್ನೂ ಕಂಡು ಅದರೊಳಗೆ ಅಡಗಿರುವ ಭಾವಕ್ಕೆ ತಮ್ಮದಾದ ವಿನೋದವ್ಯಾಖ್ಯಾನಗಳನ್ನು ಹೊಸಹೊಸದಾಗಿ ಕೊಡುತ್ತಿದ್ದರು. ಮಾತ್ರವಲ್ಲ, ಆ ಚಿತ್ರಗಳನ್ನು ತಮ್ಮ ವಿಕಟವ್ಯಾಖ್ಯೆಗೆ ಅನುವಾಗುವಂತೆ ಜೋಡಿಸಿ ಇನ್ನಷ್ಟು ನಗೆಯುಕ್ಕಿಸುತ್ತಿದ್ದರು!
ಅದೊಮ್ಮೆ ಯತಿಗಳೊಬ್ಬರು ಉಪನ್ಯಾಸ ಮಾಡುತ್ತ ಕುಕ್ಕರಗಾಲಿನಲ್ಲಿ ಕುಳಿತು ಮಂಡೆ ಕೆರೆದುಕೊಳ್ಳುತ್ತಿರುವ ವಿಚಿತ್ರಭಂಗಿಯನ್ನು ಛಾಯಾಚಿತ್ರ ದಾಖಲಿಸಿದ್ದರೆ ಅದರ ಪಕ್ಕ ಅರ್ಥಶಾಸ್ತ್ರಜ್ಞ ವಿ. ಕೆ. ಆರ್. ವಿ. ರಾಯರು ಬಿರುಸಿನಿಂದ ಕೈಚಾಚಿದ ಚಿತ್ರವನ್ನು ಹೊಂದಿಸಿ ಅವೆರಡಕ್ಕೆ ಎದುರಾಗುವಂತೆ ಮಾಸ್ಟರ್ ಹಿರಣ್ಣಯ್ಯನವರು ಗಹಗಹಿಸಿ ನಗುವ ಚಿತ್ರವನ್ನು ಸಿಕ್ಕಿಸಿದ್ದರು! ಬಳಿಕ ಹತ್ತಿರವಿದ್ದ ಆತ್ಮೀಯರಿಗೆ ಅದನ್ನು ತೋರಿಸಿ ‘ಇದಕ್ಕೊಂದು ಸಮನ್ವಯ ಕಲ್ಪಿಸಿ’ ಎಂದು ಸವಾಲು ಹಾಕುತ್ತಿದ್ದರು. ನನ್ನನ್ನೇ ಎಷ್ಟೋ ಬಾರಿ ಕೇಳಿದ್ದುಂಟು: ‘ಇವನ್ನೆಲ್ಲ ಹೊಂದಿಸಿ ನೀವು ಆಶುಕವಿತೆ ಹೇಳಿ’ ಎಂದು.
ಗಾಯಕಿಯೊಬ್ಬರು ಹಾರ್ಮೋನಿಯಂ ನುಡಿಸುತ್ತಿರುವ ಭಂಗಿಯಿಂದಲೂ ಅವರ ಮುಖದ ಮೇಲೆ ಕಾಣಿಸುತ್ತಿದ್ದ ಆತಂಕದ ಚಹರೆಯಿಂದಲೂ ಎಸ್. ಕೃಷ್ಣಮೂರ್ತಿ ಭಯಾನಕವಾದ ಥಿಯರಿಯನ್ನೇ ಹುಟ್ಟುಹಾಕುತ್ತಿದ್ದರು: “ಅದು ಹಾರ್ಮೋನಿಯಂಗೆ ಗಾಳಿ ತುಂಬುತ್ತಿರುವ ಹಾಗೇ ತಮ್ಮ ಒಡಲಿಂದ ಗಾಳಿ ಹೊರಗೆ ತಳ್ಳುತ್ತಿರುವ ಸಂಕಟ!”
ಎಸ್. ಕೆ. ರಾಮಚಂದ್ರರಾಯರು ಎರಡು ಕೈಗಳನ್ನೂ ಮೊಗ್ಗಿನಂತೆ ಹಿಡಿದ ಚಿತ್ರದ ಎದುರು ಡಾ|| ಶ್ರೀಕಂಠಯ್ಯ ಎಂಬ ಹಾಸ್ಯಭಾಷಣಕಾರರ ಮಾರುದ್ದ ಕೈಚಾಚಿದ ಚಿತ್ರವನ್ನು ಹೊಂದಿಸಿ, “ವಿಷಯ ಇಷ್ಟಿದ್ರೂ ಅಷ್ಟಾಗಿ ಮಾಡೋದೇ ಭಾಷಣಕಾರನ ಹೆಗ್ಗಳಿಕೆ!” ಎಂದು ನಗೆಯಾಡುತ್ತಿದ್ದರು.
ಕೋಮಲಾ ವರದನ್ ಎಂಬ ನರ್ತಕಿಯ ಭೀಕರವಾದ ನೃತ್ಯಭಂಗಿಯನ್ನು ಕಾಣಿಸಿ, “ಇದು ಅವರ ಚಿತ್ರವಲ್ಲ; ಅವರ ನೃತ್ಯವನ್ನು ನೋಡಿ ನೃತ್ಯಸರಸ್ವತಿಯೇ ಪಲಾಯನ ಮಾಡುತ್ತಿರುವ ಭಂಗಿ!” ಎಂದು ನಗೆಯಾಡುತ್ತಿದ್ದರು.
ಹೀಗೆ ಮತ್ತೊಬ್ಬರನ್ನು ಗೇಲಿ ಮಾಡಿ ನಗುವುದಲ್ಲದೆ ತಮ್ಮನ್ನೂ ತಮ್ಮ ಜೀವದ ಗೆಳೆಯ ರಂಗನಾಥ್ ಅವರನ್ನೂ ಗೇಲಿ ಮಾಡಿಕೊಳ್ಳುತ್ತಿದ್ದರು.
To be continued.