ಮತ್ತೊಮ್ಮೆ ರಾಯರೇ ವಿದ್ಯಾಭವನದಲ್ಲಿ ಶಾಕುಂತಲವನ್ನು ಕುರಿತು ಭಾಷಣ ಮಾಡಿದರು. ಈ ಕೃತಿಯ ವಿಷಯದಲ್ಲಿ ಪದ್ಮನಾಭನ್ ಅವರಿಗೆ ನಿರತಿಶಯವಾದ ಪ್ರೀತಿ. ಅದು ಯಾವ ಕಾರಣವೋ ನನಗೆ ತಿಳಿಯದು; ರಾಯರ ಮನೋಧರ್ಮ ಅಂದು ಕುದುರಿಕೊಂಡಿರಲಿಲ್ಲ. ಹೀಗಾಗಿ ಉಪನ್ಯಾಸ ಎಲ್ಲರಿಗೂ ಅರಕೆ ತಂದಿತು. ಕಡೆಗೆ ಪದ್ಮನಾಭನ್ ಅವರು ನಾಟಕದ ಭರತವಾಕ್ಯವನ್ನು ಕುರಿತು ಸ್ವಲ್ಪ ಬೆಳಕು ಚೆಲ್ಲಬೇಕೆಂದು ಕೇಳಿಕೊಂಡರು. ಶಾಕುಂತಲದ ಭರತವಾಕ್ಯ ಲೋಕಪ್ರಸಿದ್ಧವಷ್ಟೆ. ಅದರ ಸ್ವಾರಸ್ಯ ಬಹುಮುಖವಾದುದು; ನಮ್ಮನ್ನು ಅಂತರ್ಮುಖರನ್ನಾಗಿ ಮಾಡುವಂಥದ್ದು. ಆದರೆ ನಮ್ಮೆಲ್ಲರ ನಿರೀಕ್ಷೆಗೆ ಆಘಾತ ತರುವಂತೆ ರಾಯರು ಅವರ ವಿಶಿಷ್ಟ ಧ್ವನಿಯಲ್ಲಿ, “ವಿಶೇಷವೇನೂ ಇಲ್ಲ. ಮಳೆ-ಬೆಳೆ ಚೆನ್ನಾಗಿ ಆಗಲಿ ಅಂತ ಹೇಳಿದ್ದಾನೆ ಕವಿ, ಅಷ್ಟೇ” ಎಂದುಬಿಟ್ಟರು! ಇದನ್ನು ಕೇಳಿದ ಪದ್ಮನಾಭನ್ ಅವರಿಗೆ ಶೈತ್ಯೋಪಚಾರ ಮಾಡಲು ನಾವೆಲ್ಲ ಸಿದ್ಧರಾಗಬೇಕಾಯಿತು!
ಎಂಥ ಕಲಾವಿದನಿಗೂ ‘ಮೂಡ್’ ಎಂಬುದೊಂದು ಇರುವಂತೆ ಭಾಷಣಕಾರನಿಗೆ ಕೂಡ ಇರುತ್ತದೆ; ಭಾಷಣವೂ ಒಂದು ಕಲೆ ಎಂಬುದು ಅಂದು ನಾನು ಕಲಿತ ಪಾಠ. ರಾಯರ ಭಾಷಣ ಅಂಥ ಕಲೆ. ಅವರು ಅಂಥ ಕಲೆಗಾರರು.
ಇಪ್ಪತ್ತನೆಯ ಶತಾಬ್ದದ ಕನ್ನಡನಾಡಿನ ಸಂಸ್ಕೃತಕವಿ-ಪಂಡಿತರಲ್ಲಿ ಹೆಸರಾದವರು ಪಂಢರೀನಾಥಾಚಾರ್ಯ ಗಲಗಲಿಯವರು. ಅವರ ವಾಗ್ಗ್ಮಿತೆ ಅಸಾಧಾರಣ. ಒಮ್ಮೆ ಭವನದಲ್ಲಿ ಒಂದು ವಾರ ಸಂಸ್ಕೃತಸಾಹಿತ್ಯವನ್ನು ಕುರಿತು ಪ್ರವಚನ ಮಾಡಿದರು. ಆಗ ಅವರ ವಿನೋದಪ್ರಜ್ಞೆಯ ಪರಿಚಯವೂ ನಮಗಾಯಿತು. ವಿಜ್ಜಿಕೆಯನ್ನು ಅವರು ಪರಿಚಯಿಸಿದ್ದು ಹೀಗೆ: “ನಮ್ಮ ಕನ್ನಡದ ಹೆಣ್ಣುಮಕ್ಕಳ ಸಂಸ್ಕೃತ ಸರಸ್ವತಿಗೂ ನಾಚಕಿ ತರಸ್ತದ. ಸರಸ್ವತಿ ಭೆಳ್ಳಗ ಇರುವಾಕಿ ಅಂತ ಹೇಳೂದು ಖರೆ ಅಲ್ಲ. ಆಕೀಗೆ ಏನಾದ್ರೂ ತೊನ್ನು ಬಡದದೇನ್ರೀ, ಭೆಳ್ಳಗ ಇರೂದಕ್ಕ? ಛಂದದ ಚೆಂದುಳ್ಳಿ ಚೆಲುವಿ ಅಂದ್ರ ಅವಳು ನನ್ನ ಹಾಂಗ ಕಪ್ಪಗ ಇರ್ತಾಳ ಅಂತ ಕೆಚ್ಚಿಂದ ಹೇಳೂ ಹುಡುಗಿ ನಮ್ಮ ವಿಜ್ಜಿಕಿ.” ಈ ಉಪಕ್ರಮದ ಬಳಿಕ “ನೀಲೋತ್ಪಲದಲಶ್ಯಾಮಾಂ” ಎಂಬ ಪದ್ಯವನ್ನವರು ವಿವರಿಸಿದಾಗ ಅದಕ್ಕೆ ಬಂದ ಕಳೆಯೇ ಬೇರೆ!
ಹೀಗೆಯೇ ಶಾಕುಂತಲದ “ಗ್ರೀವಾಭಂಗಾಭಿರಾಮಂ” ಎಂಬ ಪದ್ಯವನ್ನು ವಿವರಿಸುತ್ತ ವೇದಿಕೆಯೆಲ್ಲ ಜಿಂಕೆಯಂತೆ ಸುಳಿದಾಡಿದರು. ತೌತನು ಹೇಳುವಂತೆ “ಪ್ರಯೋಗತ್ವಮ್ ಅನಾಪನ್ನೇ ಕಾವ್ಯೇ ನಾಸ್ವಾದಸಂಭವಃ” ಎಂಬುದು ಇಲ್ಲಿ ಸಾರ್ಥಕವಾಗಿತ್ತು.
ಗಲಗಲಿ ಅವರ ಪದ್ಯಗಾನಕ್ರಮವೂ ವಿಶಿಷ್ಟ. ಆ ಗಾನದಲ್ಲಿ ಛಂದಸ್ಸಿನ ಸೊಗಸು ಕಳೆದುಹೋಗುವುದೆಂದೂ ಹೀಗಾಗಿಯೇ ಹ್ರಸ್ವ-ದೀರ್ಘಸ್ವರಗಳ ಹದ ತಪ್ಪುವುದೆಂದೂ ಅನೇಕರ ಅಭಿಪ್ರಾಯ. ಇದನ್ನೊಪ್ಪಿಯೂ ಗಲಗಲಿಯವರ ಗಾನಮಾಧುರ್ಯಕ್ಕೆ ನಾನು ಸೋತುಹೋಗಿದ್ದೇನೆ. ಅವರನ್ನು ಕಂಡಾಗಲೆಲ್ಲ ಕೇಳಿ ಕೇಳಿ ಅವರಿಂದ ಪ್ರಾಸಾನುಪ್ರಾಸಗಳುಳ್ಳ ಶ್ಲೋಕಗಳನ್ನು ಹಾಡಿಸಿಕೊಂಡು ಹಿಗ್ಗುತ್ತಿದ್ದೆ.
ಒಮ್ಮೆ ಹಲವರು ವಿದ್ವಾಂಸರಿಂದ ಪಾಶ್ಚಾತ್ತ್ಯ ಸಾಹಿತ್ಯಶಿಖರಗಳ ಪರಿಚಯಾತ್ಮಕ ಭಾಷಣಮಾಲಿಕೆ ಏರ್ಪಾಟಾಗಿತ್ತು. ಶೇಕ್ಸ್ಪಿಯರನ್ನು ಕುರಿತು ನನ್ನ ವಿದ್ಯಾಗುರುಗಳಾದ ಎಲ್. ಎಸ್. ಶೇಷಗಿರಿರಾಯರು ಆಳವಾದ ಒಳನೋಟಗಳುಳ್ಳ ಉಪನ್ಯಾಸವನ್ನು ಮಾಡಿದರು. ಮರುದಿನವೇ ಮಿಲ್ಟನನನ್ನು ಕುರಿತು ಮೈಸೂರಿನ ಪ್ರಸಿದ್ಧ ವಿದ್ವಾಂಸರಾದ ಎಸ್. ಅನಂತನಾರಾಯಣ ಅವರು ಮಾತನಾಡಬೇಕಿತ್ತು. ಇವರ ‘ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ’ ಎಂಬ ಪ್ರೌಢಗ್ರಂಥ ಮತ್ತು ಲಾರಾ ಇಂಗಲ್ಸ್ ವೈಲ್ಡರಳ ಕಾದಂಬರಿಗಳ ಅನುವಾದಗಳನ್ನು ಓದಿ ಸಂತೋಷಿಸಿದ ನನಗೆ ಇವರ ನೇರವಾದ ಪರಿಚಯ ಮಾಡಿಕೊಳ್ಳುವ ಅವಕಾಶ ಒದಗುವುದೆಂಬ ನಿರೀಕ್ಷೆ ಇತ್ತು. ಆದರೆ ಅನಂತನಾರಾಯಣ ಅವರು ಸ್ವಲ್ಪ ಮಟ್ಟಿಗೆ ವಿಕ್ಷಿಪ್ತಚಿತ್ತರೆಂದು ಬಲ್ಲವರ ಅಂಬೋಣ. ಅಂದೂ ಹಾಗೆಯೇ ಆಯಿತು. ಸಂಜೆ ಉಪನ್ಯಾಸವೆಂದರೆ ಅಪರಾಹ್ಣದ ಹೊತ್ತಿಗೆ ತಾನು ಬರಲಾಗುವುದಿಲ್ಲದೆಂದು ಫೋನ್ ಮಾಡಿ ತಿಳಿಸಿದರು. ರಂಗನಾಥ್ ಅವರ ರಕ್ತದೊತ್ತಡ ಹೆಚ್ಚಿತು. ಅವರು ಸದಾ ಹೇಳುತ್ತಿದ್ದುದುಂಟು: “ಕಾರ್ಯಕ್ರಮ ನಡಸಿಕೊಡುವವರು ಹೊತ್ತಿಗೆ ಸರಿಯಾಗಿ ಬರದಿದ್ದರೆ ಪಾಲ್ಪಿಟೇಷನ್ಸ್ ಮೊದಲಾಗುತ್ತೆ!” ಎಂದು. ಅಂದಂತೂ ಕರುಳೇ ಬಾಯಿಗೆ ಬರುವಂಥ ಒದ್ದಾಟ. ನಾಲ್ಕು ಗಂಟೆಯ ಹೊತ್ತಿಗೆ ಶೇಷಗಿರಿರಾಯರನ್ನು ವಿನಂತಿಸಿಕೊಂಡರು. ಅವರು ದೊಡ್ಡ ಮನಸ್ಸಿನಿಂದ ಒಪ್ಪಿ ಬಂದರು. ಅಂದು ನಾನು ಕೇಳಿದ ಭಾಷಣ ಪ್ರಾಯಶಃ ಎಲ್. ಎಸ್. ಎಸ್. ಅವರ ಅತ್ಯುತ್ತಮ ಉಪನ್ಯಾಸಗಳಲ್ಲಿ ಅಗ್ರಗಣ್ಯ. ಮಿಲ್ಟನ್ನನಂಥ ಪ್ರೌಢಕವಿಯನ್ನು ಕುರಿತು ಯಾವುದೇ ಪೂರ್ವಸಿದ್ಧತೆಯಿಲ್ಲದೆ ಪಂಡಿತರೂ ಮೆಚ್ಚುವಂಥ ಭಾಷಣವನ್ನು ಮಾಡುವುದು ಸ್ವಲ್ಪದ ಸಾಮರ್ಥ್ಯವಲ್ಲ. ವಂದನಾರ್ಪಣೆ ಮಾಡಲು ಮುಂದಾದ ರಂಗನಾಥ್ ಅವರ ಮುಖದಲ್ಲಿ ದಿಗ್ವಿಜಯ ಮಾಡಿದ ಕಳೆ. ಅವರ ಮೊದಲ ವಾಕ್ಯವೇ “I first profusely thank Prof. Ananthanarayana for not coming” ಎಂದಾಗಿತ್ತು!
ರಂಗನಾಥ್ ಅವರು ಗಾಂಧಿ ಕೇಂದ್ರಕ್ಕಾಗಿ ಹಲವು ಪ್ರಕಲ್ಪಗಳನ್ನು ಕೈಗೊಂಡಿದ್ದರು. ಅವುಗಳಲ್ಲೊಂದು ‘ಯುವಜನತೆಗಾಗಿ ಸಂಸ್ಕೃತವಾಙ್ಮಯ’ ಎಂಬ ಹತ್ತು ಸಂಪುಟಗಳ ಗ್ರಂಥಮಾಲಿಕೆಯ ಪ್ರಕಟನೆ. ಇದಕ್ಕಾಗಿ ಹಿರಿಯ-ಕಿರಿಯ ವಿದ್ವಾಂಸರಿಂದ ಒಳ್ಳೆಯ ಪುಸ್ತಕಗಳನ್ನು ಪಟ್ಟುಹಿಡಿದು ಬರೆಸಿದರು. ನನ್ನ ಪಾಲಿಗೆ ಅಲಂಕಾರಶಾಸ್ತ್ರದ ಪರಿಚಯ ಬಂದಿತ್ತು. ನೂರು-ನೂರೈವತ್ತು ಪುಟಗಳ ಪರಿಮಿತಿಯೊಳಗೆ ವಿಷಯಕ್ಕೆ ನ್ಯಾಯವನ್ನು ಸಲ್ಲಿಸುವುದು ಅಸಾಧ್ಯವೆಂದೇ ನನಗೆ ತೋರಿತ್ತು. ಆದರೆ ರಂಗನಾಥ್ ಬಿಡಬೇಕಲ್ಲ! ಹೇಗೋ ಅದು ಸಾಗಿತು. ಆದರೆ ನನಗೆ ತುಂಬ ಸ್ಮರಣೀಯವಾಗಿರುವುದು ಈ ಹತ್ತು ಹೊತ್ತಗೆಗಳ ಲೋಕಾರ್ಪಣದಂದು ಎಸ್. ಕೆ. ರಾಮಚಂದ್ರರಾಯರು ಕೇವಲ ಮೂವತ್ತು-ನಲವತ್ತು ನಿಮಿಷಗಳ ಅವಧಿಯೊಳಗೆ ಅಷ್ಟೂ ಪುಸ್ತಕಗಳ ಪರಿಚಯವನ್ನು ಮಾಡಿಕೊಟ್ಟ ವಿಧಾನ. ಆ ಅಡಕ, ಆ ಒಳನೋಟ, ಆ ತಿಳಿನುಡಿ ಯಾರಿಗೂ ಎಟುಕಲಾಗದ ಎತ್ತರವೆಂದು ನನಗೆ ಇಂದೂ ತೋರಿದೆ.
ಭವನ ಮತ್ತು ರಂಗನಾಥ್ ಅವರ ಕಾರಣದಿಂದ ನನಗೆ ಹಿರಿಯರನೇಕರನ್ನು ಕಾಣುವ, ಅವರಿಗೆ ನನ್ನ ವಂದನೆ ಸಲ್ಲಿಸುವ ಪುಣ್ಯಾವಕಾಶ ಲಭಿಸಿತು. ಅಂಥ ಹತ್ತಾರು ಸಂದರ್ಭಗಳಲ್ಲಿ ತುಂಬ ಸ್ಮರಣೀಯವಾದ ಎರಡನ್ನು ನೆನೆಯಬಹುದು.
ನಾದಯೋಗಿನಿಯೇ ಆದ ಶ್ರೀಮತಿ ಎಂ. ಎಸ್. ಸುಬ್ಬಲಕ್ಷ್ಮಿ ಅವರ ಎಪ್ಪತ್ತನೆಯ ಹುಟ್ಟುಹಬ್ಬ ಭವನದಲ್ಲಿ ಸಾಂಸ್ಕೃತಿಕ ವೈಭವದೊಡನೆ ಸಾಗಿತು. ಇದಕ್ಕೆ ಅವರನ್ನು ಒಪ್ಪಿಸಿದ್ದು ಭವನದ ಅಂದಿನ ಕಾರ್ಯದರ್ಶಿ ವೆಂಕಟಾಚಲಂ ಅವರು. ಆಗ ಎಂ. ಎಸ್. ಅವರಿಗೆ ಪಾದಾಭಿವಂದನೆ ಸಲ್ಲಿಸಿದ ಧನ್ಯತೆ ನನ್ನದು.
ರಂಗನಾಥ್ ಅವರ ‘ನೆನಪಿನ ನಂದನ’ ಪುಸ್ತಕದ ಲೋಕಾರ್ಪಣದಂದು ನಮ್ಮ ನಾಡಿನ ಅನೇಕ ಹಿರಿಯರು ಆಗಮಿಸಿದ್ದರು. ಆ ದಿನ ಎ. ಎನ್. ಮೂರ್ತಿರಾಯರ ಪರಿಚಯ ನನಗಾಗಿ ಮತ್ತೆ ಎರಡು-ಮೂರು ಬಾರಿ ಕಾಣುವ ಅವಕಾಶ ಬಂದಿತು. ಮೂರ್ತಿರಾಯರ ಸ್ನೇಹ, ಸಲುಗೆ, ವಿನೋದ, ಸರಸತೆಗಳ ಅರಿವು ಯಾರಿಗೆ ತಾನೇ ಇಲ್ಲ? ಅವನ್ನು ಸ್ವಲ್ಪ ಮಟ್ಟಿಗಾದರೂ ಸಾಕ್ಷಾತ್ತಾಗಿ ಸವಿದ ಭಾಗ್ಯ ನನ್ನದು. ಆ ಹೊತ್ತಿಗೆ ಪ್ರಸಿದ್ಧವಾಗಿದ್ದ ಅವರ ‘ದೇವರು’ ಪುಸ್ತಕ ನನಗೆ ತಗಾದೆಯ ವಸ್ತುವಾಗಿತ್ತು. ಅದನ್ನು ಪ್ರಸ್ತಾವಿಸಿಯೇ ರಂಗನಾಥ್ ನನ್ನನ್ನು ಪರಿಚಯಿಸಿದರು: “Here is Ganesh who wants to fight with you on this book.” ಇಂಥ ಕುಚೋದ್ಯ ಮಾಡುವುದರಲ್ಲಿ ರಂಗನಾಥ್ ಎತ್ತಿದಕೈ ತಾನೆ! ಆದರೆ ಮೂರ್ತಿರಾಯರು ಸ್ವಲ್ಪವೂ ಬೇಸರಿಸಲಿಲ್ಲ. ನಗುನಗುತ್ತಲೇ “Come on, my dear young man, be brutal with me! I am delighted to fight with you and disprove my age!” ಎಂದು ನಮಿಸಲಿರುವ ನನ್ನನ್ನು ಅಪ್ಪಿ ಹೆಗಲ ಮೇಲೆ ಕೈಹಾಕಿದರು. ಅವರಿಗೆ ನನ್ನ ಸಂಸ್ಕೃತಕವಿತೆ ಮತ್ತು ಅವಧಾನಗಳ ವಿಷಯವಾಗಿ ಅ. ರಾ. ಮಿತ್ರ ಅವರು ತಿಳಿಸಿದ್ದ ಕಾರಣ ಮಾತು ಮೊದಲು ಅತ್ತ ತಿರುಗಿತು; ’ದೇವರು’ ಪುಸ್ತಕದ ಮೇಲೆ ನಾನೆಷ್ಟು ಕೋಟಿಗಳನ್ನು ಏರಿಸಿದರೂ ಅವರು ಮೊಂಡುತನದಿಂದ ಕಿವುಡುಗೇಳುತ್ತ ಸಾಹಿತ್ಯದತ್ತಲೇ ನನ್ನನ್ನು ಎಳೆಯುತ್ತಿದ್ದರು.
ಗಾಂಧಿ ಕೇಂದ್ರದ ಮತ್ತೊಂದು ಪ್ರಕಟನೆ ‘ಸುಭಾಷಿತಸಂಪುಟ’. ಇದನ್ನು ನಾನೇ ಸಜ್ಜುಗೊಳಿಸಿದ್ದೆ. ಸುಮಾರು ಮುನ್ನೂರು ಸಂಸ್ಕೃತಸುಭಾಷಿತಗಳನ್ನು ಹಲವಾರು ಮೂಲಗಳಿಂದ ಸಂಗ್ರಹಿಸಿ ಇಂಗ್ಲಿಷ್ ಅನುವಾದ ಹವಣಿಸಿದ್ದೆ. ಎಂದಿನಂತೆ ಆಯ್ಕೆ-ಅನುವಾದಗಳ ಪರಾಮರ್ಶೆಗೆ ರಂಗನಾಥ್ ಕುಳಿತರು. ಅಲ್ಲೊಂದು ಶ್ಲೋಕ ಅವರ ಮನಸ್ಸನ್ನು ಸೆಳೆಯಿತು:
ಮುಖಂ ಪದ್ಮದಲಾಕಾರಂ ವಾಣೀ ಚಂದನಶೀತಲಾ |
ಹೃದಯಂ ಕರ್ತರೀತುಲ್ಯಂ ತ್ರಿವಿಧಂ ಧೂರ್ತಲಕ್ಷಣಮ್ ||
(ಕಮಲದಂತೆ ಅರಳಿದ ಮುಖ, ಚಂದನದಂತೆ ತಂಪಾದ ಮಾತು, ಆದರೆ ಕತ್ತರಿಯಂತೆ ಹರಿತವಾದ ಹೃದಯ - ಇವು ಧೂರ್ತನ ಲಕ್ಷಣಗಳು.)
ಇದನ್ನು ಕಂಡೊಡನೆಯೇ ಅವರು ತಮ್ಮ ಕೈಬರೆಹದಲ್ಲಿ ಮತ್ತೆ ಬರೆದು ಭವನಕ್ಕೆ ಆಗಷ್ಟೇ ಇಂಗ್ಲೆಂಡಿನಿಂದ ಬಂದಿದ್ದ ಮತ್ತೂರು ಕೃಷ್ಣಮೂರ್ತಿಗಳಿಗೆ ಕಳುಹಿಸಿಕೊಟ್ಟರು. ಆ ಚೀಟಿಯಲ್ಲಿ ಮತ್ತೂ ಒಂದು ಒಕ್ಕಣೆ ಇದ್ದಿತು: “Please find yourself here!”
ತುಂಬ ಘನಿಷ್ಠವಾಗಿದ್ದ ಅವರಿಬ್ಬರ ಮೈತ್ರಿ ಆ ಹೊತ್ತಿಗೆ ಬಿರುಕು ಬಿಟ್ಟದ್ದು ನಮ್ಮ ಅರಿವಿಗೆ ಬಂದಿತ್ತು.
ನಾನು ಭವನದಿಂದ ಹೊರಬಿದ್ದ ಬಳಿಕವೂ ಅದರ ನಂಟು ಬೇರೆ ಬೇರೆ ರೀತಿಯಲ್ಲಿ ಒದಗುತ್ತಲೇ ಇತ್ತು. ಮುಖ್ಯವಾಗಿ ರಂಗನಾಥ್ ಅವರ ಮೈತ್ರಿ ಸದಾ ಅಕುಂಠಿತವಾಗಿ ಸಾಗಿತ್ತು. ನನ್ನ ಮನೆಗೆ ಫೋನಿನ ವ್ಯವಸ್ಥೆ ಬಂದ ಬಳಿಕವಂತೂ ಆಗೀಗ ದೂರವಾಣಿಯ ಮೂಲಕ ಯೋಗ-ಕ್ಷೇಮ ವಿಚಾರಿಸುತ್ತಲೇ ಇದ್ದರು. ವಿಶೇಷತಃ ವಿಜಯಕರ್ನಾಟಕದಲ್ಲಿ ಅಂಕಣ ಬರೆಯುತ್ತಿದ್ದಾಗ ಅವರ ಮೆಚ್ಚುಗೆಗೆ ಪಾತ್ರವಾದ ಬರೆಹಗಳ ಬಗೆಗೆ ಬೆಳ್ಳಂಬೆಳಗ್ಗೆಯೇ ಫೋನಿಸುತ್ತಿದ್ದರು. ಇಂಥ ಒಂದು ಮೆಚ್ಚುಗೆ ಕುಮಾರವ್ಯಾಸನನ್ನು ಕುರಿತ ಒಂದು ಲೇಖನಕ್ಕೆ ಮಿಗಿಲಾಗಿ ಬಂದಿತ್ತು. ಈ ಘಟನೆಯಾದ ಒಂದೆರಡು ದಿನಗಳಿಗೇ ಅವರು ಇಲ್ಲವಾಗಿದ್ದರು. ನನ್ನ ಪಾಲಿಗೆ ಉಳಿದದ್ದು ಅವರ ನಸುಬೆಚ್ಚನೆಯ ಮೆಚ್ಚುಗೆಯ ಬಿಚ್ಚುಮಾತು, ಭವನದಲ್ಲಿ ನಾನಿದ್ದ ಐದು ವರ್ಷಗಳ ಸವಿನೆನಪಿನ ಬಾಳ ಬುತ್ತಿ.
ಫಲಶ್ರುತಿ
ಮಹನೀಯರು ಮಹೋದ್ದೇಶಗಳಿಂದ ಕಟ್ಟಿದ ಮಹಾಸಂಸ್ಥೆಗಳಲ್ಲಿ ದುಡಿಯುವ ಅವಕಾಶ ನಿಜಕ್ಕೂ ದೊಡ್ಡದು. ಆದರೆ ನಮ್ಮ ಮನಸ್ಸು-ದೇಹಗಳಿಗಿರುವಂತೆಯೇ ಎಂಥ ಸಂಸ್ಥೆಗಳಿಗೂ ಇತಿ-ಮಿತಿಗಳಿರುತ್ತವೆ, ಓರೆ-ಕೋರೆಗಳಿರುತ್ತವೆ. ಹೇಗೆ ನಾವು ನಮ್ಮ ಮನಸ್ಸು-ದೇಹಗಳಿಗೆ ಅಂಟಿಕೊಂಡು ಬಾಳುತ್ತಲೇ ಅವನ್ನು ಮೀರಿದ ಒಳಿತನ್ನು ಕಾಣಲು ಹೆಣಗುವೆವೋ ಹಾಗೆಯೇ ಸಂಸ್ಥೆಗಳಿಗೂ ಸೇರಿ ಅವನ್ನು ಮೀರುವ ಯತ್ನ ಮಾಡಬೇಕು. ಇದು ನನಗೆ ಭವನದಲ್ಲಿದ್ದ ಐದು ವರ್ಷಗಳು ಕಲಿಸಿದ ಪಾಠ. ಆದರೆ ನಾನು ಕಲಿತೆನೇ ಇಲ್ಲವೇ ಎಂಬುದು ನನಗೇ ತಿಳಿದಿಲ್ಲ. ಇಲ್ಲಿ ನಾನು ಕೆಲವೊಂದು ಅನುಭವದ ನೆನಪುಗಳನ್ನು ಮಾತ್ರ ಹಂಚಿಕೊಂಡಿದ್ದೇನೆ. ಇದರ ಆಚೆಯೂ ಇರುವ ಮತ್ತೆಷ್ಟೋ ಸಂಗತಿಗಳನ್ನು ಮುಂದೆ ಎಂದಾದರೂ ವಿಸ್ತರಿಸಿ ಬರೆಯುವ ಅವಕಾಶ ಬಂದೀತೆಂದು ಭಾವಿಸುತ್ತೇನೆ. ಇಡಿಯ ಈ ಬರೆಹದಲ್ಲಿ ಅನಿವಾರ್ಯವಾಗಿ ನುಸುಳಿ ಬಂದಿರುವ ಸ್ವಂತದ ಪ್ರಸ್ತಾವವನ್ನು ಸಹೃದಯರು ಉದಾರವಾಗಿ ಮನ್ನಿಸಲೆಂದು ಪ್ರಾರ್ಥಿಸುತ್ತೇನೆ.
Concluded.