ಪರಿಚಿತರಿಗೆಲ್ಲ ಅಡ್ಡಹೆಸರನ್ನಿಡುವುದರಲ್ಲಿ ಎಸ್. ಕೆ. ಎಮ್. ಅಗ್ರಗಣ್ಯರು. ಒಬ್ಬ ಸಂಗೀತವಿದುಷಿಯನ್ನು ‘ಎನ್. ಬಿ.’ ಎಂದು ಕರೆಯುತ್ತಿದ್ದರು. ಆಗೆಲ್ಲ ಅಬ್ರಾಹ್ಮಣರನ್ನು ಸೂಚ್ಯವಾಗಿ ಹೀಗೆ ನಿರ್ದೇಶಿಸುತ್ತಿದ್ದುದು ಲೋಕದ ವಾಡಿಕೆ. ಇದನ್ನು ಗಮನಿಸಿದ ನಾನು “ಇಲ್ಲ ಸರ್; ಅವರು ಬ್ರಾಹ್ಮಣರೇ” ಎಂದೆ. ಆಗ ಕೃಷ್ಣಮೂರ್ತಿ ನಗುತ್ತ “ನಿಮಗೆ ವಾಸ್ತವ ಹೇಳಿದರೆ ಬೇಜಾರಾಗಬಹುದು. ಆದರೆ ಸತ್ಯವೇ ಮುಖ್ಯ ಅಲ್ಲವೇ! ಇದರ ಅರ್ಥ ನಾನ್-ಬ್ರಾಹ್ಮಿನ್ ಎಂದಲ್ಲ; ‘ನಿತ್ಯಬಹಿಷ್ಠೆ’ ಅಂತ!”
ಇದನ್ನು ಕೇಳಿ ನಾನು ಮೂರ್ಚ್ಛೆ ಹೋಗುವುದೊಂದು ಬಾಕಿ.
ಹೀಗೆಯೇ ಅವರಿಗೆ ಚೆನ್ನಾಗಿ ಪರಿಚಯವಿದ್ದ ಮಾಜಿ ಸಂಗೀತವಿದುಷಿಯೊಬ್ಬರಿಗೆ ‘ಶ್ವೇತಪ್ರೇತ’ ಎಂದೂ ಇನ್ನೊಬ್ಬ ಮಾಜಿ ಸಮಾಜಸೇವಕಿಗೆ ‘ಗ್ರೇ ಬ್ಯೂಟಿ’ ಎಂದೂ ಅಡ್ಡಹೆಸರಿಟ್ಟಿದ್ದರು.
ಇವೆಲ್ಲ ಅನ್ವರ್ಥವೆಂಬುದರಲ್ಲಿ ಸ್ವಲ್ಪವೂ ಸಂದೇಹವಿಲ್ಲ. ಹಾಗೆಯೇ ಇವುಗಳನ್ನು ಚಲಾವಣೆಗೆ ತರುವಲ್ಲಿ ಯಾವ ಬಗೆಯ ಅಗೌರವ-ಅನ್ಯಾಯಗಳೂ ಇರಲಿಲ್ಲ. ಎಲ್ಲ ಕೇವಲ ವಿನೋದಕ್ಕೆ. ಇದನ್ನು ಮಹಾಜನಕ್ಕೆ ಅರ್ಥವಾಗುವಂತೆ ಹೇಳುವುದು ಕಷ್ಟ.
ಇಂಥ ಸೊಗಸಾದ ಹಾಸ್ಯಪ್ರಜ್ಞೆ ಇದ್ದ ಕೃಷ್ಣಮೂರ್ತಿಗಳ ಬದುಕೇನೂ ಸುಖದ ಸುಪ್ಪತ್ತಿಗೆಯಾಗಿರಲಿಲ್ಲ. ಆದರೂ ಅವರು ತಮ್ಮ ನೋವನ್ನು ಹತ್ತಿಕ್ಕಿ ಸಂತೋಷವನ್ನೇ ಹತ್ತಿರದವರಿಗೆಲ್ಲ ಬಿತ್ತರಿಸಿದರು.
ಕೃಷ್ಣಮೂರ್ತಿ ಅವರು ಪಾಶ್ಚಾತ್ತ್ಯ ಸಂಗೀತವನ್ನೂ ಚೆನ್ನಾಗಿ ಬಲ್ಲವರಾಗಿದ್ದರು. ಜಯಚಾಮರಾಜ ಒಡೆಯರವರು ತಮ್ಮ ಸಂಗೀತಕೃತಿಗಳನ್ನು ರಚಿಸುವಾಗ ಇವರೇ ಅವುಗಳಿಗೆ ಪಾಶ್ಚಾತ್ತ್ಯ ಸಂಗೀತದ ಸ್ವರಲಿಪಿಯನ್ನು ಬರೆದುಕೊಡುತ್ತಿದ್ದರು. ಅದನ್ನು ಇರಿಸಿಕೊಂಡೇ ಮಹಾರಾಜರು ಪಿಯಾನೋ ವಾದ್ಯದ ಮೇಲೆ ನುಡಿಸಿಕೊಂಡು ಕೃತಿಗಳ ಧಾತುಗಳಿಗೆ ಮತ್ತಷ್ಟು ಮೆರುಗನ್ನು ನೀಡುತ್ತಿದ್ದರು. ಆ ಕಾರ್ಯಭಾರದ ಎಲ್ಲ ದಾಖಲೆಗಳನ್ನು ಎಸ್. ಕೆ. ಎಮ್. ಅದೊಮ್ಮೆ ನನಗೆ ತೋರಿಸಿಯೂ ಇದ್ದರು. ಈಚಿನ ವರ್ಷಗಳಲ್ಲಿ ಮಹಾರಾಜರ ಕೃತಿಗಳ ಶುದ್ಧಪಾಠ ದೊರಕಲು ಈ ಕಡತವೇ ತುಂಬ ನೆರವಾಯಿತು. ಇದೇ ರೀತಿಯಲ್ಲಿ ವಾಸುದೇವಾಚಾರ್ಯರ ಎಲ್ಲ ಕೃತಿಗಳೂ ಶಾರದಾ ಕಲಾಕೇಂದ್ರದಿಂದ ಹೊರಬರುವಲ್ಲಿ ಕೃಷ್ಣಮೂರ್ತಿ ಅವರ ಪಾತ್ರ ಹಿರಿದು. ಅವರ ಪತ್ನಿ ದೇವಕಿಯವರು ಕೂಡ ಲೇಖಕಿ, ಸಂಗೀತವಿದುಷಿ.
ಭವನದಲ್ಲಿ ನನ್ನ ಉದ್ಯೋಗಪರ್ವ
ನಾನು ರಾಮಯ್ಯ ಎಂಜಿನಿಯರಿಂಗ್ ವಿದ್ಯಾಲಯದಲ್ಲಿ ಇರುವಾಗ ಈ ಬಗೆಯ ಅಧ್ಯಾಪನವೃತ್ತಿ ನನ್ನ ಪಾಲಿಗೆ ಕಷ್ಟವೆನಿಸಿತು. ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಆಸ್ಥೆಯಿರಲಿಲ್ಲ, ಹಿರಿಯ ಅಧ್ಯಾಪಕರಿಗೆ ವೃತ್ತಿಗೌರವ ಮೈಗೂಡಿರಲಿಲ್ಲ. ಒಟ್ಟಿನಲ್ಲಿ ಪ್ರಾಮಾಣಿಕವಾಗಿ ಪಾಠ ಮಾಡುವುದು ಅಸಾಧ್ಯವೆಂದೇ ಎನಿಸಿತ್ತು. ಆ ಹಂತದಲ್ಲಿ ರಾಮಯ್ಯ ಕಾಲೇಜಿನ ಎದುರಿಗೇ ಸ್ಥಾಪಿತವಾಗಿದ್ದ ನಿಯಾಸ್ ಸಂಸ್ಥೆಯ ಮುಖ್ಯಸ್ಥರಾಗಿದ್ದ ರಾಜಾರಾಮಣ್ಣ ಅವರು ನನ್ನ ನೆರವಿಗೆ ಬಂದರು. ಅವರನ್ನು ನಾನು ನನ್ನ ವಿದ್ಯಾರ್ಥಿದಶೆಯಿಂದ ಬಲ್ಲವನಾಗಿದ್ದೆ. ನನ್ನ ಆಸಕ್ತಿಯನ್ನು ಗಮನಿಸಿದ ಅವರು “ನಿನಗೆ ವಿದ್ಯಾಭವನದಂಥ ಸಂಸ್ಥೆಯ ಕೆಲಸ ಸೂಕ್ತ. ಇದೀಗ ಅಲ್ಲೊಂದು ಹೊಸ ವಿಭಾಗ ಬಂದಿದೆ. ಅದು ಸಂಸ್ಕೃತ, ಮೌಲ್ಯಗಳು ಮತ್ತು ಭಾರತೀಯ ಇತಿಹಾಸವನ್ನು ಕುರಿತು ಸಂಶೋಧನೆ, ಅಧ್ಯಾಪನ ಮತ್ತು ಪುಸ್ತಕಪ್ರಕಟನೆಗಳನ್ನು ಹಮ್ಮಿಕೊಳ್ಳಲಿದೆ. ಅದಕ್ಕೆ ನಾನೇ ಅಧ್ಯಕ್ಷ. ಹೇಗೂ ರಂಗನಾಥ್ ಅವರ ಪರಿಚಯ ನಿನಗಿದೆ. ನೀನಲ್ಲಿಗೆ ಬಂದರೆ ಅವರಿಗೂ ಸಂತೋಷ” ಎಂದರು. ಇದು ನನಗೆ ರೋಗಿ ಬಯಸಿದ್ದೂ ಹಾಲು-ಅನ್ನ, ವೈದ್ಯ ಹೇಳಿದ್ದೂ ಹಾಲು-ಅನ್ನ ಎಂಬಂತಾಯಿತು. ಬಲುಬೇಗನೆ ರಾಮಯ್ಯ ಕಾಲೇಜಿನಿಂದ ಬಿಡುಗಡೆ ಹೊಂದಿ ಭವನವನ್ನು ಸೇರಿದೆ.
ನಾನು ಪ್ರತಿದಿನ ಅಪರಾಹ್ಣ ಎರಡು ಗಂಟೆಯಿಂದ ಸಂಜೆ ಏಳೂವರೆಯವರೆಗೆ ಭವನದಲ್ಲಿ ಇರಬೇಕಿತ್ತು. ಸಂಜೆ ನಾಲ್ಕರ ಹೊತ್ತಿಗೆ ರಂಗನಾಥ್ ಅವರು ಬರುತ್ತಿದ್ದರಷ್ಟೆ. ಆ ಮುನ್ನ ಘನಪಾಠಿ ರಾಜಗೋಪಾಲಶರ್ಮರು ನನಗೆ ಜೊತೆಯಾಗಿರುತ್ತಿದ್ದರು.
ಘನಪಾಠಿ ರಾಜಗೋಪಾಲಶರ್ಮಾ
ನನಗಿಂತ ನಾಲ್ಕೈದು ವರ್ಷ ಹಿರಿಯರಾದ ರಾಜಗೋಪಾಲಶರ್ಮಾ ನಿಜಕ್ಕೂ ವಿಶಿಷ್ಟ ವ್ಯಕ್ತಿ. ರಾಜಾರಾಮಣ್ಣ ಅವರ ಕೈಕೆಳಗೆ ಭವನಕ್ಕೆ ಸೇರಿದ ಗಾಂಧಿಕೇಂದ್ರದಲ್ಲಿ ಸಂಶೋಧಕರಾಗಿ ದುಡಿಯುತ್ತಿದ್ದರು. ಇವರು ಮೂಲತಃ ತಮಿಳುನಾಡಿನವರು, ಅಪ್ಪಟ ವೈದಿಕರು. ಘನಾಂತವಾಗಿ ಕೃಷ್ಣಯಜುರ್ವೇದವನ್ನು ಕಲಿತು ಪೂರ್ವ ಮತ್ತು ಉತ್ತರಮೀಮಾಂಸೆಗಳಲ್ಲಿ ವಿದ್ವಾಂಸರಾಗಿದ್ದರು. ಇಷ್ಟು ಹೇಳಿದರೆ ಅವರನ್ನು ಕುರಿತು ಸ್ಪಷ್ಟವಾಗಿ ತಿಳಿಸಿದಂತಾಗುವುದಿಲ್ಲ. ಏಕೆಂದರೆ ನಮ್ಮ ನಡುವೆ ವೇದಜ್ಞರೂ ಶಾಸ್ತ್ರಜ್ಞರೂ ಸಾಕಷ್ಟು ಮಂದಿ ಇದ್ದಾರೆ. ನಾನೂ ಇಂಥವರನ್ನು ಸಾಕಷ್ಟು ಬಲ್ಲೆ.
ರಾಜಗೋಪಾಲಶರ್ಮರಲ್ಲಿ ನಾನು ಮುಖ್ಯವಾಗಿ ಕಂಡ ಸುಗುಣವೆಂದರೆ ಅದೈನ್ಯ ಮತ್ತು ಔದಾರ್ಯ. ಸಾಮಾನ್ಯವಾಗಿ ಆಧುನಿಕ ವಿದ್ಯಾಭ್ಯಾಸ ಮತ್ತದು ತಂದುಕೊಡುವ ಸ್ಥಾನ-ಮಾನಗಳ ಅಬ್ಬರದ ಮುಂದೆ ಇವುಗಳ ಗಂಧ-ಗಾಳಿ ಇಲ್ಲದ ಎಷ್ಟೋ ಮಂದಿ ವೈದಿಕರು ಕೀಳರಿಮೆಯನ್ನು ತಾಳುವುದುಂಟು. ಇದನ್ನು ಬ್ರಾಹ್ಮಣೇತರ ಸಮಾಜ ಹೆಚ್ಚಾಗಿ ಗಮನಿಸಿದಂತಿಲ್ಲ. ಸಮಾಜದ ನಿಮ್ನವರ್ಗದವರು, ದೀನ-ದಲಿತರು ಯಾವ ಅಪಮಾನಕ್ಕೆ ತುತ್ತಾಗುವರೋ ಅದಕ್ಕೆ ಹತ್ತಿರವೆನಿಸಬಲ್ಲ ಅಪಮಾನ ಇಂಥ ವೈದಿಕರಿಗೆ ಕೂಡ ಒದಗುತ್ತದೆ. ಹೀಗಾಗಿ ವೈದಿಕರು ನಿರಪವಾದವೆಂಬಂತೆ ತಮ್ಮ ಮಕ್ಕಳನ್ನು ಆಧುನಿಕ ಶಿಕ್ಷಣಕ್ಕೂ ಆರ್ಥಿಕ ಪ್ರಪಂಚಕ್ಕೂ ಸೇರಿಸಲು ಹೆಣಗುತ್ತಾರೆ. ಇದರ ಒಳಿತು-ಕೆಡುಕುಗಳ ಚರ್ಚೆ ಸದ್ಯಕ್ಕೆ ಬೇಕಿಲ್ಲ; ಫಲವನ್ನಂತೂ ಆಧುನಿಕ ಭಾರತ ಅನುಭವಿಸುತ್ತಿದೆ.
ರಾಜಗೋಪಾಲ್ ಇಂಥ ದೈನ್ಯಕ್ಕೆ ಸ್ವಲ್ಪವೂ ತುತ್ತಾಗಿರಲಿಲ್ಲ. ಬದಲಾಗಿ ಯುಕ್ತವಾದ ಹೆಮ್ಮೆಯೇ ಅವರಿಗಿತ್ತು. ಇಂಥ ಶ್ರೋತ್ರಿಯರನ್ನು ನಾನು ಆವರೆಗೆ ಕಂಡಿರಲಿಲ್ಲ. ಈ ಸದ್ಗುಣದೊಡನೆ ಅವರಿಗಿದ್ದ ಔದಾರ್ಯ ಮೆಚ್ಚುವಂಥದ್ದು. ನಾಳಿನ ಚಿಂತೆಯನ್ನು ಹೆಚ್ಚಾಗಿ ಮಾಡದೆ ತಮ್ಮ ಸಂಪಾದನೆಯನ್ನು ತಾವು ಮೆಚ್ಚಿದ ಮೌಲ್ಯಗಳಿಗೆ, ವ್ಯಕ್ತಿಗಳಿಗೆ ಮೀಸಲಿಡುತ್ತಿದ್ದರು. ಶರ್ಮರ ಈ ಗುಣ ರಂಗನಾಥ್ ಅವರಿಗೂ ಪ್ರಿಯವಾಗಿತ್ತು.
ನಾನು ಭವನಕ್ಕೆ ಸೇರಿದ ಹೊಸತರಲ್ಲಿ ಕಾಲೇಜು ಜೀವನದ ಅವಶೇಷವಾಗಿದ್ದ ಷರ್ಟು-ಪ್ಯಾಂಟುಗಳನ್ನು ತೊಡುತ್ತಿದ್ದೆ. ತಲೆಯಂತೂ ಎಂದಿನಂತೆ ಕ್ರಾಪ್. ಆದರೆ ರಾಜಗೋಪಾಲ್ ಕಚ್ಚೆಪಂಚೆ, ಕುರ್ತ ಮತ್ತು ಉತ್ತರೀಯಗಳಲ್ಲಿ ರಾಜಿಸುತ್ತಿದ್ದರು. ಜೊತೆಗೆ ಎರಡು ಚೌರಿಗಳಾಗುವಷ್ಟು ಸಮೃದ್ಧವಾದ ಶಿಖೆಯೂ ಇತ್ತು. ತಿಥಿ, ವಾರ, ನಕ್ಷತ್ರಗಳನ್ನು ಗಮನಿಸಿ ಆಯುಷ್ಕರ್ಮ ಮಾಡಿಸಿಕೊಳ್ಳುತ್ತಿದ್ದ ಕಾರಣ ಅವರ ಮುಖದ ಮೇಲೆ ಸದಾ ಗಡ್ಡ-ಮೀಸೆಗಳ ದಬ್ಬಾಳಿಕೆಯಿತ್ತು. ಇಂಥ ಶ್ರೋತ್ರಿಯರು ನನ್ನನ್ನು ಕಂಡ ದಿನವೇ “ವಾಂಗೋ. ಸಮ್ರಾಟ್ಟಕ್ ಪೋಯಿ ಟಿಫನ್ ಸಾಪ್ಟ್ ವರ್ಲಾ” ಎಂದು ಹೋಟಲಿಗೆ ಕರೆದರು!
ರಾಜಗೋಪಾಲ್ ಅವರ ಬಳಕೆ ನನಗೆ ಆ ಮುನ್ನವೇ ಇದ್ದಿತು. ಆದರೆ ಸ್ವಲ್ಪ ಮಟ್ಟಿಗೆ. ನನ್ನ ನಿವಾಸದ ಹಿಂದಿನ ಮನೆಯಲ್ಲಿ ಅವರ ಚಿಕ್ಕಪ್ಪನವರ ಮಗಳಿದ್ದರು. ಈಕೆಯ ತಂದೆ ಸುಪ್ರಸಿದ್ಧ ವೇದ-ಶಾಸ್ತ್ರಪಂಡಿತರಾದ ಆರ್. ಕೃಷ್ಣಮೂರ್ತಿಶಾಸ್ತ್ರಿಗಳು. ಇವರು ಚೆನ್ನೈ ನಗರದ ಸಂಸ್ಕೃತದ ಕಾಲೇಜಿನ ಮುಖ್ಯಸ್ಥರು. ಇವರ ಮನೆಯವರೆಲ್ಲ ಸಂಸ್ಕೃತಕೋವಿದರು. ವರಸೆಯ ತಂಗಿ ಶ್ರೀವಿದ್ಯಾ ಅವರ ಮನೆಗೆ ರಾಜಗೋಪಾಲ್ ಅವರು ಆಗೀಗ ಬರುತ್ತಿದ್ದುದಲ್ಲದೆ ಮದುವೆಗೆ ಮೊದಲು ಅಲ್ಲಿಯೇ ಉಳಿದಿದ್ದರು. ಜೊತೆಗೆ ಶ್ರೀವಿದ್ಯಾ ಅವರ ಮಾವನವರಿಂದ ಪೂರ್ವಾಪರಪ್ರಯೋಗಗಳನ್ನೂ ಕಲಿಯತೊಡಗಿದ್ದರು. ಹೀಗಾಗಿ ನನಗೆ ಸ್ವಲ್ಪ ಬಳಕೆ. ಆ ಸಲುಗೆ ಭವನದಲ್ಲಿಯೂ ಬೆಳೆದಿತ್ತು.
ರಾಜಗೋಪಾಲ್ ಕನ್ನಡವನ್ನು ಚೆನ್ನಾಗಿ ಕಲಿತಿದ್ದರೂ ನಾನು ನನ್ನ ತಮಿಳನ್ನು ಸುಧಾರಿಸಿಕೊಳ್ಳಲು ಅವರೊಡನೆ ಆ ನುಡಿಯನ್ನೇ ಬಳಸುತ್ತಿದ್ದೆ. ಇದು ಹಾಗಿರಲಿ. ಹೋಟಲಿಗೆ ಅವರ ಆಹ್ವಾನ ಕೇಳಿದೊಡನೆ ಹೌಹಾರಿದೆ: “ಇದೆನ್ನ! ನೀಂಗೊ ಹೋಟಲ್‌ಕ್ಕು ಪೋಹರದು!” ಆಗ ಅವರು ಸ್ವಲ್ಪವೂ ವಿಚಲಿತರಾಗದೆ “ನಾನು ವೆರುಂ ವೈದಿಕನಿಲ್ಲೈ; ವೇದಾಂತಿ ಕೂಡ” ಎಂದಿದ್ದರು. ಇದು ಅವರ ಮನೋಧರ್ಮವನ್ನು ತೋರಿಸುತ್ತದೆ.
ಮುಂದೊಮ್ಮೆ ವಿದ್ಯಾಭವನದ ಮುಂಬಯಿ ಕೇಂದ್ರ ಏರ್ಪಡಿಸಿದ ರಾಷ್ಟ್ರಸ್ತರದ ವೇದಸಮ್ಮೇಳನವೊಂದರಲ್ಲಿ ನಾನು ಮತ್ತು ರಾಜಗೋಪಾಲ್ ಪಾಲ್ಗೊಳ್ಳಬೇಕಾಯಿತು. ಅದೇ ನನ್ನ ಮೊದಲ ವಿಮಾನಯಾನ. ಅವರಿಗೆ ಅದೇನೂ ಮೊದಲಿನದಲ್ಲ. ವಿಮಾನದಲ್ಲಿ ಗಗನಸಖಿಯರು ತಿಂಡಿ-ತೀರ್ಥಗಳನ್ನು ಹಂಚಲು ಮುಂದಾದಾಗ ನಾನು ನನ್ನ ಮಡಿಯಿಂದಾಗಿ ಏನನ್ನೂ ಸ್ವೀಕರಿಸಲಿಲ್ಲ. ಯಾವುದು ಸಸ್ಯಾಹಾರವೋ ಯಾವುದು ಮಾಂಸಾಹಾರವೋ ಎಂಬ ಕಳವಳ ನನಗೆ. ಆದರೆ ರಾಜಗೋಪಾಲ್ ಅವರಿತ್ತ ಸಸ್ಯಾಹಾರವನ್ನು ನಿಃಶಂಕೆಯಿಂದ ತಿಂದು ತೇಗಿದರು. ಮಾತ್ರವಲ್ಲ, ನನ್ನನ್ನೂ ಛೇಡಿಸತೊಡಗಿದರು: “ಕುಡುತ್ತದೆಲ್ಲಾ ಎಡುತ್ತುಕೋಂಗೋ! ‘ಎನ್ನಾ ಇಂದ ಕುಡುಮಿ ಅಯ್ಯಾ ಎಲ್ಲಾ ತಿಂಗರಾನ್; ಇಂದ ಕ್ರಾಪು ಅಯ್ಯಾ ಮಟ್ಟುಮೇ ಎದುವುಮೇ ತಿಂಗ ಮಾಟ್ಟಾನ್’ ಅನ್ನುಟು ಇಂದ ಗಗನಸಖಿಗಳೆಲ್ಲಾ ಸಿರಿಕ್ಕ ಪೋರಾ.” (ಕೊಟ್ಟಿದ್ದನ್ನೆಲ್ಲ ತೆಗೆದುಕೊಂಡು ತಿನ್ನಿ. ‘ಏನಿದು, ಈ ಜುಟ್ಟಿನಾತ ಎಲ್ಲವನ್ನೂ ತಿನ್ನುತ್ತಾನೆ ಆದರೆ ಈ ಕ್ರಾಪಿನವನು ಮಾತ್ರ ಸುಮ್ಮನಿದ್ದಾನೆ’ ಎಂದು ಗಗನಸಖಿಯರು ನಗುತ್ತಾರೆ.)
ಆದರೂ ನಾನೊಪ್ಪಲಿಲ್ಲ. ಕಡೆಗೆ ಒಬ್ಬ ಗಗನಸಖಿ ಕೃಪೆಯಿಟ್ಟು ಹಣ್ಣನ್ನು ತಂದುಕೊಟ್ಟಳು. ಮರಳಿ ಬರುವಷ್ಟರಲ್ಲಿ ನನ್ನಲ್ಲಿ ಸ್ವಲ್ಪ ಸುಧಾರಣೆಯಾಗಿತ್ತು.
ಭವನ ವಾಣಿಜ್ಯಸಂಸ್ಥೆಯಲ್ಲದ ಕಾರಣ ಅದು ತನ್ನ ಸಿಬ್ಬಂದಿಗೆ ನೀಡುತ್ತಿದ್ದ ಸಂಬಳ-ಸಾರಿಗೆ ಹೆಚ್ಚಿನದಲ್ಲ. ಇದನ್ನು ಕುರಿತು ರಾಜಗೋಪಾಲ್ ಲಘುವಾಗಿ ಗೇಲಿ ಮಾಡುವರು. ವಿಶೇಷತಃ ರಂಗನಾಥ್ ಅವರು ಹೆಚ್ಚಿನ ಕೆಲಸವನ್ನು ಹೊರಿಸಿದಾಗ ಇವರು ಹೀಗೆ ಪ್ರತಿಕ್ರಿಯಿಸುತ್ತಿದ್ದರು: “ಸಾರ್, ನೀವು ಕೊಡುವ ಸಂಬಳ ನನಗೆ ಪಾಕೆಟ್ ಮನಿ! ನಮ್ಮಂಥಾ ವೇದವಿದ್ವಾಂಸರು ಇಲ್ಲಿಗೆ ಬಂದು ಹಾಜರಿಯ ಸಹಿ ಹಾಕುವುದಕ್ಕೇ ನಿಮ್ಮ ಸಂಬಳ ಸಾಕಾಗುವ ಮಾತ್ರದ ದಕ್ಷಿಣೆ. ಇದರ ಮೇಲೆ ಕೆಲಸ ಮಾಡಬೇಕೆಂದರೆ ಬೇರೆಯ ಸಂಬಳವೇ ಆಗಬೇಕು.” ಇಷ್ಟೇ ಅಲ್ಲ, ಮಾತು ಮತ್ತೂ ಮುಂದುವರಿದರೆ “ನಾನೇ ನಿಮಗೆ ಸಂಬಳ ಕೊಡುತ್ತೇನೆ; ನೀವೇ ಈ ಕೆಲಸ ಮಾಡಿ! ಇವೆಲ್ಲಾ ನಮ್ಮಂಥ ಪಂಡಿತರಿಗೆ ಹೇಳಬಾರದು. ವಿ ಹ್ಯಾವ್ ಟು ಡೂ ಅಕ್ಯಾಡೆಮಿಕ್ ವರ್ಕ್ ಅಲೋನ್” ಎಂದು ವಿನೋದವಾಗಿ ದಬಾಯಿಸುತ್ತಿದ್ದರು.
To be continued.