ಭವನದ ಯಾವುದೇ ಕಾರ್ಯಕ್ರಮದಲ್ಲಿ ವೇದಘೋಷ ಆಗಬೇಕಿದ್ದಾಗ ಅದನ್ನು ರಾಜಗೋಪಾಲ್ ಅವರೇ ನಿರ್ವಹಿಸುತ್ತಿದ್ದರು. ಘೋಷಕ್ಕೊಂದು ಗಾತ್ರ ಬೇಕೆನಿಸಿದರೆ ಅವರಿಗೆ ಹತ್ತಿರದವರಾದ ಗಣೇಶ ಘನಪಾಠಿಗಳನ್ನು ಕರೆಸಿಕೊಳ್ಳುತ್ತಿದ್ದರು. ಇಬ್ಬರೂ ಘನಾಂತವಾಗಿ ಯಜುರ್ವೇದವನ್ನು ಬಲ್ಲವರಾದರೂ ರಾಜಗೋಪಾಲ್ ಅವರ ದನಿ ಮೃದು, ಮಧುರ, ಸಮಾಹಿತ. ಗಣೇಶ ಘನಪಾಠಿಗಳ ಧ್ವನಿಯಲ್ಲಿ ರೂಕ್ಷತೆ ಹೆಚ್ಚು; ಅಬ್ಬರವೂ ಮಿಗಿಲು. ಎಲ್ಲಿಯೂ ಅವರು ತಮ್ಮ ದನಿಯನ್ನೇ ಮುಂದುಮಾಡುತ್ತಿದ್ದರು. ಆದರೆ ರಾಜಗೋಪಾಲ್ ಯಾರೊಡನೆ ವೇದ ಹೇಳುವಾಗಲೂ ಅನುನಯ ಮತ್ತು ಅನುಸರಣೆಗಳನ್ನು ತಮ್ಮ ಆಧಾರಶ್ರುತಿಯಾಗಿ ಹಿಡಿಯುತ್ತಿದ್ದರು. ಅವರ ಈ ವರ್ತನೆ ನನಗೆ ಪ್ರಶ್ನಾರ್ಹವಾಗಿ ತೋರಿದಾಗ ಹೀಗೆ ಉತ್ತರವಿತ್ತಿದ್ದರು: “ಇದನ್ನು ನೀವು ನನ್ನ ಅಶಕ್ತಿ ಅಂತ ತಿಳಿಯಬೇಕಾಗಿಲ್ಲ. ಹೆಚ್ಚು ಸಾಮರ್ಥ್ಯ ಇರುವವರಿಗೆ ಅನುಸರಿಸಿಕೊಂಡು ಹೋಗುವ ಶಕ್ತಿ ಇರುತ್ತದೆ.” ಇದು ಸತ್ಯವೆಂದು ನನಗೂ ಮನದಟ್ಟಾಯಿತು. ಆದರೆ ಲೋಕಕ್ಕೆ ಇದರ ಅರಿವು ಹೇಗೆ ಉಂಟಾದೀತು? “ಉಚ್ಚೈರುದ್ಘೋಷ್ಯ ಜೇತವ್ಯಮ್!” – ಇದು ಲೋಕದ ಲಾಗಾಯ್ತಿನ ನೀತಿ; ಅಥವಾ ನೀತಿಯಿಲ್ಲದ ರೀತಿ.
ರಾಜಗೋಪಾಲಶರ್ಮರು ಸಹಜವಾಗಿಯೇ ಹತ್ತಾರು ಮಂದಿಗೆ ಬೇಕಾದವರು. ಅನುದಿನವೂ ಒಂದಲ್ಲ ಒಂದು ವೈದಿಕಕಾರ್ಯಕ್ರಮಗಳು ಇರುತ್ತಿದ್ದವು. ಹೀಗಾಗಿಯೇ ಕೆಲವೊಮ್ಮೆ ಭವನಕ್ಕೆ ಬರುವುದು ತಡವಾಗುತ್ತಿತ್ತು. ಅದನ್ನು ತಮ್ಮ ವಿಚಕ್ಷಣೆಯಿಂದ ತೂಗಿಸಿಕೊಳ್ಳುತ್ತಿದ್ದರಾದರೂ ಆಗೀಗ ರಂಗನಾಥ್ ಅವರೊಡನೆ ಘರ್ಷಣೆಯಾಗುತ್ತಿತ್ತು. ಕಡೆಗೆ ಮತ್ತಿಬ್ಬರು ಸಂಶೋಧನಸಹಾಯಕರನ್ನು ನೇಮಿಸಿಕೊಂಡದ್ದೂ ಆಯಿತು. ಆಗ ನನ್ನ ಮತ್ತೊಬ್ಬ ಸಹೋದ್ಯೋಗಿ ವಿ. ರಘು ನಗೆಯಾಡುತ್ತಿದ್ದರು: “ಟಿ. ಎನ್. ಶೇಷನ್ ಅವರ ಮೇಲೆ ಗೂಢಚಾರಿಕೆಗೆ ಗಿಲ್ ಮತ್ತು ಕೃಷ್ಣಮೂರ್ತಿಗಳನ್ನು ನೇಮಿಸಿದ ಹಾಗೆ ಘನಪಾಠಿಗಳ ಮೇಲೆ ಕಣ್ಣಿಡುವುದಕ್ಕೆ ಇವರಿಬ್ಬರು ಬಂದಿದ್ದಾರೆ!” ಆದರೆ ಇಂಥ ಬೇಹುಗಾರಿಕೆಗೆ ಸೊಪ್ಪು ಹಾಕುವ ಘಟ ರಾಜಗೋಪಾಲ್ ಅಲ್ಲ. ಅವರು ನಡೆದದ್ದೇ ಹಾದಿ.
ಭವನದ ಸಹೋದ್ಯೋಗಿಗಳ ಪೈಕಿ ನಾನು, ರಘು ಮತ್ತು ರಾಜಗೋಪಾಲ್ ಹೆಚ್ಚು ನಿಕಟವಾಗಿದ್ದೆವು. ಮಿಕ್ಕವರೆಲ್ಲ ತುಂಬ ಹಿರಿಯರು ಅಥವಾ ನಮ್ಮ ಕಾರ್ಯಭಾರಕ್ಕೆ ಹೊರತಾದ ಸಿಬ್ಬಂದಿ. ಎಲ್ಲರೊಡನೆ ವಿಶ್ವಾಸವಿದ್ದರೂ ಸಲುಗೆ-ಸಂಪರ್ಕ ಸ್ವಲ್ಪ ಕಡಮೆ. ರಘು ಗಾಂಧಿಯವರ ಸಮಗ್ರಸಾಹಿತ್ಯದ ಅನುವಾದಪ್ರಕಲ್ಪವನ್ನು ನೋಡಿಕೊಳ್ಳಲು ನಿಯಮಿತರಾಗಿದ್ದರು. ಇವರ ಮೂಲಕವೇ ರಾಜಗೋಪಾಲ್ ನಿತ್ಯಾನಂದ ಪ್ರೆಸ್ಸಿಗೆ ಹತ್ತಿರವಾದರು. ರಾಮಕೃಷ್ಣ ಆಶ್ರಮದ ಹೆಚ್ಚಿನ ಪುಸ್ತಕಗಳನ್ನು ಮುದ್ರಿಸುತ್ತಿದ್ದ ಆ ಪ್ರೆಸ್ಸಿನ ಹಲವು ಪುಸ್ತಕಗಳಿಗೆ ಘನಪಾಠಿಗಳ ಕೈಂಕರ್ಯ ಸಂದಿತ್ತು. ತುಂಬ ವರ್ಷಗಳಿಂದ ವೇದಾಭ್ಯಾಸಿಗಳಿಗೆ ಅನಿವಾರ್ಯವಾಗಿರುವ ‘ಸಸ್ವರವೇದಮಂತ್ರಾಃ’ ಎಂಬ ಗ್ರಂಥದ ಈ ಹೊತ್ತಿನ ಸ್ವರಪರಿಷ್ಕಾರಕ್ಕೆ ರಾಜಗೋಪಾಲ್ ಕೂಡ ಕಾರಣ.
ಘನಪಾಠಿಗಳು ತಮಿಳು-ಸಂಸ್ಕೃತಗಳನ್ನು ಚೆನ್ನಾಗಿ ಬಲ್ಲವರು. ಕರ್ಣಾಟಕಕ್ಕೆ ಬಂದ ಬಳಿಕ ಕನ್ನಡವನ್ನು ಸ್ವಾಧೀನ ಮಾಡಿಕೊಂಡಿದ್ದರು - ಆಕಾಶವಾಣಿಯಲ್ಲಿ ಚಿಂತನ-ಭಾಷಣಗಳನ್ನು ಮಾಡುವಷ್ಟು! ಅವರಿಗಾಗ ಕನ್ನಡಲಿಪಿಯ ಸ್ವಾಧೀನವಿರಲಿಲ್ಲ. ಕಷ್ಟ ಪಟ್ಟು ಓದಿಕೊಳ್ಳುತ್ತಿದ್ದರು. ಆಕಾಶವಾಣಿಯಲ್ಲಿ ಬರೆಹವಿಲ್ಲದೆ ಮಾತಿಗೆ ಅವಕಾಶ ಇಲ್ಲವಷ್ಟೆ. ಹೀಗಾಗಿ ದೇವನಾಗರಿಯಲ್ಲಿ ಸ್ವಚ್ಛವಾಗಿ ಬರೆದುಕೊಂಡು ಶುದ್ಧವಾದ ಕನ್ನಡವನ್ನು ಮಾತನಾಡುತ್ತಿದ್ದರು. ಅವರಿಗೆ ಸಂಸ್ಕೃತಭಾಷೆ ಮತ್ತು ವೇದೋಚ್ಚಾರದ ಬಲ. ಆದರೆ ತಮಿಳಿನ ವಾಸನೆ ಇಣಿಕದೆ ಇರುತ್ತಿರಲಿಲ್ಲ. ಅನಂತರ ಕೆಲವೇ ದಿನಗಳಲ್ಲಿ ಕನ್ನಡ ಲಿಪಿಯೂ ಸ್ವಾಧೀನವಾಯಿತು. ಇದೇ ರೀತಿ ಇಂಗ್ಲಿಷ್ ಭಾಷೆಯನ್ನೂ ಅವರು ಪಳಗಿಸಿಕೊಂಡಿದ್ದರು. ಒಂದೊಂದು ಮಂತ್ರವನ್ನೂ ನೂರು ನೂರು ಬಾರಿ ಹೇಳಿ ಕಂಠಸ್ಥ ಮಾಡಿಕೊಂಡ ಪರಿಶ್ರಮವಿದ್ದ ಅವರಿಗೆ ಮಧ್ಯಮಗಾತ್ರದ ಇಂಗ್ಲಿಷ್ ನಿಘಂಟು ದೊಡ್ಡದೆನಿಸಲಿಲ್ಲ. ಈ ವ್ಯುತ್ಪತ್ತಿಯ ಮೂಲಕ ತಮ್ಮ ತಮಿಳಿನ ಘಾಟನ್ನು ಇಂಗ್ಲಿಷಿನ ಸಪ್ಪೆಯಡುಗೆಗೆ ಧಾರಾಳವಾದ ಒಗ್ಗರಣೆಯಾಗಿ ಬಳಸಿ ಎಲ್ಲರಿಗೂ ಕೆಚ್ಚಿನಿಂದಲೇ ಉಣಬಡಿಸುತ್ತಿದ್ದರು. ತಿನ್ನದಿದ್ದರೆ ಅದು ಎಲೆಯ ಮುಂದೆ ಕೂತವರ ಪ್ರಾರಬ್ಧವೇ ಹೊರತು ಅಟ್ಟುಣಿಸುವ ಅವರ ಅಪರಾಧವಲ್ಲ!
ವಿ. ರಘು
ಈಗಾಗಲೇ ರಘು ಅವರನ್ನು ಪ್ರಸ್ತಾವಿಸಿದ್ದಾಗಿದೆ. ಇವರ ಸ್ನಿಗ್ಧತೆ ದೊಡ್ಡದು; ತಾಳ್ಮೆ ಮತ್ತೂ ದೊಡ್ಡದು. ಒಂದು ದೊಡ್ಡ ಕುಟುಂಬದ ಕಿರಿಯ ಸದಸ್ಯನಾಗಿ ಮನೆಯ ಬಾಧ್ಯತೆಯನ್ನೆಲ್ಲ ಕೊಡವಿಕೊಳ್ಳದೆ ಹೊತ್ತು ಪಾರುಗಾಣಿಸಿದ ಪರಿಪಾಕ ಇವರದು. ಚಿಕ್ಕ ವಯಸ್ಸಿಗೇ ಇವರು ಕಂಡ ಜಗತ್ತು, ಜೀವಸಂಕಷ್ಟಗಳು ಬೆರಗು ತರಿಸುವಂಥವು. ಎಲ್ಲ ಸವಾಲುಗಳ ನಡುವೆಯೂ ಅವರಿಗೆ ಆಲಂಬನವಾದದ್ದು ಶ್ರೀರಾಮಕೃಷ್ಣರಲ್ಲಿದ್ದ ಭಕ್ತಿ ಮತ್ತು ಸಾಹಿತ್ಯ-ಸಮಾಜಸೇವೆಗಳಲ್ಲಿದ್ದ ಆಸಕ್ತಿ.
ಆ ವೇಳೆಗೇ ಜನಜಾಗರಣಕ್ಕಾಗಿ ಹಲವು ಬಗೆಯಲ್ಲಿ ದುಡಿದಿದ್ದರು; ಹಳ್ಳಿಹಳ್ಳಿಗಳಲ್ಲಿ ಅಲೆದಿದ್ದರು. ‘ವಿವೇಕಹಂಸ’ ಪತ್ರಿಕೆಯನ್ನು ಸಂಪಾದಿಸಲು ಆಗಷ್ಟೇ ತೊಡಗಿದ್ದರು. ಅದು ಇಂದಿಗೂ ಹೊರಬರುತ್ತಿರುವುದು ರಘು ಮತ್ತವರ ಗೆಳೆಯರ ಸಂಕಲ್ಪಶಕ್ತಿಯ ದ್ಯೋತಕ. ಚಿಕ್ಕ ವಯಸ್ಸಿಗೇ ಹೆಚ್ಚಿನ ಅಂಟಿಲ್ಲದೆ ಸಂಸಾರದ ನಂಟನ್ನು ಸಾಗಿಸುತ್ತಿದ್ದ ರಘು ಅವರನ್ನು ನಾನು ‘ಜನಕಮಹಾರಾಜ’ ಎಂದು ಕರೆಯುತ್ತಿದ್ದೆ. ಇವರ ಕನ್ನಡದ ಬರೆವಣಿಗೆಯ ಶೈಲಿ ತುಂಬ ಪ್ರಾಸಾದಿಕ; ನನಗಿಷ್ಟವಾದ ಆದರೆ ನನ್ನ ಕೈಗೆಟುಕದ ತಿಳಿಯಾದ ರೀತಿ. ತೀರ ಇತ್ತೀಚೆಗೆ ಅವರು ಹೊರತಂದ ತಮ್ಮ ಚೊಚ್ಚಲು ಕಾದಂಬರಿ ‘ಬಿದಿರಿನ ಗಳ’ ರೋಚಕ-ಭೀಕರ ಘಟನೆಗಳ ಆಕರ್ಷಕ ನಿರೂಪಣೆ. ಇದರಲ್ಲಿ ಅವರು ಕಂಡು, ಕೇಳಿ, ಅನುಭವಿಸಿದ ಗ್ರಾಮಜೀವನದ ಅಧಿಕೃತ ಚಿತ್ರಣವಿದೆ.
ರಘು ಅವರ ಮೂಲಕ ನನಗೆ ಪತ್ರಿಕಾಸಂಪಾದನೆ, ಪ್ರಕಟನೆ, ಮುದ್ರಣಾಲಯದ ವಿವರಗಳು, ಗ್ರಂಥವಿನ್ಯಾಸದ ಬಗೆ ಮುಂತಾದ ಎಷ್ಟೋ ಸಂಗತಿಗಳು ತಿಳಿದವು. ಆದರೆ ಈ ತಿಳಿವಿನ ಪ್ರಯೋಜನ ಪಡೆದುಕೊಳ್ಳುವಷ್ಟು ನಾನು ಬೆಳೆಯಲಿಲ್ಲ, ಅಷ್ಟೇ.
ಒಮ್ಮೆ ನಾನು, ರಾಘು ಮತ್ತು ರಾಜಗೋಪಾಲ್ ಕಾಫಿ ಕುಡಿಯುತ್ತ ಹರಟುವಾಗ ನೀಲಕಂಠದೀಕ್ಷಿತನ ಪ್ರಸ್ತಾವ ಬಂದಿತು. ನಾನು ಆತನ ಕೆಲವೊಂದು ಶ್ಲೋಕಗಳನ್ನು ಉಲ್ಲೇಖಿಸಿ ಅವನ ಜೀವನ-ಸಾಹಿತ್ಯಗಳ ಪುಟ್ಟ ಪರಿಚಯ ಮಾಡಿಕೊಟ್ಟೆ. ಇದರಿಂದ ಆಕರ್ಷಿತರಾದ ರಘು ಆ ಕೂಡಲೆ ಅವನ ಕೆಲವೊಂದು ಲಘುಕಾವ್ಯಗಳ ಪರಿಚಯ ಕನ್ನಡಿಗರಿಗೆ ಆಗಬೇಕೆಂದು ನನ್ನನ್ನು ಒತ್ತಾಯಿಸಿದರು. ಹಾಗೆ ತಿಂಗಳೊಪ್ಪತ್ತರಲ್ಲಿ ಸಿದ್ಧವಾದ ಹೊತ್ತಗೆ ‘ನೀಲಕಂಠದೀಕ್ಷಿತನ ಶತಕತ್ರಯ’. ಹದಿನೈದು ದಿನಗಳಲ್ಲಿ ಅನುವಾದ ಮುಗಿದಿದ್ದರೆ ಇನ್ನು ಹದಿನೈದು ದಿನಗಳಲ್ಲಿ ಪುಸ್ತಕ ಅಣಿಯಾಗಿತ್ತು. ಆಗ ‘ಅಭಿಜ್ಞಾನ’ ಸಂಸ್ಥೆ ತಾನೇ ಪ್ರಕಟಿಸುವುದಾಗಿ ಮುಂದೆ ಬಂದಿತು. ಆ ವೇಳೆಗೆ ರಘು ಮತ್ತು ಅಭಿಜ್ಞಾನದ ಸೂರ್ಯಪ್ರಕಾಶ್ ಪಂಡಿತ್ ನನ್ನ ಮೂಲಕ ಪರಸ್ಪರ ಪರಿಚಿತರಾಗಿದ್ದರು. ಅಭಿಜ್ಞಾನದ ಮೊದಲ ಪ್ರಕಟನೆ ‘ಸಾಮಾನ್ಯಧರ್ಮ’ ನನ್ನದೇ ಬರೆವಣಿಗೆ. ಅದನ್ನು ಬಿಡುಗಡೆ ಮಾಡಿದಾಗ ರಘು ತಾವಾಗಿ ಮುನ್ನುಗ್ಗಿ ಜನಸಮೂಹದ ನಡುವೆ ಪುಸ್ತಕದ ಪ್ರತಿಗಳನ್ನು ಮಾರಿ ಬಂದಿದ್ದರು. ಇದು ಅವರ ಕ್ರತುಶಕ್ತಿ, ಅವ್ಯಾಜವಾದ ವಿದ್ಯಾನುರಕ್ತಿ.
ಕೆ. ಸಿ. ಶಿವಪ್ಪ
ಭವನ ಕೈಗೊಂಡಿದ್ದ ಗಾಂಧಿ ಕೃತಿಶ್ರೇಣಿಯ ಅನುವಾದಪ್ರಕಲ್ಪವನ್ನು ನಿರ್ವಹಿಸಲು ಬಂದಿದ್ದ ಶಿವಪ್ಪನವರು ಈ ಬಗೆಯ ಕೆಲಸಗಳಲ್ಲಿ ನುರಿತವರು. ತುಂಬ ಹಿಂದೆಯೇ ಬೆಂಗಳೂರು ವಿಶ್ವವಿದ್ಯಾಲಯದ ಪ್ರಕಟನವಿಭಾಗದಲ್ಲಿದ್ದು ಅನೇಕ ಉತ್ತಮ ಕೃತಿಗಳ ಪ್ರಕಾಶನಕ್ಕೆ ರೂವಾರಿಯಾಗಿದ್ದರು. ಎಸ್. ಕೆ. ರಾಮಚಂದ್ರರಾಯರ ‘ಮೂರ್ತಿಶಿಲ್ಪ: ನೆಲೆ-ಹಿನ್ನೆಲೆ’, ಬಲದೇವ ಉಪಾಧ್ಯಾಯರ ‘ಸಂಸ್ಕೃತಸಾಹಿತ್ಯದ ಇತಿಹಾಸ’ (ಕನ್ನಡ ಅನುವಾದ: ಎಸ್. ರಾಮಚಂದ್ರಶಾಸ್ತ್ರೀ), ಕೆ. ಎಂ. ಸೀತಾರಾಮಯ್ಯನವರ ‘ಟ್ರೋಜನ್ ಮಹಾಯುದ್ಧ’ ಮತ್ತು ‘ಒಡಿಸ್ಸಿ’, ಬಿ. ಜಿ. ಎಲ್. ಸ್ವಾಮಿ ಅವರ ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕ’ ಮುಂತಾದ ಎಷ್ಟೋ ವಿಶಿಷ್ಟ ಗ್ರಂಥಗಳು ಇವರ ಆಸ್ಥೆಯ ಫಲ.
ಶಿವಪ್ಪನವರನ್ನು ರಂಗನಾಥ್ ಅವರು ‘ವರ್ಕೊಹಾಲಿಕ್’ ಎಂದು ಬಣ್ಣಿಸುತ್ತಿದ್ದರು. ಈ ಮಾತು ಅಕ್ಷರಶಃ ಸತ್ಯ. ಕರಡು ತಿದ್ದುವುದರಲ್ಲಿ ಶಿವಪ್ಪನವರ ಸಿದ್ಧಿ ದೊಡ್ಡದು. ಗ್ರಂಥಪ್ರಕಟನೆಯ ಪ್ರತಿಯೊಂದು ವಿವರದ ಬಗೆಗೂ ಅವರು ಎಚ್ಚರ ವಹಿಸುತ್ತಿದ್ದರು. ಮುಂಗೋಪ ಮಾತ್ರ ಹೆಚ್ಚು. ಇದೇ ಸ್ವಭಾವದವನಾದ ನನಗೆ ಅವರೊಡನೆ ಮೊದಮೊದಲು ಸ್ವಲ್ಪ ಘರ್ಷಣೆಯಾದದ್ದುಂಟು. ಆದರೆ ಪರಸ್ಪರ ಶಕ್ತಿ-ಸಾಮರ್ಥ್ಯಗಳನ್ನು ಕಂಡುಕೊಂಡ ಬಳಿಕ ವಿಶ್ವಾಸ ಬಲಗೊಂಡಿತು.
ಶಿವಪ್ಪನವರ ಕಲ್ಪನೆಯ ಕೂಸಾಗಿ ‘ಶ್ರಾವಣದಿಂದ ಶ್ರಾವಣಕ್ಕೆ’ ಎಂಬ ಅಭಿಯಾನ ರೂಪುಗೊಂಡಿತು. ಈ ಪ್ರಕಾರ ಭವನದ ವತಿಯಿಂದ ಪ್ರತಿಯೊಂದು ಬುಧವಾರ-ಗುರುವಾರವೂ ಬೆಂಗಳೂರಿನ ಬಗೆಬಗೆಯ ವಿದ್ಯಾಸಂಸ್ಥೆಗಳಲ್ಲಿ, ಕಾರ್ಯಾಲಯ-ಕಾರ್ಖಾನೆಗಳಲ್ಲಿ ಕಲೆ-ಸಾಹಿತ್ಯಗಳನ್ನು ಕುರಿತು ನುರಿತವರಿಂದ ಭಾಷಣಗಳಾಗಬೇಕು. ಭವನ ಭಾಷಣಕಾರರನ್ನು ಗೊತ್ತುಪಡಿಸುವುದಷ್ಟೇ ಅಲ್ಲದೆ ಅವರ ಸಂಭಾವನೆ ಮತ್ತು ಪ್ರಯಾಣಗಳನ್ನೂ ಏರ್ಪಡಿಸುತ್ತದೆ. ಕೇವಲ ವೇದಿಕೆ, ಧ್ವನಿವರ್ಧಕ ಮತ್ತು ಶ್ರೋತೃಗಳ ವ್ಯವಸ್ಥೆಯನ್ನು ಆಯಾ ಸಂಸ್ಥೆ ಮಾಡಿಕೊಡಬೇಕು. ಇದರ ನಿರ್ವಹಣೆ ನನ್ನ ಪಾಲಿಗೆ ಬಂದಿತು. ಒಂದು ವರ್ಷವಿಡೀ ಇದು ಚೆನ್ನಾಗಿ ಸಾಗಿತು. ಯಾವುದೇ ಅಡ್ಡಿಗಳಿಲ್ಲದೆ ನೂರ ನಾಲ್ಕು ಭಾಷಣಗಳಾದವು. ನೂರ ಎಂಟರ ಸಂಖ್ಯೆಯನ್ನು ಮುಟ್ಟಿಸಲು ಮತ್ತೆ ನಾಲ್ಕು ಭಾಷಣಗಳ ಕೊಸರೂ ಮುಗಿಯಿತು. ಕೆಲವರು ಭಾಷಣಕಾರರು ತಮ್ಮ ತಮ್ಮ ಮಾತುಗಳನ್ನು ಬರೆದುಕೊಟ್ಟರು. ಅವನ್ನೆಲ್ಲ ಕಿರುಹೊತ್ತಗೆಗಳ ರೂಪದಲ್ಲಿ ಶಿವಪ್ಪನವರು ಹೊರತಂದರು. ಇಂಥದ್ದು ಅವರ ಸಾಹಸ. ಈ ಪ್ರಕಟನೆಗಾಗಿ ನಾನು ಬರೆದದ್ದೇ ‘ಷಡ್ದರ್ಶನಸಂಗ್ರಹ’.
ಶಿವಪ್ಪನವರು ಭಾವಗೀತಗಳನ್ನು ರಚಿಸುತ್ತಿದ್ದರು. ಅವುಗಳಲ್ಲಿ ಹಲವನ್ನು ಒಳ್ಳೆಯ ಗಾಯಕರಿಂದ ಹಾಡಿಸಿ ದನಿಸುರಳಿಗಳನ್ನೂ ಹೊರತಂದಿದ್ದರು. ‘ರಾಧಾಮಾಧವ’ ಎಂಬ ಅವರ ಕವಿತಾಸಂಗ್ರಹ ಇಂದಿಗೂ ನನ್ನಲ್ಲಿದೆ. ಇದಕ್ಕೆ ಕುಂಚವಿರಿಂಚಿ ಬಿ. ಕೆ. ಎಸ್. ವರ್ಮರ ಅಲೋಕಸಾಮಾನ್ಯವಾದ ರೇಖಾಚಿತ್ರಗಳ ಅಲಂಕರಣವೂ ಇದೆ. ಇದನ್ನೆಲ್ಲ ಶಿವಪ್ಪನವರೇ ಆಸ್ಥೆ ವಹಿಸಿ ಮಾಡಿಸಿದರು. ವರ್ಮಾ ಅವರಿಂದ ಚಿತ್ರ ಬರೆಸುವುದು ಸುಲಭದ ಕೆಲಸವಲ್ಲ. ಅದಕ್ಕೆ ಶಿವಪ್ಪನಂಥ ಛಲ ಬಿಡದ ತ್ರಿವಿಕ್ರಮರೇ ಬೇಕು. ಹೀಗೆ ಕಾರ್ಯಶೀಲತೆಗೆ ಮತ್ತೊಂದು ಹೆಸರು ಕೆ. ಸಿ. ಶಿವಪ್ಪ.
To be continued.