ಸಂಸ್ಕೃತಸಾಧಕ ಶ್ರೀ ಮೇಣ ರಾಮಕೃಷ್ಣಭಟ್ಟರು - 1
ಇಂದು ಸಂಸ್ಕೃತಭಾಷೆಯ ಅಧ್ಯಯನಕ್ಕೆ ವಿಪುಲ ಅವಕಾಶಗಳಿವೆ. ಅದರ ಪ್ರಚಾರ-ಪ್ರಸಾರಗಳಿಗೆ ಹಲವಾರು ಮಾಧ್ಯಮಗಳು ಲಭ್ಯವಿವೆ. ಸಂಘಟನೆಯ ರೂಪದ ಸಂಭಾಷಣಾಂದೋಲನದಿಂದ ಮೊದಲ್ಗೊಂಡು ಸಾಂಪ್ರದಾಯಿಕವಾದ ಶಾಸ್ತ್ರಾಧ್ಯಯನದವರೆಗೆ ಎಲ್ಲಕ್ಕೂ ಅನೇಕ ವ್ಯಕ್ತಿಗಳ, ಸಂಸ್ಥೆಗಳ ಸಹಕಾರವಿದೆ. ತಂತ್ರಜ್ಞಾನದ ಪ್ರಯೋಜನದಿಂದ ಹೊಸಬಗೆಯ ಪಾಠ್ಯಕ್ರಮಗಳನ್ನು ರಚಿಸಿ, ಅಧ್ಯಯನಕ್ಕೆ ಅನುಕೂಲಿಸುವ ವಿವಿಧ ಉಪಕರಣಗಳನ್ನು ರೂಪಿಸಿ ದೇವವಾಣಿಯನ್ನು ವಿದ್ಯಾರ್ಥಿಗಳಿಗೂ ವಿದ್ವಾಂಸರಿಗೂ ಹತ್ತಿರವಾಗಿಸುವುದು ಇಂದು ಸರಳವಾಗಿದೆ. ಹಸ್ತಪ್ರತಿಗಳ ಸೂಕ್ಷ್ಮ ಅವಲೋಕನಕ್ಕೆ, ವ್ಯಾಕರಣವೇ ಮೊದಲಾದ ಶಾಸ್ತ್ರಗಳ ಕಲಿಕೆಗೆ ಹಲವು ಬಗೆಯ ತಂತ್ರಾಶಗಳಿಂದ ದೊರೆತಿರುವ ನೆರವು ಅಷ್ಟಿಷ್ಟಲ್ಲ.