ಶಿಶಿರರ್ತುವನ್ನು ವರ್ಣಿಸುವ ಮುಂದಿನ ಪದ್ಯ ತನ್ನ ಚಮತ್ಕಾರದಿಂದ ಚೆಲುವೆನಿಸಿದೆ:
ಆನಂದಾದಿವ ರೋಮಹರ್ಷಣಮಯೋ ಭೀತ್ಯೇವ ಚೋದ್ವೇಪಥುಃ
ಕ್ರೋಧಾವೇಶವಶಾದ್ವಿಘೃಷ್ಟರದನಃ ಶೋಕೇನ ನಮ್ರಾನನಃ |
ಆಶ್ಚರ್ಯೇಣ ಹಹೇತಿ ಜಲ್ಪಿತಪರಶ್ಚಾಯಂ ಜುಗುಪ್ಸಾವಶಾ-
ನ್ನಾಸಾಬದ್ಧಕರೋ ವಿಭಾತಿ ಶಿಶಿರಶ್ಚಾರಿತ್ರ್ಯವೈಚಿತ್ರ್ಯಭಾಕ್ || (ಕಾವ್ಯೋದ್ಯಾನಮ್, ಪು. ೧೩೦)
(ಶಿಶಿರವು ಆನಂದದಿಂದ ರೋಮಾಂಚಿತವಾಗಿ, ಭಯದಿಂದ ನಡುಗುತ್ತ, ಕೋಪದಿಂದ ಹಲ್ಲು ಕಡಿಯುತ್ತ, ದುಃಖದಿಂದ ತಲೆ ಬಾಗಿಸಿ, ಆಶ್ಚರ್ಯದಿಂದ ಹಾ! ಎನ್ನುತ್ತ, ಜುಗುಪ್ಸೆಯಿಂದ ಮೂಗನ್ನು ಮುಚ್ಚಿಕೊಳ್ಳುತ್ತ ವಿಚಿತ್ರವಾಗಿ ತೋರುತ್ತಿದೆ.)
ಋತುವೊಂದು ನಮ್ಮ ಅನುಭವಕ್ಕೆ ಬರುವುದು ಅದು ಪ್ರಕೃತಿಯಲ್ಲಿ, ನಮ್ಮದೇ ಪ್ರಕೃತಿಯಲ್ಲಿ ಮೂಡಿಸುವ ‘ಅನುಭಾವ’ಗಳಿಂದ ತಾನೆ! ಇದನ್ನು ಬಳಸಿಕೊಂಡು ಹಲವು ಮಾನುಷಭಾವಗಳನ್ನು ಅಮೂರ್ತವಾದ ಋತುವಿನ ಮೇಲೆ ಆರೋಪಿಸಿರುವ ಕವಿ ಒಳ್ಳೆಯ ಉಪಚಾರವಕ್ರತೆಯನ್ನು ಸಾಧಿಸಿದ್ದಾರೆ. ಇಲ್ಲಿ ‘ಜುಗುಪ್ಸೆಯಿಂದ ಮೂಗನ್ನು ಮುಚ್ಚಿಕೊಳ್ಳುತ್ತ’ ಎಂದು ವರ್ಣಿಸುವ ಮೂಲಕ ಚಳಿಗಾಲದಲ್ಲಿ ನೆಗಡಿಯಾದಾಗ ಎಲ್ಲರೂ ತೋರುವ ಪ್ರತಿಕ್ರಿಯೆಯನ್ನು ಧ್ವನಿಸಿರುವ ಪರಿ ಆಕರ್ಷಕವಾಗಿದೆ.
ಕೃಷ್ಣನಲ್ಲಿ ಉದಾತ್ತವಾದೊಂದು ಪ್ರಾರ್ಥನೆ:
ಜಂತೂನಾಂ ಮೃತಿಸಾಧ್ವಸಂ ವಿಷಭವಂ ಯದ್ದ್ರಾಗ್ಜಿಹೀರ್ಷುಃ ಸ್ವಯಂ
ತ್ವಂ ಚಕ್ಷುಃಶ್ರವಸಂ ಹ್ಯಜಯ್ಯಮವಧೀಃ ಕಾಲೋಪಮಂ ಕಾಲಿಯಮ್ |
ಲೀಲಾಮಾನುಷರೂಪ ತತ್ಕರುಣಯಾಹಂಕಾರರೂಪಂ ಹರೇ
ಲೀನಂ ಹೃತ್ಕುಹರೇ ಮಮೋಗ್ರಭುಜಗಂ ಸತ್ತ್ವದ್ವಿಷಂ ನಾಶಯ || (ಅಮೃತವಾಣಿ ೧೯೪೭, ಪು. ೨)
(ಲೀಲಾಮಾನುಷರೂಪನಾದ ಕೃಷ್ಣನೇ, ವಿಷದಿಂದೊದಗಿದ ಮನುಜರ ಮೃತ್ಯುಭೀತಿಯನ್ನು ದೂರಮಾಡಲು ಯಮನಂತಿದ್ದ ಕಾಲಿಯಸರ್ಪವನ್ನು ನೀನು ಸದೆಬಡೆದೆ. ಹೀಗಾಗಿ ನಿನ್ನನ್ನು ಪ್ರಾರ್ಥಿಸುತ್ತಿದ್ದೇನೆ - ನನ್ನ ಹೃದಯಗುಹೆಯಲ್ಲಿ ಸತ್ತ್ವವನ್ನು ನುಂಗಿ ನೊಣೆಯುವ ಅಹಂಕಾರವೆಂಬ ಘೋರವಾದ ಸರ್ಪವೊಂದು ನೆಲಸಿದೆ. ನನ್ನಲ್ಲಿ ಕೃಪೆಯಿಟ್ಟು ನೀನದನ್ನು ನಾಶ ಮಾಡು!)
ಇದು ಭಗವತ್ಪಾದ ಶಂಕರರ ‘ಶಿವಾನಂದಲಹರಿ’ಯಲ್ಲಿ ಬರುವ ‘ಮಾ ಗಚ್ಛ ತ್ವಮಿತಸ್ತತೋ ಗಿರಿಶ ಭೋ’ ಎಂಬ ಪದ್ಯವನ್ನು ನೆನಪಿಗೆ ತರುತ್ತದೆ.
ರಾಷ್ಟ್ರಧ್ವಜದ ವರ್ಣನೆ:
ತ್ರಿವರ್ಣರುಚಿರೋ ಮತಃ ಪ್ರಿಯತರಶ್ಚತುರ್ಣಾಂ ಚ ಯೋ
ರಥಾಂಗಸಹಿತೋಽಪಿ ನೋ ಮುರರಿಪುರ್ಯಶೋವಾಹನಃ |
ದಿಗಂಬರಗತಿಃ ಸದಾ ನ ತು ಮೃಡೋಽಪಿ ದಂಡೀ ಯತಿ-
ರ್ನ ಚೇತ್ಯನುಪಮಸ್ಥಿತಿರ್ಜಯತಿ ಸೋಽದ್ಯ ರಾಷ್ಟ್ರಧ್ವಜಃ || (ಕಾವ್ಯೋದ್ಯಾನಮ್, ಪು. ೧೧೪)
(ಮೂರೇ ವರ್ಣಗಳನ್ನು ಹೊಂದಿದ್ದರೂ ಬ್ರಾಹ್ಮಣ, ಕ್ಷತ್ತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣಗಳ ಜನರಿಗೂ ಪ್ರಿಯವಾದ, ಚಕ್ರವನ್ನು ಧರಿಸಿದ್ದರೂ ವಿಷ್ಣುವಲ್ಲದ, ದಿಗಂಬರನಾಗಿದ್ದರೂ [ಆಕಾಶದಲ್ಲಿದ್ದರೂ] ಶಿವನಲ್ಲದ, ದಂಡ ಹಿಡಿದೂ ಯತಿಯಲ್ಲದ, ನಮ್ಮ ದೇಶದ ಯಶಸ್ಸಿನ ವಾಹನದಂತಿರುವ ಧ್ವಜವು ಅನುಪಮವಾಗಿದೆ.)
ಇಲ್ಲಿಯ ಚಮತ್ಕಾರ ಶ್ಲೇಷದ ಮೂಲಕ ಸಾಧಿತವಾಗಿದೆ. ಶಿವ-ವಿಷ್ಣು ಮೊದಲಾದ ದೇವತಾರೂಪವಲ್ಲದ, ಯತಿಯಂಥ ಸಿದ್ಧಪುರುಷನೂ ಅಲ್ಲದ ರಾಷ್ಟ್ರಧ್ವಜವು ತನ್ನಂತೆಯೇ ಜನತೆಯ ಹಿತವನ್ನು ಸಾಧಿಸುತ್ತದೆ ಎಂಬ ಧ್ವನಿ ಸುಂದರವಾಗಿದೆ.
ಪ್ರೊ|| ಭಟ್ಟರು ಕೆಲವು ವಿಶಿಷ್ಟ ಸಂದರ್ಭಗಳನ್ನು ನಿಮಿತ್ತವಾಗಿಸಿಕೊಂಡು ಕವಿತೆ ರಚಿಸಿದ ಪ್ರಸಂಗಗಳು ಹಲವು. ಅವುಗಳಲ್ಲಿ ಅಂತಾರಾಷ್ಟ್ರಿಯ ಮಹಿಳಾವರ್ಷದಂದು ವೇದಕಾಲದಿಂದ ಇಪ್ಪತ್ತನೆಯ ಶತಮಾನದವರೆಗೆ ನಮ್ಮ ರಾಷ್ಟ್ರದಲ್ಲಿ ಆಗಿಹೋದ ಅನೇಕ ವನಿತೆಯರನ್ನು ಕುರಿತು ಮಂದಾಕ್ರಾಂತಾವೃತ್ತದಲ್ಲಿ ರಚಿಸಿದ ಪದ್ಯಗಳೂ, ೧೯೫೦ರ ಜನವರಿ ೨೬ರಂದು ಗಣರಾಜ್ಯೋತ್ಸವದ ಸಂಭ್ರಮದಲ್ಲಿ ‘ಸ್ವಾತಂತ್ರ್ಯಜ್ಯೋತಿಃ’ (Ballad of Indian Republic) ಎಂಬ ಹೆಸರಿನಲ್ಲಿ ಷೋಡಶೋಪಚಾರದಂತೆ ರಚಿಸಿದ ಹದಿನಾರು ಉಜ್ಜ್ವಲಲವಾದ ಸ್ರಗ್ಧರಾಪದ್ಯಗಳೂ ಸ್ಮರಣಾರ್ಹ.
‘ಶ್ರೀರಾಮಕೃಷ್ಣಸಹಸ್ರನಾಮ’, ‘ಶ್ರೀರಾಮದಾಸಗೀತಾ’, ‘ಮೋಕ್ಷಗೀತಾ’, ‘ಶ್ರೀಕಾಂಚೀಕಾಮಕೋಟಿಮಹಿಮಸ್ತೊತ್ರ’, ‘ಗುರುಸಪರ್ಯಾ’ ಮತ್ತು ‘ಶ್ರೀಸೋಮನಾಥಸಮಜ್ಯಾಸ್ತವ’ ಅವರ ಮಿಕ್ಕ ಸಂಸ್ಕೃತರಚನೆಗಳು. ‘ತೀರ್ಥಾಟನಕಾವ್ಯಮ್’ ಎಂಬುದು ಸುಮಾರು ಏಳುನೂರು ಶ್ಲೋಕಗಳಲ್ಲಿ ದಕ್ಷಿಣಗನ್ನಡ ಮತ್ತು ಕಾಸರಗೋಡು ಪರಿಸರದ ತೀರ್ಥಕ್ಷೇತ್ರಗಳ ವಿವರಗಳನ್ನು ಒಳಗೊಂಡಿದೆ. ಹಲವು ಅಪರೂಪದ ಕ್ಷೇತ್ರಗಳ ಸ್ಥಳಪುರಾಣಗಳೂ ಆಯಾ ದೇವತೆಗಳ ವೈಶಿಷ್ಟ್ಯಗಳೂ ಇಲ್ಲಿ ಅಡಕವಾಗಿ ಒಕ್ಕಣೆಗೊಂಡಿವೆ. ಇವಲ್ಲದೆ ಭಗವದ್ಗೀತೆಯನ್ನು ಕುರಿತ ‘ವಿಶ್ವಜನೀನಾ ಗೀತಾ’ ಎಂಬ ಪ್ರಬಂಧವೂ ‘ಅರ್ಜುನಃ’ ಎಂಬ ಹೆಸರಿನ ಪುಸ್ತಿಕೆಯೂ ಪ್ರಕಟವಾಗಿವೆ.
ರಾಮಕೃಷ್ಣಭಟ್ಟರು ಹೃಷೀಕೇಶದಲ್ಲಿ ನೆಲಸಿದ್ದ ಪ್ರಸಿದ್ಧ ಆಧ್ಯಾತ್ಮಿಕ ಸಾಧಕರಾದ ಸ್ವಾಮಿ ಶಿವಾನಂದರಲ್ಲಿ ಅಪಾರ ಶ್ರದ್ಧೆಯನ್ನು ಹೊಂದಿದ್ದರು. ‘ಡಿವೈನ್ ಲೈಫ್ ಸೊಸೈಟಿ’ಯ ಸದಸ್ಯರಾಗಿದ್ದ ಭಟ್ಟರು ಸ್ವಾಮಿಗಳ ಹಲವು ರೀತಿಯ ಕೆಲಸಗಳಲ್ಲಿ ಆಸಕ್ತಿ ವಹಿಸಿ ಸಕ್ರಿಯವಾಗಿ ತೊಡಗಿಕೊಂಡಿದ್ದರು; ಅವರನ್ನು ಕುರಿತು ಸ್ತೋತ್ರ-ಲೇಖನಗಳನ್ನೂ ಬರೆದಿದ್ದರು. ಈ ನಿಟ್ಟಿನ ಅವರ ಕೈಂಕರ್ಯದಲ್ಲಿ ಪ್ರಮುಖವಾದುದು ‘ಶಿವಾನಂದವಿಲಾಸಃ’ ಎಂಬ ಮಹಾಕಾವ್ಯ. ಹನ್ನೊಂದು ಸರ್ಗಗಳಲ್ಲಿ ರಚಿತವಾಗಿರುವ ಈ ಸಂಸ್ಕೃತಕೃತಿ ೧೨೫೦ ಪದ್ಯಗಳನ್ನು ಒಳಗೊಂಡಿದೆ. ಶಿವಾನಂದರ ಪೂರ್ವಜರ ವಿವರಗಳಿಂದ ಆರಂಭವಾಗುವ ಕಾವ್ಯವು ಅವರ ವಿದ್ಯಾಭ್ಯಾಸ, ವೈರಾಗ್ಯಸಿದ್ಧಿ, ತೀರ್ಥಾಟನೆ, ಹೃಷೀಕೇಶವಾಸ, ಸಂನ್ಯಾಸಸ್ವೀಕಾರ, ಯೋಗಸಾಧನೆಗಳೇ ಮುಂತಾದ ವಿಷಯಗಳನ್ನು ವರ್ಣಿಸುತ್ತದೆ.
ಕಾವ್ಯದ ಸಹಜಾಂಗವಾದ ಪ್ರಕೃತಿವರ್ಣನೆಯನ್ನು ಶಿವಾನಂದರ ವಿರಕ್ತಜೀವನದ ಹಿನ್ನೆಲೆಯಲ್ಲಿಯೇ ಹೆಚ್ಚಾಗಿ ವರ್ಣಿಸುವ ರಾಮಕೃಷ್ಣಭಟ್ಟರು ಔಚಿತ್ಯವನ್ನು ಮೆರೆದಿದ್ದಾರೆ.
ಸೂರ್ಯಾಸ್ತದ ವರ್ಣನೆ:
ಅಸ್ತಮಿತಂ ಪಿತರಂ ದಿನನಾಥಂ
ಪ್ರೇಕ್ಷ್ಯ ಶುಚಾ ಹಿ ವಿಹಾಯ ವಿಹಾಯಾಃ |
ಧೈರ್ಯಮಥಾಯಮುದೀರ್ಣವಿರಾಗೋ
ಧಾರಯತೀಹ ಕಷಾಯಿತವಸ್ತ್ರಮ್ || (೫.೪೨)
(ತನ್ನ ತಂದೆ ಸೂರ್ಯನ ಅವಸಾನವನ್ನು ಕಂಡು ಶೋಕತಪ್ತವಾದ ಆಗಸವು ವಿರಕ್ತಿ ಹೊಂದಿ ಕಾಷಾಯವಸ್ತ್ರವನ್ನು ತೊಟ್ಟಂತೆ ಕಾಣುತ್ತಿದೆ.)
ಹಿಮಾಲಯದ ವರ್ಣನೆ:
ಯಶ್ಚ ತುಷಾರಪಟಾವೃತಶೀರ್ಷೋಽ-
ಪ್ಯಾತ್ಮವಿಭೂತಿಪರಿಷ್ಕೃತಗಾತ್ರಃ |
ಭಾತ್ಯಚಲಃ ಶ್ರಿತಯೋಗಸಮಾಧಿಃ
ಪಾದಪಸಂವೃತಿಮಾನಿವ ಯೋಗೀ || (೫.೧೦೨)
(ತಲೆಯ ಮೇಲೆ ಹಿಮ ಸುರಿದಿದ್ದರೂ [ಅದರ ಪರಿವೆಯೇ ಇಲ್ಲದೆ], ತನ್ನ ಗುಣಮಹಿಮೆಯಿಂದ ಹೊಳೆಯುವ ದೇಹವುಳ್ಳ [ಮೈಗೆಲ್ಲ ಭಸ್ಮ ಲೇಪಿಸಿಕೊಂಡು], ಮರಗಳ ಮರೆಯಲ್ಲಿ ಯೋಗಸಮಾಧಿಯಲ್ಲಿ ಲೀನವಾಗಿರುವ ಯೋಗಿಯಂತೆ ಹಿಮಾಲಯವು ತೋರುತ್ತಿದೆ.)
ರಾಮಕೃಷ್ಣಭಟ್ಟರ ಪದ್ಯಗಳಲ್ಲಿ ಕನ್ನಡಗಾದೆಗಳ ಸೊಗಸಾದ ಅನುವಾದಗಳನ್ನು ಅಲ್ಲಲ್ಲಿ ಕಾಣಬಹುದು. ಉದಾಹರಣೆಗೆ: ‘ಹಾವೂ ಸಾಯಬಾರದು ಕೋಲೂ ಮುರಿಯಬಾರದು’ ಎಂಬುದನ್ನವರು ‘ಭುಜಂಗಮೋ ನ ಹಂತವ್ಯೋ ನ ಭಜ್ಯೇತಾಪಿ ಯಷ್ಟಿಕಾ’ (ಕಾವ್ಯಮಂಜರಿ, ಪು. ೨೧೨) ಎಂಬ ಶ್ಲೋಕಶಕಲವಾಗಿ ರೂಪಿಸಿದ್ದಾರೆ.
* * *
ಭಗವಾನ್ ರಮಣಮಹರ್ಷಿಗಳ ‘ಉಪದೇಶಸಾರ’ ಎಂಬ ಕೃತಿಯನ್ನು ಭಟ್ಟರು ಬಲುಚೆಲುವಾಗಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಸಾಂಗತ್ಯದಲ್ಲಿ ಸಾಗುವ ಈ ಅನುವಾದದ ಕೆಲವು ಮಾದರಿಗಳನ್ನು ಕಾಣಬಹುದು. ಆದಿಪ್ರಾಸ, ಬಂಧದ ಸೊಬಗು ಮತ್ತು ಅರ್ಥದ ತಿಳಿತನಗಳನ್ನು ವಿಶೇಷವಾಗಿ ಗಮನಿಸಬಹುದು.
ಕರ್ಮಾಚರಣೆಯು ಚಿತ್ತಶುದ್ಧಿಗಾಗಿ ಎಂದು ವಿವರಿಸುವ ಪದ್ಯ:
ಬಯಕೆಯನುಳಿದಾಣ್ಮನಡಿಗರ್ಪಿಸಿದ ಕರ್ಮ-
ವಯತನಮಾಗಿ ಮಾನಸಕೆ |
ನಿಯತಶುದ್ಧಿಯನಿತ್ತು ಸುತ್ತೇಂ ಮುಕ್ತಿಗದೊಂದು
ಜಯಿಪ ಸಾಧನಮಪ್ಪುದಲ್ತೆ || (೩)
ಹೊರಗಿನ ವಿಷಯಗಳತ್ತಲೇ ಸುಳಿಯುವ ಚಿತ್ತವನ್ನು ಒಳಗಣ ವಿಷಯಿಯತ್ತ ತಿರುಗಿಸಬೇಕೆಂದು ಹೇಳುವ ಪದ್ಯ:
ಚಕ್ಷುರ್ಗೋಚರಮಪ್ಪ ವಸ್ತುಗಳತ್ತಣಿಂ-
ದಕ್ಷತಮಾಗಿ ಪಿಂದೀಳ್ದ |
ದಕ್ಷ ಚಿತ್ತಮದಂತರ್ಮುಖಮಾಗಿ ತತ್ತ್ವಚಿ-
ತ್ಸಾಕ್ಷಾತ್ಕಾರಮನೆ ಪೊಂದುವುದು || (೧೬)
ನಮ್ಮ ಅಂತರಂಗದ ಮೂಲದ್ರವ್ಯವಾದ ಅಹಂಕಾರವು ಕರಗಿದಾಗ ಆತ್ಮಸಾಕ್ಷಾತ್ಕಾರವಾಗುತ್ತದೆ ಎಂದು ವಿವರಿಸುವ ಪದ್ಯ:
ನಾನೆಂಬಹಂಕಾರವಕ್ಕುಂ ಚಿತ್ತಕೆ ಮೂಲ-
ಸ್ಥಾನವಿಂತದು ನಾಶವೊಂದಿ |
ಆನುಕೂಲ್ಯದೊಳಾತ್ಮಸ್ಫುರಣೆಯುತ್ತಮತಪ-
ವೀ ನುಡಿ ರಮಣಭಾಷಿತವು || (೩೦)
ರಾಮಕೃಷ್ಣಭಟ್ಟರು ಶಕ್ತಿಭದ್ರನೆಂಬ ಕವಿ ರಚಿಸಿದ ‘ಆಶ್ಚರ್ಯಚೂಡಾಮಣಿ’ ಎಂಬ ಸಂಸ್ಕೃತರೂಪಕವನ್ನು ಕನ್ನಡಕ್ಕೆ ಸಂಪೂರ್ಣವಾಗಿ ಅನುವಾದ ಮಾಡಿದ್ದಾರೆ. ಈ ಕೃತಿ ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿದ್ವಾನ್ ಮತ್ತು ಬಿ. ಎ. ಪರೀಕ್ಷೆಗಳಿಗೆ ಪಾಠ್ಯವಾಗಿತ್ತು. ಗದ್ಯವನ್ನು ಗದ್ಯವಾಗಿ, ಪದ್ಯವನ್ನು ಪದ್ಯವಾಗಿ ಸಾಗಿಸುವ ಅವರ ಭಾಷಾಂತರ ಮೆಚ್ಚುವಂತಿದೆ. ಹಳಗನ್ನಡದ ಮೇಲೆ ಅವರಿಗಿದ್ದ ಹಿಡಿತ ಈ ಕೃತಿಯ ಪ್ರತಿ ಪುಟದಲ್ಲಿಯೂ ಕಾಣಸಿಗುತ್ತದೆ. ಮೂಲದ ಪದ್ಯಗಳನ್ನು ಕಂದ-ವೃತ್ತಗಳಾಗಿ ಭಾಷಾಂತರಿಸುವಲ್ಲಿ ಒಳ್ಳೆಯ ಕೌಶಲವನ್ನು ಮೆರೆದಿರುವ ಭಟ್ಟರು ಅರ್ಥಸ್ಪಷ್ಟತೆಗೆ ಎಂದೂ ಎರವಾಗಿಲ್ಲ. ನಿರ್ವಾಹ ಮಾಡಲು ಕಷ್ಟವಾದ ಹಲವು ಬಗೆಯ ಪ್ರಾಸಗಳನ್ನೊಳಗೊಂಡ ಅನೇಕ ಪದ್ಯಗಳು ಅವರ ವ್ಯುತ್ಪತ್ತಿಯನ್ನು ಸಾರಿ ಹೇಳುತ್ತವೆ. ಒಂದೆರಡು ಉದಾಹರಣೆಗಳನ್ನು ಮೂಲದೊಡನೆ ಹೋಲಿಸಿ ನೋಡಬಹುದು.
ಕೈಕೇಯಿಯ ಆಜ್ಞೆಯಿಂದ ಕೋಪಗೊಂಡ ಲಕ್ಷ್ಮಣನನ್ನು ಸಾಂತ್ವಯಿಸುತ್ತ, “ಆಕೆಯ ಮಾತು ನಮಗೆ ಒಳ್ಳೆಯದನ್ನೇ ಮಾಡಿದೆ; ಕಾಡಿಗೆ ತೆರಳಿ ಋಷಿ-ಮುನಿಗಳನ್ನು ಸೇವಿಸುವ ಸದವಕಾಶ ನಮಗೊದಗಿದೆ” ಎಂಬ ರಾಮನ ಮಾತುಗಳ ಪದ್ಯ:
ಮಾರ್ಗೇ ನಿರ್ವೃತಿಮಾರ್ಗಮಾರ್ಗಣಪರಾನಾರಾಧಯಂತೋ ಮುನೀನ್
ಸ್ವೈರಂ ಸೇವಿತತೀರ್ಥಸಿಂಧುಪಯಸೋ ದೂರಂ ನಿರಸ್ತಾಧಯಃ |
ಮಾತ್ರಾ ಲಕ್ಷ್ಮಣ ಕೇಕಯೇಂದ್ರಸುತಯಾ ವ್ಯಾಜೇನ ನೀತಾ ವಯಂ
ಸ್ವಾಮುತ್ಸೃಜ್ಯ ಧುರಂ ಭುವೋ ಮುನಿವನಂ ಯಾತವ್ಯಮಿಕ್ಷ್ವಾಕುಭಿಃ || (೧.೧೪)
ಮೋಕ್ಷಾಪೇಕ್ಷಿಮುನೀಂದ್ರವೃಂದಕೆ ತುಳಿಲ್ಗೆಯ್ದೆಲ್ಲ ಪುಣ್ಯಾಪಗಾ-
ಸುಕ್ಷೇತ್ರಂಗಳನೋತು ಕಂಡು ವನದೊಳ್ಸಯ್ಪಂ ಮನಶ್ಶಾಂತಿಯಂ |
ಚಕ್ಷುರ್ಗೋಚರಮೆಂಬಿನಂ ತಳೆದುದರ್ಕಾಮಲ್ತೆ ಕೈಕೇಯಿಯೇ
ಸ್ವಕ್ಷತ್ರೋಚಿತವಾನಧರ್ಮಕೆ ನಿದಾನಂ ವ್ಯಾಜದಿಂದೊಳ್ಳಿದಳ್ ||
ಶಾರ್ದೂಲವಿಕ್ರೀಡಿತ ಎಂಬ ವೃತ್ತದಲ್ಲಿ ರಚಿತವಾದ ಮೂಲದ ಪದ್ಯವನ್ನು ಭಟ್ಟರು ಅದೇ ಛಂದಸ್ಸಿನಲ್ಲಿ ಭಾಷಾಂತರಿಸಿದ್ದಾರೆ. ದುಷ್ಕರವಾದ ‘ಕ್ಷ’ಪ್ರಾಸವನ್ನು ಸುಲಭವಾಗಿ, ಉಚಿತವಾಗಿ ನಿರ್ವಹಿಸಿದ್ದಾರೆ. ರಾಮನ ಮಾತುಗಳ ಭಾವಕ್ಕೆ ಒಂದಿಷ್ಟೂ ಕುಂದೊದಗಿಲ್ಲ. ಸಂಸ್ಕೃತ ಮತ್ತು ಕನ್ನಡಗಳನ್ನು ಹದವರಿತು ಬಳಸಿಕೊಂಡಿರುವ ಈ ಪದ್ಯ ಒಳ್ಳೆಯ ಅನುವಾದಕ್ಕೆ ಮಾದರಿ.
ಹನೂಮಂತನು ಸೀತೆಯನ್ನು ಕಂಡು ಆಕೆಗೆ ರಾಮನ ಮುದ್ರಾಂಗುಲೀಯಕವನ್ನು ಕೊಟ್ಟಾಗ ಅದನ್ನು ಕಂಡು ಸಂತಸಪಟ್ಟ ಜಾನಕಿಯ ವರ್ಣನೆಯಿರುವ ಪದ್ಯ:
ಆರೋಪಯತ್ಯಲಕಮಾನಯತಿ ಸ್ವವಕ್ತ್ರಂ
ಭೂಯಃ ಸಮಾಶ್ರಯತಿ ಬಾಹುಲತೋಪಪೀಡಮ್ |
ಪ್ರತ್ಯೇಕಮರ್ಪಯತಿ ಚಾಂಗುಲಿಪಲ್ಲವೇಷು
ಧ್ಯಾನಾಧಿಕಸ್ತಿಮಿತಮಾರ್ದ್ರಮವೇಕ್ಷತೇ ಚ || (೬.೧೪)
ಉಂಗುರಮನೊರ್ಮೆ ನಿರಿಪ-
ಳ್ಮುಂಗುರುಳೊಳ್ಮುದ್ದುಗೆಯ್ವಳಂತಪ್ಪುವಳಾ |
ಸಂಗದೆ ತೋಳ್ಗಳಿನೋರೊಂ-
ದಂಗುಳಿಯಲ್ಲಿಟ್ಟು ನೋಳ್ಪಳುಸಿಕನೆಯಳಲಿಂ ||
ವಸಂತತಿಲಕಾವೃತ್ತದಲ್ಲಿ ರಚಿತವಾಗಿರುವ ಮೂಲದ ಪದ್ಯವನ್ನು ಭಟ್ಟರು ಕನ್ನಡದಲ್ಲಿ ಕಂದವಾಗಿ ರೂಪಿಸಿದ್ದಾರೆ. ಇಲ್ಲಿ ಅವರು ಸಾಧಿಸಿರುವ ಅಡಕವನ್ನು ಹಾಗೂ ಹೆಚ್ಚಾಗಿ ಹಳಗನ್ನಡದ ಪದಗಳನ್ನೇ ಬಳಸಿರುವ ಪರಿಯನ್ನು ಎಷ್ಟು ಹೊಗಳಿದರೂ ಸಾಲದು. ‘ಸ್ವವಕ್ತ್ರಮ್ ಆನಯತಿ’ ಎಂಬುದನ್ನು ‘ಮುದ್ದುಗೆಯ್ವಳ್’ ಎಂದು ಭಾಷಾಂತರಿಸಿರುವುದು ಚೆಲುವಾಗಿದೆ. ಪದ್ಯದ ಅರ್ಥ ಎಲ್ಲಿಯೂ ಹಿಗ್ಗಿಲ್ಲ, ಕುಗ್ಗಿಲ್ಲ. ಅನಪೇಕ್ಷಿತವಾದ ಒಂದು ಪದವೂ ಸುಳಿದಿಲ್ಲ. ಇದು ಸ್ವಲ್ಪದ ಸಿದ್ಧಿಯಲ್ಲ.
ತಾಯ್ನೆಲದ ಸಂಸ್ಕೃತಿಯ ಬಗೆಗೆ, ತಮ್ಮ ಪಂಗಡದ ಆಚರಣೆಗಳ ಬಗೆಗೆ ವಿಶೇಷ ಆಸ್ಥೆಯನ್ನು ತಳೆದಿದ್ದ ಪ್ರೊ|| ರಾಮಕೃಷ್ಣಭಟ್ಟರು ಹ್ಯವಕಬ್ರಾಹ್ಮಣರಲ್ಲಿ ಪ್ರಸಿದ್ಧವಾದ ಹಲವಾರು ಲಾಲಿಯ ಹಾಡುಗಳನ್ನು ಸಂಗ್ರಹಿಸಿ ‘ತ್ರಿವೇಣಿ’ ಮತ್ತು ‘ಸಾಧನಾ’ ಪತ್ರಿಕೆಗಳಲ್ಲಿ ಪ್ರಕಟಿಸಿದ್ದರು. ತಮ್ಮ ಪಂಗಡದ ಜನರನ್ನು ಒಟ್ಟುಗೂಡಿಸಿ ನಾಡಿನಲ್ಲಿ ಸಾಂಸ್ಕೃತಿಕ ಜಾಗರಣವನ್ನು ಉಂಟುಮಾಡಲು ಅವರು ಹವ್ಯಕಮಾಹಾಸಭೆಯನ್ನು ಸ್ಥಾಪಿಸಿದುದನ್ನು ವಿಶೇಷವಾಗಿ ಸ್ಮರಿಸಬೇಕು.
* * *
ಹೀಗೆ ಶಾಸ್ತ್ರ-ಕಾವ್ಯಗಳ ಸವ್ಯಸಾಚಿಯಾಗಿ ಸಿದ್ಧಿ ಗಳಿಸಿದ ಮೇಣ ರಾಮಕೃಷ್ಣಭಟ್ಟರಿಗೆ ರಾಷ್ಟç-ರಾಜ್ಯಗಳ ಸ್ತರದಲ್ಲಿ ಯಾವುದೇ ಉನ್ನತ ಸಮ್ಮಾನ ಸಿಗಲಿಲ್ಲ. ೧೯೭೨ರಲ್ಲಿ ಪ್ರಸಿದ್ಧ ಪತ್ರಿಕೆ ‘India’s Who’s Who’ ಅವರ ಸಾಧನೆಗಳನ್ನು ಗೌರವಪೂರ್ವಕವಾಗಿ ಉಲ್ಲೇಖಿಸಿತ್ತು. ಜ್ಞಾನಪೀಠಪುರಸ್ಕಾರಕ್ಕೆ ಅವರ ಸಮಗ್ರವಾಙ್ಮಯವನ್ನು ಗಣಿಸಲಾಗಿತ್ತೆಂದೂ ಗುಣವಂತಿಕೆಗಿಂತ ಬೇರೆಯ ಕಾರಣಗಳಿಂದ ಆ ಪುರಸ್ಕಾರ ಅವರಿಗೆ ಲಭಿಸಲಿಲ್ಲವೆಂದೂ ತಿಳಿದುಬರುತ್ತದೆ. ಏನೇ ಆಗಲಿ, ಹಲಕೆಲವು ಸಾಂಸ್ಕೃತಿಕ ಸಂಸ್ಥೆಗಳು, ಮಠ-ಪೀಠಗಳು ಅವರನ್ನು ಸಮ್ಮಾನಿಸಿ ನೀಡಿದ ಪ್ರಶಸ್ತಿಗಳು ಸಾರ್ಥಕವಾಗಿವೆ. ಪ್ರೊ|| ರಾಮಕೃಷ್ಣಭಟ್ಟರು ನಿಜಾರ್ಥದಲ್ಲಿ ‘ವಿದ್ಯಾಭಾಸ್ಕರ’, ‘ವಿದ್ಯಾಸಾಗರ’, ‘ಕವಿತಾಚತುರ’.
[ಈ ಲೇಖನವನ್ನು ನಾನು ರಚಿಸಲು ಕಾರಣರಾದವರು ನಾಡೋಜ ಎಸ್. ಆರ್. ರಾಮಸ್ವಾಮಿಗಳು. ಅವರ ಆದೇಶದಂತೆ ‘ಉತ್ಥಾನ’ ಪತ್ರಿಕೆಯ ಸಂಪಾದಕರಾಗಿದ್ದ ದಿ. ಕಾಕುಂಜೆ ಕೇಶವಭಟ್ಟರು ರಾಮಕೃಷ್ಣಭಟ್ಟರ ಮಗ ಡಾ|| ಶಿವಕುಮಾರ್ ಅವರನ್ನು ಪರಿಚಯಿಸಿಕೊಟ್ಟು, ಅವರ ಮೂಲಕ ಅನೇಕ ಮೌಲಿಕ ಸಂಗತಿಗಳೂ ಪುಸ್ತಕಗಳೂ ಸಿಗುವಂತೆ ಮಾಡಿದರು. ಈ ಎಲ್ಲ ಮಹನೀಯರಿಗೂ ನಾನು ಆಭಾರಿಯಾಗಿದ್ದೇನೆ.]
Concluded.