ಹಿಂದಿನ ಕಾಲದಲ್ಲಿ ಸಂಸ್ಕೃತಪತ್ರಿಕೆಗಳನ್ನು ಪ್ರಕಟಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆಡಂಬರವೂ ಅಲ್ಲದ, ಅಳ್ಳಕವೂ ಅಲ್ಲದ ಶಕ್ತ-ಸಹಜ ಶೈಲಿಯನ್ನು ಹದಮಾಡಿಕೊಳ್ಳುವುದು ಒಂದು ಬಗೆಯ ಕಷ್ಟವಾದರೆ, ಹಲವು ವಿಷಯಗಳನ್ನು ಕುರಿತು ನಿಯತವಾಗಿ ಲೇಖನಗಳನ್ನು ಬರೆಯುವ ವಿದ್ವಾಂಸರನ್ನು ಗೊತ್ತುಮಾಡಿಕೊಂಡು ಅವರಿಂದ ಬರೆಯಿಸಿ ಪ್ರಕಟಿಸುವುದು ಮತ್ತೊಂದು ಬಗೆಯ ತೊಡಕು. ಅಪ್ಪಾಶಾಸ್ತ್ರೀ ರಾಶಿವಡೇಕರ್ (‘ಸಂಸ್ಕೃತಚಂದ್ರಿಕಾ’, ‘ಸೂನೃತವಾದಿನೀ’), ವಿ. ರಾಘವನ್ (‘ಸಂಸ್ಕೃತಪ್ರತಿಭಾ’), ಭಟ್ಟಶ್ರೀ ಮಥುರನಾಥಶಾಸ್ತ್ರೀ (‘ಸಂಸ್ಕೃತರತ್ನಾಕರ’), ಆರ್. ಕೃಷ್ಣಮಾಚಾರಿಯರ್ (‘ಸಹೃದಯಾ’), ಗಲಗಲಿ ರಾಮಾಚಾರ್ಯ (‘ಮಧುರವಾಣೀ’) ಮುಂತಾದವರ ಈ ನಿಟ್ಟಿನ ಕೆಲಸ ಹಿರಿದಾದುದು.
ರಾಮಕೃಷ್ಣಭಟ್ಟರು ಸೇಂಟ್ ಜೋಸೆಫ್ಸ್ ಕಾಲೇಜಿನ ವಿದ್ಯಾರ್ಥಿಗಳನ್ನು ಸಂಘಟಿಸಿ, ಅವರಿಗೆ ಸೂಕ್ತ ಶಿಕ್ಷಣ ಕೊಟ್ಟು ಅವರಿಂದಲೇ ಲೇಖನಗಳನ್ನು ಬರೆಯಿಸಿ ಪ್ರಕಟಿಸಲು ಉದ್ಯುಕ್ತರಾದರು. ಹೀಗೆ ಪ್ರಾರಂಭವಾದದ್ದು ‘ಅಮೃತವಾಣೀ’. ಹಂತಹಂತವಾಗಿ ಮದ್ರಾಸಿನಲ್ಲಿ ತಮ್ಮ ಸಹಪಾಠಿಗಳೂ ವಿದ್ವನ್ಮಿತ್ರರೂ ಆಗಿದ್ದ ಹಲವರಿಂದ ಬರೆಹಗಳನ್ನು ಕೋರಿ ಪ್ರಕಟಿಸಿದರು; ತಾವೂ ಲೇಖನಗಳನ್ನು ಬರೆದರು. ಪ್ರಸಿದ್ಧರಾದ ವಿ. ರಾಘವನ್, ಕೆ. ಎಸ್. ರಾಮಸ್ವಾಮಿಶಾಸ್ತ್ರೀ, ಕೆ. ಎಸ್. ನಾಗರಾಜನ್ ಮೊದಲಾದವರ ಕಾವ್ಯ-ಪ್ರಬಂಧಗಳು ಪತ್ರಿಕೆಯ ಗುಣವಂತಿಕೆಯನ್ನು ಹೆಚ್ಚಿಸಿದವು. ರಾಮಕೃಷ್ಣಭಟ್ಟರು ಸಂಸ್ಕೃತದಲ್ಲಿ ಬರೆದದ್ದಷ್ಟೇ ಅಲ್ಲದೆ ಆ ಕಾಲದ ವಿದ್ಯಮಾನಗಳನ್ನು ಕುರಿತು, ಸಂಸ್ಕೃತದಲ್ಲಿ ಸಾಗುತ್ತಿರುವ ಕೆಲಸಗಳನ್ನು ಕುರಿತು ಇಂಗ್ಲಿಷಿನಲ್ಲಿ ಕೂಡ ಅನುಬಂಧರೂಪದ ಟಿಪ್ಪಣಿಗಳನ್ನು ಬರೆಯುತ್ತಿದ್ದರು. ಇದು ಅವರ ವಿಶಾಲದೃಷ್ಟಿಯನ್ನು ತೋರಿಸುತ್ತದೆ. ತಮಗೆ ಸಮ್ಮತವಲ್ಲದ ಅಭಿಪ್ರಾಯಗಳಿರುವ ಲೇಖನಗಳು ಬಂದಾಗಲೂ ಅವನ್ನು ಯಥಾವತ್ತಾಗಿ ಪ್ರಕಟಿಸಿ ಸಂಪಾದಕೀಯದಲ್ಲಿ ಕೆಲವೇ ಮಾತುಗಳ ಸ್ಪಷ್ಟೀಕರಣ ನೀಡುತ್ತಿದ್ದರು. ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಂಗ್ರಹಯೋಗ್ಯವಾದ ಹಲವು ಲೇಖನಗಳನ್ನು ಪ್ರಕಟಿಸಿದ ಯಶಸ್ಸು ‘ಅಮೃತವಾಣಿ’ಯದು.
‘ಅಮೃತವಾಣಿ’ ಮೇಲ್ನೋಟಕ್ಕೆ ಸಾಮಾನ್ಯವಾದ ಕಾಲೇಜ್ ಪತ್ರಿಕೆಯಂತೆ ಕಂಡರೂ ಸಂಪಾದಕರ ದಕ್ಷತೆ-ಪ್ರಾಮಾಣಿಕತೆಗಳಿಂದ ಒಳ್ಳೆಯ ವಿದ್ವತ್ಪತ್ರಿಕೆಯಾಗಿ ಮೈದಾಳಿತು. ಒಂದೆರಡು ಆರಂಭದ ವರ್ಷಗಳನ್ನು ಬಿಟ್ಟರೆ ತಾವು ಬೆಂಗಳೂರಿನಲ್ಲಿದ್ದ ಅಷ್ಟೂ ಕಾಲ ರಾಮಕೃಷ್ಣಭಟ್ಟರು ಈ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಇದು ಅವರ ದೀಕ್ಷೆಯ ದ್ಯೋತಕ.
* * *
ಪ್ರೊ|| ರಾಮಕೃಷ್ಣಭಟ್ಟರ ಸಾರಸ್ವತ ವ್ಯವಸಾಯದ ಪೂರ್ಣಫಲ ವರಾಹಮಿಹಿರನ ವಿಶ್ವಕೋಶಾತ್ಮಕ ಕೃತಿ ‘ಬೃಹತ್ಸಂಹಿತೆ’ಯ ಇಂಗ್ಲಿಷ್ ಅನುವಾದ ಎನ್ನಬಹುದು. ಈ ಹೆಬ್ಬೊತ್ತಿಗೆಯು ಪ್ರಸಿದ್ಧ ಪ್ರಕಾಶನಸಂಸ್ಥೆ ಮೋತಿಲಾಲ್ ಬನಾರಸಿದಾಸ್ ಅವರ ವತಿಯಿಂದ ಎರಡು ಭಾಗಗಳಲ್ಲಿ ಪ್ರಕಾಶಿತವಾಗಿದೆ. ೧೯೭೪ರಲ್ಲಿಯೇ ಗ್ರಂಥದ ಕರಡು ಸಿದ್ಧವಾಗಿದ್ದರೂ ಅದರ ಮೊದಲ ಭಾಗ ಪ್ರಕಟಿತವಾಗಿದ್ದು ೧೯೮೧ರಲ್ಲಿ! ಎರಡನೆಯ ಸಂಪುಟ ಕೆಲವು ಕಾಲದ ಬಳಿಕ ಹೊರಬಂದಿತು. ಹೀಗೆ ಪ್ರಕಟನಕ್ಕೆ ಮೊದಲು ಅಡತಡೆಗಳು ಎದುರಾದರೂ ಅನಂತರ ಈ ಗ್ರಂಥ ಅಪಾರ ಜನಪ್ರಿಯತೆಯನ್ನು ಗಳಿಸಿತು.
ರಾಮಕೃಷ್ಣಭಟ್ಟರು ಸುಮಾರು ಐವತ್ತು ಪುಟಗಳ ತಮ್ಮ ಪ್ರಾಸ್ತಾವಿಕ ಲೇಖನದಲ್ಲಿ ವರಾಹಮಿಹಿರನ ದೇಶ-ಕಾಲ, ಆತನ ಇತರ ಗ್ರಂಥಗಳು, ‘ಬೃಹತ್ಸಂಹಿತೆ’ಯ ಅಷ್ಟೂ ಅಧ್ಯಾಯಗಳ ವಿವರಗಳು, ಗ್ರಂಥದ ಶೈಲಿ, ಇಲ್ಲಿಯ ಪದ್ಯಗಳ ಕಾವ್ಯಾತ್ಮಕತೆ, ಅವುಗಳಲ್ಲಿ ಬಳಕೆಯಾದ ಅಲಂಕಾರ-ಛಂದಸ್ಸುಗಳ ಲಕ್ಷಣ, ವಿವಿಧ ಶಾಸ್ತ್ರಗಳಲ್ಲಿ ಮಿಹಿರನಿಗಿದ್ದ ಪಾಂಡಿತ್ಯ, ವ್ಯಾಖ್ಯಾನಕಾರನಾದ ಭಟ್ಟೋತ್ಪಲನ ಹಿನ್ನೆಲೆ, ಆತನ ಗ್ರಂಥಗಳು ಹಾಗೂ ವಿದ್ವತ್ತೆ, ಪ್ರಾಚೀನ ಭಾರತವನ್ನು ಅರ್ಥೈಸಿಕೊಳ್ಳಲು ‘ಬೃಹತ್ಸಂಹಿತೆ’ಯ ಉಪಯುಕ್ತತೆಯೇ ಮೊದಲಾದ ಹಲವು ಮೌಲಿಕ ಸಂಗತಿಗಳನ್ನು ಚರ್ಚಿಸಿದ್ದಾರೆ.
ಒಂದು ವಿಶ್ವಕೋಶವನ್ನು ಅನುವಾದ ಮಾಡಲು ಅಲ್ಪಶ್ರುತರಿಗೆ ಸಾಧ್ಯವಿಲ್ಲ. ಅದಕ್ಕೆ ರಾಮಕೃಷ್ಣಭಟ್ಟರಂಥ ಬಹುಶ್ರುತರೇ ಆಗಬೇಕು. ಅವರು ತಮ್ಮ ಕೃತಿಯಲ್ಲಿ ಬರಿಯ ಅನುವಾದವನ್ನು ಮಾಡಿ ತೃಪ್ತಿಸದೆ ವೇದಗಳು, ವೇದಾಂಗಗಳು, ಮನುಸ್ಮೃತಿ, ಮಹಾಭಾರತ, ಪುರಾಣಸಾಹಿತ್ಯ, ಕಾಳಿದಾಸನ ಕಾವ್ಯಗಳು, ಅಷ್ಟಾಧ್ಯಾಯಿ ಮೊದಲಾದ ಗ್ರಂಥಗಳ ಉಧ್ಧೃತಿಯ ಮೂಲಕ ಆನುಷಂಗಿಕವಾದ ಅನೇಕ ವಿವರಗಳನ್ನು ಒದಗಿಸಿ ಓದುಗರಿಗೆ ಮಹೋಪಕಾರ ಮಾಡಿದ್ದಾರೆ. ಭಟ್ಟೋತ್ಪಲನ ವ್ಯಾಖ್ಯಾನದ ಸಾರವನ್ನಂತೂ ಸೊಗಸಾಗಿ ಸಂಗ್ರಹಿಸಿದ್ದಾರೆ. ಅವಶ್ಯವಿರುವ ಕಡೆ ಚಿತ್ರಗಳನ್ನೂ ಕೋಷ್ಠಕಗಳನ್ನೂ ಕೊಟ್ಟು ವಿಷಯದ ಗ್ರಹಣಕ್ಕೆ ಯಾವ ತೊಡಕೂ ಆಗದಂತೆ ನೋಡಿಕೊಂಡಿದ್ದಾರೆ. ಅವರು ಅನುಬಂಧವಾಗಿ ನೀಡಿರುವ ಅಂತರ್ಜಲದ ವಿವರಗಳು ಇಂದಿಗೂ ಬೇರೆಡೆ ದುರ್ಲಭ.
ರಾಮಕೃಷ್ಣಭಟ್ಟರ ಅನುವಾದವು ಶಾಸ್ತ್ರನಿರೂಪಣೆಗೆ ಬೇಕಾದ ಬಿಗಿಯನ್ನು ಉಳಿಸಿಕೊಂಡೇ ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿದೆ. ಪ್ರಾಚೀನ ಭಾರತದ ಎಷ್ಟೋ ಆಯಾಮಗಳ ಬಗೆಗೆ ಅಮೂಲ್ಯವಾದ ಜ್ಞಾನ ನೀಡುವ ಈ ಗ್ರಂಥ ಇಂದಿಗೂ ಲಭ್ಯವಿರುವುದು ಸಂತಸದ ಸಂಗತಿ.
ಜ್ಯೌತಿಷಕ್ಕೆ ಸಂಬಂಧಿಸಿದ ರಾಮಕೃಷ್ಣಭಟ್ಟರ ಮಿಕ್ಕ ಗ್ರಂಥಗಳ ಪೈಕಿ ‘Fundamentals of Astrology’ ಮತ್ತು ‘Essentials of Horary Astrology’ ಪ್ರಮುಖವಾದುವು. ಮೊದಲನೆಯದು ಬೆಂಗಳೂರಿನ ಪ್ರಸಿದ್ಧ ದೈವಜ್ಞರಾದ ಬಿ. ವಿ. ರಾಮನ್ ಅವರು ಹೊರತರುತ್ತಿದ್ದ ಪತ್ರಿಕೆಯಲ್ಲಿ ಧಾರಾವಾಹಿಯ ರೂಪದಲ್ಲಿ ಪ್ರಕಟವಾಗಿ ಆ ಬಳಿಕ ಪುಸ್ತಕದ ರೂಪ ಪಡೆಯಿತು. ಇಪ್ಪತ್ತೆರಡು ಅಧ್ಯಾಯಗಳಿರುವ ಈ ಪುಸ್ತಕದಲ್ಲಿ ಭಟ್ಟರು ಜ್ಯೌತಿಷವನ್ನು ಅಧಿಕೃತವಾಗಿ ಪರಿಚಯಿಸಿದ್ದಾರೆ. ಹೊಸಪೀಳಿಗೆಯ ವಾಚಕರಿಗೆ ಪಂಚಾಗದ ಬಗೆಗೆ ತಿಳಿಸಲು ರಚಿತವಾಗಿರುವ ಅನುಬಂಧ ಆ ವಿಷಯವನ್ನು ತಿಳಿಯಬಯಸುವವರೆಲ್ಲ ಅವಶ್ಯವಾಗಿ ಓದಬೇಕಾದ ಚೊಕ್ಕವಾದ ಬರೆಹ. ಎರಡನೆಯ ಗ್ರಂಥ ದಕ್ಷಿಣಕನ್ನಡದಲ್ಲಿ ಪ್ರಸಿದ್ಧವಾದ ಅಷ್ಟಮಂಗಲದ ವಿಧಿ-ವಿಧಾನಗಳನ್ನು ನಿರೂಪಿಸುತ್ತದೆ. ಇದರೊಟ್ಟಿಗೆ ‘ಪ್ರಶ್ನಮಾರ್ಗ’ ಎಂಬ ಗ್ರಂಥದ ಕರ್ತೃವಿನ ವಿಚಾರ, ಆತನ ಶಿಷ್ಯಪರಂಪರೆ, ಚಂದ್ರಗುಪ್ತಿ, ಚೋರಗ್ರಹ ಮುಂತಾದ ಹಲವಾರು ವಿಷಯಗಳನ್ನು ವಿಶದೀಕರಿಸುತ್ತದೆ. ಇದು ತಮ್ಮ ಕೊನೆಯ ರಚನೆಯೆಂದು ಹೇಳಿಯೇ ಉಪಕ್ರಮಿಸಿದ ರಾಮಕೃಷ್ಣಭಟ್ಟರು ಆ ಬಳಿಕ ಯಾವ ಗ್ರಂಥವನ್ನೂ ಬರೆಯಲಿಲ್ಲ. ತಾವು ಕಲಿತ ಶಾಸ್ತ್ರಕ್ಕೆ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ ತೃಪ್ತಿ ಅವರಲ್ಲಿದ್ದಿತು.
ಪ್ರೊ|| ರಾಮಕೃಷ್ಣಭಟ್ಟರು ‘ಹೋರಾಸಾರ’, ‘ಪ್ರಶ್ನಜ್ಞಾನ’, ‘ಜಾತಕಾದೇಶಮಾರ್ಗ’, ‘ಸಂಕೇತನಿಧಿ’, ‘ಫಲದೀಪಿಕಾ’, ‘ಜಾತಕಾಲಂಕಾರ’ ಮುಂತಾದ ಇನ್ನೂ ಹಲವು ಜ್ಯೋತಿರ್ಗ್ರಂಥಗಳ ಸಂಪಾದನೆ-ಅನುವಾದಗಳಲ್ಲಿ ಸ್ವತಂತ್ರವಾಗಿಯೂ ಸಹಕರ್ತೃಕವಾಗಿಯೂ ದುಡಿದಿದ್ದಾರೆ. ದೇಶದ ಅನೇಕ ವಿದ್ವತ್ಪತ್ರಿಕೆಗಳಲ್ಲಿ ಜ್ಯೌತಿಷವನ್ನು ಕುರಿತ ಅವರ ಶೋಧಲೇಖನಗಳು ಪ್ರಕಟವಾಗಿವೆ.
ಅವರು ಶಾಸ್ತ್ರಗ್ರಂಥಗಳ ಅಧ್ಯಯನ-ಅನುವಾದಗಳಲ್ಲಿ ಕಳೆದುಹೋಗದೆ ಜನಸಾಮಾನ್ಯರ ಜೀವನದಲ್ಲಿ ಶಾಂತಿ-ಪ್ರಫುಲ್ಲತೆಗಳು ನೆಲಸುವಂತೆ ಮಾಡಲು ತಮ್ಮ ತಿಳಿವಳಿಕೆಯನ್ನು ಬಳಸಿಕೊಂಡರು. ತಾವಿದ್ದ ದಕ್ಷಿಣಕನ್ನಡ, ಬೆಂಗಳೂರು, ದೆಹಲಿ ಮೊದಲಾದ ಎಲ್ಲ ಸ್ಥಳಗಳಲ್ಲಿಯೂ ಅವರ ಈ ಕಾಯಕ ಅವಿಶ್ರಾಂತವಾಗಿ ಸಾಗಿತ್ತು. ಅವರು ಜ್ಯೌತಿಷವನ್ನು ಜನರಲ್ಲಿ ಹೆದರಿಕೆ ಹಬ್ಬಿಸಲು ಬಳಸದೆ ಅವರ ಮನಃಸ್ಥೈರ್ಯವನ್ನು ಹೆಚ್ಚಿಸಲು ಉಪಯೋಗಿಸುತ್ತಿದ್ದರು. ತಮ್ಮ ದೈಹಿಕ ಅಸ್ವಾಸ್ಥ್ಯವನ್ನೂ ಮರೆತು ತಮ್ಮನ್ನರಸಿ ಬಂದ ಜನರಿಗೆ ಸೂಕ್ತವಾಗಿ ಸ್ಪಂದಿಸುವುದು ಅವರಿಗೆ ಸಹಜವೇ ಆಗಿತ್ತು. ತಮ್ಮ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ದೇಶದ ಎಲ್ಲೆಡೆಗಳಿಂದ ಅವರಲ್ಲಿಗೆ ಜನರು ಬರುತ್ತಿದ್ದರು. ಜಿಜ್ಞಾಸೆ-ಸಮಾಧಾನಗಳ ಈ ಸರಣಿ ಪತ್ರಗಳ ಮೂಲಕವೂ ಸಾಗುತ್ತಿತ್ತು. ಈ ದಿಶೆಯ ತಮ್ಮ ಕೆಲಸಕ್ಕೆ ಎಂದೂ ಸಂಭಾವನೆ ಸ್ವೀಕರಿಸದ ರಾಮಕೃಷ್ಣಭಟ್ಟರದು ನಿಜಕ್ಕೂ ಉದಾತ್ತ ವರ್ತನೆ. ಹಾಗೊಂದು ವೇಳೆ ಯಾರಾದರೂ ಸಂಭಾವನೆ ಸ್ವೀಕರಿಸಲು ಒತ್ತಾಯಿಸಿದರೆ ಅದನ್ನು ತಮ್ಮ ಇಷ್ಟದೇವತೆ ಗಣಪತಿಯ ಕ್ಷೇತ್ರವಾದ ಮಧೂರಿಗೆ ಸಮರ್ಪಿಸಲು ಹೇಳುತ್ತಿದ್ದರು.
* * *
ರಾಮಕೃಷ್ಣಭಟ್ಟರಿಗೆ ಕವಿತೆಯಲ್ಲಿ ಅಪಾರ ಪ್ರೀತಿ. ಅವರ ಕಾವ್ಯಗಳಲ್ಲಿ ವಿಶಾಲವಾದ ವ್ಯುತ್ಪತ್ತಿಯ ಹಾಗೂ ಸಂತತ ಅಭ್ಯಾಸದ ಸತ್ಪ್ರಭಾವಗಳು ನಿಚ್ಚಳವಾಗಿ ಕಾಣುತ್ತವೆ. ಪ್ರಾಚೀನರ ವಾಕ್ಕ್ರಮದಲ್ಲಿ ಕಾಣಸಿಗುವ ಪ್ರೌಢಿಮೆ, ವ್ಯಾಕರಣಶುದ್ಧಿ, ಬಂಧಸೌಷ್ಠವ, ಧಾರಾಳತೆ ಮುಂತಾದುವು ಪ್ರಾಯಃ ಇವರ ಎಲ್ಲ ಪದ್ಯಗಳ ಲಕ್ಷಣಗಳು. ಪಾಣಿನೀಯತಂತ್ರದ ನವೀನ ಗ್ರಂಥಗಳನ್ನು ಕುರಿತು ಸಂಶೋಧನೆ ನಡಸಿ, ನಾರಾಯಣ ಭಟ್ಟತಿರಿಯ ‘ಪ್ರಕ್ರಿಯಾಸರ್ವಸ್ವ’ದ ಸಂಪಾದನೆಯಲ್ಲಿ ನೆರವಾಗಿದ್ದ ಭಟ್ಟರಿಗೆ ವ್ಯಾಕರಣದ ಸೂಕ್ಷ್ಮಪರಿಜ್ಞಾನ ಇದ್ದುದರಲ್ಲಿ ಅಚ್ಚಿರಿಯೇನಿಲ್ಲ. ಇನ್ನು ಕಾವ್ಯಕೃಷಿಗೆ ಅನುವಾಗಬಲ್ಲ ಅಲಂಕಾರಶಾಸ್ತ್ರದ ಅರಿವನ್ನವರು ಸತ್ಕಾವ್ಯಗಳ ವ್ಯಾಸಂಗದಿಂದ, ಲಕ್ಷಣಗ್ರಂಥಗಳ ಅಧ್ಯಯನದಿಂದ ದಕ್ಕಿಸಿಕೊಂಡಿದ್ದರು.
ಇವರ ಮುದ್ರಿತ ಕಾವ್ಯಗಳ ಬಹುಭಾಗ ತಮ್ಮ ಇಷ್ಟದೇವತೆ ಮಧೂರು ಗಣಪತಿಯ ಸ್ತುತಿಗಳಿಂದಲೂ ವಿವಿಧ ಸಂದರ್ಭಗಳಲ್ಲಿ ಆಶುವಾಗಿ ರಚಿಸಿದ ಪದ್ಯಗಳಿಂದಲೂ ಕೂಡಿದೆ. ಮುಕ್ತಕದಿಂದ ಮೊದಲ್ಗೊಂಡು ಸಹಸ್ರನಾಮದವರೆಗೆ ವಿಸ್ತರಿಸುವ ಗಣಪತಿಯ ಸ್ತುತಿಗಳಲ್ಲಿ ನಿರ್ಭರವಾದ ಭಕ್ತಿಯ ಮಹಾಪೂರವನ್ನೇ ಕಾಣಬಹುದು. ರಾಮಕೃಷ್ಣಭಟ್ಟರು ಸಭೆಗಳಲ್ಲಿ ಪದ್ಯಗಳ ಮೂಲಕವೇ ಭಾಷಣ ಮಾಡುತ್ತಿದ್ದುದೊಂದು ವಿಶೇಷ. ವಿದ್ಯಾರ್ಥಿಗಳ ಸಮಾವೇಶಗಳಲ್ಲಿ, ವಿಚಾರಗೋಷ್ಠಿಗಳಲ್ಲಿ, ಮದುವೆ-ಮುಂಜಿಗಳಲ್ಲಿ, ಪರ್ವಪ್ರಾಯ ದಿವಸಗಳಲ್ಲಿ ಅವರು ರಚಿಸಿದ ಪದ್ಯಗಳ ಸಂಖ್ಯೆ ಅಕ್ಷರಶಃ ಸಾವಿರಾರು. ಇವು ‘ಕಾವ್ಯೋದ್ಯಾನಮ್’ ಮತ್ತು ‘ಕಾವ್ಯಮಂಜರೀ’ ಎಂಬ ಪುಸ್ತಕಗಳಲ್ಲಿ ಸಂಕಲಿತವಾಗಿದ್ದು ಬಲುಮಟ್ಟಿಗೆ ರೂಢವಾದ ರೀತಿಯಲ್ಲಿಯೇ ಸಾಗುತ್ತವೆ.
ಕಲ್ಪನೆ-ಚಮತ್ಕಾರಗಳಿಂದ ಕೂಡಿದ, ರಸಸ್ಫೂರ್ತಿಯಿರುವ ಕೆಲವು ಪದ್ಯಗಳನ್ನು ಗಮನಿಸಬಹುದು. ಮೊದಲಿಗೆ ಒಂದು ಸೊಗಸಾದ ಸುಭಾಷಿತ:
ದೂರಸ್ಥೋಽಪಿ ಪ್ರಿಯಃ ಕಶ್ಚಿದನ್ಯೋ ನೂನಂ ಸಮೀಪಗಃ |
ಪ್ರೀಣಾತಿ ಪದ್ಮಿನೀಂ ಪೂಷಾ ತಾರಾಮಾರಾನ್ನಿಶಾಕರಃ || (ಕಾವ್ಯಮಂಜರಿ, ಪು. ೨೧೮)
(ನಮ್ಮ ಪ್ರೀತಿಪಾತ್ರರು ದೂರವೂ ಇರಬಹುದು, ಹತ್ತಿರವೂ ಇರಬಹುದು. ಆಗಸದಲ್ಲಿ ಬೆಳಗುವ ಸೂರ್ಯ ಬುವಿಯಲ್ಲಿರುವ ಕಮಲವನ್ನು ಅರಳಿಸಿದರೆ ಚಂದ್ರ ಬಾನಿನಲ್ಲಿಯೇ ಇರುವ ತಾರೆಗಳನ್ನು ಸಂತಸಗೊಳಿಸುತ್ತಾನೆ.)
‘ಮನೀಷಿಣಃ ಸಂತಿ ನ ತೇ ಹಿತೈಷಿಣಃ’ (ಬುದ್ಧಿವಂತರು ಅನೇಕರಿದ್ದಾರೆ; ಅವರಾರೂ ಹಿತೈಷಿಗಳಲ್ಲ) ಎಂಬ ಪ್ರಸಿದ್ಧ (ಸಮಸ್ಯೆಯ) ಸಾಲಿಗೆ ರಾಮಾಯಣದ ಹಿನ್ನೆಲೆಯಲ್ಲಿ ಮೂರು ಪಂಕ್ತಿಗಳನ್ನು ಪೋಣಿಸಿ ಭಟ್ಟರು ಪೂರೈಸಿರುವ ರೀತಿ ಸುಂದರವಾಗಿದೆ:
ವಚಃಪೃಷತ್ಕಾಭಿಹತಾವನೀಸುತಾ
ತೃಣಾಂತರೇಣೇತಿ ಜಗಾದ ರಾವಣಮ್ |
ದಿಶಂತ್ಯಮಾಯಾಃ ಕಿಮು ಧರ್ಮಮತ್ರ ವಾ
ಮನೀಷಿಣಃ ಸಂತಿ ನ ತೇ ಹಿತೈಷಿಣಃ || (ಕಾವ್ಯೋದ್ಯಾನಮ್, ಪು. ೧೪೪)
(ರಾವಣನ ಹರಿತವಾದ ವಾಗ್ಬಾಣಗಳಿಂದ ಗಾಸಿಗೊಂಡ ಸೀತೆ ಒಂದು ಹುಲ್ಲುಕಡ್ಡಿಯನ್ನು ಅಡ್ಡವಿಟ್ಟು ಹೀಗೆ ಹೇಳಿದಳು: “ಇಲ್ಲಿ ಧರ್ಮನಿರ್ಣಯವನ್ನು ಕುಟಿಲತೆ ಇಲ್ಲದವರು ಮಾಡುತ್ತಾರೆಯೇ? ಅಯ್ಯೋ, ಬುದ್ಧಿವಂತರಿದ್ದರೂ ಹಿತೈಷಿಗಳಿಲ್ಲವಾಗಿದ್ದಾರೆ!”)
To be continued.