ಈ ಎಲ್ಲ ಅಂಶಗಳಿಗಿಂತ ಮಿಗಿಲಾಗಿ ವೇದವ್ಯಾಸರು ಮಹಾಕವಿಗಿರಬೇಕಾದ ಒಂದು ಮಹಾಲಕ್ಷಣವನ್ನು ತಮ್ಮ ಕಾವ್ಯದ ಪರಿಣಾಮವೆಂಬಂತೆ ಹೀಗೆ ರೂಪಿಸಿದ್ದಾರೆ:
ಇತಿಹಾಸಪ್ರದೀಪೇನ ಮೋಹಾವರಣಘಾತಿನಾ |
ಲೋಕಗರ್ಭಗೃಹಂ ಕೃತ್ಸ್ನಂ ಯಥಾವತ್ ಸಂಪ್ರಕಾಶಿತಮ್ ||
(ಮಹಾಭಾರತದ ಕುಂಭಕೋಣಂ ಆವೃತ್ತಿ, ೧.೯೬.೧೦೩)
ಮಹಾಭಾರತವು ಮೋಹವೆಂಬ ಕತ್ತಲೆಯನ್ನು ಕಳೆಯುವ ಇತಿಹಾಸಪ್ರದೀಪ.[1] ಇದರ ಮೂಲಕ ಲೋಕದ ಅಂತರಂಗವೆಲ್ಲ ಬೆಳಗಿ ಅಲ್ಲಿ ಇದ್ದದ್ದೆಲ್ಲ ಇರುವ ಹಾಗೆಯೇ ಸ್ಪಷ್ಟವಾಗಿ ತೋರುತ್ತದೆ.
ಇಲ್ಲಿಯ ಒಂದೊಂದು ಮಾತೂ ಕಾವ್ಯಮೀಮಾಂಸೆಯ ಹೃದ್ಭಾಗಕ್ಕೆ ಸೇರಿದೆ. ಕವಿಕರ್ಮವು ಸಹೃದಯಜಗತ್ತಿನ ಅಂತರಂಗವನ್ನು ಸ್ಪರ್ಶಿಸಬೇಕು. ಕವಿಯು ತನ್ನ ಕಾವ್ಯದಲ್ಲಿ ನಿರೂಪಿಸುವ ಘಟನೆಗಳೂ ರೂಪಿಸುವ ಪಾತ್ರಗಳೂ ಸಹೃದಯರ ಹೃದಯಗಳಲ್ಲಿ ಅವರವರ ಸ್ಥಾಯಿಭಾವಗಳನ್ನು ಉದ್ಬೋಧಿಸುವ ಮೂಲಕ ರಸಾವಿಷ್ಕರಣಕ್ಕೆ ಸಾಧನಗಳಾಗುತ್ತವೆ. ವಸ್ತುತಃ ರಸವೆಂಬುದು ಪರಕೀಯಪದಾರ್ಥವಲ್ಲ. ತಮ್ಮ ತಮ್ಮ ಹಿತಾಹಿತಭಾವಗಳನ್ನೆಲ್ಲ ತಾವು ಸಾಕ್ಷಿಯಾಗಿ ಕಂಡುಕೊಂಡು ಅಂಟಿಲ್ಲದೆ ಆಸ್ವಾದಿಸುವುದೇ ರಸದ ಲಕ್ಷಣ. ಇದನ್ನೇ “ಲೋಕಗರ್ಭಗೃಹಂ ಕೃತ್ಸ್ನಂ ಯಥಾವತ್ ಸಂಪ್ರಕಾಶಿತಮ್” ಎಂಬ ಮಾತಿನಲ್ಲಿ ಗುರುತಿಸಬಹುದು.
ಇಲ್ಲಿ ಬಂದಿರುವ ಪ್ರದೀಪರೂಪಕವು ಕ್ಷೇತ್ರಜ್ಞನಾದ ಆತ್ಮನು ಕ್ಷೇತ್ರವೆನಿಸಿದ ಇಡಿಯ ಶರೀರ-ಮನಸ್ಸುಗಳನ್ನು ಬೆಳಗುವುದಕ್ಕೆ ಧ್ವನಿಯಾಗಿದೆ. ಹೇಗೆ ದೀಪವು ಎಲ್ಲ ವಸ್ತುಗಳನ್ನು ಬೆಳಗಿಯೂ ಅವುಗಳಲ್ಲಿ ಯಾವುದೇ ವಿಕಾರವನ್ನು ಉಂಟುಮಾಡದೆ, ತಾನೂ ವಿಕಾರಕ್ಕೊಳಗಾಗದೆ ಸಾಕ್ಷಿಯಾಗಿ ನಿಲ್ಲುವುದೋ ಹಾಗೆಯೇ ಒಂದು ಮಹಾಕೃತಿಯೂ ರಸಿಕರ ಅಂತರಂಗದಲ್ಲಿ ಯಾವ ವಿಕಾರಗಳನ್ನೂ ಮೂಡಿಸದೆ ಅವರವರ ಸ್ಥಾಯಿಭಾವಗಳೇ ಆಸ್ವಾದ್ಯವಾಗುವಂತೆ ಮಾಡುತ್ತದೆ. ಅರ್ಥಾತ್, ಭಾವವನ್ನು ರಸಸ್ಥಿತಿಗೆ ಮುಟ್ಟಿಸುತ್ತದೆ. ಇಷ್ಟಕ್ಕೂ ಭಾವ-ರಸಗಳಿಗಿರುವ ವ್ಯತ್ಯಾಸವಾದರೂ ಯಾವುದು? ಕಾಮ-ಕರ್ಮಗಳೆಂಬ ಕಾವಳದಿಂದ ಮುಚ್ಚಲ್ಪಟ್ಟ ಭಾವವೇ ಈ ಕತ್ತಲೆಯನ್ನು ಕೊಡವಿಕೊಂಡು ಮೇಲೆದ್ದಾಗ ರಸವಾಗುತ್ತದೆ. ನಮ್ಮ ಪಾಲಿಗೆ ಪರೋಕ್ಷವಾಗಿರುವ ಭಾವಗಳನ್ನು ಅಪರೋಕ್ಷವಾದ ರಸಸ್ಥಿತಿಗೆ ಮುಟ್ಟಿಸುವಂಥದ್ದೇ ಕಲೆ. ಹೀಗೆ ಭಾವವು ಹಿತವಲ್ಲದ ರಹಸ್ಯ. ರಸವು ಹಿತವೆನಿಸುವ ಸದಸ್ಯ. ಇದೇ ಸಾಧಾರಣೀಕರಣದ ಸ್ವಾರಸ್ಯ. ನಾವು ವೈಯಕ್ತಿಕತೆಯನ್ನು ನೀಗಿಕೊಂಡಾಗಲೂ ನಮ್ಮೊಳಗೆ ಆರೋಗ್ಯಕರವಾದ ಆಸ್ಥೆಯನ್ನುಳ್ಳಂತೆ ಮಾಡುವುದೇ ಸಾಧಾರಣೀಕರಣದ ಸಾಮರ್ಥ್ಯ. ಪ್ರದೀಪರೂಪಕದ ಮತ್ತೂ ಒಂದು ಸ್ವಾರಸ್ಯ ಎಂದರೆ ದೀವಿಗೆಯ ಬೆಳಕಿನಲ್ಲಿ ಯಾವುದೇ ಕೆಲಸಗಳು ನಡೆದಾಗಲೂ ಅವುಗಳ ಒಳಿತು-ಕೆಡಕುಗಳಿಗೆ ಭಾಗಿಯಾಗದೆ ಅದು ಉದಾಸೀನವಾಗಿ ನಿಲ್ಲುವಂಥ ಸಾಕ್ಷಿಸ್ಥಿತಿ. ಇದು ಸತ್ಕಾವ್ಯಕ್ಕೂ ಸಲ್ಲುವ ಮಾತು. ಕಾವ್ಯವೊಂದನ್ನು ಆಸ್ವಾದಿಸಿದ ರಸಿಕ ಅದರ ಅನುಭವವನ್ನು ಹೇಗೆ ಬಳಸಿಕೊಂಡರೂ ಅದಕ್ಕೆ ಕಾವ್ಯವು ಹೊಣೆಯಾಗದು. ಹೇಗೆ ದೀಪಕ್ಕೆ ಬೆಳಗುವುದೊಂದಲ್ಲದೆ ಬೇರೆ ಯಾವುದೇ ಪರಮೋದ್ದೇಶ ಇರುವುದಿಲ್ಲವೋ ಹಾಗೆ ಕಾವ್ಯ-ಕಲೆಗಳಿಗೆ ರಸಾವಿಷ್ಕಾರವನ್ನು ಸಾಧಿಸುವುದರ ಹೊರತಾಗಿ ಬೇರೊಂದು ಪ್ರಯೋಜನ ಉದ್ದಿಷ್ಟವಲ್ಲ. ಹೀಗೆ ಕಲಾನುಭವದ ಅನನ್ಯಪರತಂತ್ರತೆ ಮತ್ತು ಪ್ರಯೋಜನಾತೀತತೆ ಸಾಧಿತವಾಗುತ್ತವೆ.
ಮೂಲಶ್ಲೋಕದಲ್ಲಿ “ಯಥಾವತ್” ಎಂಬ ಅರ್ಥಗರ್ಭಿತವಾದ ಮಾತಿದೆ. ಈ ಮೂಲಕ ಕಾವ್ಯವು ಲೋಕದ ಭಾವಗಳನ್ನೇ—ಅದರ ವ್ಯಕ್ತಿ-ಸಂದರ್ಭಗಳನ್ನೇ—ತನ್ನ ಆಕರಸಾಮಗ್ರಿಯಾಗಿ ಗ್ರಹಿಸುವುದಲ್ಲದೆ ಇವುಗಳನ್ನೆಲ್ಲ ಬಳಸಿ ನಮ್ಮಲ್ಲಿಯ ಭಾವಗಳನ್ನು ಅವು ಇದ್ದ ರೀತಿಯಲ್ಲಿಯೇ ಬೆಳಗುವುದೆಂಬ ಸೂಚನೆಯುಂಟು. ಇದನ್ನು ಭಾವದಿಂದಲೇ ಭಾವವನ್ನು ಶುದ್ಧೀಕರಿಸುವ ಹವಣೆಂದು ತಿಳಿಯಬಹುದು.[2]
ಮೂಲಶ್ಲೋಕದ ಮತ್ತೊಂದು ಮಾತು “ಗರ್ಭಗೃಹ”. ಇದು ಒಡನೆಯೇ ನಮಗೆ ದೇವಾಲಯವನ್ನು ನೆನಪಿಗೆ ತರುತ್ತದೆ. ಲೋಕದ ಗರ್ಭಗೃಹವೆಂದರೆ ಪ್ರತಿಯೊಬ್ಬರ ಅಂತರಂಗವೆಂದು ತಾನೆ ಅರ್ಥ! ಮೂಲಮೂರ್ತಿ ಇಲ್ಲದ ಗರ್ಭಗೃಹವಾದರೂ ಏಕೆ? ಹೀಗಾಗಿ ನಮ್ಮ ಅಂತರಂಗವೆಂಬ ಗರ್ಭಗೃಹದಲ್ಲಿ ನೆಲಸಿರುವ ದೇವರು ಆತ್ಮನೇ ಹೌದು. ಸ್ವಯಂಪ್ರಕಾಶನಾದ ಈತನನ್ನು ಪ್ರಕಾಶಪಡಿಸುವುದೆಂದರೆ ಏನು? ಆ ಕಾಂತಿಯು ನಮಗೆ ಕಾಣದಂತಾದುದಕ್ಕೆ ಕಾರಣವಾಗಿರುವ ಪ್ರತಿಬಂಧಕಗಳನ್ನು ತಳ್ಳಿಹಾಕಿದರೆ ಸಾಕು, ಅದು ತೋರಿಕೊಳ್ಳುತ್ತದೆ. ಹೀಗೆ ಸ್ವಯಂಸಿದ್ಧವಿರುವ ಆನಂದವನ್ನು ನಿರ್ವಿಘ್ನವಾಗಿ ಪ್ರತ್ಯಭಿಜ್ಞೆ ಮಾಡಿಕೊಡುವುದೇ ಕಾವ್ಯದ ಉದ್ದೇಶ. ಈ ರೀತಿಯಲ್ಲಿ ಪರ್ಯಾಯವಾಗಿ ನಮಗೆ ಆನಂದವನ್ನು ದಕ್ಕಿಸಿಕೊಡುವ ಕ್ರಮವನ್ನು ವ್ಯಂಜನಾವ್ಯಾಪಾರವೆನ್ನುತ್ತೇವೆ. ಏಕೆಂದರೆ ರಸಸ್ವರೂಪವೇ ಆದ ಆನಂದವನ್ನು ಪ್ರತ್ಯಕ್ಷೀಕರಿಸಲು ಸಾಧ್ಯವಿಲ್ಲ. ಅನುಮಾನದಿಂದ ದಕ್ಕಿಸುವುದಂತೂ ಅಸಾಧ್ಯ. ಆದುದರಿಂದ ಅಪರೋಕ್ಷಕ್ರಮದಿಂದ ಇದನ್ನು ಸಾಧಿಸಬೇಕು. ಇಂಥ ಅಪರೋಕ್ಷಕ್ರಮವೇ ಧ್ವನಿ.
ಇಂಥ ಕೆಲಸವನ್ನು ಪರಿಪೂರ್ಣವಾಗಿ ಸತ್ಕಾವ್ಯವು ಸಾಧಿಸುತ್ತದೆಂಬುದು “ಕೃತ್ಸ್ನಂ” ಎಂಬ ಪದದಿಂದ ತಿಳಿಯುತ್ತದೆ. ಇದು ಆಂಶಿಕವಾಗಿ ಸಾಧಿತವಾಗಿದ್ದಲ್ಲಿ ಅದು ಧ್ವನಿಯು ಗುಣೀಭೂತವಾಗುವ ಪರಿಯೇ ಸರಿ. ಆದರೆ ರಸವು ಸರ್ವಾತ್ಮನಾ ಧ್ವನಿತವಾಗಬೇಕಿರುವ ಕಾರಣ ಪ್ರಕಾಶನವು ಕೃತ್ಸ್ನವಾಗಬೇಕು. ಈ ಶ್ಲೋಕದ ಮತ್ತೊಂದು ಪ್ರಮುಖ ಪದಪುಂಜವೆಂದರೆ “ಮೋಹಾವರಣಘಾತಿ” ಎಂಬುದು. ವಕ್ರೋಕ್ತಿಮಯವಾದ ಕಾವ್ಯಶರೀರವು ವ್ಯಂಜನಾವ್ಯಾಪಾರ ಎಂಬ ಆಯುಧವನ್ನು ಹಿಡಿದು ಔಚಿತ್ಯವೆಂಬ ಪರಾಕ್ರಮದ ಮೂಲಕ ಸಹೃದಯರ ಭಾವಗಳಿಗೆ ಕವಿದ ಮೋಹದ ಆವರಣವನ್ನು ಸೀಳಿಹಾಕುತ್ತದೆ. ಈ ಕ್ರಿಯೆ ಒಡನೊಡನೆಯೇ ರಸವನ್ನು ಆವಿಷ್ಕರಿಸುತ್ತದೆ. ಅಂದರೆ, ಮೋಹದ ಆವರಣವನ್ನು ಕಳಚಿಕೊಂಡ ಭಾವವೇ ರಸವಾಗುವುದೆಂದು ತಾತ್ಪರ್ಯ. ಈ ಮಾತನ್ನೇ ಜಗನ್ನಾಥನು “ರತ್ಯಾದ್ಯವಚ್ಛಿನ್ನಾ ಭಗ್ನಾವರಣಾ ಚಿದೇವ ರಸಃ”[3] ಎಂದು ವ್ಯವಸ್ಥಾಪಿಸಿದ್ದಾನೆ.
ಹೀಗೆ ಇದೊಂದು ಶ್ಲೋಕದಲ್ಲಿಯೇ ವ್ಯಾಸರು ರಸಧ್ವನಿಸಿದ್ಧಾಂತದ ಸಾರವನ್ನು ಹರಳುಗಟ್ಟಿಸಿದ್ದಾರೆಂದರೆ ಅತಿಶಯವಲ್ಲ.
ವ್ಯಾಸರು ಮಹಾಭಾರತದ ಮೊದಲಿಗೆ ಕಾವ್ಯವಾಗಿ ಅದರ ಮಹತ್ತ್ವವನ್ನು ಅದೆಷ್ಟೇ ಮಿಗಿಲಾಗಿ ತಿಳಿಸಿದರೂ ಕಟ್ಟಕಡೆಗೆ “ಭಾರತಸಾವಿತ್ರಿ” ಎಂಬ ಉಪಸಂಹಾರದಲ್ಲಿ ಕವಿಯ ಅಸಹಾಯಕತೆಯನ್ನು ಮರೆಯದೆ ಸಾರುತ್ತಾರೆ:
ಊರ್ಧ್ವಬಾಹುರ್ವಿರೌಮ್ಯೇಷ ನ ಚ ಕಶ್ಚಿಚ್ಛೃಣೋತಿ ಮೇ |
ಧರ್ಮಾದರ್ಥಶ್ಚ ಕಾಮಶ್ಚ ಸ ಕಿಮರ್ಥಂ ನ ಸೇವ್ಯತೇ || (೧೮.೫.೪೯)
ಧರ್ಮದಿಂದಲೇ ಅರ್ಥ-ಕಾಮಗಳ ಸಿದ್ಧಿಯೆಂದು ಕೈಗಳನ್ನೆತ್ತಿ ಗೋಳಿಡುತ್ತಿದ್ದೇನೆ; ಆದರೆ ಒಬ್ಬನೂ ನನ್ನ ಮಾತನ್ನು ಆಲಿಸುತ್ತಿಲ್ಲ! ಅದೇಕೆ ಯಾರೂ ಧರ್ಮವನ್ನು ಅನುಸರಿಸುತ್ತಿಲ್ಲವೋ ನನಗೆ ತಿಳಿಯುತ್ತಿಲ್ಲ!
ಇದಕ್ಕಿಂತ ಪ್ರಾಮಾಣಿಕವಾಗಿ ಯಾವ ಲೇಖಕನೂ ಕಲೆಯ ಮಿತಿಯನ್ನೂ ಕಲಾವಿದನ ಅಸಹಾಯಕತೆಯನ್ನೂ ಹೇಳಿಕೊಳ್ಳಲಾರ. ಪುರುಷಾರ್ಥಗಳ ವಿಷಯದಲ್ಲಿ ಮಹಾಭಾರತದಲ್ಲಿ ಇರುವುದೇ ಮಿಕ್ಕೆಲ್ಲ ಕಡೆ ಇರುವುದು ಮತ್ತು ಇಲ್ಲಿ ಇಲ್ಲದಿರುವುದು ಮಿಕ್ಕೆಲ್ಲಿಯೂ ಇಲ್ಲವೆಂಬ ಅಗ್ಗಳಿಕೆಯುಳ್ಳ ಪಂಚಮವೇದವನ್ನು ರಚಿಸಿದ ಬಳಿಕವೂ ವ್ಯಾಸರಿಗೆ ಕಾವ್ಯವು ಕ್ರಿಯಾತ್ಮಕವಾಗಿ ತನ್ನ ಓದುಗರ ಬಾಳನ್ನೆಂದೂ ತಿದ್ದಲಾರದೆಂಬ ಕಠೋರಸತ್ಯ ತಿಳಿದಿತ್ತು. ಇದನ್ನು ನಿರ್ಮಮವಾಗಿ ಸಾರಬಲ್ಲ ಶಕ್ತಿಯೂ ಅವರಿಗಿತ್ತು. ಇದು ಕವಿಕುಲಕ್ಕೇ ವಿರಳವಾದ ಮಹಾಗುಣ. ಈ ಮಟ್ಟದ ಸತ್ಯವನ್ನು ಮಿಕ್ಕಾವ ಆಲಂಕಾರಿಕರೂ ಕವಿಗಳೂ ಗುರುತಿಸದೆ ಹೋದದ್ದು ಅವರ ದೋಷವೆನ್ನುವುದಕ್ಕಿಂತ ವ್ಯಾಸರ ಗುಣವೆಂದು ಹೇಳಿದಲ್ಲಿ ಸರಿಯಾದೀತು. ಕಲೆ-ಸಾಹಿತ್ಯಗಳಿಂದ ಸಮಾಜಸುಧಾರಣೆ ಆಗಿಯೇ ತೀರುವುದೆಂಬ ಆಗ್ರಹವುಳ್ಳವರಿಗೆ ಸದ್ಯದ ವ್ಯಾಸವಾಕ್ಯಕ್ಕಿಂತ ಮಿಗಿಲಾದ ಭೈಷಜ್ಯ ಮತ್ತೊಂದಿಲ್ಲ.
[1] ಈ ಶಬ್ದವು ಬಹ್ವರ್ಥಗ್ರಾಸಿ. “ಇತಿ ಹ ಆಸ”, “ಹೀಗೆ ತಾನೆ ಇದ್ದದ್ದು” ಎಂಬುದೇ “ಇತಿಹಾಸ”ಪದದ ಅರ್ಥ. ಈ ಮೂಲಕ ಇರುವುದನ್ನಷ್ಟೇ ಕವಿ ಚಿತ್ರಿಸುವುದಲ್ಲದೆ ಇಲ್ಲದ್ದನ್ನಲ್ಲ ಎಂಬ ಧ್ವನಿ ಹೊಮ್ಮುತ್ತದೆ. ಕಾವ್ಯದ ಮಟ್ಟಿಗೆ “ಇರುವುದು” ಎಂದರೆ ಚಿತ್ತವೃತ್ತಿಗಳಲ್ಲದೆ ಬೇರೆಯಲ್ಲ. ಕವಿಯ ಪಾಲಿನ ಪರಮಸತ್ಯ ಚತ್ತವೃತ್ತಿಗಳು ಮಾತ್ರ. ಅಭಿವ್ಯಕ್ತಿಯ ಮಾಧ್ಯಮವೇನಿದ್ದರೂ ಉಪಕರಣ. ಇದು ಅಂತಃಕರಣದ ಪ್ರಕಾಶನಕ್ಕಾಗಿ ದುಡಿಯಬೇಕು. ಪ್ರದೀಪವೆಂದರೆ ಪ್ರಧಾನದೀಪವೆಂದು ತಾತ್ಪರ್ಯ. ಯಾವ ದೀಪದ ಮೂಲಕ ಮಿಕ್ಕೆಲ್ಲ ದೀಪಗಳು ಬೆಳಗಿಸಲ್ಪಡುತ್ತವೆಯೋ ಅದು ಪ್ರದೀಪ. ವಸ್ತುತಃ ಕವಿಗೆ ಆಗುವ ಭಾವಾನುಭೂತಿ ಎಲ್ಲ ಸಹೃದಯರಿಗೂ ಆಗಿಯೇ ಇರುತ್ತದೆ. ಆದರೆ ಅದನ್ನು ರಸಾನುಭೂತಿಯಾಗಿಸುವಲ್ಲಿ ಕವಿಯ ವಾಗ್ವ್ಯವಸಾಯ ಅನಿವಾರ್ಯ. ಹೀಗೆ ಕವಿ ಮತ್ತು ಸಹೃದಯರಲ್ಲಿ ಮೂಲತಃ ಇರುವುದು ಸತ್ಪಾತ್ರತೆ, ಸ್ನೇಹಮಯತೆ ಮತ್ತು ಸದ್ವರ್ತಿತ್ವ. ಕವಿಗಿರುವ ಕಾರಯಿತ್ರೀ ಪ್ರತಿಭೆಯ ಜ್ವಾಲೆ ಮೊತ್ತಮೊದಲಿಗೆ ಅವನ ಸಹೃದಯತ್ವದ ಹಸಿಯ ಬತ್ತಿಯನ್ನು ಹೊತ್ತಿಸುತ್ತದೆ. ಅನಂತರ ವಾಗರ್ಥಮಯವಾದ ಕಾವ್ಯರೂಪವನ್ನು ತಳೆದ ಈ ಪ್ರದೀಪಿಕೆಯೇ ಸಹೃದಯರೆಂಬ ಇನ್ನಿತರ ದೀಪಗಳನ್ನು ಬೆಳಗುತ್ತದೆ. ಇದರ ಬೆಳಕಿನಲ್ಲಿ ಪ್ರತಿಯೊಬ್ಬ ಸಹೃದಯನೂ ತನ್ನ ಅಂತರಂಗವನ್ನು ಕಾಣುತ್ತಾನೆ. ಹೀಗೆ ಹಣತೆ, ಬತ್ತಿ, ಎಣ್ಣೆಗಳಿದ್ದರೂ ಬೆಳಗದಿದ್ದ ದೀಪವು ಕಾವ್ಯಜ್ವಾಲೆಯಿಂದ ಬೆಳಗಿಸಲ್ಪಡುವುದೇ ಭಾವವು ರಸವಾಗುವ ಕ್ರಮ.
[2] ಇದು ಭಟ್ಟತೌತನು ಹೇಳುವ ಒಂದು ಮಾತಿಗೆ ಒಳ್ಳೆಯ ಸಂವಾದಿ:
ಯಥಾದರ್ಶಾನ್ಮಲೇನೇವ ಮಲಮೇವೋಪಹನ್ಯತೇ |
ತಥಾ ರಾಗಾವಬೋಧೇನ ಪಶ್ಯತಾಂ ಶೋಧ್ಯತೇ ಮನಃ || (ಕಾವ್ಯಪ್ರಕಾಶವಿವೇಕ, ಪು. ೯)
ಹೇಗೆ ಬೂದಿಯಂಥ ಕೊಳೆಯನ್ನೇ ಬಳಸಿ ಕೊಳೆಗನ್ನಡಿಯ ಕೊಳಕನ್ನು ತೆಗೆಯಲಾಗುವುದೋ ಹಾಗೆಯೇ ರಾಗ-ದ್ವೇಷಗಳ ಮೊತ್ತವಾದ ಭಾವಗಳಿಂದಲೇ ನಮ್ಮೊಳಗಿನ ಭಾವಗಳ ಮಾಲಿನ್ಯವನ್ನು ನೀಗುವುದಾಗುತ್ತದೆ. (ಇಂಥ ನೀಗುವಿಕೆಯೇ ರಸಾವಿಷ್ಕರಣ.)
[3] ರಸಗಂಗಾಧರ, ಪ್ರಥಮಾನನ (ಪು. ೭೪–೭೫)
To be continued.